2nd ಎಪ್ರಿಲ್ ೨೦೧೮

ಕುರುಡು ಕಾಂಚಾಣ ಕುಣಿಯುತಲಿತ್ತಾ ಚುನಾವಣೆಗಳನ್ನು ಕೊಳ್ಳುತಲಿತ್ತಾ

ಜಿ. ಎನ್. ನಾಗರಾಜ್

ಚುನಾವಣೆಗಳಿಂದ ಚುನಾವಣೆಗೆ ಹಣದ ಚೆಲ್ಲಾಟ ಹೆಚ್ಚುತ್ತಲೇ ಇದೆ. ಚುನಾವಣೆಗಳ ಗೆಲುವಿನ ಹೆದ್ದಾರಿಗೆ ಇಂದು ಹಣವೇ ಜಲ್ಲಿ, ಹಣವೇ ಟಾರು. ಹಳ್ಳಿಗಳಲ್ಲಿ ಹೇಳುವಂತೆ ಚುನಾವಣೆಗಳ ಪ್ರಚಾರವೆಲ್ಲಾ ಮೇಲು ಮೇಲಿನ ಅಬ್ಬರ ಮಾತ್ರ. ಚುನಾವಣೆಗಳ ಹಿಂದಿನ ಎರಡು ಮೂರು ಕತ್ತಲರಾತ್ರಿಗಳಲ್ಲೇ ಚುನಾವಣೆಗಳ ನಿಜವಾದ ಕೆಲಸ!

ಸಾಮಾನ್ಯವಾಗಿ ಹಣ ಹಂಚಲು ಅಭ್ಯರ್ಥಿಗಳು ಬೇರೆಬೇರೆ ಹಳ್ಳಿ ಅಥವಾ ನಗರಗಳ ವಿವಿಧ ಕೇರಿಗಳ ಮುಖಂಡರು/ ಜಾತಿಗಳ ಯಜಮಾನರಿಗೆ ಕರೆದು ಅವರವರು ಹಾಕಿಸಬಹುದಾದ ಓಟುಗಳ ಸಂಖ್ಯೆಗನುಗುಣವಾಗಿ ಅವರಿಗೆ ಹಂಚಲು ಹಣ ನೀಡುತ್ತಿದ್ದರು. ಆಯಾ ಯಜಮಾನರು ತಮ್ಮ ಜೇಬಿಗೆ ಎಷ್ಟು ಹಾಕಿಕೊಳ್ಳಬಹುದೋ ಅಷ್ಟು ಹಾಕಿಕೊಂಡು ಉಳಿದುದನ್ನು ಸಂಬಂಧಪಟ್ಟ ಅಭ್ಯರ್ಥಿಗೆ ಓಟು ಹಾಕಬಹುದಾದ ಮತದಾರರಿಗೆ ಹಂಚುತ್ತಿದ್ದರು. ಎಷ್ಟೋ ಯಜಮಾನರು ಎಲ್ಲಾ ಹಣವನ್ನೂ ಗೋರಿ ಹಾಕಿಕೊಂಡು ಹಂಚಿದೆವೆಂದು ಸುಳ್ಳು ಹೇಳುತಿದ್ದುದು ಅಪರೂಪದ ಪ್ರಸಂಗವೇನೂ ಆಗಿರಲಿಲ್ಲ.

ಇದು ಎಲ್ಲಾ ಹಂತದಲ್ಲೂ ಸೋರಿ ಹೋಗುವ ಅತ್ಯಂತ ದುಬಾರಿ ವ್ಯವಸ್ಥೆಯಾಗಿತ್ತು. ಅದಕ್ಕೆ ಪರಿಹಾರವಾಗಿ ಬಳ್ಳಾರಿಯ ಗಣಿ ಧಣಿಗಳು ಒಂದು ಪ್ಲಾನ್ ಮಾಡಿದರು. ತಮ್ಮ ಗುಮಾಸ್ತರುಗಳನ್ನೇ ಬಿಟ್ಟು ಹಣ ಹಂಚಿಸಿದರು. ಮತದಾರರ ಪಟ್ಟಿಯನ್ನು ಕೈಲಿ ಹಿಡಿದು ಪ್ರತಿ ಮನೆಗೂ ಓಟಿಗಿಷ್ಟು ಎಂದು ಲೆಕ್ಕ ಹಾಕಿ ಹಣ ಹಂಚಿಸಿದರು. ಆ ಮನೆಯವರು ತಮ್ಮ ಪಕ್ಷಕ್ಕೆ ಓಟು ಹಾಕುತ್ತಾರೋ ಇಲ್ಲವೋ ಎಂಬುದು ಈ ಕಾರಕೂನರಿಗೇನೂ ಗೊತ್ತಿರಲಿಲ್ಲ. ಆದರೂ ಎಲ್ಲರಿಗೂ ಓಟಿಗೆ ಎರಡು ಸಾವಿರದಂತೆ ಹಣ ಹಂಚಿಸಿಬಿಟ್ಟರು. ಮನೆ ಬೀಗ ಹಾಕಿದ್ದರೆ ಕಿಟಕಿಗಳ ಮೂಲಕ ಒಂದು ಕರಪತ್ರದಲ್ಲಿ ಹಣ ಸುತ್ತಿಟ್ಟು ಎಸೆದು ಬಂದರು. ಹೀಗೆ ನಡೆಯುತ್ತದೆ ಚುನಾವಣಾ ಹಣದ ದರ್ಬಾರು.

ಹಲವು ದಶಕಗಳ ಕಾಲ ಜಾತಿಗಳ ಮುಖಂಡರು ಓಟು ಹಾಕಿಸುವ ಮತ್ತು ಹಣ ಹಂಚುವ ಮುಖ್ಯ ಸಾಧನವಾಗಿದ್ದರು. ಆದರೆ ತಂತಮ್ಮ ಜಾತಿಯ ಜನರ ಮೇಲೆ ಜಾತಿ ಮುಖಂಡರ ಹಿಡಿತ ಸಡಿಲವಾಗುತ್ತಿದ್ದಂತೆ ಹಲವು ಹೊಸ ರಚನೆಗಳನ್ನು ಚುನಾವಣಾ ಯಂತ್ರ ಕಂಡುಕೊಂಡಿದೆ. ಪರಂಪರಾಗತ ಜಾತಿ ಮುಖಂಡರ ಹಿಡಿತ ಕಡಿಮೆಯಾಗಿದೆ ಎಂದಾಕ್ಷಣ ಜಾತಿಯ ಹಿಡಿತ ಏನೂ ಕಡಿಮೆಯಾಗಿಲ್ಲ ಎಂಬುದು ಎಲ್ಲರಿಗೂ ವಿದಿತವೇ. ಆದರೆ ಜಾತಿಗಳ ನಡುವೆ ಹೊಸ ಪುಢಾರಿಗಳು ಹುಟ್ಟಿಕೊಂಡಿದ್ದಾರೆ. ಅದರ ಜೊತೆಗೆ ಯುವಕರ ಕ್ರೀಡಾ ಕ್ಲಬ್‍ಗಳು, ವಿನಾಯಕ ಅಥವಾ ರಾಜ್ಯೋತ್ಸವ ನಡೆಸುವ ಯುವಕರ ತಂಡಗಳು, ಸರ್ಕಾರ ಮಹಿಳೆಯರ ಸಶಕ್ತೀಕರಣಕ್ಕಾಗಿ ರಚಿಸಿದ ಸ್ತ್ರೀಶಕ್ತಿ ಗುಂಪುಗಳು ಇವೆಲ್ಲಾ ಈಗ ಹಣ ಹಂಚುವ ಸಾಧನಗಳಾಗಿವೆ. ಈ ರೀತಿಯ ಗುಂಪುಗಳು ಅವರಿಗೆ ಹಣ ಹಂಚಿದ್ದಾರೆ ತಮಗೆ ಕೊಟ್ಟಿಲ್ಲ ಎಂದು ಗಲಾಟೆ ಮಾಡುವ, ಹಣ ಹಂಚುವವರು ಬರುತ್ತಾರೆ ಎಂದು ಅರ್ಧ ರಾತ್ರಿಯವರೆಗೆ ದಾರಿ ಕಾಯುವ ಅನೇಕ ಉದಾಹರಣೆಗಳಿವೆ.

ಚುನಾವಣಾ ಆಯೋಗ ಬಹು ಕಟ್ಟುನಿಟ್ಟಿನ ನಿಯಮಗಳನ್ನು ರೂಪಿಸಿದೆ. ವೆಚ್ಚದ ಮಿತಿ ವಿಧಿಸಿದೆ. ಪೋಸ್ಟರ್ ಬ್ಯಾನರ್, ಕರಪತ್ರ ಮೊದಲಾದ ಚುನಾವಣಾ ಪ್ರಚಾರ ಸಾಧನಗಳ ಮೇಲೆ ಹಲವು ರೀತಿಯ ನಿಯಂತ್ರಣ ವಿಧಿಸಿದೆ. ಚುನಾವಣಾ ವೀಕ್ಷಕರೆಂಬ ಅಧಿಕಾರಿಗಳ ಜೊತೆಗೆ ವೆಚ್ಚ ನಿರೀಕ್ಷಣೆಗೆಂದೇ ಲೆಕ್ಕಪತ್ರ ಇಲಾಖೆಗಳ ಅಧಿಕಾರಿಗಳನ್ನು ಕೂಡಾ ನೇಮಿಸಲಾಗಿದೆ. ಇವೆಲ್ಲಾ ಚುನಾವಣಾ ಆಡಳಿತ ಯಂತ್ರದ ವೆಚ್ಚವನ್ನು ಏರಿಸುವುದಕ್ಕೆ ಸಹಾಯವಾಗಿದೆಯೆ ಹೊರತು ಹಣದ ಚೆಲ್ಲಾಟದ ನಿಯಂತ್ರಣದ ಮೇಲೆ ಯಾವ ಪರಿಣಾಮವೂ ಆಗಿಲ್ಲವೆನ್ನಬಹುದು. ಆದುದೇನೆಂದರೆ ಚುನಾವಣಾ ಪ್ರಚಾರದ ಮೂಲಕ ಜನರಿಗೆ ಚುನಾವಣೆಗಳ ಮುಖ್ಯ ಅಜೆಂಡಾಕ್ಕೆ ಸಂಬಂಧಿಸಿದ ವಿಷಯಗಳ ಬಗ್ಗೆ ಅರಿವು ಮೂಡಿಸುವುದು ಮತ್ತು ಜನರಲ್ಲಿ ಚರ್ಚೆಯನ್ನು ಉಂಟು ಮಾಡುವುದು, ಚಿಂತನೆಗೆ ಹಚ್ಚುವುದು ಮೊದಲಾದ ಚುನಾವಣೆಗಳು ಮತ್ತು ಪ್ರಜಾಪ್ರಭುತ್ವದ ಮುಖ್ಯ ತಿರುಳಿಗೆ ನಿರ್ಬಂಧ ವಿಧಿಸಿದಂತಾಗಿದೆ.

ಪೊಲೀಸರು ರಸ್ತೆಗಳಲ್ಲಿ ಕಾದು ನಿಂತು ಹಣ ಸಾಗಿಸುವ ವಾಹನಗಳನ್ನು ಹಿಡಿಯುವುದು, ಹಾಗೆ ಸಿಕ್ಕ ಹಣವನ್ನು ಮುಟ್ಟುಗೋಲು ಹಾಕಿಕೊಳ್ಳುವುದು ಮುಂತಾದವೆಲ್ಲಾ ನಡೆಯುತ್ತಿದೆ. ಹೀಗೆ ವಶ ಪಡಿಸಿಕೊಂಡ ಹಣ ಸಾವಿರಾರು ಕೋಟಿಗಳ ಸೀಮೆಯನ್ನು ದಾಟಿದೆ. ಆದರೆ ಈ ಎಲ್ಲಾ ಕ್ರಮಗಳಿಂದ ಅಲ್ಲಿ ಇಷ್ಟು ಹಣ ಹಿಡಿಯಲಾಯಿತು, ಇಲ್ಲಿ ಅಷ್ಟೊಂದು ಸಿಕ್ಕಿತು ಎಂಬ ಸುದ್ದಿಗಳನ್ನು ಕೇಳಿ, ಓದಿ, ಆ ಬಗ್ಗೆ ಹರಟಿ ಚಪ್ಪರಿಸುವ ಉಪ್ಪಿನಕಾಯಿಯಾಗಿದೆಯೇ ಹೊರತು ಚುನಾವಣೆಗಳ ಮೇಲೆ ಹಣದ ಹಿಡಿತವನ್ನು ಕುಗ್ಗಿಸುವುದರ ಮೇಲೆ ಏನೂ ಪರಿಣಾಮವಾಗಿಲ್ಲ. ಆಗಿರುವುದಿಷ್ಟೇ, ಚುನಾವಣಾ ವೆಚ್ಚ ಹಲವು ಪಟ್ಟು ಹೆಚ್ಚು.

ಚುನಾವಣೆಗಳ ಮೇಲೆ ಹಣದ ಹಿಡಿತವನ್ನು ಬೃಹತ್ ಪ್ರಮಾಣವಾಗಿಸುವುದರಲ್ಲಿ ಮಾಧ್ಯಮಗಳ ಪಾತ್ರವೂ ಬಹಳ ದೊಡ್ಡದಿದೆ. ‘ಕೊಂಡಸುದ್ದಿ’ ಎಂಬುದು ಇಂದು ನಿತ್ಯದ ವಿಷಯವಾಗಿದೆ. ಸುದ್ದಿಗಳ ವೇಷದಲ್ಲಿ ಪಕ್ಷದ ಮತ್ತು ಅಭ್ಯರ್ಥಿಗಳ ಅಪ್ರತ್ಯಕ್ಷ ಜಾಹೀರಾತು ಮಾಡುವುದು, ವಿವಿಧ ನೆಪಗಳ ಮೇಲೆ ಇಡೀ ಅರ್ಧ ಗಂಟೆಯ ಕಾರ್ಯಕ್ರಮವನ್ನೇ ವಿವಿಧ ಪಕ್ಷ ಹಾಗೂ ನಾಯಕರ ವೈಭವೀಕರಣಕ್ಕೆ ಮೀಸಲಾಗಿರಿಸುವುದನ್ನು ಕಾಣುತ್ತೇವೆ. ಇಂತಹ ಒಂದೊಂದು ಅವಧಿಯ ಕಾರ್ಯಕ್ರಮಕ್ಕೆ ಲಕ್ಷಗಟ್ಟಲೇ ವೆಚ್ಚ ಮತ್ತು ಒಟ್ಟು ಮೊತ್ತದಲ್ಲಿ ಹಲವು ನೂರು ಕೋಟಿಗಳ ವೆಚ್ಚ ಚುನಾವಣಾ ಆಯೋಗದ ಅಳವಿಗೇ ಸಿಗುತ್ತಿಲ್ಲ. ಈ ಪ್ರಕ್ರಿಯೆಯ ಮುಂದುವರಿಕೆಯಾಗಿ ಸುದ್ದಿಗಳನ್ನು ಕೊಂಡುಕೊಳ್ಳುವುದಕ್ಕಿಂತ ಸುದ್ದಿ ಛಾನೆಲ್‍ಗಳನ್ನೇ ಕೊಳ್ಳುವುದು ಅಥವಾ ಹೊಸದಾಗಿ ಆರಂಭಿಸುವುದು ಒಳ್ಳೆಯದೆಂದು ಪಕ್ಷಗಳ ನಾಯಕರು ಭಾವಿಸಿದ್ದಾರೆ. ಚಾನೆಲ್‍ಗಳು ನಾಯಿಕೊಡೆಗಳಂತೆ ಹುಟ್ಟಿಕೊಳ್ಳುತ್ತಿವೆ. ಈ ಪ್ರವೃತ್ತಿಯ ಗರಿಷ್ಟ ಶಿಖರವಾಗಿ ಇಂದು ಕೆಲ ಕಾರ್ಪೋರೆಟ್ ಸಾಮ್ರಾಟರು ತಮ್ಮ ಕೈಯಲ್ಲಿ ಹಲವು ಚಾನೆಲ್‍ಗಳನ್ನು ಹಿಡಿದುಕೊಂಡು ಯಾರು ರಾಜ್ಯ ಅಥವಾ ದೇಶವನ್ನು ಆಳಬೇಕೆಂದು ನಿರ್ಧರಿಸುವಷ್ಟು ಪ್ರಬಲರಾಗಿದ್ದಾರೆ.

ಈ ಎಲ್ಲ ಅಂಶಗಳ ಫಲವಾಗಿ ಒಂದೊಂದು ವಿಧಾನಸಭಾ ಕ್ಷೇತ್ರವನ್ನು ಗೆಲ್ಲಲೂ ಹತ್ತಾರು ಕೋಟಿ ಹಣ ಚೆಲ್ಲ ಬೇಕಾಗಿದೆ. ರಾಜ್ಯದಲ್ಲಿ ಅಧಿಕಾರಕ್ಕಾಗಿ ಸ್ಪರ್ಧೆಯಲ್ಲಿರುವ ಪಕ್ಷಗಳು ಸಾವಿರಾರು ಕೋಟಿ ಬಂಡವಾಳವಾಗಿ ಹೂಡುತ್ತವೆ. ಇದು ರಾಷ್ಟ್ರಮಟ್ಟದಲ್ಲಿ ಹತ್ತಾರು ಸಾವಿರ ಕೋಟಿ ರೂಪಾಯಿ ಮುಟ್ಟುತ್ತದೆ.

ಒಂದೊಂದೂ ಚುನಾವಣೆಗಳಿಗೆ ಹೀಗೆ ಹತ್ತಾರು ಸಾವಿರ ಕೋಟಿಗಳ ದುವ್ರ್ಯಯಕ್ಕೆ ಹಣ ಎಲ್ಲಿಂದ ಬರುತ್ತದೆ ಎಂಬ ಪ್ರಶ್ನೆಯನ್ನು ನಮ್ಮ ದೇಶ ಗಂಭೀರವಾಗಿ ಪರಿಗಣಿಸಿಲ್ಲ. ಇದಕ್ಕೆ ಮುಖ್ಯ ಕಾರಣ ನಮ್ಮ ಮಾಧ್ಯಮಗಳು. ಇಷ್ಟೊಂದು ಬೃಹತ್ ಪ್ರಮಾಣದ ಹಣದ ಮೂಲದ ಬಗ್ಗೆ ಪ್ರಶ್ನಿಸುವುದಕ್ಕೆ ಮತ್ತು ಶೋಧಿಸುವುದಕ್ಕೆ ಗಮನವೇ ಕೊಡುತ್ತಿಲ್ಲ. ಆದ್ದರಿಂದ ಮತದಾರರ ಮನಸ್ಸಿನಲ್ಲಿಯೂ ಇದು ದೊಡ್ಡ ವಿಷಯವಾಗಿಲ್ಲ. ಸಣ್ಣಸಣ್ಣ ಭ್ರಷ್ಟಾಚಾರದ ನಿತ್ಯ ಅನುಭವ ಪಡೆದ ಸಾಮಾನ್ಯ ಜನರು ಭ್ರಷ್ಟಾಚಾರವೇ ಈ ಹಣದ ಮೂಲ ಎಂದು ತಪ್ಪು ತಿಳಿಯಲು ಅವಕಾಶವಾಗಿದೆ.

ಮೋದಿ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ದೇಶೀ ಹಣದ ದೊರೆಗಳ ಹಣದ ಹರಿವನ್ನು ಮಿತಿಯಿಲ್ಲದೆ ಹೆಚ್ಚಿಸಿದ್ದಾರೆ. ಮಹಾನ್ ದೇಶಭಕ್ತರೆಂದು ದಿನ ದಿನವೂ ಕೊಚ್ಚಿಕೊಳ್ಳುವ ಮತ್ತು ಇತರರ ದೇಶಪ್ರೇಮದ ಪರೀಕ್ಷೆ ಮಾಡುವ ಇವರು ಮೊದಲ ಬಾರಿಗೆ ನೇರವಾಗಿ ವಿದೇಶೀ ಹಣದ ಚಕ್ರವರ್ತಿಗಳ ದರ್ಬಾರಿಗೆ ಭಾರತದ ಚುನಾವಣೆ ಮತ್ತು ಪ್ರಜಾಪ್ರಭುತ್ವವನ್ನು ಅಡಿಯಾಳಾಗಿಸಿದ್ದಾರೆ.

ವಿವಿಧ ಕಾನೂನುಗಳಿಗೆ ಮೂರು ತಿದ್ದುಪಡಿಗಳನ್ನು ಮಾಡುವ ಮೂಲಕ ಚುನಾವಣೆಗಳಲ್ಲಿ ಹಣದ ಹರಿವನ್ನು ಹಿಂದಿನ ಎಲ್ಲಾ ಸಾಧ್ಯತೆಗಳನ್ನು ಹಲವು ಪಟ್ಟು ಮೀರಲು ಸುವರ್ಣಾವಕಾಶ ಕಲ್ಪಿಸಿದ್ದಾರೆ.

ಒಂದು: ಭಾರತದ ಕಾರ್ಪೋರೇಟ್‍ಗಳು ರಾಜಕೀಯ ಪಕ್ಷಗಳಿಗೆ ನೀಡುವ ದೇಣಿಗೆಯ ಮೇಲೆ ಒಂದು ಮಿತಿ ಇತ್ತು. ಆಯಾ ಕಂಪನಿಯ ಆದಾಯದ ಶೆ.7.5ರ ಒಳಗೆ ಮಾತ್ರ ಈ ದೇಣಿಗೆಗಳನ್ನು ನೀಡಬಹುದಾಗಿತ್ತು. ಈಗ ಈ ಮಿತಿಯನ್ನು ಹೆಚ್ಚಿಸುವ ಗೋಜಿಗೆ ಹೋಗುವುದೇಕೆಂದು ಈ ಮಿತಿಯನ್ನೇ ತೆಗೆದು ಹಾಕಲಾಗಿದೆ. ಯಾವ ಕಂಪನಿ ಎಷ್ಟು ಬೇಕಾದರೂ ರಾಜಕೀಯ ನಿಧಿ ನೀಡಬಹುದು.

ಎರಡು: ರಾಜಕೀಯ ಪಕ್ಷಗಳು ಚುನಾವಣಾ ಬಾಂಡ್‍ಗಳನ್ನು ಬಿಡುಗಡೆ ಮಾಡಿ ಹಣ ಸಂಗ್ರಹಿಸಲು ಅವಕಾಶ ನೀಡಲಾಗಿದೆ. ಈ ಬಾಂಡ್‍ಗಳಲ್ಲಿ ಹಣ ಹೂಡುವ ಕಂಪನಿಗಳು ಮತ್ತು ನೀಡಿದ ಹಣವನ್ನು ಬಹಿರಂಗಪಡಿಸ ಬೇಕಾಗಿಲ್ಲ. ಇಲ್ಲಿಯವರೆಗೆ ಇದ್ದ ನಿಯಮಗಳ ಪ್ರಕಾರ ಯಾವುದೇ ಪಕ್ಷ ಹತ್ತು ಸಾವಿರಕ್ಕಿಂತ ಹೆಚ್ಚು ಹಣವನ್ನು ಒಬ್ಬರಿಂದ ಪಡೆದರೆ ಅದು ಚೆಕ್ ಮೂಲಕವೇ ಇರಬೇಕು ಎಂಬ ಕಟ್ಟಳೆಯನ್ನು ಗಾಳಿಗೆ ತೂರಲಾಗಿದೆ. ಆ ಮೂಲಕ ಭಾರತದ ಜನರಿಗೆ ಇಲ್ಲಿಯವರೆಗೆ ವಿವಿಧ ಪಕ್ಷಗಳು ಕಂಪನಿಗಳಿಂದ ಮತ್ತು ಇತರರಿಂದ ದಾಖಲೆ ಮೂಲಕ ಪಡೆದ ನಿಧಿಯ ಒಂದು ಅಂದಾಜು ಸಿಗುತ್ತಿತ್ತು. ಉಳಿದದ್ದು ಕೇವಲ ಕಪ್ಪು ಹಣದ ಮೂಲಕವೇ ಸಂದಾಯವಾಗುತ್ತಿತ್ತು. ಆದರೆ ಇಂದು ಕಂಪನಿಗಳು ನೀಡುವ ಕಪ್ಪು ಹಣವೂ ಬಾಂಡ್ ಮೂಲಕ ಹರಿಯಬಹುದಾಗಿದೆ.

ಈ ಕ್ರಮಗಳು ಭಾರತದ ಕಾರ್ಪೋರೆಟ್ ಹಿಡಿತಕ್ಕೆ ರಾಜಕೀಯ ಪಕ್ಷಗಳನ್ನು ಮತ್ತು ಪ್ರಜಾಪ್ರಭುತ್ವವನ್ನೇ ಒಪ್ಪಿಸುವ ಕ್ರಮಗಳಾಗಿವೆ.

ಆದರೆ ಮೋದಿಯವರ ಮತ್ತು ಬಿಜೆಪಿಯ ಧನದಾಹ ಇಲ್ಲಿಗೇ ನಿಂತಿಲ್ಲ. ಎಫ್.ಸಿ.ಆರ್.ಎ. ಕಾನೂನಿಗೆ ತಿದ್ದುಪಡಿಯ ಮೂಲಕ ವಿದೇಶಿ ಕಂಪನಿಗಳು ಮತ್ತಿತರ ಮೂಲಗಳು ಕೂಡ ರಾಜಕೀಯ ಪಕ್ಷಗಳಿಗೆ ಹಣದ ಹೊಳೆ ಹರಿಸುವ ಅವಕಾಶ ನೀಡಿದ್ದಾರೆ. ಭಾರತದ ಚುನಾವಣೆಗಳ ಮೇಲೆ ವಿದೇಶಿ ಹಣ ಹಿಡಿತ ಸಾಧಿಸುವ ಈ ಕ್ರಮ ದೇಶದ ಸ್ವಾತಂತ್ರ್ಯಕ್ಕೆ ಅಪಾಯ ತರುವ ವಿಷಯ. ಭಾರತದ ಜನರ ಹಿತಗಳಿಗೆ ಬದಲಾಗಿ ವಿದೇಶಿ ಹಿತಗಳಿಗೆ ಬಲಿಯಾಗುವ ವಿಷಯ.

ಮತ್ತೊಂದು ವಿಷಯವೆಂದರೆ ಭಾರತದ ರೂಪಾಯಿ ಹೆಚ್ಚುಹೆಚ್ಚು ಅಪಮೌಲ್ಯಗೊಳ್ಳುತ್ತಲೇ ನಡೆದಿದೆ. ಇದರಿಂದ ವಿದೇಶದ ದೊಡ್ಡ ಕಂಪನಿಗಳು ನೀಡುವ ಒಂದು ಕೋಟಿ ಡಾಲರ್ ನಮ್ಮಲ್ಲಿ 65ಕೋಟಿ ಡಾಲರ್ ಆಗಿ ನಮ್ಮನ್ನು ಹಿಡಿತಕ್ಕೆ ತೆಗೆದುಕೊಳ್ಳುವ ಅಪಾಯ ಇದೆ.

ಚುನಾವಣೆಗಳಲ್ಲಿ ಹಣದ ಪ್ರಭಾವ ತಪ್ಪಿಸುವುದಕ್ಕೆ ಹಲವು ವಿಧಾನಗಳಿವೆ. ಚುನಾವಣಾ ಆಯೋಗದ ಅಧಿಕಾರಶಾಹಿ ಕ್ರಮಗಳು ಏನೇನೂ ಉಪಯುಕ್ತವಲ್ಲ ಎಂಬುದು ಹಲವು ಚುನಾವಣೆಗಳಲ್ಲಿ ಸಾಬೀತಾದ ಮೇಲೆ ನಿಜವಾದ ಮತ್ತು ಮೂಲದಲ್ಲಿಯೇ ಪರಿಣಾಮಕಾರಿಯಾದ ಕ್ರಮಗಳನ್ನು ಕೈಗೊಳ್ಳಬೇಕಾಗಿದೆ. ಅದರಲ್ಲಿ ಪ್ರಮುಖವಾದುದು, ರಾಜಕೀಯ ಪಕ್ಷಗಳಿಗೆ ಕಾರ್ಪೋರೆಟ್ ದೇಣಿಗೆಗಳನ್ನು ಪೂರ್ಣವಾಗಿ ನಿಷೇಧಿಸುವುದು, ಚುನಾವಣೆಗಳ ರಾಜಕೀಯ ಪ್ರಚಾರಕ್ಕೆ ಬೇಕಾದ ಹಣವನ್ನು ಸರ್ಕಾರವೇ ಒಂದು ನಿಧಿ ಸ್ಥಾಪಿಸುವ ಮೂಲಕ ಒದಗಿಸುವುದು. ಇದಕ್ಕೆ ಬೇಕಾದರೆ ಕಾರ್ಪೋರೆಟ್ ದೇಣಿಗೆ ಸ್ವೀಕರಿಸಬಹುದು. ಚುನಾವಣಾ ಪ್ರಚಾರಕ್ಕೆ ಬೇಕಾದ ಕಾಗದದಂತಹ ವಸ್ತುಗಳನ್ನು ರಿಯಾಯತಿ ದರದಲ್ಲಿ ಒದಗಿಸಬಹುದು.

ಇಂದು ಚುನಾವಣಾ ಅಭ್ಯರ್ಥಿಯ ವೆಚ್ಚದ ಮೇಲೆ ಮಾತ್ರ ಮಿತಿ ವಿಧಿಸಲಾಗಿದೆ. ಆದರೆ ರಾಜಕೀಯ ಪಕ್ಷದ ಪರವಾಗಿ ಮಾಡಬಹುದಾದ ಯಾವ ವೆಚ್ಚದ ಮೇಲೂ ಮಿತಿಯಿಲ್ಲ. ಆದ್ದರಿಂದ ಅಭ್ಯರ್ಥಿಯ ವೆಚ್ಚದ ಮಿತಿ ಮೀರಿದರೆ ಅದನ್ನು ರಾಜಕೀಯ ಪಕ್ಷದ ಮೇಲೆ ಹಾಕಿಬಿಟ್ಟರಾಯಿತು. ಆದ್ದರಿಂದ ರಾಜಕೀಯ ಪಕ್ಷಗಳ ಒಟ್ಟು ವೆಚ್ಚ ಮತ್ತು ಅವು ಒಬ್ಬ ಅಭ್ಯರ್ಥಿಯ ಮೇಲೆ ಮಾಡಬಹುದಾದ ವೆಚ್ಚದ ಮೇಲೆ ಕೂಡಾ ಮಿತಿ ವಿಧಿಸಬೇಕು.

ದೇಶದಲ್ಲಿ ಎಡ ಪಕ್ಷಗಳ ಹೊರತಾಗಿ ಎಲ್ಲ ಪಕ್ಷಗಳೂ ಚುನಾವಣೆಯಲ್ಲಿ ಹಣದ ಹೊಳೆ ಹರಿಸುವ ಸ್ಪರ್ಧೆ ನಡೆಸುತ್ತಿವೆ. ಕಮ್ಯೂನಿಸ್ಟ್ ಪಕ್ಷಗಳು ಮತದಾರರ ಓಟುಗಳನ್ನು ಹಣ ಕೊಟ್ಟು ಕೊಳ್ಳುವುದಿಲ್ಲ. ತಾವು ಜನರ ಸಮಸ್ಯೆಗಳಿಗೆ ಮುಂದಿಡುವ ಪರಿಹಾರ, ಕೈಗೊಳ್ಳುವ ಕಾರ್ಯಕ್ರಮಗಳು ಮತ್ತು ಅದರಲ್ಲಿ ಜನರಲ್ಲಿ ಮೂಡಿಸುವ ನಂಬಿಕೆ ಇವುಗಳ ಮೇಲೆ ಮಾತ್ರ ಮತದಾರರು ನಿರ್ಧಾರ ಮಾಡಬೇಕೆಂಬ ನೀತಿ ಇವುಗಳದು. ಆದ್ದರಿಂದ ಪಕ್ಷದ ನಿಲುವು ಮತ್ತು ಪ್ರಣಾಳಿಕೆಯ ಪ್ರಚಾರವೇ ಅವುಗಳ ಪ್ರಧಾನ ವೆಚ್ಚ.

ಆದರೆ ಇಂದಿನ ಮತದಾರರನ್ನು ಭ್ರಷ್ಟರನ್ನಾಗಿಸುವ ಚುನಾವಣೆಗಳಲ್ಲಿ ಪ್ರವಾಹದ ವಿರುದ್ಧ ಈಜುವುದು ಕಮ್ಯೂನಿಸ್ಟ ಪಕ್ಷಗಳು ಆರಿಸಿಕೊಂಡ ಮಾರ್ಗವಾಗಿದೆ. ಏಕೆಂದರೆ ಓಟುಗಳನ್ನು ಕೊಳ್ಳುವುದಕ್ಕಾಗಿ ಕಾರ್ಪೋರೇಟ್ ಅಡಿಯಾಳಾಗುವುದನ್ನು ಅವು ನಿರಾಕರಿಸುತ್ತವೆ. ಕಮ್ಯುನಿಸ್ಟ್ ಪಕ್ಷಗಳ ಈ ನೀತಿ ಅವು ಬಲವಾಗಿರುವ ರಾಜ್ಯಗಳಲ್ಲಿ ಇತರ ಪಕ್ಷಗಳಿಗೂ ಪ್ರಯೋಜನವಾಗಿದೆ.

ಒಟ್ಟಿನಲ್ಲಿ, ರಾಜಕೀಯ ಪಕ್ಷಗಳು ತಮ್ಮ ಪ್ರಣಾಳಿಕೆ, ಧೋರಣೆ ಮತ್ತು ಅವುಗಳನ್ನು ಕಾರ್ಯರೂಪಕ್ಕೆ ತರುವ ಬದ್ಧತೆಯನ್ನು ಆಧಾರಗೊಳ್ಳಬೇಕಾದ ಚುನಾವಣೆಗಳು ಪ್ರಾಥಮಿಕ ತತ್ವವನ್ನು ಗಾಳಿಗೆ ತೂರುವ ಮೂಲಕ ಪ್ರಜಾಪ್ರಭುತ್ವದ ಅಡಿಪಾಯವನ್ನೇ ಅಲುಗಾಡಿಸುತ್ತಿವೆ.

*ಲೇಖಕರು ಸ್ವಯಂ ನಿವೃತ್ತ ಕೃಷಿ ಅಧಿಕಾರಿ, ಎಡಪಂಥೀಯ ಚಿಂತಕರು, ಸಿಪಿಎಂ ಪಕ್ಷದ ಕಾರ್ಯದರ್ಶಿಗಳು.

ಡಾ.ಟಿ.ಆರ್.ಚಂದ್ರಶೇಖರ

ಕರ್ನಾಟಕ ಸರ್ಕಾರದ ಹಣಕಾಸಿನ ನಿರ್ವಹಣೆ

ಜುಲೈ ೨೦೧೮

ರಂಗಸ್ವಾಮಿ ಮೂಕನಹಳ್ಳಿ

ಕೃಷಿ ಸಾಲ ಮನ್ನಾ: ಸಾಧ್ಯವೇನಣ್ಣಾ?

ಜುಲೈ ೨೦೧೮

ಚಂಸು ಪಾಟೀಲ

ರೈತರೇಕೆ ಸಾಲಗಾರರಾದರು?

ಜುಲೈ ೨೦೧೮

ಟಿ.ಎಂ.ಥಾಮಸ್ ಐಸಾಕ್ ಕೇರಳದ ಹಣಕಾಸು ಸಚಿವರು

ಎಲ್ಲಾ ರಾಜ್ಯಗಳ ಹಣಕಾಸು ಸಚಿವರಿಗೆ ಕೇರಳ ಹಣಕಾಸು ಸಚಿವರ ಬಹಿರಂಗ ಪತ್ರ

ಜುಲೈ ೨೦೧೮

ಅರ್ಜುನ್ ರಾಮೇಗೌಡ ನಾರಾಯಣಸ್ವಾಮಿ

ಆ ಬೆಂಕಿಯ ಕಿಡಿ ಹೊತ್ತಿಸುವವರು ಯಾರು?

ಜೂನ್ ೨೦೧೮

ಡಾ.ಎಸ್.ಬಿ.ಜೋಗುರ

ಪೂರಕ ವಾತಾವರಣದ ಕೊರತೆ

ಜೂನ್ ೨೦೧೮

ಡಾ.ಎಸ್.ಬಿ.ಜೋಗುರ

ಹಾರ್ವರ್ಡ್ ಗುಣಮಟ್ಟ: ಕೈಗೂಡದ ಕನಸೇ?

ಜೂನ್ ೨೦೧೮

ಚುನಾವಣೆ: ಯಾರ ಹೊಣೆ?

ಎಪ್ರಿಲ್ ೨೦೧೮

ಡಾ.ಬಿ.ಎಲ್.ಶಂಕರ್

ಆಡಿದ ಮಾತಿಗೂ ಆತ್ಮದ ಮಾತಿಗೂ ಅಜಗಜಾಂತರ!

ಎಪ್ರಿಲ್ ೨೦೧೮

ಹರೀಶ್ ನರಸಪ್ಪ

ಚುನಾವಣಾ ಆಯೋಗದ ಮಿತಿ ಮತ್ತು ವೈಫಲ್ಯ

ಎಪ್ರಿಲ್ ೨೦೧೮

ಬಿ.ಎನ್.ವಿಜಯಕುಮಾರ್

ಭ್ರಷ್ಟತೆಗೆ ರಾಜಕೀಯ ಪಕ್ಷಗಳೇ ಕಾರಣ

ಎಪ್ರಿಲ್ ೨೦೧೮

ಎ.ಟಿ.ರಾಮಸ್ವಾಮಿ

ಭ್ರಷ್ಟಾಚಾರಿಗಳು ವೇಶ್ಯೆಯರಿಗಿಂತಲೂ ಕೀಳು

ಎಪ್ರಿಲ್ ೨೦೧೮

ಬಿ. ಕೆ. ಚಂದ್ರಶೇಖರ್

ಪ್ರಜಾಪ್ರಭುತ್ವಕ್ಕೆ ಕಪ್ಪುಚುಕ್ಕೆ

ಎಪ್ರಿಲ್ ೨೦೧೮

ಅಲೋಕ್ ಪ್ರಸನ್ನ, ಎಸ್. ಆರ್. ಹಿರೇಮಠ, ಬಿ. ಟಿ. ವೆಂಕಟೇಶ

ನ್ಯಾಯಾಂಗ

ಮಾರ್ಚ್ ೨೦೧೮

ಎ. ನಾರಾಯಣ, ಬಸವರಾಜ ಬೊಮ್ಮಾಯಿ, ಮೋಟಮ್ಮ

ಶಾಸಕಾಂಗ

ಮಾರ್ಚ್ ೨೦೧೮

ಬಿ. ಆರ್. ಜಯರಾಮರಾಜೇ ಅರಸ್, ಎನ್. ಹನುಮೇಗೌಡ,

ಕಾರ್ಯಂಗ

ಮಾರ್ಚ್ ೨೦೧೮

ವಾಸುದೇವ ಶರ್ಮಾ ಎನ್. ವಿ.

ನಾಗರಿಕ ಸಮಾಜ

ಮಾರ್ಚ್ ೨೦೧೮

ಈಶ್ವರ ದೈತೋಟ, ಡಾ. ಎ. ಎಸ್. ಬಾಲಸುಬ್ರಹ್ಮಣ್ಯ

ಮಾಧ್ಯಮ

ಮಾರ್ಚ್ ೨೦೧೮

ಮುಖ್ಯಚರ್ಚೆಗೆ ಪ್ರವೇಶ

ಫೆಬ್ರವರಿ ೨೦೧೮

ಡಾ.ಅರವಿಂದ ಪಟೇಲ್ ಬಳ್ಳಾರಿ

ವೈದ್ಯಕ್ಷೇತ್ರದ ಉದ್ಧಾರಕ್ಕೆ ಮೂರು ಮದ್ದು!

ಫೆಬ್ರವರಿ ೨೦೧೮

ಮಾಲತಿ ಪಟ್ಟಣಶೆಟ್ಟಿ ಧಾರವಾಡ

ಗುಣಮಟ್ಟಕ್ಕೆ ಮನ್ನಣೆ

ಫೆಬ್ರವರಿ ೨೦೧೮

ಡಾ.ಶ್ರೀನಿವಾಸ ಕಕ್ಕಿಲ್ಲಾಯ ಮಂಗಳೂರು

ಸಕ್ಕರೆ ನಿಷೇಧಿಸಿ!

ಫೆಬ್ರವರಿ ೨೦೧೮