2nd ಎಪ್ರಿಲ್ ೨೦೧೮

ಡೊನಾಲ್ಡ್ ಟ್ರಂಪ್ ಮತ್ತು ಅಮೆರಿಕಾದ ವರ್ಣೀಯ ರಾಜಕಾರಣ

ಪ್ರೊ. ಕ್ರಿಸ್ಟೋಫರ್ ಚೆಕೂರಿ

ಅಮೆರಿಕಾದ ರಾಜಕಾರಣದಲ್ಲಿ ಶ್ವೇತವರ್ಣೀಯರ ಪ್ರಾಬಲ್ಯವೆನ್ನುವುದು ಒಂದು ಜೀವಂತ ಚೇತನವಾಗಿ ಅದರ ಇತಿಹಾಸದುದ್ದಕ್ಕೂ ಉಳಿದುಬಂದಿದೆ. ಟ್ರಂಪ್ ಅಂತಹ ಚೇತನದಿಂದ ಹೊರಹೊಮ್ಮಿರುವ ರಾಜಕಾರಣಿ.

ಶ್ವೇತಭವನದ ಇತ್ತೀಚಿನ ಸಭೆಯೊಂದರಲ್ಲಿ ಡೊನಾಲ್ಡ್ ಟ್ರಂಪ್ ಅವರು ಹೈಟಿ, ನೈಜೀರಿಯಾ ಎಲ್ ಸಾಲ್ವಡಾರ್ ಮತ್ತಿತರ ರಾಷ್ಟ್ರಗಳನ್ನು ’ಕಕ್ಕಸು ಗುಂಡಿ’ (ಶಿಟ್‍ಹೋಲ್) ರಾಷ್ಟ್ರಗಳು ಎಂದು ಕರೆದರು. ಅಲ್ಲದೆ ಇಂತಹ ದೇಶಗಳಿಂದ ವಲಸಿಗರನ್ನು ಅಮೆರಿಕಾಕ್ಕೆ ಬರಲು ಬಿಡುವ ಬದಲು ನಾರ್ವೆಯಂತಹ ದೇಶಗಳಿಂದ ಹೆಚ್ಚಿನ ಸಂಖ್ಯೆಯಲ್ಲಿ ವಲಸಿಗರನ್ನು ಕರೆಸಿಕೊಳ್ಳಬೇಕು ಎಂದೂ ಅವರು ವಾದಿಸಿದರು. ಟ್ರಂಪರ ಹೇಳಿಕೆಯನ್ನು ವ್ಯಾಪಕವಾಗಿ ಖಂಡಿಸಲಾಯಿತು. ಅವರ ಹೇಳಿಕೆಯು ಕೇವಲ ಕಚ್ಚಾತನವನ್ನು ತೋರಿಸುತ್ತಿಲ್ಲ, ಬದಲಿಗೆ ಟ್ರಂಪರ ಮನದಾಳದಲ್ಲಿರುವ ಆಳವಾದ ಜನಾಂಗೀಯ (ರೇಸಿಸ್ಟ್) ಸೈದ್ಧಾಂತಿಕತೆಯನ್ನು ಹೊರಹಾಕಿದೆ.

ಅಮೆರಿಕಾದ ಅಧ್ಯಕ್ಷರಾಗಿ ಟ್ರಂಪರ ಮೊದಲ ವರ್ಷವನ್ನು ಪ್ರಕ್ಷುಬ್ದತೆ ಮತ್ತು ಅಸ್ಥಿರತೆಗಳ ಸಮಯವೆದೇ ಹೇಳಬೇಕು. ಆದರೂ ಅವರ ಸಾರ್ವಜನಿಕ ನೀತಿಗಳನ್ನು ನೋಡಿದಾಗ, ಅವುಗಳಲ್ಲೊಂದು ಅಮೆರಿಕದ ಗತಕಾಲ ಮತ್ತು ಭವಿಷ್ಯಕ್ಕೆ ಸಂಬಂಧಿಸಿದಂತೆ ಗಮನಾರ್ಹವಾದ ಸ್ಥಿರತೆ ಕಾಣಿಸುತ್ತದೆ. ಟ್ರಂಪರಿಗೆ ಅಮೆರಿಕಾವು ಯೂರೋಪಿಯನ್ ಮೂಲದ ಶ್ವೇತವರ್ಣೀಯ ಕ್ರಿಶ್ಚಿಯನ್ನರ ದೇಶವಾಗಿಯೆ ಕಾಣುತ್ತದೆ ಮತ್ತು ಅದನ್ನು ಹಾಗೆಯೆ ಇರಿಸಲು ಅವರು ಏನನ್ನು ಮಾಡಲು ಸಹ ಸಿದ್ಧ. ಟ್ರಂಪ್ ಅವರ ’ಅಮೆರಿಕಾವನ್ನು ಮತ್ತೆ ಶ್ರೇಷ್ಠವಾಗಿಸೋಣ’ ಎನ್ನುವ ಘೋಷಣೆ ’ಅಮೆರಿಕಾವನ್ನು ಮತ್ತೆ ಶ್ವೇತವಾಗಿಸೋಣ’ ಎನ್ನಲು ಅವರು ಹೆಚ್ಚುಕಡಿಮೆ ಮುಕ್ತವಾಗಿ ಮಾಡುತ್ತಿರುವ ಪ್ರಯತ್ನ.

ಮೊದಲು ಮರೆಯಲ್ಲಿ ಕೆಲಸಮಾಡುತ್ತಿದ್ದ ಶ್ವೇತವರ್ಣೀಯ ಪರಮಾಧಿಕಾರ ಗುಂಪುಗಳು ಈಗ ಮುಖ್ಯವಾಹಿನಿಯಲ್ಲಿ ಪ್ರವೇಶ ಪಡೆದಿವೆ. ಅವರ ಸಿದ್ಧಾಂತಗಳು ಟ್ರಂಪರ ಅಭಿಪ್ರಾಯಗಳನ್ನು ಪ್ರತಿಫಲಿಸುತ್ತವೆ. ಭಾರತ ಮತ್ತು ಭಾರತೀಯರು ಅಮೆರಿಕದ ವರ್ಣೀಯ ರಾಜಕಾರಣವನ್ನು ಎಚ್ಚರದಿಂದ ಗಮನಿಸುವುದು ಉಚಿತ. ಟ್ರಂಪರ ರಾಜಕೀಯ ದರ್ಶನ ಮತ್ತು ಅವರು ಈಗಾಗಲೆ ಸೃಷ್ಟಿಸಿರುವ ಪಲ್ಲಟಗಳು ಅವರ ಅಧಿಕಾರಾವಧಿಯ ನಂತರವೂ ಉಳಿಯುವ ಸಾಧ್ಯತೆ ಖಚಿತವಾಗಿದೆ.

ಅಮೆರಿಕದ ವಲಸೆ ನೀತಿ

ಅಮೆರಿಕದ ವಲಸೆ ನೀತಿಯ ದೀರ್ಘ ಕಮಾನು ವರ್ಣಭೇದ ಮತ್ತು ಹೊರಗಿಡುಸುವಿಕೆಯದೆ ಆಗಿದೆ. 1882ರಲ್ಲಿ ಅಮೆರಿಕ ಚೈನೀಸ್ ಬಹಿಷ್ಕರಣ ಕಾಯಿದೆಯನ್ನು ಜಾರಿಗೊಳಿಸಿ, ಚೈನಾದ ಕೂಲಿಕಾರರ ವಲಸೆಯನ್ನು ನಿಷೇಧಿಸಿತು. ಆರಂಭದಲ್ಲಿ ಇದನ್ನು 10 ವರ್ಷಗಳಿಗೆ ಎಂದು ಜಾರಿಗೊಳಿಸಿದರೂ, 1934ರವರಗೆ ಈ ಕಾಯಿದೆ ರದ್ದಾಗಲಿಲ್ಲ. 20ನೆಯ ಶತಮಾನದಲ್ಲಿ ಜಪಾನಿನ ವಲಸಿಗರು ಸಹ ಹಲವು ಸವಾಲುಗಳನ್ನು ಎದುರಿಸಿದರು.

ಈ ಕಾಲಘಟ್ಟದಲ್ಲಿ, ಅದರಲ್ಲಿಯೂ 1924ರಿಂದ 1965ರವರಗೆ, ಅಮೆರಿಕವು ಉತ್ತರ ಯೂರೋಪಿನ ದೇಶಗಳಿಂದ ವಲಸೆ ಬರುವುದಕ್ಕೆ ಮಾತ್ರ ಉತ್ತೇಜನ ನೀಡಿತು, ದಕ್ಷಿಣ ಮತ್ತು ಪೂರ್ವ ಯೂರೋಪಿನ ನಿವಾಸಿಗಳಿಗೆ ಸೀಮಿತ ಅವಕಾಶಗಳನ್ನು ನೀಡಿದರೆ ಏಷ್ಯಾದಿಂದ ಬಹುಮಟ್ಟಿಗೆ ವಲಸೆಯನ್ನು ಸಂಪೂರ್ಣವಾಗಿ ನಿಷೇಧಿಸಿತು.

1965ರಲ್ಲಿ ಅಮೆರಿಕವು ರಾಷ್ಟ್ರೀಯ ಮೂಲ ಕಾಯಿದೆಯಿಂದ ದೂರ ಸರಿದು, ಬಹುಸಂಸ್ಕೃತಿ ಮತ್ತು ಬಹುವರ್ಣಗಳ (ಮಲ್ಟಿರೇಷಿಯಲ್) ಅಮೆರಿಕದ ಪರಿಕಲ್ಪನೆಯನ್ನು ಸ್ವೀಕರಿಸಿತು. 1965ರ ವಲಸೆ ಮತ್ತು ರಾಷ್ಟ್ರೀಯತೆಯ ಕಾಯಿದೆಯು ರಾಷ್ಟ್ರಮೂಲದ ಮೇಲೆ ರೂಪಿಸಲಾಗಿದ್ದ ಕೋಟಾ ಪದ್ಧತಿಯನ್ನು ತ್ಯಜಿಸಿತು. ಹೊಸ ವಲಸೆ ಶಾಸನಗಳು ಈಗಾಗಲೆ ವಲಸೆ ಬಂದಿದ್ದ ಕುಟುಂಬಗಳ ಸದಸ್ಯರನ್ನು ಕರೆತರಲು ಮತ್ತು ಕೌಶಲ್ಯ ಹೊಂದಿರುವ ವೃತ್ತಿಪರರನ್ನು ಆಕರ್ಷಿಸುವ ಉದ್ದೇಶವನ್ನು ಹೊಂದಿತ್ತು. ಈ ಸಂದರ್ಭದಲ್ಲಿಯೇ ಭಾರತದಿಂದ ದೊಡ್ಡ ಸಂಖ್ಯೆಯಲ್ಲಿ ವೈದ್ಯರು ಮತ್ತು ಇಂಜಿನಿಯರುಗಳು ಅಮೆರಿಕಕ್ಕೆ ವಲಸೆ ಹೋದರು.

ತಮ್ಮ ಅಧಿಕಾರಾವಧಿಯ ಮೊದಲ ವರ್ಷದಲ್ಲಿ ಟ್ರಂಪ್ ಅಮೆರಿಕದ ಹಳೆಯ ಹೊರಗುಳಿಸುವ ನೀತಿಯತ್ತ ವಾಪಸಾಗುತ್ತಿದ್ದಾರೆ. ಈಗಿರುವ ಕಾನೂನುಗಳನ್ನು ಅವರಿಗಿನ್ನೂ ಸಂಪೂರ್ಣವಾಗಿ ಬದಲಿಸಲು ಸಾಧ್ಯವಾಗಿಲ್ಲದಿದ್ದರೂ, ಕಠಿಣ ವಲಸೆ ನೀತಿಯ ನಿಲುವುಗಳನ್ನು ವ್ಯಕ್ತಪಡಿಸಿದ್ದಾರೆ. ಅಲ್ಲದೆ ಮುಸ್ಲಿಮ್ ಪ್ರಯಾಣಿಕರನ್ನು ಅಮೆರಿಕದಿಂದ ನಿಷೇಧಿಸುವುದು ಮತ್ತು ಹೆಚ್—1 ಬಿ ವೀಸಾಗಳ ಸಂಬಂಧವಾಗಿ ನಾವು ನೋಡಿರುವಂತೆ ಟ್ರಂಪ್ ಅಮೆರಿಕದಲ್ಲಿ ಈಗಾಗಲೆ ಬದುಕಲು ಅವಕಾಶ ನೀಡಲಾಗಿದ್ದ ವಲಸಿಗರು ಮತ್ತು ನಿರಾಶ್ರಿತರನ್ನು ಅಮೆರಿಕಾದಿಂದ ಹೊರಗಿಡಲು ಆದೇಶಗಳನ್ನು ಹೊರಡಿಸಿದ್ದಾರೆ. ಉದಾಹರಣೆಗೆ, ಅಮೆರಿಕಾದ ಸರ್ಕಾರವು 2 ಲಕ್ಷ ಎಲ್ ಸಾಲ್ವಡಾರಿನ ನಿರಾಶ್ರಿತರನ್ನು ತಮ್ಮ ದೇಶಕ್ಕೆ ವಾಪಸು ಹೋಗುವಂತೆ ಸೂಚಿಸಿದೆ. ಈ ನಿರಾಶ್ರಿತರು 2001ರ ಭೂಕಂಪದ ನಂತರ ಅಮೆರಿಕಾಕ್ಕೆ ಬಂದಿದ್ದವರು.

ಅದೇ ರೀತಿಯಲ್ಲಿ 2010ರ ಭೂಕಂಪದ ನಂತರ ಅಮೆರಿಕಾವನ್ನು ಪ್ರವೇಶಿಸುವ ಅವಕಾಶ ಪಡೆದಿದ್ದ 45,000 ಹೈಟಿಯ ನಿರಾಶ್ರಿತರು ಸಹ ಈಗ ವಾಪಸು ಹೋಗಬೇಕಾಗಿದೆ. ಇವರೆಲ್ಲರೂ ಅಮೆರಿಕಾದಲ್ಲಿ ತಮ್ಮ ಬದುಕು ಕಟ್ಟಿಕೊಂಡು, ಕಾರ್ಮಿಕರಾಗಿ ಮತ್ತು ಸಣ್ಣ ಉದ್ಯಮಿಗಳಾಗಿ ಬೇರೂರಿದ್ದವರು. ಇದೇ ರೀತಿಯಲ್ಲಿ ಚಿಕ್ಕವರಾಗಿದ್ದಾಗಲೆ ಅಮೆರಿಕಾವನ್ನು ಪ್ರವೇಶಿಸಿದ್ದ ಅಕ್ರಮ ವಲಸಿಗರ ಮಕ್ಕಳನ್ನು ಮತ್ತು ಅಮೆರಿಕಾದಲ್ಲಿಯೇ ಹುಟ್ಟಿದವರನ್ನೂ ಸಹ ಹೊರಗೆ ಕಳುಹಿಸುವ ತನ್ನ ಉದ್ದೇಶವನ್ನು ಟ್ರಂಪ್ ಸರ್ಕಾರವು ವ್ಯಕ್ತಪಡಿಸಿದೆ.

ಇದೆಲ್ಲದರ ಗುರಿಯಿಷ್ಟೆ: ಅಮೆರಿಕಾದಲ್ಲಿ ಶ್ವೇತವರ್ಣೀಯರಲ್ಲದವರ ಸಂಖ್ಯೆಯು ಹೆಚ್ಚಳವಾಗದಂತೆ ನೋಡಿಕೊಳ್ಳುವುದು.

ಶ್ವೇತ ರಾಷ್ಟ್ರೀಯತೆ ಮತ್ತು ಬಹುವರ್ಣೀಯ ಅಮೆರಿಕಾ

1960ರ ದಶಕದಲ್ಲಿ ಅಮೆರಿಕಾವು ನಾಗರಿಕ ಹಕ್ಕುಗಳು ಮತ್ತು ಮತದಾನಕ್ಕೆ ಸಂಬಂಧಿಸಿದ ಶಾಸನಗಳನ್ನು ಅನುಷ್ಠಾನಗೊಳಿಸಿ, ಆ ಮೂಲಕ ವರ್ಣಗಳ ನಡುವೆ ಸಮಾನತೆಯನ್ನು ಸ್ಥಾಪಿಸುವ ಪ್ರಯತ್ನವನ್ನು ಮಾಡಿತು. ಜೊತೆಗೆ ತನ್ನ ವಲಸೆ ನೀತಿಯಲ್ಲಿ ವರ್ಣೀಯವಾಗಿ ಹೆಚ್ಚು ಒಳಗೊಳ್ಳುವ ನೀತಿಯನ್ನು ರೂಪಿಸಿತು. ಈ ಹೊಸಕಾನೂನುಗಳು ವರ್ಣಭೇದ ಮತ್ತು ಜನಾಂಗೀಯತೆಯನ್ನು ತೊಡೆದುಹಾಕಲಿಲ್ಲ. ಬದಲಿಗೆ ವರ್ಣಭೇದದ ಕುರಿತಾದ ರಾಜಕೀಯ ವಾದ—ಪ್ರವಚನಗಳನ್ನು ಭೂಗತವಾಗುವಂತೆ ಮಾಡಿದವು. ಶ್ವೇತವರ್ಣೀಯರು ವಿವಿಧ ವರ್ಣಗಳ ಅಲ್ಪಸಂಖ್ಯಾತ ವಲಸಿಗರಾದ ಲ್ಯಾಟಿನೊಗಳು, ಆಫ್ರಿಕಾಮೂಲದ ಕಪ್ಪುವರ್ಣೀಯರ ವಿರುದ್ಧ ಸಂಕೇತಗಳ ಹೊಸಭಾಷೆಯೊಂದನ್ನು ರೂಪಿಸಿಕೊಂಡರು. ಉದಾಹರಣೆಗೆ, ಈ ಗುಂಪುಗಳೆಲ್ಲವೂ ಸರ್ಕಾರದ ಸಬ್ಸಿಡಿಗಳನ್ನು ಅವಲಂಬಿಸಿದವರು ಎಂದೂ, ಮಾದಕವಸ್ತುಗಳ ಬಳಕೆದಾರರು ಮತ್ತು ಮಾರಾಟಗಾರರು ಎಂದೂ ಹಾಗೂ ಸ್ವಭಾವತಃ ಅಪರಾಧಿಗಳೆಂದು ಶ್ವೇತವರ್ಣೀಯರು ವಾದಿಸಿದರು. ಚುನಾವಣೆಗಳ ಸಂದರ್ಭಗಳಲ್ಲಿ ರಾಜಕಾರಣಿಗಳು ಈ ಸಂಕೇತಗಳ ಭಾಷೆಯನ್ನು ಉದಾರವಾಗಿ ಬಳಸುತ್ತಾರೆ.

ಟ್ರಂಪರ ಕಾಲದಲ್ಲಿ ವರ್ಣಭೇದತ್ವ ಮತ್ತು ಶ್ವೇತ ರಾಷ್ಟ್ರೀಯತೆಯನ್ನು ಪ್ರತಿಪಾದಿಸುವ ಸಂಘಟನೆಗಳು ಮುಕ್ತವಾಗಿ ಹೊರಬರುತ್ತಿವೆ. ಅವುಗಳನ್ನು ತಡೆಯುವ ಕೆಲಸವನ್ನು ಟ್ರಂಪ್ ಮಾಡುತ್ತಿಲ್ಲ, ಬದಲಿಗೆ ಅವುಗಳನ್ನು ಸಮರ್ಥಿಸುತ್ತಿದ್ದಾರೆ. 2017ರ ಆಗಸ್ಟಿನಲ್ಲಿ ವರ್ಜೀನಿಯಾ ರಾಜ್ಯದ ಶಾರ್ಲೊಟ್ಸವಿಲ್ ನಗರದಲ್ಲಿ ಶ್ವೇತರಾಷ್ಟ್ರೀಯವಾದಿಗಳು ಮೆರವಣಿಗೆ ಮಾಡಿ “ನೀವು ನಮ್ಮ ಬದಲಿಗೆ ಬರಲು ಸಾಧ್ಯವಿಲ್ಲ” ಎಂಬರ್ಥದ ಘೋಷಣೆಗಳನ್ನು ಕೂಗಿದರು. ಇವೆಲ್ಲವೂ ಯಹೂದಿಗಳು ಸೇರಿದಂತೆ ಎಲ್ಲ ವಲಸಿಗರ ವಿರುದ್ಧವಾಗಿದ್ದವು. ಇಂತಹ ಮೆರವಣಿಗೆಗಳನ್ನು ಸಂಘಟಿಸುತ್ತಿರುವವರು ಹಿಂದಿನ ತಲೆಮಾರುಗಳ ಶ್ವೇತವರ್ಣೀಯ ರಾಷ್ಟ್ರವಾದಿಗಳಿಗಿಂತ ಭಿನ್ನರಾದವರು. ಇಂದಿನ ತಲೆಮಾರಿನವರು ಒಳ್ಳೆಯ ವೇಷಭೂಷಣಗಳನ್ನು ಧರಿಸಿದ ಸಭ್ಯ ವೃತ್ತಿಪರರಂತೆ ಕಾಣುತ್ತಾರೆ ಮತ್ತು ನವಮಾಧ್ಯಮಗಳನ್ನು ಸೊಗಸಾಗಿ ಬಳಸುತ್ತಾರೆ. ಇದಕ್ಕೆ ಪ್ರತಿಯಾಗಿ ಹಿಂದಿನ ತಲೆಮಾರಿನವರು ಬಿಳಿಯ ನಿಲುವಂಗಿಗಳನ್ನು, ಮುಖವಾಡಗಳನ್ನು ಹಾಕಿಕೊಂಡು ತಮ್ಮ ಐಡೆಂಟಿಟಿಯನ್ನು ಮುಚ್ಚಿಕೊಂಡಿರುತ್ತಿದ್ದರು.

ಇಂದಿನ ಶ್ವೇತವರ್ಣೀಯ ರಾಷ್ಟ್ರೀಯವಾದಿಗಳು ಯೂರೋಪಿನಲ್ಲಿರುವ ಬಲಪಂಥೀಯ ಶ್ವೇತರಾಷ್ಟ್ರೀಯವಾದಿಗಳೊಡನೆ ಸಂಬಂಧ ಹೊಂದಿದ್ದಾರೆ. ವಲಸೆಯಿಂದ ಅಮೆರಿಕಾದಲ್ಲಿ ಶ್ವೇತವರ್ಣೀಯರ ಸಂಖ್ಯೆ ಕಡಿಮೆಯಾಗುತ್ತಿದೆ ಎನ್ನುವುದು ಅವರನ್ನು ಆತಂಕಿತರನ್ನಾಗಿಸುತ್ತಿದೆ. ಜನಸಂಖ್ಯೆಯಲ್ಲಿ ಆಗುತ್ತಿರುವ ಈ ಬದಲಾವಣೆಗಳಲ್ಲಿ ಅವರು ತಮ್ಮ ಉದ್ಯೋಗ, ಸಂಸ್ಕೃತಿ, ಧರ್ಮ ಮತ್ತು ಭದ್ರತೆಗಳನ್ನು ಕಳೆದುಕೊಳ್ಳುತ್ತಿದ್ದೇವೆ ಎಂದು ಭಾವಿಸುತ್ತಾರೆ. ಇಂತಹ ಆತಂಕಗಳಿಗೆ ಕ್ರಿಸ್‍ಮಸ್ ಹಬ್ಬದ ಆಚರಣೆಯನ್ನು ಒಂದು ಉದಾಹರಣೆಯಾಗಿ ನೋಡಬಹುದು. ಇತ್ತೀಚಿನ ಬಹುಸಾಂಸ್ಕೃತಿಕ ಸಂದರ್ಭದಲ್ಲಿ ಯಹೂದಿಗಳ ಹನುಕ್ಕಾ, ಹಿಂದೂಗಳ ದೀಪಾವಳಿ ಮತ್ತು ಚೈನಾದವರ ಹೊಸವರ್ಷದ ಹಬ್ಬ ಇತ್ಯಾದಿಗಳು ಪ್ರಾಮುಖ್ಯ ಪಡೆಯುತ್ತಿರುವಂತೆ ಕ್ರಿಸ್‍ಮಸ್‍ಗೆ ದೊರಕಬೇಕಾಗಿದ್ದ ಮಹತ್ವ ದೊರಕುತ್ತಿಲ್ಲ ಎಂದು ಶ್ವೇತವರ್ಣೀಯ ರಾಷ್ಟ್ರೀಯವಾದಿಗಳು ದೂರುತ್ತಾರೆ. ’ಐಡೆಂಟಿಟಿ ಯೂರೋಪಾ’ ಎಂಬ ಸಂಘಟನೆಯು ಕ್ರಿಸ್‍ಮಸ್ ಹಬ್ಬದ ಸಮಯದಲ್ಲಿ ’ಸಂಪ್ರದಾಯಗಳನ್ನು ಉಳಿಸಿಕೊಳ್ಳಿ’ ಎನ್ನುವ ಅರ್ಥದ ಭಿತ್ತಿಪತ್ರಗಳನ್ನು ಎಲ್ಲೆಡೆ ಹಚ್ಚುತ್ತದೆ. ಇದರ ಅರ್ಥವೆಂದರೆ ಶ್ವೇತ ಕ್ರಿಶ್ಚಿಯಾನಿಟಿಯನ್ನು ಉಳಿಸಿ ಎಂದಷ್ಟೆ.

ಮುಖ್ಯವಾಗಿ ಇಂದಿನ ಶ್ವೇತವರ್ಣೀಯ ರಾಷ್ಟ್ರೀಯವಾದಿಗಳು 1965ರ ವಲಸೆ ಕಾಯಿದೆಯ ವಿರುದ್ಧ ವಾದಿಸುತ್ತಿದ್ದಾರೆ. ಅವರ ಪ್ರಕಾರ ಸುಮಾರು 3 ಕೋಟಿ ವಲಸಿಗರು, ಬಹುಪಾಲು ಯೂರೋಪೇತರ, ಮೂರನೆಯ ವಿಶ್ವದ ದೇಶಗಳಿಂದ, ಅಮೆರಿಕಾಕ್ಕೆ ಬಂದಿದ್ದಾರೆ. ಅಮೆರಿಕಾದ ಜನಸಂಖ್ಯೆ ಹೆಚ್ಚಾಗಿರುವುದಕ್ಕೆ ಮತ್ತು ಶ್ವೇತವರ್ಣೀಯರ ಸಂಖ್ಯೆ ಕಡಿಮೆಯಾಗಿರುವುದಕ್ಕೆ ಈ ಹೊಸ ವಲಸಿಗರೇ ಕಾರಣ ಎಂದು ಅವರು ನಂಬಿದ್ದಾರೆ. ಟ್ರಂಪ್ ಈ ಪ್ರಾಪಂಚಿಕ ದೃಷ್ಟಿಕೋನವನ್ನು ಸಮರ್ಥಿಸುವವರು ಎನ್ನುವುದು ಅವರ ಮೇಲೆ ಉಲ್ಲೇಖಿಸಿದ ಹೇಳಿಕೆಗಳಿಂದ ಸ್ಪಷ್ಟವಾಗುತ್ತದೆ. ಅವರ ಸಾರ್ವಜನಿಕ ನೀತಿಯು ಸಹ ಅಮೆರಿಕಾವನ್ನು ಶ್ವೇತವನ್ನಾಗಿಸುವುದೇ ಆಗಿದೆ ಮತ್ತು ಇದರಲ್ಲಿ ಗಣನೀಯ ಯಶಸ್ಸು ಅವರಿಗೆ ಈಗಾಗಲೆ ದೊರಕಿದೆ.

ಮುಂದೇನು?

ವಿವಿಧ ವರ್ಣಗಳ ನಡುವೆ ಸಮಾನತೆಯನ್ನು ಸಾಧಿಸಲು ಅಮೆರಿಕಾದ ಸಮಾಜವು ಹಲವು ದಶಕಗಳಿಂದ ಪ್ರಗತಿಯನ್ನು ಸಾಧಿಸಿದೆ, ನಿಜ. ಆದರೆ ಒಬಾಮರಂತಹ ಕಪ್ಪುವರ್ಣೀಯ ಅಮೆರಿಕಾದ ಅಧ್ಯಕ್ಷಸ್ಥಾನವನ್ನು ಅಲಂಕರಿಸಿದ್ದು ಹಲವರಿಗೆ ಸಹಿಸಲಾಗಲಿಲ್ಲ. ಒಬಾಮರ ಅಧ್ಯಕ್ಷತೆಯ ವಿರೋಧಿ ಪ್ರತಿಭಟನೆಯು ಅವರ ಹಲವು ಪ್ರಮುಖ ಕಾರ್ಯಕ್ರಮಗಳ ವಿರುದ್ಧವಾದ ಪ್ರತಿಕ್ರಿಯೆಯಾಗಿಯೂ ವ್ಯಕ್ತವಾಯಿತು. ಒಬಾಮರ ವಿರೋಧಿ ಗುಂಪುಗಳು ಟ್ರಂಪರ ಗೆಲುವಿಗೂ ಗಣನೀಯ ಕೊಡುಗೆಯನ್ನು ನೀಡಿದವು. ಅಮೆರಿಕಾದ ರಾಜಕಾರಣದಲ್ಲಿ ಶ್ವೇತವರ್ಣೀಯರ ಪ್ರಾಬಲ್ಯವೆನ್ನುವುದು ಒಂದು ಜೀವಂತ ಚೇತನವಾಗಿ ಅದರ ಇತಿಹಾಸದುದ್ದಕ್ಕೂ ಉಳಿದುಬಂದಿದೆ. ಟ್ರಂಪ್ ಅಂತಹ ಚೇತನದಿಂದ ಹೊರಹೊಮ್ಮಿರುವ ರಾಜಕಾರಣಿ.

ಅಮೆರಿಕಾದ ನಿರ್ಮಾತೃಗಳು ಸ್ವಾತಂತ್ರ್ಯ ಮತ್ತು ಸಮಾನತೆಗಳನ್ನು ಪ್ರತಿಪಾದಿಸಿದವರು. ಆದರೆ ಆ ದೇಶದ ಆರ್ಥಿಕ ಮತ್ತು ಕಾನೂನು ವ್ಯವಸ್ಥೆಯು ತನ್ನ ಹುಟ್ಟಿನಿಂದಲೂ ವರ್ಣಗಳ ಬೇರ್ಪಡೆ ಮತ್ತು ಅಸಮಾನತೆಯನ್ನು ಸಾಂಸ್ಥಿಕವಾಗಿ ಸ್ಥಾಪಿಸಿದೆ. ವಲಸಿಗರ ವಸಾಹತುಶಾಹಿ ದೇಶವಾಗಿ ತನ್ನ ಅಸ್ತಿತ್ವವನ್ನು ರೂಪಿಸಿಕೊಂಡ ಅಮೆರಿಕಾ ಗುಲಾಮಗಿರಿ ಮತ್ತು ವಲಸೆಗಳನ್ನು ತನ್ನ ಅರ್ಥವ್ಯವಸ್ಥೆಯ ಎರಡು ಆಧಾರಸ್ಥಂಭಗಳಾಗಿ ಹೊಂದಿತ್ತು. 1860ರಲ್ಲಿ ಗುಲಾಮಗಿರಿಯನ್ನು ನಿಷೇಧಿಸಿದ ನಂತರ, ಈ ದೇಶವು ವಲಸೆ ಮತ್ತು ವರ್ಣಗಳನ್ನು ಬೇರ್ಪಡಿಸುವ ನೀತಿಯನ್ನು ತನ್ನದಾಗಿಸಿಕೊಂಡಿತ್ತು. ಇತ್ತೀಚಿನ ದಶಕಗಳೂ ಸೇರಿದಂತೆ ಕಳೆದ 150 ವರ್ಷಗಳಲ್ಲಿ ವಲಸಿಗ ಅಲ್ಪಸಂಖ್ಯಾತರೆ ಕೂಲಿಕಾರ್ಮಿಕರಾಗಿ ದುಡಿದು ಅಮೆರಿಕಾದ ಆರ್ಥಿಕ ವ್ಯವಸ್ಥೆಯನ್ನು ಉಳಿಸಿ, ಬೆಳೆಸಿದ್ದಾರೆ. ಇಂದಿಗೂ ಮೆಕ್ಸಿಕೊ, ಗ್ವಾಟೆಮಾಲಾದಂತಹ ದೇಶಗಳಿಂದ ಬರುವ ಕೌಶಲ್ಯಗಳನ್ನು ಹೊಂದಿರುವ ಕೆಲಸಗಾರರೆ ಅಮೆರಿಕಾದ ಕೃಷಿಯನ್ನು ಉಳಿಸಿರುವುದು.

ಇಷ್ಟಾದರೂ ಹಲವು ದಶಕಗಳ ಮುಕ್ತಮಾರುಕಟ್ಟೆ ಮತ್ತು ಜಾಗತೀಕರಣ ನೀತಿಗಳು, ವಲಸೆ, ಕೈಗಾರಿಕೆಗಳ ನಾಶ ಮತ್ತು 2008ರ ಆರ್ಥಿಕ ಬಿಕ್ಕಟ್ಟಿನ ನಂತರ ಸಾಮಾನ್ಯ ಅಮೆರಿಕನ್ನನು ದಣಿದಿದ್ದಾನೆ. ಅವನನ್ನು ಪರಕೀಯತೆ ಕಾಡುತ್ತಿದೆ. ಪ್ರಜಾಪ್ರಭುತ್ವದ ರಾಜಕೀಯ ಪ್ರಕ್ರಿಯೆಗಳು ಮತ್ತು ಸಂಸ್ಥೆಗಳ ಬಗ್ಗೆಯೇ ಭ್ರಮನಿರಸನವಾಗಿದೆ. ತಮ್ಮ ವೃತ್ತಿಗಳು ಮತ್ತು ಉದ್ಯೋಗಗಳಿಂದ, ತಮ್ಮ ಸಮಾಜದ ಸಂಸ್ಥೆಗಳಿಂದ ಸಾಮಾನ್ಯ ಅಮೆರಿಕನ್ನರು ದೂರ—ಪರಕೀಯತೆಗಳನ್ನು ಅನುಭವಿಸುತ್ತಿದ್ದಾರೆ. ತಾವು ತಮ್ಮ ಸಮಾಜದ ಅಂಗವೆನ್ನುವುದು ಅವರಿಗೆ ಕಾಣಿಸುತ್ತಿಲ್ಲ. ಉತ್ತಮ ಬದುಕಿನ ಭಾವನೆ ಸವೆದುಹೋಗುತ್ತಿದೆ ಎನ್ನುವ ಭಾವನೆ ಅವರಲ್ಲಿದ್ದಂತಿಲ್ಲ.

ಅಮೆರಿಕಾದ ಅರ್ಥವ್ಯವಸ್ಥೆಯ ಕಥನವು 1980ರ ದಶಕದಿಂದಲೂ ಮೂಲಭೂತವಾಗಿ ಬದಲಾಗದಿದ್ದರೂ, ಇಲ್ಲಿ ಮೇಲೆ ಬಣ್ಣಿಸಿರುವ ಪರಕೀಯತೆಯ ಮತ್ತು ಅಭದ್ರತೆಯ ಭಾವನೆಯನ್ನು ಕಟಾವು ಮಾಡಿದ ಮೊದಲ ರಾಜಕಾರಣಿ ಡೊನಾಲ್ಡ್ ಟ್ರಂಪ್. ಶ್ವೇತವರ್ಣೀಯ ಸಾಮಾನ್ಯ ಅಮೆರಿಕನ್ನರ ಕೋಪ ಮತು ಭ್ರಮನಿರಸನದ ಭಾವನೆಗಳಿಗೆ ಜನಾಂಗೀಯ ಮತ್ತು ವರ್ಣೀಯ ಚೌಕಟ್ಟುಗಳನ್ನು ಹಾಕಿದ ಟ್ರಂಪ್ ಆ ಮೂಲಕವೆ ಅಮೆರಿಕನ್ ಎಂದರೆ ಏನು ಎನ್ನುವುದನ್ನು ವ್ಯಾಖ್ಯಾನಿಸಿದರು. ಆದುದರಿಂದಲೇ ಅವರ ’ಅಮೆರಿಕಾವನ್ನು ಶ್ರೇಷ್ಠಗೊಳಿಸೋಣ’ ಎನ್ನುವ ಘೋಷಣೆಯು ಅಮೆರಿಕಾದ ಮತದಾರನಿಗೆ ಆಕರ್ಷಕವೆನಿಸಿತು.

ಹಲವು ಶ್ವೇತವರ್ಣೀಯರು ಬಹುಸಂಸ್ಕೃತಿ ಸಮಾಜವೊಂದರ ಕ್ರಿಯಾತ್ಮಕತೆಯನ್ನು ಸಹಿಸುವುದಿಲ್ಲ. ಅವರ ಆರ್ಥಿಕ ಸಮಸ್ಯೆಗಳಿಗೆ ವಲಸೆಯೇ ಕಾರಣವೆಂದು ಭಾವಿಸುತ್ತಾರೆ. ಹಾಗಾಗಿ ಇಂದು ಅಮೆರಿಕಾದಲ್ಲಿ ಒಂದು ವಿಚಿತ್ರ ಪರಿಸ್ಥಿತಿ ಸೃಷ್ಟಿಯಾಗಿದೆ: ರಾಜಕೀಯವಾಗಿ ಪ್ರಬಲವಾಗಿರುವ ಆದರೆ ತನ್ನ ಬಹುಮತವನ್ನು ದಿನೆದಿನೆ ಕಳೆದುಕೊಳ್ಳುತ್ತಿರುವ ಬಹುಸಂಖ್ಯಾತ ಸಮುದಾಯವು ಅಸಮಾಧಾನಗೊಂಡಿದೆ.

ಆರ್ಥಿಕ ಕುಸಿತದ ರಾಜಕೀಯ ಪರಿಣಾಮವನ್ನು ಟ್ರಂಪ್ ಸರಿಯಾಗಿ ಗುರುತಿಸಿದರು ಮಾತ್ರವಲ್ಲ, ಶ್ವೇತವರ್ಣೀಯರನ್ನು ಅಸಮಾಧಾನಗೊಂಡಿರುವ ಗುಂಪು ಎಂದು ಅವರಿಗೆ ಮೊರೆಯಿಟ್ಟರು. ಹಾಗಾಗಿ ಅವರ ಒರಟು ಸ್ವಭಾವ ಮತ್ತು ಲೈಂಗಿಕ ಹಗರಣಗಳ ನಡುವೆಯೂ, ಟ್ರಂಪರ ದೃಷ್ಟಿಕೋನವನ್ನು ಅಮೆರಿಕಾದ ಮತದಾರರ ದೊಡ್ಡ ಗುಂಪೊಂದು ಮನ್ನಿಸಿತು. ಮುಕ್ಕಾಲು ಪಾಲು ಶ್ವೇತವರ್ಣೀಯ ಪುರುಷರು ಮತ್ತು ಅರ್ಧಕ್ಕಿಂತಲೂ ಹೆಚ್ಚು ಶ್ವೇತವರ್ಣೀಯ ಮಹಿಳೆಯರು ಟ್ರಂಪರಿಗೆ ಮತಹಾಕಿದರು. ಟ್ರಂಪರಂತಹ ಅನನುಭವಿ ರಾಜಕಾರಣಿಗೆ ಇದೊಂದು ದೊಡ್ಡ ಯಶಸ್ಸು.

ಹದಿನೈದು ತಿಂಗಳು ಮತ್ತು ಹಲವು ಹೊಸ ಹಗರಣಗಳ ನಂತರವೂ ಟ್ರಂಪರಿಗೆ ಅವರ ರಿಪಬ್ಲಿಕನ್ ಪಕ್ಷದ ಮತದಾರರ ಮತ್ತು ಶ್ವೇತವರ್ಣೀಯರ ಬೆಂಬಲ ಅಚಲವಾಗಿಯೆ ಇದೆ. ಶ್ವೇತವರ್ಣೀಯ ಪ್ರಾಬಲ್ಯ ಟ್ರಂಪರ ಕಾಲದಲ್ಲಿ ಮುಖ್ಯವಾಹಿನಿಯನ್ನು ಪ್ರವೇಶಿಸಿದೆ ಮತ್ತು ಮುಂದಿನ ವರ್ಷಗಳಲ್ಲಿ ಉಳಿಯುವಂತೆ ತೋರುತ್ತಿದೆ. ಇದರ ಪ್ರಭಾವ ಅಮೆರಿಕಾದ ಆಂತರಿಕ ಮತ್ತು ವಿದೇಶಾಂಗ ನೀತಿಯ ಮೇಲೆ ಖಂಡಿತವಾಗಿಯೂ ಗಣನೀಯವಾಗಿ ಇರುತ್ತದೆ.

* ಲೇಖಕರು ಸ್ಯಾನ್ ಫ್ರನ್ಸಿಸ್ಕೊ ಸ್ಟೇಟ್ ವಿಶ್ವವಿದ್ಯಾನಿಲಯದಲ್ಲಿ ಇತಿಹಾಸ ಪ್ರಾಧ್ಯಾಪಕರು.

ಸಂಜೋತಾ ಪುರೋಹಿತ್

ಮಕ್ಕಳ ಶಿಕ್ಷಣದ ಹೊರೆ

ಜುಲೈ ೨೦೧೮

ಇಮಾಮ್ ಗೋಡೆಕಾರ

ಒಂದು ಆನ್‍ಲೈನ್ ಕ್ರಾಂತಿ ಫ್ಲಿಪ್‍ಕಾರ್ಟ್

ಜೂನ್ ೨೦೧೮

ಭಾರತೀ ಮೈಸೂರು

ಜಪಾನ್ ಗಾತ್ರದಲ್ಲಿ ಮಾತ್ರ ಕರ್ನಾಟಕ!

ಜೂನ್ ೨೦೧೮

ಪ್ರೊ. ಕ್ರಿಸ್ಟೋಫರ್ ಚೆಕೂರಿ

ಡೊನಾಲ್ಡ್ ಟ್ರಂಪ್ ಮತ್ತು ಅಮೆರಿಕಾದ ವರ್ಣೀಯ ರಾಜಕಾರಣ

ಎಪ್ರಿಲ್ ೨೦೧೮

ತಾಳಗುಂದ ಶಾಸನ

ಎಪ್ರಿಲ್ ೨೦೧೮

ಸುಧೀಂದ್ರ ಹಾಲ್ದೊಡ್ಡೇರಿ

ಯಂತ್ರ ನೋಡಿರಣ್ಣ, ದೇಹದ ತಂತ್ರ ಕಾಣಿರಣ್ಣ!

ಎಪ್ರಿಲ್ ೨೦೧೮

ಡಿ. ರೂಪ

‘ಧೈರ್ಯ, ತಾಳ್ಮೆ ಜತೆಗಿರಲಿ’

ಮಾರ್ಚ್ ೨೦೧೮

ಸುಧೀಂದ್ರ ಹಾಲ್ದೊಡ್ಡೇರಿ

ಬ್ಯಾಕ್ಟೀರಿಯಗಳ ಬಗ್ಗೆ ನಿಮಗೇನು ಗೊತ್ತು?

ಮಾರ್ಚ್ ೨೦೧೮

ಸುಧೀಂದ್ರ ಹಾಲ್ದೊಡ್ಡೇರಿ

ಎಂಗೈತೆ ಮಗಾ, ಸಾಫ್ಟ್‍ವೇರ್ ಬ್ಯಾಂಗ್‍ಲೂರು?

ಫೆಬ್ರವರಿ ೨೦೧೮

ಪ್ರಸಾದ್ ನಾಯ್ಕ್

ಮಾರಕ ಮಾಧ್ಯಮಗಳು!

ಫೆಬ್ರವರಿ ೨೦೧೮