2nd May 2018

ರಾಘವಾಂಕನ ‘ಹರಿಶ್ಚಂದ್ರ ಕಾವ್ಯ’

ಉಮಾ ಎಚ್. ಎಂ.

“ಸತ್ಯವೆಂಬುದೇ ಹರ ಹರನೆಂಬುದೇ ಸತ್ಯ” ಎನ್ನುವ ಸಾರ್ವತ್ರಿಕ ಮೌಲ್ಯವನ್ನು ನಿರೂಪಿಸುವ ರಾಘವಾಂಕನ ‘ಹರಿಶ್ಚಂದ್ರ ಕಾವ್ಯ’ ಕನ್ನಡ ಕಾವ್ಯ ಪರಂಪರೆಯಲ್ಲಿ ವಿನೂತನ ಸೃಷ್ಟಿಯೇ ಆಗಿದೆ. ವ್ಯಕ್ತಿಗತ ಮತ್ತು ಸಾಮಾಜಿಕ ನೆಲೆಯಲ್ಲಿ ಅಗತ್ಯವಿರುವ ನ್ಯಾಯಪರತೆ, ಸತ್ಯ, ನಿಷ್ಠೆಯಂತಹ ಮೌಲ್ಯಗಳ ತಿಳಿವಳಿಕೆಗೆ ಈ ಕೃತಿಯ ಓದು ಸರ್ವಕಾಲಕ್ಕೂ ಅಗತ್ಯವೆನಿಸುತ್ತದೆ.

ಕನ್ನಡ ನಾಡಿನ ಚರಿತ್ರೆಯಲ್ಲಿ 12—13ನೇ ಶತಮಾನಗಳು ಧಾರ್ಮಿಕ, ಸಾಹಿತ್ಯಕ, ಸಾಮಾಜಿಕ ಆಯಾಮಗಳಿಂದ ಅತ್ಯಂತ ಮಹತ್ವದ್ದಾಗಿವೆ. ಈ ಕಾಲಮಾನದಲ್ಲಿ ಪ್ರಚಲಿತಕ್ಕೆ ಬಂದ ಕವಿ—ಕಾವ್ಯ ಪರಂಪರೆಯಲ್ಲಿ ವಿಶಿಷ್ಟ ಸ್ಥಾನ ಹರಿಹರ—ರಾಘವಾಂಕರಿಗೆ ಸಲ್ಲುತ್ತದೆ. ಈರ್ವರೂ ಶಿವ ಮತ್ತು ಆತನ ಭಕ್ತರನ್ನು ಸ್ತುತಿಸಲು ಮಾತ್ರ ತಮ್ಮ ಕಾವ್ಯ ಪ್ರತಿಭೆಯನ್ನು ಬಳಸಿಕೊಳ್ಳಬೇಕೆಂಬ ನಿಷ್ಠ ಸಂಪ್ರದಾಯಕ್ಕೆ ಮೊದಲಿಗರಾದರು. ಹರಿಹರನ ಶಿಷ್ಯ ಹಾಗೂ ಸೋದರಳಿಯನಾದ ರಾಘವಾಂಕನ ಕಾಲ ಕ್ರಿ.ಶ. 1225. ತಂದೆ ಮಹಾದೇವ, ತಾಯಿ ರುದ್ರಾಣಿ. ವಿಜಯನಗರದ ಹಂಪಿ ಈತನ ಕರ್ಮಭೂಮಿಯಾದರೆ, ಪಂಪಾ ವಿರೂಪಾಕ್ಷನೇ ಆರಾಧ್ಯ ದೈವ. “ಹಂಪೆಯರಸನ ಪೊಗಳ್ವ ನಾಲಗೆಯೊಳನ್ಯದೈವವ ಭವಿಗಳಂ ಕೀರ್ತಿಸಿದೆನಾದಡೆ ಮನಸಿಜಾರಿಯ ಭಕ್ತನಲ್ಲ” (ಹಂಪೆಯ ವಿರೂಪಾಕ್ಷನ ಹೊಗಳುವ ನಾಲಿಗೆಯಲ್ಲಿ ಅನ್ಯ ದೈವವನ್ನು, ನಾಸ್ತಿಕರನ್ನು ಹೊಗಳಿದೆನಾದರೆ ನಾನು ಶಿವಭಕ್ತನೇ ಅಲ್ಲ) ಎಂಬ ಕೆಚ್ಚು ರಾಘವಾಂಕನದು. ‘ಹರಿಶ್ಚಂದ್ರ ಕಾವ್ಯ’, ‘ಸಿದ್ಧರಾಮ ಚಾರಿತ್ರ್ಯ’ ‘ಸೋಮನಾಥ ಚಾರಿತ್ರ್ಯ’, ‘ವೀರೇಶ ಚರಿತೆ’ ರಾಘವಾಂಕನ ಉಪಲಬ್ಧ ಕೃತಿಗಳಾದರೆ, ‘ಹರಿಹರ ಮಹತ್ವ’, ‘ಶರಭ ಚಾರಿತ್ರ್ಯ’ಗಳು ಲಭ್ಯವಿಲ್ಲ. ರಾಘವಾಂಕನ ಕುರಿತಾಗಿ ಜನಮಾನಸದಲ್ಲಿ ಪ್ರಚಲಿತವಿದ್ದ ಐತಿಹ್ಯ, ಕಥಾನಕ, ಇತರೆ ವಿವರಗಳನ್ನು ‘ಸಿದ್ಧನಂಜೇಶ’ ಕವಿಯ ‘ರಾಘವಾಂಕ ಚರಿತೆ’ ಯಲ್ಲಿ ತಿಳಿಯಬಹುದಾಗಿದೆ.

ರಾಘವಾಂಕನ ಕೃತಿಗಳಲ್ಲಿ ‘ಹರಿಶ್ಚಂದ್ರ ಕಾವ್ಯ’ ಕ್ಕೆ ಅಗ್ರಸ್ಥಾನ. “ಇದು ಕಥಾಬೀಜವೀ ಬೀಜಮಂ ಬಿತ್ತಿ ಬೆಳೆಸಿದಪೆನೀ ಕಾವ್ಯ ವೃಕ್ಷವನಿದಕೆ” ಎಂದು ಆತನೇ ಹೇಳುವಂತೆ ಪೂರ್ವ ಪರಂಪರೆಯಲ್ಲಿ ಈಗಾಗಲೇ ಪ್ರಚಲಿತವಿರುವ ಹರಿಶ್ಚಂದ್ರನ ಕಥೆಯನ್ನೇ ಹೊಸತನದಲ್ಲಿ ನಿರೂಪಿಸಿದ್ದಾನೆ. 14 ಸ್ಥಲಗಳಲ್ಲಿ ವಾರ್ಧಕ ಷಟ್ಪದಿಯನ್ನು ಕಾವ್ಯ ಮಾಧ್ಯಮವಾಗಿ ಬಳಸಿಕೊಂಡು ರಚಿಸಿರುವ ಈ ಕೃತಿಯ ಮೂಲಕ ಕಥನ ಕಾವ್ಯ ಪರಂಪರೆಗೆ ಹೊಸ ಆಯಾಮವೊಂದನ್ನು ಒದಗಿಸಿದ್ದಾನೆ. “ವೇದ ಪ್ರಮಾಣ ಪುರುಷ ಘನನೃಪ ಹರಿಶ್ಚಂದ್ರನೆಂದಡಾತನ ಪೊಗಳ್ದು ಜನ ಬದುಕಬೇಕೆಂದು ಕಾವ್ಯಮುಖದಿಂ ಪೇಳ್ದನನಪೇಕ್ಷೆಯಿಂದ ಕವಿ ರಾಘವಾಂಕಂ” ಎಂದು ಸತ್ಯ ಪರಿಪಾಲನೆಗಾಗಿ ಅನೇಕ ವಿಪತ್ತುಗಳನ್ನು ಎದುರಿಸಿ ಆದರ್ಶವಾದ ಹರಿಶ್ಚಂದ್ರನನ್ನು ಜನ ಹೊಗಳಿ ಬದುಕಬೇಕೆಂಬ ಅಪೇಕ್ಷೆಯಿಂದ ಈ ಕೃತಿಯನ್ನು ಬರೆದುದಾಗಿ ತನ್ನ ಉದ್ದೇಶವನ್ನು ತಿಳಿಸುತ್ತಾನೆ.

ಒಂದು ಸಲ ದೇವ ಸಭೆಯಲ್ಲಿ ಇಂದ್ರನು ‘ಇಕ್ಷ್ವಾಕು ವಂಶದರಸುಗಳೊಳತಿಬಲರೆನಿಸಿ ಮನವಚನ ಕಾಯದೊಳಗೊಮ್ಮೆಯಂ ಹುಸಿ ಹೊದ್ದದಂತೆ ನಡೆವ ಕಲಿಗಳಾರಯ್ಯ’ (ಇಕ್ಷ್ವಾಕು ವಂಶದ ಅರಸರಲ್ಲಿ ಅತಿ ಬಲಶಾಲಿಯೆನಿಸಿದ, ಕಾಯ ವಾಚಾ ಮನಸಾ ಹುಸಿಯಾಡದ ಕಲಿಗಳಾರು?) ಎಂದು ಪ್ರಶ್ನಿಸುತ್ತಾನೆ. ತಕ್ಷಣ ಅಲ್ಲಿಯೇ ಇದ್ದ ವಶಿಷ್ಠರು ‘ಹರಿಶ್ಚಂದ್ರ’ನ ಹೆಸರನ್ನು ಹೇಳಿ, ಆತನ ಸತ್ಯಸಂಧತೆಯನ್ನು ವಿವರಿಸಿದರು. ವಶಿಷ್ಠರ ಪ್ರತಿಯೊಂದು ನಡೆಯನ್ನೂ ವಿರೋಧಿಸುವ ಮನೋಭಾವದ ವಿಶ್ವಾಮಿತ್ರರು ಇದನ್ನು ಅಲ್ಲಗಳೆದು,’ಹರಿಶ್ಚಂದ್ರನ ಬಾಯಿಂದ ಸುಳ್ಳು ಹೇಳಿಸಿಯೇ ಸಿದ್ಧ’ ಎಂದು ಶಪಥವನ್ನೂ ತೊಡುತ್ತಾರೆ. “ಕೋಣನೆರಡುಂ ಹೋರೆ ಗಿಡುವಿಂಗೆ ಮಿತ್ತು” ಎಂಬ ಗಾದೆಯಂತೆ ವಶಿಷ್ಠ ಮತ್ತು ವಿಶ್ವಾಮಿತ್ರರ ವಾಗ್ವಾದದಲ್ಲಿ ಹರಿಶ್ಚಂದ್ರ ದಾಳವಾಗುತ್ತಾನೆ.

ಮುಂದೆ ವಿಶ್ವಾಮಿತ್ರರಿಂದ ಹರಿಶ್ಚಂದ್ರನ ವಿರುದ್ಧ ಕುಟಿಲೋಪಾಯಗಳ ಪ್ರಯೋಗ ಆರಂಭವಾಯಿತು. ಹರಿಶ್ಚಂದ್ರನು ‘ಬಹು ಸುವರ್ಣಯಾಗ’ ಮಾಡುವಂತೆ ಪ್ರೇರೇಪಿಸಿ, ಯಾಗದ ದಕ್ಷಿಣೆಯಾಗಿ “ದೊಡ್ಡ ಆನೆಯ ಮೇಲೆ ಮಾವುತನೊಬ್ಬ ನಿಂತು ಕವಡೆಯನ್ನು ಬೀಸಿದಾಗ, ಅದು ಚಿಮ್ಮುವ ಎತ್ತರಕ್ಕೆ ಹೊನ್ನರಾಶಿಯನ್ನು ದಾನವಾಗಿ ಕೊಡುವಂತೆ” ವಿಶ್ವಾಮಿತ್ರರು ಕೇಳುತ್ತಾರೆ. ಕೂಡಲೇ ಸಂಪತ್ತನ್ನು ಕೊಡಲನುವಾದ ಹರಿಶ್ಚಂದ್ರನನ್ನು ತಡೆದು “ಸಂದರ್ಭ ಬಂದಾಗ ಪಡೆಯುವುದಾಗಿ” ಹೇಳಿ ಅಲ್ಲಿಂದ ತೆರಳಿದರು. ಇದಾದ ಕೆಲವೇ ದಿನಗಳಲ್ಲಿ ವಿಶ್ವಾಮಿತ್ರರ ಮಾಯಾಸೃಷ್ಟಿಯಾದ ನಾನಾ ಬಗೆಯ ಕ್ರೂರ ಮೃಗಸಂಕುಲಗಳಿಂದ ಅಯೋಧ್ಯೆಗೆ ಸಂಕಷ್ಟ ಎದುರಾಗುತ್ತದೆ. ಈ ಕ್ರೂರ ಪ್ರಾಣಿಗಳನ್ನು ನಿಗ್ರಹಿಸಲು ಹರಿಶ್ಚಂದ್ರ ಸಕಲ ಪರಿವಾರ ಸಮೇತನಾಗಿ ಬೇಟೆಗೆ ಅಣಿಗೊಂಡನು. ಕಾಡಿನ ಹಾದಿಯಲ್ಲಿ ಸಿಗುವ ವಿಶ್ವಾಮಿತ್ರರ ಆಶ್ರಮಕ್ಕೆ ಹೋಗದಿರುವಂತೆ ಗುರುವಾಜ್ಞೆಯೂ ಆಯಿತು. ಆದರೆ ‘ವಿಧಿ ಲಿಖಿತಮಂ ಮೀರುವರುಂಟೇ?’ ವಿಶ್ವಾಮಿತ್ರರ ಮಾಯಾ ಸೃಷ್ಟಿಯಾದ ಹಂದಿಯನ್ನು ಬೆನ್ನಟ್ಟಿಬಂದ ಹರಿಶ್ಚಂದ್ರ ಮೈಮರೆತು ಅವರ ಆಶ್ರಮವನ್ನು ಹೊಕ್ಕನು. ಮುಂದೆ ಒದಗಬಹುದಾದ ವಿಪತ್ತನ್ನು ಕನಸಿನಲ್ಲಿ ಕಂಡು ಬೆದರಿದ್ದಲ್ಲದೆ, ಅದರ ಆಂತರ್ಯವನ್ನು ಅರುಹುವಂತೆ ಚಂದ್ರಮತಿಯಲ್ಲಿ ಕೇಳಿದಾಗ ವಿಶ್ವಾಮಿತ್ರರಿಂದ ಮುಂದೆ ಎದುರಾಗುವ ಕೇಡಿಗೆ ಸೂಚನೆ ಎಂದೂ, ಪ್ರಾಣಕ್ಕೆ ಹಾನಿ ಬಂದರೂ ಸರಿಯೆ, “ಮಿಗೆ ಸತ್ಯಮಂ ಬಿಟ್ಟು ಕೆಡದಿರವನೀಶ” (ರಾಜನೇ ಸತ್ಯವನ್ನು ಬಿಟ್ಟು ಕೆಡದಿರು) ಎಂದು ಬೇಡಿಕೊಳ್ಳುತ್ತಾಳೆ. ಇಲ್ಲಿ ಹರಿಶ್ಚಂದ್ರನ ಸತ್ಯಪಾಲನೆಗೆ ಚಂದ್ರಮತಿಯ ಮಾತುಗಳು ನೈತಿಕ ಬೆಂಬಲವಾಗುತ್ತವೆ.

ಇದೇ ವೇಳೆಗೆ ವಿಶ್ವಾಮಿತ್ರರ ಅತಿಕೋಪ, ಬದ್ಧದ್ವೇಷ, ವೈರತ್ವಗಳೆಂಬ ನಿಮಿತ್ತದಿಂದಲೇ ಜನಿಸಿದ ಮಾಯದ ಕನ್ನಿಕೆಯರ ಗಾನಕ್ಕೆ ಹರಿಶ್ಚಂದ್ರನು ಸೋತಾಗ, ಅವರು ಆತನ ಮುತ್ತಿನ ಸತ್ತಿಗೆಯನ್ನು (ಶ್ವೇತ ಛತ್ರ) ಬಹುಮಾನವಾಗಿ ಬೇಡಿದರು. ಆದರೆ ಪೂರ್ವಜರಿಂದ ಬಳುವಳಿಯಾಗಿ ಬಂದ ಸತ್ತಿಗೆಯನ್ನು ಕೊಡಲು ಒಪ್ಪದಿದ್ದಾಗ, ತಮ್ಮನ್ನು ಮದುವೆಯಾಗುವಂತೆ ಪೀಡಿಸುತ್ತಾರೆ. ಇದರಿಂದ ಕೃದ್ಧನಾದ ಹರಿಶ್ಚಂದ್ರ ಕನ್ನಿಕೆಯರನ್ನು ಶಿಕ್ಷಿಸಿದ ಸುದ್ದಿ ವಿಶ್ವಾಮಿತ್ರರಿಗೆ ತಲುಪಿತು. ಪರಿಸ್ಥಿತಿಯ ಲಾಭ ಪಡೆದ ವಿಶ್ವಾಮಿತ್ರರು ಮದುವೆಗೆ ಬದಲಾಗಿ ಸಕಲರಾಜ್ಯವನ್ನೇ ಹರಿಶ್ಚಂದ್ರನಿಂದ ಪಡೆದರು. ಆದರೆ ‘ಬಹುಸುವರ್ಣಯಾಗ’ದಲ್ಲಿ ವಿಶ್ವಾಮಿತ್ರರಿಗೆ ಕೊಡುವುದಾಗಿ ಹೇಳಿದ್ದ ದಾನವು ಸಾಲದ ರೂಪವನ್ನು ತಾಳಿತು. ಪರಿಣಾಮ ವಿಶ್ವಾಮಿತ್ರರ ಋಣಭಾರವನ್ನು ಹೊತ್ತು ಸತಿ ಚಂದ್ರಮತಿ ಹಾಗೂ ಸುತ ಲೋಹಿತಾಶ್ವರೊಂದಿಗೆ ಅಯೋಧ್ಯೆಯನ್ನು ತ್ಯಜಿಸಲನುವಾದನು. ಹರಿಶ್ಚಂದ್ರನ ಸ್ಥಿತಿಯನ್ನು ಕಂಡ ಅಯೋಧ್ಯೆಯ ಜನತೆ, “ಪುರದ ಪುಣ್ಯಂ ಪುರುಷ ರೂಪಿಂದೆ ಪೋಗುತಿದೆ”(ಅಯೋಧ್ಯಾ ಪುರದ ಪುಣ್ಯವೆಲ್ಲಾ ಹರಿಶ್ಚಂದ್ರನನ್ನು ಹಿಂಬಾಲಿಸಿ ಹೋಗುತ್ತಿದೆ) ಎಂದು ಮರುಗುತ್ತಾ ಆತನನ್ನು ಹಿಂಬಾಲಿಸುವ ಸನ್ನಿವೇಶ ಮನಕಲಕುವಂತಹದು.

ಪ್ರಜೆಗಳಿಂದ ಬೀಳ್ಕೊಂಡು ವಿಶ್ವಾಮಿತ್ರನ ಭಂಟನಾದ ‘ನಕ್ಷತ್ರಕ’ನ ಕ್ಲೇಶಗಳನ್ನು ಸಹಿಸಿಕೊಳ್ಳುತ್ತ, ಕಾಡು—ಮೇಡುಗಳನ್ನು ಅಲೆಯುತ್ತಾ ಕಾಶೀ ಕ್ಷೇತ್ರವನ್ನು ತಲುಪಿದ. ವಿಪ್ರರ ಮನೆಯ ಜೀತಕ್ಕಾಗಿ ಸತಿ—ಸುತರನ್ನೂ ಮಾರಿ, ಕೊನೆಗೆ ತನ್ನನ್ನು ತಾನೇ ಮಾರಿಕೊಳ್ಳುವುದರೊಂದಿಗೆ ಅದೇ ರಾಜ್ಯದ ಚಾಂಡಾಲ ವೀರಬಾಹುವಿಗೆ ಸೇವಕನಾಗಿ, ಸ್ಮಶಾನದ ಕಾವಲುಗಾರನಾಗುತ್ತಾನೆ. ಇಲ್ಲಿಗೆ ಹರಿಶ್ಚಂದ್ರನ ಸಾಲ ತೀರಿದರೂ, ಸತ್ವ ಪರೀಕ್ಷೆಗಳು ತೀರಲಿಲ್ಲ. ಮಗ ಲೋಹಿತಾಶ್ವ ವಿಶ್ವಾಮಿತ್ರರ ಮಾಯಾಸರ್ಪದಿಂದ ಸಾವನ್ನಪ್ಪುವಂತಾಗುತ್ತದೆ. ಇಲ್ಲಿಂದ ‘ಚಂದ್ರಮತಿಯ ಪ್ರಲಾಪ ಪ್ರಸಂಗ’ವೆಂದೇ ಪ್ರಸಿದ್ಧವಾದ ಈ ಕಾವ್ಯಭಾಗ ಸಹೃದಯರ ಕಣ್ಣಾಲಿಗಳನ್ನು ತೇವಗೊಳಿಸದೇ ಇರದು. ಕಾಡಿನಲ್ಲಿ ಅನಾಥ ಶವವಾಗಿದ್ದ ಲೋಹಿತಾಶ್ವನಿಗಾಗಿ ಚಂದ್ರಮತಿ ಹಂಬಲಿಸಿದಳು. ವಿಪರ್ಯಾಸವೆಂದರೆ ಆ ನಡುರಾತ್ರಿಯಲ್ಲಿ ಮಗನ ಸಂಸ್ಕಾರಕ್ಕಾಗಿ ಹರಿಶ್ಚಂದ್ರನಿರುವ ಸ್ಮಶಾನಕ್ಕೇ ಬರುವುದು. “ಸಿರಿಹೋದ ಮರುಕವನು ನೆಲೆಗೆಟ್ಟ ಚಿಂತೆಯನು ಪರದೇಶಮಂ ಹೊಕ್ಕ ನಾಚಿಕೆಯನಱಿಯದನ್ಯರ ಮನೆಯ ತೊತ್ತಾದ ಭಂಗವನು ನಿಮ್ಮಯ್ಯಗಜ್ಞಾತವಾದಳಲನು ನೆರೆದು ಮನೆಯವರೆಯ್ದೆ ಕರಕರಿಪ ದುಃಖವನು ತರಳ ನಿನ್ನಂ ನೋಡಿ ಮಱೆದು ಪರಿಣಾಮಮಂ ಧರಿಸುತಿಪ್ಪೆ” (ಸಿರಿಹೋದ ಮರುಕ, ನೆಲೆಗೆಟ್ಟ ಚಿಂತೆ, ಪರದೇಶವನ್ನು ಹೊಕ್ಕ ನಾಚಿಕೆ, ಅನ್ಯರ ಮನೆಯ ತೊತ್ತಾದ ಅವಮಾನ, ನಿನ್ನ ತಂದೆಯ ಅಜ್ಞಾತವಾಸ, ಮನೆಯವರ ಕಿರುಕುಳಗಳನ್ನು ನಿನ್ನ ನೋಡಿ ಮರೆತು ಸಹಿಸುತ್ತಿದ್ದೆ) ಇನ್ನು ನನಗಾರು ಗತಿಯೆಂದು ಮಗನ ಶವದ ಮುಂದೆ ನಾನಾ ಬಗೆಯಾಗಿ ಶೋಕಿಸಿ ಚಿತೆಯನ್ನು ಅಣಿಗೊಳಿಸುತ್ತಾಳೆ. ಆದರೆ ಚಂದ್ರಮತಿಯ ಶೋಕ, ಪ್ರಲಾಪಗಳಿಂದ ಎಚ್ಚೆತ್ತ ಹರಿಶ್ಚಂದ್ರ “ಕದ್ದು ಸುಡಬಂದ ನಿನ್ನ ನಿಟ್ಟೆಲುವನ್ನು ಮುರಿಯುತ್ತೇನೆಂದು” ಬಂದವನೇ ಚಿತೆಯ ಮೇಲಿದ್ದ ಮಗನ ಹಿಂಗಾಲನ್ನು ಹಿಡಿದು ಬಿಸಾಡುತ್ತಾನೆ. ಇದನ್ನು ಕಂಡ ಚಂದ್ರಮತಿ “ಬಿಸುಡದಿರು ಬಿಸುಡದಿರು ಬೇಡಬೇಡಕಟಕಟ ಹಸುಳೆ ನೊಂದಹನೆಂದು” ಮಗನನ್ನು ತೋಳತೆಕ್ಕೆಯಲ್ಲಿ ಬಾಚಿಕೊಳ್ಳುತ್ತಾಳೆ. ಮರಣಿಸಿರುವ ಮಗುವಿಗೂ ನೋವಾಗುತ್ತದೆಂದು ಭ್ರಮಿಸುವ ಚಂದ್ರಮತಿಯ ಮಾತೃ ಹೃದಯದ ಮಾರ್ಮಿಕ ಚಿತ್ರಣ ಕರುಣಾಜನಕವಾದುದು. ನೆಲದ ಬಾಡಿಗೆಯನ್ನು ಕೊಡದೆ ಸಂಸ್ಕಾರಕ್ಕೆ ಅನುಮತಿಯಿಲ್ಲವೆಂದು ಹಠ ಹಿಡಿಯುವ ಹರಿಶ್ಚಂದ್ರ ಆಕೆಯ ಮಂಗಳಸೂತ್ರವನ್ನು ಮಾರಿ ಹಾಗ(ಹಣ)ವನ್ನು ಕೊಡುವಂತೆ ಸಲಹೆಯನ್ನಿತ್ತನು. ಆಗ ಚಂದ್ರಮತಿ “ವಿಗತ ಸಪ್ತದ್ವೀಪಪತಿಯ ಬಸುಱಲಿ ಬಂದು ಮಗನೆ ನಿನಗೊಮ್ಮೆಟ್ಟು ಸುಡುಗಾಡು ಹಗೆಯಾಯ್ತೆ”(ಸಪ್ತ ದ್ವೀಪಗಳಿಗೆ ಒಡೆಯನ ಮಗನಾದ ನಿನಗೆ ಸುಡುಗಾಡೂ ಹಗೆಯಾಯಿತೇ?) ಎಂದು ಹಲುಬಿದಳು. ಈ ಮಾತುಗಳಿಂದ ಸತಿಯನ್ನು ಗುರುತಿಸಿದ ಹರಿಶ್ಚಂದ್ರನಿಗೆ ಆಘಾತವಾಗುತ್ತದೆ. ತನ್ನಿಂದಾಗಿ ಕಷ್ಟಕ್ಕೆ ಗುರಿಯಾದ ಸತಿ—ಸುತರನ್ನು ಕಂಡು ದುಃಖಿಸಿ, ನಿಂದಿಸಿಕೊಳ್ಳುತ್ತಾನೆ. ಆದರೆ ಚಂದ್ರಮತಿ ಮಾತ್ರ “ಹರಿಶ್ಚಂದ್ರನಲ್ಲದಿನ್ನಾರು ಗತಿ ಮತಿ” ಎನ್ನುತ್ತಾಳೆ. ಇಷ್ಟಾದರೂ ಒಡೆಯನಾದ ವೀರಬಾಹುವಿನ ಮೇಲಿನ ನಿಷ್ಠೆಯಿಂದ ನೆಲದ ಬಾಡಿಗೆಯನ್ನು ತರಲೇ ಬೇಕೆಂದಾಗ ಚಂದ್ರಮತಿ ಅಲ್ಲಿಂದ ಹೊರಡಲನುವಾದಳು.

ಆದರೆ ಮತ್ತೊಂದು ಆಪತ್ತು ಚಂದ್ರಮತಿಯನ್ನು ಎದುರುಗೊಳ್ಳುತ್ತದೆ. ವಿಶ್ವಾಮಿತ್ರರ ಕುತಂತ್ರದಿಂದ ರಾಜನ ಮಗನನ್ನು ಕೊಂದ ಆಪಾದನೆಯನ್ನು ಹೊತ್ತ ಚಂದ್ರಮತಿಯ ಶಿರಚ್ಛೇದನಕ್ಕೆ ರಾಜಾಜ್ಞೆಯಾಯಿತು. ಮತ್ತೂ ವಿಪರ್ಯಾಸವೆಂಬಂತೆ ಈ ರಾಜಾಜ್ಞೆಯನ್ನು ಪಾಲಿಸಲು ನೇಮಕಗೊಳ್ಳುವುದು ಹರಿಶ್ಚಂದ್ರನೇ. ಆದರೇನಂತೆ ಸತ್ಯ ಪರಿಪಾಲನೆಗಾಗಿ ಹಿಂದಡಿಯಿಡದೆ ಸತಿಯ ಶಿರಚ್ಛೇದನಕ್ಕೆ ಮುಂದಾದಾಗ ಶಿವನ ಸಾಕ್ಷಾತ್ಕಾರವಾಗಿ, ವಿಶ್ವಾಮಿತ್ರರ ಅನುಗ್ರಹವಾಗುವುದರೊಂದಿಗೆ ‘ಸತ್ಯ ಹರಿಶ್ಚಂದ್ರ’ನೆಂಬ ಕೀರ್ತಿ ಆತನಿಗೆ ಸ್ಥಿರವಾಯಿತು ಎಂಬಲ್ಲಿಗೆ ಕಾವ್ಯ ಮುಕ್ತಾಯವಾಗುತ್ತದೆ.

ಹೀಗೆ ಈ ಕಾವ್ಯ ಸತ್ಯದ ಸಾಧನೆ ಮತ್ತು ಅದರ ಸಾಕ್ಷಾತ್ಕಾರವನ್ನು ಎತ್ತಿ ಹಿಡಿಯುತ್ತದೆ. ಕಾವ್ಯವು ಒಳಗೊಳ್ಳುವ ಸಂಭಾಷಣೆ, ನಾಟಕೀಯತೆ, ಸಂದರ್ಭಕ್ಕೆ ತಕ್ಕಂತೆ ಒದಗಿಬರುವ ನುಡಿಗಟ್ಟು, ಅಲಂಕಾರಗಳು ರಸಾದ್ರ್ರತೆಯ ಅನುಭವ ನೀಡುತ್ತವೆ. “ಸತ್ಯವೆಂಬುದೇ ಹರ ಹರನೆಂಬುದೇ ಸತ್ಯ” ಎನ್ನುವ ಸಾರ್ವತ್ರಿಕ ಮೌಲ್ಯವನ್ನು ನಿರೂಪಿಸುವ ರಾಘವಾಂಕನ ‘ಹರಿಶ್ಚಂದ್ರ ಕಾವ್ಯ’ ಕನ್ನಡ ಕಾವ್ಯ ಪರಂಪರೆಯಲ್ಲಿ ವಿನೂತನ ಸೃಷ್ಟಿಯೇ ಆಗಿದೆ. ಅದರಲ್ಲೂ ಹರಿಶ್ಚಂದ್ರನ ಸತ್ಯ ಪರಿಪಾಲನೆಗೆ ಹೆಗಲೆಣೆಯಾಗುವ ಚಂದ್ರಮತಿಯ ಪಾತ್ರವನ್ನು ಅತಿ ಹೆಚ್ಚು ಪರಿಣಾಮಕಾರಿಯಾಗಿ ಚಿತ್ರಿಸಿರುವುದು ಮತ್ತಷ್ಟು ಗಮನಾರ್ಹ. ಕಥೆ ಪ್ರಾಚೀನವಾದರೂ ಸತ್ಯದ ಪರಿಕಲ್ಪನೆ ಮತ್ತು ಮಹತ್ವವನ್ನು ಅರಿಯಲು ಅನುವು ಮಾಡಿಕೊಡುತ್ತದೆ. ಹೀಗಾಗಿ ವ್ಯಕ್ತಿಗತ ಮತ್ತು ಸಾಮಾಜಿಕ ನೆಲೆಯಲ್ಲಿ ಅಗತ್ಯವಿರುವ ನ್ಯಾಯಪರತೆ, ಸತ್ಯ, ನಿಷ್ಠೆಯಂತಹ ಮೌಲ್ಯಗಳ ತಿಳಿವಳಿಕೆಗೆ ಈ ಕೃತಿಯ ಓದು ಸರ್ವಕಾಲಕ್ಕೂ ಅಗತ್ಯವೆನಿಸುತ್ತದೆ.

ರೇಣುಕಾ ನಿಡಗುಂದಿ

ಹಾಲುಂಡ ತವರೀಗಿ ಏನೆಂದು ಹಾಡಲೆ

July 2018

ಡಾ.ಧರಣಿದೇವಿ ಮಾಲಗತ್ತಿ

ಡುಂಡುಭ ವಿಲಾಪ

July 2018

ಡಾ.ಧರಣಿದೇವಿ ಮಾಲಗತ್ತಿ

‘ಪಾದುಕಾ ಕಿರೀಟಿ’

July 2018

ಎಚ್.ಗೋಪಾಲಕೃಷ್ಣ

ನಮ್ಮಟ್ಟೀಲಿ ಏನಾಯ್ತಂದ್ರ...

July 2018

ಪ್ರೊ.ಜಿ.ಎಚ್.ಹನ್ನೆರಡುಮಠ

ಓಡಿ ಹೋದ ದ್ವೆವಗಳು

June 2018

ಮೂಡ್ನಾಕೂಡು ಚಿನ್ನಸ್ವಾಮಿ

ಸಂಕಟದ ಪ್ರೇಮಿ

June 2018

ಹೇಮಲತಾ ಮೂರ್ತಿ

ವಿಷ ಕುಡಿದ ಮಕ್ಕಳು

June 2018

ಬಾಲಚಂದ್ರ ಬಿ.ಎನ್.

ಕರುನಾಡ ಕದನ

June 2018

ಡಾ.ಮ್ಯಾಥ್ಯೂ ಕೆ.ಎಮ್.

ನಾಗಚಂದ್ರನ ರಾಮಚಂದ್ರ ಚರಿತ ಪುರಾಣಂ

May 2018

ರಾಜು ಹೆಗಡೆ

ತೇಲುವ ಊರಿನ ಕಣ್ಮರೆ!

May 2018

ಎಸ್.ಬಿ.ಜೋಗುರ

ಗರ್ದಿ ಗಮ್ಮತ್ತು

May 2018

ಪ್ರೀತಿ ನಾಗರಾಜ್

ಮನಿಗ್ಯಷ್ಟು ಕ್ವಟ್ಟರಂತೆ?

May 2018

ಪ್ರೊ. ಜಿ. ಎಚ್. ಹನ್ನೆರಡುಮಠ

ಹೂವುಗಳ ನರಕ ಬೆಂಗಳೂರು !

April 2018

ಕೆ. ಸತ್ಯನಾರಾಯಣ

ನಮ್ಮೂರಲ್ಲೇ ಕಳ್ಳರಿದ್ದರು

April 2018

ವೈಲೆಟ್ ಪಿಂಟೊ

ಸ್ವಗತ (ಕವಿತೆ)

April 2018

ಅಮರಜಾ ಹೆಗಡೆ

ಬುದ್ಧನ ನಾಡಿನಲ್ಲಿ...

April 2018

ಹಜರತಅಲಿ ದೇಗಿನಾಳ

ನಮ್ಮೂರು ಲಂಡನ್‍ಹಳ್ಳ!

March 2018

ಡಾ. ಜಾಜಿ ದೇವೇಂದ್ರಪ್ಪ

ಜನ್ನನ ಯಶೋಧರ ಚರಿತೆ

March 2018

ಚಿದಂಬರ ಪಿ. ನಿಂಬರಗಿ

ಶಿರೋಳದ ರೊಟ್ಟಿ ಜಾತ್ರೆ

March 2018

ರಾಜೇಂದ್ರ ಪ್ರಸಾದ್

ರಾಮಮಂದಿರದ ಕನಸು

March 2018

ಗುರುಪ್ರಸಾದ್ ಡಿ. ಎನ್.

ದಿ ಪೋಸ್ಟ್: ಮಾಧ್ಯಮದ ಹೊಸ ಭರವಸೆ

March 2018

ಬಿದರಹಳ್ಳಿ ನರಸಿಂಹಮೂರ್ತಿ

ಗಂಗೆಗನ್ನಡಿಯಲ್ಲಿ ಗಾಲಿಬ್ ಬಿಂಬ

February 2018

ಸಂತೋಷ್ ನಾಯಕ್ ಆರ್.

ಬೂದಿ ಒಳಗಣ ಕೆಂಡ ಚಿಕ್ಕಲ್ಲೂರು ಜಾತ್ರೆ

February 2018

ಕೆ.ಎಲ್.ಚಂದ್ರಶೇಖರ್ ಐಜೂರ್

ಸ್ವರ್ಗದ ಮಕ್ಕಳು

February 2018