2nd ಮೇ ೨೦೧೮

ಸುಳ್ಳುಸುದ್ದಿಗಳ ನಿಜಬಣ್ಣ ಮತ್ತು ನಿಯಂತ್ರಣ

ಮಾಧವ ಐತಾಳ

ಸುಳ್ಳು ಸುದ್ದಿಯನ್ನು ನಿಯಂತ್ರಿಸುತ್ತೇನೆ ಎಂದು ಸರ್ಕಾರ ಹೇಳಿದರೆ, ಯಾರು ಬೇಡ ಎನ್ನುತ್ತಾರೆ ಹೇಳಿ? ಆದರೆ, ಇದು ಮುಕ್ತ ಹಾಗೂ ಪಾರದರ್ಶಕ ಪತ್ರಿಕೋದ್ಯಮಕ್ಕೆ ದಾರಿ ಮಾಡಿಕೊಡುವುದೇ ಎನ್ನುವುದು ಪ್ರಶ್ನೆ.

ಅ ಮೆರಿಕದ ಅಧ್ಯಕ್ಷರಾಗಿ ಡೊನಾಲ್ಡ್ ಟ್ರಂಪ್ ಆಯ್ಕೆಯಾದ ಬಳಿಕ ಚಾಲನೆಗೆ ಬಂದ ಪದ ‘ಫೇಕ್‍ನ್ಯೂಸ್’. ಇದು ಎಷ್ಟು ಜನಪ್ರಿಯಗೊಂಡಿತೆಂದರೆ, ಕಾಲಿನ್ಸ್ ಪದಕೋಶವು 2017ರ ಪದ ಎಂದು ಆಯ್ಕೆ ಮಾಡಿತು! ಸತ್ಯೋತ್ತರ (ಪೋಸ್ಟ್‍ಟ್ರೂತ್) ಎನ್ನುವ ಪದದಷ್ಟೇ ಜನಪ್ರಿಯ ಪದ ಇದು.

ಸುಳ್ಳುಸುದ್ದಿ ಎನ್ನುವುದನ್ನು ಹೇಗೆ ವಿವರಿಸುವುದು? ಬೇಕೆಂದೇ ಮಾಡಿದ ಇಲ್ಲವೇ ಕಣ್ತಪ್ಪಿನಿಂದಾದ ತಪ್ಪು, ಸುಳ್ಳೇ ದಿಕ್ಕು ತಪ್ಪಿಸುವುದು, ವರದಿಯೊಂದನ್ನು ತಿರುಚುವುದು ಅಥವಾ ಸಂಪೂರ್ಣ ಸುಳ್ಳೊಂದನ್ನು ಸೃಷ್ಟಿಸುವುದು —ಇದರಲ್ಲಿ ಯಾವುದಾದರೂ ಆಗಿರಬಹುದು. ಹಿಂದೆ ಸುದ್ದಿ ಮನೆಗಳಲ್ಲಿ ತಪ್ಪುಹಾದಿಗೆಳೆಯುವ ವರದಿಗಳ ಪ್ರಕಟಣೆ ತಡೆಯುವ ಇಲ್ಲವೇ ತಪ್ಪುಗಳನ್ನು ತಿದ್ದುವ ಸಾಮಥ್ರ್ಯವಿದ್ದ ವೃತ್ತಿಪರರು, ಬದ್ಧತೆ ಇದ್ದವರು ಇದ್ದರು. ಈಗ ಅಂಥವರ ಪ್ರಮಾಣ ಕಡಿಮೆಯಾಗಿದೆ. ಅದೇ ಹೊತ್ತಿನಲ್ಲಿ ಫೇಸ್‍ಬುಕ್, ವಾಟ್ಸ್‍ಆ್ಯಪ್, ಟ್ವಿಟರ್‍ನಲ್ಲಿ ಕ್ಷಣಮಾತ್ರದಲ್ಲಿ ಫೋಟೋಶಾಪ್ ಆದ ಫೋಟೋ ಇಲ್ಲವೇ ಸಂದೇಶಗಳನ್ನು ಸೃಷ್ಟಿಸಿ ಇಲ್ಲವೇ ಮುಂದೆ ತಳ್ಳಿ ವಿಷ ಹರಡುವವರು ಹೆಚ್ಚಿಕೊಂಡಿದ್ದಾರೆ. ತಮ್ಮ ಸಿದ್ಧಾಂತವನ್ನು ಮುಂದೊತ್ತಲು ಇಲ್ಲವೇ ದ್ವೇಷವನ್ನು ಹರಡಲು ಅಥವಾ ಮತ ಗಳಿಕೆಗೆ ಸಾಮಾಜಿಕ ಮಾಧ್ಯಮಗಳ ಮೂಲಕ ಸುಳ್ಳು ಸುದ್ದಿಯನ್ನು ಹರಡುವುದು ಹೆಚ್ಚಿದೆ. ಇವುಗಳಲ್ಲಿ ವಾಟ್ಸ್‍ಆ್ಯಪ್ ಪತ್ರಿಕಾವೃತ್ತಿ ಅತ್ಯಂತ ಅಪಾಯಕಾರಿಯಾಗಿ ಪರಿಣಮಿಸಿದೆ. ಫೇಸ್‍ಬುಕ್ ಮತ್ತು ಬ್ಲಾಗ್‍ಗಳು ಕೂಡ ಹಿಂದೆ ಬಿದ್ದಿಲ್ಲ. ಇದರ ಆರಂಭ ಎಲ್ಲಾಯಿತು ಎನ್ನುವುದು ಗೊತ್ತಿಲ್ಲ. ಆದರೆ, ಇದಕ್ಕೊಂದು ಚರಿತ್ರೆ ಇದೆ, ಅಂತ್ಯ ಇಲ್ಲ.

2016ರಲ್ಲಿ ಅಮೆರಿಕದಲ್ಲಿ ಟ್ರಂಪ್ ಆಯ್ಕೆಯಾದ ಬಳಿಕ ತೀವ್ರಗೊಂಡ ಪ್ರವೃತ್ತಿ ಇದು. ಈಗ ತತ್ತ್ವ ಸಿದ್ಧಾಂತ ಹರಡುವಿಕೆ, ಚುನಾವಣೆ ಪ್ರಚಾರ ಸಾಧನ, ಸ್ವಯಂರಕ್ಷಣಾ ಕಾರ್ಯತಂತ್ರ ಹಾಗೂ ಜಾಹೀರಾತು ಹಣದ ಅಪವಿತ್ರ ಸಂಬಂಧದ ಹಾದರದ ಕೂಸಾಗಿ ಪರಿಣಮಿಸಿದೆ.

ಸಂವಿಧಾನದ ವಿಧಿ(19)ಯು ನಾಗರಿಕರ ವಾಕ್ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಖಾತ್ರಿಪಡಿಸುತ್ತದೆ. ಆದರೆ, ಅದು ಪತ್ರಕರ್ತರಿಗೆ ವಿಶೇಷ ಹಕ್ಕನ್ನೇನೂ ನೀಡಿಲ್ಲ. ಅಮೆರಿಕದಲ್ಲಿರುವಂತೆ ಪತ್ರಿಕೆಗಳಿಗೆ ವಿಶೇಷ ಸ್ವಾತಂತ್ರ್ಯ ಭಾರತದಲ್ಲಿ ಇಲ್ಲ. ಅಮೆರಿಕದ ಸಂವಿಧಾನವು ಮೊದಲ ಹಾಗೂ ನಾಲ್ಕನೇ ತಿದ್ದುಪಡಿ ಮೂಲಕ ಪತ್ರಕರ್ತರ ಬರೆಯುವ, ತನಿಖೆ ನಡೆಸುವ, ಟೀಕಿಸುವ, ಸಂವಾದ ನಡೆಸುವ, ಅಷ್ಟೇಕೆ, ರಾಷ್ಟ್ರದ ಅಧ್ಯಕ್ಷನ ಮಾತನ್ನು ವಿರೋಧಿಸುವ ಹಕ್ಕನ್ನು ಕೊಡಮಾಡಿದೆ. ಹೀಗಾಗಿ, ಅಲ್ಲಿ ಪತ್ರಿಕಾ ಸ್ವಾತಂತ್ರ್ಯವು ಭದ್ರವಾಗಿದೆ. ಪತ್ರಿಕೆಗಳು ರಾಷ್ಟ್ರಾಧ್ಯಕ್ಷನ ಹಗರಣಗಳನ್ನು ಬಯಲು ಮಾಡಿ ಸ್ಥಾನದಿಂದ ಕೆಳಗೆ ಇಳಿಸಿದ ಹಲವು ಉದಾಹರಣೆ ಇವೆ.

ಪತ್ರಿಕಾ ಸ್ವಾತಂತ್ರ್ಯಕ್ಕೆ ಸಂಬಂಧಿಸಿದಂತೆ, ಭಾರತದ ಸಾಧನೆ ಕಳಪೆಯಾಗಿದೆ. ಮೇ 2017ರ ವಲ್ರ್ಡ್ ಪ್ರೆಸ್ ಫ್ರೀಡಂ ಇಂಡೆಕ್ಸ್ ಪ್ರಕಾರ, 180 ದೇಶಗಳ ಪಟ್ಟಿಯಲ್ಲಿ ಭಾರತದ ಸ್ಥಾನ 136. ದಕ್ಷಿಣ ಏಷ್ಯಾ ದೇಶಗಳು ಹಾಗೂ ಪ್ಯಾಲೆಸ್ಟೀನ್ ನಮಗಿಂತ ಕೆಳಗೆ ಇವೆ. ವರದಿ ಪ್ರಕಾರ, ಇಲ್ಲಿ ಪತ್ರಕರ್ತರು ಹೆಚ್ಚು ಸ್ವತಂತ್ರರಲ್ಲ. ಭಾರತದ ಸೂಚ್ಯಂಕ ಕಡಿಮೆಯಿರಲು ರಾಷ್ಟ್ರೀಯವಾದ ಹಾಗೂ ಇಂಥವರು ಅಂತರ್ಜಾಲದಲ್ಲಿ ಟ್ರಾಲ್‍ಗಳ ಮೂಲಕ ನಡೆಸುವ ಕಳಂಕ ಹಚ್ಚುವ ಪ್ರಚಾರದಿಂದಾಗಿ ಪತ್ರಕರ್ತರು ಸ್ವತಂತ್ರವಾಗಿ ಕೆಲಸ ಮಾಡಲು ಆಗದೆ ಇರುವುದು ಕಾರಣ. ಶಿಕ್ಷೆಯ ಭೀತಿಯಿಂದ ಪತ್ರಕರ್ತರು ಹೇರಿಕೊಳ್ಳುವ ಸ್ವಯಂ ಸೆನ್ಸಾರ್ ಅಲ್ಲದೆ, ಅವರ ಮೇಲೆ ಕಣ್ಗಾವಲು ಕೂಡ ಇರುತ್ತದೆ.

ಸಾಮಾಜಿಕ ಮಾಧ್ಯಮಗಳ ಹಾವಳಿ

ವಾಟ್ಸ್‍ಆ್ಯಪ್ ಮೂಲಕ ಸುಳ್ಳು ಸುದ್ದಿ ಹರಡುವುದು ಬಹಳ ಸುಲಭ. ಟೆಕ್ನಾಲಜಿ ಕನ್ಸಲ್ಟೆನ್ಸಿ ಕೌಂಟರ್‍ಪಾಯಿಂಟ್ ರಿಸರ್ಚ್ ಪ್ರಕಾರ, ದೇಶದಲ್ಲಿ 650 ದಶಲಕ್ಷ ಮೊಬೈಲ್ ಹಾಗೂ 300 ದಶಲಕ್ಷ ಸ್ಮಾರ್ಟ್‍ಫೋನ್ ಬಳಕೆದಾರರು ಇದ್ದಾರೆ. ಮೊಬೈಲ್ ಡೇಟಾ ದರ ಅಗ್ಗವಾಗಿದೆ. ಆದರೆ, ಮೊಬೈಲ್ ಮೂಲಕ ಬರುವ ಮಾಹಿತಿಯನ್ನು ಅರಗಿಸಿಕೊಳ್ಳಲು ಬೇಕಾದ ಶೈಕ್ಷಣಿಕ ಅರ್ಹತೆ ಇಲ್ಲವೇ ಪ್ರಬುದ್ಧತೆ ಇಲ್ಲವಾಗಿದೆ. ಇಂಥವರನ್ನು ಭಾವನಾತ್ಮಕವಾಗಿ ಉದ್ರೇಕಿಸುವುದು ಇಲ್ಲವೇ ಪ್ರಚೋದಿಸುವುದು ಸುಲಭ. ಬಂದ ಸಂದೇಶಗಳನ್ನು ಕಣ್ಣುಮುಚ್ಚಿ ಮುಂದಕ್ಕೆ ಕಳಿಸುವ ಪ್ರವೃತ್ತಿಯಿಂದಾಗಿ, ಹಸಿಸುಳ್ಳು, ದ್ವೇಷಪೂರಿತ ಇಲ್ಲವೇ ಅನಗತ್ಯ ಸಂದೇಶಗಳು ತಕ್ಷಣ ರವಾನೆಯಾಗುತ್ತವೆ, ಹಂಚಿಕೆಯಾಗುತ್ತವೆ. ಇದರಲ್ಲಿ ವಾಟ್ಸ್‍ಆ್ಯಪ್ ಪಾಲು ಗಮನಾರ್ಹ ವಾದದ್ದು. 2013ರಲ್ಲಿ ಮುಜಫ್ಫರ್ ನಗರದಲ್ಲಿ ನಡೆದ ದೊಂಬಿಗೆ ಕಾರಣವಾದದ್ದು ಶಾಸಕನೊಬ್ಬ ಹರಿಯಬಿಟ್ಟ ಸುಳ್ಳು ವಾಟ್ಸ್‍ಆ್ಯಪ್ ವಿಡಿಯೋಗಳು. ಆಗಸ್ಟ್ 27ರಿಂದ ಸೆಪ್ಟೆಂಬರ್ 17ರವರೆಗೆ ನಡೆದ ಈ ದೊಂಬಿಯಲ್ಲಿ 62 ಮಂದಿ ಮೃತಪಟ್ಟು, 93 ಮಂದಿ ಗಾಯ ಗೊಂಡರು. 50 ಸಾವಿರಕ್ಕೂ ಹೆಚ್ಚು ಮಂದಿ ನೆಲೆ ಕಳೆದು ಕೊಂಡರು.

ಪತ್ರಿಕೆಗಳು ಕೂಡ ನಿಷ್ಪಾಪಿಗಳೇನಲ್ಲ. ಏಪ್ರಿಲ್ 10, 2018 ರಂದು ಇಂಗ್ಲಿಷ್ ಪತ್ರಿಕೆಯೊಂದರ ಬೆಂಗಳೂರು ಆವೃತ್ತಿಯಲ್ಲಿ ಗುಜರಾತ್ ಶಾಸಕ ಜಿಗ್ನೇಶ್ ಮೆವಾನಿ ಅವರ ಮೇಲೆ ಚುನಾವಣೆ ನೀತಿಸಂಹಿತೆ ಉಲ್ಲಂಘಿಸಿದ್ದಕ್ಕಾಗಿ ಪೊಲೀಸರು ಪ್ರಕರಣ ದಾಖಲಿಸಿ ಕೊಂಡಿದ್ದಾರೆ. ಮೆವಾನಿ ಅವರ ಫೋಟೋ ಇದ್ದ 160 ಲ್ಯಾಪ್‍ಟಾಪ್‍ಗಳನ್ನು ಚುನಾವಣಾ ಆಯೋಗದ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ ಎಂಬ ಸುದ್ದಿ ಏಳನೇ ಪುಟದಲ್ಲಿ ಪ್ರಕಟವಾಗಿತ್ತು. ಇದರಿಂದ ಮೆವಾನಿ ಹಾಗೂ ಕಾಂಗ್ರೆಸ್ ವಿರುದ್ಧ ಆಕ್ರೋಶ ವ್ಯಕ್ತವಾಗಿತ್ತು. ಪರಿಶೀಲಿಸಿದಾಗ ಗೊತ್ತಾಗಿದ್ದು ಏನೆಂದರೆ, ಲ್ಯಾಪ್‍ಟಾಪ್ ಮೇಲೆ ಇದ್ದುದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಫೋಟೊ. ಶಿವಮೊಗ್ಗದ ಶಾಲೆಯೊಂದರ ಮಕ್ಕಳಿಗೆ ಹಂಚಲೆಂದು ರವಾನಿಸುತ್ತಿದ್ದಾಗಲೇ ನೀತಿಸಂಹಿತೆ ಜಾರಿಗೆ ಬಂದಿತ್ತು ಹಾಗೂ ಈ ಬಗ್ಗೆ ಇನ್ನೊಂದು ಇಂಗ್ಲಿಷ್ ಪತ್ರಿಕೆಯಲ್ಲಿ ಏಪ್ರಿಲ್ 1ರಂದು ವರದಿ ಪ್ರಕಟವಾಗಿತ್ತು! ವಾಸ್ತವ ಏನೆಂದರೆ, ಮೆವಾನಿ ಮೇಲೆ ದೂರು ದಾಖಲಾದದ್ದು ಅವರು ಭಾಷಣದಲ್ಲಿ ಹಿಂಸೆಯನ್ನು ಪ್ರಚೋದಿಸಿದರೆಂದು.

ಪತ್ರಕರ್ತರಿಗೆ ಮಾನ್ಯತೆ ನೀಡುವ ಕ್ರಮ

ಪತ್ರಕರ್ತರಿಗೆ ಮಾನ್ಯತೆ (ಅಕ್ರೆಡಿಷನ್) ನೀಡಲು ಕೇಂದ್ರ ಪತ್ರಿಕಾ ಮಾನ್ಯತೆ ಸಮಿತಿ ಹಾಗೂ ರಾಜ್ಯಗಳಲ್ಲಿ ಪ್ರತ್ಯೇಕ ಸಮಿತಿಗಳಿರುತ್ತವೆ. ಕೇಂದ್ರ ಸಮಿತಿಯಲ್ಲಿ ಪ್ರಧಾನ ಮಹಾ ನಿರ್ದೇಶಕ ಹಾಗೂ ಹತ್ತೊಂಬತ್ತು ಸದಸ್ಯರಿರುತ್ತಾರೆ. ದೈನಿಕ್ ಜಾಗರಣ್‍ನ ಪ್ರಶಾಂತ್ ಮಿಶ್ರಾ, ಟೈಮ್ಸ್ ನೌನ ನಾವಿಕಾ ಕುಮಾರ್, ಎಬಿಪಿ ನ್ಯೂಸ್‍ನ ಕಂಚನ್ ಗುಪ್ತಾ, ಪಯೋನೀರ್‍ನ ಜೆ.ಗೋಪಾಲಕೃಷ್ಣ ಮತ್ತು ಸ್ಮಿತಾ ಪ್ರಕಾಶ್(ಎಎನ್‍ಐ). ಫ್ರಾಂಕ್ ನರೋನ್ಹಾ ಸಮಿತಿ ಅಧ್ಯಕ್ಷ. ಸಮಿತಿಯ ಕಾಲಾವಧಿ ಎರಡು ವರ್ಷ. ಮೂರು ತಿಂಗಳಿಗೊಮ್ಮೆ ಸಭೆ ನಡೆಯುತ್ತದೆ.

ಬೀಟ್‍ನಲ್ಲಿರುವ ಪತ್ರಕರ್ತರಿಗೆ ಮಾನ್ಯತೆ ಅಗತ್ಯವಿರುತ್ತದೆ. ಅದೊಂದು ಅಧಿಕೃತ ಮನ್ನಣೆ. ಮಾನ್ಯತೆ ಪಡೆದ ಪತ್ರಕರ್ತರಿಗೆ ಸರ್ಕಾರಿ ಕಚೇರಿಗಳಿಗೆ ಪ್ರವೇಶ, ವೃತ್ತಿಪರ ಸಾಧನಗಳನ್ನು ತೆರಿಗೆ ಇಲ್ಲದೆ ತರಿಸಿಕೊಳ್ಳಲು, ಪತ್ರಕರ್ತರ ಕಲ್ಯಾಣ ಯೋಜನೆಯಡಿ ತನಗೆ ಇಲ್ಲವೇ ಕುಟುಂಬದವರಿಗೆ ಎಕ್ಸ್‌‍ಗ್ರೇಷಿಯಾ ಪರಿಹಾರ ಪಡೆಯಲು, ರೈಲ್ವೆ ಪ್ರಯಾಣ ದರದಲ್ಲಿ ವಿನಾಯಿತಿ, ಕೇಂದ್ರ ಸರ್ಕಾರದ ಆರೋಗ್ಯ ಯೋಜನೆಯಲ್ಲಿ ರೋಗೋಪಚಾರ ಸಿಗಲಿದೆ. ಪೂರ್ಣಾವಧಿ ಪತ್ರಕರ್ತರು ಐದು ವರ್ಷ, ಹವ್ಯಾಸಿ ಪತ್ರಕರ್ತರು 15 ವರ್ಷ ಸೇವೆ ಸಲ್ಲಿಸಿರಬೇಕು. 2018 ರವರೆಗೆ ಪಿಐಬಿ ಮಾನ್ಯತೆ ಪಡೆದವರ ಸಂಖ್ಯೆ 2,403.

ವಿಧಾನಸಭೆ, ಪರಿಷತ್ತು ಹಾಗೂ ಸಂಸತ್ತಿನ ಕೆಳಮನೆ ಹಾಗೂ ಮೇಲ್ಮನೆಯ ಕಲಾಪಕ್ಕೆ ಪ್ರವೇಶ ಪಡೆಯಲು ಮಾನ್ಯತೆಯಿಂದ ಉಪಯೋಗವಾಗಲಿದೆ. ಆದರೆ, ಪಿಐಬಿ ಮಾನ್ಯತೆ ಪಟ್ಟಿಯನ್ನು ನೋಡಿದರೆ, ಅದರಲ್ಲಿ ವೃತ್ತಿಯಲ್ಲಿ ಹೆಸರು ಗಳಿಸಿದವರು ಹೆಚ್ಚು ಸಂಖ್ಯೆಯಲ್ಲಿಲ್ಲ. ಮಾನ್ಯತೆಯನ್ನು ಅಮಾನತುಗೊಳಿಸುವ ಬೆದರಿಕೆ ಹಾಕಿ ತೆರೆಮರೆಯಲ್ಲಿ ಕಾರ್ಯಾಚರಣೆ ನಡೆಸುವ ವೆಬ್‍ಸೈಟ್—ಬ್ಲಾಗ್‍ಗಳನ್ನು ನಿಯಂತ್ರಿಸಲು ಸಾಧ್ಯವಿಲ್ಲ. ಇದರಿಂದ ತೊಂದರೆ ಆಗುವುದು ಮುಖ್ಯವಾಹಿನಿಯಲ್ಲಿರುವ ನಿಜವಾದ ವೃತ್ತಿಪರರಿಗೆ.

ಈ ಹಿಂದೆ ಪ್ಲಾಸ್ಟಿಕ್ ಮೊಟ್ಟೆ ಹಾಗೂ ಅಕ್ಕಿ ಬಗೆಗೆ ಪುಂಖಾನುಪುಂಖವಾಗಿ ವರದಿಗಳು ಕನ್ನಡದ ಪತ್ರಿಕೆಗಳಲ್ಲಿ ಪ್ರಕಟವಾಗಿದ್ದವು. ಒಂದು ಕೆಜಿ ಪ್ಲಾಸ್ಟಿಕ್ ಉತ್ಪಾದನೆಗೆ ಒಂದು ಕೆಜಿ ಅಕ್ಕಿಗಿಂತ ಹೆಚ್ಚು ಖರ್ಚು ತಗಲುತ್ತದೆ ಎನ್ನುವ ಸಾಮಾನ್ಯಜ್ಞಾನ ಸುದ್ದಿ ಪ್ರಕಟಿಸಿದವರಿಗೆ ಇಲ್ಲವಾಗಿತ್ತು. ಕೊನೆಗೆ ಈ ಸುದ್ದಿ ತನ್ನಿಂದತಾನೇ ಮೃತಪಟ್ಟಿತು.

ಜನಸಾಮಾನ್ಯರನ್ನು ಬಳಸಿಕೊಂಡು ಸುಳ್ಳುಸುದ್ದಿಗಳನ್ನು ಹರಡಲಾಗುತ್ತದೆ. ಕನ್ನಡದ ‘ಪೋಸ್ಟ್ ಕಾರ್ಡ್.ಕಾಂ’ನದ್ದೂ ಇದೇ ಕತೆ. ಉದ್ದೇಶ ಪೂರ್ವಕವಾಗಿ ವಿಷವನ್ನು ತುಂಬುತ್ತಿದ್ದ ಮತ್ತು ಕೋಮು ದ್ವೇಷವನ್ನು ಸೃಷ್ಟಿಸಲು ಬಳಕೆಯಾಗುತ್ತಿದ್ದ ಜಾಲತಾಣ ಅದು. ಅದನ್ನು ಒಂದು ರಾಜಕೀಯ ಸಿದ್ಧಾಂತವನ್ನು ಬೆಂಬಲಿಸುವವರು ಓದುತ್ತಿದ್ದರು. ಕೋಮುದ್ವೇಷ ಆರೋಪದ ಮೇಲೆ ಅದರ ಸಂಪಾದಕನ ಬಂಧನವೂ ಆಯಿತು.

ಕಾನೂನು ಪರಿಹಾರವಲ್ಲ

ಏಪ್ರಿಲ್ 2, 2018 ರಂದು ಮಾಹಿತಿ ಮತ್ತು ಪ್ರಚಾರ ಮಂತ್ರಾಲಯ ಸುತ್ತೋಲೆಯೊಂದನ್ನು ಹೊರಡಿಸಿ, ‘ಸುಳ್ಳು ಸುದ್ದಿ ಹರಡುವ ಅಥವಾ ಸೃಷ್ಟಿಸುವ ಪತ್ರಕರ್ತರ ಮಾನ್ಯತೆಯನ್ನು ದೂರು ದಾಖಲುಗೊಂಡ ಹದಿನೈದು ದಿನಗಳೊಳಗೆ ಅಮಾನತುಗೊಳಿಸಲಾಗುವುದು’ ಎಂದು ಹೇಳಿತು. ಟೀಕೆಗಳ ಸುರಿಮಳೆಯಿಂದ ಕಂಗಾಲಾಗಿ, 15 ಗಂಟೆಗಳೊಳಗೆ ಪ್ರಧಾನಮಂತ್ರಿಯವರ ಕಚೇರಿ ಸುತ್ತೋಲೆಯನ್ನು ವಾಪಸ್ ಪಡೆಯಿತು. ಅಷ್ಟರಲ್ಲಿ ಸಾಕಷ್ಟು ಹಾನಿ ಆಗಿಹೋಗಿತ್ತು. ಇದಕ್ಕೆ ಕಾರಣ—ಕೇಂದ್ರ ಸರ್ಕಾರದ ಈವರೆಗಿನ ನಡೆನುಡಿ.

ಒಂದು ವೇಳೆ, ಸುತ್ತೋಲೆ ಜಾರಿಗೊಂಡಿದ್ದರೂ, ಸುಳ್ಳುಸುದ್ದಿ ಸೃಷ್ಟಿಸುವವರ ಮೇಲೆ ಅದು ಹೆಚ್ಚೇನೂ ಪರಿಣಾಮ ಬೀರುತ್ತಿರಲಿಲ್ಲ. ಏಕೆಂದರೆ, ಇಂಥ ಸುದ್ದಿಗಳು ಸೃಷ್ಟಿಯಾಗುವುದು ಫೋಟೋಶಾಪ್ ಕಲಾವಿದರಿಂದ, ನಿಜ ಏನು ಎನ್ನುವುದನ್ನು ಪರಿಶೀಲಿಸದೆ ಮಾತನ್ನಾಡುವ ರಾಜಕಾರಣಿಯಿಂದ, ರಾಗ ದ್ವೇಷದಿಂದ ತುಂಬಿದ ಹಾಗೂ ತಾವು ಮಾತ್ರ ಸರಿ ಎಂದುಕೊಳ್ಳುವ ಸ್ವಪ್ರೇಮಿಗಳಿಂದ ಮತ್ತು ಸಾರ್ವಜನಿಕ ಸಂಪರ್ಕ ಏಜೆನ್ಸಿ, ಮಾರುಕಟ್ಟೆ ತಂತ್ರ ಕುಶಲರು ಹಾಗೂ ತನ್ನ ಅಜೆಂಡಾವನ್ನು ಮುಂದೊತ್ತಲು ಯತ್ನಿಸುವ ವ್ಯಕ್ತಿಗಳಿಂದ.

ಪ್ರಧಾನಿ ನರೇಂದ್ರ ಮೋದಿ ಅವರು ಕಸ ಗುಡಿಸುತ್ತಿರುವ ಫೋಟೋಶಾಪ್ ಫೋಟೋ ಇಲ್ಲವೇ ಆರುಂಧತಿ ರಾಯ್ ಕಾಶ್ಮೀರಕ್ಕೆ ಆಜಾದಿ ಕೊಡಬೇಕೆಂದು ಹೇಳಿದರು ಎನ್ನುವ ಸುಳ್ಳು ಹೇಳಿಕೆಯಿಂದ ಹೆಚ್ಚು ಹಾನಿಯಾಗದೆ ಇರಬಹುದು. ಆದರೆ, ಸರ್ಕಾರವನ್ನು ಸೈದ್ಧಾಂತಿಕ ಕಾರಣಗಳಿಗಾಗಿ ವಿರೋಧಿಸುವವರನ್ನು ಗುರಿಯಾಗಿರಿಸಿಕೊಂಡು ಸುಳ್ಳುಸುದ್ದಿ ಹರಡುವುದು, ಫೇಸ್‍ಬುಕ್/ಟ್ವಿಟರ್‍ನಲ್ಲಿ ಟ್ರಾಲ್ ಮಾಡುವ ಮೂಲಕ ಅವರ ವಿರುದ್ಧ ಜನರನ್ನು ರೊಚ್ಚಿಗೇಳಿಸುವುದರಿಂದ, ಜನರು ಧೈರ್ಯವಾಗಿ ಮಾತನ್ನಾಡುವುದನ್ನೇ ನಿಲ್ಲಿಸಿಬಿಡುತ್ತಾರೆ.

ಪ್ರಶ್ನೆ ಇರುವುದು —ಚುನಾವಣೆ ರಾಜಕೀಯಕ್ಕಾಗಿ ಸರ್ಕಾರದ ಕೃಪಾಪೋಷಿತರಿಂದ ಸೃಷ್ಟಿಯಾಗುವ ಸುಳ್ಳುಸುದ್ದಿಗಳ ತಡೆ ಹೇಗೆ ಎನ್ನುವುದು. ಪತ್ರಕರ್ತರ ಮಾನ್ಯತೆ ಅಮಾನತಿನ ಬೆದರಿಕೆ ಮೂಲಕ ಸುಳ್ಳುಸುದ್ದಿಗಳನ್ನು ತಡೆಯಲಾಗದು. ಏಕೆಂದರೆ, 2016ರಿಂದ ಇಂಥ ಸುದ್ದಿಗಳು ಶೇ. 365 ರಷ್ಟು ಹೆಚ್ಚಳಗೊಂಡಿವೆ.

ಜಾಹೀರಾತು ತಡೆ

ಅನೈತಿಕ ವರದಿಗಾರಿಕೆ, ಹೀನ ಉದ್ದೇಶ, ಕೀಳು ಪ್ರವೃತ್ತಿಯ ಸುಳ್ಳು ಸುದ್ದಿಗಳನ್ನು ಪ್ರಕಟಿಸುವ ಪತ್ರಿಕೆಗಳಿಗೆ ಸರ್ಕಾರದ ಜಾಹೀರಾತು ಸ್ಥಗಿತದಂಥ ಉಪಕ್ರಮಗಳು ಪರಿಣಾಮಕಾರಿಯಾಗುವ ಸಾಧ್ಯತೆ ಇದೆ. ಏಕೆಂದರೆ, ಸರ್ಕಾರದ ಜಾಹೀರಾತುಗಳು ಪತ್ರಿಕೆಗಳ ಪ್ರಮುಖ ಆದಾಯ ಮೂಲ. ಪ್ರಸರಣ ಸಂಖ್ಯೆಗೆ ಸಂಬಂಧಿಸಿದಂತೆ ಉದ್ದೇಶಪೂರ್ವಕವಾಗಿ ತಪ್ಪು ಮಾಹಿತಿ ನೀಡಿದಲ್ಲಿ ಅಂಥ ಪತ್ರಿಕೆಗಳನ್ನು ಪಟ್ಟಿಯಿಂದ ಕಿತ್ತುಹಾಕುವುದಾಗಿ ಡಿಎವಿಪಿ (ಜಾಹೀರಾತು ಮತ್ತು ದೃಶ್ಯ ಪ್ರಚಾರ ನಿರ್ದೇಶನಾಲಯ) ಈಗಾಗಲೇ ಎಚ್ಚರಿಸಿದೆ. ಆದರೆ, ಇದರಿಂದ ಸುಳ್ಳು ಸುದ್ದಿಯನ್ನು ತಡೆಯಲು ಸಾಧ್ಯವೇ? ಸುದ್ದಿಯೊಂದನ್ನು ಸುಳ್ಳು ಎಂದು ನಿರ್ಧರಿಸುವವರು ಯಾರು? ಸುಳ್ಳು ಸುದ್ದಿ ಎಂದರೇನು? ‘ಕೆಟ್ಟ ಉದ್ದೇಶ’ ಎಂದರೇನು? ವ್ಯಕ್ತಿಯ ರಾಜಕೀಯ—ಧಾರ್ಮಿಕ— ತಾತ್ವಿಕ ನಂಬಿಕೆಗಳನ್ನು ಆಧರಿಸಿ, ಒಬ್ಬನಿಗೆ ಸುಳ್ಳು ಎನ್ನಿಸುವ ಸುದ್ದಿ ಇನ್ನೊಬ್ಬನಿಗೆ ಸರಿ ಎನ್ನಿಸಬಹುದಲ್ಲವೇ? ಒಂದೆರಡು ಉದಾಹರಣೆಗಳನ್ನು ನೋಡಿ:

ಪಶ್ಚಿಮ ಬಂಗಾಳದ ಬಸೀರ್‍ಹತ್‍ನಲ್ಲಿ ಗಲಭೆ ನಡೆಯುತ್ತಿದ್ದಾಗ 17 ವರ್ಷದ ಹುಡುಗನೊಬ್ಬ ಉರಿಯುತ್ತಿರುವ ವಾಹನವೊಂದರ ಫೋಟೋವನ್ನು #ಸೇವ್ ಬಂಗಾಳ್ ಎಂದು ಫೇಸ್‍ಬುಕ್‍ನಲ್ಲಿ ಹಾಕಿದ. ಇದನ್ನು ಬಿಜೆಪಿಯ ದಿಲ್ಲಿ ವಕ್ತಾರ ನೂಪುರ್ ಶರ್ಮಾ ಹಂಚಿಕೊಂಡರು. ಜೈಲಿನಲ್ಲಿ ವಿಪ್ಲವವೇ ನಡೆಯಿತು. ಆದರೆ, ಇದು 2002ರಲ್ಲಿ ಗುಜರಾತ್‍ನಲ್ಲಿ ನಡೆದ ಗಲಭೆಯ ಫೋಟೋ ಆಗಿತ್ತು. ಬಿಜೆಪಿಯ ಐಟಿ ಮುಖ್ಯಸ್ಥ ಅಮಿತ್ ಮಾಳವೀಯ ತಾವು ಮಾಡಿರುವುದು ಸುಳ್ಳು ಟ್ವೀಟ್ ಎಂದು ಸಾಬೀತಾದ ಬಳಿಕವೂ ಅದನ್ನು ತೆಗೆದುಹಾಕಲು ಒಪ್ಪದ ಪ್ರಸಂಗಗಳಿವೆ. ಅವರು ಒಮ್ಮೆ ಎನ್‍ಡಿಟಿವಿಯ ರವೀಶ್‍ಕುಮಾರ್ ಅವರ ಎಡಿಟ್ ಆದ ವಿಡಿಯೋ ಕ್ಲಿಪ್‍ನ್ನು ಶೇರ್ ಮಾಡಿದ್ದರು. ಡೇರಾ ಸಚ್ಚಾ ಸೌಧದ ರಾಮ್ ರಹೀಮ್ ಅವರ ವಿಚಾರಣೆ ನಡೆಯುತ್ತಿದ್ದಾಗ, ಡೇರಾದ ನಿರಂಜನ್ ದಾಸ್ ಜತೆಗೆ ರಾಹುಲ್ ಗಾಂಧಿ ಇದ್ದ ಫೋಟೋ ಹಾಕಿ, ‘ರಾಹುಲ್ ಬೆಂಬಲ ಕೋರಿ 2017ರಲ್ಲಿ ಡೇರಾಕ್ಕೆ ಭೇಟಿ ನೀಡಿದ್ದರು’ ಎಂದು ಸುಳ್ಳು ಹೇಳಿದ್ದರು. ಜೂಲಿಯನ್ ಅಸ್ಸಾಂಜೆ ಪ್ರಧಾನಿ ಮೋದಿ ಅವರನ್ನು ಅನುಮೋದಿಸಿದ್ದಾರೆ ಎನ್ನುವ ಬಿಜೆಪಿಯ ಪ್ರೀತಿ ಗಾಂಧಿ ಅವರ ಫೋಟೋವನ್ನು ಅಂಥದ್ದೇನೂ ಇಲ್ಲ ಎಂದು ವಿಕಿಲೀಕ್ಸ್ ನಿರಾಕರಿಸಿತು. ಪ್ರವಾಹದಿಂದ ತತ್ತರಿಸಿದ್ದ ಚಿನ್ನೈ ಸ್ಥಿತಿಯನ್ನು ಹೆಲಿಕಾಪ್ಟರ್‍ನಲ್ಲಿ ಕುಳಿತೇ ಪ್ರಧಾನಿ ತಮ್ಮ ದಿವ್ಯದೃಷ್ಟಿಯಿಂದ ಸ್ಪಷ್ಟವಾಗಿ ನೋಡಿದರು ಎನ್ನುವ ಫೋಟೋ ಕೂಡ ಇದೇ ಗುಂಪಿಗೆ ಸೇರುತ್ತದೆ.

ಬೇರೆ ಪಕ್ಷಗಳವರು ಪುಣ್ಯ ಪುರುಷರೇ? ಹಾಗೇನೂ ಅಲ್ಲ. ಆದರೆ, ಅಂತರ್ಜಾಲವನ್ನು ಸಂಘಟನೆಗೆ ಹಾಗೂ ರಾಜಕೀಯ ಜಾಗೃತಿ ಬೆಳೆಸಲು ಬಳಸುವಲ್ಲಿ ಬಿಜೆಪಿ ಮುಂದಿದೆ. 2012ರ ಗುಜರಾತ್ ಚುನಾವಣೆಯಲ್ಲಿ, ಬಳಿಕ 2014ರ ಲೋಕಸಭೆ ಚುನಾವಣೆಯಲ್ಲಿ ಪ್ರಶಾಂತ್ ಕಿಶೋರ್ ಅವರನ್ನು ಬಳಸಿಕೊಂಡ ಬಿಜೆಪಿ, 2019ರ ಚುನಾವಣೆಗೆ ಮತ್ತೆ ಅವರ ನೆರವು ಕೋರಿದೆ. 2014ರ ಚುನಾವಣೆ ಬಳಿಕ ಅವರು ಬಿಜೆಪಿಯನ್ನು ತೊರೆದು, 2015ರಲ್ಲಿ ಬಿಹಾರ, 2017ರಲ್ಲಿ ಉತ್ತರಪ್ರದೇಶ ಹಾಗೂ ಪಂಜಾಬ್ ಚುನಾವಣೆಯಲ್ಲಿ ಕಾಂಗ್ರೆಸ್ ಪರ ಕೆಲಸ ಮಾಡಿದ್ದರು.

ರಾಷ್ಟ್ರವಿರೋಧ ಎಂಬ ಆಯುಧ

ಅಭಿಪ್ರಾಯಭೇದವನ್ನು ಹತ್ತಿಕ್ಕಲು ‘ರಾಷ್ಟ್ರವಿರೋಧ’ ಎನ್ನುವ ಪದದ ದುರ್ಬಳಕೆ ಸಾಕಷ್ಟು ನಡೆದಿದೆ. ಇದೇ ನೆಪದಲ್ಲಿ ಜಮ್ಮು—ಕಾಶ್ಮೀರ ಸರ್ಕಾರವು ‘ರಾಷ್ಟ್ರವಿರೋಧಿ ಸುದ್ದಿ ಮತ್ತು ಫೋಟೋ’ ಪ್ರಕಟಿಸುವ ದಿನಪತ್ರಿಕೆಗಳಿಗೆ ಜಾಹೀರಾತು ನಿರಾಕರಿಸಿದೆ. ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ರಾಜ್ಯದ ಗ್ರಂಥಾಲಯಗಳು ಆನಂದ್ ಬಜಾರ್ ಪತ್ರಿಕೆ ತರಿಸುವುದನ್ನು ನಿರ್ಬಂಧಿಸಿದ್ದರು. ತಮಿಳ್ನಾಡು ಸಿಎಂ ಜಯಲಲಿತಾ ಐದು ವರ್ಷದಲ್ಲಿ ಹೂಡಿದ್ದ 213 ಮಾನನಷ್ಟ ಮೊಕದ್ದಮೆಗಳಲ್ಲಿ 55 ಮಾಧ್ಯಮಗಳ ವಿರುದ್ಧ ಇದ್ದವು. ಡಿಎಂಕೆ 2006—11ರ ಅವಧಿಯಲ್ಲಿ 40 ಪ್ರಕರಣ ದಾಖಲಿಸಿತ್ತು.

ಸುಳ್ಳು ಸುದ್ದಿಯನ್ನು ನಿಯಂತ್ರಿಸುತ್ತೇನೆ ಎಂದು ಸರ್ಕಾರ ಹೇಳಿದರೆ, ಯಾರು ಬೇಡ ಎನ್ನುತ್ತಾರೆ ಹೇಳಿ? ಆದರೆ, ಇದು ಮುಕ್ತ ಹಾಗೂ ಪಾರದರ್ಶಕ ಪತ್ರಿಕೋದ್ಯಮಕ್ಕೆ ದಾರಿ ಮಾಡಿಕೊಡುವುದೇ ಎನ್ನುವುದು ಪ್ರಶ್ನೆ. ನಮ್ಮ ಸರ್ಕಾರಗಳ ಈವರೆಗಿನ ಚಾಳಿಯನ್ನು ನೋಡಿದರೆ, ಅವಕ್ಕೆ ಮುಕ್ತ, ಸ್ವತಂತ್ರ ಹಾಗೂ ಪಾರದರ್ಶಕ ಪತ್ರಿಕೆಗಳು ಬೇಕಿಲ್ಲ. ಬೇಕಿರುವುದು ಬೆನ್ನೆಲುಬು ಇಲ್ಲದ ಪತ್ರಿಕೆಗಳು, ಬಾಲಬಡುಕ ಪತ್ರಕರ್ತರು. ಜಾಹೀರಾತು ಇಲ್ಲವೇ ಕಾನೂನನ್ನು ಬಳಸಿಕೊಂಡು, ಮಾಧ್ಯಮವನ್ನು ಬಗ್ಗಿಸುವುದು ಸರ್ಕಾರಗಳ ಉಪಾಯ. ಕೆಲವು ಪತ್ರಿಕೆಗಳು ಬಗ್ಗು ಎಂದರೆ ತೆವಳುತ್ತವೆ ಎನ್ನುವುದು ಕೂಡ ನಿಜ. ಆದರೆ, ಅದು ಸಾರ್ವತ್ರಿಕ ಸತ್ಯವಲ್ಲ.

ಎನ್.ಎಸ್.ಶಂಕರ್

ಬಿಜೆಪಿ ವಿರೋಧಿ ಒಕ್ಕೂಟ ಸಾಧ್ಯವೇ?

ಜುಲೈ ೨೦೧೮

ಶಾಂತಲಾ ದಾಮ್ಲೆ

ಹೋರಾಟಗಾರ ಅಭ್ಯರ್ಥಿ ಚುನಾವಣಾ ಬವಣೆ

ಜುಲೈ ೨೦೧೮

ಶ್ರೀಶೈಲ ಆಲದಹಳ್ಳಿ

ಸಂಡೂರು ಕುಮಾರಸ್ವಾಮಿ ಬೆಟ್ಟಕ್ಕೆ ಗಣಿ ಕಂಟಕ!

ಜುಲೈ ೨೦೧೮

ಡಾ.ಡಿ.ಸಿ.ನಂಜುಂಡ

ನಿಮ್ಮ ಆನ್‍ಲೈನ್ ಮಾಹಿತಿ ಎಷ್ಟು ಸುರಕ್ಷಿತ?

ಜೂನ್ ೨೦೧೮

ಪ್ರೊ. ರವೀಂದ್ರ ರೇಷ್ಮೆ

ಅಸೆಂಬ್ಲಿ ಫಲಿತಾಂಶ - ಪಕ್ಷ ರಾಜಕಾರಣದ ಪತನ

ಜೂನ್ ೨೦೧೮

ಡಾ.ಟಿ.ಆರ್.ಚಂದ್ರಶೇಖರ

ಭಾರತದಲ್ಲಿ ಬ್ಯಾಂಕಿಂಗ್ ಬುಡ ಗಡಗಡ!

ಮೇ ೨೦೧೮

ಸುಧೀಂದ್ರ ಹಾಲ್ದೊಡ್ಡೇರಿ

ಬೆಳ್ಳಂದೂರಿನಲ್ಲಿ ನೊರೆ ಹೊತ್ತಿ ಉರಿದೊಡೆ...!

ಮೇ ೨೦೧೮

ರಹಮತ್ ತರೀಕೆರೆ

ಪ್ರತಿಮೆಗಳ ರಾಜಕಾರಣ

ಎಪ್ರಿಲ್ ೨೦೧೮

ಹನುಮಂತರೆಡ್ಡಿ ಶಿರೂರು

ಸಿದ್ದರಾಮಯ್ಯನವರ ಕಲ್ಯಾಣ ರಾಜ್ಯ !

ಎಪ್ರಿಲ್ ೨೦೧೮

ದಾಸನೂರು ಕೂಸಣ್ಣ

ಒಳ ಮೀಸಲಾತಿಏಕೆ ಬೇಕು?

ಮಾರ್ಚ್ ೨೦೧೮

ರೇಣುಕಾ ನಿಡಗುಂದಿ

ಮೊಲೆ ಕತ್ತರಿಸಿಕೊಟ್ಟ ನಂಗೇಲಿ ನೆನಪು!

ಮಾರ್ಚ್ ೨೦೧೮

ಡಿ. ಎಸ್. ನಾಗಭೂಷಣ

ಕನ್ನಡ ಮೊದಲು ನಂತರ ಇಂಗ್ಲಿಷ್

ಮಾರ್ಚ್ ೨೦೧೮

ಡಾ. ವಾಸು ಎಚ್. ವಿ

ಈ ಹೊತ್ತಿನ ಕರ್ನಾಟಕ: ಪರ್ಯಾಯ ರಾಜಕಾರಣ

ಫೆಬ್ರವರಿ ೨೦೧೮

ಡಾ.ಕಿರಣ್ ಎಂ.ಗಾಜನೂರು

‘ನಿಮ್ಮ ದನದ ಬಾಲ ನೀವೇ ಇಟ್ಟುಕೊಳ್ಳಿ’

ಫೆಬ್ರವರಿ ೨೦೧೮