2nd ಮಾರ್ಚ್ ೨೦೧೮

ಮಾಧ್ಯಮ
ಗೇಟ್ ಕೀಪರ್ಸ್ ಯಾರು?

ಈಶ್ವರ ದೈತೋಟ

ಮಾದ್ಯಮವಿಂದು ಅವಸರದಲ್ಲಿ ಸುದ್ದಿ ಕೊಡಿತ್ತಿದೆಯೇ? ಗಾಳಿಸುದ್ದಿ ಹರಡುತ್ತಿದೆಯೇ? ಸುದ್ದಿಯನ್ನು ಮನರಂಜನೆ ಮಟ್ಟಕ್ಕಿಳಿಸಿದೆಯೇ?

ಜೂಲೈ 1, 1843ರಲ್ಲಿ ಪ್ರಕಟಣೆಗೊಂಡ ಕನ್ನಡದ ಮೊದಲ ಪತ್ರಿಕೆ ‘ಮಂಗಳೂರ ಸಮಾಚಾರ’ದ ಒಂದನೇ ಪುಸ್ತಕ, ಒಂದನೇ ಅಂಕಿ ಸಂಚಿಕೆ ಮುಖಪುಟದಲ್ಲಿ ವ್ಯಕ್ತಪಡಿಸಲ್ಪಟ್ಟ ಪತ್ರಿಕೋದ್ಯಮದ ಧ್ಯೇಯೋದ್ದೇಶ ಹೀಗಿದೆ:

‘ಬೆಳಿಗ್ಯೆ ಬಂದ್ರದಲ್ಲ್ಯಾಗಲಿ, ಕಛೇರಿ ಹತ್ತಿರವಾಗಲಿ ವೊಬ್ಬನು ಬಾಯಿಗೆ ಬಂದ ಹಾಗೆ ವೊಂದು ವರ್ತಮಾನದ ಬಗೆಗೆ ಮಾತಾಡಿದರೆ ಅದಂನು ಬೇರೊಬ್ಬನು ಆಶ್ಚರ್ಯದಿಂದ ಕೇಳಿ ಯಿನ್ನೊಬ್ಬಬ್ಬನಿಗೆ ಹೇಳಿ ಸಾಯಂಕಾಲ ಪರಿಯಂತರ ಸುಳ್ಳು ಸುದ್ದಿಯಿಂದ ತುಂಬಿಸುತ್ತಾರೆ. ಮರುದಿನ ನಿಂನಿನ ವರ್ತಮಾನ ಸುಳ್ಳು ಯಂತಾ ಕಾಣುವದ್ರೊಳಗೆ ಯೆಂಮೆ ಮೊಲೆಯಂತೆ ಮತ್ತೊಂದು ಹುಟ್ಟಿ ಹರಡಿ ಅದೇ ಪ್ರಕಾರವಾಗಿ ಜನರು ಕಾಲಕ್ರಮಣ ಮಾಡುತ್ತಾರೆಂದು,... ಯಿದರಲ್ಲಿ ಪ್ರಯೋಜನ ಇಲ್ಲವೆಂದು ಸಮಾಚಾರ ಸಂಗ್ರಹವನ್ನು ಕೂಡಿಸಿ, ಪಕ್ಷಕ್ಕೆ ವೊಂದು ಕಾಗದವನ್ನು ಛಾಪಿಸಿ ಕೊಡಬೇಕೆಂದು ಯೋಚಿಸಿದ್ದೇವೆ’

ಪತ್ರಿಕೋದ್ಯಮಕ್ಕೂ ಜನತೆಗೂ ಇರುವ ಸಂಬಂಧ ಬೆಳೆದ ರೀತಿಯನ್ನು ಹೀಗೆ ವಿಶ್ಲೇಷಿಸಲಾಗಿದೆ: ಸ್ವಯಂಆಡಳಿತಕ್ಕೂ (ಸೆಲ್ಫ್ ಗವರ್ನೆನ್ಸ್) ಮುಕ್ತ ಸಂವಹನಕ್ಕೂ (ಫ್ರೀ ಫ್ಲೋ ಆಪ್ ಇನ್‍ಫಾರ್ಮೇಶನ್) ಪರಸ್ಪರ ಪೂರಕ ಸಂಬಂಧವಿದೆ. ಇವತ್ತು ಇವೆರಡನ್ನು ಡೆಮೋಕ್ರಸಿ ಹಾಗೂ ಜರ್ನಲಿಸಂ ಎಂದು ಗುರುತಿಸಬಹುದು. ಹಿನ್ನೋಟದಲ್ಲಿ ಗಮನಿಸಿದರೆ ಪ್ರಜಾಪ್ರಭುತ್ವವೆಂಬ ಕಲ್ಪನೆ ರೂಢಿಗೆ ಬಂದ ಸಮಾಜಗಳಲ್ಲಿ ಮುಕ್ತ ಸಂವಹನ ಇದ್ದುದು ಪೂರಕವಾಯಿತು. ಹಾಗೆಯೇ, ಮುಕ್ತ ಸಂವಹನವಿದ್ದಂತಹ ಸಮಾಜಗಳಲ್ಲಿ ಸ್ವಯಂ ಆಡಳಿತ ನಡೆಸುವುದು ಅಗತ್ಯ ಎಂಬ ತಲ್ಲಣಗಳು ಆರಂಭಗೊಂಡವು. ಕಾಲಕ್ರಮೇಣ, ಜನ ಭಾಗವಹಿಸುವಿಕೆಯಲ್ಲಿ ಬೇರುಗಳನ್ನು ಬಿಡುತ್ತಾ, ಸರಿತಪ್ಪುಗಳನ್ನು ವ್ಯಾಖ್ಯಾನಿಸಿಕೊಳ್ಳುತ್ತಾ ಇವೆರಡೂ ಸಾರ್ವಜನಿಕ ಸಂಸ್ಥೆಗಳು ಬೆಳೆದು ನಿಲ್ಲತೊಡಗಿದವು ಎಂದು ಸಮಾಜ ವಿಜ್ಞಾನಿಗಳು ಗುರುತಿಸಿದ್ದಾರೆ.

ಯಾವುದೇ ಸಮಾಜಕ್ಕೆ ಹೊಸ ಮಾಹಿತಿ ಎಂಬುದು ಅವರವರ ಬದುಕಿನ ಗುಣಮಟ್ಟ ಸುಧಾರಣೆಗೆ ಅತ್ಯಂತ ಮುಖ್ಯವಾಗುತ್ತದೆ ಎಂಬುದು ಕೂಡಾ ಇದರ ಹಿನ್ನೆಲೆಗಿದೆ. ಸತ್ಯ ಮಾಹಿತಿ ಸಿಗದಿದ್ದಾಗ ಸಮಾಜದಲ್ಲಿ ಅಭದ್ರತೆಯ ಭಾವನೆ ಮೂಡುತ್ತದೆ ಎಂದು ಕೂಡಾ ಅಧ್ಯಯನಗಳಿಂದ ಅರಿವಾಗಿದೆ. ಆರಂಭದಿಂದಲೂ ಪತ್ರಿಕೋದ್ಯಮಕ್ಕೆ ಸತ್ಯ ಮಾಹಿತಿ ಸಂಗ್ರಹಿಸುವುದು, ಅದು ಸತ್ಯ ಹೌದೇ, ಅಲ್ಲವೇ ಎಂದು ಪರಾಂಬರಿಸಿ ಕೊಡುವುದು ಅತಿ ಮುಖ್ಯ ಹೊಣೆಗಾರಿಕೆ. ಜೊತೆಗೆ, ಈ ಮಾಹಿತಿ ಕೊಟ್ಟರೆ ಸಮಾಜಕ್ಕೆ ಅನುಕೂಲವಾಗುತ್ತದೆಯೇ ಮತ್ತು ಅದನ್ನು ಪ್ರಕಟಪಡಿಸಲು ತನ್ನ ಮನಃಸ್ಸಾಕ್ಷಿ ಒಪ್ಪುತ್ತದೆಯೇ ಎಂದು ಪರಿಶೀಲಿಸಬೇಕೆಂಬ ತತ್ವಗಳೂ ಸೇರಿಕೊಂಡಿವೆ.

ಮಾಧ್ಯಮವಿಂದು ಅವಸರವಸರದಲ್ಲಿ ಸುದ್ದಿ ಕೊಡುತ್ತಿದೆಯೇ? ಗಾಳಿಸುದ್ದಿ ಹರಡುತ್ತಿದೆಯೇ? ಸುದ್ದಿಯನ್ನು ಮನರಂಜನೆ ಮಟ್ಟಕ್ಕಿಳಿಸಿದೆಯೇ? ಸ್ವತಂತ್ರ ಪತ್ರಿಕೋದ್ಯಮವೆಂಬುದು ಗ್ಲೋಬಲೈಸೇಶನ್ ಮತ್ತು ಕಾಂಗ್ಲೊಮರೈಸೇಶನ್ ಎಂಬ ದ್ರಾವಣದಲ್ಲಿ ಕರಗಿ ಹೋಗುತ್ತಿದೆಯೇ? ಎಂದು ಚಿಂತಿಸಬೇಕಾದ ಕಾಲ ಬಂದಿದೆ. ಏಕೆಂದರೆ, 25 ವರ್ಷಗಳ ಹಿಂದೆ 2000 ಕೋಟಿ ರೂ. ಇದ್ದ ಇಂಡಿಯಾದ ಮೀಡಿಯಾ ಟರ್ನೋವರ್ ಹೋದ ವರ್ಷ 2.25 ಲಕ್ಷ ಕೋಟಿ ವ್ಯವಹಾರ ದಾಖಲಿಸಿದೆ. ಇನ್ನೆರಡು ವರ್ಷಗಳಲ್ಲಿ 3 ಲಕ್ಷ ಕೋಟಿ ದಾಟಲಿದೆ.

ಕನ್ನಡ ಪತ್ರಿಕೋದ್ಯಮವಿಂದು ಹಿಂದೆಂದೂ ಇಲ್ಲದ ಉಚ್ರಾಯ ಸ್ಥಿತಿಗತಿಯಲ್ಲಿದೆ. ಆದರೆ, ಕೇವಲ ಕನ್ನಡಕ್ಕೆ ಸೀಮಿತವಾಗಲ್ಲ. ಒಟ್ಟಾರೆ ಭಾರತದ ಜರ್ನಲಿಸಂ/ಮಾಧ್ಯಮದ ಹೂರಣವೇನಾಗುತ್ತಿದೆ ಎಂದು ಅರಿಯಬೇಕಾದರೆ, “ನಾನು ಜರ್ನಲಿಸ್ಟ್” ಎಂಬ ಐ.ಡಿ. ಕಾರ್ಡು ರಹಿತವಾಗಿ ಜನಸಾಮಾನ್ಯರೊಡನೆ ಹರಟೆಗಿಳಿಯಬೇಕು. ಈ ಬಗ್ಗೆ ಚಿಂತನಮಂಥನ ಮಾಡುವುದಕ್ಕೆ ಸಕಾಲ ಬಂದಿದೆ.

ಮುದ್ರಣದಿಂದ ತೊಡಗಿದ ಮಾಧ್ಯಮ— ರೇಡಿಯೋ, ಟಿ.ವಿ. ದಾಟಿ ಇಂಟರ್ನೆಟ್ ರೆವಲೂಶನ್ ಘಟ್ಟದಲ್ಲಿದೆ. ಇದನ್ನು ಆಸೆನಿರಾಸೆಗಳಿಂದಲೇ ಜನ ಗುರುತಿಸುತ್ತಾರೆ. ಸುದ್ದಿಯ ಜೊತೆ ಗಾಳಿಸುದ್ದಿಯೂ ಮಿಳಿತವಾಗಿ ಮತ್ತು ಜನರ ನಡುವಣ ಸಂಭಾಷಣೆ ಹಂತಕ್ಕೆ ತಲುಪಿದೆ. ಬ್ರಿಟಿಷರಿಂದ ನಮಗೆ ಹರಿದ ಪತ್ರಿಕೋದ್ಯಮವಿಂದು ಅಮೇರಿಕನೈಸ್ಡ್ ಆಗಿಬಿಟ್ಟಿದೆ. ಕ್ರಮೇಣ, ಮುದ್ರಣ ಮಾಧ್ಯಮ ಹೊರಲಾರದ ಹೊರೆಯಾಗುತ್ತಿದೆ. ಟಿ.ವಿ. ರೇಡಿಯೋಗಳು ಪ್ರಭಾವ ಬೀರುತ್ತಿವೆ. ಆದರೆ, ಹೊಸಜನಾಂಗಕ್ಕೆ ನ್ಯೂಸ್ ಈಸ್ ಡಿಜಿಟಲ್ ಎನಿಸಿದೆ. ಸೋಶಿಯಲ್ ಮೀಡಿಯಾವಂತೂ, ಸುದ್ದಿ ಸತ್ಯವಿರಲಿ, ಮಿಥ್ಯವಿರಲಿ ವೈರಲ್ ಆಗಿಸಿ ರಾಕ್ಷಸಾವತಾರಕ್ಕಿಳಿಯುತ್ತಿದೆ. ಹಾಗೆಯೇ, ಹೊಸಜನಾಂಗಕ್ಕೆ ಸುದ್ದಿ ಎಂಬುದು ಗಂಭೀರ ವಿಷಯವೆನಿಸುವುದು ಬಿಟ್ಟು, ಕಾಮೆಡಿ ಅಥವಾ ಎಂಟರ್‍ಟೈನ್ಮೆಂಟ್ ಎಂಬಂತೆ ಖುಶಿ ಮೂಲವಾಗುತ್ತಿದೆ.

ಗಟ್ಟಿಸುದ್ದಿ ಇಂದು ಮುದ್ರಣ ಸ್ವರೂಪದಲ್ಲಾಗಲೀ, ಡಿಜಿಟಲ್ ಸ್ವರೂಪದಲ್ಲಾಗಲೀ ಆದಾಯ ತರುವುದು ಹೋಗಿ, ಜಾಹೀರಾತಿಗಾಗಿ ಪರದಾಡುವಂತಿದೆ. ಪತ್ರಿಕೋದ್ಯಮದಲ್ಲಿ ಟ್ರೇಡ್ ಅಸೋಸಿಯೇಶನ್‍ಗಳು, ಥಿಂಕ್‍ಟ್ಯಾಂಕ್ ಸಂಶೋಧಕರು, ಎಡ್ವೊಕೆಸಿ ಗ್ರೂಪ್‍ಗಳು, ವ್ಯಾಪಾರಿ ಸಂಘಟನೆಗಳು ಪ್ರಭಾವ ಬೀರತೊಡಗಿವೆ.

ಸುದ್ದಿಯ ಕಸಿನ್ ಆಗಿ ರೂಮರ್‍ಗಳೂ ಮೆರೆಯತೊಡಗಿವೆ. ಹೊಸ ಜನಾಂಗದವರಿಗೆ ನ್ಯೂಸ್ ಎಂದರೆ ಕಾಮೆಡಿ ಇಲ್ಲವೇ ಮಜಾ ಬಂತು ಎಂಬ ರೀತಿಯ ಮಾಹಿತಿಮೂಲವಾಗಿ ಬೆಳೆದರೂ ಆಶ್ಚರ್ಯವಾಗದ ಸ್ಥಿತಿಗೆ ನಾವು ಏರುತ್ತಿದ್ದೇವೆ ಎಂದು ಸಮಾಜ ವಿಜ್ಞಾನಿಗಳು ಗುರುತಿಸುತ್ತಿದ್ದಾರೆ. ಅಂದರೆ, ಸುದ್ದಿಸೂರನ್ನು ಕಾಯುವ ಗೇಟ್‍ಕೀಪರ್ಸ್ ಯಾರೂ ಇಲ್ಲದ ಫ್ರೀ ಫಾರ್ ಆಲ್ ಸ್ಥಿತಿಗೆ ಸುದ್ದಿ ಜಗತ್ತು ಬರುತ್ತಿದೆಯೇ?

*ಲೇಖಕರು ಹಿರಿಯ ಪತ್ರಕರ್ತರು, ಅಂಕಣಕಾರರು, ಕನ್ನಡದ ಹಲವು ದಿನಪತ್ರಿಕೆಗಳಲ್ಲಿ ಸಂಪಾದಕರಾಗಿ ಕಾರ್ಯನಿರ್ವಹಿಸಿದ ಅನುಭವಿ.

ಬದಲಾವಣೆಯ ಪರ್ವ

ಡಾ. ಎ. ಎಸ್. ಬಾಲಸುಬ್ರಹ್ಮಣ್ಯ

ಸುದ್ದಿವಾಹಿನಿಗಳು ಹಾಗೂ ಸಾಮಾಜಿಕ ಜಾಲತಾಣಗಳ ಜನಪ್ರಿಯತೆ ಸುದ್ದಿಗೆ ಹೊಸ ಅರ್ಥವನ್ನೇ ನೀಡಿವೆ. ಸುದ್ದಿ ಸುದ್ದಿಯೇ ಅಲ್ಲವಾಗಿದೆ.

ಬಹುಮಾಧ್ಯಮ ತಂತ್ರಜ್ಞಾನ, ಸಮೂಹ ಮಾಧ್ಯಮಗಳ ಪರಿಕಲ್ಪನೆಯನ್ನು ಪುನರ್ ವ್ಯಾಖ್ಯಾನಿಸಿದೆ. ಪತ್ರಿಕೆಗಳು, ಬಾನುಲಿ ಹಾಗೂ ಸಿನಿಮಾ ತಮ್ಮ ವಿಶಿಷ್ಟ ಲಕ್ಷಣಗಳೊಡನೆ ಪ್ರತ್ಯೇಕವಾಗಿ ಕಾರ್ಯನಿರ್ವಹಿಸುತ್ತಿದ್ದವು. ತಾಂತ್ರಿಕವಾಗಿ, ವೈಚಾರಿಕವಾಗಿ ಅವು ಬಹು ದೂರ ಹಾಗೂ ಭಿನ್ನ. ಇದಕ್ಕೆ ಅಪವಾದದಂತೆ ವಾಕ್—ದೃಶ್ಯಗಳ ಸಂಮಿಲನದ ಟೆಲಿವಿಷನ್ ಮನೆಯೊಳಗೆ ಆಗಮಿದಾಗ, ಕಿರುತೆರೆಯ ಈ ಪುಟ್ಟ ಪೆಟ್ಟಿಗೆ ಬಹು ಶೀಘ್ರ ಜನಪ್ರಿಯತೆಯ ಉತ್ತುಂಗ ಏರಿತು. ಸುದ್ದಿ, ಮಾಹಿತಿ ಹಾಗೂ ಮನರಂಜನೆಯನ್ನು ಬಹು ಅಗ್ಗ, ಹೇರಳ ಮತ್ತು ಪ್ರಭಾವಯುತವಾಗಿ ನೀಡಿತು.

ನೂತನ ಆವಿಷ್ಕಾರಗಳಿಂದಾಗಿ ಸಂವಹನ ತಂತ್ರಜ್ಞಾನ ಬಹು ವ್ಯಾಪಕವಾಗಿ ಜನರನ್ನು ಆವರಿಸಲಾರಂಭಿಸಿತು. ಸಂವಹನ ಉಪಗ್ರಹಗಳು ಜಗತ್ತನ್ನು ಕಿರಿದಾಗಿಸಿದವು. ಅಧಿಕ ಮಾಹಿತಿಯನ್ನು ಹೊತ್ತೊಯ್ಯಬಲ್ಲ ಆಫ್ಟಿಕಲ್ ಫೈಬರ್ ಕೇಬಲ್‍ಗಳು ಸಂವಹನ ಕ್ರಾಂತಿಗೆ ನಾಂದಿ ಹಾಡಿದವು. ಇದಕ್ಕೆ ಪೂರಕವೆಂಬಂತೆ ಕಂಪ್ಯೂಟರ್ ಆಧಾರಿತ ಸಂವಹನ ಮಾನವ ಇತಿಹಾಸದಲ್ಲಿ ಹೊಸ ಅಧ್ಯಾಯವನ್ನೇ ಬರೆಯಿತು. ಸಂವಹನ ಉಪಗ್ರಹಗಳ ನೆರವಿನಿಂದ ಧ್ವನಿ, ದೃಶ್ಯ, ಅಕ್ಷರ ಸಂಕೇತಗಳು ಸರಾಗವಾಗಿ ಹರಿಯಲಾರಂಭಿಸಿದವು. ಮಾಹಿತಿ ತಂತ್ರಜ್ಞಾನ ಶಕೆ ಆರಂಭವಾಯಿತು. ಅತ್ಯಧಿಕ ಮಾಹಿತಿಯನ್ನು ಸಂಗ್ರಹಿಸುವ, ಸಂಸ್ಕರಿಸುವ ಮತ್ತು ಮಿಂಚಿನ ವೇಗದಲ್ಲಿ ರವಾನಿಸಬಲ್ಲ ಕಂಪ್ಯೂಟರ್ ಆಧಾರಿತ ತಂತ್ರಜ್ಞಾನ ಮಾಹಿತಿ ಮಹಾಪೂರಕ್ಕೆ ನೆರವಾದವು. ಕೇವಲ ಪರಸ್ಪರ ಸಂಭಾಷಣೆಗೆ ಮೀಸಲಾಗಿದ್ದ ಮೊಬೈಲ್ ದೂರವಾಣಿ ಕ್ರಮೇಣ ಎಲ್ಲ ಸಂವಹನ ತಂತ್ರಜ್ಞಾನಗಳನ್ನು ತನ್ನ ಮಡಿಲಲ್ಲಿ ಹುದುಗಿಸಿಕೊಂಡಿತು.

ಸಾಂಪ್ರದಾಯಿಕ ಮಾಧ್ಯಮ ಸಂಸ್ಥೆಗಳು ಈ ಬೆಳವಣಿಗೆಗಳಿಂದ ನಿಬ್ಬೆರಗಾದವು. ಆದರೆ ತಾಂತ್ರಿಕ ಬೆಳವಣಿಗೆಗೆ ಮೈಯೊಡ್ಡುವುದು ಪತ್ರಿಕೆಗಳಿಗೆ ಅನಿವಾರ್ಯವಾಯಿತು. ಪರಿಣಾಮವಾಗಿ ಮುದ್ರಿತ ಪುಟಗಳನ್ನು ಕಂಪ್ಯೂಟರ್ ಇಲ್ಲವೇ ಮೊಬೈಲ್ ಪರದೆಯಲ್ಲಿ ಓದಬಲ್ಲ ವಿದ್ಯುನ್ಮಾನ ಪತ್ರಿಕೆಗಳು ಆರಂಭವಾದವು. ಪತ್ರಿಕೆಗಳು ತಮ್ಮದೇ ಜಾಲತಾಣಗಳನ್ನು ಆರಂಭಿಸಿ ಇ.ಪತ್ರಿಕೆ ಹಾಗೂ ದಿನವಿಡೀ ಸುದ್ದಿಚಿತ್ರಗಳು, ವಿಡಿಯೊ ಹಾಗೂ ಅಂಕಣ ಬರಹಗಳನ್ನು ನೀಡಲಾರಂಭಿಸಿದವು. ಯಾವ ದೇಶದಲ್ಲಿ ಎಷ್ಟು ಓದುಗರು ತಮ್ಮ ಪತ್ರಿಕೆಯ ಯಾವ ಯಾವ ವಿಷಯಗಳನ್ನು ಎಷ್ಟು ಸಮಯ ಓದುತ್ತಾರೆ, ಯಾವ ಅಂಕಣಗಳು ಜನಪ್ರಿಯ, ಮಿಂಚಂಚೆ ಮೂಲಕ ಎಲ್ಲ ಲೇಖಕರು ಹಾಗೂ ಸಂಪಾದಕರೊಡನೆ ವ್ಯವಹರಿಸುವ ಹೊಸ ಆಯಾಮಗಳು ವಿದ್ಯುನ್ಮಾನ ಶಕೆಯಲ್ಲಿ ಆವಿಷ್ಕಾರಗೊಂಡವು.

ಪತ್ರಿಕಾ ಪ್ರಕಟಣೆಯೇ ಒಂದು ಅಸಾಮಾನ್ಯ ಉದ್ದಿಮೆ. ಯಾವುದೇ ಉದ್ದಿಮೇದಾರ ತನ್ನ ಉತ್ಪನ್ನಗಳಿಗೆ ಉತ್ಪಾದನಾ ಖರ್ಚು ಆಧರಿಸಿ ಬೆಲೆ ನಿಗದಿಪಡಿಸಿ, ಮಾರಾಟಮಾಡಿ ಲಾಭ ಸಂಪಾದಿಸುತ್ತಾರೆ. ಆದರೆ ಈ ವ್ಯವಹಾರ ಹಾಗಲ್ಲ. ಹೆಚ್ಚು ಜನರನ್ನು ನಿಗದಿಪಡಿಸಿ, ಜಾಹೀರಾತುಗಳಿಂದ ಆದಾಯ ಸರಿದೂಗಿಸಲು ಪ್ರಯತ್ನಿಸುವ ಪತ್ರಿಕೋದ್ಯಮ ಅತ್ಯಂತ ಅಪಾಯಕಾರಿ ವ್ಯವಹಾರ. ಪ್ರಸಾರವಿದ್ದರೆ ಮಾತ್ರ ಜಾಹೀರಾತು ಬೆಂಬಲ. ಇಲ್ಲವೇ ಪ್ರಕಟಣೆಯ ಬೆಲೆ ಹೆಚ್ಚಳ ಅನಿವಾರ್ಯ. ದುಬಾರಿ ಬೆಲೆ ತೆತ್ತು ಓದುವ ವರ್ಗ ಬಹಳ ವಿರಳ. ಈ ವಿಷವರ್ತುಲದಿಂದ ಹೊರಬರಲು ಹಲವಾರು ಆಂಗ್ಲ ನಿಯತಕಾಲಿಕೆಗಳು ತಮ್ಮ ಮಾರಾಟ ದರವನ್ನು ಹೆಚ್ಚಿಸಿವೆ. ಆದರೆ ಈ ಸಾಹಸಕ್ಕೆ ದೈನಿಕಗಳು ಮುಂದಾಗಲಾರವು.

ಆಧುನಿಕ ಬಹುಮಾಧ್ಯಮ ತಂತ್ರಜ್ಞಾನ ಕನ್ನಡ ಸೇರಿದಂತೆ ಜಾಗತಿಕವಾಗಿ ಎಲ್ಲಾ ಭಾಷೆಗಳ ಮೇಲೆ ಪ್ರಭಾವ ಬೀರಿದೆ. ಕನ್ನಡ ಮಾಧ್ಯಮ ಲೋಕ ಕಳೆದ ಐದು ವರ್ಷಗಳಲ್ಲಿ ತಾಂತ್ರಿಕವಾಗಿ ಮಹತ್ತರ ಸಾಧನೆಗೆ ಪಾತ್ರವಾಗಿದೆ. ದೇಶವ್ಯಾಪಿ ಟಿವಿ ವಾಹಿನಿಗಳನ್ನು ನಡೆಸುತ್ತಿರುವ ಅನೇಕರು ಕರ್ನಾಟಕದಲ್ಲಿ ತಮ್ಮ ನೆಲೆಯೂರಿದ್ದಾರೆ. ಕಳೆದೆರಡು ವರ್ಷಗಳಲ್ಲಿ ಹೊರಬಂದ ಆಯುಷ ಹಾಗೂ ಸರಳ ಜೀವನ ಟಿವಿ ವಾಹಿನಿಗಳು ಆರೋಗ್ಯ ಹಾಗೂ ಜೀವನಶೈಲಿ ಕ್ಷೇತ್ರಗಳಿಗೆ ಹೆಚ್ಚು ಒತ್ತು ಕೊಡುತ್ತಿವೆ. ಕನ್ನಡದ ಮೊದಲ ಸುದ್ದಿವಾಹಿನಿ ‘ಉದಯ ನ್ಯೂಸ್’ ಅಸ್ತಂಗತವಾದ ಸುದ್ದಿ ವಿಷಾದಕರ ಬೆಳವಣಿಗೆ. ಕಳೆದ ಐದು ವರ್ಷಗಳಲ್ಲಿ ಸೇರ್ಪಡೆಯಾದ ಸುದ್ದಿವಾಹಿನಿಗಳೆಂದರೆ ಪಬ್ಲಿಕ್ ಮ್ಯೂಜಿಕ್, ಕಲ್ಕಿ, ಕಲರ್ಸ್ ಸೂಪರ್, ಹಾಗೂ ಪಬ್ಲಿಕ್ ಮೂವೀಸ್. ಆಂಧ್ರಮೂಲದ ಟಿವಿ5 ಕನ್ನಡದಲ್ಲಿ ಸುದ್ದಿವಾಹಿನಿ ತೆರೆದಿದೆ.

ನೋಂದಾಯಿತ ಕನ್ನಡ ಪತ್ರಿಕೆಗಳ ಸಂಖ್ಯೆ 5064. ಇವುಗಳಲ್ಲಿ 852 ದೈನಿಕಗಳಿವೆ ಎಂದು ಪತ್ರಿಕಾ ನೋಂದಣಿ ರಿಜಿಸ್ಟ್ರಾರ್ ಅವರ 2016—17ರ ವರದಿ ತಿಳಿಸಿದೆ. ಕಳೆದ ಐದು ವರ್ಷದಲ್ಲಿನ ಅತ್ಯಂತ ಮಹತ್ತರ ಬೆಳವಣಿಗೆ ಎಂದರೆ ವಿಜಯ ಸಂಕೇಶ್ವರ ಅವರು 2011ರಲ್ಲಿ ಆರಂಭಿಸಿದ ‘ವಿಜಯವಾಣಿ’ ದೈನಿಕ ಕೆಲವೇ ವರ್ಷಗಳಲ್ಲಿ ಮೊದಲ ಸ್ಥಾನವೇರಿ ಇತಿಹಾಸ ಸೃಷ್ಟಿಸಿತು. ಕನ್ನಡದಲ್ಲಿ ಎರಡು ದೈನಿಕಗಳನ್ನು ಆರಂಭಿಸಿ ಎರಡನ್ನೂ ಮೊದಲ ಸ್ಥಾನಕ್ಕೇರಿಸಿದ ಕೀರ್ತಿ ಸಂಕೇಶ್ವರ ಅವರಿಗೆ ಸಲ್ಲುತ್ತದೆ. ಶೀಘ್ರವೇ ವಿಜಯವಾಣಿ ಹತ್ತು ಲಕ್ಷ ಪ್ರಸಾರ ಮುಟ್ಟುವ ಮೊದಲ ಕನ್ನಡ ಪ್ರಕಟಣೆಯಾಗಲಿದೆ.

ಕಳೆದ ಐದು ವರ್ಷಗಳ ಯಾವುದೇ ಪ್ರಕರಣಗಳನ್ನು ಸೂಕ್ಷ್ಮವಾಗಿ ಗಮನಿಸಿ. ಮಂತ್ರಿ ಮೇಟಿ ರಾಸಲೀಲೆ, ಅನುಪಮಾ ಶೆಣೈ, ಗಣಪತಿ ಪ್ರಕರಣಗಳು, ಕರಾವಳಿಯ ಕೋಮು ಸಂಘರ್ಷ, ಮುಖ್ಯಮಂತ್ರಿಯ ವಾಚ್ ಹಗರಣ, ಕೆಪಿಎಸ್‍ಸಿ ನೇಮಕಾತಿ ಹಗರಣಗಳನ್ನು ಸೂಕ್ಷ್ಮವಾಗಿ ಗಮನಿಸಿ. ಇವೆಲ್ಲಾ ಹೊರಬಂದಿದ್ದು ಯಾವುದೇ ಪತ್ರಿಕೆ ಇಲ್ಲವೇ ಟಿವಿ ವಾಹಿನಿಗಳ ವಿಶೇಷ ಪರಿಶ್ರಮದಿಂದಲ್ಲ!

ಎಲ್ಲ ದೈನಿಕಗಳು ತಮ್ಮದೇ ಜಾಲತಾಣಗಳ ಮುಲಕ ತಕ್ಷಣದ ಸುದ್ದಿ ಪ್ರಕಟಿಸುತ್ತವೆ. ಚಿತ್ರಗಳು, ವಿಡಿಯೋಗಳು ಹಾಗೂ ವಿಶೇಷ ಕ್ಷೇತ್ರಗಳಿಗೆ ಮುಡಿಪಾದ ಲೇಖನಗಳು ಮತ್ತು ಅಂಕಣಗಳ ಭರಪೂರ ವಿಶೇಷಗಳನ್ನು ಓದುಗರಿಗೆ ಉಣಬಡಿಸುತ್ತಿವೆ. ಪತ್ರಿಕೆಗಳಲ್ಲದೆ ಡಿಜಿಟಲ್ ವೇದಿಕೆಯ ಮೂಲಕ ಕ್ಷಣಕ್ಷಣದ ಸುದ್ದಿ ಹಾಗೂ ವಿಶ್ಲೇಷಣೆ ನೀಡುವ ಹಲವಾರು ನ್ಯೂಸ್ ಪೋರ್ಟಲ್‍ಗಳು ಕಾರ್ಯನಿರ್ವಹಿಸಲಾರಂಭಿಸಿವೆ. ಇವುಗಳಲ್ಲಿ ಪ್ರಮುಖವಾದವುಗಳು ಏನ್ ಸುದ್ದಿ, ಒನ್ ಇಂಡಿಯಾ, ಡೇಲಿಹಂಟ್, ದಿ ಸ್ಟೇಟ್ಸ್, ಈ ನಾಡು, ಡಿಜಿಟಲ್ ಕನ್ನಡ ಮುಂತಾದವು.

ಪತ್ರಿಕಾ ಪ್ರಸಾರ ತಪಾಸಣಾ ಮಂಡಳಿ[ಎಬಿಸಿ] 2006 ರಿಂದ 2016 ರ ಅವಧಿಯಲ್ಲಿ ತನ್ನ ಸದಸ್ಯ ಪ್ರಕಟಣೆಗಳ ಅಧ್ಯಯನ ನಡೆಸಿತು. ಹಿಂದಿ ಹಾಗೂ ತೆಲುಗು ಭಾಷಾ ಪ್ರಕಟಣೆಗಳ ಪ್ರಸಾರದ ನಂತರ ಅತೀ ವೇಗವಾಗಿ ಕನ್ನಡ ಪ್ರತ್ರಿಕೆಗಳ ಪ್ರಸಾರ ಹೆಚ್ಚುತ್ತಿದೆ ಎಂದು ಅಂದಾಜಿಸಿದೆ. 2016ರ ಹೊತ್ತಿಗೆ ಎಬಿಸಿ ನಿಖರ ದಾಖಲೆಗಳ ಪ್ರಕಾರ ಕನ್ನಡ ಸದಸ್ಯ ಪ್ರಕಟಣೆಗಳ ಪ್ರಸಾರ 30 ಲಕ್ಷದಷ್ಟಿದೆ. 2016—17 ರಲ್ಲಿ ಪತ್ರಿಕಾ ನೋಂದಣಿ ಕಚೇರಿಯ ವರದಿ ಪ್ರಕಾರ, ಕನ್ನಡ ಪ್ರಕಟಣೆಗಳ ಪ್ರಸಾರ 82.14 ಲಕ್ಷ ಪ್ರತಿಗಳು ಇವುಗಳಲ್ಲಿ ದೈನಿಕಗಳ ಪಾಲು 63.68 ಲಕ್ಷ ಹಾಗೂ ನಿಯತಕಾಲಿಕಗಳ ಪ್ರಸಾರ 18.46 ಲಕ್ಷ ಎಂದು ಪತ್ರಿಕೆಗಳು ತಿಳಿಸಿವೆ.

ಪತ್ರಿಕೆಗಳನ್ನು ಪ್ರಜಾಸತ್ತೆಯ ಕಾವಲು ನಾಯಿ ಎಂದು ವರ್ಣಿಸಲಾಗಿದೆ. ಈ ನಿಟ್ಟಿನಲ್ಲಿ ಯೋಚಿಸಿದಾಗ ಕನ್ನಡ ಪತ್ರಿಕೆ ಹಾಗೂ ಸುದ್ದಿವಾಹಿನಿಗಳ ಕಾರ್ಯನಿರ್ವಹಣೆ ಅಸಮರ್ಪಕವೇ ಸರಿ. ಅಗೆದುಬಗೆದು ಸುದ್ದಿ ತರುವ ಸಾಹಸ ಪ್ರವೃತ್ತಿ ಕುಗ್ಗಿದೆ. ಇಲ್ಲವೇ ಇಲ್ಲ ಎನ್ನಬಹುದು. ಕಳೆದ ಐದು ವರ್ಷಗಳ ಯಾವುದೇ ಪ್ರಕರಣಗಳನ್ನು ಸೂಕ್ಷ್ಮವಾಗಿ ಗಮನಿಸಿ. ಮಂತ್ರಿ ಮೇಟಿ ರಾಸಲೀಲೆ, ಅನುಪಮಾ ಶೆಣೈ, ಗಣಪತಿ ಪ್ರಕರಣಗಳು, ಕರಾವಳಿಯ ಕೋಮು ಸಂಘರ್ಷ, ಮುಖ್ಯಮಂತ್ರಿಯ ವಾಚ್ ಹಗರಣ, ಕೆಪಿಎಸ್‍ಸಿ ನೇಮಕಾತಿ ಹಗರಣ ಹೀಗೆ ಹತ್ತು ಹಲವು ಘಟನೆಗಳನ್ನು ಸೂಕ್ಷ್ಮವಾಗಿ ಗಮನಿಸಿ. ಇವೆಲ್ಲಾ ಹೊರಬಂದಿದ್ದು ಯಾವುದೇ ಪತ್ರಿಕೆ ಇಲ್ಲವೇ ಟಿವಿ ವಾಹಿನಿಗಳ ಪ್ರಯತ್ನದಿಂದಲ್ಲ.

ಈ ಪ್ರವೃತ್ತಿ ಕರ್ನಾಟಕಕ್ಕೆ ಮಾತ್ರವಲ್ಲದೇ ವಿಶ್ವದೆಲ್ಲೆಡೆ ಇದೆ. ಈ ಮೊದಲು ಮಾಧ್ಯಮಗಳು ಪ್ರಜಾಸತ್ತೆಯ ಬೇರುಗಳನ್ನು ಗಟ್ಟಿಗೊಳಿಸಲು ಆಳುವ ಸರಕಾರಗಳ ವಿರುದ್ಧ ಹೊರಾಟಕ್ಕೆ ಸದಾ ತಯಾರಿರುತ್ತಿದ್ದವು. ಆದರೆ ಪರಿಸ್ಥಿತಿ ಈಗ ಬದಲಾಗಿದೆ. ಬಹುಪಾಲು ಮಾಧ್ಯಮಗಳ ಮುಂದಾಳತ್ವವನ್ನು ಮಾಲೀಕರೇ ಈಗ ನಿರ್ವಹಿಸತ್ತಿದ್ದಾರೆ. ಜಾಹೀರಾತಿನ ಆದಾಯ ಈಗ ಕುಸಿಯುತ್ತಿದೆ. ಸುದ್ದಿವಾಹಿನಿಗಳು ಹಾಗೂ ಸಾಮಾಜಿಕ ಜಾಲತಾಣಗಳ ಜನಪ್ರಿಯತೆ ಸುದ್ದಿಗೆ ಹೊಸ ಅರ್ಥವನ್ನೇ ನೀಡಿವೆ. ಸುದ್ದಿ ಸುದ್ದಿಯೇ ಅಲ್ಲವಾಗಿದೆ. ಮಾನಹಾನಿ ಪ್ರಕರಣಗಳನ್ನು ನ್ಯಾಯಾಲಯಕ್ಕೆ ಎಳೆದೊಯ್ಯುವ ಪ್ರವೃತಿ ಪತ್ರಿಕೆಗಳಿಗೆ ಕುತ್ತಾಗಿ ಪರಿಣಮಿಸಿದೆ. ಬಹುತೇಕ ಸುದ್ದಿಗಳು ಸುದ್ದಿಸಂಸ್ಥೆ, ನ್ಯಾಯಾಲಯಗಳ ತೀರ್ಪು, ಪೊಲೀಸ್ ಮೊಕದ್ದಮೆಗಳು, ಆರ್‍ಟಿಐ ಕಾರ್ಯಕರ್ತರ ಪ್ರಯತ್ನಗಳು ಹಾಗೂ ಲೆಕ್ಕ ತಪಾಸಣಾ ವರದಿಗಳನ್ನು ಆಧರಿಸಿದವುಗಳಾಗಿವೆ.

ಖಾಸಗಿ ಸಂಸ್ಥೆಗಳ ಪರವಾಗಿ ಸುದ್ದಿ ನೀಡುವ ಸಾರ್ವಜನಿಕ ಸಂಪರ್ಕ ಸಂಸ್ಥೆಗಳು ಪ್ರಮುಖ ಸುದ್ದಿ ಮೂಲಗಳಾಗುತ್ತಿವೆ. ತನಿಖಾ ವರದಿಗಳನ್ನು ಸಿದ್ದಪಡಿಸುವ ಪತ್ರಿಕಾ ಸಿಬ್ಬಂದಿಗೆ ಸಮಯ ಹಾಗೂ ವೇತನಗಳನ್ನು ನೀಡಲು ಪತ್ರಿಕೆಗಳು ಹಿಂಜರಿಯುತ್ತಿವೆ. ಹೀಗಾಗಿ ಆರೋಗ್ಯ, ಜೀವನಶೈಲಿ, ಉಡುಗೆ—ತೊಡುಗೆ, ಫ್ಯಾಷನ್, ಕ್ರೀಡೆ ಮತ್ತು ಅಪರಾಧ ಪ್ರಕರಣಗಳ ವೈಭವೀಕರಣ ಮಾಧ್ಯಮಗಳಿಗೆ ಪ್ರಮುಖ ಸಾಮಗ್ರಿಗಳಾಗಿವೆ.

ಜಾಹೀರಾತಿನ ಆದಾಯ ಕುಸಿಯುತ್ತಿರುವ ಹಿನ್ನೆಲೆಯಲ್ಲಿ ಇಂಗ್ಲೆಂಡಿನ ‘ಗಾರ್ಡಿಯನ್’ ಪತ್ರಿಕೆ ಪ್ರತಿ ತಿಂಗಳು 6.99 ಡಾಲರ್ ಹಣ ನೀಡಿ ನಮ್ಮ ಬೆಂಬಲಿಗರಾಗಿ, ನಿಮಗೆ ಮಿಂಚಂಚೆ ಮೂಲಕ ಆತ್ಯುತ್ತಮ ಲೇಖನ ಹಾಗೂ ವಿಶ್ಲೇಷಣೆಗಳನ್ನು ರವಾನಿಸುತ್ತೇವೆ ಎಂದು ಭರವಸೆ ನೀಡುತ್ತಿದೆ.

ಅಮೇರಿಕೆಯ ಪಿಬಿಎಸ್ ಎಂಬ ಟಿವಿ ವಾಹಿನಿ ಸರಕಾರದ ನೆರವಿನಿಂದ ನಡೆಯುವ ಸಂಸ್ಥೆ. ಯಾವ ಸಮಸ್ಯೆಗಳನ್ನು ಕುರಿತು ಅವರು ಕಾರ್ಯಕ್ರಮ ಮಾಡಬೇಕಿಂದಿದ್ದಾರೆಂದು ಮೊದಲೇ ತಿಳಿಸುತ್ತಾರೆ. ಸಾರ್ವಜನಿಕ ಸಂಸ್ಥೆಗಳು ಮತ್ತು ಖಾಸಗಿ ವ್ಯಕ್ತಿಗಳು ಅದಕ್ಕೆ ದೇಣಿಗೆ ನೀಡಬಹುದು. ಕಾರ್ಯಕ್ರಮದ ಕೊನೆಯಲ್ಲಿ ದೇಣಿಗೆ ನೀಡಿದವರ ಹೆಸರುಗಳನ್ನು ತೋರಿಸಲಾಗುತ್ತದೆ. ಈ ಬಗೆಯ ವೃತ್ತಿಪರ ಬದಲಾವಣೆಯ ಅನಿವಾರ್ಯತೆ ಉಂಟಾಗಿದೆ. ಇಂತಹ ಪ್ರಯೋಗಗಳು ಎಲ್ಲೆಡೆ ಆರಂಭವಾಗಬೇಕಿದೆ.

* ಲೇಖಕರು ಸೀನಿಯರ್ ಫೆಲೋ ಐಸಿಎಸ್‍ಎಸ್‍ಆರ್, ವಿದ್ಯುನ್ಮಾನ ವಿಭಾಗ, ಬೆಂಗಳೂರು ವಿಶ್ವವಿದ್ಯಾಲಯ.

ಡಾ.ಟಿ.ಆರ್.ಚಂದ್ರಶೇಖರ

ಕರ್ನಾಟಕ ಸರ್ಕಾರದ ಹಣಕಾಸಿನ ನಿರ್ವಹಣೆ

ಜುಲೈ ೨೦೧೮

ರಂಗಸ್ವಾಮಿ ಮೂಕನಹಳ್ಳಿ

ಕೃಷಿ ಸಾಲ ಮನ್ನಾ: ಸಾಧ್ಯವೇನಣ್ಣಾ?

ಜುಲೈ ೨೦೧೮

ಚಂಸು ಪಾಟೀಲ

ರೈತರೇಕೆ ಸಾಲಗಾರರಾದರು?

ಜುಲೈ ೨೦೧೮

ಟಿ.ಎಂ.ಥಾಮಸ್ ಐಸಾಕ್ ಕೇರಳದ ಹಣಕಾಸು ಸಚಿವರು

ಎಲ್ಲಾ ರಾಜ್ಯಗಳ ಹಣಕಾಸು ಸಚಿವರಿಗೆ ಕೇರಳ ಹಣಕಾಸು ಸಚಿವರ ಬಹಿರಂಗ ಪತ್ರ

ಜುಲೈ ೨೦೧೮

ಅರ್ಜುನ್ ರಾಮೇಗೌಡ ನಾರಾಯಣಸ್ವಾಮಿ

ಆ ಬೆಂಕಿಯ ಕಿಡಿ ಹೊತ್ತಿಸುವವರು ಯಾರು?

ಜೂನ್ ೨೦೧೮

ಡಾ.ಎಸ್.ಬಿ.ಜೋಗುರ

ಪೂರಕ ವಾತಾವರಣದ ಕೊರತೆ

ಜೂನ್ ೨೦೧೮

ಡಾ.ಎಸ್.ಬಿ.ಜೋಗುರ

ಹಾರ್ವರ್ಡ್ ಗುಣಮಟ್ಟ: ಕೈಗೂಡದ ಕನಸೇ?

ಜೂನ್ ೨೦೧೮

ಚುನಾವಣೆ: ಯಾರ ಹೊಣೆ?

ಎಪ್ರಿಲ್ ೨೦೧೮

ಡಾ.ಬಿ.ಎಲ್.ಶಂಕರ್

ಆಡಿದ ಮಾತಿಗೂ ಆತ್ಮದ ಮಾತಿಗೂ ಅಜಗಜಾಂತರ!

ಎಪ್ರಿಲ್ ೨೦೧೮

ಹರೀಶ್ ನರಸಪ್ಪ

ಚುನಾವಣಾ ಆಯೋಗದ ಮಿತಿ ಮತ್ತು ವೈಫಲ್ಯ

ಎಪ್ರಿಲ್ ೨೦೧೮

ಬಿ.ಎನ್.ವಿಜಯಕುಮಾರ್

ಭ್ರಷ್ಟತೆಗೆ ರಾಜಕೀಯ ಪಕ್ಷಗಳೇ ಕಾರಣ

ಎಪ್ರಿಲ್ ೨೦೧೮

ಎ.ಟಿ.ರಾಮಸ್ವಾಮಿ

ಭ್ರಷ್ಟಾಚಾರಿಗಳು ವೇಶ್ಯೆಯರಿಗಿಂತಲೂ ಕೀಳು

ಎಪ್ರಿಲ್ ೨೦೧೮

ಬಿ. ಕೆ. ಚಂದ್ರಶೇಖರ್

ಪ್ರಜಾಪ್ರಭುತ್ವಕ್ಕೆ ಕಪ್ಪುಚುಕ್ಕೆ

ಎಪ್ರಿಲ್ ೨೦೧೮

ಅಲೋಕ್ ಪ್ರಸನ್ನ, ಎಸ್. ಆರ್. ಹಿರೇಮಠ, ಬಿ. ಟಿ. ವೆಂಕಟೇಶ

ನ್ಯಾಯಾಂಗ

ಮಾರ್ಚ್ ೨೦೧೮

ಎ. ನಾರಾಯಣ, ಬಸವರಾಜ ಬೊಮ್ಮಾಯಿ, ಮೋಟಮ್ಮ

ಶಾಸಕಾಂಗ

ಮಾರ್ಚ್ ೨೦೧೮

ಬಿ. ಆರ್. ಜಯರಾಮರಾಜೇ ಅರಸ್, ಎನ್. ಹನುಮೇಗೌಡ,

ಕಾರ್ಯಂಗ

ಮಾರ್ಚ್ ೨೦೧೮

ವಾಸುದೇವ ಶರ್ಮಾ ಎನ್. ವಿ.

ನಾಗರಿಕ ಸಮಾಜ

ಮಾರ್ಚ್ ೨೦೧೮

ಈಶ್ವರ ದೈತೋಟ, ಡಾ. ಎ. ಎಸ್. ಬಾಲಸುಬ್ರಹ್ಮಣ್ಯ

ಮಾಧ್ಯಮ

ಮಾರ್ಚ್ ೨೦೧೮

ಮುಖ್ಯಚರ್ಚೆಗೆ ಪ್ರವೇಶ

ಫೆಬ್ರವರಿ ೨೦೧೮

ಡಾ.ಅರವಿಂದ ಪಟೇಲ್ ಬಳ್ಳಾರಿ

ವೈದ್ಯಕ್ಷೇತ್ರದ ಉದ್ಧಾರಕ್ಕೆ ಮೂರು ಮದ್ದು!

ಫೆಬ್ರವರಿ ೨೦೧೮

ಮಾಲತಿ ಪಟ್ಟಣಶೆಟ್ಟಿ ಧಾರವಾಡ

ಗುಣಮಟ್ಟಕ್ಕೆ ಮನ್ನಣೆ

ಫೆಬ್ರವರಿ ೨೦೧೮

ಡಾ.ಶ್ರೀನಿವಾಸ ಕಕ್ಕಿಲ್ಲಾಯ ಮಂಗಳೂರು

ಸಕ್ಕರೆ ನಿಷೇಧಿಸಿ!

ಫೆಬ್ರವರಿ ೨೦೧೮