2nd ಮಾರ್ಚ್ ೨೦೧೮

ದಿ ಪೋಸ್ಟ್: ಮಾಧ್ಯಮದ ಹೊಸ ಭರವಸೆ

ಗುರುಪ್ರಸಾದ್ ಡಿ. ಎನ್.

ಈ ಸಿನಿಮಾ ಒಂದು ಕಡೆ ಪ್ರಭುತ್ವಕ್ಕೆ ಸವಾಲಾಗಿ ನಿಲ್ಲುವ ಮಾಧ್ಯಮದ ಕಥೆಯನ್ನು ಹೇಳಿ, ಪ್ರಭುತ್ವಕ್ಕೆ ತನ್ನ ಎಲ್ಲೆ ಮೀರದಂತೆ ಎಚ್ಚರಿಕೆಯನ್ನು ನೀಡಿದೆ; ಮತ್ತೊಂದು ಕಡೆ ಪ್ರಭುತ್ವದ ಮುಂದೆ ತಲೆಬಾಗಿ, ಮಾಡಬೇಕಿರುವ ಕೆಲಸವನ್ನು ಮಾಡದೆ ಸೋತು ಕೂತಿರುವ ಅಥವಾ ಬದ್ಧತೆ ಮರೆತಿರುವ ಪತ್ರಿಕಾ ಮಾಧ್ಯಮವನ್ನು (ಇದು ಸಿನಿಮಾ ಅಥವಾ ಸಾಹಿತ್ಯ ಮಾಧ್ಯಮ ಕೂಡ ಆಗಿರಬಹುದು) ಎಚ್ಚರಿಸಿದೆ.

ಸಿಬಿಐ ಕೋರ್ಟ್ ನ್ಯಾಯಾಧೀಶ ಬಿ.ಎಚ್.ಲೋಯಾ ಅವರ ಅಸಹಜ ಸಾವಿನ ಪ್ರಕರಣವನ್ನು ಮರುತನಿಖೆಗೆ ಒತ್ತಾಯಿಸುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆ ಸರ್ವೋಚ್ಚ ನ್ಯಾಯಾಲಯದಲ್ಲಿ ಜಾರಿಯಲ್ಲಿದೆ. ಮಹಾರಾಷ್ಟ್ರ ಸರ್ಕಾರದ ಪರ ವಾದ ಮಂಡಿಸಿದ ವಕೀಲರು, ‘ಪತ್ರಿಕೆಯಲ್ಲಿ ಬಂದ ದೃಢೀಕರಿಸದ ವರದಿಯ ಆಧಾರದ ಮೇಲೆ ಅರ್ಜಿದಾರರು ಪಿ.ಐ.ಎಲ್. ಸಲ್ಲಿಸಿದ್ದು, ಪತ್ರಿಕಾ ವರದಿಗಳನ್ನು ಸಾಕ್ಷ್ಯವನ್ನಾಗಿ ಒಪ್ಪಲು ಸಾಧ್ಯವಿಲ್ಲ’ ಎಂದಿದ್ದಾರೆ. ಈ ಹಿನ್ನೆಲೆಯಲ್ಲಿ ನನಗೆ ಥಟ್ಟನೆ ನೆನಪಾದದ್ದು ಆಲನ್ ಜೆ ಪಕೂಲ ನಿರ್ದೇಶನದ ‘ಆಲ್ ದ ಪ್ರೆಸಿಡೆಂಟ್ಸ್ ಮೆನ್’ ಸಿನಿಮಾ. ಅಂದಿನ ಅಮೆರಿಕಾ ಅಧ್ಯಕ್ಷ ರಿಚರ್ಡ್ ಎಂ ನಿಕ್ಸನ್ ಮರುಚುನಾಯಿತರಾಗಲು, ಇಡೀ ಆಡಳಿತ ಯಂತ್ರವನ್ನು ದುರುಪಯೋಗ ಪಡಿಸಿಕೊಂಡು ಸಾರ್ವಜನಿಕ ಹಣವನ್ನು ಅದಕ್ಕಾಗಿ ಅಕ್ರಮವಾಗಿ ಬಳಸಿರುತ್ತಾರೆ. ಈ ಪ್ರಕರಣದ ಬೆನ್ನು ಹತ್ತುವ ಇಬ್ಬರು ಯುವ ಪತ್ರಕರ್ತರು ಹಲವು ಸಾಕ್ಷ್ಯಗಳನ್ನು ಕಲೆಹಾಕಿ, ವಾಷಿಂಗ್ಟನ್ ಪೋಸ್ಟ್ ಪತ್ರಿಕೆಯಲ್ಲಿ ವರದಿ ಪ್ರಕಟಿಸುತ್ತಾರೆ. ಇದು ಸರ್ಕಾರದ ಮೇಲೆ ತೀವ್ರ ಒತ್ತಡ ತರುತ್ತದೆ. ಪತ್ರಿಕಾ ಗೋಷ್ಠಿ ಕರೆದು ಇದಕ್ಕೆ ಪ್ರತಿಕ್ರಿಯಿಸುವ ಸರ್ಕಾರ ಆ ವರದಿಯನ್ನು ‘ತುಚ್ಛ ಪತ್ರಿಕೋದ್ಯಮ’ ಎಂದು ಹೀಗಳೆಯುತ್ತದೆ. ಆದರೆ ವಾಷಿಂಗ್ಟನ್ ಪೋಸ್ಟ್ ಪ್ರಕಟಿಸಿದ ದಿಟ್ಟ ವರದಿಯಿಂದ, ಜನತಂತ್ರಕ್ಕೆ ನಿಷ್ಠವಾದ ಪತ್ರಿಕೋದ್ಯಮದಿಂದ ಅಂದಿನ ಅಧ್ಯಕ್ಷ ನಿಕ್ಸನ್ ಅಧಿಕಾರದಿಂದ ಕೆಳಗಿಳಿಯುತ್ತಾರೆ. ಹಲವು ಅಧಿಕಾರಿಗಳಿಗೆ ಕೋರ್ಟ್ ಶಿಕ್ಷೆ ನೀಡುತ್ತದೆ. ಈ ಸಿನಿಮಾ ನೈಜ ಘಟನೆಗಳನ್ನು ಆದರಿಸಿದ ಐತಿಹಾಸಿಕ ದಾಖಲೆ; ರಾಜಕೀಯ ಥ್ರಿಲ್ಲರ್ ಕಥೆಯು ಹೌದು.

ಬಹುತೇಕ ಇಂತಹದ್ದೇ ಕಾಳಜಿ ಹಾಲಿವುಡ್ ನಿರ್ದೇಶಕ ಸ್ಟೀವನ್ ಸ್ಪೀಲ್ಬರ್ಗ್ ಅವರನ್ನು ಕಾಡಿದೆ. ‘ದಿ ಪೋಸ್ಟ್’ ಸಿನಿಮಾ ‘ಆಲ್ ದಿ ಪ್ರೆಸಿಡೆಂಟ್ಸ್ ಮೆನ್’ ನಂತೆ ವಾಷಿಂಗ್ಟನ್ ಪೋಸ್ಟ್ ಪತ್ರಿಕೆಯ ಕಥೆಯೇ. ‘ಆಲ್ ಪ್ರೆಸಿಡೆಂಟ್ಸ್ ಮೆನ್’ ಸಿನಿಮಾದಲ್ಲಿ ವಾಟರ್ ಗೇಟ್ ಪ್ರಕರಣವನ್ನು ಭೇದಿಸಿದ ಕಥೆ ಒಳಗೊಂಡರೆ, ‘ದಿ ಪೋಸ್ಟ್’ ಸಿನಿಮಾ ಅಮೆರಿಕಾ ಸರ್ಕಾರದ ರಹಸ್ಯದ ದಾಖಲೆಗಳಾದ ಪೆಂಟಗನ್ ಪೇಪರ್ಸ್ ಪ್ರಕಟಿಸುವ ದುಸ್ಸಾಹಸಕ್ಕೆ ಮುಂದಾಗಿದೆ. ಅವರೇ ಇಂಗ್ಲೆಂಡ್ ಮೂಲದ ಒಂದು ಪತ್ರಿಕೆಗೆ ಹೇಳಿಕೊಂಡಂತೆ ಸದ್ಯದ ಅಮೆರಿಕಾ ಆಡಳಿತ ಮಾಧ್ಯಮಗಳ ಮೇಲೆ ನಡೆಸುತ್ತಿರುವ ಅಪಪ್ರಚಾರ, ನಿಜವನ್ನು ಸುಳ್ಳು ಎಂದು ಬಗೆಯಲು ಹವಣಿಸುತ್ತಿರುವ ತಂತ್ರಗಳಿಂದ ಎಚ್ಚೆತ್ತು ಸಿನಿಮಾವನ್ನು ತುರ್ತಾಗಿ ನಿರ್ದೇಶಿಸಬೇಕಾಯಿತು. 11 ತಿಂಗಳ ಹಿಂದೆಯಷ್ಟೇ ಈ ಸಿನಿಮಾ ಕಥೆಯನ್ನು ಓದಿ, ಮಾಡುತ್ತಿದ್ದ ಕೆಲಸಗಳನ್ನು ಬದಿಗೊತ್ತಿ ‘ದಿ ಪೋಸ್ಟ್’ ಸಿನಿಮಾ ನಿರ್ದೇಶಿಸಿದ್ದಾಗಿ ಅವರು ಹೇಳಿಕೊಂಡಿದ್ದಾರೆ.

ತನ್ನ ಗಂಡನ ಸಾವಿನ ನಂತರ ವಾಷಿಂಗ್ಟನ್ ಪೋಸ್ಟ್ ಸಾಮ್ರಾಜ್ಯದ ಒಡೆತನವನ್ನು ವಹಿಸಿಕೊಂಡಿರುವ ಕ್ಯಾಥರಿನ್ ಗ್ರಹಾಮ್ (ಮೆರಿಲ್ ಸ್ಟ್ರೀಪ್ ಈ ಪಾತ್ರವನ್ನು ಪೋಷಿಸಿದ್ದಾರೆ) ಸಂಸ್ಥೆಯನ್ನು ಮೇಲೆತ್ತಲು, ಹೆಚ್ಚುವರಿ ಹೂಡಿಕೆಯನ್ನು ತರಲು ಇನಿಶಿಯಲ್ ಪಬ್ಲಿಕ್ ಆಫರಿಂಗ್ (ಐಪಿಒ) ಗಾಗಿ ಸಿದ್ಧತೆ ನಡೆಸುವಾಗ, ಪತ್ರಿಕೆಯ ಸಂಪಾದಕ ಬೆನ್ ಬ್ರಾಡ್ಲೀ (ಟಾಮ್ ಹ್ಯಾಂಕ್ಸ್) ಗುಣಮಟ್ಟದ—ದಕ್ಷತೆಯ ಪತ್ರಿಕೋದ್ಯಮದ ಬಗ್ಗೆ ಚಿಂತಿಸುತ್ತಿರುತ್ತಾರೆ. ವಿಯೆಟ್ನಾಂ ಯುದ್ಧದಲ್ಲಿ ಸೋಲುವ ಮುನ್ಸೂಚನೆ ಇದ್ದರೂ, ಭಾರಿ ನಷ್ಟ, ಸಾವುನೋವುಗಳ ಬಗ್ಗೆ ಗೂಢಚರ್ಯ ವರದಿ ಇದ್ದರೂ ಒಣಪ್ರತಿಷ್ಠೆಗಾಗಿ ಅಮೆರಿಕಾ ಸರ್ಕಾರ ಯುದ್ಧವನ್ನು ಮುಂದುವರೆಸಿ ಹಲವು ಯೋಧರನ್ನು ಬಲಿಕೊಟ್ಟು, ಸಾರ್ವಜನಿಕ ಹಣವನ್ನು ಪೋಲು ಮಾಡಲಾಯಿತು.

ಈ ಮಾಹಿತಿ ಬಿಚ್ಚಿಡುವ ಆಂತರಿಕ ತನಿಖೆಯ ವರದಿ (ಪೆಂಟಗನ್ ಪೇಪರ್ಸ್) ಸೋರಿಕೆಯಾಗಿ ಅದು ಅಮೆರಿಕಾದ ಮತ್ತೊಂದು ಪ್ರತಿಷ್ಠಿತ ದಿನಪತ್ರಿಕೆ ನ್ಯೂಯಾರ್ಕ್ ಟೈಮ್ಸ್ ನಲ್ಲಿ ಪ್ರಕಟವಾಗಿಬಿಡುತ್ತದೆ. ಆ ಕಾಲಕ್ಕೆ ಒಂದು ಪ್ರಾದೇಶಿಕ ದಿನಪತ್ರಿಕೆ ಎನಿಸಿಕೊಂಡರೂ ತನಗಿಂತಲೂ ಮೊದಲು ಪೆಂಟಗನ್ ಪೇಪರ್ಸ್ ಬಗ್ಗೆ ಟೈಮ್ಸ್ ವರದಿ ಮಾಡಿದ್ದಕ್ಕೆ ಬ್ರಾಡ್ಲಿ ಅವರಿಗೆ ನಿರಾಶೆ ಆಗುತ್ತದೆ. ಆದರೂ ವಾಷಿಂಗ್ಟನ್ ಪೋಸ್ಟ್ ಆ ಪ್ರಕರಣದ ಬೆನ್ನು ಹತ್ತಿ ಫಾಲೋ ಮಾಡುವಂತೆ ನೋಡಿಕೊಳ್ಳುತ್ತಾರೆ.

ಇದೇ ಸಮಯದಲ್ಲಿ ಪೆಂಟಗನ್ ಪೇಪರ್ಸ್ ಸರ್ಕಾರದ ರಹಸ್ಯ ದಾಖಲೆಗಳಾಗಿದ್ದು, ಅವನ್ನು ಮತ್ಯಾವ ಮಾಧ್ಯಮಗಳು ಕೂಡ ಪ್ರಕಟಿಸದಂತೆ ನ್ಯಾಯಾಲಯ ನಿಷೇಧ ಹೇರುತ್ತದೆ.

ಇಂತಹ ಅಪಾಯಕಾರಿ ಸಂದರ್ಭದಲ್ಲೂ ಈ ದಾಖಲೆಗಳಿಗೆ ವಾಷಿಂಗ್ಟನ್ ಪೋಸ್ಟ್ ಪತ್ರಕರ್ತರೊಬ್ಬರು ಪ್ರವೇಶ ಪಡೆಯುತ್ತಾರೆ. ಪತ್ರಿಕೆ ಸಂಪಾದಕ ಬ್ರಾಡ್ಲೀ ಮನೆಯಲ್ಲಿಯೇ ಹಗಲು ರಾತ್ರಿ ಎನ್ನದೆ ಆ ದಾಖಲೆಗಳ ರಾಶಿಯನ್ನು ಪತ್ರಕರ್ತರ ತಂಡ ಪರಿಶೀಲನೆ ಮಾಡಿ ಅಕ್ರಮವನ್ನು ಭೇದಿಸಿ ವರದಿ ಸಿದ್ಧಪಡಿಸುತ್ತದೆ. ಆಗ ಕೋರ್ಟ್ ಆದೇಶವನ್ನು ಧಿಕ್ಕರಿಸಿ ವರದಿಯನ್ನು ಪ್ರಕಟಿಸಿ ಸರ್ಕಾರವನ್ನು ಮುಜುಗರಕ್ಕೆ ಒಳಪಡಿಸುವ ಸಂದರ್ಭ ಬಂತು. ಅಧ್ಯಕ್ಷ ನಿಕ್ಸನ್‍ನ ಬಂಟನೊಬ್ಬ ಪತ್ರಿಕೆಯ ಒಡತಿ ಗ್ರಹಾಮ್ ಅವರಿಗೆ, ಈ ವರದಿ ಪ್ರಕಟಿಸಿದರೆ ಬಲಿಷ್ಠ ನಾಯಕ ನಿಕ್ಸನ್‍ನಿಂದ ಒದಗಬಹುದಾದ ಅಪಾಯದ ಎಚ್ಚರಿಕೆ ನೀಡುತ್ತಾರೆ. ಐಪಿಒ ಬಿದ್ದುಹೋಗುವ ಭಯವನ್ನು ಹಲವು ಹೂಡಿಕೆದಾರರು, ಸಂಸ್ಥೆಯ ನಿರ್ದೇಶಕರು ವ್ಯಕ್ತಪಡಿಸುತ್ತಾರೆ. ಹೀಗಿದ್ದೂ ಸಂಪಾದಕ ಬ್ರಾಡ್ಲೀ ವರದಿಯನ್ನು ಪ್ರಕಟ ಮಾಡಲೇಬೇಕು ಎಂದು ಗ್ರಹಾಮ್ ಅವರ ಬಳಿ ಪಟ್ಟು ಹಿಡಿಯುತ್ತಾರೆ. ಅಪಾರ ಒತ್ತಡಗಳ ನಡುವೆಯೂ ಗ್ರಹಾಮ್ ದಿಟ್ಟತನ ದಕ್ಷತೆ ಮತ್ತು ಪತ್ರಿಕೋದ್ಯಮದ ನೀತಿಯನ್ನು ಮೆರೆಯುತ್ತಾರೆ. ಸರ್ವೋಚ್ಚ ನ್ಯಾಯಾಲಯದಲ್ಲಿ ಸರ್ಕಾರಕ್ಕೆ ಮುಖಭಂಗವಾಗಿ ದಕ್ಷ ಮಾಧ್ಯಮಕ್ಕೆ ಜಯ ಸಿಗುತ್ತದೆ. ಕ್ಯಾಥರಿನ್ ಗ್ರಹಾಮ್ ಹಿರೋ ಆಗಿ ನ್ಯಾಯಾಲಯದಿಂದ ಹೊರಹೊಮ್ಮುವಾಗ ಜನರು ಕರತಾಡತನ ಮೂಲಕ ಸ್ವಾಗತಿಸುತ್ತಾರೆ.

ಮೊದಲಿಗೆ ಈ ಸಿನಿಮಾ ಕಾಡುವುದು ಟಾಮ್ ಹ್ಯಾಂಕ್ಸ್ ಮತ್ತು ಮೆರಿಲ್ ಸ್ಟ್ರೀಪ್ ಹಾಗೂ ಇನ್ನಿತರ ಎಲ್ಲ ಪೋಷಕ ನಟರ ಅತ್ಯುತ್ತಮ ನಟನೆಯಿಂದ. ಸಿನಿಮಾದ ಆಶಯವನ್ನು ಎಲ್ಲ ನಟರು ತಮ್ಮ ಹೆಗಲ ಮೇಲೆ ಏರಿಸಿಕೊಂಡು ದುಡಿದಿದ್ದಾರೆ. ಜುರಾಸಿಕ್ ಪಾರ್ಕ್‍ನ್ನೇ ನಂಬುವಂತೆ ಸೃಷ್ಟಿಸಿದ ಸ್ಪಿಲ್ಬರ್ಗ್ ಅವರಿಗೆ ಅಂದಿನ ಕಾಲಘಟ್ಟದ ಪರಿಸರವನ್ನು (ಕಚೇರಿ, ಬೀದಿಗಳು ಅಥವಾ ಮುದ್ರಣದ ರೂಪುಗಳು ಇತ್ಯಾದಿ) ಬಹಳ ನೈಜವಾಗಿ ಸೃಷ್ಟಿಸುವುದು ದೊಡ್ಡ ಮಾತಾಗಿರಲಿಲ್ಲ. ಆದರೆ ಪತ್ರಿಕೆಯ ಮಾಲಿಕನಿಗೆ ಒದಗುವ ದ್ವಂದ್ವ—ಸಂದಿಗ್ಧ ಸನ್ನಿವೇಶ, ಆ ಸನ್ನಿವೇಶಕ್ಕಾಗಿ ನಿಖರವಾದ ವೇಗದಲ್ಲಿ ಕ್ರಮವಾಗಿ ಕಟ್ಟುವ ಕಥೆ, ಆ ಸಂಘರ್ಷವನ್ನು ನಿಭಾಯಿಸುವ ರೀತಿ ಪರಿಣಾಮಕಾರಿಯಾಗಿದೆ. ಪತ್ರಿಕೋದ್ಯಮದ ರೋಚಕತೆಯನ್ನು ಸಿನಿಮೀಯವಾಗಿ ಕಟ್ಟುವ ನಿರ್ದೇಶಕ ಪ್ರೇಕ್ಷಕರನ್ನು ಆಸನದ ತುದಿಗೆ ತಂದು ಕೂರಿಸುತ್ತಾನೆ.

ಮೂಟೆಗಟ್ಟಲೆ, ಬಾಕ್ಸ್ ಗಟ್ಟಲೆ ಪೇಪರ್ ಗಳನ್ನು ವಿಮಾನದಲ್ಲಿ ತನ್ನ ಆಸನದ ಮುಂದೆಯೇ ಇರಿಸಿಕೊಂಡು ಬರುವ, ಸಂಪಾದಕನ ಮನೆಯಲ್ಲಿ ಅವನ್ನೆಲ್ಲಾ ಹರಡಿಕೊಂಡು ಬೇಕಾದ ಮಾಹಿತಿಯನ್ನು ಶ್ರದ್ಧೆಯಿಂದ, ಶ್ರಮದಿಂದ ಹುಡುಕುವ ರೀತಿ ಇಂದಿನ ಮಾಧ್ಯಮರಂಗಕ್ಕ್ಕೆ ಕಿವಿಮಾತಿನಂತಿದೆ. ಇದು ಮಾಹಿತಿ ಸ್ಫೋಟಗೊಂಡಿರುವ ಯುಗ. ಬೆರಳ ತುದಿಯ ಮಾಹಿತಿಯನ್ನು ಆದ್ಯತೆಗೊಳಿಸಿ ಓದುವ, ಸಂಗ್ರಹಿಸುವ, ಆಳ ಅಧ್ಯಯನ ಮಾಡುವ ಕಲೆ, ಸಾಮಥ್ರ್ಯ ಪತ್ರಕರ್ತರಲ್ಲಿ—ಸಂಶೋಧಕರಲ್ಲಿ ಕ್ಷೀಣಿಸುತ್ತಿರುವುದನ್ನು ಎಚ್ಚರಿಸುತ್ತದೆ. ಮಾಹಿತಿಯನ್ನು ಮ್ಯಾನಿಪುಲೇಟ್ ಮಾಡಿ ಮೋಸಗೊಳಿಸುವ ಪ್ರಭುತ್ವದ ಚಾಣಾಕ್ಷತೆಯನ್ನು ಮೀರುವುದರ ಬಗ್ಗೆ ಸಿನಿಮಾ ಪರೋಕ್ಷವಾಗಿ ಹೇಳುತ್ತದೆ. ಜನತಂತ್ರದ ಪರವಾಗಿ ದಕ್ಷತೆಯಿಂದ ವರದಿ ಮಾಡುವುದಕ್ಕೆ ಸಂಪಾದಕ ಒಡತಿಯೊಂದಿಗೆ ಚರ್ಚಿಸಿ ಮನವೊಲಿಸುವ ರೀತಿ, ಪತ್ರಕರ್ತರ ಮಾಹಿತಿ ಸಂಗ್ರಹಿಸುವಾಗಿನ ಹೆಣಗಾಟ ಇವೆಲ್ಲವೂ ಆಪ್ತವಾಗಿ ಚಿತ್ರಣಗೊಂಡಿದೆ. ಒಂದು ಥ್ರಿಲ್ಲರ್ ಆಗಿಯೂ, ಇತಿಹಾಸದ ಪಾಠವಾಗಿಯೂ, ಎಚ್ಚರಿಕೆಯ ಗಂಟೆಯಾಗಿಯೂ ಸಿನಿಮಾ ಕಾಡುತ್ತದೆ.

ಸ್ಪೀಲ್ಬರ್ಗ್ ವಿಮರ್ಶಕರು ಮತ್ತು ಸಿನಿಮಾ ವಿದ್ಯಾರ್ಥಿಗಳ ನಡುವೆ ಬಹಳ ಚರ್ಚೆಯಾಗುವ ನಿರ್ದೇಶಕ. ಇಟಿ, ಜುರಾಸಿಕ್ ಪಾರ್ಕ್, ಜಾಸ್ ಹೀಗೆ ಬ್ಲಾಕ್ ಬಸ್ಟರ್ ಸಿನಿಮಾಗಳನ್ನು ಮಾಡಿದ ನಿರ್ದೇಶಕ ಅಷ್ಟೇ ಗಂಭೀರವಾದ, ಕತ್ತಲೆ ಸಮಾಜದ ಕಥೆಗಳನ್ನು ಇಟ್ಟುಕೊಂಡು ಕೂಡ ಸಿನಿಮಾ ನಿರ್ದೇಶಿಸಿದರು. ನಾಜಿಗಳ ಜನಾಂಗಿಯ ನರಮೇಧ ಕುರಿತ ಶಿಂಡ್ಲರ್ಸ್ ಲಿಸ್ಟ್, ಭಯೋತ್ಪಾದನೆ ಕುರಿತ ಮ್ಯೂನಿಚ್, ಯುದ್ಧದ ಬಗೆಗಿನ ಸೇವಿಂಗ್ ಪ್ರೈವೇಟ್ ಯಾರ್ನ್ ಹೀಗೆ ಅವರ ವಿಭಿನ್ನತೆ—ಪ್ರಯೋಗಶೀಲತೆ ಜನ ಸಾಮಾನ್ಯರನ್ನು ಮತ್ತು ವಿಮರ್ಶಕರನ್ನು ಸಮಾನವಾಗಿ ಕಾಡಿವೆ. ಎರಡು ವರ್ಷಗಳ ಹಿಂದಷ್ಟೇ ಟಾಮ್ ಹ್ಯಾಂಕ್ಸ್ ಪ್ರಧಾನ ಪಾತ್ರದಲ್ಲಿ ನಟಿಸಿದ್ದ ‘ಬ್ರಿಜ್ ಆಫ್ ಸ್ಪೈಸ್’ ಸಿನಿಮಾ ನಿರ್ದೇಶಿಸದ್ದರು. ಜನಸಾಮಾನ್ಯರ— ಜನಪ್ರಿಯ ಮಾಧ್ಯಮಗಳ ಭಾರಿ ವಿರೋಧದ ನಡುವೆಯೂ ನ್ಯಾಯಾಲಯದಲ್ಲಿ ರಷ್ಯಾದ ಗೂಢಾಚಾರಿಯ ಪರವಾಗಿ ವಕೀಲನೊಬ್ಬ ವಕಾಲತ್ತು ವಹಿಸುವ ಕಥೆ ಮಾನವೀಯತೆಯನ್ನು ಪ್ರತಿನಿಧಿಸಿತ್ತು. 71ರ ಇಳಿವಯಸ್ಸಿನಲ್ಲೂ ಸ್ಪಿಲ್ಬರ್ಗ್ ತಮ್ಮ ಪ್ರಯೋಗಶೀಲತೆ ಮುಂದುವರೆಸಿದ್ದಾರೆ.

ಸರ್ಕಾರದ ಆಡಳಿತ ಯಂತ್ರವನ್ನು ದುರುಪಯೋಗ ಪಡಿಸಿಕೊಳ್ಳುವ ಪ್ರಕರಣಗಳು ನಮ್ಮ ಮುಂದೆಯೂ ಸಾಕಷ್ಟಿವೆ. ಭಾರತದ ಮಟ್ಟಿಗೆ ಹೇಳುವುದಾದರೆ ಸಿಬಿಐ ಎಂಬ ಸ್ವತಂತ್ರ ತನಿಖಾ ಏಜೆನ್ಸಿ ಸರ್ಕಾರದ ಕೈಗೊಂಬೆ ಎಂದು ಪ್ರತಿಪಕ್ಷಗಳು ದೂರುವುದು ಸರ್ವೇಸಾಮಾನ್ಯ. ಆದರೂ ಅಂತಹ ದುರ್ಬಳಿಕೆಗಳ ಬಗ್ಗೆ ಜನರನ್ನು ಎಚ್ಚರಿಸುವ, ಪ್ರಭುತ್ವಕ್ಕೆ ಮುಜುಗರ—ಒತ್ತಡ ತರುವ ತನಿಖಾ ವರದಿಗಳು ಕಾಣುವುದು ಅಪರೂಪ ಅಥವಾ ಇಲ್ಲವೇ ಇಲ್ಲ. ಪತ್ರಿಕೋದ್ಯಮ ಮೊಂಡಾಗಿರುವ ಈ ಸಂದರ್ಭದಲ್ಲಿ ‘ದಿ ಪೋಸ್ಟ್’, ‘ಆಲ್ ದಿ ಪ್ರೆಸಿಡೆಂಟ್ಸ್ ಮೆನ್’ ನಂತಹ ಸಿನಿಮಾಗಳು ಸಾಣೆ ಹಿಡಿಯಬಲ್ಲವೇನೋ!

‘ದಿ ಪೋಸ್ಟ್’ನಲ್ಲಿ ಸೃಜನಶೀಲ ಸಿನಿಮಾ ಪ್ರಕ್ರಿಯೆ, ಒಳ್ಳೆಯ ಕಥೆ, ಒಳ್ಳೆಯ ವರದಿಯ ಐತಿಹಾಸಿಕ ದಾಖಲೆ, ಅತ್ಯುತ್ತಮ ನಟನೆ ಎಲ್ಲವೂ ಮೇಳೈಸಿದ್ದು ವಿಶ್ವದೆಲ್ಲೆಡೆ ಯುವ ಸಿನಿಮಾ ನಿರ್ದೇಶಕರಿಗೆ, ಪತ್ರಕರ್ತರಿಗೆ ಮಾರ್ಗದರ್ಶನ—ಭರವಸೆ ನೀಡುವಂತಿದೆ. ಜನ ಸಾಮಾನ್ಯರನ್ನು ರಂಜಿಸುತ್ತಾ, ಎಚ್ಚರಿಸುತ್ತಾ ವಿವೇಕಯುತ ಸಮಾಜದ ನಂಬಿಕೆಯನ್ನು ಮತ್ತೆ ಚಿಗುರಿಸಬಲ್ಲ ಶಕ್ತಿ ಹೊಂದಿದೆ. ಪ್ರಭುತ್ವವನ್ನು ಎದುರಿಸಲು ಪ್ರತಿಭಟನೆಯ ಮಾರ್ಗಗಳನ್ನು ಅನ್ವೇಷಿಸಲು ಸ್ಫೂರ್ತಿ ನೀಡುವಂತಿದೆ.

ಡಾ.ಜಗದೀಶ ಕೆರೆನಳ್ಳಿ

ಜನ್ನನ ಯಶೋಧರ ಚರಿತೆಯಲ್ಲಿ ಪರಿಸರ ವರ್ಣನೆ

ಜುಲೈ ೨೦೧೮

ರೇಣುಕಾ ನಿಡಗುಂದಿ

ಹಾಲುಂಡ ತವರೀಗಿ ಏನೆಂದು ಹಾಡಲೆ

ಜುಲೈ ೨೦೧೮

ನನ್ನ ಕ್ಲಿಕ್

ಜುಲೈ ೨೦೧೮

ಡಾ.ಧರಣಿದೇವಿ ಮಾಲಗತ್ತಿ

ಡುಂಡುಭ ವಿಲಾಪ

ಜುಲೈ ೨೦೧೮

ಡಾ.ಧರಣಿದೇವಿ ಮಾಲಗತ್ತಿ

‘ಪಾದುಕಾ ಕಿರೀಟಿ’

ಜುಲೈ ೨೦೧೮

ಮಂಜುನಾಥ್ ಲತಾ

ಕನ್ನಡ ಸಿನಿಮಾ: ಹೊಸ ಹರಿವು, ಅರಿವು

ಜುಲೈ ೨೦೧೮

ಎಚ್.ಗೋಪಾಲಕೃಷ್ಣ

ನಮ್ಮಟ್ಟೀಲಿ ಏನಾಯ್ತಂದ್ರ...

ಜುಲೈ ೨೦೧೮

ಡಾ.ವಿನಯಾ ಒಕ್ಕುಂದ

ಲಕ್ಷ್ಮೀಶನ ಜೈಮಿನಿ ಭಾರತ ಸೀತಾ ಪರಿತ್ಯಾಗ

ಜೂನ್ ೨೦೧೮

ಪ್ರೊ.ಜಿ.ಎಚ್.ಹನ್ನೆರಡುಮಠ

ಓಡಿ ಹೋದ ದ್ವೆವಗಳು

ಜೂನ್ ೨೦೧೮

ನನ್ನ ಕ್ಲಿಕ್

ಜೂನ್ ೨೦೧೮

ಮೂಡ್ನಾಕೂಡು ಚಿನ್ನಸ್ವಾಮಿ

ಸಂಕಟದ ಪ್ರೇಮಿ

ಜೂನ್ ೨೦೧೮

ಹೇಮಲತಾ ಮೂರ್ತಿ

ವಿಷ ಕುಡಿದ ಮಕ್ಕಳು

ಜೂನ್ ೨೦೧೮

ಮ.ಶ್ರೀ.ಮುರಳಿ ಕೃಷ್ಣ

ಸಂಬಂಧಗಳ ನವಿರು ನಿರೂಪಣೆ ದಿ ಕೇಕ್‍ಮೇಕರ್

ಜೂನ್ ೨೦೧೮

ಬಾಲಚಂದ್ರ ಬಿ.ಎನ್.

ಕರುನಾಡ ಕದನ

ಜೂನ್ ೨೦೧೮

ಡಾ.ಮ್ಯಾಥ್ಯೂ ಕೆ.ಎಮ್.

ನಾಗಚಂದ್ರನ ರಾಮಚಂದ್ರ ಚರಿತ ಪುರಾಣಂ

ಮೇ ೨೦೧೮

ಆರಿಫ್ ರಾಜಾ

...ಇದೀಗ ಎರಡು ನಿಮಿಷವಾಯಿತು!

ಮೇ ೨೦೧೮

ರಾಜು ಹೆಗಡೆ

ತೇಲುವ ಊರಿನ ಕಣ್ಮರೆ!

ಮೇ ೨೦೧೮

ನನ್ನ ಕ್ಲಿಕ್

ಮೇ ೨೦೧೮

ಎಸ್.ಬಿ.ಜೋಗುರ

ಗರ್ದಿ ಗಮ್ಮತ್ತು

ಮೇ ೨೦೧೮

ಪ್ರಸಾದ್ ನಾಯ್ಕ್

ಕ್ವೀನ್ ಆಫ್ ಕಟ್ವೆ ಕೊಂಪೆಯಲ್ಲರಳಿದ ಕಮಲ

ಮೇ ೨೦೧೮

ಪ್ರೀತಿ ನಾಗರಾಜ್

ಮನಿಗ್ಯಷ್ಟು ಕ್ವಟ್ಟರಂತೆ?

ಮೇ ೨೦೧೮

ಪ್ರೊ. ಜಿ. ಎಚ್. ಹನ್ನೆರಡುಮಠ

ಹೂವುಗಳ ನರಕ ಬೆಂಗಳೂರು !

ಎಪ್ರಿಲ್ ೨೦೧೮

ಉಮಾ ಎಚ್. ಎಂ.

ರಾಘವಾಂಕನ ‘ಹರಿಶ್ಚಂದ್ರ ಕಾವ್ಯ’

ಎಪ್ರಿಲ್ ೨೦೧೮

ಕೆ. ಸತ್ಯನಾರಾಯಣ

ನಮ್ಮೂರಲ್ಲೇ ಕಳ್ಳರಿದ್ದರು

ಎಪ್ರಿಲ್ ೨೦೧೮

ವೈಲೆಟ್ ಪಿಂಟೊ

ಸ್ವಗತ (ಕವಿತೆ)

ಎಪ್ರಿಲ್ ೨೦೧೮

ಅಮರಜಾ ಹೆಗಡೆ

ಬುದ್ಧನ ನಾಡಿನಲ್ಲಿ...

ಎಪ್ರಿಲ್ ೨೦೧೮

ಹಜರತಅಲಿ ದೇಗಿನಾಳ

ನಮ್ಮೂರು ಲಂಡನ್‍ಹಳ್ಳ!

ಮಾರ್ಚ್ ೨೦೧೮

ನನ್ನ ಕ್ಲಿಕ್

ಮಾರ್ಚ್ ೨೦೧೮

ಡಾ. ಜಾಜಿ ದೇವೇಂದ್ರಪ್ಪ

ಜನ್ನನ ಯಶೋಧರ ಚರಿತೆ

ಮಾರ್ಚ್ ೨೦೧೮

ಚಿದಂಬರ ಪಿ. ನಿಂಬರಗಿ

ಶಿರೋಳದ ರೊಟ್ಟಿ ಜಾತ್ರೆ

ಮಾರ್ಚ್ ೨೦೧೮

ರಾಜೇಂದ್ರ ಪ್ರಸಾದ್

ರಾಮಮಂದಿರದ ಕನಸು

ಮಾರ್ಚ್ ೨೦೧೮

ಗುರುಪ್ರಸಾದ್ ಡಿ. ಎನ್.

ದಿ ಪೋಸ್ಟ್: ಮಾಧ್ಯಮದ ಹೊಸ ಭರವಸೆ

ಮಾರ್ಚ್ ೨೦೧೮

ಸಾಬೂನು ಚಾಲಿತ ಬೋಟ್

ಮಾರ್ಚ್ ೨೦೧೮

ಬಿದರಹಳ್ಳಿ ನರಸಿಂಹಮೂರ್ತಿ

ಗಂಗೆಗನ್ನಡಿಯಲ್ಲಿ ಗಾಲಿಬ್ ಬಿಂಬ

ಫೆಬ್ರವರಿ ೨೦೧೮

ನನ್ನ ಕ್ಲಿಕ್

ಫೆಬ್ರವರಿ ೨೦೧೮

ಕಟ್ಟ ಕಡೆಯ ಗೆರೆಯ ಮೇಲೆ

ಫೆಬ್ರವರಿ ೨೦೧೮

ಸಂತೋಷ್ ನಾಯಕ್ ಆರ್.

ಬೂದಿ ಒಳಗಣ ಕೆಂಡ ಚಿಕ್ಕಲ್ಲೂರು ಜಾತ್ರೆ

ಫೆಬ್ರವರಿ ೨೦೧೮

ಕೆ.ಎಲ್.ಚಂದ್ರಶೇಖರ್ ಐಜೂರ್

ಸ್ವರ್ಗದ ಮಕ್ಕಳು

ಫೆಬ್ರವರಿ ೨೦೧೮

ಬಣ್ಣ ಬದಲಿಸುವ ಹೂವು

ಫೆಬ್ರವರಿ ೨೦೧೮