2nd ಎಪ್ರಿಲ್ ೨೦೧೮

ಉತ್ತರ ಪ್ರದೇಶ ಮತ್ತು ಬಿಹಾರದ ಫಲಿತಾಂಶಗಳು ಏನು ಹೇಳುತ್ತಿವೆ?

ಡಿ.ಎಸ್.ನಾಗಭೂಷಣ

ಇತ್ತೀಚಿಗೆ ಕಾಂಗ್ರೆಸ್ಸಿನ ಭ್ರಷ್ಟಾಚಾರಕ್ಕಿಂತ ಬಿಜೆಪಿಯ ಕೋಮುವಾದ ಸಹನೀಯ ಅನ್ನಿಸತೊಡಗಿದೆ ಎಂಬುದರಿಂದಲಾದರೂ ಸೆಕ್ಯುಲರ್‍ವಾದಿಗಳು ಪಾಠ ಕಲಿಯಬೇಡವೇ? ಆದರೆ ಪ್ರಜಾಪ್ರಭುತ್ವ, ಧರ್ಮನಿರಪೇಕ್ಷತೆ ಮತ್ತು ಒಳಗೊಳ್ಳುವ ರಾಜಕಾರಣದ ತತ್ವಗಳ ದೀರ್ಘ ಪರಂಪರೆಯುಳ್ಳ ಕಾಂಗ್ರೆಸ್‍ನಂತಹ ರಾಷ್ಟ್ರೀಯ ಪಕ್ಷವೊಂದು ಕೋಮುವಾದಿ ವಿರೋಧಿ ಹೋರಾಟದ ಇಂತಹ ಬೋಳೆತನಕ್ಕೆ ಸಿಕ್ಕಿ ನಿರ್ನಾಮವಾಗಲು ಬಿಡಬೇಕೆ?

ಉತ್ತರ ಪ್ರದೇಶ ಮತ್ತು ಬಿಹಾರಗಳಿಂದ ಬಂದಿರುವ ಉಪಚುನಾವಣೆಗಳ ಫಲಿತಾಂಶಗಳು ರಾಷ್ಟ್ರದ ರಾಜಕಾರಣದಲ್ಲಿ ಒಂದು ಸಂಚಲನವನ್ನೇ ಉಂಟು ಮಾಡಿವೆ ಎಂದು ಹೇಳಬೇಕು. ಈಶಾನ್ಯ ಭಾರತವನ್ನು ಗೆದ್ದುಕೊಂಡ, ಅದಕ್ಕಿಂತ ವಿಶೇಷವಾಗಿ ತ್ರಿಪುರಾದಲ್ಲಿನ ಕಮ್ಯೂನಿಸ್ಟ್ ಭದ್ರಕೋಟೆಯನ್ನು ಛಿದ್ರ ಮಾಡಿದ ಸಂಭ್ರಮೋತ್ಸಾಹದಲ್ಲಿದ್ದ ಸಂಘ ಪರಿವಾರವನ್ನು ಈ ಫಲಿತಾಂಶಗಳು ಬೆಚ್ಚಿಬೀಳಿಸಿರಲೂ ಸಾಕು. ಇನ್ನು ಕಾಂಗ್ರೆಸ್ಸೇತರ ವಿರೋಧ ಪಕ್ಷಗಳಿಗೆ ಬಿಜೆಪಿಯ ಇತ್ತೀಚಿಗೆ ಮಿತಿ ಮೀರಿದ್ದ ಸೊಕ್ಕನ್ನು ಮುರಿದ ತೃಪ್ತಿಯಲ್ಲದೆ, ತಮಗೂ ಮುಂದಿನ ಚುನಾವಣೆಗಳ ಹೊತ್ತಿಗೆ ಒಂದು ಆಶಾ ಕಿರಣ ಕಂಡ ಖುಷಿಯೂ ಉಂಟಾಗಿರಬಹುದು.

ಉತ್ತರ ಪ್ರದೇಶದಲ್ಲಿ ಅದರ ಮುಖ್ಯಮಂತ್ರಿ ಯೋಗಿ ಆದಿತ್ಯನಾಥರು ಐದು ಬಾರಿ ಸತತವಾಗಿ ಗೆದ್ದು ಅವರ ಭದ್ರಕೋಟೆ ಎನಿಸಿದ್ದ ಗೋರಖ್‍ಪುರ ಕ್ಷೇತ್ರವನ್ನು ಸಮಾಜವಾದಿ—ಬಿಎಸ್ಪಿ ಮೈತ್ರಿ ವಶಪಡಿಸಿಕೊಂಡಿರುವುದು ಹಲವು ದೃಷ್ಟಿಗಳಿಂದ ಗಮನಾರ್ಹವಾದ ಫಲಿತಾಂಶವಾಗಿದೆ. ಹಿಂದುತ್ವದ ಹೆಂಡ ಕುಡಿದಂತೆ ಅಸಂಬದ್ಧ ಹೇಳಿಕೆಗಳನ್ನು ನೀಡುತ್ತಾ ಅನಾಹುತಕಾರಿಯಾಗಿ ವರ್ತಿಸುತ್ತಿದ್ದ ಈ ಯೋಗಿಗೆ ಜನ ಕೊನೆಗೂ ಛೀಮಾರಿ ಹಾಕಿದಂತಾಗಿದೆ. ಇನ್ನು ದೂರದ ಫೂಲ್‍ಪುರದಲ್ಲೂ (ಇದು ಜವಾಹರಲಾಲ್ ನೆಹ್ರೂ ಅವರ ಸಾಂಪ್ರದಾಯಿಕ ಕ್ಷೇತ್ರವೂ ಆಗಿತ್ತು.) ಈ ಮೈತ್ರಿ ಬಿಜೆಪಿಯನ್ನು ಭಾರಿ ಅಂತರದಿಂದದಲೇ ಸೋಲಿಸಿರುವುದನ್ನು ನೋಡಿದರೆ ಜನ ನಿಜವಾಗಿ ಕೇಂದ್ರದ ಮೋದಿ ಮತ್ತು ಲಕ್ನೋದ ಯೋಗಿ ಸರ್ಕಾರಗಳೆರಡರ ಬಗ್ಗೆಯೂ ಭ್ರಮನಿರಸನ ಹೊಂದಿರುವುದು ನಿಚ್ಚಳವಾಗಿ ಕಾಣುತ್ತದೆ. ಇದು ಮೋದಿಯ ಗಂಟಲಿನ ಅಬ್ಬರಕ್ಕೆ ಸ್ವಲ್ಪಕಾಲವಾದರೂ ತಡೆಯೊಡ್ಡಬಹುದೆಂದು ಆಶಿಸಿ ಜನ ಸಮಾಧಾನಪಟ್ಟುಕೊಳ್ಳಬಹುದು!

ಆದರೆ ಈ ಫಲಿತಾಂಶಗಳ ಬಗ್ಗೆ ವಿರೋಧ ಪಕ್ಷಗಳೇನೂ ನಿರ್ಣಾಯಕ ಖುಷಿ ಪಡುವ ಪರಿಸ್ಥಿತಿ ಇಲ್ಲ ಎಂದೂ ಇಲ್ಲಿ ಹೇಳಬೇಕು. ಏಕೆಂದರೆ, ಉ.ಪ್ರ. ದಲ್ಲಿನ ಸಮಾಜವಾದಿ—ಬಿಎಸ್ಪಿ ಮೈತ್ರಿ ಇತ್ತೀಚಿನ ವರ್ಷಗಳ ರಾಜಕೀಯ ಇತಿಹಾಸದಲ್ಲಿ ಪರಸ್ಪರ ವಿರುದ್ಧವಿದ್ದ ಸಾಮಾಜಿಕ ಹಿತಾಸಕ್ತಿಗಳನ್ನು ಪ್ರತಿನಿಧಿಸುವ ಜಾತಿ— ವರ್ಗಗಗಳ ನಡುವೆ ಆಗಿರುವಂತಹದ್ದು. ಇದು ಆಗಿರುವುದು ಮೋದಿ ಅಬ್ಬರದ ಎದುರು ಈ ಇಬ್ಬರ ಸರ್ವನಾಶದ ಆತಂಕದಿಂದಾಗಿ. ಹಾಗಾಗಿ ಈ ಮೈತ್ರಿ ರಾಜ್ಯದಲ್ಲಿ ರಾಜಕೀಯ ಕಾವು ಏರುತ್ತಿದ್ದಂತೆ, ಅಧಿಕಾರ ರಾಜಕಾರಣದ ಅವಕಾಶಗಳು ಬಿಚ್ಚಿಕೊಳ್ಳುತ್ತಿದ್ದಂತೆ ಬಿಗುವುಗಳನ್ನು ಎದುರಿಸುವುದು ಖಂಡಿತ. ಹಾಗೆ ನೋಡಿದರೆ ಅರವತ್ತು—ಎಪ್ಪತ್ತರ ದಶಕದಲ್ಲಿ ಲೋಹಿಯಾ ವ್ಯಕ್ತಿತ್ವದ ಪ್ರಖರತೆಯಲ್ಲಿ ಸಮಾಜವಾದಿ ರಾಜಕಾರಣ ತಾತ್ವಿಕವಾಗಿ ತನ್ನ ಸಮಗ್ರತೆಯನ್ನು ಉಳಿಸಿಕೊಂಡಿದ್ದಾಗ ಈ ಎರಡೂ ಜಾತಿ—ವರ್ಗಗಗಳು ಸಮಾಜವಾದಿ ತತ್ವದ ಪ್ರಭಾವದಡಿಯಲ್ಲಿ ಒಂದಾಗಿಯೇ ಇದ್ದವು. ಆದರೆ ಎಪ್ಪತ್ತರ ದಶಕದ ಹೊತ್ತಿಗೆ ಲೋಹಿಯಾ ಜೊತೆಗೆ ಅವರ ಪ್ರಭಾವವೂ ಕ್ರಮೇಣ ಮಸುಕಾಗತೊಡಗಿ ಸಮಾಜವಾದಿ ರಾಜಕಾರಣ ಎಂದರೆ ದ್ವಿಜೇತರ ಜಾತಿಗಳ ಪ್ರಾಬಲ್ಯದ ರಾಜಕಾರಣವೆಂದು ನಿರೂಪಿತವಾಗಿ ಕುಬ್ಜಗೊಂಡಿತು. ಸಮಾಜವಾದದ ಮುಸುಕು ತೊಟ್ಟ ಈ ಊಳಿಗಮಾನ್ಯಶಾಹಿ ಜಾತಿ ರಾಜಕಾರಣದ ಬಿಸಿ ತಾಳಲಾರದೆ ದಲಿತ ಮತ್ತು ಅತಿ ಹಿಂದುಳಿದ ಜಾತಿಗಳು ಅದರಿಂದ ಪ್ರತ್ಯೇಕಗೊಂಡವು. ಈ ಜಾತಿ—ವರ್ಗವೇ ಮುಂದೆ ಕಾನ್ಶಿರಾಂ ಅವರ ಪ್ರಬುದ್ಧ ಮತ್ತು ಸಮರ್ಥ ನಾಯಕತ್ವದಲ್ಲಿ ಬಿಎಸ್ಪಿ ಪಕ್ಷವಾಗಿ ತಲೆ ಎತ್ತಿದ್ದು. ಹಾಗಾಗಿ ಲೋಹಿಯಾ ಕಾಲದ ಹಲವು ಸಮಾಜವಾದಿ ಯುವನಾಯಕರು ನಂತರ ಬಿಎಸ್ಪಿಯಲ್ಲಿ ಕಾಣಿಸಿಕೊಂಡಿದ್ದರಲ್ಲಿ ಆಶ್ಚರ್ಯವೇನಿಲ್ಲ. ಆದರೆ ನಂತರದಲ್ಲಿ ಇದು ಮಾಯಾವತಿ ಎಂಬ ಅತಿ ದುರಭಿಮಾನದ ಆತ್ಮಘಾತುಕ ವ್ಯಕ್ತಿತ್ವದ ಹಿಡಿತಕ್ಕೆ ಸಿಕ್ಕಿ ಕ್ರಮೇಣ ಅವಸಾನದ ಹಂತ ತಲುಪಿದ್ದು ಇತ್ತೀಚಿನ ಇತಿಹಾಸ.

ಅದೇನೇ ಇರಲಿ, ಈಗ ಈ ಎರಡೂ ಸಾಮಾಜಿಕ—ರಾಜಕೀಯ ಗುಂಪುಗಳೂ ಮೋದಿಯ ಹಿಂದುತ್ವದ ಬುಲ್‍ಡೋಜರ್ ರಾಜಕಾರಣದ ಅಡಿ ಸಿಕ್ಕಿ ಅಪ್ಪಚ್ಚಿಯಾಗಿರುವ ಹೊತ್ತಿನಲ್ಲಿ ಈ ಎರಡೂ ಗುಂಪುಗಳ ನಾಯಕರಾದ ಅಖಿಲೇಶ್ ಯಾದವ್ ಮತ್ತು ಮಾಯಾವತಿ ಕೆಟ್ಟ ಮೇಲೆ ಬುದ್ಧಿ ಬಂತು ಎಂಬಂತೆ ಪಾಠ ಕಲಿತಿರುವ ಹಾಗೆ ತೋರುತ್ತದೆ. ಹಾಗಾಗಿಯೇ ಎಂದೂ ಯಾರಿಗೂ ಮಣಿಯದಿದ್ದ ಮಾಯಾವತಿ ತಮ್ಮ ರಾಜಕೀಯ ಸ್ಥಿತಿಯ ನಿಷ್ಠುರ ವಿಮರ್ಶೆ ಮಾಡಿಕೊಂಡಂತೆ ಎರಡೂ ಕ್ಷೇತ್ರಗಳಲ್ಲಿ ಅಖಿಲೇಶರ ಸಮಾಜವಾದಿ ಪಕ್ಷಕ್ಕೆ ಬೇಷರತ್ ಬೆಂಬಲ ಘೋಷಿಸಿದರು. ಅಷ್ಟು ಮಾತ್ರವಲ್ಲದೆ ಈ ಕ್ಷೇತ್ರಗಳಲ್ಲಿ ತಮ್ಮ ಬೆಂಬಲಿಗರು ಇಡಿಯಾಗಿ ಸಮಾಜವಾದಿ ಪಕ್ಷಕ್ಕೆ ಮತ ಹಾಕುವಂತೆ ನೋಡಿಕೊಂಡರು. ಆದುದರಿಂದಲೇ ಎರಡೂ ಕಡೆ—ವಿಶೇಷವಾಗಿ ಗೋರಖಪುರದಲ್ಲಿ ಸಮಾಜವಾದಿ ಪಕ್ಷ ನಿರ್ಣಾಯಕ ಗೆಲವು ಸಾಧಿಸಲು ಸಾಧ್ಯವಾದದ್ದು. ಇದನ್ನು ಗಮನಿಸಿಯೇ ಅಖಿಲೇಶ್ ಯಾದವ್ ಫಲಿತಾಂಶ ಪ್ರಕಟವಾಗುತ್ತಿದ್ದಂತೆಯೇ ಮಾಯಾವತಿಯವರ ಮನೆಗೆ ಹೋಗಿ ಧನ್ಯವಾದಗಳನ್ನು ಹೇಳಿ ಬಂದದ್ದು.

ಈ ಸ್ನೇಹ ದೀರ್ಘ ಕಾಲ ಉಳಿಯಬಹುದಾದ ಸಾಧ್ಯತೆಗಳಿಗೆ ಸದ್ಯಕ್ಕಾದರೂ ಮುಖ್ಯವಾಗಿ ಎರಡು ಕಾರಣಗಳಿವೆ. ಒಂದು ಈ ಎರಡೂ ಪಕ್ಷಗಳಿಗೆ—ನಿರ್ದಿಷ್ಟವಾಗಿ ಬಿಎಸ್ಪಿಗೆ— ಇದು ಸಾವುಬದುಕಿನ ಪ್ರಶ್ನೆ. ಕಳೆದ ಚುನಾವಣೆಗಳಲ್ಲಿನ ಅನಿರೀಕ್ಷಿತ ಹೀನಾಯ ಸೋಲುಗಳು ಎರಡೂ ಕಡೆ ತಮ್ಮ ರಾಜಕೀಯ ನಡೆ ನುಡಿಗಳ ಬಗ್ಗೆ ನಿಷ್ಠುರ ಆತ್ಮ ನಿರೀಕ್ಷೆಯನ್ನು ಒತ್ತಾಯಿಸಿರುವಂತೆ ತೋರುತ್ತಿದೆ. ಮೊದಲ ಬಾರಿಗೆ ದೊಡ್ಡ ಬಾಯಿಯ ಮಾಯಾವತಿಯವರು ಹೆಚ್ಚು ಮಾತಾಡದೆ ಮೆದುವಾಗಿದ್ದಾರೆ; ಮೌನವಾಗಿದ್ದಾರೆ. ಇನ್ನು ಸಮಾಜವಾದಿ ಪಕ್ಷದ ನಾಯಕತ್ವ ಈಗ ನಿರ್ಣಾಯಕವಾಗಿ ಊಳಿಗಮಾನ್ಯಶಾಹಿ ಮಾನಸಿಕತೆಯ ಮುಲಾಯಂಸಿಂಗ್ ಯಾದವ್ ಎಂಬ ಅರಳುಮರುಳು ಮುದುಕನಿಂದ ಅಖಿಲೇಶ್ ಯಾದವ್ ಎಂಬ ಹೊಸ ಕಾಲದ ಮೌಲ್ಯಗಳಲ್ಲಿ ಬೆಳೆದ ಯುವಕನ ಕೈಗೆ ವರ್ಗಾಯಿಸಲ್ಪಟ್ಟಿದೆ. ಈತ ಲೋಹಿಯಾರನ್ನು ತನ್ನ ಅಪ್ಪನ ರಾಜಕಾರಣದ ಹಂಗಿಲ್ಲದೆ ಓದಿಕೊಂಡ ಹುಡುಗ. ಹಾಗಾಗಿ ಈ ಯುವ ಯಾದವ ಲೋಹಿಯಾ ವಿಚಾರಗಳ ನಿಜ ಪ್ರಭಾವದಲ್ಲಿ ಸಮಾಜದ ಇತರೆಲ್ಲ ಜಾತಿ ವರ್ಗಗಳಂತೆಯೇ, ಬಿಎಸ್‍ಪಿ ಅಡಿಯ ಅತಿಶೂದ್ರ ಮತ್ತು ದಲಿತ ಜಾತಿ—ವರ್ಗಗಳೊಂದಿಗೆ ಆತ್ಮೀಯವಾಗಿ ಗುರುತಿಸಿಕೊಳ್ಳುವ ಎಲ್ಲ ಸಾಧ್ಯತೆಗಳಿವೆ. ಈ ಸಾಧ್ಯತೆ ನಿಜವೇ ಆಗಿ ಹೋದರೆ 2019ರ ಚುನಾವಣೆಗಳಲ್ಲಿ ಮೋದಿ—ಅಮಿತ್ ಶಾ ಆಟ ಕಳೆದ ಚುನಾವಣೆಗಳಲ್ಲಿ ಆದಂತೆ ದೊಡ್ಡಾಟವಾಗಿ ಜನಮನ ಗೆಲ್ಲಲಾರದು. ಹೇಗೂ ಈ ಜೋಡಿಯ ‘ಅದ್ಭುತ’ ಮಾತುಗಾರಿಕೆಯ ಆಟಕ್ಕೆ ಸುಲಭದ ಎದುರಾಳಿಯಾಗಿ ಒದಗಿದ್ದ ತುಕ್ಕು ಹಿಡಿದ ಕಾಂಗ್ರೆಸ್ಸಿನ ಸುಳಿವೇ ಇಲ್ಲಿ ಇಲ್ಲವಲ್ಲ!

ಭ್ರಷ್ಟಾಚಾರದ ಕೂಸನ್ನು ಕಂಕುಳಲ್ಲಿಟ್ಟುಕೊಂಡು ಕೋಮುವಾದವನ್ನು ಎದುರಿಸಲಾದೀತೆ?

ಇನ್ನು ಬಿಹಾರ ಉಪಚುನಾವಣೆಗಳ ವಿಷಯಕ್ಕೆ ಬಂದರೆ ಅಲ್ಲಿ ಜೆಡಿಯು—ಬಿಜೆಪಿ ಮೈತ್ರಿಕೂಟ ಭಾರಿ ಮುಖಭಂಗ ಅನುಭವಿಸಿದೆ, ನಿಜ. ಆದರೆ ಉತ್ತರಪ್ರದೇಶದಲ್ಲಾದಂತೆ ಅಲ್ಲ. ಏಕೆಂದರೆ ಇಲ್ಲಿ ಲಾಲೂ ಪ್ರಸಾದರ ಆರ್‍ಜೆಡಿ ಮತ್ತು ಬಿಜೆಪಿಗಳು ತಮ್ಮ ಸ್ಥಾನಗಳನ್ನು ಉಳಿಸಿಕೊಂಡಿವೆ. ಒಂದೇ ವಿಶೇಷವೆಂದರೆ ಲಾಲೂ ಅವರ ಆರ್‍ಜೆಡಿ ಪಕ್ಷದ ಜಯದ ಅಂತರ ಹೆಚ್ಚಾಗಿದೆ. ಇದಕ್ಕೆ ಕಾರಣ ಈ ಚುನಾವಣೆಗಳಲ್ಲಿ ಮೈತ್ರಿಕೂಟಗಳ ಸಾಮಾಜಿಕ ಸ್ವರೂಪ ಸಂಪೂರ್ಣ ಬದಲಾಗಿರುವುದೇ ಇರಬಹುದು.

ಆರ್‍ಜೆಡಿ ಅರಾರಿಯಾ ಲೋಕಸಭಾ ಮತ್ತು ಜೆಹಾನಾಬಾದ್‍ನ ವಿಧಾನಸಭಾ ಕ್ಷೇತ್ರಗಳಲ್ಲಿ ಜಯ ಗಳಿಸಿದ್ದರೆ, ಬಭುವಾ ವಿಧಾನಸಭಾ ಕ್ಷೇತ್ರ ಬಿಜೆಪಿ ಪಾಲಾಗಿದೆ. ಲಾಲೂ ಭ್ರಷ್ಟಾಚಾರದ ಪ್ರಕರಣವೊಂದರಲ್ಲಿ ಶಿಕ್ಷೆಗೊಳಗಾಗಿ ಸರೆಮನೆಯಲ್ಲಿದ್ದರೂ ಅವರ ಪಕ್ಷ ಗೆದ್ದಿರುವುದರ ಬಗ್ಗೆ ಮಾಧ್ಯಮಗಳಲ್ಲಿ ಭಾರಿ ಹುಯಿಲೆಬ್ಬಿಸಲಾಗುತ್ತಿದೆ. ಆದರೆ ಆ ಹುಯ್ಲಿಗೆ ಕಾರಣವೇನೂ ಇಲ್ಲ. ಏಕೆಂದರೆ ಲಾಲೂ ಸೆರೆಮನೆ ಸೇರಿರುವುದು ಇದು ಮೊದಲೇನಲ್ಲ ಮತ್ತು ಈ ಎರಡೂ ಕ್ಷೇತ್ರಗಳೂ ಸಾಕಷ್ಟು ಕಾಲದಿಂದ ಆರ್‍ಜೆಡಿಯ ಭದ್ರಕೋಟೆಯಾಗಿವೆ. ಹೆಚ್ಚೆಂದರೆ ಲಾಲೂ ಸೆರೆಮನೆಯಲ್ಲಿದ್ದೂ ಇಲ್ಲಿ ತಮ್ಮ ಪ್ರಾಬಲ್ಯ ಉಳಿಸಿಕೊಂಡಿದ್ದಾರೆ ಎನ್ನಬಹುದಷ್ಟೆ. ಇದಕ್ಕೆ ಅವರ ಮಗ ತೇಜಸ್ವಿ ಯಾದವ್‍ರ (ಇವರೂ ಭ್ರಷ್ಟಾಚಾರದ ಪ್ರಕರಣದಲ್ಲಿ ಶೀಘ್ರದಲ್ಲೇ ಬಂಧನಕ್ಕೊಳಗಾಗುವ ಎಲ್ಲ ಸೂಚನೆಗಳೂ ಇವೆ) ನಾಯಕತ್ವ ಗುಣವನ್ನು ಮಾಧ್ಯಮಗಳ ಕೆಲ ವಲಯಗಳಲ್ಲಿ ಶ್ಲಾಘಿಸಲಾಗುತ್ತಿದೆ. ಆದರೆ ಚುನಾವಣಾ ಗೆಲವು ನಮ್ಮ ರಾಜಕಾರಣದ ಮೂಲ ಆಧಾರಗಳನ್ನೇ—ಅದರ ಶೀಲವನ್ನೇ—ಹಾಳು ಮಾಡಿರುವ ಭ್ರಷ್ಟಾಚಾರವನ್ನು —ಸಾರ್ವಜನಿಕ ಹಣದ ಲೂಟಿಯನ್ನು— ಕ್ಷಮಾರ್ಹಗೊಳಿಸಬಲ್ಲುದೇ? ಎಂಬ ಪ್ರಶ್ನೆಯನ್ನೂ ಇಲ್ಲಿ ನಾವು ಕೇಳಿಕೊಳ್ಳಬೇಕಾಗಿದೆ. ಇದು ಈ ಫಲಿತಾಂಶಗಳು ಎತ್ತಿರುವ ದೊಡ್ಡ ಪ್ರಶ್ನೆ.

ಬಿಹಾರದಲ್ಲಿ (ಉ.ಪ್ರ. ದಲ್ಲೂ!) ಸೆರೆಮನೆಗಳಲ್ಲಿದ್ದುಕೊಂಡೇ ಎಷ್ಟು ಜನ ಕಳ್ಳ—ಖದೀಮರು—ಕೊಲೆಗಾರರು—ಗೂಂಡಾಗಳು ಚುನಾವಣೆಗಳನ್ನು ಭಾರಿ ಅಂತರದಿಂದ ಗೆದ್ದಿಲ್ಲ? ಅದಕ್ಕೊಂದು ಇತಿಹಾಸವೇ ಇದೆ. ಹಾಗಿರುವಾಗ ಲಾಲೂ ಕೋಮುವಾದಿ ಬಿಜೆಪಿಯನ್ನು ವಿರೋಧಿಸುತ್ತಾರೆ ಎಂಬೊಂದೇ ಕಾರಣಕ್ಕೆ ಅವರ ಮತ್ತು ತೇಜಸ್ವಿ ಸೇರಿದಂತೆ ಅವರ ಕುಟುಂಬದ ಸಾಬೀತಾದ ಭ್ರಷ್ಟಾಚಾರವನ್ನು ಒಪ್ಪಿಕೊಳ್ಳಬೇಕೆ? ಹಾಗಾದರೆ ನಮಗೆ ನ್ಯಾಯಾಂಗವಾದರೂ ಏಕೆ ಬೇಕು? ಕೋಮುವಾದವನ್ನು ಭ್ರಷ್ಟಾಚಾರದ ಸಮರ್ಥನೆಯ ಮೂಲಕ ಎದುರಿಸಹೊರಡುವುದು ಎಷ್ಟು ಸರಿ? ಸಂಪೂರ್ಣ ಜಾತಿಮಯವಾಗಿರುವ ಬಿಹಾರದ ಕೆಲವೆಡೆ ಇದು ನಡೆಯಬಹುದು. ಆದರೆ ರಾಷ್ಟ್ರದ ಇತರೆಡೆ? ಇಂತಹ ಲಜ್ಜೆಗೆಟ್ಟ ರಾಜಕಾರಣವೇ ಅಲ್ಲವೇ ನಿತೀಶ್ ಕುಮಾರ್‍ರಂತಹ ದಕ್ಷ ಮತ್ತು ಸ್ವಚ್ಛ ಸಮಾಜವಾದಿ ರಾಜಕಾರಣಿಯನ್ನು ಎರಡನೆಯ ಬಾರಿಗೆ ಬಿಜೆಪಿ ತೆಕ್ಕೆಗೆ ದೂಡಿದ್ದು? ಆ ಮೂಲಕ ಬಿಜೆಪಿಯನ್ನು ಬಿಹಾರದಲ್ಲಿ ಮತ್ತೆ ಜೀವಂತಗೊಳಿಸಿದ್ದು? ನಿತೀಶ್ ಅವರು ಲಾಲು ಮತ್ತು ಅವರ ಮಕ್ಕಳ ಭ್ರಷ್ಟಾಚಾರವನ್ನು ಸಹಿಸಿಕೊಂಡು ಮುಖ್ಯಮಂತ್ರಿ ಆಗಿ ಮುಂದುವರೆಯಬೇಕಿತ್ತೇ? ಏಕೆ ಸೋನಿಯಾ—ರಾಹುಲ್ ಸೇರಿದಂತೆ ಸೆಕ್ಯುಲರ್ ರಾಜಕೀಯ ನಾಯಕರು ಲಾಲೂಗೆ ಆರೋಪಿಯಾಗಿದ್ದ ತಮ್ಮ ಮಗನನ್ನು ರಾಜ್ಯ ಸಚಿವ ಸಂಪುಟದಿಂದ ಹಿಂತೆಗೆದುಕೊಳ್ಳುವಂತೆ ಹೇಳಲಾಗದಾದರು? ಅದೂ ಲಾಲೂ ತಾವು ಸೋನಿಯಾ ಭಕ್ತರೆಂದು ಹೇಳಿಕೊಳ್ಳುತ್ತಿರುವಾಗ? ಸೆಕ್ಯುಲರ್‍ವಾದಿಗಳ ಪ್ರಕಾರ ಹಾಗಾದರೆ ಲಾಲೂ ತಮ್ಮ ಮಗನನ್ನು ಸಚಿವ ಸಂಪುಟದಿಂದ ಹಿಂತೆಗೆದುಕೊಳ್ಳಲು ನಿರಾಕರಿಸಿದ ನಂತರ ನಿತೀಶ್ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ಕೊಟ್ಟು ರಾಜಕೀಯ ಆತ್ಮಹತ್ಯೆ ಮಾಡಿಕೊಳ್ಳಬೇಕಿತ್ತೇ? ನಿತೀಶ್ ತಮ್ಮ ರಾಜ್ಯದಲ್ಲಿ ಎಂದೂ ಕೋಮುವಾದಿ ರಾಜಕಾರಣಕ್ಕೆ ಅವಕಾಶ ನೀಡಿಲ್ಲ ಎಂಬುದನ್ನೂ ನಾವು ಗಮನಿಸಬೇಕು.

ನಿತೀಶ್ ಹಾಳಾಗಿ ಹೋಗಲಿ. ಅವರ ದಕ್ಷ ಮತ್ತು ಸ್ವಚ್ಛ ರಾಜಕಾರಣವೇ ಅವರಿಗೆ ಮುಳುವಾಗುವುದಾದದರೆ ಆಗಲಿ. ಅವರಿಗೆ ಕಲಿಯಲು ಅದೂ ಒಂದು ಪಾಠವೇ. ಆದರೆ ಕೋಮವಾದಿ ವಿರೋಧಿ ಹೋರಾಟಕ್ಕೊಂದು ಘನತೆ, ವಿಶ್ವಾಸಾರ್ಹತೆ ಬೇಡವೇ? ಭ್ರಷ್ಟಾಚಾರವನ್ನು ಕಂಕುಳಲ್ಲಿಟ್ಟುಕೊಂಡು ಕೋಮುವಾದವನ್ನು ವಿರೋಧಿಸ ಹೊರಡುವುದು ಕೋಮುವಾದಿಗಳ ಕೈಗಳಿಗೊಂದು ಪ್ರಬಲ ಅಸ್ತ್ರ ಕೊಟ್ಟು ಅವರನ್ನು ಬಲಪಡಿಸಿದಂತೆಯೇ ಅಲ್ಲವೆ? ಕಾಂಗ್ರೆಸ್ ಇತ್ತೀಚಿನ ವರ್ಷಗಳಲ್ಲಿ ರಾಷ್ಟ್ರಾದ್ಯಂತ ಬಿಜೆಪಿ ಎದುರು ಸತತವಾಗಿ ಮುಖಭಂಗವನ್ನನುಭವಿಸುತ್ತಾ ನಾಮಾವಶೇಷದ ಹಂತ ತಲುಪಿರುವುದು ಇದೇ ಕಾರಣದಿಂದ ಅಲ್ಲವೆ? ಜನಕ್ಕೆ ಇತ್ತೀಚಿಗೆ ಕಾಂಗ್ರೆಸ್ಸಿನ ಭ್ರಷ್ಟಾಚಾರಕ್ಕಿಂತ ಬಿಜೆಪಿಯ ಕೋಮುವಾದ ಸಹನೀಯ ಅನ್ನಿಸತೊಡಗಿದೆ ಎಂಬುದರಿಂದಲಾದರೂ ಸೆಕ್ಯುಲರ್‍ವಾದಿಗಳು ಪಾಠ ಕಲಿಯಬೇಡವೇ? ಆದರೆ ಪ್ರಜಾಪ್ರಭುತ್ವ, ಧರ್ಮನಿರಪೇಕ್ಷತೆ ಮತ್ತು ಒಳಗೊಳ್ಳುವ ರಾಜಕಾರಣದ ತತ್ವಗಳ ದೀರ್ಘ ಪರಂಪರೆಯುಳ್ಳ ಕಾಂಗ್ರೆಸ್‍ನಂತಹ ರಾಷ್ಟ್ರೀಯ ಪಕ್ಷವೊಂದು ಕೋಮುವಾದಿ ವಿರೋಧಿ ಹೋರಾಟದ ಇಂತಹ ಬೋಳೆತನಕ್ಕೆ ಸಿಕ್ಕಿ ನಿರ್ನಾಮವಾಗಲು ಬಿಡಬೇಕೆ? ಅದು ಪುನರುಜ್ಜೀವನಗೊಳ್ಳಲು ಪ್ರೇರಕವಾಗುವಂತಹ ಒತ್ತಡವನ್ನು ಸಾರ್ವತ್ರಿಕವಾಗಿ ನಾವು ನಿರ್ಮಾಣ ಮಾಡಬೇಕಲ್ಲವೆ?

ಇಂದಿನ ಭಾರತದ ರಾಜಕಾರಣದಲ್ಲಿ ಎಲ್ಲ ರೀತಿಯ ಕೋಮುವಾದವನ್ನು ಎದುರಿಸುವುದು ಯಾವುದೇ ಆರೋಗ್ಯಕರ ರಾಜಕಾರಣದ ಬಹುಮುಖ್ಯ ಕಾರ್ಯಕ್ರಮವಾಗಿರಬೇಕು, ನಿಜ. ಆದರೆ ಹಾಗೆಂದು ರಾಜಕಾರಣದ ಶೀಲವನ್ನೇ ಹಾಳುಗೆಡುವಂತಹ ಬೆಳವಣಿಗೆಗಳನ್ನು ಬೆಂಬಲಿಸುತ್ತಾ ಈ ಹೋರಾಟಕ್ಕೆ ಹೊರಡುವುದು ಆತ್ಮಘಾತುಕವೇ ಸರಿ. ಹಾಗಾಗಿ ಉ.ಪ್ರ. ದ ಜೊತೆ ಬಿಹಾರದ ಫಲಿತಾಂಶಗಳು ನಮ್ಮ ಮುಂದಿಡಬೇಕಾದ ಪ್ರಶ್ನೆ, ನಾವು ಇಂದು ರಾಜಕಾರಣದಲ್ಲಿ ಉಳಿಸಿಕೊಳ್ಳಬೇಕಾದದ್ದು ಲಾಲೂ ಅವರಂತಹವರನ್ನೋ ಅಥವಾ ನಿತೀಶ್ ಅವರಂತಹವರನ್ನೋ? ಏಕೆಂದರೆ, ವಿರೋಧ ಪಕ್ಷಗಳು ತಮ್ಮದೇ ಉಡಾಫೆ ರಾಜಕಾರಣದಿಂದಾಗಿ ನಿತೀಶ್ ಅವರನ್ನು ಕಳೆದುಕೊಂಡ ಮೇಲೆ ಬರಲಿರುವ 2019ರ ಚುನಾವಣೆಗಳಲ್ಲಿ ಬಿಜೆಪಿಯನ್ನು ಅದರ ಕೋಮುವಾದವೂ ಸೇರಿದಂತೆ ಅದರ ಸಮಗ್ರ ರೂಪದಲ್ಲಿ ಎದುರಿಸುವ ವಿಶ್ವಾಸಾರ್ಹತೆ ಇಂದು ರಾಷ್ಟ್ರಮಟ್ಟದಲ್ಲಿ ಯಾರಿಗಿದೆ? ರಾಹುಲ್ ಗಾಂಧಿಯವರೇ ಗತಿಯಾದರೆ, ಅದು ನಮ್ಮ ರಾಜಕೀಯ ಇತಿಹಾಸ ಚಕ್ರವನ್ನು ಹಿಂದಕ್ಕೆ ಸರಿಸಿದಂತೆಯೇ ಸರಿ. ಹಾಗೂ ಸೆಕ್ಯುಲರಿಸಂ ಹೆಸರಿನ ರಾಜಕಾರಣ ಎದುರಿಸುತ್ತಿರುವ ದುರ್ಗತಿಯೇ ಸರಿ.

ಎನ್.ಎಸ್.ಶಂಕರ್

ಬಿಜೆಪಿ ವಿರೋಧಿ ಒಕ್ಕೂಟ ಸಾಧ್ಯವೇ?

ಜುಲೈ ೨೦೧೮

ಶಾಂತಲಾ ದಾಮ್ಲೆ

ಹೋರಾಟಗಾರ ಅಭ್ಯರ್ಥಿ ಚುನಾವಣಾ ಬವಣೆ

ಜುಲೈ ೨೦೧೮

ಶ್ರೀಶೈಲ ಆಲದಹಳ್ಳಿ

ಸಂಡೂರು ಕುಮಾರಸ್ವಾಮಿ ಬೆಟ್ಟಕ್ಕೆ ಗಣಿ ಕಂಟಕ!

ಜುಲೈ ೨೦೧೮

ಡಾ.ಡಿ.ಸಿ.ನಂಜುಂಡ

ನಿಮ್ಮ ಆನ್‍ಲೈನ್ ಮಾಹಿತಿ ಎಷ್ಟು ಸುರಕ್ಷಿತ?

ಜೂನ್ ೨೦೧೮

ಪ್ರೊ. ರವೀಂದ್ರ ರೇಷ್ಮೆ

ಅಸೆಂಬ್ಲಿ ಫಲಿತಾಂಶ - ಪಕ್ಷ ರಾಜಕಾರಣದ ಪತನ

ಜೂನ್ ೨೦೧೮

ಡಾ.ಟಿ.ಆರ್.ಚಂದ್ರಶೇಖರ

ಭಾರತದಲ್ಲಿ ಬ್ಯಾಂಕಿಂಗ್ ಬುಡ ಗಡಗಡ!

ಮೇ ೨೦೧೮

ಸುಧೀಂದ್ರ ಹಾಲ್ದೊಡ್ಡೇರಿ

ಬೆಳ್ಳಂದೂರಿನಲ್ಲಿ ನೊರೆ ಹೊತ್ತಿ ಉರಿದೊಡೆ...!

ಮೇ ೨೦೧೮

ರಹಮತ್ ತರೀಕೆರೆ

ಪ್ರತಿಮೆಗಳ ರಾಜಕಾರಣ

ಎಪ್ರಿಲ್ ೨೦೧೮

ಹನುಮಂತರೆಡ್ಡಿ ಶಿರೂರು

ಸಿದ್ದರಾಮಯ್ಯನವರ ಕಲ್ಯಾಣ ರಾಜ್ಯ !

ಎಪ್ರಿಲ್ ೨೦೧೮

ದಾಸನೂರು ಕೂಸಣ್ಣ

ಒಳ ಮೀಸಲಾತಿಏಕೆ ಬೇಕು?

ಮಾರ್ಚ್ ೨೦೧೮

ರೇಣುಕಾ ನಿಡಗುಂದಿ

ಮೊಲೆ ಕತ್ತರಿಸಿಕೊಟ್ಟ ನಂಗೇಲಿ ನೆನಪು!

ಮಾರ್ಚ್ ೨೦೧೮

ಡಿ. ಎಸ್. ನಾಗಭೂಷಣ

ಕನ್ನಡ ಮೊದಲು ನಂತರ ಇಂಗ್ಲಿಷ್

ಮಾರ್ಚ್ ೨೦೧೮

ಡಾ. ವಾಸು ಎಚ್. ವಿ

ಈ ಹೊತ್ತಿನ ಕರ್ನಾಟಕ: ಪರ್ಯಾಯ ರಾಜಕಾರಣ

ಫೆಬ್ರವರಿ ೨೦೧೮

ಡಾ.ಕಿರಣ್ ಎಂ.ಗಾಜನೂರು

‘ನಿಮ್ಮ ದನದ ಬಾಲ ನೀವೇ ಇಟ್ಟುಕೊಳ್ಳಿ’

ಫೆಬ್ರವರಿ ೨೦೧೮