2nd May 2018

ಪ್ರಜಾಪ್ರಭುತ್ವಕ್ಕೆ ಕಪ್ಪುಚುಕ್ಕೆ

ಬಿ. ಕೆ. ಚಂದ್ರಶೇಖರ್

ಓಟಿಗಾಗಿ ಒಡ್ಡುವ ಆಸೆ ಆಮಿಷಗಳು ಕಳೆದ ಒಂದೆರಡು ದಶಕಗಳಿಂದ ರಾಜಾರೋಷವಾಗಿ ಎದ್ದು ಕಾಣುತ್ತಿವೆ. ಮುಖ್ಯವಾಗಿ ರಾಜಕೀಯ ಪಕ್ಷಗಳು, ಜೊತೆಗೆ ಅಭ್ಯರ್ಥಿಗಳು ಈ ಸಂವಿಧಾನ ವಿರೋಧಿ ವ್ಯವಹಾರಕ್ಕೆ ಹೊಣೆಗಾರರು.

‘ಭ್ರಷ್ಟಾಚಾರ’ದ ಕಲ್ಪನೆ, ಅದರ ವ್ಯಾಪ್ತಿ ಹಾಗೂ ನಿರಂತರವಾಗಿ ಬದಲಾಗುತ್ತಿರುವ ಅದರ ರೂಪ ಯಾವುದೂ ಹೊಸದಲ್ಲ. ಪ್ರತಿಯೊಂದು ಮನೆಯಲ್ಲೂ ಎಲ್ಲಾ ವಯಸ್ಸಿನ ವ್ಯಕ್ತಿಗಳಿಗೂ ಭ್ರಷ್ಟಾಚಾರದ ಅಸ್ತಿತ್ವದ ಬಗ್ಗೆ ಅರಿವಿದೆ. ದಿನನಿತ್ಯ ಬದುಕಿಗೆ ಸರ್ಕಾರಗಳು ಒದಗಿಸುವ ಅಗತ್ಯವಾದ ಸೇವೆಗಳನ್ನು ಒಳಗೊಂಡಂತೆ ಸಾಮಾಜಿಕ, ರಾಜಕೀಯ ಕ್ಷೇತ್ರಗಳಲ್ಲೂ ಭ್ರಷ್ಟಾಚಾರ ಆವರಿಸಿಕೊಂಡಿದೆ. ಭಾರತದ ಪ್ರಜಾಪ್ರಭುತ್ವದ ಅಂತರಾತ್ಮದಂತಿರುವ ಜನಪ್ರತಿನಿಧಿಗಳ ಚುನಾವಣಾ ಪ್ರಕ್ರಿಯೆಯಲ್ಲಿ ಅಭ್ಯರ್ಥಿಯ ಆಯ್ಕೆ, ಚುನಾವಣಾ ಪ್ರಚಾರ ಮತ್ತು ಅಂತಿಮವಾಗಿ ಮತದಾರನ ಓಟಿಗಾಗಿ ಒಡ್ಡುವ ಆಸೆ ಆಮಿಷಗಳು ಕಳೆದ ಒಂದೆರಡು ದಶಕಗಳಿಂದ ರಾಜಾರೋಷವಾಗಿ ಎದ್ದು ಕಾಣುತ್ತಿವೆ. ಮುಖ್ಯವಾಗಿ ರಾಜಕೀಯ ಪಕ್ಷಗಳು, ಜೊತೆಗೆ ಅಭ್ಯರ್ಥಿಗಳು ಈ ಸಂವಿಧಾನ ವಿರೋಧಿ ವ್ಯವಹಾರಕ್ಕೆ ಹೊಣೆಗಾರರು. ಕ್ರಿಮಿನಲ್‍ಗಳ ಆಯ್ಕೆ, ಮತ್ತೊಬ್ಬರ ಹೆಸರಿನಲ್ಲಿ ಮತ ಚಲಾವಣೆ, ಮತಗಟ್ಟೆಯೊಳಗೇ ನಡೆಯಬಹುದಾದ ಭ್ರಷ್ಟಾಚಾರ, ಬ್ಯಾಲೆಟ್ ಬಾಕ್ಸ್‍ಗಳ ಅಪಹರಣ, ಇವೆಲ್ಲದರ ಜೊತೆಗೆ ನೇರವಾಗಿ ಮತದಾರನಿಗೇ ಹಣ, ಹೆಂಡ, ಕುಟುಂಬಕ್ಕೆ ಅಗತ್ಯವಾದ ಪ್ರೆಷರ್ ಕುಕ್ಕರ್, ಮಿಕ್ಸಿ, ಹೊಲಿಗೆ ಯಂತ್ರ, ಮೊಬೈಲ್ ಫೋನ್, ಟಿ.ವಿ. ಲ್ಯಾಪ್‍ಟಾಪ್, ಬಾಡೂಟ ಮತ್ತಿತರ ವಸ್ತುಗಳನ್ನು ಕೊಟ್ಟು ಓಟು ಕೊಳ್ಳುವ ಪರಿಪಾಠ ಎಗ್ಗಿಲ್ಲದೇ ಸಾಗಿದೆ.

ಅಸಹ್ಯ ಮೂಡಿಸುವ ಸಂಗತಿ ಎಂದರೆ ರಾಜಕಾರಣಿಗಳು ‘ಓಟಿಗಾಗಿ ಹಣ’ ಕುರಿತು ಯಾವುದೇ ಮುಜುಗರ ಅಥವಾ ಪಶ್ಚಾತ್ತಾಪವಿಲ್ಲದೇ ತಮ್ಮ ನಡವಳಿಕೆ ಮತ್ತು ಮನೋಧೋರಣೆಯನ್ನು ಕಿಂಚಿತ್ತೂ ಪಾಪಪ್ರಜ್ಞೆಯಿಲ್ಲದೇ ಸಮಜಾಯಿಷಿ ಮಾಡಿಕೊಳ್ಳುತ್ತಿರುವುದು. 2017ರಲ್ಲಿ ಐದು ರಾಜ್ಯಗಳ ಅಸೆಂಬ್ಲಿ ಚುನಾವಣೆಗಳ ನಂತರ ಮೂರು ಪ್ರಮುಖ ರಾಜಕಾರಣಿಗಳು —ಕೇಜ್ರಿವಾಲ್, ಅಖಿಲೇಶ್ ಯಾದವ್ ಮತ್ತು ಭಾರತದ ಅಂದಿನ ರಕ್ಷಣಾ ಮಂತ್ರಿ ಪರಿಕ್ಕರ್— ಚುನಾವಣಾ ಪ್ರಚಾರದಲ್ಲಿ “ಜನ ಲಂಚ ತೆಗೆದುಕೊಳ್ಳಲಿ ಆದರೆ ನಮಗೆ ಮತ ಹಾಕಲಿ” ಎಂದು ಹೇಳಿದ್ದನ್ನು ದೇಶದ ಮುಖ್ಯ ಚುನಾವಣಾಧಿಕಾರಿ ನಸೀಮ್ ಜೈದಿ ಅವರು ಟೀಕಿಸಿದ್ದರು. ಆ ಮೂವರಿಂದಲೂ ವಿವರಣೆಯನ್ನು ಪಡೆದುಕೊಂಡಿದ್ದರು. “ಈ ಅನಿಷ್ಟ ಪದ್ಧತಿಗೆ ನಾಯಕರ ವಿರೋಧವಿದ್ದರೆ ಅದನ್ನು ನಿಸ್ಸಂದಿಗ್ಧವಾಗಿ ವಿರೋಧಿಸಬೇಕು. ಸಾಮಾನ್ಯ ಜನರು ನಾಯಕರ ವ್ಯಂಗ್ಯ ಅಥವಾ ಹಾಸ್ಯವನ್ನು ತಪ್ಪಾಗಿ ಅರ್ಥೈಸಬಹುದು” ಎಂದು ತಮ್ಮ ಆತಂಕವನ್ನು ವ್ಯಕ್ತಪಡಿಸಿದ್ದರು.

ನಮ್ಮ ರಾಜಕೀಯ ವ್ಯವಸ್ಥೆಗೆ ಜಾಗತಿಕ ಪ್ರಪಂಚದಲ್ಲಿ ಆಭಾಸ ಮೂಡಿಸುವ ಪ್ರಸಂಗವೊಂದು 2009ರಲ್ಲಿ ನಡೆದಿತ್ತು. ಚೈನ್ನೈನಲ್ಲಿದ್ದ ಅಮೆರಿಕಾ ದೇಶದ ಅಂದಿನ ಕಾನ್ಸುಲೇಟ್ ಅಧಿಕಾರಿ ಕಪ್ಲಾನ್ ಅವರು ಆ ವರ್ಷದ ಲೋಕಸಭೆ ಚುನಾವಣೆಯಲ್ಲಿ ಓಟಿಗಾಗಿ ಹಣ, ಆಕರ್ಷಕ ವಸ್ತುಗಳು, ಸೇವೆಗಳ ವಿತರಣೆ ಮಾಡಿದ್ದನ್ನು ತಮಿಳುನಾಡು ಮತ್ತು ಆಂಧ್ರಪ್ರದೇಶದ ರಾಜಕಾರಣಿಗಳು ಒಪ್ಪಿಕೊಂಡ ವಿಷಯವನ್ನು ಅಮೆರಿಕಾದ ವಿದೇಶಾಂಗ ಸಚಿವಾಲಯಕ್ಕೆ ಕಳಿಸಿದ್ದ ಮಾಹಿತಿ ಬಹಿರಂಗವಾಗಿದೆ. ಬಡ ಮತದಾರರು ಅಭ್ಯರ್ಥಿಗಳಿಂದ ಆಸೆ ಆಮಿಷಗಳನ್ನು ನಿರೀಕ್ಷಿಸುವುದು. ‘ದಕ್ಷಿಣ ಭಾರತದಲ್ಲಿ’ ಸರಿಸಾಮಾನ್ಯವಾಗಿದ್ದು, ಅದನ್ನು ಪೂರೈಸಲು ನಾನಾ ಬಗೆಯ ಮಾರ್ಗಗಳನ್ನು ರೂಪಿಸಲಾಗಿದೆಯೆಂದು ಕಪ್ಲಾನ್ ಅವರು ಅವರ ಸರ್ಕಾರಕ್ಕೆ ಬರೆದಿದ್ದರು. “ಪಕ್ಷಗಳ ಮತ್ತು ಅಭ್ಯರ್ಥಿಗಳ ಏಜೆಂಟ್‍ಗಳು ರಾತ್ರಿ ಎರಡು ಗಂಟೆಯಿಂದ ನಾಲ್ಕು ಗಂಟೆ ಒಳಗೆ ಚುನಾವಣಾ ಆಯೋಗ ನಿದ್ದೆ ಮಾಡುವ ಸಮಯದಲ್ಲಿ ಹಣ ಕೊಡುವ” ಪರಿಪಾಠ ಅನುಷ್ಠಾನದಲ್ಲಿದೆ ಮತ್ತು ಇದರಿಂದಾಗಿ ರಾಜಕೀಯ ತೋಳ್ಬಲಕ್ಕೆ ಹಣದ ಬಲ ಸೇರಿಕೊಂಡಿದೆಯೆಂದೂ ದಾಖಲಿಸಿದ್ದರು. ಸಮಾಧಾನದ ಸಂಗತಿಯೆಂದರೆ ಕಳೆದ ಕೆಲವು ವಾರಗಳಲ್ಲಿ ತಮಿಳುನಾಡಿನ ಪ್ರಖ್ಯಾತ ನಟರಾದ ಕಮಲ್ ಹಾಸನ್ ಮತ್ತು ರಜಿನಿಕಾಂತ್ ತಮ್ಮ ರಾಜಕೀಯ ಪ್ರವೇಶದ ಸಂದರ್ಭದಲ್ಲಿ ಮತದಾರರು ಆಸೆ ಆಮಿಷಗಳನ್ನು ತಿರಸ್ಕರಿಸಿ ತಮ್ಮ ಸ್ವಾಭಿಮಾನವನ್ನು ಮೆರೆಯಬೇಕೆಂಬ ನೇರ ಮಾತುಗಳನ್ನಾಡಿರುವುದು ಹೊಸ ಬೆಳವಣಿಗೆ.

ಹಣ ಪಡೆದುಕೊಂಡ ಮತದಾರರೆಲ್ಲರೂ ಆ ಪಕ್ಷವನ್ನೇ ಬೆಂಬಲಿಸುತ್ತಾರೆಯೇ? ಈ ಪ್ರಶ್ನೆಗೆ ಸ್ಪಷ್ಟ ಉತ್ತರ ಕಷ್ಟಸಾಧ್ಯ. ವಿಪರ್ಯಾಸವೆಂದರೆ, ಆಮಿಷಕ್ಕೊಳಗಾದ ಮತದಾರನ “ನಿಷ್ಠೆ ಬದ್ಧತೆ” ಕುರಿತ ಊಹೆ, ತೀರ್ಪು ಮತ್ತು ಅವನು ಮತಗಟ್ಟೆಗೆ ಬರುವವರೆಗೂ ಗಮನಿಸುವ ವಿಷಯ ಗಂಭೀರ ಚರ್ಚೆಗೆ ಅರ್ಹತೆ ಪಡೆದುಕೊಂಡಿದೆ! ಕಳೆದ ಹಲವಾರು ಚುನಾವಣೆಗಳ ಪ್ರಚಾರದಲ್ಲಿ ಭಾಗಿಯಾಗಿದ್ದ ನನ್ನ ಅನುಭವದಲ್ಲಿ ಮತದಾರರು ಒಟ್ಟಾರೆಯಾಗಿ ಅಥವಾ ಅವರ ಪ್ರಮುಖ ಪ್ರತಿನಿಧಿಗಳ ಮೂಲಕ ವ್ಯಕ್ತಿಗತ ಹಂಚಿಕೆಯ ಬದಲಾಗಿ ಒಂದು ಪ್ರದೇಶದ, ಗ್ರಾಮದ ಇಡೀ ಜನಸಮುದಾಯಕ್ಕಾಗಿ ಕಲ್ಯಾಣ ಮಂಟಪ, ದೇವಸ್ಥಾನ, ಕುಡಿಯುವ ನೀರಿನ ಘಟಕ, ರಸ್ತೆಗಳಿಗಾಗಿ ಒತ್ತಾಯಪೂರ್ವಕ ಬೇಡಿಕೆ ಮಂಡಿಸಿದ್ದ ಸಾಕಷ್ಟು ಪ್ರಸಂಗಗಳಿದ್ದವು. ಹೀಗೆ ಬಹಿರಂಗವಾಗಿ ಸಮುದಾಯ—ಆಧಾರಿತ ನಿರೀಕ್ಷೆಯನ್ನು ಭ್ರಷ್ಟಾಚಾರವೆಂದು ಕರೆಯಲಾಗದು. ಇದು ‘ಬಿಟ್ಟರೆ ಸಿಕ್ಕ’ ಅಭ್ಯರ್ಥಿ ಅಥವಾ ರಾಜಕೀಯ ಪಕ್ಷದೊಡನೆ ನಡೆಸುವ ಸಮರ್ಥನೀಯ ವ್ಯವಹಾರವೆಂದು ನನ್ನ ಅನಿಸಿಕೆ. ‘ಓಟಿಗಾಗಿ ಹಣ’ ಸಂಗತಿಯಲ್ಲಿ ಮತ್ತೊಂದು ವಿಷಯ ಬಿಂಬಿತವಾಗುತ್ತದೆ: ಎಲ್ಲಿ ಅಭ್ಯರ್ಥಿ ಅಥವಾ ಒಂದು ಪಕ್ಷಕ್ಕೆ ಬದ್ಧತೆಯಿಂದ ಕೂಡಿದ ಕಾರ್ಯಕರ್ತರ ಕೊರತೆ, ಮತಗಟ್ಟೆ ಹಂತದ ವರೆಗೆ ಪಕ್ಷದ ದೀರ್ಘ ಕಾಲಾವಧಿಯ ಗಟ್ಟಿಯಾದ ಸಂಘಟನೆಯ ಕೊರತೆಯಿದೆಯೋ ಅಲ್ಲಿ ಹಣ ಹಂಚುವುದರಿಂದ ಕೊಂಚ ಕೊರತೆ ನೀಗಬಹುದು. ಎರಡನೆಯದು, ಇತ್ತೀಚಿನ ಚುನಾವಣೆಗಳಲ್ಲಿ ಗೆಲುವು ಸೋಲಿನ ಅಂತರ ಅತ್ಯಂತ ಕಡಿಮೆ ಇರುವ ಕ್ಷೇತ್ರಗಳ ಸಂಖ್ಯೆ ಹೆಚ್ಚಾಗುತ್ತಿದ್ದು, ಅಲ್ಲಿ ಹಣ ನಿರ್ಣಾಯಕವಾಗುವ ಸಾಧ್ಯತೆಗಳಿವೆ.

650 ಭಾಷೆಗಳನ್ನು ಮಾತನಾಡುವ 83 ಕೋಟಿ ಮತದಾರರು 9,30,000 ಮತಗಟ್ಟೆಗಳಲ್ಲಿ ಮತ ಚಲಾಯಿಸುವ ಮಹತ್ವದ ರಾಜಕೀಯ ಪ್ರಕ್ರಿಯೆ ವಿಶ್ವದ ಪ್ರಜಾಪ್ರಭುತ್ವದ ವ್ಯವಸ್ಥೆಗಳಲ್ಲಿ ಅತಿ ದೊಡ್ಡ ಸಾಧನೆಯಾಗಿದ್ದರೂ, ನಮ್ಮ ಚುನಾವಣೆಗಳಲ್ಲಿ ಹಣ, ಅದೂ ಕಪ್ಪು ಹಣ, ಬಹುಮುಖ್ಯ ಕಪ್ಪು ಚುಕ್ಕೆಯಂತಿದೆ.

ಒಂದು ಪಕ್ಷ ಒಬ್ಬ ಅಭ್ಯರ್ಥಿ ಹಣ ಚೆಲ್ಲಿದಾಗ, ಇತರರೂ ಅದೇ ದಾರಿ ತುಳಿಯಬೇಕಾಗಿ ಎಲ್ಲರಲ್ಲೂ ಅದ್ದೂರಿಯಾಗಿ ಲೆಕ್ಕಕ್ಕೆ ಸಿಗದ ಕಪ್ಪು ಹಣದ ವ್ಯವಸ್ಥೆಯಾಗಿರಲೇ ಬೇಕಲ್ಲವೇ? ಮೋದಿ ಸರ್ಕಾರ ರೂ.500 ಮತ್ತು ರೂ.1,000 ನೋಟುಗಳನ್ನು ಅನಾಣ್ಯಿಕ ಹಣ ಮಾಡಿದ ನಂತರವೂ ಹಣ ಹಂಚಿಕೆಗೆ ಯಾವುದೇ ಅಡಚಣೆ ಆದಂತಿಲ್ಲ! ಮೇಲಾಗಿ, ವಿದೇಶದಲ್ಲಿ ನೆಲೆಸಿರುವ ಭಾರತೀಯರಿಂದ ಅಧಿಕೃತವಾಗಿ ವಂತಿಗೆ ಪಡೆಯುವ ಬಿ.ಜೆ.ಪಿ. ಯಂತಹ ಪಕ್ಷಕ್ಕೆ ಸುಗ್ಗಿಕಾಲವೇ ಸರಿ.

ಪಕ್ಷಗಳ ಚುನಾವಣಾ ಪ್ರಣಾಳಿಕೆ

ಮೇಲೆ ಹೇಳಿದ ಆಸೆ ಅಮಿಷಗಳನ್ನು ಅಭ್ಯರ್ಥಿಗಳು ಮತದಾರರ ಜೇಬಿಗಿಡುವ ಧೈರ್ಯಕ್ಕೆ ವೇದಿಕೆ ಎಂಬಂತೆ ಚುನಾವಣಾ ಪ್ರಣಾಳಿಕೆಗಳೇ ಸಾಧನವಾದವು. ಉದಾಹರಣೆಗೆ, ತಮಿಳುನಾಡಿನ ಡಿ.ಎಂ.ಕೆ. ಮತ್ತು ಎ.ಡಿ.ಎಂ.ಕೆ ಪಕ್ಷಗಳು 2006ರ ಚುನಾವಣೆಯಿಂದಲೇ ಕಲರ್ ಟಿ.ವಿ., ಫ್ಯಾನ್, ಲ್ಯಾಪ್‍ಟಾಪ್‍ಗಳನ್ನು ಉಡುಗೊರೆಯಾಗಿ ಕೊಡುವ ಆಶ್ವಾಸನೆ ಕೊಟ್ಟಿವೆ. ಇದು 1951ರ ಜನತಾ ಪ್ರಾತಿನಿಧ್ಯ ಕಾಯಿದೆಯ ಸೆಕ್ಷನ್ 123 ರ ಉಲ್ಲಂಘನೆ ಮಾತ್ರವಲ್ಲ, ಸಂವಿಧಾನದ ಮೌಲ್ಯಗಳಿಗೆ ವಿರೋಧವಾಗಿದ್ದು ಪ್ರಣಾಳಿಕೆಗಳಲ್ಲಿ ಈ ರೀತಿಯ ಆಶ್ವಾಸನೆಗಳನ್ನು ಕೊಡುವುದು ಕಾನೂನು ಬಾಹಿರವೆಂದು ಆದೇಶಿಸುವಂತೆ ಕೋರಿ ವಕೀಲರಾದ ಬಾಲಾಜಿಯವರು 2013ರಲ್ಲಿ ಸರ್ವೋಚ್ಚ ನ್ಯಾಯಾಲಯದಲ್ಲಿ ಖಟ್ಲೆ ಹೂಡಿದರು.

ಸರ್ವೋಚ್ಚ ನ್ಯಾಯಾಲಯ ಹೇಳಿದ್ದು: ಬಿಟ್ಟಿ ಕೊಡುಗೆಗಳು ಜನರನ್ನು ತೀವ್ರವಾಗಿ ಆಕರ್ಷಿಸುತ್ತವೆಂಬ ಸತ್ಯವನ್ನು ಅಲ್ಲಗಳೆಯಲಾಗದು ಮತ್ತು ನ್ಯಾಯಯುತವಾದ ಚುನಾವಣೆಯ ಬೇರುಗಳನ್ನು ಈ ರೀತಿಯ ಪ್ರಲೋಭನೆಗಳು ಅಲುಗಾಡಿಸುತ್ತವೆ. ಆದರೂ ಚುನಾವಣಾ ಸಂಬಂಧಿತ ಪ್ರಕ್ರಿಯೆಗಳನ್ನು ಮತ್ತು ಉಲ್ಲಂಘನೆಗಳನ್ನು ವಿಷದಪಡಿಸುವ 1951ರ ಕಾನೂನು ರಾಜಕೀಯ ಪಕ್ಷಗಳ ಪ್ರಣಾಳಿಕೆಗಳನ್ನು ನಿಯಂತ್ರಿಸುವುದಿಲ್ಲ. ಪರಿಚ್ಛೇದ 123, ಲಂಚ, ಅನಗತ್ಯ ಪ್ರಾಬಲ್ಯ, ಧಾರ್ಮಿಕ ಹಾಗೂ ಜಾತಿ ಹಿನ್ನೆಲೆಯ ಮನವಿಗಳು ಭ್ರಷ್ಟ ಸಂಪ್ರದಾಯ ಎನ್ನುವ ವ್ಯಾಖ್ಯಾನ ಹೊಂದಿದೆ. ಮೇಲೆ ಉಲ್ಲೇಖಿಸಿರುವ ವಸ್ತುಗಳನ್ನು ಕೊಡುವ ಆಶ್ವಾಸನೆ 123ರ ವ್ಯಾಪ್ತಿಯಲ್ಲಿಲ್ಲ. ಈ ಅನಿಷ್ಟ ಪದ್ಧತಿಯನ್ನು ಕೊನೆಗಾಣಿಸಲು ನೇರವಾಗಿ ಅನ್ವಯಿಸುವ ಕಾಯ್ದೆಯನ್ನು ರಚಿಸಬೇಕು ಮತ್ತು ಆವರೆಗೆ ರಾಜಕೀಯ ಪಕ್ಷಗಳನ್ನು ನಿಯಂತ್ರಿಸಲು ಪ್ರತ್ಯೇಕ ನಿಯಮಾವಳಿಗಳನ್ನು ರೂಪಿಸುವ ಅಗತ್ಯವನ್ನು ಚುನಾವಣಾ ಆಯೋಗಕ್ಕೆ ಆದೇಶದ ರೂಪದಲ್ಲಿ ತಿಳಿಸಲಾಯಿತು. ಅಂದರೆ ಆಯೋಗದ ಮಾದರಿ ನಿಯಮಗಳು ಪಕ್ಷಗಳು ನೀಡುವ ಅಳತೆ ಮೀರಿದ ವಾಗ್ದಾನಗಳ ಮೇಲೆ ಸ್ವನಿಯಂತ್ರಣ ಹೇರಿಕೊಳ್ಳಬೇಕೆಂದೂ, ಪ್ರಣಾಳಿಕೆಗಳಲ್ಲಿ ನೀಡುವ ಬರವಸೆಗಳಿಗೆ ಒದಗಿಸಬೇಕಾದ ಆರ್ಥಿಕ ಸಂಪನ್ಮೂಲ ಕ್ರೋಢೀಕರಿಸುವ ಬಗೆ ಹೇಗೆ ಎಂಬುದರ ಬಗ್ಗೆಯೂ ವಿವರಿಸಬೇಕೆಂದು ಸ್ಪಷ್ಟ ಸಲಹೆ ನೀಡಿದೆ. ಕಾನೂನು ಹೊರತಾಗಿ, ನೈತಿಕ ಮೌಲ್ಯ ಎನ್ನುವುದು ನಿಜವಾಗಿ ಈ ಭರವಸೆಗಳ ಮೂಲಧಾತುವಾಗಬೇಕಲ್ಲವೇ?

ನಂತರದ ದಿನಗಳಲ್ಲಿ ಚುನಾವಣಾ ಆಯೋಗ ತಮಿಳುನಾಡಿನ ಎರಡೂ ಪಕ್ಷಗಳಿಂದ ಆಶ್ವಾಸನೆಗಳಿಗೆ ಸಂಬಂಧಪಟ್ಟಂತೆ ಮೊಟ್ಟಮೊದಲ ಬಾರಿಗೆ ವಿವರಣೆ ಕೇಳಿದೆ. ಸರ್ವೋಚ್ಚ ನ್ಯಾಯಾಲಯದ ಸಲಹೆಯಂತೆ ಉಚಿತವಾಗಿ ಕೊಡುವ ವಸ್ತುಗಳಿಗೆ ಪೂರೈಸಬೇಕಾದ ಸಂಪನ್ಮೂಲವನ್ನು ಪ್ರಣಾಳಿಕೆಯಲ್ಲೇ ಉಲ್ಲೇಖಿಸಬೇಕು ಎಂದೂ ತಿಳಿಸಿದೆ. ಸೂಕ್ತ ನಿಯಮಾವಳಿಗಳ ಮೂಲಕ ಸರ್ವೋಚ್ಚ ನ್ಯಾಯಾಲಯದ ಸ್ಪಷ್ಟ ಸಲಹೆಯಿಂದ ಲಭ್ಯವಾಗುವ ಅಧಿಕಾರ ಚುನಾವಣಾ ಆಯೋಗಕ್ಕೆ ಸಿಗಲಿದೆಯೆಂದು ನನ್ನ ಅನಿಸಿಕೆ. ಆದರೂ ಸಧ್ಯದ ಪರಿಸ್ಥಿತಿಯಲ್ಲಿ ‘ಲಂಚ’ ವಿಚಾರಣಾರ್ಹ ಅಪರಾಧವಲ್ಲ. ಹಾಗಾಗಿ ‘ಮೊದಲ ಮಾಹಿತಿ ವರದಿ’ಯ ಆಧಾರದಲ್ಲಿ ಪೊಲೀಸರು ಕ್ರಮ ಜರುಗಿಸುವುದು ಸಾಧ್ಯವಿಲ್ಲ. ಅವರು ನ್ಯಾಯಾಲಯದ ಮುಂದೆ ವಿಷಯ ಮಂಡಿಸುವುದು ಅನಿವಾರ್ಯ. ಭಾರತೀಯ ದಂಡಸಂಹಿತೆಯಲ್ಲಿ ತಿದ್ದುಪಡಿ ಮಾಡುವುದು ಅವಶ್ಯಕ. ಆವರೆಗೂ, ವ್ಯಾಪಕ ಭ್ರಷ್ಟಾಚಾರದ ಮಾಹಿತಿ ಇದ್ದಲ್ಲಿ ಚುನಾವಣಾ ಆಯೋಗ ಆ ಚುನಾವಣೆಯನ್ನು ರದ್ದುಪಡಿಸಬಹುದಷ್ಟೆ.

2014ರ ಪಾರ್ಲಿಮೆಂಟ್ ಚುನಾವಣೆಯ ನಿಕಟಪೂರ್ವ ಅಬ್ಬರದ ಪ್ರಚಾರಗಳಲ್ಲಿ ಮತ್ತು ಅವರ ವರ್ಣರಂಜಿತ ಭಾಷೆಯನ್ನೊಳಗೊಂಡ ಪ್ರಣಾಳಿಕೆಯಲ್ಲಿ ಬಿ.ಜೆ.ಪಿ. ಭ್ರಷ್ಟಾಚಾರ ನಿಗ್ರಹಕ್ಕೆ ತನ್ನ ಮೊದಲ ಆದ್ಯತೆಯೆಂದು ಭೋರ್ಗರೆಯುವ ಧ್ವನಿ ಮತ್ತು ಮಾತುಗಳಲ್ಲಿ ಘೋಷಿಸಿತ್ತು. ಕನಿಷ್ಠ ನಮ್ಮ ಚುನಾವಣೆಗಳನ್ನು ಕಪ್ಪು ಹಣದಿಂದ ಮುಕ್ತಗೊಳಿಸಲು ಮೋದಿಯವರ ಸರ್ಕಾರ ಸಂಸತ್ತಿನಲ್ಲೇ ಸ್ಪಷ್ಟವಾದ ಕಾನೂನಿಗೆ ಒಪ್ಪಿಗೆ ಪಡೆಯುವ ಪ್ರಯತ್ನವನ್ನೇಕೆ ಮಾಡಲಿಲ್ಲ?

* ಲೇಖಕರು ಮಾಜಿ ಮಂತ್ರಿಗಳು, ಪ್ರಸ್ತುತ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ಉಪಾಧ್ಯಕ್ಷರು.

ಡಾ.ಟಿ.ಆರ್.ಚಂದ್ರಶೇಖರ

ಕರ್ನಾಟಕ ಸರ್ಕಾರದ ಹಣಕಾಸಿನ ನಿರ್ವಹಣೆ

July 2018

ರಂಗಸ್ವಾಮಿ ಮೂಕನಹಳ್ಳಿ

ಕೃಷಿ ಸಾಲ ಮನ್ನಾ: ಸಾಧ್ಯವೇನಣ್ಣಾ?

July 2018

ಚಂಸು ಪಾಟೀಲ

ರೈತರೇಕೆ ಸಾಲಗಾರರಾದರು?

July 2018

ಟಿ.ಎಂ.ಥಾಮಸ್ ಐಸಾಕ್ ಕೇರಳದ ಹಣಕಾಸು ಸಚಿವರು

ಎಲ್ಲಾ ರಾಜ್ಯಗಳ ಹಣಕಾಸು ಸಚಿವರಿಗೆ ಕೇರಳ ಹಣಕಾಸು ಸಚಿವರ ಬಹಿರಂಗ ಪತ್ರ

July 2018

ಅರ್ಜುನ್ ರಾಮೇಗೌಡ ನಾರಾಯಣಸ್ವಾಮಿ

ಆ ಬೆಂಕಿಯ ಕಿಡಿ ಹೊತ್ತಿಸುವವರು ಯಾರು?

June 2018

ಡಾ.ಎಸ್.ಬಿ.ಜೋಗುರ

ಪೂರಕ ವಾತಾವರಣದ ಕೊರತೆ

June 2018

ಬಿ.ಎನ್.ವಿಜಯಕುಮಾರ್

ಭ್ರಷ್ಟತೆಗೆ ರಾಜಕೀಯ ಪಕ್ಷಗಳೇ ಕಾರಣ

April 2018

ಬಿ. ಕೆ. ಚಂದ್ರಶೇಖರ್

ಪ್ರಜಾಪ್ರಭುತ್ವಕ್ಕೆ ಕಪ್ಪುಚುಕ್ಕೆ

April 2018

ಅಲೋಕ್ ಪ್ರಸನ್ನ, ಎಸ್. ಆರ್. ಹಿರೇಮಠ, ಬಿ. ಟಿ. ವೆಂಕಟೇಶ

ನ್ಯಾಯಾಂಗ

March 2018

ಎ. ನಾರಾಯಣ, ಬಸವರಾಜ ಬೊಮ್ಮಾಯಿ, ಮೋಟಮ್ಮ

ಶಾಸಕಾಂಗ

March 2018

ಬಿ. ಆರ್. ಜಯರಾಮರಾಜೇ ಅರಸ್, ಎನ್. ಹನುಮೇಗೌಡ,

ಕಾರ್ಯಂಗ

March 2018

ವಾಸುದೇವ ಶರ್ಮಾ ಎನ್. ವಿ.

ನಾಗರಿಕ ಸಮಾಜ

March 2018

ಈಶ್ವರ ದೈತೋಟ, ಡಾ. ಎ. ಎಸ್. ಬಾಲಸುಬ್ರಹ್ಮಣ್ಯ

ಮಾಧ್ಯಮ

March 2018

ಡಾ.ಅರವಿಂದ ಪಟೇಲ್ ಬಳ್ಳಾರಿ

ವೈದ್ಯಕ್ಷೇತ್ರದ ಉದ್ಧಾರಕ್ಕೆ ಮೂರು ಮದ್ದು!

February 2018

ಮಾಲತಿ ಪಟ್ಟಣಶೆಟ್ಟಿ ಧಾರವಾಡ

ಗುಣಮಟ್ಟಕ್ಕೆ ಮನ್ನಣೆ

February 2018

ಡಾ.ಶ್ರೀನಿವಾಸ ಕಕ್ಕಿಲ್ಲಾಯ ಮಂಗಳೂರು

ಸಕ್ಕರೆ ನಿಷೇಧಿಸಿ!

February 2018