2nd ಎಪ್ರಿಲ್ ೨೦೧೮

ಗುಜರಾತಿನ ನರೇಂದ್ರಭಾಯಿ

ರಾಜದೀಪ್ ಸರ್ದೇಸಾಯಿ

ಪತ್ರಕರ್ತ ರಾಜದೀಪ್ ಸರ್ದೇಸಾಯಿ ಅವರ ‘2014: ಭಾರತವನ್ನು ಬದಲಿಸಿದ ಚುನಾವಣೆ’ ಕೃತಿಯ ನರೇಂದ್ರ ಮೋದಿಯವರನ್ನು ಕುರಿತಾದ ಎರಡನೆಯ ಅಧ್ಯಾಯದಿಂದ ಆಯ್ದ ಭಾಗಗಳನ್ನು ಇಲ್ಲಿ ಪ್ರಕಟಿಸುತ್ತಿದ್ದೇವೆ. 1990ರಿಂದ ಮೋದಿಯವರನ್ನು ಸರ್ದೇಸಾಯಿ ಹತ್ತಿರದಿಂದ ನೋಡಿದವರು ಮತ್ತು ಸ್ನೇಹ ಸಂಬಂಧವನ್ನು ಹೊಂದಿದ್ದವರು. 2002ರ ಗುಜರಾತ ಗಲಭೆಗಳ ನಂತರ ಅವರಿಬ್ಬರ ಸಂಬಂಧದಲ್ಲಿ ಬಿರುಕು ಮೂಡಿತು. ಗುಜರಾತ್ ಗಲಭೆಗಳನ್ನು ವರದಿ ಮಾಡುವಾಗ ಮೋದಿಯವರ ಕಟುಟೀಕಾಕಾರರಲ್ಲಿ ಒಬ್ಬರಾಗಿ ಹೊರಹೊಮ್ಮಿದ ಸರ್ದೇಸಾಯಿ ಮೋದಿಯವರ ಕಳೆದ ಎರಡೂವರೆ ದಶಕಗಳ ರಾಜಕೀಯ ಜೀವನ ಮತ್ತು ಅಭೂತಪೂರ್ವ ಯಶಸ್ಸುಗಳ ಬಗ್ಗೆ ತಮ್ಮ ವೈಯಕ್ತಿಕ ಅನುಭವಗಳ ಹಿನ್ನೆಲೆಯಲ್ಲಿ ಇಲ್ಲಿ ಬರೆಯುತ್ತಾರೆ. ಮೋದಿಯವರ ರಾಜಕೀಯ ತಂತ್ರಗಾರಿಕೆ, ತನ್ನನ್ನು ಪದೆಪದೆ ಮರುಸೃಷ್ಟಿ ಮಾಡಿಕೊಳ್ಳುವ ಶಕ್ತಿ, ಅವರ ಮೇಲಿನ ಗಂಭೀರ ಆರೋಪಗಳು ಇವುಗಳೆಲ್ಲವೂ ಸರ್ದೇಸಾಯಿಯವರ ಕಥನದಲ್ಲಿ ಸ್ಥಳ ಪಡೆಯುತ್ತವೆ. ಅಧ್ಯಯನ ಮತ್ತು ಸಂಶೋಧನೆಗಿಂತ ತಮ್ಮ ವೃತ್ತಿಜೀವನದ ಅನುಭವಗಳನ್ನೆ ಆಧರಿಸಿ ಬರೆದಿರುವ ಈ ಕೃತಿಯು ಮೋದಿಯವರ ಬಗ್ಗೆ ಅಪರೂಪದ ಒಳನೋಟಗಳನ್ನು ಒದಗಿಸುತ್ತದೆ.

ಟೆಲಿವಿಷನ್ ಸ್ಟುಡಿಯೋದಲ್ಲಿ ಮತ ಎಣಿಕೆಯ ದಿನವು ಟಿ—20 ಪಂದ್ಯದಂತಿರುತ್ತದೆ. ಅಂದು ಕಂಡುಬರುವ ವೇಗ, ಆವೇಶಭರಿತ ಉತ್ಸಾಹ, ಕೆಲವೊಮ್ಮೆ ನಿಜವಾದುದು ಹಾಗೂ ಮತ್ತೆ ಕೆಲವೊಮ್ಮೆ ಕೃತಕವಾದುದು. ಮೇ 16, 2014 ಈ ಮಾತಿಗೆ ಭಿನ್ನವಾಗಿರಲಿಲ್ಲ. ಅಂದು ಭಾರತದ ಚುನಾವಣಾ ಇತಿಹಾಸದ ಅತ್ಯಂತ ದೀರ್ಘವಾದ ಮತ್ತು ಅತಿ ಹೆಚ್ಚು ಸುದ್ದಿಮಾಡಿದ ಚುನಾವಣಾ ಹೋರಾಟದ ಕಡೆಯ ಹಂತ. ಪ್ರಜಾಸತ್ತಾತ್ಮಕ ಜಗತ್ತಿನ ಅತ್ಯಂತ ದೊಡ್ಡ ಪ್ರದರ್ಶನವಾದ ಇಂಡಿಯನ್ ಪೊಲಿಟಿಕಲ್ ಲೀಗಿನ ಅಂತಿಮ ದಿನ. ಚಿಪ್ಸ್ ಪ್ಯಾಕೆಟುಗಳು ಮತ್ತು ಕಿತ್ತಳೆಹಣ್ಣಿನ ರಸದೊಂದಿಗೆ ಸ್ಟುಡಿಯೋದೊಳಗೆ ನಾವು ದೀರ್ಘ ದಿನವೊಂದಕ್ಕೆ ಸಿದ್ಧವಾಗುತ್ತಿದ್ದೆವು. ಆದರೆ ನಾವು ನಮ್ಮ ಉದ್ವೇಗಭರಿತ ಮನಸ್ಸನ್ನು ತಹಬಂದಿಗೆ ತರುವ ಮುನ್ನವೆ ಅಥವಾ ಮೊದಲನೆಯ ವಿರಾಮವನ್ನು ತೆಗೆದುಕೊಳ್ಳುವ ಮೊದಲೆ, ಎಲ್ಲವೂ ಮುಗಿದಿತ್ತು.

ಬೆಳಿಗ್ಗೆ 9:30ಯೊಳಗೆ ನರೇಂದ್ರ ಮೋದಿಯವರು ಭಾರತದ 15ನೆಯ ಪ್ರಧಾನಮಂತ್ರಿಯಾಗುತ್ತಾರೆ ಎನ್ನುವುದು ಸ್ಪಷ್ಟವಾಗಿತ್ತು. ನಮ್ಮ ಸ್ಟುಡಿಯೋದಲ್ಲಿ ಬಲಪಂಥೀಯ ಅಂಕಣಕಾರ ಮತ್ತು ಮೋದಿ ಸಮರ್ಥಕ ಸ್ವಪನ್ ದಾಸಗುಪ್ತ ಖುಷಿಯಿಂದ ಉದ್ಗರಿಸಿದರು: ’ಭಾರತದ ಇತಿಹಾಸದಲ್ಲಿ ಇದೊಂದು ನಿರ್ಣಾಯಕ ಕ್ಷಣ.’ ಅವರ ಜೊತೆಗೆ ಸ್ಟುಡಿಯೋದಲ್ಲಿದ್ದ ಅವರ ಎದುರಾಳಿ ಮತ್ತು ಪ್ರಖ್ಯಾತ ಇತಿಹಾಸಕಾರ ರಾಮಚಂದ್ರ ಗುಹಾ (ಮೋದಿ ಮತ್ತು ರಾಹುಲ್ ಇಬ್ಬರನ್ನೂ ಇವರು ಇಷ್ಟಪಡುವುದಿಲ್ಲ) ದೃಢವಾಗಿ ಹೇಳಿದರು: ’ತಮ್ಮನ್ನು ಭಾರತದ ಪ್ರಧಾನಮಂತ್ರಿಯಾಗಲು ಸಹಾಯ ಮಾಡಿದ್ದಕ್ಕಾಗಿ ಮೋದಿಯವರು ರಾಹುಲರಿಗೆ ಒಂದು ಥ್ಯಾಂಕ್ ಯೂ ಕಾರ್ಡ್ ಕಳುಹಿಸಬೇಕು ಎಂದು ನನಗನ್ನಿಸುತ್ತದೆ.’

ಅಂದಿನ ವಿಜಯವನ್ನು ವಿಶ್ಲೇಷಿಸುತ್ತಿರುವಾಗ, ಇದೆಲ್ಲ ಪ್ರಾರಂಭವಾಯಿತು ಎಂದು ನನಗನ್ನಿಸಿದ ಮತ್ತೊಂದು ಕ್ಷಣದತ್ತ ನನ್ನ ಮನಸ್ಸು ಚಲಿಸಿತು. ಡಿಸೆಂಬರ್ 12, 2012ರಂದು ಮತ್ತೊಂದು ಚುನಾವಣೆಯ ಮತಎಣಿಕೆಯ ದಿನ, ಮತ್ತೊಂದು ಟಿ—20 ಪಂದ್ಯ. ಗುಜರಾತ್ ಮತ್ತು ಹಿಮಾಚಲಪ್ರದೇಶಗಳ ಅಸೆಂಬ್ಲಿ ಚುನಾವಣಾ ಫಲಿತಾಂಶಗಳು ಅಂದು ಘೋಷಿತವಾಗುತ್ತಿದ್ದವು. ಮದ್ಯಾಹ್ನ 12ರ ವೇಳೆಗೆ ನಮ್ಮ ಬಿಸಿಸುದ್ದಿ ಸ್ಪಷ್ಟವಾಗಿತ್ತು — ನರೇಂದ್ರ ಮೋದಿಯವರು ಗುಜರಾತಿನಲ್ಲಿ ಹ್ಯಾಟ್ರಿಕ್ ವಿಜಯ ಗಳಿಸಿದ್ದರು.

ಅಂದು ಸಂಜೆ ಅಹಮದಾಬಾದಿನ ಜೆಪಿ ಚೌಕದಲ್ಲಿ ಮೋದಿಯವರು ತಮ್ಮ ಪಕ್ಷದ ಬೆಂಬಲಿಗರನ್ನು ಉದ್ದೇಶಿಸಿ ಮಾತನಾಡಿದರು. “ಎಲ್ಲಾದರೂ ದೋಷವಾಗಿದ್ದರೆ, ನಾನೇನಾದರೂ ತಪ್ಪು ಮಾಡಿದ್ದರೆ ಆರು ಕೋಟಿ ಗುಜರಾತಿಗಳಿಂದ ಕ್ಷಮೆ ಯಾಚಿಸುತ್ತೇನೆ. ಗುಜರಾತ್ ಚುನಾವಣೆಗಳಿಗೆ ಮಾದರಿಯಾಗಿದೆ. ಇಡೀ ಚುನಾವಣೆ ಇಲ್ಲಿ ಅಭಿವೃದ್ಧಿ ಕಾರ್ಯಕ್ರಮಗಳ ಕುರಿತಾದ ಚರ್ಚೆಯ ಮೇಲೆ ನಡೆದಿದೆ. ಗುಜರಾತ್ ಅಭಿವೃದ್ಧಿಯನ್ನು ಅನುಮೋದಿಸಿದೆ. ಇದು ನರೇಂದ್ರ ಮೋದಿಯ ವಿಜಯವಲ್ಲ, ಬದಲಿಗೆ 6 ಕೋಟಿ ಗುಜರಾತಿಗಳದ್ದು ಮತ್ತು ಸಮೃದ್ಧಿ ಹಾಗೂ ಅಭಿವೃದ್ಧಿಗಳನ್ನು ಬಯಸುವ ಎಲ್ಲ ಭಾರತೀಯರದು.” ಇದು ವಾಡಿಕೆಯ ಚುನಾವಣಾ ವಿಜಯದ ಭಾಷಣವಲ್ಲ ಎನ್ನುವುದು ಸ್ಪಷ್ಟವಾಗಿತ್ತು. ಆ ದಿನದ ರಾಜಕೀಯ ಮಹತ್ವವನ್ನು ಅರಿತಿದ್ದ ಮೋದಿ ಹಿಂದಿಯಲ್ಲಿ ಮಾತನಾಡಿದರು, ಗುಜರಾತಿಯಲ್ಲಿ ಅಲ್ಲ. ಇದು ರಾಷ್ಟ್ರವನ್ನು ಉದ್ದೇಶಿಸಿ ಮಾಡಿದ ಭಾಷಣವಾಗಿತ್ತು. ಹುಚ್ಚೆದ್ದಿದ್ದ ಬೆಂಬಲಿಗರ ಕೈಯಲ್ಲಿ ’ಮೋದಿ 2012ರಲ್ಲಿ ಮುಖ್ಯಮಂತ್ರಿ; 2014ರಲ್ಲಿ ಪ್ರಧಾನಮಂತ್ರಿ’ ಎನ್ನುವ ಭಿತ್ತಿಪತ್ರಗಳಿದ್ದವು. ’ಪಿ.ಎಂ., ಪಿ.ಎಂ.’ ಎನ್ನುವ ಮಂತ್ರ ಅಂದು ಪಠಣವಾಗುತ್ತಿದ್ದಂತೆ ಮೋದಿ ಹೇಳಿದರು: ’ನೀವು ಬಯಸಿದಲ್ಲಿ, ಡಿಸೆಂಬರ್ 27ರಂದು ಒಂದು ದಿನದ ಮಟ್ಟಿಗೆ ಹೋಗುತ್ತೇನೆ.’

ನಮ್ಮ ಸ್ಟುಡಿಯೋದಲ್ಲಿ ಅಂದು ಸಹ ಸ್ವಪನ್ ದಾಸಗುಪ್ತ ತುಂಬ ಖುಷಿಯಾಗಿದ್ದರು. “ಇದು ಪ್ರಾರಂಭ ಮಾತ್ರ. ಈಗ ನಾವು ರಾಷ್ಟ್ರ ರಾಜಕಾರಣದಲ್ಲಿ ಮೋದಿಯವರ ಪಾತ್ರವನ್ನು ಮರುವ್ಯಾಖ್ಯಾನಿಸುವ ಪ್ರಯತ್ನ ನಡೆಯಲಿದೆ.” ಮೋದಿಯವರ ಬಗೆಗಿನ ವ್ಯಾಖ್ಯಾನವನ್ನು ಇದುವರೆಗೆ ನಿಯಂತ್ರಿಸಿದ್ದ ಎಡಪಂಥೀಯ ಸೆಕ್ಯುಲಿರಸ್ಟರ ವಿರುದ್ಧದ ವಿಜಯವಾಗಿ ಈ ಕ್ಷಣವು ಬಲಪಂಥೀಯ ಪಂಡಿತರಿಗೆ ಕಂಡಿತ್ತು.

ಸ್ಟುಡಿಯೋದಲ್ಲಿದ್ದ ಇತರರ ಮನಸ್ಸಿನಲ್ಲಿ ಇನ್ನೂ ಕೆಲವು ಸಂದೇಹಗಳು ಇದ್ದವು. ಮೋದಿಯವರ ಹ್ಯಾಟ್ರಿಕ್ ವಿಜಯಗಳನ್ನು ಗಳಿಸಿದ ಮೊದಲ ಮುಖ್ಯಮಂತ್ರಿಯೇನಲ್ಲ. ಒಡಿಶಾದ ನವೀನ್ ಪಟ್ನಾಯಕ್, ದೆಹಲಿಯ ಶೀಲಾ ದೀಕ್ಷಿತ್ ಮತ್ತು ಬೆಂಗಾಳದ ಸೋಲರಿಯದ ಜ್ಯೋತಿ ಬಸು ಇದು ಸಾಧ್ಯವೆಂದು ಈಗಾಗಲೆ ತೋರಿಸಿದ್ದರು. ಇವರುಗಳ ನಡುವೆಯೂ ಮೋದಿ ವಿಶಿಷ್ಟರೆ? ಅಹಮದಾಬಾದಿನ ಆ ಸಂಜೆಯಲ್ಲಿ ಇದೊಂದು ಭಾರತದ ರಾಜಕಾರಣದಲ್ಲಿ ಒಂದು ಪರ್ವಕಾಲವೆನ್ನುವುದನ್ನು ಸೂಚಿಸುವುದು ಏನಾದರೂ ಇದ್ದಿತೆ?

ಅಂದು ರಾತ್ರಿ ಮೋದಿಯವರನ್ನು ಅಭಿನಂದಿಸಲು ಅವರ ಗಾಂಧಿನಗರದ ಮನೆಗೆ ಫೋನ್ ಮಾಡಿದೆ. ಮಧ್ಯರಾತ್ರಿಯ ನಂತರ ಅವರು ನನಗೆ ವಾಪಸು ಕರೆ ಮಾಡಿದರು. ನನ್ನ ಅಭಿನಂದನೆಗೆ ಉತ್ತರವಾಗಿ ಅವರು ’ಧನ್ಯವಾದಗಳು, ಭೈಯ್ಯ’ ಎಂದರು. ಅವರು ಅಂದು ವಿಜಯ ಭಾಷಣವನ್ನು ಹಿಂದಿಯಲ್ಲಿ ಮಾಡಿದ್ದು ಪ್ರಧಾನಿಯಾಗಬೇಕೆನ್ನುವುದರ ಸಂಕೇತವೆ ಎಂದು ಕೇಳಿದೆ. ಚತುರೋಕ್ತಿಗಳೊಡನೆ ಶೀಘ್ರವಾಗಿ ಉತ್ತರಿಸುವ ಶಕ್ತಿಯನ್ನು ಹೊಂದಿರುವ ಮೋದಿ ತಕ್ಷಣವೆ ಉತ್ತರಿಸಿದರು: ’ರಾಜದೀಪ್, ವರದಿಗಾರರಾಗಿದ್ದ ನೀವು ಸಂಪಾದಕರಾಗಬಹುದಾದರೆ, ಮುಖ್ಯಮಂತ್ರಿಗಳಾದವರು ಪ್ರಧಾನಿಯಾಗಬಾರದೆ?’

ನಾನು ಮೊದಲ ಬಾರಿಗೆ ನರೇಂದ್ರ ದಾಮೋದರದಾಸ್ ಮೋದಿಯವರನ್ನು ಭೇಟಿ ಮಾಡಿದಾಗ ಮುಂಬಯಿಯಲ್ಲಿ ಟೈಮ್ಸ್ ಆಫ಼್ ಇಂಡಿಯಾದ ವರದಿಗಾರನಾಗಿದ್ದೆ. ಇದು 1990ರಲ್ಲಿ. ಆಗ ನಾನು ವೃತ್ತಿಯನ್ನು ಪ್ರವೇಶಿಸಿ ಇನ್ನೂ ಎರಡು ವರ್ಷಗಳೂ ಕಳೆದಿರಲಿಲ್ಲ. ಈಗಿನಂತೆ ನನ್ನ ಮತ್ತು ಮೋದಿಯವರ ಕೂದುಲುಗಳು ಬೂದಿ ಬಣ್ಣಕ್ಕೆ ತಿರುಗಿರಲಿಲ್ಲ. ನಾಜೂಕಾಗಿ ಇಸ್ತ್ರಿಮಾಡಿದ್ದ ಕುರ್ತಾ— ಪೈಜಾಮ ಧರಿಸಿದ್ದ ಅವರು ಎಲ್ಲ ಪತ್ರಕರ್ತರನ್ನೂ ಸ್ನೇಹದಿಂದ ಸ್ವಾಗತಿಸಿದರು. ಮರುಕ್ಷಣದಲ್ಲಿಯೇ ಎಲ್ಲರಿಗೂ ಅವರು ನರೇಂದ್ರಭಾಯಿಯಾಗಿಬಿಟ್ಟರು.

ಆ ದಿನದ ಸಂದರ್ಭ ಎಲ್.ಕೆ. ಅದ್ವಾನಿಯವರ ಸೋಮನಾಥದಿಂದ ಅಯೋಧ್ಯದವರೆಗಿನ ರಥಯಾತ್ರೆ. ಗುಜರಾತಿನಿಂದ ಮಹಾರಾಷ್ಟ್ರದವರೆಗಿನ ಯಾತ್ರೆಯನ್ನು ನಾನು ವರದಿಮಾಡಬೇಕಿತ್ತು. ಸೂರತ್‍ನಲ್ಲಿ ಯಾತ್ರೆಯನ್ನು ಸೇರಿ, ಅದು ದಕ್ಷಿಣ ಗುಜರಾತ್ ಮತ್ತು ಮಹಾರಾಷ್ಟ್ರ ಪ್ರವೇಶಿಸಿದಂತೆ ನಾನು ಏನಾದರೂ ವಿಶೇಷ ಅಂಶಗಳಿದ್ದರೆ, ಅವುಗಳ ಬಗ್ಗೆ ಬರೆಯಬೇಕಿತ್ತು. ಮುಂಬಯಿಯ ಸ್ಥಳೀಯ ರಾಜಕಾರಣವನ್ನು ವರದಿ ಮಾಡುತ್ತಿದ್ದ ನನ್ನಂತಹ ಕಿರಿಯ ವರದಿಗಾರನಿಗೆ ರಾಷ್ಟ್ರಮಟ್ಟದ ಪ್ರಮುಖ ಘಟನೆಯೊಂದನ್ನು ಗಮನಿಸುವ ದೊಡ್ಡ ಅವಕಾಶವೊಂದು ದೊರಕಿತ್ತು.

ಇದು ನರೇಂದ್ರ ಮೋದಿಯವರಿಗೆ ಸಹ ಒಂದು ದೊಡ್ಡ ಅವಕಾಶವಾಗಿತ್ತು. ಆಗ ಅವರು ಬಿಜೆಪಿಯ ಗುಜರಾತ್ ಘಟಕದ ಸಂಘಟನಾ ಕಾರ್ಯದರ್ಶಿಯಾಗಿದ್ದರು ಮತ್ತು ಪಕ್ಷದಲ್ಲಿ ಆರ್.ಎಸ್. ಎಸ್.ನ ಪ್ರತಿನಿಧಿಯಾಗಿದ್ದರು. ಗುಜರಾತಿನಲ್ಲಿ ರಥಯಾತ್ರೆಗೆ ಯಾವುದೆ ಸಮಸ್ಯೆಗಳಿಲ್ಲದೆ ನಡೆಯುವಂತೆ ನೋಡಿಕೊಳ್ಳುವುದು ಮತ್ತು ಆ ಮೂಲಕ ರಥಯಾತ್ರೆಗೆ ರಾಷ್ಟ್ರಾದ್ಯಂತ ಪೂರಕ ವಾತಾವರಣವನ್ನು ಸೃಷ್ಟಿಸುವುದು ಅವರ ಜವಾಬ್ದಾರಿಯಾಗಿತ್ತು. ಆ ದಿನಗಳಲ್ಲಿ ಗುಜರಾತ್ ಹಿಂದುತ್ವ ರಾಜಕಾರಣದ ಪ್ರಯೋಗಶಾಲೆಯಾಗಿ ರೂಪುಗೊಳ್ಳುತ್ತಿತ್ತು. ಅದೇ ತಾನೆ ನಡೆದಿದ್ದ ಅಸೆಂಬ್ಲಿ ಚುನಾವಣೆಗಳಲ್ಲಿ ಬಿಜೆಪಿ ಉತ್ತಮ ಪ್ರದರ್ಶನ ನೀಡಿ, 67 ಕ್ಷೇತ್ರಗಳಲ್ಲಿ ಜಯಗಳಿಸಿತ್ತು ಮತ್ತು ಜನತಾ ದಳ (ಗುಜರಾತ್)ದ ಚಿಮನಭಾಯಿ ಪಟೇಲರೊಡನೆ ಸಮ್ಮಿಶ್ರ ಸರ್ಕಾರ ರಚಿಸಿತ್ತು. ಆ ಸರ್ಕಾರವು ಹೆಚ್ಚು ಕಾಲ ಉಳಿಯಲಿಲ್ಲ. ಚಿಮನಭಾಯಿ ಕಾಂಗ್ರೆಸ್ಸಿನೊಡನೆ ತಮ್ಮ ಪಕ್ಷವನ್ನು ವಿಲೀನಗೊಳಿಸಿದರು. ಆದರೆ ಬಿಜೆಪಿ ಗುಜರಾತಿನಲ್ಲಿ ಭವಿಷ್ಯವಿರುವ ಪಕ್ಷವೆನ್ನುವುದು ಸ್ಪಷ್ಟವಾಗಿತ್ತು.

ಅದ್ವಾನಿಯವರ ನಾಯಕತ್ವದಲ್ಲಿ ಬಿಜೆಪಿ ’ಗಾಂಧಿ ಸಮಾಜವಾದ’ವನ್ನು ತ್ಯಜಿಸಿ, ಧರ್ಮ ರಾಜಕಾರಣವನ್ನು ತನ್ನ ಮುಖ್ಯ ಕಾರ್ಯಕ್ರಮವಾಗಿಸಿಕೊಂಡಿತು. ಅಯೋಧ್ಯೆಯ ರಾಮಮಂದಿರದ ವಿಚಾರವು ಈ ಹೊಸಚಿಂತನಕ್ರಮದ ಕೇಂದ್ರದಲ್ಲಿತ್ತು. 1984ರಲ್ಲಿ 2 ಕ್ಷೇತ್ರಗಳನ್ನು ಲೋಕಸಭೆಯಲ್ಲಿ ಗಳಿಸಿದ್ದ ಪಕ್ಷವು 1989ರಲ್ಲಿ 85 ಕ್ಷೇತ್ರಗಳಲ್ಲಿ ಗೆದ್ದಿತು. ಅದರ ಬೆಂಬಲಿಗರಲ್ಲಿ ಹೊಸಚೈತನ್ಯ ಕಾಣಿಸುತ್ತಿತ್ತು ಮತ್ತು ಪಕ್ಷದ ಯುವನಾಯಕರಲ್ಲಿ ಹಿಂದಿನ ತಲೆಮಾರಿನ ನಾಯಕರಲ್ಲಿ ಇಲ್ಲದ ಕ್ರಿಯಾಶೀಲತೆ ಕಂಡುಬರುತ್ತಿತ್ತು. ಪ್ರಮೋದ್ ಮಹಾಜನ್, ಸುಷ್ಮಾ ಸ್ವರಾಜ್ ಇವರುಗಳೊಡನೆ ಮೋದಿಯವರು ಹೊಸ ತಲೆಮಾರಿನ ನಾಯಕರಾಗಿದ್ದರು.

ಮುಂಬಯಿಯಲ್ಲಿ ಪತ್ರಕರ್ತನಾಗಿದ್ದ ನನಗೆ ಪ್ರಮೋದ್ ಮಹಾಜನ್ ಅವರ ಪರಿಚಯ ಮೊದಲೆ ಆಗಿತ್ತು. ಮಹಾಜನ್ ಅವರು ಪ್ರತಿಯೊಬ್ಬ ಪತ್ರಕರ್ತನ ಸ್ನೇಹಿತರಾಗಿದ್ದರು. ಯಾವಾಗಲೂ ಒಂದು ಹೇಳಿಕೆ, ಸುದ್ದಿ ಅಥವಾ ಕಥೆ ಅವರ ಬಳಿ ಸಿದ್ಧವಿರುತ್ತಿತ್ತು. ಅವರು ಬಿಜಪಿಯ ಬಹಳ ಮುಖ್ಯ ಕಾರ್ಯಕ್ರಮ ವ್ಯವಸ್ಥಾಪಕರಾಗಿದ್ದರು. 1990ರ ರಥಯಾತ್ರೆಯು ಸಹ ಅವರದೆ ಕಾರ್ಯಕ್ರಮ. ವಾಸ್ತವದಲ್ಲಿ ಅವರು ಅದರ ರಾಷ್ಟ್ರೀಯ ಸಂಯೋಜಕರಾಗಿದ್ದರು. ಈ ಮೊದಲೆ ಹೇಳಿದಂತೆ ಮೋದಿ ಈ ಕಾರ್ಯಕ್ರಮದ ಗುಜರಾತ್ ರಾಜ್ಯದ ಉಸ್ತುವಾರಿ ಹೊತ್ತಿದ್ದರು.

ಮೋದಿಯವರ ಕುರಿತಾದ ಆ ದಿನಗಳ ನನ್ನ ನೆನಪುಗಳು ಸ್ವಲ್ಪ ಮಸುಕಾಗಿವೆ. ಇದಕ್ಕೆ ಬಹುಶಃ ಒಂದು ಕಾರಣವೆಂದರೆ ಮುಂದಿನ ವರ್ಷಗಳಲ್ಲಿ ಅವರು ಗಳಿಸಿಕೊಂಡ ಬದುಕಿಗಿಂತ ದೊಡ್ಡದಾದ ವ್ಯಕ್ತಿತ್ವ. ಆದರೆ ಭವಿಷ್ಯದಲ್ಲಿ ಅವರು ಏನಾಗಬಹುದು ಎನ್ನುವುದನ್ನು ಸೂಚಿಸುತ್ತಿದ್ದ ಅವರ ವ್ಯಕ್ತಿತ್ವದ ಮೂರು ಅಂಶಗಳು ನನಗೆ ನೆನಪಿವೆ. ಮೊದಲಿಗೆ, ಅವರು ವಿವರಗಳಿಗೆ ಕೊಡುತ್ತಿದ್ದ ಮಹತ್ವ. ಪ್ರತಿ ಸಂಜೆಯೂ ರಥಯಾತ್ರೆಯನ್ನು ವರದಿ ಮಾಡುತ್ತಿದ್ದ ಪತ್ರಕರ್ತರಿಗೆ ಮುಂದಿನ ದಿನದ ಸಂಪೂರ್ಣ ಕಾರ್ಯಕ್ರಮದ ವಿವರಗಳಿದ್ದ ಮುದ್ರಿತ ಪುಟವೊಂದನ್ನು ಕೊಡುತ್ತಿದ್ದರು. ಆ ಕಾರ್ಯಕ್ರಮವನ್ನು ನಿಖರವಾಗಿ ಯೋಜಿಸಿ, ಸಂಘಟಿಸುತಿದ್ದುದು ಎದ್ದುಕಾಣುತ್ತಿತ್ತು. ಮೋದಿಯವರೆ ವೈಯಕ್ತಿಕವಾಗಿ ಪತ್ರಕರ್ತರಿಗೆ ಎಲ್ಲ ಸೌಲಭ್ಯಗಳನ್ನು ದೊರಕಿವೆಯೆ ಎಂದು ಗಮನ ಹರಿಸುತ್ತಿದ್ದರು. ಕಾರ್ಯಕ್ರಮಗಳ ಸೂಕ್ಷ್ಮ ನಿರೂಪಣೆ (ಮೈಕ್ರೊ ಮ್ಯಾನೇಜಮೆಂಟ್) ಅವರು ಮುಂದೆಯೂ ಬಳಸಿದ ಶಕ್ತಿಗಳಲ್ಲೊಂದಾಗಿತ್ತು. ಎರಡನೆಯದಾಗಿ, ಅವರ ಉಡುಪುಗಳು. ನಂತರದ ದಿನಗಳಂತೆ ಡಿಸೈನರ್ ಕುರ್ತಾಗಳನ್ನು ಆಗ ಅವರು ಧರಿಸುತ್ತಿರಲಿಲ್ಲವಾದರೂ, ಮೋದಿ ಯಾವಾಗಲೂ ಶುದ್ಧ ಮತ್ತು ಇಸ್ತ್ರಿ ಮಾಡಿದ ಉಡುಪುಗಳನ್ನು ಧರಿಸುತ್ತಿದ್ದರು ಹಾಗೂ ಇದು ಅವರನ್ನು ಇತರೆ ಆರ್.ಎಸ್.ಎಸ್. ಕಾರ್ಯಕರ್ತರಿಂದ ಭಿನ್ನವಾಗಿಸಿತ್ತು. ಮೂರನೆಯದಾಗಿ, ಮೋದಿಯವರ ಕಣ್ಣುಗಳು. ನನ್ನ ಅನುಭವದಲ್ಲಿ ಅಗಲವಾದ ಮಿನುಗುವ ಕಣ್ಣುಗಳನ್ನು ಹೊಂದಿರುವವರು ಬದುಕಿನ ಪಂದ್ಯವನ್ನು ಸೌಮ್ಯವಾಗಿ ಆಡುತ್ತಾರೆ; ಅಂತಹವರಿಗೆ ಪ್ರಾಯಶಃ ಕಿಲ್ಲರ್ ಇನ್ಸ್ಟಿಂಕ್ಟ್ ಇರುವುದಿಲ್ಲ. ಆ ದಿನಗಳಲ್ಲಿ ಮೋದಿ ತುಂಬ ನಗುತ್ತಿದ್ದರು. ಆದರೆ ಅವರ ಕಣ್ಣುಗಳು ಬಹುತೇಕ ಮಿಟುಕಿಸದೆ ಕಠೋರವಾಗಿ ಮತ್ತು ನಿಷ್ಠುರವಾಗಿ ದುರುಗುಟ್ಟಿ ನೋಡುತ್ತಿದ್ದವು. ಆ ಕಣ್ಣುಗಳು ಬದುಕೆಂಬ ಜೂಜಾಟದಲ್ಲಿ ಅತಿದೊಡ್ಡ ಬಹುಮಾನಕ್ಕಾಗಿ ಆಡುತ್ತಿದ್ದ ಆಟಗಾರನಿಗೆ ಸೇರಿದವು ಆಗಿದ್ದವು.

ಆ ದಿನಗಳಿಂದ ನನಗೆ ನೆನಪಿರುವ ಮುಖ್ಯ ಕಥನವೆಂದರೆ ರಥಯಾತ್ರೆಯೆ. ಅದು ಕೇವಲ ಮತ್ತೊಂದು ರೋಡ್‍ಶೋ ಆಗಿರಲಿಲ್ಲ. ಇದು ಚಕ್ರಗಳ ಮೇಲೇರಿದ್ದ ಧರ್ಮ ಮತ್ತು ಅದು ರಾಜಕೀಯ ಮಹಾವಿದ್ಯಮಾನವಾಗಿ ಪರಿವರ್ತಿತವಾಗಿತ್ತು. ಮಹಾಜನ್ ಮತ್ತು ಮೋದಿ ಅದರ ಸಂಘಟಕರಾಗಿದ್ದರೆ, ಅದ್ವಾನಿ ಶುಭಸಂಕೇತವಾಗಿದ್ದರು. ಆದರೆ ರಥಯಾತ್ರೆಯ ನಿಜವಾದ ತಾರೆಯರೆಂದರೆ ಹಿಂದುತ್ವದ ಪಾಪ್ಯುಲಿಸ್ಟ್ ಡೆಮೊಗಾಗ್ ಆಗಿದ್ದ ಸಾಧ್ವಿ ರೀತಾಂಬರ ಮತ್ತು ಉಮಾ ಭಾರತಿ. ಯಾತ್ರೆಯ ಸಂದರ್ಭದಲ್ಲಿ ಹಿಂದೂಗಳನ್ನು ಸಂಘಟಿಸಲು ಅವರು ಮಾಡುತ್ತಿದ್ದ ಭಾಷಣಗಳನ್ನು ನಾನು ಮರೆಯಲಾರೆ. ಅವುಗಳಲ್ಲಿ ಅಲ್ಪಸಂಖ್ಯಾತರ ಬಗ್ಗೆ ದ್ವೇಷ ಮತ್ತು ಬೈಗುಳಗಳು ತುಂಬಿರುತ್ತಿದ್ದವು. ಮುಂದಿನ ಎರಡು ದಶಕಗಳಲ್ಲಿ ನಾನು ವರದಿಗಾರ ಮತ್ತು ಸಂಪಾದಕನ ಸ್ಥಾನದಲ್ಲಿ ನಿಂತು ಹಿಂದುತ್ವವು ರಸ್ತೆಬದಿಯ ಗಲಾಟೆ ಮತ್ತು ರಥಯಾತ್ರೆಗಳಿಂದ ರಾಷ್ಟ್ರ ರಾಜಕಾರಣದ ಮುಖ್ಯ ಚರ್ಚೆಗಳಲ್ಲಿ ತನ್ನ ಸ್ಥಾನವನ್ನು ಗಳಿಸಿಕೊಂಡದ್ದನ್ನು ನೋಡಿದೆ.

ನಾನು ಮತ್ತೆ ಮೋದಿಯವರನ್ನು ಭೇಟಿಯಾದಾಗ, ನಾವಿಬ್ಬರೂ ಬದುಕಿನ ಮತ್ತೊಂದು ಮೆಟ್ಟಿಲನ್ನು ಹತ್ತಿದ್ದೆವು. ನಾನು ಟೆಲಿವಿಷನ್ ಪತ್ರಿಕೋದ್ಯಮವನ್ನು ಪ್ರವೇಶಿಸಿದ್ದರೆ, ಮೋದಿಯವರು ಗುಜರಾತಿನ ಬಿಜೆಪಿ ಘಟಕದ ಉದಯೋನ್ಮುಖ ತಾರೆಯಾಗಿದ್ದರು. 1995ರ ಗುಜರಾತ್ ವಿಧಾನಸಭಾ ಚುನಾವಣೆಯನ್ನು ನಾನು ಎನ್.ಡಿ.ಟಿ.ವಿ.ಗೆ ವರದಿ ಮಾಡುತ್ತಿದ್ದೆ. ಫಲಿತಾಂಶಗಳು ಬರಲಾರಂಭಿಸಿದಂತೆ, ಅಹಮದಾಬಾದಿನ ಬಿಜೆಪಿ ಪಕ್ಷದ ಕಚೇರಿಯಲ್ಲಿ ಹೆಚ್ಚಿನ ನಿರೀಕ್ಷೆಗಳಿದ್ದವು. ಸಂಜೆಯ ವೇಳೆಗೆ ಬಿಜೆಪಿಗೆ ಮೂರನೆಯ ಎರಡರಷ್ಟು ಬಹುಮತ ದೊರೆಕಿತು. ಪಕ್ಷದ ಹಿರಿಯ ನಾಯಕರುಗಳೆಲ್ಲ ಸಿಹಿ ಹಂಚುತ್ತ ಸಂಭ್ರಮದಲ್ಲಿದ್ದರೆ, ಚುನಾವಣಾ ಪ್ರಚಾರವನ್ನು ನಿರ್ವಹಿಸಿದ್ದ ಮೋದಿಯವರು ಮೂಲೆಯಲ್ಲಿ ನಿಂತಿದ್ದರು. ಆದರೆ ಮೋದಿಯವರು ’ಇದು ನನ್ನ ಬದುಕಿನ ಅತ್ಯಂತ ಸಂತೋಷದ ಕ್ಷಣ’ ಎಂದು ಕ್ಯಾಮರಾದ ಮುಂದೆ ಹೇಳಿದ್ದು ನೆನಪಿದೆ.

19 ಮಾರ್ಚ್, 1995ರಂದು ಕೇಶುಭಾಯಿ ಪಟೇಲರು ಗುಜರಾತಿನ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ನಂತರದ ದಿನಗಳಲ್ಲಿ, ಗುಜರಾತಿನ ಸಂಘ ಪರಿವಾರದಲ್ಲಿ ಒಡಕುಗಳು ಮೂಡಿದವು. ಅಕ್ಟೋಬರ್ ಹೊತ್ತಿಗೆ ವಘೇಲಾರ ನೇತೃತ್ವದ ಬಣವು ಕೇಶುಭಾಯಿ ಪಟೇಲ್ ಅವರನ್ನು ರಾಜೀನಾಮೆ ನೀಡುವಂತೆ ಮಾಡಿತು. ಆಗ ರೂಪಿಸಲಾದ ಹೊಂದಾಣಿಕೆಯ ಸೂತ್ರದ ಪ್ರಕಾರ ಸುರೇಶ್ ಮೆಹ್ತಾ ಮುಖ್ಯಮಂತ್ರಿಯಾದರು. ಭಿನ್ನಮತವನ್ನು ಬೆಳಸಿದ ಆರೋಪವನ್ನು ಹೊತ್ತ ಮೋದಿಯವರನ್ನು ಉತ್ತರ ಭಾರತಕ್ಕೆ ಕಳುಹಿಸಲಾಯಿತು. ಅಲ್ಲಿ ಅವರಿಗೆ ಹರ್ಯಾಣ ಮತ್ತು ಹಿಮಾಚಲಪ್ರದೇಶ ರಾಜ್ಯಗಳ ಉಸ್ತುವಾರಿಯನ್ನು ನೀಡಿ ಪಕ್ಷದ ರಾಷ್ಟ್ರೀಯ ಕಾರ್ಯದರ್ಶಿಯಾಗಿ ನೇಮಿಸಲಾಯಿತು.

ಈ ದಿನಗಳು ಮೋದಿಯವರ ರಾಜಕೀಯ ವನವಾಸದ ದಿನಗಳು. ‘ಅವರಿಗೆ ಇನ್ನೂ ಗುಜರಾತಿನ ಮುಖ್ಯಮಂತ್ರಿಯಾಗಬೇಕೆನ್ನುವ ಆಸೆಯಿದೆ’ ಎಂದು ನಮ್ಮಿಬ್ಬರ ಸಾಮಾನ್ಯ ಸ್ನೇಹಿತರೊಬ್ಬರು ಹಲವು ಬಾರಿ ಹೇಳಿದರು. ಆದರೆ ಮೋದಿಯವರು ತಮ್ಮ ಮಹತ್ವಾಕಾಂಕ್ಷೆಯ ಕುರಿತಾಗಿ ಮುಕ್ತವಾಗಿ ಮಾತನಾಡುತ್ತಿರಲಿಲ್ಲ. ಬದಲಿಗೆ ದೆಹಲಿಯಲ್ಲಿ ನೆಲಸಿದ ನಂತರ ಮೋದಿಯವರು ರಾಜ್ಯ ರಾಜಕಾರಣದ ಬದಲು ರಾಷ್ಟ್ರೀಯ ವಿಷಯಗಳ ಬಗ್ಗೆ ಮಾತನಾಡುವುದನ್ನು ಇಷ್ಟಪಡುತ್ತಿದ್ದರು. ಆಗ ತಾನೆ ಖಾಸಗಿ ಟೆಲಿವಿಷನ್ ಚಾನೆಲುಗಳು ಆರಂಭವಾಗಿದ್ದವು. ಹಿಂದಿಯಲ್ಲಿ ಉತ್ತಮವಾಗಿ ಮಾತನಾಡುತ್ತಿದ್ದ ಮೋದಿಯವರು ಪ್ರೈಮ್‍ಟೈಮ್ ಟೆಲಿವಿಷನ್ನಿಗೆ ಸೂಕ್ತವಾದ ವ್ಯಕ್ತಿಯಾಗಿದ್ದರು. 1990ರ ದಶಕದ ಕಡೆಯಭಾಗದಲ್ಲಿ ಅವರು ಟೆಲಿವಿಷಿನ್ನಿಗೆ ಚೆನ್ನಾಗಿ ಹೊಂದಿಕೊಂಡರು. ನನ್ನ ಅನುಭವದಲ್ಲಿಯೇ ತುರ್ತು ಇದ್ದಾಗ ಸುದ್ದಿಕಾರ್ಯಕ್ರಮಗಳಿಗೆ ಅತಿಥಿಯಾಗಿ ಬರಲು ಒಪ್ಪುತ್ತಿದ್ದರು.

ನಾಲ್ಕು ವರ್ಷಗಳಲ್ಲಿ ನಾಲ್ವರು ಮುಖ್ಯಮಂತ್ರಿಗಳನ್ನು ಕಂಡಿದ್ದ ಗುಜರಾತಿನಿಂದ ಮೋದಿಯವರನ್ನು ಇನ್ನೂ ಹೊರಗಿಡಲಾಗಿತ್ತು. ತಮ್ಮ ಸಮಕಾಲೀನರಿಗೆ ಹೋಲಿಸಿದರೆ, ಅವರಿನ್ನೂ ತಮ್ಮದೆ ಆದ ವಿಶಿಷ್ಟ ಐಡೆಂಟಿಟಿಯನ್ನು ಕಟ್ಟಿಕೊಳ್ಳಲು ಇನ್ನೂ ಹೆಣಗುತ್ತಿದ್ದರು. ಪ್ರಮೋದ್ ಮಹಾಜನ್, ಸುಷ್ಮಾ ಸ್ವರಾಜ್ ಮತ್ತು ಅರುಣ್ ಜೇಟ್ಲಿ ಮೋದಿಯವರಿಗಿಂತ ಹೆಚ್ಚಿನ ಸ್ಥಾನಮಾನಗಳನ್ನು ಪಡೆದಿದ್ದರು. ಮಹಾಜನ್ ವಾಜಪೇಯಿಯವರ ಬಲಗೈ ಬಂಟನಾಗಿ ಹೊರಹೊಮ್ಮಿದ್ದರು. ಸುಶ್ಮಾ ತಮ್ಮ ಮಾತುಗಾರಿಕೆಯಿಂದ ಪಕ್ಷದ ನಾಯಕರ ಮೆಚ್ಚುಗೆಗೆ ಪಾತ್ರರಾಗಿದ್ದರು. ಬಳ್ಳಾರಿಯಲ್ಲಿ ಸೋನಿಯಾರ ವಿರುದ್ಧ ಸ್ಪರ್ಧಿಸಲು ಅವರು ತೀರ್ಮಾನಿಸಿದ್ದು ಅವರನ್ನು ಧೈರ್ಯಶಾಲಿ ರಾಜಕೀಯ ಹೋರಾಟಗಾರ್ತಿಯೆಂಬ ಇಮೇಜ್ ಸೃಷ್ಟಿಸಿತ್ತು. ಅರುಣ್ ಜೇಟ್ಲಿಯವರು ಪಕ್ಷದೊಳಗೆ ಒಬ್ಬ ಆಲ್‍ರೌಂಡರ್ ಆಗಿ ಬಿಕ್ಕಟ್ಟುಗಳನ್ನು ನಿರ್ವಹಿಸುತ್ತ, ಪಕ್ಷದ ವಕ್ತಾರನಾಗಿ ಹೊರಹೊಮ್ಮಿದ್ದರು. ಆ ದಿನಗಳಲ್ಲಿ ನಾನು ಮೋದಿಯವರನ್ನು ಭೋಜನಕ್ಕೆ ಆಗಾಗ್ಗೆ ಭೇಟಿ ಮಾಡಿದಾಗ, ತನ್ನ ರಾಜಕೀಯ ಏಕಾಂಗಿತನವನ್ನು ಅರ್ಥಮಾಡಿಕೊಳ್ಳಲು ಹೆಣಗಾಡುತ್ತಿದ್ದ ರಾಜಕಾರಣಿಯೊಬ್ಬರು ಕಂಡುಬರುತ್ತಿದ್ದರು. 1999ರಲ್ಲಿ ಭವಿಷ್ಯದ ಬಿಜೆಪಿ ನಾಯಕರು ಯಾರು ಎಂದು ಸಮೀಕ್ಷೆ ಮಾಡಿದಾಗ, ಆ ಪಟ್ಟಿಯಲ್ಲಿ ಮೋದಿಯವರ ಹೆಸರು ಇರಲಿಲ್ಲ. ಹಾಗಾಗಿಯೆ ಟೆಲಿವಿಷನ್ನಿನ ಸುದ್ದಿಕಾರ್ಯಕ್ರಮಗಳು ಅವರಿಗೆ ಚಲಾವಣೆಯಲ್ಲಿ ಇರಲು ಮುಖ್ಯವಾಗಿದ್ದವು. ನೇರ, ಸ್ಪಷ್ಟ, ಆಕ್ರಮಕ ಮತ್ತು ಹಲವು ಬಾರಿ ಪ್ರಚೋದನಕಾರಿಯಾಗಿಯೂ ಮಾತನಾಡುತ್ತಿದ್ದ ಮೋದಿಯವರು ಪಕ್ಷದ ಒಬ್ಬ ಉತ್ತಮ ವಕ್ತಾರರೂ ಆಗಿದ್ದರು. ಇದರಿಂದ ದೆಹಲಿ ಮತ್ತು ಗುಜರಾತ್ ಎರಡೂ ಕಡೆ ಅವರ ಸಾರ್ವಜನಿಕರ ನೆನಪಿನಲ್ಲಿ ಉಳಿಯುವಂತಾಯಿತು.

2001ರ ಸೆಪ್ಟಂಬರ್ 11ರಂದು ನ್ಯೂಯಾರ್ಕಿನ ಕಟ್ಟಡಗಳ ಮೇಲೆ ವಿಮಾನಗಳ ದಾಳಿಯಾದಾಗ, ನಾನು ಬಿಜೆಪಿಯ ವಕ್ತಾರರೊಬ್ಬರನ್ನು ಹುಡುಕುತ್ತಿದ್ದೆ. ವಾಜಪೇಯಿ ಸರ್ಕಾರದ ಮಂತ್ರಿಗಳು ಯಾರು ಸಹ ಬರಲು ಸಿದ್ಧರಿರಲಿಲ್ಲ. ಅಂತಹ ಯಾವ ಮುಜುಗರವೂ ಇಲ್ಲದ ಮೋದಿಯವರು ಅಂದಿನ ಕಾರ್ಯಕ್ರಮದಲ್ಲಿ ದೇಶವು ಎದುರಿಸುತ್ತಿದ್ದ ಅತ್ಯಂತ ದೊಡ್ಡ ಅಪಾಯವೆಂದು ಇಸ್ಲಾಮಿಕ್ ಭಯೋತ್ಪಾದನೆಯ ವಿರುದ್ಧ ಮಾತನಾಡಿದರು. ಆಗ ನನಗೆ ಮೋದಿಯವರು ಇಸ್ಲಾಮ್ ಮತ್ತು ಭಯೋತ್ಪಾದನೆಯ ಬಗ್ಗೆ ಆಡಿದ ಮಾತುಗಳು ಅವರ ರಾಜಕೀಯ ವ್ಯಕ್ತಿತ್ವವನ್ನು ರೂಪಿಸುತ್ತವೆ ಎನ್ನುವುದು ತಿಳಿದಿರಲಿಲ್ಲ. ಅಲ್ಲದೆ ಮೋದಿಯವರು ಈ ಬಗೆಯ ಟೆಲಿವಿಷನ್ ಚರ್ಚೆಗಳಲ್ಲಿ ಇನ್ನು ಮುಂದೆ ಭಾಗವಹಿಸುವುದಿಲ್ಲ ಎನ್ನುವುದು ಸಹ ಗೊತ್ತಿರಲಿಲ್ಲ. ಮೋದಿಯವರ ಮತ್ತು ಈ ದೇಶದ ರಾಜಕೀಯ ಬದುಕು ಬದಲಾಗುತ್ತಿತ್ತು.

9/11ರ ಟೆಲಿವಿಷನ್ ಕಾರ್ಯಕ್ರಮದಲ್ಲಿ ಭಾಗವಹಿಸಿದ 4 ವಾರಗಳೊಳಗೆ, ಅಕ್ಟೋಬರ್ 2001ರಲ್ಲಿ ನರೇಂದ್ರ ಮೋದಿಯವರು ಗುಜರಾತಿನ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದರು. ಹೀಗೆ ರಾಜ್ಯವೊಂದರ ಮುಖ್ಯಮಂತ್ರಿಯಾದ ಮೊದಲ ಆರ್.ಎಸ್. ಎಸ್. ಪ್ರಚಾರಕರು ಅವರು. ಅದೇ ವರ್ಷದ ಪ್ರಾರಂಭದಲ್ಲಿ ಜನವರಿ 26ರ ಗಣರಾಜ್ಯ ದಿನದಂದು ಗುಜರಾತಿನಲ್ಲಿ ತೀವ್ರ ಭೂಕಂಪ ಸಂಭವಿಸಿತ್ತು. ಕೇಶುಭಾಯಿ ಪಟೇಲರ ಸರ್ಕಾರ ಪರಿಹಾರ ಮತ್ತು ಪುನರ್ವಸತಿ ಕಾರ್ಯಕ್ರಮಗಳನ್ನು ದಕ್ಷತೆಯಿಂದ ನಿರ್ವಹಿಸಿರಲಿಲ್ಲ. ಸ್ವತಃ ಮೋದಿಯವರೆ ’ನಾವು ಜನರಿಗೆ ಹೆಚ್ಚಿನ ಸಹಾಯ ನೀಡಬೇಕು, ಇಲ್ಲದಿದ್ದರೆ ಅವರು ನಮ್ಮನ್ನು ಕ್ಷಮಿಸುವುದಿಲ್ಲ’ ಎಂದು ಆ ವರ್ಷದ ಮಾರ್ಚಿನಲ್ಲಿ ನನಗೆ ಹೇಳಿದ್ದರು. ಗುಜರಾತಿನ ರಾಜ್ಯ ಘಟಕದ ನಾಯಕರುಗಳು ಮೋದಿಯವರನ್ನು ವಿರೋಧಿಸಿದರೂ ಸಹ, ಅದ್ವಾನಿ ಮತ್ತು ವಾಜಪೇಯಿಯವರು ಅವರನ್ನು ಆರ್.ಎಸ್.ಎಸ್.ನ ಬೆಂಬಲದೊಡನೆ ಮುಖ್ಯಮಂತ್ರಿ ಪದದಲ್ಲಿ ಕೂರಿಸಿದರು.

ಮೋದಿಯವರ ರಾಜಕೀಯ ಪ್ರಯಾಣ ಸುಲಭದ್ದೇನು ಆಗಿರಲಿಲ್ಲ. ಉತ್ತರ ಗುಜರಾತಿನ ಮೆಹ್ಸಾನ ಜಿಲ್ಲೆಯ ವಡನಗರದ ಕೆಳಮಧ್ಯಮ ವರ್ಗ ಕುಟುಂಬವೊಂದರಲ್ಲಿ ಜನಿಸಿದ ಮೋದಿಯವರು ಎಣ್ಣೆ ತೆಗೆಯುವ ಘಂಚಿ ಜಾತಿಗೆ ಸೇರಿದವರು. ನನ್ನೊಡನೆ ಅವರು ಮಾತನಾಡುವಾಗ ಜಾತಿಯ ವಿಷಯವನ್ನು ಹೆಚ್ಚಾಗಿ ಪ್ರಸ್ತಾಪಿಸುತ್ತಿರಲಿಲ್ಲ, ಬದಲಿಗೆ ತಮ್ಮ ಮಾರ್ಗದರ್ಶಕರಾಗಿದ್ದ ಆರ್. ಎಸ್.ಎಸ್. ಪ್ರಚಾರಕರುಗಳ ಬಗ್ಗೆ ಪ್ರಸ್ತಾಪಿಸುತ್ತಿದ್ದರು. ಮೋದಿಯವರು ಒಬ್ಬ ಎಲ್ಲರಂತಿನ ಪ್ರಚಾರಕರಾಗಿರಲಿಲ್ಲ. ಅವರಿಗೆ ರಾಜಕಾರಣದಲ್ಲಿ ತೀವ್ರ ಆಸಕ್ತಿಯಿತ್ತು ಮತ್ತು ಮಹತ್ವಾಕಾಂಕ್ಷಿಯಾಗಿದ್ದರು. ಆ ದಿನಗಳಲ್ಲಿ ಅವರು ಒಂಟಿಯಾಗಿಯೆ ಇರುತ್ತಿದ್ದರು. ಪಕ್ಷದ ಕಚೇರಿಯಲ್ಲಿ ಇತರ ನಾಯಕರುಗಳು ಅಭಿಮಾನಿಗಳಿಂದ ಸುತ್ತುಗಟ್ಟಿದ್ದರೆ, ಮೋದಿಯವರು ಪತ್ರಿಕೆಗಳನ್ನು ಓದುತ್ತ ಕುಳಿತಿರುತ್ತಿದ್ದರು.

ಹಾಗಾಗಿ ಅವರು ಮುಖ್ಯಮಂತ್ರಿಯಾದುದು ಒಂದು ಮುಖ್ಯವಾದ ಕ್ಷಣವಾಗಿತ್ತು. ಸಂಘಟಕನಾಗಿದ್ದಾಗ ಮೋದಿಯವರು ಕಷ್ಟಪಟ್ಟು ದುಡಿಯುವ, ಶ್ರದ್ಧಾಳುವಾಗಿ ಹಾಗೂ ಪಕ್ಷ ಮತ್ತದರ ಕಾರ್ಯಕ್ರಮದ ಬಗ್ಗೆ ತೀವ್ರವಾದ ಒಲವಿರುವ ವ್ಯಕ್ತಿಯಾಗಿ ತಮ್ಮನ್ನು ತಾವು ತೋರಿಸಿಕೊಂಡಿದ್ದರು. ಆದರೆ ಈಗ ಮುಂಚೂಣಿಯಲ್ಲಿ ನಿಂತು ನಾಯಕತ್ವದ ಗುಣವನ್ನು ತೋರಬಲ್ಲ ರಾಜಕಾರಣಿಯಾಗಿ ಅವರು ಕಾರ್ಯ ನಿರ್ವಹಿಸಬೇಕಿತ್ತು. ಅವರು ಅಲ್ಲಿಯವರಗೆ ಮುನಿಸಿಪಲ್ ಚುನಾವಣೆಯಲ್ಲಿಯೂ ಸ್ಪರ್ಧಿಸಿರಲಿಲ್ಲ.

ಮೋದಿಯವರ ದೊಡ್ಡ ಅವಕಾಶ ಬಂದದ್ದು 2002ರ ಫೆಬ್ರವರಿ 27ರಂದು. ಪತ್ರಕರ್ತ ಮಿತ್ರರೊಬ್ಬರ ಮೂಲಕ ನನಗೆ ಅಂದು ಬೆಳಿಗ್ಗೆ ಗೋದ್ರಾದಲ್ಲಿ ರೈಲ್ವೆ ಬೋಗಿಯೊಂದಕ್ಕೆ ಬೆಂಕಿ ಹತ್ತಿ ಉರಿದು, ಅದರಲ್ಲಿ ಅಯೋಧ್ಯೆಯಿಂದ ವಾಪಸು ಬರುತ್ತಿದ್ದ ಹಲವಾರು ಕರಸೇವಕರು ತಮ್ಮ ಪ್ರಾಣವನ್ನು ಕಳೆದುಕೊಂಡ ಬಗ್ಗೆ ತಿಳಿಯಿತು. ವಿವರಗಳು ನಿಧಾನವಾಗಿ ಅಂದು ತಿಳಿದುಬರುವ ಹೊತ್ತಿಗೆ ಇದೊಂದು ಸಾಮಾನ್ಯ ಘಟನೆಯಲ್ಲ ಎನ್ನುವುದು ಸ್ಪಷ್ಟವಾಗತೊಡಗಿತು. ಆ ಸಂಜೆ ಗೋದ್ರಾ ಘಟನೆಗಳ ಬಗ್ಗೆ ಮಾತನಾಡುತ್ತ ಮೋದಿಯವರು ಕರಸೇವಕರು ಭಯೋತ್ಪಾದಕರ ಆಕ್ರಮಣಕ್ಕೆ ಬಲಿಯಾಗಿದ್ದಾರೆ ಎಂದೂ ಸೂಚಿಸಿದರು.

ಪರಿಸ್ಥಿತಿ ಉಲ್ಬಣವಾಗಬಹುದೆಂದು ನನ್ನ ಕೆಲವು ಸಹೋದ್ಯೋಗಿಗಳು ಅಯೋಧ್ಯೆಗೆ ತೆರಳಿದರೆ ಮತ್ತೆ ಕೆಲವರು ಮರುದಿನ ಮಂಡನೆಯಾಗುತ್ತಿದ್ದ ಬಜೆಟಿನ ವರದಿ ಮಾಡಲು ದೆಹಲಿಯಲ್ಲಿಯೇ ಉಳಿದರು. ನನ್ನ ಒಳಮನಸ್ಸು ನನ್ನ ಹುಟ್ಟೂರಾದ ಅಹಮದಾಬಾದಿಗೆ ತೆರಳುವಂತೆ ಪ್ರೇರೇಪಿಸಿತು. ಮರುದಿನ ನನ್ನ ವಿಡಿಯೋ ಪತ್ರಕರ್ತ ನರೇಂದ್ರ ಗುಡವಲ್ಲಿಯೊಡನೆ ಅಹಮದಾಬಾದಿನ ವಿಮಾನವನ್ನು ಹತ್ತಿದೆ.

ನನ್ನ ಬಾಲ್ಯದಲ್ಲಿ ಬೇಸಿಗೆಯ ರಜೆಗಳನ್ನು ಅಹಮದಾಬಾದಿನ ಅಜ್ಜಿ—ತಾತರ ಮನೆಯಲ್ಲಿ ಕಳೆಯುತ್ತಿದ್ದೆ. ಹಿಂದಿ ಚಲನಚಿತ್ರಗಳು, ಕ್ರಿಕೆಟ್ ಮತ್ತು ಸೈಕ್ಲಿಂಗ್ —ಹೀಗೆ ಅಹಮದಾಬಾದಿನ ಜೀವನದ ಸರಳ ಖುಷಿಗಳನ್ನು ಸವಿಯುವ ಸ್ಥಳವಾಗಿತ್ತು. ಆದರೆ ಫೆಬ್ರವರಿಯ ಆ ದಿನ ನಾನು ಕಂಡದ್ದು ಹೊಗೆ ತುಂಬಿದ ಆಕಾಶ, ಮುಚ್ಚಿದ ಅಂಗಡಿಗಳು ಮತ್ತು ಬೀದಿಯಲ್ಲಿದ್ದ ಜನರ ದೊಂಬಿಗಳನ್ನು. ಆ ನಗರವು ನನ್ನನ್ನು ಭಯಪೀಡಿತನನ್ನಾಗಿಸಿತು. ನನ್ನ ಬಾಲ್ಯದ ಖುಷಿಯ ಕನಸುಗಳ ಅಹಮದಾಬಾದ್ ಒಂದು ಕೊಳಕು ದುಸ್ವಪ್ನದಂತೆ ಕಾಣಿಸಿತು. ಭಾರತದ ಮೊದಲ ನೇರಪ್ರಸಾರವಾಗುತ್ತಿದ್ದ ಗಲಭೆಯನ್ನು ನೋಡುವ ಅವಕಾಶ ನನಗೆ ಲಭಿಸಿತು. ಫೆಬ್ರವರಿ 28ರಿಂದ ಮುಂದಿನ 72 ಗಂಟೆಗಳ ಕಾಲ ನಾವು ಭಯಾನಕ ಘಟನೆಗಳ ಸರಣಿಯೊಂದಕ್ಕೆ ಸಾಕ್ಷಿಗಳಾಗಿದ್ದೆವು. ಈ ಘಟನೆಗಳು ರಾಜ್ಯದ ಕಾನೂನು ವ್ಯವಸ್ಥೆ ಸಂಪೂರ್ಣವಾಗಿ ಕುಸಿದುಬಿದ್ದುದನ್ನು ಸೂಚಿಸಿದವು. ಅನಾಗರಿಕ ದುಷ್ಟತನದ, ಯೋಜಿತ ದಾಳಿಗಳ ಕಥೆಗಳನ್ನು ಮತ್ತು ಮನೆಗಳನ್ನು ದರೋಡೆ ಮಾಡುತ್ತ ಜನರನ್ನು ಕೊಲ್ಲುತ್ತಿದ್ದಾಗ ಪೋಲಿಸರು ಸುಮ್ಮನೆ ನಿಂತಿದ್ದ ವರದಿಗಳನ್ನು ನಾವು ಕೇಳಿದೆವು. ನಮ್ಮ ಸುತ್ತ ನಡೆಯುತ್ತಿದ್ದ ಹತ್ಯಾಕಾಂಡವನ್ನು ಮುಂದಿನ 72 ಗಂಟೆಗಳ ಕಾಲ ನಾವು ನಿರಂತರವಾಗಿ ವರದಿ ಮಾಡಿದೆವು. ಹಲವು ಬಾರಿ ಹೆಚ್ಚು ಭಯಾನಕವಾದ ದೃಶ್ಯಗಳನ್ನು ಸ್ವಯಂ ಸೆನ್ಸಾರ್ ಮಾಡಿಕೊಂಡೆವು.

ಆದರೆ ಸರ್ಕಾರಕ್ಕೆ ಈ ಯಾವ ವಿಚಾರಗಳೂ ಹೊರಬರುವುದು ಬೇಕಿರಲಿಲ್ಲ. ’ಮತ್ತೊಂದು ಗಲಭೆಯನ್ನು ಶುರು ಮಾಡಲು ಪ್ರಯತ್ನಿಸುತ್ತಿದ್ದೀಯ?’ ಎಂದು ಪ್ರಮೋದ್ ಮಹಾಜನ್ ನನಗೆ ಕೋಪದಿಂದ ಫೋನಿನಲ್ಲಿ ಕೇಳಿದರು. ಆದರೆ ಅಂದಿನ ಕೊಳಕು ವಾಸ್ತವವನ್ನು ತೋರಿಸಿದರೆ ಕೇಂದ್ರಸರ್ಕಾರವು ಸೈನ್ಯವನ್ನು ಅಹಮದಾಬಾದಿನ ರಸ್ತೆಗಳಿಗೆ ಕಳುಹಿಸಬಹುದೆಂದು ನಾನು ಆಶಿಸಿದೆ.

ಮೋದಿಯವರನ್ನು ಮಾರ್ಚ್ 2ರ ಸಂಜೆಯವರಗೆ ಪತ್ರಿಕಾ ಗೋಷ್ಠಿಯಲ್ಲಿ ನೋಡುವ ತನಕ ನಾನು ಭೇಟಿಯಾಗಲಿಲ್ಲ. ಅಂದು ಬೆಳಿಗ್ಗೆ ಅವರು ನನಗೆ ಕರೆ ಮಾಡಿ ನಮ್ಮ ವರದಿಗಳು ಪ್ರಚೋದಕವಾಗಿವೆ ಎಂದು ದೂರಿದ್ದರು. ನನ್ನ ವಿವರಣೆಗಳು ಅವರಿಗೆ ಸಮಾಧಾನ ತಂದಿರಲಿಲ್ಲ. ಕೆಲವು ಗಂಟೆಗಳ ನಂತರ ನಮ್ಮ ಚಾನೆಲ್ಲಿನ ಪ್ರಸಾರವನ್ನು ಗುಜರಾತಿನಲ್ಲಿ ನಿಷೇಧಿಸಲಾಯಿತು. ಮೋದಿಯವರ ಪತ್ರಿಕಾ ಗೋಷ್ಠಿ ನಡೆಯಬೇಕಾಗಿದ್ದ ದಿನದಂದು ಬೆಳಿಗ್ಗೆ ಟೈಮ್ಸ್ ಆಫ಼್ ಇಂಡಿಯಾದಲ್ಲಿ ಮೋದಿಯವರ ಹೇಳಿಕೆಯೊಂದು ವರದಿಯಾಗಿತ್ತು. ಗುಜರಾತಿನ ಗಲಭೆಗಳು ಗೋಧ್ರಾ ಘಟನೆಗೆ ನೇರ ಪ್ರತಿಕ್ರಿಯೆ ಎನ್ನುತ್ತ ನ್ಯೂಟನ್ನನ ನಿಯಮವನ್ನು ಮೋದಿಯವರು ಬಳಸಿದ್ದರೆಂದು ಹೇಳಲಾಗಿತ್ತು. ಮೋದಿಯವರು ತಾವು ಅಂತಹ ಹೇಳಿಕೆಯನ್ನು ನೀಡಿಲ್ಲ ಎಂದರು. ಸ್ವಾಭಾವಿಕವಾಗಿಯೆ ಅಂದಿನ ಪತ್ರಿಕಾಗೋಷ್ಠಿಯಲ್ಲಿನ ವಾತಾವರಣ ಹಗೆತನದ್ದಾಗಿತ್ತು.

ಪತ್ರಿಕಾಗೋಷ್ಠಿಯ ನಂತರ ನಾನು ಮೋದಿಯವರಿಗೆ ನಮ್ಮ ವರದಿಗಳ ಬಗ್ಗೆ ವಿವರಣೆ ನೀಡಿದೆ ಮತ್ತು ನಮಗೆ ಮತ್ತೊಂದು ಸಂದರ್ಶನ ನೀಡುವಂತೆ ಅವರನ್ನು ಒಪ್ಪಿಸಿದೆ. ಆ ಸಂದರ್ಶನದಲ್ಲಿ ಗಲಭೆಗಳನ್ನು ನಿಯಂತ್ರಿಸುವಲ್ಲಿ ರಾಜ್ಯಸರ್ಕಾರದ ವೈಫಲ್ಯದ ಬಗ್ಗೆ ಕೇಳಿದೆ. ಇದೊಂದು ಮಾಧ್ಯಮಗಳ ಪಿತೂರಿ ಎಂದು ವಾದಿಸಿದ ಮೋದಿ ತಾವು ಪರಿಸ್ಥಿತಿಯನ್ನು ನಿಯಂತ್ರಿಸಲು ಎಲ್ಲ ಪ್ರಯತ್ನಗಳನ್ನೂ ಮಾಡಿದ್ದಾಗ ವಿವರಿಸಿದರು. ನಾನು ಅವರ ಕ್ರಿಯೆ—ಪ್ರತಿಕ್ರಿಯೆ ಹೇಳಿಕೆಯ ಬಗ್ಗೆ ಮತ್ತೆ ಕೇಳಿದೆ. ಆಗ ಅವರು ಕ್ರಿಯೆ—ಪ್ರತಿಕ್ರಿಯೆಗಳ ಸರಣಿಯು ಈಗ ನಡೆಯುತ್ತಿದೆ. ಕ್ರಿಯೆ—ಪ್ರತಿಕ್ರಿಯೆಗಳೆರಡೂ ನಿಲ್ಲಬೇಕು ಎಂದರು.

ಮೋದಿಯವರ ವಿವರಣೆಯನ್ನು ಬಹುಮಟ್ಟಿಗೆ ಒಪ್ಪಿಕೊಂಡು, ಅವರು ಹಿಂಸೆಯನ್ನು ನಿಲ್ಲಿಸಲು ಬದ್ಧರಾಗಿದ್ದಾರೆ ಎನ್ನುತ್ತ ಅವರ ನಿವಾಸದಿಂದ ಹೊರಬಂದೆವು. ನಮ್ಮ ತೀರ್ಮಾನದ ಬಗ್ಗೆ ನಮಗೆ ಒಂದು ಗಂಟೆಯೊಳಗೆ ಸಂದೇಹ ಮೂಡಲಾರಂಭಿಸಿತು. ಮೋದಿಯವರ ಗಾಂಧಿನಗರದ ನಿವಾಸದಿಂದ ಕೆಲವೆ ಕಿಲೊಮೀಟರ್ ದೂರದಲ್ಲಿ ವಿ.ಹೆಚ್.ಪಿ.—ಬಜರಂಗದಳದ ಕಾರ್ಯಕರ್ತರು ಕತ್ತಿ, ಲಾಠಿ ಹಿಡಿದು ರಸ್ತೆತಡೆಯೊಂದನ್ನು ರಚಿಸಿದ್ದರು. ನಮ್ಮ ಚಾಲಕ ಅದನ್ನು ತಪ್ಪಿಸಲು ಪ್ರಯತ್ನಿಸಿದಾಗ, ವಾಹನದ ಗಾಜಿಗೆ ಕೊಡಲಿ ಪ್ರಹಾರವಾಯಿತು. ’ನೀವು ಹಿಂದುಗಳೆ ಅಥವಾ ಮುಸ್ಲಿಮರೆ’ ಎಂದು ಕೂಗುತ್ತಿದ್ದ ಆ ಗುಂಪಿನಿಂದ ತಪ್ಪಿಸಿಕೊಳ್ಳಲು ನಾನು ಏರುದನಿಯಲ್ಲಿ ಅವರೊಡನೆ ಕೂಗಾಡಬೇಕಾಯಿತು. ಆಗ ತಾನೆ ಮುಖ್ಯಮಂತ್ರಿಗಳೊಡನೆ ಮಾಡಿದ್ದ ಸಂದರ್ಶನವನ್ನು ಅವರಿಗೆ ತೋರಿಸಿ, ಮೋದಿಯವರಿಗೆ ದೂರು ನೀಡುವುದಾಗಿ ಹೆದರಿಸಬೇಕಾಯಿತು. ನಾವು ಹೆದರಿದ್ದೆವು ಮತ್ತು ನಡುಗಲಾರಂಭಿಸಿದೆವು. ಹಿಂದು ಮಿಲಿಟೆಂಟರ ಗುಂಪುಗಳು ಮಾರ್ಚ್ 2ರ ರಾತ್ರಿ ಮುಕ್ತವಾಗಿ ರಸ್ತೆಯಲ್ಲಿ ಚಲಿಸುತ್ತಿದ್ದವು. ಹಾಗಾದರೆ ಮುಖ್ಯಮಂತ್ರಿಗಳು ಹೇಗೆ ಪರಿಸ್ಥಿತಿ ನಿಯಂತ್ರಣದಲ್ಲಿದೆ ಎಂದು ಹೇಳುತ್ತಾರೆ?

ಗುಜರಾತ್ ಗಲಭೆಗಳ ಕುರಿತಾದ ನನ್ನ ವರದಿಗಳು ಮೋದಿಯವರೊಡನೆ ನನ್ನ ಸಂಬಂಧವನ್ನು ಛಿದ್ರಗೊಳಿಸಿದವು. ಅಲ್ಲಿಯವರಗೆ ನಾವು ಸ್ನೇಹಿತರಾಗಿದ್ದೆವು, ಮುಕ್ತವಾಗಿ ವಿಚಾರಗಳು ಹಂಚಿಕೊಂಡಿದ್ದೆವು ಮತ್ತು ಗುಜರಾತಿ ಭಾಷೆಯಲ್ಲಿ ಸಂತೋಷವಾಗಿ ಆಗಾಗ ಮಾತನಾಡುತ್ತಿದ್ದೆವು. ಅವರು ನನ್ನ ಟೆಲಿವಿಷನ್ ಕಾರ್ಯಕ್ರಮಗಳಿಗೆ ಯಾವಾಗಲೂ ಬರುತ್ತಿದ್ದರು. ಆದರೆ ಈಗ ಒಂದು ರೀತಿಯ ಜಾಗರೂಕತೆ ನುಸುಳಿತ್ತು. ಯಾವುದೆ ಟೀಕೆಯನ್ನು ಸಹಿಸದ ರಾಜಕಾರಣಿಯಾಗಿಬಿಟ್ಟಿದ್ದ ಮೋದಿಯವರು ಈಗ ನನ್ನನ್ನು ತನ್ನನ್ನು ಸದಾ ವಿರೋಧಿಸುವ ಇಂಗ್ಲೀಷ್ ಭಾಷೆಯ ಮಾಧ್ಯಮಗಳ ಪ್ರತಿನಿಧಿಯಂತೆ ನೋಡತೊಡಗಿದರು. ಹಾಗೂ ನಾನು ಅವರು ಉದ್ದೇಶಪೂರ್ವಕವಾಗಿಯೆ ಗಲಭೆಗಳು ಮುಂದುವರೆಯಲು ಬಿಟ್ಟಿದ್ದರೆ ಎಂದು ಸಂಶಯ ಪಡುತ್ತಿದ್ದೆ. ಪರಸ್ಪರರಲ್ಲಿ ಗೌರವಿವಿದ್ದ ಸಂಬಂಧದಿಂದ ಎದುರಾಳಿಗಳಾಗಿ ಬಿಟ್ಟಿದ್ದೆವು. ನನ್ನ ವರದಿಗಳ ಕಾರಣದಿಂದ ನನ್ನನ್ನು ಅವರು ಕ್ಷಮಿಸಲಿಲ್ಲ ಮತ್ತು ಅವರ ರಾಜಕಾರಣವನ್ನು ಆ ದಿನಗಳಲ್ಲಿ ನಾನು ನೋಡಿದ್ದರಿಂದ ನನಗೆ ಬೇರ್ಪಡಿಸಲಾಗಲಿಲ್ಲ.

ಈ ಘಟನೆಗಳಾದ ಒಂದು ದಶಕದ ನಂತರ ನಾನು ಅವುಗಳ ಬಗ್ಗೆ ತರ್ಕಬದ್ಧವಾಗಿ ಯೋಚಿಸಲು ಪ್ರಯತ್ನಿಸಿದೆ. ಸತ್ಯವು ಕಪ್ಪು— ಬಿಳುಪುಗಳಿಗಿಂತಲೂ ಬೂದು ಬಣ್ಣದ ವಿವಿಧ ಛಾಯೆಗಳಲ್ಲಿದೆ ಎಂದು ನನಗನ್ನಿಸುತ್ತಿದೆ. ಸತ್ಯವೆಂದರೆ ಈ ದೇಶದಲ್ಲಿ ಯಾವುದೆ ದೊಡ್ಡ ಗಲಭೆಯೂ ಸರ್ಕಾರದ ಅಸಾಮಥ್ರ್ಯ ಅಥವಾ ಪಾಲುದಾರಿಕೆಯಿಲ್ಲದೆ ಅಥವಾ ಎರಡೂ ಇಲ್ಲದೆ ಸಂಭವಿಸುವುದಿಲ್ಲ. ನನ್ನ ತೀರ್ಮಾನವೇನೆಂದರೆ ಮೋದಿ ಸರ್ಕಾರವು ಸಂಪೂರ್ಣವಾಗಿ ಅಸಮರ್ಥವಾಗಿತ್ತು. ಏಕೆಂದರೆ ಗೋಧ್ರಾ ಹಿಂಸೆಯು ರಾಜ್ಯದಲ್ಲಿ ಸೇಡಿನ ಘಟನೆಗಳ ಸರಣಿಯನ್ನೆ ಪ್ರಾರಂಭಿಸುತ್ತದೆ ಎನ್ನುವುದು ಅದಕ್ಕೆ ಗೊತ್ತಿತ್ತು. ಆದರೂ ಅದು ಹಿಂಸೆಯನ್ನು ತಡೆಯಲು ಮಾಡಬೇಕಿದ್ದ ಎಲ್ಲ ಪ್ರಯತ್ನಗಳನ್ನೂ ಮಾಡಲಿಲ್ಲ. ಹಿಂಸೆಯು ನಿಂತದ್ದು ಸೈನ್ಯವು ನಗರವನ್ನು ಪ್ರವೇಶಿಸಿದ ನಂತರವೆ.

ಮತ್ತೊಂದು ನಿಜವಾದ ಅಂಶವೆಂದರೆ ಬಹುಶಃ ಫೆಬ್ರವರಿ 2002ರಲ್ಲಿ ಗುಜರಾತಿನ ನಿಜವಾದ ಬಾಸ್ ಮೋದಿಯವರಾಗಿರಲಿಲ್ಲ, ಬದಲಿಗೆ ವಿ.ಹೆಚ್.ಪಿ.ಯ ಪ್ರಧಾನ ಕಾರ್ಯದರ್ಶಿಯಾಗಿದ್ದ ಪ್ರವೀಣ್ ತೊಗಾಡಿಯಾ ಆಗಿದ್ದರು. 2002ರ ಗಲಭೆಗಳ ರಿಂಗ್ ಮಾಸ್ಟರ್ ಅವರೆ ಆಗಿದ್ದರು. ಜೊತೆಗೆ ತನ್ನ ಪಾತ್ರದ ಬಗ್ಗೆ ಹೆಮ್ಮೆಯಿಂದ, ಮುಕ್ತವಾಗಿ ಮಾತನಾಡುತ್ತಿದ್ದರು: ’ನಮ್ಮ ಮೇಲೆ ದಾಳಿಯಾದಾಗ, ನಾವು ಸುಮ್ಮನಿರಬೇಕೆಂದು ನೀವು ನಿರೀಕ್ಷಿಸುತ್ತೀರಾ? ಈ ಇಸ್ಲಾಮಿಕ್ ಭಯೋತ್ಪಾದಕರಿಗೆ ಪಾಠ ಕಲಿಸಬೇಕು.’ ಮುಂದಿನ ವರ್ಷಗಳಲ್ಲಿ ತೊಗಾಡಿಯಾರನ್ನು ನಿಯಂತ್ರಿಸಲು ಮೋದಿ ಯಶಸ್ವಿಯಾದರು. ಆದರೆ 2002ರಲ್ಲಿ ಅದಾಗಲಿಲ್ಲ.

ಗುಜರಾತ್ ಗಲಭೆಗಳ ತಕ್ಷಣದಲ್ಲಿಯೇ ಬಿಜೆಪಿ ಪಕ್ಷ ಮತ್ತು ರಾಜಕೀಯ ವ್ಯಯಸ್ಥೆಯೊಳಗೆ ಪ್ರಶ್ನೆಗಳು ಏಳಲಾರಂಭಿಸಿದವು. ಪ್ರತಿಪಕ್ಷಗಳು ಮೋದಿಯವರ ರಾಜೀನಾಮೆಯನ್ನು ಕೇಳಿದವು. ಅಂತರರಾಷ್ಟ್ರೀಯ ಮಾನವಹಕ್ಕು ಸಂಘಟನೆಗಳು ತನಿಖೆಗೆ ಒತ್ತಾಯಿಸಿದರೆ, ಮಾಧ್ಯಮ ಮತ್ತು ನ್ಯಾಯಾಂಗಗಳು ಪ್ರಶ್ನೆಗಳನ್ನು ನಿರಂತರವಾಗಿ ಕೇಳಲಾರಂಭಿಸಿದವು. ಏಪ್ರಿಲಿನಲ್ಲಿ ಗೋವಾದಲ್ಲಿ ನಡೆಯಲಿದ್ದ ಬಿಜೆಪಿಯ ರಾಷ್ಟ್ರೀಯ ಕಾರ್ಯಕಾರಣಿ ಸಭೆಯಲ್ಲಿ ಏನಾದರೂ ತೀರ್ಮಾನವಾಗಬೇಕಿತ್ತು.

ಗುಜರಾತಿನ ಬಗ್ಗೆ ಮಾತನಾಡಿದ ಮೋದಿಯವರು ತಮ್ಮ ಪದವಿಗೆ ರಾಜಿನಾಮೆ ನೀಡಿ, ಕಾರ್ಯಕಾರಣಿಯಲ್ಲಿ ಗಲಭೆಗಳ ವಿಚಾರವಾಗಿ ಮುಕ್ತ ಮತ್ತು ಪ್ರಾಮಾಣಿಕ ಚರ್ಚೆ ನಡೆಯಲಿ. ಪಕ್ಷವು ಯಾವ ದಿಕ್ಕಿನಲ್ಲಿ ಮುನ್ನಡೆಯಬೇಕು ಎನ್ನುವುದು ತೀರ್ಮಾನವಾಗಲಿ ಎಂದರು. ಪಕ್ಷವು ಈ ವಿಚಾರದಲ್ಲಿ ಎರಡಾಗಿತ್ತು. ಮೋದಿಯವರು ರಾಜಿನಾಮೆ ನೀಡಿದರೆ ಗುಜರಾತಿನಲ್ಲಿ ಚುನಾವಣೆಯನ್ನು ಎದುರಿಸುವುದು ಅಸಾಧ್ಯವೆಂದು ಅದ್ವಾನಿಯವರು ಸ್ಪಷ್ಟವಾಗಿ ಹೇಳಿದರು. ಅಷ್ಟೆ ಸ್ಪಷ್ಟತೆಯಿಂದ ವಾಜಪೇಯಿಯವರು ಗಲಭೆಯನ್ನು ನಿಯಂತ್ರಿಸುವಲ್ಲಿ ಮೋದಿಯವರ ವೈಫಲ್ಯವು ಕೇಂದ್ರದಲ್ಲಿ ಸಮ್ಮಿಶ್ರ ಸರ್ಕಾರದ ಮೇಲೊಂದು ಕಪ್ಪುಚುಕ್ಕಿ ಎಂದರು. ಅಂತಿಮವಾಗಿ ಅದ್ವಾನಿಯವರ ವಾದಕ್ಕೆ ವಿಜಯ ಲಭಿಸಿತು ಮತ್ತು ಕಾರ್ಯಕಾರಣಿಯು ಮೋದಿಯವರ ರಾಜಿನಾಮೆಯನ್ನು ತಿರಸ್ಕರಿಸಿತು.

ಇದರ ನಂತರ ಮೋದಿಯವರು ತನ್ನ ಗೆಲುವಿನ ಚೈತನ್ಯವನ್ನು, ಪ್ರಚಾರದ ಪ್ರಣಾಳಿಕೆಯನ್ನು ಕಂಡುಕೊಂಡರು. ಆ ಕ್ಷಣದಿಂದ ಅವರು ತಮ್ಮನ್ನು ಆರು ಕೋಟಿ ಗುಜರಾತಿಗಳೊಡನೆ, ಅವರ ಆಸೆ—ಆಕಾಂಕ್ಷೆಗಳು, ನೋವಿನ ಭಾವನೆಗಳೊಡನೆ ಗುರುತಿಸಿಕೊಳ್ಳಲಾರಂಭಿಸಿದರು. ರಾಜ್ಯ ಮತ್ತು ಜನರನ್ನು ತಾವು ಭಯೋತ್ಪಾದಕರಿಂದ ರಕ್ಷಿಸಿದ್ದಾಗಿಯೂ, ಆದರೂ ಸ್ಯೂಡೊ—ಸೆಕ್ಯುಲರಿಸ್ಟರು ಅವರ ವಿರುದ್ಧವಾಗಿದ್ದಾರೆಂದು ಹೇಳಿದರು. ಈ ರಾಜಕೀಯ ಕಥನವನ್ನು ಆಧಾರವಾಗಿಟ್ಟುಕೊಂಡು ಅವರು ಚುನಾವಣೆಯನ್ನು ಅವಧಿಗೆ ಮೊದಲೆ ನಡೆಸಲು ನಿರ್ಧರಿಸಿದರು. ಚುನಾವಣಾ ಆಯೋಗವು ಅವರ ಕರೆಯನ್ನು ತಿರಸ್ಕರಿಸಿ, ಇನ್ನೂ ಕಾನೂನು ಸುವ್ಯವಸ್ಥೆ ಸರಿಹೋಗಿಲ್ಲ ಎಂದಾಗ, ಮೋದಿ ಗೌರವಯಾತ್ರೆಯನ್ನೂ ನಡೆಸಲು ತೀರ್ಮಾನಿಸಿದರು.

2002ರ ಡಿಸೆಂಬರಿನಲ್ಲಿ ನಡೆದ ಚುನಾವಣೆಯಲ್ಲಿ ಬಿಜೆಪಿಗೆ 126 ಕ್ಷೇತ್ರಗಳಲ್ಲಿ ಭಾರಿ ವಿಜಯ ಲಭಿಸಿತು. ಪಕ್ಷದ ಕಛೇರಿಯಲ್ಲಿ ನೆರೆದಿದ್ದ ಕಾರ್ಯಕರ್ತರು ಸೇಡು ತೀರಿಸಿಕೊಳ್ಳುವ ಮನೋಭಾವದವರಾಗಿದ್ದರು. ಗುಜರಾತಿನ ಮತ್ತು ಅದರ ಮುಖ್ಯಮಂತ್ರಿಯನ್ನು ದೂಷಿಸಿದ್ದವರವರಿಗೆ ಪಾಠ ಕಲಿಸಲು ಅವರು ನಿರ್ಧರಿಸಿದ್ದರು. ಹಲವು ಪತ್ರಕರ್ತರು ಹಿಂಬಾಗಿಲಿನಿಂದ ಹೊರಹೋಗಬೇಕಾಯಿತು. ಮೋದಿಯವರು ಸಹ ಪರಿಸ್ಥಿತಿಯನ್ನು ತಿಳಿಗೊಳಿಸುವ ಬದಲು, ’ಇಂದು ನೀವೆಲ್ಲರೂ ನಿಮಗೆ ಸರಿಯಾದ ಉತ್ತರ ನೀಡಿರುವ ಗುಜರಾತಿನ ಜನರ ಕ್ಷಮೆ ಕೇಳಬೇಕು’ ಎಂದು ಪತ್ರಕರ್ತರಿಗೆ ಬೋಧಿಸಿದರು. ಬೆಂಬಲಿಗರಿಂದ ಸುತ್ತುವರೆದಿದ್ದ ಮೋದಿ ಭಯ ಹುಟ್ಟಿಸುವಂತೆ ಇದ್ದರು. ಕಠಿಣ ಕಣ್ಣುಗಳು, ಕ್ಯಾಮರಾದೆಡೆಗೆ ಚಾಚುತಿದ್ದ ಬೆರಳು ಮತ್ತು ಭಾವರಹಿತ ಮುಖ. ಅಂದಿನ ಸಂದರ್ಶನವು ನಾನು ಮಾಡಿರುವ ಅತ್ಯಂತ ಕಠಿಣ ಸಂದರ್ಶನಗಳಲ್ಲಿ ಒಂದು.

ಈ ಎಲ್ಲ ಗೊಂದಲ ಮತ್ತು ಬಿಕ್ಕಟ್ಟುಗಳ ನಡುವೆ ಮೋದಿ ತಮ್ಮ ರಾಜಕೀಯ ಗುರಿಗಳನ್ನು ಮರೆಯಲಿಲ್ಲ. ಬಿಜೆಪಿಯೊಳಗಿನ ತಮ್ಮ ಎದುರಾಳಿಗಳ ವಿರುದ್ಧ ಜಯಗಳಿಸಿದ ನಂತರ ಅವರು ಈಗ ಹೊರಗಿನ ಪ್ರಪಂಚದ ಮೇಲೆ ಪ್ರಭಾವ ಬೀರಲು ಬಯಸಿದರು. 2003—2007ರ ನಡುವೆ ಮೋದಿ ಸರ್ಕಾರದ ಆಡಳಿತ ವ್ಯವಸ್ಥೆಯನ್ನು ಅರ್ಥಮಾಡಿಕೊಳ್ಳಲು ಸಾಕಷ್ಟು ಸಮಯ ಕಳೆದರು. ದಿನಕ್ಕೆ 18 ಗಂಟೆಗಳ ಕಾಲ ಕೆಲಸ ಮಾಡುತ್ತ, ಅವರು ಹೊಸಪಥವೊಂದನ್ನು ರೂಪಿಸಲು ನಿರ್ಧರಿಸಿದ್ದರು. ಅವರು ತಮ್ಮ ಮಂತ್ರಿಗಳನ್ನು ನಂಬಲಿಲ್ಲ. ಬದಲಿಗೆ ಅಧಿಕಾರಶಾಹಿಯಲ್ಲಿ ಅವ್ಯಕ್ತ ನಂಬಿಕೆ ಬೆಳೆಸಿಕೊಂಡರು. ತಮಗೆ ನಿಷ್ಠರಾಗಿದ್ದ ಅಧಿಕಾರಿಗಳ ತಂಡವನ್ನು ಕಟ್ಟಿಕೊಂಡರು. ಒಬ್ಬರು ಹಿರಿಯ ಅಧಿಕಾರಿ ನನಗೆ ಹೇಳಿದರು: ’ ಮೋದಿಯವರು ಸ್ಪಷ್ಟ ಆದೇಶಗಳನ್ನು ನೀಡುತ್ತಾರೆ ಮತ್ತು ಅವುಗಳನ್ನು ಅನುಷ್ಠಾನಗೊಳಿಸಲು ನಮಗೆ ಸ್ವಾತಂತ್ರ್ಯ ನೀಡುತ್ತಾರೆ. ಒಬ್ಬ ಅಧಿಕಾರಿಗೆ ಮತ್ತೇನು ಬೇಕು?’ ಯಾವ ಕಡತವೂ ಅವರ ಮೇಜಿನ ಮೇಲೆ ಹೆಚ್ಚುಕಾಲ ಉಳಿಯುತ್ತಿರಲಿಲ್ಲ.

ಗುಜರಾತ್ ಗಲಭೆಗಳಿಂದ ಅವರಿಗೆ ರಾಜಕೀಯ ಲಾಭಗಳು ಲಭಿಸಿದವೊ ಇಲ್ಲವೊ. ಆದರೆ ಅಂದಿನಿಂದ ಮೋದಿಯವರು ತಮ್ಮ ವ್ಯಕ್ತಿತ್ವವನ್ನು ಮತ್ತೆ ಕಟ್ಟಿಕೊಳ್ಳಲು ಮತ್ತು ತಮ್ಮ ಸಾಧನೆಗಳ ಪಟ್ಟಿಯನ್ನು ಪುನಾರಚಿಸಲು ತೀರ್ಮಾನಿಸಿದಂತೆ ತೋರಿತು. ಅವರ ಅಧಿಕಾರಿಗಳಿಗೆ ಎರಡು ಕೆಲಸಗಳನ್ನು ನೀಡಲಾಗಿತ್ತು — ಜನರಿಗೆ ಅನುಭವಿಸಬಹುದಾದ ಸ್ಪಷ್ಟವಾದ ಲಾಭಗಳಿದ್ದ ಯೋಜನೆಗಳನ್ನು ಅತ್ಯಂತ ಕಡಿಮೆ ಸಮಯದಲ್ಲಿ ಅನುಷ್ಠಾನಗೊಳಿಸಬೇಕು ಮತ್ತು ಈ ಯೋಜನೆಗಳ ಜೊತೆಗೆ ಅಭಿವೃದ್ಧಿಪರ ನಾಯಕನೆನ್ನುವ ಮುಖ್ಯಮಂತ್ರಿಗಳ ವ್ಯಕ್ತಿತ್ವವನ್ನು ಗುರುತಿಸಬೇಕು. ಈ ಕಾಲದಲ್ಲಿ ಗುಜರಾತ್ ಸರ್ಕಾರವು ಹೆಣ್ಣುಮಕ್ಕಳ ಶಿಕ್ಷಣ, ಬುಡಕಟ್ಟುಗಳ ಅಭಿವೃದ್ಧಿ, ನೀರಾವರಿ ಮತ್ತು ಕುಡಿಯುವ ನೀರಿನ ಯೋಜನೆಗಳು ಇತ್ಯಾದಿ ಹಲವಾರು ಯೋಜನೆಗಳನ್ನು ರೂಪಿಸಿತು.

ಮೋದಿಯವರ ಜ್ಯೋತಿಗ್ರಾಮ ಯೋಜನೆಯು ಅವರು ’ವಿದ್ಯುತ್, ರಸ್ತೆ, ಶಿಕ್ಷಣ ಮತ್ತು ನೀರು’ ಕಾರ್ಯಸೂಚಿಯನ್ನು ಯಾವ ಹಂತದವರಗೆ ತೆಗೆದುಕೊಂಡು ಹೋಗಲು ಸಿದ್ಧರಿದ್ದರು ಎನ್ನುವುದಕ್ಕೆ ಒಂದು ಒಳ್ಳೆಯ ಉದಾಹರಣೆ. ಗ್ರಾಮೀಣ ಗುಜರಾತಿಗೆ 24 ಗಂಟೆಗಳೂ ವಿದ್ಯುತ್ ಒದಗಿಸುವ ಈ ಯೋಜನೆಯು ಮಾರುಕಟ್ಟೆ ದರಗಳಿಗೆ ಸಮೀಪವಾಗಿದ್ದ ದರವೊಂದನ್ನು ಬಳಕೆದಾರರ ಮೇಲೆ ಹೇರಿತ್ತು. ಇದಕ್ಕೆ ಗಣನೀಯ ವಿರೋಧವಿದ್ದರೂ, ಮೋದಿಯವರು ಈ ಯೋಜನೆಯ ದೀರ್ಘಾವಧಿ ಲಾಭಗಳನ್ನು ಗಮನದಲ್ಲಿರಿಸಿಕೊಂಡು ವಿರೋಧಗಳನ್ನು ನಿರ್ಲಕ್ಷಿಸಿ ಮುನ್ನಡೆದರು. ಹೀಗೆ ಗುಜರಾತ್ ಮಾದರಿಯೆನ್ನುವುದು ಹುಟ್ಟಿತು ಮತ್ತು ಮುಂದಿನ ದಿನಗಳಲ್ಲಿ ಮೋದಿಯವರಿಗೆ ಸಾಕಷ್ಟು ಲಾಭವನ್ನು ತಂದುಕೊಟ್ಟಿತು.

ಉದ್ಯಮಿಗಳ ಜೊತೆಗೆ ಮೋದಿಯವರ ಸಂಬಂಧವು ಸಹ ಕುತೂಹಲಕರವಾದುದು ಆಗಿತ್ತು. 2002ರ ಮಾರ್ಚಿನಲ್ಲಿ ಕಾನ್ಫೆಡರೇಷನ್ ಆಫ಼್ ಇಂಡಿಯನ್ ಇಂಡಸ್ಟ್ರಿ (ಸಿಐಐ) ಸಭೆಯೊಂದರಲ್ಲಿ ಸೆಕ್ಯುಲರಿಸಮ್ ಉದ್ಯಮಶೀಲತೆಗೆ ಒಳ್ಳೆಯದೆ ಎನ್ನುವ ಪ್ರಶ್ನೆಯನ್ನು ಎತ್ತಲಾಗಿತ್ತು. ಇಂತಹ ಪ್ರಶ್ನೆಗಳು ಸಾಮಾನ್ಯವಾಗಿ ಕೇಳಿಬರುತ್ತಿದ್ದವು. 2003ರ ಫೆಬ್ರವರಿಯಲ್ಲಿ ಮೋದಿ ಮತ್ತು ಉದ್ಯಮಿಗಳ ನಡುವಣ ಸಂಬಂಧ ಮತ್ತಷ್ಟು ಹದಗೆಟ್ಟಿತು. ದೇಶದ ಅತ್ಯಂತ ಹಿರಿಯ ಕಾರ್ಪೊರೇಟ್ ನಾಯಕರುಗಳಾದ ರಾಹುಲ್ ಬಜಾಜ್ ಮತ್ತು ಜಮಷೆದ್ ಗೋದ್ರೆಜ್ 2002ರ ಗಲಭೆಗಳ ಬಗ್ಗೆ ಮುಖ್ಯಮಂತ್ರಿ ಮೋದಿಯವರ ಸಮ್ಮುಖದಲ್ಲಿಯೇ ಮಾತನಾಡಿದರು. ಬಜಾಜ್ ಕೇಳಿದರು: ’ನೀವು ಯಾವುದರಲ್ಲಿ ನಂಬಿಕೆಯಿಟ್ಟಿದ್ದೀರಿ, ನಿಮ್ಮ ಮೌಲ್ಯಗಳಾವುವು ಎಂದು ತಿಳಿಯಲು ನಾವು ಇಚ್ಛಿಸುತ್ತೇವೆ.’ ಮೋದಿ ಈ ಟೀಕೆಗಳನ್ನು ಕೇಳಿ ಪ್ರತ್ಯುತ್ತರ ನೀಡಿದರು: ’ ನಿಮಗೆ ಉತ್ತರ ಬೇಕಿದ್ದರೆ, ನೀವು ಮತ್ತು ನಿಮ್ಮ ಸ್ಯೂಡೊ ಸೆಕ್ಯುಲರ್ ಸ್ನೇಹಿತರು ಗುಜರಾತಿಗೆ ಬನ್ನಿ. ನನ್ನ ಜನಗಳೊಡನೆ ಮಾತನಾಡಿ. ಗುಜರಾತ್ ದೇಶದಲ್ಲಿಯೆ ಅತ್ಯಂತ ಶಾಂತಿಯಿರುವ ರಾಜ್ಯ.’

ಇಂತಹ ಟೀಕೆಗಳಿಂದ ಕುಪಿತರಾಗಿದ್ದ ಮೋದಿ ತಮ್ಮ ನೋವು ಮತ್ತು ಕೋಪಗಳನ್ನು ಗುಜರಾತಿಗೆ ಕೊಂಡೊಯ್ದರು. ಈ ದಿಲ್ಲಿವಾಲಾರಿಗೆ ಗುಜರಾತ್ ಏನೆಂದು ತೋರಿಸಬೇಕು ಎಂದು ತಮ್ಮ ಸಹಾಯಕರೊಬ್ಬರಿಗೆ ಹೇಳಿದರು. ಸಿಐಐನ ಪದಾಧಿಕಾರಿಗಳು ಮೋದಿಯವರ ಕ್ಷಮೆಯನ್ನು ಕೇಳಿ ಪತ್ರವೊಂದನ್ನು ಕಳುಹಿಸಿದರು. ಅದೇ ವರ್ಷ ಗುಜರಾತ್ ಸರ್ಕಾರವು ತನ್ನ ’ವೈಬ್ರೆಂಟ್ ಗುಜರಾತ್’ ಕಾರ್ಯಕ್ರಮವನ್ನು ಪ್ರಾರಂಭಿಸಿತು. ಇದರ ಉದ್ದೇಶವು ಗುಜರಾತನ್ನು ಬಂಡವಾಳ ಹೂಡಿಕೆಯ ಸ್ಥಳವಾಗಿ ತೋರಿಸುವುದು ಮತ್ತು ’ಗುಜರಾತಿನ ವ್ಯವಹಾರವೆಂದರೆ ವ್ಯವಹಾರ’ ಎನ್ನುವ ಸಾಂಪ್ರದಾಯಿಕ ಗುಜರಾತಿನ ಮೌಲ್ಯವನ್ನು ಎತ್ತಿಹಿಡಿಯುವುದು. 2005ರ ಸಮ್ಮೇಳನಕ್ಕೆ ನಾನು ಹೋಗಿದ್ದೆ. ಆ ಸಂದರ್ಭದಲ್ಲಿ ಪ್ರತಿಯೊಬ್ಬ ಭಾಷಣಕಾರನೂ ಮುಖ್ಯಮಂತ್ರಿಗಳನ್ನು ಹೊಗಳುತ್ತಲೆ ತನ್ನ ಮಾತುಗಳನ್ನು ಪ್ರಾರಂಭಿಸುತ್ತಿದ್ದರು. ಅನಿಲ್ ಅಂಬಾನಿಯಂತೂ ಮೋದಿಯವರನ್ನು ಮಹಾತ್ಮ ಗಾಂಧಿಯವರಿಗೆ ಹೋಲಿಸಿದರು ಮತ್ತು ‘ರಾಜರ ರಾಜ’ ಎಂದು ಕರೆದರು.

ಗುಜರಾತ್ ಮಾದರಿಯು ಕೇವಲ ಅಭಿವೃದ್ಧಿಯನ್ನು ಮಾತ್ರ ತನ್ನ ಉದ್ದೇಶವಾಗಿ ಹೊಂದಿರಲಿಲ್ಲ. ಅದರ ಜೊತೆಗೆ ಮೋದಿಯವರ ಇಮೇಜನ್ನು ಮತ್ತೆ ಕಟ್ಟುವ ಕಾರ್ಯಕ್ರಮವೂ ಆಗಿತ್ತು. ಅಭಿವೃದ್ಧಿಯೆನ್ನುವುದು ಗುಜರಾತ್ ಗಲಭೆಗಳ ಮೂಲಕವೆ ಅವರನ್ನು ನೋಡುತ್ತಿದ್ದ ಟೀಕಾಕಾರರ ವಿರುದ್ಧ ಮೋದಿಯವರು ಬಳಸುತ್ತಿದ್ದ ಗುರಾಣಿಯಾಗಿತ್ತು. ಉದಾಹರಣೆಗೆ, ಮೋದಿ ತಮ್ಮ ಹೆಣ್ಣುಮಕ್ಕಳ ಶಿಕ್ಷಣ ಕಾರ್ಯಕ್ರಮದ ಬಗ್ಗೆ ಅಪಾರ ಹೆಮ್ಮೆಯಿಟ್ಟುಕೊಂಡಿದ್ದರು. 2003ರ ನಂತರ ಬೇಸಿಗೆಯ ಬಿಸಿಲಿನಲ್ಲಿ ಎಲ್ಲ ಐ.ಎ.ಎಸ್. ಅಧಿಕಾರಿಗಳೂ ಪೋಷಕರಿಗೆ ಅವರ ಮಕ್ಕಳನ್ನು ಶಾಲೆಗೆ ಕಳುಹಿಸುವಂತೆ ಮನವೊಲಿಸುವ ಕಾರ್ಯದಲ್ಲಿ ತೊಡಗಿಸಿಕೊಳ್ಳುತ್ತಿದ್ದರು. ಇಂತಹ ಗುಣಾತ್ಮಕ ಕಾರ್ಯಕ್ರಮಗಳನ್ನು ನೀವು ಯಾಕೆ ವರದಿ ಮಾಡುವುದಿಲ್ಲ ಎಂದು ನನಗೆ ಮೋದಿಯವರು ಹಲವು ಬಾರಿ ಕೇಳಿದ್ದರು.

ಗುಜರಾತ್ ಗಲಭೆಗಳ ಬಗ್ಗೆ ಪ್ರಶ್ನೆಗಳು ಮುಂದುವರಿದಾಗ ಮೋದಿ ಅವುಗಳನ್ನು ಗುಜರಾತಿನ ಗೌರವದ ಪ್ರಶ್ನೆಯಾಗಿ ಪರಿವರ್ತಿಸಿದರು. 2007ರ ಚುನಾವಣೆಗಳ ಪ್ರಚಾರದ ಸಂದರ್ಭದಲ್ಲಿ ಸೋನಿಯಾ ಗಾಂಧಿಯವರು ’ಗುಜರಾತನ್ನು ಸುಳ್ಳುಗಾರರು, ಅಪ್ರಾಮಾಣಿಕರು ಮತ್ತು ಸಾವಿನ ವ್ಯಾಪಾರಿಗಳು ಆಳುತ್ತಿದ್ದಾರೆ’ ಎಂದು ಆಪಾದಿಸಿದರು. ಈ ಮಾತುಗಳಿಂದ ಮೋದಿ ಅತ್ಯಂತ ಕುಪಿತರಾಗಿದ್ದರು. ಯಾರೊ ಪತ್ರಕರ್ತನ ಬದಲಿಗೆ ಈಗ ಕಾಂಗ್ರೆಸ್ಸಿನ ಅಧ್ಯಕ್ಷರ ಬಾಯಿಯಿಂದ ಈ ಮಾತುಗಳು ಬಂದದ್ದಕ್ಕೆ ಪ್ರತಿಯಾಗಿ ಅವರು ತಮ್ಮ ಎಲ್ಲ ಭಾಷಣಗಳಲ್ಲಿ ಕಾಂಗ್ರೆಸ್ ಗುಜರಾತಿನ ಜನರನ್ನು ಅವಮಾನಿಸಿದ್ದಾರೆ ಎಂದು ವಾದಿಸಿದರು.

ಡಿಸೆಂಬರ್ 2007ರ ಚುನಾವಣಾ ಫಲಿತಾಂಶವು ಕಾಂಗ್ರೆಸ್ ಮತ್ತೊಮ್ಮೆ ಸ್ವಯಂನಾಶ ಮಾಡಿಕೊಂಡಿತು ಎನ್ನುವುದನ್ನು ತೋರಿಸಿತು. ಮೋದಿಯವರ ತಂತ್ರವು ಅದ್ಭುತವಾಗಿ ಕೆಲಸ ಮಾಡಿತು. ಬಿಜೆಪಿಗೆ 117 ಕ್ಷೇತ್ರಗಳಲ್ಲಿ ವಿಜಯ ಲಭಿಸಿತ್ತು. ’ನನ್ನ ವಿರೋಧಿಗಳಿಗೆ ಗುಜರಾತಿನ ಜನರು ಸರಿಯಾದ ಉತ್ತರವನ್ನು ನೀಡಿದ್ದಾರೆ’ ಎಂದು ಮೋದಿಯವರು ಆತ್ಮವಿಶ್ವಾಸದಿಂದ ಹೇಳಿದರು. ಆದರೆ ಎಲ್ಲ ಮಹತ್ವಾಕಾಂಕ್ಷಿ ರಾಜಕಾರಣಿಗಳಂತೆ ಅವರು ಮತ್ತೇನನ್ನೊ ನಿರೀಕ್ಷಿಸುತ್ತಿದ್ದರು. ಅವರ ಹನ್ನೆರಡು ವರ್ಷಗಳ ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಎರಡು ದಿನಗಳು ಮುಖ್ಯವಾದವು. ಮೊದಲನೆಯದು, ಗೋಧ್ರಾ ಘಟನೆ ಸಂಭವಿಸಿದ ದಿನ, 27 ಫೆಬ್ರವರಿ, 2002. ಆ ದಿನವು ಮೋದಿಯವರನ್ನು ಹಿಂದುತ್ವದ ಸಂಕೇತವಾಗಿಸಿತು. ಎರಡನೆಯದು 7 ಅಕ್ಟೋಬರ್, 2008. ಅಂದು ಟಾಟಾ ಗುಂಪು ತನ್ನ ಟಾಟಾ ನ್ಯಾನೊ ಕಾರಿನ ಉತ್ಪಾದನಾ ಘಟಕವನ್ನು ಗುಜರಾತಿನ ಸಾನಂದದಲ್ಲಿ ಪ್ರಾರಂಭಿಸುವುದಾಗಿ ಘೋಷಿಸಿತು. ಅಂದು ರತನ್ ಟಾಟಾ ನರೇಂದ್ರ ಮೋದಿಯವರೊಡನೆ ಒಂದು ಜಂಟಿ ಪತ್ರಿಕಾಗೋಷ್ಠಿಯನ್ನು ನಡೆಸಿದರು. ಪಶ್ಚಿಮ ಬಂಗಾಳದ ಕಹಿ ಅನುಭವವನ್ನು ನೆನಪಿಸಿಕೊಳ್ಳುತ್ತ ಅವರು ಹೇಳಿದರು: ’ಒಬ್ಬರು ಒಳ್ಳೆಯ ಎಮ್ (ಮೋದಿ) ಮತ್ತು ಒಬ್ಬರು ಕೆಟ್ಟ ಎಮ್ (ಮಮತಾ) ಇದ್ದಾರೆ.’ ಮೋದಿಯವರಿಗೆ ಇದೊಂದು ಯಾವ ಚುನಾವಣೆಯೂ ಕೊಡಲಾಗದ ದೊಡ್ಡ ಸಾಂಕೇತಿಕ ವಿಜಯವಾಗಿತ್ತು. ಒಬ್ಬ ನಂಬಲರ್ಹನಾದ ಆಡಳಿತಗಾರನೆಂಬ ವಿಶ್ವಾಸಾರ್ಹತೆಯನ್ನು ಅವರು ಈಗ ಗಳಿಸಿದ್ದರು. ಈಗಾಗಲೆ ಬಿಜೆಪಿಯ ಸಾಂಪ್ರದಾಯಿಕ ಮತದಾರರ ನಂಬಿಕೆಯನ್ನು ಗಳಿಸಿದ್ದ ಮೋದಿಯವರಿಗೆ ಈಗ ಗುಜರಾತಿನೊಳಗೆ ಮತ್ತು ದೇಶದಾದ್ಯಂತ ಮಧ್ಯಮ ಮತ್ತು ಗಣ್ಯವರ್ಗಗಳಲ್ಲಿ ಅಧಿಕೃತತೆಯನ್ನು ಪಡೆಯಲು ಸಾಧ್ಯವಾಯಿತು.

ಈ ಕ್ಷಣದ ನಂತರ ಮೋದಿಯವರ ಮಹತ್ವಾಕಾಂಕ್ಷೆ ದೇಶದಾಚೆಗೆ ಹಬ್ಬಲಾರಂಭಿಸಿತು. ಹೊಸ ಆತ್ಮವಿಶ್ವಾಸವನ್ನು ಪ್ರದರ್ಶಿಸುತ್ತ ಮೋದಿ ಚೈನಾ ಮತ್ತು ಜಪಾನುಗಳಿಗೆ ತೆರಳಿದರು. ಅವರ ಸಾರ್ವಜನಿಕ ಸಂಪರ್ಕ ಪ್ರಚಾರಕರು ಮೋದಿಯವರನ್ನು ವಿಶಾಲ ಜಗತ್ತಿಗೆ ಒಪ್ಪುವ ರೀತಿಯಲ್ಲಿ ಪ್ರದರ್ಶಿಸಲಾರಂಭಿಸಿದರು. ಅವರ ಭಾಷಣಗಳು ಹೆಚ್ಚು ಚಿಂತನಶೀಲವಾದವು. ಪುಸ್ತಕ ಓದುತ್ತಿರುವ, ಮಕ್ಕಳೊಡನೆ ಆಡುತ್ತಿರುವ ಮತ್ತು ಗಾಳಿಪಟ ಹಾರಿಸುತ್ತಿರುವ ಮೋದಿಯವರ ಚಿತ್ರಗಳನ್ನು ಅವರ ಕಛೇರಿಯು ಬಿಡುಗಡೆ ಮಾಡಿತು. ಅವರ ವೇಷಭೂಷಣಗಳು ಮತ್ತಷ್ಟು ಸೊಗಸಾದವು ಮತ್ತು ಅಹಮದಾಬಾದಿನ ಜೇಡ್ ಬ್ಲೂ ಎಂಬ ಅಂಗಡಿಯಿಂದಲೇ ವಿನ್ಯಾಸಗೊಳ್ಳತೊಡಗಿದವು.

ಹೀಗೆ ಮೋದಿಯವರು ತಮ್ಮನ್ನು ಮತ್ತೆ ಪರಿಚಯಿಸಿಕೊಳ್ಳುತ್ತಿರುವಾಗ, ಅವರ ಪಕ್ಷವು ಸಮಯಚಕ್ರದೊಳಗೆ ಸಿಕ್ಕಿಬಿದ್ದಿತ್ತು. 2009ರ ಚುನಾವಣೆಯನ್ನು ಅದ್ವಾನಿಯವರ ನಾಯಕತ್ವದಲ್ಲಿ ಎದುರಿಸಲಾಯಿತು. ಅವರ ಗಡಸು ವ್ಯಕ್ತಿತ್ವ ಮತ್ತು ನಾಯಕತ್ವ ಶೈಲಿಯು ಮನಮೋಹನ್ ಸಿಂಗರ ಮೃದು ಸ್ವಭಾವಕ್ಕೆ ಪರ್ಯಾಯವೆಂದು ತೋರಿಸಲಾಯಿತು. ಬಿಜೆಪಿಗೆ ಚುನಾವಣೆಯಲ್ಲಿ ಸೋಲಿನ ಅನುಭವವಾದ ನಂತರ ಮೋದಿಯವರು ಭವಿಷ್ಯದ ಪ್ರಧಾನಿಯಾಗಲು ತಮಗಿದ್ದ ಅವಕಾಶಗಳನ್ನು ಗುರುತಿಸಿದರು.

ಮೋದಿಯವರು ದೆಹಲಿಯತ್ತ ಗಮನ ಹರಿಸಿದ್ದಾರೆ ಎಂದು ಸ್ಪಷ್ಟವಾದುದು 2011ರ ಸೆಪ್ಟಂಬರಿನಲ್ಲಿ ಸದ್ಭಾವನಾ ಯಾತ್ರೆಯನ್ನು ಅವರು ಪ್ರಾರಂಭಿಸಿದಾಗ. ಇದರ ಉದ್ದೇಶ ಮುಸ್ಲಿಮರನ್ನು ಪ್ರಮುಖವಾಗಿ ತಲುಪುವುದಾಗಿತ್ತು. ಅವರು ತಮ್ಮನ್ನು ಎಲ್ಲರನ್ನೂ ಒಳಗೊಳ್ಳಲು ಬಯಸುವ ನಾಯಕನೆಂದು ತೋರಿಸಿಕೊಳ್ಳಬಯಸಿದರು. ಈ ಯಾತ್ರೆಯ ಘೋಷಣೆಯೆಂದರೆ ’ಎಲ್ಲರ ಜೊತೆ, ಎಲ್ಲರ ವಿಕಾಸ.’ ಕೆಲವು ಮುಸ್ಲಿಮ್ ನಾಯಕರು ಸಹ ಮೋದಿಯವರ ಪರ ಮಾತನಾಡಲಾರಂಭಿಸಿದರು. ಇಂತಹವರು ಹೆಚ್ಚಾಗಿ ಮೇಲ್ವರ್ಗದ ಉದ್ಯಮಿಗಳಾಗಿದ್ದರು. ಆದರೆ ರಸ್ತೆಯಲ್ಲಿ ಸಾಮಾನ್ಯ ಮುಸ್ಲಿಮರ ಭಾವನೆಗಳು ಒಂದೆ ರೀತಿಯವು ಆಗಿರಲಿಲ್ಲ. ಹಲವು ಬಗೆಯ ಅಭಿಪ್ರಾಯಗಳ ಮಿಶ್ರಣವಾಗಿದ್ದವು. ಮುಸ್ಲಿಮ್ ಸಮುದಾಯದ ಜೊತೆಗಿನ ಅವರ ಸಂಬಂಧವು ಸಂಕೀರ್ಣವಾಗಿಯೆ ಉಳಿಯಿತು.

ಮುಂದಿನ ವರ್ಷ 2012ರ ಸೆಪ್ಟಂಬರಿನಲ್ಲಿ ಮೋದಿ ಮತ್ತೊಮ್ಮೆ ತನ್ನ ರಾಜ್ಯದ ಮತದಾರರನ್ನು ನೇರವಾಗಿ ತಲುಪಲು ರಾಜ್ಯವ್ಯಾಪಿ ವಿವೇಕಾನಂದ ಯುವ ವಿಕಾಸ ಯಾತ್ರೆಯನ್ನು ನಡೆಸಿದರು. ಸ್ವಾಮಿ ವಿವೇಕಾನಂದರ 150 ಜನ್ಮೋತ್ಸವವನ್ನು ಆಚರಿಸಲು ಸಂಘಟಿಸಿದ್ದ ಈ ಕಾರ್ಯಕ್ರಮವು ಡಿಸೆಂಬರಿನಲ್ಲಿ ನಡೆಯಲಿದ್ದ ಚುನಾವಣೆಗಳಿಗೆ ಭೂಮಿಕೆಯನ್ನು ಸಿದ್ಧಪಡಿಸುತ್ತಿತ್ತು. ತಾನು ವಿವೇಕಾನಂದರಿಂದ ಪ್ರೇರಿತನಾಗಿದ್ದೇನೆ ಎಂದು ಮೋದಿಯವರು ಹಲವು ಬಾರಿ ಹೇಳಿದ್ದರು. ಈಗ ಅವರೊಡನೆ ಸಾರ್ವಜನಿಕವಾಗಿ ಗುರುತಿಸಿಕೊಳ್ಳುತ್ತ, ವಿವೇಕಾನಂದರ ಎಲ್ಲರನ್ನೂ ಒಳಗೊಳ್ಳುವ ಧಾರ್ಮಿಕತೆಯನ್ನು ತನ್ನದಾಗಿಸಿಕೊಳ್ಳುವ ಪ್ರಯತ್ನವನ್ನು ಅವರು ಮಾಡುತ್ತಿದ್ದರು.

ಈ ಯಾತ್ರೆಯ ಸಂದರ್ಭದಲ್ಲಿ ಉತ್ತರ ಗುಜರಾತಿನ ಪಟಾನ್ ಜಿಲ್ಲೆಯಲ್ಲಿ ಮೋದಿಯವರನ್ನು ನಾನು ಭೇಟಿ ಮಾಡಿದೆ. ಅವರ ವಾಹನದ ಮುಂದಿನ ಸೀಟಿನಲ್ಲಿ ಕುಳಿತಿದ್ದಾಗಲೆ, ಫ಼ುಟಬೋರ್ಡಿನ ಮೇಲೆ ನಿಂತು ಅವರ ಸಂದರ್ಶನವನ್ನು ಮಾಡಿದೆ. ಅವರ ವಾಹನದಲ್ಲಿ ಹಿಂದೆ ಇಬ್ಬರೂ ಕುಳಿತು ಸಂದರ್ಶನವನ್ನು ಮಾಡಬಹುದಾಗಿದ್ದರೂ, ಮೋದಿ ಅದಕ್ಕೆ ಒಪ್ಪಲಿಲ್ಲ. ಬಹುಶಃ ಆ ಮೂಲಕ ಅವರು ಒಬ್ಬ ಸಾಮಾನ್ಯ ಪತ್ರಕರ್ತನೆಂದು ನನ್ನ ಸ್ಥಾನವನ್ನು ನೆನಪಿಸಿಕೊಡುತ್ತಿದ್ದರು. ಅಥವಾ ಅವರನ್ನು ಪ್ರಶ್ನಿಸುತ್ತಲೆ ಬರುತ್ತಿದ್ದ ಇಂಗ್ಲೀಷ್ ಭಾಷೆಯ ಪತ್ರಕರ್ತರನ್ನು ಅವರ ಸ್ಥಳದಲ್ಲಿರಿಸುವ ಪ್ರಯತ್ನವಾಗಿರಬಹುದು.

ಗುಜರಾತ್ ಗಲಭೆಗಳಿಗೆ ತಾವು ಕ್ಷಮೆ ಯಾಚಿಸುವಿರಾ ಎನ್ನುವ ನನ್ನ ಪ್ರಶ್ನೆಗೆ ಅವರು ಉತ್ತರಿಸಲಿಲ್ಲ. ಕ್ಯಾಮರಾದಿಂದ ತಮ್ಮ ಮುಖವನ್ನು ಬೇರೆಡೆಗೆ ತಿರುಗಿಸಿ ಸುಮ್ಮನಾದರು. ಆದರೆ ಗುಜರಾತಿನ ಚುನಾವಣೆಯಲ್ಲಿ ಮೂರನೆಯ ಬಾರಿಗೆ ಗೆದ್ದರೆ ದೆಹಲಿಗೆ ಸ್ಥಳಾಂತರ ಮಾಡಿಕೊಳ್ಳುವಿರಾ ಎಂದಾಗ, ಅವರ ಉತ್ತರ ಎಂದಿನಂತೆ ಕಲಹಪ್ರಿಯನ ಮಾತಾಗಿತ್ತು: ’ಈ ದೇಶದ ಜನರು ನಿಮಗೆ ಮತ್ತು ಮಾಧ್ಯಮಗಳಿಗೆ ಮುಂದಿನ ಪ್ರಧಾನಿಯನ್ನು ಹುಡುಕುವ ಕೆಲಸವನ್ನು ಕೊಟ್ಟಿರುವರಾ?’ ಈ ಹಿಂದೆ ಇದೆ ಪ್ರಶ್ನೆಯನ್ನು ನಾನು ಕೇಳಿದಾಗ ಅವರು ಗುಜರಾತಿನ ಬಗ್ಗೆ ತಮಗಿರುವ ಪ್ರೀತಿಯ ಬಗ್ಗೆ ಮಾತನಾಡಿದ್ದರು ಮತ್ತು ತಾನು ಗುಜರಾತಿನ ಆಚೆಗೆ ಯೋಚಿಸುತ್ತಿಲ್ಲ ಎಂದು ತೀವ್ರತೆಯಿಂದ ಹೇಳಿದ್ದರು. ಈಗ ಅವರ ಉತ್ತರ ಯಾಂತ್ರಿಕವಾಗಿತ್ತು ಮತ್ತು ಹಿಂದಿನ ಬದ್ಧತೆಯೊಡನೆ ಆಡಿದಂತೆ ಇರಲಿಲ್ಲ. ನನ್ನಿಂದ ಮುಖ ತಿರುಗಿಸಿದಂತೆ ಅವರ ಕಣ್ಣುಗಳಲ್ಲಿ ಸಂಭ್ರಮದ ಹೊಳಪು ಕಾಣುತ್ತಿತ್ತು. ಗುಜರಾತಿನ ಚುನಾವಣೆಗಳಲ್ಲಿ ಅವರಿಗೆ ಯಶಸ್ಸು ಬಹುತೇಕ ಖಚಿತವೆನ್ನುವುದನ್ನು ನಾನು ಆ ಮೂಲಕ ಅರಿತೆ. ಮೋದಿಯವರು ಭಾರತದ ರಾಜಕಾರಣದ ಅತ್ಯಂತ ದೊಡ್ಡ ಪ್ರಶಸ್ತಿಯನ್ನು ಗೆಲ್ಲಲು ಸಿದ್ಧರಾಗಿದ್ದರು.

ಫ್ರ್ಯಾಂಕ್ ಓ’ಕಾನರ್ ಕನ್ನಡಕ್ಕೆ: ಡಾ.ಬಸು ಬೇವಿನಗಿಡದ

ಪಾಪ ನಿವೇದನೆ

ಜುಲೈ ೨೦೧೮

ಪರಮೇಶ್ವರ ಗುರುಸ್ವಾಮಿ

ದಾಂಪತ್ಯ ಮೀರಿದ ಬೌದ್ಧಿಕ ಸಾಂಗತ್ಯ

ಜುಲೈ ೨೦೧೮

ಪರಮೇಶ್ವರ ಗುರುಸ್ವಾಮಿ

ಟೆಕ್ ಡ್ರೀಮರ್ಸ್ ಓದಲೇಬೇಕಾದ ‘ಹಿಟ್ ರಿಫ್ರೆಶ್’

ಜುಲೈ ೨೦೧೮

ಡಾ.ರಾಕೇಶ್ ಬಟಬ್ಯಾಲ್

ಜೆ.ಎನ್.ಯು ದ ಮೇಕಿಂಗ್ ಆಫ್ ಎ ಯೂನಿವರ್ಸಿಟಿ

ಜೂನ್ ೨೦೧೮

ಎಸ್.ಆರ್.ವಿಜಯಶಂಕರ

ಮೊಗಳ್ಳಿ ಗಣೇಶ್ ಹೊಸ ಕಥಾ ಸಂಕಲನ ದೇವರ ದಾರಿ

ಜೂನ್ ೨೦೧೮

ಮಂಜುನಾಥ ಡಿ.ಎಸ್.

ಅಹಿಂಸಾತ್ಮಕ ಸಂವಹನ

ಜೂನ್ ೨೦೧೮

ಪೃಥ್ವಿದತ್ತ ಚಂದ್ರಶೋಭಿ

ಕರ್ನಾಟಕದ ರಾಜಕಾರಣ ಹೇಗೆ ಬದಲಾಗಿದೆ?

ಮೇ ೨೦೧೮

ಪುರುಷೋತ್ತಮ ಬಿಳಿಮಲೆ

ಅವಲೋಕನ ಸಮಕಾಲೀನ ಚರ್ಚೆಗೆ ಹೆಚ್ಚು ಪ್ರಸ್ತುತ

ಮೇ ೨೦೧೮

ಪ್ರೊ.ಶಿವರಾಮಯ್ಯ

ದೇಸಿ ಕನ್ನಡ ಪರಂಪರೆ

ಮೇ ೨೦೧೮

ರಾಜದೀಪ್ ಸರ್ದೇಸಾಯಿ

ಗುಜರಾತಿನ ನರೇಂದ್ರಭಾಯಿ

ಎಪ್ರಿಲ್ ೨೦೧೮

ಸ್ನೇಹಲತಾ ಎಸ್. ಗೌನಳ್ಳಿ

ಪಾಕಿಸ್ತಾನಿ ಕವಯಿತ್ರಿ ಸಾರಾ ಶಗುಫ್ತಾ ಜೀವನ ಮತ್ತು ಕಾವ್ಯ

ಎಪ್ರಿಲ್ ೨೦೧೮

ವಿನಯ್ ಸೀತಾಪತಿ

ಪಿ. ವಿ. ನರಸಿಂಹರಾವ್ ಜೀವನಚರಿತ್ರೆ ಹಾಫ್ ಲಯನ್

ಮಾರ್ಚ್ ೨೦೧೮

ಅರುಣ್ ಜೋಳದಕೂಡ್ಲಿಗಿ

ಪೆರಿಯಾರ್ ವಿವಾಹ ಪದ್ಧತಿ

ಮಾರ್ಚ್ ೨೦೧೮

ಮೂಲ: ಇ.ರಾಘವನ್; ಜೇಮ್ಸ್ ಮೇನರ್ ಅನುವಾದ: ಪೃಥ್ವಿ ದತ್ತ ಚಂದ್ರ ಶೋಭಿ

ಭೂಸುಧಾರಣೆ ಜಾತಿ ಮೀಸಲಾತಿ ತುರ್ತುಪರಿಸ್ಥಿತಿ

ಫೆಬ್ರವರಿ ೨೦೧೮

- ಕಲ್ಲೇಶ್ ಕುಂಬಾರ್, ಹಾರೂಗೇರಿ

ಬಿಚ್ಚಿಟ್ಟ ಬಾಲ್ಯದ ನೆನಪುಗಳ ಬುತ್ತಿ

ಫೆಬ್ರವರಿ ೨೦೧೮

ಡಾ.ಪಿ.ಮಣಿ

ಮಂಟೇಸ್ವಾಮಿ ಕಾವ್ಯದಲ್ಲಿ ಸಿದ್ಧಪ್ಪಾಜಿ

ಫೆಬ್ರವರಿ ೨೦೧೮