2nd ಎಪ್ರಿಲ್ ೨೦೧೮

ಪ್ರತಿಮೆಗಳ ರಾಜಕಾರಣ

ರಹಮತ್ ತರೀಕೆರೆ

ಪ್ರತಿಮೆಗಳಿಗೆ ಅರ್ಥಬರುವುದು; ಅವು ಪ್ರತಿನಿಧಿಸುವ ತತ್ವವನ್ನು ಸಮಾಜ ಬದುಕುವುದರಲ್ಲಿ. ಈ ತತ್ವಬದುಕುವಿಕೆ ಪ್ರತಿಮೆಗಳಿಲ್ಲದೆಯೂ ಸಾಧ್ಯವಾಗಬೇಕು. ತತ್ವಾಚರಣೆಯಿಲ್ಲದ ಪ್ರತಿಮಾ ಆರಾಧನೆಯನ್ನು ಝೆನ್ ಮುಂತಾದ ಬೌದ್ಧ ದಾರ್ಶನಿಕ ಶಾಖೆಗಳು ತೀವ್ರವಾಗಿ ನಿರಾಕರಿಸಿದವು.

ತ್ರಿಪುರ ಚುನಾವಣೆಯಲ್ಲಿ ಕಮ್ಯುನಿಸ್ಟ್ ಪಕ್ಷವನ್ನು ಸೋಲಿಸಿ ಬಿಜೆಪಿ ಅಧಿಕಾರಕ್ಕೆ ಬರುತ್ತಿದ್ದಂತೆ ಲೆನಿನ್ ಪ್ರತಿಮೆ ಕೆಡವಲಾಯಿತು. ಇದು ದೇಶದಲ್ಲಿ ವಿವಿಧ ನಾಯಕರ ವಿಗ್ರಹಭಗ್ನ ಘಟನೆಗಳಿಗೆ ಪ್ರಚೋದಕವಾಗಿದೆ. ಭಗ್ನಕ್ಕೊಳಗಾಗಿರುವ ಪ್ರತಿಮೆಗಳೆಂದರೆ ಲೆನಿನ್, ಅಂಬೇಡ್ಕರ್, ಪೆರಿಯಾರ್, ಗಾಂಧಿ, ಶ್ಯಾಮಪ್ರಸಾದ್ ಮುಖರ್ಜಿಯವರವು. ಗಾಂಧಿಯವರದನ್ನು ಬಿಟ್ಟರೆ ಉಳಿದವು ಹೆಚ್ಚಾಗಿ ಸೈದ್ಧಾಂತಿಕ ಹಿನ್ನೆಲೆಯ ಪಕ್ಷಗಳಿಗೇ ಸೇರಿವೆ. ಸಿದ್ಧಾಂತಬದ್ಧ ಪಕ್ಷ— ಸಂಘಟನೆಗಳಲ್ಲಿ ಪ್ರತಿಮೆ, ಚಿತ್ರಪಟ, ಧ್ವಜಗಳು ಸಾಮಾನ್ಯ. ಇವು ಅಮೂರ್ತ ಸಿದ್ಧಾಂತದ ಮೂರ್ತ ಪ್ರತೀಕಗಳು. ಇವುಗಳೊಳಗೇ ಎದುರಾಳಿ ಸಿದ್ಧಾಂತ ಮತ್ತು ಪ್ರತಿಮೆಗಳ ಬಗ್ಗೆ ತಾತ್ವಿಕ ರಾಜಕೀಯ ವಿರೋಧವೂ ಅಡಗಿರುತ್ತದೆ; ಈ ಸಹಜ ವಿರೋಧವು ಅಸಹಜ ದ್ವೇಷ ಅಸಹನೆಗಳಾದಾಗ ಮೂರ್ತಿಭಂಜನೆ, ಕಾರ್ಯಕರ್ತರ ಕೊಲೆಯಂತಹ ವಿಕೃತಿಗಳು ಸೃಷ್ಟಿಯಾಗುತ್ತವೆ. ಸಿದ್ಧಾಂತ, ಅಧಿಕಾರ, ಯುದ್ಧ, ಆರ್ಥಿಕತೆ, ಸಾಂಸ್ಕೃತಿಕ ಯಜಮಾನಿಕೆಗಳಿಗೆ ಸಂಬಂಧಪಟ್ಟ ಸಂಕೇತಗಳಿಗೆ ಧಾರ್ಮಿಕ ಆಯಾಮ ಸೇರಿಕೊಂಡರಂತೂ ಮತ್ತಷ್ಟು ಭಾವನಾತ್ಮಕ ಸಂವೇದನೆ ಪಡೆಯುತ್ತವೆ. ಸಾದತ್‍ಹಸನ್ ಮಂಟೂ, ಈ ಪ್ರತಿಮಾದ್ವೇಷವು, ದೇಶವಿಭಜನೆಯ ಹೊತ್ತಲ್ಲಿ ಧಾರ್ಮಿಕ ಅಸಹನೆಯಾಗಿ ಪ್ರಕಟವಾಗುವುದನ್ನು ನಾಟಕೀಯ ವ್ಯಂಗ್ಯದಲ್ಲೂ ಗಾಢವಿಷಾದದಲ್ಲೂ ಚಿತ್ರಿಸುತ್ತಾನೆ.

ನನಗೆ ತ್ರಿಪುರದ ತಿರುಗಾಟ ನೆನಪಾಗುತ್ತಿದೆ. ಕಮ್ಯುನಿಸ್ಟ್ ಆಳಿಕೆಗಳಲ್ಲಿ ಸಾಮಾನ್ಯವಾಗಿರುವಂತೆ ತ್ರಿಪುರದಲ್ಲೂ ಪ್ರತಿಮಾ ಹಾಗೂ ಚಿತ್ರಪಟ ಸಂಸ್ಕೃತಿಯಿತ್ತು. ಅದನ್ನು ಮೂರು ಆಯಾಮಗಳಲ್ಲಿ ನೋಡಬಹುದು.

  1. ಮಾರ್ಕ್ಸ್, ಲೆನಿನ್, ಏಂಗೆಲ್ಸ್, ಚೆಗೆವಾರ ಇತ್ಯಾದಿ ಅಂತಾರಾಷ್ಟ್ರೀಯ ಕಮ್ಯುನಿಸ್ಟ್ ಚಳವಳಿಗೆ ಸೇರಿದ ವ್ಯಕ್ತಿಗಳವು. ಕಮ್ಯುನಿಸ್ಟ್ ಪಕ್ಷದ ಕಛೇರಿಗಳಲ್ಲಿ ಇವರ ಚಿತ್ರಪಟಗಳು. ಮಾವೋವಾದಿಗಳ ಜತೆ ಸಿಪಿಎಂನ ತಾತ್ವಿಕ ವಿರೋಧ ಇರುವುದರಿಂದ ಬಹುಶಃ ಮಾವೊಪಟಗಳು ಕಡಿಮೆಯಿದ್ದವು. ಆದರೆ ಪ್ರಭುತ್ವಹಿಂಸೆಯ ಕಾರಣಕ್ಕಾಗಿ ಚರ್ಚೆಗೊಳಗಾಗಿರುವ ದಪ್ಪಮೀಸೆಯ ಸ್ಟಾಲಿನ್ ಪಟಗಳಿದ್ದುದು ವಿಶೇಷವಾಗಿತ್ತು. ಕಮ್ಯುನಿಸ್ಟ್ ಚಳವಳಿಯಲ್ಲಿ ಸಾಮಾನ್ಯ ಜನರು ಹುತಾತ್ಮರಾಗಿರುವ ಕಡೆ ಪ್ರತಿಮೆಗಳ ಬದಲು ಸಾಂಕೇತಿಕ ಸ್ಮಾರಕಗಳಿದ್ದವು. ಇವು ಇತಿಹಾಸವನ್ನು ಹೊಸತಲೆಮಾರಿಗೆ ದಾಟಿಸಲು ಯತ್ನಿಸುತ್ತಿದ್ದವು.
  2. ಭಾರತ ಮೇನ್‍ಲ್ಯಾಂಡಿಗೆ ಸೇರಿದ ಅಂಬೇಡ್ಕರ್, ಗಾಂಧಿ, ವಿವೇಕಾನಂದ, ಸುಭಾಷ್‍ಚಂದ್ರ, ಟಾಗೂರರವು. ಮೊದಲಿಬ್ಬರ ಪ್ರತಿಮೆಗಳು ಕಡಿಮೆಯಿದ್ದವು. ಮಹಾರಾಷ್ಟ್ರ, ಕರ್ನಾಟಕಗಳಲ್ಲಿರುವಂತೆ ಅಂಬೇಡ್ಕರ್ ಪ್ರತಿಮೆಗಳು ಕಾಣಲಿಲ್ಲ. ಇದಕ್ಕೆ ಬಹುಶಃ ಕಾರಣ, ಬುಡಕಟ್ಟು ಪ್ರದೇಶವಾದ ತ್ರಿಪುರದಲ್ಲಿ ಜಾತಿವ್ಯವಸ್ಥೆಯ ಊರಲ್ಲಿರುವಂತೆ ದಲಿತರು ಕಡಿಮೆಯಿರುವುದು; ಜಾತಿನೆಲೆಯ ಹೋರಾಟದಲ್ಲಿ ಕಮ್ಯುನಿಸ್ಟರಿಗೆ ಹಿಂಜರಿಕೆಯಿರುವುದು. ವರ್ಗಚಳವಳಿ ಬಲವಾಗಿರುವಲ್ಲಿ ದಲಿತ ಚಳವಳಿ ಸಾಮಾನ್ಯವಾಗಿ ಕ್ಷೀಣವಾಗಿರುತ್ತದೆ. ದಲಿತ ಹಿನ್ನೆಲೆಯಿಂದ ಬಂದ ಒಬ್ಬ ಯುವವಿಜ್ಞಾನಿ ಕೂಡ, ತ್ರಿಪುರದಲ್ಲಿ ಅಸ್ಪೃಶ್ಯತೆಯ ಸಮಸ್ಯೆ ಅಷ್ಟಾಗಿಲ್ಲ ಎಂದರು. ಮೇಲ್ಕಾಣಿಸಿದ ಪಟ್ಟಿಯಲ್ಲಿರುವ ಕೊನೆಯ ಮೂರು ಪ್ರತಿಮೆಗಳು ಬಂಗಾಳಿ ಸಂಸ್ಕೃತಿಗೂ ಸೇರಿದವು. ಇವುಗಳ ಅಸಿತ್ವಕ್ಕೆ ತ್ರಿಪುರದಲ್ಲಿ ಚಾರಿತ್ರಿಕ ಕಾರಣವಿದೆ. ಬಂಗಾಳ ವಿಭಜನೆಯಿಂದ ಸೃಷ್ಟಿಯಾದ ಬಾಂಗ್ಲಾದೇಶದಿಂದಲೂ ಪಶ್ಚಿಮ ಬಂಗಾಳದ ಜತೆ ಮೊದಲಿಂದಲೂ ಇದ್ದ ಸಂಬಂಧ ಕಡಿದುಹೋಗಿ, ತ್ರಿಪುರದ ಬಂಗಾಳಿ ಸಂಸ್ಕೃತಿ ದ್ವೀಪವಾಯಿತು. ಇದುವೇ ಬಂಗಾಳಿ ಭಾಷೆ ಮತ್ತು ಪ್ರತಿಮೆಗಳಿಗೆ ಬಂಗಾಳಿ ಅಸ್ಮಿತೆ ಕಾಪಾಡಿಕೊಳ್ಳುವ ಸಾಂಸ್ಕೃತಿಕ ತುರ್ತನ್ನು ಒದಗಿಸಿತು.ಟಾಗೂರರ ಪ್ರತಿಮೆ, ಉದ್ಯಾನ, ಭವನ ಸ್ಮಾರಕಗಳು ಇಲ್ಲಿ ಯಥೇಚ್ಛವಾಗಿವೆ. ನಾವಿದ್ದ ಅತಿಥಿಗೃಹ `ರೊಬೀಂದ್ರ ಕಾನನ್’ ಉದ್ಯಾನದ ಎದುರಿತ್ತು. ಕೇರಳದಲ್ಲಿರುವಂತೆ ಅರೆನಗ್ನಾವಸ್ಥೆಯಲ್ಲಿರುವ ತ್ರಿಪುರದ ದುಡಿವ ಜನರ ನಡುವೆ, ಜಮೀನುದಾರ ಮನೆತನದಿಂದ ಬಂದ ಮೈತುಂಬ ಆವರಿಸಿಕೊಳ್ಳುವ ಉದ್ದನೆಯ ಗೌನುತೊಟ್ಟ ಟಾಗೂರರ ಪ್ರತಿಮೆಗಳಿದ್ದವು. ಆದರೆ ತ್ರಿಪುರಕ್ಕೂ ಟಾಗೂರರಿಗೂ ವಿಶಿಷ್ಟ ಸಂಬಂಧವಿದೆ. ಟಾಗೂರ್ ತ್ರಿಪುರದಲ್ಲಿದ್ದವರು. ತಾರುಣ್ಯದಲ್ಲಿದ್ದಾಗ ಅವರು ರಚಿಸಿದ `ಭೊಗ್ನೊಹೃದಯ್’ ಕಾದಂಬರಿಯ ವಸ್ತು ತ್ರಿಪುರ ರಾಜ್ಯದ ರಾಣಿಯ ಸಾವು. ಪತ್ನಿವಿಹೀನ ದೊರೆ ಟಾಗೂರರನ್ನು ಕೊಲ್ಕೊತ್ತದಲ್ಲಿರುವ ತ್ರಿಪುರಹೌಸಿಗೆ ಆಹ್ವಾನಿಸಿ ಗೌರವಿಸಿದ್ದನು. ಹೀಗಾಗಿ ತ್ರಿಪುರದ ಬಂಗಾಳಿಗಳಿಗೆ ಟಾಗೂರ್, ವಿವೇಕಾನಂದ ಸುಭಾಷರಿಗಿಂತ ಹೆಚ್ಚು ಆಪ್ತವಿದ್ದಂತೆ ಕಂಡಿತು.
  3. ತ್ರಿಪುರವಾಳಿದ ರಾಜರ ಪ್ರತಿಮೆಗಳು ಅವರು ಸ್ಥಾಪಿಸಿದ ಕಾಲೇಜುಗಳಿಗೂ ಅರಮನೆಗಳಿಗೂ ಸೀಮಿತವಾಗಿದ್ದವು. ಮೈಸೂರಲ್ಲಿರುವಂತೆ ಸಾರ್ವಜನಿಕ ಜೀವನದ ಭಾಗವಾಗಿರಲಿಲ್ಲ. ಬದಲಿಗೆ ಅವರ ಜನವಿರೋಧಿ ನೀತಿಯನ್ನು ವಿರೋಧಿಸಿದ ದಶರಥ್ ದೇಬರ್ಮರಂತಹ ಬುಡಕಟ್ಟು ಸಮುದಾಯದಿಂದ ಬಂದ ಬಂಡುಕೋರ ನಾಯಕರ ಪ್ರತಿಮೆಗಳು ಸಾರ್ವಜನಿಕ ಬದುಕಿನ ಭಾಗವಾಗಿವೆ. ದೇಬರ್ಮ ತ್ರಿಪುರದ ನೆಲದಪುತ್ರ. ಅನ್‍ಸಂಗ್ ಹೀರೊ. ಸಂಸದರೂ ಮುಖ್ಯಮಂತ್ರಿಯೂ ಆಗಿದ್ದ ಅವರ ಬಗ್ಗೆ ಜನರಲ್ಲಿ ಅಪಾರ ಬಹಳ ಆದರವಿದೆ. ಇಂತಹ ದೊಡ್ಡನಾಯಕನ ಹೆಸರು ಆಧುನಿಕ ಭಾರತದ ಇತಿಹಾಸದಲ್ಲಿ ಎಲ್ಲೂ ಕಾಣಿಸದಿರುವುದು ಸೋಜಿಗ. ಇದು ಪ್ರಧಾನಧಾರೆಯ ಜನರಿಂದ ನಡೆದ ಇನ್ನೊಂದು ಬಗೆಯ ಪ್ರತಿಮಾನಾಶ.

ಸಾಮಾನ್ಯವಾಗಿ ಪ್ರತಿಮೆಗಳಿಗೂ ಅಲ್ಲಿರುವ ಸಮುದಾಯ—ಸಿದ್ಧಾಂತಗಳಿಗೂ ನೇರ ನಂಟಿರುತ್ತದೆ. ಮಂಡ್ಯ ಹಾಸನ ಕರಾವಳಿಗಳಿಗೆ ಹೋಲಿಸಿದರೆ, ಲಿಂಗಾಯತರ ಜನಸಂಖ್ಯೆ ಹೆಚ್ಚಿರುವ ಉತ್ತರ ಕರ್ನಾಟಕದಲ್ಲಿ ಬಸವಣ್ಣನ ಪ್ರತಿಮೆಗಳು ಹೆಚ್ಚಿವೆ. ಪ್ರತಿಮೆಗಳು ವರ್ಗ ಅಥವಾ ಸಮುದಾಯಗಳ ಸಾಮಾಜಿಕ ಎಚ್ಚರಕ್ಕೂ ರಾಜಕೀಯ ಆಶೋತ್ತರಗಳಿಗೂ ಸಂಬಂಧಪಟ್ಟಿವೆ. ಅಂಬೇಡ್ಕರ್ ಪ್ರತಿಮೆಗಳ ಜತೆ ದಲಿತರಿಗಿರುವ ಸಂಬಂಧ ಇಂತಹದು. ಕಳೆದ ದಶಕದಲ್ಲಿ ಕನಕದಾಸ, ವಾಲ್ಮೀಕಿ, ಅಂಬಿಗರ ಚೌಡಯ್ಯ ಪ್ರತಿಮೆಗಳು ಕರ್ನಾಟಕದಲ್ಲಿ ಸ್ಥಾಪನೆಯಾಗಿರುವುದು ಇದೇ ತರ್ಕದಲ್ಲಿ. ಹಿಂದುಳಿದ ಸಮುದಾಯಗಳು ಜಾತಿ ಅಸ್ಮಿತೆಯ ಮೂಲಕ ಸಂಘಟಿತರಾಗಿ ಶಕ್ತಿ ರಾಜಕಾರಣದಲ್ಲಿ ಭಾಗವಹಿಸುತ್ತಿರುವ ಭಾಗವಾಗಿ ಈ ಪ್ರತಿಮೆಗಳು ಕಾಣಿಸಿದವು. ಸಮಸ್ಯೆಯೆಂದರೆ, ಈ ಪ್ರತಿಮೆಗಳು ಜಾತಿಜಗಳ—ಕೋಮು ಗಲಭೆಗಳ ಹೊತ್ತಲ್ಲಿ ಎದುರಾಳಿಗಳ ಬಲಿಪಶುವಾಗುವುದು. ದಲಿತರ ಹುಡುಗನೊಬ್ಬ ಮೇಲ್ಜಾತಿಯ ಹುಡುಗಿಯನ್ನು ಪ್ರೀತಿಸಿದನೆಂದರೆ, ಅಂಬೇಡ್ಕರ್ ಪ್ರತಿಮೆಯ ಮೇಲೆ ಮುಯ್ಯಿ ತೀರಿಸಿಕೊಳ್ಳುವುದು ಸುಲಭವಾಗಿದೆ. ಭಾರತೀಯ ಸಮಾಜದಲ್ಲಿ ಪ್ರತಿಮೆಗಳು—ಬಾವುಟಗಳು ಜಾತೀಯ— ಮತೀಯ ಗಲಭೆಗಳನ್ನು ಸುಲಭವಾಗಿ ಹುಟ್ಟಿಸುವ ಸಿಡಿಮದ್ದಿನಂತಿವೆ. ಇವು ಜನಹತ್ಯೆಗೆ ಮುನ್ನುಡಿಗಳೂ ಆಗಿವೆ.

ಪ್ರತಿಮೆಯ ಅಪವಿತ್ರೀಕರಣದ ಹಿಂದೆ ವೈಯಕ್ತಿಕ ಹಿತಾಸಕ್ತಿಗಳೂ ಇರಬಹುದು. ಶಾಲೆಯಿಂದ ತಪ್ಪಿಸಿಕೊಳ್ಳಲು ಬಯಸಿದ ವಿದ್ಯಾರ್ಥಿಯೊಬ್ಬ ಊರಲ್ಲಿದ್ದ ಪ್ರತಿಮೆಯನ್ನು ಅಪವಿತ್ರಗೊಳಿಸಿ ಗಲಭೆಯೆಬ್ಬಿಸಿದ ಘಟನೆಗಳೂ ವರದಿಯಾಗಿವೆ. ಸರ್ಕಾರವನ್ನು ಕೆಳಗಿಳಿಸಲು ಕೋಮುಗಲಭೆ ಮಾಡಿಸುವ ಪ್ರಯೋಗದ ಕಿರುರೂಪವಿದು. ಕರ್ನಾಟಕದಲ್ಲಿ ತರುಣನೊಬ್ಬ ಅಂಬೇಡ್ಕರ್ ಪ್ರತಿಮೆಗೆ ಅಮಲಿನಲ್ಲಿ ಮದ್ಯ ಸುರಿದ ಪ್ರಕರಣವು ಆತನ ತಾಯಿಯ ಮಂತ್ರಿ ಪದವಿಗೆ ಸಂಚಕಾರ ತಂದಿತು. ರಾಜೀನಾಮೆಯ ಒತ್ತಡದಲ್ಲಿ ಅಂಬೇಡ್ಕರ್ ಅಭಿಮಾನಿಗಳ ಸಹಜ ಆಕ್ರೋಶದ ಜತೆಗೆ, ಸದರಿ ಮಂತ್ರಿಯ ರಾಜಕೀಯ ವಿರೋಧಿಗಳ ಹಿತಾಸಕ್ತಿಯೂ ಅಡಗಿತ್ತು. ಪ್ರತಿಮೆಗಳ ಸ್ಥಾಪನೆ ಮತ್ತು ಕೆಡಿಸುವಿಕೆ ಹಿಂದೆ ಶಕ್ತಿರಾಜಕಾರಣದ ಆಟಗಳು ಭಾಗವಹಿಸುತ್ತವೆ. ಆಳುವ ಸರ್ಕಾರಗಳು ಜನರ ಆರ್ಥಿಕ ಸಾಮಾಜಿಕ ಬದುಕಿಗೆ ಏನೂ ಮಾಡದೆ, ಚುನಾವಣೆ ಸಮಯದಲ್ಲಿ ಬೆಂಬಲ ಗಳಿಸುವ ಸುಲಭ ವಿಧಾನವೆಂದರೆ, ಅವರ ಭಾವನೆಗಳಲ್ಲಿ ಜಾಗಗಿಟ್ಟಿಸಿರುವ ವ್ಯಕ್ತಿಯ ಪ್ರತಿಮೆ ಸ್ಥಾಪಿಸುವುದು. ಗುಜರಾತಿನಲ್ಲಿ ಪಟೇಲರ ಪ್ರತಿಮೆ ಸ್ಥಾಪನೆಯ ಹಿಂದೆ ಈ ತಂತ್ರವೂ ಇದೆ. ಭಾರತದ ಪ್ರಜಾಪ್ರಭುತ್ವದ ಸ್ವರೂಪವನ್ನು ರೂಪಿಸುತ್ತಿರುವ ಶಕ್ತಿಗಳಲ್ಲಿ ಪ್ರತಿಮೆಯ ರಾಜಕಾರಣ ಮುಖ್ಯವಾಗಿದೆ.

ಪ್ರತಿಮೆಗಳಂತೆ ಚಿತ್ರಪಟಗಳೂ ಶಕ್ತಿ ರಾಜಕಾರಣದ ಪಗಡೆಯಾಟದಲ್ಲಿ ಕಾಯಿಗಳಾಗುತ್ತವೆ. ಹಿಂದಿನ ಬಿಜೆಪಿ ಸರ್ಕಾರವು ಪಾರ್ಲಿಮೆಂಟಿನಲ್ಲಿ ಗಾಂಧಿಯ ಎದುರಿಗೆ, ಅವರ ಕೊಲೆ ಪ್ರಕರಣದಲ್ಲಿ ಆಪಾದನೆಗೊಳಗಾದ ಸಾವರ್ಕರರ ಚಿತ್ರಪಟ ಸ್ಥಾಪಿಸಿತು. ಅದು ಹಿಂದೂವಾಗಿಯೂ ಹಿಂದುತ್ವ ಸಿದ್ಧಾಂತವನ್ನು ವಿರೋಧಿಸುತ್ತಿದ್ದ ಗಾಂಧಿಗೆ ಕೊಟ್ಟ ಉತ್ತರವೂ ಆಗಿತ್ತು. ಗಾಂಧಿಯ ಉದಾರವಾದಿ ಹಿಂದೂಧರ್ಮದ ಪರಿಕಲ್ಪನೆ ಆಕ್ರಮಣಶೀಲ ನುಡಿಗಟ್ಟಿನ ಹಿಂದೂರಾಷ್ಟ್ರದ ನಿರ್ಮಾಣಕ್ಕೆ ಅಡ್ಡಿ ಎಂದು ಹಿಂದುತ್ವ ಭಾವಿಸುತ್ತದೆ. ಈಗಲೂ ಹಿಂದುತ್ವವಾದಿಗಳಲ್ಲಿ ತುಂಬಿಕೊಂಡಿರುವ ದ್ವೇಷ ಗೇಲಿಗಳನ್ನು ಗಮನಿಸಬೇಕು. ಬಿಜೆಪಿಯವರು ಕೆಲವೊಮ್ಮೆ ಗಾಂಧಿ ಪ್ರತಿಮೆಯ ಮುಂದೆ ಸತ್ಯಾಗ್ರಹ ಮಾಡುವುದೂ ಉಂಟು. ಸಿದ್ಧಾಂತ ದ್ವೇಷಕ್ಕೆ ಪ್ರತಿಮಾಭಗ್ನ ಅನಿವಾರ್ಯವಲ್ಲ. ಇದು ಪ್ರತಿಮೆಯನ್ನು ಭೌತಿಕವಾಗಿ ಕೆಡಹದೆಯೂ ಅಪವಿತ್ರಗೊಳಿಸಬಹುದು. ವಿರೋಧವಿದ್ದರೂ ಅಗತ್ಯ ಬಿದ್ದಾಗ ಬಳಸಬಹುದು. ಭಗ್ನಗೊಳಿಸದೆಯೂ ಭಗ್ನಗೊಳಿಸುವ ಕ್ರಿಯೆ ಬಸವಣ್ಣನ ವಿಷಯದಲ್ಲಿಯೂ ಸಂಭವಿಸಿದೆ. ಹಿಂದುತ್ವವು ವೈದಿಕ ವಿರೋಧಿಯಾದ ಬಸವಣ್ಣನ ಪರ್ಯಾಯ ಧರ್ಮದ ತತ್ವವನ್ನು ಒಪ್ಪುವುದಿಲ್ಲ. ಆದರೆ ಪ್ರಧಾನಿ ಮೋದಿಯವರು ಲಂಡನಿನಲ್ಲಿ ಬಸವಪುತ್ಥಳಿಯನ್ನು ಕೈಯಾರೆ ಅನಾವರಣಗೈದರು. ಅವರ ಪಕ್ಷವು ಕರ್ನಾಟಕದಲ್ಲಿ ಬಸವತತ್ವ ಪಾಲಿಸಬೇಕಾದ ಸಮುದಾಯವನ್ನು ತನ್ನ ರಾಜಕೀಯ ಚೌಕಟ್ಟಿನೊಳಗೆ ತಂದಿತು. ಗುಡಿ ನಾಶವಾಗುವ ಸ್ಥಾವರವೆಂದು ಖಂಡಿಸಿದ ಅವನ ಅನುಯಾಯಿಗಳನ್ನು, ಗುಡಿಕಟ್ಟುವ ತನ್ನ ಉದ್ದೇಶಕ್ಕೆ ಸೈನಿಕರನ್ನಾಗಿ ಪಳಗಿಸಿತು.

ಲೆನಿನ್ ವಿದೇಶಿಗನಾದ್ದರಿಂದ ಅವನ ಪ್ರತಿಮೆ ಕೆಡಹಿದ್ದು ತಪ್ಪಲ್ಲ ಎಂಬ ವಾದವನ್ನು ಕೆಲವರು ಮುಂದಿಟ್ಟಿದ್ದಾರೆ. ಯೂರೋಪಿನ ಜನಾಂಗವಾದಿ ರಾಷ್ಟ್ರೀಯತಾ ಸಿದ್ಧಾಂತಗಳ ಪ್ರೇರಣೆಯಿಂದ ಹುಟ್ಟಿದ ಆರೆಸ್ಸೆಸ್, ಅದು ಮೆಚ್ಚಿಕೊಂಡಿರುವ ಹಿಟ್ಲರ್ ಮುಸಲೋನಿ ಕೂಡ ವಿದೇಶಿಯರಲ್ಲವೇ ಎಂಬ ಪ್ರತಿಪ್ರಶ್ನೆಯನ್ನೂ ಹುಟ್ಟಿಸಿದೆ. ಬುಡಕಟ್ಟು ಸಮುದಾಯಗಳೇ ಹೆಚ್ಚಿರುವ ತ್ರಿಪುರದ ಜನರಿಗೆ, ಬುಡಕಟ್ಟೇತರ ಹಿನ್ನೆಲೆಯಿಂದ ಬಂದ ಅಂಬೇಡ್ಕರ್ ಗಾಂಧಿ ವಿವೇಕಾನಂದ ಟಾಗೂರ್ ಕೂಡ ಸಾಂಸ್ಕೃತಿಕವಾಗಿ ಹೊರಗಿನವರು. ಇದಕ್ಕೆ ಪೂರಕವಾಗಿ ದಶರಥ್‍ದೇವ್ ಹೊರತು ಪಡಿಸಿದರೆ, ತ್ರಿಪುರವಾಳಿದ ಕಾಂಗ್ರೆಸ್ ಹಾಗೂ ಕಮ್ಯುನಿಸ್ಟ್ ಪಕ್ಷದ ಬಹುತೇಕ ಮುಖ್ಯಮಂತ್ರಿಗಳೂ ಬಂಗಾಳಿಗಳು. ಈಗ ಅಧಿಕಾರ ವಹಿಸಿಕೊಂಡಿರುವ ಬಿಜೆಪಿಯ ಬಿಪ್ಲಬ್ ಕೂಡ ಬಂಗಾಳಿ ಮೇಲ್ಜಾತಿಯವರು. ಹೀಗಾಗಿ ಬಂಗಾಳಿ ಸಂಸ್ಕೃತಿಯ ಪ್ರತಿಮೆಗಳು ಇಲ್ಲಿ ಆಡಳಿತಾರೂಢ ಬಂಗಾಳಿ ಸಂಸ್ಕೃತಿ ಬುಡಕಟ್ಟು ಲೋಕದಲ್ಲಿ ಮಾಡಿರುವ ವಿಸ್ತ್ತರಣೆಗಳೇ ಎಂದು ಶಂಕೆ ಬರುತ್ತದೆ. ಆದರೆ ಬಂಗಾಳಿ ಆಳುವವರ್ಗವು ತನ್ನ ಅಧಿಕಾರವನ್ನು ಸುಸೂತ್ರಗೊಳಿಸಲು ಬುಡಕಟ್ಟು ಸಮುದಾಯಗಳಿಂದ ಕೆಲವರನ್ನು ಆಡಳಿತೆಯೊಳಕ್ಕೆ ಸೇರಿಸಿಕೊಳ್ಳುತ್ತ ಸಮತೋಲನ ಸಾಧಿಸಿದೆ.

ಕಮ್ಯುನಿಸ್ಟರು ಪ್ರತ್ಯೇಕವಾದಿ ಬುಡಕಟ್ಟು ಹೋರಾಟಗಳ ಜತೆ ಸೆಣಸಾಡಿ, ಅವರನ್ನು ವಿಶಾಲವಾದ ರಾಜಕೀಯ ಪ್ರಕ್ರಿಯೆಯಲ್ಲಿ ಒಳಪಡಿಸಿ ಶಾಂತಿ ಸಾಧಿಸಿದ್ದರು. ಸಮುದಾಯ ಅಥವಾ ವರ್ಗಗಳು ನಿರ್ದಿಷ್ಟ ಸಿದ್ಧಾಂತ ಅಥವಾ ಚಿಂತನೆಯನ್ನು ಒಪ್ಪಿಕೊಳ್ಳುವ ಭಾಗವಾಗಿ ಪ್ರತಿಮೆ—ಸಂಕೇತಗಳು ಅವರ ಬದುಕಿನಲ್ಲಿ ಪ್ರವೇಶಿಸುವುದು ಒಂದು ಬಗೆ; ಆಳುವವರ್ಗಗಳ ಸಾಂಸ್ಕೃತಿಕ ಹೇರಿಕೆಯಾಗುವುದು ಇನ್ನೊಂದು ಬಗೆ. ತ್ರಿಪುರದ ಬುಡಕಟ್ಟು ಸಮುದಾಯಗಳಿಗೆ ಬಂಗಾಳಿಗಳು ತಮ್ಮ ರಾಜ್ಯವನ್ನು ಆಳುತ್ತಿರುವರು ಎಂಬ ಒಳಗುದಿ ಇದ್ದಂತಿದೆ. ಈಗ ಅಧಿಕಾರ ವಹಿಸಿರುವ ಬಿಜೆಪಿ ಮರಾಠ ಹಿನ್ನೆಲೆಯ ಸಾವರ್ಕರ್, ಗೋಳ್ವಾಳಕರರ ಅಥವಾ ಬಂಗಾಳಿ ಸಂಸ್ಕೃತಿಯ ದೀನದಯಾಳ ಉಪಾಧ್ಯಾಯ, ಶಾಮಪ್ರಸಾದ, ವಿವೇಕಾನಂದರ ಪ್ರತಿಮೆಗಳನ್ನು ನಿಲ್ಲಿಸಬಹುದು. ಪ್ರತಿಮೆ ಅಧಿಕಾರ ವಿಸ್ತರಣೆಯ ಸಂಗತಿಯೂ ಸಾಂಸ್ಕೃತಿಕ ನುಗ್ಗುವಿಕೆ ವಶಪಡಿಸಿಕೊಳ್ಳುವಿಕೆಯ ಸಂಗತಿಯೂ ಆಗುವುದು ಹೀಗೆ. ಬ್ರಿಟಿಶ್ ಭಾರತದಲ್ಲಿ ನಿಲ್ಲಿಸಲಾದ ಇಂಗ್ಲೆಂಡಿನ ರಾಣಿ, ರಾಜ, ವೈಸರಾಯ್, ಅಧಿಕಾರಿಗಳ ಪ್ರತಿಮೆಗಳು ರಾಜಕೀಯ ಅಧಿಕಾರ ಮತ್ತು ಆಕ್ರಮಣದ ಸಂಕೇತಗಳಾಗಿದ್ದವು. ಬ್ರಿಟಿಶರು ವಸಾಹತುಶಾಹಿ ಹೇರಿಕೆಯ ಭಯವಿಲ್ಲದೆ ಭಾರತೀಯರು ಸ್ವೀಕರಿಸಿದ ವಡ್ರ್ಸ್‍ವರ್ತ್ ಶೇಕ್ಸ್‍ಪಿಯರ್ ಪ್ರತಿಮೆಗಳನ್ನು ಎಲ್ಲೂ ಸ್ಥಾಪಿಸಲಿಲ್ಲ. ಆದರೆ ಅವರ ಪ್ರತಿಮೆಗಳನ್ನು ನಮ್ಮ ಲೇಖಕರು ತಮ್ಮ ಕೃತಿಗಳ ಮೂಲಕ ಓದುಗರೊಳಗೆ ಸ್ಥಾಪಿಸಿದರು. ಕುವೆಂಪು ಲೆನಿನ್, ವರ್ಡ್ಸ್‌‍ವರ್ತ್, ಶೇಕ್ಸ್‌‍ಪಿಯರ್ ಕುರಿತು ಬರೆದ ಕವಿತೆಗಳು ನೆನಪಾಗುತ್ತಿವೆ.

ಪ್ರತಿಮೆಗಳನ್ನು ಸಮುದಾಯಗಳ ಆಶೋತ್ತರದ ಭಾಗವಾಗಿ ನಿಲ್ಲಿಸುವುದರ ಜತೆಗೆ, ಎದುರಾಳಿ ಸಮುದಾಯಗಳ ಮೇಲೆ ಚರಿತ್ರೆಯ ಭಾರ ಹೇರುವುದಕ್ಕೂ ನಿಲ್ಲಿಸಬಹುದು. ಕೆಲವೊಮ್ಮೆ ಚರಿತ್ರೆಯ ಸಂಘರ್ಷದ ನೆನಪುಗಳನ್ನು ಸದಾ ಮೊಗೆದುಕೊಡಬೇಕು ಎಂದು ಇರಾದೆಯಿರುತ್ತದೆ. ಹೈದರಾಬಾದ್ ಕರ್ನಾಟಕದಲ್ಲಿ ನಿಲ್ಲಿಸಲಾಗಿರುವ ಸರ್ದಾರ್ ಪಟೇಲರ ಪ್ರತಿಮೆಗಳಿಗೆ ಇಂತಹ ಉದ್ದೇಶವಿದೆ. ಕಾಂಗ್ರೆಸ್ ವ್ಯಕ್ತಿಯಾಗಿದ್ದ ಪಟೇಲರ ಪ್ರತಿಮೆ ಸ್ಥಾಪನೆಗೆ ಆಸ್ಥೆವಹಿಸಿರುವುದು ಬಿಜೆಪಿ. ಅದಕ್ಕೆ ಪಟೇಲರು ಗೃಹಮಂತ್ರಿಯಾಗಿ ಹೈದರಾಬಾದ್ ನಿಜಾಮನನ್ನು ಸೋಲಿಸಿದರು ಎಂಬ ಅಂಶದಲ್ಲಿ ಆಸಕ್ತಿ. `ಮುಸ್ಲಿಂ’ರಾಜರು ಆಳಿದ ಪ್ರದೇಶಗಳಲ್ಲಿ ಅವರ ವಿರುದ್ಧ ರಾಜಕೀಯ ಕದನಗೈದ `ಹಿಂದೂ’ ಶೂರರಾದ ಶಿವಾಜಿ, ಮದಕರಿ, ಓಬವ್ವರ ಪ್ರತಿಮೆ ಸ್ಥಾಪಿಸಿರುವ ದೃಶ್ಯಗಳನ್ನು ನೋಡಬಹುದು. ಇಲ್ಲಿ ಪ್ರತಿಮೆ ವರ್ತಮಾನದಲ್ಲಿ ದೈನಿಕದಲ್ಲಿ ಬದುಕುತ್ತಿರುವ ವಿವಿಧ ಧಾರ್ಮಿಕ ಸಮುದಾಯಗಳಲ್ಲಿ ಬಿರುಕುಹುಟ್ಟಿಸಲೆಂದೇ ಸ್ಥಾಪನೆಯಾದ ಹತ್ಯಾರ; ಪ್ರತಿಮೆಗಳು, ದಮನಿತರು ಮೇಲೆ ಬಂದು ಸಮಾನ ನೆಲೆಯ ಸಮಾಜ ಕಟ್ಟುವ ಭಾಗವಾಗಿ ಹೋರಾಡುವ ಸಂಕೇತವಾಗುವುದಕ್ಕಿಂತ; ಆಳುವವರ್ಗಗಳು ಸಾಮಾನ್ಯರ ಬದುಕನ್ನು ಬಲಿಗೊಟ್ಟು ಅಧಿಕಾರ ವಶಪಡಿಸಿಕೊಳ್ಳುವ ಸಾಧನಗಳಾಗಿರುವುದೇ ಹೆಚ್ಚು. ಚರಿತ್ರೆಯ ನಾಯಕರಿಲ್ಲದ ಕಡೆ ಧಾರ್ಮಿಕ ವಿಗ್ರಹಗಳು ಉಪಕರಣವಾಗುತ್ತವೆ. ಪ್ರತಿಮೆಗಳು ಪರೋಕ್ಷ ವಿಜಯಸ್ಥಂಭಗಳು; ಚರಿತ್ರೆಯು ವರ್ತಮಾನದ ಕೊಳದಲ್ಲಿ ಕದಡುಗೋಲುಗಳು.

ಪ್ರತಿಮೆ ವಿಗ್ರಹಾರಾಧನೆಯಿಲ್ಲದ ಕಡೆಯಲ್ಲೂ ತಲೆಯೆತ್ತಬಹುದು. ಟರ್ಕಿಯಲ್ಲಿ ರಾಷ್ಟ್ರನಿರ್ಮಾಪಕನಾದ ಕಮಾಲ್ ಅಟಾತುರ್ಕನ ಪ್ರತಿಮೆಗಳಿವೆ. ರಾಷ್ಟ್ರನಿರ್ಮಾಪಕರನ್ನು ವರ್ತಮಾನವು ಸ್ಮರಿಸುವ ಯೂರೋಪಿಯನ್ ಸಂಸ್ಕೃತಿಯ ಭಾಗವಿದು. ಟರ್ಕಿ ಯೂರೋಪ್ ಖಂಡದಲ್ಲೂ ಹರಡಿರುವ ಏಶಿಯನ್ ದೇಶವಷ್ಟೆ. ಸ್ಥಾವರವಿರೋಧಿ ಬಸವಣ್ಣನ ಮೂರ್ತಿಗಳು, ಅವನ ಹೆಸರಿನ ಧರ್ಮ ಸ್ಥಾಪನೆಗೆ, ಅವನ ಸಮುದಾಯದ ರಾಜಕಾರಣ ಹಾಗೂ ಸಾಮಾಜಿಕ ಯಜಮಾನಿಕೆಗೆ ಸ್ಥಾಪನೆಯಾಗುತ್ತಿರುವುದು ಇನ್ನೊಂದು ವೈರುಧ್ಯ. ಪ್ರತಿಮೆಗಳು ಸಿದ್ಧಾಂತ ಮಾತ್ರವಲ್ಲ, ಧರ್ಮ ಮತ್ತು ರಾಷ್ಟ್ರವಾದಗಳು ಶಕ್ತಿರಾಜಕಾರಣದ ಸವಾರಿ ಕುದುರೆಯಾಗಿ ಬಳಕೆಯಾಗುತ್ತಲೆ ಬಂದಿವೆ.

ಸೈದ್ಧಾಂತಿಕ ರಾಜಕಾರಣದಲ್ಲಿ ಪ್ರತಿಮೆಗಳು ಜನರಲ್ಲಿ ವೈಚಾರಿಕ ಚಿಂತನೆಯಾಗಿರುವುದರ ಸಂಕೇತಗಳೇ ಆಗಿರಬೇಕಿಲ್ಲ. ಭಾರತದಲ್ಲಿ ಗಾಂಧಿಯ ಪ್ರತಿಮೆಗಳಿಗೂ ಗಾಂಧಿ ಚಿಂತನೆ ಸಮಾಜದಲ್ಲಿ ಚಲನಶೀಲವಾಗಿರುವುದಕ್ಕೂ ಸಾವಯವ ಸಂಬಂಧವಿದೆಯೇ? ಗಾಂಧಿಯ ಉತ್ತರಾಧಿಕಾರಿ ಎಂದುಕೊಳ್ಳುವ ಕಾಂಗ್ರೆಸ್ಸು ಗಾಂಧಿ ಜಯಂತಿಯಂದು ಅವರ ವಿಗ್ರಹಕ್ಕೆ ಹಾರ ಹಾಕುವ ಔಪಚಾರಿಕ ಕ್ರಿಯೆಯನ್ನಷ್ಟೇ ಆಗಿ ಉಳಿಸಿಕೊಂಡಿದೆ. ಇದು ಪ್ರತಿಮೆ ಪೂಜಿಸುತ್ತಲೇ ಒಡೆಯುವ ಕ್ರಿಯೆ. ದಲಿತರ ಪಾಲಿಗೆ ಅಂಬೇಡ್ಕರ್ ಪ್ರತಿಮೆಗಳು ಮೊದಲ ಘಟ್ಟದಲ್ಲಿ ಎಚ್ಚೆತ್ತ ಸಾಮಾಜಿಕ ರಾಜಕೀಯ ಪ್ರಜ್ಞೆಯ ಭಾಗವಾಗಿ ಬಂದವು. ಬರಬರುತ್ತ ಅಂಬೇಡ್ಕರ್ ಚಿಂತನೆಯನ್ನು ಹಿಂದಿಕ್ಕಿ ಆರಾಧನೆಗೆ ಸೀಮಿತಗೊಳಿಸಿದವು. ಪ್ರತಿಮೆಗಳ ಸ್ಥಾಪನೆ ಮತ್ತು ಆರಾಧನೆಯೇ ಚಿಂತನೆಯ ಅಪ್ರಸ್ತುತಗೊಳಿಸುವ ಭಾಗವಾಗಿ ಮೂಡಬಹುದು. ಪ್ರತಿಮೆಗಳಿಗೆ ಅರ್ಥಬರುವುದು; ಅವು ಪ್ರತಿನಿಧಿಸುವ ತತ್ವವನ್ನು ಸಮಾಜ ಬದುಕುವುದರಲ್ಲಿ. ಈ ತತ್ವಬದುಕುವಿಕೆ ಪ್ರತಿಮೆಗಳಿಲ್ಲದೆಯೂ ಸಾಧ್ಯವಾಗಬೇಕು. ತತ್ವಾಚರಣೆಯಿಲ್ಲದ ಪ್ರತಿಮಾ ಆರಾಧನೆಯನ್ನು ಝೆನ್ ಮುಂತಾದ ಬೌದ್ಧ ದಾರ್ಶನಿಕ ಶಾಖೆಗಳು ತೀವ್ರವಾಗಿ ನಿರಾಕರಿಸಿದವು. ಬೌದ್ಧವಿಗ್ರಹಗಳನ್ನು ಸುಟ್ಟು ತನ್ನ ಚಳಿಕಾಸಿಕೊಂಡ ಲಾಮಾಗಳ ಕಥೆಗಳಿವೆ. ಇವು ಬುದ್ಧನ ಅಥವಾ ಕುರುಹಿನ ಯಾಂತ್ರಿಕ ಆರಾಧನೆ ನಿರಾಕರಿಸಲು `ಒಂದೊಮ್ಮೆ ಬುದ್ಧ ಸಿಕ್ಕರೆ ಅವನನ್ನು ಕೊಲ್ಲಿರಿ’ ಎಂದೂ ಹೇಳಿದವು. ಭಾರತದ ಅನುಭಾವಿ ಪಂಥಗಳೆಲ್ಲವೂ ವಿಗ್ರಹಭಂಜಕ. ಇದೇ ಹೊತ್ತಲ್ಲಿ ಲೆನಿನ್ ಚಿಂತನೆ ಕಮ್ಯುನಿಸ್ಟ್ ಪಕ್ಷದಲ್ಲಿ ಜನರಲ್ಲಿ ಜೀವಂತವಾಗಿ ಯಾವ ಸ್ವರೂಪದಲ್ಲಿದೆ ಎಂಬ ಪ್ರಶ್ನೆಯನ್ನೂ ಕೇಳಿಕೊಳ್ಳಬೇಕು. ಬೌದ್ಧ ಪ್ರತಿಮೆಗಳು ಆಗಸದೆತ್ತರಕ್ಕಿರುವ ಮ್ಯಾನ್ಮಾರ್, ಶ್ರೀಲಂಕೆಗಳಲ್ಲಿ, ಬುದ್ಧನ ಕರುಣೆ ಅಹಿಂಸೆಯ ತತ್ವಗಳನ್ನು ಅಲ್ಲಿನ ರಾಷ್ಟ್ರೀಯವಾದಿಗಳು ಹೇಗೆ ಜನಾಂಗಹತ್ಯೆಯ ಮೂಲಕ ಕೆಡವಿದರು. ದೊಡ್ಡತತ್ವವು ಸಮಾಜದಲ್ಲಿ ವ್ಯಕ್ತಿಯಲ್ಲಿ ವಿಮರ್ಶಾತ್ಮಕ ಅನುಸಂಧಾನ ಮೂಲಕ ಜೀವಂತವಾಗಿತ್ತೆಂದರೆ, ತತ್ವಜ್ಞನ ಪ್ರತಿಮೆಯ ಅಗತ್ಯವಿಲ್ಲ.

ಪ್ರತಿಮೆ, ಧ್ವಜ, ಸಂಕೇತಗಳು ಜನರ ಭಾವನೆ ಮತ್ತು ಪಕ್ಷದ ಸಿದ್ಧಾಂತಗಳಿಗೆ ಮಾತ್ರವಲ್ಲ, ಅಧಿಕಾರಕ್ಕೆ ಸಂಬಂಧಿಸಿದವು. ಹೀಗಾಗಿ ಅಧಿಕಾರ ಪಲ್ಲಟದ ಜತೆ ಜತೆಗೇ ಈ ಸಂಕೇತಗಳ ಮೇಲೆ ದಾಳಿ ನಡೆಯುತ್ತ ಬಂದಿರುವುದನ್ನು ಚರಿತ್ರೆ ದಾಖಲಿಸಿದೆ. ರಾಜರು ತಾವು ಗೆದ್ದ ಪ್ರದೇಶದಲ್ಲಿ ಪ್ರತಿಮಾನಾಶ ಮಾಡುತ್ತಿದ್ದವು. ತಮಿಳುನಾಡಿನ ಶೈವ ದೊರೆಗಳು ವೈಷ್ಣವರ ಪ್ರತಿಮೆಗಳನ್ನು ಭಗ್ನಮಾಡಿದರು. ಶೈವ— ವೈಷ್ಣವ ಕದನದ ಪರಿಣಾಮಕ್ಕೆ ಹಂಪಿಯಲ್ಲೂ ಸಾಕ್ಷ್ಯಗಳಿವೆ. ಮತೀಯ ಉಗ್ರಗಾಮಿಗಳು ದೇಶವನ್ನು ವಶಪಡಿಸಿಕೊಂಡಿರುವ ಕಡೆಯಲ್ಲೂ ಇದು ನಡೆದಿದೆ. ಬಮಿಯಾನ್ ಬುದ್ಧ ಭಗ್ನಗೊಂಡಿದ್ದು ಹೀಗೆ. ಆದರೆ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಈ ಕೃತ್ಯ ನಡೆಯುವುದು ಅನಾಗರಿಕತೆಯ ಲಕ್ಷಣ. ತಾತ್ವಿಕ ರಾಜಕೀಯ ವಿರೋಧಗಳನ್ನು ಮುಖಾಮುಖಿ ಮಾಡಲು ಪ್ರಜಾಪ್ರಭುತ್ವದಲ್ಲಿ ನಾಗರಿಕ ವಿಧಾನಗಳಿವೆ. ಒಬ್ಬರು ಅಧಿಕಾರಕ್ಕೆ ಮತ್ತೊಬ್ಬರ ಸಂಕೇತಗಳನ್ನು ನಾಶ ಮಾಡುವುದಾದರೆ, ಅವು ಸೇಡು ಹಿಂಸೆ ಪ್ರತಿಹಿಂಸೆಯನ್ನು ಉದ್ಘಾಟಿಸುತ್ತವೆ.

ವಿಚಿತ್ರವೆಂದರೆ, ಪ್ರತಿಮಾ ಭಗ್ನತೆ—ಚಿಂತಕನ ಹತ್ಯೆಯೇ ಸಂಬಂಧಪಟ್ಟ ಚಿಂತನೆಯನ್ನು ಜೀವಂತಗೊಳಿಸಬಹುದು. ಗೌರಿ, ಪನ್ಸಾರೆ, ಕಲಬುರ್ಗಿ, ಧಾಬೋಲ್ಕರರನ್ನು ಕೊಲ್ಲಲಾಯಿತು. ಬಳಿಕ ಸೀಮಿತ ವಲಯದಲ್ಲಿದ್ದ ಅವರ ಚಿಂತನೆ ಏನೆಂದು ಎಲ್ಲರೂ ಹುಡುಕಾಡಿ ಓದತೊಡಗಿದರು. ಅದೀಗ ಲೆನಿನನ ವಿಷಯದಲ್ಲೂ ಆಗುತ್ತಿದೆ. ಮೃತ್ಯುಮುಖದಲ್ಲೇ ಮರುಹುಟ್ಟಿರುವ ಪರಿಯಿದು.

ಎನ್.ಎಸ್.ಶಂಕರ್

ಬಿಜೆಪಿ ವಿರೋಧಿ ಒಕ್ಕೂಟ ಸಾಧ್ಯವೇ?

ಜುಲೈ ೨೦೧೮

ಶಾಂತಲಾ ದಾಮ್ಲೆ

ಹೋರಾಟಗಾರ ಅಭ್ಯರ್ಥಿ ಚುನಾವಣಾ ಬವಣೆ

ಜುಲೈ ೨೦೧೮

ಶ್ರೀಶೈಲ ಆಲದಹಳ್ಳಿ

ಸಂಡೂರು ಕುಮಾರಸ್ವಾಮಿ ಬೆಟ್ಟಕ್ಕೆ ಗಣಿ ಕಂಟಕ!

ಜುಲೈ ೨೦೧೮

ಡಾ.ಡಿ.ಸಿ.ನಂಜುಂಡ

ನಿಮ್ಮ ಆನ್‍ಲೈನ್ ಮಾಹಿತಿ ಎಷ್ಟು ಸುರಕ್ಷಿತ?

ಜೂನ್ ೨೦೧೮

ಪ್ರೊ. ರವೀಂದ್ರ ರೇಷ್ಮೆ

ಅಸೆಂಬ್ಲಿ ಫಲಿತಾಂಶ - ಪಕ್ಷ ರಾಜಕಾರಣದ ಪತನ

ಜೂನ್ ೨೦೧೮

ಡಾ.ಟಿ.ಆರ್.ಚಂದ್ರಶೇಖರ

ಭಾರತದಲ್ಲಿ ಬ್ಯಾಂಕಿಂಗ್ ಬುಡ ಗಡಗಡ!

ಮೇ ೨೦೧೮

ಸುಧೀಂದ್ರ ಹಾಲ್ದೊಡ್ಡೇರಿ

ಬೆಳ್ಳಂದೂರಿನಲ್ಲಿ ನೊರೆ ಹೊತ್ತಿ ಉರಿದೊಡೆ...!

ಮೇ ೨೦೧೮

ರಹಮತ್ ತರೀಕೆರೆ

ಪ್ರತಿಮೆಗಳ ರಾಜಕಾರಣ

ಎಪ್ರಿಲ್ ೨೦೧೮

ಹನುಮಂತರೆಡ್ಡಿ ಶಿರೂರು

ಸಿದ್ದರಾಮಯ್ಯನವರ ಕಲ್ಯಾಣ ರಾಜ್ಯ !

ಎಪ್ರಿಲ್ ೨೦೧೮

ದಾಸನೂರು ಕೂಸಣ್ಣ

ಒಳ ಮೀಸಲಾತಿಏಕೆ ಬೇಕು?

ಮಾರ್ಚ್ ೨೦೧೮

ರೇಣುಕಾ ನಿಡಗುಂದಿ

ಮೊಲೆ ಕತ್ತರಿಸಿಕೊಟ್ಟ ನಂಗೇಲಿ ನೆನಪು!

ಮಾರ್ಚ್ ೨೦೧೮

ಡಿ. ಎಸ್. ನಾಗಭೂಷಣ

ಕನ್ನಡ ಮೊದಲು ನಂತರ ಇಂಗ್ಲಿಷ್

ಮಾರ್ಚ್ ೨೦೧೮

ಡಾ. ವಾಸು ಎಚ್. ವಿ

ಈ ಹೊತ್ತಿನ ಕರ್ನಾಟಕ: ಪರ್ಯಾಯ ರಾಜಕಾರಣ

ಫೆಬ್ರವರಿ ೨೦೧೮

ಡಾ.ಕಿರಣ್ ಎಂ.ಗಾಜನೂರು

‘ನಿಮ್ಮ ದನದ ಬಾಲ ನೀವೇ ಇಟ್ಟುಕೊಳ್ಳಿ’

ಫೆಬ್ರವರಿ ೨೦೧೮