2nd ಎಪ್ರಿಲ್ ೨೦೧೮

ಯಂತ್ರ ನೋಡಿರಣ್ಣ, ದೇಹದ ತಂತ್ರ ಕಾಣಿರಣ್ಣ!

ಸುಧೀಂದ್ರ ಹಾಲ್ದೊಡ್ಡೇರಿ

ನಮ್ಮ ದೇಹವೂ ಒಂದು ಯಂತ್ರ. ಯಂತ್ರಗಳಿಗೆ ಅನ್ವಯಿಸುವ ಎಲ್ಲ ತತ್ವಗಳ ಪ್ರಾತ್ಯಕ್ಷಿಕೆಗಳನ್ನು ನಮ್ಮ ದೇಹದಲ್ಲಿಯೇ ಕಾಣಬಹುದು. ಸರಿಯಾಗಿ ಅರ್ಥ ಮಾಡಿಕೊಳ್ಳಲು ನಮಗೆ ಹೆಚ್ಚಿನ ಜ್ಞಾನ ಮತ್ತು ಪರಿಶ್ರಮ ಬೇಕಷ್ಟೇ.

‘ಈ ರೀತೀನೇ ವರ್ತಿಸ್ಬೇಕು ಅಂತ ನಾವು ನಿರೀಕ್ಷಿಸೋದು ತಪ್ಪು. ಅಷ್ಟಕ್ಕೂ ನಮ್ಮ ದೇಹವೇನು ಒಂದು ಯಂತ್ರವೆ?’ ಇದು ಇದ್ದಕ್ಕಿದ್ದಂತೆ ಮೈಕೈ ನೋವು ಬಂದಾಗಲೊ, ಸೆಕೆ— ಶೀತ ತಡೆಯಲಾಗದೆ ಒದ್ದಾಡಿದಾಗಲೊ ಮತ್ತೊಬ್ಬರು ನಿಮಗೆ ನೀಡಬಹುದಾದ ಪುಕ್ಕಟೆ ಸಲಹೆ. ‘ನೀವು ತಪ್ಪು ತಿಳಿದಿದ್ದೀರಿ. ನಮ್ಮ ದೇಹವೂ ಒಂದು ಯಂತ್ರ, ಯಂತ್ರಗಳಿಗೆ ಅನ್ವಯಿಸುವ ಎಲ್ಲ ತತ್ವಗಳ ಪ್ರಾತ್ಯಕ್ಷಿಕೆಗಳನ್ನು ನಮ್ಮ ದೇಹದಲ್ಲಿಯೇ ಕಾಣಬಹುದು. ಸರಿಯಾಗಿ ಅರ್ಥ ಮಾಡಿಕೊಳ್ಳಲು ನಮಗೆ ಹೆಚ್ಚಿನ ಜ್ಞಾನ ಮತ್ತು ಪರಿಶ್ರಮ ಬೇಕಷ್ಟೆ’ ಎನ್ನುವವರು ಸುಬ್ರ ಸುರೇಶ್.

ಅವರು ಪ್ರಸ್ತುತ ಸಿಂಗಾಪುರದ ‘ನ್ಯಾನ್ಯಾಂಗ್ ಟೆಕ್ನಾಲಜಿಕಲ್ ಯೂನಿವರ್ಸಿಟಿ’ಯ ಅಧ್ಯಕ್ಷರು. ಸೂಕ್ಷ್ಮಾತಿ ಸೂಕ್ಷ್ಮ ಗಾತ್ರದ ‘ನ್ಯಾನೊ’ ಅಳತೆಯ ಯಂತ್ರಗಳ ಹಾಗೂ ಸಲಕರಣೆಗಳ ನಿರ್ಮಾಣಕ್ಕೆ ಸೂಕ್ತವಾದ ಎಂಜಿನಿಯರಿಂಗ್ ಸಾಮಗ್ರಿಗಳನ್ನು ವಿನ್ಯಾಸಗೊಳಿಸುವವರಲ್ಲಿ ಸುರೇಶ್ ಪ್ರಮುಖರು. ತಮ್ಮ ಪ್ರೌಢ ಪ್ರಬಂಧವೊಂದರಲ್ಲಿ ಸುರೇಶ್ ಮನುಷ್ಯ ದೇಹವನ್ನು ಯಂತ್ರಕ್ಕೆ ಹೋಲಿಸಿ ಈ ಬಗ್ಗೆ ಸುಲಲಿತ ಭಾಷ್ಯವೊಂದನ್ನು ಬರೆದಿದ್ದಾರೆ. ಜಗನ್ಮಾನ್ಯ ಎಂಜಿನಿಯರಿಂಗ್ ಪಂಡಿತರು ಪರಾಮರ್ಶೆ ನಡೆಸುವ ನಿಯತಕಾಲಿಕಗಳಲ್ಲಿ ಈ ಬಗ್ಗೆ ದೊಡ್ಡದೊಂದು ಚರ್ಚೆ ನಡೆದಿದೆ. ಸುರೇಶ್ ಅವರ ನೇತೃತ್ವದಲ್ಲಿ ಮನುಷ್ಯ ದೇಹದ ಕೋಶಗಳ ಕಾರ್ಯ ವೈಖರಿಯನ್ನು ಪುಟಾಣಿ ಯಂತ್ರಗಳಂತೆ ಅರ್ಥೈಸಿಕೊಂಡು, ನೂರಾರು ವಿಜ್ಞಾನಿ—ತಂತ್ರಜ್ಞರು ವಿಶ್ಲೇಷಣೆಗಳನ್ನು ನಡೆಸುತ್ತಿದ್ದಾರೆ.

ಸುರೇಶ್ ಅವರಿಗೆ ಕೋಶಗಳ ಹಂತದಲ್ಲೇ ಮನುಷ್ಯ ಜೀವಿಗಳ ಎಂಜಿನಿಯರಿಂಗ್ ಕಾರ್ಯವೈಖರಿಯನ್ನು ಅರ್ಥ ಮಾಡಿಕೊಳ್ಳಲು ಮೊದಲಿನಿಂದಲೂ ಆಸಕ್ತಿ. ಈ ಬಗ್ಗೆ ಅವರಲ್ಲಿ ಕುತೂಹಲವನ್ನು ಹುಟ್ಟಿಸಿದವರು ‘ಎಂ.ಐ.ಟಿ.’ಯ ವೈದ್ಯ ವಿಜ್ಞಾನಿಗಳು. ಮನುಷ್ಯನಿಗೆ ಯಾವುದೇ ಕಾಯಿಲೆ ಅಥವಾ ಸೋಂಕು ತಗಲಲು ಪ್ರಮುಖ ಕಾರಣ, ಆತನ ನಿರ್ದಿಷ್ಟ ಕೋಶಗಳಲ್ಲಾಗುವ ಭೌತಿಕ ಬದಲಾವಣೆಗಳು. ಉದಾಹರಣೆಗೆ ಆಕ್ರಮಣಕಾರಿ ಪರೋಪಜೀವಿಗಳು ರಕ್ತ ಕೋಶಗಳನ್ನು ವಿರೂಪ ಇಲ್ಲವೆ ನಿಷ್ಕ್ರಿಯಗೊಳಿಸಬಹುದು, ಇದರಿಂದಾಗಿ ಸ್ನಾಯು ಕೋಶಗಳು ಸಂಕುಚನ ಗುಣವನ್ನು ಕಳೆದುಕೊಳ್ಳಬಹುದು. ಈ ಸಂದರ್ಭದಲ್ಲಿ ಹೃದಯಾಘಾತ ಸಂಭವಿಸಿದರೆ ಹೃದಯ ವೈಫಲ್ಯವಾಗುವ ಸಾಧ್ಯತೆಗಳು ಹೆಚ್ಚು. ಕಾರಣ, ಆರೋಗ್ಯವಂತ ಕೋಶಗಳಿಗಿಂತ ಸೋಂಕು ತಗಲಿದ ಕೋಶಗಳು ಭೌತಿಕವಾಗಿ ತಮ್ಮ ಸಾಮಥ್ರ್ಯ ಕಳೆದುಕೊಂಡಿರುತ್ತವೆ. ಈ ಬಗೆಯ ಶಕ್ತಿಹೀನತೆಯನ್ನು ಅಳೆಯಲು ಸಾಧ್ಯವೆ ಎಂಬುದು ಪ್ರಶ್ನೆ.

ಅಸಲಿಗೆ ಕೋಶಗಳನ್ನು ನಿಶ್ಚೇತನಗೊಳಿಸುವ ಬಲ ಅದೆಷ್ಟು ಅಲ್ಪ ಮಟ್ಟದ್ದಾಗಿರಬಹುದು? ಒಂದು ಕಿಲೋಗ್ರಾಂ ತೂಕದ ವಸ್ತುವೊಂದು ಸೆಕೆಂಡಿಗೆ ಒಂದು ಮೀಟರ್ ವೇಗದಲ್ಲಿ ಮುನ್ನಡೆಯುತ್ತಿದೆಯೆಂದು ಭಾವಿಸಿ. ಪ್ರತಿ ಸೆಕೆಂಡಿಗೆ ಅದರ ವೇಗ ಒಂದೊಂದು ಮೀಟರ್ ಹೆಚ್ಚುತ್ತಾ ಹೋಗುವಂತೆ ವೇಗೋತ್ಕರ್ಷಣೆ (ಆಕ್ಸಿಲರೇಶನ್) ಮಾಡಲು ನೀವು ಬಯಸುತ್ತೀರಿ. ಈ ಕಾರ್ಯ ನಡೆಸಲು ನೀವು ವಸ್ತುವಿನ ಮೇಲೆ ಪ್ರಯೋಗಿಸಬೇಕಾದ ಬಲವನ್ನು ಒಂದು ‘ನ್ಯೂಟನ್’ ಎಂದು ಗುರುತಿಸಲಾಗುತ್ತದೆ. ಇಂಥ ಒಂದು ನ್ಯೂಟನ್ ಬಲವನ್ನು ಒಂದು ಲಕ್ಷ ಕೋಟಿ (ಟ್ರಿಲಿಯನ್) ಭಾಗವನ್ನಾಗಿಸಿದರೆ ಸಿಗುವ ಸೂಕ್ಷ್ಮಾತಿ ಸೂಕ್ಷ್ಮ ಬಲವೇ ‘ಪೀಕೊನ್ಯೂಟನ್’. ಸೋಂಕಿನಿಂದ ನಮ್ಮ ದೇಹದ ಕೋಶಗಳಲ್ಲಾಗುವ ಬದಲಾವಣೆಗಳಿಗೆ ಪೀಕೊನ್ಯೂಟನ್‍ಗಳಷ್ಟು ಅಲ್ಪ ಬಲ ಸಾಕು.

ಈ ಹಿಂದೆ ಸುರೇಶ್ ಅವರು ಕಾರ್ಯ ನಿರ್ವಹಿಸುತ್ತಿದ್ದ ಕ್ಷೇತ್ರ, ಸೂಕ್ಷ್ಮ ಎಲೆಕ್ಟ್ರಾನಿಕ್ಸ್ ಬಿಡಿಭಾಗಗಳ ತಯಾರಿಕೆಗೆ ಬಳಸುವ ಅತ್ಯಂತ ತೆಳು ಹಾಳೆಗಳ ಸಾಮಥ್ರ್ಯಗಳನ್ನು ಅಳೆಯುವ ಸಾಧನಗಳ ತಯಾರಿಕೆ. ಸಾಮಥ್ರ್ಯ ಅಳೆಯುವ ಇಂಥ ಸೂಕ್ಷ್ಮಾತಿ ಸೂಕ್ಷ್ಮ ಸಾಧನಗಳನ್ನು ‘ನ್ಯಾನೊ’ ಅಳತೆಯಲ್ಲಿ ನಿರ್ಮಿಸಬೇಕು. ಸುರೇಶ್ ಈ ವಿಶಿಷ್ಟ ಹಾಗೂ ಮುಂಚೂಣಿ ಎಂಜಿನಿಯರಿಂಗ್ ತಂತ್ರಜ್ಞಾನವನ್ನು ಕರಗತ ಮಾಡಿಕೊಂಡಿದ್ದರು. ಹೀಗೊಂದು ದಿನ ಸುರೇಶ್ ಅವರ ತಂಡದ ಗಮನ ನಮ್ಮ ದೇಹದ ಕೋಶಗಳತ್ತ ಹರಿಯಿತು. ಅವೂ ಸಹಾ ಸೂಕ್ಷ್ಮ ಎಲೆಕ್ಟ್ರಾನಿಕ್ಸ್ ಬಿಡಿಭಾಗಗಳ ತಯಾರಿಕೆಯಲ್ಲಿ ಬಳಸುವ ತೆಳು ಹಾಳೆಗಳಂತೆಯೇ ವರ್ತಿಸುತ್ತವೆಂದು ಮನವರಿಕೆಯಾಯಿತು. ವೈದ್ಯ ವಿಜ್ಞಾನಿಗಳು ಹಾಗೂ ಸೂಕ್ಷ್ಮ ಜೀವಿ ತಜ್ಞರುಗಳ ಸಹಯೋಗದೊಂದಿಗೆ ಸುರೇಶ್ ಅವರ ಮಾರ್ಗದರ್ಶನದಲ್ಲಿ ಸಾಮಗ್ರಿ ಎಂಜಿನಿಯರಿಂಗ್ ತಂತ್ರಜ್ಞರು ಸಂಶೋಧನೆಗಳನ್ನು ಮುಂದುವರಿಸಿದರು. ಇದುವರೆಗೂ ಕಲ್ಪಿಸಿಕೊಳ್ಳಲೇ ಆಗದಿದ್ದ ಅತ್ಯಲ್ಪ ಬಲವನ್ನು ಅಳೆಯುವ ಸಾಧನಗಳನ್ನು ನಿರ್ಮಿಸಿದರು. ರಕ್ತಕೋಶ, ಸ್ನಾಯುಕೋಶಗಳ ಎಂಜಿನಿಯರಿಂಗ್ ಮಾದರಿಗಳನ್ನು ಪ್ರಯೋಗಶಾಲೆಯಲ್ಲಿ ಸೃಷ್ಟಿಸಿ ಅವುಗಳ ಮೇಲೆ ತಮ್ಮ ಅಧ್ಯಯನವನ್ನು ವಿಸ್ತರಿಸಿದರು.

ಈ ನಿಟ್ಟಿನಲ್ಲಿ ಸುರೇಶ್ ತಂಡವು ಆರಿಸಿಕೊಂಡದ್ದು ರಕ್ತ ಕೋಶಗಳು. ಮಲೇರಿಯ ಸೋಂಕಿನ ಜೀವಂತ ರಕ್ತಕೋಶಗಳ ಹೊರಮೈನಲ್ಲಿ ಏನೆಲ್ಲಾ ಬದಲಾವಣೆಗಳಾಗುತ್ತವೆ? ಎಂದು ಸ್ಪಷ್ಟವಾಗಿ ಗುರುತಿಸಬೇಕೆಂಬ ಹಂಬಲ ಸುರೇಶ್ ಅವರದಾಗಿತ್ತು. ಸೋಂಕು ತಗಲಿದ ರಕ್ತಕೋಶಗಳ ಹೊರಮೈನ ದೃಢತೆ ಹೆಚ್ಚಾಗುವ ಬಗ್ಗೆ ಅನುಮಾನ ಹೊಂದಿದ್ದ ಅವರು ಆ ಬಗ್ಗೆ ಅಳತೆಗಳನ್ನು ಮಾಡಹೊರಟರು. ರಕ್ತನಾಳಗಳಲ್ಲಿ ಬಾಗಿ, ಬಳುಕಿ, ನುಸುಳಿ ಹೋಗಬೇಕಾದ ರಕ್ತಕೋಶಗಳಿಗೆ, ಹೆಚ್ಚಾದ ದೃಢತೆಯ ಗುಣವು ಅಡ್ಡಿಯಾಗುತ್ತವೆ ಎಂಬ ವಿಷಯ ಮನದಟ್ಟಾಯಿತು. ಈ ಸಂದರ್ಭದಲ್ಲಿ ಹೊರಬಿದ್ದ ಕೌತುಕದ ಸಂಗತಿಯೆಂದರೆ ಆರೋಗ್ಯವಂತ ರಕ್ತಕೋಶಗಳು ಅಗತ್ಯಕ್ಕೆ ತಕ್ಕಂತೆ ತಮ್ಮ ಅಗಲವನ್ನು ನಾಲ್ಕನೆಯ ಒಂದು ಭಾಗಕ್ಕೆ ಕುಗ್ಗಿಸಿಕೊಳ್ಳುವ ಸಾಮಥ್ರ್ಯ ಹೊಂದಿರುತ್ತವೆ. ಆದರೆ ಸೋಂಕು ತಗಲಿದ ಕೋಶಗಳು ತಮ್ಮ ಅಗಲವನ್ನು ಇಷ್ಟು ಮುದುಡಿಕೊಳ್ಳಲಾಗುವುದಿಲ್ಲ. ಇದೇ ಕಾರಣದಿಂದಾಗಿ ರಕ್ತನಾಳಗಳಲ್ಲಿ ಪರಿಚಲನೆ ಕುಗ್ಗುತ್ತಾ ಬರುವುದರ ಜತೆಗೆ ಅಲ್ಲಲ್ಲಿ ರಕ್ತ ಹೆಪ್ಪುಗಟ್ಟುವ ಸಾಧ್ಯತೆಗಳು ಜಾಸ್ತಿಯಾಗುತ್ತವೆ. ಈ ಪರಿಸ್ಥಿತಿಯಲ್ಲಿ ಮಿದುಳಿನ ತೀವ್ರ ರಕ್ತಸ್ರಾವವೂ ಸಂಭವಿಸಬಹುದು. ಈ ಪ್ರಕ್ರಿಯೆಯನ್ನು ಹಲವು ವಿಜ್ಞಾನಿ—ತಂತ್ರಜ್ಞರು ಬಹುಮಟ್ಟಿಗೆ ಅರಿತುಕೊಂಡಿದ್ದರೂ, ಸುರೇಶ್ ಅವರ ಸೂಕ್ಷ್ಮಾತಿಸೂಕ್ಷ್ಮ ಸಾಧನಗಳು ಕೋಶಗಳ ಹೊರಮೈನ ದೃಢತೆಯನ್ನು ನಿಖರವಾಗಿ ಅಳೆಯುವಲ್ಲಿ ಯಶಸ್ವಿಯಾದವು.

ಈ ಬಗೆಯ ಅಳತೆಗಳಿಗೆ ಸುರೇಶ್ ಅಭಿವೃದ್ಧಿಪಡಿಸಿದ ಸಾಧನದ ಹೆಸರು ‘ಆಪ್ಟಿಕಲ್ ಟ್ವೀಝರ್ಸ್’ ಎಂದು. ಇದರ ಮೂಲ ಗುಣಲಕ್ಷಣವೆಂದರೆ ತೀವ್ರವಾಗಿ ಕೇಂದ್ರೀಕರಿಸಿದ ಲೇಸರ್ ಬೆಳಕಿನ ಸಲಾಕೆಯ ಮೂಲಕ ಕೋಶಗಳಿಗೆ ಹೊಂದಿಸಿಡಲಾದ ವಿಶ್ಲೇಷಕಗಳ ಮೇಲೆ ಹಲವು ಪೀಕೊನ್ಯೂಟನ್‍ಗಳಷ್ಟು ಅತ್ಯಲ್ಪ ಬಲವನ್ನು ಪ್ರಯೋಗಿಸುವುದು. ಇಂಥ ಬಲಕ್ಕೆ ಪ್ರತಿರೋಧವನ್ನು ತೋರಲು ಕೋಶಗಳ ಮೇಲ್ಮೈನಲ್ಲಿ ಎಷ್ಟರ ಮಟ್ಟಿಗೆ ದೃಢತೆಯಿದೆ ಎಂದು ಈ ಮೂಲಕ ಗುರುತಿಸಬಹುದು. ವೈದ್ಯ ವಿಜ್ಞಾನಿಗಳನ್ನು ದಂಗು ಬಡಿಸಿದ ಅಂಶವೆಂದರೆ ಮಲೇರಿಯ ಸೋಂಕು ತಗಲಿದ ರಕ್ತಕೋಶಗಳ ಮೇಲ್ಮೈ ಆರೋಗ್ಯವಂತ ರಕ್ತ ಕೋಶಗಳಿಗಿಂತ ಹತ್ತು ಪಟ್ಟು ಹೆಚ್ಚಿನ ದೃಢತೆ ಹೊಂದಿದ್ದವು. ಅಂದರೆ ಮಲೇರಿಯ ಸೋಂಕಿನಿಂದ ಬಳಲುವ ವ್ಯಕ್ತಿಗೆ ಮಿದುಳಿನಲ್ಲಿ ತೀವ್ರ ರಕ್ತ ಸ್ರಾವವಾಗುವ ಸಂಭವನೀಯತೆ ಇದುವರೆಗೂ ಅಂದಾಜು ಮಾಡಿರುವುದಕ್ಕಿಂತಲೂ ಮೂರು— ನಾಲ್ಕು ಪಟ್ಟು ಹೆಚ್ಚು. ಇತ್ತೀಚಿನ ದಿನಗಳಲ್ಲಿ ಶಬ್ದದಲೆಗಳನ್ನು ಬಳಸಿ ಅಳೆಯುವ ಸಾಧನ ‘ಅಕೌಸ್ಟಿಕ್ ಟ್ವೀಝರ್’ ಅನ್ನು ಸುಬ್ರ ಸುರೇಶ್ ನಿರ್ಮಿಸಿದ್ದಾರೆ. ಭವಿಷ್ಯತ್ತಿನ ತಂತ್ರಜ್ಞಾನವೆಂದೇ ಬಿಂಬಿತವಾಗಿರುವ ಮೂರು—ಆಯಾಮಗಳ ಮುದ್ರಣ ಕ್ಷೇತ್ರದಲ್ಲಿ ಈ ಸಾಧನದ ಬಳಕೆ ಹೆಚ್ಚು.

ಕ್ಯಾನ್ಸರ್ ಪೀಡಿತ ಜೀವಕೋಶಗಳ ಬಗ್ಗೆ ಗಹನ ಅಧ್ಯಯನ ನಡೆಸುತ್ತಿರುವವರು ಜರ್ಮನಿಯ ಸ್ಟಟ್‍ಗರ್ಟ್‍ನಲ್ಲಿರುವ ಮ್ಯಾಕ್ಸ್ ಪ್ಲಾಂಕ್ ಇನ್‍ಸ್ಟಿಟ್ಯೂಟ್‍ನ ಸಾಮಗ್ರಿ ಸಂಶೋಧನಾ ವಿಭಾಗದ ನಿರ್ದೇಶಕ ಎಡುಯಾರ್ಡ್ ಆರ್ಝ್‍ಟ್. ಅವರ ಪ್ರಕಾರ ಜೀವಕೋಶಗಳ ‘ನಮ್ಯತೆ’ ಗುಣದ (ಮತ್ತೆ ಮತ್ತೆ ಬಗ್ಗಿಸಿದಾಗ ಅಥವಾ ತಿರುಚಿದಾಗ ಬಿರಿಯದ ಅಥವಾ ಮುರಿಯದ ಗುಣ) ಅಧ್ಯಯನವು ಅತ್ಯಂತ ಮಹತ್ವದ್ದು. ಸುರೇಶ್ ಅವರ ಸಂಶೋಧನೆ ಮತ್ತು ಅಧ್ಯಯನವನ್ನು ಕೇವಲ ಮಲೇರಿಯ ಸೋಂಕಿನ ಜೀವಕೋಶಗಳಿಗಷ್ಟೇ ಅಲ್ಲ, ಕ್ಯಾನ್ಸರ್ ಪೀಡಿತ ಜೀವಕೋಶಗಳಿಗೂ ವಿಸ್ತರಿಸಬಹುದೆಂಬ ನಿರೀಕ್ಷೆ ಎಡುಯಾರ್ಡ್ ಅವರದು. ನಮ್ಮ ಎಂಜಿನಿಯರಿಂಗ್ ಗಣನೆಗಳಲ್ಲಿ ಬಹು ಹಿಂದಿನಿಂದಲೂ ಬಳಸು ತ್ತಿರುವ ಸಾಮಗ್ರಿಗಳ ಎಲಾಸ್ಟಿಕ್ ಗುಣ, ತ್ರಾಣ ಮತ್ತಿತರ ಗುಣ ಲಕ್ಷಣಗಳನ್ನು ಜೀವ ವಿಜ್ಞಾನಕ್ಕೂ ವಿಸ್ತರಿಸುವ ಕಾಲ ಬಂದಿದೆ ಎಂದವರು ಅಭಿಪ್ರಾಯ ಪಡುತ್ತಾರೆ.

ಇದುವರೆಗೂ ಕೈಗೊಂಡಿರುವ ಸಂಶೋಧನೆ ಮತ್ತು ಪ್ರಯೋಗಗಳ ಯಶಸ್ಸಿನಿಂದಲೇ ಜೀವಕೋಶಗಳಿಗೆ ತಗಲುವ ಸೋಂಕು ಹಾಗೂ ಕ್ಯಾನ್ಸರ್‍ಗಳಿಗೆ ಚಿಕಿತ್ಸಾಕ್ರಮವನ್ನು ಉತ್ತಮ ಪಡಿಸಬಹುದೆಂದು ನಿರ್ಧರಿಸಲಾಗದು. ಆದರೆ ವಿಭಿನ್ನ ಸನ್ನಿವೇಶಗಳಲ್ಲಿ ಜೀವಕೋಶಗಳ ನಡತೆಯನ್ನು ಇಷ್ಟೊಂದು ಕರಾರುವಾಕ್ಕಾಗಿ ಗುರುತಿಸಲು ಸಾಧ್ಯವಾಗಿರುವುದು ಖಂಡಿತವಾಗಿಯೂ ಒಂದು ಎಂಜಿನಿಯರಿಂಗ್ ವಿಕ್ರಮ. ಈ ಬಗ್ಗೆ ವೈದ್ಯ ವಿಜ್ಞಾನಿಗಳಲ್ಲೂ ಎರಡು ಮಾತಿಲ್ಲ. ‘ಸೂಕ್ಷ್ಮ—ಚಲನೆ ಹಾಗೂ ಅಣುಗಾತ್ರದ ಔಷಧ ರವಾನೆ’ಯ ಬಗೆಗಿನ ಜಾಗತಿಕ ಒಕ್ಕೂಟವನ್ನು ಮುನ್ನಡೆಸುತ್ತಿರುವವರಲ್ಲಿ ಸುರೇಶ್ ಮುಂಚೂಣಿಯಲ್ಲಿದ್ದಾರೆ. ಮಲೇರಿಯ, ರಕ್ತ ಹೀನತೆ, ಮೇದೋಜೀರಕಾಂಗ ಹಾಗೂ ಯಕೃತ್ತಿನ ಕ್ಯಾನ್ಸರ್ ಮತ್ತು ಹೃದಯ ರಕ್ತನಾಳಗಳ ತೊಂದರೆಗಳಂಥ ಗಂಭೀರ ಕಾಯಿಲೆಗಳನ್ನು ಎದುರಿಸಲು ನ್ಯಾನೊ ಅಳತೆಯ ಸಲಕರಣೆಗಳನ್ನು ಬಳಸಿಕೊಳ್ಳುವ ಬಗ್ಗೆ ಈ ಒಕ್ಕೂಟವು ಸಂಶೋಧನಾ ದೇಣಿಗೆಗಳನ್ನು ನೀಡುತ್ತಿದೆ. ‘ಭವಿಷ್ಯತ್ತಿನ ಚಿಕಿತ್ಸಾ ಕ್ರಮಗಳ ಮೇಲೆ ಅತಿ ಹೆಚ್ಚು ಪ್ರಭಾವ ಬೀರಲಿರುವ ಎಂಜಿನಿಯರಿಂಗ್ ತಂತ್ರಜ್ಞಾನವೆಂದರೆ ನ್ಯಾನೊ ಅಳತೆಯ ಸೂಕ್ಷ್ಮಾತಿ ಸೂಕ್ಷ್ಮ ಸಲಕರಣೆಗಳ ಅಭಿವೃದ್ಧಿ. ಈ ನಿಟ್ಟಿನಲ್ಲಿ ಎಂಜಿನಿಯರಿಂಗ್ ಮೆಕ್ಯಾನಿಕ್ಸ್ ಕ್ಷೇತ್ರವು ವೈದ್ಯ ವಿಜ್ಞಾನಕ್ಕೆ ಅಪಾರ ಕೊಡುಗೆಯನ್ನು ನೀಡಲಿದೆ’ ಎಂದು ಆತ್ಮವಿಶ್ವಾಸದ ಮಾತುಗಳನ್ನಾಡಿರುವ ಸುರೇಶ್, ಸದ್ಯಕ್ಕೆ ಜಾಗತಿಕ ಒಕ್ಕೂಟದ ಸ್ಥಾಪಕ ನಿರ್ದೇಶಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.

ಸಂಜೋತಾ ಪುರೋಹಿತ್

ಮಕ್ಕಳ ಶಿಕ್ಷಣದ ಹೊರೆ

ಜುಲೈ ೨೦೧೮

ಇಮಾಮ್ ಗೋಡೆಕಾರ

ಒಂದು ಆನ್‍ಲೈನ್ ಕ್ರಾಂತಿ ಫ್ಲಿಪ್‍ಕಾರ್ಟ್

ಜೂನ್ ೨೦೧೮

ಭಾರತೀ ಮೈಸೂರು

ಜಪಾನ್ ಗಾತ್ರದಲ್ಲಿ ಮಾತ್ರ ಕರ್ನಾಟಕ!

ಜೂನ್ ೨೦೧೮

ಪ್ರೊ. ಕ್ರಿಸ್ಟೋಫರ್ ಚೆಕೂರಿ

ಡೊನಾಲ್ಡ್ ಟ್ರಂಪ್ ಮತ್ತು ಅಮೆರಿಕಾದ ವರ್ಣೀಯ ರಾಜಕಾರಣ

ಎಪ್ರಿಲ್ ೨೦೧೮

ತಾಳಗುಂದ ಶಾಸನ

ಎಪ್ರಿಲ್ ೨೦೧೮

ಸುಧೀಂದ್ರ ಹಾಲ್ದೊಡ್ಡೇರಿ

ಯಂತ್ರ ನೋಡಿರಣ್ಣ, ದೇಹದ ತಂತ್ರ ಕಾಣಿರಣ್ಣ!

ಎಪ್ರಿಲ್ ೨೦೧೮

ಡಿ. ರೂಪ

‘ಧೈರ್ಯ, ತಾಳ್ಮೆ ಜತೆಗಿರಲಿ’

ಮಾರ್ಚ್ ೨೦೧೮

ಸುಧೀಂದ್ರ ಹಾಲ್ದೊಡ್ಡೇರಿ

ಬ್ಯಾಕ್ಟೀರಿಯಗಳ ಬಗ್ಗೆ ನಿಮಗೇನು ಗೊತ್ತು?

ಮಾರ್ಚ್ ೨೦೧೮

ಸುಧೀಂದ್ರ ಹಾಲ್ದೊಡ್ಡೇರಿ

ಎಂಗೈತೆ ಮಗಾ, ಸಾಫ್ಟ್‍ವೇರ್ ಬ್ಯಾಂಗ್‍ಲೂರು?

ಫೆಬ್ರವರಿ ೨೦೧೮

ಪ್ರಸಾದ್ ನಾಯ್ಕ್

ಮಾರಕ ಮಾಧ್ಯಮಗಳು!

ಫೆಬ್ರವರಿ ೨೦೧೮