2nd March 2018

ನಮ್ಮೂರು ಲಂಡನ್‍ಹಳ್ಳ!

ಹಜರತಅಲಿ ದೇಗಿನಾಳ

ಅತ್ಯಂತ ಏಕಾಂತ ಸುಖಾಂತ ಕ್ರಿಯೆಯಾದ ಮಲವಿಸರ್ಜನೆ ನಮ್ಮೂರ ಅಕ್ಕ, ತಂಗಿ, ತಾಯಿ, ಆಯಿಯರ ಪಾಲಿಗೆ ಬಟಾಬಹಿರಂಗ ಮತ್ತು ಅತ್ಯಂತ ಸಂಕಟಕಾರಿಯಾಗಿದೆ. ಹಗಲಿನ ಈ ಸಂಕಟವನ್ನು ತಪ್ಪಿಸಿಕೊಳ್ಳಲು ಸ್ತ್ರೀಯರು ರಾತ್ರಿಯಾಗುವವರೆಗೆ ಕಾಯುತ್ತಾರೆ!

ಲಂಡ್ಯಾನ ಹಳ್ಳವು ನಮ್ಮೂರಿನಲ್ಲಿ ಹರಿಯುವ ಒಂದು ‘ಪ್ರಸಿದ್ಧ’ ಹಳ್ಳ. ಇದರ ಬಗ್ಗೆ ಬಹಳಷ್ಟು ಹೇಳಬೇಕಾಗಿದೆ. ದೇಶದೆಲ್ಲೆಡೆ ಸ್ವಚ್ಛಭಾರತದ ಕೂಗೆದ್ದು ಕೋಟಿ ಕೋಟಿಗಳು ದಿಳ್ಳಿಯಿಂದ ಹಳ್ಳಿಗಳತ್ತ ಹರಿದು ಬರುತ್ತಿರುವ ಈ ಹೊತ್ತಿನಲ್ಲಿ ಲಂಡ್ಯಾನಹಳ್ಳದಂತಹವು ಇನ್ನೂ ಜೀವಂತವಾಗಿವೆಯೆಂಬುದನ್ನು ಕಾಣಿಸಬೇಕಾಗಿದೆ. ನಮ್ಮ ನೈರ್ಮಲ್ಯ ಸಾಧನಾ ಪತಾಕೆಯಲ್ಲಿ ಎಷ್ಟು ತೂತುಗಳಿರಬಹುದು ಎಂಬುದಕ್ಕೆ ನಮ್ಮೀ ಹಳ್ಳವು ದಿಕ್ಸೂಚಿಯೂ ಹೌದು. ಬೆಂಗಳೂರು—ದಿಲ್ಲಿಯ ಏಸಿ ರೂಮಿನಲ್ಲಿ ಕುಳಿತವರಿಗೆ ಬಹುಶಃ ಇದು ಎಚ್ಚರಿಕೆಯ ಗಂಟೆಯೂ ಆಗಬಹುದು. ಬನ್ನಿ, ನಮ್ಮೂರ ನರಕವನ್ನು ನಿಮಗೂ ದರ್ಶನ ಮಾಡಿಸುತ್ತೇನೆ!

ನಮ್ಮೂರ ಬಸ್ ನಿಲ್ದಾಣದಿಂದ (ನಮ್ಮೂರಲ್ಲಿ ಬಸ್ ನಿಲ್ದಾಣವೆಂಬುದಿಲ್ಲ, ಬಸ್ ನಿಲ್ಲುವ ಸ್ಥಳವೆಂದು ಮಾತ್ರ ಇದರರ್ಥ) ಪೂರ್ವಕ್ಕೆ ಹೊರಡುವ ಹಾದಿ ಸುಮಾರು ಮೂರು ಮೈಲಿ ದೂರದ ಮಮದಾಪೂರಕ್ಕೆ ಹೋಗುತ್ತದೆ. ಈ ಹಾದಿಯನ್ನು ಬಳಸಿಕೊಂಡು ಮೊದಲು ಪೂರ್ವಾಭಿಮುಖವಾಗಿ ನಂತರ ತಿರುವು ಪಡೆದು ದಕ್ಷಿಣಾಭಿಮುಖವಾಗಿ ಹರಿಯುವ ಹಳ್ಳವನ್ನು ಲಂಡ್ಯಾನಹಳ್ಳ ಎಂದು ಕರೆಯುತ್ತಾರೆ. ನಮ್ಮೂರ ಕೇರಿಯ ಕೊನೆಯಂಚಿನಿಂದ ಇದರ ಪಾತ್ರ ಪ್ರಾರಂಭವಾಗುತ್ತದೆ. ಚಪ್ಪರಮನಿ ಮೌಲಾ ಮುತ್ಯಾನ ತ್ವಾಟದವರೆಗೆ ವಿಸ್ತಾರ ಹೊಂದಿದೆ. ಮಮದಾಪೂರ ರಸ್ತೆ ಪಕ್ಕದ ಎರಡು ಗಟಾರಗಳೇ ಲಂಡ್ಯಾನಹಳ್ಳದ ದ್ವಿಪಾತ್ರಗಳು.

ಹಾಗೆಂದು ನಮ್ಮ ಈ ಲಂಡ್ಯಾನ ಹಳ್ಳವನ್ನು ಭೀಕರವಾಗಿ ಹರಿದು ಅಲ್ಲೋಲಕಲ್ಲೋಲ ಉಂಟುಮಾಡುವ ಬೆಣ್ಣೆಹಳ್ಳದ ಸೋದರಿಯೆಂದು ತಿಳಿದೀರಿ! ನಮ್ಮದು ಹಾಗಲ್ಲ. ಇದರಲ್ಲಿ ಜನರನ್ನಲ್ಲ, ಒಂದು ಜುಜುಬಿ ಕಪ್ಪಿಯ ಮರಿಯನ್ನು ಎಳೆದೊಯ್ಯುವ ಸೆಳೆತವನ್ನು ನಾವು ಇಲ್ಲಿವರೆಗೆ ನೋಡಿಲ್ಲ. ಹೀಗಾಗಿ ನಮ್ಮೂರ ಯಾವ ಪಿಳ್ಳಿಯೂ ಇಲ್ಲಿಯವರೆಗೆ ಲಂಡ್ಯಾನ ಹಳ್ಳದಲ್ಲಿ ಹರಿದು ಹೋಗಿಲ್ಲ. ಉಕ್ಕು ಅಥವಾ ಸೊಕ್ಕು ಬರುವಷ್ಟು ಪಾತ್ರ—ಪರಿಸರ ಎರಡೂ ಅದಕ್ಕಿಲ್ಲ.

ನಮ್ಮೂರ ನಾರಿಯರ ಪಾಲಿಗೆ ಈ ಹಳ್ಳವು ತಲೆಮಾರಿನಿಂದ ತಲೆಮಾರಿಗೆ ಪಿತ್ರಾರ್ಜಿತವಾಗಿ ಹಂಚಿಕೆಯಾಗಿ ಬಂದ ಬಯಲು ಪಾಯಖಾನೆ. ಜಾತಿ ಧರ್ಮ, ಮಡಿಹುಡಿ ಎನ್ನದೆ ನಮ್ಮೂರ ಅರ್ಧ ಪ್ರಮಿಳೆಯರು ಶೌಚಕ್ಕಾಗಿ ದಾರಿಪಕ್ಕದ ಈ ಹಳ್ಳವನ್ನು ಆಶ್ರಯಿಸಿದ್ದಾರೆ. ನಮ್ಮೂರ ತಬಲೀಗ ಜಮಾತಿನ ಮುಲ್ಲಾಸಾಹೇಬರ ಬೀಬಿ ಕೂಡ ತನ್ನ ಸಮಸ್ತ ಬುರುಖಾಗಳ ನಡುವೇಯೇ ಇಲ್ಲಗೆ ಬರಬೇಕಾಗುತ್ತದೆಂದರೆ ಇದರ ಪ್ರಾಮುಖ್ಯ ಎಷ್ಟೆಂಬುದು ಮತ್ತು ಸರಕಾರದ ಸ್ವಚ್ಛತಾ ಯೋಜನೆಗಳಿಗೆ ನಮ್ಮೂರು ಹೇಗೆ ಪ್ರತಿಕ್ರಿಯಿಸುತ್ತಿದೆ ಎಂಬುದು ನಿಮಗೆ ಮನದಟ್ಟಾಗಬಹುದು. ಪರಿಣಾಮವಾಗಿ ನಮ್ಮೂರ ಈ ಹಳ್ಳವು ನೀರಿನಿಂದಲ್ಲ, ಲಂಡದಿಂದಲೇ ತುಂಬಿ ಲಂಡಮಯವಾಗಿ ಹೋಗಿದೆ. ಅಷ್ಟಿಷ್ಟು ಮಳೆ ಸುರಿದಾಗ ನೀರಿಗಿಂತ ಹೆಚ್ಚು ಇಲ್ಲಿ ಲಂಡ ಹರಿಯುತ್ತದೆ. ಆದ್ದರಿಂದ ಊರುಸುಧಾರಕ ಮಂಡಳಿಯ ನಾವು ಕೆಲವರು ಇದಕ್ಕೆ ಅನ್ವರ್ಥಕ ನಾಮದಲ್ಲಿ ‘ಲಂಡನ್’ ಎನ್ನುತ್ತೇವೆ.

ಮಮದಾಪೂರ ರಸ್ತೆಯ ಗಟಾರುಗಳೇ ಲಂಡ್ಯಾನಹಳ್ಳದ ಪಾತ್ರಗಳೆಂದು ನಾನು ಹಿಂದೆಯೇ ಹೇಳಿದೆ. ನಮ್ಮ ರಂಗ್ಯಾನ ಹೊಲಕ್ಕೆ ಹೋಗಬೇಕಾದರೆ ನಾವು ಈ ರಸ್ತೆಯ ಮೂಲಕವೇ ಹೋಗಬೇಕು. ಪ್ರತಿದಿನ ಹೋಗಿಬರುವಾಗ ಅನಿವಾರ್ಯವಾಗಿ ಈ ಹೊಲಸು ಹಳ್ಳದ ದರ್ಶನ ಮಾಡಬೇಕು. ಸರ್ವಾಕಾರ ತಾಳಿ ನೆಲಕ್ಕೊರಗಿದ ಲಂಡಗಳನ್ನು ನಿರ್ವಾಹವಿಲ್ಲದೆ ನೋಡಬೇಕು. ಕಣ್ಣನ್ನು ಮುಚ್ಚಿಕೊಳ್ಳಬಹುದು ಮೂಗನ್ನು ಹೇಗೆ ಮುಚ್ಚಿಕೊಳ್ಳುವುದು? ಅಯ್ಯೋಯ್ಯೋ! ಕಣ್ಣನ್ನಾದರೂ ಹೇಗೆ ಮುಚ್ಚಿಕೊಳ್ಳುತ್ತೀರಿ? ಒಂದೇ ಒಂದು ಹೆಜ್ಜೆ ತುಸುವೇ ಗತಿ ತಪ್ಪಿದರೂ ಯಾವುದಾದರೊಂದು ಲಂಡದ ತಲೆ ಸಪಾಟಾಗುವುದು ಗ್ಯಾರಂಟಿ. ಹೀಗಾಗಿ ಈ ಹಳ್ಳವನ್ನು ದಾಟುವಾಗ ನನ್ನ ಪಂಚೇಂದ್ರಿಯಗಳೆಲ್ಲ ನಡುಗಿ ಮೂರ್ಛೆ ಹೋಗುತ್ತವೆ.

ಮಳೆಗಾಲದಲ್ಲಂತೂ ಮೇಲೆ ಜಿಟಿಜಿಟಿ ಮಳೆ, ಕೆಳಗೆ ಕಚ್ಚಾರಸ್ತೆಯ ಕಿಚಿಪಿಚಿ ಕೆಸರು. ಅದರೊಂದಿಗೆ ಎಲ್ಲೆಂದರಲ್ಲಿ ಬೇಕಾಬಿಟ್ಟಿಯಾಗಿ ಮನುಷ್ಯರ ಹೇಲು, ದನಗಳ ಹೆಂಡಿ ಆಹಾ! ಕಾವ್ಯಮೀಮಾಂಸಕರು ಬೀಭತ್ಸ ರಸವನ್ನು ಬಹುಶಃ ನಮ್ಮ ಈ ಲಂಡ್ಯಾನ ಹಳ್ಳವನ್ನು ಕಣ್ಣಾರೆ ಕಂಡೇ ಮಾಡಿರಬೇಕು. ಇಂಥ ಹಳ್ಳವನ್ನು ಪ್ರತಿದಿನ ಹಾಯುವ ನಮಗೆ; ನಮ್ಮೂರ ಮಂದಿಗೆ ಸತ್ತ ನಂತರ ನರಕವಾಸವೆಂಬ ಪ್ರತ್ಯೇಕ ಶಿಕ್ಷೆಯಿರಲಿಕ್ಕಿಲ್ಲ ಎಂಬುದು ನನ್ನ ಭಾವನೆ!

ಇದು ಹಳ್ಳಹಾಯುವವರ ಪಾಡಾಯಿತು. ಪ್ರತಿದಿನ ಹಳ್ಳಕ್ಕೆ ಬರುವ ಹದಿಬದೆಯರ (ಹಾದಿಬದಿಯರ?) ಪಾಡನ್ನು ಬಹಳ ವ್ಯಸನದಿಂದ ನೋಡಬೇಕು. ಈ ಮಲಸ್ಥಳವು ಓಪನ್ ಥೇಟರ ಇದ್ದಂತೆ ಇದ್ದು ಯಾವುದೇ ಮುಚ್ಚುಮರೆಯಿಲ್ಲ. ಬಹಳ ದೂರದಿಂದಲೇ ಮಲವಿಸರ್ಜನೆಗೆ ಕುಳಿತ ಮಹಿಳೆಯರು ಗಂಡುಮಿಕಗಳ ಕಣ್ಣಿಗೆ ಬೀಳುತ್ತಾರೆ ಎಂಬುದು ಮಹಿಳಾ ಘನತೆಗೆ ಮಾಡುವ ಒಂದು ದೊಡ್ಡ ಅವಮಾನ. ಇದು ನಮ್ಮೂರ ಅರ್ಧಕ್ಕಿಂತ ಹೆಚ್ಚಿನ ಹೊಲಗಳನ್ನು ಸಂಪರ್ಕಿಸುವ ಏಕೈಕ ರಸ್ತೆಯಾಗಿರುವುದರಿಂದ ಹೊಲಗೆಲಸ, ಕೂಲಿಗೆಲಸಕ್ಕೆ ಹೋಗುವ ಪುರುಷರು ಅನಿವಾರ್ಯವಾಗಿ ತಲೆತಗ್ಗಿಸಿಕೊಂಡು ಇಲ್ಲಿಂದಲೇ ಸಾಗುತ್ತಾರೆ; ಅಥವಾ ಸಾಗುವ ಹಕ್ಕು ಪಡೆದಿದ್ದಾರೆ. ಅವರು ಸಮೀಪ ಬರುತ್ತಲೇ ಕುಳಿತ ಸ್ತ್ರೀಯರು ಎಷ್ಟೇ ಅರ್ಜಂಟ್ ಇದ್ದರೂ ಅನಿವಾರ್ಯವಾಗಿ ಎದ್ದು ನಿಲ್ಲುತ್ತಾರೆ. ಗಂಡುಪ್ರಾಣಿ ತುಸುವೇ ಮುಂದೆ ಹೋದನಂತರ (ಅವನು ತಿರುಗಿ ನೋಡುವುದಿಲ್ಲವೆಂಬ ಅಲಿಖಿತ ನೈತಿಕ ಭರವಸೆಯಂತೆ) ತಕ್ಷಣವೇ ಕುಳಿತುಕೊಳ್ಳುತ್ತಾರೆ. ಇದು ರಸ್ತೆಯಾಗಿರುವುದರಿಂದ ಒಬ್ಬರಹಿಂದೆ ಒಬ್ಬರು ಬರುತ್ತಲೇ ಇರುತ್ತಾರೆ. ಅತ್ಯಂತ ಏಕಾಂತ ಸುಖಾಂತ ಕ್ರಿಯೆಯಾದ ಮಲವಿಸರ್ಜನೆ ನಮ್ಮೂರ ಅಕ್ಕ, ತಂಗಿ, ತಾಯಿ, ಆಯಿಯರ ಪಾಲಿಗೆ ಹೀಗೆ ಬಟಾಬಹಿರಂಗ ಮತ್ತು ಅತ್ಯಂತ ಸಂಕಟಕಾರಿಯಾಗಿದೆ. ಹಗಲಿನ ಈ ಸಂಕಟವನ್ನು ತಪ್ಪಿಸಿಕೊಳ್ಳಲು ಸ್ತ್ರೀಯರು ರಾತ್ರಿಯಾಗುವವರೆಗೆ ಕಾಯುತ್ತಾರೆ. ಇದರ ನೇರ ಪರಿಣಾಮ ಮಲಬದ್ಧತೆ, ಮೂಲವ್ಯಾಧಿ...

ಇದರೊಂದಿಗೆ ನಮ್ಮೂರ ಕೆಲವು ದುಶ್ಯಾಸನ—ಕೀಚಕರಂಥವರಿಗೆ ತಮ್ಮ ಪ್ರತಾಪ ತೋರಲು ಈ ಲಂಡ್ಯಾನಹಳ್ಳ ವೇದಿಕೆ ಒದಗಿಸುತ್ತ ಬಂದಿದೆ. ರಾತ್ರಿ ಒಬ್ಬಂಟಿಯಾಗಿ ಬರುವ ಮಾನಸಿಯರು ಇವರಿಗೆ ಆಹಾರವಾಗುತ್ತಾರೆ. ಕೇರಿಯ ಹುಡುಗಿಯರ ಸೆರಗು ಜಗ್ಗಿದ ಘಟನೆಗಳಿಗಂತೂ ಲೆಕ್ಕವಿಲ್ಲ. ಟ್ರ್ಯಾಕ್ಟರ್, ಪಟಪಾಟಿಗಳಲ್ಲಿ ಬಂದು ಬೇಕೆಂದೇ ಹೈಬೀಮ್ ಬೆಳಕು ಹಚ್ಚಿಕೊಂಡು ಇಲ್ಲಿ ನಿಲ್ಲುತ್ತಾರೆ. ಆಮೂಲಕ ಮಹಿಳೆಯರು ರಾತ್ರಿಯಲ್ಲೂ ನಿಶ್ಚಿಂತೆಯಿಂದ ಮಲವಿಸರ್ಜಿಸುವುದಕ್ಕೆ ಭಂಗ ತರುತ್ತಾರೆ. ಈ ಅನಾಚಾರಗಳಿಗೆಲ್ಲಾ ಬಲಿಪಶುವಾಗಿಯೂ ನಮ್ಮೂರ ಸ್ತ್ರೀಯರು ಅವಮಾನದ ಭಯದಿಂದ ಏನೂ ಆಗಿಲ್ಲವೆಂಬಂತೆ ಸುಮ್ಮಗಿದ್ದುಬಿಡುತ್ತಾರೆ. ಘಟನೆಗಳು ಬಾಳ ನಡೆಯುತ್ತವೆ ಬಹಿರಂಗವಾಗುವ ಸುದ್ದಿಗಳು ಕೆಲವು ಮಾತ್ರ.

ಈ ಮಲಸ್ಥಳವು ನಮ್ಮೂರ ಸ್ತ್ರೀಯರು ಪರಸ್ಪರ ತಮ್ಮ ನೋವು ಆದಾನ—ಪ್ರದಾನ ಮಾಡಿಕೊಳ್ಳಲು ಪ್ರಶಸ್ತವಾಗಿರುವ ಜಾಗವೂ ಹೌದು. ಅತ್ತೆಯಿಂದ ಇಕ್ಕಿಸಿಕೊಂಡವರು ತಮ್ಮ ಪ್ರಲಾಪವನ್ನು ಗೆಳತಿಯರ ಮುಂದೆ ಹೇಳಿಕೊಳ್ಳುತ್ತಾರೆ. ಬಾಧಿತ ಅತ್ತೆ ಸೊಸೆಯನ್ನು ಪಳಗಿಸುವ ಹೊಸ ಹಿಕಮತ್ತುಗಳನ್ನು ಇಲ್ಲಿ ಕಲಿಯುತ್ತಾಳೆ. ಕುಡುಕ ಗಂಡನೊಂದಿಗೆ ಏಗಿ ಸಾಕಾಗಿರುವವರು ಮನಸ್ಸೊ ಇಚ್ಛೆ ಇಲ್ಲಿ ಕಣ್ಣೀರು ಸುರಿಸುತ್ತಾರೆ. ಇಂಥ ಅಮೇಧ್ಯ ಸ್ಥಳದಲ್ಲಿ ಕುಂತೋ ನಿಂತೋ ತಾಸುಗಟ್ಟಲೇ ಮಾತನಾಡುತ್ತಾ ತಮ್ಮ ಮನಸ್ಸುಗಳನ್ನು ಹಗುರಮಾಡಿಕೊಳ್ಳುತ್ತಾರೆ. ಹೀಗಾಗಿ ಇದೊಂದು ನಮ್ಮೂರ ಆಪ್ತಸಮಾಲೋಚನಾ ಕೇಂದ್ರ.

ಲಂಡ್ಯಾನ ಹಳ್ಳದ ಲಂಡದ ಕುರಿತು ಹೇಳುವಾಗ ನಮ್ಮೂರ ಲಂಡಪ್ರಿಯ ಎಮ್ಮೆಗಳ ಬಗ್ಗೆ ಎರಡು ಮಾತು ಹೇಳಿದರೆ ವಿಷಯಾಂತರವಾಗಲಿಕ್ಕಿಲ್ಲವೆಂದು ಭಾವಿಸುತ್ತೇನೆ. ನಮ್ಮೂರ ಎಮ್ಮೆಗಳಿಗೂ ಈ ಲಂಡನ್‍ಗೂ ಗಳಸ್ಯಕಂಠಸ್ಯ! ನಮ್ಮೂರ ಕೆಟ್ಟ ಎಮ್ಮೆಗಳು ಹೊಲಸು ಕಂಡರೆ ಸಾಕು ಮೂಸಿನೋಡುತ್ತ ವಾಸನೆ ಬಂದತ್ತ ರಪಾಟಿ ಓಡಿ ನಾನಾಕಾರ ತಾಳಿ ನೆಲಕ್ಕೊರಗಿದ ಲಂಡಗಳನ್ನು ನಿರ್ಲಜ್ಜತನದಿಂದ ಗಭಗಭನೆ ತಿಂದುಹಾಕುತ್ತವೆ. ಎಮ್ಮೆ ಮೇಯಿಸಲು ಹೊಲಕ್ಕೆ ಹೋಗುವಾಗ ಬರುವಾಗ ಇವು ಹಳ್ಳಕ್ಕಿಳಿದು ಹೊಲಸು ಮುಟ್ಟದಂತೆ ಹೊಡೆದುಕೊಂಡು ಹೋಗುವುದು ನಮಗೊಂದು ದೊಡ್ಡ ಮುಸ್ಕೀಲದ ಕೆಲಸವಾಗಿತ್ತು. ನಮ್ಮ ಅಡ್ಡಿ ನಿವಾರಿಸಿಕೊಂಡು ಈ ಮಲಲೋಲುಪ ಮಹಿಷಮಾತೆಯರು ಒಂದೆರಡು ಗುಂಪೆಗಳನ್ನಾದರೂ ತಿನ್ನದೆ ಬಿಡುತ್ತಿರಲಿಲ್ಲ. ಅವುಗಳ ಹಾಲು ಮೊಸರು ಚಪ್ಪರಿಸಿ ಉಣ್ಣುತ್ತಿದ್ದ ನಮಗೆ ಹೊಟ್ಟೆಯಲ್ಲಿ ಕೈ ಹಾಕಿ ಕಲಸಿದಂತಾಗುತ್ತಿತ್ತು.

ನಮ್ಮೂರಿಗೆ ಅಪಮಾನವಾಗಿರುವ ಈ ಕೆಟ್ಟ ಹಳ್ಳವು ನಾನು ಸಣ್ಣವನಾಗಿದ್ದಾಗ ಹೇಗಿತ್ತೋ ಈಗ ಅದಕ್ಕಿಂತಲೂ ಹೀನಾಯವಾಗಿದೆ. ಮೊದಲು ತುಸು ಗಟ್ಟಿಯಾಗಿದ್ದ ರಸ್ತೆ ಈಗ ಸಂಪೂರ್ಣ ಹಳ್ಳದೊಂದಿಗೆ ಹಳ್ಳವಾಗಿದೆ. ಸಾಹುಕಾರನೊಬ್ಬನ ಒತ್ತುವರಿಯಿಂದ ಅದರ ಅಗಲ ಕಿರಿದಾಗಿದೆ. ಎದುರಿಗೆ ಒಂದು ವಾಹನ ಬಂದರೆ ಒಬ್ಬರು ಈ ಹೊಲಸು ತುಳಿಯದೆ ಮುಂದೆ ಹೋಗುವಂತಿಲ್ಲ. ನಮ್ಮೂರ ಜನಸಂಖ್ಯೆ ಹೆಚ್ಚಿದಂತೆ ಇಲ್ಲಿಯ ಹೊಲಸಿನ ಪ್ರಮಾಣವೂ ಜಾಸ್ತಿಯಾಗಿದೆ. ಈಗೊಂದು ವರ್ಷದ ಹಿಂದೆ ಇಲ್ಲೊಂದು ಸಾಮೂಹಿಕ ಶೌಚಾಲಯ ಕಟ್ಟಿಸಿದ್ದಾರೆ. ಆದರೆ ಅದಕ್ಕಿನ್ನೂ ನೀರಿನ ಸಂಪರ್ಕ ಕೊಟ್ಟಿಲ್ಲ. ನೀರಿನ ಸಂಪರ್ಕ ಕೊಡುವ ವೇಳೆಗೆ ಅದರ ಬಾಗಿಲುಗಳನ್ನು ನಮ್ಮೂರ ಹೊಟ್ಟೆಬಾಕ ಗೊರಲಿಗಳು ತಿಂದು ಹಾಕಿರುತ್ತವೆ. ಯಥಾರೀತಿ ಮಹಿಳೆಯರ ಬಯಲುಶೌಚ ಮುಂದುವರೆಯುತ್ತದೆ...

ಈ ಆರ್ಥಿಕ ವರ್ಷದಲ್ಲಿ ಇಷ್ಟು ಶೌಚಾಲಯಗಳ ನಿರ್ಮಾಣ, ಇಷ್ಟು ಕೋಟಿಗಳನ್ನು ಖರ್ಚು, ಇಷ್ಟು ಊರುಗಳಿಗೆ ಹೋಗಿ ಬೆಳಗ್ಗೆ ಸೀಟಿ ಊದಿದ್ದೇವೆ, ಇಷ್ಟು ಗುಲಾಬಿ ಹೂ ಕೊಟ್ಟಿದ್ದೇವೆ... ಇತ್ಯಾದಿ ಸುದ್ದಿಗಳನ್ನು ನೀವು ಸಾಕಷ್ಟು ಕೇಳಿದ್ದೀರಿ. ಚಿಣಗಿ ಹಾವಿನಂತೆ ಈ ಮಂದಿ ಇಷ್ಟೆಲ್ಲಾ ಮಾಡುತ್ತಿರುವಾಗ ಈ ಲಂಡ್ಯಾನಹಳ್ಳದಂತವು ಈ ಮಹಾನ್ ದೇಶದಲ್ಲಿರಲು ಹೇಗೆ ಸಾಧ್ಯವೆಂದು ನೀವು ಕೇಳಬಹುದು. ದೀಪದ ಬುಡದಲ್ಲಿ ಕತ್ತಲು ಎಂದು ಇದಕ್ಕೇ ಹೇಳುತ್ತಾರೆ.

ಈ ಬರಹ ಓದಿದ ನಂತರ ಸಾಹಸಪ್ರಿಯರಾದ ತಾವು ಈ ‘ಲಂಡನ ದುರಂತ’ ಕುರಿತು ಸಂಶೋಧನೆ ಮತ್ತು ಸಮೀಕ್ಷೆಗೆಂದು ಬರುವುದಾದರೆ ಬನ್ನಿ. ಆದರೆ ಕೈಕಾಲು ಮೂಗು ಗಟ್ಟಿಮುಟ್ಟಿದ್ದವರು ಮಾತ್ರ ಬನ್ನಿ. ಒಂದು ಶುದ್ಧಗಾಳಿಯ ಆಮ್ಲಜನಕದ ಹೂಜಿಯನ್ನು ಬೆನ್ನಿಗೆ ಕಟ್ಟಿಕೊಳ್ಳಿ. ಮೊಳಕಾಲದವರೆಗೆ ಬರುವಂತೆ ಬೂಟು ಹಾಕಿಕೊಳ್ಳಿ. ಬರುವಾಗ ಮರೆಯದೆ ಒಂದು ಅಂಬುಲೆನ್ಸು ಮತ್ತು ಸ್ಟ್ರೇಚರ್ ತೆಗೆದುಕೊಂಡು ಬನ್ನಿ. ಹಳ್ಳದ ನಡುವೆ ನೀವೆಲ್ಲಿಯಾದರೂ ತಲೆ ತಿರುಗಿ ಬಿದ್ದರೆ ಇವೆಲ್ಲ ಸಿದ್ಧತೆ ಅವಶ್ಯವಾಗಿ ಬೇಕಾಗುತ್ತವೆ. ಹಾಗೊಂದು ವೇಳೆ ಬಿದ್ದರೂ ಚಿಂತೆಯಿಲ್ಲ ಮಲಶಯ್ಯೆಯ ಕೀರ್ತಿ ನಿಮ್ಮದಾಗುತ್ತದೆ!

ರೇಣುಕಾ ನಿಡಗುಂದಿ

ಹಾಲುಂಡ ತವರೀಗಿ ಏನೆಂದು ಹಾಡಲೆ

July 2018

ಡಾ.ಧರಣಿದೇವಿ ಮಾಲಗತ್ತಿ

ಡುಂಡುಭ ವಿಲಾಪ

July 2018

ಡಾ.ಧರಣಿದೇವಿ ಮಾಲಗತ್ತಿ

‘ಪಾದುಕಾ ಕಿರೀಟಿ’

July 2018

ಎಚ್.ಗೋಪಾಲಕೃಷ್ಣ

ನಮ್ಮಟ್ಟೀಲಿ ಏನಾಯ್ತಂದ್ರ...

July 2018

ಪ್ರೊ.ಜಿ.ಎಚ್.ಹನ್ನೆರಡುಮಠ

ಓಡಿ ಹೋದ ದ್ವೆವಗಳು

June 2018

ಮೂಡ್ನಾಕೂಡು ಚಿನ್ನಸ್ವಾಮಿ

ಸಂಕಟದ ಪ್ರೇಮಿ

June 2018

ಹೇಮಲತಾ ಮೂರ್ತಿ

ವಿಷ ಕುಡಿದ ಮಕ್ಕಳು

June 2018

ಬಾಲಚಂದ್ರ ಬಿ.ಎನ್.

ಕರುನಾಡ ಕದನ

June 2018

ಡಾ.ಮ್ಯಾಥ್ಯೂ ಕೆ.ಎಮ್.

ನಾಗಚಂದ್ರನ ರಾಮಚಂದ್ರ ಚರಿತ ಪುರಾಣಂ

May 2018

ರಾಜು ಹೆಗಡೆ

ತೇಲುವ ಊರಿನ ಕಣ್ಮರೆ!

May 2018

ಎಸ್.ಬಿ.ಜೋಗುರ

ಗರ್ದಿ ಗಮ್ಮತ್ತು

May 2018

ಪ್ರೀತಿ ನಾಗರಾಜ್

ಮನಿಗ್ಯಷ್ಟು ಕ್ವಟ್ಟರಂತೆ?

May 2018

ಪ್ರೊ. ಜಿ. ಎಚ್. ಹನ್ನೆರಡುಮಠ

ಹೂವುಗಳ ನರಕ ಬೆಂಗಳೂರು !

April 2018

ಕೆ. ಸತ್ಯನಾರಾಯಣ

ನಮ್ಮೂರಲ್ಲೇ ಕಳ್ಳರಿದ್ದರು

April 2018

ವೈಲೆಟ್ ಪಿಂಟೊ

ಸ್ವಗತ (ಕವಿತೆ)

April 2018

ಅಮರಜಾ ಹೆಗಡೆ

ಬುದ್ಧನ ನಾಡಿನಲ್ಲಿ...

April 2018

ಹಜರತಅಲಿ ದೇಗಿನಾಳ

ನಮ್ಮೂರು ಲಂಡನ್‍ಹಳ್ಳ!

March 2018

ಡಾ. ಜಾಜಿ ದೇವೇಂದ್ರಪ್ಪ

ಜನ್ನನ ಯಶೋಧರ ಚರಿತೆ

March 2018

ಚಿದಂಬರ ಪಿ. ನಿಂಬರಗಿ

ಶಿರೋಳದ ರೊಟ್ಟಿ ಜಾತ್ರೆ

March 2018

ರಾಜೇಂದ್ರ ಪ್ರಸಾದ್

ರಾಮಮಂದಿರದ ಕನಸು

March 2018

ಗುರುಪ್ರಸಾದ್ ಡಿ. ಎನ್.

ದಿ ಪೋಸ್ಟ್: ಮಾಧ್ಯಮದ ಹೊಸ ಭರವಸೆ

March 2018

ಬಿದರಹಳ್ಳಿ ನರಸಿಂಹಮೂರ್ತಿ

ಗಂಗೆಗನ್ನಡಿಯಲ್ಲಿ ಗಾಲಿಬ್ ಬಿಂಬ

February 2018

ಸಂತೋಷ್ ನಾಯಕ್ ಆರ್.

ಬೂದಿ ಒಳಗಣ ಕೆಂಡ ಚಿಕ್ಕಲ್ಲೂರು ಜಾತ್ರೆ

February 2018

ಕೆ.ಎಲ್.ಚಂದ್ರಶೇಖರ್ ಐಜೂರ್

ಸ್ವರ್ಗದ ಮಕ್ಕಳು

February 2018