2nd ಮಾರ್ಚ್ ೨೦೧೮

ಬ್ಯಾಕ್ಟೀರಿಯಗಳ ಬಗ್ಗೆ ನಿಮಗೇನು ಗೊತ್ತು?

ಸುಧೀಂದ್ರ ಹಾಲ್ದೊಡ್ಡೇರಿ

ಬ್ಯಾಕ್ಟೀರಿಯ ಸೋಂಕಿಗೆಂದು ನಾವು ಸೇವಿಸುವ ಆಂಟಿ—ಬಯಾಟಿಕ್ ಮಾತ್ರೆಯಲ್ಲಿನ ರಾಸಾಯನಿಕವು ದೈಹಿಕ ಅಸ್ವಸ್ಥತೆಗೆ ಕಾರಣವೆಂದು ನಂಬಿರುವ ಬ್ಯಾಕ್ಟೀರಿಯಗಳನ್ನಷ್ಟೇ ನಾಶ ಮಾಡಬೇಕು. ಆದರೆ ತನ್ನ ಸಂಪರ್ಕಕ್ಕೆ ಬರುವ ಉಪಯುಕ್ತ ಬ್ಯಾಕ್ಟೀರಿಯಗಳ ಮೇಲೂ ಇಂಥ ರಾಸಾಯನಿಕಗಳು ಪರಿಣಾಮ ಬೀರುವ ಸಾಧ್ಯತೆಗಳಿವೆ.

ಕೀಟಾಣು ರಹಿತ ನೀರು, ಕೀಟಾಣು ಕೊಲ್ಲುವ ಟೂತ್‍ಪೇಸ್ಟ್, ಕೀಟಾಣು ನಾಶಕ ಸಾಬೂನು, ಕೊನೆಗೆ ನೆಲ, ವಾಶ್‍ಬೇಸಿನ್, ಟಾಯ್ಲೆಟ್‍ಗಳನ್ನೂ ಬ್ಯಾಕ್ಟೀರಿಯ ಮುಕ್ತವಾಗಿಸುತ್ತಿದ್ದೇವೆ. ಅಬ್ಬರದ ಜಾಹೀರಾತುಗಳಿಗೆ ಮರುಳಾಗಿ ನಮ್ಮ ಪರಿಸರವನ್ನು ಬ್ಯಾಕ್ಟೀರಿಯ ಮುಕ್ತವಾಗಿಸಬಹುದು. ಆದರೆ ನಮ್ಮ ದೇಹದಲ್ಲಿಯೇ ನೆಲೆಸಿರುವ ಕೋಟಿಗಟ್ಟಲೆ ಬ್ಯಾಕ್ಟೀರಿಯಗಳನ್ನು ಎಲ್ಲಿ ಕಳುಹಿಸಬೇಕು?

ಬೆಳಗ್ಗೆ ಉಪಾಹಾರ ಸೇವಿಸುವಾಗಲೇ ಕೊಂಚ ತಳಮಳ. ಹಸಿವೆಯಾಗುತ್ತಿದೆ, ತಿನ್ನಬೇಕಿನಿಸುತ್ತಿಲ್ಲ. ಹೊಟ್ಟೆಯೊಳಗೆ ಗುಡುಗುಡು ಸದ್ದು, ಓಕರಿಕೆಯ ತೇಗು. ‘ಗ್ಯಾಸ್ಟ್ರಿಕ್ ಇರಬೇಕು’ ಮಜ್ಜಿಗೆ ಕುಡಿದರೆ ಸರಿಹೋದೀತು ಎಂದು ತಿನಿಸನ್ನು ಅಷ್ಟಕ್ಕೇ ಬಿಡುತ್ತೀರಿ. ಮಧ್ಯಾಹ್ನದ ಹೊತ್ತಿಗೆ ನಿಂತಲ್ಲಿ ನಿಲ್ಲಲಾರದ, ಕೂತಲ್ಲಿ ಕೂರಲಾರದ, ಮಲಗಿ ನಿದ್ದೆಯೂ ಮಾಡಲಾರದ ಸ್ಥಿತಿ.

ವೈದ್ಯರು ಹೊರಗೆಲ್ಲಾದರೂ ತಿಂದಿರಾ? ಎಂದು ಪ್ರಶ್ನಿಸಿದಾಗ ಎರಡು ದಿನಗಳ ಆಹಾರ—ಸೇವನೆಯ ಚಹರೆಯನ್ನು ನೀಡುತ್ತೀರಿ. ನಸು ನಗುತ್ತಲೇ ಡಾಕ್ಟರ್ ಔಷಧಿ ಚೀಟಿ ಬರೆಯುತ್ತಾರೆ. ಮಿದುವಾದ ಬ್ಯಾಕ್ಟೀರಿಯ ಸೋಂಕು ಆಗಿದೆ. ನೋವು ಶಮನಕ್ಕೆ, ಸೋಂಕು ನಿವಾರಣೆಗೆ, ಶೌಚನಿಯಂತ್ರಣಕ್ಕೆ ಯಾವ ಯಾವ ಮಾತ್ರೆಗಳನ್ನು ಎಷ್ಟೆಷ್ಟು ಅವಧಿಯೊಳಗೆ ಸೇವಿಸಬೇಕೆಂದು ಹೇಳುತ್ತಾರೆ. ಗುಜರಾತಿ ಊಟ ಅಥವಾ ಪಾನಿ—ಪೂರಿ ಇವೆರಡರಲ್ಲಿ ಒಂದು ಸೋಂಕಿಗೆ ಕಾರಣವಾಗಿರಬಹುದೆಂಬ ವೈದ್ಯರ ಊಹೆ ನಿಮಗೊಪ್ಪಿಗೆಯಾಗುವುದಿಲ್ಲ. ಮೊದಲನೆಯದಕ್ಕೆ ತಂಗಿ ಜತೆಯಾಗಿರುತ್ತಾಳೆ, ಎರಡನೆಯದಕ್ಕೆ ಮಗಳು ಜತೆಯಾಗಿರುತ್ತಾಳೆ. ನನಗೊಬ್ಬಳಿಗೇ ಬ್ಯಾಕ್ಟೀರಿಯ ಸೋಂಕು ಬಂದದ್ದು ಹೇಗೆ? ಎಂಬ ಚಿಂತೆಯಲ್ಲಿಯೇ ನಿದ್ದೆ ಹೋಗುತ್ತೀರಿ.

ಇಬ್ಬರು ವ್ಯಕ್ತಿಗಳು ಒಂದೇ ಬಗೆಯ ಊಟ, ಒಂದೇ ಸಮಯದಲ್ಲಿ, ಒಂದೇ ಪ್ರಮಾಣದಲ್ಲಿ ಸೇವಿಸಿದರೂ ಅದು ದೇಹದ ಮೇಲೆ ವಿಭಿನ್ನ ಪರಿಣಾಮಗಳನ್ನು ಬೀರಿರುತ್ತದೆ. ಇದೆಲ್ಲವೂ ನಾವು ಹುಟ್ಟಿನಿಂದಲೇ ಪಡೆದುಕೊಂಡ ಗುಣಗಳು, ನಮ್ಮ ದೇಹದಲ್ಲಿರುವ ವಂಶವಾಹಿ ತುಣಕುಗಳಾದ ‘ಜೀನ್’ಗಳೇ ಕಾರಣವೆಂದು ನೀವು ನೇರ ಆರೋಪಿಸುವ ಹಾಗಿಲ್ಲ. ‘ಜೀನೆಟಿಕ್’ ತಂತ್ರಜ್ಞಾನದಲ್ಲಿ ಪ್ರಾವೀಣ್ಯ ಗಳಸಿರುವ ವೈದ್ಯ ವಿಜ್ಞಾನಿಗಳ ಪ್ರಕಾರ, ಒಂದೇ ಮನೆಯಲ್ಲಿ ಒಂದೇ ತಾಯಿಯ ಆರೈಕೆಯಲ್ಲಿ ಬೆಳೆಯುವ ಅವಳಿ ಮಕ್ಕಳಲ್ಲೂ ಆಹಾರ ಪಚನಕ್ರಿಯೆ ವಿಭಿನ್ನವಾಗಿರುತ್ತದೆ. ಹೀಗೇಕೆ ಎಂದು ಕೇಳಿದರೆ ‘ಬ್ಯಾಕ್ಟೀರಿಯ, ಸರ್’ಅಂದು ಬಿಡುತ್ತಾರೆ.

ಸೂಕ್ಷ್ಮಾತಿಸೂಕ್ಷ್ಮ ಬ್ಯಾಕ್ಟೀರಿಯಗಳ ಬಗ್ಗೆ ಅಧ್ಯಯನ ನಡೆಸುವ ವಿಜ್ಞಾನಿಗಳ ಪ್ರಕಾರ ನಮ್ಮ ದೇಹದಲ್ಲಿರುವ ಒಟ್ಟಾರೆ ಜೀವಕೋಶಗಳ ಸಂಖ್ಯೆಯನ್ನು ಮೀರಿಸುವ ಸಂಖ್ಯೆಯಲ್ಲಿ ಬ್ಯಾಕ್ಟೀರಿಯಗಳು ನಮ್ಮ ದೇಹದಲ್ಲಿವೆ. ಬ್ಯಾಕ್ಟೀರಿಯಗಳೆಂದರೆ ನಮಗೆ ತೊಂದರೆ ಮಾಡುವಂಥದ್ದು ಎಂಬ ಸಾಮಾನ್ಯ ಕಲ್ಪನೆ ನಮಗಿದೆ. ಅಪ್ಪಿತಪ್ಪಿ ನಮ್ಮ ದೇಹದಲ್ಲಿರುವ ಬ್ಯಾಕ್ಟೀರಿಯಗಳನ್ನೇನಾದರೂ ಸಂಪೂರ್ಣವಾಗಿ ತೊಲಗಿಸಿಬಿಟ್ಟರೆ, ಖಂಡಿತವಾಗಿಯೂ ನಾವು ಬದುಕು ನಡೆಸಲಾಗುವುದಿಲ್ಲ. ಅಷ್ಟರ ಮಟ್ಟಿಗೆ ಪರಸ್ಪರ ಪೂರಕ ಜೀವನ ಸಂಬಂಧ ನಮ್ಮ ಹಾಗೂ ಬ್ಯಾಕ್ಟೀರಿಯಗಳ ನಡುವಿನದ್ದು. ನಮ್ಮ ಬಾಯಿಯಿಂದ ಆರಂಭವಾಗಿ ಗಂಟಲು ಅನ್ನನಾಳ, ಸಣ್ಣ ಹಾಗೂ ದೊಡ್ಡ ಕರುಳು, ಉಳಿದೆಲ್ಲ ಜೀರ್ಣಾಂಗ ವ್ಯವಸ್ಥೆಯ ಭಾಗಗಳಲ್ಲಿ ವಿವಿಧ ಬಗೆಯ ಬ್ಯಾಕ್ಟೀರಿಯಗಳು ಅಕ್ಷರಶಃ ಮನೆ ಮಾಡಿಕೊಂಡಿವೆ. ನಮ್ಮ ಪಚನಾಂಗ ಜೀರ್ಣ ಮಾಡಿಕೊಳ್ಳಲಾಗದ ಆಹಾರವನ್ನು ಕರಗಿಸುವ ಕೆಲಸ ಬ್ಯಾಕ್ಟೀರಿಯಗಳದ್ದು. ದೇಹಕ್ಕೆ ಅನೇಕ ಅಗತ್ಯ ಜೀವಸತ್ವಗಳನ್ನು (ವೈಟಮಿನ್) ತಯಾರಿಸಿಕೊಡುವ ಜವಾಬ್ದಾರಿಯೂ ಬ್ಯಾಕ್ಟೀರಿಯಗಳದ್ದೇ. ಹಾಗೆಯೇ ಸೋಂಕಿನ ವಿರುದ್ಧ ಹೋರಾಡಲು ದೇಹದ ಸುರಕ್ಷಾ ವ್ಯವಸ್ಥೆಯನ್ನು (ಇಮ್ಯೂನ್ ಸಿಸ್ಟಮ್) ಸಜ್ಜಾಗಿರಿಸುವುದೂ ಬ್ಯಾಕ್ಟೀರಿಯಗಳೇ. ಅದೆಷ್ಟೋ ಬಗೆಯ ಬ್ಯಾಕ್ಟೀರಿಯಗಳ ಇರುವಿಕೆಯೂ ನಮಗೆ ಗೊತ್ತಿಲ್ಲ. ಹಾಗೆಯೇ ಹೊರಗಿನ ಪ್ರಪಂಚದಲ್ಲಿ ಬದುಕಲಾಗದ ಬ್ಯಾಕ್ಟೀರಿಯಗಳ ಜೀವನಕ್ರಮವನ್ನೂ ತಿಳಿದುಕೊಳ್ಳಲಾಗಿಲ್ಲ.

ನಾವು ಬ್ಯಾಕ್ಟೀರಿಯಗಳಂಥ ಸೂಕ್ಷ್ಮಜೀವಿಗಳು ತರಬಲ್ಲ ಸೋಂಕುಗಳಿಂದ ತಪ್ಪಿಸಿಕೊಳ್ಳಲು ಹರಸಾಹಸ ಪಡುತ್ತೇವೆ. ಆದರೆ ಎಲ್ಲ ಬ್ಯಾಕ್ಟೀರಿಯಗಳು ಸೋಂಕು ತರುವುದಿಲ್ಲ ಎಂಬ ಸೂಕ್ಷ್ಮಾಣುಜೀವಿ ತಜ್ಞರ ಮಾತುಗಳನ್ನು ನಾವು ಅಷ್ಟು ಸುಲಭವಾಗಿ ನಂಬುವುದಿಲ್ಲ. ನಮ್ಮ ದೇಹದ ಒಳಗೆ ಹಾಗೂ ಹೊರಗೆ ನಮ್ಮೊಂದಿಗೇ ಸಹಬಾಳ್ವೆ ನಡೆಸುವ ಸಹಸ್ರಾರು ಬಗೆಯ ಬ್ಯಾಕ್ಟೀರಿಯಗಳ ಬಗ್ಗೆ ನಮ್ಮ ತಿಳಿವಳಿಕೆ ಕಮ್ಮಿ. ಒಂದು ಅಂದಾಜಿನಂತೆ ಕಾಟ ಕೊಡುವ ಬ್ಯಾಕ್ಟೀರಿಯಗಳ ಸಂಖ್ಯೆಗಿಂತ ಅನುಕೂಲ ಮಾಡಿಕೊಡುವ ಬ್ಯಾಕ್ಟೀರಿಯಗಳ ಸಂಖ್ಯೆಯೇ ಹೆಚ್ಚಿದೆ.

ಬ್ಯಾಕ್ಟೀರಿಯಗಳೆಂದರೆ ನಮಗೆ ತೊಂದರೆ ಮಾಡುವಂಥದ್ದು ಎಂಬ ಸಾಮಾನ್ಯ ಕಲ್ಪನೆ ನಮಗಿದೆ. ಅಪ್ಪಿ—ತಪ್ಪಿ ನಮ್ಮ ದೇಹದಲ್ಲಿರುವ ಬ್ಯಾಕ್ಟೀರಿಯಗಳನ್ನೇನಾದರೂ ಸಂಪೂರ್ಣವಾಗಿ ತೊಲಗಿಸಿಬಿಟ್ಟರೆ, ಖಂಡಿತವಾಗಿಯೂ ನಾವು ಬದುಕು ನಡೆಸಲಾಗುವುದಿಲ್ಲ.

ನಮ್ಮ ದೇಹದ ಹೊರಗೆ ಹಾಗೂ ಒಳಗೆ ಕೋಟ್ಯಂತರ ಬ್ಯಾಕ್ಟೀರಿಯಗಳು ವಾಸಮಾಡಿಕೊಂಡಿವೆ. ಅವುಗಳ ವ್ಯಾಪ್ತಿ ಚರ್ಮದ ಮೇಲಿನಿಂದ ಹಿಡಿದು ಕರುಳಿನ ಒಳ ಭಾಗದ ತನಕ ವಿಸ್ತರಿಸಿಕೊಂಡಿದೆ. ಕಣ್ಣು, ಕಿವಿ, ಮೂಗು, ಬಾಯಿ, ಗಂಟಲು, ಜನನಾಂಗ, ಗುದದ್ವಾರ.... ಹೀಗೆ ದೇಹದ ಯಾವುದೇ ಭಾಗವನ್ನು ಬ್ಯಾಕ್ಟೀರಿಯ ರಹಿತ ಎಂದು ಹೇಳಲಾರದ ಮಟ್ಟಿಗೆ ಅವು ಆವರಿಸಿಕೊಂಡಿವೆ. ಮನುಷ್ಯನೊಬ್ಬನ ದೇಹವನ್ನು ರೂಪಿಸಿರುವ ಒಟ್ಟು ಜೀವಕೋಶಗಳ ಸಂಖ್ಯೆಗಿಂತಲೂ ಹತ್ತು ಪಟ್ಟು ಹೆಚ್ಚಿನ ಸಂಖ್ಯೆಯಲ್ಲಿ ಈ ಏಕಾಣುಜೀವಿಗಳ ಜೀವಕೋಶಗಳು ಅವನ ದೇಹದಲ್ಲಿವೆ. ಆದರೆ ಅಷ್ಟೊಂದು ಸಂಖ್ಯೆಯ ಬ್ಯಾಕ್ಟೀರಿಯಗಳ ಇರುವಿಕೆ ನಮಗೇಕೆ ಗೊತ್ತಾಗುವುದಿಲ್ಲವೆಂದರೆ ಅವುಗಳ ಗಾತ್ರ ನಮ್ಮ ದೇಹದ ಜೀವಕೋಶಗಳ ಗಾತ್ರಕ್ಕಿಂತಲೂ ಹತ್ತಾರು ಪಟ್ಟು ಚಿಕ್ಕದು. ಅಕಸ್ಮಾತ್ ಮನುಷ್ಯ ದೇಹದಲ್ಲಿರುವ ಬ್ಯಾಕ್ಟೀರಿಯಗಳನ್ನೆಲ್ಲ ಹುಡುಕಿ ತೆಗೆದು ಜಾಡಿಯೊಂದರಲ್ಲಿ ತುಂಬಲು ನಿರ್ಧರಿಸಿದರೆ ಅದು ಎರಡು ಲೀಟರ್‍ಗಿಂತಲೂ ಹೆಚ್ಚಿನ ಪ್ರಮಾಣದಲ್ಲಿರಲಾರದೆಂಬ ಅನಿಸಿಕೆ ಕ್ಯಾರೊಲಿನ್ ಅವರದು.

ಬ್ಯಾಕ್ಟೀರಿಯಗಳ ಗುಣ—ಲಕ್ಷಣಗಳಲ್ಲಿ ಸಾಕಷ್ಟು ವೈಪರೀತ್ಯಗಳಿವೆ. ಕೆಲವೊಂದು ಜಾತಿಗೆ ಜೀವಿಸಲು ಆಮ್ಲಜನಕ ಬೇಕೇಬೇಕು. ಕೆಲವು ಜಾತಿಗಳಿಗೆ ಆಮ್ಲಜನಕ ವಿಷವಾಯು. ಕೆಲವು ಗಾಳಿಯಲ್ಲಿ ಮಾತ್ರ ಬದುಕಬಲ್ಲವಾದರೆ ಮತ್ತೆ ಕೆಲವು ನೀರು ಅಥವಾ ತೇವಾಂಶವಿದ್ದರೆ ಮಾತ್ರ ಜೀವಿಸಬಲ್ಲವು. ಕೆಲವಕ್ಕೆ ಬೆಳಕು ಬೇಕು, ಮತ್ತೆ ಕೆಲವಕ್ಕೆ ಕಗ್ಗತ್ತಲೆ ಪ್ರಿಯ. ಕೆಲವಕ್ಕೆ ತಂಪಾದ ವಾತಾವರಣ ಹಿತವಾದರೆ ಮತ್ತೆ ಕೆಲವಕ್ಕೆ ಬಿಸಿ ಬಿಸಿ ಪರಿಸರ ಬೇಕು. ಇದೇ ರೀತಿ ಬ್ಯಾಕ್ಟೀರಿಯಗಳು ಪರಿಸರದ ಬಗ್ಗೆಯೂ ಬಹಳ ‘ಚ್ಯೂಸಿ’. ತಮಗೆ ಪೂರಕ ಹಾಗೂ ಪ್ರೇರಕವಾದಂಥ ಪರಿಸರದಲ್ಲಿ ಮಾತ್ರ ವಾಸಿಸಬಲ್ಲವು.

ಮನುಷ್ಯನ ಬಾಯಿ—ಗಂಟಲನ್ನೇ ವಾಸಸ್ಥಾನ ಮಾಡಿಕೊಂಡ ಬ್ಯಾಕ್ಟೀರಿಯ ಪ್ರಬೇಧಗಳ ಸಂಖ್ಯೆ ಏನಿಲ್ಲವೆಂದರೂ ಐದು ನೂರು. ನಮ್ಮ ನಾಲಿಗೆಯ ಮೇಲೆ ನಲಿದಾಡುವ ಬ್ಯಾಕ್ಟೀರಿಯ ಪ್ರಬೇಧಗಳ ಸಂಖ್ಯೆ ಇಪ್ಪತ್ತೈದಕ್ಕೂ ಹೆಚ್ಚು. ಎಲ್ಲೆಂದರಲ್ಲಿ ಪಿಚಕ್ಕೆಂದು ಉಗುಳುವ ನಾವು ಪ್ರತಿ ಚದುರ ಮಿಲಿಮೀಟರ್ ಎಂಜಿಲಿನಲ್ಲಿ ನಾಲ್ಕು ಕೋಟಿ ಜೀವಂತ ಬ್ಯಾಕ್ಟೀರಿಯಗಳನ್ನು ವರ್ಗಾಯಿಸಿರುತ್ತೇವೆ. ದೊಡ್ಡ ಕರುಳಿನ ಆರಂಭ ಭಾಗದ ಪ್ರತಿ ಮಿಲಿಮೀಟರ್‍ನಲ್ಲೂ ಒಂದು ಶತಕೋಟಿ ಬ್ಯಾಕ್ಟೀರಿಯಗಳು ನೆಲೆಸಿರುತ್ತವೆ. ಇಲ್ಲಿ ವಾಸಿಸುವ ಪ್ರಬೇಧಗಳಿಗೂ ಬಾಯಿಯಲ್ಲಿ ನೆಲೆಸಿರುವ ಪ್ರಬೇಧಗಳಿಗೂ ಅರ್ಥಾತ್ ಸಂಬಂಧವಿರುವುದಿಲ್ಲ. ಆಹಾರ ವಸ್ತುಗಳು ಸಾಗುವೆಡೆಯೆಲ್ಲ ತಮ್ಮ ನೆಲೆ ಕಂಡುಕೊಳ್ಳುವ ಬ್ಯಾಕ್ಟೀರಿಯಗಳು ತಾವಷ್ಟೇ ಬದುಕುವುದಿಲ್ಲ, ನಮ್ಮನ್ನೂ ಬದುಕಿಸುತ್ತವೆ. ಆಹಾರದಿಂದ ಪೌಷ್ಟಿಕಾಂಶಗಳನ್ನು ತೆಗೆದುಕೊಡುವುದರ ಜತೆಗೆ ಅವುಗಳಲ್ಲಡಗಿರುವ ಶಕ್ತಿಯನ್ನೂ ನಮಗೆ ಸೆಳೆದು ಕೊಡುತ್ತವೆ. ಇಂಥ ಬ್ಯಾಕ್ಟೀರಿಯಗಳು ನಮ್ಮ ಆಹಾರ ಮಾರ್ಗದಲ್ಲಿರದಿದ್ದರೆ ಏನಾಗುತ್ತಿತ್ತು? ನಾವು ಇಂದಿನ ಮಟ್ಟದ ಚಟುವಟಿಕೆಗಳನ್ನು ನಿರ್ವಹಿಸಲು ಈಗಿಗಿಂತಲೂ ಮೂರು ಪಟ್ಟು ಹೆಚ್ಚು ಆಹಾರ ತಿನ್ನಬೇಕಿತ್ತು.

ಬ್ಯಾಕ್ಟೀರಿಯ ದಾಳಿ ಎಂದೊಡನೆ ನಮ್ಮ ನೆನಪಿಗೆ ಬರುವುದು ದೇಹದ ಸುರಕ್ಷಾ ವ್ಯವಸ್ಥೆ. ಅಸಲಿಗೆ ದೇಹದ ಸುರಕ್ಷಾ ವ್ಯವಸ್ಥೆಯನ್ನು ನೇರ್ಪಡಿಸುವುದು ನಮ್ಮ ದೇಹದೊಳಗಿರುವ ಬ್ಯಾಕ್ಟೀರಿಯಗಳೇ. ಉದಾಹರಣೆಗೆ ಕರುಳಿನಲ್ಲಿ ನೆಲೆಸಿರುವ ಬ್ಯಾಕ್ಟೀರಿಯಗಳು ಆ ಭಾಗದ ಸುರಕ್ಷಾ ವ್ಯವಸ್ಥೆ ಆರೋಗ್ಯಪೂರ್ಣವಾಗಿರುವಂತೆ ನೋಡಿಕೊಳ್ಳುತ್ತಿರುತ್ತವೆ. ಅಷ್ಟೇಕೆ, ದೇಹಕ್ಕೆ ಸೋಂಕು ತಗಲಿಸುವ ಬ್ಯಾಕ್ಟೀರಿಯಗಳಿಗೆ ನೆಲೆ ಸಿಗದಂತೆ ಮಾಡಲು ಆಯಕಟ್ಟಿನ ಜಾಗದಲ್ಲಿ ತಮ್ಮ ವಾಸ್ತವ್ಯ ಹೂಡುತ್ತವೆ. ಉದಾಹರಣೆಗೆ ಸೋಂಕು ನಿವಾರಣೆಗೆ ತೀವ್ರ ಶಕ್ತಿಯ ಪ್ರತಿಜೈವಿಕ (ಆಂಟಿಬಯಾಟಿಕ್) ಸೇವಿಸಿದ ಸಂದರ್ಭಗಳಲ್ಲಿ ಒಂದಷ್ಟು ದಿನ ಆಮಶಂಕೆ ಉಂಟಾಗುತ್ತದೆ. ಜೀರ್ಣಾಂಗ ವ್ಯವಸ್ಥೆಯಲ್ಲಿನ ಎಲ್ಲ ಬ್ಯಾಕ್ಟೀರಿಯಗಳು ನಾಶವಾಗಿದ್ದಾಗ ಅವುಗಳ ನೆಲೆಯಲ್ಲಿ ಕೆಡಕುನ್ನುಂಟುಮಾಡುವ ಬ್ಯಾಕ್ಟೀರಿಯಗಳು ಸೇರಿಕೊಂಡುಬಿಟ್ಟಿರುತ್ತವೆ. ಹೀಗಾಗಿ ವ್ಯವಸ್ಥೆಯಲ್ಲಿ ಏರುಪೇರಾಗಿ ತೊಂದರೆಗಳುಂಟಾಗುತ್ತವೆ. ಕಾಲಕ್ರಮೇಣ ಪ್ರತಿಜೈವಿಕದ ತೀವ್ರತೆ ಕಡಿಮೆಯಾಗುತ್ತಾ ಬಂದಂತೆ, ಎಂದಿನಂತೆ ವಾಸಿಸುತ್ತಿದ್ದ ಬ್ಯಾಕ್ಟೀರಿಯ ಪ್ರಬೇಧಗಳು ತಮ್ಮ ನೆಲೆಗೆ ಹಿಂದಿರುಗುತ್ತವೆ. ಜೀರ್ಣಾಂಗ ವ್ಯವಸ್ಥೆ ಎಂದಿನಂತೆ ಕಾರ್ಯನಿರ್ವಹಿಸಲಾರಂಭಿಸುತ್ತದೆ. ಹಿಂದಿನಿಂದಲೂ ಮನುಷ್ಯನಿಗೆ ಬ್ಯಾಕ್ಟೀರಿಯಗಳಿಂದ ಉಪಯೋಗ ಮಾಡಿಕೊಳ್ಳುವುದು ಗೊತ್ತಿತ್ತು. ಮೊಸರು—ಮಜ್ಜಿಗೆ ಹೆಪ್ಪು ಹಾಕುವುದರಿಂದ ಹಿಡಿದು, ಇಡ್ಲಿ—ದೋಸೆ, ಹಾಗೆಯೆ ಬ್ರೆಡ್ ಮತ್ತಿತರ ಬೇಕರಿ ವಸ್ತುಗಳನ್ನು ತಯಾರಿಸುವ ಹಿಟ್ಟಿಗೆ ಹುದುಗುಬರಿಸುವ ತನಕ ಬ್ಯಾಕ್ಟೀರಿಯಗಳನ್ನು ಬಳಸಿಕೊಳ್ಳಲಾಗುತ್ತದೆ. ಹಾಲು ದೇಹಕ್ಕೆ ಒಗ್ಗದ ಶಿಶುಗಳಿಗೆ ಹಾಲಿನ ಪೌಷ್ಟಿಕಾಂಶಗಳನ್ನು ನೀಡಲೇ ಬೇಕಾದಾಗ ಮೊಸರು—ಯೋಗ್‍ಹರ್ಟ್, ಚೀಸ್ ಮತ್ತಿತರ ಉತ್ಪನ್ನಗಳು ನೆರವಿಗೆ ಬರುತ್ತವೆ. ದೇಹದಲ್ಲಿ ಉತ್ಪತ್ತಿಯಾಗುವ ಅನೇಕ ಕಿಣ್ವಗಳಿಗೆ ಮೂಲಾಧಾರ ಬ್ಯಾಕ್ಟೀರಿಯಗಳು. ಕೊನೆಗೆ ಸತ್ತ ಪ್ರಾಣಿಗಳ, ಕೊಳೆತ ಪದಾರ್ಥಗಳ ನಿರ್ವಹಣೆಯನ್ನು ಸಹಾ ಈ ಬ್ಯಾಕ್ಟೀರಿಯಗಳೇ ಮಾಡಿ ನಮ್ಮ ಪರಿಸರವನ್ನು ಶುದ್ಧಗೊಳಿಸುತ್ತದೆ.

ಈ ಭೂಮಿಯ ಮೇಲೆ ನೆಲೆಯೂರಿದ ಮೊದಲ ಜೀವಿಗಳಲ್ಲಿ ಒಂದಾದ ಬ್ಯಾಕ್ಟೀರಿಯಗಳು ಇಂದಿಗೂ ನಮ್ಮೊಂದಿಗಿವೆ. ಬ್ಯಾಕ್ಟೀರಿಯಗಳ ವಾಸ್ತವ್ಯ ಕೇವಲ ಮನುಷ್ಯ ಹಾಗೂ ಇತರೆ ಪ್ರಾಣಿಗಳ ದೇಹವಷ್ಟೇ ಅಲ್ಲ ನಮ್ಮ ಇಡೀ ಪರಿಸರವೇ ಬ್ಯಾಕ್ಟೀರಿಯಗಳ ನೆಲೆವೀಡು. ಮರಳುಗಾಡು, ಹಿಮಗಡ್ಡೆ, ಸಾಗರ, ಬಿಸಿನೀರ ಬುಗ್ಗೆಗಳಲ್ಲಿಯೂ ಬ್ಯಾಕ್ಟೀರಿಯಗಳು ವಾಸ ಹೂಡಿವೆ. ಒಂದು ಗ್ರಾಮ್‍ನಷ್ಟು ಮಣ್ಣು ತೆಗೆದುಕೊಂಡರೆ ಅದರಲ್ಲಿ ಹತ್ತು ಸಹಸ್ರ ಪ್ರಬೇಧಗಳೊಡಗೂಡಿದ ಹತ್ತು ಕೋಟಿ ಬ್ಯಾಕ್ಟೀರಿಯಗಳಿರಬಹುದೆಂಬ ಅಂದಾಜಿದೆ. ಒಟ್ಟಾರೆಯಾಗಿ ಬ್ಯಾಕ್ಟೀರಿಯಗಳ ಪ್ರಬೇಧಗಳ ಸಂಖ್ಯೆ ಒಂದು ಶತಕೋಟಿ. ಸಾರಜನಕವನ್ನು ಮಣ್ಣಿನಲ್ಲಿ ಕೂರಿಸುವುದರಿಂದ ಹಿಡಿದು ನೆಲದ ಫಲವತ್ತತೆಯನ್ನು ಹೆಚ್ಚಿಸುವ ತನಕ ಬ್ಯಾಕ್ಟೀರಿಯಗಳು ಹಲವು ವಿಧಗಳಲ್ಲಿ ರೈತನಿಗೆ ನೆರವಾಗುತ್ತವೆ.

ಬ್ಯಾಕ್ಟೀರಿಯಗಳೊಂದಿಗಿನ ನಮ್ಮ ಸಂಬಂಧ ಕೇವಲ ಇಷ್ಟಕ್ಕೇ ಸೀಮಿತವಾಗಿಲ್ಲ. ‘ಹ್ಯೂಮನ್ ಜೀನೋಮ್’ ಬಿಡಿಸಿಟ್ಟ ‘ಮಾನವ ಜೀನ್ ಜಾತಕ’ದಲ್ಲಿ ಕುತೂಹಲಕರ ಅಂಶಗಳು ಪ್ರಸ್ತಾಪವಾಗಿವೆ. ನಮ್ಮ ದೇಹದಲ್ಲಿ ಕಾರ್ಯನಿರತವಾಗಿರುವ ನಲವತ್ತು ಜೀನ್ ಅಥವಾ ಗುಣಾಣುಗಳ ಮೂಲ ಬ್ಯಾಕ್ಟೀರಿಯಗಳೆಂದು ತಿಳಿದುಬಂದಿದೆ. ಅವು ನಮ್ಮ ದೇಹಕ್ಕೆ ಬಂದದ್ದು ಹೇಗೆ? ಕೆಲವು ಜಿನೆಟಿಕ್ ತಜ್ಞರ ಪ್ರಕಾರ ವಿಕಾಸದ ಸರಪಣಿಯಲ್ಲಿ ಇತ್ತೀಚೆಗೆ ಮನುಷ್ಯನಿಗೆ ಸೇರ್ಪಡೆಯಾಗಿರಬಹುದು. ಏಕೆಂದರೆ ನಮ್ಮ ತೀರಾ ಹತ್ತಿರದ ಸಂಬಂಧಿಗಳಾದ ವಾನರರಲ್ಲಿ ಇಂಥ ಜೀನ್‍ಗಳು ಕಂಡು ಬಂದಿಲ್ಲ. ಇದನ್ನು ಒಪ್ಪದ ಕೆಲ ತಜ್ಞರು ಬಹಳ ಹಿಂದೆಯೇ ಇಂಥ ಜೀನ್‍ಗಳು ಸೇರ್ಪಡೆಯಾಗಿವೆ. ಕಾಲಾಂತರದಲ್ಲಿ ಜೀವಿಗಳ ಚಟುವಟಿಕೆಗಳಲ್ಲಿ ಬದಲಾವಣೆಗಳಾದ ಕಾರಣ ಅಂಥ ಜೀನ್‍ಗಳು ಕಾರ್ಯಸ್ಥಗಿತವಾಗಿವೆ. ಕೆಲವೊಂದು ವಂಶಜರಲ್ಲಿ ಅವು ಕಣ್ಮರೆಯಾಗಿರಲೂಬಹುದು.

ಬ್ಯಾಕ್ಟೀರಿಯ ಸೋಂಕಿಗೆಂದು ನಾವು ಸೇವಿಸುವ ಪ್ರತಿ—ಜೈವಿಕ ಅಂದರೆ ಆಂಟಿ—ಬಯಾಟಿಕ್ ಮಾತ್ರೆಯಲ್ಲಿನ ರಾಸಾಯನಿಕವು ನಮ್ಮ ಜೀರ್ಣಾಂಗ ವ್ಯವಸ್ಥೆಯಲ್ಲಿ ಕಾಟ ಕೊಡುತ್ತಿರುವ ಬ್ಯಾಕ್ಟೀರಿಯಗಳನ್ನು ಕೊಲ್ಲುವ ಪ್ರಯತ್ನ ಮಾಡುತ್ತದೆ. ಇದುವರೆಗೂ ನಮ್ಮ ಅರಿವಿಗೆ ಬಂದಿರುವ, ಅವುಗಳ ಪ್ರವೇಶದಿಂದಲೇ ದೈಹಿಕ ಅಸ್ವಸ್ಥತೆಗೆ ಕಾರಣವೆಂದು ನಂಬಿರುವ ಬ್ಯಾಕ್ಟೀರಿಯಗಳನ್ನಷ್ಟೇ ಈ ಮದ್ದು ನಾಶ ಮಾಡಬೇಕು. ಆದರೆ ತನ್ನ ಸಂಪರ್ಕಕ್ಕೆ ಬರುವ ಬ್ಯಾಕ್ಟೀರಿಯಗಳೆಲ್ಲದರ ಮೇಲೆ ಇಂಥ ರಾಸಾಯನಿಕಗಳು ಪರಿಣಾಮ ಬೀರುವ ಸಾಧ್ಯತೆಗಳಿವೆ. ಹಾಗೆಯೇ ಅಂಥ ಮದ್ದಿನ ಶಕ್ತಿಯನ್ನು ಎದುರಿಸಲಾಗದ ನಮ್ಮ ದೇಹದ ಅದೆಷ್ಟೋ ಕೆಲಸಗಳನ್ನು ಹಗುರವಾಗಿಸುವ ಬ್ಯಾಕ್ಟೀರಿಯಗಳು ಈ ಸಂದರ್ಭದಲ್ಲಿ ತೊಂದರೆಗೊಳಗಾಗಬಹುದು. ಇಂಥ ಏರುಪೇರುಗಳು ನಮ್ಮ ಪಚನಕ್ರಿಯೆಯ ಚಕ್ರವನ್ನೇ ಬದಲಿಸಬಹುದು. ಎಷ್ಟೇ ವ್ಯಾಯಾಮ ಮಾಡಿದರೂ ಕರಗದಿದ್ದ ಬೊಜ್ಜು ಇಳಿಯಬಹುದು, ದೇಹದ ತೂಕ ಕಡಿಮೆಯಾಗಬಹುದು. ಎಷ್ಟೇ ಆಹಾರ ಸೇವಿಸಿದರೂ ನಿಶ್ಯಕ್ತಿಯ ಅನುಭವವಾಗಬಹುದು. ನಿದ್ರೆ ಹೆಚ್ಚು ಅಥವಾ ಕಡಿಮೆಯಾಗಬಹುದು. ಕೆಲವೊಂದು ಆಹಾರ ಪದಾರ್ಥಗಳ ಸೇವನೆ ದೇಹಕ್ಕೆ ಒಗ್ಗದೆಯೆ ಅಸೌಖ್ಯವಾಗಬಹುದು. ಒಟ್ಟಿನಲ್ಲಿ ಮನುಷ್ಯನ ವಿಶಿಷ್ಟ ಗುಣಲಕ್ಷಣಗಳ ಬಗ್ಗೆ ಬರೆಯುವಾಗ ಕೇವಲ ಆತನ ‘ಜೀನ್’ಗಳನ್ನಷ್ಟೇ ಅಧ್ಯಯನ ಮಾಡಿದರೆ ಸಾಲದು. ಅವನು ಅವಲಂಬಿತವಾಗಿರುವ ಬ್ಯಾಕ್ಟೀರಿಯಗಳ ‘ಜೀನ್’ಗಳನ್ನೂ ಅಧ್ಯಯನ ಮಾಡಬೇಕಾಗುತ್ತದೆ. ಒಂದು ಅಂದಾಜಿನಂತೆ ಮನುಷ್ಯನ ಗುಣಲಕ್ಷಣಗಳನ್ನು ನಿರ್ಧರಿಸುವ ‘ಜೀನ್’ಗಳ ಸಂಖ್ಯೆ 2500 ಆದರೆ ಅವನ ವಿಶಿಷ್ಟ ಗುಣಲಕ್ಷಣಗಳಿಗೆ ಕಾರಣವಾದ ಬ್ಯಾಕ್ಟೀರಿಯಗಳ ಸಂಖ್ಯೆ ಕನಿಷ್ಟವೆಂದರೂ ಒಂದು ದಶಲಕ್ಷ. ಈ ಅಗಾಧ ಸಂಖ್ಯೆಯನ್ನು ಗಮನಿಸಿದರೆ ನಮ್ಮ ಮೇಲೆ ಬ್ಯಾಕ್ಟೀರಿಯಗಳು ಬೀರುತ್ತಿರುವ ಪ್ರಭಾವದ ತೀವ್ರತೆಯ ಅರಿವಾದೀತು.

ಈ ಭೂಮಿಯ ಮೇಲೆ ನೆಲೆಯೂರಿದ ಮೊದಲ ಜೀವಿಗಳಲ್ಲಿ ಒಂದಾದ ಬ್ಯಾಕ್ಟೀರಿಯಗಳು ಇಂದಿಗೂ ನಮ್ಮೊಂದಿಗಿವೆ. ಬ್ಯಾಕ್ಟೀರಿಯಗಳ ವಾಸ್ತವ್ಯ ಕೇವಲ ಮನುಷ್ಯ ಹಾಗೂ ಇತರೆ ಪ್ರಾಣಿಗಳ ದೇಹವಷ್ಟೇ ಅಲ್ಲ ನಮ್ಮ ಇಡೀ ಪರಿಸರವೇ ಬ್ಯಾಕ್ಟೀರಿಯಗಳ ನೆಲೆವೀಡು. ಮರಳುಗಾಡು, ಹಿಮಗಡ್ಡೆ, ಸಾಗರ, ಬಿಸಿನೀರ ಬುಗ್ಗೆಗಳಲ್ಲಿಯೂ ಬ್ಯಾಕ್ಟೀರಿಯಗಳು ವಾಸ ಹೂಡಿವೆ. ಒಂದು ಗ್ರಾಮ್‍ನಷ್ಟು ಮಣ್ಣಿನಲ್ಲಿ ಹತ್ತು ಕೋಟಿ ಬ್ಯಾಕ್ಟೀರಿಯಗಳಿರಬಹುದೆಂಬ ಅಂದಾಜಿದೆ.

ವಾದಗಳೇನೇ ಇರಲಿ. ನಮಗೂ ಬ್ಯಾಕ್ಟೀರಿಯಗಳಿಗೂ ಅಂಟಿದ ನಂಟು ಕೇವಲ ಜೀನ್‍ಗಳಿಂದ ಮಾತ್ರ ಗಟ್ಟಿಯಾಗಿಲ್ಲ. ಅದೆಷ್ಟೇ ಸಂಶೋಧನೆಗಳು ಜರುಗಿದ್ದರೂ ಮನುಷ್ಯನ ಮೇಲೆ ಬ್ಯಾಕ್ಟೀರಿಯಗಳು ಉಂಟು ಮಾಡುವ ಎಲ್ಲ ಪರಿಣಾಮಗಳನ್ನು ಗಣನೆ ಮಾಡಲಾಗಿಲ್ಲ. ಯಾವ ಬಗೆಯ ಬ್ಯಾಕ್ಟೀರಿಯಗಳ ಗೈರು ಹಾಜರಿಯಿಂದ ಯಾವ ಬಗೆಯ ತೊಂದರೆಗಳುಂಟಾಗಬಹುದು ಎಂಬ ವಿಷಯ ನಮಗಿನ್ನೂ ಸಂಪೂರ್ಣವಾಗಿ ಅರ್ಥವಾಗಿಲ್ಲ. ಸಿನಿಕ ಸೂಕ್ಷ್ಮಜೀವಿ ತಜ್ಞರ ಮಾತಿನಲ್ಲೇ ಹೇಳುವುದಾದರೆ ‘ಬ್ಯಾಕ್ಟೀರಿಯಗಳ ಬಗ್ಗೆ ನಮಗಿರುವ ತಿಳಿವಳಿಕೆ ಬ್ಯಾಕ್ಟೀರಿಯಗಳ ಗಾತ್ರದಷ್ಟೇ ಅಲ್ಪ ಪ್ರಮಾಣದ್ದು’. ಮತ್ತೊಬ್ಬ ಸೂಕ್ಷ್ಮಜೀವಿ ವಿಜ್ಞಾನಿ ಹೇಳುವ ಕಿವಿ ಮಾತು ‘ಬ್ಯಾಕ್ಟೀರಿಯಗಳೊಂದಿಗೆ ಸಹಬಾಳ್ವೆ ನಡೆಸಬೇಕಾದ ಅನಿವಾರ್ಯತೆ ಇರುವಾಗ, ಅಗತ್ಯವಿದ್ದಷ್ಟು ಮಾತ್ರ ಪ್ರತಿಜೈವಿಕ ಸೇವಿಸುವುದು ಒಳಿತು’.

ಸಂಜೋತಾ ಪುರೋಹಿತ್

ಮಕ್ಕಳ ಶಿಕ್ಷಣದ ಹೊರೆ

ಜುಲೈ ೨೦೧೮

ಇಮಾಮ್ ಗೋಡೆಕಾರ

ಒಂದು ಆನ್‍ಲೈನ್ ಕ್ರಾಂತಿ ಫ್ಲಿಪ್‍ಕಾರ್ಟ್

ಜೂನ್ ೨೦೧೮

ಭಾರತೀ ಮೈಸೂರು

ಜಪಾನ್ ಗಾತ್ರದಲ್ಲಿ ಮಾತ್ರ ಕರ್ನಾಟಕ!

ಜೂನ್ ೨೦೧೮

ಪ್ರೊ. ಕ್ರಿಸ್ಟೋಫರ್ ಚೆಕೂರಿ

ಡೊನಾಲ್ಡ್ ಟ್ರಂಪ್ ಮತ್ತು ಅಮೆರಿಕಾದ ವರ್ಣೀಯ ರಾಜಕಾರಣ

ಎಪ್ರಿಲ್ ೨೦೧೮

ತಾಳಗುಂದ ಶಾಸನ

ಎಪ್ರಿಲ್ ೨೦೧೮

ಸುಧೀಂದ್ರ ಹಾಲ್ದೊಡ್ಡೇರಿ

ಯಂತ್ರ ನೋಡಿರಣ್ಣ, ದೇಹದ ತಂತ್ರ ಕಾಣಿರಣ್ಣ!

ಎಪ್ರಿಲ್ ೨೦೧೮

ಡಿ. ರೂಪ

‘ಧೈರ್ಯ, ತಾಳ್ಮೆ ಜತೆಗಿರಲಿ’

ಮಾರ್ಚ್ ೨೦೧೮

ಸುಧೀಂದ್ರ ಹಾಲ್ದೊಡ್ಡೇರಿ

ಬ್ಯಾಕ್ಟೀರಿಯಗಳ ಬಗ್ಗೆ ನಿಮಗೇನು ಗೊತ್ತು?

ಮಾರ್ಚ್ ೨೦೧೮

ಸುಧೀಂದ್ರ ಹಾಲ್ದೊಡ್ಡೇರಿ

ಎಂಗೈತೆ ಮಗಾ, ಸಾಫ್ಟ್‍ವೇರ್ ಬ್ಯಾಂಗ್‍ಲೂರು?

ಫೆಬ್ರವರಿ ೨೦೧೮

ಪ್ರಸಾದ್ ನಾಯ್ಕ್

ಮಾರಕ ಮಾಧ್ಯಮಗಳು!

ಫೆಬ್ರವರಿ ೨೦೧೮