2nd March 2018

ಮಾಲ್ಡೀವ್ಸ್ ಎಂಬ ಸ್ವರ್ಗದಲ್ಲಿ ಅರಾಜಕತೆಯ ಕಿಚ್ಚು

ಅಧ್ಯಕ್ಷ ಯಮೀನ್ ಸುಪ್ರೀಂಕೋರ್ಟಿನ ನ್ಯಾಯಾಧೀಶರನ್ನೇ ಬಂಧನಕ್ಕೆ ಒಳಪಡಿಸಿ ಸಂಸತ್ ಭವನಕ್ಕೆ ಬೀಗ ಹಾಕಿದ್ದಾರೆ. ಶಾಂತಿಪ್ರಿಯ ದ್ವೀಪಸಮೂಹಗಳ ಪ್ರವಾಸೀ ಸ್ವರ್ಗದಲ್ಲಿ ಅರಾಜಕತೆ ವ್ಯಾಪಿಸಿದೆ.

ಭಾರತದ ಆಗ್ನೇಯ ಹಿಂದೂ ಮಹಾಸಾಗರದ ದ್ವೀಪಸಮೂಹ ರಾಷ್ಟ್ರವಾಗಿರುವ ಮಾಲ್ಡೀವ್ಸ್‌ನಲ್ಲಿ ಅಂತಃಕಲಹ ಹಾಗೂ ಅರಾಜಕತೆಯ ಪರ್ವ ತಾರಕಕ್ಕೇರಿದೆ. ಇದೇ ಫೆಬ್ರವರಿ 5ರಂದು ಮಾಲ್ಡೀವ್ಸ್‌ನ ಯಮೀನ್ ಅಬ್ದುಲ್ ಗಯೂಮ್ ದೇಶದಲ್ಲಿ ತುರ್ತುಪರಿಸ್ಥಿತಿ ಘೋಷಿಸಿ ದೇಶದ ಸರ್ವೋಚ್ಚ ನ್ಯಾಯಾಲಯದ ಇಬ್ಬರು ನ್ಯಾಯಾಧೀಶರು ಹಾಗೂ ವಿರೋಧಿ ನಾಯಕರನ್ನು ಬಂಧಿಸಿ ದೇಶದ ಸಂಸತ್ ಭವನಕ್ಕೆ ಬೀಗ ಜಡಿದಿದ್ದಾರೆ. 15 ದಿನಗಳ ವರೆಗೆ ಘೋಷಿಸಿರುವ ಈ ತುರ್ತುಪರಿಸ್ಥಿತಿ ಮುಂದುವರಿದು ನವೆಂಬರ್‍ನಲ್ಲಿ ನಡೆಯಬೇಕಾದ ಸಾರ್ವತ್ರಿಕ ಚುನಾವಣೆಯ ಮೇಲೂ ಕರಿನೆರಳು ಬೀರುವಂತಾಗಿದೆ.

ಮಾಲ್ಡೀವ್ಸ್‌ನಲ್ಲಿ 2008ರವರೆಗೆ 30 ವರ್ಷಗಳ ಕಾಲ ಇದೇ ಯಮೀನ್‍ರವರ ಮಲಸಹೋದರ ಮಾಮೂನ್ ಅಬ್ದುಲ್ ಗಯೂಮ್ ಅಧ್ಯಕ್ಷರಾಗಿದ್ದರು. ಅಬ್ದುಲ್ ಗಯೂಮ್ ಭಾರತದೊಂದಿಗೆ ಉತ್ತಮ ಸಂಬಂಧ ಹೊಂದಿದ್ದು ಹಲವಾರು ಬಾರಿ ಭಾರತದ ಗಣತಂತ್ರ ದಿವಸದಂದು ಮುಖ್ಯ ಅತಿಥಿಯೂ ಆಗಿದ್ದರು. 2008ರಲ್ಲಿ ನಡೆದ ಮೊದಲ ಸಾರ್ವತ್ರಿಕ ಚುನಾವಣೆಯಲ್ಲಿ ಮೊಹಮದ್ ನಶೀದ್ ಗೆದ್ದು ದೇಶದ ಮೊದಲ ಪ್ರಜಾಪ್ರಭುತ್ವ ಪದ್ಧತಿಯಲ್ಲಿ ಆಯ್ಕೆಯಾದ ಅಧ್ಯಕ್ಷರಾದರು. ಸಮುದ್ರ ತಟದಿಂದ ಕೆಲವೇ ಮೀಟರ್‍ಗಳಷ್ಟು ಮಾತ್ರ ಮೇಲೆ ಇರುವ ಇಡೀ ಮಾಲ್ಡೀವ್ಸ್ ದೇಶದ ಮೇಲೆ ಜಾಗತಿಕ ತಾಪಮಾನದಿಂದ ಆಗುವ ಅನಾಹುತಗಳ ಬಗ್ಗೆ ವಿಶ್ವದ ಗಮನ ಸೆಳೆದಿದ್ದರು. ಭಾರತದೊಂದಿಗೆ ಉತ್ತಮ ಸಂಬಂಧ ಹೊಂದಿದ್ದ ನಶೀದ್ ಜಿಎಮ್‍ಆರ್ ಕಂಪನಿಗೆ ರಾಜಧಾನಿ ಮಾಲೆಯ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಕಟ್ಟುವ ಅನುಮತಿ ಕರಾರನ್ನೂ ನೀಡಿದ್ದರು.

2012ರಲ್ಲಿ ನಡೆದ ಕ್ಷಿಪ್ರಕ್ರಾಂತಿಯಲ್ಲಿ ಹಿಂದಿನ ಅಧ್ಯಕ್ಷ ಮಾಮೂನ್ ಅಬ್ದುಲ್ ಗಯೂಮ್ ಬೆಂಬಲಿಗರು ನಶೀದ್‍ಗೆ ಜೀವಬೆದರಿಕೆಯೊಡ್ಡಿ ರಾಜೀನಾಮೆ ಪಡೆದರು. ನಶೀದ್ ಮೇಲೆ ಭಯೋತ್ಪಾದನೆಯ ಆಪಾದನೆ ಹೊರಿಸಿ ಅವರಿಗೆ 13 ವರ್ಷಗಳ ಕಾರಾವಾಸ ವಿಧಿಸಿದರು. ಒಂದು ವರ್ಷದ ಕಾರಾವಾಸದ ನಂತರ ನಶೀದ್ ಪೆರೋಲ್‍ನ ಮೇಲೆ ಲಂಡನ್‍ಗೆ ತೆರಳಿ ರಾಜಕೀಯ ಆಶ್ರಯ ಪಡೆದರು. ಇತ್ತ ಮಾಲ್ಡೀವ್ಸ್‌‍ನಲ್ಲಿ ಅಧ್ಯಕ್ಷರಾದ ಯಮೀನ್ ಅಬ್ದುಲ್ ಗಯೂಮ್ ಪ್ರಜಾಸತ್ತಾತ್ಮಕ ಮೌಲ್ಯಗಳನ್ನು ಗಾಳಿಗೆ ತೂರಿ ದೇಶದಲ್ಲಿ ಇಸ್ಲಾಮಿಕ್ ವಹಾಬಿ ಕಾನೂನು ತರಲು ಹೊರಟರು. ಜಿಎಮ್‍ಆರ್ ಮತ್ತು ಇತರೆ ಭಾರತದ ಕಂಪನಿಗಳ ಜೊತೆ ಮಾಡಿಕೊಂಡ ಒಡಂಬಡಿಕೆಗಳನ್ನು ರದ್ದುಪಡಿಸಿ, ಚೀನಾ ದೇಶದ ಕಂಪನಿಗಳಿಗೆ ಕೆಂಪುಹಾಸು ಹಾಸಲಾರಂಭಿಸಿದರು. ತಮ್ಮ ಸರ್ವಾಧಿಕಾರಿ ಧೋರಣೆಯಿಂದ ವಿರೋಧ ಪಕ್ಷಗಳ ಮುಖಂಡರೆಲ್ಲರ ಮೇಲೆ ಒಂದಿಲ್ಲಾ ಒಂದು ಆಪಾದನೆ ಹೊರಿಸಿ ಕಾರಾಗೃಹಕ್ಕೆ ತಳ್ಳುವ ಸಂಚು ರೂಪಿಸಿದರು.

ಇತ್ತೀಚೆಗೆ ಮಾಲ್ಡೀವ್ಸ್‌‍ನ ಸುಪ್ರೀಂಕೋರ್ಟ್ ಆದೇಶವೊಂದನ್ನು ನೀಡಿ ಪದಚ್ಯುತ ಅಧ್ಯಕ್ಷ ನಶೀದ್ ನಿರ್ದೋಷಿಯೆಂದು ಹಾಗೂ 12 ವಿರೋಧಿ ನಾಯಕ—ಸಂಸದರ ಬಂಧನ ಕಾನೂನುಬಾಹಿರವೆಂದೂ ತೀರ್ಪು ನೀಡಿತು. ಈ ಮಧ್ಯೆ 80ರ ಹರೆಯದ ಮಾಜಿ ಅಧ್ಯಕ್ಷ ಮಾಮೂನ್ ಅಬ್ದುಲ್ ಗಯೂಮ್ ಕೂಡಾ ವಿರೋಧಿ ನಾಯಕರ ಶ್ರೇಣಿ ಸೇರಿದರು. ವಿರೋಧಿ ನಾಯಕರ ಬಿಡುಗಡೆಯಾದರೆ ಸಂಸತ್ತಿನಲ್ಲಿ ತನ್ನ ಬಹುಮತಕ್ಕೆ ಧಕ್ಕೆಯಾಗುವುದು ಹಾಗೂ ಪದಚ್ಯುತ ಅಧ್ಯಕ್ಷ ನಶೀದ್ ಮಾಲ್ಡೀವ್ಸ್‌‍ಗೆ ಮರಳಿದರೆ ತನ್ನ ಬುಡಕ್ಕೆ ಕುತ್ತು ಬರುವುದೆಂಬುದನ್ನು ಅರಿತ ಯಮೀನ್ ಸುಪ್ರೀಂಕೋರ್ಟಿನ ನ್ಯಾಯಾಧೀಶರನ್ನೇ ಬಂಧನಕ್ಕೆ ಒಳಪಡಿಸಿ ಸಂಸತ್ ಭವನಕ್ಕೆ ಬೀಗ ಹಾಕಿದ್ದಾರೆ. ಶಾಂತಿಪ್ರಿಯ ದ್ವೀಪಸಮೂಹಗಳ ಪ್ರವಾಸೀ ಸ್ವರ್ಗದಲ್ಲಿ ಅರಾಜಕತೆಯ ವಾತಾವರಣ ಮೂಡಿಸಿದ್ದಾರೆ.

ಮಾಲ್ಡೀವ್ಸ್‌ನ ಬಹುತೇಕ ಆರ್ಥಿಕತೆ ಪ್ರವಾಸೋದ್ಯಮದ ಮೇಲೆ ನಿಂತಿದೆ. 2017ರಲ್ಲಿ ಬಹುತೇಕ ಭಾರತೀಯರೂ ಸೇರಿದಂತೆ 14 ಲಕ್ಷ ಪ್ರವಾಸಿಗಳು ಭೇಟಿ ನೀಡಿದ್ದ ಈ ದ್ವೀಪದೇಶ ಪ್ರವಾಸಿ ಉದ್ಯಮದಿಂದ 2.7 ಬಿಲಿಯನ್ ಡಾಲರ್ ಆದಾಯ ಗಳಿಸಿತ್ತು.

ಈ ದ್ವೀಪ ಸಮೂಹದ ಅರಾಜಕ ಪರಿಸ್ಥಿತಿಯನ್ನು ಕೊನೆಗಾಣಿಸಲು ಭಾರತ ತನ್ನ ಸೈನ್ಯ ಕಳಿಸಿ ಮಧ್ಯಪ್ರವೇಶಿಸಬೇಕೆಂದು ಪದಚ್ಯುತ ಅಧ್ಯಕ್ಷ ನಶೀದ್ ಕೋರಿದ್ದಾರೆ. ಹಲವಾರು ಅಂತರರಾಷ್ಟ್ರೀಯ ಸಂಘಟನೆಗಳೂ ಭಾರತದ ಮಧ್ಯ ಪ್ರವೇಶಕ್ಕೆ ಒತ್ತಾಯಿಸಿವೆ. ಅಮೆರಿಕಾ ಹಾಗೂ ಐರೋಪ್ಯ ದೇಶಗಳೂ ಇದಕ್ಕೆ ಪೂರಕವಾಗಿಯೇ ಇವೆ. ಆದರೆ ಚೀನಾ ದೇಶವು ಮಿಲಿಟರಿ ಹಸ್ತಕ್ಷೇಪದ ವಿರುದ್ಧ ಭಾರತಕ್ಕೆ ಎಚ್ಚರಿಕೆ ನೀಡಿದೆ. ಭಾರತವು ಸದ್ಯಕ್ಕೆ ಕಾದು ನೋಡುವ ಮನಃಸ್ಥತಿಯಲ್ಲಿದೆ. ಆದರೆ ಈ ನೆರೆಹೊರೆಯ ದೇಶದಲ್ಲಿ ಅರಾಜಕ ಪರಿಸ್ಥಿತಿಯನ್ನು ಕೊನೆಗಾಣಿಸುವ ಒತ್ತಡವೂ ಭಾರತದ ಮೇಲಿದೆ. ಈ ದ್ವೀಪಸ್ವರ್ಗದ ಕಿಚ್ಚು ನಂದಿಸುವ ರಾಜಕೀಯ ಕುಶಲತೆ ಮತ್ತು ಪ್ರಬುದ್ಧತೆಯನ್ನು ಭಾರತ ತೋರಬೇಕಾಗಿದೆ.

ಸಂಜೋತಾ ಪುರೋಹಿತ್

ಮಕ್ಕಳ ಶಿಕ್ಷಣದ ಹೊರೆ

July 2018

ಸುಧೀಂದ್ರ ಹಾಲ್ದೊಡ್ಡೇರಿ

ಯಂತ್ರ ನೋಡಿರಣ್ಣ, ದೇಹದ ತಂತ್ರ ಕಾಣಿರಣ್ಣ!

April 2018

ಸುಧೀಂದ್ರ ಹಾಲ್ದೊಡ್ಡೇರಿ

ಬ್ಯಾಕ್ಟೀರಿಯಗಳ ಬಗ್ಗೆ ನಿಮಗೇನು ಗೊತ್ತು?

March 2018

ಸುಧೀಂದ್ರ ಹಾಲ್ದೊಡ್ಡೇರಿ

ಎಂಗೈತೆ ಮಗಾ, ಸಾಫ್ಟ್‍ವೇರ್ ಬ್ಯಾಂಗ್‍ಲೂರು?

February 2018

ಪ್ರಸಾದ್ ನಾಯ್ಕ್

ಮಾರಕ ಮಾಧ್ಯಮಗಳು!

February 2018