2nd ಎಪ್ರಿಲ್ ೨೦೧೮

ಚುನಾವಣಾ ಆಯೋಗದ ಮಿತಿ ಮತ್ತು ವೈಫಲ್ಯ

ಹರೀಶ್ ನರಸಪ್ಪ

ಸಾಮಾಜಿಕ ಅಧ್ಯಯನ, ಸಮೀಕ್ಷೆ ಇತ್ಯಾದಿ ಚಟುವಟಿಕೆಗಳ ಮೂಲಕ ದೇಶದಲ್ಲಿ ವಿವಿಧ ಸರಕಾರಗಳು ಉತ್ತಮ ಆಡಳಿತ ನೀಡಲು ಮತ್ತು ಜನತೆಗೆ ಉತ್ತರದಾಯಿಯಾಗಿರುವಂತೆ ಉತ್ತೇಜಿಸುವ ಸ್ವಯಂ ಸೇವಾ ಸಂಸ್ಥೆಯೇ ದಕ್ಷ. ಇದರಲ್ಲಿ ಪ್ರಾಧ್ಯಾಪಕರು, ವಕೀಲರು ಸೇರಿದಂತೆ ವಿವಿಧ ಕ್ಷೇತ್ರದ ಗಣ್ಯರು ತೊಡಗಿಕೊಂಡಿದ್ದಾರೆ. 2008ರಲ್ಲಿ ಈ ಸಂಸ್ಥೆ ಸ್ಥಾಪನೆಯಾಯಿತು. ಮುಂಬರುವ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಈ ಸಂಸ್ಥೆ ಈಗಾಗಲೇ ವಿವಿಧ ಜನಪರ ವಿಷಯಗಳನ್ನು ಮುಂದಿಟ್ಟುಕೊಂಡು ಹಲವಾರು ಸಮೀಕ್ಷೆ, ಸಂಶೋಧನೆ ನಡೆಸಿದೆ. ವೃತ್ತಿಯಿಂದ ವಕೀಲರಾಗಿರುವ ದಕ್ಷ ಸಂಘಟನೆಯ ಸಹಸಂಸ್ಥಾಪಕ ಹರೀಶ್ ನರಸಪ್ಪ ಅವರ ಖಚಿತ ಹಾಗೂ ರಚನಾತ್ಮಕ ನುಡಿಗಳು ಇಲ್ಲಿವೆ.

ಚುನಾವಣೆಗಳು ಸರಿಯಾಗಿ ನಡೆಯುತ್ತಿವೆಯೇ?

ಚುನಾವಣೆಗಳಂತೂ ನಡೆಯುತ್ತಿವೆ. ಅವು ಪ್ರಜಾತಂತ್ರ ವ್ಯವಸ್ಥೆಯನ್ನು ಗಟ್ಟಿಗೊಳಿಸುವ ನಿಟ್ಟಿನಲ್ಲಿ ನಡೆಯುತ್ತಿವೆಯೇ ಎಂಬುದನ್ನು ನೋಡಿದಾಗ ಹಣಬಲ ಮತ್ತು ಹಿಂಸೆ ಎರಡೂ ಚುನಾವಣಾ ವ್ಯವಸ್ಥೆಯನ್ನು ವಿಕೃತಗೊಳಿಸಿರುವುದು ನಮಗೆ ಗೋಚರಿಸುತ್ತದೆ. ಯಾಕೆ ಹಾಗೆ ಹೇಳುತ್ತೇನೆಂದರೆ ಒಬ್ಬ ಅಭ್ಯರ್ಥಿ ಚುನಾವಣೆಯಲ್ಲಿ ಹತ್ತಾರು ಕೋಟಿ ರೂಪಾಯಿ ವೆಚ್ಚ ಮಾಡುತ್ತಾನೆ. ಇಷ್ಟೊಂದು ಹಣ ವೆಚ್ಚ ಮಾಡಿದವನು ಆ ಮೊತ್ತದ ಎರಡು—ಮೂರು ಪಟ್ಟು ಹಣ ಗಳಿಸಲು ಪ್ರಯತ್ನಿಸದೇ ಬಿಡಲಾರ. ಗೆದ್ದವನು ಮತ್ತು ಸೋತವನು ಇಬ್ಬರೂ ಇಂಥ ಪ್ರಯತ್ನ ಮಾಡುತ್ತಾರೆ. ನ್ಯಾಯಯುತವಾಗಿ ಹಣ ಗಳಿಸಿದ ಯಾವ ಹೊಸಬರು ಬಂದು ಸ್ಪರ್ಧೆ ಮಾಡಲಾಗದಷ್ಟು ಚುನಾವಣೆಗಳು ವೆಚ್ಚದಾಯಕವಾಗಿವೆ. ಆದ್ದರಿಂದ ಚುನಾವಣೆಗಳು ಸರಿಯಾಗಿ ನಡೆಯುತ್ತಿಲ್ಲ. ಎರಡನೆಯದಾಗಿ ಚುನಾವಣೆ ವೇಳೆ ಹಿಂಸಾ ಚಟುವಟಿಕೆಗಳು ನಡೆಯುತ್ತಿವೆ. ರಾಜಕೀಯ ಪಕ್ಷಗಳ ಕೆಲವು ಕಾರ್ಯಕರ್ತರಿಗೆ ಹಿಂಸೆ ಎನ್ನುವುದು ಜೀವನ ಮಾರ್ಗವಾಗಿದೆ. ಬಿಜೆಪಿ, ಕಾಂಗ್ರೆಸ್ ಹಾಗೂ ಜೆಡಿಎಸ್ ಎಲ್ಲಾ ಪಕ್ಷಗಳಲ್ಲೂ ಈ ತೊಂದರೆ ಇದೆ. ಅಂದ ಹಾಗೆ ಹಣಬಲ ಮತ್ತು ಹಿಂಸೆ ಎರಡೂ ಚುನಾವಣಾ ವ್ಯವಸ್ಥೆಯನ್ನು ಹದಗೆಡಿಸಿವೆ. ಇವೆರಡೂ ಪ್ರಜಾಪ್ರಭುತ್ವದ ಮೇಲೆ ದಾಳಿ ಮಾಡುತ್ತಿವೆ.

ನಿಮ್ಮ ಸಮೀಕ್ಷೆಯಂತೆ ಜನರ ನಿರೀಕ್ಷೆಗಳೇನು?

ಕಳೆದ ಡಿಸೆಂಬರ್‍ನಿಂದ ಫೆಬ್ರುವರಿ ತಿಂಗಳವರೆಗೆ ರಾಜ್ಯದಲ್ಲಿ ನಮ್ಮ ಸಂಸ್ಥೆ 25 ವಿಷಯಗಳ ಮೇಲೆ ನಡೆಸಿದ ಸಮೀಕ್ಷೆಯಲ್ಲಿ ಶುದ್ಧ ಹಾಗೂ ಸಮರ್ಪಕ ಕುಡಿಯುವ ನೀರಿನ ಪೂರೈಕೆ ಜನರ ಅತ್ಯಂತ ಮುಖ್ಯ ಬೇಡಿಕೆಯಾಗಿದೆ. ಒಳ್ಳೆಯ ಶಾಲೆಗಳು, ಉತ್ತಮ ರಸ್ತೆಗಳು, ನಿರಂತರ ವಿದ್ಯುತ್ ಸರಬರಾಜು ಹಾಗೂ ಗುಣಮಟ್ಟದ ಹೆಚ್ಚಿನ ಆಸ್ಪತ್ರೆಗಳು ನಂತರದ ಆದ್ಯತೆಯ ವಿಷಯಗಳಾಗಿವೆ.

ಜನರ ಸಮಸ್ಯೆಗಳು ಚರ್ಚೆಯಾಗುತ್ತಿವೆಯೇ

ಇಲ್ಲ, ಜನರ ಸಮಸ್ಯೆಗಳು ಮತ್ತು ಜನರು ಮುಖ್ಯವಾಗಿ ಬಯಸುವ ಯೋಜನೆಗಳ ಬಗ್ಗೆ ಚರ್ಚೆ ನಡೆಯುವುದೇ ಇಲ್ಲ. ನಮ್ಮ ದಕ್ಷ ಸಂಸ್ಥೆ ಈಗಾಗಲೇ ರಾಜ್ಯ ಹಾಗೂ ರಾಷ್ಟ್ರಮಟ್ಟದಲ್ಲಿ ಐದು ಬಾರಿ ಸಮೀಕ್ಷೆ ನಡೆಸಿದೆ. ಎಲ್ಲಾ ಸಮೀಕ್ಷೆಗಳಲ್ಲೂ ಕುಡಿಯುವ ನೀರು, ಆರೋಗ್ಯ, ಶಾಲೆಗಳು, ವಿದ್ಯುತ್ ಹಾಗೂ ರಸ್ತೆಗಳು ಇಂಥ ಐದಾರು ವಿಷಯಗಳನ್ನು ಮತ್ತೆಮತ್ತೆ ಪ್ರಮುಖವಾಗಿ ಜನ ಬಯಸುತ್ತಾರೆ. ಆದರೆ ಚುನಾವಣೆ ಚರ್ಚೆಗಳಲ್ಲಿ ಈ ವಿಷಯಗಳು ಬರುವುದಿಲ್ಲ. ಯಾಕೆಂದರೆ, ಇದಕ್ಕೆ ಎರಡು—ಮೂರು ಕಾರಣಗಳಿವೆ. ಮೊದಲನೆಯದಾಗಿ ರಾಜಕೀಯ ಪಕ್ಷಗಳು ಈ ವಿಷಯಗಳನ್ನು ಕುರಿತಂತೆ ಸರಿಯಾಗಿ ಅಧ್ಯಯನ ಮಾಡುವುದಿಲ್ಲ. ಪ್ರತಿಪಕ್ಷದಲ್ಲಿದ್ದವರು ಸರಕಾರದ ಕಾರ್ಯವೈಖರಿ ಮತ್ತು ಯೋಜನೆಗಳನ್ನು ವಿರೋಧಿಸುತ್ತಾರೆ. ಆದರೆ ತಾವು ಅಧಿಕಾರಕ್ಕೆ ಬಂದರೆ ಜನರಿಗಾಗಿ ಏನು ಮಾಡುತ್ತೇವೆ ಎಂಬ ಬಗ್ಗೆ ಸೂಕ್ತ ಯೋಜನೆ ರೂಪಿಸುವುದೇ ಇಲ್ಲ. ಸುಮ್ಮನೆ ಸರಕಾರದ ಯೋಜನೆಗಳನ್ನು ವಿರೋಧಿಸುವುದು ಅಧಿಕಾರಕ್ಕೆ ಬಂದ ಮೇಲೆ ವಿರೋಧಿಸಿದ ಯೋಜನೆಗಳನ್ನೇ ಮುಂದುವರೆಸುವುದು ರೂಢಿಯಾಗಿದೆ. ಉದಾಹರಣೆಗಾಗಿ ಆಧಾರ್, ಮಹಾತ್ಮಾಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ ಹಾಗೂ ಖಾಸಗಿ ಶಾಲೆಗಳನ್ನು ನಿಯಂತ್ರಿಸುವುದು ಇತ್ಯಾದಿ.

ಇನ್ನು ಮತದಾರರಿಗೆ ಆಮಿಷದಂತಿರುವ ಹಾಗೂ ನೇರವಾಗಿ ತಲುಪುವ ಅನ್ನಭಾಗ್ಯ, ಸಾಲ ಮನ್ನಾ ಮತ್ತು ಇಂದಿರಾ ಕ್ಯಾಂಟೀನ್ ಮಾಡುವುದು ಇತ್ಯಾದಿ ಯೋಜನೆಗಳ ಬಗ್ಗೆ ಚರ್ಚೆ ನಡೆಯುತ್ತದೆ. ಇವುಗಳಿಂದ ಜನರಿಗೆ ಅನುಕೂಲ ಆಗುತ್ತದೆ. ಆದರೆ ನಿರಂತರವಾಗಿ ಸರಕಾರಗಳು ಇಂಥ ಯೋಜನೆಗಳನ್ನೇ ಜಾರಿಗೊಳಿಸಿದರೆ ಸರಕಾರಿ ಸಂಸ್ಥೆಗಳು ಬಿದ್ದುಹೋಗುತ್ತವೆ. ಈಗ ತಂದೆ ನಿಧನವಾದ ಮೇಲೆ ಅವನ ಹೆಸರಿನಲ್ಲಿದ್ದ ಭೂಮಿಯ ಖಾತಾ ಮಗನಿಗೆ ವರ್ಗಾವಣೆ ಆಗಬೇಕು. ಆದರೆ ಭ್ರಷ್ಟಾಚಾರದ ಪರಿಣಾಮವಾಗಿ ರೈತ ಸಾಕಷ್ಟು ಅಲೆದರೂ ಆ ಕೆಲಸಗಳು ಆಗುವುದಿಲ್ಲ. ಇಂಥ ವಿಚಾರಗಳ ಬಗ್ಗೆ ಯಾರೂ ಮಾತಾಡುವುದಿಲ್ಲ.

ಪ್ರಣಾಳಿಕೆಗಳ ಬಗ್ಗೆ ನಿಮ್ಮ ಅಭಿಪ್ರಾಯ

ರಾಜಕೀಯ ಪಕ್ಷಗಳು ಪ್ರಕಟಿಸುವ ಪ್ರಣಾಳಿಕೆಗಳನ್ನು ಯಾರೂ ಗಂಭೀರವಾಗಿ ತೆಗೆದುಕೊಳ್ಳುವುದಿಲ್ಲ. ಯಾಕೆಂದರೆ ಪ್ರಣಾಳಿಕೆಗಳಲ್ಲಿ ಜನರಿಗೆ ಬೇಕಾಗುವ ವಿಷಯಗಳು ಮತ್ತು ಅವರ ಜ್ವಲಂತ ಸಮಸ್ಯೆಗಳ ಬಗ್ಗೆ ಪ್ರಸ್ತಾಪ ಮಾಡಿರುವುದೇ ಇಲ್ಲ. ರಾಜಕೀಯ ಪಕ್ಷಗಳು ಚುನಾವಣಾ ಪ್ರಣಾಳಿಕೆ ಪ್ರಕಟಿಸುವುದು ಒಂದು ಔಪಚಾರಿಕ ಪ್ರಕ್ರಿಯೆಯಂತೆ ನಡೆಯುತ್ತದೆ. ಹಾಗಾಗಿ ಯಾರೂ ಚುನಾವಣಾ ಪ್ರಣಾಳಿಕೆ ಬಗ್ಗೆ ತಲೆ ಕೆಡಿಸಿಕೊಳ್ಳುವುದಿಲ್ಲ. ಅವುಗಳನ್ನು ಯಾರೂ ಓದುವುದು ಇಲ್ಲ. ಇನ್ನೊಂದು ವಿಚಾರವೆಂದರೆ ಬಹುತೇಕ ಪಕ್ಷಗಳು ಪ್ರಣಾಳಿಕೆಯನ್ನು ಚುನಾವಣೆಯ ಕೊನೆಯ ಗಳಿಗೆಯಲ್ಲಿ ಪ್ರಕಟಿಸುತ್ತವೆ. ಕೆಲವೊಮ್ಮೆ ಪ್ರಣಾಳಿಕೆ ಪ್ರಕಟಿಸಿದ್ದು ಯಾರ ಗಮನಕ್ಕೂ ಬರುವುದೇ ಇಲ್ಲ. ಪ್ರಣಾಳಿಕೆ ಪ್ರಕಟಿಸುವ ಮೊದಲು ಪ್ರಣಾಳಿಕೆಯಲ್ಲಿನ ವಿಷಯಗಳ ಬಗ್ಗೆ ಪಕ್ಷದ ಒಳಗೆ ಕಾರ್ಯಕರ್ತರು ಮತ್ತು ನಾಯಕರ ನಡುವೆ ಸಾಕಷ್ಟು ಚರ್ಚೆ ನಡೆಯಬೇಕು. ಆದರೆ ಹಾಗಾಗುತ್ತಿಲ್ಲ. ಕಾರಣವೆಂದರೆ ಕೆಲವು ಪಕ್ಷಗಳಲ್ಲಿ ಆಂತರಿಕ ಪ್ರಜಾಪ್ರಭುತ್ವ ಇರುವುದೇ ಇಲ್ಲ. ಇಂಥ ವ್ಯವಸ್ಥೆ ಹೋಗಬೇಕು.

ಪ್ರಣಾಳಿಕೆ ಸಮಿತಿಗಳಿರುತ್ತವಲ್ಲ

ಎಲ್ಲಾ ಪಕ್ಷಗಳು ಚುನಾವಣಾ ಪ್ರಣಾಳಿಕೆ ಸಮಿತಿ ರಚಿಸುತ್ತವೆ. ಆದರೆ ಅವುಗಳನ್ನು ಯಾರೂ ಗಂಭೀರವಾಗಿ ಪರಿಗಣಿಸುವುದಿಲ್ಲ. ನೆಪಮಾತ್ರಕ್ಕೆ ಸಮಿತಿ ರಚಿಸಲಾಗುತ್ತದೆ. ಆ ಸಮಿತಿಗಳು ಕೂಡ ಆಳವಾಗಿ ಅಧ್ಯಯನ ನಡೆಸಿ ಜನರಿಗೆ ಬೇಕಾಗುವ ವಿಷಯಗಳ ಬಗ್ಗೆ ಪ್ರಣಾಳಿಕೆಯಲ್ಲಿ ಕೊಡುವುದಿಲ್ಲ. ಅಲ್ಲದೇ ಎಲ್ಲಾ ಪಕ್ಷಗಳ ಪ್ರಣಾಳಿಕೆಗಳು ಒಂದೇ ರೀತಿ ಇರುತ್ತವೆ. ಅಭ್ಯರ್ಥಿಗಳನ್ನು ಪ್ರಕಟಿಸಿದ ಮೇಲೆ, ಕೆಲವೊಮ್ಮೆ ಮತದಾನದ ಹಿಂದಿನ ದಿನ ಕಾಟಾಚಾರಕ್ಕೆ ಪ್ರಣಾಳಿಕೆಯನ್ನು ಬಿಡುಗಡೆ ಮಾಡಲಾಗುತ್ತದೆ. ಹಾಗಾದರೆ ಅದನ್ನು ಯಾರು ಓದಬೇಕು? ಚುನಾವಣಾ ಪ್ರಣಾಳಿಕೆಗಳನ್ನು ಆರು ತಿಂಗಳ ಮೊದಲೇ ಪ್ರಕಟಿಸುವಂತಾಗಬೇಕು. ವಿವಿಧ ರಾಜಕೀಯ ಪಕ್ಷಗಳು ಪ್ರಕಟಿಸುವ ಪ್ರಣಾಳಿಕೆಗಳ ಬಗ್ಗೆ ಸಾರ್ವಜನಿಕ ವಲಯದಲ್ಲಿ ಸಾಕಷ್ಟು ಚರ್ಚೆ ನಡೆಯಬೇಕು. ಅಭ್ಯರ್ಥಿ ತಾನು ಗೆದ್ದರೆ ಕ್ಷೇತ್ರದ ಅಭಿವೃದ್ಧಿಗೆ ರೂಪಿಸುವ ಯೋಜನೆಗಳೇನು, ಕ್ಷೇತ್ರದ ಮತದಾರರು ಎದುರಿಸುತ್ತಿರುವ ಸಮಸ್ಯೆಗಳನ್ನು ಹೇಗೆ ಪರಿಹರಿಸುತ್ತಾರೆ ಎಂಬೆಲ್ಲ ವಿಚಾರಗಳ ಬಗ್ಗೆ ಅಭ್ಯರ್ಥಿ, ಪಕ್ಷ ಮತ್ತು ಮತದಾರರ ನಡುವೆ ಸಂವಾದ ನಡೆಯಬೇಕು. ಕಾಂಗ್ರೆಸ್, ಬಿಜೆಪಿ ಮತ್ತು ಜೆಡಿಎಸ್ ಪಕ್ಷಗಳ ನಡುವೆ ತಮ್ಮ ಸಮಸ್ಯೆಗಳಿಗೆ ಸ್ಪಂಧಿಸುವ ಸೂಕ್ತ ಅಭ್ಯರ್ಥಿ ಯಾರು ಮತ್ತು ಸಮರ್ಥ ಪಕ್ಷ ಯಾವುದು ಎಂಬ ಬಗ್ಗೆ ಮತದಾರರು ತುಲನೆ ಮಾಡಿ ನೋಡುವಂತಾಗಬೇಕು. ದುರದೃಷ್ಟವಶಾತ್ ಅಂತಹ ಪ್ರಕ್ರಿಯೆಗಳು ಇಲ್ಲಿ ನಡೆಯುವುದೇ ಇಲ್ಲ. ಇದಕ್ಕೆ ಇನ್ನೊಂದು ಅಡ್ಡಿ ಎಂದರೆ ನಾಮಪತ್ರ ಸಲ್ಲಿಸಿದ ನಂತರ ಮತದಾನಕ್ಕೆ ಕೇವಲ ಹದಿನೈದು ದಿನಗಳ ಅಂತರ ಇರುತ್ತದೆ.

ಚುನಾವಣಾ ಆಯೋಗದ ಪಾತ್ರವೇನು

ಆಯೋಗ ಚುನಾವಣಾ ಪ್ರಕ್ರಿಯೆಗಳನ್ನು ಆರು ತಿಂಗಳ ಮೊದಲೇ ಆರಂಭಿಸಬೇಕೇಂಬುದು ನಮ್ಮ ಆಗ್ರಹ. ಈ ಸಂಬಂಧ ಈಗಾಗಲೇ ಆಯೋಗಕ್ಕೆ ನಾವು ತಿಳಿಸಿದ್ದೇವೆ. ನಾಮಪತ್ರ ಸಲ್ಲಿಸುವ ಕೊನೆ ದಿನದಿಂದ ಮತದಾನದವರೆಗೆ ಕನಿಷ್ಟ ಹದಿನೈದು ದಿನಗಳ ಅವಧಿ ಇರಬೇಕೆಂದು ಕಾನೂನು ಹೇಳುತ್ತದೆ. ಹಾಗೆಂದ ಮಾತ್ರಕ್ಕೆ ಕೇವಲ ಹದಿನೈದು ದಿನಗಳ ಅವಕಾಶ ಕೊಡಬೇಕಿಂದಿಲ್ಲ. ಗರಿಷ್ಟ ಎಷ್ಟಾದರೂ ಕೊಡಬಹುದು. ಆರು ತಿಂಗಳ ಮೊದಲೇ ಚುನಾವಣಾ ಪ್ರಕ್ರಿಯೆ ಶುರು ಮಾಡಿದರೆ ಪಕ್ಷಗಳು ಅಷ್ಟು ಮೊದಲೇ ಅಭ್ಯರ್ಥಿಗಳನ್ನು ಪ್ರಕಟಿಸಬೇಕಾಗುತ್ತದೆ. ಇದರಿಂದ ಜನರು ತಮಗೆ ಬೇಕಾದ ಅಭ್ಯರ್ಥಿಯ ಬಗ್ಗೆ ತಿಳಿದುಕೊಳ್ಳಲು ಸಮಯ ಸಿಗುತ್ತದೆ. ಇನ್ನೊಂದು ಅನುಕೂಲವೆಂದರೆ ಹಣ, ಹೆಂಡ ಹಂಚುವುದು ಕಷ್ಟವಾಗಲಿದೆ. ಆರು ತಿಂಗಳಿಂದ ಹಂಚಲು ಹೊರಟರೆ ಸಾವಿರಾರು ಕೋಟಿ ಬೇಕಾಗುತ್ತದೆ. ಹಾಗಾಗಿ ಅಭ್ಯರ್ಥಿಗಳು ಮತ್ತು ರಾಜಕೀಯ ಪಕ್ಷಗಳು ಆಮಿಷ ಒಡ್ಡುವುದು ಕಡಿಮೆ ಆಗಲಿದೆ.

ಆಯೋಗ ಯಾಕೆ ಕ್ರಮ ಕೈಗೊಳ್ಳುತ್ತಿಲ್ಲ

ನಿಜ, ವಿಧಾನಸಭೆ ಚುನಾವಣೆಗೆ ತಲಾ ಅಭ್ಯರ್ಥಿಗೆ 28 ಲಕ್ಷ ನಿಗದಿ ಮಾಡಿದ ವೆಚ್ಚದ ಮಿತಿಯನ್ನು ಯಾರೂ ಪಾಲಿಸುತ್ತಿಲ್ಲ. ಚುನಾವಣಾ ಆಯೋಗವೊಂದನ್ನು ಬಿಟ್ಟು ಉಳಿದ ಯಾರೂ ಈ ನಿಯಮ ಪಾಲನೆಯಾಗುತ್ತಿದೆ ಎಂದು ನಂಬುವುದಿಲ್ಲ. ನಾವು ನಡೆಸಿದ ಅಧ್ಯಯನದ ಪ್ರಕಾರ ರಾಜ್ಯದಲ್ಲಿ ಮಾತ್ರವಲ್ಲ ಇಡೀ ದೇಶದಲ್ಲಿ ಈ ನಿಯಮ ಎಲ್ಲೂ ಪಾಲನೆಯಾಗುತ್ತಿಲ್ಲ.

ಚುನಾವಣಾ ಆಯೋಗದ ವೈಫಲ್ಯವೇ

ಹೌದು, ಖಂಡಿತ ಇದು ಆಯೋಗದ ವೈಫಲ್ಯ. ಆದರೆ, ಕ್ರಮಕೈಗೊಳ್ಳಲು ಸಾಕ್ಷಿ ಸಿಗಬೇಕು. ಆ ಸಾಕ್ಷಿಗಳನ್ನು ಒದಗಿಸುವವರು ಯಾರು? ಚುನಾವಣೆಗಳನ್ನು ನಡೆಸಲು ಆಯೋಗ ತನ್ನದೇ ಸ್ವಂತ ಸಿಬ್ಬಂದಿಯನ್ನು ಹೊಂದಿಲ್ಲ. ಆಯಾ ರಾಜ್ಯದ ಅಧಿಕಾರಿ ಮತ್ತು ನೌಕರರನ್ನು ಎರವಲು ಪಡೆದು ಚುನಾವಣೆಗಳನ್ನು ನಡೆಸುತ್ತದೆ. ಕೆಲವರು ಒಳ್ಳೆಯ ಅಧಿಕಾರಿಗಳು ಇದ್ದಾರೆ. ಆದರೆ, ಒಂದು ರಾಜ್ಯ ಸರಕಾರದ ಪರವಾಗಿ ಕೆಲಸ ಮಾಡಿದ ಎಲ್ಲಾ ಅಧಿಕಾರಿಗಳು ಎಲ್ಲಾ ಸಂದರ್ಭಗಳಲ್ಲಿ ಪ್ರಜಾಪ್ರಭುತ್ವವನ್ನು ರಕ್ಷಿಸುವ ಕೆಲಸ ಮಾಡುತ್ತಾರೆಂದು ನಿರೀಕ್ಷಿಸಲಾಗದು. ಹಾಗಾಗಿ ಒಂದು ರೀತಿಯಲ್ಲಿ ಇದು ಆಯೋಗ, ಮತದಾರರು, ಅಭ್ಯರ್ಥಿಗಳು ಮತ್ತು ರಾಜಕೀಯ ಪಕ್ಷಗಳು ಎಲ್ಲರ ವೈಫಲ್ಯ ಎಂದು ಹೇಳುವುದು ಸೂಕ್ತ.

ಈ ವ್ಯವಸ್ಥೆ ಸುಧಾರಿಸುವವರು ಯಾರು

ಆ ನಿಟ್ಟಿನಲ್ಲಿ ಹೇಳುವುದಾದರೆ ಸುಧಾರಣೆ ಪ್ರಕ್ರಿಯೆ ಮತದಾರರಿಂದಲೇ ಶುರುವಾಗಬೇಕು. ಜನ ಎಚ್ಚೆತ್ತುಕೊಂಡರೆ ಎಲ್ಲವೂ ಸರಿ ದಾರಿಗೆ ಬರಲಿದೆ. ಬರಿ ದುಡ್ಡು ಗಳಿಸುತ್ತ ಹೋದರೆ ರಾಜ್ಯ, ಸಮಾಜ ಎಲ್ಲಿಗೆ ಹೋಗುತ್ತದೆ ಎಂಬುದನ್ನು ನಮ್ಮ ರಾಜಕೀಯ ನಾಯಕರೂ ಯೋಚಿಸಬೇಕು.

ಮತದಾರರ ಪ್ರಾಮುಖ್ಯ ಯಾವುದಕ್ಕೆ

ಮೇಲ್ನೋಟಕ್ಕೆ ಪಕ್ಷಗಳು ಮತ್ತು ಮಾಧ್ಯಮಗಳು ಚರ್ಚೆ ನಡೆಸಿರುವಂತೆ ಜಾತಿ, ಧರ್ಮಗಳು ಮುಖ್ಯವಲ್ಲ. ನಾವು ಇದುವರೆಗೆ ನಡೆಸಿದ ಆರೇಳು ಸಮೀಕ್ಷೆಗಳಲ್ಲಿ ಕಂಡುಬಂದಂತೆ ಜನರಿಗೆ ಅತೀ ಮುಖ್ಯವಾದುದು ಅಭ್ಯರ್ಥಿ. ಯಾರು ಸದಾ ನಮ್ಮ ಕೈಗೆ ಸಿಗುವಂತಹ ಅಭ್ಯರ್ಥಿ, ಅವರು ನಮ್ಮ ಸಮಸ್ಯೆಗಳನ್ನು ಕೇಳುತ್ತಾರೆಯೇ ಎಂಬುದು ಮತದಾರರಿಗೆ ಮುಖ್ಯವಾಗಿದೆ. ಬಳಿಕ ಪಕ್ಷ ಹಾಗೂ ಮುಖ್ಯಮಂತ್ರಿ ಆಗುವವರು ಯಾರು ಎಂಬ ವಿಚಾರಗಳು ಪ್ರಾಮುಖ್ಯ ಪಡೆದಿವೆ. ಜಾತಿ, ಧರ್ಮ ಮುಖ್ಯ ಅನ್ನುವವರು ಶೇ27 ರಿಂದ ಶೇ35 ರಷ್ಟು ಮಾತ್ರ ಇದ್ದಾರೆ.

ಸಂದರ್ಶನ: ಬಸವರಾಜ ಭೂಸಾರೆ

ಡಾ.ಟಿ.ಆರ್.ಚಂದ್ರಶೇಖರ

ಕರ್ನಾಟಕ ಸರ್ಕಾರದ ಹಣಕಾಸಿನ ನಿರ್ವಹಣೆ

ಜುಲೈ ೨೦೧೮

ರಂಗಸ್ವಾಮಿ ಮೂಕನಹಳ್ಳಿ

ಕೃಷಿ ಸಾಲ ಮನ್ನಾ: ಸಾಧ್ಯವೇನಣ್ಣಾ?

ಜುಲೈ ೨೦೧೮

ಚಂಸು ಪಾಟೀಲ

ರೈತರೇಕೆ ಸಾಲಗಾರರಾದರು?

ಜುಲೈ ೨೦೧೮

ಟಿ.ಎಂ.ಥಾಮಸ್ ಐಸಾಕ್ ಕೇರಳದ ಹಣಕಾಸು ಸಚಿವರು

ಎಲ್ಲಾ ರಾಜ್ಯಗಳ ಹಣಕಾಸು ಸಚಿವರಿಗೆ ಕೇರಳ ಹಣಕಾಸು ಸಚಿವರ ಬಹಿರಂಗ ಪತ್ರ

ಜುಲೈ ೨೦೧೮

ಅರ್ಜುನ್ ರಾಮೇಗೌಡ ನಾರಾಯಣಸ್ವಾಮಿ

ಆ ಬೆಂಕಿಯ ಕಿಡಿ ಹೊತ್ತಿಸುವವರು ಯಾರು?

ಜೂನ್ ೨೦೧೮

ಡಾ.ಎಸ್.ಬಿ.ಜೋಗುರ

ಪೂರಕ ವಾತಾವರಣದ ಕೊರತೆ

ಜೂನ್ ೨೦೧೮

ಡಾ.ಎಸ್.ಬಿ.ಜೋಗುರ

ಹಾರ್ವರ್ಡ್ ಗುಣಮಟ್ಟ: ಕೈಗೂಡದ ಕನಸೇ?

ಜೂನ್ ೨೦೧೮

ಚುನಾವಣೆ: ಯಾರ ಹೊಣೆ?

ಎಪ್ರಿಲ್ ೨೦೧೮

ಡಾ.ಬಿ.ಎಲ್.ಶಂಕರ್

ಆಡಿದ ಮಾತಿಗೂ ಆತ್ಮದ ಮಾತಿಗೂ ಅಜಗಜಾಂತರ!

ಎಪ್ರಿಲ್ ೨೦೧೮

ಹರೀಶ್ ನರಸಪ್ಪ

ಚುನಾವಣಾ ಆಯೋಗದ ಮಿತಿ ಮತ್ತು ವೈಫಲ್ಯ

ಎಪ್ರಿಲ್ ೨೦೧೮

ಬಿ.ಎನ್.ವಿಜಯಕುಮಾರ್

ಭ್ರಷ್ಟತೆಗೆ ರಾಜಕೀಯ ಪಕ್ಷಗಳೇ ಕಾರಣ

ಎಪ್ರಿಲ್ ೨೦೧೮

ಎ.ಟಿ.ರಾಮಸ್ವಾಮಿ

ಭ್ರಷ್ಟಾಚಾರಿಗಳು ವೇಶ್ಯೆಯರಿಗಿಂತಲೂ ಕೀಳು

ಎಪ್ರಿಲ್ ೨೦೧೮

ಬಿ. ಕೆ. ಚಂದ್ರಶೇಖರ್

ಪ್ರಜಾಪ್ರಭುತ್ವಕ್ಕೆ ಕಪ್ಪುಚುಕ್ಕೆ

ಎಪ್ರಿಲ್ ೨೦೧೮

ಅಲೋಕ್ ಪ್ರಸನ್ನ, ಎಸ್. ಆರ್. ಹಿರೇಮಠ, ಬಿ. ಟಿ. ವೆಂಕಟೇಶ

ನ್ಯಾಯಾಂಗ

ಮಾರ್ಚ್ ೨೦೧೮

ಎ. ನಾರಾಯಣ, ಬಸವರಾಜ ಬೊಮ್ಮಾಯಿ, ಮೋಟಮ್ಮ

ಶಾಸಕಾಂಗ

ಮಾರ್ಚ್ ೨೦೧೮

ಬಿ. ಆರ್. ಜಯರಾಮರಾಜೇ ಅರಸ್, ಎನ್. ಹನುಮೇಗೌಡ,

ಕಾರ್ಯಂಗ

ಮಾರ್ಚ್ ೨೦೧೮

ವಾಸುದೇವ ಶರ್ಮಾ ಎನ್. ವಿ.

ನಾಗರಿಕ ಸಮಾಜ

ಮಾರ್ಚ್ ೨೦೧೮

ಈಶ್ವರ ದೈತೋಟ, ಡಾ. ಎ. ಎಸ್. ಬಾಲಸುಬ್ರಹ್ಮಣ್ಯ

ಮಾಧ್ಯಮ

ಮಾರ್ಚ್ ೨೦೧೮

ಮುಖ್ಯಚರ್ಚೆಗೆ ಪ್ರವೇಶ

ಫೆಬ್ರವರಿ ೨೦೧೮

ಡಾ.ಅರವಿಂದ ಪಟೇಲ್ ಬಳ್ಳಾರಿ

ವೈದ್ಯಕ್ಷೇತ್ರದ ಉದ್ಧಾರಕ್ಕೆ ಮೂರು ಮದ್ದು!

ಫೆಬ್ರವರಿ ೨೦೧೮

ಮಾಲತಿ ಪಟ್ಟಣಶೆಟ್ಟಿ ಧಾರವಾಡ

ಗುಣಮಟ್ಟಕ್ಕೆ ಮನ್ನಣೆ

ಫೆಬ್ರವರಿ ೨೦೧೮

ಡಾ.ಶ್ರೀನಿವಾಸ ಕಕ್ಕಿಲ್ಲಾಯ ಮಂಗಳೂರು

ಸಕ್ಕರೆ ನಿಷೇಧಿಸಿ!

ಫೆಬ್ರವರಿ ೨೦೧೮