2nd May 2018

ಸಂಸದೀಯ ಪ್ರಜಾಪ್ರಭುತ್ವ ವ್ಯವಸ್ಥೆಗೆ ಗುಡ್ ಬೈ?

ಮೋಹನದಾಸ್

ಬಜೆಟ್ ಅಧಿವೇಶನದ ಗತಿ ಮುಂದಿನ ಮಳೆಗಾಲದ ಅಧಿವೇಶನಕ್ಕೂ ಆದಲ್ಲಿ ಆಡಳಿತ ಪಕ್ಷ ಸಂಸದೀಯ ವ್ಯವಸ್ಥೆಗೆ ತಿಲಾಂಜಲಿ ಹೇಳಲು ಸಿದ್ಧವಾಗುತ್ತಿದೆ ಎಂದು ನಾವು ಎಣೆಸಬೇಕಾಗುತ್ತದೆ.

ಈ ವರ್ಷದ ಬಜೆಟ್ ಅಧಿವೇಶನ ಸಂಪೂರ್ಣವಾಗಿ ಹೊಳೆಯಲ್ಲಿ ಹುಣಸೇಹಣ್ಣು ಹಿಂಡಿದಂತೆ ಆಗಿದೆ. ಅಧಿವೇಶನ ನಡೆಯಬೇಕಿದ್ದ 23 ದಿನಗಳು ಕೂಡಾ ಒಂದಿಲ್ಲೊಂದು ಪಕ್ಷದ ಒಂದಿಲ್ಲೊಂದು ಪ್ರತಿಭಟನೆಯ ಮಧ್ಯದಲ್ಲಿ ಯಾವುದೇ ಚರ್ಚೆ ನಡೆಯದೆ, ದಿನದಿಂದ ದಿನಕ್ಕೆ ಮುಂದೂಡುತ್ತಾ ಬಂದ ಸದನದ ಕಲಾಪ ಕಡೆಗೂ ಮುಗಿದಿದೆ. 2018—19ರ ಕೇಂದ್ರೀಯ ಬಜೆಟ್ ಬಗ್ಗೆ ಯಾವುದೇ ಚರ್ಚೆಯಿಲ್ಲದೆ ಧ್ವನಿಮತದಲ್ಲಿ ಲೋಕಸಭೆ ಅಂಗೀಕಾರ ಮಾಡಿದ್ದನ್ನು ಬಿಟ್ಟರೆ ಈ ಬಾರಿಯ ಸಂಸತ್ ಅಧಿವೇಶನ ಯಾವುದೇ ಮಸೂದೆಯ ಚರ್ಚೆ—ಅಂಗೀಕಾರದ ಗೊಡವೆಗೆ ಹೋಗಲಿಲ್ಲ.

ಸಂಸದೀಯ ಪ್ರಜಾಪ್ರಭುತ್ವ ವ್ಯವಸ್ಥೆಯ ಮೂಲ ಮಂತ್ರಗಳೇ ಚರ್ಚೆ, ಪ್ರಶ್ನೋತ್ತರ ಹಾಗೂ ಮಾತುಕತೆಯ ಮೂಲಕ ಪರಿಹಾರ ಕಂಡುಕೊಳ್ಳುವ ಮಧ್ಯಮಮಾರ್ಗ. ಸಂಸತ್ತು ಅಲ್ಪಮತದ ಅಭಿಪ್ರಾಯಗಳಿಗೆ ಬಹುಮುಖ್ಯ ವೇದಿಕೆ. ಕೇವಲ ಬಹುಮತದ ನಿರ್ಣಯದಂತೆ ಸರ್ಕಾರ ನಡೆಯಬೇಕಿದ್ದಲ್ಲಿ ಸಂಸತ್ತು ಮತ್ತು ವಿಧಾನಸಭೆಗಳನ್ನೇ ನಮ್ಮ ಸಂವಿಧಾನ ರಚಿಸುವ ಗೋಜಲಿಗೆ ಹೋಗುತ್ತಿರಲಿಲ್ಲ. ಆಳುವ ವರ್ಗವನ್ನು ಅಂಕುಶದಲ್ಲಿ ಇಟ್ಟಿಕೊಳ್ಳುವ ಮೂಗುದಾರವಾಗಿಯೂ ಸಂಸತ್ತಿನ ಕಲಾಪಗಳು ಪರಿಣಾಮಕಾರಿಯಾಗಬಲ್ಲವು. ಸಂಸತ್ತಿಗೆ ಸರ್ಕಾರಕ್ಕಿರುವ ಬಹುಮತವನ್ನು ಪದೇಪದೇ ಪರೀಕ್ಷಿಸಲು ಅಧಿಕಾರ ಹಾಗೂ ಅಂತಃಪ್ರಜ್ಞೆಯಿದೆ. ದೇಶದ ಮುಂದಿರುವ ಯಾವುದೇ ಸಮಸ್ಯೆ ಸವಾಲನ್ನು ಸದನದಲ್ಲಿ ಚರ್ಚೆ ಮಾಡುವ ಹೊಣೆಗಾರಿಕೆ ಹಾಗೂ ಮುಕ್ತ ಅವಕಾಶವೂ ಸಂಸತ್ತಿನ ಎಲ್ಲ ಸದಸ್ಯರಿಗಿದೆ.

ಇಷ್ಟೆಲ್ಲಾ ಪ್ರಾಮುಖ್ಯತೆಯುಳ್ಳ ಸಂಸತ್ತಿನ ಕಲಾಪವನ್ನೇ ನಡೆಸಲಾಗದ ಪರಿಸ್ಥಿತಿ ನಿಜಕ್ಕೂ ಬಂದಿದ್ದರೆ ಸಂವಿದಾನದತ್ತ ಸಂಸದೀಯ ಪ್ರಜಾಪ್ರಭುತ್ವವೇ ಅಪಾಯದಲ್ಲಿದೆ ಎಂದು ಹೇಳಬೇಕಾಗುತ್ತದೆ. ಬಜೆಟ್ ಅಧಿವೇಶನದ ವ್ಯರ್ಥ ಕಲಾಪಗಳು ಪ್ರಜಾಪ್ರಭುತ್ವದಲ್ಲಿ ನಂಬಿಕೆಯಿಟ್ಟಿರುವ ಎಲ್ಲರೂ ಕಿವಿಗೊಟ್ಟು ಗಂಭೀರವಾಗಿ ಕೇಳಬೇಕಾದ ಎಚ್ಚರಿಕೆಯ ಗಂಟೆಯಾಗಿದೆ.

ಸಂಸತ್ತಿನ ಬಜೆಟ್ ಅಧಿವೇಶನದ ಮೊದಲ ಕೆಲವು ದಿನಗಳು ಕಲಾಪ ನಡೆಯದಂತೆ ನೋಡಿಕೊಂಡ ಅಪಕೀರ್ತಿ ಕಾಂಗ್ರೆಸ್ ಪಕ್ಷಕ್ಕೆ ಸಲ್ಲುತ್ತದೆ. ಸಂಸತ್ತಿನ ಸದನಗಳನ್ನು ಕೇವಲ ತಮ್ಮ ಪ್ರತಿಭಟನೆಯ ಘೋಷಣೆಗಳಿಗೆ ಮೀಸಲಿಟ್ಟ ಹೊಣೆಗೇಡಿತನವೂ ಕಾಂಗ್ರೆಸ್ಸಿಗೆ ಸಲ್ಲುತ್ತದೆ. ಆದರೆ ಅಧಿವೇಶನದ ಮೊದಲ ನಾಲ್ಕಾರು ದಿನಗಳಲ್ಲಿಯೇ ಕಾಂಗ್ರೆಸ್ ತನ್ನ ತಪ್ಪನ್ನು ಅರಿತು ಕಲಾಪ ನಡೆಸುವ ಅಗತ್ಯವನ್ನು ಮನಗಂಡಿತ್ತು. ಆದರೆ ಆ ಹೊತ್ತಿಗಾಗಲೇ ಸದನದ ಕಲಾಪಗಳನ್ನು ಪ್ರತಿಭಟನೆಗಳಿಗಾಗಿ ಬಲಿಯಾಗಿಸುವ ಕೆಟ್ಟ ಪರಂಪರೆಗೆ ಇಂಬು ದೊರಕಿತ್ತು. ನಂತರದಲ್ಲಿ ಆಂಧ್ರದ ವೈಎಸ್‍ಆರ್ ಕಾಂಗ್ರೆಸ್ ಹಾಗೂ ತೆಲಗುದೇಶಂ ಪಕ್ಷಗಳು ತಮ್ಮ ರಾಜ್ಯಕ್ಕೆ ಸೀಮಿತವಾದ ಪಕ್ಷ ರಾಜಕೀಯಕ್ಕೆ ಕಲಾಪವನ್ನು ಬಲಿಯಾಗಿಸುವ ಬೇಜವಾಬ್ದಾರಿ ಮೂರ್ಖ ಹಾಗೂ ಸ್ವಾರ್ಥ ನಿರ್ಣಯಕ್ಕೆ ಬಂದಿದ್ದವು. ಅಧಿವೇಶನದ ಎರಡನೇ ವಾರದ ಕಲಾಪಗಳನ್ನು ಆಂಧ್ರ ಪ್ರದೇಶದ ಪಕ್ಷಗಳು ಪರಸ್ಪರ ಸ್ಪರ್ಧೆಗೆ ಇಳಿದಂತೆ ಬಲಿ ತೆಗೆದುಕೊಂಡವು.

ಇಲ್ಲಿ ಗಮನಿಸಬೇಕಾದ ಅಂಶವೆಂದರೆ ಅಧಿವೇಶನದ ಎರಡು ವಾರಗಳ ಕಲಾಪಗಳು ಹಾಳಾದ ನಂತರ ‘ಹುಚ್ಚು ಮುಂಡೆಗೆ ಬುದ್ಧಿ ಬಂದಂತೆ’ ವಿರೋಧ ಪಕ್ಷಗಳಿಗೆ ತಮ್ಮ ತಪ್ಪಿನ ಅರಿವಾಗಿತ್ತು. ಆಗ ಇದ್ದಕ್ಕಿದ್ದಂತೆ ಅವಿಶ್ವಾಸ ನಿರ್ಣಯವನ್ನು ಮಂಡಿಸುವ ಹಾಗೂ ಆಡಳಿತ ಪಕ್ಷವನ್ನು ಇಕ್ಕಟ್ಟಿಗೆ ಸಿಲುಕಿಸುವ ನರಿಬುದ್ಧಿಯನ್ನು ಈ ವಿರೋಧ ಪಕ್ಷಗಳು ತೋರಿದ್ದವು. ಆದರೆ ಅಲ್ಲಿಯವರೆಗೆ ತಮ್ಮ ಬುಡಕ್ಕೆ ತಾವೇ ಕೊಡಲಿ ಪೆಟ್ಟು ಕೊಟ್ಟುಕೊಂಡು ಬಂದಿದ್ದ ಪಕ್ಷಗಳಿಗೆ ತಮ್ಮ ಕಣ್ಣಮುಂದೆಯೇ ತಮ್ಮ ನೆರಳಿನಂತಿದ್ದ ಮರವೊಂದು ಕುಸಿದುಬೀಳುವ ಅನುಭವವಾಯಿತು. ಆಂಧ್ರಪ್ರದೇಶ ಪಕ್ಷಗಳ ಸರತಿಯ ನಂತರ ತಮಿಳುನಾಡಿನ ಪ್ರಾದೇಶಿಕ ಪಕ್ಷಗಳು ಅಧಿವೇಶನದ ಉಳಿದ ದಿನಗಳ ಕಲಾಪವನ್ನು ನುಂಗಿಬಿಡುವ ನಿರ್ಣಯ ಮಾಡಿದ್ದವು. 23 ದಿನಗಳ ತಮಾಷೆಯ ನಂತರ ಬಜೆಟ್ ಅಧಿವೇಶನ ಒಂದೇ ಒಂದು ದಿನದ ಪೂರ್ಣ ಕಲಾಪವನ್ನೂ ಮಾಡದಂತೆ ಮುಗಿದು ಹೋಗಿತ್ತು.

ಅಧಿವೇಶನದ ಕಡೆಯ ಒಂದು ವಾರದಲ್ಲಿ ಕಲಾಪವನ್ನು ನಡೆಯಲು ಬಿಡದಂತೆ ಆಡಳಿತ ಪಕ್ಷವೇ ತಮಿಳುನಾಡಿನ ಪಕ್ಷಕ್ಕೆ ಕುಮ್ಮಕ್ಕು ನೀಡಿತ್ತು ಎಂಬ ಆರೋಪವನ್ನು ಮಾಡಲಾಗುತ್ತಿದೆ. ಆದರೆ ಈ ಗಂಭೀರ ಆರೋಪಕ್ಕೆ ಸೂಕ್ತ ಪುರಾವೆಯ ಕೊರತೆಯಿದೆ. ಹೀಗಾಗಿ ಅಧಿವೇಶನದ ಕೊನೆಯ ವಾರದಲ್ಲಿಯೂ ಸದನ ನಡೆಯದಂತೆ ನೋಡಿಕೊಂಡ ಅಪಕೀರ್ತಿ ತಮಿಳುನಾಡಿನ ದ್ರಾವಿಡ ಪಕ್ಷಗಳಿಗೆ ಸಲ್ಲುತ್ತದೆ.

ಹಾಗಾದಲ್ಲಿ ಸಂಸತ್ತಿನ ಅಧಿವೇಶನ ನಡೆಯದ ಅಪವಾದದಲ್ಲಿ ಆಡಳಿತ ಪಕ್ಷದ ಯಾವುದೇ ಹೊಣೆಯಿಲ್ಲವೇ ಎಂಬ ಪ್ರಶ್ನೆಯನ್ನು ನಾವು ಎತ್ತಲೇಬೇಕಾಗುತ್ತದೆ. ಅಧಿವೇಶನದ ದಿನಾಂಕಗಳನ್ನು ನಿರ್ಧರಿಸುವ, ಅಧಿವೇಶನದಲ್ಲಿ ಮಂಡಿಸಬೇಕಾದ ಕಾನೂನು ಮತ್ತು ವರದಿಗಳನ್ನು ಸಿದ್ಧಪಡಿಸುವ ಹಾಗೂ ಸದನದ ಕಲಾಪಗಳನ್ನು ಯಶಸ್ವಿಯಾಗಿ ನಡೆಸಿಕೊಡುವ ಸ್ಥೂಲ ಜವಾಬ್ದಾರಿ ಆಡಳಿತ ಪಕ್ಷಕ್ಕೆ ಸೇರುತ್ತದೆ. ಅಧಿವೇಶನಕ್ಕೆ ಮೊದಲು ಹಾಗೂ ಅಧಿವೇಶನದ ದಿನಗಳಲ್ಲಿ ಕಲಾಪಗಳಿಗೆ ಸಮಸ್ಯೆ ಎದುರಾದಾಗ ಸರ್ವಪಕ್ಷಗಳ ಸಭೆ ಕರೆದು ಮಾತುಕತೆಯ ಮುಖಾಂತರ ಸಮಸ್ಯೆಗಳನ್ನು ಸದನಗಳ ಹೊರಗೇ ಪರಿಹಾರ ಮಾಡಿಕೊಂಡು ಕಲಾಪ ನಡೆಸುವ ಹೊಣೆಗಾರಿಕೆಯೂ ಆಡಳಿತ ಪಕ್ಷಕ್ಕೆ ಇರಬೇಕಾಗುತ್ತದೆ. ಅಗತ್ಯಬಿದ್ದಲ್ಲಿ ಸದನದ ಹಿರಿಯ ಮುಖಂಡರನ್ನೂ ಹಾಗೂ ಪಕ್ಷದ ನೇತಾರರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಸದನಗಳನ್ನು ಸುಸೂತ್ರವಾಗಿ ನಡೆಸುವ ಅಂತಿಮ ಜವಾಬ್ದಾರಿ ಪ್ರಧಾನಮಂತ್ರಿಯ ಮೇಲೆ ಕೂಡಾ ಇರುತ್ತದೆ.

ರಾಜಕೀಯ ಪಕ್ಷಗಳಿಗೆ ತಮ್ಮದೇ ಆದ ಸ್ವಾರ್ಥ ಹಾಗೂ ಅನಿವಾರ್ಯತೆಗಳಿರುವ ಕಾರಣವನ್ನು ನೀಡಬಹುದು. ಆದರೆ ಸದನಗಳ ಸಭಾಧ್ಯಕ್ಷರಿಗೆ ಸದನ ನಡೆಸುವ ಗುರುತರ ಸಾಂವಿಧಾನಿಕ ಜವಾಬ್ದಾರಿಯಿರುತ್ತದೆ. ಲೋಕಸಭೆಯಲ್ಲಿ ಸ್ಪೀಕರ್ ಮತ್ತು ರಾಜ್ಯಸಭೆಯಲ್ಲಿ ಉಪರಾಷ್ಟ್ರಪತಿಯವರ ಪದವಿಗೆ ಸಂವಿಧಾನ ವಿಶೇಷ ಅಧಿಕಾರ ಹಾಗು ಮಾನ್ಯತೆ ನೀಡಿದೆ. ಆಯ್ಕೆಯಾಗುವ ಸಂದರ್ಭದಲ್ಲಿ ಪಕ್ಷಗಳ ಪರವಾಗಿ ಉಮೇದುವಾರರಾಗಿ ಬಂದರೂ, ಆಯ್ಕೆಯಾದ ನಂತರ ಈ ಸಭಾಧ್ಯಕ್ಷರು ಪಕ್ಷಾತೀತವಾಗಿ ದೇಶದ ಶಾಸಕಾಂಗಗಳ ಮುಖ್ಯಸ್ಥರಾಗಿ ತಮ್ಮ ಸಾಂವಿಧಾನಿಕ ಜವಾಬ್ದಾರಿಯನ್ನು ನಿರ್ವಹಿಸಬೇಕಿರುತ್ತದೆ. ಈ ಜವಾಬ್ದಾರಿ ನಿರ್ವಹಣೆಗೆ ಇವರಿಬ್ಬರಿಗೂ ವಿಶೇಷ ಅಧಿಕಾರ, ಸವಲತ್ತು ಮತ್ತು ಪ್ರಾಮುಖ್ಯ ನೀಡಲಾಗಿದೆ.

ಆದರೆ ಉಭಯ ಸದನಗಳ ಸಭಾಧ್ಯಕ್ಷರು ತಮ್ಮ ಸಾಂವಿಧಾನಿಕ ಹೊಣೆಗಾರಿಕೆ ಯಿಂದ ಕಳಚಿಕೊಂಡು ಕೇವಲ ಪಕ್ಷರಾಜಕಾರಣ ಮಾಡುವ ಅನಾಹುತಕಾರಿ ಧೋರಣೆಯನ್ನು ತೋರಿದ್ದಾರೆ. ಸದನಗಳನ್ನು ನಡೆಸುವ ತಮ್ಮ ಮೂಲಭೂತ ಜವಾಬ್ದಾರಿಗೆ ವಿಮುಖರಾಗಿ ಸಂವಿಧಾನಕ್ಕೆ ಮತ್ತು ಪ್ರಜಾಪ್ರಭುತ್ವಕ್ಕೆ ಅಪಮಾನ ಮಾಡಿದ್ದಾರೆ. ಸದನದಲ್ಲಿ ವಿನಾಕಾರಣ ಪ್ರತಿಭಟನೆ ಮಾಡುತ್ತಿದ್ದ ಹಾಗೂ ನಿರ್ಲಜ್ಜವಾಗಿ ಗಲಾಟೆ ಮಾಡುತ್ತಿದ್ದವರ ಹೆಸರು ಹೇಳಿ ಸದನದಿಂದ ಹೊರದಬ್ಬುವ ಆವಶ್ಯಕ ಕರ್ತವ್ಯದಿಂದ ಹಿಂದೆ ಸರಿದಿದ್ದಾರೆ. ಸದನಗಳಲ್ಲಿ ಅರಾಜಕತೆಯ ವಾತಾವರಣ ಮುಂದುವರೆಯಲು ಬಿಟ್ಟು ಸಂಸದೀಯ ಪ್ರಜಾಪ್ರಭುತ್ವದ ಆಶಯಗಳಿಗೆ ಚರಮಗೀತೆ ಹಾಡಿದ್ದಾರೆ.

ಇದು ಅಕ್ಷಮ್ಯ. ಇದು ಹೀಗೆಯೇ ಮುಂದುವರೆದರೆ ಸಂಸತ್ತಿನ ಉಪಯುಕ್ತತೆಯ ಬಗ್ಗೆಯೇ ಜನ ಪ್ರಶ್ನೆ ಕೇಳಬಹುದು. ಸರ್ಕಾರದ ಚುಕ್ಕಾಣಿ ಹಿಡಿದಿರುವ ಆಡಳಿತ ಪಕ್ಷದ ಪ್ರಜಾಪ್ರಭುತ್ವವಾದಿ ಬದ್ಧತೆಯನ್ನೇ ಪ್ರಶ್ನಿಸುವ ದಿನಗಳು ಬರಬಹುದು. ಮುಂದಿನ ದಿನಗಳಲ್ಲಿ ಅಧಿವೇಶನಗಳ ಕಲಾಪಗಳನ್ನು ಯಶಸ್ವಿಯಾಗಿ ನಡೆಸಿಕೊಂಡು ಹೋಗುವಲ್ಲಿ ಆಡಳಿತ ಪಕ್ಷದ ರಾಜಕೀಯ ಮೌಲ್ಯಗಳು ಪರೀಕ್ಷೆಗೆ ಒಳಪಡಲಿವೆ. ಬಜೆಟ್ ಅಧಿವೇಶನದ ಗತಿ ಮುಂದಿನ ಮಳೆಗಾಲದ ಅಧಿವೇಶನಕ್ಕೂ ಆದಲ್ಲಿ ಆಡಳಿತ ಪಕ್ಷ ಸಂಸದೀಯ ವ್ಯವಸ್ಥೆಗೆ ತಿಲಾಂಜಲಿ ಹೇಳಲು ಸಿದ್ಧವಾಗುತ್ತಿದೆ ಎಂದು ನಾವು ಎಣೆಸಬೇಕಾಗುತ್ತದೆ. ಆ ಸಂದರ್ಭದಲ್ಲಿ ಸಾಂಸದೀಯ ಪ್ರಜಾಪ್ರಭುತ್ವದ ಬಗ್ಗೆ ಪಕ್ಷಗಳ ಧೋರಣೆಗಳನ್ನು ಗಂಭೀರವಾಗಿ ವಿಶ್ಲೇಷಣೆ ಮಾಡುವ ಜವಾಬ್ದಾರಿಯನ್ನೂ ನಾವು ತೋರಬೇಕಾಗುತ್ತದೆ.

ಪ್ರೊ. ರವೀಂದ್ರ ರೇಷ್ಮೆ

ಅಸೆಂಬ್ಲಿ ಫಲಿತಾಂಶ - ಪಕ್ಷ ರಾಜಕಾರಣದ ಪತನ

June 2018

ಡಾ.ಟಿ.ಆರ್.ಚಂದ್ರಶೇಖರ

ಭಾರತದಲ್ಲಿ ಬ್ಯಾಂಕಿಂಗ್ ಬುಡ ಗಡಗಡ!

May 2018

ಸುಧೀಂದ್ರ ಹಾಲ್ದೊಡ್ಡೇರಿ

ಬೆಳ್ಳಂದೂರಿನಲ್ಲಿ ನೊರೆ ಹೊತ್ತಿ ಉರಿದೊಡೆ...!

May 2018

ರಹಮತ್ ತರೀಕೆರೆ

ಪ್ರತಿಮೆಗಳ ರಾಜಕಾರಣ

April 2018

ಹನುಮಂತರೆಡ್ಡಿ ಶಿರೂರು

ಸಿದ್ದರಾಮಯ್ಯನವರ ಕಲ್ಯಾಣ ರಾಜ್ಯ !

April 2018

ದಾಸನೂರು ಕೂಸಣ್ಣ

ಒಳ ಮೀಸಲಾತಿಏಕೆ ಬೇಕು?

March 2018

ಡಿ. ಎಸ್. ನಾಗಭೂಷಣ

ಕನ್ನಡ ಮೊದಲು ನಂತರ ಇಂಗ್ಲಿಷ್

March 2018

ಡಾ.ಕಿರಣ್ ಎಂ.ಗಾಜನೂರು

‘ನಿಮ್ಮ ದನದ ಬಾಲ ನೀವೇ ಇಟ್ಟುಕೊಳ್ಳಿ’

February 2018