2nd ಎಪ್ರಿಲ್ ೨೦೧೮

ಇಸ್ರೇಲ್ ಭಾರತ ಸಂಬಂಧಗಳ ಹೊಸ ಅಧ್ಯಾಯ

ಪ್ಯಾಲೆಸ್ಟೀನ್ ಕಡೆಗಣಿಸುವ ಮೂಲಕ ಮೋದಿ ಸರಕಾರ ಪಶ್ಚಿಮ ಏಷ್ಯಾ ಕುರಿತಾದ ಸಾಂಪ್ರದಾಯಿಕ ವಿದೇಶಾಂಗ ನೀತಿಯಲ್ಲಿ ಕ್ರಾಂತಿಕಾರಿ ಹೆಜ್ಜೆ ಇರಿಸಿದ್ದಾರೆಯೇ?

ಇತ್ತೀಚಿನ ದಿನಗಳಲ್ಲಿ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹುರವರ ಭಾರತ ಭೇಟಿ ಇಸ್ರೇಲ್ ಹಾಗೂ ಭಾರತದ ರಾಜತಾಂತ್ರಿಕ ಸಂಬಂಧಗಳ ಆಮೂಲಾಗ್ರ ಬದಲಾವಣೆಯ ಮುನ್ಸೂಚನೆ ನೀಡಿದಂತಾಗಿದೆ. ಇದುವರೆಗಿನ ಭಾರತದ ತನ್ನ ವಿದೇಶಾಂಗ ನೀತಿಯಂತೆ ಇಸ್ರೇಲ್ ಹಾಗೂ ಪ್ಯಾಲೆಸ್ಟೀನ್ ನಡುವೆ ಸಮಾನಾಂತರ ಸಂಬಂಧ ಉಳಿಸಿಕೊಂಡು ಬಂದಿತ್ತು. ಆದರೆ ಬದಲಾದ ಅಗತ್ಯಗಳಿಗನುಗುಣವಾಗಿ ಭಾರತವು ಇಸ್ರೇಲ್‍ನೊಂದಿಗಿನ ಸಂಬಂಧವನ್ನು ಗಟ್ಟಿ ಮಾಡಿಕೊಳ್ಳುವೆಡೆಗೆ ಹೊರಟಿದೆ. ಇದಕ್ಕೆ ಕಾರಣಗಳು ಹಲವಿವೆ. ಅಮೆರಿಕದೊಡನೆ ಸಂಬಂಧವನ್ನು ಭದ್ರ ಮಾಡಿಕೊಳ್ಳಲು ಭಾರತವು ವಿಶ್ವದ ಏಕಮಾತ್ರ ಯೆಹೂದಿ ರಾಷ್ಟ್ರದೊಂದಿಗೆ ಸಂಬಂಧವನ್ನು ಸುಧಾರಿಸಿಕೊಳ್ಳಲೇಬೇಕಿತ್ತು. ಇಸ್ರೇಲ್ ದೇಶವನ್ನು ಖುಷಿಗೊಳಿಸಿದರೆ ಅಮೆರಿಕವನ್ನು ಖುಷಿಗೊಳಿಸಿದಂತೆ ಎಂಬುದು ಅಂತರರಾಷ್ಟ್ರೀಯ ಸಂಬಂಧಗಳನ್ನು ಅಭ್ಯಾಸ ಮಾಡಿದ ಯಾರಿಗೇ ಆಗಲೀ ಗೊತ್ತಿರುವ ಸಂಗತಿ. ಅಮೆರಿಕದ ರಾಜಕೀಯ ರಂಗ, ಆರ್ಥಿಕ ಕ್ಷೇತ್ರ ಮತ್ತು ಹಾಲಿವುಡ್‍ನಲ್ಲಿ ಅತ್ಯಂತ ಪ್ರಬಲವಾಗಿರುವ ಯೆಹೂದಿಗಳನ್ನು ಸಂತೃಪ್ತಿಗೊಳಿಸಲು ಇಸ್ರೇಲ್‍ಗೆ ಹೆಚ್ಚಿನ ಮಾನ್ಯತೆ ಕೊಡಲೇಬೇಕಿತ್ತು. ಮೇಲಾಗಿ, ಇತ್ತೀಚಿನ ವರ್ಷಗಳಲ್ಲಿ ಇಸ್ರೇಲ್ ಭಾರತಕ್ಕೆ ಅತ್ಯಂತ ಸೂಕ್ಷ್ಮ ಹಾಗೂ ಆಧುನಿಕ ಶಸ್ತ್ರಾಸ್ತ್ರಗಳನ್ನು ಒದಗಿಸುತ್ತಿದೆ. ಭಾರತಕ್ಕೆ ಅಗತ್ಯವಿರುವ ಗೂಢಚಾರ ಮಾಹಿತಿ ನೀಡಿ ರಕ್ಷಣಾ ರಣನೀತಿಯನ್ನು ಹೇಳಿಕೊಡುತ್ತಿದೆ. ಭಾರತದಲ್ಲಿ ಅತ್ಯಮೂಲ್ಯವಾಗುತ್ತಿರುವ ಜಲಸಂಪತ್ತಿನ ಬಳಕೆಯ ಬಗ್ಗೆಯೂ ತನ್ನ ತಂತ್ರಜ್ಞಾನವನ್ನು ಹಂಚಿಕೊಳ್ಳುತ್ತಿದೆ. ನಮ್ಮ ಹೆಚ್.ಡಿ.ಕುಮಾರಸ್ವಾಮಿಯವರೂ ತಾವು ಚುನಾವಣೆಯಲ್ಲಿ ಗೆದ್ದರೆ ಕರ್ನಾಟಕದಲ್ಲಿನ ಕೃಷಿಗೆ ಇಸ್ರೇಲ್ ತಂತ್ರಜ್ಞಾನ ತರುವುದಾಗಿ ಹೇಳಿಕೊಳ್ಳುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಇಸ್ರೇಲ್ ಜೊತೆಗೆ ರಾಜತಾಂತ್ರಿಕ ಸಂಬಂಧವನ್ನು ಮೇಲ್ಮಟ್ಟಕ್ಕೆ ಏರಿಸುವುದು ಅತ್ಯಗತ್ಯವಾಗಿತ್ತು. ಈ ಎಲ್ಲ ಬೆಳವಣಿಗೆಗಳಿಗೂ ಕೆಲವು ಐತಿಹಾಸಿಕ ಕಾರಣಗಳಿವೆ.

2014ರಲ್ಲಿ ನರೇಂದ್ರ ಮೋದಿಯವರು ಅಧಿಕಾರಕ್ಕೇರುವುದರೊಂದಿಗೆ, ಪಶ್ಚಿಮ ಏಷ್ಯಾ ರಾಷ್ಟ್ರಗಳತ್ತ ಭಾರತದ ವಿದೇಶಾಂಗ ನೀತಿ ಹೊಸ ತಿರುವು ಪಡೆದುಕೊಂಡಿದೆ. ಇಸ್ರೇಲ್ ಜೊತೆಗಿನ ರಾಜತಾಂತ್ರಿಕ ಸಂಬಂಧಗಳನ್ನು ಬಲಪಡಿಸಿಕೊಳ್ಳುವತ್ತ ಭಾರತ ಹೆಚ್ಚಿನ ಒಲವು ತೋರಿಸುತ್ತಿದೆ. ರಕ್ಷಣಾ ವಲಯ, ಭಯೋತ್ಪಾದನಾ ನಿಗ್ರಹ, ತಂತ್ರಜ್ಞಾನ, ಕೃಷಿ, ಬಾಹ್ಯಾಕಾಶ ಮತ್ತಿನ್ನಿತರ ಕ್ಷೇತ್ರಗಳಲ್ಲಿ ಈಗಾಗಲೇ ಭಾರತ ಮತ್ತು ಇಸ್ರೇಲ್‍ಗಳ ನಡುವೆ ಗಮನಾರ್ಹ ಬಾಂಧವ್ಯವಿದೆ. ಇಸ್ರೇಲ್ ಜೊತೆಗೆ ಮೋದಿ ಸಂಬಂಧ ಹೊಸದೇನಲ್ಲ. ಗುಜರಾತಿನ ಮುಖ್ಯಮಂತ್ರಿಯಾಗಿದ್ದ ಸಮಯದಲ್ಲೇ ಗುಜರಾತ್ ಕೇಂದ್ರ ಸರಕಾರಕ್ಕಿಂತ ವಿಭಿನ್ನ ಮತ್ತು ಸ್ವತಂತ್ರ ಆರ್ಥಿಕ ಯೋಜನೆಗಳನ್ನು ಅಳವಡಿಸಿಕೊಂಡು ಬೆಳೆಯುವುದರ ಹಿಂದೆಯೂ ಇಸ್ರೇಲ್ ಪ್ರಮುಖ ಪಾತ್ರವಹಿಸಿತ್ತು.

ಆರಂಭದಿಂದಲೂ ಭಾರತ ಮತ್ತು ಇಸ್ರೇಲ್‍ಗಳ ರಾಜತಾಂತ್ರಿಕ ಸಂಬಂಧಗಳ ಮೇಲೆ ಇಸ್ರೇಲ್—ಪ್ಯಾಲೆಸ್ಟೀನ್ ಸಮಸ್ಯೆ ಆಗಾಧ ಪರಿಣಾಮ ಬೀರಿದೆ. ಹಿಂದೆ ಭಾರತದ ವಿದೇಶಾಂಗ ನೀತಿ ಪ್ಯಾಲೆಸ್ಟೀನ್ ಪರವಾಗಿದ್ದು, ಭಾರತ ಜಾಗತಿಕ ವೇದಿಕೆಯಲ್ಲಿ ಪ್ಯಾಲೆಸ್ಟೀನ್ ಸ್ವತಂತ್ರ ರಾಷ್ಟ್ರದ ಪರ ನಿಲುವನ್ನು ಕಾಪಾಡಿಕೊಂಡು ಬಂದಿತ್ತು. ಪಶ್ಚಿಮ ಏಷ್ಯಾದ ಅರಬ್ ದೇಶಗಳೊಂದಿಗೆ ಸೌಹಾರ್ದ ಕಾಯ್ದುಕೊಳ್ಳುವ ಅನಿವಾರ್ಯತೆಯಿಂದಾಗಿ ಇಸ್ರೇಲ್ ಜೊತೆಗಿನ ಸಂಬಂಧಗಳನ್ನು ಭಾರತ ಕಡೆಗಣಿಸಬೇಕಾಗಿತ್ತು. 1992ರಲ್ಲಿ ಪಿ.ವಿ.ನರಸಿಂಹರಾವ್ ಮುಂದಾಳತ್ವದಲ್ಲಿ ಇಸ್ರೇಲ್ ಜೊತೆಗೆ ಪೂರ್ಣ ಪ್ರಮಾಣದ ರಾಜತಾಂತ್ರಿಕ ನಡೆಗಳಿಗೆ ಸಾಕ್ಷಿಯಾದರೂ ಭಾರತವು ಪ್ಯಾಲೆಸ್ಟೀನ್‍ಗೆ ನೀಡುತ್ತಿದ್ದ ಬೆಂಬಲ ಕಡಿಮೆಯಾಗಿಲ್ಲದೇ ಇರುವುದು ಭಾರತ— ಇಸ್ರೇಲ್ ಸಂಬಂಧಗಳಲ್ಲಿರುವ ವಿರೋಧಾಭಾಸಗಳಿಗೆ ಸಾಕ್ಷಿಯಾಗಿದೆ.

ಈವರೆಗೆ ಇಸ್ರೇಲ್‍ಗೆ ಭೇಟಿ ನೀಡಿದ ಭಾರತದ ರಾಜತಾಂತ್ರಿಕ ಪ್ರತಿನಿಧಿಗಳು ಪ್ಯಾಲೆಸ್ಟೀನ್‍ಗೂ ಭೇಟಿ ನೀಡುವುದರ ಮೂಲಕ ಭಾರತಕ್ಕೆ ಪ್ಯಾಲೆಸ್ಟೀನ್ ಜೊತೆಗಿನ ಸಂಬಂಧಗಳೂ ಮಹತ್ವಪೂರ್ಣ ಎಂಬ ಸಂದೇಶ ರವಾನೆಯಾಗಿದೆ. 2000ದಲ್ಲಿ ಕೇಂದ್ರ ಗೃಹ ಸಚಿವ ಎಲ್.ಕೆ.ಅಡ್ವಾನಿ ಮತ್ತು ವಿದೇಶಾಂಗ ಸಚಿವ ಜಸ್ವಂತ್ ಸಿಂಗ್ ಹಾಗೂ 2012ರಲ್ಲಿ ವಿದೇಶಾಂಗ ಸಚಿವ ಎಸ್.ಎಂ.ಕೃಷ್ಣ ಇಸ್ರೇಲ್‍ಗೆ ಭೇಟಿ ನೀಡಿದ್ದರು. ಆದರೆ ಈ ವಿದೇಶ ಪ್ರವಾಸ ಇಸ್ರೇಲ್‍ಗೆ ಮಾತ್ರ ಸೀಮಿತವಾಗಿರಲಿಲ್ಲ. ಭಾರತದ ಸಚಿವರು ಇಸ್ರೇಲ್ ಮತ್ತು ಪ್ಯಾಲೆಸ್ಟೀನ್ ನಾಯಕರೊಂದಿಗೆ ಸಮಾನ ಮಾತುಕತೆ ನಡೆಸುತ್ತಾರೆ. ಹೀಗಾಗಿ ಈ ಪ್ರಯತ್ನಗಳು ಪ್ರಾದೇಶಿಕ ಭೇಟಿಗಳಾಗಿ ಪರಿಗಣಿಸಲ್ಪಟ್ಟಿವೆಯೇ ವಿನಾ ಇಸ್ರೇಲ್ ಭೇಟಿ ಎಂದಲ್ಲ. ಈ ಹಿನ್ನೆಲೆಯಲ್ಲಿ 2014ರ ನವೆಂಬರ್‍ನಲ್ಲಿ ಭಾರತದ ಗೃಹ ಸಚಿವ ರಾಜನಾಥ್ ಸಿಂಗ್‍ರ ಇಸ್ರೇಲ್ ಭೇಟಿ ಮಹತ್ವದ ರಾಜತಾಂತ್ರಿಕ ಹೆಜ್ಜೆಯಾಗಿ ಗುರುತಿಸಲ್ಪಟ್ಟಿದೆ. ಕಾರಣ ರಾಜ್‍ನಾಥ್ ಭೇಟಿ ಇಸ್ರೇಲ್‍ಗೆ ಮಾತ್ರ ಸೀಮಿತವಾಗಿತ್ತು. ಪ್ಯಾಲೆಸ್ಟೀನ್ ಕಡೆಗಣಿಸುವ ಮೂಲಕ ಮೋದಿ ಸರಕಾರ ಪಶ್ಚಿಮ ಏಷ್ಯಾ ಕುರಿತಾದ ಸಾಂಪ್ರದಾಯಿಕ ವಿದೇಶಾಂಗ ನೀತಿಯಲ್ಲಿ ಕ್ರಾಂತಿಕಾರಿ ಹೆಜ್ಜೆ ಇರಿಸಿದ್ದಾರೆ ಎಂಬ ಬಗ್ಗೆ ಚರ್ಚೆಗಳೂ ನಡೆದಿದ್ದವು. ಈ ವಿಷಯವಾಗಿ ಹೆಚ್ಚಿನ ಚರ್ಚೆ—ವಿವಾದಗಳಿಗೆ ಆಸ್ಪದ ನೀಡದೆ ಅಕ್ಟೋಬರ್ 2015ರಲ್ಲಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಇಸ್ರೇಲ್ ಜೊತೆಗೆ ಪ್ಯಾಲೆಸ್ಟೀನ್ ಮತ್ತು ಜೋರ್ಡಾನ್‍ಗಳಿಗೆ ಭೇಟಿ ನೀಡಿದ್ದರು. ಜನವರಿ 2016ರ ವಿದೇಶ ಪ್ರವಾಸದಲ್ಲಿ ಸುಷ್ಮಾ ಸ್ವರಾಜ್ ಇಸ್ರೇಲ್, ಪ್ಯಾಲೆಸ್ಟೀನ್ ಮತ್ತು ಜೋರ್ಡಾನ್‍ಗಳಿಗೆ ಭೇಟಿ ನೀಡಿ ಪ್ಯಾಲೆಸ್ಟೀನ್ ಪರವಾದ ಭಾರತದ ನಿಲುವನ್ನು ಸಮರ್ಥಿಸಿಕೊಂಡಿದ್ದಾರೆ.

ಭಾರತ—ಇಸ್ರೇಲ್ ಮಧ್ಯೆ ಇತ್ತೀಚೆಗೆ ಆದ ಒಪ್ಪಂದಗಳು

  • ಬಾಹ್ಯಾಕಾಶ ಕ್ಷೇತ್ರದಲ್ಲಿ ಪರಸ್ಪರ ಸಹಕಾರ.
  • ಭಾರತದಲ್ಲಿ ಹೂಡಿಕೆ ಮತ್ತು ಇಸ್ರೇಲ್‍ನಲ್ಲಿ ಹೂಡಿಕೆಗೆ ಆಸಕ್ತಿ ಪತ್ರಕ್ಕೆ ಸಹಿ.
  • ಸೈಬರ್ ಭದ್ರತಾ ಕ್ಷೇತ್ರದಲ್ಲಿ ಪರಸ್ಪರ ಸಹಕಾರ.
  • ತೈಲ ಮತ್ತು ಅನಿಲ ವಲಯದಲ್ಲಿ ಸಹಕಾರ.
  • ವಿಮಾನ ಸಂಚಾರ ಒಪ್ಪಂದ ತಿದ್ದುಪಡಿ ಶಿಷ್ಟಾಚಾರಕ್ಕೆ ಸಹಿ.
  • ಚಲನಚಿತ್ರ ಸಹ—ನಿರ್ಮಾಣ ಒಪ್ಪಂದ.
  • ಹೋಮಿಯೋಪತಿ ವೈದ್ಯಕೀಯ ಪದ್ಧತಿಯಲ್ಲಿ ಸಹಕಾರ.
  • ಮೆಟಲ್—ಏರ್ ಬ್ಯಾಟರಿ ಕ್ಷೇತ್ರದಲ್ಲಿ ಸಹಕಾರ ನೀಡುವ ಆಸಕ್ತಿ ಪತ್ರಕ್ಕೆ ಸಹಿ.
  • ಸೌರ ಉಷ್ಣ ವಿದ್ಯುತ್ ತಂತ್ರಜ್ಞಾನ ಕ್ಷೇತ್ರದಲ್ಲಿ ಪರಸ್ಪರ ಸಹಕಾರ ನೀಡುವ ಆಸಕ್ತಿ ಪತ್ರಕ್ಕೆ ಸಹಿ.

ಸೆಪ್ಟೆಂಬರ್ 2014ರಲ್ಲಿ ನ್ಯೂಯಾರ್ಕ್‍ನಲ್ಲಿ ನಡೆದ ವಿಶ್ವಸಂಸ್ಥೆ ಸಾಮಾನ್ಯ ಸಭೆ ಕಾರ್ಯಕ್ರಮವೊಂದರಲ್ಲಿ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅಧಿಕೃತವಾಗಿ ಮೋದಿಯವರನ್ನು ಇಸ್ರೇಲ್‍ಗೆ ಆಹ್ವಾನಿಸಿದ್ದರು. ಮುಂದೆ ಮಾರ್ಚ್ 2015ರಲ್ಲಿ ಸಿಂಗಾಪೂರ್‍ನಲ್ಲಿ ನಡೆದ ಅನೌಪಚಾರಿಕ ಕಾರ್ಯಕ್ರಮವೊಂದರಲ್ಲಿ ಇಸ್ರೇಲ್ ಅಧ್ಯಕ್ಷ ರೇವೆನ್ ರಿವ್ಲಿನ್‍ರನ್ನು ಭೇಟಿ ಮಾಡಿದ ಮೋದಿ ಇಸ್ರೇಲ್‍ಗೆ ಭೇಟಿ ನೀಡುವ ಇಚ್ಛೆ ವ್ಯಕ್ತಪಡಿಸಿದ್ದರು. ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಖಾಯಂ ಸದಸ್ಯತ್ವಕ್ಕಾಗಿ ಪ್ರಯತ್ನಿಸುತ್ತಿರುವ ಭಾರತಕ್ಕೆ ಅರಬ್ ದೇಶಗಳ ಬೆಂಬಲ ಅತ್ಯಗತ್ಯ. ವಿಶ್ವಸಂಸ್ಥೆ ಸಾಮಾನ್ಯ ಸಭೆಯಲ್ಲಿ ಅರಬ್ ದೇಶಗಳ ಸಂಖ್ಯಾಬಲ ಭಾರತದ ಆಕಾಂಕ್ಷೆಗೆ ಮುಳ್ಳಾಗಬಹುದು. ಹೀಗಾಗಿ ಭಾರತದ ಆರ್ಥಿಕ, ರಾಜಕೀಯ ಮತ್ತು ಸಮರ ತಾಂತ್ರಿಕ ಆಸಕ್ತಿಗಳ ಜೊತೆ ರಾಜಿ ಮಾಡಿಕೊಳ್ಳದೆ ಪ್ಯಾಲೆಸ್ಟೀನ್—ಇಸ್ರೇಲ್ ವಿವಾದ ತನ್ನ ರಾಷ್ಟ್ರೀಯ ಹಿತಾಸಕ್ತಿಗೆ ಕೆಡುಕಾಗದಂತೆ ಪಶ್ಚಿಮ ಏಷ್ಯಾದಲ್ಲಿ ಭಾರತ ತನ್ನ ಮುಂದಿನ ಹೆಜ್ಜೆ ಇಡುವ ಅನಿವಾರ್ಯತೆಯಿದೆ.

ನಡೆದುಹೋದ ಘಟನೆಗಳೇನೇ ಇದ್ದರೂ ಭಾರತ ವಿದೇಶಾಂಗ ನೀತಿ ಚರಿತ್ರೆಯ ಸಂಕೋಲೆಗಳನ್ನು ಬಿಡಿಸಿಕೊಂಡು ಹೊಸ ಗುರಿಯತ್ತ ದೃಷ್ಟಿ ನೆಟ್ಟಿದೆ. ಏಪ್ರಿಲ್ 2016ರಲ್ಲಿ ಯುನೆಸ್ಕೋ ಸಾಮಾನ್ಯ ಸಭೆಯೊಂದರಲ್ಲಿ ಭಾರತ ಮತ್ತು ಮೂವತ್ತಕ್ಕೂ ಹೆಚ್ಚು ರಾಷ್ಟ್ರಗಳು ಅಲ್—ಅಕ್ಸಾ ಮಸೀದಿ ಮತ್ತು ಹರಾಮ್ ಅಲ್—ಶರೀಫ್‍ಗಳಲ್ಲಿ ಇಸ್ರೇಲ್ ದೌರ್ಜನ್ಯ ವಿರೋಧಿಸಿ ಇಸ್ರೇಲ್‍ನ್ನು ಖಂಡಿಸಿದ್ದವು. ಆದರೆ ಇದೇ ವಿಷಯ ಅಕ್ಟೋಬರ್ 2016ರಲ್ಲಿ ಚರ್ಚೆಗೆ ಬಂದಾಗ ಇಸ್ರೇಲ್ ವಿರುದ್ಧ ಮತ ಹಾಕಲು ಭಾರತ ನಿರಾಕರಿಸಿತ್ತು. ಈ ಎರಡೂ ಸಂದರ್ಭಗಳಲ್ಲಿ ಚರ್ಚಾ ವಿಷಯದಲ್ಲಿ ಯಾವುದೇ ಬದಲಾವಣೆಗಳಿಲ್ಲದಿದ್ದರೂ, ಇಸ್ರೇಲ್ ಕುರಿತಾದ ಭಾರತದ ಧೋರಣೆ ಬದಲಾಗಿತ್ತು. ಇತ್ತೀಚೆಗೆ ಹಿಮಾಚಲ ಪ್ರದೇಶದ ಸಾರ್ವಜನಿಕ ಸಭೆಯೊಂದರಲ್ಲಿ ಪ್ರಧಾನಿ ಮೋದಿಯವರು ಭಾರತೀಯ ಸೈನಿಕರ ಶೌರ್ಯ, ಪರಾಕ್ರಮಗಳ ಬಗ್ಗೆ ಪ್ರಸ್ತಾಪಿಸುತ್ತಾ ಸರ್ಜಿಕಲ್ ಸ್ಟ್ರೈಕ್‍ಗಳನ್ನು ಈ ಹಿಂದೆ ಇಸ್ರೇಲ್ ಕಾರ್ಯರೂಪಕ್ಕಿಳಿಸಿತ್ತು ಮತ್ತು ಭಾರತದ ಸೇನೆ ವಿಶ್ವದ ಯಾವುದೇ ಸೇನೆಗೂ ಕಡಿಮೆಯಿಲ್ಲ ಎಂದಿದ್ದರು. ಈ ಸಂದರ್ಭದಲ್ಲಿ ಸಾಮಾಜಿಕ ಜಾಲತಾಣಗಳಿಂದ ಮುಖ್ಯವಾಹಿನಿ ಮಾಧ್ಯಮಗಳವರೆಗೂ ಇಸ್ರೇಲ್ ಯುದ್ಧ ನೀತಿ ಮತ್ತು ಸಮರ ತಂತ್ರಗಳ ಬಗ್ಗೆ ಚರ್ಚೆಯಾಗಿತ್ತು.

ಇತ್ತೀಚೆಗೆ ಪಶ್ಚಿಮ ಏಷ್ಯಾದ ವಾತಾವರಣವೂ ಬಹಳಷ್ಟು ಬದಲಾಗಿದ್ದು, ಈ ಪ್ರದೇಶದಲ್ಲಿ ಇಸ್ಲಾಮಿಕ್ ಸ್ಟೇಟ್ ಉಗ್ರರು ಸೃಷ್ಟಿಸಿದ ಗೊಂದಲಗಳು ಮತ್ತು ಕೋಲಾಹಲಗಳಿಂದಾಗಿ ಇಸ್ರೇಲ್—ಪ್ಯಾಲೆಸ್ಟೀನ್ ವಿವಾದ ಮಸುಕಾಗಿದೆ. ಪಶ್ಚಿಮ ಏಷ್ಯಾದ ರಾಷ್ಟ್ರಗಳು ತಮ್ಮ ಒಳಜಗಳ ಮತ್ತು ಉಗ್ರ ವಿದ್ವಂಸಕ ಕೃತ್ಯಗಳಿಂದಾಗಿ ಭಾರತ—ಇಸ್ರೇಲ್ ಸಂಬಂಧಗಳ ಬಗ್ಗೆ ಯೋಚಿಸುವ ಪರಿಸ್ಥಿತಿಯಲ್ಲಿಲ್ಲ. ಈ ಅಪರೂಪದ ಅವಕಾಶ ಭಾರತ—ಇಸ್ರೇಲ್ ನಡುವಿನ ರಾಜತಾಂತ್ರಿಕ ಸಂಬಂಧಗಳನ್ನು ಬೆಸೆಯುವಲ್ಲಿ ನಿರ್ಣಾಯಕ ಪಾತ್ರವಹಿಸಲಿದೆ. ಅತ್ತ ಪಶ್ಚಿಮ ಏಷ್ಯಾದ ಅರಬ್ ರಾಷ್ಟ್ರಗಳೊಂದಿಗೂ ವಿಶ್ವಾಸ ಉಳಿಸಿಕೊಂಡು ಇಸ್ರೇಲ್ ಮಿತೃತ್ವವನ್ನೂ ಗಟ್ಟಿ ಮಾಡಿಕೊಳ್ಳುವ ರಾಜತಂತ್ರಿಕ ಮುತ್ಸದ್ದಿತನ ಸದ್ಯದ ಅವಶ್ಯಕತೆಯಾಗಿದೆ.

ಇತ್ತೀಚಿನ ಬೆಳವಣಿಗೆ

ಭಾರತ—ಇಸ್ರೇಲ್ ರಾಜತಾಂತ್ರಿಕ ಸಂಬಂಧದಲ್ಲಿ ಇತ್ತೀಚಿನ ಬೆಳವಣಿಗೆಯೆಂದರೆ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹೂ 2018ರ ಜನವರಿ ತಿಂಗಳಲ್ಲಿ ಭಾರತಕ್ಕೆ ಭೇಟಿ ನೀಡಿದ್ದು. ಇಸ್ರೇಲ್ ಕಂಪೆನಿಗಳು ಭಾರತದಲ್ಲಿ ಸೇನಾ ಸಲಕರಣೆಗಳನ್ನು ತಯಾರಿಸುವ ಇನ್ನಷ್ಟು ಘಟಕಗಳನ್ನು ಆರಂಭಿಸಬೇಕು ಎಂಬುದು ಸೇರಿದಂತೆ ಎರಡೂ ದೇಶಗಳು ಒಂಭತ್ತು ಒಪ್ಪಂದಗಳನ್ನು ಮಾಡಿಕೊಂಡಿವೆ. ಭಾರತ—ಇಸ್ರೇಲ್ ಮುಕ್ತ ವ್ಯಾಪಾರ ಸಂಧಾನ ಪುನರಾರಂಭಿಸುವಂತೆ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರು ಮೋದಿ ಅವರನ್ನು ಒತ್ತಾಯಿಸಿದರು. ಈ ವಿಚಾರದ ಚರ್ಚೆಗೆ ಭಾರತದ ವಾಣಿಜ್ಯ ಸಚಿವಾಲಯದ ನಿಯೋಗವೊಂದು ಇಸ್ರೇಲ್‍ಗೆ ಭೇಟಿ ನೀಡುವ ನಿರ್ಧಾರವನ್ನು ಇಬ್ಬರು ಪ್ರಧಾನಿಗಳು ಕೈಗೊಂಡರು.

ಆವಿಷ್ಕಾರ, ವ್ಯಾಪಾರ, ಬಾಹ್ಯಾಕಾಶ, ಭಯೋತ್ಪಾದನೆ ತಡೆ, ಆಂತರಿಕ ಭದ್ರತೆ, ಉನ್ನತ ಶಿಕ್ಷಣ ಮತ್ತು ಸಂಶೋಧನೆ, ವಿಜ್ಞಾನ ಮತ್ತು ತಂತ್ರಜ್ಞಾನ, ಪ್ರವಾಸೋದ್ಯಮ ಮತ್ತು ಸಂಸ್ಕೃತಿ ಕ್ಷೇತ್ರದಲ್ಲಿ ಕೊಡು—ಕೊಳ್ಳುವಿಕೆಗೆ ಮೋದಿ ಮತ್ತು ನೆತನ್ಯಾಹು ತೀರ್ಮಾನಿಸಿದ್ದಾರೆ. ಖಾಸಗಿ—ಸರಕಾರಿ ಸಹಭಾಗಿತ್ವದಲ್ಲಿ ಅಹಮದಾಬಾದ್ ಸಮೀಪದ ದಿಯೋ ಧೋಲೆರಾದಲ್ಲಿ ಸ್ಥಾಪಿಸಲಾಗಿರುವ `ಐಕ್ರಿಯೇಟ್’ ಸಂಸ್ಥೆಗೆ ನೆತನ್ಯಾಹು ಅವರನ್ನು ಕರೆದುಕೊಂಡು ಹೋದ ಮೋದಿ ಅಲ್ಲಿನ ಕಾರ್ಯಕಲಾಪಗಳ ಬಗ್ಗೆ ವಿವರಣೆ ನೀಡಿದ್ದಾರೆ. ಭಾರತ ಮತ್ತು ಇಸ್ರೇಲ್ ಸಂಬಂಧವನ್ನು ಇನ್ನಷ್ಟು ಬಲಗೊಳಿಸುವ ನಿಟ್ಟಿನಿಂದ ಮತ್ತು ಉಭಯ ದೇಶಗಳ ಅಭಿಪ್ರಾಯ ಹಂಚಿಕೊಳ್ಳಲು ವೇದಿಕೆ ಕಲ್ಪಿಸಿಕೊಡುವ ನಿಟ್ಟಿನಿಂದ `ನಮಸ್ತೆ ಶಾಲೋಮ್’ ನಿಯತಕಾಲಿಕೆಯನ್ನು ಹೊರತರಲಾಗಿದೆ.

ಸಂಜೋತಾ ಪುರೋಹಿತ್

ಮಕ್ಕಳ ಶಿಕ್ಷಣದ ಹೊರೆ

ಜುಲೈ ೨೦೧೮

ಇಮಾಮ್ ಗೋಡೆಕಾರ

ಒಂದು ಆನ್‍ಲೈನ್ ಕ್ರಾಂತಿ ಫ್ಲಿಪ್‍ಕಾರ್ಟ್

ಜೂನ್ ೨೦೧೮

ಭಾರತೀ ಮೈಸೂರು

ಜಪಾನ್ ಗಾತ್ರದಲ್ಲಿ ಮಾತ್ರ ಕರ್ನಾಟಕ!

ಜೂನ್ ೨೦೧೮

ಪ್ರೊ. ಕ್ರಿಸ್ಟೋಫರ್ ಚೆಕೂರಿ

ಡೊನಾಲ್ಡ್ ಟ್ರಂಪ್ ಮತ್ತು ಅಮೆರಿಕಾದ ವರ್ಣೀಯ ರಾಜಕಾರಣ

ಎಪ್ರಿಲ್ ೨೦೧೮

ತಾಳಗುಂದ ಶಾಸನ

ಎಪ್ರಿಲ್ ೨೦೧೮

ಸುಧೀಂದ್ರ ಹಾಲ್ದೊಡ್ಡೇರಿ

ಯಂತ್ರ ನೋಡಿರಣ್ಣ, ದೇಹದ ತಂತ್ರ ಕಾಣಿರಣ್ಣ!

ಎಪ್ರಿಲ್ ೨೦೧೮

ಡಿ. ರೂಪ

‘ಧೈರ್ಯ, ತಾಳ್ಮೆ ಜತೆಗಿರಲಿ’

ಮಾರ್ಚ್ ೨೦೧೮

ಸುಧೀಂದ್ರ ಹಾಲ್ದೊಡ್ಡೇರಿ

ಬ್ಯಾಕ್ಟೀರಿಯಗಳ ಬಗ್ಗೆ ನಿಮಗೇನು ಗೊತ್ತು?

ಮಾರ್ಚ್ ೨೦೧೮

ಸುಧೀಂದ್ರ ಹಾಲ್ದೊಡ್ಡೇರಿ

ಎಂಗೈತೆ ಮಗಾ, ಸಾಫ್ಟ್‍ವೇರ್ ಬ್ಯಾಂಗ್‍ಲೂರು?

ಫೆಬ್ರವರಿ ೨೦೧೮

ಪ್ರಸಾದ್ ನಾಯ್ಕ್

ಮಾರಕ ಮಾಧ್ಯಮಗಳು!

ಫೆಬ್ರವರಿ ೨೦೧೮