2nd ಮಾರ್ಚ್ ೨೦೧೮

ಜನ್ನನ ಯಶೋಧರ ಚರಿತೆ

ಡಾ. ಜಾಜಿ ದೇವೇಂದ್ರಪ್ಪ

ಇದು ಅಹಿಂಸೆಯನ್ನು ಸಾರುವ ಕಾವ್ಯವಾಗಿದೆ. ಈ ಕಾಲದ ಸ್ತ್ರೀವಾದದ ನೆಲೆಯಲ್ಲಿಯೂ ವಿಮರ್ಶಿಸಲು, ಮನಶಾಸ್ತ್ರೀಯ ಚೌಕಟ್ಟಿನಲ್ಲಿಟ್ಟು ಓದಲು ಸಹಜವಾಗಿ ಒಗ್ಗುತ್ತದೆ.

ಜನ್ನನು ಕನ್ನಡ ಚಂಪೂ ಕವಿಗಳಲ್ಲಿ ಮುಖ್ಯನಾದವನು. ಇವನ ಯಶೋಧರ ಚರಿತೆ ಎಂಬ ಕಾವ್ಯ ಕನ್ನಡದ ವಿಶಿಷ್ಟ ವಸ್ತುವುಳ್ಳದ್ದು. ಜೈನ ಧರ್ಮವು ಕರ್ನಾಟಕದಲ್ಲಿ ತುಂಬ ಪ್ರಚಾರದಲ್ಲಿದ್ದಾಗ ಎಂಟನೇ ಶತಮಾನದಿಂದ ಹದಿನಾಲ್ಕನೇ ಶತಮಾನದವರೆಗೆ ಅನೇಕ ಕಾವ್ಯಗಳು ಕನ್ನಡ ಸಾರಸತ್ವ ಲೋಕವನ್ನು ಸೂರೆಗೊಂಡಿವೆ. ಧಾರ್ಮಿಕ ಮತ್ತು ಲೌಕಿಕವೆಂಬ ಎರಡು ವಿನ್ಯಾಸದಲ್ಲಿ ಕಾವ್ಯ ಕೃಷಿಯು ಹತ್ತನೇ ಶತಮಾನದಲ್ಲಿ ಆರಂಭಿಸಿದ ಪಂಪನ ಮಾರ್ಗವೇ ಆನೆ ತುಳಿದ ಹಾದಿಯಾಗಿ ಮುಂದಣ ಕವಿಗಳಿಗೆ ಮಾದರಿಯಾಯಿತು. ಚಂಪೂ ಕವಿಗಳು ಜೈನ ಧರ್ಮದ ತತ್ವಸಿದ್ಧಾಂತವನ್ನು ಕಾವ್ಯ, ಕಥೆಯ ಮೂಲಕ ಹೇಳಿದರು. ಕನ್ನಡ ಸಾಹಿತ್ಯದಲ್ಲಿ ಲೌಕಿಕ ಕಾವ್ಯಗಳೆಲ್ಲ ಸಾಮಾನ್ಯವಾಗಿ ರಾಮಾಯಣ, ಮಹಾಭಾರತ ಕಥೆಯನ್ನಾಧರಿಸಿ ರಚನೆಗೊಂಡಿದ್ದೇ ಹೆಚ್ಚು.

ಜನ್ನ ಕವಿಯ ಯಶೋಧರ ಚರಿತೆ ಮಾತ್ರ ಲೌಕಿಕ ವಸ್ತು ಆಧರಿಸಿದ ನೂತನ ಪ್ರಯೋಗ. ಜೈನ ಕವಿಗಳು ಮನುಷ್ಯನ ಆಂತರಿಕ ಭಾವದಲ್ಲಿನ ಕಾಮ—ಪ್ರೇಮ—ಪ್ರೀತಿಯನ್ನು ಅಭಿವ್ಯಕ್ತಿ ಮಾಡಿದ ರೀತಿ ವಿಶಿಷ್ಟವಾದುದು. ಅದರಲ್ಲಿಯೂ ಜನ್ನ ಕವಿಯ ಈ ಕಾವ್ಯ ಪ್ರೇಮ—ವಿರಹ ಆ ಮೂಲಕ ಧರ್ಮದ ನೆರಳು ಹೇಗಿರುತ್ತದೆಂಬುದನ್ನು ತಿಳಿಸುತ್ತದೆ. ಹಿಂಸೆಯ ರೂಪ ಕೇವಲ ರಕ್ತಪಾತದಿಂದಲೇ ಆಗುವಂಥದ್ದೇನಲ್ಲ. ಮಾನಸಿಕ ಹಿಂಸಾ ಪ್ರವೃತ್ತಿಯ ಭಿನ್ನ ಆಯಾಮ ಹೇಗಿರುತ್ತದೆಂಬುದನ್ನು ಕಾವ್ಯ ಹೇಳುತ್ತದೆ.

ಜನ್ನ ಕವಿಯು ಯಶೋಧರ ಚರಿತೆಯನ್ನು ಕ್ರಿ.ಶ. 1209ರಲ್ಲಿ ಬರೆದನು. ತಂದೆ ಸುಮನೋಬಾಣನೆಂಬ ಬಿರುದಿನ ಶಂಕರ, ತಾಯಿ ಗಂಗಾದೇವಿ. ಈತ ಪಂಡಿತ ಮನೆತನದಿಂದ ಬಂದವನು. ಜನ್ನನ ಹೆಂಡತಿ ಲಕುಮಾದೇವಿ. ಕೇಶಿರಾಜ ಈತನ ಸಂಬಂಧಿ. ಜನ್ನ ಹೊಯ್ಸಳ ವೀರಬಲ್ಲಾಳನ ಆಸ್ಥಾನ ಕವಿ. ಅಷ್ಟೇ ಅಲ್ಲ, ಆ ಸಾಮ್ರಾಜ್ಯದ ಮಂತ್ರಿಯೂ, ದಂಡನಾಯಕನೂ ಆಗಿದ್ದನೆಂದು ಅವನು ಬರೆದ ಅನಂತನಾಥ ಪುರಾಣದ ಪದ್ಯವೊಂದರಿಂದ ತಿಳಿಯುತ್ತದೆ. ಜನ್ನನು ಹಲವು ಶಾಸನಗಳನ್ನು ಬರೆದಿದ್ದಾನೆ. ಬಸದಿಗಳನ್ನು ನಿರ್ಮಿಸಿದ್ದಾನೆ.

ಯಶೋಧರ ಚರಿತೆಯು ನಿಜವಾದ ಅರ್ಥದಲ್ಲಿ ಚಂಪೂ ಕಾವ್ಯ ಅಲ್ಲ. ಕಾರಣ ಅದರಲ್ಲಿ ಗದ್ಯವೇ ಇಲ್ಲ. ಕೇವಲ ಹತ್ತು ವೃತ್ತಗಳಿರುವ ಸಂಪೂರ್ಣ ಕಂದ ಪದ್ಯಗಳಿಂದ ಕೂಡಿ 311 ಪದ್ಯಗಳ ಕಾವ್ಯದ ಮೊತ್ತವಿದು. ಇದು ಸಂಸ್ಕೃತದಲ್ಲಿ ವಾದಿರಾಜ ಕವಿ ಬರೆದ ಯಶೋಧರ ಚರಿತದ ಅನುವಾದವೆನ್ನಬಹುದು. ತುಂಬ ಸರಳ, ನೇರ ಮನೋಹರವಾದ ಅಪರೂಪದ ರಚನೆಯಿದು. ಅನುವಾದ ಎಂದು ಎಲ್ಲಿಯೂ ತೋರಗೊಡದೆ ತನ್ನ ಪ್ರತಿಭಾ ಮೂಸೆಯಿಂದ ಜನ್ನ ಸಹಜ ಅಭಿವ್ಯಕ್ತಿ ಮಾಡಿದ್ದಾನೆ. ಜೀವದಯಾಷ್ಠಮಿಯೆಂಬ ಅಹಿಂಸಾ ವ್ರತವನ್ನಾಚರಿಸಿದ ಜೈನರು ಪಾರಣೆಯ ದಿನದಂದು ಕೇಳುವುದಕ್ಕಾಗಿ ಈ ಕಾವ್ಯ ಬರೆದಿದ್ದಾಗಿ ಕವಿ ಹೇಳಿಕೊಂಡಿದ್ದಾನೆ. ಹಾಗಾಗಿ ಇದು ಅಹಿಂಸೆಯನ್ನು ಸಾರುವ ಕಾವ್ಯವಾಗಿದೆ. ಆದರೂ ಕಥೆಯನ್ನೆಲ್ಲಾ ಓದಿದ ಮೇಲೆ ಈ ಕಾಲದ ಸ್ತ್ರೀವಾದದ ನೆಲೆಯಲ್ಲಿಯೂ ವಿಮರ್ಶಿಸಲು, ಮನಶಾಸ್ತ್ರೀಯ ಚೌಕಟ್ಟಿನಲ್ಲಿಟ್ಟು ಓದಲು ಸಹಜವಾಗಿ ಒಗ್ಗುತ್ತದೆ ಎಂಬುದು ಅರಿವಿಗೆ ಬರುತ್ತದೆ.

ಅಯೋಧ್ಯ ದೇಶದ ರಾಜಪುರದ ರಾಜನು ಮಾರಿದತ್ತ. ಒಂದು ವಸಂತದಲ್ಲಿ ಎಂದಿನಂತೆ ಚಂಡಮಾರಿ ದೇವತೆಯ ತೃಪ್ತಿಗಾಗಿ ನರಬಲಿ ಕೊಡುವುದಕ್ಕಾಗಿ ಇಬ್ಬರು ಎಳೆ ಹುಡುಗರನ್ನು ಹಿಡಿದು ತರಿಸುತ್ತಾನೆ. ಅವನ ಪ್ರಜೆಗಳು ಸಾವಿರಾರು ಸಂಖ್ಯೆಯ ಪ್ರಾಣಿಗಳನ್ನು ತಂದಿದ್ದಾರೆ. ಆ ಸನ್ನಿವೇಶದಲ್ಲಿ ಅಲ್ಲಿಗೆ ತರಲ್ಪಟ್ಟ ಮತ್ರ್ಯಯುಗಲಕವು ನಿಶ್ಚಿಂತೆಯಿಂದ ಮಾರಿಯ ಮನೆಯನ್ನು ಹೊಕ್ಕು, ಪದ್ಧತಿಯಂತೆ ಅರಸನನ್ನು ಹರಸಬೇಕೆಂದಿದ್ದಾಗ, ಅವರಲ್ಲಿ ಒಬ್ಬನಾದ ಅಭಯರುಚಿಕುಮಾರನು “ನಿರ್ಮಲ ಧರ್ಮದಿಂದೆ ಪಾಲಿಸು ಧರೆಯಂ” ಎನ್ನುತ್ತಾನೆ. ಅವರ ರೂಪಧೈರ್ಯಗಳು ರಾಜನನ್ನು ಬೆರಗುಗೊಳಿಸುತ್ತವೆ. ಆಗ ಮಾರಿದತ್ತನಿಗೆ ಅವರ ವಿಷಯವನ್ನು ತಿಳಿಯುವ ಕುತೂಹಲವುಂಟಾಯಿತು. ಅವನು ಅವರನ್ನು ಪ್ರಶ್ನಿಸಿದಾಗ ಅಭಯರುಚಿ ತಮ್ಮ ಜನ್ಮಾಂತರದ ಕಥೆಯನ್ನು ಹೇಳುತ್ತಾನೆ.

ಉಜ್ಜಯಿನಿಯ ಯಶೌಘರಾಜನಿಗೆ ತನ್ನ ಮಡದಿ ಚಂದ್ರಮತಿಯಲ್ಲಿ ಹುಟ್ಟಿದವನೇ ಯಶೋಧರ. ಅವನ ‘ಮನಃಪ್ರಿಯೆ’ ಅಮೃತಮತಿ. ಯಶೌಘನು ವೃದ್ಧಾಪ್ಯಕ್ಕಡಿಯಿಟ್ಟಾಗ ಮಗನಿಗೆ ಪಟ್ಟಿಕಟ್ಟಿ ತಪಸ್ಸಿಗೆ ಹೋಗುತ್ತಾನೆ. ಯಶೋಧರ ಅಮೃತಮತಿಯರು ಪರಸ್ಪರಾನುಬದ್ಧರಾಗಿ ಕಾಲ ಕಳೆಯುತ್ತಾರೆ.

ಒಂದು ರಾತ್ರಿ ಅವರಿಬ್ಬರೂ ಮಂಚದ ಮೇಲೆ ಮಲಗಿದ್ದಾಗ, ನಟ್ಟಿರುಳು ಅಮೃತಮತಿಗೆ ಪಕ್ಕದ ಗಜಶಾಲೆಯ ಮಾವಟಿಗನ ಹಾಡಿನ ಇಂಚರ ಕೇಳುತ್ತದೆ. ಅವಳು ಕೂಡಲೇ ಆತನಿಗೆ ತನ್ನ ಮನಸ್ಸನ್ನು ‘ಪಸಾಯದಾನಂಗೊಟ್ಟಳು’. ಅವನನ್ನು ನೋಡುವ, ಆಮೇಲೆ ಕೂಡುವ ಚಿಂತೆ ಅವಳಿಗೆ ಕಡಲ್ವರಿಯಿತು. ಬೆಳಗಾದ ಮೇಲೆ ತನ್ನ ಕೆಳದಿಯನ್ನು ಆತನ ಬಳಿಗೆ ಕಳುಹಿಸುತ್ತಾಳೆ. ಅವಳು ಅಷ್ಟವಂಕನನ್ನು ಕಂಡು ಹೇಸಿ ಫಕ್ಕನೆ ಮರಳುತ್ತಾಳೆ. ಅತ್ಯಾತುರದಿಂದಿದ್ದ ಅಮೃತಮತಿಯೊಡನೆ ‘ಇಂತಹ ಕಾಮದೇವನನ್ನು ಹೇಗೆ ಹುಡುಕಿ ಒಲಿದೆಯೋ!’ ಎಂದು ವ್ಯಂಗ್ಯವಾಗಿ ನುಡಿಯುತ್ತಾಳೆ. ಅಮೃತಮತಿಯ ಕಾಮ ಕೆರಳಿ, ವ್ಯಂಗ್ಯ ತಿಳಿಯದೆ, ಆತನ ರೂಪವನ್ನು ತಿಳಿಯಬಯಸುತ್ತಾಳೆ. ಅಷ್ಟಾವಕ್ರನ ವಿಕಾರಗಳ ವರ್ಣನೆಯನ್ನು ಕೇಳಿ, ಕಾಮದ ಕೋಟಲೆಯಿಂದ ‘ಪೊಲ್ಲಮೆಯೆ ಲೇಸು ನಲ್ಲರ ಮೆಯ್ಯೊಳ್’ ಎಂದು ಸಮಾಧಾನ ತಂದುಕೊಳ್ಳುತ್ತಾಳೆ. ಆನಂತರ ದೂತಿಗೆ ಲಂಚವಿತ್ತು ಮಾವಟಿಗನ ಒಡನಾಟವನ್ನು ದಕ್ಕಿಸಿಕೊಂಡು, ಕ್ರಮಕ್ರಮವಾಗಿ ಯಶೋಧರನಿಂದ ದೂರವಾಗುತ್ತಾಳೆ. ಇದರ ಸುಳಿವು ಸಿಕ್ಕಿದ ಯಶೋಧರನು ಪರೀಕ್ಷಿಸಿ ನೋಡಲು ಮುಂದಾಗುತ್ತಾನೆ. ಅಮೃತಮತಿ ಜಾರನಲ್ಲಿಗೆ ಹೋಗುವ ಹೊತ್ತಿಗೆ ಅವಳನ್ನು ಹಿಂಬಾಲಿಸಿ ಗುಟ್ಟನ್ನು ತಿಳಿಯುತ್ತಾನೆ. ಆಗ ಅವಳನ್ನೂ ಅವಳ ನಲ್ಲನನ್ನೂ ಎರಡು ಭಾಗ ಮಾಡಬೇಕೆಂಬ ಎಣಿಕೆ ಮೂಡಿ, ಕೂಡಲೇ ಧೃತಿ ಬಂದು, ಕೊಲ್ಲದೆ ಅವನು ಮರಳುತ್ತಾನೆ. ಮರುದಿನ ತನ್ನ ಗುಟ್ಟು ರಟ್ಟಾದುದು ಅಮೃತಮತಿಗೂ ಗೊತ್ತಾಗುತ್ತದೆ.

ಯಶೋಧರನು ಕದಡಿದ ಮನಸ್ಸಿನಿಂದ ತಾಯಿಯ ಬಳಿಗೆ ಹೋಗಿ ಹಿಂದಿನ ರಾತ್ರಿಯ ಘಟನೆಯನ್ನು ಕನಸಿನ ರೂಪದಿಂದ ತಿಳಿಸುವನು. ಆ ತಾಯಿ, ಚಂದ್ರಮತಿ ಪ್ರಾಣಬಲಿಯನ್ನು ಕೊಟ್ಟು ಶಾಂತಿ ಮಾಡುವಂತೆ ಮಗನನ್ನು ಒತ್ತಾಯಿಸುವಳು. ಕಟ್ಟಕಡೆಗೆ ಹಿಟ್ಟಿನ ಕೋಳಿಯನ್ನು ಬಲಿಕೊಡುವ ನಿರ್ಧಾರಕ್ಕೆ ಇಬ್ಬರೂ ಬರುತ್ತಾರೆ. ಹಾಗೆ ಬಲಿಕೊಡುತ್ತಿದ್ದಾಗ ಹಿಟ್ಟಿನ ಕೋಳಿಯಲ್ಲಿ ಸೇರಿದ್ದ ಬೆಂತರವೊಂದು ಕೋಳಿಯಂತೆ ಕೂಗುತ್ತದೆ. ದೊರೆಗೆ ದಿಗಿಲಾಗುತ್ತದೆ. ಅವನು ಮನೆಗೆ ಬಂದು, ಮಗ ಯಶೋಮತಿಗೆ ಪಟ್ಟಿಕಟ್ಟಿ ತಪ್ಪಸ್ಸಿಗೆ ಹೊರಡಲು ಸಿದ್ಧವಾಗುತ್ತಾನೆ. ಅದನ್ನು ತಿಳಿದ ಅಮೃತಮತಿ ಅವನನ್ನೂ ಅತ್ತೆಯನ್ನೂ ಔತಣಕ್ಕೆ ಬರಿಸಿ, ಅವರಿಬ್ಬರನ್ನೂ ವಿಷವಿಕ್ಕಿ ಕೊಲ್ಲುತ್ತಾಳೆ.

ಹಾಗೆ ಸತ್ತ ಈ ಇಬ್ಬರೂ ಹಲವು ಸಲ ಜನ್ಮವೆತ್ತಿ, ಕಡೆಗೆ ಯಶೋಮತಿಗೆ ಅಭಯರುಚಿ ಅಭಯಮತಿಗಳೆಂಬ ಅವಳಿ ಮಕ್ಕಳಾಗಿ ಹುಟ್ಟುತ್ತಾರೆ. ಅವರು ಎಳೆವೆಯಲ್ಲೆ ದೀಕ್ಷೆವಹಿಸಿ ಸುದತ್ತಾಚಾರ್ಯಾರ ಶಿಷ್ಯರಾಗುತ್ತಾರೆ. ಚರಿಗೆಗೆ ಹೊರಟಾಗ ಮಾರಿದತ್ತನ ತಳಾರನಾದ ಚಂಡಕರ್ಮನು ಅವರನ್ನು ಹಿಡಿದು, ಚಂಡಮಾರಿ ದೇವತೆಯ ಮನೆಗೊಯ್ದಾಗ ಅಭಯರುಚಿ ಈ ಕಥೆಯನ್ನು ಹೇಳುತ್ತಾನೆ. ಮಾರಿದತ್ತನ ಮನಸ್ಸು ಮಾರ್ಪಟ್ಟು ದೀಕ್ಷೆ ವಹಿಸುತ್ತಾನೆ. ಇವನು ಸತ್ತು, ಮುಂದೆ ಮೂರನೆಯ ಸ್ವರ್ಗದಲ್ಲಿ ದೇವನೆ ಆಗುತ್ತಾನೆ. ಅಭಯರುಚಿ ಅಭಯಮತಿಗಳೂ ಕಾಲಾಂತರದಲ್ಲಿ ಈಶಾನ್ಯ ಕಲ್ಪದಲ್ಲಿ ಹುಟ್ಟುತ್ತಾರೆ. ಅಮೃತಮತಿ ಧೂಮಪ್ರಭೆಯೆಂಬ ನರಕದಲ್ಲಿ ತೊಳಲುತ್ತಾಳೆ.

ಈ ಮೇಲಿನ ಕಥಾ ಭಾಗದಲ್ಲಿ ಜನ್ನ ಹಲವು ಸೂಕ್ಷ್ಮಗಳನ್ನು ಯಶೋಧರ ಚರಿತೆಯೆಂಬ ಖಂಡ ಕಾವ್ಯದಲ್ಲಿ ಹೇಳಿದ್ದಾನೆ. ಈ ಕಥೆಯಲ್ಲಿ ಮೂರು ವಿಭಿನ್ನ ದೃಷ್ಟಿಕೋನಗಳು ಇವೆ. ಅಧ್ಯಯನ ವಿಭಾಗದಲ್ಲಿ ಸಂಯೋಜಕರು. ಯಶೋಧರ, ಅಮೃತಮತಿ ಮತ್ತು ಮಾವುತ —ಈ ಮೂವರ ನಡುವೆ ನಡೆಯುವ ಸೂಕ್ಷ್ಮಾತಿಸೂಕ್ಷ್ಮ ಪ್ರೇಮ ಕಥನ ಇದು. ಜೈನ ಸೈದ್ಧಾಂತಿಕ ಚೌಕಟ್ಟಿನಲ್ಲಿ ಇಡೀ ಕಥೆ ಹೆಣೆದುಕೊಂಡಿದೆ. ಅಹಿಂಸೆಯನ್ನು ಪುನರುಜ್ಜೀವಿಸುವ ಇರಾದೆಯನ್ನು ಹೊಂದಿದೆ. ಆದರೆ ಇದರ ಒಳ ಸೂಕ್ಷ್ಮಗಳನ್ನು ಹೆಣ್ಣಿನ ಮನಸ್ಸು ಮತ್ತು ಗಂಡಿನ ಮನಸ್ಸು ಎಂಬ ಎರಡು ದಿಕ್ಕಿನಲ್ಲಿ ನೋಡಬಹುದು. ಅರಮನೆ, ಪ್ರಭುತ್ವ, ಗಜಶಾಲೆ, ಸಾಮಾನ್ಯ ಪ್ರಜೆ, ರಾಣಿವಾಸ ಇವೆಲ್ಲವನ್ನು ಇಲ್ಲಿ ಸೂಕ್ಷ್ಮವಾಗಿ ನೋಡಬೇಕು. ಯಶೋಧರ ಪರಮ ಸುಂದರನೂ, ಯುದ್ಧ ವೀರನೂ, ಪರಾಕ್ರಮಿಯೂ ಆಗಿದ್ದಾನೆ. ಅಲ್ಲದೇ ಅಮೃತಮತಿಯ ಸೌಂದರ್ಯಕ್ಕೆ ಮನಸೋತಿದ್ದಾನೆ. ಅಮೃತಮತಿಯು ಪರಮ ಸುಂದರಿಯೂ, ನಿಶಿತಮತಿಯೂ ಆಗಿದ್ದು ಆಕೆ ಸಂಗೀತವನ್ನು ನುಡಿಸುವ ಪರಮ ವಿಕಾರಿಯೂ, ಕ್ರೂರ ಮನಸ್ಸಿನವನೂ ಆದ ಮಾವುತನಿಗೆ ಮನಸೋತಿದ್ದಾಳೆ. ಇದು ಈ ಕಥೆಯಲ್ಲಿ ಜನ್ನ ರೂಪಿಸಿದ ವಿಚಿತ್ರವಾದ ವೈರುಧ್ಯ. ಇಲ್ಲಿನ ಹೆಸರುಗಳನ್ನು ಓದುಗರು ಗಮನಿಸಬೇಕು. ರಾಜ ಯಶೋಧರ. ಆದರೆ ವೈಯಕ್ತಿಕ ಜೀವನದಲ್ಲಿ ಅವನು ವಿಫಲನಾಗಿದ್ದಾನೆ. ರಾಣಿ ಅಮೃತಮತಿ. ಆಕೆ ಯಶೋಧರನಿಗೆ ವಿಷವಾಗಿದ್ದಾಳೆ. ಮಾವುತ ವಿಕಾರಿ. ಅಮೃತವನ್ನು ಉಣದೇ ವಿಫಲನಾಗುತ್ತಾನೆ. ಏನೂ ಅರಿಯದ ಯಶೋಧರನ ತಾಯಿ ಪುನರ್ಜನ್ಮ ಪಡೆಯುತ್ತಾಳೆ. ಸಂಕಲ್ಪ ಹಿಂಸೆಯೆಂಬ ಮನದೊಳಗಣ ಹಿಂಸಾ ಪ್ರವೃತ್ತಿಗೆ ಯಶೋಧರ ಬಲಿಯಾಗಿ ನಾನಾ ಜನ್ಮಗಳನ್ನು ಎತ್ತಿ ಬರಬೇಕಾಗುತ್ತದೆ. ಇಡೀ ಕಥೆಯಲ್ಲಿ ಯಾರಿಗೂ ಸುಖವಿಲ್ಲ. ಮಾನಸಿಕ ತೊಳಲಾಟದಲ್ಲಿಯೇ ಕಥೆ ಮುಂದುವರೆಯುತ್ತದೆ. ಇದು ಜನ್ನ ರೂಪಿಸಿದ ಅಥವಾ ಮೂಲ ಕಥೆ ರೂಪಿಸಿದ ಒಂದು ಜೈನ ತಾತ್ವಿಕ ತಂತ್ರ.

ಈ ಕಥೆಯಲ್ಲಿ ಬರುವ ಮಾವುತನ ಚಿತ್ರಣ ಭಯಾನಕವಾಗಿದೆ. ಹರಕು ತಲೆ, ತಗ್ಗು ಹಣೆ, ವಿಕಾರವಾದ ಕಣ್ಣು, ಜೊಲ್ಲು ಸೋರುವ ಬಾಯಿ, ಜಜ್ಜು ಮೂಗು, ಮುದುರಿದ ಕಿವಿ, ಉಬ್ಬು ಹಲ್ಲು, ಕುಸಿದ ಕೊರಳು, ಕುಗ್ಗಿದ ಎದೆ, ಗೂನು ಬೆನ್ನು, ಡೊಳ್ಳು ಹೊಟ್ಟೆ, ಸಣ್ಣ ಕುಂಡೆ ಪುರ್ರೆಗಳು, ವಿಪರೀತವಾದ ವಾಸನೆ. ಮಾವುತನ ದೈಹಿಕ ಚಹರೆಯ ಆಚೆ ಅವನ ಕೊಳಲುನಾದದ ಪ್ರತಿಭಾ ಕೌಶಲಕ್ಕೆ ಮನಸೋತ ಅಮೃತಮತಿಯ ದೃಢ ಪ್ರೀತಿ ಅವನನ್ನು ಕಂಡ ಮೇಲೆಯೂ ಉಳಿಯುತ್ತದೆ. ಅಷ್ಟೇಅಲ್ಲ ತಡವಾಗಿ ಬಂದ ಅಮೃತಮತಿಯನ್ನು ಹಿಗ್ಗಾಮುಗ್ಗಾ ಥಳಿಸುವ ಮಾವುತನ ಒಳಗೆ ಪುರುಷ ಅಹಂಕಾರವಿದೆ. ಅವನು ಎಷ್ಟೇ ಹೊಡೆದರೂ ಕೇರೆ ಹಾವಿನಂತೆ ಹೊರಳಾಡುತ್ತ ಅಮೃತಮತಿ ಹೇಳುವ, “ಉಳಿದ ಗಂಡಸರೆಲ್ಲ ಸಹೋದರ ಸಮಾನರು” ಎಂಬ ಮಾತು ಕಾವ್ಯದಲ್ಲಿ ಹೊಸ ವ್ಯಾಖ್ಯೆಯನ್ನು ನೀಡುತ್ತದೆ.

ಒಟ್ಟಾರೆ ಯಶೋಧರ ಚರಿತೆ ಒಂದು ಅಪ್ರತಿಮ, ಪ್ರೇಮ—ವಿರಹ ಕಾವ್ಯ. ಇದನ್ನು ಪಾರಣೆಯ ಕಾವ್ಯ ಎಂದು ಜನ್ನ ಕರೆದಿರುವುದರಲ್ಲಿ ಅಚ್ಚರಿಯೂ ಇದೆ. ಅಷ್ಟೇ ಅಲ್ಲ ಬದುಕಿನ ಮೀಮಾಂಸೆ ಪಾರಣೆಯ ಭಾಗವಾದಲ್ಲಿ ಅದು ಅಹಿಂಸೆಯ ಆಚೆ ನಿಲ್ಲುತ್ತದೆ ಎಂಬ ತತ್ವವು ಒಳಗಡೆ ಅಡಗಿರಬಹುದು. ಓದುಗರು ಒಂದೇ ಬೀಸಿನಲ್ಲಿ ಈ ಕಾವ್ಯವನ್ನು ಓದಿ ಸವಿಯಬಹುದು.

* ಲೇಖಕರು ಗಂಗಾವತಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಕನ್ನಡ ಸ್ನಾತಕೋತ್ತರ ಅಧ್ಯಯನ ವಿಭಾಗದಲ್ಲಿ ಸಂಯೋಜಕರು.

ಡಾ.ಜಗದೀಶ ಕೆರೆನಳ್ಳಿ

ಜನ್ನನ ಯಶೋಧರ ಚರಿತೆಯಲ್ಲಿ ಪರಿಸರ ವರ್ಣನೆ

ಜುಲೈ ೨೦೧೮

ರೇಣುಕಾ ನಿಡಗುಂದಿ

ಹಾಲುಂಡ ತವರೀಗಿ ಏನೆಂದು ಹಾಡಲೆ

ಜುಲೈ ೨೦೧೮

ನನ್ನ ಕ್ಲಿಕ್

ಜುಲೈ ೨೦೧೮

ಡಾ.ಧರಣಿದೇವಿ ಮಾಲಗತ್ತಿ

ಡುಂಡುಭ ವಿಲಾಪ

ಜುಲೈ ೨೦೧೮

ಡಾ.ಧರಣಿದೇವಿ ಮಾಲಗತ್ತಿ

‘ಪಾದುಕಾ ಕಿರೀಟಿ’

ಜುಲೈ ೨೦೧೮

ಮಂಜುನಾಥ್ ಲತಾ

ಕನ್ನಡ ಸಿನಿಮಾ: ಹೊಸ ಹರಿವು, ಅರಿವು

ಜುಲೈ ೨೦೧೮

ಎಚ್.ಗೋಪಾಲಕೃಷ್ಣ

ನಮ್ಮಟ್ಟೀಲಿ ಏನಾಯ್ತಂದ್ರ...

ಜುಲೈ ೨೦೧೮

ಡಾ.ವಿನಯಾ ಒಕ್ಕುಂದ

ಲಕ್ಷ್ಮೀಶನ ಜೈಮಿನಿ ಭಾರತ ಸೀತಾ ಪರಿತ್ಯಾಗ

ಜೂನ್ ೨೦೧೮

ಪ್ರೊ.ಜಿ.ಎಚ್.ಹನ್ನೆರಡುಮಠ

ಓಡಿ ಹೋದ ದ್ವೆವಗಳು

ಜೂನ್ ೨೦೧೮

ನನ್ನ ಕ್ಲಿಕ್

ಜೂನ್ ೨೦೧೮

ಮೂಡ್ನಾಕೂಡು ಚಿನ್ನಸ್ವಾಮಿ

ಸಂಕಟದ ಪ್ರೇಮಿ

ಜೂನ್ ೨೦೧೮

ಹೇಮಲತಾ ಮೂರ್ತಿ

ವಿಷ ಕುಡಿದ ಮಕ್ಕಳು

ಜೂನ್ ೨೦೧೮

ಮ.ಶ್ರೀ.ಮುರಳಿ ಕೃಷ್ಣ

ಸಂಬಂಧಗಳ ನವಿರು ನಿರೂಪಣೆ ದಿ ಕೇಕ್‍ಮೇಕರ್

ಜೂನ್ ೨೦೧೮

ಬಾಲಚಂದ್ರ ಬಿ.ಎನ್.

ಕರುನಾಡ ಕದನ

ಜೂನ್ ೨೦೧೮

ಡಾ.ಮ್ಯಾಥ್ಯೂ ಕೆ.ಎಮ್.

ನಾಗಚಂದ್ರನ ರಾಮಚಂದ್ರ ಚರಿತ ಪುರಾಣಂ

ಮೇ ೨೦೧೮

ಆರಿಫ್ ರಾಜಾ

...ಇದೀಗ ಎರಡು ನಿಮಿಷವಾಯಿತು!

ಮೇ ೨೦೧೮

ರಾಜು ಹೆಗಡೆ

ತೇಲುವ ಊರಿನ ಕಣ್ಮರೆ!

ಮೇ ೨೦೧೮

ನನ್ನ ಕ್ಲಿಕ್

ಮೇ ೨೦೧೮

ಎಸ್.ಬಿ.ಜೋಗುರ

ಗರ್ದಿ ಗಮ್ಮತ್ತು

ಮೇ ೨೦೧೮

ಪ್ರಸಾದ್ ನಾಯ್ಕ್

ಕ್ವೀನ್ ಆಫ್ ಕಟ್ವೆ ಕೊಂಪೆಯಲ್ಲರಳಿದ ಕಮಲ

ಮೇ ೨೦೧೮

ಪ್ರೀತಿ ನಾಗರಾಜ್

ಮನಿಗ್ಯಷ್ಟು ಕ್ವಟ್ಟರಂತೆ?

ಮೇ ೨೦೧೮

ಪ್ರೊ. ಜಿ. ಎಚ್. ಹನ್ನೆರಡುಮಠ

ಹೂವುಗಳ ನರಕ ಬೆಂಗಳೂರು !

ಎಪ್ರಿಲ್ ೨೦೧೮

ಉಮಾ ಎಚ್. ಎಂ.

ರಾಘವಾಂಕನ ‘ಹರಿಶ್ಚಂದ್ರ ಕಾವ್ಯ’

ಎಪ್ರಿಲ್ ೨೦೧೮

ಕೆ. ಸತ್ಯನಾರಾಯಣ

ನಮ್ಮೂರಲ್ಲೇ ಕಳ್ಳರಿದ್ದರು

ಎಪ್ರಿಲ್ ೨೦೧೮

ವೈಲೆಟ್ ಪಿಂಟೊ

ಸ್ವಗತ (ಕವಿತೆ)

ಎಪ್ರಿಲ್ ೨೦೧೮

ಅಮರಜಾ ಹೆಗಡೆ

ಬುದ್ಧನ ನಾಡಿನಲ್ಲಿ...

ಎಪ್ರಿಲ್ ೨೦೧೮

ಹಜರತಅಲಿ ದೇಗಿನಾಳ

ನಮ್ಮೂರು ಲಂಡನ್‍ಹಳ್ಳ!

ಮಾರ್ಚ್ ೨೦೧೮

ನನ್ನ ಕ್ಲಿಕ್

ಮಾರ್ಚ್ ೨೦೧೮

ಡಾ. ಜಾಜಿ ದೇವೇಂದ್ರಪ್ಪ

ಜನ್ನನ ಯಶೋಧರ ಚರಿತೆ

ಮಾರ್ಚ್ ೨೦೧೮

ಚಿದಂಬರ ಪಿ. ನಿಂಬರಗಿ

ಶಿರೋಳದ ರೊಟ್ಟಿ ಜಾತ್ರೆ

ಮಾರ್ಚ್ ೨೦೧೮

ರಾಜೇಂದ್ರ ಪ್ರಸಾದ್

ರಾಮಮಂದಿರದ ಕನಸು

ಮಾರ್ಚ್ ೨೦೧೮

ಗುರುಪ್ರಸಾದ್ ಡಿ. ಎನ್.

ದಿ ಪೋಸ್ಟ್: ಮಾಧ್ಯಮದ ಹೊಸ ಭರವಸೆ

ಮಾರ್ಚ್ ೨೦೧೮

ಸಾಬೂನು ಚಾಲಿತ ಬೋಟ್

ಮಾರ್ಚ್ ೨೦೧೮

ಬಿದರಹಳ್ಳಿ ನರಸಿಂಹಮೂರ್ತಿ

ಗಂಗೆಗನ್ನಡಿಯಲ್ಲಿ ಗಾಲಿಬ್ ಬಿಂಬ

ಫೆಬ್ರವರಿ ೨೦೧೮

ನನ್ನ ಕ್ಲಿಕ್

ಫೆಬ್ರವರಿ ೨೦೧೮

ಕಟ್ಟ ಕಡೆಯ ಗೆರೆಯ ಮೇಲೆ

ಫೆಬ್ರವರಿ ೨೦೧೮

ಸಂತೋಷ್ ನಾಯಕ್ ಆರ್.

ಬೂದಿ ಒಳಗಣ ಕೆಂಡ ಚಿಕ್ಕಲ್ಲೂರು ಜಾತ್ರೆ

ಫೆಬ್ರವರಿ ೨೦೧೮

ಕೆ.ಎಲ್.ಚಂದ್ರಶೇಖರ್ ಐಜೂರ್

ಸ್ವರ್ಗದ ಮಕ್ಕಳು

ಫೆಬ್ರವರಿ ೨೦೧೮

ಬಣ್ಣ ಬದಲಿಸುವ ಹೂವು

ಫೆಬ್ರವರಿ ೨೦೧೮