2nd ಎಪ್ರಿಲ್ ೨೦೧೮

ನಮ್ಮೂರಲ್ಲೇ ಕಳ್ಳರಿದ್ದರು

ಕೆ. ಸತ್ಯನಾರಾಯಣ

ಇದೇನಿದು, ಕಳ್ಳತನದಂತಹ ಒಂದು ಅಪರಾಧದ ಬಗ್ಗೆ ಕೂಡ ಒಂದು ರೀತಿಯ ಲಹರಿಯಲ್ಲಿ ರಂಜಕವಾಗಿ ವಿವರಿಸುತ್ತಿದ್ದೇನೆಂದು ತಪ್ಪು ತಿಳಿಯಬೇಡಿ.

ಸುಮಾರು ಮೂರೂವರೆ ದಶಕಗಳ ಹಿಂದೆ ಓದಿದ್ದು. ಮಾಕ್ರ್ವೆಜ್‍ನ ಮನೋಜ್ಞ ಕತೆ; ‘ಈ ಊರಿನಲ್ಲಿ ಕಳ್ಳರೇ ಇಲ್ಲ’, ಆದರೆ ನಮ್ಮೂರಿನಲ್ಲೇ ಕಳ್ಳರಿದ್ದರು. ಆ ಕಳ್ಳರೆಲ್ಲ ಊರಿನ ಮೇಷ್ಟರುಗಳಂತೆ, ಪುರೋಹಿತರಂತೆ, ಲೇವಾದೇವಿಗಾರರಂತೆ ಗ್ರಾಮದ ಸಾಂಸ್ಕೃತಿಕ—ಸಾಮಾಜಿಕ ಜೀವನದ ಭಾಗವಾಗಿದ್ದರು. ನಮ್ಮೆಲ್ಲರಿಗೂ ಅವರು ಸೋದರಮಾವ, ಚಿಕ್ಕಪ್ಪ, ದೊಡ್ಡಪ್ಪಂದಿರು, ಭಾವನೆಂಟರಷ್ಟೇ ಪರಿಚಯವಾಗಿದ್ದವರು, ದಿನಬಳಕೆಯವರಾಗಿದ್ದರು, ಒಮ್ಮೊಮ್ಮೆ ರಕ್ತ ಸಂಬಂಧಿಗಳು ಕೂಡ ಆಗಿದ್ದರು ಎಂಬುದನ್ನು ಧೈರ್ಯದಿಂದ ಬರೆಯುವುದಾದರೂ ಹೇಗೆ?

ನಮ್ಮೂರಿನ ಎಲ್ಲ ಕಳ್ಳರ ‘ಗ್ರೇಡು’ ಬೇರೆ ಬೇರೆಯದೇ ಇದ್ದು, ಅದೆಲ್ಲದರ ಖಾನೇಷುಮಾರಿ ನಮಗೆ ಚೆನ್ನಾಗಿ ಗೊತ್ತೇ ಇತ್ತು. ಯಾರು ತರಕಾರಿ ಕದಿಯುತ್ತಾರೆ. ಯಾರು ತೆಂಗಿನಕಾಯಿ ಬೀಳಿಸುತ್ತಾರೆ, ರಾತ್ರೋ—ರಾತ್ರಿ ಕಬ್ಬು, ಭತ್ತಗಳನ್ನು ಗದ್ದೆಯಿಂದ ಬೇರ್ಪಡಿಸಿ ಬೇರೆ ಕಡೆಗೆ ಸಾಗಿಸುತ್ತಾರೆ, ಯಾರು ಒಣಗಿ ಹಾಕಿದ ಬಟ್ಟೆಗಳನ್ನು ಕದಿಯುತ್ತಾರೆ —ಇದೆಲ್ಲವೂ ಎಲ್ಲರ ಸಾಮಾನ್ಯ ಜ್ಞಾನದ ಭಾಗವಾಗಿತ್ತು. ಮಾತ್ರವಲ್ಲ, ಹೀಗೆ ಕದ್ದ ಮಾಲು ಎಲ್ಲಿಗೆ ತಲುಪಿದೆ, ಯಾರಿಗೆ ತಲುಪಿದೆ ಎಂಬುದು ಕೂಡ ಕರಾರುವಾಕ್ಕಾಗಿ ಗೊತ್ತಿದ್ದು, ಪತ್ತೆ ಹಚ್ಚಿ ಕೂಡ ವಾಪಸ್ ತರಲಾಗುತ್ತಿತ್ತು. ಹೀಗೆ ವಾಪಸ್ ಬಂದ ಪದಾರ್ಥಗಳನ್ನು ನಾವ್ಯಾರೂ ಶ್ರೀರಾಮಚಂದ್ರನಂತೆ ಅಗ್ನಿ ಪರೀಕ್ಷೆಯೆಂಬ ತಲೆಹರಟೆ ಮಾಡಲು ಹೋಗದೆ, ಒಳ್ಳೆಯ ಮನಸ್ಸಿನಿಂದಲೇ ಸ್ವೀಕರಿಸುತ್ತಿದ್ದೆವು. ಇಂತಹ ಪದಾರ್ಥವನ್ನು ಇಷ್ಟು ಪ್ರಮಾಣದಲ್ಲಿ ಕದ್ದವನು ಎಷ್ಟು ದಿವಸ ಊರಿಂದ ದೇಶಾಂತರ ಹೋಗಿರುತ್ತಾನೆ ಎಂಬುದರ ಒಂದು ಸುಮಾರಾದ ಅಂದಾಜು ಕೂಡ ನಮಗಿತ್ತು. ಈ ಅಂದಾಜಿಗನುಗುಣವಾಗಿ ಕಳ್ಳರು ಊರಿಗೆ ವಾಪಸು ಬಂದು ಗುಟ್ಟಾಗಿ ಮನೆ ಸೇರಿಕೊಂಡು ಇನ್ನೂ ಗುಟ್ಟಾಗಿ ಸಂಸಾರ ನಡೆಸುತ್ತಿದ್ದರು. ಗುಟ್ಟು ಎಷ್ಟು ದಿನ ರಟ್ಟಾಗದೇ ಇರಲು ಸಾಧ್ಯ! ಒಂದೊಂದು ಸಲ ನಮ್ಮೂರಿನ ಬಹುಪಾಲು ಕಳ್ಳರು ದೇಶಾಂತರದಿಂದ ಒಟ್ಟಿಗೇ ವಾಪಸು ಬಂದುಬಿಟ್ಟಾಗ ಊರತುಂಬಾ ಒಂದು ರೀತಿಯ ಆತಂಕ. ಕುಂಬಳಕಾಯಿ, ಬಾಳೆಹಣ್ಣು, ತೆಂಗಿನಕಾಯಿ, ಮನೆ ಮುಂದೆ ಒಣಗಿಹಾಕಿದ್ದ ಕಾಳು ಕಡ್ಡಿ, ಸೌದೆ ಸೊಪ್ಪುಗಳ ಬಗ್ಗೆ ವಿಶೇಷ ಗಮನ ಕೊಡಬೇಕಾಗುತ್ತಿತ್ತು. ಎಷ್ಟೇ ಗಮನವಿಟ್ಟಿದ್ದರೂ ಕಳ್ಳರು ಅವರದೇ ಒಂದು ವೃತ್ತಿಲಯದಲ್ಲಿ ತಮ್ಮ ಕೈಚಳಕ ತೋರಿಸಿಯೇಬಿಡುವರು.

ಸೇಲಂನ ಷಣ್ಮುಗಂನಂತೆ ನಮ್ಮೂರ ಯಾವ ಕಳ್ಳರೂ ಶಾಶ್ವತವಾಗಿ ದೇಶಾಂತರ ಹೋಗುವ ಗ್ರೇಡಿನವರಾಗಲಿಲ್ಲವಲ್ಲ ಎಂಬ ಕೊರಗು ನಮಗೂ ಇತ್ತು. ಸೇಲಂನಿಂದ ಬರುತ್ತಿದ್ದ ಒಂದು ಬಸ್‍ನ ಟಾಪ್‍ನಿಂದ ಬಹು ಹಿಂದೆ ಒಂದು ಮಧ್ಯಾಹ್ನ ಎರಡು ಸೀರೆ ಗಂಟುಗಳು ಉರುಳಿ ಬಿದ್ದವು. ಬಸ್ ಮುಂದಕ್ಕೆ ಹೊರಟು ಹೋಯಿತು. ಹೀಗೆ ಊರಿನ ರಸ್ತೆಯ ಮೇಲೆ ಉರುಳಿದ ಸೀರೆಗಳ ಗಂಟು ಇಡೀ ಊರಿಗೆ ಸೇರಿದ್ದಾದ್ದರಿಂದ, ಪಂಚಾಯಿತಿ ಸೇರಿಸಿ ಎಲ್ಲರ ಮನೆಗಳಿಗೂ ಸೀರೆಯನ್ನು ಹಂಚಿದ್ದಾಯಿತು. ಎರಡು ದಿನದ ನಂತರ ಷಣ್ಮುಗಂ ಪ್ರತ್ಯಕ್ಷನಾಗಿ, ಸೇಲಂನ ಸಾಹುಕಾರರು ತನ್ನನ್ನು ಹುಡುಕಿಸುತ್ತಿರುವುದಾಗಿಯೂ, ಸಿಕ್ಕಿಹಾಕಿಕೊಂಡರೆ ಗಲ್ಲು ಶಿಕ್ಷೆ ಮಾಡಿಸುವುದಾಗಿ ಇಡೀ ಸೀಮೆಯೆಲ್ಲ ಹೇಳಿಕೊಂಡು ತಿರುಗುತ್ತಿದ್ದಾರೆಂದು, ತಾನು ಸೀರೆಗಳನ್ನು ಊರೂರಿಗೆ ತಿರುಗುತ್ತಾ ಮಾರುವ ಏಜೆಂಟ್ ಮಾತ್ರವೆಂದು ಪರಿಪರಿಯಾಗಿ ನಿವೇದಿಸಿಕೊಂಡು ಸೀರೆಗಳೆಲ್ಲವನ್ನು ವಾಪಸ್ ಪಡೆದು, ನಮ್ಮೂರಿನಲ್ಲೇ ಶಾಶ್ವತ ನಾಗರೀಕನಾಗಿಬಿಟ್ಟನು. ಇಂತಹ ಷಣ್ಮುಗಂ ಮಟ್ಟವನ್ನು ಮಾತ್ರವಲ್ಲ, ತಾವರೆಕೆರೆಯ ರಾಜಾಚಾರಿಯ ಮಟ್ಟವನ್ನು ಕೂಡ ನಮ್ಮೂರ ಕಳ್ಳರಾಗಲೀ, ನಮ್ಮೂರಾಗಲೀ ಮುಟ್ಟಲಿಲ್ಲ. ಒಬ್ಬ ಲೇಖಕ ಪಡೆಯಬಹುದಾದ, ಪಡೆಯಬೇಕಾದ ಎಲ್ಲ ಅನುಭವಗಳನ್ನು ನಾನು ಬಾಲ್ಯದಲ್ಲಿ ಪಡೆದಿದ್ದೇನೆ. ಒಂದೇ ಒಂದು ಕೊರಗೆಂದರೆ ಕನ್ನವನ್ನು ಕೊರೆಯುವುದು ಹೇಗೆ? ಕೊರೆದ ಕನ್ನ ಹೇಗೆ ಕಾಣುತ್ತದೆ? ಎಂದು ನೋಡದೆ ಬಹುಪಾಲು ಪರಿತಪಿಸಿದ್ದೇನೆ. ಕನ್ನ ಕೊರೆದು ಕಳ್ಳತನ ಮಾಡಬೇಕಾದಷ್ಟು ನಮ್ಮೂರಿನ ಜಿಡಿಪಿ ಇರಲಿಲ್ಲವೆಂದು ಈಗ ಗೊತ್ತಾಗುತ್ತಿದೆ. ಚಿಕ್ಕರಸಿನಕೆರೆಯ ಸಾಹುಕಾರರ ಮನೆ ಗೋಡೆಗೆ ಮೂರು ಕಡೆ ಕನ್ನ ಕೊರೆದದ್ದು ಮಹತ್ವದ ಸುದ್ದಿಯಾಗಿ, ನಾವೆಲ್ಲ ನಮ್ಮೂರಿನಿಂದ ಪ್ರವಾಸ ಹೊರಟು ಕನ್ನ ದರ್ಶನ ಮಾಡಿಕೊಂಡು ಬಂದಿದ್ದೆವು.

ಇದೇನಿದು, ಕಳ್ಳತನದಂತಹ ಒಂದು ಅಪರಾಧದ ಬಗ್ಗೆ ಕೂಡ ಒಂದು ರೀತಿಯ ಲಹರಿಯಲ್ಲಿ ರಂಜಕವಾಗಿ ವಿವರಿಸುತ್ತಿದ್ದೇನೆಂದು ತಪ್ಪು ತಿಳಿಯಬೇಡಿ. ಗ್ರಾಮವು ಕಳ್ಳರ ಅಪರಾಧವನ್ನು ಗಂಭೀರವಾಗಿ ಪರಿಗಣಿಸಿ ಪಂಚಾಯಿತಿ ಸೇರಿಸಿ ಶಿಕ್ಷೆಯನ್ನು ಕೂಡ ನೀಡುತ್ತಿತ್ತು. ಇಂತವರ ಹೊಲದಲ್ಲೋ, ಗದ್ದೆಯಲ್ಲೋ ಇಷ್ಟು ದಿನ ಕೂಲಿಯಿಲ್ಲದೆ ಕೆಲಸ ಮಾಡಬೇಕು. ಕದ್ದು ಮಾರಾಟ ಮಾಡಿಬಿಟ್ಟಿರುವ ಪದಾರ್ಥದ ಮೌಲ್ಯವನ್ನು ಬಡ್ಡಿ ಸಮೇತ ಕಂತುಗಳಲ್ಲಿ ತೀರಿಸಬೇಕು. ಕಳ್ಳರಾಗಿದ್ದರೂ ಊರ ಮರ್ಯಾದೆಯ ಬಗ್ಗೆ ನಿಯತ್ತು ಇದ್ದದ್ದರಿಂದ ಬಹುಪಾಲು ಕಳ್ಳರು ಶಿಕೆಯನ್ನು ಯಾವ ತಕರಾರು ಇಲ್ಲದೆ ಅನುಭವಿಸುತ್ತಿದ್ದರು. ಜುಲ್ಮಾನೆಯನ್ನು ಕಟ್ಟಿಬಿಡುತ್ತಿದ್ದರು.

ನಮ್ಮೂರ ಕಳ್ಳರು ಬೇರೊಂದು ಊರಿನಲ್ಲಿ ಕಳ್ಳತನ ಮಾಡುವುದನ್ನು ತಪ್ಪಲ್ಲವೆಂದವರು ಯಾರು? ತಕರಾರು ಬರುತ್ತಿದ್ದುದು ಬೇರೆ ಗ್ರಾಮಗಳ ಪಂಚಾಯತದಾರರು ವಿಧಿಸುತ್ತಿದ್ದ ವಿಪರೀತ ಪ್ರಮಾಣದ ಶಿಕ್ಷೆಯ ಬಗ್ಗೆ. ಅವರವರ ಸ್ವಂತ ಗ್ರಾಮದ ಕಳ್ಳರಾಗಿದ್ದರೆ ಶಿಕ್ಷೆ ವಿಧಿಸುವುದರಲ್ಲು ಒಂದು ರಿಯಾಯಿತಿ. ಬೇಕು ಬೇಕೆಂದೇ ಜಿದ್ದಿಗಾಗಿ ಹೆಚ್ಚಿನ ಶಿಕ್ಷೆ ನೀಡುತ್ತಿದ್ದಾರೆ ಎಂಬ ಕಾರಣಕ್ಕೇ ಮನಸ್ತಾಪ. ಕಳ್ಳರು ಬಂದು ನಮ್ಮೂರ ಮುಖಂಡರಿಗೆ ಅಹವಾಲು ಹೇಳಿಕೊಳ್ಳುವರು. ನಿಯೋಗದಲ್ಲಿ ಹೋಗಿ ಮಾತುಕತೆ ನಡೆಸಿದರೂ ಪರವೂರಿನವರು ಪಟ್ಟು ಬಿಡುತ್ತಿರಲಿಲ್ಲ. ಸರಿ, ಕಳ್ಳರಲ್ಲು ಒಂದು ಜಿದ್ದು ಮೂಡಿ, ಸಮಯ ಸಂದರ್ಭ ಸಾಧಿಸಿ ಪಕ್ಕದೂರುಗಳಲ್ಲಿ ದೊಡ್ಡ ಪ್ರಮಾಣದ ಗಂಭೀರವಾದ ಕಳ್ಳತನವನ್ನೇ ಮಾಡಿಬಿಡುವರು. ಪಕ್ಕದ ಗ್ರಾಮಗಳ ಜಾನುವಾರುಗಳನ್ನು ಇನ್ನೊಂದು ತಾಲ್ಲೂಕಿಗೋ, ಜಿಲ್ಲೇಗೋ ಹೊಡೆದುಕೊಂಡು ಹೋಗಿಬಿಡುತ್ತಿದ್ದರು.

ಇಷ್ಟೆಲ್ಲ ಜಿದ್ದು, ಸೇಡು, ಮನಸ್ತಾಪ ಇದ್ದರೂ ಕಳ್ಳರನ್ನು ಪೊಲೀಸರಿಗೆ ಒಪ್ಪಿಸಕೂಡದು ಎಂಬ ಅಲಿಖಿತ ನಿಯಮವೊಂದು ತುಂಬಾ ಕಾಲ ಚಾಲ್ತಿಯಲ್ಲಿತ್ತು. ಆದರೆ ನಾಗರಿಕತೆಯ ಚರಿತ್ರೆ ಮುಂದುವರಿದಂತೆ ಪೊಲೀಸರಿಗೆ ಕಳ್ಳರನ್ನು ಒಪ್ಪಿಸುವ ಪರಿಪಾಠ ಶುರುವಾಯಿತು. ನಮ್ಮ ಮನೆಯ ಹಿಂದಿನ ಬೀದಿಯಲ್ಲಿದ್ದ ಒಬ್ಬ ಕಳ್ಳನಿಗೆ ಆ ವರ್ಷ ತಾನೆ ಮದುವೆ ಆಗಿತ್ತು. ಚಿಕ್ಕ ಪ್ರಾಯದ ಆಕರ್ಷಕ ಹುಡುಗಿ. ವಿಪರೀತ ಕೆಂಪು ಬಣ್ಣ. ಚಿವುಟಿದರೆ ರಕ್ತ ತೊಟ್ಟಿಕ್ಕುತ್ತದೆ ಎಂದೇ ಎಲ್ಲರೂ ಅಸೂಯೆಯಿಂದ ಆಡಿಕೊಳ್ಳುತ್ತಿದ್ದರು. ಇಂತಹ ಚಂದುಳ್ಳಿ ಚೆಲುವೆಯ ಮನ ಗೆಲ್ಲಲು ನಮ್ಮೂರ ಕಳ್ಳ ಪಕ್ಕದ ಗ್ರಾಮದ ಅಗಸನ ಮನೆಯಿಂದ ಆ ಗ್ರಾಮದ ಗೌಡರ ಸೊಸೆಯ ಸೀರೆಗಳನ್ನು ಸಕಾರಣವಾಗಿ ಕದ್ದುಬಿಟ್ಟ. ಸ್ವಲ್ಪ ದಿನವಾದ ಮೇಲೆ ಪೊಲೀಸರು ಬಂದು ದಸ್ತಗಿರಿ ಮಾಡಿದರು. ಇಷ್ಟು ಹೊತ್ತಿಗೆ ಆತನ ಹೆಂಡತಿ ತುಂಬು ಗರ್ಭಿಣಿ. ಈ ಕಳ್ಳ ನಮ್ಮ ಮನೆಯ ಹಿತ್ತಲಿನಿಂದಲೂ ಎರಡು ಸಲ ಕುಂಬಳಕಾಯಿ ಲಪಟಾಯಿಸಿ ಗಾಮನಹಳ್ಳಿ ಸಂತೆಯಲ್ಲಿ ಮಾರಿದ್ದರೂ, ತಾನು ನಿಜವಾಗಿಯೂ ಕದ್ದಿಲ್ಲವೆಂದು ಹಗಲೆಲ್ಲ ನಮ್ಮ ತಾಯಿಯ ಹತ್ತಿರ ವಾದಿಸುತ್ತಿದ್ದ. ಆ ಶುಕ್ರವಾರ ನಮ್ಮ ತಾಯಿ ಹಿತ್ತಲಿನಲ್ಲಿದ್ದ ತುಳಸಿ ಕಟ್ಟೆಗೆ ಲಕ್ಷ್ಮೀಪೂಜೆ ಮಾಡಿ ಭಾಗ್ಯದಾ ಲಕ್ಷ್ಮೀ ಬಾರಮ್ಮಾ... ಹೇಳುತ್ತಲೇ ಕಣ್ಣು ತುಂಬಾ ನೀರು ತುಂಬಿಕೊಂಡು ಅಳುತ್ತಿದ್ದರು. ಹಿತ್ತಲಿನ ಗೋಡೆಯ ಆಚೆಗಿದ್ದ ಕಳ್ಳನ ಮನೆ ಜಗುಲಿ ಮೇಲೆ ತುಂಬು ಗರ್ಭಿಣಿ ಮಂಕಾಗಿ ಕುಳಿತಿದ್ದಳು. ಪೂಜೆಯೆಲ್ಲ ಮುಗಿದ ಮೇಲೆ ಕೊಡುವ ಸಕ್ಕರೆ, ತುಪ್ಪದ ಪ್ರಸಾದಕ್ಕೆ ಮಕ್ಕಳೆಲ್ಲ ಕಾಯುತ್ತಾ ನಿಂತಿದ್ದೆವು. ಅಮ್ಮ ಅಳುತ್ತಲೇ ಹೇಳಿದರು. ಮನೇನಲ್ಲಿ ತುಂಬು ಗರ್ಭಿಣಿ. ಒಂದೆರಡು ಸೀರೆ ಕದ್ದದ್ದಕ್ಕೆ ಹಾಳು ಪೊಲೀಸರು ಎಳೆದುಕೊಂಡು ಹೋಗಿ ತಿಂಗಳಾನುಗಟ್ಟಲೆ, ವರ್ಷಾನುಗಟ್ಟಲೆ ಜೈಲಿಗೆ ಹಾಕಿದರೆ ಇವಳ ಕತೆ ಏನಾಗಬೇಕು? ಚೊಚ್ಚಲ ಹೆರಿಗೆ ಬೇರೆ. ಯಾರೂ ಮಾಡದ ಕಳ್ಳತನವನ್ನು ಇವನು ಮಾಡಿದನೇನು?

ಯಾರೂ ಮಾಡದೆ ಇರುವ ಕಳ್ಳತನ ಎನ್ನುವುದು ನಮ್ಮ ತಾಯಿಯ ಮಾತಿನ ಮುಖ್ಯವಾದ ಪದಗುಚ್ಛ. ಎಲ್ಲರೂ ಅವರವರ ಶಕ್ತ್ಯಾನುಸಾರ, ಯುಕ್ತಾನುಸಾರ ಮಾಡುವವರೇ ಎಂಬ ನಂಬಿಕೆ ಮತ್ತು ಮೌಲ್ಯಪ್ರಜ್ಞೆ ಈ ಮಾತುಗಳ ಹಿಂದಿದೆ. ತಿಂಡಿ ಪದಾರ್ಥವಿರಬಹುದು, ಹೊಲದಲ್ಲಿ ತೋಟದಲ್ಲಿ ಬೆಳೆದು ನಿಂತ ಫಸಲಿರಬಹುದು, ಹಾಲು ಮೊಸರಿರಬಹುದು, ಸೊಸೈಟಿಯ ಗೋಡೌನ್‍ಗಳಲ್ಲಿರುವ ಗೊಬ್ಬರ, ಯೂರಿಯಾ ಇರಬಹುದು —ಇದೆಲ್ಲವೂ ತುಂಬಿ ತುಳುಕುವಾಗ ಕೊಂಚ ಪ್ರಮಾಣದಲ್ಲಿ ಎಗರಿಸಿಬಿಟ್ಟರೆ ಯಾರಿಗೂ ಗೊತ್ತಾಗುವುದಿಲ್ಲ, ಯಾರೂ ತಲೆ ಕೆಡಿಸಿಕೊಳ್ಳುವುದಿಲ್ಲ ಎಂಬುದು ಯಾರು ಯಾರೊಬ್ಬರಿಗೂ ಹೇಳದೆ ಆದರೆ ಎಲ್ಲರೂ ನಂಬಿದ್ದ ಒಂದು ಸಂಗತಿ. ದೊಡ್ಡ ಬುಟ್ಟಿಯ ತುಂಬಾ ಕಜ್ಜಾಯ ಪೇರಿಸಿಟ್ಟಿದ್ದರೆ ಯಾರಿಗೂ ಗೊತ್ತಾಗದ ಹಾಗೆ ಒಂದು ನಾಲ್ಕು ಕಜ್ಜಾಯವನ್ನು ಜೇಬಿಗಿಳಿಸಿಕೊಂಡು ಪರಾರಿಯಾಗುವಾಗ ಕಾಡುತ್ತಿದ್ದ ಪ್ರಶ್ನೆಯೆಂದರೆ, ಹಾಗೆ ಕದ್ದದ್ದು ಸರಿಯೋ, ತಪ್ಪೋ ಅಲ್ಲವೋ ಎಂಬುದಲ್ಲ. ಎಷ್ಟು ಬೇಗ ಮರೆಯಲ್ಲಿ ಹೋಗಿ ಕಜ್ಜಾಯದ ರುಚಿ ನೋಡಬಹುದೆಂದು. ಇದೇ ತಂತ್ರವನ್ನು ಊರ ಸೊಸೈಟಿಯ ಅಧ್ಯಕ್ಷರು, ಕಾರ್ಯದರ್ಶಿಗಳು ಕೂಡ ಅನುಸರಿಸುತ್ತಿದ್ದರು — ಪರಿಣತ ಕಳ್ಳರ ಸಹಾಯ ಪಡೆದು. ಪ್ರತಿಯೊಂದು ಮೂಟೆಯಿಂದಲೂ ಒಂದರ್ಧ, ಮುಕ್ಕಾಲು ಕೆಜಿ ಗೊಬ್ಬರ ಎಗರಿಸಿ ಮತ್ತೊಂದು ಚೀಲಕ್ಕೆ ತುಂಬಿ ಆ ಚೀಲವನ್ನು ಇನ್ನೊಂದು ಊರಿಗೆ ಹೋಗಿ ಮಾರಿಬಿಡುತ್ತಿದ್ದರು. ಮನೆಗೆ ಇದ್ದಕ್ಕಿದ್ದಂತೆ ನೆಂಟರಿಷ್ಟರು ಅತಿಥಿಗಳಾಗಿ ಬಂದಿಳಿದಾಗ ತಾಯಂದಿರೇ ಮಕ್ಕಳನ್ನು ಕರೆದು ಪಿಸುಮಾತಿನಲ್ಲಿ ಇಂತಿಂತವರ ತೋಟ, ಹಿತ್ತಲಿನಲ್ಲಿ ತರಕಾರಿ ಬೆಳೆದು ನಿಂತಿದೆ, ಯಾರಿಗೂ ಗೊತ್ತಾಗದಂತೆ ಚೂರೇ ಚೂರು ಎಗರಿಸಿಕೊಂಡು ಬಾ ಎಂದು ನೀತಿಪಾಠ ಹೇಳಿಕೊಡುತ್ತಿದ್ದರು. ಇಂತಹ ಕಳ್ಳತನ ಮಾಡುವಾಗ, ಮಾಡಿಸುವಾಗ ಊರವರಿಗೆ ಯಾವ ಪಾಪಪ್ರಜ್ಞೆಯೂ ಇರುತ್ತಿರಲಿಲ್ಲ. ಯಾರಾದರೂ ತೀರಿ ಹೋದಾಗ ಹೆಣ ಸುಡಲು ಬೇಕಾಗುವ ಹತ್ತು ಮಣ ಸೌದೆಯನ್ನು ಗಾಡಿಯಲ್ಲಿ ಸ್ಮಶಾನಕ್ಕೆ ಹೊಡೆಸು ಎಂದು ಭಾವಮೈದುನನನ್ನೋ, ಸೋದರಳಿಯನನ್ನೋ ಕಳಿಸಿದರೆ, ಸೌದೆ ಅಂಗಡಿಗೆ ಹೋಗಿ ಎಂಟು—ಎಂಟೂವರೆ ಮಣ ಸೌದೆಯನ್ನು ಮಾತ್ರವಷ್ಟೆ ಸ್ಮಶಾನಕ್ಕೆ ಹೊಡೆಸುತ್ತಿದ್ದರು. ಒಂದೂವರೆ, ಎರಡು ಮಣದ ಸೌದೆಯ ಮೊತ್ತವನ್ನು ಜೇಬಿಗಿಳಿಸಿದವರೇ ಸ್ಮಶಾನದಲ್ಲಿ ಹೆಣದ ಮುಂದೆ ದುಃಖತಪ್ತರಾಗಿ, ಗಂಭೀರವಾಗಿ ನಿಲ್ಲುವರು.

ಇಷ್ಟೇ ಮುಖ್ಯವಾದ ಇನ್ನೊಂದು ಗಾಢ ನಂಬಿಕೆಯೂ ಇತ್ತು. ಇನ್ನೊಬ್ಬರು ಈಗಾಗಲೇ ಕದ್ದು ತಮ್ಮ ವಶದಲ್ಲಿ ಇಟ್ಟುಕೊಂಡಿರುವ ಪದಾರ್ಥವನ್ನಾಗಲೀ, ಹಣವನ್ನಾಗಲೀ ನಾವು ಮತ್ತೆ ಕದಿಯುವುದು ಎಲ್ಲ ದೃಷ್ಟಿಯಿಂದಲೂ ಲಾಭಕರವೂ, ಕ್ಷೇಮಕರವೂ ಎಂಬುದೇ ಆ ನಂಬಿಕೆ. ಹೆಂಗಸರು, ಗಂಡಸರಿಂದ ಕದ್ದು ಮರೆಮಾಚಿ ಇಟ್ಟುಕೊಂಡಿದ್ದ ಹಣವು ಯಾವ ಬಡುವಿನ ಕೆಳಗೆ, ಯಾವ ದೊಡ್ಡ ಕೊಳದಪ್ಪಲೆಯ ಅಕ್ಕಿ, ರಾಗಿಯ ಮಧ್ಯೆ ಇರುತ್ತೆ ಎಂಬುದರ ಬಗ್ಗೆ ಕರಾರುವಾಕ್ಕಾದ ಮಾಹಿತಿ ಎಲ್ಲರ ಬಳಿಯೂ ಇರೋದು. ಅಥವಾ ಅದನ್ನೇ ಹೊಂಚುಹಾಕಿ ಕಾಯುತ್ತಿದ್ದೆವು. ಅಂತಹ ದುಡ್ಡನ್ನು ನಾವು ಕದ್ದುಬಿಟ್ಟರೆ ಈಗಾಗಲೇ ಮೊದಲು ಕದ್ದಿರುವವರು ಬಾಯಿ ಬಿಡುವ ಹಾಗೇ ಇಲ್ಲ. ಒಂದುಸಲ ನಮ್ಮ ದೊಡ್ಡ ಮನೆಯಲ್ಲಿ ಒಬ್ಬ ಮುದುಕಿ ಗಂಡನ ಪಿಂಚಣಿ ಹಣದಿಂದ ಯಾವುದೋ ಲೆಕ್ಕದಲ್ಲಿ ಒಂದಷ್ಟು ಹಣವನ್ನು ಲಪಟಾಯಿಸಿ ಪೆಟ್ಟಿಗೆಯಲ್ಲಿ ಮುಚ್ಚಿಟ್ಟು ಬೀಗ ಹಾಕಿಟ್ಟಿದ್ದಳು. ಆ ಪೆಟ್ಟಿಗೆಯಿಂದ ಸೊಸೆ ಹಣವನ್ನು ತೆಗೆದುಬಿಟ್ಟು ಬೀಗವನ್ನು ಹಿಂದಿನ ರೀತಿಯಲ್ಲೇ ಜೋಡಿಸಿಬಿಟ್ಟಳು. ಹಿರಿಯಾಕೆ ಎಷ್ಟೋ ದಿನಗಳ ನಂತರ ಪೆಟ್ಟಿಗೆ ತೆಗೆದು ನೋಡಿದರೆ ಹಣವೇ ನಾಪತ್ತೆ. ಯಾರ ಹತ್ತಿರ ಹೇಳಿಕೊಳ್ಳಬೇಕು? ಜ್ಯೋತಿಷಿ ಹತ್ತಿರ ಹೋಗಿ ಶಾಸ್ತ್ರ ಕೇಳಿದಳು. ಸಮೀಪದ ಬಂಧುವೊಬ್ಬರೇ ಅದನ್ನು ಲಪಟಾಯಿಸಿರುವುದಾಗಿ ಕಣಿ ಹೇಳಿದಾಗ, ಆಕೆ ಎಲ್ಲರ ಬಗ್ಗೆಯೂ ಅನುಮಾನ ಪಡುತ್ತಾ ಒಬ್ಬರ ನಂತರ ಇನ್ನೊಬ್ಬರನ್ನು ಕೇಳುತ್ತಾ ಹೋದಳು. ಹಣವೇನೂ ಪತ್ತೆಯಾಗಲಿಲ್ಲ. ಬದಲಿಗೆ ಅವಳೇ ಗಂಡನಿಂದ ಹಣ ಲಪಟಾಯಿಸಿದ್ದ ಸಂಗತಿ ಎಲ್ಲರಿಗೂ ಗೊತ್ತಾಗಿ ಒರಿಜಿನಲ್ ಹಂತದಲ್ಲಿ ಕಳ್ಳತನ ಮಾಡಿದ್ದಕ್ಕಾಗಿ ಕೈ ಕೈ ಹಿಸಿದುಕೊಳ್ಳಬೇಕಾಯಿತು.

ದಾಯಾದಿಯೊಬ್ಬ ಪಕ್ಕದೂರಿನಲ್ಲಿ ಮದುವೆಗೆ ಹೋಗಿದ್ದ. ಮದುವೆಯೆಲ್ಲ ಮುಗಿದ ಮೇಲೆ ವಾಪಸ್ ಹೊರಡುವಾಗ ಛತ್ರದ ಎದುರಿಗಿದ್ದ ಪಾರ್ಕಿನಲ್ಲಿ ಆಟವಾಡುತ್ತಿದ್ದ ಮಗುವೊಂದರ ಕಿವಿಯಿಂದ ವಾಲೆಯನ್ನು ಬಿಚ್ಚಿಕೊಂಡು ಬಂದು ಮನೆಯಲ್ಲಿ ಗುಟ್ಟಾಗಿ ಇಟ್ಟಿದ್ದೇನೆಂದು ಬೀಗುತ್ತಿದ್ದ. ಆದರೆ ಆತ ಮಗುವಿನ ಕಿವಿಯಿಂದ ವಾಲೆಯನ್ನು ತೆಗೆಯುತ್ತಿದ್ದುದನ್ನು ನೋಡಿದ್ದ ಇನ್ನೊಬ್ಬ ದಾಯಾದಿ ಅದೇ ವಾಲೆಯನ್ನು ಮತ್ತೆ ಮರುಕಳುವು ಮಾಡಿ ನಾಲ್ಕನೆಯದೋ, ಆರನೆಯದೋ ಹೆರಿಗೆಗೆ ತವರಿಗೆ ಹೋಗುತ್ತಿದ್ದ ತನ್ನ ಹೆಂಡತಿಯ ಕೈಲಿ ರವಾನಿಸಿಬಿಟ್ಟ. ಆ ಸಾಧ್ವಿ ಶಿರೋಮಣಿ, ತವರೂರು ತಲುಪಿದ ಮೇಲೆ, ವಾಲೆಯನ್ನು ತನ್ನ ಹಿರಿಮಗಳ ಕಿವಿಗೆ ಹಾಕಿ, ತನ್ನ ಗಂಡನೇ ಈಚೆಗೆ ಅದನ್ನು ಮಾಡಿಸಿಕೊಟ್ಟುದಾಗಿ ಜಂಭ ಕೊಚ್ಚಿಕೊಂಡು ಬೀಗುತ್ತಿದ್ದಳು. ಗ್ರಹಚಾರ ಕಡಮೆಯಾಗಿ, ವಾಲೆ ನಿಜವಾಗಿ ಯಾರಿಗೆ ಸೇರಿತ್ತೋ, ಆ ಮಗುವಿನ ತಂದೆ ಆ ಗ್ರಾಮಕ್ಕೂ ಇನ್ನೊಂದು ಮದುವೆಗೆ ಹೋದಾಗ ಕಳ್ಳತನ ಪತ್ತೆಯಾಯಿತು. ಆದರೆ ಮೊದಲ ಹಂತದಲ್ಲಿ ಕಳ್ಳತನ ಮಾಡಿದ್ದವನನ್ನು ಪತ್ತೆ ಹಚ್ಚುವುದು ಸಾಕಷ್ಟು ಕಷ್ಟವೇ ಆಯಿತು. ಈಗ ಹಿನ್ನೋಟದಿಂದ ನೋಡಿದಾಗ ನಮ್ಮೂರಿನ ಜನಕ್ಕೆ ಒರಿಜಿನಲ್ ಮೊದಲ ಹಂತದ ಕಳ್ಳತನಕ್ಕಿಂತ, ಸೆಕೆಂಡ್ ಹ್ಯಾಂಡ್, ಎರಡನೇ ಹಂತದ ಕಳ್ಳತನವೇ ತುಂಬಾ ಇಷ್ಟವಾಗಿ, ಅದಕ್ಕೆಂದೇ ಒಂದು ಗುಟ್ಟಾದ ಅವಿರತ ಸ್ಪರ್ಧೆ, ಊರತುಂಬಾ ನಡೆಯುತ್ತಿತ್ತು ಎಂದು ಕಾಣುತ್ತದೆ.

ಈ ರೀತಿಯ ಮರುಕಳ್ಳತನದಲ್ಲಿ ತಾತ್ವಿಕವಾದ ವಸಾಹತುಶಾಹಿ ವಿರೋಧೀ ಆಯಾಮವು ಕೂಡ ಒಂದಿದೆಯೆಂದು ವಿರೂಪಾಕ್ಷ ಸನ್ನಿಧಿಯಿಂದ ಪ್ರಕಟವಾಗುವ ಗ್ರಂಥಮಾಲಿಕೆಯಲ್ಲಿ ಮೊನ್ನೆ ಓದಿದೆ.

ಸರಕಾರಕ್ಕೆ ಸಲ್ಲಿಸಬೇಕಾದ ಆದಾಯ, ತೆರಿಗೆ, ಫಸಲಿನ ವಿವರಗಳನ್ನು ರೈತರಾಗಲೀ, ಶ್ಯಾನುಭೋಗರಾಗಲೀ ಯಾವತ್ತೂ ಸರಿಯಾಗಿ ವರದಿ ಮಾಡುತ್ತಿರಲಿಲ್ಲ. ಪರಸ್ಪರ ಒತ್ತಾಸೆ — ಕುಮ್ಮಕ್ಕು ಮೂಡಿಸಿಕೊಂಡು ಯಾವಾಗಲೂ ಒಂದು ಪಾಲು ಉಳಿಸಿಕೊಂಡು ಪ್ರಭುತ್ವಕ್ಕೆ ಟೋಪಿ ಹಾಕುತ್ತಿದ್ದರು. ಸರಕಾರವು ಬ್ರಿಟಿಷರದಾದ್ದರಿಂದ ಇಂತಹ ಕಳ್ಳತನವು ಕೂಡ ಸ್ವಾತಂತ್ರ್ಯ ಹೋರಾಟವೆಂದು, ವಸಾಹತುಶಾಹೀ ವಿರೋಧೀ ಭಾವನೆಯೆಂದು ಸಂಸ್ಕೃತಿ ಚಿಂತಕರ ವಾದ. ಶ್ಯಾನುಭೋಗರಿಗೆ ಪೊಗದಸ್ತಾದ ಭಕ್ಷೀಸು ಸಿಗುತ್ತಿದ್ದುದರಿಂದ, ಅವರ ಹತ್ತಿರ ನಿರಂತರವಾಗಿ ಶೇಖರವಾಗುತ್ತಿದ್ದ ಒಡವೆ — ವಸ್ತುಗಳ ಒಂದು ಅಂದಾಜು ಊರವರ ಹತ್ತಿರ ಇದ್ದೇ ಇತ್ತು. ದಾಸ್ತಾನು ಮಿತಿ ಮೀರಿತೆಂದೆನಿಸಿದಾಗ ಹಿಂದೆ ಭಕ್ಷೀಸು ಕೊಟ್ಟವರೇ ಈಗ ಮುಂದೆ ನಿಂತು ಶ್ಯಾನುಭೋಗರ ಮನೆಯಿಂದ ಮರುಕಳ್ಳತನಕ್ಕೆ ತಂತ್ರ ರೂಪಿಸುತ್ತಿದ್ದರು. ಮರುಕಳ್ಳತನದ ತಂತ್ರವನ್ನು ರೂಪಿಸಿದವರೇ ಶ್ಯಾನುಭೋಗರ ನಷ್ಟದ ಬಗ್ಗೆ ಸಂತಾಪವನ್ನೂ ಸೂಚಿಸುತ್ತಿದ್ದರು. ಆದರೆ ತೀರಾ ಮೂಲಕ್ಕೆ ಹೋದರೆ, ಶ್ಯಾನುಭೋಗರಿಗೆ ತಾವು ಕೊಟ್ಟ ಕಾಣಿಕೆಗಳ ವಿವರ, ಆ ದೆಸೆಯಿಂದ ಮೂಡಿದ ಲಾಭವು ಕೂಡ ಬಹಿರಂಗವಾಗಿಬಿಡುವುದೆಂದು ಭಯಬೀಳುತ್ತಿದ್ದರು. ‘ಧರ್ಮೋ ರಕ್ಷತಿ ರಕ್ಷಿತಃ’ ಎನ್ನುವ ಹಾಗೆ ಕಳ್ಳರು ಇನ್ನೊಂದಿಷ್ಟು ಕಳ್ಳರನ್ನು, ಕಳ್ಳತನವು ಇನ್ನೊಂದು ಸ್ತರದ ಕಳ್ಳತನವನ್ನು ಸಹಜವಾಗಿಯೂ, ಪರಸ್ಪರವಾಗಿಯೂ ರಕ್ಷಿಸುತ್ತಿತ್ತು, ಪೋಷಿಸುತ್ತಿತ್ತು. ಹಾಗಾಗಿ ಧರ್ಮವೂ ಸನಾತನವಾಗಿ ಉಳಿಯುತ್ತಿತ್ತು.

ನಾಗರಿಕತೆಯ ವಿಕಾಸವೆಂದರೆ ಒಂದು ಸಂಸ್ಕೃತಿಯು ಕಳ್ಳತನದ ಆತ್ಮೀಯ, ಸ್ಥಳೀಯ, ಬಾವಣಿಕೆಯ ವರಸೆಗಳನ್ನು ಶಾಶ್ವತವಾಗಿ ಕಳೆದುಕೊಳ್ಳುವುದೇ ಆಗಿದೆ. ಈಗ ಪ್ರತಿದಿನವೂ ಕೋಟ್ಯಾಂತರ ರೂಪಾಯಿಗಳ ಹಗರಣ, ಹಗಲುಗಳ್ಳತನದ ವರದಿಗಳನ್ನು ಒಂದರ ಮೇಲೊಂದು ಓದುತ್ತಾ ನಮ್ಮ ಸಾಮಾಜಿಕ ಮನೆವಾರ್ತೆಯ ಭಾಗವಾಗಿ ಸಾಕಷ್ಟು ನಿರುಪದ್ರವಿಯಾಗಿದ್ದ ಕಳ್ಳತನವು ಅದರ ಸಕಲ ವರಸೆಗಳೊಡನೆ ಇನ್ನೆಂದೂ ಬಾರದ ಗತಕಾಲದ ಸಂದಿ ಗೂಡಿಗೆ ಶಾಶ್ವತವಾಗಿ ಸೇರಿಹೋದದ್ದು ಮತ್ತೆ ಮತ್ತೆ ಖಚಿತವಾಗಿ ಮನಸ್ಸಿನ ತುಂಬಾ ವಿಷಾದ ಮೂಡುತ್ತದೆ.

ಮತ್ತೊಮ್ಮೆ ಮಾಕ್ರ್ವೆಜ್‍ಗೆ ಹೇಳುತ್ತೇನೆ,

ನಮ್ಮೂರಿನಲ್ಲಿ ಕಳ್ಳರೇ ಇದ್ದರು.

ಡಾ.ಜಗದೀಶ ಕೆರೆನಳ್ಳಿ

ಜನ್ನನ ಯಶೋಧರ ಚರಿತೆಯಲ್ಲಿ ಪರಿಸರ ವರ್ಣನೆ

ಜುಲೈ ೨೦೧೮

ರೇಣುಕಾ ನಿಡಗುಂದಿ

ಹಾಲುಂಡ ತವರೀಗಿ ಏನೆಂದು ಹಾಡಲೆ

ಜುಲೈ ೨೦೧೮

ನನ್ನ ಕ್ಲಿಕ್

ಜುಲೈ ೨೦೧೮

ಡಾ.ಧರಣಿದೇವಿ ಮಾಲಗತ್ತಿ

ಡುಂಡುಭ ವಿಲಾಪ

ಜುಲೈ ೨೦೧೮

ಡಾ.ಧರಣಿದೇವಿ ಮಾಲಗತ್ತಿ

‘ಪಾದುಕಾ ಕಿರೀಟಿ’

ಜುಲೈ ೨೦೧೮

ಮಂಜುನಾಥ್ ಲತಾ

ಕನ್ನಡ ಸಿನಿಮಾ: ಹೊಸ ಹರಿವು, ಅರಿವು

ಜುಲೈ ೨೦೧೮

ಎಚ್.ಗೋಪಾಲಕೃಷ್ಣ

ನಮ್ಮಟ್ಟೀಲಿ ಏನಾಯ್ತಂದ್ರ...

ಜುಲೈ ೨೦೧೮

ಡಾ.ವಿನಯಾ ಒಕ್ಕುಂದ

ಲಕ್ಷ್ಮೀಶನ ಜೈಮಿನಿ ಭಾರತ ಸೀತಾ ಪರಿತ್ಯಾಗ

ಜೂನ್ ೨೦೧೮

ಪ್ರೊ.ಜಿ.ಎಚ್.ಹನ್ನೆರಡುಮಠ

ಓಡಿ ಹೋದ ದ್ವೆವಗಳು

ಜೂನ್ ೨೦೧೮

ನನ್ನ ಕ್ಲಿಕ್

ಜೂನ್ ೨೦೧೮

ಮೂಡ್ನಾಕೂಡು ಚಿನ್ನಸ್ವಾಮಿ

ಸಂಕಟದ ಪ್ರೇಮಿ

ಜೂನ್ ೨೦೧೮

ಹೇಮಲತಾ ಮೂರ್ತಿ

ವಿಷ ಕುಡಿದ ಮಕ್ಕಳು

ಜೂನ್ ೨೦೧೮

ಮ.ಶ್ರೀ.ಮುರಳಿ ಕೃಷ್ಣ

ಸಂಬಂಧಗಳ ನವಿರು ನಿರೂಪಣೆ ದಿ ಕೇಕ್‍ಮೇಕರ್

ಜೂನ್ ೨೦೧೮

ಬಾಲಚಂದ್ರ ಬಿ.ಎನ್.

ಕರುನಾಡ ಕದನ

ಜೂನ್ ೨೦೧೮

ಡಾ.ಮ್ಯಾಥ್ಯೂ ಕೆ.ಎಮ್.

ನಾಗಚಂದ್ರನ ರಾಮಚಂದ್ರ ಚರಿತ ಪುರಾಣಂ

ಮೇ ೨೦೧೮

ಆರಿಫ್ ರಾಜಾ

...ಇದೀಗ ಎರಡು ನಿಮಿಷವಾಯಿತು!

ಮೇ ೨೦೧೮

ರಾಜು ಹೆಗಡೆ

ತೇಲುವ ಊರಿನ ಕಣ್ಮರೆ!

ಮೇ ೨೦೧೮

ನನ್ನ ಕ್ಲಿಕ್

ಮೇ ೨೦೧೮

ಎಸ್.ಬಿ.ಜೋಗುರ

ಗರ್ದಿ ಗಮ್ಮತ್ತು

ಮೇ ೨೦೧೮

ಪ್ರಸಾದ್ ನಾಯ್ಕ್

ಕ್ವೀನ್ ಆಫ್ ಕಟ್ವೆ ಕೊಂಪೆಯಲ್ಲರಳಿದ ಕಮಲ

ಮೇ ೨೦೧೮

ಪ್ರೀತಿ ನಾಗರಾಜ್

ಮನಿಗ್ಯಷ್ಟು ಕ್ವಟ್ಟರಂತೆ?

ಮೇ ೨೦೧೮

ಪ್ರೊ. ಜಿ. ಎಚ್. ಹನ್ನೆರಡುಮಠ

ಹೂವುಗಳ ನರಕ ಬೆಂಗಳೂರು !

ಎಪ್ರಿಲ್ ೨೦೧೮

ಉಮಾ ಎಚ್. ಎಂ.

ರಾಘವಾಂಕನ ‘ಹರಿಶ್ಚಂದ್ರ ಕಾವ್ಯ’

ಎಪ್ರಿಲ್ ೨೦೧೮

ಕೆ. ಸತ್ಯನಾರಾಯಣ

ನಮ್ಮೂರಲ್ಲೇ ಕಳ್ಳರಿದ್ದರು

ಎಪ್ರಿಲ್ ೨೦೧೮

ವೈಲೆಟ್ ಪಿಂಟೊ

ಸ್ವಗತ (ಕವಿತೆ)

ಎಪ್ರಿಲ್ ೨೦೧೮

ಅಮರಜಾ ಹೆಗಡೆ

ಬುದ್ಧನ ನಾಡಿನಲ್ಲಿ...

ಎಪ್ರಿಲ್ ೨೦೧೮

ಹಜರತಅಲಿ ದೇಗಿನಾಳ

ನಮ್ಮೂರು ಲಂಡನ್‍ಹಳ್ಳ!

ಮಾರ್ಚ್ ೨೦೧೮

ನನ್ನ ಕ್ಲಿಕ್

ಮಾರ್ಚ್ ೨೦೧೮

ಡಾ. ಜಾಜಿ ದೇವೇಂದ್ರಪ್ಪ

ಜನ್ನನ ಯಶೋಧರ ಚರಿತೆ

ಮಾರ್ಚ್ ೨೦೧೮

ಚಿದಂಬರ ಪಿ. ನಿಂಬರಗಿ

ಶಿರೋಳದ ರೊಟ್ಟಿ ಜಾತ್ರೆ

ಮಾರ್ಚ್ ೨೦೧೮

ರಾಜೇಂದ್ರ ಪ್ರಸಾದ್

ರಾಮಮಂದಿರದ ಕನಸು

ಮಾರ್ಚ್ ೨೦೧೮

ಗುರುಪ್ರಸಾದ್ ಡಿ. ಎನ್.

ದಿ ಪೋಸ್ಟ್: ಮಾಧ್ಯಮದ ಹೊಸ ಭರವಸೆ

ಮಾರ್ಚ್ ೨೦೧೮

ಸಾಬೂನು ಚಾಲಿತ ಬೋಟ್

ಮಾರ್ಚ್ ೨೦೧೮

ಬಿದರಹಳ್ಳಿ ನರಸಿಂಹಮೂರ್ತಿ

ಗಂಗೆಗನ್ನಡಿಯಲ್ಲಿ ಗಾಲಿಬ್ ಬಿಂಬ

ಫೆಬ್ರವರಿ ೨೦೧೮

ನನ್ನ ಕ್ಲಿಕ್

ಫೆಬ್ರವರಿ ೨೦೧೮

ಕಟ್ಟ ಕಡೆಯ ಗೆರೆಯ ಮೇಲೆ

ಫೆಬ್ರವರಿ ೨೦೧೮

ಸಂತೋಷ್ ನಾಯಕ್ ಆರ್.

ಬೂದಿ ಒಳಗಣ ಕೆಂಡ ಚಿಕ್ಕಲ್ಲೂರು ಜಾತ್ರೆ

ಫೆಬ್ರವರಿ ೨೦೧೮

ಕೆ.ಎಲ್.ಚಂದ್ರಶೇಖರ್ ಐಜೂರ್

ಸ್ವರ್ಗದ ಮಕ್ಕಳು

ಫೆಬ್ರವರಿ ೨೦೧೮

ಬಣ್ಣ ಬದಲಿಸುವ ಹೂವು

ಫೆಬ್ರವರಿ ೨೦೧೮