2nd ಎಪ್ರಿಲ್ ೨೦೧೮

ಜಗಳೂರು ವಿಧಾನಸಭಾ ಕ್ಷೇತ್ರದ ಚುನಾವಣೆ
ಸಿರಿಗೆರೆ ಮಠದ ಹೊಸ ಪ್ರಯೋಗ

ಡಾ. ಲೋಕೇಶ ಅಗಸನಕಟ್ಟೆ

ಸ್ಪರ್ಧೆಗಿಳಿಯಲಿರುವ ಇಬ್ಬರು ಅಭ್ಯರ್ಥಿಗಳೊಂದಿಗಿನ ಸಂವಾದದ ಫಲವಾಗಿ ‘ಚುನಾವಣೆ ಶುದ್ಧೀಕರಣ’ ಪ್ರಕ್ರಿಯೆಗೆ ಸಿರಿಗೆರೆ ಮಠದ ಸ್ವಾಮೀಜಿ ಮುಂದಾಗಿದ್ದಾರೆ. ಇದು ಕರ್ನಾಟಕದಲ್ಲಿ ಮಾತ್ರವಲ್ಲ. ಭಾರತೀಯ ರಾಜಕಾರಣದಲ್ಲೇ ಒಂದು ಹೊಸ ಅಧ್ಯಾಯ.

ಜಾರ್ಜ್ ಆರ್ವೆಲ್ ‘1984’ ಎಂಬ ಊಹಾತ್ಮಕ ಕಾದಂಬರಿಯನ್ನು ಬರೆದ ಹಾಗೆ ಕಾದಂಬರಿಕಾರರಾದ ಬಿ.ಎಲ್.ವೇಣು ‘ಚುನಾವಣೆಗೆ ನಿಂತ ಮಠಾಧೀಶರು’ ಎಂಬ ವೈನೋದಿಕವನ್ನು ಕಳೆದ ಹತ್ತು ವರ್ಷದ ಕೆಳಗೆ ಬರೆದಿದ್ದರು. ನೇರ ರಾಜಕೀಯ ಪ್ರವೇಶಿಸಿದ ಧರ್ಮ ಏನೆಲ್ಲಾ ಆವಾಂತರಗಳಿಗೆ ಕಾರಣವಾದೀತೆಂಬ ಪ್ರಮೇಯವನ್ನು ಅವರು ಅದರಲ್ಲಿ ಮಂಡಿಸಿದ್ದರು. ಇದರ ಬೆನ್ನಲ್ಲೇ ಉಮಾಭಾರತಿ, ಆದಿತ್ಯನಾಥರ ರಂಗಪ್ರವೇಶವೂ ಆಗಿದೆ. ಕರ್ನಾಟಕದಲ್ಲಿ ಹಲವರು ರಂಗಪ್ರವೇಶಕ್ಕೆ ನೇಪಥ್ಯದಲ್ಲಿ ಕಾದಿದ್ದಾರೆ. ರಾಜಕೀಯ ಶಕ್ತಿಗಳ ನಿಯಂತ್ರಕರಾಗಿದ್ದ ಮಠಾಧೀಶರು ಈಗ ತಾವೇ ಪಾತ್ರಗಳನ್ನು ಅದಲು ಬದಲು ಮಾಡಿಕೊಳ್ಳುವ ಉತ್ಸಾಹದಲ್ಲಿದ್ದಾರೆ. ಇದಕ್ಕೆ ಭಿನ್ನವೆಂಬಂತೆ ರಾಜಕೀಯ ಶುದ್ಧೀಕರಣಕ್ಕೆ ಹೊಸ ಪ್ರಯೋಗವೊಂದನ್ನು ನಡೆಸುವ ಉತ್ಸಾಹದಲ್ಲಿ ಕರ್ನಾಟಕದ ಇಬ್ಬರು ಮಠಾಧೀಶರು ಕಳೆದ ಒಂದು ತಿಂಗಳಿಂದ ಚರ್ಚೆಗೆ ಗ್ರಾಸವಾಗುತ್ತಿದ್ದಾರೆ. ಈಗ ಬರಲಿರುವ ವಿಧಾನಸಭಾ ಚುನಾವಣೆಯಲ್ಲಿ ಈ ಪ್ರಯೋಗ ನಡೆಸುವ ಮುನ್ನ ಕ್ಷೇತ್ರದ ಅಧ್ಯಯನ, ಅಲ್ಲಿರುವ ಜಾತಿವಾರು ಮತಗಳ ಸಂಖ್ಯೆ ಹಾಗೂ ಅಲ್ಲಿ ಈಗಾಗಲೇ ಶಾಸಕರಾಗಿದ್ದು, ಈಗ ಮತ್ತೆ ಸ್ಪರ್ಧೆಗಿಳಿಯಲಿರುವ ಇಬ್ಬರು ಅಭ್ಯರ್ಥಿಗಳೊಂದಿಗಿನ ಸಂವಾದದ ಫಲವಾಗಿ ‘ರಾಜಕೀಯ ಶುದ್ಧೀಕರಣ’ ಪ್ರಕ್ರಿಯೆಗೆ ಅವರು ಮುಂದಾಗಿದ್ದಾರೆ. ಇದು ಕರ್ನಾಟಕದಲ್ಲಿ ಮಾತ್ರವಲ್ಲ ಭಾರತೀಯ ರಾಜಕಾರಣದಲ್ಲೇ ಒಂದು ಹೊಸ ಅಧ್ಯಾಯದ ಮುನ್ನುಡಿ.

ಸಿರಿಗೆರೆಯ ತರಳಬಾಳು ಬೃಹನ್ಮಠದ ಡಾ. ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳೇ ಈ ಪ್ರಯೋಗದ ಹರಿಕಾರರು. ಅವರೊಂದಿಗೆ ಕೈಜೋಡಿಸಿ ನಿಂತಿರುವವರು ಚಿಂತಕ ಗುರುಗಳಾದ ಶ್ರೀಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಗಳು. ಡಾ.ಶಿವಮೂರ್ತಿ ಸ್ವಾಮೀಜಿ ಇಂಥಾ ಹಲವು ಪ್ರಯೋಗಗಳನ್ನು ಈ ಮುಂಚಿನಿಂದಲೂ ನಡೆಸಿದ್ದಾರೆ. ಅದಕ್ಕೂ ಮುನ್ನ ಸಕ್ರಿಯ ರಾಜಕಾರಣದಿಂದ ಬಹುದೂರ ನಿಂತು ಎಲ್ಲರನ್ನೂ ಹರಸಿ ಕಳಿಸುವ ಪ್ರಯತ್ನವನ್ನು ಮಾಡಿದ್ದೂ ಉಂಟು. ಮಠದ ಹಿಂದಿನ ಲಿಂಗೈಕ್ಯ ಶ್ರೀಗಳು ನೇರವಾಗಿ ರಾಜಕೀಯದಲ್ಲಿ ಸಕ್ರಿಯವಾಗಿಯೇ ಪಾಲ್ಗೊಂಡು ಚುನಾವಣಾ ಅಖಾಡಕ್ಕೆ ಇಳಿದದ್ದೂ ಉಂಟು. ಎಸ್.ನಿಜಲಿಂಗಪ್ಪನವರ ವಿರುದ್ಧ ಸಾಮಾನ್ಯ ಅಭ್ಯರ್ಥಿಯನ್ನು ನಿಲ್ಲಿಸಿ ಆತನನ್ನು ಗೆಲ್ಲಿಸಿದ್ದು ಈಗ ಚರಿತ್ರೆಯ ಮಾತು.

ಡಾ.ಶಿವಮೂರ್ತಿ ಶಿವಾಚಾರ್ಯರು ಹಿಂದೊಮ್ಮೆ 1994ರ ಸಾರ್ವಜನಿಕ ಚುನಾವಣೆಯಲ್ಲಿ ‘ನಮ್ಮ ಅಭ್ಯರ್ಥಿ—ನಮ್ಮ ಮತ’ದ ಪರಿಕಲ್ಪನೆಯಲ್ಲಿ ಚಿತ್ರದುರ್ಗ ಹಾಗೂ ದಾವಣಗೆರೆ ಜಿಲ್ಲೆಯ ಆಯ್ದ 5 ಕ್ಷೇತ್ರಗಳಲ್ಲಿ ತಾವೇ ಆಯ್ದ ಪಕ್ಷಾತೀತ, ಜಾತ್ಯಾತೀತ ಉಮೇದುವಾರರನ್ನು ನಿಲ್ಲಿಸಿದ್ದರು. ಉಮೇದುವಾರರಿಗೆ ಆಗ ಹಾಕಿದ್ದ ಷರತ್ತು ಒಂದೇ, ‘ನಾವು ಸಮರ್ಥವಾಗಿ ಕಾರ್ಯ ಮಾಡುತ್ತಿಲ್ಲವೆಂಬುದು ಕ್ಷೇತ್ರದ ಮತದಾರರಿಗೆ, ಪೂಜ್ಯರಿಗೆ ಅನ್ನಿಸಿದಾಗ ರಾಜಿನಾಮೆ ನೀಡುವುದು’ ಎಂಬುದು. ಈ ಷರತ್ತಿಗೆ ಎಲ್ಲಾ ಐದು ಅಭ್ಯರ್ಥಿಗಳೂ ಒಪ್ಪಿದ್ದರು. ಎಚ್.ಆಂಜನೇಯ (ಭರಮಸಾಗರ ಕ್ಷೇತ್ರ) ಅವರನ್ನು ಹೊರತು ಪಡಿಸಿ ನಾಲ್ಕು ಅಭ್ಯರ್ಥಿಗಳು ಜಯ ಸಾಧಿಸಿದ್ದರು. ಮುಂದೆ ಅವರು ಈ ಧಾರ್ಮಿಕ ಅಂಕುಶದ ಎಚ್ಚರದ ಪ್ರಜ್ಞೆಯಲ್ಲೇ ಕೆಲಸ ಮಾಡಿದರೆಂಬುದು ಸರ್ವವಿಧಿತ ಸಂಗತಿ. `ಅಭಿಮನ್ಯು ಒಬ್ಬ ಮಾತ್ರ ಗೆಲ್ಲಲಿಲ್ಲ’ ಎಂದು ಆಂಜನೇಯರ ಸೋಲಿಗೆ ಸ್ವಾಮೀಜಿ ವಿಷಾದ ಬೆರೆತ ಹಾಸ್ಯದಲ್ಲಿ ಹಲವಾರು ಬಾರಿ ಅಂದದ್ದೂ ಉಂಟು.

ಇಂಥಾ ಪ್ರಯೋಗದ ನಂತರ ಸಕ್ರಿಯ ರಾಜಕಾರಣದಿಂದಲೇ ದೂರ ನಿಂತು ತಮ್ಮ ಧಾರ್ಮಿಕ ಹಾಗೂ ಸಾಮಾಜಿಕ ಚಟುವಟಿಕೆಗಳಲ್ಲಿ ನಿರತರಾಗಿದ್ದ ಸ್ವಾಮೀಜಿಗೆ ಈ ಬಾರಿ ಜನವರಿ ತಿಂಗಳಿನಲ್ಲಿ ಜಗಳೂರಿನಲ್ಲಿ ನಡೆದ ತರಳಬಾಳು ಹುಣ್ಣಿಮೆಯ 9 ದಿನದ ಕಾರ್ಯಕ್ರಮ ನೋಡಿದ ಮೇಲೆ, ಅದರಲ್ಲೂ 8ನೆಯ ಹಾಗೂ 9ನೆಯ ದಿನದ ಕಾರ್ಯಕ್ರಮವನ್ನು ಅವಲೋಕಿಸಿದ ಮೇಲೆ ‘ರಾಜಕೀಯ ಶುದ್ಧೀಕರಣ’ ಕ್ರಿಯೆಗೆ ಸಂಕಲ್ಪ ಮಾಡಿದಂತೆ ತೋರುತ್ತದೆ. ಪೀಠಾರೋಹಣದ ಮುನ್ನಾದಿನ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪನವರೂ, ನಂತರದ ದಿನ ಮುಖ್ಯಮಂತ್ರಿ ಸಿದ್ದರಾಮಯ್ಯನವರೂ ಭಾಗವಹಿಸಿದ್ದ ಕಾರ್ಯಕ್ರಮದಲ್ಲಿ ತ್ವೇಷದ, ಜಿದ್ದಾಜಿದ್ದಿನ, ಅಪಮಾನಗೊಳಿಸುವಂತಹ ಹಂತಕ್ಕೆ ಭಕ್ತಾಧಿಗಳು ತಲುಪಿದಾಗಲೇ ಜನರು ದಾರಿ ತಪ್ಪಿದ್ದಾರೆಂದು ಅವರಿಗೆ ಅನ್ನಿಸಿದಂತೆ ತೋರುತ್ತದೆ. ಸಿದ್ಧರಾಮಯ್ಯನವರು ಮಾತಿಗೆ ಆರಂಭಿಸುತ್ತಿದ್ದಂತೆ ಜನಸ್ತೋಮ ‘ಮೋದಿ... ಮೋದಿ’ ಎಂದು ಕೂಗಿ ಅವರ ಭಾಷಣಕ್ಕೆ ಅಡ್ಡಿಪಡಿಸಿದಾಗ ಸ್ವಯಂ ಸ್ವಾಮೀಜಿ ಮಧ್ಯೆ ಪ್ರವೇಶಿಸಿ ಸಭ್ಯತೆಯ ಪಾಠ ಹೇಳಿದ್ದುಂಟು. ಜನರು ಉನ್ಮಾದಕ್ಕೆ, ಭಾವಾವೇಶಕ್ಕೆ ಒಳಗಾಗಿದ್ದಾರೆಂದೂ ತಿಳಿಯಿತು. ಕಾರ್ಲಮಾಕ್ರ್ಸ್ ಧರ್ಮವನ್ನು ‘ಅಫೀಮು’ ಎಂದು ಕರೆದ. ಆದರೆ ಈಗ ‘ರಾಜಕೀಯವೇ’ ಅಫೀಮಾಗಿದೆ. ಅದರ ಹಿಂದೆ ಹಣ, ಹೆಂಡ ಹಾಗೂ ಜಾತಿ ರಾಜಕಾರಣ ಕೆಲಸ ಮಾಡುತ್ತಿದೆ ಎಂಬುದನ್ನು ಅರಿತ ಗುರುಗಳು ಇವುಗಳನ್ನು ನಿಯಂತ್ರಿಸುವ ಮುಖೇನ ಚುನಾವಣೆಯಲ್ಲಿ ಶುದ್ಧೀಕರಣ ತರಬಹುದೆಂದು ಆಲೋಚಿಸಿದರು. ಅವರ ಆಲೋಚನೆ ಫಲ ಕೊಡಲು ಸಂಭವನೀಯ ಅಭ್ಯರ್ಥಿಗಳೂ ಕ್ಷೇತ್ರದ ಮತದಾರರೂ ಸಹಕರಿಸಬೇಕಿತ್ತು. ಅದಕ್ಕೆ ಚಾಲನೆ ನೀಡಿದಾಗ ಎರಡೂ ಕಡೆ ಸಹಸ್ವಂದನ ದೊರೆಯಿತು.

ಚುನಾವಣೆಗಳು ಇಂದು ಅಪವಿತ್ರಗೊಳ್ಳಲು ಅಭ್ಯರ್ಥಿ ಹಾಗೂ ಮತದಾರರಿಬ್ಬರೂ ಕಾರಣ. ಹಾಗೆಯೇ ಪಕ್ಷವೂ ಕೂಡ. ಈ ಮೂರರ ಅಪವಿತ್ರ ಮೈತ್ರಿಯೇ ಚುನಾವಣೆ, ಅಧಿಕಾರ, ಸ್ವೇಚ್ಛಾಚಾರ. ಇದನ್ನು ನಿಯಂತ್ರಿಸುವ ವಿಧಾನವೆಂದರೆ ಮೂರು ಶಕ್ತಿಗಳು ಪರಸ್ಪರ ಮುಖಾಮುಖಿಯಾಗದಿರುವುದು. ಅಭ್ಯರ್ಥಿಯ ಸಾಮಥ್ರ್ಯವೇ ಅಳತೆಗೋಲಾಗಬೇಕು. ಜಾತಿಯ ಪ್ರಶ್ನೆ ಇಲ್ಲ. ಜಗಳೂರು ಹೇಳಿಕೇಳಿ ಮೀಸಲು ಕ್ಷೇತ್ರ. ತಮ್ಮ ಆತ್ಮಸಾಕ್ಷಿಯೇ ಇಲ್ಲಿ ಅಳತೆಗೋಲಾಗಬೇಕು, ಅಭ್ಯರ್ಥಿಯ ಮಾನದಂಡವಾಗಬೇಕು. ಇದರ ಪ್ರಕಾರ ಮತದಾನ ಮುಗಿಯುವವರೆಗೂ ಅಭ್ಯರ್ಥಿಯು ಕ್ಷೇತ್ರದಲ್ಲಿ ಕಾಲಿಡದೆ ಸಿರಿಗೆರೆ ಮಠದಲ್ಲೇ ವಾಸ್ತವ್ಯ ಮಾಡಬೇಕು. ಪಕ್ಷದ ಯಾವ ಮುಖಂಡರೂ ಪ್ರಚಾರಕ್ಕೆ ಇಳಿಯ ಕೂಡದು. ತಮ್ಮ ಪರ ಉಳಿದವರು ಹಣ, ಸೀರೆ ಇತ್ಯಾದಿ ಹಂಚಕೂಡದು. ಇಬ್ಬರೂ ಸ್ವಾಮಿಗಳು ಹೋಬಳಿ ಮಟ್ಟದಲ್ಲಿ ಮತದಾರರ ಸಭೆ ಸೇರಿಸಿ ಈ ಬಗ್ಗೆ ಚರ್ಚಿಸುವುದು. ಅವರು ಪಾರದರ್ಶಕವಾಗಿಯೇ ಜನರ ಮನ ಒಲಿಸುವ ನಿಷ್ಪಕ್ಷಪಾತವಾಗಿ ಮತದಾನ ನೀಡುವಂತೆ ಓರಿಯಂಟೇಷನ್ ಮಾಡುವುದು. ಜನರ ಸಾತ್ವಿಕ ಶಕ್ತಿಯೇ ಇದೆಲ್ಲದರ ಕಾವಲುಗಾರ.

ನಾವು ಬದ್ಧ

ಎಷ್ಟು ಸುಲಭ ಇದೆಯೋ ಅಷ್ಟೇ ಕಷ್ಟವೂ ಇದೆ. ಎರಡನೆಯ ಹಾಗೂ ಮೂರನೆಯ ಹಂತದ ಕಾರ್ಯಕರ್ತರ ಮನ ಒಲಿಸುವ ಸವಾಲೂ ನಮ್ಮ ಮುಂದಿದೆ. ಶೇಕಡ 75ರಷ್ಟು ಜನಮನ್ನಣೆ ದೊರೆತರೆ ಈ ಪ್ರಯೋಗ ಯಶಸ್ವಿಯಾದಂತೆ. ಆ ಹಾದಿಯಲ್ಲಿದ್ದೇವೆ. ಶ್ರೀಗಳ ಸಂಕಲ್ಪಶಕ್ತಿಗೆ ನಾವು ಸದಾ ಬದ್ಧರಾಗಿದ್ದೇವೆ.

ಎಚ್.ಪಿ.ರಾಜೇಶ್, ಹಾಲಿ ಶಾಸಕರು, ಜಗಳೂರು.

ನಾವು ಸಿದ್ಧ

ನಾವಿಬ್ಬರೂ ಗುರುಗಳ ಮಾತಿನಂತೆ ಮುಕ್ತ ಚುನಾವಣೆಗೆ ಸಿದ್ಧರಿದ್ದೇವೆ. ನಾನು ಎರಡು ಬಾರಿ ಶಾಸಕನಾಗಿ ಮಾಡಿರುವ ಕಾರ್ಯಗಳು ಹಾಗೂ ರಾಜೇಶ್ ಒಂದು ಬಾರಿ ಆಯ್ಕೆಯಾಗಿ ಮಾಡಿರುವ ಕೆಲಸಗಳೇ ಇಲ್ಲಿ ಮಾನದಂಡ. ದುಡ್ಡು ದುರ್ವಿನಿಯೋಗವಾಗದಂತೆ, ಅಭ್ಯರ್ಥಿಗಳು ಮತದಾರರನ್ನು ಭ್ರಷ್ಟರನ್ನಾಗಿಸದಂತೆ ತಡೆಯಲು ಇದು ಉತ್ತಮ ಮಾರ್ಗ. ಫಲಿತಾಂಶಕ್ಕೆ ಕಾಯುತ್ತಿದ್ದೇವೆ.

ಎಸ್.ವಿ. ರಾಮಚಂದ್ರಪ್ಪ, ಮಾಜಿ ಶಾಸಕರು, ಜಗಳೂರು.

ಮೀಸಲು ಕ್ಷೇತ್ರವಾದ ಜಗಳೂರು ಕ್ಷೇತ್ರದಲ್ಲಿ ಸಾಧು ಲಿಂಗಾಯತ ಮತದಾರರೇ ಹೆಚ್ಚಿನ ಸಂಖ್ಯೆಯಲ್ಲಿರುವುದು ಹಾಗೂ ಅವರನ್ನು ಈ ಪ್ರಯೋಗದಲ್ಲಿ ಸಕ್ರಿಯವಾಗಿ ಹಾಗೂ ಆತ್ಮಸಾಕ್ಷಿಯಾಗಿ ಪಾಲ್ಗೊಳ್ಳುವಂತೆ ಪ್ರೇರೇಪಿಸುವುದು ಸಿರಿಗೆರೆ ಸ್ವಾಮಿಗಳ ಆಶಯವಾಗಿದೆ. ಹಾಗೆಯೇ ಕ್ಷೇತ್ರದಲ್ಲಿ ನಾಯಕ, ಕುರುಬ, ದಲಿತ, ಬೋವಿ ಹೀಗೆ ಹಲವಾರು ಮತಗಳು ಇದ್ದು ಅವರೆಲ್ಲರನ್ನೂ ಈ ಕಾರ್ಯಕ್ಕೆ ಸಜ್ಜುಗೊಳಿಸುವ ಅವರ ಅಭಿಮತ ತಿಳಿಯುವ ಹಾಗೂ ತಮ್ಮ ಕಾರ್ಯದ ಹಿಂದಿರುವ ಸದುದ್ದೇಶವನ್ನು ವಿವರಿಸಲು ಎಲ್ಲಾ ಜಾತಿಯ ಮಠಾಧೀಶರನ್ನು ಸೇರಿಸುವ ಕೆಲಸವೂ ಚಾಲ್ತಿಯಲ್ಲಿದೆ. ಏಪ್ರಿಲ್ ಎರಡನೆಯ ತಾರೀಖು ಜಗಳೂರಿನಲ್ಲಿ ಸರ್ವಜನಾಂಗದ ಮತದಾರರೂ ಒಂದೆಡೆ ಸೇರುವ ಒಂದು ಅಪರೂಪದ ಕಾರ್ಯಕ್ರಮವೂ ಅಲ್ಲಿ ನಡೆಯಲಿದೆ. ಎಲ್ಲರ ಸಹಕಾರ ಸಹಮತದ ಭರವಸೆಯು ಸ್ವಾಮೀಜಿಗಳಲ್ಲಿ ಹಾಗೆಯೇ ಅಭ್ಯರ್ಥಿಗಳಲ್ಲೂ ಇದೆ.

ಈ ಕಾರ್ಯಕ್ರಮಕ್ಕೂ ಮುನ್ನ ಜಗಳೂರಿನ ತಾಲ್ಲೂಕು ಪಂಚಾಯ್ತಿ, ಎಪಿಎಂಸಿ, ಎತರೆ ಸಂಘಸಂಸ್ಥೆಗಳ ಅಧ್ಯಕ್ಷರು, ಪದಾಧಿಕಾರಿಗಳು ಹಾಗೂ ಸದಸ್ಯರೂ ಸೇರಿ ಸುಮಾರು 1000 ಜನರ ಅಭಿಪ್ರಾಯ ಸಂಗ್ರಹ ಸಭೆಯನ್ನು ಈ ತಿಂಗಳ 21 ರಂದು ಸಿರಿಗೆರೆಯಲ್ಲಿ ನಡೆಸಲಾಗುತ್ತದೆ. ಜನರ ಅಭಿಪ್ರಾಯದ ಜೊತೆಗೆ ಪಕ್ಷಗಳ ಎರಡು, ಮೂರನೆಯ ಹಂತದ ಕಾರ್ಯಕರ್ತರ ಅಭಿಪ್ರಾಯವೂ ಇಲ್ಲಿ ಮುಖ್ಯವಾಗಲಿದೆ. ಈ ತಿಂಗಳ 31 ರೊಳಗೆ ಎಲ್ಲಾ ಪಕ್ಷದ ಮುಖಂಡರೂ ಕ್ಷೇತ್ರದಲ್ಲಿ ಪ್ರಚಾರ ಮಾಡಲು ಅವಕಾಶ ನೀಡಲಾಗಿದೆ. ಆನಂತರ ಮಾಡಕೂಡದೆಂಬುದು ಈ ಪರಿಕಲ್ಪನೆಯ ಷರತ್ತುಗಳಲ್ಲಿ ಒಂದು.

ಅಪರೂಪದ ಯೋಜನೆಗೆ ಎಲ್ಲರೂ ಒಪ್ಪಿದ್ದಾರೆ. ಮುಖ್ಯವಾಗಿ ಅಭ್ಯರ್ಥಿಗಳು ಹಣದ ಹೊಳೆ ಹರಿಸಿದರೂ ಗೆಲುವು ಖಾತ್ರಿ ಇಲ್ಲ ಎಂಬುದು ಈಗಾಗಲೇ ಇಬ್ಬರು ಅಭ್ಯರ್ಥಿಗಳಿಗೆ ಮನದಟ್ಟಾಗಿದೆ. ‘ಇಬ್ಬರಲ್ಲಿ ಯಾರಾದರೂ ಒಬ್ಬರು ಬಂದರೂ ಸೈ’ ಎಂದು ನಿರ್ಧರಿಸಿದ್ದಾರೆ. ಮಠಾಧೀಶರ ಸಮ್ಮುಖದಲ್ಲಿ ಇಬ್ಬರೂ ಹಾರ ಬದಲಾಯಿಸಿಕೊಂಡಿದ್ದಾರೆ. ಪರಸ್ಪರ ಮಾತಾಡಿಕೊಂಡಿದ್ದಾರೆ. ಆತ್ಮೀಯತೆಯ ವಾತಾವರಣ ಅಲ್ಲಿ ಮೂಡಿದೆ. ಅಭ್ಯರ್ಥಿಗಳು ಮತದಾರರ ನಡುವೆ ಅಪರೂಪದ ಬಾಂಧವ್ಯ ರೂಪುಗೊಳ್ಳುತ್ತಿದೆ. ಚನ್ನಗಿರಿ ಕ್ಷೇತ್ರದಲ್ಲೂ ಅಭ್ಯರ್ಥಿಗಳು ಹೀಗೇ ಮುಂದೆ ಬಂದಿದ್ದಾರೆ. ಶ್ರೀಗಳ ಭಕ್ತರೇ ಪರಸ್ಪರ ಮುಖಾಮುಖಿಯಾಗುವ ದಾವಣಗೆರೆಯ ಎರಡು ಕ್ಷೇತ್ರಗಳು ಮತ್ತು ಮಾಯಕೊಂಡ ಕ್ಷೇತ್ರ ಚುನಾವಣಾ ದಿನಾಂಕ ಪ್ರಕಟಗೊಳ್ಳುವುದರೊಳಗಾಗಿ ಈ ಪ್ರಯೋಗಕ್ಕೆ ಮುಂದೆ ಬಂದಾವು. ಸತ್ಯ ಶುದ್ಧ ಚುನಾವಣೆಗೆ ಒಂದು ಹೊಸ ಹೆಜ್ಜೆ ಇಡಲಾಗಿದೆ. ನೇತ್ಯಾತ್ಮಕ ಹಾಗೂ ಸಿನಿಕತನದ ಮಾತುಗಳೂ ಹರಿದಾಡುತ್ತಿವೆ. ಅವುಗಳನ್ನು ಪಕ್ಕಕ್ಕಿರಿಸಿ ಈ ಪ್ರಯೋಗದ ಫಲಿತವನ್ನು ನಿರೀಕ್ಷಿಸುವುದೇ ನಮಗಿರುವ ಆಯ್ಕೆ.

ಡಾ.ಟಿ.ಆರ್.ಚಂದ್ರಶೇಖರ

ಕರ್ನಾಟಕ ಸರ್ಕಾರದ ಹಣಕಾಸಿನ ನಿರ್ವಹಣೆ

ಜುಲೈ ೨೦೧೮

ರಂಗಸ್ವಾಮಿ ಮೂಕನಹಳ್ಳಿ

ಕೃಷಿ ಸಾಲ ಮನ್ನಾ: ಸಾಧ್ಯವೇನಣ್ಣಾ?

ಜುಲೈ ೨೦೧೮

ಚಂಸು ಪಾಟೀಲ

ರೈತರೇಕೆ ಸಾಲಗಾರರಾದರು?

ಜುಲೈ ೨೦೧೮

ಟಿ.ಎಂ.ಥಾಮಸ್ ಐಸಾಕ್ ಕೇರಳದ ಹಣಕಾಸು ಸಚಿವರು

ಎಲ್ಲಾ ರಾಜ್ಯಗಳ ಹಣಕಾಸು ಸಚಿವರಿಗೆ ಕೇರಳ ಹಣಕಾಸು ಸಚಿವರ ಬಹಿರಂಗ ಪತ್ರ

ಜುಲೈ ೨೦೧೮

ಅರ್ಜುನ್ ರಾಮೇಗೌಡ ನಾರಾಯಣಸ್ವಾಮಿ

ಆ ಬೆಂಕಿಯ ಕಿಡಿ ಹೊತ್ತಿಸುವವರು ಯಾರು?

ಜೂನ್ ೨೦೧೮

ಡಾ.ಎಸ್.ಬಿ.ಜೋಗುರ

ಪೂರಕ ವಾತಾವರಣದ ಕೊರತೆ

ಜೂನ್ ೨೦೧೮

ಡಾ.ಎಸ್.ಬಿ.ಜೋಗುರ

ಹಾರ್ವರ್ಡ್ ಗುಣಮಟ್ಟ: ಕೈಗೂಡದ ಕನಸೇ?

ಜೂನ್ ೨೦೧೮

ಚುನಾವಣೆ: ಯಾರ ಹೊಣೆ?

ಎಪ್ರಿಲ್ ೨೦೧೮

ಡಾ.ಬಿ.ಎಲ್.ಶಂಕರ್

ಆಡಿದ ಮಾತಿಗೂ ಆತ್ಮದ ಮಾತಿಗೂ ಅಜಗಜಾಂತರ!

ಎಪ್ರಿಲ್ ೨೦೧೮

ಹರೀಶ್ ನರಸಪ್ಪ

ಚುನಾವಣಾ ಆಯೋಗದ ಮಿತಿ ಮತ್ತು ವೈಫಲ್ಯ

ಎಪ್ರಿಲ್ ೨೦೧೮

ಬಿ.ಎನ್.ವಿಜಯಕುಮಾರ್

ಭ್ರಷ್ಟತೆಗೆ ರಾಜಕೀಯ ಪಕ್ಷಗಳೇ ಕಾರಣ

ಎಪ್ರಿಲ್ ೨೦೧೮

ಎ.ಟಿ.ರಾಮಸ್ವಾಮಿ

ಭ್ರಷ್ಟಾಚಾರಿಗಳು ವೇಶ್ಯೆಯರಿಗಿಂತಲೂ ಕೀಳು

ಎಪ್ರಿಲ್ ೨೦೧೮

ಬಿ. ಕೆ. ಚಂದ್ರಶೇಖರ್

ಪ್ರಜಾಪ್ರಭುತ್ವಕ್ಕೆ ಕಪ್ಪುಚುಕ್ಕೆ

ಎಪ್ರಿಲ್ ೨೦೧೮

ಅಲೋಕ್ ಪ್ರಸನ್ನ, ಎಸ್. ಆರ್. ಹಿರೇಮಠ, ಬಿ. ಟಿ. ವೆಂಕಟೇಶ

ನ್ಯಾಯಾಂಗ

ಮಾರ್ಚ್ ೨೦೧೮

ಎ. ನಾರಾಯಣ, ಬಸವರಾಜ ಬೊಮ್ಮಾಯಿ, ಮೋಟಮ್ಮ

ಶಾಸಕಾಂಗ

ಮಾರ್ಚ್ ೨೦೧೮

ಬಿ. ಆರ್. ಜಯರಾಮರಾಜೇ ಅರಸ್, ಎನ್. ಹನುಮೇಗೌಡ,

ಕಾರ್ಯಂಗ

ಮಾರ್ಚ್ ೨೦೧೮

ವಾಸುದೇವ ಶರ್ಮಾ ಎನ್. ವಿ.

ನಾಗರಿಕ ಸಮಾಜ

ಮಾರ್ಚ್ ೨೦೧೮

ಈಶ್ವರ ದೈತೋಟ, ಡಾ. ಎ. ಎಸ್. ಬಾಲಸುಬ್ರಹ್ಮಣ್ಯ

ಮಾಧ್ಯಮ

ಮಾರ್ಚ್ ೨೦೧೮

ಮುಖ್ಯಚರ್ಚೆಗೆ ಪ್ರವೇಶ

ಫೆಬ್ರವರಿ ೨೦೧೮

ಡಾ.ಅರವಿಂದ ಪಟೇಲ್ ಬಳ್ಳಾರಿ

ವೈದ್ಯಕ್ಷೇತ್ರದ ಉದ್ಧಾರಕ್ಕೆ ಮೂರು ಮದ್ದು!

ಫೆಬ್ರವರಿ ೨೦೧೮

ಮಾಲತಿ ಪಟ್ಟಣಶೆಟ್ಟಿ ಧಾರವಾಡ

ಗುಣಮಟ್ಟಕ್ಕೆ ಮನ್ನಣೆ

ಫೆಬ್ರವರಿ ೨೦೧೮

ಡಾ.ಶ್ರೀನಿವಾಸ ಕಕ್ಕಿಲ್ಲಾಯ ಮಂಗಳೂರು

ಸಕ್ಕರೆ ನಿಷೇಧಿಸಿ!

ಫೆಬ್ರವರಿ ೨೦೧೮