2nd ಮೇ ೨೦೧೮

ಬೆಳ್ಳಂದೂರಿನಲ್ಲಿ ನೊರೆ ಹೊತ್ತಿ ಉರಿದೊಡೆ...!

ಸುಧೀಂದ್ರ ಹಾಲ್ದೊಡ್ಡೇರಿ

ಕಲುಷಿತ ಕೆರೆಯಿಂದ ನೊರೆಯ ರಾಶಿ ರಸ್ತೆಗೆ ಬಂದ ಕೆಲ ದಿನಗಳಲ್ಲೇ ನೀರಿನೊಂದಿಗೆ ಹರಿಯುತ್ತಿದ್ದ ನೊರೆಗೇ ಬೆಂಕಿ ತಗಲುತ್ತಿದೆ!

ಮೂರು ವರ್ಷಗಳ ಹಿಂದೆ ವರ್ತೂರು ಕೆರೆ ‘ನೊರೆಯುಕ್ಕಿ’ ರಸ್ತೆಗೆ ಹರಿದು ತಿಂಗಳು ಕಳೆಯುವುದರೊಳಗೆ ಯಮಲೂರು ಕೆರೆಯ ‘ನೊರೆ’ಗೆ ಬೆಂಕಿ ತಗುಲಿದ ಸುದ್ದಿ ಟೀವಿ ಚಾನೆಲ್‍ಗಳಲ್ಲಿ ‘ರಂಜನೀಯ’ವಾಗಿ ಬಿತ್ತರವಾಯಿತು. ನಂತರದ ದಿನಗಳಲ್ಲಿ ಬೆಳ್ಳಂದೂರು ಕೆರೆಯೂ ನೊರೆಯುಕ್ಕಿಸಿ, ಬೆಂಕಿ ತಗುಲಿಸಿಕೊಂಡು ಆಸುಪಾಸಿನ ಗ್ರಾಮಸ್ಥರನ್ನು ಆಕ್ರೋಶಗೊಳಿಸಿತು. ‘ಅಗರ’ ಕೆರೆಯೂ ಸೇರಿದಂತೆ ಈ ಎಲ್ಲ ಕೆರೆಗಳನ್ನೂ ತನ್ನ ಸುತ್ತ— ಮುತ್ತ ಇಟ್ಟುಕೊಂಡಿರುವ ಚಲ್ಲಘಟ್ಟದ ಕೆರೆ ಪರಿಸ್ಥಿತಿ ಸದ್ಯಕ್ಕೆ ಏನಾಗಿದೆಯೆಂಬುದು ಯಾರಿಗೂ ಗೊತ್ತಿಲ್ಲ.

ಎರಡು—ಮೂರು ದಶಕಗಳ ಹಿಂದೆ ಜಯ`ನಗರ’ವನ್ನು ಮಾರತ್ತ`ಹಳ್ಳಿ’ಗೆ ಜೋಡಿಸುವ ಹೊರವರ್ತುಲ ರಸ್ತೆಗೆ ಚಾಲನೆ ಸಿಕ್ಕಿರಲಿಲ್ಲ. ಹಾಗೆಯೇ ದೊಮ್ಮಲೂರು ಮತ್ತು ಕೋರಮಂಗಲವನ್ನು ಸಂಪರ್ಕಿಸುವ ಒಳವರ್ತುಲ ರಸ್ತೆಗೆ ವಾಹನಸಂದಣಿ ಈಗಿನಷ್ಟಿರಲಿಲ್ಲ. ಮಾರತ್ತಹಳ್ಳಿಯ ಸಮೀಪ ಹೆಚ್.ಎ.ಎಲ್. ವಿಮಾನ ನಿಲ್ದಾಣಕ್ಕೆ ಸೇರಿದ ಓಡು ಹಾದಿಯ ಒಂದು ತುದಿಯಿದ್ದರೆ ಅದರ ಮತ್ತೊಂದು ತುದಿಯಿದ್ದದ್ದು ಚಲ್ಲಘಟ್ಟ ಕೆರೆಯ ಸಮೀಪ. ಇದರ ಹಿಂದೆ ಇದ್ದದ್ದೇ ಅತಿ ದೊಡ್ಡದಾದ ಬೆಳ್ಳಂದೂರು ಕೆರೆಯಂಗಳ. ಓಡು ಹಾದಿಗೆ ಹೊಂದಿಕೊಂಡ ಮಾರತ್ತಹಳ್ಳಿಯ ತುದಿಯ ಹಿಂಭಾಗದ ರಸ್ತೆಯನ್ನು ಹಿಡಿದು ಬೆಳ್ಳಂದೂರು ಕೆರೆ ಏರಿಯ ಮೇಲೆ ಪಯಣಿಸುವ ಮುನ್ನ ಸಿಗುವುದೇ ಬೇಲೂರು—ಯಮಲೂರಿನ ಪುಟ್ಟ ಕೆರೆ. ಒಂದೆಡೆ ಹೊಸೂರು—ಅತ್ತಿಬೆಲೆ ಕೈಗಾರಿಕಾ ಪ್ರದೇಶಗಳ ಸಮೀಪದ ಕೆರೆಗಳಿಂದ ಹರಿದ ನೀರು ಮಡಿವಾಳ—ಕೋರಮಂಗಲ ಕೆರೆಗಳನ್ನು ದಾಟಿ ಬೆಳ್ಳಂದೂರು ಸೇರಿದರೆ ಅಲ್ಲಿಗೆ ಸಂಗಮಿಸುವುದು ಬೇಲೂರು— ಯಮಲೂರು—ಚಲ್ಲಘಟ್ಟ ಕೆರೆಗಳ ನೀರು. ಅವೆಲ್ಲಾ ನೀರು ಒಟ್ಟಾಗಿ ಬತ್ತಿದ ಮಾರತ್ತಹಳ್ಳಿಯನ್ನು ದಾಟಿ ವರ್ತೂರಿನ ಕೋಡಿ ಮುರಿದು ಆ ಕೆರೆಯನ್ನು ತುಂಬುತ್ತಿದ್ದವು. ಇತ್ತೀಚಿನ ವರ್ಷಗಳಲ್ಲಿ ಈ ಪುಟ್ಟ ಭೂಪಟದಲ್ಲಿ ಭಾರಿ ಬದಲಾವಣೆಗಳಾಗಿವೆ. ‘ನೀರು’ ಹರಿಯುತ್ತಿದ್ದ ಜಾಗದಲ್ಲಿ ‘ಕೊಳಚೆ—ತ್ಯಾಜ್ಯ — ರಾಸಾಯನಿಕ’ಗಳ ನೊರೆಯುಕ್ಕುತ್ತಿದೆ.

ಬೇಲೂರು—ಯಮಲೂರು ಕೆರೆಯ ಕೋಡಿಯಲ್ಲಿ ಇಪ್ಪತ್ತೈದು ವರ್ಷಗಳ ಹಿಂದೆ ಮೊದಲ ಬಾರಿಗೆ ‘ನೊರೆ’ಯುಕ್ಕಿ ಹರಿದಾಗ ಸುತ್ತ ಮುತ್ತಲಿನ ಭತ್ತ—ರಾಗಿ ಬೆಳೆಯುತ್ತಿದ್ದ ರೈತರು ಅಚ್ಚರಿ ಪಟ್ಟಿದ್ದರು. ಆಗೆಲ್ಲಾ ಇಂದಿನ ‘ಬ್ರೇಕಿಂಗ್ ನ್ಯೂಸ್’ ಟೀವಿ ಚಾನೆಲ್‍ಗಳಿರಲಿಲ್ಲ. ಪತ್ರಿಕೆಗಳಲ್ಲಿ ಸುದ್ದಿ—ಚಿತ್ರ ಪ್ರಕಟವಾದಾಗಲೇ ಪರಿಸರ ತಜ್ಞರು ಹೊಸೂರು—ಅತ್ತಿಬೆಲೆ ಸಮೀಪದ ಕೈಗಾರಿಕೆಗಳಿಂದ ಹರಿದು ಸೇರುತ್ತಿರುವ ತ್ಯಾಜ್ಯ ರಾಸಾಯನಿಕಗಳ ಬಗ್ಗೆ ಎಚ್ಚರಿಸಿದ್ದರು. ಬೆಳ್ಳಂದೂರು ಸೇರಿದಂತೆ ಈ ಎಲ್ಲ ಕೆರೆಗಳನ್ನು ಮುಚ್ಚಿಹಾಕುತ್ತಿದ್ದ ಜೊಂಡಿನ ಶೀಘ್ರ ಬೆಳವಣಿಗೆಗೆ ‘ಪಾಸ್ಫೇಟ್’ ಪ್ರಮಾಣದ ಹೆಚ್ಚಳವೇ ಕಾರಣವೆಂದಿದ್ದರು. ದನ—ಕರುಗಳನ್ನು ಕಟ್ಟಿದವರಿಗೆ ಕೆರೆ ಏರಿಯ ಸಮೀಪ ಹುಲುಸಾಗಿ ಬೆಳೆಯುತ್ತಿದ್ದ ಹುಲ್ಲಿನ ಮೇವು ಸಿಗುತ್ತಿತ್ತು, ದೋಣಿಯಿಟ್ಟು ನಡೆಸುವವರಿಗೆ ಜೊಂಡು ಕೀಳುವ ಉದ್ಯೋಗ ಸಿಗುತ್ತಿತ್ತು. ಭರ್ಜರಿ ವಾಹನಗಳ ಸುಳಿವಿರದಿದ್ದ ಸಣ್ಣ ಡಾಂಬರು ರಸ್ತೆಗಳಲ್ಲಿ ಭತ್ತ—ರಾಗಿಗಳ ಒಕ್ಕಣೆ ನಡೆಯುತ್ತಿತ್ತು. ಆಗಿಂದಾಗ್ಗೆ ಚಲಿಸುತ್ತಿದ್ದ ಕಾರುಗಳ ಟೈರಿನಡಿ ಸಿಕ್ಕ ತೆನೆಗಳಿಂದ ಕಾಳುಗಳನ್ನು ಸುಲಭವಾಗಿ ಬೇರ್ಪಡಿಸಬಹುದಿತ್ತು. ಕೆರೆ ಏರಿಯ ಮೇಲಿನ ಗಾಳಿಯಲ್ಲಿ ಹೊಟ್ಟು ತೂರುವುದಕ್ಕೆ ಕಷ್ಟವಿರಲಿಲ್ಲ.

ಒಂದೆಡೆ ಹೊಸೂರು—ಅತ್ತಿಬೆಲೆ—ಎಲೆಕ್ಟ್ರಾನಿಕ್ ಸಿಟಿಗಳ ಅಭೂತಪೂರ್ವ ಬೆಳವಣಿಗೆ, ಮತ್ತೊಂದೆಡೆ ವೈಟ್‍ಫೀಲ್ಡ್ ಕಡೆಯ ಅತಿ ಶೀಘ್ರದ ಪ್ರಗತಿ, ಇವೆರಡರ ನಡುವಿನ ಅಗರ, ಮಡಿವಾಳ, ಕೋರಮಂಗಲ, ಸರ್ಜಾಪುರ, ಕಾಡುಬೀಸನಹಳ್ಳಿ, ದೇವರಬೀಸನಹಳ್ಳಿ, ಬೆಳ್ಳಂದೂರು, ಪಣತ್ತೂರು, ಮಾರತ್ತಹಳ್ಳಿ, ವರ್ತೂರುಗಳಲ್ಲಿ ಆದ ಪೂರಕ ಅಭಿವೃದ್ಧಿ. ಇವೆಲ್ಲದರ ಒಟ್ಟಾರೆ ಪರಿಣಾಮವೆಂದರೆ ಹಸಿರು ಮರಗಳ ನಾಶ, ಅಸಮರ್ಪಕ ಮಳೆ ನೀರಿನ ಹರಿವು, ಹೆಚ್ಚಿದ ಕೊಳಚೆ, ಏರಿದ ವಾಯು ಮಾಲಿನ್ಯ, ದುರ್ಲಭವಾದ ಕುಡಿಯುವ ನೀರು, ಕಿಕ್ಕಿರಿದ ವಾಹನ ಸಂದಣಿ, ಆಳೆತ್ತರದ ಕಟ್ಟಡಗಳ ಸರಮಾಲೆ. ದಿಢೀರ್ ಎಂದು ಸುರಿವ ಬೆಂಗಳೂರಿನ ಮಳೆಗೆ ಮೊದಲು ನಲುಗಿದ್ದು ಇವೇ ಕೆರೆಗಳು. ಎಲ್ಲ ಕೈಗಾರಿಕೆಗಳು ಮತ್ತು ಎಲ್ಲ ವಸತಿ ಸಮುಚ್ಛಯಗಳ ಕೊಳಚೆ ನೀರು ನೇರವಾಗಿ ಹರಿದಿದ್ದು ಇಂಗಲಾಗದ ಕೆರೆಗಳ ಬುಡಕ್ಕೆ. ಕಾಲ ಚಕ್ರ ತಿರುಗಿದಂತೆ ಸೂಕ್ಷ್ಮಜೀವಿಗಳ ಜೀವನಚಕ್ರ, ಆಹಾರದ ಸರಪಣಿ ಹಾಗೂ ನೀರಿನ ಹರಿದಾಟಕ್ಕೆ ಕಂಟಕ ಬಂತು. ಯಾರ ಎಣಿಕೆಗೂ ಸಿಕ್ಕದ ಹಾಗೆ ಸಾರಜನಕ ಚಕ್ರ ಮತ್ತು ರಂಜಕದ ಚಕ್ರಗಳು ಅಡಿಮೇಲಾದವು. ಕೊನೆಗೆ ಕೆರೆಗಳಲ್ಲಿ ಉಕ್ಕಿದ ನೊರೆ ಮೋಡಗಳಂತೆ ರಸ್ತೆಗೆ ನುಗ್ಗಿದವು, ಆ ನೊರೆಗೆ ಬೆಂಕಿಯೂ ತಗುಲಿ ಭೀತಿ ಹೆಚ್ಚಿಸತೊಡಗಿದವು.

ನಮ್ಮೆಲ್ಲ ಶುದ್ಧಕಾರಕಗಳಲ್ಲಿ, ರಸಗೊಬ್ಬರಗಳಲ್ಲಿ, ಕೈಗಾರಿಕಾ ರಾಸಾಯನಿಕಗಳಲ್ಲಿ ಯಥೇಚ್ಛವಾಗಿ ಬಳಕೆಯಾಗುವ, ಸಾರಜನಕ ಹಾಗೂ ಜಲಜನಕದ ಸಂಯುಕ್ತ ‘ಅಮೋನಿಯಾ’ ನಿಮಗೆ ಗೊತ್ತು. ಅದು ವಿಷ ರಾಸಾಯನಿಕವೆಂಬ ವಿಷಯವನ್ನು ಶಾಲೆಗಳಲ್ಲಿಯೇ ತಿಳಿದಿದ್ದೇವೆ. ಈ ಅಮೋನಿಯಾಕ್ಕೆ ಜಲಜನಕದ ಪರಮಾಣುವೊಂದನ್ನು ಹೆಚ್ಚುವರಿಯಾಗಿ ಲಗತ್ತಿಸಿದರೆ ಅದರ ಅಯಾನು ರೂಪವಾದ ‘ಅಮೋನಿಯಂ’ ನಮಗೆ ಸಿಗುತ್ತದೆ. ಈ ಕ್ರಿಯಾಶೀಲ ರಾಸಾಯನಿಕವು ವಿಷಕಾರಿಯಲ್ಲ, ಮತ್ತು ಸುಲಭವಾಗಿ ಮಣ್ಣಿನಲ್ಲಿ ಸೇರಿಹೋಗುತ್ತದೆ. ಮಣ್ಣಿನೊಳಗಿರುವ ‘ನೈಟ್ರೊಸೊಮೊನಾಸ್’ ಬ್ಯಾಕ್ಟೀರಿಯಾಗಳು ‘ಅಮೋನಿಯಂ’ ಅನ್ನು ಚಪ್ಪರಿಸಿ ತಿಂದು ಸಾರಜನಕ—ಆಮ್ಲಜನಕಗಳ ಒಂದು ಸಂಯುಕ್ತರೂಪವಾದ ‘ನೈಟ್ರೈಟ್’ ಅನ್ನು ಬಿಡುಗಡೆ ಮಾಡುತ್ತವೆ. ಮಣ್ಣಿನಲ್ಲಿ ಬೆರೆತ ‘ನೈಟ್ರೈಟ್’ ರೂಪದ ಸಾರಜನಕ ಸಂಯುಕ್ತಕ್ಕೆ ಮತ್ತೊಂದು ಆಮ್ಲಜನಕದ ಪರಮಾಣುವನ್ನು ಸೇರಿಸಿ ಅದನ್ನು ‘ನೈಟ್ರೇಟ್’ ಆಗಿ ಪರಿವರ್ತಿಸಿದರೆ ಅದು ಸಸ್ಯಗಳ ಬೆಳವಣಿಗೆಗೆ ಅಗತ್ಯವಾದ ‘ಸಾರಜನಕ’ವನ್ನು ಊಡಿಸುತ್ತದೆ. ಈ ಪರಿವರ್ತನೆಗೆ ನೆರವಾಗುವುದು ‘ನೈಟ್ರೊಬ್ಯಾಕ್ಟರ್’ ಹಾಗೂ ‘ನೈಟ್ರೊಕಾಕ್ಕಸ್’ಗಳೆಂಬ ಬ್ಯಾಕ್ಟೀರಿಯಾಗಳು. ಮಣ್ಣಿನ ಮೂಲಕ ಕೊಳವೆ ಬಾವಿಗಳಿಗೆ ಸೇರುವ ಈ ‘ನೈಟ್ರೇಟ್’ ರೂಪದ ಸಾರಜನಕ ರಾಸಾಯನಿಕವು ವಯಸ್ಕ ದೇಹಕ್ಕೆ ಅಷ್ಟು ಅಪಾಯಕಾರಿಯಲ್ಲ. ಆದರೆ ತೀರಾ ಪುಟ್ಟ ಮಕ್ಕಳ ಜೀರ್ಣಾಂಗ ವ್ಯವಸ್ಥೆಯಲ್ಲಿ ಮಾತ್ರ ಕಂಡು ಬರುವ ಕೆಲವು ಬ್ಯಾಕ್ಟೀರಿಯಾಗಳು ಕುಡಿಯುವ ನೀರಿನ ಮೂಲಕ ಪ್ರವೇಶಿಸಿದ ‘ನೈಟ್ರೇಟ್’ ಅನ್ನು ‘ನೈಟ್ರೈಟ್’ ಆಗಿ ಪರಿವರ್ತಿಸುತ್ತದೆ. ಇವು ಮಗುವಿನ ದೇಹಕ್ಕೆ ಸೇರಿದರೆ ರಕ್ತದೊಳಗಿರುವ ಹಿಮೋಗ್ಲೋಬಿನ್ನಿನ ಆಮ್ಲಜನಕ ಹೊತ್ತೊಯ್ಯುವ ಸಾಮಥ್ರ್ಯವನ್ನು ಕಡಿಮೆ ಮಾಡುತ್ತದೆ. ಮಕ್ಕಳ ದೇಹಕ್ಕೆ ಸೇರಿಕೊಂಡಲ್ಲಿ, ಅವುಗಳ ದೇಹದ ಬೆಳವಣಿಗೆ ಕುಂಠಿತಗೊಳ್ಳುತ್ತದೆ. ದೇಹದ ವರ್ಣವೇ ನೀಲಿಗೆ ತಿರುಗಿಕೊಳ್ಳುವ ‘ಬ್ಲೂಬೇಬಿ ಸಿಂಡ್ರೋಮ್’ ಕಾಯಿಲೆಗೆ ಕಾರಣವಾಗುತ್ತದೆ. ಮಣ್ಣಿನಲ್ಲಿ ಅಕಸ್ಮಾತ್ ‘ನೈಟ್ರೊಬ್ಯಾಕ್ಟರ್’ಗಳಂಥ ಬ್ಯಾಕ್ಟೀರಿಯಾಗಳಿಲ್ಲದಿದ್ದರೆ ಅಥವಾ ಆಮ್ಲಜನಕದ ಪ್ರಮಾಣ ಕಡಿಮೆಯಿದ್ದರೆ ‘ನೈಟ್ರೈಟ್’ ರಾಸಾಯನಿಕದ ಪ್ರಮಾಣ ಹೆಚ್ಚಾಗುವ ಅಪಾಯವಿದೆ. ಇಂಥ ಸಾಧ್ಯತೆ ತ್ಯಾಜ್ಯ ಹೆಚ್ಚು ತುಂಬಿರುವ ಕೆರೆಗಳಲ್ಲಿ ಹೆಚ್ಚು. ಹಾಗೆಯೇ ಸಂಸ್ಕರಣೆಗೊಳ್ಳದ ಶೌಚಾಲಯದ ನೀರಿನಲ್ಲಿ ‘ನೈಟ್ರೈಟ್’ ಅಂಶ ಹೆಚ್ಚಿನ ಮಟ್ಟದಲ್ಲಿರುತ್ತದೆ. ಶೀತಕಾರಕಗಳಲ್ಲಿ ಆಹಾರವನ್ನು ಕೆಡದೆ ಇರುವಂತೆ ಕಾಪಾಡಲು ‘ಸೋಡಿಯಂ ನೈಟ್ರೈಟ್’ನ ಬಳಕೆ ಹೆಚ್ಚು. ಈ ಆಹಾರ ಪದಾರ್ಥಗಳನ್ನು ತೊಳೆದ ನೀರು ಸಹಾ ಒಳಚರಂಡಿಯ ಮೂಲಕ ಕೆರೆಯನ್ನು ತಲುಪಿ ‘ನೈಟ್ರೈಟ್’ ಪ್ರಮಾಣವನ್ನು ಹೆಚ್ಚಿಸುತ್ತದೆ. ಮೂತ್ರನಾಳದ ಸೋಂಕಿಗೆ ಕಾರಣವಾದ ಬ್ಯಾಕ್ಟೀರಿಯಾಗಳು ನಾವು ಕುಡಿಯುವ ನೀರಿನಲ್ಲಿನ ‘ನೈಟ್ರೇಟ್’ಗಳನ್ನು ‘ನೈಟ್ರೈಟ್’ಗಳಾಗಿ ಪರಿವರ್ತಿಸುವ ಕಾರಣ, ಚರಂಡಿಗೆ ಹರಿಯುವ ನೀರಿನಲ್ಲಿ ಸೇರುವ ಮೂತ್ರದಲ್ಲೂ ಈ ರಾಸಾಯನಿಕದ ಪ್ರಮಾಣ ಹೆಚ್ಚಾಗಿರುತ್ತದೆ.

ಇದೇ ರೀತಿ ಕೆರೆಗಳನ್ನು ಕಲುಷಿತಗೊಳಿಸುವಲ್ಲಿ ‘ರಂಜಕ’ದ ರಾಸಾಯನಿಕಗಳೂ ಪ್ರಮುಖ ಪಾತ್ರ ವಹಿಸುತ್ತವೆ. ಬಟ್ಟೆ, ಪಾತ್ರೆ, ಶೌಚಾಲಯಗಳನ್ನು ಶುಭ್ರಗೊಳಿಸುವ ನೊರೆ ತರುವ ಸೋಪು— ಡಿಟರ್ಜೆಂಟುಗಳಲ್ಲಿ ‘ಪಾಸ್ಫೇಟ್’ ಅಂಶ ಹೆಚ್ಚಾಗಿದ್ದು, ಮನೆ—ವಸತಿ ಸಮುಚ್ಛಯ, ಹೋಟೆಲ್—ಕಾರ್ಖಾನೆಗಳಿಂದ ಹರಿದು ಬರುವ ‘ಪಾಸ್ಫೇಟ್’ಭರಿತ ತ್ಯಾಜ್ಯ ನೀರು ಕೆರೆಯನ್ನು ಸೇರಿಕೊಳ್ಳುತ್ತದೆ. ಹಾಗೆಯೇ ರಸಗೊಬ್ಬರ, ಕೀಟನಾಶಕ, ಕಳೆನಾಶಕ ಮತ್ತಿತರ ಕೃಷಿಯಲ್ಲಿ ಬಳಸುವ ರಾಸಾಯನಿಕಗಳ ಮೂಲಕವೂ ‘ಪಾಸ್ಫೇಟ್’ಗಳು ಕೆರೆ ನೀರನ್ನು ತಲುಪುತ್ತದೆ. ಈ ‘ಪಾಸ್ಫೇಟ್’ಗಳು ಜೊಂಡು ಕಳೆಯ ಬೆಳವಣಿಗೆಗೆ ಪೋಷಕಾಂಶಗಳಾಗಿರುವ ಕಾರಣ, ಇಡೀ ಕೆರೆಯ ಮೇಲ್ಮೈ ಮುಚ್ಚಿಹೋಗುವಷ್ಟು ಅವು ಬೆಳೆಯುತ್ತವೆ. ಹೊರಗಿನ ಸೂರ್ಯ ರಶ್ಮಿ ಹಾಗೂ ಆಮ್ಲಜನಕ ಸಿಗದೇ ಕೆರೆಯ ಚರಂಡಿ ನೀರು ಕೊಳೆಯುತ್ತಾ ಹೋಗುತ್ತದೆ. ಬೇಸಿಗೆಯ ಕಾಲದಲ್ಲಿ ಕೆರೆ ಒಣಗಿದಾಗ ದಟ್ಟ ಪದರದಂತೆ ಮೇಲ್ಮೈನಲ್ಲಿ ಕುಳಿತುಕೊಂಡಿರುವ ‘ಪಾಸ್ಫೇಟ್’, ಮಳೆಗಾಲ ಆರಂಭವಾದಂತೆ ಹರಿದು ಬರುವ ನೀರಿನಲ್ಲಿ ಕರಗಿ, ರಭಸ ಹೆಚ್ಚಾದಂತೆ ನೊರೆಗಳನ್ನೆಬ್ಬಿಸುತ್ತಾ ಮುಂದೆ ಸಾಗುತ್ತದೆ. ನೊರೆಯಲ್ಲಿ ಕೇವಲ ‘ಪಾಸ್ಫೇಟ್’ ಮಾತ್ರವಿದ್ದಲ್ಲಿ ಅದು ಅಪಾಯಕಾರಿಯಾಗಿರುವುದಿಲ್ಲ. ಆದರೆ ಅಲರ್ಜಿ ತರುವ ತೀಕ್ಷ್ಣ ರಾಸಾಯನಿಕಗಳೂ ಚರಂಡಿ ನೀರಿನಲ್ಲಿ ಬೆರೆತಿದ್ದರೆ, ನೊರೆಯ ಸ್ಪರ್ಶದಿಂದ ಚರ್ಮದ ಕಾಯಿಲೆ ಬರಬಹುದು, ಉಸಿರಾಟಕ್ಕೆ ತೊಂದರೆಯಾಗಬಹುದು. ಕೆಲವೊಮ್ಮೆ ಈ ನೊರೆಯ ರಾಶಿ ದುರ್ಗಂಧವನ್ನೂ ಬೀರಬಹುದು.

ಬೆಂಗಳೂರಿನ ಭಾರತೀಯ ವಿಜ್ಞಾನ ಮಂದಿರದ ‘ಪರಿಸರ ವಿಜ್ಞಾನಗಳ ಕೇಂದ್ರ’ದಲ್ಲಿ ಕಾರ್ಯನಿರ್ವಹಿಸುತ್ತಿರುವ ವಿಜ್ಞಾನಿ ಡಾ||ಟಿ.ವಿ.ರಾಮಚಂದ್ರ ಅವರ ಪ್ರಕಾರ ವರ್ತೂರು ಕೆರೆಯೂ ಸೇರಿದಂತೆ ಅದರ ಸುತ್ತಮುತ್ತಲಿನ ಬಹುತೇಕ ಕೆರೆಗಳ ನೀರು ಪ್ರತಿಶತ ತೊಂಬತ್ತೊಂಬತ್ತು ಭಾಗಕ್ಕಿಂತಲೂ ಹೆಚ್ಚು ಕಲುಷಿತಗೊಂಡಿವೆ. ವರ್ತೂರು ಕೆರೆಯ ನೀರಿನ ಮಾದರಿಯನ್ನು ತಮ್ಮ ಪ್ರಯೋಗಶಾಲೆಯಲ್ಲಿ ಕೂಲಂಕಷವಾಗಿ ಪರೀಕ್ಷಿಸಿರುವ ರಾಮಚಂದ್ರ ನೀಡಿರುವ ವರದಿಯಂತೆ ಕೆರೆಯ ನೀರಿಗೆ ಸಂಸ್ಕರಣೆಗೊಳ್ಳದ ಶೌಚಾಲಯ ನೀರು ಸತತವಾಗಿ ಸೇರುತ್ತಿದೆ. ಈ ಕಾರಣದಿಂದಾಗಿ ವರ್ತೂರು ಕೆರೆಯ ನೀರಿನಲ್ಲಿ ‘ನೈಟ್ರೇಟ್’, ‘ನೈಟ್ರೈಟ್’, ‘ಪಾಸ್ಫೇಟ್’ ಹಾಗೂ ‘ಸಲ್ಫೇಟ್’ ರಾಸಾಯನಿಕಗಳ ಪ್ರಮಾಣ ತೀರಾ ಹೆಚ್ಚಿನ ಮಟ್ಟದಲ್ಲಿದೆ. ಸ್ಥಳೀಯ ಜನರು ಆಪಾದಿಸುವಂತೆ ವರ್ತೂರು ಕೆರೆಯ ಸುತ್ತಲಿರುವ ಬಹುತೇಕ ಬಹುಮಹಡಿ ವಸತಿ ಸಮುಚ್ಛಯಗಳು ತಮ್ಮೆಲ್ಲ ತ್ಯಾಜ್ಯ ನೀರನ್ನು ಒಳಚರಂಡಿಗೆ ಬಿಡುವ ಬದಲು ನೇರವಾಗಿ ಕೆರೆಗೇ ಕಳುಹಿಸುತ್ತಿವೆ. ವರ್ತೂರು ಕೆರೆಯಲ್ಲಿ ನೊರೆಯ ಹರಿವು ಹೆಚ್ಚಾಗಲು ಇದು ಮುಖ್ಯ ಕಾರಣ.

ಆದರೆ ಇಂದಿಗೂ ಕುತೂಹಲ ಕೆರಳಿಸಿರುವ ಅಂಶವೆಂದರೆ ಈ ಕಲುಷಿತ ನೀರಿನ ನೊರೆಗೆ ಬೆಂಕಿ ಹತ್ತಿದ್ದು ಹೇಗೆ? ಈ ಕುರಿತು ಭಾರತೀಯ ವಿಜ್ಞಾನ ಮಂದಿರದಲ್ಲಿ ರಾಮಚಂದ್ರ ಅವರೊಟ್ಟಿಗೆ ಕಾರ್ಯ ನಿರ್ವಹಿಸುತ್ತಿದ್ದ ವಿಜ್ಞಾನಿ ದಿವಂಗತ ಹರೀಶ್ ಭಟ್ ಹೇಳುತ್ತಿದೇನೆಂದರೆ, ಹರಿಯುವ ನೊರೆಯಲ್ಲಿ ಒಂದಷ್ಟು ‘ಹೈಡ್ರೋಕಾರ್ಬನ್’ ಅಂದರೆ ಜಲಜನಕ—ಇಂಗಾಲದ ಸಂಯುಕ್ತ ಇರಬಹುದು. ಕೈಗಾರಿಕಾ ತ್ಯಾಜ್ಯದಲ್ಲಿ ಸೇರಿಹೋಗಿರುವ ಕೀಲೆಣ್ಣೆ, ಸೀಮೆ ಎಣ್ಣೆ, ಡೀಸಲ್ ಹಾಗೂ ಪೆಟ್ರೋಲಿಯಂ ಆಧರಿತ ವಸ್ತುಗಳಿಗೆ ಬೆಂಕಿ ತಗುಲಿದರೆ, ನೀರಿನ ನೊರೆಯ ಬದಿಯಲ್ಲಿಯೇ ಉರಿಯಬಹುದು.

ನಗರ ನಿರ್ವಹಣೆಯೆಂದರೆ, ಸುಖಾ ಸುಮ್ಮನೆ ಎಸ್.ಇ.ಝ್. ಗಳನ್ನು ನಿರ್ಮಿಸುವುದು, ಬೇಕಾಬಿಟ್ಟಿ ಬಹುಮಹಡಿ ವಸತಿ ಕಟ್ಟಡಗಳನ್ನು ಕಟ್ಟಲು ಅನುಮತಿ ನೀಡುವುದು, ಮಳೆನೀರು ಸ್ವಾಭಾವಿಕವಾಗಿ ಹರಿದು ಹೋಗುವ ಜಾಗಗಳನ್ನು ಏರುಪೇರಾಗಿಸುವುದು, ಎಲ್ಲೆಂದರಲ್ಲಿ ವೈಟ್ ಟಾಪಿಂಗ್ ಕಾಂಕ್ರೀಟುಗಳನ್ನು ಮೆತ್ತುವುದು ಮಾತ್ರ ಎಂದು ನಗರಪಾಲಿಕೆಯ ಆಡಳಿತ ಭಾವಿಸಿದಾಗ ಕೆರೆಗಳು ನೊರೆಯುಕ್ಕಿಸುತ್ತವೆ, ನೆರೆ ಬಂದಾಗ ರಸ್ತೆಗಳನ್ನೇ ಕೆರೆಯಾಗಿಸುತ್ತವೆ. ಕೊನೆಗೆ ನೊರೆಗೂ ಬೆಂಕಿಯ ತೆರೆ ತಗಲುತ್ತದೆ.

ನೊರೆ ಹೊತ್ತಿ ಉರಿದೆಡೆ ಮಾಲಿನ್ಯ ನಿಯಂತ್ರಣ ಮಂಡಳಿ, ಜಲ ಮಂಡಳಿ, ಕೆರೆ ಪ್ರಾಧಿಕಾರಗಳು ಸುಮ್ಮನೆ ನಿಲಬಾರದು!

ಸುಸ್ಥಿರ ಅಭಿವೃದ್ಧಿ ಗುರಿಗಳು ಮತ್ತು ನಾವು

ನಮ್ಮ ಸುತ್ತಮುತ್ತಲಿನ ಅಸ್ಥಿರತೆಗಳ ನಡುವೆಯೂ ಜಗತ್ತಿನ ಜನರೆಲ್ಲರೂ ಸುಸ್ಥಿರತೆ ಹೊಂದುವ ನಿರೀಕ್ಷೆಯಲ್ಲಿಯೇ ಬದುಕುತ್ತಿದ್ದೇವೆ. ಈ ಮಧ್ಯೆಯೂ ಕೊರತೆ, ತೊಂದರೆ, ಅಸಮಾನತೆ, ತಾರತಮ್ಯಗಳನ್ನು ತೊಡೆದುಹಾಕುವ ಮತ್ತು ಎಲ್ಲರಿಗೂ ನೆಮ್ಮದಿಯ ಜೀವನ ಒದಗಿಸುವ ಕುರಿತು ಹಲವು ಪ್ರಯತ್ನಗಳು ಪ್ರಯೋಗಗಳು ಸದಾಕಾಲಕ್ಕೂ ನಡದೇ ಇದೆ. ಜಾಗತಿಕವಾಗಿ ಸದ್ಯ ಚಾಲ್ತಿಯಲ್ಲಿರುವ ಚಿಂತನೆ, ‘ಸುಸ್ಥಿರ ಅಭಿವೃದ್ಧಿ ಗುರಿಗಳು’ ( SDG-Sustainable Development Goals 2016-30). ಇದರ ಒಟ್ಟು 17 ಗುರಿಗಳಲ್ಲಿ ಅಭಿವೃದ್ಧಿ ಹೊಂದಿರುವ, ಹೊಂದುತ್ತಿರುವ ಮತ್ತು ಹೊಂದದಿರುವ ಎಲ್ಲ ದೇಶಗಳೂ ನೀರು, ಭೂಮಿ, ಬೆಳೆ, ಮಳೆ, ಕೃಷಿ, ಕೈಗಾರಿಕೆ, ನೈಸರ್ಗಿಕ ಸಂಪತ್ತು ಇವೇ ಮೊದಲಾದವುಗಳನ್ನು ಗಮನದಲ್ಲಿಟ್ಟುಕೊಂಡೇ ಹಸಿವು—ಬಡತನ ತೊಲಗಿಸಿ, ಮುಂದಿನ ಪೀಳಿಗೆಗೂ ಎಲ್ಲ ನಿಸರ್ಗದತ್ತ ಸಂಪನ್ಮೂಲಗಳನ್ನು ಕೊಡಮಾಡಬೇಕೆಂಬ ಆಶಯವಿದೆ. ಇವನ್ನು ಸಾಧಿಸಲು ಹಳ್ಳಿಗಳಿಂದ ಹಿಡಿದು ರಾಷ್ಟ್ರ ಮಟ್ಟದವರೆಗೆ ಈ ಸುಸ್ಥಿರ ಅಭಿವೃದ್ಧಿಯ ವಿಚಾರಗಳನ್ನು ಪಸರಿಸುವ ಮತ್ತು ಸರ್ಕಾರಗಳು ಮತ್ತು ಜನರು ಅವುಗಳನ್ನು ಅಳವಡಿಸಿಕೊಳ್ಳುವಂತೆ ಪ್ರೋತ್ಸಾಹಿಸುವ ಜವಾಬ್ದಾರಿ ನಮ್ಮ ಎದುರು ಇದೆ.

ಸಮಾಜದ ಅಭಿವೃದ್ಧಿ ಕುರಿತು ಮಹದಭಿಲಾಷೆಯನ್ನು ಹೊಂದಿರುವ ‘ಸಮಾಜಮುಖಿ’ ತನ್ನ ಜುಲೈ ಸಂಚಿಕೆಯ ಮುಖ್ಯಚರ್ಚೆಯಲ್ಲಿ ಓದುಗರಿಗೆ ‘ಸುಸ್ಥಿರ ಅಭಿವೃದ್ಧಿ ಗುರಿ’ಗಳನ್ನು ತಿಳಿಸುತ್ತಾ ಚರ್ಚೆಗೆ ಎಳೆಯುವ ಉದ್ದೇಶವನ್ನು ಹೊಂದಿದೆ. ಇದಕ್ಕಾಗಿ ತಾವು, ಕರ್ನಾಟಕ ರಾಜ್ಯವನ್ನು ಕೇಂದ್ರೀಕರಿಸಿ ತಮ್ಮ ಅನುಭವ, ಚಿಂತನೆ, ಗಮನಿಸುವಿಕೆಯಿಂದ ಕಂಡುಕೊಂಡಿರುವ ಸುಸ್ಥಿರ ಅಭಿವೃದ್ಧಿ ಕುರಿತಾದ ಪ್ರಯೋಗಗಳು, ಪ್ರಾತ್ಯಕ್ಷಿಕೆಗಳು, ಪ್ರಮಾಣೀಕರಣಗಳ ಉದಾಹರಣೆಗಳೊಂದಿಗೆ ನಿರ್ದಿಷ್ಟವಾಗಿ ಸರ್ಕಾರ ಮತ್ತು ಜನಸಮುದಾಯಗಳು ಏನು ಮಾಡಬೇಕಿದೆ ಎಂಬ ಯಾವುದಾದರೂ ಒಂದು ಸುಸ್ಥಿರ ಅಭಿವೃದ್ಧಿ ಗುರಿಯನ್ನು ಗಮನದಲ್ಲಿಟ್ಟುಕೊಂಡು 250 ಪದಗಳಿಗೆ ಮೀರದಂತೆ ಲೇಖನವನ್ನು ಸಿದ್ಧಪಡಿಸಿ ಜೂನ್ 30ರೊಳಗೆ ನೀಡಲು ಕೋರಿಕೆ. ಆಯ್ದ ಲೇಖನಗಳಿಗೆ ಸಂಭಾವನೆಯೂ ಇದೆ.

ಸಮಾಜಮುಖಿ ಮಾಸಪತ್ರಿಕೆ, ನಂ. 111, 4ನೇ ಮಹಡಿ, ಕೃಷ್ಣಪ್ಪ ಕಾಂಪೌಂಡ್, ಲಾಲ್‍ಬಾಗ್ ರಸ್ತೆ, ಬೆಂಗಳೂರು 560027
ಮೊ:  9606934018 | samajamukhi2017@gmail.com | www.samajamukhi.com

ಸುಸ್ಥಿರ ಅಭಿವೃದ್ಧಿ ಗುರಿಗಳು 2016-30 ಕುರಿತು ನಿಮಗೆ ಹೆಚ್ಚಿನ ಮಾಹಿತಿ ಸಿಗುವ ಜಾಲತಾಣ:
http://www.undp.org/content/undp/en/home/sustainable-development-goals.html

ಸುಸ್ಥಿರ ಅಭಿವೃದ್ಧಿ ಗುರಿಗಳ ಕನ್ನಡಾನುವಾದ ಸಿಗುವ ಜಾಲತಾಣ:
https://drive.google.com/open?id=16BnorbRK1dWlQ3fCAH-17pNTaGCxEjzR

ಎನ್.ಎಸ್.ಶಂಕರ್

ಬಿಜೆಪಿ ವಿರೋಧಿ ಒಕ್ಕೂಟ ಸಾಧ್ಯವೇ?

ಜುಲೈ ೨೦೧೮

ಶಾಂತಲಾ ದಾಮ್ಲೆ

ಹೋರಾಟಗಾರ ಅಭ್ಯರ್ಥಿ ಚುನಾವಣಾ ಬವಣೆ

ಜುಲೈ ೨೦೧೮

ಶ್ರೀಶೈಲ ಆಲದಹಳ್ಳಿ

ಸಂಡೂರು ಕುಮಾರಸ್ವಾಮಿ ಬೆಟ್ಟಕ್ಕೆ ಗಣಿ ಕಂಟಕ!

ಜುಲೈ ೨೦೧೮

ಡಾ.ಡಿ.ಸಿ.ನಂಜುಂಡ

ನಿಮ್ಮ ಆನ್‍ಲೈನ್ ಮಾಹಿತಿ ಎಷ್ಟು ಸುರಕ್ಷಿತ?

ಜೂನ್ ೨೦೧೮

ಪ್ರೊ. ರವೀಂದ್ರ ರೇಷ್ಮೆ

ಅಸೆಂಬ್ಲಿ ಫಲಿತಾಂಶ - ಪಕ್ಷ ರಾಜಕಾರಣದ ಪತನ

ಜೂನ್ ೨೦೧೮

ಡಾ.ಟಿ.ಆರ್.ಚಂದ್ರಶೇಖರ

ಭಾರತದಲ್ಲಿ ಬ್ಯಾಂಕಿಂಗ್ ಬುಡ ಗಡಗಡ!

ಮೇ ೨೦೧೮

ಸುಧೀಂದ್ರ ಹಾಲ್ದೊಡ್ಡೇರಿ

ಬೆಳ್ಳಂದೂರಿನಲ್ಲಿ ನೊರೆ ಹೊತ್ತಿ ಉರಿದೊಡೆ...!

ಮೇ ೨೦೧೮

ರಹಮತ್ ತರೀಕೆರೆ

ಪ್ರತಿಮೆಗಳ ರಾಜಕಾರಣ

ಎಪ್ರಿಲ್ ೨೦೧೮

ಹನುಮಂತರೆಡ್ಡಿ ಶಿರೂರು

ಸಿದ್ದರಾಮಯ್ಯನವರ ಕಲ್ಯಾಣ ರಾಜ್ಯ !

ಎಪ್ರಿಲ್ ೨೦೧೮

ದಾಸನೂರು ಕೂಸಣ್ಣ

ಒಳ ಮೀಸಲಾತಿಏಕೆ ಬೇಕು?

ಮಾರ್ಚ್ ೨೦೧೮

ರೇಣುಕಾ ನಿಡಗುಂದಿ

ಮೊಲೆ ಕತ್ತರಿಸಿಕೊಟ್ಟ ನಂಗೇಲಿ ನೆನಪು!

ಮಾರ್ಚ್ ೨೦೧೮

ಡಿ. ಎಸ್. ನಾಗಭೂಷಣ

ಕನ್ನಡ ಮೊದಲು ನಂತರ ಇಂಗ್ಲಿಷ್

ಮಾರ್ಚ್ ೨೦೧೮

ಡಾ. ವಾಸು ಎಚ್. ವಿ

ಈ ಹೊತ್ತಿನ ಕರ್ನಾಟಕ: ಪರ್ಯಾಯ ರಾಜಕಾರಣ

ಫೆಬ್ರವರಿ ೨೦೧೮

ಡಾ.ಕಿರಣ್ ಎಂ.ಗಾಜನೂರು

‘ನಿಮ್ಮ ದನದ ಬಾಲ ನೀವೇ ಇಟ್ಟುಕೊಳ್ಳಿ’

ಫೆಬ್ರವರಿ ೨೦೧೮