2nd ಮೇ ೨೦೧೮

ದಲಿತರ ಮೇಲಿನ ದೌರ್ಜನ್ಯ ತಡೆ ಕಾನೂನು
ಸುಪ್ರೀಂಕೋರ್ಟು ತಪ್ಪಾಗಿ ಅರ್ಥೈಸಿದೆಯೇ? ಅತಿಕ್ರಮಿಸಿದೆಯೇ?

ಮೋಹನ್ ಕಾತರಕಿ

ನಿಜಕ್ಕೂ ಈ ವಿಷಯವನ್ನು ರಾಜಕೀಯಗೊಳಿಸಿದ್ದು ಸರ್ವೋನ್ನತ ನ್ಯಾಯಾಲಯ ಸೂಚಿಸಿದ ನ್ಯಾಯಾಂಗ ಶಾಸನವಲ್ಲ. ಬದಲಾಗಿ, ಸುಪ್ರೀಂ ಕೋರ್ಟು ತಾನು ನೀಡಿದ ಆದೇಶಕ್ಕೆ ಆಧಾರವಾಗಿರಿಸಿಕೊಂಡ ಆಲೋಚನೆಯೇ ಚರ್ಚಾಸ್ಪದ.

ಸರ್ವೋನ್ನತ ನ್ಯಾಯಾಲಯವು ಗಂಭೀರವಾದ ಎಸ್ಸಿ ಮತ್ತು ಎಸ್ಟಿ ಕಾಯಿದೆ 1989ರ ಅಡಿಯಲ್ಲಿ ಮಹಾರಾಷ್ಟ್ರದ ಪ್ರಕರಣವೊಂದನ್ನು ನಿಭಾಯಿಸುವ ವೇಳೆ ಸಾರ್ವಜನಿಕ ಸೇವಕನ ವಿರುದ್ಧ ಪ್ರಕರಣ ದಾಖಲಿಸುವ ಮತ್ತು ಬಂಧಿಸುವ ಹಂತದಲ್ಲಿ ಕೆಲವು ಕಾರ್ಯವಿಧಾನಗಳನ್ನು ಸೂಚಿಸುವ ಮೂಲಕ ‘ನ್ಯಾಯಾಂಗ ಶಾಸನ’ ರೂಪಿಸುವ ಸಾಹಸಕ್ಕೆ ಕೈ ಹಾಕಿದೆ. ಮಹಾರಾಷ್ಟ್ರದ ಈ ಸೂಕ್ಷ್ಮ ಪ್ರಕರಣದಲ್ಲಿ ಸುಪ್ರೀಂಕೋರ್ಟ್ ತೀರ್ಮಾನದ ಅಂತಿಮ ಅಂಶಗಳು ಇಂತಿವೆ:

i. ಪ್ರಸಕ್ತ ಪ್ರಕರಣದ ಪ್ರಕ್ರಿಯೆಗಳು ನ್ಯಾಯಾಲಯದ ಪ್ರಕ್ರಿಯೆಗಳ ಸ್ಪಷ್ಟ ಲೋಪವಾಗಿದ್ದು, ವಜಾ ಮಾಡಲಾಗಿದೆ.

ii. ದೌರ್ಜನ್ಯ ಕಾಯಿದೆ ಅಡಿಯಲ್ಲಿನ ಪ್ರಕರಣಗಳಲ್ಲಿ ಮೇಲ್ನೋಟಕ್ಕೆ ಆರೋಪ ಕಾಣದಿದ್ದರೆ ಅಥವಾ ನ್ಯಾಯಾಂಗ ಪರಿಶೀಲನೆಯಲ್ಲಿ ದೂರು ದುರುದ್ದೇಶದಿಂದ ಕೂಡಿದೆ ಎಂದು ಮೇಲ್ನೋಟಕ್ಕೆ ಅನಿಸಿದಲ್ಲಿ ನಿರೀಕ್ಷಣಾ ಜಾಮೀನು ನೀಡಲು ಯಾವುದೇ ನಿರ್ಬಂಧ ಇರುವುದಿಲ್ಲ. ಪಂಕಜ್ ಡಿ.ಸುತಾರ್ (ಹಿಂದಿನ ಪ್ರಕರಣ) ಮತ್ತು ಡಾ.ಎನ್.ಟಿ.ದೇಸಾಯಿ (ಹಿಂದಿನ ಪ್ರಕರಣ) ಪ್ರಕರಣದಲ್ಲಿ ಗುಜರಾತ್ ಹೈಕೋರ್ಟ್ ತೆಗೆದುಕೊಂಡಿರುವ ನಿಲುವು ಮತ್ತು ದೃಷ್ಟಿಕೋನವನ್ನು ನಾವು ಅನುಮೋದಿಸುತ್ತೇವೆ ಮತ್ತು ಬಲೋತಿಯಾ (ಹಿಂದಿನ ಪ್ರಕರಣ) ಮತ್ತು ಮಂಜುದೇವಿ (ಹಿಂದಿನ ಪ್ರಕರಣ) ಪ್ರಕರಣದಲ್ಲಿನ ಈ ನ್ಯಾಯಾಲಯದ ತೀರ್ಪಿಗೆ ಸ್ಪಷ್ಟೀಕರಣ ನೀಡುತ್ತೇವೆ;

iii. ದೌರ್ಜನ್ಯ ಕಾಯ್ದೆಯಡಿಯ ಪ್ರಕರಣಗಳಲ್ಲಿ ಬಂಧನ ಕಾನೂನಿನ ದುರುಪಯೋಗ ದೃಢಪಟ್ಟಿರುವ ನಿಟ್ಟಿನಲ್ಲಿ, ಸೂಕ್ತವಾದ ಪ್ರಕರಣಗಳಲ್ಲಿ ದಾಖಲಾದ ಕಾರಣಗಳಿಗಾಗಿ ಅವಶ್ಯಕವೆಂದು ಪರಿ ಗಣಿಸಿದಲ್ಲಿ ನೇಮಕಗೊಂಡ ಪ್ರಾಧಿಕಾರ ನೀಡುವ ಅನುಮೋದನೆಯ ಬಳಿಕ ಸಾರ್ವಜನಿಕ ಸೇವಕನನ್ನು ಮತ್ತು ಎಸ್.ಎಸ್.ಪಿ.ಯ ಅನುಮೋದನೆಯ ನಂತರ ಸಾರ್ವಜನಿಕೇತರ ಸೇವಕರನ್ನು ಬಂಧಿಸಬಹುದು. ಬಂಧನ ಮುಂದುವರಿಕೆಗೆ ಅನುಮತಿ ನೀಡಲು ಈ ಕಾರಣಗಳು ಮ್ಯಾಜಿಸ್ಟ್ರೇಟ್‍ರಿಂದ ಪರಿಶೀಲನೆಗೆ ಒಳಪಡಲೇಬೇಕು.

iv. ತಪ್ಪೆಸಗದವರನ್ನು ವಿನಾಕಾರಣ ಸಿಲುಕಿಸುವುದನ್ನು ತಡೆಯಲು; ದೌರ್ಜನ್ಯ ಕಾಯಿದೆ ಅಡಿ ಪ್ರಕರಣ ಹೂಡುವ ಸಾಧ್ಯತೆ ಹಾಗೂ ದೂರಿನಲ್ಲಿರುವ ಆರೋಪಗಳು ಪೊಳ್ಳು ಅಥವಾ ದುರುದ್ದೇಶಿತ ಅಲ್ಲ ಎಂಬುದನ್ನು ಖಾತರಿಪಡಿಸಿಕೊಳ್ಳಲು ಸಂಬಂಧಿತ ಡಿ.ಎಸ್.ಪಿ. ಪ್ರಾಥಮಿಕ ತನಿಖೆಯನ್ನು ನಡೆಸಬೇಕು.

v. ನಿರ್ದೇಶನ ಮೂರು ಮತ್ತು ನಾಲ್ಕರ ಉಲ್ಲಂಘನೆಯು ಶಿಸ್ತು ಮತ್ತು ನ್ಯಾಯಾಂಗ ನಿಂದನೆ ಮೂಲಕ ಕ್ರಮ ಕೈಗೊಳ್ಳಲು ಯೋಗ್ಯವಾಗಿರುತ್ತದೆ...”

ಶಾಸನ ರೂಪಿಸುವ ನ್ಯಾಯಾಂಗದ ನಡೆಯನ್ನು ನಿಸ್ಸಂದೇಹವಾಗಿ ನ್ಯಾಯಾಂಗ ಅಧಿಕಾರದ ಮೇರೆಮೀರಿದ ವರ್ತನೆ ಎಂದು ಪರಿಗಣಿಸಲಾಗುತ್ತದೆ. ಆದಾಗ್ಯೂ, ನಾವು ಭಾರತದಲ್ಲಿ 1985ರಿಂದಲೇ (ವಿದೇಶೀಯರು ಮಕ್ಕಳನ್ನು ದತ್ತು ತೆಗೆದುಕೊಳ್ಳುವುದಕ್ಕೆ ಸಂಬಂಧಿಸಿದ ಪ್ರಕರಣ, ಪಿ.ಎನ್.ಭಗವತಿ ಜೆ) ನ್ಯಾಯಾಧೀಶರು ರೂಪಿಸಿದ ಕಾಯಿದೆಗಳೊಂದಿಗೆ ಬದುಕುತ್ತಿದ್ದೇವೆ. ಹಾಗಾಗಿ ಈಗ ಪ್ರಶ್ನಿಸುವುದು ತುಂಬಾ ತಡವಾಗಿದೆ. ಆಧುನಿಕ ಸಾಂವಿಧಾನಿಕ ಆಡಳಿತವೇ ಸಕ್ರಿಯ ನ್ಯಾಯಾಂಗವನ್ನು ಮಾನ್ಯ ಮಾಡಿದೆ.

ನಿಜಕ್ಕೂ ಈ ವಿಷಯವನ್ನು ರಾಜಕೀಯಗೊಳಿಸಿದ್ದು ಸರ್ವೋನ್ನತ ನ್ಯಾಯಾಲಯ ಸೂಚಿಸಿದ ನ್ಯಾಯಾಂಗ ಶಾಸನವಲ್ಲ. ಬದಲಾಗಿ, ಸುಪ್ರೀಂ ಕೋರ್ಟು ತಾನು ನೀಡಿದ ಆದೇಶಕ್ಕೆ ಆಧಾರವಾಗಿರಿಸಿಕೊಂಡ ಆಲೋಚನೆಯೇ ಚರ್ಚಾಸ್ಪದ. ಅದರಲ್ಲೂ, ದಲಿತರೆಂದು ಕರೆಯಲಾಗುವ ಎಸ್ಸಿ ಮತ್ತು ಎಸ್ಟಿ ಸಮುದಾಯದ ಸದಸ್ಯರಿಂದ 1989ರ ಕಾಯಿದೆಯ ದುರುಪಯೋಗವಾಗಿದೆ ಎಂಬ ತೀರ್ಮಾನದ ಹಿಂದಿನ ಧ್ವನಿ ಮತ್ತು ದೃಷ್ಟಿಕೋನ ಹೆಚ್ಚು ತಲ್ಲಣಕ್ಕೆ ಕಾರಣವಾಗಿದೆ. ತೀರ್ಪಿನ ಅಂತಿಮಅಂಶಗಳ ಉಪಪರಿಚ್ಛೇದ ಮೂರರಲ್ಲಿ ಉಲ್ಲೇಖಿಸಿದ, ‘ಗುರುತಿಸಲ್ಪಟ್ಟ ಕಾನೂನಿನ ದುರುಪಯೋಗದ ಹಿನ್ನೆಲೆಯಲ್ಲಿ’ ಎಂಬ ಪದಪುಂಜವೇ ಘರ್ಷಣೆಗೆ ಮೂಲವಾಗಿದೆ.

ಸಾಂವಿಧಾನಿಕ ವಿವಾದದ ಸಂದರ್ಭದಲ್ಲಿ ನ್ಯಾಯಾಧೀಶರು ಸಮಾಜಶಾಸ್ತ್ರೀಯ ಸಂಶೋಧನೆಯ ಮೊರೆಹೋಗುವುದು ಹೊಸದೇನಲ್ಲ. ಅಮೆರಿಕದ ಸರ್ವೋನ್ನತ ನ್ಯಾಯಾಲಯ ಐತಿಹಾಸಿಕ ಬ್ರೌನ್ ಮತ್ತು ಬೋರ್ಡ್ ಆಫ್ ಎಜುಕೇಶನ್ ಪ್ರಕರಣದಲ್ಲಿ (1954) ವರ್ಣದ ಆಧಾರದ ಮೇಲೆ ಪ್ರತ್ಯೇಕ ಶಾಲೆಗಳನ್ನು ಸ್ಥಾಪಿಸುವುದು ತಾರತಮ್ಯದ ವಿರುದ್ಧದ ಸಾಂವಿಧಾನಿಕ ನಿಯಮಗಳ ಉಲ್ಲಂಘಿಸುತ್ತದೆ ಎಂದು ಘೋಷಿಸಿತ್ತು. ಆದಾಗ್ಯೂ, ಈ ಪ್ರಕರಣದಲ್ಲಿ ನಮ್ಮ ಸುಪ್ರೀಂಕೋರ್ಟು ಸಾಬೀತಾಗದ ಸಮಾಜಶಾಸ್ತ್ರೀಯ ಸಂಶೋಧನೆಯನ್ನು ದಮನಿತ ವರ್ಗದ ವಿರುದ್ಧ ಬಳಸಿದೆ. ಯಾವುದೇ ಸಾರ್ವಜನಿಕ ನೋಟಿಸ್ ನೀಡದೇ ಅಥವಾ ಹಿತಾಸಕ್ತಿ ಹೊಂದಿದವರ ಗಮನಕ್ಕೆ ತಾರದೇ ಇಂತಹ ನಿರ್ಧಾರಕ್ಕೆ ಬಂದಿರುವುದು ಗಮನಾರ್ಹ. ಯಾವುದೇ ಕಾಯಿದೆಯಂತೆ ಈ ಕಾಯಿದೆಯಲ್ಲೂ ದುರ್ಬಳಕೆ ಆಗಿರಬಹುದು. ಆದರೆ ಅದನ್ನೇ ಇಷ್ಟೊಂದು ಖಚಿತ ಪದಗಳಲ್ಲಿ ಒತ್ತಿಹೇಳುವ ಅಗತ್ಯವಿರಲಿಲ್ಲ.

ಭಾರತ ಉಪಖಂಡದಲ್ಲಿ ದಲಿತರು, ಹಿಂದೂ ಮೇಲು ಮತ್ತು ಮಧ್ಯಮವರ್ಗದವರಿಂದ ಶತಮಾನಗಳ ಕಾಲ ಚಾರಿತ್ರಿಕವಾಗಿ ಎಲ್ಲ ಬಗೆಯ ಅಮಾನವೀಯ ಶೋಷಣೆಗೆ ಒಳಪಟ್ಟಿರುವುದು ಸಾರ್ವತ್ರಿಕ ಸತ್ಯ. ಅವರ ಘನತೆ ಮತ್ತು ಸಮಾನ ಅವಕಾಶಗಳ ಹಕ್ಕುಗಳಿಗೆ ಕಳೆದ 150 ವರ್ಷಗಳ ಹಿಂದಷ್ಟೇ ಮನ್ನಣೆ ದೊರೆತಿದೆ. ಅದರಲ್ಲೂ ನಿರ್ದಿಷ್ಟವಾಗಿ ಹೇಳುವುದಾದರೆ 1950ರಲ್ಲಿ ಸಂವಿಧಾನ ರಚನೆಯ ಬಳಿಕ ಸಿಕ್ಕಿದೆ. ಇದು ಕಟು ವಾಸ್ತವ. ಹೀಗಿರುವಾಗ ದಲಿತರ ವಿರುದ್ಧದ ಯಾವುದೇ ದುರ್ಬಳಕೆಯ ಟೀಕೆ, ದಲಿತರ ಸಾಮೂಹಿಕ ಮನೋಧರ್ಮಕ್ಕೆ ಒಪ್ಪಿತವಾಗಲಾರದು.

* ಲೇಖಕರು ಸುಪ್ರೀಂ ಕೋರ್ಟಿನ ಹಿರಿಯ ನ್ಯಾಯವಾದಿಗಳು, ಬೆಳಗಾವಿ ಮೂಲದವರು, ದೆಹಲಿಯಲ್ಲಿ ವಾಸ.

ಕಳವಳಕಾರಿ ತೀರ್ಪು

ವಿಕಾಸ್ ಆರ್.ಮೌರ್ಯ

ಇದು ದಲಿತೇತರರ ಫ್ಯೂಡಲ್ ಮನಸ್ಥಿತಿ ವಿರುದ್ಧ ದಲಿತರಿಗಿರುವ ಚಿಕ್ಕದೊಂದು ರಕ್ಷಣೆಯನ್ನೇ ಮೊಟಕುಗೊಳಿಸಿದಂತೆ.

ಸುಪ್ರೀಂ ಕೋರ್ಟು ಇತ್ತೀಚಿನ ತೀರ್ಪಿನಲ್ಲಿ ಎಸ್.ಸಿ. ಮತ್ತು ಎಸ್.ಟಿ. ಮೇಲಿನ ದೌರ್ಜನ್ಯ ತಡೆ ಕಾಯ್ದೆ 1989 (ಅಟ್ರಾಸಿಟಿ ತಡೆ ಕಾಯ್ದೆ) ಮತ್ತು ತಿದ್ದುಪಡಿ 2015 ಇದನ್ನು ದಲಿತರು ‘ಅತಿರೇಕದ ದುರ್ಬಳಕೆ’ ಮಾಡಿಕೊಳ್ಳುತ್ತಿದ್ದಾರೆ ಎಂದು ಹೇಳಿದೆ. ಇದು ಅಟ್ರಾಸಿಟಿ ಕಾಯ್ದೆ ಕಲ್ಪಿಸಿರುವ ‘ತುರ್ತು ಬಂಧನ ಮತ್ತು ಜಾಮೀನು ಕಠಿಣ’ ಆಶಯವನ್ನು ದುರ್ಬಲಗೊಳಿಸುವ ತೀರ್ಪು. ದುರ್ಬಲ ಜನಾಂಗದವರ ಬೆನ್ನೆಲುಬಾಗಿ ನಿಲ್ಲಬೇಕಾದ ನ್ಯಾಯಾಲಯ ಇಂತಹ ತೀರ್ಪು ನೀಡಿರುವುದು ಕಳವಳ ಉಂಟು ಮಾಡಿದೆ.

ಇದರ ಪರಿಣಾಮವಾಗಿ ದಲಿತರು ನಡೆಸಿದ ಭಾರತ್ ಬಂದ್ ಪ್ರತಿಭಟನೆ ವೇಳೆ ಗೋಲಿಬಾರ್ ನಿಂದಾಗಿ 9 ದಲಿತರು ಪ್ರಾಣ ಕಳೆದುಕೊಂಡಿದ್ದಾರೆ. ಆಶ್ಚರ್ಯವೆಂದರೆ, 9 ದಲಿತರನ್ನು ಕೊಂದಿರುವ ಸರ್ಕಾರಗಳೆಲ್ಲವೂ ಬಿಜೆಪಿ ನೇತೃತ್ವದಲ್ಲಿವೆ. ಆದರೆ ಕೇಂದ್ರ ಸರ್ಕಾರ ನಾವು ದಲಿತರ ರಕ್ಷಣೆಗೆ ಬದ್ಧ ಎನ್ನುತ್ತಿದೆ. ಮತ್ತೊಂದು ಕಡೆ ಸುಪ್ರೀಂ ಕೋರ್ಟ್ ‘ಕಾಯ್ದೆ ದುರ್ಬಳಕೆಯಾಗುತ್ತಿದೆ ಎಂದು ಕೇಂದ್ರ ಸರ್ಕಾರವೇ ಹೇಳಿದೆ’ ಎಂದು ಕೇಂದ್ರ ಸರ್ಕಾರದ ದ್ವಂದ್ವ ನಿಲುವನ್ನು ಪ್ರಸ್ತಾಪಿಸಿದೆ. ಇದು ಕೇಂದ್ರದ ದಲಿತ ವಿರೋಧಿ ನಿಲುವನ್ನು ಜಗಜ್ಜಾಹೀರು ಮಾಡಿದೆ. ಹೀಗಿರುವಾಗ ದಲಿತರು ಇಷ್ಟು ಆಕ್ರೋಶಭರಿತರಾಗಲು ಕಾರಣಗಳನ್ನು ಹುಡುಕುವುದು ಕಷ್ಟವೇ?

ಇಲ್ಲೀವರೆಗೆ ಈ ಕಾಯ್ದೆಯಿಂದ ದಲಿತರಿಗೆ ನ್ಯಾಯ ದೊರಕಿದೆಯೇ ಎಂದು ಪ್ರಶ್ನಿಸಿದರೆ ಉತ್ತರ ನಿರಾಶಾದಾಯಕವಾಗಿದೆ. ಏಕೆಂದರೆ ಇಲ್ಲಿಯವರೆಗೆ ಈ ಕಾಯ್ದೆಯಿಂದ ಗಮನಾರ್ಹ ನ್ಯಾಯ ದಲಿತರಿಗೆ ಸಿಕ್ಕಿಲ್ಲ. ಇಡೀ ದೇಶವನ್ನೇ ಬೆಚ್ಚಿ ಬೀಳಿಸಿದ ಕೆಲವು ಪ್ರಕರಣಗಳ ಹಣೆಬರಹ ನೋಡಿದರೆ ಇದು ನಮಗೆ ಸ್ಪಷ್ಟವಾಗುತ್ತದೆ. ಆಂಧ್ರ ಪ್ರದೇಶದಲ್ಲಿ ಐವರು ದಲಿತರನ್ನು ಕೊಂದುಹಾಕಿದ ಕಾರಂಚೇಡು ಪ್ರಕರಣದಲ್ಲಿ ಸೆಷನ್ಸ್ ಕೋರ್ಟು ಆರೋಪಿಗಳಿಗೆ ಶಿಕ್ಷೆ ವಿಧಿಸಿತು. ಆದರೆ ಹೈಕೋರ್ಟು ಎಲ್ಲಾ ಆರೋಪಿಗಳನ್ನು ಖುಲಾಸೆಗೊಳಿಸಿತು. ಸುಪ್ರೀಂ ಕೋರ್ಟ್ ಸಹ ಹೈ ಕೋರ್ಟ್ ತೀರ್ಪನ್ನು ಎತ್ತಿಹಿಡಿಯಿತು. ಚುಂಡೂರು ಪ್ರಕರಣದಲ್ಲಿ 8 ದಲಿತರನ್ನು ಕಡಿದು ಕೊಲ್ಲಲಾಗಿತ್ತು. ಸೆಷನ್ಸ್ ಕೋರ್ಟ್ ಆರೋಪಿಗಳಿಗೆ ಶಿಕ್ಷೆ ವಿಧಿಸಿತು. ಆದರೆ ಮತ್ತದೇ ಹೈಕೋರ್ಟ್, ಸುಪ್ರೀಂ ಕೋರ್ಟುಗಳು ಆರೋಪಿಗಳನ್ನು ಖುಲಾಸೆಗೊಳಿಸಿದವು. ಬತಾನಿ ತೋಲ ಮತ್ತು ಲಕ್ಷ್ಮಣಪುರ ಬಾಥೆ ಸೇರಿದಂತೆ ಬಿಹಾರದ 6 ಪ್ರಕರಣಗಳಲ್ಲೂ ಇದೇ ಕಥೆ. ಅವೆಲ್ಲವೂ ಸುಪ್ರೀಂ ಕೋರ್ಟಿನಲ್ಲಿ ಧೂಳು ಹಿಡಿಯುತ್ತಿವೆ. ನಮ್ಮದೇ ರಾಜ್ಯದ ಕಂಬಾಲಪಲ್ಲಿ ಮತ್ತು ನಾಗಲಾಪಲ್ಲಿ ಪ್ರಕರಣದಲ್ಲಿ ಪ್ರತಿಕೂಲ ಸಾಕ್ಷಿಗಳಾಗಿ ಮಾರ್ಪಟ್ಟವರು ಬಹಿರಂಗವಾಗಿ ನಮಗೆ ರಕ್ಷಣೆ ಕೊಡಿ ಸತ್ಯ ಹೇಳುತ್ತೇವೆ ಎಂದರು. ನ್ಯಾಯಾಲಯಕ್ಕೆ ಈ ಕೂಗು ಕೇಳಲೇ ಇಲ್ಲ. ಈಗ ಸಾಕ್ಷಿ ಹೇಳಲು ಆ ಜೀವವೂ ಇಲ್ಲ. ಅವೆರಡೂ ಪ್ರಕರಣ ಸುಪ್ರೀಂ ಕೋರ್ಟಿನಲ್ಲಿವೆ. ಹೀಗೆ ದಲಿತರ ಮೇಲಿನ ಹತ್ಯಾಕಾಂಡ, ದೌರ್ಜನ್ಯಗಳ ಪಟ್ಟಿಯನ್ನು ಬೆಳೆಸುತ್ತಾ ಹೋಗಬಹುದು. ಆದರೆ ಅವರೆಲ್ಲರನ್ನು ಕೊಂದವರಾರು ಎಂಬುದಕ್ಕೆ ಈ ದೇಶದ ತನಿಖಾ ಮತ್ತು ನ್ಯಾಯಾಂಗ ವ್ಯವಸ್ಥೆ ಇದುವರೆಗೂ ಉತ್ತರ ಕೊಟ್ಟೇ ಇಲ್ಲ.

ದಲಿತರ ಮೇಲಿನ ದೌರ್ಜನ್ಯಗಳು ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇವೆ. ಕಳೆದ ಹತ್ತು ವರ್ಷಗಳಲ್ಲಿ ಅದರ ಪ್ರಮಾಣ ಶೇ.66ಕ್ಕೆ ಏರಿದೆ. 2006ರಲ್ಲಿ ದಾಖಲಾದ ದೌರ್ಜನ್ಯಗಳು 27,070. 2016ರಲ್ಲಿ ದಾಖಲಾದ ಪ್ರಕರಣಗಳು 47,338. ಅಂದರೆ ಪ್ರತಿ 15 ನಿಮಿಷಗಳಿಗೊಂದು ದಲಿತರ ಮೇಲೆ ದೌರ್ಜನ್ಯ ನಡೆಯುತ್ತದೆ. 2016ರಲ್ಲಿ ದಲಿತ ಮಹಿಳೆಯರ ಮೇಲಿನ ಹಲ್ಲೆ 3172. ಮಾರಣಾಂತಿಕ ಹಲ್ಲೆ 1071. ಅಪಹರಣ ಮತ್ತು ಕಿರುಕುಳ 855. ಕೊಲೆ 786. ಅತ್ಯಾಚಾರ 2541. ಗಲಭೆ 1725. ಆದರೆ ಶಿಕ್ಷೆ ನೀಡಿರುವ ಪ್ರಮಾಣ ಗುಜರಾತಿನಲ್ಲಿ ಶೇ.3, ಕರ್ನಾಟಕದಲ್ಲಿ ಶೇ.3.46, ಒರಿಸ್ಸಾದಲ್ಲಿ ಶೇ.3.45, ಆಂಧ್ರಪ್ರದೇಶದಲ್ಲಿ ಶೇ.6, ರಾಜಾಸ್ಥಾನದಲ್ಲಿ ಶೇ.7, ಮಹಾರಾಷ್ಟ್ರದಲ್ಲಿ ಶೇ.7. ಉತ್ತರಪ್ರದೇಶ ಮತ್ತು ಬಿಹಾರಗಳಲ್ಲಿ ಗಮನಾರ್ಹ ಶಿಕ್ಷೆಗಳಾಗಿರುವ ಕಾರಣ ಇಡೀ ದೇಶದಲ್ಲಿ ಕೇವಲ ಶೇ.28. ಇನ್ನು ವಿಚಾರಣೆ ನಡೆಯುತ್ತಾ ಬಾಕಿ ಇರುವ ಪ್ರಕರಣಗಳು ಶೇ.89. ಇದು ದಲಿತರಿಗೆ ನ್ಯಾಯಾಂಗ ನೀಡಿರುವ ನ್ಯಾಯ. ಅಟ್ರಾಸಿಟಿ ತಡೆ ಕಾಯ್ದೆ ಇಲ್ಲದಿದ್ದರೆ ಈ ಕನಿಷ್ಠ ನ್ಯಾಯವೂ ದಲಿತರಿಗೆ ಸಿಗುತ್ತಿರಲಿಲ್ಲ.

ಪರಿಸ್ಥಿತಿ ಹೀಗಿರುವಾಗ ನ್ಯಾಯಾಲಯ ಕಾಯ್ದೆಯನ್ನು ಚುರುಕುಗೊಳಿಸಲು ಶಿಫಾರಸ್ಸು ಮಾಡಬೇಕೋ ಅಥವಾ ಕಾಯ್ದೆ ಜಾರಿಯಾಗಲು ಷರತ್ತುಗಳನ್ನು ವಿಧಿಸಬೇಕೋ? ಅಟ್ರಾಸಿಟಿ ತಡೆ ಕಾಯ್ದೆ ಹೇಳುವಂತೆ ಜಿಲ್ಲೆಗೊಂದು ವಿಶೇಷ ನ್ಯಾಯಾಲಯ ರಚನೆಯಾಗಿಲ್ಲ. ಸಾಕ್ಷಿಗಳಿಗೆ ರಕ್ಷಣೆ ಕೊಡುವ ಕೆಲಸವಾಗಿಲ್ಲ. ಪ್ರತಿಕೂಲ ಸಾಕ್ಷಿಗಳಾಗಿ ಮಾರ್ಪಡುವವರನ್ನು ವಿಚಾರಣೆಗೆ ಒಳಪಡಿಸಿಲ್ಲ. ಅಸ್ಪೃಶ್ಯತೆ ಜೀವಂತವಾಗಿರುವುದಕ್ಕೆ ಸರ್ಕಾರಗಳಿಗೆ ಛೀಮಾರಿ ಹಾಕಿಲ್ಲ. ಅಟ್ರಾಸಿಟಿ ಕಾಯ್ದೆಯಡಿ ಪ್ರಕರಣ ದಾಖಲಾದ ತಕ್ಷಣ ಆರೋಪಿಗಳು ಕೌಂಟರ್ ಪ್ರಕರಣ ದಾಖಲಿಸುವುದಕ್ಕೆ ಯಾವುದೇ ಪರಿಶೀಲನೆಗಳಿಲ್ಲ. ಆದರೆ ದುರ್ಬಲರ ಮೇಲೆಸಗುವ ಅನ್ಯಾಯಗಳಿಗೆ ‘ಅತಿರೇಕದ ದುರ್ಬಳಕೆ’ ಎಂಬ ಹಣೆಪಟ್ಟಿ ಕಟ್ಟಿ ಷರತ್ತು ವಿಧಿಸುವುದು ಅತಿ ಸುಲಭದ ಕೆಲಸವಲ್ಲವೇ? ಆಗಿಬಿಡುತ್ತದೆ. ನಮ್ಮ ನ್ಯಾಯಾಲಯಗಳಿಗೆ ದಲಿತರನ್ನು ಸುಟ್ಟು, ಕೊಚ್ಚಿ ಕೊಲ್ಲುವುದು, ಮಹಿಳೆ ಎದೆ ಸೀಳುವುದು, ಶವಕ್ಕೂ ಅತ್ಯಾಚಾರವೆಸಗುವುದು ಯಾವತ್ತೂ ‘ಅತಿರೇಕದ ದೌರ್ಜನ್ಯ’ ಎನಿಸಲೇ ಇಲ್ಲ. ಅದಕ್ಕೆ ಅಪರಾಧಿಗಳಿಗೆ ಶಿಕ್ಷೆ ವಿಧಿಸಲೇ ಇಲ್ಲ.

ಎಲ್ಲಾ ಕಾನೂನುಗಳನ್ನು ದುರ್ಬಳಕೆ ಮಾಡಿಕೊಳ್ಳುವವರು ಇರುತ್ತಾರೆ. ಹಾಗೆಂದು ಕಾನೂನನ್ನೇ ದುರ್ಬಲಗೊಳಿಸುವುದು ಎಷ್ಟು ಸರಿ? ಜಾತಿವಾದಿಗಳಿಗೆ 7 ದಿನಗಳಲ್ಲ, ಒಂದು ಕ್ಷಣ ಸಿಕ್ಕರೂ ಸಾಕು ಬೆದರಿಕೆ ಒಡ್ಡಿ ದಲಿತರ ಬಾಯಿ ಮುಚ್ಚಿಸುತ್ತಾರೆ. ಹೀಗಿರುವಾಗ ಸಂವಿಧಾನದ ಕಲಂ 46 ದಲಿತರಿಗೆ ಎಲ್ಲಾ ರೀತಿಯ ದೌರ್ಜನ್ಯಗಳಿಂದ ರಕ್ಷಣೆ ನೀಡಬೇಕೆಂದು ಹೇಳುತ್ತದೆಯೇ ಹೊರತು ಇರುವ ಕಾನೂನನ್ನು ದುರ್ಬಲಗೊಳಿಸಲೆಂದಲ್ಲ. ಆ ಕಾರಣಕ್ಕಾಗಿಯೇ 1989ರಲ್ಲಿ ಈ ಕಾಯ್ದೆಯನ್ನು ರಚಿಸಲಾಗಿತ್ತು. ಆದರೆ ಇದೀಗ ಸುಪ್ರೀಂಕೋರ್ಟ್ ನೀಡಿರುವ ತೀರ್ಪು ದಲಿತರನ್ನು ಶೋಷಿಸಲು ಸವರ್ಣೀಯರಿಗೆ ಮತ್ತಷ್ಟು ಧೈರ್ಯ ಕೊಡುತ್ತದೆ. ದಲಿತೇತರರ ಫ್ಯೂಡಲ್ ಮನಸ್ಥಿತಿ ವಿರುದ್ಧ ದಲಿತರಿಗಿರುವ ಚಿಕ್ಕದೊಂದು ರಕ್ಷಣೆಯನ್ನೇ ಮೊಟಕುಗೊಳಿಸಿದಂತಾಗುತ್ತದೆ. ಕೇಂದ್ರ ಸರ್ಕಾರ ಸ್ವತಃ ಅಟಾರ್ನಿ ಜನರಲ್ ಅವರಿಂದಲೇ ವಿಶೇಷ ಮುತುವರ್ಜಿ ವಹಿಸಿ ಕಾಯ್ದೆಯನ್ನು ಉಳಿಸಬೇಕಿದೆ. ದುರ್ಬಲರಿಗೆ ಸಂವಿಧಾನ ನೀಡಿರುವ ಹಕ್ಕುಗಳನ್ನು ಉಳಿಸಬೇಕಿದೆ. ಆದರೆ ಜನರ ಮುಂದೆ ಒಂದು ಮಾತು, ಕೋರ್ಟ್ ಮುಂದೆ ಇನ್ನೊಂದು ಮಾತನ್ನಾಡುವ ಕೇಂದ್ರ ಸರ್ಕಾರ ಈ ಕೆಲಸವನ್ನು ಮಾಡಬಲ್ಲದೆ?

ಮೊದಲು ದುರುಪಯೋಗ ಸಾಬೀತಾಗಬೇಕು

1989ರ ಕಾಯಿದೆಯ ಅನ್ವಯ ದೂರು ಬಂದೊಡನೆ ಆರೋಪಿಯನ್ನು ಬಂಧಿಸಬೇಕೆನ್ನುವ ನಿಯಮದಲ್ಲಿ ಲೋಪವಿದೆ. ಈ ಲೋಪದ ಕಾರಣದಿಂದಲೇ ಈ ಕಾಯಿದೆಯ ಪರಿಣಾಮಕಾರಿ ಅನುಷ್ಠಾನ ಆಗುತ್ತಿಲ್ಲ ಹಾಗೂ ಕಾಯಿದೆ ತನ್ನ ಗಂಭೀರತೆಯನ್ನು ಕಳೆದುಕೊಂಡಿದೆ. ಕಾಯಿದೆಯ ದುರುಪಯೋಗದ ಸಂಭವನೀಯತೆಯಲ್ಲಿ ಗಂಭೀರ ಆರೋಪಗಳನ್ನೂ ಅನುಮಾನಿಸುವ ಸನ್ನಿವೇಶ ಒದಗಿದೆ. ಈ ಕಾಯಿದೆಯನ್ನು ಸೂಕ್ತ ಮಾರ್ಪಾಡುಗಳೊಂದಿಗೆ ಬಲಪಡಿಸುವ ಅಗತ್ಯವಿದೆ.

ಪರಿಶಿಷ್ಟ ಜಾತಿ ಮತ್ತು ಪಂಗಡದ ಜನರ ಮೇಲಿನ ದೌರ್ಜನ್ಯ ತಡೆಗೆ 1989ರಲ್ಲಿ ರಚಿಸಲಾದ ಕಾನೂನಿನ ಬಗ್ಗೆ ಇದೇ ಮಾರ್ಚ್20ರಂದು ದೇಶದ ಸರ್ವೋಚ್ಚ ನ್ಯಾಯಾಲಯ ನೀಡಿರುವ ತೀರ್ಪಿನ ಬಗ್ಗೆ ದೇಶಾದ್ಯಂತ ದಲಿತ ಸಂಘಟನೆಗಳು ಆಕ್ರೋಶ ವ್ಯಕ್ತಪಡಿಸಿವೆ. ಈ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಸಲ್ಲಿಸಿದ ಪುನರ್—ಪರಿಶೀಲನೆ ಅರ್ಜಿಯನ್ನು ಅಗ್ರ ನ್ಯಾಯಾಲಯ ಪರಿಗಣನೆಗೆ ತೆಗೆದುಕೊಂಡು ಸಂಬಂಧಪಟ್ಟ ಎಲ್ಲರಿಗೂ ಲಿಖಿತ ವಾದವನ್ನು ಮಂಡಿಸಬೇಕೆಂದು ಹೇಳಿದೆ. ಆದರೆ ತನ್ನ ನಿರ್ಣಯವನ್ನು ತಾತ್ಕಾಲಿಕವಾಗಿ ತಡೆಹಿಡಿಯಲು ನಿರಾಕರಿಸಿದ ಸುಪ್ರೀಂಕೋರ್ಟ್, “ಪರಿಶಿಷ್ಟ ಜಾತಿ ಪಂಗಡದವರು ತಮ್ಮ ಯಾವುದೇ ಹಕ್ಕಿನಿಂದ ವಂಚಿತರಾಗುವುದನ್ನು ನಾವು ಬಯಸುವುದಿಲ್ಲ. ಆದರೆ ಯಾವುದೇ ನಿರಪರಾಧಿಗೆ ಶಿಕ್ಷೆಯಾಗುವುದನ್ನು ನಾವು ಒಪ್ಪುವುದಿಲ್ಲ” ಎಂದಿದೆ. ಮುಂದುವರೆದು, “ನಮ್ಮ ನಿರ್ಣಯ ಸಂವಿಧಾನದಲ್ಲಿ ಏನು ಹೇಳಿದೆಯೋ ಅದನ್ನು ಮಾತ್ರ ಜಾರಿಗೆ ತಂದಿದೆ. ನಾವು ವಂಚಿತರ ಹಕ್ಕಿನ ಬಗ್ಗೆ ಅರಿವುಳ್ಳವರಾಗಿದ್ದೇವೆ ಹಾಗೂ ಅದಕ್ಕೆ ಅತ್ಯಂತ ಪ್ರಾಮುಖ್ಯ ನೀಡುತ್ತೇವೆ. ಆದರೆ ಅದೇ ಸಮಯದಲ್ಲಿ ಯಾವುದೇ ಮುಗ್ಧನೊಬ್ಬನ ಮೇಲೆ ಸುಳ್ಳು ಮೊಕದ್ದಮೆ ಹೂಡಲಾಗದು ಹಾಗೂ ಅವನನ್ನು ಯಾವುದೇ ವಿಚಾರಣೆಯಿಲ್ಲದೆ ಬಂಧಿಸಲಾಗದು. ನಾವು ಕಾಯಿದೆಯ ಜಾರಿಯನ್ನು ತಡೆಹಿಡಿದಿಲ್ಲ. ಕಾಯಿದೆಯು ನಿರಪರಾಧಿಗಳನ್ನು ಬಂಧಿಸಿ ಎಂದು ಹೇಳುತ್ತಿದೆಯೇ? ನಮ್ಮ ನಿರ್ಣಯ ಕಾಯಿದೆಯ ವಿರುದ್ಧವಾಗಿಲ್ಲ” ಎಂದು ಸುಪ್ರೀಂ ನ್ಯಾಯಮೂರ್ತಿಗಳಾದ ಎ.ಕೆ.ಗೋಯಲ್ ಮತ್ತು ಯು.ಯು.ಲಲಿತ್ ಹೇಳಿದ್ದಾರೆ. ತಮ್ಮ ನಿರ್ಣಯವು ದಲಿತರ ಹಕ್ಕುಗಳ ಹಾಗೂ ಸುಳ್ಳು ಮೊಕದ್ದಮೆಯಲ್ಲಿ ಬಂಧಿತವಾಗುವ ನಿರಪರಾಧಿಯ ಹಕ್ಕುಗಳ ಮಧ್ಯೆ ಸಮತೋಲನ ಸಾಧಿಸುವ ದಿಕ್ಕಿನಲ್ಲಿದೆ ಎಂದೂ ಸುಪ್ರೀಂ ನ್ಯಾಯಮೂರ್ತಿಗಳು ಹೇಳಿದ್ದಾರೆ.

ಸುಪ್ರೀಂ ನಿರ್ಣಯದ ಪ್ರಕಾರ ಈ ದೌರ್ಜನ್ಯ ತಡೆ ಕಾಯಿದೆಯ ಅಡಿಯಲ್ಲಿ ಯಾರಾದರೂ ದೂರು ನೀಡಿದರೆ ಮೊದಲು ಆ ದೂರು ಕ್ಷುಲ್ಲಕ ಅಥವಾ ದುರುದ್ದೇಶಪೂರಿತ ಕಾರಣಗಳಿಗೆ ಮಾಡಲಾಗಿದೆಯೇ ಇಲ್ಲವೆ ಎಂಬ ಬಗ್ಗೆ ‘ಪ್ರಿಲಿಮಿನರಿ ತನಿಖೆ’ಗೆ ಒಳಪಡಬೇಕು. ಜಿಲ್ಲಾ ಪೋಲೀಸ್ ವರಿಷ್ಠಾಧಿಕಾರಿಯಿಂದ ಸೀಮಿತ ಸಮಯದೊಳಗೆ ನಡೆಯಲಾಗುವ ಈ ಮೊದಲ ತನಿಖೆಯ ನಂತರ ದೂರು ಗಂಭೀರ ಸ್ವರೂಪದ್ದಾಗಿದೆ ಎಂದು ತಿಳಿದುಬಂದ ಮೇಲಷ್ಟೇ ಪ್ರಕರಣ ಅಥವಾ ‘ಮೊದಲ ಮಾಹಿತಿ ವರದಿ’ ದಾಖಲಿಸತಕ್ಕದ್ದು. ಹೀಗೆ ಪ್ರಕರಣ ದಾಖಲಾದ ನಂತರ ಆರೋಪಿಯನ್ನು ಬಂಧಿಸಿ ಸೂಕ್ತ ಕಾನೂನು ಕ್ರಮ ತೆಗೆದುಕೊಳ್ಳಬಹುದು. ಆರೋಪಿಯು ಸರ್ಕಾರಿ ನೌಕರನಾಗಿದ್ದರೆ ಆ ನೌಕರನನ್ನು ‘ನೇಮಿಸಿದ ಅಧಿಕಾರಿ’ಯ ಅನುಮತಿ ಪಡೆದೇ ಪ್ರಕರಣ ದಾಖಲಿಸತಕ್ಕದ್ದು ಎಂದು ಸುಪ್ರೀಂ ಕೋರ್ಟ್ ಹೇಳಿದೆ. ಆರೋಪಿಯು ನಿರೀಕ್ಷಣಾ ಜಾಮೀನು ಪಡೆಯಲೂ ಅರ್ಹ ಎಂದು ನ್ಯಾಯಾಲಯ ಹೇಳಿದೆ.

ತನ್ನ ನಿರ್ಣಯದಲ್ಲಿ ನ್ಯಾಯಾಲಯವು ಕಾಯಿದೆಯನ್ನು ಸರ್ವೇಸಾಧಾರಣವಾಗಿ ದುರುಪಯೋಗಿಸಿಕೊಳ್ಳಲಾಗಿದೆ ಹಾಗೂ ಈ ದುರುಪಯೋಗಿ ಬಳಕೆಯನ್ನು ಸರ್ವವ್ಯಾಪಿಯಾಗಿ ಎಲ್ಲರೂ ಒಪ್ಪಿದ್ದಾರೆ ಎಂದೂ ಹೇಳಿದೆ. ಆದರೆ ನ್ಯಾಯಾಲಯವು ಈ ದುರುಪಯೋಗದ ವಿಷಯದಲ್ಲಿ ಯಾವುದೇ ಸಬೂತು/ವರದಿ/ ಅಂಕಿಅಂಶಗಳನ್ನು ಉದಾಹರಿಸಿಲ್ಲ. ಹೀಗಾಗಿ ದಲಿತ ಸಂಘಟನೆಗಳು ಕಾಯಿದೆಯ ದುರುಪಯೋಗದ ಬಗ್ಗೆ ಸುಪ್ರೀಂ ಕೋರ್ಟ್ ಆತುರದ ಹಾಗೂ ತಳಹದಿಯಿಲ್ಲದ ನಿರ್ಣಯ ನೀಡಿದೆ ಎಂದು ಪ್ರತಿಭಟಿಸಿದ್ದಾರೆ.

1989ರ ಕಾಯಿದೆಯ ಅನ್ವಯ ದೂರು ಬಂದೊಡನೆ ಆರೋಪಿಯನ್ನು ಬಂಧಿಸಬೇಕೆನ್ನುವ ನಿಯಮದಲ್ಲಿ ಲೋಪವಿದೆ. ಈ ಲೋಪದ ಕಾರಣದಿಂದಲೇ ಈ ಕಾಯಿದೆಯ ಪರಿಣಾಮಕಾರಿ ಅನುಷ್ಠಾನ ಆಗುತ್ತಿಲ್ಲ ಹಾಗೂ ಕಾಯಿದೆ ತನ್ನ ಗಂಭೀರತೆಯನ್ನು ಕಳೆದು ಕೊಂಡಿದೆ. ಕಾಯಿದೆಯು ದುರುಪಯೋಗವಾಗಬಹುದೆನ್ನುವ ಸಂಭವನೀಯತೆಯಲ್ಲಿ ಗಂಭೀರ ಆರೋಪಗಳನ್ನೂ ನಾವು ಅನುಮಾನಿಸುವ ಸನ್ನಿವೇಶ ಒದಗಿದೆ. ಸುಪ್ರೀಂ ಕೋರ್ಟ್ ತಾನೇ ಹೇಳಿರುವಂತೆ ಈ ಕಾಯಿದೆಯನ್ನು ಸೂಕ್ತ ಮಾರ್ಪಾಡುಗಳೊಂದಿಗೆ ಬಲಪಡಿಸುವ ಅಗತ್ಯವಿದೆ. ಅಸ್ಪೃಶ್ಯತೆಯ ಆಧಾರದ ಮೇಲೆ ಎಲ್ಲಿಯವರೆಗೆ ದೇಶದಲ್ಲಿ ದೌರ್ಜನ್ಯ ನಡೆಯುತ್ತದೆಯೋ ಅಲ್ಲಿಯವರೆಗೆ ಈ ಕಾಯಿದೆಯ ಅಗತ್ಯವೂ ಇದೆ.

ಈ ಕಾಯಿದೆ ಹಲವಾರು ಬಾರಿ ದುರುಪಯೋಗವಾಗಿದೆ ಎಂದು ಎಲ್ಲರಿಗೂ ತಿಳಿದ ವಿಷಯವೇ. ಉತ್ತರಪ್ರದೇಶದ ಅಂದಿನ ಮುಖ್ಯಮಂತ್ರಿ ಮಾಯಾವತಿಯವರೇ ತಾವು ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ಮರುದಿನವೇ ಈ ಕಾಯಿದೆಯ ದುರುಪಯೋಗದ ಬಗ್ಗೆ ತಮ್ಮ ಅಧಿಕಾರಿಗಳನ್ನು ಎಚ್ಚರಿಸಿದ್ದರು ಎಂದು ನಿದರ್ಶನ ನೀಡಲಾಗುತ್ತದೆ. ಆದರೆ ಇಂತಹ ಆಡುಮಾತಿನ ಹಾಗೂ ಗ್ರಹಿಕೆಯ ಆಧಾರದಲ್ಲಿ ದೇಶದ ಸರ್ವೋಚ್ಚ ನ್ಯಾಯಾಲಯ ಈ ಸಂವೇದೀ ಕಾನೂನಿನ ಬಗ್ಗೆ ತನ್ನ ತೀರ್ಪು ನೀಡಬಾರದಿತ್ತು. ಕಾನೂನಿನ ದುರುಪಯೋಗ ಹೇಗೆ ಮತ್ತು ಏಕೆ ಆಗುತ್ತಿದೆಯೆಂಬ ಬಗ್ಗೆ ನ್ಯಾಯಾಲಯ ತನಿಖಾ ಆಯೋಗವೊಂದನ್ನು ರಚಿಸಬಹುದಿತ್ತು. ಅಥವಾ ಕೇಂದ್ರ ಗೃಹ—ಕಾನೂನು ಸಚಿವಾಲಯಗಳಿಂದ ವರದಿ ತರಿಸಿಕೊಳ್ಳಬಹುದಾಗಿತ್ತು. ಇಂತಹ ದೂರಗಾಮಿ ನಿರ್ಣಯವನ್ನು ನೀಡುವ ಮೊದಲು ಸೂಕ್ತ ಮಾಹಿತಿ ಸಂಗ್ರಹ ಹಾಗೂ ಹೋಂವರ್ಕ್ ಮಾಡಬೇಕಿತ್ತು. ಕಾನೂನಿನ ವಿಶ್ಲೇಷಣೆಯ ಬಗ್ಗೆ ಇಷ್ಟು ಹಗುರವಾಗಿ ನಿಲುವು ತಾಳಬಾರದಿತ್ತು. ಈಗಲೂ ಸಮಯ ಮಿಂಚಿಲ್ಲ. ಸುಪ್ರೀಂ ಕೋರ್ಟ್ ಈ ಕಾಯಿದೆಯ ದುರುಪಯೋಗದ ಸತ್ಯಾಸತ್ಯತೆಯ ಬಗ್ಗೆ ಹಾಗೂ ಕಾಯಿದೆಯನ್ನು ಬಲಪಡಿಸುವ ಬಗ್ಗೆ ವಿಚಾರಣಾ ಆಯೋಗವನ್ನು ಘಟಿಸಬೇಕು. ಅಲ್ಲಿಯವರೆಗೆ ಈ ನಿರ್ಣಯದ ಅನುಷ್ಠಾನವನ್ನು ತಡೆಹಿಡಿಯಬೇಕು.

—ಚಿಂತನಶೀಲ

ಎನ್.ಎಸ್.ಶಂಕರ್

ಬಿಜೆಪಿ ವಿರೋಧಿ ಒಕ್ಕೂಟ ಸಾಧ್ಯವೇ?

ಜುಲೈ ೨೦೧೮

ಶಾಂತಲಾ ದಾಮ್ಲೆ

ಹೋರಾಟಗಾರ ಅಭ್ಯರ್ಥಿ ಚುನಾವಣಾ ಬವಣೆ

ಜುಲೈ ೨೦೧೮

ಶ್ರೀಶೈಲ ಆಲದಹಳ್ಳಿ

ಸಂಡೂರು ಕುಮಾರಸ್ವಾಮಿ ಬೆಟ್ಟಕ್ಕೆ ಗಣಿ ಕಂಟಕ!

ಜುಲೈ ೨೦೧೮

ಡಾ.ಡಿ.ಸಿ.ನಂಜುಂಡ

ನಿಮ್ಮ ಆನ್‍ಲೈನ್ ಮಾಹಿತಿ ಎಷ್ಟು ಸುರಕ್ಷಿತ?

ಜೂನ್ ೨೦೧೮

ಪ್ರೊ. ರವೀಂದ್ರ ರೇಷ್ಮೆ

ಅಸೆಂಬ್ಲಿ ಫಲಿತಾಂಶ - ಪಕ್ಷ ರಾಜಕಾರಣದ ಪತನ

ಜೂನ್ ೨೦೧೮

ಡಾ.ಟಿ.ಆರ್.ಚಂದ್ರಶೇಖರ

ಭಾರತದಲ್ಲಿ ಬ್ಯಾಂಕಿಂಗ್ ಬುಡ ಗಡಗಡ!

ಮೇ ೨೦೧೮

ಸುಧೀಂದ್ರ ಹಾಲ್ದೊಡ್ಡೇರಿ

ಬೆಳ್ಳಂದೂರಿನಲ್ಲಿ ನೊರೆ ಹೊತ್ತಿ ಉರಿದೊಡೆ...!

ಮೇ ೨೦೧೮

ರಹಮತ್ ತರೀಕೆರೆ

ಪ್ರತಿಮೆಗಳ ರಾಜಕಾರಣ

ಎಪ್ರಿಲ್ ೨೦೧೮

ಹನುಮಂತರೆಡ್ಡಿ ಶಿರೂರು

ಸಿದ್ದರಾಮಯ್ಯನವರ ಕಲ್ಯಾಣ ರಾಜ್ಯ !

ಎಪ್ರಿಲ್ ೨೦೧೮

ದಾಸನೂರು ಕೂಸಣ್ಣ

ಒಳ ಮೀಸಲಾತಿಏಕೆ ಬೇಕು?

ಮಾರ್ಚ್ ೨೦೧೮

ರೇಣುಕಾ ನಿಡಗುಂದಿ

ಮೊಲೆ ಕತ್ತರಿಸಿಕೊಟ್ಟ ನಂಗೇಲಿ ನೆನಪು!

ಮಾರ್ಚ್ ೨೦೧೮

ಡಿ. ಎಸ್. ನಾಗಭೂಷಣ

ಕನ್ನಡ ಮೊದಲು ನಂತರ ಇಂಗ್ಲಿಷ್

ಮಾರ್ಚ್ ೨೦೧೮

ಡಾ. ವಾಸು ಎಚ್. ವಿ

ಈ ಹೊತ್ತಿನ ಕರ್ನಾಟಕ: ಪರ್ಯಾಯ ರಾಜಕಾರಣ

ಫೆಬ್ರವರಿ ೨೦೧೮

ಡಾ.ಕಿರಣ್ ಎಂ.ಗಾಜನೂರು

‘ನಿಮ್ಮ ದನದ ಬಾಲ ನೀವೇ ಇಟ್ಟುಕೊಳ್ಳಿ’

ಫೆಬ್ರವರಿ ೨೦೧೮