2nd ಮೇ ೨೦೧೮

ತೆರಿಗೆ ಆದಾಯದಲ್ಲಿ ರಾಜ್ಯಗಳ ಪಾಲು ದಕ್ಷಿಣದ ಬೆಂಕಿ ದೇಶವನ್ನು ಸುಡುವ ಸಾಧ್ಯತೆ!

ಪಿ.ಚಿದಂಬರಂ

ಹೆಚ್ಚು ಬಡತನವಿರುವ ರಾಜ್ಯಗಳ ಬಗೆಗೆ ನಾವು ದಯೆ ತೋರಿಸುವುದರಲ್ಲಿ ತಪ್ಪಿಲ್ಲ. ಆದರೆ, ಉತ್ತಮ ಸಾಧನೆ ಮಾಡಿರುವ ರಾಜ್ಯಗಳ ಹಕ್ಕು ಮತ್ತು ಆಶಯಗಳನ್ನು ಕಡೆಗಣಿಸುವುದು ಸರಿಯಲ್ಲ.

1991ರ ಆರ್ಥಿಕ ಸುಧಾರಣೆ ಬಳಿಕ ಎಲ್ಲ ರಾಜ್ಯಗಳಿಗೂ ಮುಕ್ತ ಆರ್ಥಿಕತೆ, ಕಡಿಮೆ ಸರ್ಕಾರಿ ನಿಯಂತ್ರಣ ಹಾಗೂ ಪ್ರಾದೇಶಿಕ ಕಾರ್ಯತಂತ್ರಗಳನ್ನು ರೂಪಿಸಿಕೊಳ್ಳಲು ಸಾಧ್ಯವಾಯಿತು. ಇದರಿಂದ, ಕಡಿಮೆ ಸಾಮಥ್ರ್ಯವುಳ್ಳವು ಎನ್ನಲಾದ ರಾಜ್ಯಗಳು ಕೂಡ ಹೆಚ್ಚು ಆರ್ಥಿಕ ಬೆಳವಣಿಗೆಯನ್ನು ಸಾಧಿಸಲು ಸಾಧ್ಯವಾಯಿತು. ಭಾರತದ ಸಂವಿಧಾನದ ಪ್ರಕಾರ, ರಾಷ್ಟ್ರಪತಿ (ಅಂದರೆ, ಕೇಂದ್ರ ಸರ್ಕಾರ) ಪ್ರತಿ ಐದು ವರ್ಷಕ್ಕೊಮ್ಮೆ ಸಂವಿಧಾನದ ವಿಧಿ 280ರಂತೆ ವಿತ್ತ ಆಯೋಗವನ್ನು ರಚಿಸುವ ಅಧಿಕಾರ ಹೊಂದಿದ್ದಾರೆ. ಈ ವಿತ್ತ ಆಯೋಗದ ಪರಮೋಚ್ಛ ಕರ್ತವ್ಯವೆಂದರೆ, ‘ಸಂಗ್ರಹಗೊಂಡ ತೆರಿಗೆ ಆದಾಯವನ್ನು ರಾಜ್ಯ ಹಾಗೂ ಕೇಂದ್ರಗಳಿಗೆ ವಿಭಾಗಿಸಿ ಹಂಚಿಕೆ ಮಾಡುವುದು ಮತ್ತು ರಾಜ್ಯಗಳ ಆದಾಯಕ್ಕೆ ಅನುಗುಣವಾಗಿ ಅವುಗಳಿಗೆ ಅನುದಾನ ಹಂಚಿಕೆ ಮಾಡುವಂತೆ ರಾಷ್ಟ್ರಪತಿ ಅವರಿಗೆ ಶಿಫಾರಸು ಮಾಡುವುದು’. ಜೊತೆಗೆ, ವಿತ್ತ ಆಯೋಗಕ್ಕೆ ಬೇರೆಯದೇ ಕರ್ತವ್ಯಗಳೂ ಇವೆ. ಅವು ಇಲ್ಲಿ ಪ್ರಸ್ತುತವಲ್ಲ. ರಾಜ್ಯಗಳು ತಮ್ಮಿಂದ ಸಂಗ್ರಹಿಸಿದ ತೆರಿಗೆಯಲ್ಲಿ ಪ್ರತಿ ವಿತ್ತ ಆಯೋಗದಿಂದಲೂ ಹೆಚ್ಚು ಪಾಲು ಕೇಳುತ್ತಿವೆ. ಈ ಬೇಡಿಕೆಯಲ್ಲಿ ರಾಜ್ಯಗಳು ಒಟ್ಟಾಗಿವೆ. 14ನೇ ವಿತ್ತ ಆಯೋಗವು ಕೇಂದ್ರ ತೆರಿಗೆಯಲ್ಲಿ ರಾಜ್ಯಗಳ ಪಾಲು ಶೇ.42 ಎಂದು ನಿಗದಿಪಡಿಸಿದೆ. ಆದರೆ ತೆರಿಗೆ ಆದಾಯದಲ್ಲಿ ಎಲ್ಲ ರಾಜ್ಯಗಳೂ ಹೆಚ್ಚು ಪಾಲು ಕೇಳುತ್ತಿವೆ. ಸಂಗ್ರಹಿಸಿದ ತೆರಿಗೆಗೆ ಅನುಗುಣವಾಗಿ ರಾಜ್ಯಗಳಿಗೆ ಪಾಲು ನೀಡುವುದಕ್ಕೆ ಸಂಬಂಧಿಸಿದಂತೆ ವಿವಾದವೊಂದು ಸೃಷ್ಟಿಯಾಗಿದೆ. ಆದರೆ ವಿತರಣೆಯ ಮೊತ್ತವು ಶೇ 100ನ್ನು ದಾಟಲಾಗದು. ಅಷ್ಟಲ್ಲದೆ, ರಾಜ್ಯವೊಂದಕ್ಕೆ ನಿಗದಿಗೊಳಿಸಿದ ಪಾಲನ್ನು ಐದು ವರ್ಷಗಳಿಗೊಮ್ಮೆ ಬದಲಾಯಿಸದೆ ಇರಲು ಸಾಧ್ಯವಿಲ್ಲ. ಏಕೆಂದರೆ, ಪಾಲು ಹಂಚಿಕೆಗೆ ಸಂಬಂಧಿಸಿದ ವಸ್ತುನಿಷ್ಠ ಪರಿಸ್ಥಿತಿಗಳು ಹಿಂದಿನ ಐದು ವರ್ಷದಲ್ಲಿ ಬದಲಾಗಿರಬಹುದು ಹಾಗೂ ಬದಲಾಗಿರುತ್ತವೆ. ಒಂದುವೇಳೆ ರಾಜ್ಯವೊಂದರ ಪಾಲನ್ನು ಕಿಂಚಿತ್ ಪ್ರಮಾಣದಲ್ಲಿ ಕಡಿಮೆ ಮಾಡಿದರೂ ಅದು ಅಸಂತೋಷಗೊಳ್ಳುತ್ತದೆ. ಹೀಗಾಗಿ, ಬಹುತೇಕ ಎಲ್ಲ ವಿತ್ತ ಆಯೋಗಗಳ ಕೆಲಸ ಸಮಸ್ಯಾತ್ಮಕವಾದುದು. ಅಂತೆಯೇ ನವೆಂಬರ್ 2017ರಲ್ಲಿ ನೇಮಕಗೊಂಡ 15ನೇ ವಿತ್ತ ಆಯೋಗದ ಕೆಲಸ ಇನ್ನಷ್ಟು ಕ್ಲಿಷ್ಟಕರವಾಗಿದೆ.

ಕ್ಲಿಷ್ಟತೆಗೆ ಕಾರಣ

15ನೇ ವಿತ್ತ ಆಯೋಗದ ಕೆಲಸ ಕ್ಲಿಷ್ಟವಾಗಲು ಕಾರಣವೇನೆಂದರೆ, ಅದಕ್ಕೆ ಗೊತ್ತುಪಡಿಸಿರುವ ಪರಾಮರ್ಶೆಯ ಅಂಶಗಳು (ಟಮ್ರ್ಸ್ ಆಫ್ ರೆಫೆರೆನ್ಸ್). ಮುಖ್ಯ ಪರಾಮರ್ಶೆಯ ಅಂಶಗಳು ಎಂದಿನಂತೆಯೇ ಇದ್ದರೂ, ಎರಡು ಭಿನ್ನವಾದ ಹಾಗೂ ನಿರ್ದಿಷ್ಟ ಷರತ್ತುಗಳು ಇವೆ.

ಮೊದಲಿಗೆ, ಕೆಲವು ಸಾಧನೆಯನ್ನು ಆಧರಿಸಿದ ಪ್ರೋತ್ಸಾಹಿಸುವಿಕೆಯನ್ನು ಪರಿಗಣಿಸುವಂತೆ 15ನೇ ವಿತ್ತ ಆಯೋಗಕ್ಕೆ ಸೂಚಿಸಲಾಗಿದೆ. ಅವೆಂದರೆ,

  • ಜನಸಂಖ್ಯೆ ಹೆಚ್ಚಳ ದರವನ್ನು ಕಡಿಮೆಗೊಳಿಸುವಲ್ಲಿ ಮಾಡಿರುವ ಸಾಧನೆ ಮತ್ತು ಪ್ರಯತ್ನ.
  • ಭಾರತ ಸರ್ಕಾರದ ಕಾರ್ಯಕ್ರಮಗಳ ಅನುಷ್ಠಾನ.
  • ಜನಪ್ರಿಯ ಯೋಜನೆಗಳಿಗೆ ಮಾಡುವ ವೆಚ್ಚದ ನಿಯಂತ್ರಣ.

ಎರಡನೆಯದಾಗಿ, ವಿತ್ತ ಆಯೋಗವು 2011ರ ಜನಗಣತಿಯ ಅಂಕಿಅಂಶವನ್ನು ಬಳಸುತ್ತದೆಯೇ ಹೊರತು, ಈವರೆಗೆ ಬಳಕೆಯಾಗುತ್ತಿದ್ದ 1971ರ ಜನಗಣತಿಯ ಅಂಕಿಅಂಶವನ್ನಲ್ಲ.

ಈ ಎರಡೂ ಬಹು ದೊಡ್ಡ ಬದಲಾವಣೆಗಳಾಗಿದ್ದು, ಕೇಂದ್ರ— ರಾಜ್ಯಗಳ ನಡುವಿನ ಸಂಬಂಧದ ಮೇಲೆ ಗಂಭೀರ ಪರಿಣಾಮ ಉಂಟುಮಾಡುತ್ತವೆ. ರಾಚನಿಕವಾಗಿ ಹೇಳಬೇಕೆಂದರೆ, ಸಂವಿಧಾನವು ತೆರಿಗೆಗೆ ಸಂಬಂಧಿಸಿದಂತೆ ಕೇಂದ್ರಕ್ಕೆ ಹೆಚ್ಚು ಅಧಿಕಾರ ನೀಡಿದೆ ಹಾಗೂ ವೆಚ್ಚಕ್ಕೆ ಸಂಬಂಧಿಸಿದಂತೆ ರಾಜ್ಯಗಳಿಗೆ ಹೆಚ್ಚು ಜವಾಬ್ದಾರಿ ನೀಡಿದೆ. ಹೀಗಾಗಿ, ಕೇಂದ್ರದ ಒಟ್ಟು ತೆರಿಗೆ ಆದಾಯವನ್ನು ನ್ಯಾಯಸಮ್ಮತವಾಗಿ ಹಂಚಿಕೊಳ್ಳುವ ವ್ಯವಸ್ಥೆಯೊಂದರ ಅಗತ್ಯವಿದೆ. ರಾಜ್ಯದ ಆಯವ್ಯಯದ ಮೇಲೆ ರಾಜ್ಯದ ಶಾಸಕಾಂಗಕ್ಕೆ ಹೆಚ್ಚು ಅಧಿಕಾರ ಇರುವಂತೆ, ಕೇಂದ್ರದ ಬಜೆಟ್ ಮೇಲೆ ಸಂಸತ್ತಿಗೆ ಹೆಚ್ಚು ಅಧಿಕಾರ ಇರುತ್ತದೆ. ವಿತ್ತ ಆಯೋಗ ಎನ್ನುವುದು ಕೇಂದ್ರ ಸರ್ಕಾರದ ಇಚ್ಛೆಯನ್ನು ಅಥವಾ ಯೋಜನೆಗಳನ್ನು ರಾಜ್ಯಗಳ ಮೇಲೆ ಹೇರುವ ವ್ಯವಸ್ಥೆಯಲ್ಲ. ‘ನನ್ನ ತೆರಿಗೆ ಪಾಲನ್ನು ನನಗೆ ಕೊಟ್ಟುಬಿಡಿ, ನನ್ನ ಶಾಸಕಾಂಗದ ನಿರ್ಧಾರಕ್ಕೆ ಅನುಗುಣವಾಗಿ ಹಣಕಾಸು ವ್ಯಯಕ್ಕೆ ಕ್ರಮ ತೆಗೆದುಕೊಳ್ಳಲು ಬಿಟ್ಟುಬಿಡಿ’ ಎನ್ನುವ ಅಧಿಕಾರ ರಾಜ್ಯವೊಂದಕ್ಕೆ ಇದೆ.

ಸಾಧನೆಗೆ ಶಿಕ್ಷೆ

ಎರಡನೇ ಬದಲಾವಣೆ ಅತ್ಯಂತ ವಿವಾದಾತ್ಮಕವಾದುದು. ಈವರೆಗೆ ವಿತ್ತ ಆಯೋಗವು 1971ರ ಜನಗಣತಿಯ ಅಂಕಿಅಂಶಗಳನ್ನು ಬಳಸುತ್ತಿತ್ತು. ಜನಸಂಖ್ಯೆ ಹೆಚ್ಚಳವನ್ನು ಕಡಿಮೆಗೊಳಿಸುವಲ್ಲಿ ಉತ್ತಮ ಸಾಧನೆಯನ್ನು ಮಾಡಿದ ರಾಜ್ಯಗಳ ಹಕ್ಕನ್ನು ರಕ್ಷಿಸಲು 1971ರ ಜನಗಣತಿಯ ಅಳವಡಿಕೆಯ ಸ್ಥಗಿತಕ್ಕೆ ಸಮ್ಮತಿಸಲಾಗಿತ್ತು. 14ನೇ ವಿತ್ತ ಆಯೋಗವು ಸಣ್ಣದೊಂದು ಬದಲಾವಣೆ ಮಾಡಿತು: 1971ರ ಜನಗಣತಿಗೆ ನೀಡಿದ್ದ ಮೌಲ್ಯಾಂಕವನ್ನು ಶೇ.25ರಿಂದ ಶೇ.17.5ಕ್ಕೆ ಇಳಿಸಿತು ಮತ್ತು ಈವರೆಗೆ ಪರಿಗಣಿಸದಿದ್ದ 2011ರ ಜನಗಣತಿಯ ಅಂಕಿಅಂಶಗಳಿಗೆ ಶೇ.10 ಮೌಲ್ಯಾಂಕವನ್ನು ಪರಿಚಯಿಸಿತು. 1971ರ ಜನಗಣತಿಯ ಅಂಕಿಅಂಶವನ್ನು ತೆಗೆದುಹಾಕಿ ಹಾಗೂ 2011ರ ಜನಗಣತಿಯ ಅಂಕಿಅಂಶಗಳನ್ನು ಪರಿಗಣಿಸುವ ಮೂಲಕ, 1971 ರಿಂದ 2011ರವರೆಗಿನ 40 ವರ್ಷಗಳ ಅವಧಿಯಲ್ಲಿ ಜನಸಂಖ್ಯೆ ಬೆಳವಣಿಗೆಯನ್ನು ಸ್ಥಿರೀಕರಿಸುವಲ್ಲಿ ಉತ್ತಮ ಸಾಧನೆ ಮಾಡಿದ ರಾಜ್ಯಗಳಿಗೆ ವಿತ್ತ ಆಯೋಗವು ಶಿಕ್ಷೆ ನೀಡಿದಂತೆ ಆಯಿತು. ಕಡಿಮೆ ಆರ್ಥಿಕ ಸಾಮಥ್ರ್ಯ, ಕಡಿಮೆ ಆದಾಯ, ಚಾರಿತ್ರಿಕ ಅಡೆತಡೆಗಳು ಮತ್ತು ಅಭಿವೃದ್ಧಿಗೆ ಸಂಬಂಧಿಸಿದಂತೆ ಕಳಪೆ ಸಾಧನೆ ಮಾಡಿದ ರಾಜ್ಯಗಳಿಗೆ ಹೆಚ್ಚು ಬೆಂಬಲ ನೀಡಬೇಕು ಎನ್ನುವ ವಾದವು ಸಮರ್ಥನೀಯ. 14ನೇ ವಿತ್ತ ಆಯೋಗವು ‘ಆರ್ಥಿಕ ಸಾಮಥ್ರ್ಯ’ಕ್ಕೆ ನೀಡುವ ಮೌಲ್ಯಾಂಕವನ್ನು ಶೇ.47.5 ರಿಂದ ಶೇ.50ಕ್ಕೆ ಹೆಚ್ಚಿಸುವ ಮೂಲಕ ಇದನ್ನು ಒಪ್ಪಿಕೊಂಡಿದೆ. ಬೇರೆ ಅಂಶಗಳಿಗೆ ಹೋಲಿಸಿದರೆ, ಇದು ನೀಡಲಾದ ಅತ್ಯಂತ ಅಧಿಕ ಮೌಲ್ಯಾಂಕವಾಗಿದೆ. ಆದರೆ, 1971ರ ಜನಗಣತಿಯ ಅಂಕಿಅಂಶಗಳನ್ನು 2011ರ ಜನಗಣತಿಯ ಅಂಕಿಅಂಶದಿಂದ ಬದಲಿಸಿರುವುದನ್ನು ಸಮರ್ಥಿಸಿಕೊಳ್ಳಲು ಸಾಧ್ಯವಿಲ್ಲ; ವಾಸ್ತವವೆಂದರೆ, ಇದನ್ನು ಜನಸಂಖ್ಯೆ ಹೆಚ್ಚಳದ ಸ್ಥಗಿತಗೊಳಿಸುವಿಕೆಯನ್ನು ನಿರ್ಲಕ್ಷಿಸಿದ ರಾಜ್ಯಗಳಿಗೆ ನೀಡಲಾದ ವ್ಯತಿರಿಕ್ತ ಪ್ರೋತ್ಸಾಹ ಎನ್ನಬೇಕಾಗುತ್ತದೆ.

ಉತ್ತಮವಾದ ಆಡಳಿತ ನೀಡುತ್ತಿರುವ ಹಾಗೂ ಉತ್ತಮ ಸಾಧನೆ ಮಾಡಿರುವ ರಾಜ್ಯಗಳು ತಮ್ಮ ಪಾಲು ಪಡೆಯುವಲ್ಲಿ ಈಗಾಗಲೇ ವಂಚಿತವಾಗಿವೆ (ಕೋಷ್ಠಕ ನೋಡಿ).

ಬೆಂಕಿಯನ್ನು ಈಗಲೇ ನಂದಿಸಿ

ದಕ್ಷಿಣದ ರಾಜ್ಯಗಳು ಉತ್ತಮ ಆಡಳಿತ ಹಾಗೂ ಉತ್ತಮ ಫಲಿತಾಂಶದಿಂದಾಗಿ 20 ವರ್ಷಗಳಲ್ಲಿ ಶೇ.6.338 ರಷ್ಟು ಆದಾಯ ಕಳೆದುಕೊಂಡಿವೆ. ಆದಾಗ್ಯೂ ದೇಶದ ಒಟ್ಟಾರೆ ಜನಸಂಖ್ಯೆಯಲ್ಲಿ ಈ ರಾಜ್ಯಗಳ ಪಾಲಿನ ಪ್ರಮಾಣದ ಕುಸಿತದಿಂದ ಯಾವುದೇ ವ್ಯತಿರಿಕ್ತ ಪರಿಣಾಮ ಉಂಟಾಗಿರಲಿಲ್ಲ. 1971ರ ಜನಗಣತಿಯ ಪ್ರಕಾರ, ಒಟ್ಟು ಜನಸಂಖ್ಯೆಯಲ್ಲಿ ಅವುಗಳ ಪಾಲು ಶೇ 24.7. 2011ರ ಜನಗಣತಿ ಪ್ರಕಾರ ಈ ಪಾಲು ಶೇ.20.7ಕ್ಕೆ ಕುಸಿದಿದೆ. ಬೇರೆಲ್ಲ ಅಂಶಗಳು ಸ್ಥಿರವಾಗಿವೆ ಎಂದುಕೊಂಡರೂ, 15ನೇ ವಿತ್ತ ಆಯೋಗವು 1991ಕ್ಕಿಂತ ಮೊದಲಿನ ಜನಸಂಖ್ಯೆಯನ್ನು ಪರಿಗಣಿಸಬೇಕಾಗುತ್ತದೆ. ಇದರಿಂದ ಎಲ್ಲ ರಾಜ್ಯಗಳು ಮುಕ್ತ ಆರ್ಥಿಕತೆ, ಕಡಿಮೆ ಸರ್ಕಾರಿ ನಿಯಂತ್ರಣ ಹಾಗೂ ಪ್ರಾದೇಶಿಕ ಕಾರ್ಯತಂತ್ರದ ಮೂಲಕ ಲಾಭ ಪಡೆದುಕೊಳ್ಳಬಹುದಾಗಿದೆ. ಹಿಂದೆ ಕಡಿಮೆ ಸಾಮಥ್ರ್ಯ ಹೊಂದಿವೆ ಎನ್ನಲಾಗಿದ್ದ ರಾಜ್ಯಗಳು ಈಗ ತಾವು ಉತ್ತಮ ಬೆಳವಣಿಗೆಯ ಶೇಕಡಾವಾರು ದರ ಹೊಂದಿದ್ದೇವೆ ಎಂದು ಘೋಷಿಸಿಕೊಳ್ಳುತ್ತಿವೆ. 2011ರ ಜನಗಣತಿಯು ದಕ್ಷಿಣದ ರಾಜ್ಯಗಳ ಪಾಲನ್ನು ಇನ್ನಷ್ಟು ಕಡಿಮೆ ಮಾಡಲಿದೆ. ಹೆಚ್ಚು ಬಡತನವಿರುವ ರಾಜ್ಯಗಳ ಬಗೆಗೆ ನಾವು ದಯೆ ತೋರಿಸುವುದರಲ್ಲಿ ತಪ್ಪಿಲ್ಲ. ಆದರೆ, ಉತ್ತಮ ಸಾಧನೆ ಮಾಡಿರುವ ರಾಜ್ಯಗಳ ಹಕ್ಕು ಮತ್ತು ಆಶಯಗಳನ್ನು ಕಡೆಗಣಿಸುವುದು ಸರಿಯಲ್ಲ. ಕೇಂದ್ರ ಸರ್ಕಾರವು ಬೆಂಕಿಯನ್ನು ಹೊತ್ತಿಸಿದೆ. ದಕ್ಷಿಣದ ಜ್ವಾಲೆಗಳು ರಾಷ್ಟ್ರೀಯ ಒಕ್ಕೂಟಕ್ಕೆ ಬೆಂಕಿ ಹೊತ್ತಿಸುವುದಕ್ಕೆ ಮುನ್ನ ಬೆಂಕಿಯನ್ನು ಆರಿಸಬೇಕಿದೆ.

ಕೇಂದ್ರದ ಅನುದಾನ ಬಿಡುಗಡೆಯ ವಿಷಯದಲ್ಲಿ ದಕ್ಷಿಣ ಭಾರತದ ರಾಜ್ಯಗಳಿಗೆ ಹಣಕಾಸು ಆಯೋಗಗಳಿಂದ ಆಗಿರುವ ಮಲತಾಯಿ ಧೋರಣೆ ಬಗ್ಗೆ ಪಿ.ಚಿದಂಬರಂ ಅತ್ಯಂತ ಪ್ರಬುದ್ಧವಾಗಿ ತಮ್ಮ ವಾದ ಮಂಡಿಸಿದ್ದಾರೆ. ಆದರೆ ಈ ಹಣಕಾಸು ಆಯೋಗಗಳು ವರದಿ ನೀಡುವ ಸಮಯದಲ್ಲಿ ಹಾಗೂ ವಿಶೇಷವಾಗಿ 2004 ರಿಂದ 2014ರವರೆಗೆ ಚಿದಂಬರಂ ಅವರೇ ಕೇಂದ್ರದಲ್ಲಿ ವಿತ್ತ ಹಾಗೂ ಗೃಹ ಖಾತೆಗಳಂತಹ ಪ್ರಭಾವಿ ಸಚಿವರಾಗಿದ್ದೂ ದಕ್ಷಿಣ ರಾಜ್ಯಗಳಿಗೆ ಆದ ಅನ್ಯಾಯವನ್ನು ಸರಿಪಡಿಸಲು ಯಾವುದೇ ದನಿಯೆತ್ತದೇ ಇದ್ದದ್ದು ವಿಪರ್ಯಾಸವೇ ಸರಿ —ಸಂ.

ಎನ್.ಎಸ್.ಶಂಕರ್

ಬಿಜೆಪಿ ವಿರೋಧಿ ಒಕ್ಕೂಟ ಸಾಧ್ಯವೇ?

ಜುಲೈ ೨೦೧೮

ಶಾಂತಲಾ ದಾಮ್ಲೆ

ಹೋರಾಟಗಾರ ಅಭ್ಯರ್ಥಿ ಚುನಾವಣಾ ಬವಣೆ

ಜುಲೈ ೨೦೧೮

ಶ್ರೀಶೈಲ ಆಲದಹಳ್ಳಿ

ಸಂಡೂರು ಕುಮಾರಸ್ವಾಮಿ ಬೆಟ್ಟಕ್ಕೆ ಗಣಿ ಕಂಟಕ!

ಜುಲೈ ೨೦೧೮

ಡಾ.ಡಿ.ಸಿ.ನಂಜುಂಡ

ನಿಮ್ಮ ಆನ್‍ಲೈನ್ ಮಾಹಿತಿ ಎಷ್ಟು ಸುರಕ್ಷಿತ?

ಜೂನ್ ೨೦೧೮

ಪ್ರೊ. ರವೀಂದ್ರ ರೇಷ್ಮೆ

ಅಸೆಂಬ್ಲಿ ಫಲಿತಾಂಶ - ಪಕ್ಷ ರಾಜಕಾರಣದ ಪತನ

ಜೂನ್ ೨೦೧೮

ಡಾ.ಟಿ.ಆರ್.ಚಂದ್ರಶೇಖರ

ಭಾರತದಲ್ಲಿ ಬ್ಯಾಂಕಿಂಗ್ ಬುಡ ಗಡಗಡ!

ಮೇ ೨೦೧೮

ಸುಧೀಂದ್ರ ಹಾಲ್ದೊಡ್ಡೇರಿ

ಬೆಳ್ಳಂದೂರಿನಲ್ಲಿ ನೊರೆ ಹೊತ್ತಿ ಉರಿದೊಡೆ...!

ಮೇ ೨೦೧೮

ರಹಮತ್ ತರೀಕೆರೆ

ಪ್ರತಿಮೆಗಳ ರಾಜಕಾರಣ

ಎಪ್ರಿಲ್ ೨೦೧೮

ಹನುಮಂತರೆಡ್ಡಿ ಶಿರೂರು

ಸಿದ್ದರಾಮಯ್ಯನವರ ಕಲ್ಯಾಣ ರಾಜ್ಯ !

ಎಪ್ರಿಲ್ ೨೦೧೮

ದಾಸನೂರು ಕೂಸಣ್ಣ

ಒಳ ಮೀಸಲಾತಿಏಕೆ ಬೇಕು?

ಮಾರ್ಚ್ ೨೦೧೮

ರೇಣುಕಾ ನಿಡಗುಂದಿ

ಮೊಲೆ ಕತ್ತರಿಸಿಕೊಟ್ಟ ನಂಗೇಲಿ ನೆನಪು!

ಮಾರ್ಚ್ ೨೦೧೮

ಡಿ. ಎಸ್. ನಾಗಭೂಷಣ

ಕನ್ನಡ ಮೊದಲು ನಂತರ ಇಂಗ್ಲಿಷ್

ಮಾರ್ಚ್ ೨೦೧೮

ಡಾ. ವಾಸು ಎಚ್. ವಿ

ಈ ಹೊತ್ತಿನ ಕರ್ನಾಟಕ: ಪರ್ಯಾಯ ರಾಜಕಾರಣ

ಫೆಬ್ರವರಿ ೨೦೧೮

ಡಾ.ಕಿರಣ್ ಎಂ.ಗಾಜನೂರು

‘ನಿಮ್ಮ ದನದ ಬಾಲ ನೀವೇ ಇಟ್ಟುಕೊಳ್ಳಿ’

ಫೆಬ್ರವರಿ ೨೦೧೮