2nd ಎಪ್ರಿಲ್ ೨೦೧೮

ರೂಪಕಗಳ ಪರಿಧಿಯನ್ನು ಮೀರಿದ ಚೈತನ್ಯ
ಸ್ಟೀಫನ್ ಹಾಕಿಂಗ್

ಸುಧಾ ಶೆಣೈ

ಹಾಕಿಂಗ್‍ರ ಕರ್ಮಭೂಮಿ ಕೇಂಬ್ರಿಡ್ಜ್ ವಿಶ್ವವಿದ್ಯಾಲಯದಲ್ಲೇ ಸಂಶೋಧನೆ ಮಾಡಿದ, ಅವರನ್ನು ಸ್ವತಃ ಕಂಡು ರೋಮಾಂಚನಗೊಂಡ ಸಹಾಯಕ ಪ್ರಾಧ್ಯಾಪಕಿ ಸುಧಾ ಶೆಣೈ ಅವರು ಅಗಲಿದ ಚೇತನದ ಜೀವನ, ವ್ಯಕ್ತಿತ್ವ ಹಾಗೂ ಸಾಧನೆಗಳನ್ನಿಲ್ಲಿ ಬಿಚ್ಚಿಟ್ಟಿದ್ದಾರೆ.

ಮಾರ್ಚ್ 14, 2018ರ ಬೆಳಗು ಈ ಜಗತ್ತಿಗೆ ಎಂದಿನಂತಿರಲಿಲ್ಲ. ಇದುವರೆಗೂ ಪ್ರಾಯಶಃ ಮರೆತಿದ್ದು ಹಠಾತ್ತನೇ ನೆನಪಿಸಿಕೊಂಡಂತೆ ಕಾಲನ ಕರೆ ಬಂತು. 55 ವರ್ಷಗಳ ಕಾಲ ಸಂಪೂರ್ಣ ಪರಾವಲಂಬಿಯಾಗಿದ್ದೂ ಸಾಧನೆಯ ಶಿಖರವನ್ನೇರಿದ್ದ ಒಂದು ಅನನ್ಯ ಚೇತನವನ್ನು ಕಣ್ಮರೆಯಾಗಿಸಿತು. ಹಾಗೆ ಮರೆಯಾದ ಕಣ್ಮಣಿಯೇ ಅಪ್ರತಿಮ ಭೌತವಿಜ್ಞಾನಿ ಸ್ಟೀಫನ್ ಹಾಕಿಂಗ್.

ಕಳೆದ 50 ವರ್ಷಗಳಲ್ಲಿ ಪ್ರಪಂಚದ ಅತ್ಯುತ್ತಮ ಭೌತಶಾಸ್ತ್ರಜ್ಞರ ಪಟ್ಟಿಯಲ್ಲಿ ಮುಂಚೂಣಿಯಲ್ಲಿದ್ದ ಸ್ಟೀಫನ್ ಹಾಕಿಂಗ್ ಉಳಿದವರಂತೆ ನಡೆಯಬಲ್ಲ, ಮಾತನಾಡಬಲ್ಲ ಸಹಜ ಜೀವನ ನಡೆಸಬಲ್ಲ ಸಾಮಥ್ರ್ಯವನ್ನು ತನ್ನ ಇಪ್ಪತ್ತೊಂದನೆಯ ವಯಸ್ಸಿಗೇ ಕಳೆದುಕೊಂಡಿದ್ದ ದುರ್ದೈವಿ. ಮತ್ತೊಬ್ಬ ಶ್ರೇಷ್ಠ ಭೌತವಿಜ್ಞಾನಿ ಗೆಲಿಲಿಯೋ ಗೆಲಿಲಿ ಅವರು ನಿಧನಹೊಂದಿ ಸರಿಯಾಗಿ ಮುನ್ನೂರು ವರ್ಷಗಳ ನಂತರ ಇಂಗ್ಲಂಡಿನ ಆಕ್ಸಫರ್ಡ್‍ನಲ್ಲಿ ಜನಿಸಿದ (8ನೇ ಜನವರಿ 1942) ಹಾಕಿಂಗ್ ಅವರ ಪೂರ್ಣ ಹೆಸರು ಸ್ಟೀಫನ್ ವಿಲಿಯಮ್ ಹಾಕಿಂಗ್. ಎರಡನೆಯ ಮಹಾಯುದ್ಧದ ಕಾಲ ಅದು. ಅತನ ತಂದೆಗೆ ಮಗ ವೈದ್ಯಕೀಯ ವಿಜ್ಞಾನವನ್ನು ಕಲಿಯಲಿ ಎಂಬ ಹಂಬಲವಿದ್ದರೆ ಸ್ಟೀಫನ್‍ರ ಒಲವು ಗಣಿತಶಾಸ್ತ್ರದ ಕಡೆಗಿತ್ತು.

ಆಕ್ಸಫರ್ಡ್ ಯೂನಿವರ್ಸಿಟಿ ಕಾಲೇಜಿನಲ್ಲಿ ಗಣಿತಶಾಸ್ತ್ರವನ್ನು ಬೋಧಿಸುತ್ತಿರಲಿಲ್ಲ. ಹಾಗಾಗಿ ಸ್ಟೀಫನ್ ಭೌತಶಾಸ್ತ್ರವನ್ನು ಆಭ್ಯಸಿಸಿ ತಮ್ಮ ಪದವಿಯನ್ನು ಪಡೆಯುತ್ತಾರೆ. ವಿಶ್ವವಿಜ್ಞಾನ (ಕಾಸ್ಮೋಲಜಿ) ದಲ್ಲಿ ಸಂಶೋಧನೆ ನಡೆಸುವ ಆಶಯದಿಂದ 1961ರಲ್ಲಿ ಕೇಂಬ್ರಿಡ್ಜ್ ವಿಶ್ವವಿದ್ಯಾನಿಲಯದ ಅನ್ವಯಿಕ ಗಣಿತಶಾಸ್ತ್ರ ಮತ್ತು ಥೆರಾಟಿಕಲ್ ಭೌತಶಾಸ್ತ್ರ ವಿಭಾಗಕ್ಕೆ ಬಂದ ಸ್ಟೀಫನ್‍ರಿಗೆ ತಾನು ಬಯಸಿದ ಮಾರ್ಗದರ್ಶಕರು ಸಿಗದೆ ಒಂದು ಬಗೆಯ ಅತೃಪ್ತಿಯಿದ್ದರೂ 1965ರಲ್ಲಿ ತನ್ನ ಡಾಕ್ಟೋರಲ್ ಪದವಿ ಗಳಿಸುವಲ್ಲಿ ಸಫಲರಾಗುತ್ತಾರೆ. ಆದರೆ ಜೀವನದ ಅನಂತ ಸಾಧ್ಯತೆಗಳನ್ನು ಕಣ್ತೆರೆದು ನೋಡಲು ಪ್ರಾರಂಭಿಸಿದ ಈ ಹೊತ್ತಿನಲ್ಲೇ ಬರಸಿಡಿಲಿನಂತಹ ಆಘಾತ ಅವರ ಮೇಲೆರಗಿತ್ತು. ಅವರು ಎ.ಎಲ್.ಎಸ್. ಎಂಬ ಚಿಕಿತ್ಸೆಯೇ ಇಲ್ಲದ ಮೋಟಾರ್ ನ್ಯೂರಾನ್ ರೋಗಕ್ಕೆ ತುತ್ತಾಗಿರುವುದು ತಜ್ಞವೈದ್ಯರಿಂದ ತಿಳಿದುಬರುತ್ತದೆ. ಹೆಚ್ಚೆಂದರೆ ಸ್ಟೀಫನ್ ಇನ್ನೆರಡು ಮೂರು ವರ್ಷ ಬದುಕಿಯಾರು ಎಂಬ ಅಭಿಪ್ರಾಯವನ್ನು ವೈದ್ಯರು ನೀಡುತ್ತಾರೆ. ಆದರೆ ತನ್ನ ಚಲನಶಕ್ತಿ, ಮಾತನಾಡುವ ಶಕ್ತಿಯನ್ನು ಸಂಪೂರ್ಣ ಕಳೆದುಕೊಂಡ ಸ್ಟೀಫನ್ ಗಾಲಿಕುರ್ಚಿಯ ಮೇಲೆ ಕುಳಿತು, ತನ್ನ ಮುಖದ ಚಲನೆಗಳು ಧ್ವನಿಯಾಗಿ ಮಾರ್ಪಡುವ ಉಪಕರಣಗಳ ಸಹಾಯದಿಂದ ಜೀವನವನ್ನು ಮುಂದುವರೆಸುತ್ತಾರೆ. ಗಾನ್‍ವಿಲ್ಲೆ ಮತ್ತು ಕಾಲಸ್ ಕಾಲೇಜಿನಲ್ಲಿ 1969ರಲ್ಲಿ ಸಂಶೋಧನಾ ವಿದ್ಯಾರ್ಥಿಯಾಗಿ ಸೇರಿಕೊಳ್ಳುತ್ತಾರೆ. ‘ಸಿಂಗುಲಾರಿಟೀಸ್ ಅಂಡ್ ದಿ ಜಿಯೋಮೆಟ್ರಿ ಆಫ್ ಸ್ಪೇಸ್ ಟೈಮ್’ ಎಂಬ ಪ್ರಬಂಧಕ್ಕಾಗಿ ಇವರಿಗೆ ಪ್ರತಿಷ್ಠಿತ ಅಡಾಮ್ಸ ಪ್ರಶಸ್ತಿಯನ್ನು ನೀಡಲಾಗುತ್ತದೆ. 1974ರಲ್ಲಿ ರಾಯಲ್ ಸೊಸೈಟಿಯ ಗೌರವ ಸದಸ್ಯರಾಗಿ ಆಯ್ಕೆಯಾಗುತ್ತಾರೆ. ಕೇಂಬ್ರಿಡ್ಜ್ ವಿಶ್ವವಿದ್ಯಾನಿಲಯದ ಅನ್ವಯಿಕ ಗಣಿತಶಾಸ್ತ್ರ ಮತ್ತು ಥೆರಾಟಿಕಲ್ ಭೌತಶಾಸ್ತ್ರ ವಿಭಾಗದಲ್ಲಿ ಗ್ರಾವಿಟೇಶನಲ್ ಫಿಸಿಕ್ಸ್ ವಿಷಯದ ರೀಡರ್ ಆಗಿ 1975ರಲ್ಲಿ ಸೇರ್ಪಡೆಗೊಂಡ ಸ್ಟೀಫನ್ ಎರಡೇ ವರ್ಷದಲ್ಲಿ ಪ್ರಾಧ್ಯಾಪಕ ಹುದ್ದೆಗೇರುತ್ತಾರೆ. ನಂತರ ಐಸಾಕ್ ನ್ಯೂಟನ್ ಅವರಂತಹ ಪ್ರಸಿದ್ಧ ವಿಜ್ಞಾನಿ ಅಲಂಕರಿಸಿದ್ದ ಪ್ರತಿಷ್ಠಿತ ಲೂಕೇಸಿಯನ್ ಪೀಠವನ್ನು 1979ರಿಂದ 2002 ರವರೆಗೆ ದೀರ್ಘಕಾಲ ತಮ್ಮದಾಗಿಸಿಕೊಳ್ಳುವ ಸುಯೋಗ ಕೂಡ ಸ್ಟೀಫನ್ ಹಾಕಿಂಗ್ ಅವರಿಗೆ ಒದಗಿಬರುತ್ತದೆ.

ಕೇಂಬಿಡ್ಜ್ ವಿಶ್ವವಿದ್ಯಾಲಯದ ಸಮೀಪದಲ್ಲೇ ವಾಸವಾಗಿದ್ದ ಸ್ಟೀಫನ್ ಹಾಕಿಂಗರನ್ನು ಅವರ ಹೆಸರುವಾಸಿ ವಿದ್ಯಾರ್ಥಿಯೊಬ್ಬರು ನೀಡಲಿದ್ದ ಉಪನ್ಯಾಸದಲ್ಲಿ ಭಾಗವಹಿಸಲು ಕರೆತರಲಾಗಿತ್ತು. ಗಾಲಿಕುರ್ಚಿಯ ಮೇಲೆ ಚಲನವಿಲ್ಲದೆ, ವಿದ್ಯುತ್ ಉಪಕರಣಗಳ ನಡುವೆ ಬಂಧಿಯಂತಿದ್ದ ಈ ಮಹಾನ್ ಸಾಧಕನನ್ನು ಕಣ್ಣಾರೆ ಕಂಡಾಗ ನಿಜಕ್ಕೂ ರೋಮಾಂಚನವಾಗಿತ್ತು.

ಇದಲ್ಲದೆ ತಮ್ಮ ಸಂಶೋಧನೆಯ ಮುಖ್ಯ ಅಂಶಗಳನ್ನು ಬಳಸಿಕೊಂಡು, ಜನಸಾಮಾನ್ಯರಿಗೂ ಅರ್ಥವಾಗಬಲ್ಲ ‘ದಿ ಬ್ರೀಫ್ ಹಿಸ್ಟರಿ ಆಫ್ ಟೈಮ್(1988)’, ‘ಬ್ಲಾಕ್ ಹೋಲ್ಸ್ ಅಂಡ್ ಬೇಬಿ ಯೂನಿವರ್ಸಸ್ ಮತ್ತಿತರ ಪ್ರಬಂಧಗಳು’, ‘ದಿ ಗ್ರಾಂಡ್ ಡಿಸೈನ್’, ‘ದಿ ಯೂನಿವರ್ಸ್ ಇನ್ ನಟ್ ಷೆಲ್’ ಹೆಸರಿನ ಜನಪ್ರಿಯ ಪುಸ್ತಕಗಳನ್ನು ಬರೆದ ಸಾಧನೆ ಇವರದು. ಲಕ್ಷಾಂತರ ಪ್ರತಿಗಳು ಮಾರಾಟವಾದ ‘ದಿ ಬ್ರೀಫ್ ಹಿಸ್ಟರಿ ಆಫ್ ಟೈಮ್’ ಇವರ ಅತ್ಯಂತ ಜನಪ್ರಿಯ ಪುಸ್ತಕ. ಇವೆಲ್ಲವೂ ವೀಲ್ ಚೇರ್‍ನ ಮೇಲೆ ಕುಳಿತು ಪರಾವಲಂಬಿಯಾಗಿದ್ದರೂ ಮಾಡಿದಂಥ ಕೆಲಸಗಳು ಎಂಬುದನ್ನು ನಂಬಲು ಬಹಳ ಕಷ್ಟವಾಗುತ್ತದೆಯಲ್ಲವೇ? ಆದರೂ ಅದು ಸತ್ಯ. ಎರಡುಮೂರು ವರ್ಷಗಳಲ್ಲಿ ಬರಬೇಕಾಗಿದ್ದ ಸಾವೂ ಈ ಜೀವ ತೊಡಗಿಸಿಕೊಂಡಿದ್ದ ಕೆಲಸಗಳನ್ನು ನೋಡಿ ವಿಸ್ಮಯಗೊಂಡು ದೂರ ನಿಂತಂತಿತ್ತು!

ಅನ್ಯೋನ್ಯ ದಾಂಪತ್ಯ

ಸ್ಟೀಫನ್ ಹಾಕಿಂಗ್‍ರ ವೈಯಕ್ತಿಕ ಬದುಕು ಅವರ ಜೀವನದಲ್ಲಿ ಬಂದ ಇಬ್ಬರು ಸ್ತ್ರೀಯರ ಪ್ರೀತಿಯಿಂದ ಸಾಕಷ್ಟು ಸಹ್ಯವಾಗಿತ್ತು ಎನ್ನಬಹುದೇನೋ. ಜೇನ್ ವೈಲ್ಟ್, ಸ್ಟೀಫನ್ ಹಾಕಿಂಗ್ ಅವರ ಮೊದಲನೆಯ ಪತ್ನಿ. ತನ್ನ ಗುಣವಿಲ್ಲದ ಖಾಯಿಲೆಯ ಅರಿವಿನಿಂದ ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದ ಸ್ಟೀಫನ್ ಹಾಕಿಂಗ್ ಅವರನ್ನು ಅದೇ ಸಮಯದಲ್ಲಿ ಭೇಟಿಯಾದ ಜೇನ್ ವೈಲ್ಡ್ ಆತನನ್ನು ಸಂತೈಸುತ್ತಲೇ ಆತನ ವ್ಯಕ್ತಿತ್ವದಿಂದ ಬಹಳ ಆಕರ್ಷಿತಳಾಗುತ್ತಾಳೆ. 21 ವರ್ಷದ ಆಕೆ 23 ವರ್ಷದ ಸ್ಟೀಫನ್ ಹಾಕಿಂಗ್‍ರನ್ನು ವಿವಾಹವಾಗಿ ಆತನ ಪ್ರೇಯಸಿ, ಸಹಾಯಕಿ, ಆಯಾ ಎಲ್ಲವೂ ಆಗುತ್ತಾಳೆ. ಆತನ ಮೂರುಮಕ್ಕಳ ತಾಯಿಯಾಗುತ್ತಾಳೆ. ಆದರೆ ಸ್ಟೀಫನ್ ಹಾಕಿಂಗ್ ಅವರ ಬೆಳೆಯುತ್ತಿದ್ದ ಜನಪ್ರಿಯತೆ ಸುಮಾರು 27 ವರ್ಷಗಳ ಅನ್ಯೋನ್ಯ ಸಂಸಾರದಲ್ಲಿ ಬಿರುಕನ್ನು ಮೂಡಿಸಿ ವಿಚ್ಛೇದನದಲ್ಲಿ ಅಂತ್ಯ ಕಾಣುತ್ತದೆ. 1995ರಲ್ಲಿ ತನ್ನ ಆಯಾ ಎಲೈನ್ ಮಾಸನ್ ಳನ್ನು ವಿವಾಹವಾದ ಸ್ಟೀಫನ್ ಸುಮಾರು 11 ವರ್ಷಗಳ ಕಾಲ ಅನ್ಯೋನ್ಯ ಜೀವನ ನಡೆಸಿ ನಂತರ ಅನಿವಾರ್ಯ ಕಾರಣಗಳಿಂದ ದೂರವಾಗುತ್ತಾರೆ. ನಂತರದ ದಿನಗಳಲ್ಲಿ ತನ್ನ ಮೊದಲನೆಯ ಹೆಂಡತಿ ಮತ್ತು ಮಕ್ಕಳ ಜೊತೆಗಿನ ಸ್ಟೀಫನ್‍ರ ಸಂಬಂಧ ಮತ್ತೆ ಬಲಗೊಳ್ಳತೊಡಗುತ್ತದೆ. ಅತೀವ ಪರಾವಲಂಬನೆಯ ಸ್ಥಿತಿಯಲ್ಲಿಯೂ ವೈವಾಹಿಕ ಜೀವನವನ್ನು ನಡೆಸುವ ಜವಾಬ್ದಾರಿ ಹೊತ್ತ ಸ್ಟೀಫನ್ ಹಾಕಿಂಗ್ ಮತ್ತು ಆತನ ಪತ್ನಿಯರ ಜೀವನೋತ್ಸಾಹಕ್ಕೆ ತಲೆದೂಗಲೇ ಬೇಕೆನಿಸುತ್ತದೆ.

ಇಲ್ಲಿ ಭೌತಶಾಸ್ತ್ರದ ಪ್ರಮುಖ, ಜಗತ್ತಿನ ಅತಿ ಜನಪ್ರಿಯ ಭೌತಶಾಸ್ತ್ರಜ್ಞ ಆಲ್ಬರ್ಟ್ ಐನ್ಸಟ್ಯೆನ್ ಅವರೊಂದಿಗೆ ಸ್ಟೀಫನ್ ಹಾಕಿಂಗ್ ಅವರನ್ನು ಹೋಲಿಸುವ ಬಗ್ಗೆ ಕೆಲವು ಮಾತುಗಳನ್ನು ಹೇಳಲೇಬೇಕು. ಕಪ್ಪು ವಸ್ತುಗಳೆಂದು ಕರೆಯಲ್ಪಡುವ, ಯಾವುದೇ ಬಗೆಯ ವಸ್ತುಗಳಾಗಲೀ, ಶಕ್ತಿಯ ಯಾವ ಸ್ವರೂಪವೇ ಆಗಲಿ ತನ್ನ ಬಳಿ ಸುಳಿದಾಗೆಲ್ಲ ಅವನ್ನು ಮಾಂತ್ರಿಕ ಶಕ್ತಿಯಿಂದ ತನ್ನೊಳ್ಳಗೆ ಸೇರಿಸಿಕೊಂಡು ಏನೂ ನಡೆದಿರದಂತೆ ವರ್ತಿಸುವ ಹಲವು ಬೃಹದಾಕಾರದ ಆಕಾಶ ಕಾಯಗಳು ಇರುವ ವಿಷಯ ಹಲವರಿಗೆ ತಿಳಿದಿರಬಹುದು. ಇವು ತನ್ನೊಳಗಿನಿಂದ ವಸ್ತುಗಳಿರಲಿ, ಬೆಳಕಿನ ಕಿರಣಗಳನ್ನೂ ಹೊರ ಬಿಡದಿರುವ ಮತ್ತು ಆ ಕಾರಣಕ್ಕಾಗಿಯೇ ಕಪ್ಪು ವಸ್ತುಗಳು ಎಂದು ಕರೆಯಲ್ಪಡುವ ಕಾಯಗಳು. ಸ್ಟೀಫನ್ ಹಾಕಿಂಗ್‍ರ ಪ್ರಕಾರ ಅಗಾಧ ಗುರುತ್ವಾಕರ್ಷಣ ಶಕ್ತಿ ಹೊಂದಿ ಎಲ್ಲವನ್ನು ತನ್ನೆಡೆಗೆ ಸೆಳೆದುಕೊಳ್ಳುವ ಈ ಕಪ್ಪು ಕಾಯಗಳು ಪೂರ್ತಿಯಾಗಿ ಕಪ್ಪಲ್ಲ! ಅವು ಒಂದು ಬಗೆಯ ಬೆಳಕಿನ ಕಿರಣಗಳನ್ನು ಹೊರಸೂಸಬಲ್ಲವು ಎಂಬ ಸಿದ್ಧಾಂತವನ್ನು ಸ್ಟೀಫನ್ ಹಾಕಿಂಗ್ ಮುಂದಿಡುತ್ತಾರೆ. ಹೀಗೆ ಹೊರಸೂಸುವ ಬೆಳಕನ್ನು ‘ಹಾಕಿಂಗ್ ರೇಡಿಯೇಷನ್’ ಎಂದು ಕರೆಯಲಾಗುತ್ತದೆ.

ಅಲ್ಲದೆ ಸಮಯ ಎಂದಿನಿಂದ ಪ್ರಾರಂಭವಾಯಿತು ಎಂಬ ಪ್ರಶ್ನೆಗೆ ಕೂಡಾ ಸ್ಟೀಫನ್ ಹಾಕಿಂಗ್ ಅದು ವಿಶ್ವದ ಉಗಮಕ್ಕೆ ಕಾರಣವಾದ ಬಿಗ್ ಬ್ಯಾಂಗ್ ಆದಂದಿನಿಂದ ಎಂಬ ಉತ್ತರ ನೀಡುತ್ತಾರೆ ಮತ್ತು ಇದನ್ನು ತುಂಬ ಸೊಗಸಾಗಿ ತಮ್ಮ ‘ದಿ ಬ್ರೀಫ್ ಹಿಸ್ಟರಿ ಆಫ್ ಟೈಮ್’ನಲ್ಲಿ ವಿವರಿಸಿದ್ದಾರೆ. ಐನ್‍ಸ್ಟೈನ್‌ರಂತೆ ಸೈದ್ಧಾಂತಿಕ ವಿಜ್ಞಾನವನ್ನು ಅಭ್ಯಸಿಸಿದ್ದ ಸ್ಟೀಫನ್ ಹಾಕಿಂಗ್ ಅವರಂತೆಯೇ ತೀರ ಮೂಲಭೂತವಾದ ವಿಜ್ಞಾನದ ಸಮಸ್ಯೆಗಳನ್ನು ಎತ್ತಿಕೊಂಡು, ಸಾಮಾನ್ಯ ಬುದ್ಧಿಮತ್ತೆಯ ವಿಜ್ಞಾನಿಗಳ ಅಳವಿಗೆ ನಿಲುಕದ ಕಲ್ಪನಾ ಸಾಮಥ್ರ್ಯದ ಮೂಲಕ ಪರಿಹಾರ ಕಂಡುಕೊಂಡ ಕಾರಣಕ್ಕಾಗಿ ಅವರಿಬ್ಬರನ್ನು ಹೋಲಿಸುವುದು ಸೂಕ್ತ ಎನ್ನುವುದರಲ್ಲಿ ಅನುಮಾನವಿಲ್ಲ. ಇಂತಹ ಅಗಾಧ ಬುದ್ಧಿಶಕ್ತಿಯ ಒಡೆಯನಾದ ಸ್ಟೀಫನ್ ಹಾಕಿಂಗ್‍ಗೆ ನೊಬೆಲ್ ಪ್ರಶಸ್ತಿ ಏಕೆ ಬರಲಿಲ್ಲ ಎಂಬ ಪ್ರಶ್ನೆ ಹಲವರಲ್ಲಿ ಉದ್ಭವವಾಗುತ್ತದೆ.

ಪ್ರಪಂಚ ದೇವರಿಂದ ನಡೆಯುತ್ತಿಲ್ಲ!

ಒಳ್ಳೆಯ ಹಾಸ್ಯಪ್ರಜ್ಞೆಯನ್ನು ಹೊಂದಿದ್ದ ಸ್ಟೀಫನ್ ಹಾಕಿಂಗ್ ಉಪಕರಣಗಳ ಮೂಲಕದ ತನ್ನ ಸಂವಹನೆಯಲ್ಲಿ ಅದನ್ನು ತೋರಗೊಡುತ್ತಿದ್ದರು. ದೇವರ ಅಸ್ತಿತ್ವವನ್ನು ನಂಬದ ಇವರು ಪ್ರಪಂಚ ನಡೆಯುತ್ತಿರುವುದು ವಿಜ್ಞಾನದ ನಿಯಮಗಳ ಆಧಾರದ ಮೇಲೆ ಹೊರತು ದೇವರಿಂದಲ್ಲ ಎಂಬರ್ಥದ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದರು. ತನ್ನಂತಹ ವಿಕಲಾಂಗರ ಹಕ್ಕುಗಳ ಸಲುವಾಗಿ ಸರ್ಕಾರ ಮಾಡಲೇಬೇಕಾದ ಕರ್ತವ್ಯಗಳ ಅರಿವು ಮೂಡಿಸುವ ಹೋರಾಟದಲ್ಲಿ ಮುಂಚೂಣಿಯಲ್ಲಿ ನಿಂತು ಸ್ಟೀಫನ್ ಹಾಕಿಂಗ್ ಮಾದರಿಯಾಗಿದ್ದರು. ತಮ್ಮ ರಾಜಕೀಯ ನಿಲುವುಗಳನ್ನು, ಪರಿಸರದ ಬಗೆಗಿನ ಕಾಳಜಿಯನ್ನು ವ್ಯಕ್ತಪಡಿಸುವಲ್ಲಿ ಕೂಡಾ ಅವರು ಎಂದೂ ಹಿಂಜರಿಯುತ್ತಿರಲಿಲ್ಲ. ಜೀವಕ್ಕೇ ಕುತ್ತಾಗಿ ನಿಂತ ವಿಕಲತೆಯನ್ನು ಹೊಂದಿಯೂ ಆರೋಗ್ಯವಂತರಿಗಿಂತ ಹೆಚ್ಚಿನ ಮಟ್ಟದ ಸಾಧನೆಗೈದು ಸಮಾಜದ ಚಟುವಟಿಕೆಗಳಲ್ಲಿ ಭಾಗವಹಿಸಿ ಅಪಾರ ಮನೋಬಲವನ್ನು ಮೆರೆದ ಸ್ಟೀಫನ್ ಹಾಕಿಂಗರಂತಹ ಮೇರು ಚೇತನ ನಮ್ಮ ಯುವಪೀಳಿಗೆಗೆ ದೊಡ್ಡ ಮಾದರಿ ಎನ್ನುವುದರಲ್ಲಿ ಸಂಶಯವೇ ಇಲ್ಲ.

ಗಣಿತಶಾಸ್ತ್ರವನ್ನು ತನ್ನ ಭಾಷೆಯನ್ನಾಗಿ ಅತಿ ಸೂಕ್ತವಾಗಿ ಬಳಸುವ ಭೌತಶಾಸ್ತ್ರ ಗಣಿತಶಾಸ್ತ್ರದ ತತ್ವಗಳ ಆಧಾರದಿಂದ ಸೈದ್ಧಾಂತಿಕ ವಿಜ್ಞಾನಿಗಳು ಪ್ರತಿಪಾದಿಸುವ ಜಗತ್ತಿನ ಬಗೆಗಿನ ಮೂಲಭೂತ ಸಿದ್ಧಾಂತಗಳನ್ನು ಪರೀಕ್ಷೆಯ ಒರೆಗೆ ಹಚ್ಚದೆ ಒಪ್ಪುವುದಿಲ್ಲ, ಒಪ್ಪಬಾರದು ಕೂಡಾ. ಆ ಸಿದ್ಧಾಂತ ಪ್ರತಿಪಾದಿಸಿದ ವಿಷಯವನ್ನು ಪ್ರಕೃತಿಯಲ್ಲಿ ಕಂಡುಕೊಂಡಾಗ ಮಾತ್ರ ಆ ಸಿದ್ಧಾಂತ ಪ್ರಶ್ನಾತೀತವಾಗುತ್ತದೆ. ಅಲ್ಲಿಯವರೆಗೂ ಅದು ಸೈದ್ಧಾಂತಿಕವಾಗಿ ಒಪ್ಪಬಹುದಾದ ಆದರೆ ಪ್ರಕೃತಿಯಲ್ಲಿ ದೃಷ್ಟಾಂತಗಳು ದೊರೆಯಲು ಕಷ್ಟಸಾಧ್ಯವಾದ ಒಂದು ಸಿದ್ಧಾಂತವಾಗಿ ಉಳಿದುಬಿಡುತ್ತದೆ. ಸ್ಟೀಫನ್ ಹಾಕಿಂಗ್‍ರ `ಕಪ್ಪು ಕಾಯಗಳು ಪೂರ್ತಿ ಕಪ್ಪಲ್ಲ’ ಸಿದ್ಧಾಂತ ಕೂಡ ಈ ವಿಭಾಗಕ್ಕೆ ಸೇರಿದ ಸಿದ್ಧಾಂತ. ಕಪ್ಪು ಕಾಯಗಳು ಹೊರಸೂಸುವ ಬೆಳಕನ್ನು ಕಂಡು ಹಿಡಿಯಲು ವಿಜ್ಞಾನಿಗಳಿಗೆ ಇನ್ನೂ ಸಾಧ್ಯವಾಗಿಲ್ಲ. ಪರೀಕ್ಷೆಯ ಫಲಿತಾಂಶ ಬಾರದೆ ಮೊದಲ ರ್ಯಾಂಕಿನಿಂದ ವಂಚಿತನಾದ ವಿದ್ಯಾರ್ಥಿಯಂತೆ ಸ್ಟೀಫನ್ ಹಾಕಿಂಗ್ ಕೂಡಾ ನೊಬೆಲ್ ಪ್ರಶಸ್ತಿಯಿಂದ ವಂಚಿತರಾಗಿದ್ದಾರೆ. ಆದರೆ ಅವರನ್ನು ಅರಸಿಬಂದ ಇತರ ಪ್ರತಿಷ್ಠಿತ ಪ್ರಶಸ್ತಿಗಳೇನೂ ಕಡಿಮೆಯಿಲ್ಲ.

ಇಂತಹ ಅಗಾಧ ಮನೋಬಲದ ಶ್ರೇಷ್ಠ ಸಾಧಕನನ್ನು ಕಣ್ಣಾರೆ ಕಾಣುವ ಸುಯೋಗ ನನಗೆ ಒದಗಿಬಂದಿತ್ತು. ಇದನ್ನು ನಂಬಲು ನನಗೇ ಕಷ್ಟವಾಗುತ್ತದೆ. ನನಗೆ ಸೆಪ್ಟೆಂಬರ್ 2010 ರಿಂದ ಡಿಸೆಂಬರ್ 2010ರವರೆಗೆ ನಾಲ್ಕು ತಿಂಗಳುಗಳ ಕಾಲ ಕೇಂಬ್ರಿಡ್ಜ್ ವಿಶ್ವವಿದ್ಯಾನಿಲಯದಲ್ಲಿ ಸೈದ್ಧಾಂತಿಕ ಭೌತಶಾಸ್ತ್ರ ವಿಷಯದಲ್ಲಿ ಸಂಶೋಧನೆ ನಡೆಸುವ ಅವಕಾಶ ಸಿಕ್ಕಿತ್ತು. ಧಾರವಾಡದ ಕರ್ನಾಟಕ ವಿಶ್ವವಿದ್ಯಾನಿಲಯ ಮತ್ತು ಕೇಂಬ್ರಿಡ್ಜಿನ ಸಿಡ್ನಿ ಸಸೆಕ್ಷ್ ಕಾಲೇಜು ಪ್ರತಿ ವರ್ಷ ಕೊಡಮಾಡುವ ಪ್ರತಿಷ್ಠಿತ ಡಿ.ಸಿ.ಪಾವಟೆ ಸ್ಮಾರಕ ಫೆಲೋಶಿಪ್‍ಗೆ ನಾನು ಭಾಜನಳಾಗಿದ್ದೆ. ಸ್ಟೀಫನ್ ಹಾಕಿಂಗರು ತಮ್ಮ ವೃತ್ತಿ ಜೀವನದ ಬಹುಭಾಗವನ್ನು ಕಳೆದ ಕೇಂಬ್ರಿಡ್ಜ್ ವಿಶ್ವವಿದ್ಯಾನಿಲಯದ ಅನ್ವಯಿಕ ಗಣಿತಶಾಸ್ತ್ರ ಮತ್ತು ಥೆರಾಟಿಕಲ್ ಭೌತಶಾಸ್ತ್ರ ವಿಭಾಗದಲ್ಲಿ ಕೆಲಕಾಲವಾದರೂ ಕಳೆಯುವ ಅವಕಾಶ ಸಿಕ್ಕಿದ್ದು ನನಗೆ ತುಂಬ ಸಂತೋಷವೆನಿಸಿತ್ತು. ಕೇಂಬಿಡ್ಜ್ ವಿಶ್ವವಿದ್ಯಾಲಯದ ಸಮೀಪದಲ್ಲೇ ವಾಸವಾಗಿದ್ದ ಸ್ಟೀಫನ್ ಹಾಕಿಂಗರನ್ನು ಅವರ ಹೆಸರುವಾಸಿ ವಿದ್ಯಾರ್ಥಿಯೊಬ್ಬರು ನೀಡಲಿದ್ದ ಉಪನ್ಯಾಸದಲ್ಲಿ ಭಾಗವಹಿಸಲು ಕರೆತರಲಾಗಿತ್ತು. ಗಾಲಿಕುರ್ಚಿಯ ಮೇಲೆ ಚಲನವಿಲ್ಲದೆ, ವಿದ್ಯುತ್ ಉಪಕರಣಗಳ ನಡುವೆ ಬಂಧಿಯಂತಿದ್ದ ಈ ಮಹಾನ್ ಸಾಧಕನನ್ನು ಕಣ್ಣಾರೆ ಕಂಡಾಗ ನಿಜಕ್ಕೂ ರೋಮಾಂಚನವಾಗಿತ್ತು. ಅವರು ಉಪನ್ಯಾಸ ಕುರಿತು ಉಪಕರಣಗಳ ಮೂಲಕವೇ ತನ್ನ ಪ್ರತಿಕ್ರಿಯೆ ನೀಡುವುದನ್ನು ಕಂಡಾಗ ಇದೆಂಥ ವಿಸ್ಮಯ ಎಂತಲೂ ಅನಿಸಿತ್ತು. ಈ ಸಂದರ್ಭ ನನ್ನ ಜೀವನದಲ್ಲಿ ಎಂದೂ ಮರೆಯಲಾರದ ಅಪೂರ್ವ ಸನ್ನಿವೇಶಗಳಲ್ಲಿ ಒಂದಾಗಿ ಉಳಿದುಕೊಂಡಿದೆ. ಯಾವ ಬಗೆಯ ರೂಪಕದಿಂದಲೂ ಸಮರ್ಥವಾಗಿ ಹಿಡಿದಿಡಲಾಗದ ವಿಶಿಷ್ಟ ಚೈತನ್ಯದ, ಪ್ರಚಂಡ ಬುದ್ಧಿಶಕ್ತಿಯ ಈ ವ್ಯಕ್ತಿ ಅಪಾರ ಮನೋಬಲದಿಂದ ಸಾವನ್ನೇ ತನಗಾಗಿ ಕಾಯುವಂತೆ ಮಾಡಿ ಬದುಕಿ ಬಾಳಿದ್ದರು ಎನ್ನುವುದು ಸೃಷ್ಟಿಯ ಅನುಪಮ ವೈಚಿತ್ರ್ಯಗಳಲ್ಲಿ ಒಂದಲ್ಲದೇ ಮತ್ತೇನು? ಈ ಮಹಾನ್ ಸಾಧಕನಿಗೆ ಮನದಾಳದ ಶ್ರದ್ಧಾಂಜಲಿ.

*ಲೇಖಕರು ಸಹಾಯಕ ಪ್ರಾಧ್ಯಾಪಕಿ, ಭೌತಶಾಸ್ತ್ರ ವಿಭಾಗ, ಕುವೆಂಪು ವಿಶ್ವವಿದ್ಯಾನಿಲಯ, ಶಂಕರಘಟ್ಟ.

ಎನ್.ಎಸ್.ಶಂಕರ್

ಬಿಜೆಪಿ ವಿರೋಧಿ ಒಕ್ಕೂಟ ಸಾಧ್ಯವೇ?

ಜುಲೈ ೨೦೧೮

ಶಾಂತಲಾ ದಾಮ್ಲೆ

ಹೋರಾಟಗಾರ ಅಭ್ಯರ್ಥಿ ಚುನಾವಣಾ ಬವಣೆ

ಜುಲೈ ೨೦೧೮

ಶ್ರೀಶೈಲ ಆಲದಹಳ್ಳಿ

ಸಂಡೂರು ಕುಮಾರಸ್ವಾಮಿ ಬೆಟ್ಟಕ್ಕೆ ಗಣಿ ಕಂಟಕ!

ಜುಲೈ ೨೦೧೮

ಡಾ.ಡಿ.ಸಿ.ನಂಜುಂಡ

ನಿಮ್ಮ ಆನ್‍ಲೈನ್ ಮಾಹಿತಿ ಎಷ್ಟು ಸುರಕ್ಷಿತ?

ಜೂನ್ ೨೦೧೮

ಪ್ರೊ. ರವೀಂದ್ರ ರೇಷ್ಮೆ

ಅಸೆಂಬ್ಲಿ ಫಲಿತಾಂಶ - ಪಕ್ಷ ರಾಜಕಾರಣದ ಪತನ

ಜೂನ್ ೨೦೧೮

ಡಾ.ಟಿ.ಆರ್.ಚಂದ್ರಶೇಖರ

ಭಾರತದಲ್ಲಿ ಬ್ಯಾಂಕಿಂಗ್ ಬುಡ ಗಡಗಡ!

ಮೇ ೨೦೧೮

ಸುಧೀಂದ್ರ ಹಾಲ್ದೊಡ್ಡೇರಿ

ಬೆಳ್ಳಂದೂರಿನಲ್ಲಿ ನೊರೆ ಹೊತ್ತಿ ಉರಿದೊಡೆ...!

ಮೇ ೨೦೧೮

ರಹಮತ್ ತರೀಕೆರೆ

ಪ್ರತಿಮೆಗಳ ರಾಜಕಾರಣ

ಎಪ್ರಿಲ್ ೨೦೧೮

ಹನುಮಂತರೆಡ್ಡಿ ಶಿರೂರು

ಸಿದ್ದರಾಮಯ್ಯನವರ ಕಲ್ಯಾಣ ರಾಜ್ಯ !

ಎಪ್ರಿಲ್ ೨೦೧೮

ದಾಸನೂರು ಕೂಸಣ್ಣ

ಒಳ ಮೀಸಲಾತಿಏಕೆ ಬೇಕು?

ಮಾರ್ಚ್ ೨೦೧೮

ರೇಣುಕಾ ನಿಡಗುಂದಿ

ಮೊಲೆ ಕತ್ತರಿಸಿಕೊಟ್ಟ ನಂಗೇಲಿ ನೆನಪು!

ಮಾರ್ಚ್ ೨೦೧೮

ಡಿ. ಎಸ್. ನಾಗಭೂಷಣ

ಕನ್ನಡ ಮೊದಲು ನಂತರ ಇಂಗ್ಲಿಷ್

ಮಾರ್ಚ್ ೨೦೧೮

ಡಾ. ವಾಸು ಎಚ್. ವಿ

ಈ ಹೊತ್ತಿನ ಕರ್ನಾಟಕ: ಪರ್ಯಾಯ ರಾಜಕಾರಣ

ಫೆಬ್ರವರಿ ೨೦೧೮

ಡಾ.ಕಿರಣ್ ಎಂ.ಗಾಜನೂರು

‘ನಿಮ್ಮ ದನದ ಬಾಲ ನೀವೇ ಇಟ್ಟುಕೊಳ್ಳಿ’

ಫೆಬ್ರವರಿ ೨೦೧೮