2nd ಎಪ್ರಿಲ್ ೨೦೧೮

ಬುದ್ಧನ ನಾಡಿನಲ್ಲಿ...

ಅಮರಜಾ ಹೆಗಡೆ

ವಿಶಾಲವಾದ ರಸ್ತೆಗಳು, ಎಲ್ಲೆಡೆಯೂ ಹಸಿರಿನಿಂದ ನಳನಳಿಸುತ್ತಿರುವ ಸ್ವಚ್ಛ, ಸುಂದರ, ಶಾಂತ ಪರಿಸರ, ಮೆಲುದನಿಯ ಅಸಂಖ್ಯಾತ ದೇಶವಿದೇಶಗಳ ಪ್ರವಾಸಿಗರು, ಸುಸಜ್ಜಿತ ಹೋಟೆಲ್ಲು— ಲಾಡ್ಜಿಂಗುಗಳು—ಇವನ್ನೆಲ್ಲ ನೋಡುತ್ತಿದ್ದರೆ ಮೈಮನಸ್ಸುಗಳು ಪುಳಕಗೊಳ್ಳುತ್ತವೆ.

ಬುದ್ಧಂ ಶರಣಂ ಗಚ್ಛಾಮಿ
ದಮ್ಮಂ ಶರಣಂ ಗಚ್ಛಾಮಿ
ಸಂಘಂ ಶರಣಂ ಗಚ್ಛಾಮಿ

ಬೋಧಗಯಾಗೆ ಕಾಲಿಡುವ ಯಾತ್ರಿಕರನ್ನು ಆತ್ಮೀಯವಾಗಿ ಸ್ವಾಗತಿಸುತ್ತದೆ ಅಲ್ಲಿ ಅನುಗಾಲವೂ ಮಂದ್ರಸ್ವರದಲ್ಲಿ ಎಲ್ಲೆಡೆ ಅನುರಣಿಸುತ್ತಿರುವ ಈ ಬೌದ್ಧಮಹಾಮಂತ್ರ. ಬುದ್ಧನ ಜೀವನಕ್ಕೆ ಸಂಬಂಧಿಸಿದ ನಾಲ್ಕು ಕ್ಷೇತ್ರಗಳಲ್ಲಿ—ಲುಂಬಿನಿ(ನೇಪಾಳ), ಬೊಧಗಯಾ, ಸಾರನಾಥ, ಖುಷಿನಗರ— ಬೋಧಗಯಾಕ್ಕೆ ವಿಶೇಷ ಸ್ಥಾನವಿದೆ. ಕ್ರಿ.ಪೂ. 613ರ ವೈಶಾಖ ಮಾಸದ ಪೂರ್ಣಿಮೆಯಂದು ಸತ್ಯ, ಶಾಂತಿ, ಅಹಿಂಸೆಯ ಹರಿಕಾರನಾದ ಸಿದ್ಧಾರ್ಥನು ಬುದ್ಧನಾದಂತಹ ಈ ಸ್ಥಳವು, ಹಿಂದೂಗಳಿಗೆ ಕಾಶಿಯಂತೆ, ಮುಸ್ಲಿಮರಿಗೆ ಮೆಕ್ಕಾದಂತೆ, ಬೌದ್ಧಮತ ಅನುಯಾಯಿಗಳಿಗೆ ಅತ್ಯಂತ ಪ್ರಿಯವೂ, ಪವಿತ್ರವೂ ಆದ ಬಹು ದೊಡ್ಡ ಪುಣ್ಯಕ್ಷೇತ್ರವಾಗಿದೆ.

ಫಲ್ಗು ನದಿಯ ತೀರದಲ್ಲಿರುವ ಪುರಾಣ ಪ್ರಸಿದ್ಧವಾದ ಗಯಾ ಕ್ಷೇತ್ರದ ಒಂದು ಭಾಗವಾದ ಬ್ರಹ್ಮ ಗಯಾ ಹಿಂದೂಗಳ ಯಾತ್ರಾಸ್ಥಳವಾದರೆ ಇನ್ನೊಂದು ಭಾಗವಾದ ಬೋಧಗಯಾ ವಿಶ್ವದ ಬೌದ್ಧರ ಯಾತ್ರಾಸ್ಥಳವಾಗಿದೆ. ಅತ್ಯಂತ ಕಿರಿದಾದ ರಸ್ತೆಗಳು, ದುರ್ನಾತ ಬೀರುವ ಚರಂಡಿಗಳು, ಇಕ್ಕಟ್ಟಾದ ಗಲ್ಲಿಗಳು, ಗದ್ದಲ—ಗಡಿಬಿಡಿಯಿಂದ ಕೂಡಿದ ಜನ ಹಾಗೂ ವಾಹನ ಸಂದಣಿಗಳಿಂದ ತುಂಬಿರುವ ಬ್ರಹ್ಮಗಯಾದಿಂದ ಕೇವಲ 10—12 ಕಿ.ಮಿ. ದೂರವಿರುವ ಬೋಧಗಯಾಗೆ ಬಂದೊಡನೆ ಒಮ್ಮೆಲೇ ಮತ್ತೊಂದು ಪ್ರಪಂಚಕ್ಕೆ ಬಂದ ಅನುಭವವಾಗುತ್ತದೆ! ವಿಶಾಲವಾದ ರಸ್ತೆಗಳು, ಎಲ್ಲೆಡೆಯೂ ಹಸಿರಿನಿಂದ ನಳನಳಿಸುತ್ತಿರುವ ಸ್ವಚ್ಛ, ಸುಂದರ, ಶಾಂತ ಪರಿಸರ, ಮೆಲುದನಿಯ ಅಸಂಖ್ಯಾತ ದೇಶವಿದೇಶಗಳ ಪ್ರವಾಸಿಗರು, ಸುಸಜ್ಜಿತ ಹೋಟೆಲ್ಲು— ಲಾಡ್ಜಿಂಗುಗಳು —ಇವನ್ನೆಲ್ಲ ನೋಡುತ್ತಿದ್ದರೆ ಮೈಮನಸ್ಸುಗಳು ಪುಳಕಗೊಳ್ಳುತ್ತವೆ.

ವಿಶ್ವಪರಂಪರೆಯ ತಾಣವಾಗಿ ಸಂರಕ್ಷಿಸಲ್ಪಟ್ಟ 180 ಅಡಿ ಎತ್ತರದ ಗೋಪುರವುಳ್ಳ ಇಟ್ಟಿಗೆಯಿಂದ ಕಟ್ಟಲಾದ ಮಹಾಬೋಧಿವಿಹಾರವು ಬೋಧಗಯಾದ ಪ್ರಖ್ಯಾತವಾದ ಪ್ರಾಚೀನ ದೇವಾಲಯವಾಗಿದೆ. ದ್ರಾವಿಡ ಶೈಲಿಯ ವಾಸ್ತುಶಿಲ್ಪವಾಗಿದ್ದು ಇಂದಿಗೂ ತನ್ನ ಮೂಲರೂಪವನ್ನು ಉಳಿಸಿಕೊಂಡಿರುವ ಈ ವಿಹಾರವು ಮೌರ್ಯ ಸಾಮ್ರಾಟ ಅಶೋಕನಿಂದ ನಿರ್ಮಿಸಲ್ಪಟ್ಟಿತೆಂದು ಹೇಳಲಾಗುತ್ತದೆ. ರಾಜಾ ಅಶೋಕನು ಮೊದಲ 30 ಅಡಿ ಗೋಪುರ ನಿರ್ಮಾಣ ಮಾಡಿದ್ದು ನಂತರ ದೊರೆ ಸಮುದ್ರಗುಪ್ತ ಹಾಗೂ ಆ ನಂತರದ ಅರಸರು ಗೋಪುರವನ್ನು 150 ಅಡಿ ಎತ್ತರಕ್ಕೆ ಏರಿಸಿ ಈ ದೇವಾಲಯದ ಜೀರ್ಣೋದ್ಧಾರವನ್ನು ಮಾಡಿಸುತ್ತ ಬಂದರೆಂದು ಅವರ ಶಾಸನಗಳಿಂದ ತಿಳಿದುಬರುತ್ತದೆ. 7 ಕೆ.ಜಿ.ಗಳಷ್ಟು ಚಿನ್ನವನ್ನು ಗೋಪುರಕ್ಕೆ ಉಪಯೋಗಿಸಲಾಗಿದೆ.

ಗೋಪುರದ ಕೆಳಭಾಗದಲ್ಲಿ ನಾಲ್ಕು ದಿಕ್ಕುಗಳಲ್ಲಿ ಅದೇ ಆಕಾರದ ಸಣ್ಣ ಗೋಪುರಗಳಿವೆ. ವಜ್ರಾಸನ ಅಥವಾ ಜ್ಞಾನಸ್ಥಲವಾಗಿ ಬುದ್ಧತ್ವ ಪ್ರಾಪ್ತಿಗೆ ವಜ್ರಸಂಕಲ್ಪನಾಗಿ ಸಮಾಧಿಯಲ್ಲಿ ಕುಳಿತ ಹೊಂಬಣ್ಣದ ಶಾಂತ, ಸೌಮ್ಯಭಾವದ ಬುದ್ಧನ ವಿಗ್ರಹದ ಸೌಂದರ್ಯವು ಯಾತ್ರಿಕರಲ್ಲಿ ಧನ್ಯತೆಯನ್ನು ಉಂಟುಮಾಡುತ್ತದೆ. ಈ ಮಂದಿರದ ಗೋಡೆಗಳಲ್ಲಿ ಸುತ್ತಲೂ ಜಾತಕ ಕಥೆಗಳನ್ನು ಕೆತ್ತಲಾಗಿದೆ. ಸುಮಾರು ಎರಡು ಮೀಟರ್ ಎತ್ತರದ ಕಲ್ಲಿನ ಆವರಣದಿಂದ ಈ ದೇಗುಲವು ಸುತ್ತುವರೆದಿದೆ. ಮಹಾಬೋಧಿವಿಹಾರದ ಸುತ್ತಲೂ ಗೌತಮನು ಬುದ್ಧತ್ವ ಪ್ರಾಪ್ತಿಯಾದ ನಂತರದ ಏಳು ವಾರಗಳನ್ನು ಧ್ಯಾನಸ್ಥ ಸ್ಥಿತಿಯಲ್ಲಿ ಕಳೆದ ಸ್ಥಳಗಳು ಬೌದ್ಧರಿಗೆ ಪೂಜನೀಯವೆಂದು ಪರಿಗಣಿಸಲ್ಪಡುತ್ತವೆ. ಪೂರ್ವದಿಕ್ಕಿಗೆ ಮಹಾದ್ವಾರವನ್ನು ಹೊಂದಿದ ಮಂದಿರದ ಹಿಂಭಾಗದಲ್ಲಿ ಅಂದರೆ ಪಶ್ಚಿಮ ದಿಕ್ಕಿನಲ್ಲಿರುವ ಪ್ರಖ್ಯಾತವಾದ ಅಶ್ವತ್ಥವೃಕ್ಷವು ಬುದ್ಧನು ಮೊದಲ ವಾರವನ್ನು ಕಳೆದ ಸ್ಥಳವಾಗಿದೆ.

ಈ ಬೋಧಿವೃಕ್ಷದ ಅಡಿಯಲ್ಲಿಯೇ ಗೌತಮನಿಗೆ ಜೀವನದ ಪರಮಸತ್ಯದ ಅರಿವಾದದ್ದು. ಇಂದು ಇಲ್ಲಿ ಕಾಣುವ ಬೋಧಿವೃಕ್ಷವು ಸುಮಾರು ಒಂದು ಶತಮಾನದಷ್ಟು ಹಳೆಯದಾಗಿದ್ದು ಮೂಲವೃಕ್ಷದ ಬೀಜಗಳಿಂದ ಹಲವಾರು ಬಾರಿ ಜೀವದಾನ ಪಡೆದಿರುವಂತಹುದಾಗಿದೆ. ಅನಿಮೇಷಲೋಚನನಾಗಿ ತಪಸ್ಸು ಮಾಡುತ್ತಾ ವಟವೃಕ್ಷವನ್ನು ನೋಡುತ್ತ ಧ್ಯಾನಿಸಿದ್ದು ಎರಡನೇ ವಾರ. ಮಂದಿರದ ಉತ್ತರ ದಿಕ್ಕಿನಲ್ಲಿ ಚಕ್ರಮರಾ ಸ್ಥಳವಿದೆ. ಅದು ಬುದ್ಧನು ಓಡಾಡುತ್ತ ಧ್ಯಾನಿಸಿದ ಸ್ಥಳವಾಗಿದೆ. ಅಲ್ಲಿ ಗೋಲಾಕಾರದ ಕಪ್ಪು ಶಿಲೆಯ ಮೇಲೆ ಬುದ್ಧನ ಚರಣ ಚಿಹ್ನೆಗಳಿವೆ. ಮಂದಿರದ ಇನ್ನೊಂದು ಪಕ್ಕದಲ್ಲಿ ನಾಲ್ಕನೇ ವಾರದಂದು ಚಿಂತನಮುದ್ರೆಯಲ್ಲಿ ಬುದ್ಧನು ತಪಸ್ಸುಗೈದ ರತನಘರ್ ಎಂಬ ಸ್ಥಳವಿದೆ. ಮಹಾವಿಹಾರದ ಮುಂಭಾಗದಲ್ಲಿ ನ್ಯಗ್ರೋಧ ವೃಕ್ಷದ ಕೆಳಗೆ ತನ್ನ ಐದನೆಯ ವಾರವನ್ನು ಬುದ್ಧನು ಕಳೆದನೆಂದು ಹೇಳಲಾಗುತ್ತದೆ. ಆ ವೃಕ್ಷದ ಒಂದು ತುಂಡನ್ನು ಅಲ್ಲಿ ಸಂರಕ್ಷಿಸಿ ಇಡಲಾಗಿದೆ. ಆರನೆಯ ವಾರವನ್ನು ಮಾಚಲಿಂದ ಸರೋವರದ ಮಧ್ಯೆ ಹಾಗೂ ಏಳನೆಯ ವಾರವನ್ನು ರಾಜಾಯತನ ವೃಕ್ಷದ ಕೆಳಗೆ ಧ್ಯಾನಮಗ್ನನಾಗಿ ಕಳೆದ ಬುದ್ಧನು ಅಲ್ಲಿಂದ ಸಾರನಾಥಕ್ಕೆ ತೆರಳಿ ತನ್ನ ಮೊದಲ ಉಪದೇಶವನ್ನು ಪ್ರಮುಖ ಐವರು ಶಿಷ್ಯರಿಗೆ ನೀಡಿದನು ಎಂಬುದು ಐತಿಹ್ಯ.

ಬುದ್ಧನ ಈ ನಾಡಿನಲ್ಲಿ ಚೈನಾ, ನೇಪಾಳ, ಬಾಂಗ್ಲಾ, ಶ್ರೀಲಂಕಾ, ಟಿಬೆಟ್, ಜಪಾನ್, ಥೈಲ್ಯಾಂಡ್, ಬರ್ಮಾ —ಹೀಗೆ ಬೇರೆಬೇರೆ ದೇಶಗಳ ಬೌದ್ಧಭಕ್ತರು ತಮ್ಮತಮ್ಮ ದೇಶಗಳ ವಾಸ್ತುಶಿಲ್ಪವನ್ನಾಧರಿಸಿ ಕಟ್ಟಿಸಿದ ಸಾಕಷ್ಟು ಪ್ರಾರ್ಥನಾ ಮಂದಿರಗಳಿವೆ. ಒಂದೊಂದು ಕಟ್ಟಡದ ವಿನ್ಯಾಸವೂ ಅತಿ ವಿಶಿಷ್ಟವಾಗಿದ್ದು ಮನಮೋಹಕವೆನಿಸಿದೆ. ಇಲ್ಲಿನ ಗೋಡೆಗಳಲ್ಲಿ ಸುಂದರವಾಗಿ ಬಿಂಬಿಸಲಾಗಿರುವ ಸಿದ್ಧಾರ್ಥನ ಮನಃಪರಿವರ್ತನೆಗೆ ಕಾರಣವಾದ ಘಟನೆಗಳ ಚಿತ್ರಗಳು ಹಾಗೂ ಬುದ್ಧನ ಜೀವನಕ್ಕೆ ಸಂಬಂಧಿಸಿದ ಹಲವಾರು ಚಿನ್ನಲೇಪಿತ ವರ್ಣಚಿತ್ರಗಳಿಂದ ಆ ಮಂದಿರಗಳು ಕಂಗೊಳಿಸುತ್ತಿವೆ. ಬೋಧಗಯಾದಲ್ಲಿ ಇನ್ನೊಂದು ನೋಡಲೇ ಬೇಕಾದಂತಹ ವಿಶೇಷಸ್ಥಳವೆಂದರೆ ಕಲ್ಲಿನಲ್ಲಿ ನಿರ್ಮಿಸಿರುವ ಬುದ್ಧನ ಬೃಹತ್ ವಿಗ್ರಹ. ವಿಶಾಲವಾದ ಬಯಲಿನಲ್ಲಿ, ಸುಂದರ ಉದ್ಯಾನವನದ ನಡುವೆ ಧ್ಯಾನಸ್ಥ ಮುದ್ರೆಯಲ್ಲಿ ಅರಳಿದ ಕಮಲದ ಮೇಲೆ ಕುಳಿತ 80 ಅಡಿ ಎತ್ತರದ ಬುದ್ಧನ ಪ್ರತಿಮೆ ನಿಜಕ್ಕೂ ಅವರ್ಣನೀಯ.

ಮನಸ್ಸು ಹಾಗೂ ಹೃದಯವನ್ನು ಶಾಂತಿಯ ಕಡಲಾಗಿಸುವ, ಮಾತೇ ಮರೆತು ದಿವ್ಯ ಮೌನವು ನಮ್ಮನ್ನಾವರಿಸಿ ನಮ್ಮೊಳಗಿನ ಸತ್ಯವನ್ನು ಕಂಡುಕೊಳ್ಳಲು ನಮ್ಮನ್ನು ಅಣಿಗೊಳಿಸುವ ಬೋಧಗಯಾ ಒಮ್ಮೆ ನೋಡಲೇಬೇಕಾದಂತಹ ಸ್ಥಳವಾಗಿದೆ. ಬಿಹಾರದ ರಾಜಧಾನಿ ಪಾಟ್ನಾ ನಗರದಿಂದ ಸುಮಾರು 55—60 ಮೈಲು ದೂರದಲ್ಲಿರುವ ಬೋಧಗಯಾಕ್ಕೆ ದೇಶದ ಎಲ್ಲಾ ಪ್ರಮುಖ ನಗರಗಳಿಂದ ಬಸ್ಸು—ರೈಲು ಹಾಗೂ ವಿಮಾನ ಸೌಲಭ್ಯವಿದೆ.

ಡಾ.ಜಗದೀಶ ಕೆರೆನಳ್ಳಿ

ಜನ್ನನ ಯಶೋಧರ ಚರಿತೆಯಲ್ಲಿ ಪರಿಸರ ವರ್ಣನೆ

ಜುಲೈ ೨೦೧೮

ರೇಣುಕಾ ನಿಡಗುಂದಿ

ಹಾಲುಂಡ ತವರೀಗಿ ಏನೆಂದು ಹಾಡಲೆ

ಜುಲೈ ೨೦೧೮

ನನ್ನ ಕ್ಲಿಕ್

ಜುಲೈ ೨೦೧೮

ಡಾ.ಧರಣಿದೇವಿ ಮಾಲಗತ್ತಿ

ಡುಂಡುಭ ವಿಲಾಪ

ಜುಲೈ ೨೦೧೮

ಡಾ.ಧರಣಿದೇವಿ ಮಾಲಗತ್ತಿ

‘ಪಾದುಕಾ ಕಿರೀಟಿ’

ಜುಲೈ ೨೦೧೮

ಮಂಜುನಾಥ್ ಲತಾ

ಕನ್ನಡ ಸಿನಿಮಾ: ಹೊಸ ಹರಿವು, ಅರಿವು

ಜುಲೈ ೨೦೧೮

ಎಚ್.ಗೋಪಾಲಕೃಷ್ಣ

ನಮ್ಮಟ್ಟೀಲಿ ಏನಾಯ್ತಂದ್ರ...

ಜುಲೈ ೨೦೧೮

ಡಾ.ವಿನಯಾ ಒಕ್ಕುಂದ

ಲಕ್ಷ್ಮೀಶನ ಜೈಮಿನಿ ಭಾರತ ಸೀತಾ ಪರಿತ್ಯಾಗ

ಜೂನ್ ೨೦೧೮

ಪ್ರೊ.ಜಿ.ಎಚ್.ಹನ್ನೆರಡುಮಠ

ಓಡಿ ಹೋದ ದ್ವೆವಗಳು

ಜೂನ್ ೨೦೧೮

ನನ್ನ ಕ್ಲಿಕ್

ಜೂನ್ ೨೦೧೮

ಮೂಡ್ನಾಕೂಡು ಚಿನ್ನಸ್ವಾಮಿ

ಸಂಕಟದ ಪ್ರೇಮಿ

ಜೂನ್ ೨೦೧೮

ಹೇಮಲತಾ ಮೂರ್ತಿ

ವಿಷ ಕುಡಿದ ಮಕ್ಕಳು

ಜೂನ್ ೨೦೧೮

ಮ.ಶ್ರೀ.ಮುರಳಿ ಕೃಷ್ಣ

ಸಂಬಂಧಗಳ ನವಿರು ನಿರೂಪಣೆ ದಿ ಕೇಕ್‍ಮೇಕರ್

ಜೂನ್ ೨೦೧೮

ಬಾಲಚಂದ್ರ ಬಿ.ಎನ್.

ಕರುನಾಡ ಕದನ

ಜೂನ್ ೨೦೧೮

ಡಾ.ಮ್ಯಾಥ್ಯೂ ಕೆ.ಎಮ್.

ನಾಗಚಂದ್ರನ ರಾಮಚಂದ್ರ ಚರಿತ ಪುರಾಣಂ

ಮೇ ೨೦೧೮

ಆರಿಫ್ ರಾಜಾ

...ಇದೀಗ ಎರಡು ನಿಮಿಷವಾಯಿತು!

ಮೇ ೨೦೧೮

ರಾಜು ಹೆಗಡೆ

ತೇಲುವ ಊರಿನ ಕಣ್ಮರೆ!

ಮೇ ೨೦೧೮

ನನ್ನ ಕ್ಲಿಕ್

ಮೇ ೨೦೧೮

ಎಸ್.ಬಿ.ಜೋಗುರ

ಗರ್ದಿ ಗಮ್ಮತ್ತು

ಮೇ ೨೦೧೮

ಪ್ರಸಾದ್ ನಾಯ್ಕ್

ಕ್ವೀನ್ ಆಫ್ ಕಟ್ವೆ ಕೊಂಪೆಯಲ್ಲರಳಿದ ಕಮಲ

ಮೇ ೨೦೧೮

ಪ್ರೀತಿ ನಾಗರಾಜ್

ಮನಿಗ್ಯಷ್ಟು ಕ್ವಟ್ಟರಂತೆ?

ಮೇ ೨೦೧೮

ಪ್ರೊ. ಜಿ. ಎಚ್. ಹನ್ನೆರಡುಮಠ

ಹೂವುಗಳ ನರಕ ಬೆಂಗಳೂರು !

ಎಪ್ರಿಲ್ ೨೦೧೮

ಉಮಾ ಎಚ್. ಎಂ.

ರಾಘವಾಂಕನ ‘ಹರಿಶ್ಚಂದ್ರ ಕಾವ್ಯ’

ಎಪ್ರಿಲ್ ೨೦೧೮

ಕೆ. ಸತ್ಯನಾರಾಯಣ

ನಮ್ಮೂರಲ್ಲೇ ಕಳ್ಳರಿದ್ದರು

ಎಪ್ರಿಲ್ ೨೦೧೮

ವೈಲೆಟ್ ಪಿಂಟೊ

ಸ್ವಗತ (ಕವಿತೆ)

ಎಪ್ರಿಲ್ ೨೦೧೮

ಅಮರಜಾ ಹೆಗಡೆ

ಬುದ್ಧನ ನಾಡಿನಲ್ಲಿ...

ಎಪ್ರಿಲ್ ೨೦೧೮

ಹಜರತಅಲಿ ದೇಗಿನಾಳ

ನಮ್ಮೂರು ಲಂಡನ್‍ಹಳ್ಳ!

ಮಾರ್ಚ್ ೨೦೧೮

ನನ್ನ ಕ್ಲಿಕ್

ಮಾರ್ಚ್ ೨೦೧೮

ಡಾ. ಜಾಜಿ ದೇವೇಂದ್ರಪ್ಪ

ಜನ್ನನ ಯಶೋಧರ ಚರಿತೆ

ಮಾರ್ಚ್ ೨೦೧೮

ಚಿದಂಬರ ಪಿ. ನಿಂಬರಗಿ

ಶಿರೋಳದ ರೊಟ್ಟಿ ಜಾತ್ರೆ

ಮಾರ್ಚ್ ೨೦೧೮

ರಾಜೇಂದ್ರ ಪ್ರಸಾದ್

ರಾಮಮಂದಿರದ ಕನಸು

ಮಾರ್ಚ್ ೨೦೧೮

ಗುರುಪ್ರಸಾದ್ ಡಿ. ಎನ್.

ದಿ ಪೋಸ್ಟ್: ಮಾಧ್ಯಮದ ಹೊಸ ಭರವಸೆ

ಮಾರ್ಚ್ ೨೦೧೮

ಸಾಬೂನು ಚಾಲಿತ ಬೋಟ್

ಮಾರ್ಚ್ ೨೦೧೮

ಬಿದರಹಳ್ಳಿ ನರಸಿಂಹಮೂರ್ತಿ

ಗಂಗೆಗನ್ನಡಿಯಲ್ಲಿ ಗಾಲಿಬ್ ಬಿಂಬ

ಫೆಬ್ರವರಿ ೨೦೧೮

ನನ್ನ ಕ್ಲಿಕ್

ಫೆಬ್ರವರಿ ೨೦೧೮

ಕಟ್ಟ ಕಡೆಯ ಗೆರೆಯ ಮೇಲೆ

ಫೆಬ್ರವರಿ ೨೦೧೮

ಸಂತೋಷ್ ನಾಯಕ್ ಆರ್.

ಬೂದಿ ಒಳಗಣ ಕೆಂಡ ಚಿಕ್ಕಲ್ಲೂರು ಜಾತ್ರೆ

ಫೆಬ್ರವರಿ ೨೦೧೮

ಕೆ.ಎಲ್.ಚಂದ್ರಶೇಖರ್ ಐಜೂರ್

ಸ್ವರ್ಗದ ಮಕ್ಕಳು

ಫೆಬ್ರವರಿ ೨೦೧೮

ಬಣ್ಣ ಬದಲಿಸುವ ಹೂವು

ಫೆಬ್ರವರಿ ೨೦೧೮