2nd ಮಾರ್ಚ್ ೨೦೧೮

ರಾಮಾಯಣಕ್ಕೆ ಸೃಜನಶೀಲ ಸ್ಪಂದನ: ‘ಉತ್ತರಕಾಂಡ’

ಜಿ. ಬಿ. ಹರೀಶ್

ಮುಖ್ಯವಾಗಿ ಈ ಕಾದಂಬರಿಯಲ್ಲಿ ಸ್ತ್ರೀಪ್ರಧಾನ ಕಥನ ಕಂಡು ಬರುತ್ತದೆ. ಊರ್ಮಿಳೆ, ಸೀತೆ ಇವರು ಕೇಂದ್ರದಲ್ಲಿದ್ದಾರೆ. ಆದರೆ ರಾಮನ ಪಾತ್ರ ಪೂರ್ಣವಾಗಿ ಮೂಲರಾಮಾಯಣಕ್ಕಿಂತ ವ್ಯತಿರಿಕ್ತವಾಗಿ ಚಿತ್ರವಾಗಿಲ್ಲ.

ಬೈರಪ್ಪನವರು ಯಾವುದೇ ಕಾದಂಬರಿ ಬರೆದರೂ ಅದಕ್ಕೆ ಸಾವಿರಾರು ಓದುಗರು ಇರುತ್ತಾರೆ. ಅವರು ಕಾದಂಬರಿ ಬರೆಯುತ್ತಾರೆ ಎನ್ನುವುದು ಹೇಗೋ ಸುದ್ದಿಯಾಗುತ್ತದೆ. ಆನಂತರ ಕಾತರದಿಂದ ಕಾಯುತ್ತಾರೆ. ಒಂದು ದೊಡ್ಡ ತಾರಾಗಣವಿರುವ ಸಿನಿಮಾ ಬಿಡುಗಡೆ ಹೇಗೋ ಹಾಗೆ ತವಕದ ವಾತಾವರಣ ಸೃಷ್ಟಿಸುವುದು ಅವರ ಕಾದಂಬರಿ ಕಲೆಯ ಶಕ್ತಿಯಾಗಿದೆ. ‘ಉತ್ತರಕಾಂಡ’ ಭೈರಪ್ಪನವರ 25ನೇ ಕಾದಂಬರಿ. ರಾಮಾಯಣ ಮತ್ತು ಮಹಾಭಾರತದಿಂದ ಭಾರತೀಯ ಮನಸ್ಸು ಬಿಡಿಸಿಕೊಂಡಿಲ್ಲ, ಅದರ ಥೀಮುಗಳೇ ಮತ್ತೆ ಮತ್ತೆ ಆವರ್ತವಾಗುತ್ತಿವೆ ಅನ್ನುತ್ತಿದ್ದರು ಗೋಪಾಲಕೃಷ್ಣ ಅಡಿಗರು. ಕನ್ನಡದ ಕಾವ್ಯ ಸಾಹಿತ್ಯ ಪರಂಪರೆ ಈ ಮಾತಿಗೆ ಪುಷ್ಟಿ ಕೊಡುತ್ತದೆ.

ಮಹಾಕವಿ ಕುಮಾರವ್ಯಾಸ ಒಂದು ಮಾತು ಹೇಳಿದ್ದಾನೆ. ‘ತಿಣಿಕಿದನು ಫಣಿರಾಯ ರಾಮಾಯಣದ ಕವಿಗಳ ಭಾರದಲಿ’. ಆದರೂ ನಾಗಚಂದ್ರ, ತೊರವೆ ನರಹರಿ, ಮುದ್ದಣ, ಮಾಸ್ತಿ, ಕುವೆಂಪು, ವೀರಪ್ಪ ಮೊಯ್ಲಿ ಮುಂತಾದ ಸಾಹಿತಿಗಳು ರಾಮಾಯಣ ಕುರಿತು ಕಾವ್ಯಗಳನ್ನು ರಚಿಸಿದ್ದಾರೆ. ಚಿತ್ರಪಟ ರಾಮಾಯಣ ಸೇರಿದಂತೆ ಅನೇಕ ಜಾನಪದ ಮತ್ತು ಬುಡಕಟ್ಟು ರಾಮಾಯಣಗಳಿವೆ. ‘ತಾರಾ ಜಾನಕಿಯಂ ಪೋಗಿ ತಾರಾ ತರಳ ನೇತ್ರೆಯಂ’ ಎಂಬ ಮಾತು ಆದಿಕೃತಿ ಕವಿರಾಜಮಾರ್ಗದಲ್ಲೇ ಇದೆ. ಸೀತೆಯ ಮನಸ್ಥಿತಿಯ ಹುಡುಕಾಟ ಒಂದಲ್ಲ ಒಂದು ರೀತಿಯಲ್ಲಿ ಕನ್ನಡದ ಮನಸ್ಸನ್ನು ಸೆಳೆದಿದೆ. ಎ.ಎನ್.ಮೂರ್ತಿರಾಯರು ಬರೆದ ‘ಸೀತಾಪರಿತ್ಯಾಗ’ ಕೃತಿಯಲ್ಲಿ ವಾಲ್ಮೀಕಿ ‘ರಾಮಾಯಣ’, ಕಾಳಿದಾಸನ ‘ರಘುವಂಶ’ ಮತ್ತು ಲಕ್ಷ್ಮೀಶನ ‘ಜೈಮಿನೀಭಾರತ’ದಲ್ಲಿನ ಸೀತಾಪರಿತ್ಯಾಗ ಕುರಿತ ವಿವೇಚನೆ ಇದೆ. ಗಮನಿಸಬೇಕಾದ ಒಂದು ಸ್ವಾರಸ್ಯವೆಂದರೆ ರಾಮಾಯಣ ಬರೆದವರು ಮಹಾಭಾರತ ಬರೆದದ್ದು, ಮಹಾಭಾರತ ಬರೆದವರು ರಾಮಾಯಣ ಬರೆದದ್ದು ಕಮ್ಮಿ. ಆದರೆ ‘ಪರ್ವ’ ಬರೆದ ಭೈರಪ್ಪನವರೇ ರಾಮಾಯಣ ಆಧರಿಸಿದ ‘ಉತ್ತರಕಾಂಡ’ ಕಾದಂಬರಿ ರಚಿಸಿ ಒಂದು ಹೊಸ ಸೀಮೋಲ್ಲಂಘನೆ ಮಾಡಿದ್ದಾರೆ. ಭೈರಪ್ಪನವರ ಪರ್ವ ವ್ಯಾಸಭಾರತಕ್ಕೆ ಮಾಡಿದ ಸೃಜನಶೀಲ ಪ್ರತಿಕ್ರಿಯೆಯಾದಂತೆ, ‘ಉತ್ತರಕಾಂಡ’ ಕಾದಂಬರಿ ವಾಲ್ಮೀಕಿ ರಾಮಾಯಣಕ್ಕೆ ನೀಡಿದ ಸೃಜನಾತ್ಮಕ ಸ್ಪಂದನ. ಹೀಗೆ ಅವರು ವ್ಯಾಸ ವಾಲ್ಮೀಕಿಗಳ ಋಣ ತೀರಿಸಿದ್ದಾರೆ.

ವೇದ—ಉಪನಿಷತ್ತಿನ ಗಂಭೀರ ತಾತ್ವಿಕತೆಗಿಂತ ನಮ್ಮ ಮನಸ್ಸಿಗೆ ಹೆಚ್ಚು ಹತ್ತಿರವಾಗುವುದು ಕಥಾಸಾಹಿತ್ಯ. ರಾಮಾಯಣ—ಮಹಾಭಾರತ ಭಾರತದ ಎರಡು ಭಾಷೆಗಳು ಎಂದು ಕೆ.ವಿ.ಸುಬ್ಬಣ್ಣ ಹೇಳಿದ್ದರು. ಅದು ದಿಟ. ಸೀತೆಯ ಸಂಕಟ, ದ್ರೌಪದಿಗಾದ ಮಾನಸಿಕ ಗಾಯ, ಹನುಮನ ಭಕ್ತಿ, ಲಕ್ಷ್ಮಣ—ಭರತ ಇವರ ರಾಮಪ್ರೇಮ, ಭೀಮ—ಅರ್ಜುನರ ಪರಾಕ್ರಮ ಇವು ಭಾರತೀಯ ಮನಸ್ಸನ್ನು ಯುಗಯುಗಗಳಿಂದ ಆಳುತ್ತಿವೆ. ಈ ಪಾತ್ರಗಳನ್ನು ಕಾದಂಬರಿಯ ಚೌಕಟ್ಟಿನಲ್ಲಿ ತರಬಹುದು. ಪರ್ವದಲ್ಲಿ ಭೈರಪ್ಪನವರು ಈ ಕೆಲಸವನ್ನು ಸಮರ್ಥವಾಗಿ ಮಾಡಿದ್ದರು. ಕಾಮ, ಅಧಿಕಾರದ ಮದ ಇವು ಪರ್ವದ ಪ್ರಮುಖ ಪ್ರಶ್ನೆಗಳು. ‘ಉತ್ತರಕಾಂಡ’ದಲ್ಲೂ ಭೈರಪ್ಪನವರು ಅನುಸರಿಸುವ ವಾಸ್ತವಮಾರ್ಗದ ಅಥವಾ ಅದಕ್ಕೆ ಹತ್ತಿರವಾದ ನಿರೂಪಣೆ ಇದೆ. ಮಾನವಶಾಸ್ತ್ರೀಯ ವಿಧಾನಗಳ ಅಳವಡಿಕೆ ಇದೆ. ಆದರೆ ಮನಶ್ಶಾಸ್ತ್ರೀಯ ಅಂಶಗಳು ಅಲ್ಲಿಗಿಂತ ಇಲ್ಲಿ ಕಮ್ಮಿ. ಇದಕ್ಕೆ ಕಾರಣವೆಂದರೆ ರಾಮಾಯಣದ ಮೂಲ ಸ್ವರೂಪ. ವಾಲ್ಮೀಕಿಯ ಕೃತಿ ನಿಧಾನವಾಗಿ ಬಯಲಲ್ಲಿ ಹರಿಯುವ ಗಂಗೆಯಂತೆ ಪಾರದರ್ಶಕ ಕಾವ್ಯಜಲ. ಹಾಗಾಗಿ ‘ಉತ್ತರಕಾಂಡ’ದ ಗತಿಯೂ ಸಮಾಧಾನದ್ದು. ಇಲ್ಲಿ ಭೈರಪ್ಪನವರಿಗೆ ವಾಲ್ಮೀಕಿಗೆ ಆದರ್ಶವಾದ ಕಾವ್ಯಹದವೇ ಮಾದರಿ. ಪರ್ವವಾದರೋ ಗಂಗೋತ್ರಿಯಿಂದ ಬಯಲಿಗೆ ಧುಮುಕುವ ಗಂಗೆಯಂತೆ. ಮಹಾಭಾರತದ 18 ಅಧ್ಯಾಯಗಳಿಗೆ ಪರ್ವಗಳು ಎಂದೇ ಹೆಸರು. ರಾಮಾಯಣದ ವಿಭಾಗಗಳಿಗೆ ಕಾಂಡ ಎಂದು ಹೆಸರು. ಭೈರಪ್ಪನವರು ಎರಡೂ ಕಾದಂಬರಿಗಳಿಗೆ ಹೆಸರಿಡುವಾಗ ಅದೇ ಕ್ರಮ ಅನುಸರಿಸಿದ್ದಾರೆ.

ಪರ್ವ ದ್ರೌಪದಿಯಿಂದ ಕೊನೆಯಾಗುತ್ತದೆ, ‘ಉತ್ತರಕಾಂಡ’ ಸೀತೆಯಿಂದ ಆರಂಭವಾಗುತ್ತದೆ. ಸಾಂಪ್ರದಾಯಿಕವಾಗಿ ರಸದ ಪರಿಕಲ್ಪನೆಯನ್ನು ಒಪ್ಪುವ ಭೈರಪ್ಪನವರು ಆಳದಲ್ಲಿ ತಮ್ಮ ಸೃಜನಶೀಲ ಒತ್ತಡವನ್ನು ಉಳಿಸಿಕೊಂಡೇ ‘ಉತ್ತರಕಾಂಡ’ ರಚಿಸಿದ್ದಾರೆ. ಉದಾಹರಣೆಗೆ ಆಚಾರ್ಯ ಅಭಿನವಗುಪ್ತರು ಮಹಾಭಾರತದಲ್ಲಿ ಶಾಂತರಸ ಕಂಡಿದ್ದರು. ಆದರೆ ಭೈರಪ್ಪನವರು ಅಲ್ಲಿ ಯುದ್ಧದ ದುರಂತಗಳನ್ನು ಬಹಳ ಪರಿಣಾಮಕಾರಿಗಾಗಿ ತಂದಿದ್ದಾರೆ. ಮತ್ತೆ ಗರ್ಭ ಧರಿಸುವಂತೆ ಕುಂತಿ ಸಿಟ್ಟಿನಿಂದ ಸೊಸೆ ದ್ರೌಪದಿಗೆ ಕೇಳಿದಾಗ ಅವಳು ಮತ್ತಷ್ಟು ಸಿಟ್ಟಿನಿಂದ ಕುರುಕುಲಕ್ಕೆ ಸೊಸೆಯಾಗಿ ಬಂದ ನೀವು ಹೀಗೆ ಹೇಳುವುದೇ ಎಂದು ಅತ್ತೆಗೆ ಉತ್ತರಕೊಡುತ್ತಾಳೆ. ನಿಸ್ಸಹಾಯಕ ಧರ್ಮರಾಜನಿಂದ ಈ ಗದ್ಯಮಹಾಕಾವ್ಯ ಕೊನೆಗೊಳ್ಳುತ್ತದೆ. ‘ಉತ್ತರಕಾಂಡ’ ರಾಮನಿಂದ ಹೊರದೂಡಲ್ಪಟ್ಟ ಸೀತೆಯು ಆಶ್ರಮದಲ್ಲಿ ಲವಕುಶರಿಗೆ ಮೊಲೆಯೂಡಿಸುದ ದೃಶ್ಯದಿಂದ ಆರಂಭಗೊಳ್ಳುತ್ತದೆ. ಪ್ರೇಮ ಅಂದರೆ ಏನು? ರಾಮ—ಸೀತೆಯರ ಸಂಬಂಧ ಪ್ರೇಮ ಮೂಲದ್ದೇ ಅಥವಾ ಕೇವಲ ಧರ್ಮ ಮೂಲದ್ದೇ? ಲಕ್ಷ್ಮಣ—ಊರ್ಮಿಳೆಯರ ಸಂಬಂಧದ ವ್ಯಾಖ್ಯಾನ ಇಲ್ಲಿ ಭೈರಪ್ಪನವರನ್ನು ಕಾಡಿದೆ. ಸೀತೆಯ ವ್ಯಕ್ತಿತ್ವ, ಅವಳ ಹೆಣ್ಣುತನ, ಅವಳ ಮುಗ್ಧತೆ, ಅವಳ ಪತ್ನಿತ್ವ ಇವು ಇಲ್ಲಿನ ಪ್ರಮುಖ ಸಂಗತಿಗಳು. ವಾಲ್ಮೀಕಿ ರಾಮಾಯಣದಲ್ಲಿ ಹೇಳದೇ ಓದುಗರ ಊಹೆಗೆ ಬಿಟ್ಟಿರುವ ಅನೇಕ ಪ್ರಸಂಗಗಳನ್ನು ಇಲ್ಲಿ ಭೈರಪ್ಪನವರು ವಿಸ್ತರಿಸಿಕೊಂಡಿದ್ದಾರೆ (ಉದಾಹರಣೆಗೆ: ರಾವಣ, ದಶರಥ ಮತ್ತು ಊರ್ಮಿಳೆಯ ವ್ಯಕ್ತಿತ್ವ).

ಇಡೀ ರಾಮಾಯಣದಲ್ಲಿ ಒಬ್ಬ ಕಾದಂಬರಿಕಾರನಾಗಿ ತನ್ನನ್ನು ಸೆಳೆದ ಸನ್ನಿವೇಶಗಳಿಗೆ ಭೈರಪ್ಪನವರು ಸ್ಪಂದಿಸಿದ್ದಾರೆ. ಕವಲು ಕಾದಂಬರಿಯ ಪಾತ್ರ ನಿರೂಪಣೆಗಳ ಬಗೆಗೆ ಕೆಲವು ಸ್ತ್ರೀವಾದಿಗಳು ಆಕ್ಷೇಪಣೆ ತೆಗೆದಿದ್ದರು. ಇಲ್ಲಿ ಭೈರಪ್ಪನವರು ಸೀತೆಯ ಪಾತ್ರದ ಮೂಲಕ ಅಂಥ ತಗಾದೆಗಳಿಗೆ ಸೂಕ್ತ ಒಳಉತ್ತರ ನೀಡಿದ್ದಾರೆ. ಭೈರಪ್ಪನವರು ಈ ಕಾದಂಬರಿಯಲ್ಲಿ ಸೀತಾಪಕ್ಷದಲ್ಲಿರುವುದು ಕುತೂಹಲದ ಸಂಗತಿ. ಅವರೂ ಒಂದು ನಮೂನೆಯ ಭಾರತೀಯ ನೆಲೆಯ ಸ್ತ್ರೀವಾದವನ್ನೇ ‘ಉತ್ತರಕಾಂಡ’ದಲ್ಲಿ ಕಲೆಯ ಮೂಲಕ ಪ್ರತಿಪಾದಿಸಿದ್ದಾರೆ. ದಾಂಪತ್ಯ ಮತ್ತು ಪ್ರೇಮದ ನಡುವಿನ ಬಿರುಕು ಈ ಕಾದಂಬರಿಯ ಪ್ರಮುಖ ವಸ್ತು. ದೀರ್ಘದಾಂಪತ್ಯದಲ್ಲಿ ಉತ್ಕಟ ಪ್ರೇಮವೇ ಇರದಿದ್ದರೆ ಅಂಥ ಮದುವೆಗಳ ಗತಿ ಏನು ಎಂಬುದು ಯಾವ ಕಾಲಕ್ಕೂ ಮನುಷ್ಯರನ್ನು ಕಾಡಿರುವ ಪ್ರಶ್ನೆ. ಕಲಾಮೀಮಾಂಸಕ ಡಾ.ಆನಂದಕುಮಾರಸ್ವಾಮಿ ತಮ್ಮ ವಿಶ್ವಪ್ರಸಿದ್ಧ ಕೃತಿ ‘ದಿ ಡಾನ್ಸ್ ಆಫ್ ಶಿವ’ದಲ್ಲಿ ಪಶ್ಚಿಮದಲ್ಲಿ ಪ್ರಣಯಾಧಾರಿತ ಮದುವೆ, ಹಾಗಾಗಿ ಗಂಡು ಹೆಣ್ಣಿನ ನಡುವೆ ಪ್ರಣಯ, ಆಕರ್ಷಣೆ ಮುಗಿದರೆ ಆ ವಿವಾಹ ಬಿದ್ದುಹೋಗುತ್ತದೆತಾರ್ಕಿಕವಾಗಿ ಎಂದು ಹೇಳಿ, ಭಾರತದಲ್ಲಿ ಅಂಥ ಸಮಸ್ಯೆಯಿಲ್ಲ ಎಂಬಂತೆ ಬರೆಯುತ್ತಾರೆ. ಆದರೆ ರಾಮ—ಸೀತೆಯದು ಪ್ರಣಯವೋ, ಪ್ರೇಮವೋ, ಆದರ್ಶ ದಾಂಪತ್ಯವೋ ಎಂಬ ಹುಡುಕಾಟ ಇಲ್ಲಿದೆ. ‘ಉತ್ತರಕಾಂಡ’ ಇಂಥ ಉತ್ತರಗಳನ್ನು ರಾಮಾಯಣದ ಚೌಕಟ್ಟಿನಲ್ಲಿ ಹುಡುಕುವ ಕಾದಂಬರಿಯೇ ಹೊರತು ಧರ್ಮಶಾಸ್ತ್ರಗ್ರಂಥವಲ್ಲ. ಸೀತೆಗೆ ಮರುಗುವ ಭಾವ ಇಡೀ ಕಾದಂಬರಿ ಉದ್ದಕ್ಕೂ ಮಂದವಾಗಿ ಹರಿದಿದೆ.

ಸೀತೆ ಎಂಬ ಹೆಸರಿಟ್ಟುಕೊಂಡವರು ಸುಖ ಪಡುವುದಿಲ್ಲ ಎಂಬ ನಂಬಿಕೆ ಜನಪದರಲ್ಲಿದೆ. ಈ ಜನಪದ ವಿವೇಕಕ್ಕೆ ‘ಉತ್ತರಕಾಂಡ’ ಪುಷ್ಟಿ ನೀಡುತ್ತದೆ. ರಾಮ ಖಂಡಿತ ಕೆಟ್ಟವನಲ್ಲ ಆದರೆ ಅವನಿಗೆ ಎಲ್ಲರಿಗಿಂತ ಕೊನೆಗೆ ಧರ್ಮಪತ್ನಿಗಿಂತ ಧರ್ಮವೇ ಮುಖ್ಯ ಎಂಬುದು ಹಲವು ಸನ್ನಿವೇಶಗಳಲ್ಲಿ ಕಾದಂಬರಿಯಲ್ಲಿ ಬಂದಿದೆ. ದಲಿತ ವರ್ಗದ, ಅರಮನೆಯ ದುಡಿಯುವ ಪಾತ್ರಗಳು ಸೀತೆಗಾದ ಅನ್ಯಾಯಕ್ಕೆ ದುಃಖಿಸುತ್ತವೆ, ತಮ್ಮ ದೇಸೀ ಮಾತಿನ ವರಸೆಯಲ್ಲಿ ರಾಮನ ನಡೆಯನ್ನು ಖಂಡಿಸುತ್ತವೆ ಕೂಡ. ಅಯೋಧ್ಯೆಯ ಅರಮನೆಯ ಒಳರಾಜಕಾರಣ, ಕುರ್ಚಿಮೋಹ ಇವುಗಳನ್ನು ‘ಉತ್ತರಕಾಂಡ’ದಲ್ಲಿ ಪದರಪದರಗಳಾಗಿ ಭೈರಪ್ಪನವರು ಬಿಚ್ಚಿಟ್ಟಿದ್ದಾರೆ. ರಾಮಾಯಣದ ಕಾಲಕ್ಕೆ ಓದುಗರನ್ನು ತೆಗೆದುಕೊಂಡು ಹೋಗುವುದಕ್ಕಿಂತಲೂ ರಾಮಾಯಣದ ಚರ್ಚೆಗಳನ್ನು ಸಮಕಾಲೀನಗೊಳಿಸುವುದು ‘ಉತ್ತರಕಾಂಡ’ದ ಆಶಯ. ಸದಾ ಪ್ರಗತಿಪರತೆ, ಮುಕ್ತಚರ್ಚೆಗೆ ತೆರೆದ ಮನಸ್ಸಿನವರಾದ ಎಸ್.ಎಲ್.ಭೈರಪ್ಪನವರು ಕಟ್ಟೆಯ ಕಲ್ಲು ಕಟ್ಟೆಗೆ ಸೇರಿತು ಎಂಬಂತೆ ವ್ಯಾಸ ವಾಲ್ಮೀಕಿಗಳ ಶಾಶ್ವತಮೌಲ್ಯವಿರುವ ಮಹಾಕಾವ್ಯಗಳನ್ನು ಕನ್ನಡಕ್ಕೆ ತಮ್ಮ ಪ್ರತಿಭೆಯ ಮೂಸೆಯಲ್ಲಿ ತಂದು ಕನ್ನಡ ಕಾದಂಬರಿ ಪರಂಪರೆಗೆ ಮೆರುಗು ತಂದಿದ್ದಾರೆ. ಭಿನ್ನಭಿನ್ನ ಓದು ವ್ಯಾಖ್ಯಾನಗಳಿಗೆ ಅವಕಾಶವಿರುವ ಎಸ್.ಎಲ್.ಭೈರಪ್ಪನವರ ಕಾದಂಬರಿ ‘ಉತ್ತರಕಾಂಡ’. ಈ ಕಾದಂಬರಿ ಒಂದು ರೀತಿ ವಾಲ್ಮೀಕಿ ರಾಮಾಯಣದ ರೀಡಿಂಗ್ ಬಿಟ್ವೀನ್ ದ ಲೈನ್ಸ್ ನಂತಿದೆ. ಅಂದರೆ ರಾಮನ ಅರಮನೆ ಹೇಗಿತ್ತು, ಸೀತೆ ವಾಲ್ಮೀಕಿ ಆಶ್ರಮಕ್ಕೆ ಬಂದವಳು ಅಲ್ಲಿ ಏನಾದರೂ ಕೆಲಸ ಮಾಡುತ್ತಿದ್ದಳೇ ಇಲ್ಲವೇ ಮುಂತಾದ ಪ್ರಶ್ನೆಗಳನ್ನು ಹಾಕಿಕೊಂಡು ಅದಕ್ಕೆ ಕೃತಿಯೊಳಗೆ ಉತ್ತರ ನೀಡುವ ಪ್ರಯತ್ನ ಮಾಡಿದ್ದಾರೆ. ಪಾತ್ರಗಳು ಮಾತನಾಡುವಾಗ ವೈವಿಧ್ಯ ತರುವ ದೃಷ್ಟಿಯಿಂದ ಅರಮನೆಯ ಸೇವಕ ಪಾತ್ರಗಳು ಗ್ರಾಮೀಣ ಭಾಷೆಯಲ್ಲಿ ಮಾತನಾಡುತ್ತವೆ. ಇದೆಲ್ಲವೂ ಕಾದಂಬರಿಕಾರರು ಕೃತಿಯ ಬಳಸಿಕೊಂಡಿರುವ ಅನುಕೂಲಗಳು.

ಈ ಕಾದಂಬರಿ ಪ್ರಕಟವಾದ ಮೇಲೆ ಮಿಶ್ರ ಪ್ರತಿಕ್ರಿಯೆಗಳು ಬಂದವು. ಎಡಪಂಥದ ವಿಚಾರವುಳ್ಳ ಪತ್ರಕರ್ತೆ ಗೌರಿ ಲಂಕೇಶ್ ಈ ಕಾದಂಬರಿಯನ್ನು ಮೆಚ್ಚಿಕೊಂಡು ಬರೆದರು. ಅನೇಕ ಹಳೆಯ ಓದುಗರು ಭೈರಪ್ಪನವರು ರಾಮಾಯಣವನ್ನು ತೆಳ್ಳಗೆ ಮಾಡಿದ್ದಾರೆ ಎಂದು ತಮ್ಮ ಅಸಮ್ಮತಿಯನ್ನು ವ್ಯಕ್ತಪಡಿಸಿದರು. ನಾನು ಈ ಕಾದಂಬರಿಯ ಅನೇಕ ಓದುಗರನ್ನು ಮಾತನಾಡಿಸಿದಾಗ ಏನು ಪ್ರತಿಕ್ರಿಯೆ ನೀಡುವುದು ಎಂದು ತಿಳಿಯದೆ ಮೌನವಾಗಿ ಉಳಿದರು. ಮುಖ್ಯವಾಗಿ ಈ ಕಾದಂಬರಿಯಲ್ಲಿ ಸ್ತ್ರೀಪ್ರಧಾನ ಕಥನ ಕಂಡು ಬರುತ್ತದೆ. ಊರ್ಮಿಳೆ, ಸೀತೆ ಇವರು ಕೇಂದ್ರದಲ್ಲಿದ್ದಾರೆ. ಆದರೆ ರಾಮನ ಪಾತ್ರ ಪೂರ್ಣವಾಗಿ ಮೂಲರಾಮಾಯಣಕ್ಕಿಂತ ವ್ಯತಿರಿಕ್ತವಾಗಿ ಚಿತ್ರವಾಗಿಲ್ಲ. ಹೀಗಾಗಿ ಭಿನ್ನವಾಗಿದ್ದೂ ಪೋಲಂಕಿ ಸೀತಾಯಣವಾಗದೇ ಉಳಿದಿದೆ ‘ಉತ್ತರಕಾಂಡ’. ಪ್ರಾಯಃ ಇಲ್ಲಿ ಭೈರಪ್ಪನವರು ದಲಿತ ಬಂಡಾಯದ ಪ್ರತಿಭಟನೆಯ ಮಾದರಿಗಿಂತ ರವೀಂದ್ರನಾಥ ಠಾಕೂರರ ಊರ್ಮಿಳಾ, ಮೈಥಿಲೀ ಶರಣ ಗುಪ್ತರ ಸಾಕೇತದ ದಾರಿ ತುಳಿದಿದ್ದಾರೆ. ಕನ್ನಡದಲ್ಲಿ ಕುವೆಂಪು ಅವರ ಕಥನಕ್ರಮಕ್ಕೆ ಹತ್ತಿರವಾಗಿದ್ದಾರೆ. ರಾಮನ ತಪ್ಪನ್ನು ತೋರಿಸುವ, ಸೀತೆಯ ದಿಟ್ಟತನವನ್ನು ಮಂಡಿಸುವ ದಾರಿ ಕ್ರಮಿಸಿದೆ ‘ಉತ್ತರಕಾಂಡ’.

ಕಾದಂಬರಿ ಶೈಲಿಗೆ ಮಹಾಭಾರತ ಅಳವಡುವಷ್ಟು ಆಪ್ತವಾಗಿ ರಾಮಾಯಣ ಅಳವಡುವುದಿಲ್ಲವೇನೋ ಎಂಬ ಪ್ರಶ್ನೆಯೂ ಕಾದಂಬರಿ ಓದಿದ ಮೇಲೆ ಏಳುತ್ತದೆ. ಮಹಾಭಾರತದ ಪ್ರಕ್ಷುಬ್ಧತೆ ಕಾದಂಬರಿಗೆ ಹೇಳಿಮಾಡಿಸಿದ್ದು. ರಾಮಾಯಣದಲ್ಲಿ ವಿರಹ, ಪ್ರೇಮ, ವೈರ ಎಲ್ಲವೂ ಹದದಲ್ಲಿ ಜರುಗುವುದು ಈ ಮಿತಿಗೆ ಕಾರಣವಿರಬಹುದು. ಒಟ್ಟಿನಲ್ಲಿ ನನ್ನ ದೃಷ್ಟಿಯಲ್ಲಿ ಅವರ ಪರ್ವದ ಹೋಲಿಕೆಯಲ್ಲಿ ನೋಡಿದರೆ, ‘ಉತ್ತರಕಾಂಡ’ ಅಷ್ಟು ಸಾಂದ್ರವಾಗಿ ಬಂದಿಲ್ಲ. ಆದರೆ ಭಾರತದ ಒಬ್ಬ ಮೇಜರ್ ಕಾದಂಬರಿಕಾರನ ಪ್ರತಿಭೆ ಮತ್ತು ವಾಲ್ಮೀಕಿ ಪ್ರತಿಭೆಯ ಮುಖಾಮುಖಿಯ ದೃಷ್ಟಿಯಿಂದ ಮುಖ್ಯವಾಗುವ ಕಾದಂಬರಿ ‘ಉತ್ತರಕಾಂಡ’.

(ವಿವರ: ‘ಉತ್ತರಕಾಂಡ’, ಎಸ್.ಎಲ್.ಭೈರಪ್ಪ, ಸಾಹಿತ್ಯ ಭಂಡಾರ, ಪುಟಗಳು: 329, ಬೆಲೆ: ರೂ.375 ಮೊದಲ ಮುದ್ರಣ: 2017)

ಫ್ರ್ಯಾಂಕ್ ಓ’ಕಾನರ್ ಕನ್ನಡಕ್ಕೆ: ಡಾ.ಬಸು ಬೇವಿನಗಿಡದ

ಪಾಪ ನಿವೇದನೆ

ಜುಲೈ ೨೦೧೮

ಪರಮೇಶ್ವರ ಗುರುಸ್ವಾಮಿ

ದಾಂಪತ್ಯ ಮೀರಿದ ಬೌದ್ಧಿಕ ಸಾಂಗತ್ಯ

ಜುಲೈ ೨೦೧೮

ಪರಮೇಶ್ವರ ಗುರುಸ್ವಾಮಿ

ಟೆಕ್ ಡ್ರೀಮರ್ಸ್ ಓದಲೇಬೇಕಾದ ‘ಹಿಟ್ ರಿಫ್ರೆಶ್’

ಜುಲೈ ೨೦೧೮

ಡಾ.ರಾಕೇಶ್ ಬಟಬ್ಯಾಲ್

ಜೆ.ಎನ್.ಯು ದ ಮೇಕಿಂಗ್ ಆಫ್ ಎ ಯೂನಿವರ್ಸಿಟಿ

ಜೂನ್ ೨೦೧೮

ಎಸ್.ಆರ್.ವಿಜಯಶಂಕರ

ಮೊಗಳ್ಳಿ ಗಣೇಶ್ ಹೊಸ ಕಥಾ ಸಂಕಲನ ದೇವರ ದಾರಿ

ಜೂನ್ ೨೦೧೮

ಮಂಜುನಾಥ ಡಿ.ಎಸ್.

ಅಹಿಂಸಾತ್ಮಕ ಸಂವಹನ

ಜೂನ್ ೨೦೧೮

ಪೃಥ್ವಿದತ್ತ ಚಂದ್ರಶೋಭಿ

ಕರ್ನಾಟಕದ ರಾಜಕಾರಣ ಹೇಗೆ ಬದಲಾಗಿದೆ?

ಮೇ ೨೦೧೮

ಪುರುಷೋತ್ತಮ ಬಿಳಿಮಲೆ

ಅವಲೋಕನ ಸಮಕಾಲೀನ ಚರ್ಚೆಗೆ ಹೆಚ್ಚು ಪ್ರಸ್ತುತ

ಮೇ ೨೦೧೮

ಪ್ರೊ.ಶಿವರಾಮಯ್ಯ

ದೇಸಿ ಕನ್ನಡ ಪರಂಪರೆ

ಮೇ ೨೦೧೮

ರಾಜದೀಪ್ ಸರ್ದೇಸಾಯಿ

ಗುಜರಾತಿನ ನರೇಂದ್ರಭಾಯಿ

ಎಪ್ರಿಲ್ ೨೦೧೮

ಸ್ನೇಹಲತಾ ಎಸ್. ಗೌನಳ್ಳಿ

ಪಾಕಿಸ್ತಾನಿ ಕವಯಿತ್ರಿ ಸಾರಾ ಶಗುಫ್ತಾ ಜೀವನ ಮತ್ತು ಕಾವ್ಯ

ಎಪ್ರಿಲ್ ೨೦೧೮

ವಿನಯ್ ಸೀತಾಪತಿ

ಪಿ. ವಿ. ನರಸಿಂಹರಾವ್ ಜೀವನಚರಿತ್ರೆ ಹಾಫ್ ಲಯನ್

ಮಾರ್ಚ್ ೨೦೧೮

ಅರುಣ್ ಜೋಳದಕೂಡ್ಲಿಗಿ

ಪೆರಿಯಾರ್ ವಿವಾಹ ಪದ್ಧತಿ

ಮಾರ್ಚ್ ೨೦೧೮

ಮೂಲ: ಇ.ರಾಘವನ್; ಜೇಮ್ಸ್ ಮೇನರ್ ಅನುವಾದ: ಪೃಥ್ವಿ ದತ್ತ ಚಂದ್ರ ಶೋಭಿ

ಭೂಸುಧಾರಣೆ ಜಾತಿ ಮೀಸಲಾತಿ ತುರ್ತುಪರಿಸ್ಥಿತಿ

ಫೆಬ್ರವರಿ ೨೦೧೮

- ಕಲ್ಲೇಶ್ ಕುಂಬಾರ್, ಹಾರೂಗೇರಿ

ಬಿಚ್ಚಿಟ್ಟ ಬಾಲ್ಯದ ನೆನಪುಗಳ ಬುತ್ತಿ

ಫೆಬ್ರವರಿ ೨೦೧೮

ಡಾ.ಪಿ.ಮಣಿ

ಮಂಟೇಸ್ವಾಮಿ ಕಾವ್ಯದಲ್ಲಿ ಸಿದ್ಧಪ್ಪಾಜಿ

ಫೆಬ್ರವರಿ ೨೦೧೮