2nd ಎಪ್ರಿಲ್ ೨೦೧೮

ಸಿದ್ದರಾಮಯ್ಯನವರ ಕಲ್ಯಾಣ ರಾಜ್ಯ !

ಹನುಮಂತರೆಡ್ಡಿ ಶಿರೂರು

ಹಿಂದೊಮ್ಮೆ ನಾನು ಲಂಕೇಶ್ ಪತ್ರಿಕೆಯಲ್ಲಿದ್ದಾಗ ಮೇಷ್ಟ್ರು ಲಂಕೇಶರ ಜೊತೆ ಚುನಾವಣಾ ವರದಿ ಮಾಡಲು ಕನಕಪುರದ ಹಳ್ಳಿಗಳ ಕಡೆಗೆ ಹೋಗಿದ್ದೆ. ನಾಲ್ಕೈದು ಕಡೆ ಕಟ್ಟೆ ಮೇಲೆ ಕುಳಿತು ಹರಟೆ ಹೊಡೆಯುತ್ತಿದ್ದ ಜನರನ್ನ ಮಾತಾಡಿಸಿದ ನಂತರ ಲಂಕೇಶ್ ನನ್ನನ್ನ "ಈ ಜನರನ್ನ ಸೂಕ್ಷ್ಮವಾಗಿ ಗಮನಿಸಿದೆಯಾ?" ಎಂದು ಕೇಳಿದರು. ಇಲ್ಲ ಎಂದ ನನಗೆ, "ಅಲ್ಲಯ್ಯಾ ಅವರು ಸರ್ಕಾರವೇ ಬಂದು ಹಲ್ಲುಜ್ಜಲಿ ಅಂತ ಕಾಯ್ತಾ ಕುಂತಿದ್ದಾರೆ. ಅಭ್ಯರ್ಥಿಗಳು ಕೊಡೋ ಆಶ್ವಾಸನೆಗಳನ್ನ ನಂಬಿ ಇವರು ಕೆಟ್ಟಂತೆಯೇ" ಎಂದು ಬೇಸರ ಪಟ್ಟಿದ್ದರು

ಕಳೆದ ನವೆಂಬರ್ ತಿಂಗಳಲ್ಲಿ ಬೆಂಗಳೂರಿಗೆ ಬಂದಾಗ ಊರ ತುಂಬ ಹಾಲಿ ಸರ್ಕಾರದ ಸಾಧನೆಗಳನ್ನ ಸಾರಿ ಹೇಳೋ ದೊಡ್ಡ ದೊಡ್ಡ ಬ್ಯಾನರುಗಳು ಅತಿ ಹೆಚ್ಚಿನ ಸಂಖ್ಯೆಯಲ್ಲಿ ಕಾಣಿಸಿದ್ದವು. ಅವುಗಳಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ನಗುಮುಖದ ಕೆಳಗೆ ದಪ್ಪಕ್ಷರಗಳಲ್ಲಿ ಹೀಗೆ ಬರೆದಿತ್ತು: “ನಮ್ಮ ಸರ್ಕಾರದ ಯೋಜನೆಗಳು ರಾಜ್ಯದ ಶೇಕಡಾ 80 ರಷ್ಟು ಜನರಿಗೆ ಒಂದಿಲ್ಲ ಒಂದು ರೀತಿ ಮುಟ್ಟಿವೆ...” ನಂತರ ನಾನು ಒಂದೆರಡು ವಾರಗಳ ಕಾಲ ಬಳ್ಳಾರಿ, ರಾಯಚೂರು ಮತ್ತು ವಿಜಯಪುರ ಜಿಲ್ಲೆಗಳಲ್ಲಿ ವ್ಯಾಪಕವಾಗಿ ಸುತ್ತಾಡಿದಾಗ, ನೋಡೀ ನೋಡಿ ತಲೆ ಚಿಟ್ಟು ಹಿಡಿಯೋ ಹಾಗೆ ಸರ್ಕಾರ ತನ್ನ ಸಾಧನೆಗಳ ಪ್ರಚಾರಕ್ಕಿಳಿದದ್ದು ಕಂಡುಬಂತು. ಇದಕ್ಕೆ ಸೆಡ್ಡು ಹೊಡೆದಂತೆ ಬಿಜೆಪಿ ಮತ್ತು ಜೆಡಿಎಸ್ ವಕ್ತಾರರು ತಮ್ಮ ಸಾರ್ವಜನಿಕ ಭಾಷಣಗಳಲ್ಲಿ ಮತ್ತು ಟಿವಿ ಸ್ಟುಡಿಯೋಗಳಲ್ಲಿ ಕುಳಿತು ತಮ್ಮ ಪಕ್ಷ ಅಧಿಕಾರಕ್ಕೆ ಬಂದರೆ ಇನ್ನೂ ಹೆಚ್ಚಿನ ಸರ್ಕಾರಿ ಸ್ಕೀಮುಗಳನ್ನ ಜಾರಿಗೆ ತರೋ ಭರವಸೆ ನೀಡತೊಡಗಿದ್ದೂ ಕಂಡುಬಂತು.

ಈ ಹಿನ್ನೆಲೆಯಲ್ಲೇ ಕಳೆದ ತಿಂಗಳು ಮಂಡಿಸಿದ ಮತ್ತೊಂದು ಬಜೆಟ್ಟಿನಲ್ಲಿ ಮುಖ್ಯಮಂತ್ರಿಯವರು ಯಥಾಪ್ರಕಾರ “ಭಾಗ್ಯ” ಅನ್ನೋ ಮತ್ತಷ್ಟು ಜನಪ್ರಿಯ ಕಾರ್ಯಕ್ರಮಗಳನ್ನ ಘೋಷಿಸಿ ಆಧುನಿಕ ರಾಬಿನ್ ಹುಡ್ ರೀತಿ ಬೀಗುತ್ತಿದ್ದಾರೆ. ಅನ್ನ ಭಾಗ್ಯ, ಅನಿಲ ಭಾಗ್ಯ, ಕ್ಷೀರ ಭಾಗ್ಯ, ತಾಳಿ ಭಾಗ್ಯ.... ಹೀಗೆ ಒಂದು ಸಂಸಾರಕ್ಕೆ ಬೇಕಾಗೋ ಎಲ್ಲವನ್ನೂ ಉಚಿತ ಅಥವಾ ಅಗ್ಗದ ಬೆಲೆಯಲ್ಲಿ ಸಿಗೋ ಹಾಗೆ ಮಾಡಿರೋ ಸಿದ್ದರಾಮಯ್ಯನವರು ಅಂಥ ಸಂಸಾರಗಳ ಮತ ಭಾಗ್ಯಕ್ಕಾಗಿ ಕಾದು ಕುಳಿತಂತಿದೆ. ಅಂದರೆ ಕರ್ನಾಟಕದ ಶೇಕಡಾ 80ರಷ್ಟು ಜನ ತಮ್ಮ ಒಂದಿಲ್ಲೊಂದು ದಿನನಿತ್ಯದ ಬದುಕಿಗೆ ಸರ್ಕಾರವನ್ನೇ ನಂಬಿ ಕುಳಿತಿರೋ ಸ್ಥಿತಿಯನ್ನ ಮುಖ್ಯಮಂತ್ರಿಗಳು ತಮ್ಮ ದೊಡ್ಡ ಸಾಧನೆ ಅಂಥ ಹೇಳಿಕೊಳ್ಳೋದು ದುರಂತವೇ ಸರಿ.

ಹಿಂದೊಮ್ಮೆ ನಾನು ಲಂಕೇಶ್ ಪತ್ರಿಕೆಯಲ್ಲಿದ್ದಾಗ ಮೇಷ್ಟ್ರು ಲಂಕೇಶರ ಜೊತೆ ಚುನಾವಣಾ ವರದಿ ಮಾಡಲು ಕನಕಪುರದ ಹಳ್ಳಿಗಳ ಕಡೆಗೆ ಹೋಗಿದ್ದೆ. ನಾಲ್ಕೈದು ಕಡೆ ಕಟ್ಟೆ ಮೇಲೆ ಕುಳಿತು ಹರಟೆ ಹೊಡೆಯುತ್ತಿದ್ದ ಜನರನ್ನ ಮಾತಾಡಿಸಿದ ನಂತರ ಲಂಕೇಶ್ ನನ್ನನ್ನ “ಈ ಜನರನ್ನ ಸೂಕ್ಷ್ಮವಾಗಿ ಗಮನಿಸಿದೆಯಾ?” ಎಂದು ಕೇಳಿದರು. ಇಲ್ಲ ಎಂದ ನನಗೆ, “ಅಲ್ಲಯ್ಯಾ ಅವರು ಸರ್ಕಾರವೇ ಬಂದು ಹಲ್ಲುಜ್ಜಲಿ ಅಂತ ಕಾಯ್ತಾ ಕುಂತಿದ್ದಾರೆ. ಅಭ್ಯರ್ಥಿಗಳು ಕೊಡೋ ಆಶ್ವಾಸನೆಗಳನ್ನ ನಂಬಿ ಇವರು ಕೆಟ್ಟಂತೆಯೇ” ಎಂದು ಬೇಸರ ಪಟ್ಟಿದ್ದರು. ಒಮ್ಮೆ ತಣ್ಣಗೆ ಕುಳಿತು ಯೋಚನೆ ಮಾಡಿನೋಡಿ. ಈ ಆಳುವ ಸರ್ಕಾರಗಳು ದೇಶಕ್ಕೆ ಸ್ವಾತಂತ್ರ್ಯ ಬಂದಮೇಲೆ ವ್ಯವಸ್ಥಿತವಾಗಿ ತಮ್ಮ ಪ್ರಜೆಗಳನ್ನ ಸಂಪೂರ್ಣವಾಗಿ ಸರ್ಕಾರಿ ಅವಲಂಬಿತರನ್ನಾಗಿ ಮಾಡಿರೋದು ನಿಚ್ಛಳವಾಗುತ್ತದೆ. ಅಂದು ಮೇಷ್ಟ್ರು ಅನುಮಾನಿಸಿದ್ದು ಇಂದು ಸತ್ಯವಾಗಿದೆ. ಯಾವುದೇ ಒಂದು ಪ್ರಜಾಪ್ರಭುತ್ವದಲ್ಲಿ ಆಯಾ ಕಾಲಕ್ಕೆ ಅಧಿಕಾರದಲ್ಲಿರೋ ಜವಾಬ್ದಾರಿಯುತ ಸರ್ಕಾರಗಳು ತಮ್ಮ ಪ್ರಜೆಗಳನ್ನ ಸ್ವಾವಲಂಬಿಗಳಾಗಿ ರೂಪಿಸಲು ಬೇಕಾದ ಸೌಲಭ್ಯಗಳನ್ನ ಕಲ್ಪಿಸಿಕೊಡೋದು ಆರೋಗ್ಯಕರ. ಆದರೆ ಭಾರತದಲ್ಲಿ ಕಳೆದ ಎಪ್ಪತ್ತು ವರ್ಷಗಳಲ್ಲಿ ಆಗಿರೋದು ತದ್ವಿರುದ್ಧ. ಈ ದುಸ್ಥಿತಿಗೆ ಎಲ್ಲ ರಾಜಕೀಯ ಪಕ್ಷಗಳು ಮತ್ತು ಆಯಾ ಪಕ್ಷಗಳು ತಾತ್ಕಾಲಿಕವಾಗಿ ಮತ ಗಿಟ್ಟಿಸಲು ಹಮ್ಮಿಕೊಳ್ಳೋ ಜನಪ್ರಿಯ ಕಾರ್ಯಕ್ರಮಗಳೇ ಕಾರಣ.

ಅಮೆರಿಕಾದಲ್ಲಿ ಇಂಥ “ಭಾಗ್ಯ”ಗಳನ್ನ ಸರ್ಕಾರ ನೀಡಿದೆಯೇ? ಇಲ್ಲ, ಅದೆಲ್ಲ ಇಲ್ಲಿ ಸಾಧ್ಯವೇ ಇಲ್ಲ. ಕಾರಣ ಇದು ಮೂಲತಃ ಬಂಡವಾಳಶಾಹಿಗಳ ಹಿಡಿತದಲ್ಲಿರೋ ದೇಶ. ಮುಖ್ಯವಾಗಿ ಇಲ್ಲಿರೋದು ಎರಡೇ ಎರಡು ರಾಜಕೀಯ ಪಕ್ಷಗಳು: ಬಲಪಂಥೀಯ ರಿಪಬ್ಲಿಕನ್ ಪಕ್ಷ ಮತ್ತು ಎಡಪಂಥೀಯ ಡೆಮಾಕ್ರೆಟಿಕ್ ಪಕ್ಷ. ಡೆಮಾಕ್ರೆಟಿಕ್ ಪಕ್ಷದವರು ಸ್ವಲ್ಪ ಸಿದ್ದರಾಮಯ್ಯನವರ ಹಾಗೆ ಭಾಗ್ಯದಾತರಂತೆ ಕಾಣುತ್ತಾರೆ. ಆದರೆ ಅವರೂ ಕೊನೆಗೆ ಬಂಡವಾಳಶಾಹಿಗಳ ಹಿಡಿತದಿಂದ ತಪ್ಪಿಸಿಕೊಳ್ಳೋಕೆ ಅಸಾಧ್ಯ. ಇಲ್ಲಿ ವಾಡಿಕೆಯಲ್ಲಿರೋ “There is no such thing as free lunch in America” ಅನ್ನೋದು ನೂರಕ್ಕೆ ನೂರರಷ್ಟು ಸತ್ಯ. ಅಲ್ಲಲ್ಲಿ ಭಿಕ್ಷುಕರು ಮತ್ತು ಮನೆ ಬಿಟ್ಟು ಅಲೆಯೋ ಒಂದಷ್ಟು ಜನರನ್ನ ಬಿಟ್ಟರೆ ಇಲ್ಲಿ ಎಲ್ಲರೂ ದುಡಿದುಣ್ಣುವವರೇ. ದುಡಿಯಲಾರದ ಸೋಮಾರಿಗಳಿಗೆ ಕೆಲವು ಖಾಸಗಿ ಸಂಸ್ಥೆಗಳು ಮತ್ತು ಚರ್ಚುಗಳು ಒಂದಷ್ಟು ಅನ್ನ ಹಾಕುತ್ತಾರೆಯೇ ಹೊರತು ಸರ್ಕಾರ ಏನೂ ಮಾಡುವುದಿಲ್ಲ. ಈ ದೇಶದಲ್ಲಿ ಅನೇಕ ಸಾಮಾಜಿಕ ಸಮಸ್ಯೆಗಳಿದ್ದು, ಒಮ್ಮೊಮ್ಮೆ ಭಾರತವೇ ಲೇಸು ಅನ್ನೋದು ದಿಟ. ಆದರೆ ಅಮೆರಿಕ ತನ್ನ ಪ್ರಜೆಗಳನ್ನ ಸರ್ಕಾರಿ ಅವಲಂಬಿತರನ್ನಾಗಿ ಮಾಡಿದ ದೊಡ್ಡ ಉದಾಹರಣೆಗಳಿಲ್ಲ. ಇಲ್ಲಿ ದುಡಿದರೆ ಅನ್ನ ಇಲ್ಲದಿದ್ದರೆ ಚರ್ಚುಗಳು ನಡೆಸೋ “ಸೂಪ್ ಕಿಚನ್”ಗಳೇ ಗತಿ.

ವೈವಿಧ್ಯದಲ್ಲಿ ಐಕ್ಯತೆ ಭಾರತದ ದೊಡ್ಡ ಶಕ್ತಿ ಎಂದು ಇಂಡಿಯಾದ ಎಲ್ಲ ರಾಜಕೀಯ ಪಕ್ಷಗಳು ದೊಡ್ಡದಾಗಿ ಹೇಳಿಕೊಳ್ಳೋದನ್ನ ಕೇಳಿ ಕೇಳಿ ಸಾಕಾಗಿ ಹೋಗಿದೆ. ಆದರೆ ಭಾರತೀಯ ಸಾಮಾಜಿಕ ಚರಿತ್ರೆಯಲ್ಲಿ ನೂರಾರು ವರ್ಷಗಳಿಂದ ಅದೇ “ವೈವಿಧ್ಯ”ದ ಹೆಸರಿನಲ್ಲಿ ಬೇರು ಬಿಟ್ಟಿರೋ ಶ್ರೇಣೀಕೃತ ಸಮಾಜ ಈಗಲೂ ಚಾಲ್ತಿಯಲ್ಲಿರೋದು ಕಣ್ಣ ಮುಂದೇ ಇದೆ. ಅಮಾನವೀಯ ಜಾತಿ ವ್ಯವಸ್ಥೆ, ಅಸ್ಪೃಶ್ಯತೆ, ಧಾರ್ಮಿಕ ಅಸಹನೆ ಮತ್ತು ಆರ್ಥಿಕ ಅಸಮಾನತೆಗಳು ಹಿಂದಿಗಿಂತ ಈಗ ಹೆಚ್ಚಾದಂತೆ ಕಂಡುಬರುತ್ತವೆ. ಹಾಗೆ ನೋಡಿದರೆ “ಭಾಗ್ಯ” ಮತ್ತಿತರ ಸರ್ಕಾರಿ ಕಾರ್ಯಕ್ರಮಗಳನ್ನ ಹಮ್ಮಿಕೊಳ್ಳಬಾರದೇ? ಈ ಪ್ರಶ್ನೆಗೆ ಉತ್ತರ ಸರಳವಾಗಿಲ್ಲ. ಈ ದೃಷ್ಟಿಕೋನದಲ್ಲಿ ಅಮೆರಿಕಾ ಮತ್ತು ಇತರೆ ಮುಂದುವರಿದ ದೇಶಗಳನ್ನ ಭಾರತದಂಥ ಕಗ್ಗಂಟಿನ ಸಮಾಜಕ್ಕೆ ಹೋಲಿಸೋದೂ ತಪ್ಪಾಗುತ್ತೆ. ಅಮೆರಿಕಾದಲ್ಲಿ ಅಲ್ಪಸಂಖ್ಯಾತರು ಕೊಂಚ ನೊಂದಿರೋದು ನಿಜ ಹಾಗೂ ಅಲ್ಲಲ್ಲಿ ವರ್ಣಭೇದ ಇರೋದೂ ಸತ್ಯ. ಆದರೆ ಇಲ್ಲಿ ಭಾರತದಲ್ಲಿರುವಂಥ ಜಾತಿಮತದ ಭೇದಭಾವ ಇಲ್ಲ.

ಅನಾದಿ ಕಾಲದಿಂದ ನೊಂದ ಮತ್ತು ಹಿಂದುಳಿದವರನ್ನ ಬಲಪಡಿಸಲು ಮೀಸಲಾತಿ, ಒಂದು ಹಂತದವರೆಗೆ ಉಚಿತ ಶಿಕ್ಷಣ, ವೈದ್ಯಕೀಯ ಸೌಲಭ್ಯ ಇತ್ಯಾದಿ ಕಾರ್ಯಕ್ರಮಗಳು ಇಂಡಿಯಾದಲ್ಲಿ ಖಂಡಿತ ಬೇಕು. ಅಂಥ ಕಾರ್ಯಕ್ರಮಗಳಿಂದ ಒಂದಷ್ಟು ಜನಕ್ಕೆ ಅನುಕೂಲವಾಗಿದೆ. ಆದರೆ ಇಲ್ಲಿ ಸಮಸ್ಯೆ ಇರೋದು ಆಳೋ ಸರ್ಕಾರಗಳು ಅಣಬೆಗಳಂತೆ ಹುಟ್ಟು ಹಾಕುತ್ತಿರೋ “ಭಾಗ್ಯ”ಗಳೆಂಬ ಜನಪ್ರಿಯ ಸ್ಕೀಮುಗಳು ಮತ್ತು ಅದರಿಂದ ಸೃಷ್ಟಿಯಾಗ್ತಿರೋ ಸರ್ಕಾರಿ—ಅವಲಂಬಿತ ಸಮಾಜ. ಹೋಗಲಿ ಆ ಕಾರ್ಯಕ್ರಮಗಳ ಅನುಷ್ಠಾನವಾದರೂ ಸರಿಯಾಗಿ ಆಗುತ್ತಿದೆಯೇ? ಇಲ್ಲ, ಆ ಸ್ಕೀಮುಗಳ ದುರ್ಬಳಕೆ ವ್ಯಾಪಕವಾಗಿ ನಡೆಯುತ್ತಿದೆ. ಮೊನ್ನೆ ಬೆಂಗಳೂರಿಗೆ ಬಂದಾಗ ಸಮಯದ ಅಭಾವ ಮತ್ತು ಹಲವು ಊರುಗಳಿಗೆ ಹೋಗೋ ಕೆಲಸ ಇದ್ದದ್ದರಿಂದ ಟ್ಯಾಕ್ಸಿ ಒಂದನ್ನ ಮಾಡಿಕೊಂಡಿದ್ದೆ. ಎರಡು ವಾರಗಳ ಕಾಲ ನನ್ನ ಜೊತೆ ಇದ್ದ ಆ ಚಾಲಕ ಗುಬ್ಬಿ ತಾಲೂಕಿನ ಒಂದು ಹಳ್ಳಿಯಿಂದ ಬೆಂಗಳೂರಿಗೆ ಬಂದು ಈಗ ನಾಲ್ಕು ಸ್ವಂತ ಕಾರುಗಳ ಮಾಲೀಕನಾಗಿ ಕೈ ತುಂಬ ಸಂಪಾದಿಸುತ್ತಾನೆ. ಈತನಿಗೆ ಊರಲ್ಲಿ ಸಾಕಷ್ಟು ಜಮೀನು, ಮನೆ ಇದೆ. ಆದರೂ ಈತ ಸರ್ಕಾರದ ಎಲ್ಲ ಭಾಗ್ಯಗಳ ಫಲಾನುಭವಿ. “ಅಲ್ಲಪ್ಪಾ ನಿನಗೆ ಬೇಕಾದಷ್ಟು ಇದೆ, ಆದರೂ...?” ಅಂದರೆ, “ಅಯ್ಯೋ ಬಿಡಿ ಸರ್, ನಮ್ಮೂರಿನ ಎಲ್ರೂ ತಗೊಂಡವ್ರೆ. ನಮ್ಮ ಮನೆ ಒಂದಕ್ಕೇ ಅನಿಲ ಭಾಗ್ಯದಿಂದ ಆರು ಒಲೆ ಬಂದಿವೆ” ಅಂದದ್ದು ಕೇಳಿ ನಾನು ಸುಸ್ತಾಗಿ ಹೋದೆ. ಇಂಥ ಯೋಜನೆಗಳು ರಾಜಕೀಯ ಪುಢಾರಿಗಳ ಹಿಡಿತಕ್ಕೆ ಸಿಕ್ಕು ಹೇಗೆ ಅದ್ವಾನವಾಗುತ್ತವೆ ಅನ್ನೋದಕ್ಕೆ ಉತ್ತಮ ಉದಾಹರಣೆ ಇದು. ಹಾಗೇ ಸ್ಟೇಟ್ ಬ್ಯಾಂಕಿನಲ್ಲಿ ದೊಡ್ಡ ಅಧಿಕಾರಿಯಾಗಿರೋ ಗೆಳೆಯನೊಬ್ಬ ತನ್ನ ಕುಟುಂಬದ ಹಲವು ಜನರಿಗೆ ಸರ್ಕಾರದ ಆರೋಗ್ಯ ಭಾಗ್ಯ ದಕ್ಕುವಂತೆ ಮಾಡಿದ್ದಾನೆ. ಆ ಸವಲತ್ತಿನಲ್ಲೇ ಇತ್ತೀಚೆಗೆ ಆತನ ಕುಟುಂಬದ ಒಬ್ಬರಿಗೆ ತೆರೆದ ಹೃದಯದ ಶಸ್ತ್ರಚಿಕಿತ್ಸೆಯಾಗಿದೆ. ಇಂಥ ಹಲವು ಉದಾಹರಣೆಗಳನ್ನ ನಾನು ಈ ಸಾರಿ ಸುತ್ತಾಡಿದ ಊರುಗಳಲ್ಲಿ ಕಂಡೆ. ಅಂದರೆ ಸರ್ಕಾರದ ಖಜಾನೆಯಿಂದ ಸಾವಿರಾರು ಕೋಟಿ ರೂಪಾಯಿಗಳ ವೆಚ್ಚದಲ್ಲಿ ಹಮ್ಮಿಕೊಂಡ ಈ ಸ್ಕೀಮುಗಳು ಉದ್ದೇಶಿತ ಜನಕ್ಕೆ ತಲುಪುವುದೂ ಇಲ್ಲ. ಇದೆಲ್ಲ ಸರ್ಕಾರಗಳಿಗೆ ಗೊತ್ತಿಲ್ಲ ಅಂತಲ್ಲ. ಇದು ಜನಪ್ರಿಯ ಕಾರ್ಯಕ್ರಮಗಳ ದುರ್ಬಲತೆ ಅಂದುಕೊಂಡು ಸುಮ್ಮನಿರಬೇಕಾದ ಸ್ಥಿತಿ ಬಂದೊದಗಿದೆ.

ಕೊಡುಗೆ ಹಿಂದಿನ ಕೇಡು

ದಂಪತಿಯ ಹೆಸರಿಗೆ ಅಂಚೆ ಮೂಲಕ ಒಂದು ಲಕೋಟೆ ಬಂತು. ಲಕೋಟೆ ಒಡೆದು ನೋಡಿದಾಗ ಪತ್ರದಲ್ಲಿ, ‘ನಿಮಗೆ ನಾಳೆ ಬಿಡುಗಡೆಯಾಗುವ ಖ್ಯಾತ ತಾರೆಯರ ಚಿತ್ರವನ್ನು ಮಲ್ಚಿಪ್ಲೆಕ್ಸ್‍ನಲ್ಲಿ ವೀಕ್ಷಿಸಲು ಎರಡು ಗೋಲ್ಡ್ ಟಿಕೆಟ್ ಉಚಿತವಾಗಿ ಕೊಟ್ಟಿದೆ, ನಾವು ಯಾರು ಎಂದು ಊಹೆ ಮಾಡಿ ಹೇಳಿ’ ಎಂದಿತ್ತು. ದಂಪತಿ ಎಷ್ಟು ಯೋಚನೆ ಮಾಡಿದರೂ ಟಿಕೆಟ್ ಕಳಿಸಿದವರು ಯಾರು ಎಂದು ಹೊಳೆಯಲಿಲ್ಲ. ಆದರೆ ಉಚಿತವಾಗಿ ಬಂದಿದ್ದನ್ನು ವ್ಯರ್ಥ ಮಾಡಬಾರದೆಂದು ಸಿನಿಮಾ ನೋಡಲು ಹೋದರು.

ಸಿನಿಮಾ ನೋಡಿ ಖುಷಿಯಾಗಿ ಬಂದ ದಂಪತಿಗೆ ಆಘಾತ ಕಾದಿತ್ತು ಕಾರಣ ಅವರ ಮನೆ ಬೀಗ ಮುರಿದು ಹಣ, ಒಡವೆ, ವಸ್ತುಗಳನ್ನೆಲ್ಲಾ ಕಳ್ಳರು ದೋಚಿಕೊಂಡು ಹೋಗಿದ್ದರು. ಮನೆಯಲ್ಲಿ ಸಿಕ್ಕ ಮತ್ತೊಂದು ಪತ್ರದಲ್ಲಿ, ‘ಈಗ, ನಿಮಗೆ ಉಚಿತವಾಗಿ ಟಿಕೇಟು ಕೊಟ್ಟವರು ಯಾರೆಂದು ಗೊತ್ತಾಯ್ತೇ?’ ಎಂದು ಬರೆದಿತ್ತು. ದಂಪತಿ, ‘ಅಯ್ಯೋ ಪಾಪಿಗಳೇ, ನಮಗೆ ಮೋಸ ಮಾಡಿ ನಮ್ಮನ್ನು ಹಾಳು ಮಾಡಿರುವಿರಿ. ನೀವು ನಾಶವಾಗಿ’ ಎಂದು ಶಾಪ ಹಾಕುತ್ತ ಅಳತೊಡಗಿದರು.

ನೀತಿಪಾಠ: ರಾಜಕೀಯ ಪಕ್ಷಗಳು ನಿಮ್ಮ ಓಟಿಗಾಗಿ ಏನನ್ನೇ ಉಚಿತವಾಗ ಕೊಟ್ಟರೂ ಅದಕ್ಕೆ ನೂರು ಪಟ್ಟು ನಿಮ್ಮಿಂದ ದೋಚುತ್ತಾರೆ. ಪ್ರಪಂಚದಲ್ಲಿ ಉಚಿತವಾಗಿ ಏನೂ ಸಿಗುವುದಿಲ್ಲ. ಇನ್ನು ಮುಂದೆ ಯಾರು ಏನೇ ಉಚಿತವಾಗಿ ಕೊಡಲು ಬಂದರೂ ಯೋಚಿಸಿ. ಹಣ, ಉಚಿತ ಕೊಡುಗೆಗಳಿಗೆ ಮೈಮರೆತು ಮತ ಮಾರಿಕೊಳ್ಳಬೇಕೇ?

ಈ ಭಾಗ್ಯಗಳೆಂಬ ಭಿಕ್ಷಾ ಯೋಜನೆಗಳಿಗೆ ಸರ್ಕಾರಿ ಹಣ, ಅಂದರೆ ಸಾರ್ವಜನಿಕರಿಂದ ಸಂಗ್ರಹಿಸಲ್ಪಟ್ಟ ತೆರಿಗೆ ಹಣವೇ ಬಂಡವಾಳ. ಆದರೂ ರಾಜಕೀಯ ಪಕ್ಷಗಳು ತಮ್ಮ ನೇತಾಗಳ ಹೆಸರಲ್ಲಿ ಈ ಯೋಜನೆಗಳನ್ನ ಜಾರಿಗೆ ತರೋದು ಸಾಮಾನ್ಯ. ತೀರ ಇತ್ತೀಚೆಗೆ ಆರಂಭವಾದ “ಇಂದಿರಾ ಕ್ಯಾಂಟೀನ್” ಇದಕ್ಕೊಂದು ಒಳ್ಳೆಯ ಉದಾಹರಣೆ. ಸಾರ್ವಜನಿಕ ಹಣದಲ್ಲಿ ತಮ್ಮ ಪಕ್ಷಕ್ಕೆ ರಾಜಕೀಯ ಬಂಡವಾಳದ ಬೆಳೆ ತೆಗೆಯೋದರಲ್ಲಿ ಸಿದ್ದರಾಮಯ್ಯನವರು ಯಶಸ್ವಿಯಾಗಿದ್ದಾರೆ. ಈ ಕ್ಯಾಂಟೀನುಗಳು ಕರ್ನಾಟಕದ ಶಾಲಾ ಕಾಲೇಜುಗಳಿಗೂ ವಿಸ್ತರಿಸಿ ಕಾಂಗ್ರೆಸ್ ಪಕ್ಷದ ಇಮೇಜ್ ಬೆಳೆಸೋ ಚಿಂತನೆಯೂ ನಡೆಯುತ್ತಿದೆ.

ಇಂಡಿಯಾದಲ್ಲಿ ಈ ಭಾಗ್ಯ ಯೋಜನೆಗಳು ಯಾರಿಂದ, ಎಲ್ಲಿ ಮತ್ತು ಯಾವಾಗ ಪ್ರಾರಂಭವಾದವೆಂದು ನೋಡಿದರೆ ತಕ್ಷಣ ನೆನಪಾಗೋದು ತಮಿಳುನಾಡು. ಆ ನಂತರ 1980ರ ದಶಕದ ಆದಿಯಲ್ಲಿ ಆಂಧ್ರಪ್ರದೇಶದಲ್ಲಿ ಎನ್.ಟಿ.ರಾಮರಾವ್ ತೆಲುಗು ದೇಶಂ ಚಳವಳಿಯೊಂದಿಗೆ ಅಧಿಕಾರಕ್ಕೆ ಬಂದೊಡನೆ ರಾಜ್ಯದ ಎಲ್ಲ ಹೋಟೆಲ್ಲುಗಳಲ್ಲಿ ಇಡ್ಲಿ, ವಡೆ, ಉಪ್ಪಿಟ್ಟು ಮುಂತಾದ ತಿಂಡಿಗಳ ಮೇಲೆ ಪ್ರಮಾಣ ಮತ್ತು ಬೆಲೆ ನಿಗದಿ ಮಾಡಿದಾಗ ಪ್ರಜೆಗಳ ಖುಷಿ ನೋಡಬೇಕಿತ್ತು. ನಂತರ ತಮಿಳುನಾಡಿನಲ್ಲಿ ಹೆಚ್ಚು ಕಡಿಮೆ ಎಲ್ಲ ಸಂಸಾರಗಳ ಹೊಣೆ ಹೊತ್ತ ಜಯಲಲಿತಾ ಟಿವಿ, ಸೀರೆ, ಪಂಚೆ, ತಾಳಿ ನೀಡಿ ಜನಪ್ರಿಯರಾಗಿದ್ದರು. ಈಗ ಅದೇ ಜಾಡಿನಲ್ಲಿ ಅಧಿಕಾರದಲ್ಲಿರೋ ಸಿದ್ದರಾಮಯ್ಯನವರು ಕರ್ನಾಟಕದಲ್ಲೂ ಅಂಥವೇ ಭಾಗ್ಯ ಯೋಜನೆಗಳಿಂದ ಜನಪ್ರಿಯರಾಗೋ ಕನಸು ಕಾಣುತ್ತಿದ್ದಾರೆ. ಅವರ ಈ ಜನಪ್ರಿಯ ಯೋಜನೆಗಳನ್ನ ಹೊಟ್ಟೆಕಿಚ್ಚಿನಿಂದ ನೋಡ್ತಿರೋ ಯಡಿಯೂರಪ್ಪಾಜಿ ಮತ್ತು ಕುಮಾರಸ್ವಾಮಿ ತಾವೇನು ಕಮ್ಮಿ ಎಂದು ತಮ್ಮ ಚೇಲಾಗಳಿಂದ ಭಾಗ್ಯದ ಬಾಗಿಲು ತೆರೆಯೋ ಪ್ರಯತ್ನ ಮಾಡುತ್ತಿದ್ದಾರೆ. ಉದಾಹರಣೆಗೆ ಶರವಣ ಎಂಬ ಬಂಗಾರದ ಮನುಷ್ಯ ದೇವೇಗೌಡರ ಹೆಸರಲ್ಲಿ ತೆರೆದಿರೋ “ಅಪ್ಪಾಜಿ ಕ್ಯಾಂಟೀನ್”. ಇದು ಉದ್ಯಮಿ—ರಾಜಕಾರಣಿಯೊಬ್ಬ ತನ್ನ ಹಣದಲ್ಲೇ ತನ್ನ ನಾಯಕನಿಗೆ ಸಲ್ಲಿಸಿದ ಕಾಣಿಕೆ ಅನ್ನೋದೇ ಸಮಾಧಾನಕರ ಸಂಗತಿ. ಆದರೆ, ಅವರದೇ ಪಕ್ಷ ಅಕಸ್ಮಾತ್ ಅಧಿಕಾರಕ್ಕೆ ಬಂದರೆ ಅವರೂ ಸಿದ್ದರಾಮಯ್ಯನವನ್ನ ಮೀರಿಸೋ “ಭಾಗ್ಯ” ಲಕ್ಷಿಯನ್ನ ಸಾರ್ವಜನಿಕ ಖರ್ಚಿನಲ್ಲಿ ಬರಮಾಡಿಕೊಳ್ಳೋದು ಸತ್ಯ. ಅಕಸ್ಮಾತ್ ಬಿಜೆಪಿ ಕರ್ನಾಟಕದಲ್ಲಿ ಅಧಿಕಾರಕ್ಕೆ ಬಂದರೆ ಅವರು ಮಾಡೋದೂ ಅದೇ. ಒಟ್ಟಲ್ಲಿ ಯಾರು ಆರಿಸಿ ಬಂದರೂ ಕರ್ನಾಟಕದ ನೂರಕ್ಕೆ ನೂರರಷ್ಟು ಪ್ರಜೆಗಳನ್ನ ಸರ್ಕಾರಿ ಭಾಗ್ಯಗಳ ಗುಲಾಮರನ್ನಾಗಿಸೋ ಕೆಲಸ ಮುಂದುವರಿಯುತ್ತದೆ. ಪ್ರಜೆಗಳ ಸ್ವಾಯತ್ತತೆಗೆ ಬೇಕಾದ ಕೆಲಸ ಮಾಡಿಬಿಟ್ಟರೆ ರಾಜಕಾರಣಿಗಳಿಗೇನು ಲಾಭ? ಅಂದ ಹಾಗೆ ಇಲ್ಲಿ ಪ್ರಜೆಗಳದೂ ತಪ್ಪಿಲ್ಲವೇ? ಯಥಾ ರಾಜ ತಥಾ ಪ್ರಜೆ. ಇದರ ಜೊತೆ ಬೇಸರದ ಸಂಗತಿ ಏನೆಂದರೆ, ಕರ್ನಾಟಕದ ಬುದ್ಧಿಜೀವಿಗಳು, ಮಾಧ್ಯಮ ಮತ್ತು ಪ್ರಜ್ಞಾವಂತರು ಇಂಥ ಸ್ಕೀಮುಗಳಿಂದ ಆಗೋ ಅಲ್ಪ ಲಾಭದ ಬಗ್ಗೆ ಸಿದ್ದರಾಮಯ್ಯನವರನ್ನ ಪ್ರಶ್ನಿಸಲಾರದೆ ಕುಳಿತಿರೋದು. ಹೀಗೆ ಪ್ರಶ್ನಿಸೋ ಜನಕ್ಕೂ ಸರ್ಕಾರಗಳು ನಿಗಮ ಮತ್ತು ಮಂಡಳಿಗಳೆಂಬ “ಭಾಗ್ಯ”ಗಳನ್ನ ಹುಟ್ಟು ಹಾಕಿವೆ. ನನ್ನ ಮಿತ್ರಮಂಡಳಿಯ ಹಲವರು ಈ ಭಾಗ್ಯದ ಫಲ ಉಂಡು ತಣ್ಣಗಾಗಿಬಿಟ್ಟಿದ್ದಾರೆ. ಅಂದ ಮೇಲೆ ಎಲ್ಲ ನಿಶ್ಶಬ್ಧ.

*ಬ್ಯಾಂಕ್ ನೌಕರರಾಗಿ, ದಿಟ್ಟ ಪತ್ರಕರ್ತರಾಗಿ ದುಡಿದ ಲೇಖಕರು ಕಳೆದ ಮೂರು ದಶಕಗಳಿಂದ ಅಮೆರಿಕೆಯಲ್ಲಿ ನೆಲೆಸಿ ಪರಿಸರ ಸಮಾಲೋಚಕ ವೃತ್ತಿಯಲ್ಲಿ ನಿರತರು.

ಎನ್.ಎಸ್.ಶಂಕರ್

ಬಿಜೆಪಿ ವಿರೋಧಿ ಒಕ್ಕೂಟ ಸಾಧ್ಯವೇ?

ಜುಲೈ ೨೦೧೮

ಶಾಂತಲಾ ದಾಮ್ಲೆ

ಹೋರಾಟಗಾರ ಅಭ್ಯರ್ಥಿ ಚುನಾವಣಾ ಬವಣೆ

ಜುಲೈ ೨೦೧೮

ಶ್ರೀಶೈಲ ಆಲದಹಳ್ಳಿ

ಸಂಡೂರು ಕುಮಾರಸ್ವಾಮಿ ಬೆಟ್ಟಕ್ಕೆ ಗಣಿ ಕಂಟಕ!

ಜುಲೈ ೨೦೧೮

ಡಾ.ಡಿ.ಸಿ.ನಂಜುಂಡ

ನಿಮ್ಮ ಆನ್‍ಲೈನ್ ಮಾಹಿತಿ ಎಷ್ಟು ಸುರಕ್ಷಿತ?

ಜೂನ್ ೨೦೧೮

ಪ್ರೊ. ರವೀಂದ್ರ ರೇಷ್ಮೆ

ಅಸೆಂಬ್ಲಿ ಫಲಿತಾಂಶ - ಪಕ್ಷ ರಾಜಕಾರಣದ ಪತನ

ಜೂನ್ ೨೦೧೮

ಡಾ.ಟಿ.ಆರ್.ಚಂದ್ರಶೇಖರ

ಭಾರತದಲ್ಲಿ ಬ್ಯಾಂಕಿಂಗ್ ಬುಡ ಗಡಗಡ!

ಮೇ ೨೦೧೮

ಸುಧೀಂದ್ರ ಹಾಲ್ದೊಡ್ಡೇರಿ

ಬೆಳ್ಳಂದೂರಿನಲ್ಲಿ ನೊರೆ ಹೊತ್ತಿ ಉರಿದೊಡೆ...!

ಮೇ ೨೦೧೮

ರಹಮತ್ ತರೀಕೆರೆ

ಪ್ರತಿಮೆಗಳ ರಾಜಕಾರಣ

ಎಪ್ರಿಲ್ ೨೦೧೮

ಹನುಮಂತರೆಡ್ಡಿ ಶಿರೂರು

ಸಿದ್ದರಾಮಯ್ಯನವರ ಕಲ್ಯಾಣ ರಾಜ್ಯ !

ಎಪ್ರಿಲ್ ೨೦೧೮

ದಾಸನೂರು ಕೂಸಣ್ಣ

ಒಳ ಮೀಸಲಾತಿಏಕೆ ಬೇಕು?

ಮಾರ್ಚ್ ೨೦೧೮

ರೇಣುಕಾ ನಿಡಗುಂದಿ

ಮೊಲೆ ಕತ್ತರಿಸಿಕೊಟ್ಟ ನಂಗೇಲಿ ನೆನಪು!

ಮಾರ್ಚ್ ೨೦೧೮

ಡಿ. ಎಸ್. ನಾಗಭೂಷಣ

ಕನ್ನಡ ಮೊದಲು ನಂತರ ಇಂಗ್ಲಿಷ್

ಮಾರ್ಚ್ ೨೦೧೮

ಡಾ. ವಾಸು ಎಚ್. ವಿ

ಈ ಹೊತ್ತಿನ ಕರ್ನಾಟಕ: ಪರ್ಯಾಯ ರಾಜಕಾರಣ

ಫೆಬ್ರವರಿ ೨೦೧೮

ಡಾ.ಕಿರಣ್ ಎಂ.ಗಾಜನೂರು

‘ನಿಮ್ಮ ದನದ ಬಾಲ ನೀವೇ ಇಟ್ಟುಕೊಳ್ಳಿ’

ಫೆಬ್ರವರಿ ೨೦೧೮