2nd ಎಪ್ರಿಲ್ ೨೦೧೮

ನಮ್ಮ ಬೆರಳ ತುದಿಯಲ್ಲಿ ನಾಡಿನ ಭವಿಷ್ಯ

ನಮ್ಮ ರಾಜಕೀಯ ವ್ಯವಸ್ಥೆ ಎಷ್ಟೇ ಹದಗೆಟ್ಟಿದ್ದರೂ, ನಮ್ಮ ರಾಜಕಾರಣಿಗಳು ಎಷ್ಟೇ ಭ್ರಷ್ಟರಾಗಿದ್ದರೂ, ನೋಟು ಪಡೆದು ವೋಟು ನೀಡುವ ಮನೋಭಾವ ಹೊಂದಿದ ಮತದಾರರು ಪ್ರಜಾಪ್ರಭುತ್ವ ವ್ಯವಸ್ಥೆಗೇ ಮಾರಕ.

ಪ್ರಜಾಪ್ರಭುತ್ವವೆಂಬ ನಮ್ಮನ್ನು ನಾವು ಆಳುವ ಪದ್ಧತಿ ಕೇವಲ ಇನ್ನೂರು ವರ್ಷಗಳಷ್ಟು ಹಳೆಯದ್ದು. ಅದಕ್ಕೂ ಹಿಂದಿನಿಂದ ಬಂದ ರಾಜರ ಆಳ್ವಿಕೆ, ಧರ್ಮದ ಆಳ್ವಿಕೆ ಹಾಗೂ ಸೈನ್ಯದ ಆಳ್ವಿಕೆಗಳನ್ನು ನಾವು ಆಧುನಿಕತೆಯ ಚಿಂತನೆಯಲ್ಲಿ ಮುಳುಗೆದ್ದು ಸಾರಾಸಗಟಾಗಿ ತಿರಸ್ಕರಿಸಿದ್ದೇವೆ. ಇಪ್ಪತ್ತೊಂದನೆಯ ಈ ಶತಮಾನದಲ್ಲೂ ಕೆಲವು ದೇಶಗಳಲ್ಲಿ ಉಳಿದು ಬಂದಿರುವ ಇಂತಹ ಪ್ರತಿಗಾಮಿ ಆಡಳಿತಗಳನ್ನು ನಾವು `ಸರ್ವಾಧಿಕಾರಿ ಸರ್ಕಾರ’ಗಳೆಂಬ ಹಣೆಪಟ್ಟಿ ನೀಡಿ ತುಚ್ಛೀಕರಿಸಿದ್ದೇವೆ. ಎಲ್ಲಾ ನಾಗರಿಕರಿಗೆ ಸರಿಸಮಾನ ಸ್ವಾತಂತ್ರ್ಯ ನೀಡದ ಇಂತಹ ದಮನಕಾರಿ ಆಡಳಿತಗಳನ್ನು ಖಂಡಿಸುತ್ತಾ ಬಂದಿದ್ದೇವೆ. ಮನುಕುಲದ ಅತ್ಯಂತ ಪುರೋಗಾಮಿ ಸಾಮಾಜಿಕ ಆವಿಷ್ಕಾರಗಳೆಂದರೆ `ಪ್ರಜಾಪ್ರಭುತ್ವ’ವೆಂಬ ಜನರಿಂದ— ಜನರಿಗಾಗಿ—ಜನರೇ ರೂಪಿಸುವ ಸರ್ಕಾರವೆಂದು ಹೆಮ್ಮೆ ಪಟ್ಟಿದ್ದೇವೆ. ಹಲವಾರು ಅಡೆತಡೆಗಳ ನಡುವೆಯೂ ಅತ್ಯಂತ ಮುಕ್ತ, ಸಮಾನ, ಸಹಿಷ್ಣು, ಪ್ರಗತಿಪರ ಹಾಗೂ ಎಲ್ಲರನ್ನೂ ಒಳಗೊಳ್ಳುವಿಕೆಯ ರಾಜ್ಯ ಪದ್ಧತಿಯೆಂದರೆ ಅದು ಪ್ರಜಾಪ್ರಭುತ್ವವೆಂದು ಗರ್ವದಿಂದ ಬೀಗಿದ್ದೇವೆ, ಹಾಡಿ ಹೊಗಳಿದ್ದೇವೆ.

ನಿರಂತರ ಜಾಗರೂಕತೆಯೇ ನಾವು ಪ್ರಜಾಪ್ರಭುತ್ವ ಪದ್ಧತಿಗೆ ತೆರುವ ಬೆಲೆಯೆಂದು ಹೇಳಲಾಗುತ್ತದೆ. ನಾವು ನಿರಂತರವಾಗಿ ಎಚ್ಚರ ವಹಿಸಬೇಕಾದ ಸ್ಥಿತಿಯ ಚರಮಕ್ಷಣವೇ ಚುನಾವಣೆಯೆಂಬ ಆಯ್ಕೆ ಪ್ರಕ್ರಿಯೆ. ಈ ಚುನಾವಣೆಯಲ್ಲಿ ನಮ್ಮಲ್ಲೇ ಒಬ್ಬನಾದ ಸಾಮಾನ್ಯನೊಬ್ಬನನ್ನು ನಮ್ಮ ಪ್ರತಿನಿಧಿಯೆಂದೂ, ಮುಖಂಡನೆಂದೂ ಹಾಗೂ ಶಾಸಕನೆಂದೂ ನಾವು ಚುನಾಯಿಸಿ ಕಳಿಸುತ್ತೇವೆ. ಸಾಮಾನ್ಯನೊಬ್ಬನಿಗೆ ಅಸಾಮಾನ್ಯ ಅಧಿಕಾರ ಹಾಗೂ ಅಂತಸ್ತನ್ನು ನೀಡಿ ನಮ್ಮನ್ನು ಆಳಲೆಂದು ನಾವೇ ಹೆಗಲ ಮೇಲೆ ಕೂರಿಸಿಕೊಳ್ಳುತ್ತೇವೆ.

ಲೋಕರೂಢಿಯಲ್ಲಿ ಇನ್ನೊಂದು ಮಾತಿದೆ. ಯಾರಾದರೂ ಸಾಮಾನ್ಯನೊಬ್ಬನ ಗುಣಮೌಲ್ಯಗಳನ್ನು ಪರೀಕ್ಷಿಸಬೇಕೆಂದರೆ ಅವನಿಗೆ ಅಸಾಮಾನ್ಯ ಅಧಿಕಾರ ಕೊಟ್ಟು ನೋಡಬೇಕೆಂದು ಹೇಳುತ್ತಾರೆ. ಅಧಿಕಾರ ಹಾಗೂ ಜನಮನ್ನಣೆ ದೊರೆತ ಈ ಜನಪ್ರತಿನಿಧಿ ಎಷ್ಟೇ ಪ್ರಯತ್ನಪಟ್ಟರೂ ತನ್ನಲ್ಲಿನ ಸುಪ್ತ ಗುಣಲಕ್ಷಣಗಳನ್ನು ತೋರಿಸದೇ ಇರಲಾರ. ಅಧಿಕಾರ ಮತ್ತು ಹಣದ ಲಾಲಸೆಯಲ್ಲಿ ತಾನು ಮೂಲತಃ ಏತಕ್ಕೆ ಜನಪ್ರತಿನಿಧಿಯಾದೆನೆಂಬ ಅರಿವನ್ನು ಮರೆತು ಭ್ರಷ್ಟ ಹಾಗೂ ಅಧಿಕಾರ ಮೋಹದಿಂದ ಕೂಡಿದ ಸ್ವಾರ್ಥಿಯಾಗುತ್ತಾನೆ. ತನ್ನನ್ನು ಆರಿಸಿ ಕಳಿಸಿದ ಜನರ ಹಿತವನ್ನು ಕಡೆಗಣಿಸಿ ತನ್ನ ತಿಜೋರಿಯನ್ನು ತುಂಬಿಸುವ ದಂಧೆಯಲ್ಲಿ ಮಗ್ನನಾಗುತ್ತಾನೆ. ತಮ್ಮ ಕೆಲಸಗಳಿಗೆಂದು ತನ್ನ ಮನೆಗೆ ಬರುವ ಜನರನ್ನು ತಪ್ಪಿಸಲು ಮನೆಯ ಮುಂದಿನ ಬಾಗಿಲಿಗೆ ಬೀಗ ಹಾಕಿ ಹಿಂದಿನ ಬಾಗಿಲಿನಿಂದ ತನ್ನ ಭ್ರಷ್ಟ ಉದ್ಯಮವನ್ನು ಮುಂದುವರೆಸಲು ಹವಣಿಸುತ್ತಾನೆ. ಅಧಿಕಾರದಲ್ಲಿರುವ ಎಲ್ಲರಿಗೂ ಸಹಜವಾಗಿಯೇ ಸಿಗುವ `ಸಲಾಮು’ `ಮುಖಸ್ತುತಿ’ಗಳಿಗೆ ಬಲಿಯಾಗಿ ತನ್ನ ಸ್ನೇಹಿತರು ಹಾಗೂ ಇಷ್ಟವಲಯವನ್ನೇ ಬದಲಾಯಿಸಿಕೊಳ್ಳುತ್ತಾನೆ. ಎಲ್ಲರ ಮುಂದೆ ತಾನು ಸರಳವಾಗಿ ಬಟ್ಟೆ ಧರಿಸಿದಂತೆ ಕಾಣಿಸಿಕೊಂಡರೂ ತನ್ನ ಹೆಂಡತಿ ಮಕ್ಕಳು ತೊಡುವ ಸ್ವಿಸ್ ವಾಚು, ಇಟಾಲಿಯನ್ ಲೆದರ್ ಬ್ಯಾಗು ಹಾಗೂ ಅಮೆರಿಕನ್ ಶೂಸುಗಳನ್ನು ಕಂಡು ಎದೆಯುಬ್ಬಿಸುತ್ತಾನೆ. ತನ್ನ ಮತದಾರರು ಮಳೆಬಾರದೆ, ಒಣಗಿದ ಬೆಳೆ—ಸಾಲವನ್ನು ಕಟ್ಟಲಾಗದೆ ಆತ್ಮಹತ್ಯೆ ಮಾಡಿಕೊಂಡರೂ ತಾನು ಒಂದಾದ ಮೇಲೊಂದರಂತೆ ಜಮೀನು ಕೊಂಡು ಸುಳ್ಳು ಕೃಷಿ ಆದಾಯದ ಲೆಕ್ಕವನ್ನು ಕೊಟ್ಟು ತಿಂಗಳು ತಿಂಗಳು ನಿರುಮ್ಮಳವಾಗಿ ಬಾಡಿಗೆ ಬರುವ ವಾಣಿಜ್ಯ ಸಂಕೀರ್ಣವೊಂದನ್ನು ಬೆಂಗಳೂರಿನಲ್ಲೇ ಕೊಳ್ಳಬಯಸುತ್ತಾನೆ. ದಿನೇದಿನೇ ತನ್ನನ್ನು ಆರಿಸಿ ಕಳುಹಿಸಿದ ಜನರಿಂದ ಮಾನಸಿಕವಾಗಿ ದೂರವಾಗಿ, `ಹೇಗಾದರೂ ಮಾಡಿ’ ತನ್ನ ಅಧಿಕಾರ ಉಳಿಸಿಕೊಳ್ಳಬೇಕೆಂಬ ಉಮೇದಿಗೆ ಬಂದು ನಿಲ್ಲುತ್ತಾನೆ.

ಆದರೆ `ಚುನಾವಣೆ’ಯೆಂಬ ರಿಯಾಲಿಟಿ ಶೋ ನಮ್ಮ ಪ್ರಜಾಪ್ರತಿನಿಧಿಯ ಈ ಅರಗಿನ ಅರಮನೆಗೆ ಕಿಚ್ಚು ಹಬ್ಬಿಸಿ ವಾಸ್ತವಿಕ ಜಗತ್ತಿಗೆ ತಂದು ನಿಲ್ಲಿಸುತ್ತದೆ.

ಚುನಾವಣೆಗಳಿಲ್ಲದೆ ಪ್ರಜಾಪ್ರಭುತ್ವವಿಲ್ಲ. ಪ್ರಜಾಪ್ರಭುತ್ವಕ್ಕಲ್ಲದೆ ಬೇರಾರಿಗೂ ಚುನಾವಣೆ ಬೇಕಿಲ್ಲ. ಚುನಾವಣೆಗಳಿಗೆ ಪ್ರಜಾಪ್ರಭುತ್ವಕ್ಕಿರುವ ಐತಿಹಾಸಿಕ ಪ್ರಾಚೀನತೆಯಿದೆ. ಕ್ರಿಸ್ತಪೂರ್ವ ಆರನೆಯ ಶತಮಾನದಲ್ಲಿಯೇ ಗ್ರೀಸ್ ನಗರ—ರಾಜ್ಯಗಳ ಸಾರ್ವಜನಿಕ ಅಧಿಕಾರಿಗಳನ್ನು ಹಾಗೂ ಸೆನೆಟರ್‍ಗಳನ್ನು ಆಯ್ಕೆ ಮಾಡಲು ಚುನಾವಣೆಗಳನ್ನು ನಡೆಸಲಾಗುತ್ತಿತ್ತು. ಮಧ್ಯಯುಗದ ಇಟಲಿಯ ವೆನಿಸ್ ನಗರದ ಮುಖ್ಯಸ್ಥನನ್ನು ಆಯ್ಕೆ ಮಾಡಲು ಚುನಾವಣೆಗಳನ್ನು ನಡೆಸಲಾಗುತ್ತಿತ್ತು. ರೋಮ್‍ನಲ್ಲಿ ಸತ್ತ ಪೋಪ್ ನಂತರದಲ್ಲಿ ಹೊಸ ಪೋಪ್ ಆಯ್ಕೆ ಪ್ರಕ್ರಿಯೆ ಕೂಡಾ ಹಲವಾರು ಸುತ್ತುಗಳ ಮತದಾನದ ಚುನಾವಣೆಗಳ ಮೂಲಕವೇ ನಡೆಯುತ್ತಿತ್ತು. ಆದರೆ ಚುನಾವಣಾ ಪ್ರಕ್ರಿಯೆಗೆ ಮಾನ್ಯತೆ ದೊರೆತಿದ್ದು ಅಮೆರಿಕೆಯ ಅಧ್ಯಕ್ಷೀಯ ಚುನಾವಣೆಯ ಮತದಾನದ ಆಯ್ಕೆ ಪದ್ಧತಿಯಿಂದ. ನಂತರದ ಎಲ್ಲಾ ಪ್ರಜಾಪ್ರಭುತ್ವ ರಾಷ್ಟ್ರಗಳೂ ಒಂದಲ್ಲಾ ಒಂದು ಚುನಾವಣಾ ಪ್ರಕ್ರಿಯೆಯನ್ನು ಆಯ್ಕೆ ಮಾಡಿಕೊಂಡೇ ತಮ್ಮ ನ್ಯಾಯಸಮ್ಮತ ಹಾಗೂ ಮುಕ್ತ ವ್ಯವಸ್ಥೆಯನ್ನು ಪ್ರತಿಪಾದನೆ ಮಾಡುತ್ತಾ ಬಂದಿವೆ.

ಕಮ್ಯುನಿಸ್ಟ್ ಹಾಗೂ ಸರ್ವಾಧಿಕಾರಿ ರಾಷ್ಟ್ರಗಳೂ ಚುನಾವಣೆಯೆಂಬ ಆಯ್ಕೆ ಪ್ರಕ್ರಿಯೆಯನ್ನು ಬಹಿಷ್ಕರಿಸಿಲ್ಲ. ಇರಾಕ್‍ನ ಸದ್ದಾಂ ಹುಸೇನ್ ಮತ್ತು ಪಾಕಿಸ್ತಾನದ ಪರ್ವೇಜ್ ಮುಷರ್ರಫ್ ಕೂಡಾ ತಾವು ತಮ್ಮ ದೇಶಗಳಲ್ಲಿ ನಡೆದ `ಮುಕ್ತ’ ಚುನಾವಣೆಗಳಲ್ಲಿ ಚುನಾಯಿತರಾದ ಅಧ್ಯಕ್ಷರೆಂದು ಕರೆದುಕೊಂಡಿದ್ದರು. ಚೀನಾದ ಕಮ್ಯುನಿಸ್ಟ್ ಪಕ್ಷ ಕೂಡಾ `ಚುನಾವಣೆ’ ನಡೆಸಿಯೇ ತನ್ನ ಪ್ರಧಾನ ಕಾರ್ಯದರ್ಶಿಯನ್ನು ಆಯ್ಕೆ ಮಾಡಿಕೊಳ್ಳುತ್ತದೆ. ಮೊನ್ನೆ ನಡೆದ ಮತದಾನದಲ್ಲಿ ಚೀನಾದ ಅಧ್ಯಕ್ಷ ಕ್ಸಿ ಜಿನ್ ಪಿಂಗ್ ತಮ್ಮ ಅಧಿಕಾರಾವಧಿಯನ್ನು ಅನಿರ್ದಿಷ್ಟಾವಧಿಗೆ ವಿಸ್ತರಿಸಿಕೊಂಡರು. ಚೀನಾದ ರಾಷ್ಟ್ರೀಯ ಸಂಸತ್ತಿನಲ್ಲಿ ನಡೆದ ಈ ಮತದಾನದಲ್ಲಿ ಕ್ಸಿ ಜಿನ್ ಪಿಂಗ್ ಪರವಾಗಿ ಸಂವಿಧಾನ ತಿದ್ದುಪಡಿಗೆ 2958 ಮತಗಳು ಬಂದರೆ ವಿರುದ್ಧವಾಗಿ ಕೇವಲ 2 ಮತಗಳು ಚಲಾಯಿತಗೊಂಡವು.

ಭಾರತದಲ್ಲಿ ಚುನಾವಣಾ ಇತಿಹಾಸ

1952ರಲ್ಲಿ ಅದಾಗ ತಾನೇ ಸ್ವತಂತ್ರವಾದ ಭಾರತವು ಸಾರ್ವತ್ರಿಕ ಮತದಾನದ ಹಕ್ಕನ್ನು ನೀಡಿದಾಗ ಚುನಾವಣೆಗಳನ್ನು ಏಕಕಾಲದಲ್ಲಿ ದೇಶಾದ್ಯಂತ ನಡೆಸುವ ಸವಾಲು ಎದುರಾಗಿತ್ತು. ಆದರೆ 1952ರಿಂದ ಇಲ್ಲಿಯವರೆಗೆ ಭಾರತದ ಚುನಾವಣಾ ಆಯೋಗವು ಅತ್ಯಂತ ದಕ್ಷತೆಯಿಂದ ಮುಕ್ತ ಹಾಗೂ ನಿರ್ಭಯ ಚುನಾವಣೆಗಳನ್ನು ನಡೆಸಿಕೊಂಡು ಬಂದಿದೆ. ಎಂಭತ್ತರ ದಶಕದಲ್ಲಿ ಕಾಶ್ಮೀರದಲ್ಲಿ ನಡೆದ ಕೆಲವಾರು ಚುನಾವಣೆಗಳ ಹೊರತಾಗಿ ಕಳೆದ ಅರವತ್ತೈದು ವರ್ಷಗಳಲ್ಲಿ ಚುನಾವಣಾ ಆಯೋಗವು ನಡೆಸಿಕೊಂಡು ಬಂದ ವಿಶ್ವಾಸಾರ್ಹ ಚುನಾವಣೆಗಳಿಂದ ದೇಶದ ಪ್ರಜಾಪ್ರಭುತ್ವ ವ್ಯವಸ್ಥೆಗೆ ಗರಿಮೆ ಮೂಡಿದೆ. ಕಾಗದದ ಮತಪತ್ರಗಳಿಂದ ಶುರುವಾದ ಮತದಾನ ಪ್ರಕ್ರಿಯೆಯು ಇಂದು ಎಲೆಕ್ಟ್ರಾನಿಕ್ ಮತಯಂತ್ರದ ಜೊತೆಗೆ `ಮತದಾರರಿಂದ ಪರೀಕ್ಷಿಸಲ್ಪಟ್ಟ ಮತಪತ್ರದ ಆಡಿಟ್ ಜಾಡಿನ’ ಯಂತ್ರಗಳೊಂದಿಗೆ ಇಡೀ ವಿಶ್ವದಲ್ಲಿಯೇ ಅತ್ಯಂತ ಆಧುನಿಕ ಮತ್ತು ಭರವಸೆಯ ಚುನಾವಣಾ ಪದ್ಧತಿಯನ್ನು ಪ್ರಮಾಣೀಕರಿಸಿದೆ. ಆಫ್ರಿಕಾ ಮತ್ತು ಏಶಿಯಾದ ಹಲವಾರು ದೇಶಗಳಿಗೆ ಭಾರತ ಚುನಾವಣಾ ಆಯೋಗವು ತರಬೇತಿ ಹಾಗೂ ಸಲಕರಣೆಗಳನ್ನು ಒದಗಿಸುತ್ತಿದೆ. ಅಮೆರಿಕೆಯ ಫ್ಲಾರಿಡಾದಿಂದ ಹಿಡಿದು ಮಾರಿಶಿಯಸ್‍ನ ಚುನಾವಣೆಯವರೆಗೆ ಹಲವಾರು ಸಂದರ್ಭಗಳಲ್ಲಿ ಬೇರೆ ದೇಶಗಳ ಚುನಾವಣೆ—ಮತದಾನದ ಪ್ರಕ್ರಿಯೆಯ ಬಗ್ಗೆ ತೀವ್ರ ಆಕ್ಷೇಪ ವ್ಯಕ್ತವಾಗಿದೆ. ಆದರೆ ಕಳೆದ ಮೂವತ್ತು ವರ್ಷಗಳಲ್ಲಿ ಭಾರತದ ಚುನಾವಣೆ— ಮತದಾನದ ವಿಶ್ವಾಸಾರ್ಹತೆಯ ಬಗ್ಗೆ ಯಾವುದೇ ಗಂಭೀರ ಆರೋಪಗಳಿಲ್ಲದಿರುವುದು ನಿಜಕ್ಕೂ ಸಂತಸದ ಸಂಗತಿಯಾಗಿದೆ.

ಚುನಾವಣಾ ಪದ್ಧತಿಯ ನ್ಯೂನತೆಗಳು

ಮತದಾನದ ಪದ್ಧತಿಯಲ್ಲಿ ನಾವು ಪಾರದರ್ಶಕತೆ ತಂದಿದ್ದರೂ ಒಟ್ಟಾರೆ ಚುನಾವಣಾ ಪ್ರಕ್ರಿಯೆಯಲ್ಲಿ ಹಲವಾರು ನ್ಯೂನತೆಗಳಿವೆ. ಎಲ್ಲರಿಗೂ ಗೊತ್ತಿರುವ ಈ ನಗ್ನಸತ್ಯಗಳನ್ನು ಮತ್ತೆಮತ್ತೆ ತೆರೆದು ನೋಡುವುದು ಆವಶ್ಯಕವಾಗಿದೆ. ಮೊದಲಿಗೆ ಚುನಾವಣಾ ಆಯೋಗ ವಿಧಿಸಿರುವ ಕೆಲವು ನಿರ್ಬಂಧಗಳನ್ನು ಪರಿಶೀಲಿಸೋಣ.

 • ರಾಜ್ಯಗಳ ವಿಧಾನಸಭೆಯ ಅಭ್ಯರ್ಥಿಗಳು ಚುನಾವಣೆಗಾಗಿ ಒಟ್ಟು 18 ಲಕ್ಷ ಮತ್ತು ಲೋಕಸಭೆಯ ಅಭ್ಯರ್ಥಿಗಳು ಒಟ್ಟು 70 ಲಕ್ಷ ಮಾತ್ರ ಖರ್ಚುಮಾಡಬಹುದು.
 • ಚುನಾವಣಾ ವೇಳಾಪಟ್ಟಿ ಘೋಷಣೆಯಾದ ದಿನದಿಂದಲೇ ಚುನಾವಣಾ ನೀತಿ ಸಂಹಿತೆ ಅನ್ವಯವಾಗುತ್ತದೆ. ಚುನಾವಣೆಯ ಮೇಲೆ ಪರಿಣಾಮ ಬೀರುವ ಎಲ್ಲ ಸರ್ಕಾರಿ ಮತ್ತು ಪಕ್ಷ ಚಟುವಟಿಕೆಗಳ ಮೇಲೆ ಚುನಾವಣಾ ಆಯೋಗದ ನಿಯಂತ್ರಣ ಹೇರಲಾಗುತ್ತದೆ.
 • ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ ಕ್ಷಣದಿಂದಲೇ ಅವರ ಖರ್ಚಿನ ಬಾಬತ್ತು ಶುರುವಾಗುತ್ತದೆ. ನೇರವಾಗಿ ಅಥವಾ ಅಭ್ಯರ್ಥಿಗಳ ಪರವಾಗಿ ಪ್ರತ್ಯಕ್ಷವಾಗಿ ಅಥವಾ ಪರೋಕ್ಷವಾಗಿ ಖರ್ಚು ಮಾಡಲಾಗುವ ಎಲ್ಲ ಮೊತ್ತಗಳು ಅಭ್ಯರ್ಥಿಗಳ ಖಾತೆಗೆ ಬಂದು ಸೇರುತ್ತವೆ. ಉದಾಹರಣೆಗೆ, ಅಭ್ಯರ್ಥಿ ಭಾಗವಹಿಸಿದ ಸಭೆಯ ಮೂಲೆಯೊಂದರಲ್ಲಿ ನಿಂತಿದ್ದ ಹುಡುಗನೊಬ್ಬ ಧರಿಸಿದ ತಗಡಿನ ಬ್ಯಾಡ್ಜ್‌‍ನ ಖರ್ಚು ಕೂಡಾ ಅಭ್ಯರ್ಥಿಯದೆಂದೇ ಲೆಕ್ಕಕ್ಕೆ ಬರುತ್ತದೆ. ಅಭ್ಯರ್ಥಿಯ ಯಾವುದೇ ಚುನಾವಣಾ ಸಭೆಯ ಹೊರಗೆ ನಿಂತಿರುವ ಎಲ್ಲ ವಾಹನಗಳ ಖರ್ಚು ಅಭ್ಯರ್ಥಿಯ ಲೆಕ್ಕಕ್ಕೇ ಸೇರುತ್ತದೆ.
 • ಅಭ್ಯರ್ಥಿ ಬಳಸುವ ಎಲ್ಲ ವಾಹನಗಳು, ಪ್ರಚಾರ ಸಾಮಗ್ರಿ, ಸಾಹಿತ್ಯ—ಸಂಗೀತ—ವಿಡಿಯೋ ಮತ್ತಿತರ ಎಲ್ಲ ಪ್ರಚಾರ ಸಾಧನಗಳನ್ನು ಚುನಾವಣಾ ಆಯೋಗದ ಒಪ್ಪಿಗೆ ಪಡೆದೇ ಬಳಸಬೇಕು.
 • ಹಣದ ಸಾಗಾಣಿಕೆ ತಡೆಯಲು ಅಲ್ಲಲ್ಲಿ ತಪಾಸಣಾ ಕೇಂದ್ರಗಳನ್ನು ಸ್ಥಾಪಿಸುವುದರ ಜೊತೆಗೆ ಹಣವಿತರಣೆ ತಡೆಯಲು ತೀವ್ರ ನಿಗಾ ವಹಿಸಲು ಆದಾಯ ತೆರಿಗೆ ಇಲಾಖೆ ಸೇರಿದಂತೆ ಎಲ್ಲ ಸರ್ಕಾರಿ ಸಂಸ್ಥೆಗಳನ್ನು ಬಳಸಲಾಗುತ್ತಿದೆ.

ಹೀಗೆ ಅಭ್ಯರ್ಥಿಗಳ ಎಲ್ಲ ಸಾರ್ವಜನಿಕ ಚುನಾವಣಾ ವೆಚ್ಚಗಳ ಮೇಲೆ ಚುನಾವಣಾ ಆಯೋಗ ಕಟ್ಟುನಿಟ್ಟಿನ ಕಾವಲಿಟ್ಟಿದೆ. ಅಭ್ಯರ್ಥಿಗಳನ್ನು ಹಿಂಬಾಲಿಸಲು ಮೈಕ್ರೋ ಅಬ್ಸರ್ವರ್ಸ್ ಹಾಗೂ ಲೆಕ್ಕದ ಮೇಲೆ ಕಣ್ಣಿಡಲು ಶಾಡೋ ರಿಜಿಸ್ಟರ್‍ಗಳನ್ನು ತೆರೆಯಲಾಗುತ್ತದೆ. ಇದೆಲ್ಲದರಿಂದ ಅಭ್ಯರ್ಥಿಗಳು ತಮಗೆ ಇಟ್ಟಿರುವ 18 ಲಕ್ಷ ರೂಗಳ ಮಿತಿಯ ಅರ್ಧದಷ್ಟನ್ನು ಮಾತ್ರ ಅಧಿಕೃತವಾಗಿ ಖರ್ಚು ಮಾಡಬಹುದಾಗಿದೆ. ಉಳಿದ ಅರ್ಧದಷ್ಟನ್ನು ಚುನಾವಣಾ ಆಯೋಗ ನೇಮಿತ ಶಾಡೋ ರಿಜಿಸ್ಟರ್‍ಗಳ ಮುಖಾಂತರ ಅಭ್ಯರ್ಥಿಯ ಮೇಲೆ ಹೇರಲಾಗುತ್ತದೆ.

ವಿವಿಧ ಚುನಾವಣಾ ವಿಧಾನಗಳು

ಜಗತ್ತಿನಾದ್ಯಂತ ತಮ್ಮ ರಾಷ್ಟ್ರೀಯ ಸಂಸತ್ತಿಗೆ ಪ್ರತಿನಿಧಿಗಳನ್ನು ಹಾಗೂ ತಮ್ಮ ರಾಷ್ಟ್ರೀಯ ಸರ್ಕಾರದ ಮುಖ್ಯಸ್ಥನನ್ನು ಆಯ್ಕೆ ಮಾಡಿಕೊಳ್ಳಲು ದೇಶಗಳು ಇಪ್ಪತ್ತಕ್ಕೂ ಹೆಚ್ಚಿನ ಚುನಾವಣೆಯ ವಿಧಾನಗಳನ್ನು ಅಳವಡಿಸಿಕೊಂಡಿವೆ. ಇವುಗಳಲ್ಲಿ ಮುಖ್ಯವಾದವು ಈ ಕೆಳಗಿನಂತಿವೆ.

 1. ಒಂದೇ ಸುತ್ತಿನ — ಹಲವು ಅಭ್ಯರ್ಥಿಗಳ — ಯಾರು ಮುಂದೆಯೆಂಬ (ಫಸ್ಟ್ ಪಾಸ್ಟ್ ದಿ ಪೋಸ್ಟ್) ಚುನಾವಣೆ: ಇದು ಭಾರತ, ಅಮೆರಿಕಾ, ಇಂಗ್ಲೆಂಡ್ ಮುಂತಾದ ದೇಶಗಳಲ್ಲಿದೆ. ಈ ಪದ್ಧತಿಯಲ್ಲಿ ಒಂದು ಕ್ಷೇತ್ರದ ಚುನಾವಣೆಯಲ್ಲಿ ಹಲವಾರು ಅಭ್ಯರ್ಥಿಗಳಿದ್ದು ಯಾರಿಗೆ ಬೇರೆಲ್ಲರಿಗಿಂತ ಹೆಚ್ಚು ಮತ ಸಲ್ಲುವುದೋ ಅವರನ್ನೇ ವಿಜಯಿಯೆಂದು ಘೋಷಿಸಲಾಗುತ್ತದೆ. ಗೆಲ್ಲುವ ಅಭ್ಯರ್ಥಿಗೆ ಇಂತಿಷ್ಟೇ ಮತಗಳು ಬರಬೇಕೆಂಬ ಯಾವುದೇ ನಿಗದಿಯಿಲ್ಲ.
 2. ಎರಡು—ಮೂರು ಸುತ್ತಿನ ಬಹುಮತ ಬಯಸುವ ಚುನಾವಣೆ: ಇದು ಫ್ರಾನ್ಸ್, ಆಸ್ಟ್ರೇಲಿಯಾ, ಶ್ರೀಲಂಕಾ ಮತ್ತಿತರ ದೇಶಗಳಲ್ಲಿ ಕೆಲವು ಮಾರ್ಪಾಡುಗಳೊಂದಿಗೆ ಚಾಲನೆಯಲ್ಲಿದೆ. ಇದರಂತೆ ಮೊದಲ ಸುತ್ತಿನ ಮತದಾನದಲ್ಲಿ ಅತಿ ಹೆಚ್ಚು ಮತ/ಪ್ರಥಮ ಪ್ರಾಶಸ್ತ್ಯದ ಮತ ಪಡೆದ ಎರಡು/ಮೂರು ಅಭ್ಯರ್ಥಿಗಳು ಎರಡನೆಯ ಸುತ್ತಿನಲ್ಲಿ ಮತ್ತೊಮ್ಮೆ ಪರಸ್ಪರ ಸೆಣೆಸುತ್ತಾರೆ. ಈ ಎರಡನೆಯ ಸುತ್ತಿನಲ್ಲಿ ಗಂಭೀರ ಅಭ್ಯರ್ಥಿಗಳಷ್ಟೇ ಉಳಿದು ಚುನಾವಣೆಯಲ್ಲಿ ಗೆಲ್ಲುವ ಅಭ್ಯರ್ಥಿಯು ಶೇಕಡಾ 50ಕ್ಕೂ ಹೆಚ್ಚಿನ ಬಹುಮತ ಪಡೆಯುವ ಅಪೇಕ್ಷೆಯಿರುತ್ತದೆ.
 3. ಪ್ರಮಾಣಾನುಸಾರದ (ಪ್ರೊಪೋರ್ಶನೇಟ್) ಅಥವಾ ಲಿಸ್ಟ್ ಚುನಾವಣಾ ಪದ್ಧತಿ: ಇದು ಜರ್ಮನಿ, ಹಾಲೆಂಡ್, ಇಸ್ರೇಲ್ ಮತ್ತಿತರ ದೇಶಗಳಲ್ಲಿದೆ. ಇದರಂತೆ ಪಕ್ಷಗಳು ಚುನಾವಣೆಯಲ್ಲಿ ತಾವು ಪಡೆಯುವ ಮತಗಳ ಪ್ರಮಾಣದ ಅನುಪಾತದಲ್ಲಿ ಸಂಸತ್ತಿಗೆ ತಮ್ಮ ಪ್ರತಿನಿಧಿಗಳನ್ನು ಕಳುಹಿಸುವ ಪದ್ಧತಿಯಿದೆ. ಕೆಲವು ದೇಶಗಳಲ್ಲಿ ಈ ಪ್ರಮಾಣವನ್ನು ಇಡೀ ರಾಷ್ಟ್ರದಲ್ಲಿ ಚಲಾಯಿತ ಮತಗಳಿಗನುಸಾರ ಹಂಚಿದರೆ ಇನ್ನು ಕೆಲವು ದೇಶಗಳಲ್ಲಿ ಪಕ್ಷಗಳು ಆಯಾ ರಾಜ್ಯ/ಪ್ರದೇಶಗಳಲ್ಲಿ ಪಡೆದ ಮತಗಳ ಅನುಪಾತದಲ್ಲಿ ರಾಷ್ಟ್ರೀಯ ಸಂಸತ್ತಿನಲ್ಲಿ ಪ್ರಾತಿನಿಧ್ಯ ದೊರೆಯುತ್ತದೆ. ಕೆಲವು ದೇಶಗಳಲ್ಲಿ ಮತದಾರರು ಪಕ್ಷಗಳು ತಾವು ಕಳುಹಿಸಬಹುದಾದ ಪ್ರತಿನಿಧಿಗಳನ್ನೂ ನಿರ್ಧರಿಸುವ ಸ್ವಾತಂತ್ರ್ಯ ಹೊಂದಿರುತ್ತಾರೆ.
 4. ಮಿಶ್ರ ಚುನಾವಣಾ ಪದ್ಧತಿ: ಇನ್ನು ಕೆಲವು ದೇಶಗಳು ರಾಷ್ಟ್ರ ಮಟ್ಟದಲ್ಲಿ ಒಂದು ಚುನಾವಣಾ ಪದ್ಧತಿಯನ್ನು ಹೊಂದಿದ್ದರೆ ಪ್ರದೇಶಗಳ ಮಟ್ಟದಲ್ಲಿ ಇನ್ನೊಂದು ಪದ್ಧತಿ ಹೊಂದಿರುತ್ತವೆ. ಇನ್ನು ಕೆಲವು ದೇಶಗಳಲ್ಲಿ ಅರ್ಧದಷ್ಟು ಪ್ರತಿನಿಧಿಗಳು ನೇರವಾಗಿ ಆಯ್ಕೆಯಾದರೆ ಉಳಿದರ್ಧ ಪ್ರತಿನಿಧಿಗಳು ಪಕ್ಷಗಳು ಪಡೆದ ಮತಗಳ ಅನುಪಾತದಲ್ಲಿ ಚುನಾಯಿತರಾಗಿ ಬರುತ್ತಾರೆ. ಈ ಎಲ್ಲಾ ಪದ್ಧತಿಗಳಲ್ಲಿ ಯಾವುದೇ ಒಬ್ಬ ಅಭ್ಯರ್ಥಿ ಹಾಗೂ ಪಕ್ಷ ಯಾವುದೇ ಒಂದು ಚುನಾವಣಾ ಕ್ಷೇತ್ರದ ಮೇಲೆ ಸಂಪೂರ್ಣ ಹಿಡಿತ ಸಾಧಿಸುವುದನ್ನು ತಪ್ಪಿಸಲು ಸಾಂವಿಧಾನಿಕ ಪ್ರಾವಿಧಾನಗಳಿವೆ.

ಒಟ್ಟಾರೆಯಾಗಿ ಈ ಎಲ್ಲಾ ವಿಧಾನಗಳ ಮುಖಾಂತರ ಸಾಮಾನ್ಯ ಜನರ ಆಶಯ ಮತ್ತು ಅಪೇಕ್ಷೆಗಳು ಕಾನೂನು ರಚನೆ ಹಾಗೂ ಸಾರ್ವಜನಿಕ ಆಡಳಿತಗಳನ್ನು ನಿರ್ಧಾರ ಮಾಡುವುದನ್ನು ಬಯಸಿದೆ. ಇದನ್ನು ಖಾತ್ರಿ ಪಡಿಸಲು ಪಕ್ಷಗಳ ಆಂತರಿಕ ಮಟ್ಟದಲ್ಲಿಯೇ ಚುನಾವಣೆಗಳನ್ನು ನಡೆಸುವುದು ಹಾಗೂ ಅಪ್ರತ್ಯಕ್ಷ ಚುನಾವಣೆಯ ಮೂಲಕ ಪ್ರಾತಿನಿಧ್ಯವನ್ನು ಬಯಸುವುದು ಕೂಡಾ ಚಾಲ್ತಿಯಲ್ಲಿದೆ. ಆದರೂ ಪ್ರಜಾಪ್ರಭುತ್ವದ ಎಲ್ಲಾ ಆಶಯಗಳನ್ನು ಮೀರಿ ಚುನಾವಣೆಗಳನ್ನು ಹೈಜಾಕ್ ಮಾಡುವುದು ಕೂಡಾ ಸಾಮಾನ್ಯವಾಗಿದೆ. ಹಣ ಮತ್ತು ತೋಳ್ಬಲದ ನೆರವಿನಿಂದ ಚುನಾವಣೆಗಳನ್ನು ಕೇವಲ ಕಾಗದದಲ್ಲಷ್ಟೇ ತೋರಿಸಿ ಜನತಂತ್ರದ ಗುರಿಗಳನ್ನು ಗಾಳಿಗೆ ತೂರುವುದು ಕೂಡಾ ಸಾಮಾನ್ಯವಾಗಿದೆ.

ಬೇರೆ ದೇಶಗಳಲ್ಲಿ ಏನಾಗುತ್ತಿದೆ?

ಚುನಾವಣೆಯಲ್ಲಿ ದುಡ್ಡೇ ದೊಡ್ಡಪ್ಪನೆಂಬ ಆರೋಪ ಕೇವಲ ಭಾರತಕ್ಕೆ ಸೀಮಿತವಾದದ್ದಲ್ಲ. ಅಮೆರಿಕೆಯಲ್ಲಿಯೂ ಚುನಾವಣೆ ಎದುರಿಸಬಯಸುವ ಯಾವುದೇ ಅಭ್ಯರ್ಥಿಯೂ ಅದಕ್ಕೆ ಬೇಕಾದ ಹಣದ ಕ್ರೂಢೀಕರಣದ ಬಗ್ಗೆ ಮುತುವರ್ಜಿ ವಹಿಸಬೇಕಾಗುತ್ತದೆ. ಅಮೆರಿಕೆಯ ಚುನಾವಣೆಯಲ್ಲಿ ಮತದಾರರಿಗೆ ಹಣ ಹಂಚಿ ಗೆಲ್ಲುವ ಯಾವುದೇ ನಿದರ್ಶನಗಳಿಲ್ಲದಿದ್ದರೂ, ಮಾಧ್ಯಮಗಳ ಪ್ರಚಾರಕ್ಕೆ ಬೇಕಾದ ಹಣ ಹೊಂದಿಸುವಲ್ಲಿ ಅಭ್ಯರ್ಥಿಗಳ ಬಲಾಬಲ ಪರೀಕ್ಷೆಯಾಗುತ್ತದೆ. ರಿಪಬ್ಲಿಕನ್ ಹಾಗೂ ಡೆಮಾಕ್ರೆಟಿಕ್ ಪಕ್ಷಗಳೆರಡರ ಅಭ್ಯರ್ಥಿಗಳೂ ಖಾಸಗಿ ಹಿತಾಸಕ್ತಿಗಳಿಗೆ ಬದ್ಧವಾಗಿರುವ ಎಲೆಕ್ಟೊರಲ್ ಟ್ರಸ್ಟ್‍ಗಳಿಂದ ದೇಣಿಗೆ ಪಡೆಯುತ್ತಾರೆ. ಇನ್‍ಶೂರೆನ್ಸ್, ಔಷಧಿ ತಯಾರಕರು, ಬಂದೂಕು ತಯಾರಕರು, ಕೆಥೊಲಿಕ್ ಪ್ರಚಾರಕರು ಮತ್ತಿತರ ಹಿತಾಸಕ್ತಿಗಳು ತಮ್ಮ ನೀತಿ—ನಿಲುವುಗಳನ್ನು ಒಪ್ಪಿಕೊಳ್ಳುವ ಹಾಗೂ ಜಾರಿಗೆ ತರುವ ಅಭ್ಯರ್ಥಿಗಳಿಗೆ ಉದಾರವಾಗಿ ದೇಣಿಗೆ ನೀಡುತ್ತಾರೆ. ಗೆಲ್ಲುವ ಕುದುರೆಗಳಿಗೆ ಹೆಚ್ಚಿನ ಹಣ ಸಿಗುತ್ತಾದರೂ, ಖಾಸಗಿ ಹಿತಾಸಕ್ತಿಗಳನ್ನು ಪ್ರತಿನಿಧಿಸುವ ಅಭ್ಯರ್ಥಿಗಳಿಗೆ ಹಣದ ಕೊರತೆ ಉಂಟಾಗದ ಪರಿಸ್ಥಿತಿಯೂ ಇದೆ.

ಇದಕ್ಕೆ ಅಪವಾದವೆಂಬಂತೆ ಹಿಂದಿನ ಅಧ್ಯಕ್ಷ ಬರಾಕ್ ಓಬಾಮಾರವರು ತಮ್ಮ ಪಕ್ಷದ ಅಧ್ಯಕ್ಷೀಯ ಅಭ್ಯರ್ಥಿಯಾಗಿ ನಾಮಕರಣಗೊಳ್ಳುವವರೆಗೂ ಸಾರ್ವಜನಿಕ ದೇಣಿಗೆಯ ಮೇಲೆಯೇ ತಮ್ಮ ಚುನಾವಣಾ ಖರ್ಚನ್ನು ನಿರ್ವಹಿಸಿದ್ದರು. ಆ ಸಮಯದಲ್ಲಿ ಅಮೆರಿಕದ ಉದಾರವಾದಿಗಳು ಹಾಗೂ ಅಲ್ಪಸಂಖ್ಯಾತ ಕರಿಯರು ತಮ್ಮ ಅಭ್ಯರ್ಥಿ ಗೆಲ್ಲಲೆಂದು ಐದು—ಹತ್ತು ಡಾಲರ್‍ಗಳ ಲಕ್ಷಾಂತರ ವೈಯಕ್ತಿಕ ದೇಣಿಗೆಗಳನ್ನು ಸಂಗ್ರಹಿಸಿದ್ದರು. ಪಟ್ಟಭದ್ರ ಹಿತಾಸಕ್ತಿಗಳ ಮರ್ಜಿಗೆ ಒಳಗಾಗದೆಯೂ ತಮ್ಮ ಉಮೇದುವಾರಿಕೆಯನ್ನು ಬಲಪಡಿಸಬಹುದೆಂದು ತೋರಿಸಿದ್ದರು.

ಅಮೆರಿಕೆಯ ಇನ್ನು ಕೆಲವಾರು ಸ್ವತಂತ್ರ `ಎಲೆಕ್ಟೊರಲ್ ಟ್ರಸ್ಟ್’ಗಳಿಗೆ ಸಾಮಾನ್ಯರೂ ದೇಣಿಗೆ ಕೊಡುವ ವ್ಯವಸ್ಥೆಯಿದೆ. ಆದರೆ ಇತ್ತೀಚೆಗೆ ಈ ಟ್ರಸ್ಟ್‍ಗಳನ್ನು ಬಳಸಿಕೊಂಡು ರಷ್ಯಾ, ಸೌದಿ ಅರೇಬಿಯಾ, ಇಸ್ರೇಲ್ ಮತ್ತಿತರ ವಿದೇಶೀ ಶಕ್ತಿಗಳು ಅಮೆರಿಕೆಯ ಚುನಾವಣಾ ವ್ಯವಸ್ಥೆಯ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತಿರುವ ಗುಮಾನಿಗಳೂ ಎದ್ದಿವೆ.

ಈ ಸಂದರ್ಭದಲ್ಲಿ ಪಟ್ಟಭದ್ರ ಹಿತಾಸಕ್ತಿಗಳ ದೇಣಿಗೆಯ ಆಧಾರದ ಮೇಲೆ ಚುನಾವಣೆ ನಡೆಸುವ ಹಾಗೂ ಭ್ರಷ್ಟ ರಾಜಕಾರಣಿಯೊಬ್ಬ ತಾನು ಗಳಿಸಿದ ಹಣದ ಮೇಲೆ ಚುನಾವಣೆ ನಡೆಸುವ ಹೋಲಿಕೆಯೂ ಕೂಡಾ ಕುತೂಹಲಕಾರಿಯಾದ ಸಂಗತಿಗಳನ್ನು ಹೊರಗೆಡಹಿದೆ. ವ್ಯವಸ್ಥೆಗೆ ತನ್ನನ್ನು ತಾನು ಮಾರಿಕೊಂಡವನು ಮೇಲೋ ಅಥವಾ ವ್ಯವಸ್ಥೆಯನ್ನು ಹಾಳುಗೆಡವಿ ಹಣಮಾಡಿದವನು ಮೇಲೋ ಎಂಬ ಜಿಜ್ಞಾಸೆಯೂ ನಮ್ಮನ್ನು ಕಾಡಿದೆ. ಇಬ್ಬರೂ ಅಯೋಗ್ಯರು ಎಂದು ಸುಲಭಸಾಧ್ಯ ಉತ್ತರ ನೀಡಬಹುದಾದರೂ, ಇಬ್ಬರಲ್ಲಿ ಒಬ್ಬರನ್ನು ಆಯ್ಕೆ ಮಾಡುಕೊಳ್ಳಬೇಕಾದ ಅನಿವಾರ್ಯತೆಯಲ್ಲಿ ಮೈ ಪರಚಿಕೊಳ್ಳುವ ಸಂದಿಗ್ಧತೆ ನಮ್ಮನ್ನು ಕಾಡುತ್ತದೆ.

ಅಮೆರಿಕೆಯಲ್ಲಷ್ಟು ದುಡ್ಡಿನ ಪ್ರಭಾವ ಐರೋಪ್ಯ ದೇಶಗಳಲ್ಲಿ ಇಲ್ಲವಾದರೂ ಚುನಾವಣೆಗೆ ಅಗತ್ಯ ಹಣದ ಕ್ರೂಢೀಕರಣ ಅಲ್ಲಿಯೂ ಇದೆ. ಜಪಾನ್ ಹಾಗೂ ದಕ್ಷಿಣ ಕೊರಿಯಾಗಳಲ್ಲಿಯೂ ಚುನಾವಣಾ ರಾಜಕೀಯದಿಂದ ಉಂಟಾದ ಭ್ರಷ್ಟತೆಯ ನಿದರ್ಶನಗಳು ಆಗಾಗ್ಗೆ ಕಂಡುಬರುತ್ತವೆ. ಆದರೆ ಈ ಯಾವುದೇ ಆಭಿವೃದ್ಧಿ ಹೊಂದಿದ ರಾಷ್ಟ್ರಗಳಲ್ಲಿ ವೋಟಿಗೊಂದು ನೋಟು ನೀಡುವ ಪದ್ಧತಿ ಇಲ್ಲವೆಂಬುದಂತೂ ನಿಚ್ಚಳವಾಗಿದೆ.

ಹೇಳುವುದೇ ಒಂದು, ಮಾಡುವುದು ಇನ್ನೊಂದು

ದೇಶದಲ್ಲಿ ಬೇರೆಲ್ಲ ಕ್ಷೇತ್ರಗಳಂತೆ ಚುನಾವಣೆಗಳಲ್ಲಿಯೂ ನಾವು ಹೇಳುವುದೇ ಒಂದು, ಮಾಡುವುದು ಇನ್ನೊಂದು ಎಂಬ ಹಾಗಾಗಿದೆ. ಕೇವಲ 18 ಲಕ್ಷ ರೂಗಳ ಮಿತಿಯೊಳಗೆ ಇಂದು ಯಾವುದೇ ಅಭ್ಯರ್ಥಿಯೂ ತನ್ನ ಖರ್ಚುವೆಚ್ಚಗಳನ್ನು ಮಿತಿಗೊಳಿಸಲಾಗುತ್ತಿಲ್ಲ. ಚುನಾವಣೆಯ ಹಿಂದಿನ ದಿನ ಮತದಾರರಿಗೆ ಹಂಚುವ ಹಣವನ್ನು ಲೆಕ್ಕಕ್ಕೆ ತೆಗೆದುಕೊಳ್ಳದಿದ್ದರೂ ಅಭ್ಯರ್ಥಿಯೊಬ್ಬ ಕೇವಲ ಪ್ರಚಾರಕ್ಕಾಗಿ ಒಂದು ಕೋಟಿಯಿಂದ ಎರಡು ಕೋಟಿಯವರೆಗೆ ಖರ್ಚು ಮಾಡಬೇಕಾಗುತ್ತದೆ. ಕಾರ್ಯಕರ್ತರಿಗೆ ಸಂಬಳ—ದಿನಗೂಲಿ, ವಾಹನ, ಪ್ರಚಾರ ಸಾಮಗ್ರಿ, ವೇದಿಕೆಗಳು, ಮೆರವಣಿಗೆ, ಊಟ, ವಸತಿ ಸೇರಿದಂತೆ ಕರ್ನಾಟಕದ ಯಾವುದೇ ಹಿಂದುಳಿದ ತಾಲ್ಲೂಕಿನಲ್ಲಿಯೂ ಒಂದು ಕೋಟಿಗೆ ಕಡಿಮೆಯಿಲ್ಲದಷ್ಟು ಖರ್ಚಾಗುತ್ತದೆ. ಬೆಂಗಳೂರಿನ ಹಾಗೂ ದೊಡ್ಡ ನಗರಗಳ ಸುತ್ತಮುತ್ತಲ ಪ್ರದೇಶಗಳಲ್ಲಿ ಈ ಖರ್ಚು ಎರಡು ಕೋಟಿಯನ್ನೂ ಸುಲಭವಾಗಿ ಮೀರುತ್ತದೆ. ಈ ಖರ್ಚಿನ ಅಗತ್ಯ ಚುನಾವಣಾ ಆಯೋಗಕ್ಕೆ ತಿಳಿಯದ ವಿಷಯವಲ್ಲ. ಆದರೆ ಎಂದಿನಂತೆ ನಮ್ಮ ದೇಶದಲ್ಲಿ ನಾವು ಮಾಡಿರುವ ಅನಗತ್ಯ ಕಾನೂನುಗಳಂತೆ ಚುನಾವಣಾ ಆಯೋಗ ವಿಧಿಸಿರುವ ಈ ಖರ್ಚಿನ ಮಿತಿಯೂ ಒಂದು ಅಸಂಬದ್ಧ ಹಾಗೂ ಬೂಟಾಟಿಕೆಯ ಕಾನೂನು. ಈ 18 ಲಕ್ಷ ರೂಗಳ ಮಿತಿಯನ್ನು ನಾವು ಒಂದು ಕೋಟಿಗೋ ಅಥವಾ ಎರಡು ಕೋಟಿಗೋ ಹೆಚ್ಚಿಸಿದರೆ ಅದರಿಂದ ಯಾರಿಗೂ ನಷ್ಟವಾಗುವುದಿಲ್ಲ. ಕರ್ನಾಟಕದ ಯಾವುದೇ ಮೂಲೆಯಲ್ಲಿನ ಕ್ಷೇತ್ರದಲ್ಲಿಯೂ ಗೆಲ್ಲಬೇಕೆಂದು ಹೋರಾಡುವ ಮೂರೂ ಪಕ್ಷಗಳ ಯಾವುದೇ ಅಭ್ಯರ್ಥಿಯೂ ಒಂದು ಕೋಟಿಗೆ ಕಡಿಮೆ ಖರ್ಚು ಮಾಡಿರಲಾರರು. ಆದರೂ ಕೂಡಾ ನಮ್ಮ ಚುನಾವಣಾ ಆಯೋಗ ಅತ್ಯಂತ ಕೃತಕ ಮತ್ತು ಬೂಟಾಟಿಕೆಯ 18 ಲಕ್ಷ ರೂಗಳ ಮಿತಿಯನ್ನು ಅಭ್ಯರ್ಥಿಯ ಮೇಲೆ ಹೇರಿದೆ. ಹೀಗೆ ಎಲ್ಲ ಅಭ್ಯರ್ಥಿಗಳು ಎಲ್ಲರಿಂದ ಕಾಡಿಬೇಡಿ ಹಣ ಹೊಂದಿಸುವುದರ ಜೊತೆಗೆ ಈ ಹಣವನ್ನು ಕದ್ದು ಮುಚ್ಚಿ ಖರ್ಚು ಮಾಡಬೇಕಾದ ಅನಿವಾರ್ಯ ಭ್ರಷ್ಟ ವ್ಯವಸ್ಥೆಗೆ ದೂಡಲ್ಪಟ್ಟಿದ್ದಾರೆ.

ಪ್ರಜಾಪ್ರಭುತ್ವ ವಿರೋಧಿ ಮಿತಿ

ಚುನಾವಣಾ ಆಯೋಗವು ಹಣಬಳಕೆಯ ಮೇಲೆ ವಿಧಿಸಿರುವ ಈ ಮಿತಿಯು ಮೂಲತಃ ಪ್ರಜಾಪ್ರಭುತ್ವ ವಿರೋಧಿಯಾಗಿದೆ. ಈ ಮಿತಿಯು ಯಾವುದೇ ಸ್ವತಂತ್ರ ಅಭ್ಯರ್ಥಿಯೊಬ್ಬ ಚುನಾವಣೆಯ ಸಂದರ್ಭದಲ್ಲಿ ತನ್ನ ಮತದಾರರನ್ನು ತಲುಪುವ ಅವಕಾಶವನ್ನೇ ಕಸಿದುಕೊಂಡಿದೆ. ಪ್ರಾಮಾಣಿಕವಾಗಿ ದುಡಿದು ತಂದ ಹಣದಲ್ಲಿ ಚುನಾವಣೆ ಎದುರಿಸಲು ಬಯಸುವ ಸಾಮಾಜಿಕ ಕಾರ್ಯಕರ್ತನೊಬ್ಬ ಇಂದು ಮೊದಲು ತನ್ನ ಬಿಳಿಹಣವನ್ನು ಕಪ್ಪುಹಣವಾಗಿ ಪರಿವರ್ತಿಸಬೇಕಾಗಿದೆ. ನಂತರದಲ್ಲಿ ಆ ಹಣದಿಂದ ಕ್ಷೇತ್ರವೊಂದರಲ್ಲಿ ಕಾರ್ಯಕರ್ತರನ್ನು ನೇಮಿಸಿ ಪ್ರತಿಯೊಬ್ಬ ಮತದಾರರನ್ನು ತಲುಪುವ ಅತ್ಯಂತ ಕನಿಷ್ಠ ವ್ಯವಸ್ಥೆಗೂ ಇಂದು ಲಕ್ಷಾಂತರ ಖರ್ಚಾಗುತ್ತದೆ.

ಗೆಲುವಿನ ಸಮೀಪ ಬರಬೇಕೆನ್ನುವ ಪ್ರಾಮಾಣಿಕ ಪ್ರಯತ್ನಕ್ಕೆ ಕನಿಷ್ಠವೆಂದರೂ ಎರಡು ಕೋಟಿ ರೂಪಾಯಿ ಖರ್ಚಾಗಬಹುದು. ತನ್ನ ಲಿಖಿತ ಪ್ರಚಾರ ಸಾಮಗ್ರಿಯನ್ನು ಕ್ಷೇತ್ರದ 40,000 ಕುಟುಂಬಗಳಿಗೆ ತಲುಪಿಸಲು ಒಬ್ಬ ಅಭ್ಯರ್ಥಿಗೆ ಲಕ್ಷಾಂತರ ಖರ್ಚು ಬೇಕಾಗುತ್ತದೆ. ಕ್ಷೇತ್ರದಲ್ಲಿ ಪ್ರಚಾರಕ್ಕೆಂದು ನೂರು ಜನ ಕಾರ್ಯಕರ್ತರ ಪಡೆಯನ್ನು ಇಪ್ಪತ್ತು ದಿನಗಳ ಕಾಲ ಸಾಕಲು ಕನಿಷ್ಠ ಇಪ್ಪತ್ತು ಲಕ್ಷಗಳಷ್ಟು ಖರ್ಚಾಗುತ್ತದೆ. ಈ ಲೆಕ್ಕಾಚಾರಗಳು ಸ್ಥಾಪಿತ ಪಕ್ಷಗಳ ಅಭ್ಯರ್ಥಿಗಳಿಗೂ ಕೂಡಾ ಇರುತ್ತದೆ. ಪಕ್ಷಕ್ಕೆ ಮತ್ತು ಸಿದ್ಧಾಂತಕ್ಕೆ ನಿಷ್ಠೆಯಿಟ್ಟು ಕೆಲಸ ಮಾಡುವ ಸ್ವಯಂಸೇವಿ ಕಾರ್ಯಕರ್ತರ ಕಾಲ ಕ್ಷೀಣಿಸಿರುವ ಈ ಸಮಯದಲ್ಲಿ ಈ ತೆರನಾದ ಖರ್ಚುಗಳು ಅನಿವಾರ್ಯವಾಗಿವೆ. ಈ ಖರ್ಚನ್ನು ಅಭ್ಯರ್ಥಿಯೇ ಭರಿಸಬಹುದು ಅಥವಾ ಅವನ ಪರವಾಗಿ ಪಕ್ಷದ ಸ್ಥಳೀಯ ಘಟಕ ಅಥವಾ ಹಿತಾಸಕ್ತ ಸ್ಥಳೀಯ ಮುಖಂಡರು ಭರಿಸಬಹುದು. ಆದರೆ ಮಾಡಬೇಕಾದ ಖರ್ಚು ಮಾತ್ರ ಅನಿವಾರ್ಯ. ಹೀಗಾಗಿ ಇಂದಿನ ಚುನಾವಣೆಯಲ್ಲಿ ಸ್ಪರ್ಧಿಸಬಯಸುವ ಪ್ರಾಮಾಣಿಕ ಅಭ್ಯರ್ಥಿ ಕೂಡಾ ಮೊದಲು ಕಪ್ಪುಹಣವನ್ನು ಕ್ರೂಢೀಕರಿಸುವ ತಾಂತ್ರಿಕತೆಯನ್ನು ಪಡೆಯಬೇಕು. ಇಲ್ಲವಾದಲ್ಲಿ ಆತ ಚುನಾವಣಾ ಆಯೋಗದ ಕೆಂಗಣ್ಣಿಗೆ ಗುರಿಯಾಗಬಹುದು.

ವಿಫಲ ಚುನಾವಣಾ ಆಯೋಗ

ಹಣದ ಸಾಗಾಣಿಕೆ ಹಾಗೂ ವಿತರಣೆಯ ಮೇಲೆ ಇನ್ನಿಲ್ಲದ ನಿರ್ಬಂಧ ಹೇರಿರುವ ಚುನಾವಣಾ ಆಯೋಗವು ವೋಟಿಗಾಗಿ ನೋಟು ಹಂಚುವ ಪರಿಪಾಠವನ್ನು ತಡೆಯಲು ಸಂಪೂರ್ಣವಾಗಿ ವಿಫಲವಾಗಿದೆ. ಚುನಾವಣೆಯಿಂದ ಚುನಾವಣೆಗೆ ಕರ್ನಾಟಕದಲ್ಲಿ ಯಾರು ಹೆಚ್ಚು ಹಣ ಹಂಚುವರೋ ಅವರೇ ಗೆಲ್ಲುತ್ತಾರೆ ನ್ನುವ ಸಂಭವನೀಯತೆ ಕಾಣುತ್ತಾ ಬರುತ್ತಿದೆ. ಚುನಾವಣೆಯ ದಿನಗಳಲ್ಲಿ ಅಲ್ಲಲ್ಲಿ ಹಣ ಸಾಗಾಣಿಕೆಯನ್ನು ತಡೆದು ಸಿಕ್ಕಿದ ಹಣವನ್ನು ಜಪ್ತಿ ಮಾಡಿಕೊಳ್ಳಲಾಗುತ್ತಿದೆಯಾದರೂ ಅಭ್ಯರ್ಥಿಗಳು ಚೆಲ್ಲುವ ಹಣದ ಪ್ರಮಾಣವೇನೂ ಕಡಿಮೆಯಾದಂತೆ ಕಾಣುತ್ತಿಲ್ಲ. ಸ್ಪರ್ಧಾತ್ಮಕವಾಗಿ ಹಣ ಹಂಚುವ ಪರಿಪಾಠದ ನಡುವೆ ಪ್ರಾಮಾಣಿಕ ಹಾಗೂ ದುಡ್ಡಿಲ್ಲದ ಅಭ್ಯರ್ಥಿಗಳಿಗೆ ಟಿಕೀಟು ನೀಡುವುದು ವ್ಯರ್ಥವೆಂದೂ ಪಕ್ಷಗಳು ನಂಬಿರುವಂತೆ ಕಾಣುತ್ತಿದೆ. ಪಕ್ಷಗಳ ಉಮೇದುವಾರಿಕೆ ಬಯಸಿ ಹೋಗುವ ಆಕಾಂಕ್ಷಿಗಳಿಗೆ ಕೇಳಲಾಗುತ್ತಿರುವ ಮೊದಲ ಪ್ರಶ್ನೆಯೇ `ಎಷ್ಟು ಹಣ ಚೆಲ್ತೀರ್ರೀ..?’ ಎಂಬುದಾಗಿದೆ. ಈ ಹಣ ಚೆಲ್ಲುವಿಕೆಯೂ ಒಂದು ಕಲಾತ್ಮಕ ರೂಪ ಪಡೆಯುತ್ತಿದ್ದು, ತಮಿಳುನಾಡಿನ ಆರ್. ಕೆ.ನಗರದಲ್ಲಿ ಮೂರು ತಿಂಗಳ ಹಿಂದೆ ನಡೆದ ಚುನಾವಣೆ ಇದಕ್ಕೆ ನಿದರ್ಶನವಾಗಿದೆ. ಚುನಾವಣೆಗೆ ಮುಂಚೆ ಇಪ್ಪತ್ತು ರೂಪಾಯಿಯ ನೋಟನ್ನು ಪ್ರಾಮಿಸರಿ ಕಾಗದ ಅಥವಾ ಬೇರರ್ ಬಾಂಡಿನಂತೆ ಪ್ರಯೋಗಿಸಿದ ಅಭ್ಯರ್ಥಿಯು ಚುನಾವಣೆಯಲ್ಲಿ ಗೆದ್ದ ನಂತರ ನೀಡಿದ್ದ ಭರವಸೆಯಂತೆ ವೋಟಿಗೆ ತಲಾ 10,000 ರೂಗಳನ್ನು ನೀಡಿದರಂತೆ. ಹೀಗೆ ಒಂದು ಉಪಚುನಾವಣೆಯಲ್ಲಿಯೇ ಸರಿಸುಮಾರು 150 ಕೋಟಿ ರೂಗಳನ್ನು ಖರ್ಚು ಮಾಡಿರಬಹುದಾದ ಸಂದರ್ಭದಲ್ಲಿ ಪ್ರಾಮಾಣಿಕ ಕಾರ್ಯಕರ್ತನೊಬ್ಬ ತನ್ನ ಗುಣ—ಅರ್ಹತೆಗಳಿಂದ ಆಯ್ಕೆಯಾಗಬಯಸುವ ಸಾಧ್ಯತೆಗಳೆಲ್ಲಿದೆ?

ಹಣ ಹಂಚಿ ಚುನಾವಣೆ ಗೆಲ್ಲುವ ಈ ನಗ್ನಸತ್ಯದ ಮುಂದೆ ಚುನಾವಣಾ ಆಯೋಗವೇ ಮೂಕಪ್ರೇಕ್ಷಕನಾಗಿದೆ. ಹಣ ವಿತರಣೆಯ ಮೇಲೆ ಕಡಿವಾಣ ಹಾಕಲಾಗದಿದ್ದರೂ ಅದನ್ನು ಒಪ್ಪಿ ಪರ್ಯಾಯಗಳನ್ನು ಹುಡುಕುವ ಗೋಜಿಗೆ ಹೋಗದೆ ಕಣ್ಣು— ಕಿವಿ—ಬಾಯಿ ಮುಚ್ಚಿದ ಕೋತಿಗಳಂತೆ ಚುನಾವಣಾ ಆಯೋಗ ಕುಳಿತುಬಿಟ್ಟಿದೆ.

ಕಾಸಿಗೆ, ಬೆದರಿಕೆಗೆ ‘ಸುದ್ದಿ’

ಕೆಲವು ವರ್ಷಗಳ ಹಿಂದೆ ಕಾಸು ನೀಡಿದರೆ ಮಾತ್ರ ಸುದ್ದಿ ನೀಡುವ ಆಪಾದನೆ ಕೇಳಿಬರುತ್ತಿತ್ತು. ಆದರೆ ಇಂದು `ಕಾಸಿಗೆ ಸುದ್ದಿ’ಯೇ ವ್ಯವಸ್ಥೆಯಾಗಿ ಇದರ ಬಗ್ಗೆ ಯಾರೂ ಆಕ್ಷೇಪದ ಮಾತನಾಡುವ ಪರಿಸ್ಥಿತಿ ಇಲ್ಲವಾಗಿದೆ. ಬದಲಿಗೆ ಪತ್ರಿಕೆಗಳು ಹಾಗೂ ಸುದ್ದಿ ಮಾಧ್ಯಮಗಳು `ಸುದ್ದಿ’ಯ ಬೆದರಿಕೆ ಒಡ್ಡಿ ಪಕ್ಷಗಳಿಂದ ಹಾಗೂ ಅಭ್ಯರ್ಥಿಗಳಿಂದ ಹಣ ದೋಚುವ ನಿದರ್ಶನಗಳು ಜಗಜ್ಜಾಹೀರಾಗಿವೆ. ಮೇಲಾಗಿ, ಚುನಾವಣೆಯ ಸಂದರ್ಭದಲ್ಲಿ ಅಭ್ಯರ್ಥಿಗಳ ಅನಿವಾರ್ಯತೆ ಹಾಗೂ ಅಸಹಾಯಕತೆಯ ಕಾರಣದಿಂದ ಹಣ ಮಾಡುವ ದಂಧೆಗಿಳಿದಿರುವಂತೆ ಕಾಣುತ್ತಿದೆ. ಎಲ್ಲ ಪತ್ರಿಕೆ ಹಾಗೂ ಸುದ್ದಿ ಮಾಧ್ಯಮಗಳೂ ಈ ವ್ಯಾಪಾರಕ್ಕೆ ಇಳಿದಿದೆಯೆಂದು ಹೇಳಲಾಗದಿದ್ದರೂ ಮಾಧ್ಯಮ ಕ್ಷೇತ್ರದಲ್ಲಿ ಪ್ರಾಮಾಣಿಕರನ್ನು ದುರ್ಬೀನಿನಿಂದ ಹುಡುಕಬೇಕಾಗಿರುವುದು ಇಂದಿನ ದುರಂತಗಳಲ್ಲಿ ಒಂದಾಗಿದೆ. ಈ ಹಾವಳಿಯನ್ನು ತಡೆಯಲೂ ಚುನಾವಣಾ ಆಯೋಗ ವಿಫಲವಾಗಿದೆ. ಚುನಾವಣೆಯ ದಿನಗಳಲ್ಲಿಯಾದರೂ ಈ ಹಾವಳಿಯಿಂದ ಅಭ್ಯರ್ಥಿಗಳನ್ನು ಹಾಗೂ ಪಕ್ಷಗಳನ್ನು ರಕ್ಷಿಸಬೇಕಾದ ಗುರುತರ ಜವಾಬ್ದಾರಿಯನ್ನೂ ಆಯೋಗ ಅರಿತಂತೆ ಕಾಣುತ್ತಿಲ್ಲ.

ವೋಟಿಗಾಗಿ ನೋಟು ಬಯಸುವುದೇಕೆ?

ಸಮಸ್ಯೆಯ ಮೂಲವಿರುವುದು ಪ್ರಜಾಪ್ರಭುತ್ವ ಹಾಗೂ ಚುನಾವಣೆಯ ಬಗ್ಗೆ ಜನರ ತಾತ್ಸಾರ ಮನೋಭಾವದಲ್ಲಿಯೇ. ಎಲ್ಲರೂ ಕಳ್ಳರು, ಯಾರು ಗೆದ್ದು ನಮಗೇನು ಮಾಡಿದ್ದಾರೆ? ಎಲ್ಲರೂ ಮಾಡುವುದನ್ನೇ ನಾನೂ ಮಾಡುತ್ತೇನೆ ಎಂಬಿತ್ಯಾದಿ ಲಜ್ಜೆಗೆಟ್ಟ ಹಾಗೂ ಬೇಜವಾಬ್ದಾರಿಯ ಮಾತುಗಳನ್ನಾಡುತ್ತಾ ಜನರು ಪ್ರಜಾಪ್ರಭುತ್ವದ ಉದ್ದೇಶಗಳಿಗೆ ತಿಲಾಂಜಲಿ ಹಾಡುತ್ತಿದ್ದಾರೆ. ಜಾತಿಯಾಧಾರಿತ ರಾಜಕೀಯ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಿದ್ದವರು ಇಂದು ಜಾತಿಯ ಜೊತೆಗೆ ಹಣದ ಆಧಾರದ ಮೇಲೆ ತಮ್ಮ ರಾಜಕೀಯ ನಿರ್ಧಾರಗಳನ್ನು ತೆಗೆದುಕೊಳ್ಳುವ ಘೋರ ತಪ್ಪು ಮಾಡುತ್ತಿದ್ದಾರೆ. ನಮ್ಮ ರಾಜಕೀಯ ವ್ಯವಸ್ಥೆ ಎಷ್ಟೇ ಹದಗೆಟ್ಟಿದ್ದರೂ ಮತ್ತು ನಮ್ಮ ಇಂದಿನ ರಾಜಕಾರಣಿಗಳು ಎಷ್ಟೇ ಭ್ರಷ್ಟರಾಗಿದ್ದರೂ ನೋಟು ಪಡೆದು ವೋಟು ನೀಡುವ ಮನೋಭಾವ ಹೊಂದಿದ ನಾಗರಿಕರು ಪ್ರಜಾಪ್ರಭುತ್ವವೆಂಬ ಉದಾತ್ತ—ಪ್ರಭುದ್ಧ ರಾಜಕೀಯ ವ್ಯವಸ್ಥೆಗೇ ಅನರ್ಹರೇನೋ ಎಂಬ ಅನುಮಾನ ಮೂಡಿಸುವಂತಿದೆ.

ಆದರೂ ನಮ್ಮ ಜನರೇಕೆ ಮತ ನೀಡಲು ಹಣ ಬಯಸುತ್ತಾರೆಂಬ ಪ್ರಶ್ನೆಯನ್ನು ಅತ್ಯಂತ ಗಂಭೀರವಾಗಿ ಹಾಗೂ ಕೂಲಂಕಷವಾಗಿ ಅರಿಯಬೇಕಿದೆ.

 • ನಮ್ಮ ಪ್ರಜಾಪ್ರಭುತ್ವ ವ್ಯವಸ್ಥೆಯು ಬಲ್ಲಿದರ ಸೊತ್ತಾಗಿ ಬಡವರು— ದನಿಯಿಲ್ಲದವರು ಈ ಚುನಾವಣೆಯೆಂಬ ಸಮಯದಲ್ಲಿ ಬಲ್ಲಿದರಿಂದ ಸಾಧ್ಯವಾದಷ್ಟೂ ವಸೂಲಿ ಮಾಡಬೇಕೆಂಬ ಮನೋಭಾವದ ಕಾರಣದಿಂದ;
 • ಕಿತ್ತುತಿನ್ನುವ ಕಡುಬಡತನದಲ್ಲಿ ಯಾರಾದರೂ ನಿಮ್ಮ ವೋಟನ್ನು ಖರೀದಿ ಮಾಡುತ್ತೇವೆಂದು ಬಂದಾಗ ಬೇರೆ ಯಾವುದೇ ದಾರಿ ತೋರದೆ ಜೀವನಾನುಕೂಲದ ಕಾರಣದಿಂದ;
 • ಚುನಾವಣೆಯಲ್ಲಿ ಮೇಲ್ಜಾತಿಯವರ ಹಣಾಹಣಿಯಿರುವಾಗ ಹಿಂದುಳಿದ, ಅಲ್ಪಸಂಖ್ಯಾತ ಮತ್ತು ದಲಿತ ವರ್ಗಗಳ ಜನರು “ಯಾರದೋ ಜಾತ್ರೆಯಲ್ಲಿ ಉಂಡವನೇ ಜಾಣ”ನೆಂದು ಪ್ರತೀಕಾರ ತೀರಿಸಿಕೊಳ್ಳುವ ಕಾರಣದಿಂದ;
 • ಚುನಾವಣೆಯಲ್ಲಿ ನಿಂತಿರುವ ಎಲ್ಲರೂ ಭ್ರಷ್ಟರಿರುವಾಗ ಅವರಿಂದ ಕೈಲಾದಷ್ಟು ಕಿತ್ತುಕೊಂಡು ತಿನ್ನುವುದರಲ್ಲಿ ತಪ್ಪೇನೆಂಬ ಕಾರಣದಿಂದ;
 • ಯಾರು ಬಂದರೂ ಮಾಡುವದರಲ್ಲಷ್ಟೇ ಇದೆ, ಇಂದು ಕೈಗೆ ಸಿಕ್ಕಿದ್ದಷ್ಟೇ ನಮಗೆ ದಕ್ಕುವುದೆಂಬ ಕಾರಣದಿಂದ;

ಹೀಗೆ ಅನೇಕ ಕಾರಣಗಳಿಂದ ನಮ್ಮ ಜನ ತಮ್ಮ ಮತವನ್ನು ಮಾರಾಟಕ್ಕೆ ಇಟ್ಟಿರಬಹುದು. ಇನ್ನೂ ಕೆಲವರು ಸಮೂಹಸನ್ನಿಯಲ್ಲಿ ಸಿಕ್ಕಿಹಾಕಿಕೊಂಡು ಯಾವುದೇ ಯೋಚನೆ ಮಾಡದೆ ವೋಟಿಗಾಗಿ ನೋಟು ಪಡೆಯುತ್ತಿರಬಹುದು. ಅಥವಾ ಮೇಲ್ಕಂಡ ಎಲ್ಲಾ ಕಾರಣಗಳೂ ಸೇರಿದಂತೆ ಒಂದು ಹತಾಶ ಮನೋಭಾವದಲ್ಲಿ ಜನರು ತಮ್ಮ ಮತವನ್ನು ಮಾರುವಂತಹ ಮನಸ್ಥಿತಿಗೆ ಬಂದಿರಬಹುದು. ಒಮ್ಮೆ ವೋಟಿಗಾಗಿ ನೋಟು ಪಡೆದರೆ ಮುಂದಿನ ಐದು ವರ್ಷಗಳ ಕಾಲ ತಮ್ಮ ಪ್ರತಿನಿಧಿಯ ಉತ್ತರದಾಯಿತ್ವದ ಬಗ್ಗೆ ಪ್ರಶ್ನೆ ಮಾಡುವ ನೈತಿಕ ಅಧಿಕಾರವನ್ನು ಕಳೆದುಕೊಳ್ಳುತ್ತೇವೆಂಬ ಕನಿಷ್ಠ ಪರಿಜ್ಞಾನವೂ ನಮ್ಮ ಜನರಿಗೆ ಇಲ್ಲವಾಗಿದೆ. ಪ್ರತಿನಿಧಿಯ ಕೊರಳ ಪಟ್ಟಿ ಹಿಡಿದು ಅವನ ಭ್ರಷ್ಟತೆ, ಹೊಣೆಗೇಡಿತನ ಅಥವಾ ಅದಕ್ಷತೆಯ ಬಗ್ಗೆ ಜನ್ಮಜಾಲಾಡಿಸುವ ಆತ್ಮಸ್ಥೈರ್ಯವನ್ನೂ ಬಿಟ್ಟುಕೊಡುತ್ತೇವೆಂಬ ತಿಳಿವಳಿಕೆಯೂ ನಮ್ಮವರಿಗೆ ಇಲ್ಲವಾಗಿದೆ. ಹೀಗೆ ಚುನಾವಣೆಯಿಂದ ಚುನಾವಣೆಗೆ ಭ್ರಷ್ಟರು ಹಾಗೂ ಅಪರಾಧಿಗಳನ್ನೇ ಆರಿಸಿ ಕಳುಹಿಸಿದರೆ ದೇಶಕ್ಕೆ ಏನು ಕೆಡುಕಾಗಬಹುದು ಎಂಬುದನ್ನೂ ನಮ್ಮವರು ಪರಿಗಣನೆಗೆ ತೆಗೆದುಕೊಳ್ಳದಂತಾಗಿದೆ.

ಆದರೆ ನಮಗೆ ಕೌತುಕ ಮೂಡಿಸುವ ಸಂಗತಿಯೆಂದರೆ ವೋಟಿಗಾಗಿ ನೋಟು ಪಡೆಯುವ ಮೇಲ್ಕಂಡ ಯಾವುದೇ ಕಾರಣಗಳಿಗೆ ಒಳಪಡದ ಜನರೂ ಇಂದು ಚುನಾವಣೆಯಲ್ಲಿ ದುಡ್ಡಿಗೆ ಹಾತೊರೆಯುತ್ತಿರುವುದು ಕಂಡುಬರುತ್ತಿದೆ. ಇಂದಿನ ಚುನಾವಣೆಯಲ್ಲಿ ಬಲಾಢ್ಯರು ಹಾಗೂ ಮೇಲ್ವರ್ಗದ ಸ್ಥಿತಿವಂತರು ಕೂಡಾ ಇಂದು ಚುನಾವಣೆಯಲ್ಲಿ ದುಡ್ಡಿಗೆ ಹಾತೊರೆಯುತ್ತಿರುವುದು ಆತಂಕಕಾರಿ ವಿಷಯವಾಗಿದೆ. ಇದನ್ನು ಅತಿಯಾಸೆಯ, ಎಂಜಲಿಗೆ ನಾಲಿಗೆ ಒಡ್ಡುವ ಹಾಗೂ ಪ್ರಜಾಪ್ರಭುತ್ವದ ಬಗ್ಗೆ ಅರಿವು ಕಾಳಜಿಯಿಲ್ಲದ ಹೊಣೆಗೇಡಿತನ ಎನ್ನದೆ ವಿಧಿಯಿಲ್ಲ. ಇಂತಹ ಜನರಿಗೆ ಯಾವ ರೀತಿಯಲ್ಲಿ ತಿಳಿವಳಿಕೆ ಮೂಡಿಸುವುದೋ ಎಂಬ ಹೆದರಿಕೆಯೂ ಆಗುತ್ತಿದೆ.

ಕಳೆದ ವರ್ಷ ಪಂಜಾಬದಲ್ಲಿ ನಡೆದ ಚುನಾವಣೆಗಳನ್ನೇ ತೆಗೆದುಕೊಳ್ಳಿ. ಸಹಜವಾಗಿ ಅಕಾಲಿದಳ—ಬಿಜೆಪಿ ಹಾಗೂ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಹಣ ಹಂಚುವ ಬಗ್ಗೆ ಯಾವುದೇ ಮಾತನಾಡಲಿಲ್ಲ. ಆದರೆ ಆಮ್ ಆದ್ಮಿ ಪಕ್ಷದ ನೇತಾರ ಅರವಿಂದ್ ಕೇಜ್ರೀವಾಲ್ ತಮ್ಮ ಭಾಷಣದಲ್ಲಿ `ಉಳಿದೆರಡೂ ಪಕ್ಷಗಳ ಅಭ್ಯರ್ಥಿಗಳು ಕೊಡುವ ದುಡ್ಡು ತೆಗೆದುಕೊಳ್ಳಿ, ಆದರೆ ವೋಟು ಮಾತ್ರ ಆಮ್ ಆದ್ಮಿ ಪಕ್ಷದ ಅಭ್ಯರ್ಥಿಗೇ ನೀಡಿ’ ಎಂಬ ಮಾನರಹಿತ ಹೇಳಿಕೆ ನೀಡಿದ್ದರು. ಭ್ರಷ್ಟ ವ್ಯವಸ್ಥೆಯ ವಿರುದ್ಧ ಹೋರಾಡುವ ಪ್ರಕ್ರಿಯೆಯಲ್ಲಿ ಅದೇ ಭ್ರಷ್ಟ ವ್ಯವಸ್ಥೆಯ ಎಂಜಲು ತಿನ್ನಬಾರದೆನ್ನುವ ಕನಿಷ್ಠ ನೈತಿಕತೆಯನ್ನೂ ಮರೆತು ಕೇಜ್ರಿವಾಲ್ ಮಾತನಾಡಿದ್ದರು. ತನ್ನ ಮತದಾರರಿಗೆ, ತಪ್ಪು ದಾರಿಯಲ್ಲಿ ನಡೆದು ಸರಿಯಾದ ವಿಳಾಸ ತಲುಪಿಸುವ ಚಮತ್ಕಾರಿಕೆಯನ್ನು ತೋರಬಯಸಿದ ಕೇಜ್ರಿವಾಲ್‍ನಂತಹ ಮುಖಂಡರು ಕ್ರಮೇಣ ತಮ್ಮ ವಿಶ್ವಾಸಾರ್ಹತೆ ಕಳೆದುಕೊಳ್ಳುವುದರಲ್ಲಿ ಸಂದೇಹವಿಲ್ಲ.

ಪ್ರಜಾಪ್ರಭುತ್ವ ಒಂದು ದುಬಾರಿ ಆಡಳಿತ ವ್ಯವಸ್ಥೆ. ಈ ಆಡಳಿತ ವ್ಯವಸ್ಥೆ ಪಡೆಯಲು ಪ್ರಜೆಗಳು ಹಣ ಹಾಗೂ ಸಮಯ ವ್ಯಯಮಾಡಲೇಬೇಕು. ಯಾವುದೇ ಮುಕ್ತ ಸಮಾಜದಲ್ಲಿ ಪ್ರಜೆಗಳಿಂದ ಆಯ್ಕೆಯಾಗಬಯಸುವ ಪ್ರತಿನಿಧಿಗಳು ತಮ್ಮ ಜೀವನ ಶೈಲಿಗೆ ಹಾಗೂ ಪ್ರಚಾರಕ್ಕೆ ಹಣ ವ್ಯಯ ಮಾಡಲೇಬೇಕು. ಈ ಹಣವನ್ನು ಒಳ್ಳೆಯ ಪ್ರತಿನಿಧಿ ಬಯಸುವ ಸಮಾಜವೇ ಭರಿಸಬೇಕಾಗುತ್ತದೆ. ಇದನ್ನು ನಾವು ಅಭ್ಯರ್ಥಿಗಳಿಗೆ—ಪಕ್ಷಗಳಿಗೆ ನೀಡುವ ದೇಣಿಗೆ ಎಂದೋ ಅಥವಾ ಸರ್ಕಾರಿ ಖರ್ಚಿನಲ್ಲಿ ನಡೆಯುವ ಚುನಾವಣೆಯೆಂದೋ ಗುರುತಿಸಬೇಕಾಗುತ್ತದೆ. ಜನರಿಂದ ಅಥವಾ ಸರ್ಕಾರಗಳಿಂದ ಹಣ ಸಿಗದಿದ್ದಲ್ಲಿ ಈ ಪ್ರತಿನಿಧಿಯು ಧನಿಕರ, ಪಟ್ಟಭದ್ರ ಹಿತಾಸಕ್ತಿಗಳ, ಅಪರಾಧಿಗಳ ಅಥವಾ ಭ್ರಷ್ಟರ ಮುಂದೆ ಕೈಚಾಚಿ ನಿಲ್ಲಬೇಕಾಗುತ್ತದೆ. ಒಳ್ಳೆಯ ಪ್ರತಿನಿಧಿ ಬಯಸುವ ಸಮಾಜ ಆ ಪ್ರತಿನಿಧಿಯ ಆರ್ಥಿಕ ಅಗತ್ಯಗಳನ್ನೂ ಪೂರೈಸುವ ಜವಾಬ್ದಾರಿ ಹೊರಬೇಕಾಗುತ್ತದೆ.

ಪಕ್ಷಗಳ ಪ್ರಣಾಳಿಕೆಗಳನ್ನು ನಿಯಂತ್ರಣ ಮಾಡಬೇಕೇ?

ಚುನಾವಣೆಯಲ್ಲಿ ಗೆಲ್ಲಲು ಜನಪ್ರಿಯ ಯೋಜನೆಗಳ ಅಗ್ಗದ ಘೋಷಣೆಗಳ ಹೊಳೆಯನ್ನೇ ಹರಿಸಿಬಿಡುವ ಪಕ್ಷಗಳ ಪ್ರಣಾಳಿಕೆಯನ್ನು ನಿಯಂತ್ರಣಕ್ಕೆ ಒಳಪಡಿಸಬೇಕೇ ಎಂಬ ಕಾಳಜಿ ಅಭಿವೃದ್ಧಿ ಹಾಗೂ ಆಡಳಿತನೀತಿಯನ್ನು ಬಯಸುವ ಜವಾಬ್ದಾರಿಯುತ ನಾಗರಿಕರನ್ನು ಕಾಡಿದೆ.

ಸಾಮಾನ್ಯ ನಾಗರಿಕರು ಕಟ್ಟಿದ ತೆರಿಗೆಹಣದ ಮೇಲೆ ನಿರ್ಧಾರವಾಗುವ ಹಣಕಾಸು ಆಯವ್ಯಯದ ಸೂಕ್ಷ್ಮತೆಯನ್ನು ಅರಿಯದೆ ಮಠ—ಮಾನ್ಯರಿಗೆ ಹಣಹಂಚುವ, ಇಂದಿರಾ ಕ್ಯಾಂಟೀನ್ ಕಟ್ಟುವ ಅಥವಾ ಒನ್‍ಟೈಮ್ ಸೆಟಲ್‍ಮೆಂಟ್ — ಸಾಲಮನ್ನಾ ಮಾಡುವ ಘೋಷಣೆಗಳನ್ನು ಈ ಪ್ರಣಾಳಿಕೆಗಳು ನೀಡುತ್ತಿವೆ. ಜನರಿಗೆ ಮೀನು ಹಿಡಿಯುವ ವಿದ್ಯೆ ಕಲಿಸುವ ಬದಲು ಮಸಾಲೆಯಲ್ಲಿ ಕರಿದ ಮೀನನ್ನು ಮನೆಮನೆಗೆ ಸರಬರಾಜು ಮಾಡುವ ಕೆಲಸವನ್ನು ನಮ್ಮ ಪಕ್ಷಗಳು ತಮ್ಮ ಪ್ರಣಾಳಿಕೆಯಲ್ಲಿ ರಾಜಾರೋಷವಾಗಿ ಹೇಳಿಕೊಳ್ಳುತ್ತಿವೆ. ಈ ಬೇಜವಾಬ್ದಾರಿಯುತ ಹಾಗೂ ಪ್ರಗತಿ—ವಿರೋಧಿ ನಿಲುವುಗಳನ್ನು ವಿರೋಧಿಸಿ ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆಗಳನ್ನು ಹೂಡಬಹುದೇ ಎಂಬುದನ್ನು ಪರೀಕ್ಷಿಸಿ ನೋಡಬೇಕಿದೆ.

ರಾಜಕೀಯ ಪ್ರಕ್ರಿಯೆಗಳ ಬಗೆಗಿನ ಅರಿವು, ಜಾಗರೂಕತೆ ಹಾಗೂ ಒಳಗೊಳ್ಳುವಿಕೆಯನ್ನು ತೋರದ ಸಮಾಜ ತನ್ನ ರಾಜಕೀಯ ಪ್ರತಿನಿಧಿಗಳ ಮೇಲೆ ನಿಯಂತ್ರಣ ಕಳೆದುಕೊಳ್ಳುತ್ತದೆ. ಈ ಪ್ರಕ್ರಿಯೆಯಲ್ಲಿ ಮಾಧ್ಯಮಗಳು ಮುಖ್ಯಪಾತ್ರ ವಹಿಸಬೇಕೆನ್ನುವ ಅನಿಸಿಕೆಯೂ ಇಂದು ತಪ್ಪಾಗಿ ತೋರುತ್ತಿದೆ. ಏಕೆಂದರೆ, ಇಂದು ಮಾಧ್ಯಮಗಳೆಲ್ಲವೂ ಯಾವುದಾದರೂ ಪಟ್ಟಭದ್ರ ಖಾಸಗಿ ಹಿತಾಸಕ್ತಿಗಳ ಗುಲಾಮರಾಗಿ ವ್ಯವಹಾರಕ್ಕೆ ಇಳಿದಿರುವಂತೆ ಗೋಚರವಾಗುತ್ತಿದೆ. ಆದಕಾರಣ, ಮಾಧ್ಯಮಗಳ ಮಿತಿಯನ್ನು ದಾಟಿ ನಾಗರಿಕರು ರಾಜಕೀಯ ಪಕ್ಷ— ಅಭ್ಯರ್ಥಿ—ಚಟುವಟಿಕೆಗಳ ಮೇಲೆ ಸದಾಕಾಲ ನಿಗಾ ವಹಿಸುವ ಗುರುತರ ಜವಾಬ್ದಾರಿಯೂ ಇದೆ. ಇಂತಹ ಕ್ಲಿಷ್ಟ ಪರಿಸ್ಥಿತಿಯಲ್ಲಿ ನಿರ್ಭೀತ ಹಾಗೂ ಸ್ವತಂತ್ರ ವಿಚಾರಗಳನ್ನು ಪ್ರತಿಪಾದನೆ ಮಾಡುವ ಕೆಲವಾದರೂ ಸಾಮಾಜಿಕ ಕಾರ್ಯಕರ್ತರನ್ನು ನಾಗರಿಕ ಸಮಾಜ ಬೆಂಬಲಿಸಬೇಕಾಗುತ್ತದೆ. ಕರ್ನಾಟಕದ ಮಟ್ಟಿಗೆ ಹೇಳುವುದಾದರೆ, ಎಸ್.ಆರ್.ಹಿರೇಮಠ ಮತ್ತವರ ಸಹಚರರನ್ನು ಈ ಸಂದರ್ಭದಲ್ಲಿ ಗುರುತಿಸಬಹುದು. ಇಂತಹ ಕೆಲವಾರು ಪರೀಕ್ಷಿತ ಸಾಮಾಜಿಕ ಸೈನಿಕರ ನೇತೃತ್ವದಲ್ಲಿ ಪ್ರಜಪ್ರಭುತ್ವದ ಜಾಗರೂಕ ಸೈನ್ಯ ಸದಾ ಯುದ್ಧಸನ್ನದ್ಧವಾಗಿರಬೇಕಾಗುತ್ತದೆ. ಇಲ್ಲವಾದಲ್ಲಿ ಈ ಸ್ಪರ್ಧೆಯಲ್ಲಿ ಗೆಲುವು ಮರೀಚಿಕೆಯಾಗುವ ದುರಂತ ಕಂಡೂ ಕಾಣದಂತೆ ವರ್ತಿಸುವ ದೌರ್ಭಾಗ್ಯ ನಮ್ಮದಾಗುತ್ತದೆ.

ಡಾ.ಟಿ.ಆರ್.ಚಂದ್ರಶೇಖರ

ಕರ್ನಾಟಕ ಸರ್ಕಾರದ ಹಣಕಾಸಿನ ನಿರ್ವಹಣೆ

ಜುಲೈ ೨೦೧೮

ರಂಗಸ್ವಾಮಿ ಮೂಕನಹಳ್ಳಿ

ಕೃಷಿ ಸಾಲ ಮನ್ನಾ: ಸಾಧ್ಯವೇನಣ್ಣಾ?

ಜುಲೈ ೨೦೧೮

ಚಂಸು ಪಾಟೀಲ

ರೈತರೇಕೆ ಸಾಲಗಾರರಾದರು?

ಜುಲೈ ೨೦೧೮

ಟಿ.ಎಂ.ಥಾಮಸ್ ಐಸಾಕ್ ಕೇರಳದ ಹಣಕಾಸು ಸಚಿವರು

ಎಲ್ಲಾ ರಾಜ್ಯಗಳ ಹಣಕಾಸು ಸಚಿವರಿಗೆ ಕೇರಳ ಹಣಕಾಸು ಸಚಿವರ ಬಹಿರಂಗ ಪತ್ರ

ಜುಲೈ ೨೦೧೮

ಅರ್ಜುನ್ ರಾಮೇಗೌಡ ನಾರಾಯಣಸ್ವಾಮಿ

ಆ ಬೆಂಕಿಯ ಕಿಡಿ ಹೊತ್ತಿಸುವವರು ಯಾರು?

ಜೂನ್ ೨೦೧೮

ಡಾ.ಎಸ್.ಬಿ.ಜೋಗುರ

ಪೂರಕ ವಾತಾವರಣದ ಕೊರತೆ

ಜೂನ್ ೨೦೧೮

ಡಾ.ಎಸ್.ಬಿ.ಜೋಗುರ

ಹಾರ್ವರ್ಡ್ ಗುಣಮಟ್ಟ: ಕೈಗೂಡದ ಕನಸೇ?

ಜೂನ್ ೨೦೧೮

ಚುನಾವಣೆ: ಯಾರ ಹೊಣೆ?

ಎಪ್ರಿಲ್ ೨೦೧೮

ಡಾ.ಬಿ.ಎಲ್.ಶಂಕರ್

ಆಡಿದ ಮಾತಿಗೂ ಆತ್ಮದ ಮಾತಿಗೂ ಅಜಗಜಾಂತರ!

ಎಪ್ರಿಲ್ ೨೦೧೮

ಹರೀಶ್ ನರಸಪ್ಪ

ಚುನಾವಣಾ ಆಯೋಗದ ಮಿತಿ ಮತ್ತು ವೈಫಲ್ಯ

ಎಪ್ರಿಲ್ ೨೦೧೮

ಬಿ.ಎನ್.ವಿಜಯಕುಮಾರ್

ಭ್ರಷ್ಟತೆಗೆ ರಾಜಕೀಯ ಪಕ್ಷಗಳೇ ಕಾರಣ

ಎಪ್ರಿಲ್ ೨೦೧೮

ಎ.ಟಿ.ರಾಮಸ್ವಾಮಿ

ಭ್ರಷ್ಟಾಚಾರಿಗಳು ವೇಶ್ಯೆಯರಿಗಿಂತಲೂ ಕೀಳು

ಎಪ್ರಿಲ್ ೨೦೧೮

ಬಿ. ಕೆ. ಚಂದ್ರಶೇಖರ್

ಪ್ರಜಾಪ್ರಭುತ್ವಕ್ಕೆ ಕಪ್ಪುಚುಕ್ಕೆ

ಎಪ್ರಿಲ್ ೨೦೧೮

ಅಲೋಕ್ ಪ್ರಸನ್ನ, ಎಸ್. ಆರ್. ಹಿರೇಮಠ, ಬಿ. ಟಿ. ವೆಂಕಟೇಶ

ನ್ಯಾಯಾಂಗ

ಮಾರ್ಚ್ ೨೦೧೮

ಎ. ನಾರಾಯಣ, ಬಸವರಾಜ ಬೊಮ್ಮಾಯಿ, ಮೋಟಮ್ಮ

ಶಾಸಕಾಂಗ

ಮಾರ್ಚ್ ೨೦೧೮

ಬಿ. ಆರ್. ಜಯರಾಮರಾಜೇ ಅರಸ್, ಎನ್. ಹನುಮೇಗೌಡ,

ಕಾರ್ಯಂಗ

ಮಾರ್ಚ್ ೨೦೧೮

ವಾಸುದೇವ ಶರ್ಮಾ ಎನ್. ವಿ.

ನಾಗರಿಕ ಸಮಾಜ

ಮಾರ್ಚ್ ೨೦೧೮

ಈಶ್ವರ ದೈತೋಟ, ಡಾ. ಎ. ಎಸ್. ಬಾಲಸುಬ್ರಹ್ಮಣ್ಯ

ಮಾಧ್ಯಮ

ಮಾರ್ಚ್ ೨೦೧೮

ಮುಖ್ಯಚರ್ಚೆಗೆ ಪ್ರವೇಶ

ಫೆಬ್ರವರಿ ೨೦೧೮

ಡಾ.ಅರವಿಂದ ಪಟೇಲ್ ಬಳ್ಳಾರಿ

ವೈದ್ಯಕ್ಷೇತ್ರದ ಉದ್ಧಾರಕ್ಕೆ ಮೂರು ಮದ್ದು!

ಫೆಬ್ರವರಿ ೨೦೧೮

ಮಾಲತಿ ಪಟ್ಟಣಶೆಟ್ಟಿ ಧಾರವಾಡ

ಗುಣಮಟ್ಟಕ್ಕೆ ಮನ್ನಣೆ

ಫೆಬ್ರವರಿ ೨೦೧೮

ಡಾ.ಶ್ರೀನಿವಾಸ ಕಕ್ಕಿಲ್ಲಾಯ ಮಂಗಳೂರು

ಸಕ್ಕರೆ ನಿಷೇಧಿಸಿ!

ಫೆಬ್ರವರಿ ೨೦೧೮