2nd March 2018

ಶಿರೋಳದ ರೊಟ್ಟಿ ಜಾತ್ರೆ

ಚಿದಂಬರ ಪಿ. ನಿಂಬರಗಿ

ಜಾತಿಮತಗಳ ನಡುವೆ ಅಂತಃಕಲಹ ಹೆಚ್ಚಿರುವ ಇಂದಿನ ದಿನಗಳಲ್ಲಿ ಶಿರೋಳದ ರೊಟ್ಟಿ ಊಟದ ಜಾತ್ರೆಗೆ ವಿಶೇಷ ಮಹತ್ವವಿದೆ. ಇದು ನಮ್ಮ ಹಳ್ಳಿಗಾಡಿನಲ್ಲಿ ಹಾಸುಹೊಕ್ಕಾದ ಸಹಬಾಳ್ವೆ ಮತ್ತು ಕೋಮು ಸಾಮರಸ್ಯಕ್ಕೆ ಪ್ರತೀಕ.

ಗದಗ ಜಿಲ್ಲೆ ನರಗುಂದ ತಾಲೂಕಿನ ಶಿರೋಳ ಗ್ರಾಮದ ತೋಂಟದಾರ್ಯ ಮಠದ ಜಾತ್ರೆಯು ಪ್ರತಿವರ್ಷ ಜನವರಿ ಅಥವಾ ಫೆಬ್ರುವರಿ ತಿಂಗಳಲ್ಲಿ ಮೂರು ದಿನಗಳ ಕಾಲ ಜರುಗಲಿದ್ದು, ಜಾತ್ರೆಯ ಎರಡನೆಯ ದಿನದಂದು ‘ರೊಟ್ಟಿ ಊಟದ ಜಾತ್ರೆ’ನಡೆಯುತ್ತದೆ.

ಪ್ರತಿ ವರ್ಷ ಸರಿಸುಮಾರು ರಾತ್ರಿ ಹತ್ತು ಗಂಟೆ ಹೊತ್ತಿಗೆ ಸರ್ವಧರ್ಮೀಯರು ಮಠದ ಆವರಣದಲ್ಲಿ ಈ ಸಾಮೂಹಿಕ ಭೋಜನ ಕೂಟಕ್ಕೆ ಸೇರುತ್ತಾರೆ. ಡಾ.ತೋಂಟದ ಸಿದ್ಧಲಿಂಗ ಮಹಾಸ್ವಾಮಿಗಳು ಹಾಗೂ ತೋಂಟದಾರ್ಯ ಶಿರೋಳ ಶಾಖಾ ಮಠದ ಗುರುಬಸವಸ್ವಾಮಿಗಳು ರೊಟ್ಟಿ ಊಟದ ಜಾತ್ರೆಯಲ್ಲಿ ಪಾಲ್ಗೊಂಡ ಜನರಿಗೆ ಊಟ ಬಡಿಸುವ ಮೂಲಕ ಇದಕ್ಕೆ ಚಾಲನೆ ಕೊಡುತ್ತಾರೆ.

ರೊಟ್ಟಿ ಊಟದ ಜಾತ್ರೆಯ ತಯಾರಿ ಒಂದು ತಿಂಗಳ ಮೊದಲೇ ಪ್ರಾರಂಭವಾಗುತ್ತದೆ. ಮೊದಲು ಸಣ್ಣ ಪ್ರಮಾಣದಲ್ಲಿ ಪ್ರಾರಂಭವಾದ ಈ ರೊಟ್ಟಿ ಜಾತ್ರೆ ಇತ್ತೀಚಿನ ದಿನಗಳಲ್ಲಿ ಹೆಚ್ಚುಹೆಚ್ಚು ಪ್ರಚಾರಗೊಂಡು ಬಹಳಷ್ಟು ಜನಪ್ರಿಯತೆಯನ್ನು ಪಡೆದುಕೊಂಡಿದೆ. ಈ ಜಾತ್ರೆಗೆ ಸರಿಸುಮಾರು 15 ರಿಂದ 20 ಚೀಲ ಜೋಳದ ಹಿಟ್ಟಿನಿಂದ ತಯಾರಿಸಿದ ಅಂದಾಜು 50 ಸಾವಿರಕ್ಕೂ ಹೆಚ್ಚು ರೊಟ್ಟಿಗಳು ಬೇಕಾಗುತ್ತವೆ. ಇಲ್ಲಿ ಎಲ್ಲವೂ ಸೇವಾ ಮನೋಭಾವನೆಯಿಂದಲೇ ನಡೆಯುತ್ತವೆ. ಶಿರೋಳ ಹಾಗೂ ಸುತ್ತಮುತ್ತಲಿನ ಗ್ರಾಮಗಳ ಭಕ್ತ ಸಮುದಾಯದಿಂದ ಈ ಕಾರ್ಯ ಯಶಸ್ವಿಯಗಿ ಮತ್ತು ನಿರಂತರವಾಗಿ ನಡೆಯುತ್ತಿದೆ.

ದಾಸೋಹಕ್ಕಾಗಿಯೇ ದಾನಿಗಳಿಂದ ಸಂಗ್ರಹಿಸಿದ ಜೋಳ, ಸಜ್ಜೆ ಧಾನ್ಯಗಳನ್ನು ಹಿಟ್ಟು ಮಾಡಿಸಿ ಅದರಿಂದ ಜಾತ್ರೆಗೆ ಬರುವಂತಹ ಜನರ ಪ್ರಮಾಣವನ್ನು ಗಮನದಲ್ಲಿಟ್ಟುಕೊಂಡು ಸಾವಿರಾರು ರೊಟ್ಟಿಗಳನ್ನು ಮಾಡಿಸಲಾಗುತ್ತದೆ. ಶಿರೋಳ ಹಾಗೂ ಸುತ್ತಲಿನ ಅನೇಕ ಹಳ್ಳಿಗಳಲ್ಲಿ ಜಾತಿಮತಗಳ ಭೇದ ಎಣಿಸದೇ ಮನೆಮನೆಗೆ ರೊಟ್ಟಿ ಮಾಡಲು ಹಿಟ್ಟು ಹಂಚಲಾಗುತ್ತದೆ. ಹಿಟ್ಟು ಪಡೆದುಕೊಂಡವರೆಲ್ಲರೂ ಅವರವರ ಮನೆಗಳಲ್ಲಿ ರೊಟ್ಟಿ ಮಾಡಿಕೊಂಡು ತಮ್ಮ ಮನೆಯಲ್ಲಿನ ಹತ್ತಿಪ್ಪತ್ತು ರೊಟ್ಟಿಗಳನ್ನು ಸೇರಿಸಿ ಶ್ರೀಮಠಕ್ಕೆ ತಂದು ಕೊಡುತ್ತಾರೆ.

ಅನೇಕರು ಹಳ್ಳಿಯಿಂದ ಬಂಡಿ (ಎತ್ತಿನ ಗಾಡಿ) ಕಟ್ಟಿಕೊಂಡು ಬಂದು ರೊಟ್ಟಿಗಳನ್ನು ಮಠಕ್ಕೆ ಒಪ್ಪಿಸಿ ಹೋಗುತ್ತಾರೆ. ಹೀಗೆ ಒಂದು ವಾರದ ಮುಂಚಿತವಾಗಿಯೇ ರೊಟ್ಟಿಗಳ ಸಂಗ್ರಹ ಕಾರ್ಯ ಭರ್ಜರಿಯಾಗಿ ನಡೆಯುತ್ತದೆ. ರೊಟ್ಟಿಗಳ ಸಂಗ್ರಹಕ್ಕಾಗಿಯೇ ಒಂದು ಕೋಣೆ ಮೀಸಲು. ಅಲ್ಲಿ ರಾಶಿರಾಶಿ ರೊಟ್ಟಿಗಳನ್ನು ವ್ಯವಸ್ಥಿತವಾಗಿ ಜೋಡಿಸಿಡಲಾಗುತ್ತದೆ. ಈ ಖಡಕ್ ರೊಟ್ಟಿಗಳಿಗೆ ಬೇಕಾಗುವ ಭಾಜಿ (ಪಲ್ಯ) ತಯಾರಿಸಲು ಸಹ ಅನೇಕ ದಿನಗಳ ಮೊದಲೇ ವಿವಿಧ ಕಾಯಿಪಲ್ಲೆಗಳ (ತರಕಾರಿ) ಸಂಗ್ರಹಕಾರ್ಯ ನಡೆಯುತ್ತದೆ. ಪುಂಡಿಪಲ್ಯ,ಮೆಂತೆಪಲ್ಯ, ಈರುಳ್ಳಿ, ಮೆಣಸಿನಕಾಯಿ, ಬದನೆಕಾಯಿ, ಸವತೆಕಾಯಿ, ಕುಂಬಳಕಾಯಿ, ಸುವರ್ಣಗಡ್ಡೆ, ಬೀಟ್‍ರೂಟ್, ಕ್ಯಾಬೇಜ್ ಸೇರಿದಂತೆ ಭಕ್ತರು ತಮ್ಮ ಹೊಲಗಳಲ್ಲಿ ಬೆಳೆದ ಎಲ್ಲಾ ಬಗೆಯ ತರಕಾರಿಗಳನ್ನು ಮಠಕ್ಕೆ ಭಕ್ತಿ ರೂಪದಲ್ಲಿ ಅರ್ಪಿಸುತ್ತಾರೆ. ಹೆಸರು, ಮಡಕೆ, ಅಲಸಂದೆ, ತೊಗರಿಬೇಳೆ ಸೇರಿದಂತೆ ಅನೇಕ ತರಹದ ದ್ವಿದಳ ಧಾನ್ಯಗಳನ್ನು ಮಾತ್ರವಲ್ಲದೇ ರೈತರು ತಮ್ಮ ಹೊಲಗದ್ದೆಗಳಲ್ಲಿ ಬೆಳೆದ ಪ್ರತಿಯೊಂದನ್ನು ದಾನರೂಪದಲ್ಲಿ ರೊಟ್ಟಿ ಊಟದ ಜಾತ್ರೆಗಾಗಿ ಮಠಕ್ಕೆ ತಂದು ಕೊಡುತ್ತಾರೆ. ಇವೆಲ್ಲವುಗಳನ್ನು ಸೇರಿಸಿ ರುಚಿಕಟ್ಟಾದ ಬಹು ಜೀವಸತ್ವಗಳ ಭಾಜಿಗಳನ್ನು ತಯಾರಿಸಲಾಗುತ್ತದೆ. ಜೊತೆಗೆ ಕರಿಂಡಿ, ಶೇಂಗಾ ಚಟ್ನಿ, ಗುರೆಳ್ಳು ಚಟ್ನಿ, ಅಗಸಿ ಚಟ್ನಿ ಹೀಗೆ ಹಲವು ಬಗೆಯ ಚಟ್ನಿಗಳು ಮತ್ತು ಬಾನದ ಉಂಡಿಗಳನ್ನು ‘ರೊಟ್ಟಿ ಊಟದ ಜಾತ್ರೆಗೆ’ ಸಿದ್ಧಪಡಿಸಲಾಗುತ್ತದೆ.

ಅದೇ ರೀತಿ ಗ್ರಾಮದ ಹಿರಿಯರು, ಯುವಕರು, ತೋಂಟದಾರ್ಯ ಶಿಕ್ಷಣ ಸಂಸ್ಥೆಯ ವಿದ್ಯಾರ್ಥಿ ಸಮೂಹ, ಶಿಕ್ಷಕಶಿಕ್ಷಕಿಯರು, ಉಪನ್ಯಾಸಕರು ಸೇರಿ ಸೂಕ್ತ ವ್ಯವಸ್ಥೆಯನ್ನು ಮಾಡಿ ಸೇರಿದ ಜನಸ್ತೋಮಕ್ಕೆಲ್ಲ ರೊಟ್ಟಿಪಲ್ಯಯ ಊಟಬಡಿಸಿ ಸಂತೃಪ್ತಿ ಪಟ್ಟುಕೊಳ್ಳುತ್ತಾರೆ. ಉತ್ತರ ಕರ್ನಾಟದಲ್ಲಿಯೇ ಪ್ರಸಿದ್ಧಿ ಪಡೆದಿರುವ ಈ ರೊಟ್ಟಿ ಊಟದ ಜಾತ್ರೆಗೆ ಪ್ರತಿ ವರ್ಷ ಕೆಲಸದ ನಿಮಿತ್ತ ಬೇರೆಬೇರೆ ಸ್ಥಳಗಲ್ಲಿರುವ ಕುಟುಂಬದ ಸದಸ್ಯರು, ಬಂಧುಬಾಂಧವರು ತಪ್ಪದೇ ಹಾಜರಿರುತ್ತಾರೆ. ಶಿರೋಳ ಗ್ರಾಮ ಸೇರಿದಂತೆ ಸುತ್ತಲಿನ ಗ್ರಾಮಗಳ ಹಾಗೂ ದೂರದ ಊರುಗಳ ಅವರ ಸಂಬಂಧಿಕರು, ಸ್ನೇಹಿತರನ್ನೂ ಈ ರೊಟ್ಟಿ ಊಟದ ಜಾತ್ರೆಗೆ ಕರೆಸುತ್ತಾರೆ.

ಗದಗಿನ ತೋಂಟದಾರ್ಯ ಮಠ ಹಾಗೂ ಇದರ ಶಾಖಾ ಮಠಗಳೆಲ್ಲವೂ ಜನಸಂಸೃತಿಯ ಕೇಂದ್ರಗಳಾಗುವ ನಿಟ್ಟಿನಲ್ಲಿ ಹತ್ತು ಹಲವು ಜನಪರ ಮತ್ತು ವೈಚಾರಿಕ, ಕಾರ್ಯಕ್ರಮಗಳ ಮೂಲಕ ನಿಜ ಜಾತ್ರೆಗೆ ಮುನ್ನುಡಿ ಬರೆದಿವೆ. ಅದರಂತೆ ಶಿರೋಳದ ರೊಟ್ಟಿ ಊಟದ ಜಾತ್ರೆಯು ಸರ್ವ ಜಾತಿಮತ, ಧರ್ಮದವರನ್ನು ಒಂದೇ ರೀತಿ ಕಾಣುವುದು, ಬಡವಶ್ರೀಮಂತ ಎಂಬ ಭೇದ ಎಣಿಸದೆ, ಎಲ್ಲ ವರ್ಗಗಳ ಜನರನ್ನು ಅಣ್ಣತಮ್ಮ ಅಕ್ಕತಂಗಿಯರೆಂಬ ಭಾವನೆಯೊಂದಿಗೆ ಸಮಾಜದಲ್ಲಿ ಸಾಮರಸ್ಯ ಮೂಡಿಸುವ ಉದ್ದೇಶ ಹೊಂದಿದೆ. ರೊಟ್ಟಿ ಜಾತ್ರೆ ಮೂಲಕ ವರ್ಗ, ವರ್ಣ ವ್ಯವಸ್ಥೆಯಿಂದ ಬಹುದೂರ ನಿಲ್ಲುವಂತೆ ಮಾಡಿದ ಕೀರ್ತಿಯು ಸರ್ವಧರ್ಮ ಸಮನ್ವಯದ ಶಾಂತಿಯ ಕೇಂದ್ರದಂತಿರುವ ಶಿರೋಳದ ತೋಂಟದಾರ್ಯ ಮಠಕ್ಕೆ ಸಲ್ಲುತ್ತದೆ. ಸಂಸ್ಕೃತಿ, ಶಿಕ್ಷಣ, ಸಾಹಿತ್ಯ, ಕೃಷಿ, ಕೋಮುಸಾಮರಸ್ಯ, ಸಮಾಜಸೇವೆ, ಮೊದಲಾದ ಕ್ಷೇತ್ರದಲ್ಲಿ ತೋಂಟದಾರ್ಯ ಶ್ರೀಗಳು ಮಾಡುತ್ತಿರುವ ಕಾರ್ಯ ಅನನ್ಯವಾದದು.

ರೇಣುಕಾ ನಿಡಗುಂದಿ

ಹಾಲುಂಡ ತವರೀಗಿ ಏನೆಂದು ಹಾಡಲೆ

July 2018

ಡಾ.ಧರಣಿದೇವಿ ಮಾಲಗತ್ತಿ

ಡುಂಡುಭ ವಿಲಾಪ

July 2018

ಡಾ.ಧರಣಿದೇವಿ ಮಾಲಗತ್ತಿ

‘ಪಾದುಕಾ ಕಿರೀಟಿ’

July 2018

ಎಚ್.ಗೋಪಾಲಕೃಷ್ಣ

ನಮ್ಮಟ್ಟೀಲಿ ಏನಾಯ್ತಂದ್ರ...

July 2018

ಪ್ರೊ.ಜಿ.ಎಚ್.ಹನ್ನೆರಡುಮಠ

ಓಡಿ ಹೋದ ದ್ವೆವಗಳು

June 2018

ಮೂಡ್ನಾಕೂಡು ಚಿನ್ನಸ್ವಾಮಿ

ಸಂಕಟದ ಪ್ರೇಮಿ

June 2018

ಹೇಮಲತಾ ಮೂರ್ತಿ

ವಿಷ ಕುಡಿದ ಮಕ್ಕಳು

June 2018

ಬಾಲಚಂದ್ರ ಬಿ.ಎನ್.

ಕರುನಾಡ ಕದನ

June 2018

ಡಾ.ಮ್ಯಾಥ್ಯೂ ಕೆ.ಎಮ್.

ನಾಗಚಂದ್ರನ ರಾಮಚಂದ್ರ ಚರಿತ ಪುರಾಣಂ

May 2018

ರಾಜು ಹೆಗಡೆ

ತೇಲುವ ಊರಿನ ಕಣ್ಮರೆ!

May 2018

ಎಸ್.ಬಿ.ಜೋಗುರ

ಗರ್ದಿ ಗಮ್ಮತ್ತು

May 2018

ಪ್ರೀತಿ ನಾಗರಾಜ್

ಮನಿಗ್ಯಷ್ಟು ಕ್ವಟ್ಟರಂತೆ?

May 2018

ಪ್ರೊ. ಜಿ. ಎಚ್. ಹನ್ನೆರಡುಮಠ

ಹೂವುಗಳ ನರಕ ಬೆಂಗಳೂರು !

April 2018

ಕೆ. ಸತ್ಯನಾರಾಯಣ

ನಮ್ಮೂರಲ್ಲೇ ಕಳ್ಳರಿದ್ದರು

April 2018

ವೈಲೆಟ್ ಪಿಂಟೊ

ಸ್ವಗತ (ಕವಿತೆ)

April 2018

ಅಮರಜಾ ಹೆಗಡೆ

ಬುದ್ಧನ ನಾಡಿನಲ್ಲಿ...

April 2018

ಹಜರತಅಲಿ ದೇಗಿನಾಳ

ನಮ್ಮೂರು ಲಂಡನ್‍ಹಳ್ಳ!

March 2018

ಡಾ. ಜಾಜಿ ದೇವೇಂದ್ರಪ್ಪ

ಜನ್ನನ ಯಶೋಧರ ಚರಿತೆ

March 2018

ಚಿದಂಬರ ಪಿ. ನಿಂಬರಗಿ

ಶಿರೋಳದ ರೊಟ್ಟಿ ಜಾತ್ರೆ

March 2018

ರಾಜೇಂದ್ರ ಪ್ರಸಾದ್

ರಾಮಮಂದಿರದ ಕನಸು

March 2018

ಗುರುಪ್ರಸಾದ್ ಡಿ. ಎನ್.

ದಿ ಪೋಸ್ಟ್: ಮಾಧ್ಯಮದ ಹೊಸ ಭರವಸೆ

March 2018

ಬಿದರಹಳ್ಳಿ ನರಸಿಂಹಮೂರ್ತಿ

ಗಂಗೆಗನ್ನಡಿಯಲ್ಲಿ ಗಾಲಿಬ್ ಬಿಂಬ

February 2018

ಸಂತೋಷ್ ನಾಯಕ್ ಆರ್.

ಬೂದಿ ಒಳಗಣ ಕೆಂಡ ಚಿಕ್ಕಲ್ಲೂರು ಜಾತ್ರೆ

February 2018

ಕೆ.ಎಲ್.ಚಂದ್ರಶೇಖರ್ ಐಜೂರ್

ಸ್ವರ್ಗದ ಮಕ್ಕಳು

February 2018