2nd ಮಾರ್ಚ್ ೨೦೧೮

ಕಾರ್ಯಾಂಗ
ಸಂಕ್ರಮಣ ಕಾಲ

ಬಿ. ಆರ್. ಜಯರಾಮರಾಜೇ ಅರಸ್

ಶಾಸಕಾಂಗ ಶಾಸನಗಳನ್ನು ರಚಿಸಬೇಕಾದ ಜವಾಬ್ದಾರಿಯನ್ನು ಮಾತ್ರ ನಿರ್ವಹಿಸಬೇಕು. ಆದರೆ ಶಾಸಕಾಂಗ ಕಾರ್ಯಂಗದ ಕೆಲಸವನ್ನು ಮಾಡಲು ಹೊರಟಿದೆ. ಇದು ಸಂವಿಧಾನದ ಆಶಯಕ್ಕೆ ವಿರುದ್ಧ.

ಪ್ರಜಾಪ್ರಭುತ್ವ ಮಾದರಿಯ ಸರ್ಕಾರವನ್ನು ಒಪ್ಪಿ ನಾವು ಆಡಳಿತವನ್ನು ನಡೆಸಿಕೊಂಡು ಬರುತ್ತಿದ್ದೇವೆ. ಪ್ರಜಾಪ್ರಭುತ್ವ ಮಾದರಿ ನಿರಂಕುಶ ಆಡಳಿತವನ್ನು ವಿರೋಧಿಸುತ್ತದೆ. ಅಧಿಕಾರ ವಿಭಜನೆಯ ಆಧಾರದ ಮೇಲೆ ಪ್ರಜಾಪ್ರಭುತ್ವ ವ್ಯವಸ್ಥೆ ನಿಂತಿದೆ. ಲಾರ್ಡ್ ಆ್ಯಕ್ಟನ್ ಎಂಬ ರಾಜಕೀಯ ಚಿಂತಕ “power corrupts and absolute power corrupts absolutely” ಎಂದು ಹೇಳಿದ್ದಾನೆ. ಇನ್ನೊಬ್ಬ ರಾಜಕೀಯ ಚಿಂತಕ ಮಾಂಟೆಸ್ಕೊನ ‘Seಠಿeಡಿಚಿಣioಟಿ oಜಿ ಠಿoತಿeಡಿs’ ತತ್ವದ ಪ್ರಕಾರ ಪ್ರಜಾಪ್ರಭುತ್ವದಲ್ಲಿ ಯಾವ ಒಂದು ಅಂಗವೂ ಪರಮಾಧಿಕಾರವನ್ನು ಹೊಂದಿರಬಾರದು ಹಾಗೂ ಅಧಿಕಾರ ವಿಭಜನೆಯಾಗಿರಬೇಕು. ಹಾಗಾದಾಗಲೇ ಪ್ರಜಾಪ್ರಭುತ್ವ ಉಳಿಯಲು ಸಾಧ್ಯ.

ಸಂವಿಧಾನದಂತೆ ಆಡಳಿತ ನಡೆಸುವುದೇ ಪ್ರಜಾಪ್ರಭುತ್ವದ ಮುಖ್ಯ ಲಕ್ಷಣ. ಶಾಸಕಾಂಗ, ಕಾರ್ಯಾಂಗ ಮತ್ತು ನ್ಯಾಯಾಂಗ ಪ್ರಜಾಪ್ರಭುತ್ವದ ಆಧಾರ ಸ್ಥಂಭಗಳು. ಈ ಮೂರು ಅಂಗಗಳು ತಮ್ಮ ಅಧಿಕಾರವನ್ನು ಸಂವಿಧಾನದಿಂದ ಪಡೆಯುತ್ತವೆ. ನಮ್ಮ ಸಂವಿಧಾನದಲ್ಲಿ ಈ ಮೂರು ಅಂಗಗಳ ನಡುವೆ ಸ್ಪಷ್ಟವಾಗಿ ಅಧಿಕಾರ ವಿಭಜನೆಯಾಗಿದೆ. ಯಾವ ಒಂದು ಅಂಗವು ಇನ್ನೊಂದು ಅಂಗದಲ್ಲಿ ಹಸ್ತಕ್ಷೇಪ ಮಾಡಬಾರದು ಎಂಬುದು ಸಂವಿಧಾನದ ಆಶಯ. ಈ ಮೂರು ಅಂಗಗಳು ಸಂವಿಧಾನದಲ್ಲಿ ತಮಗೆ ನೀಡಿರುವ ಕಾರ್ಯವ್ಯಾಪ್ತಿಯಲ್ಲಿ ತಮ್ಮತಮ್ಮ ಕೆಲಸವನ್ನು ನಿರ್ವಹಿಸಬೇಕಾಗುತ್ತದೆ. ಶಾಸಕಾಂಗ ಶಾಸನ ರಚಿಸುವ ಹೊಣೆಗಾರಿಕೆಯನ್ನು ಹೊತ್ತಿದ್ದರೆ, ಕಾರ್ಯಾಂಗ ಶಾಸಕಾಂಗ ರಚಿಸಿದ ಶಾಸನಗಳ ಅನುಷ್ಠಾನದ ಜವಾಬ್ದಾರಿಯನ್ನು ಹೊತ್ತಿದೆ. ನ್ಯಾಯಾಂಗ ಶಾಸಕಾಂಗ ಮಾಡಿದ ಶಾಸನಗಳು ಸಂವಿಧಾನಕ್ಕೆ ವ್ಯತಿರಿಕ್ತವಾಗಿದ್ದರೆ ಅಂತಹವುಗಳನ್ನು ಪರಿಶೀಲಿಸಿ ರದ್ದುಪಡಿಸಲು ಹಾಗೂ ಕಾರ್ಯಾಂಗ ತನ್ನ ಕಾರ್ಯವ್ಯಾಪ್ತಿಯಲ್ಲಿ ಸಂವಿಧಾನ ಅಥವಾ ಶಾಸನಗಳಿಗೆ ವಿರುದ್ಧವಾಗಿ ಕೆಲಸ ಮಾಡಿದರೆ ಅಂತಹವುಗಳನ್ನು ಅಮಾನ್ಯಗೊಳಿಸುವ ಅಧಿಕಾರವನ್ನು ಹೊಂದಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಒಕ್ಕೂಟ ವ್ಯವಸ್ಥೆಯ ಪರಿಧಿಯಲ್ಲಿ ಕೆಲಸ ನಿರ್ವಹಿಸುತ್ತವೆ. ಈ ಹಿನ್ನೆಲೆಯಲ್ಲಿ ಕಳೆದ ಐದು ವರ್ಷಗಳಲ್ಲಿ ರಾಜ್ಯದ ಕಾರ್ಯಾಂಗ ನಿರ್ವಹಿಸಿದ ಕಾರ್ಯವೈಖರಿಯನ್ನು ನಾವು ಅವಲೋಕಿಸಬೇಕಾಗುತ್ತದೆ.

ಐದು ವರ್ಷಗಳಿಗೊಮ್ಮೆ ನಡೆಯುವ ಚುನಾವಣೆಗಳಲ್ಲಿ ರಾಜಕೀಯ ಪಕ್ಷಗಳ ನಡುವೆ ಅಧಿಕಾರಕ್ಕೆ ಬರಲು ತುರುಸಿನ ಸ್ಪರ್ಧೆ ಇರುತ್ತದೆ. ಹೇಗಾದರೂ ಅಧಿಕಾರಕ್ಕೆ ಬರಲೇಬೇಕೆಂಬ ಹಠದಿಂದ ಕೆಲವೊಮ್ಮೆ ಈಡೇರಿಸಲಾಗದ ಆಶ್ವಾಸನೆಗಳನ್ನು ರಾಜಕೀಯ ಪಕ್ಷಗಳು ತಮ್ಮ ಚುನಾವಣಾ ಪ್ರಣಾಳಿಕೆಯಲ್ಲಿ ಸೇರಿಸಿ, ಅಧಿಕಾರಕ್ಕೆ ಬಂದಾಗ ಅವುಗಳನ್ನು ಈಡೇರಿಸಲಾಗದೆ ಜನರ ನಿರೀಕ್ಷೆಯನ್ನು ಹುಸಿಗೊಳಿಸುತ್ತವೆ. ಹೀಗಾದಾಗ ಸರ್ಕಾರ ಮತ್ತು ಜನರ ನಡುವೆ ಅಂತರ ನಿರ್ಮಾಣವಾಗುತ್ತದೆ. ಹೀಗಾಗಿ ಎಲ್ಲ ಸರ್ಕಾರಗಳು ಒತ್ತಡದಿಂದ ಕೆಲಸ ನಿರ್ವಹಿಸಬೇಕಾದ ಅನಿವಾರ್ಯತೆ ಈಗ ಬಂದೊದಗಿದೆ.

ಕಾರ್ಯಾಂಗ ದಕ್ಷವಾಗಿ ಕೆಲಸ ನಿರ್ವಹಿಸಬೇಕಾದರೆ, ಸಮರ್ಥವಾದ ಆಡಳಿತ ಯಂತ್ರವನ್ನು ಹೊಂದಿರಬೇಕಾಗಿರುತ್ತದೆ. ಮೊಂಡಾದ ಕೊಡಲಿಯಿಂದ ಮರವನ್ನು ಕಡಿಯಲು ಸಾಧ್ಯವಿಲ್ಲ. ಸರ್ಕಾರ ಹರಿತವಾದ ಆಯುಧವನ್ನು ಆಡಳಿತ ಯಂತ್ರದ ರೂಪದಲ್ಲಿ ಹೊಂದಿದ್ದರೆ ಮಾತ್ರ ಸರ್ಕಾರ ಜನರಿಗೆ ನೀಡಿರುವ ಭರವಸೆಗಳನ್ನು ಈಡೇರಿಸಲು ಸಾಧ್ಯ. ಇದರ ಜೊತೆಗೆ ಸಮಾಜದ ಫಲ ನ್ಯಾಯಯುತವಾಗಿ ಎಲ್ಲ ವರ್ಗಗಳ ಜನರಿಗೆ ತಲುಪುವಂತಾಗಬೇಕಾದರೆ, ಸರ್ಕಾರ ಸ್ವತಂತ್ರ ಸಂಸ್ಥೆಗಳನ್ನು ಕಟ್ಟಿ ಅವು ಸರಿಯಾಗಿ ಕೆಲಸ ನಿರ್ವಹಿಸುವಂತೆ ನೋಡಿಕೊಳ್ಳಬೇಕಾಗುತ್ತದೆ.

ಜಾನ್‍ರಾಲ್ಸ್ ಎನ್ನುವ ರಾಜಕೀಯ ಚಿಂತಕ ತನ್ನ ಥಿಯರಿ ಆಫ್ ಜಸ್ಟೀಸ್ ಎಂಬ ಮಹತ್ವದ ಕೃತಿಯಲ್ಲಿ, ‘ಸಾರ್ವಭೌಮ ರಾಷ್ಟ್ರಗಳು ನ್ಯಾಯದ ತತ್ವಗಳನ್ನು ಪರಿಪೂರ್ಣವಾದ ಸಂಸ್ಥೆಗಳ ಮೂಲಕ ಕಾರ್ಯಗತಗೊಳಿಸಲು ಸಾಧ್ಯ’ ಎಂದು ಹೇಳುತ್ತಾನೆ. ಈ ಅರ್ಥದಲ್ಲಿ ಶಾಸಕಾಂಗವು ಒಂದು ಸ್ವತಂತ್ರ ಸಂಸ್ಥೆಯೇ ಆಗಿದೆ. ನಮ್ಮ ಸಂವಿಧಾನದಲ್ಲಿ ಹೇಳಿರುವಂತೆ ಶಾಸಕಾಂಗ ಶಾಸನಗಳನ್ನು ರಚಿಸಬೇಕಾದ ಜವಾಬ್ದಾರಿಯನ್ನು ಮಾತ್ರ ನಿರ್ವಹಿಸಬೇಕು. ಆದರೆ ಶಾಸಕಾಂಗ ಕಾರ್ಯಾಂಗದ ಕೆಲಸವನ್ನು ಮಾಡಲು ಹೊರಟಿದೆ. ಸಂವಿಧಾನದ ಆಶಯಕ್ಕೆ ಇದು ವಿರುದ್ಧವಾಗಿದೆ.

ಲಾಭದಾಯಕ ಹುದ್ದೆ ಪಟ್ಟಿಯಿಂದ, ಕೆಲವು ಕಾರ್ಯಾಂಗದ ಹುದ್ದೆಗಳನ್ನು ತೆಗೆದುಹಾಕಿ ಶಾಸಕರಿಗೆ ಕಾರ್ಯಾಂಗದ ಹುದ್ದೆಗಳನ್ನು ನೀಡಿರುವುದು ಕಾರ್ಯಾಂಗದಲ್ಲಿ ಶಾಸಕಾಂಗ ಹಸ್ತಕ್ಷೇಪ ಮಾಡಲು ಅವಕಾಶ ಮಾಡಿಕೊಟ್ಟಂತಾಗಿದೆ. ಹೀಗಾಗಿ ಶಾಸಕಾಂಗ ಮತ್ತು ಕಾರ್ಯಾಂಗದ ನಡುವೆ ಯಾವುದೇ ಅಂತರ ಉಳಿಯದೆ, ಕಾರ್ಯಾಂಗದ ಕೆಲಸವನ್ನು ಶಾಸಕಾಂಗ ಮಾಡುವಂತಾಗಿರುವುದು ಒಂದು ಆತಂಕಕಾರಿ ಬೆಳವಣಿಗೆ. ಶಾಸಕಾಂಗ ಕಾರ್ಯಾಂಗದ ಕೆಲಸವನ್ನು ಮಾಡಲು ಹೊರಟರೆ, ಶಾಸನ ಸಭೆಯಲ್ಲಿ ಕಾರ್ಯಾಂಗದ ಕಾರ್ಯವೈಖರಿ ಬಗ್ಗೆ ಪ್ರಶ್ನಿಸುವ ಶಕ್ತಿಯನ್ನೇ ಕಳೆದುಕೊಳ್ಳುತ್ತದೆ. ಕಾರ್ಯಾಂಗವನ್ನು ಪ್ರಶ್ನಿಸಲು ಯಾರೂ ಉಳಿಯುವುದಿಲ್ಲ. ಇದೊಂದು ವಿಪರ್ಯಾಸವೇ ಸರಿ. ಸಂಸದೀಯ ಪ್ರಜಾಪ್ರಭುತ್ವದಲ್ಲಿ ಶಾಸಕಾಂಗ ಮತ್ತು ಕಾರ್ಯಾಂಗ ಒಂದಕ್ಕೊಂದು ಬೆಸೆದುಕೊಂಡಿರುವುದರಿಂದ ಯಾವ ಅಂಗ ಯಾವ ಕೆಲಸವನ್ನು ಮಾಡುತ್ತಿದೆ ಎಂಬುದರ ಬಗ್ಗೆ ಸಂಶಯ ಮೂಡುತ್ತದೆ. ಈ ನಿಟ್ಟಿನಲ್ಲಿ ಶಾಸಕಾಂಗ ಹಾಗೂ ಕಾರ್ಯಾಂಗಗಳು ತಮಗೆ ಸಂವಿಧಾನ ನೀಡಿರುವ ಕಾರ್ಯವ್ಯಾಪ್ತಿಯಲ್ಲಿ ಕೆಲಸ ನಿರ್ವಹಿಸುವ ಅವಶ್ಯಕತೆ ಈಗ ಹಿಂದೆಂದಿಗಿಂತಲೂ ಹೆಚ್ಚಾಗಿದೆ. ಇಲ್ಲದಿದ್ದಲ್ಲಿ ಅಧಿಕಾರ ವಿಭಜನೆಗೆ ಅರ್ಥವೇ ಇರುವುದಿಲ್ಲ. ವ್ಯವಸ್ಥೆಯಲ್ಲಿ ಚೆಕ್ಸ್ ಅಂಡ್ ಬ್ಯಾಲನ್ಸಸ್ ಇಲ್ಲದಂತಾಗುತ್ತದೆ. ಒಂದು ಅಂಗ ಹೆಚ್ಚು ಬಲಶಾಲಿಯಾಗಿ ಇನ್ನೊಂದು ಅಂಗವನ್ನು ಆಳುವ ಪರಿಸ್ಥಿತಿ ನಿರ್ಮಾಣವಾಗುತ್ತದೆ.

ಲೋಕಸೇವಾ ಆಯೋಗ ಒಂದು ಸಾಂವಿಧಾನಿಕ ಸಂಸ್ಥೆ. ಲೋಕಸೇವಾ ಆಯೋಗದ ಸದಸ್ಯರನ್ನು ನೇಮಕ ಮಾಡುವ ಪ್ರಕ್ರಿಯೆಯಲ್ಲಿ ವಿಳಂಬ, ಅಭ್ಯರ್ಥಿಗಳನ್ನು ಆಯ್ಕೆ ಮಾಡುವ ಪ್ರಕ್ರಿಯೆಯಲ್ಲಿ ಪಾರದರ್ಶಕತೆಯ ಕೊರತೆ, ಇವುಗಳಿಂದಾಗಿ ಎಲ್ಲ ಆಯ್ಕೆಗಳು ನ್ಯಾಯಾಂಗದ ಮುಂದೆ ನೆನೆಗುದಿಗೆ ಬಿದ್ದಿರುವುದು ಸರ್ಕಾರದ ಆಡಳಿತದ ಯಂತ್ರದ ಮೇಲೆ ಹೆಚ್ಚಿನ ಹೊರೆಯನ್ನು ಹೇರಿದಂತಾಗಿದೆ. ಸಿಬ್ಬಂದಿಯ ಕೊರತೆಯಿಂದ ಸರ್ಕಾರ ಜನಪರ ಕಾರ್ಯಕ್ರಮಗಳನ್ನು ಸಮಾರೋಪಾದಿಯಲ್ಲಿ ಕಾಲಮಿತಿಯೊಳಗೆ ನಿರ್ವಹಿಸಲು ಹೆಣಗಾಡುವಂತಾಗಿದೆ.

ಕಾರ್ಯಾಂಗ ತಾನು ಜನರಿಗೆ ಉತ್ತರದಾಯಿಯಾಗಿರಬೇಕು ಎನ್ನುವ ಉದ್ದೇಶದಿಂದ ಲೋಕಾಯುಕ್ತ ಸಂಸ್ಥೆಯನ್ನು ರಾಜ್ಯದಲ್ಲಿ ಹುಟ್ಟುಹಾಕಿದೆ. ಈ ವ್ಯವಸ್ಥೆಯಡಿ ಕಾರ್ಯಾಂಗ ತಾನು ಸರಿಯಾಗಿ ಕೆಲಸ ನಿರ್ವಹಿಸದಿದ್ದಲ್ಲಿ ತನ್ನ ಬಗ್ಗೆಯೇ ಸಾರ್ವಜನಿಕರು ಲೋಕಾಯುಕ್ತಕ್ಕೆ ದೂರು ಕೊಡುವ ಅವಕಾಶವನ್ನು ಕಲ್ಪಿಸಿದ್ದಾಗ್ಯೂ, ಹಲವಾರು ಕಾರಣಗಳಿಂದ, ಒಮ್ಮೆ ಬಲಿಷ್ಠವಾಗಿದ್ದ ಈ ಸಂಸ್ಥೆ ಈಗ ದುರ್ಬಲವಾಗಿ ಕಾಣತೊಡಗಿದೆ. ಈ ಸಂಸ್ಥೆ ದುರ್ಬಲವಾದರೆ ಜನರಿಗೆ ನ್ಯಾಯ ಒದಗಿಸಲು ಹೇಗೆ ತಾನೆ ಸಾಧ್ಯ? ಆದಾಗ್ಯೂ ಸರ್ಕಾರ ‘ಸಕಾಲ’ ಯೋಜನೆಗೆ ಶಾಸನ ರೂಪುನೀಡಿ ಜನರಿಗೆ ಮುಟ್ಟಬೇಕಾದ ಸೌಲಭ್ಯಗಳನ್ನು ಕಾಲಮಿತಿಯಲ್ಲಿ ದೊರಕಿಸುವಂತೆ ಮಾಡಿರುವುದು ಒಂದು ಒಳ್ಳೆಯ ಬೆಳವಣಿಗೆ. ರಾಜ್ಯ ಮಾನವಹಕ್ಕು ಆಯೋಗ ಈ ಐದು ವರ್ಷಗಳಲ್ಲಿ ಅಧ್ಯಕ್ಷರಿಲ್ಲದೆ ತನ್ನ ಕಾರ್ಯ ನಿರ್ವಹಣೆಯಲ್ಲಿ ದೊಡ್ಡ ಸವಾಲನ್ನೆ ಎದುರಿಸಬೇಕಾಯಿತು. ಈಗ ಅಧ್ಯಕ್ಷರ ಹುದ್ದೆಯನ್ನು ತುಂಬಿರುವುದರಿಂದ ಸಂಸ್ಥೆಯ ಸಮರ್ಥ ನಿರ್ವಹಣೆ ಸಾಧ್ಯವಾಗಬಹುದಾಗಿದೆ.

ವಿಶ್ವವಿದ್ಯಾಲಯಗಳು ಸ್ವಾಯತ್ತ ಸಂಸ್ಥೆಗಳು. ಆದರೆ 8—9 ವಿಶ್ವವಿದ್ಯಾಲಯಗಳಲ್ಲಿ ಕುಲಪತಿಗಳೇ ಇಲ್ಲ. ಹೀಗಾದಾಗ ಶೈಕ್ಷಣಿಕ ಮಟ್ಟ ಕುಸಿಯುತ್ತದೆ. ಉನ್ನತ ಶಿಕ್ಷಣವನ್ನು ಸಂಪೂರ್ಣ ನಿರ್ಲಕ್ಷಿಸಿದಂತಾಗುತ್ತದೆ.

ರಾಜಕೀಯ ಧ್ರುವೀಕರಣವಾಗುತ್ತಿರುವ ಈ ಸಂದರ್ಭದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವುದು ಕಾರ್ಯಾಂಗಕ್ಕೆ ಒಂದು ದೊಡ್ಡ ಸವಾಲಾಗಿ ಪರಿಣಮಿಸಿದೆ. ಈ ಸವಾಲನ್ನು ಕಾರ್ಯಾಂಗ ಅತ್ಯಂತ ಸೂಕ್ಷ್ಮವಾಗಿ ನಿರ್ವಹಿಸುತ್ತಾ ಬಂದಿದೆ ಎಂದು ಹೇಳಬಹುದು.

ಸಾಮಾಜಿಕ ನ್ಯಾಯ ಪ್ರತಿಪಾದಿಸಿದ ದೇವರಾಜ ಅರಸ್ ಅವರು ಭೂಸುಧಾರಣೆ ಜಾರಿಗೆ ತಂದು ದೇಶದಲ್ಲೇ ಮಾದರಿಯಾದರು. ಅದರ ಮುಂದುವರಿದ ಭಾಗವಾಗಿ ಬಗರ್ ಹುಕುಂ ಜಮೀನು ಸಕ್ರಮಗೊಳಿಸುವ ಕಾನೂನನ್ನು ಜಾರಿಗೆ ತರಲಾಗಿದೆ. ಆದರೆ ಅಕ್ರಮಸಕ್ರಮ ಸಮಿತಿಗಳು ಕಾಲಕಾಲಕ್ಕೆ ಸೇರುತ್ತಿಲ್ಲ ಎಂಬ ಮಾತುಗಳು ಆಗಾಗ ಕೇಳಿ ಬರುತ್ತಿರುವುದು ಆತಂಕಕಾರಿ ಬೆಳವಣಿಗೆ. ಸರ್ಕಾರ ಈ ದೋಷವನ್ನು ಸರಿಪಡಿಸಲು ಪರ್ಯಾಯ ಮಾರ್ಗೋಪಾಯಗಳನ್ನು ಹುಡುಕಿಕೊಳ್ಳಬೇಕಾಗುತ್ತದೆ. ಭೂ ಕಬಳಿಕೆದಾರರ ವಿರುದ್ಧ ಕಾನೂನಿನ ಕ್ರಮ ತೆಗೆದುಕೊಳ್ಳಲು ವಿಶೇಷ ನ್ಯಾಯಾಲಯಗಳನ್ನು ಸ್ಥಾಪಿಸಿರುವುದು ಒಂದು ದಿಟ್ಟ ಹೆಜ್ಜೆ.

ಕಾರ್ಯಾಂಗ ದಕ್ಷವಾಗಿ ಕೆಲಸ ನಿರ್ವಹಿಸಬೇಕಾದರೆ, ಸಮರ್ಥವಾದ ಆಡಳಿತ ಯಂತ್ರವನ್ನು ಹೊಂದಿರಬೇಕಾಗಿರುತ್ತದೆ. ಮೊಂಡಾದ ಕೊಡಲಿಯಿಂದ ಮರವನ್ನು ಕಡಿಯಲು ಸಾಧ್ಯವಿಲ್ಲ.

ಕಾರ್ಯಾಂಗ ತಾನು ಜನರಿಗೆ ಉತ್ತರದಾಯಿಯಾಗಿರಬೇಕು ಎನ್ನುವ ಉದ್ದೇಶದಿಂದ ಲೋಕಾಯುಕ್ತ ಸಂಸ್ಥೆಯನ್ನು ಹುಟ್ಟುಹಾಕಿದೆ. ಈ ವ್ಯವಸ್ಥೆಯಡಿ ಕಾರ್ಯಾಂಗ ತಾನು ಸರಿಯಾಗಿ ಕೆಲಸ ನಿರ್ವಹಿಸದಿದ್ದಲ್ಲಿ ತನ್ನ ಬಗ್ಗೆಯೇ ಸಾರ್ವಜನಿಕರು ಲೋಕಾಯುಕ್ತಕ್ಕೆ ದೂರು ಕೊಡುವ ಅವಕಾಶವನ್ನು ಕಲ್ಪಿಸಿದ್ದಾಗ್ಯೂ, ಹಲವಾರು ಕಾರಣಗಳಿಂದ, ಒಮ್ಮೆ ಬಲಿಷ್ಠವಾಗಿದ್ದ ಈ ಸಂಸ್ಥೆ ಈಗ ದುರ್ಬಲವಾಗಿ ಕಾಣತೊಡಗಿದೆ.

ನದಿ ನೀರಿನ ಹಂಚಿಕೆ ವಿವಾದಗಳು ನ್ಯಾಯಾಂಗದ ಹಾಗೂ ಟ್ರಿಬ್ಯುನಲ್‍ಗಳ ಅಂಗಳದಲ್ಲಿದ್ದು, ಸರ್ಕಾರ ಕಾನೂನಿನ ಹೋರಾಟವನ್ನು ಸಮರ್ಥವಾಗಿ ಮಾಡಿಕೊಂಡು ಬರುತ್ತಿದೆ. ತೀರ್ಪು ಯಾವ ರೀತಿ ಬರುತ್ತದೆ ಎಂದು ಕಾದು ನೋಡಬೇಕಾಗಿದೆ.

ಪ್ರತ್ಯೇಕ ಕನ್ನಡ ಬಾವುಟ, ಪ್ರಾಥಮಿಕ ಹಂತದಿಂದ ಶಾಲೆಗಳಲ್ಲಿ ಕನ್ನಡ ಕಡ್ಡಾಯ ಕಲಿಕೆ ತೀರ್ಮಾನಗಳು, ಒಕ್ಕೂಟ ವ್ಯವಸ್ಥೆಯಲ್ಲಿ ಕೇಂದ್ರಾಧಿಕಾರವಾದಕ್ಕೆ ವಿರುದ್ಧವಾದ (centripetal) ವಿಕೇಂದ್ರೀಕರಣ ವಾದಕ್ಕೆ (centrifugal) ಹೆಚ್ಚು ಒತ್ತು ನೀಡಬೇಕೆಂಬ ಸದಾಶಯವನ್ನು ಬಿಂಬಿಸುವಂತಹವಾಗಿವೆ.

ಸ್ಥಳೀಯ ಸಂಸ್ಥೆಗಳಿಗೆ ಸಂವಿಧಾನ ಆಶಿಸಿರುವಂತೆ ಹೆಚ್ಚಿನ ಅಧಿಕಾರ, ಸಂಪನ್ಮೂಲ ನೀಡುವಿಕೆ ಇವುಗಳಲ್ಲಿ ರಾಜ್ಯ ಮಂಚೂಣಿಯಲ್ಲಿದೆ. ‘ಅನ್ನಭಾಗ್ಯ’ ಹಾಗೂ ‘ಇಂದಿರಾ ಕ್ಯಾಂಟೀನ್’ ಕಾರ್ಯಕ್ರಮಗಳು ಕರ್ನಾಟಕವನ್ನು ಹಸಿವು ಮುಕ್ತ ರಾಜ್ಯದ ಕನಸನ್ನು ನನಸು ಮಾಡಿವೆ. ಈ ಎರಡು ಕಾರ್ಯಕ್ರಮಗಳು ಈ ಸರ್ಕಾರ ತಂದ ಅತ್ಯಂತ ಯಶಸ್ವಿಯಾದ ಜನಪರ ಕಾರ್ಯಕ್ರಮಗಳು ಎನ್ನಬಹುದು. ಬೃಹತ್ ಸೌರಶಕ್ತಿ ಉತ್ಪಾದನಾ ಪ್ರಯೋಗ ರಾಜ್ಯದಲ್ಲಿ ನಡೆಯುತ್ತಿದ್ದು, ವಿಶ್ವಾಸಾರ್ಹತೆಯನ್ನು ಮೂಡಿಸಿದೆ. ಸರ್ಕಾರ ರೈತರ ಸಾಲ ಮನ್ನಾ ಮಾಡಿ ಆ ವರ್ಗಕ್ಕೆ ಸ್ವಲ್ಪ ಚೈತನ್ಯವನ್ನು ನೀಡಿದೆ. ಎಲ್ಲರನ್ನೊಳಗೊಂಡ ಅಭಿವೃದ್ಧಿಗೆ ಸರ್ಕಾರ ಮಣೆ ಹಾಕಿದೆ.

ಅಭಿವೃದ್ಧಿ ಕಾರ್ಯಗಳು ನಡೆಯಬೇಕಾದರೆ ರಾಜಕೀಯ ಸ್ಥಿರತೆ ಬಹಳ ಮುಖ್ಯವಾಗುತ್ತದೆ. ರಾಜಕೀಯ ಅಸ್ಥಿರತೆ ಇದ್ದರೆ ಕಾರ್ಯಾಂಗದ ಹದ ತಪ್ಪುತ್ತದೆ. ಅಂತಹ ರಾಜಕೀಯ ಸ್ಥಿರತೆಯನ್ನು ಈ ಸರ್ಕಾರ ನೀಡಿದೆ. ಆದಾಗ್ಯೂ ಆಡಳಿತಯಂತ್ರದ ದಕ್ಷ ನಿರ್ವಹಣೆ ಒಂದು ದೊಡ್ಡ ಸವಾಲಾಗಿ ಪರಿಣಮಿಸಿ, ರಾಜ್ಯ ಸಂಕ್ರಮಣ ಕಾಲದಲ್ಲಿ ಹಾದುಹೋಗುತ್ತಿದೆ ಎಂದೇ ಹೇಳಬೇಕಾಗುತ್ತದೆ.

*ಲೇಖಕರು ನಿವೃತ್ತ ಐಎಎಸ್ ಅಧಿಕಾರಿ, ಪ್ರಸ್ತುತ ಕರ್ನಾಟಕ ಭೂಕಬಳಿಕೆ(ನಿಷೇಧ) ವಿಶೇಷ ನ್ಯಾಯಾಲದ ಕಂದಾಯ ಸದಸ್ಯರು.

ಹಳೇ ಕಲ್ಲು ಹೊಸ ಬಿಲ್ಲು!

ಎನ್. ಹನುಮೇಗೌಡ

ರಾಜಕಾರಣಿಗಳ ಅಡಿಯಾಳಾದ ನೌಕರರು, ಹಾಸುಹೊಕ್ಕಾದ ಭ್ರಷ್ಟಾಚಾರ, ಪ್ರತಿಪಕ್ಷಗಳ ಹೊಂದಾಣಿಕೆ... ಇವು ಆಡಳಿತ ವ್ಯವಸ್ಥೆಯ ಮೈಲುಗಲ್ಲುಗಳು.

ಇಂದಿನ ಆಡಳಿತ ಯಂತ್ರವು ರಾಜಕೀಯ ನಾಯಕರ ಸಂಪೂರ್ಣ ಅಡಿಯಾಳಾಗಿ ಕೆಲಸ ಮಾಡುತ್ತಿದೆ. ಕಾರಣ ಇಷ್ಟೆ. ಪ್ರತಿಯೊಬ್ಬ ಶಾಸಕರು ತಮ್ಮ ಇಚ್ವೆಗೆ ಅನುಗುಣವಾಗಿ ಕೆಲಸ ಮಾಡುವ ಅಧಿಕಾರಿ ಮತ್ತು ನೌಕರರನ್ನು ಕ್ಷೇತ್ರಕ್ಕೆ ಹಾಕಿಸಿಕೊಳ್ಳುತ್ತಾರೆ.

ಶಾಸಕರು ಹೇಳಿದಂತೆ ಅಧಿಕಾರಿಗಳು ಕೇಳದಿದ್ದಲ್ಲಿ ಗಂಟುಮೂಟೆ ಕಟ್ಟಬೇಕಾಗುತ್ತದೆ. ಅದಕ್ಕಾಗಿ ಪರಿಸ್ಥಿತಿಯ ಅನಿವಾರ್ಯತೆಗೆ ಒಳಗಾದ ಸರ್ಕಾರಿ ನೌಕರರು ಸರ್ಕಾರದ ನೀತಿ ನಿಯಮಗಳ ಉಲ್ಲಂಘನೆ ಮಾಡಿ, ಭ್ರಷ್ಟ ರಾಜಕಾರಣಿಗಳ ಗುಲಾಮತನಕ್ಕೆ ಒಳಗಾಗಿ ಮಾಡಬಾರದ ತಪ್ಪುಗಳನ್ನು ಮಾಡುತ್ತಲೇ ಇದ್ದಾರೆ. ಸರ್ಕಾರದ ಕೆಲಸ ಅಂದರೆ ದೇವರ ಕೆಲಸ ಎನ್ನುವದನ್ನು ಮರೆತು ತಿನ್ನುವ ಅನ್ನಕ್ಕೆ ದ್ರೋಹ ಬಗೆಯುತ್ತಿದ್ದಾರೆ. ಸರ್ಕಾರಿ ನೌಕರರ ವಚನ ಭ್ರಷ್ಟತೆ, ಕರ್ತವ್ಯಲೋಪ, ಅನೈತಿಕತೆ ಹೆಚ್ಚಿವೆ. ಸಾರ್ವಜನಿಕರು ಒಂದು ಸಣ್ಣ ಕೆಲಸಕ್ಕೆ ಹತ್ತಾರು ಬಾರಿ ಅಲೆದರೂ ಕೆಲಸ ಆಗುವುದೇ ಇಲ್ಲ. ಇದನ್ನು ಮೇಲಧಿಕಾರಿಗಳಿಗೆ ತಿಳಿಸಿದರೆ ಯಾವುದೇ ಪ್ರಯೋಜನವಿಲ್ಲ. ಕೆಳ ಹಂತದ ನೌಕರರ ಮೇಲೆ ದೂರು ಬಂದಾಗ ಮೇಲಧಿಕಾರಿಗಳು ಶಿಸ್ತುಕ್ರಮ ಕೈಗೊಳ್ಳುವ ಬದಲು ಅವರ ಜೊತೆ ಶಾಮೀಲಾಗುತ್ತಿದ್ದಾರೆ.

ಇದಕ್ಕೆ ನನ್ನ ಅನುಭವವೇ ನಿದರ್ಶನ: ಬೆಂಗಳೂರು ಉತ್ತರ ತಾಲ್ಲೂಕು ಯಲಹಂಕ ಹೋಬಳಿ ಆವಲಹಳ್ಳಿ ಗ್ರಾಮವನ್ನು ಸರ್ಕಾರಿ ಜಮೀನುಗಳ ಒತ್ತುವರಿ ಮುಕ್ತ ಗ್ರಾಮವನ್ನಾಗಿ ಮಾಡುವ ನನ್ನ ಹೋರಾಟಕ್ಕೆ ಸಂಪೂರ್ಣ ಸಹಕಾರ ಸಿಗುತ್ತಿಲ್ಲ. ಆದರೂ ಬೆನ್ನು ಬಿಡದೇ ಹೋರಾಟ ಮಾಡುತ್ತಿದ್ದೇನೆ. ಈ ಸಂಬಂಧ ನಾನು ಸರ್ಕಾರಿ ಜಮೀನುಗಳನ್ನು ಕಬಳಿಸಿದವರ ವಿರುದ್ಧ ತಹಸಿಲ್ದಾರ್ ಮತ್ತು ಜಿಲ್ಲಾಡಳಿತಕ್ಕೆ ದೂರು ಕೊಟ್ಟರೂ ಪ್ರಯೋಜನವಾಗಿಲ್ಲ. ಕಂದಾಯ ಕಾರ್ಯದರ್ಶಿ, ಕಂದಾಯ ಮಂತ್ರಿಗಳಿಗೂ ದೂರು ಕೊಡಲಾಗಿದೆ. ವಿಧಾನ ಪರಿಷತ್ತಿನಲ್ಲಿ ಎರಡು—ಮೂರು ಬಾರಿ ಪ್ರಸ್ತಾಪವಾಗಿದೆ. ಆಗ ಸದನಕ್ಕೆ ತಪ್ಪು ಮಾಹಿತಿ ಕೊಡಲಾಗಿದೆ. ಅಲ್ಲದೇ ಮೇಲಧಿಕಾರಿಗಳು ಅಧೀನ ಅಧಿಕಾರಿಗಳಿಗೆ ಬರೆದ ಪತ್ರಗಳಿಗೆ ಉತ್ತರವಾಗಲಿ ಅಥವ ಸಂಬಂಧಿಸಿದ ವಿಚಾರಕ್ಕೆ ವರದಿಯಾಗಲಿ ಸಲ್ಲಿಸಿಲ್ಲ. ಪ್ರಕರಣದ ಬೆನ್ನು ಬಿದ್ದ ನಾನು ಮೂರ್ನಾಲ್ಕು ನೆನಪೋಲೆಗಳನ್ನು ಬರೆದರೂ ತಹಶಿಲ್ದಾರರಿಂದ ಉತ್ತರ ಬರುವುದಿಲ್ಲ. ಎರಡು ಮೂರು ವರ್ಷಗಳಾದರೂ ವರದಿ ಸಲ್ಲಿಸಿಲ್ಲ.

ಬೆಂಗಳೂರು ಜಿಲ್ಲೆಯಲ್ಲಿನ ಕೋಟ್ಯಾಂತರ ರೂಪಾಯಿ ಬೆಲೆ ಬಾಳುವ ಸರ್ಕಾರಿ ಆಸ್ತಿ ರಕ್ಷಣೆ ಮಾಡಿದ್ದೇವೆ ಎಂದು ಬೀಗುವ ಜಿಲ್ಲಾಧಿಕಾರಿಗಳು ಕನಿಷ್ಟ ಒಂದು ಗ್ರಾಮವನ್ನು ಸರ್ಕಾರಿ ಜಮೀನುಗಳ ಒತ್ತುವರಿ ಮುಕ್ತ ಗ್ರಾಮವನ್ನಾಗಿಸಲು ಪೂರ್ಣ ಪ್ರಮಾಣದಲ್ಲಿ ಪ್ರಯತ್ನಿಸಲೇ ಇಲ್ಲ. ಅನೌಪಚಾರಿಕವಾಗಿ ಮುಕ್ತ ಮಾತುಕತೆಯ ವೇಳೆ ಇದೇ ಅಧಿಕಾರಿಗಳು, ‘ಒಂದು ಕಡೆ ನಿಮ್ಮ ಕಾಟ ಮತ್ತೊಂದು ಕಡೆ ಶಾಸಕರ ಕಾಟ’ ಎನ್ನುತ್ತಾರೆ. ‘ನಿಮ್ಮಿಬ್ಬರ ನಡುವೆ ನಾವು ಸಾಯಬೇಕಾಗಿದೆ’ ಎಂಬ ನೋವಿನ ಶಬ್ದ ಬಳಸುತ್ತಾರೆ. ಏನೇ ಆದರೂ ಪ್ರಭಾವಿ ಶಾಸಕರು ಮತ್ತು ಕಾರ್ಯಾಂಗದ ಭಾಗವಾದ ತಹಶಿಲ್ದಾರ್ ಇಂದಿಗೂ ನಮ್ಮ ಗ್ರಾಮವನ್ನು ಸರ್ಕಾರಿ ಜಮೀನುಗಳ ಒತ್ತುವರಿ ಮುಕ್ತ ಗ್ರಾಮವನ್ನಾಗಿ ಮಾಡಲೇ ಇಲ್ಲ. ಕನಿಷ್ಟ ಸರ್ಕಾರಿ ಆಸ್ತಿಗಳೆಷ್ಟು, ಅವು ಎಲ್ಲಿವೆ ಎನ್ನುವ ಪಟ್ಟಿಯೂ ಇಲ್ಲ. ನಾನು ಸಲ್ಲಿಸಿರುವ ದೂರುಗಳ ಪ್ರಗತಿಯ ಮಾಹಿತಿ ಕೇಳಿದರೆ ಕಡತಗಳು ಇಲ್ಲ. ಸ್ಥಳೀಯ ಶಾಸಕರ ಚಿತಾವಣೆ, ಶಾಮೀಲು ಇರದೆ ಆಡಳಿತ ಇಷ್ಟು ಹದಗೆಡಲು ಸಾಧ್ಯವೇ?

ಸರ್ಕಾರದ ಕೆಲಸ ಅಂದರೆ ದೇವರ ಕೆಲಸ ಎನ್ನುವದನ್ನು ಮರೆತು ತಿನ್ನುವ ಅನ್ನಕ್ಕೆ ದ್ರೋಹ ಬಗೆಯುತ್ತಿದ್ದಾರೆ. ಸರ್ಕಾರಿ ನೌಕರರ ವಚನ ಭ್ರಷ್ಟತೆ, ಕರ್ತವ್ಯಲೋಪ, ಅನೈತಿಕತೆ ಹೆಚ್ಚಿವೆ.

ಭ್ರಷ್ಟಾಚಾರಕ್ಕೆ ಬೇಸತ್ತ ಸಾರ್ವಜನಿಕರು ಅಡ್ಡ ದಾರಿ ಹಿಡಿದು ಹೇಗೋ ತಮ್ಮ ಕೆಲಸ ಮಾಡಿಸಿಕೊಳ್ಳುತ್ತಿದ್ದಾರೆ. ಒಂದು ಇಲಾಖೆಯಲ್ಲಿ ಅಲ್ಲ. ಎಲ್ಲ ಇಲಾಖೆ ಹಣೆಬರಹವೂ ಇದೇ ಆಗಿದೆ. ಹೇಳುವವರು ಕೇಳುವವರು ಯಾರೂ ಇಲ್ಲವೆಂಬಂತಾಗಿದೆ. ಸರ್ಕಾರದಲ್ಲಿ ಶೇಕಡ 35 ರಷ್ಟು ಸಿಬ್ಬಂದಿ ಕೊರತೆ ಇದೆ. ಗುತ್ತಿಗೆ ನೌಕರರು ಕೆಲಸ ಮಾಡುತ್ತಿದ್ದಾರೆ. ಕಾಮಗಾರಿಗಳಲ್ಲಿ ಗುಣಮಟ್ಟದ ಲವಲೇಶ ಕಾಣುವುದಿಲ್ಲ. ಕಾಂಕ್ರೀಟ್ ಹಾಕಿದ ಮರುದಿನವೇ ಬಣ್ಣ ಬಳಿಯುವುದರಿಂದ ಸೀಮೆಂಟ್ ಕ್ಯೂರ್ ಆಗದೆ ಒಂದು ತಿಂಗಳೂ ಬಾಳಿಕೆ ಬಾರದ ಕಾಮಗಾರಿಗಳನ್ನು ನಾನು ಖುದ್ದು ನೋಡಿರುವೆ.

ಇನ್ನು ‘ಹಳೇ ಕಲ್ಲು ಹೊಸ ಬಿಲ್ಲು’ ಎಂಬುದು ಹೊಸ ಗಾದೆ. ಮಾಡದ ಕೆಲಸಕ್ಕೆ ಬಿಲ್ಲು ಮಾಡುವುದು, ಹಾಗೆಯೇ ಒಂದೇ ಕೆಲಸಕ್ಕೆ ಮೂರ್ನಾಲ್ಕು ಇಲಾಖೆಗಳು ಬಿಲ್ಲು ಮಾಡುವುದು ಇಂದು ಸರ್ವೇ ಸಾಮಾನ್ಯ. ಉದಾಹರಣೆಗೆ ಬೆಂಗಳೂರಿನ ಒಂದು ಪ್ರಮುಖ ರಸ್ತೆಯ ಕಾಮಗಾರಿ ಬಿಬಿಎಂಪಿ ಸದಸ್ಯರ ಅನುದಾನದಲ್ಲಿ ಪ್ರಾರಂಭವಾಗಿದೆ. ಆದರೆ ಅದೇ ರಸ್ತೆಗೆ ‘ಶಾಸಕರ ಅನುದಾನದಲ್ಲಿ ಕಾಮಗಾರಿ ಪ್ರಾರಂಭವಾಗಿದ್ದು, ಸಹಕರಿಸಿ’ ಎಂದು ಫ್ಲೆಕ್ಸ್ ಹಾಕಿದ್ದಾರೆ. ಸರ್ಕಾರದಲ್ಲಿ ಪ್ರಾಮಾಣಿಕರು ಇಲ್ಲವೆಂದಲ್ಲ. ಅವರಿಗೆ ಭ್ರಷ್ಟ ಕೂಟದ ಎದುರು ಮಾತನಾಡುವ ಧೈರ್ಯವಿಲ್ಲ. ಮಾತನಾಡಿ ಕಾನೂನು ತೊಡಕು ವಿವರಿಸಿದರೆ ಒಂದೇ ವರ್ಷದಲ್ಲಿ ಮೂರ್ನಾಲ್ಕು ವರ್ಗಾವಣೆಗೆ ತಯಾರಾಗಬೇಕುತ್ತದೆ. ಈ ಪರಿಸ್ಥಿತಿ ಹಿಂದಿನಿಂದಲೂ ಬೆಳೆದು ಬಂದಿರಬಹುದು. ಆದರೆ ಇತ್ತೀಚಿನ ವರ್ಷಗಳಲ್ಲಿ ಇದು ಹೆಚ್ಚಾಗಿ, ರಾಜ್ಯ ಉಚ್ಚ ನ್ಯಾಯಾಲಯವು ಸರ್ಕಾರಕ್ಕೆ ಛೀಮಾರಿ ಹಾಕಿದ್ದೂ ಉಲ್ಲೇಖನೀಯ.

*ಲೇಖಕರು ಮಾಹಿತಿ ಹಕ್ಕು ಕಾರ್ಯಕರ್ತರು, ಸಾಮಾಜಿಕ ಹೋರಾಟಗಾರರು.

ಡಾ.ಟಿ.ಆರ್.ಚಂದ್ರಶೇಖರ

ಕರ್ನಾಟಕ ಸರ್ಕಾರದ ಹಣಕಾಸಿನ ನಿರ್ವಹಣೆ

ಜುಲೈ ೨೦೧೮

ರಂಗಸ್ವಾಮಿ ಮೂಕನಹಳ್ಳಿ

ಕೃಷಿ ಸಾಲ ಮನ್ನಾ: ಸಾಧ್ಯವೇನಣ್ಣಾ?

ಜುಲೈ ೨೦೧೮

ಚಂಸು ಪಾಟೀಲ

ರೈತರೇಕೆ ಸಾಲಗಾರರಾದರು?

ಜುಲೈ ೨೦೧೮

ಟಿ.ಎಂ.ಥಾಮಸ್ ಐಸಾಕ್ ಕೇರಳದ ಹಣಕಾಸು ಸಚಿವರು

ಎಲ್ಲಾ ರಾಜ್ಯಗಳ ಹಣಕಾಸು ಸಚಿವರಿಗೆ ಕೇರಳ ಹಣಕಾಸು ಸಚಿವರ ಬಹಿರಂಗ ಪತ್ರ

ಜುಲೈ ೨೦೧೮

ಅರ್ಜುನ್ ರಾಮೇಗೌಡ ನಾರಾಯಣಸ್ವಾಮಿ

ಆ ಬೆಂಕಿಯ ಕಿಡಿ ಹೊತ್ತಿಸುವವರು ಯಾರು?

ಜೂನ್ ೨೦೧೮

ಡಾ.ಎಸ್.ಬಿ.ಜೋಗುರ

ಪೂರಕ ವಾತಾವರಣದ ಕೊರತೆ

ಜೂನ್ ೨೦೧೮

ಡಾ.ಎಸ್.ಬಿ.ಜೋಗುರ

ಹಾರ್ವರ್ಡ್ ಗುಣಮಟ್ಟ: ಕೈಗೂಡದ ಕನಸೇ?

ಜೂನ್ ೨೦೧೮

ಚುನಾವಣೆ: ಯಾರ ಹೊಣೆ?

ಎಪ್ರಿಲ್ ೨೦೧೮

ಡಾ.ಬಿ.ಎಲ್.ಶಂಕರ್

ಆಡಿದ ಮಾತಿಗೂ ಆತ್ಮದ ಮಾತಿಗೂ ಅಜಗಜಾಂತರ!

ಎಪ್ರಿಲ್ ೨೦೧೮

ಹರೀಶ್ ನರಸಪ್ಪ

ಚುನಾವಣಾ ಆಯೋಗದ ಮಿತಿ ಮತ್ತು ವೈಫಲ್ಯ

ಎಪ್ರಿಲ್ ೨೦೧೮

ಬಿ.ಎನ್.ವಿಜಯಕುಮಾರ್

ಭ್ರಷ್ಟತೆಗೆ ರಾಜಕೀಯ ಪಕ್ಷಗಳೇ ಕಾರಣ

ಎಪ್ರಿಲ್ ೨೦೧೮

ಎ.ಟಿ.ರಾಮಸ್ವಾಮಿ

ಭ್ರಷ್ಟಾಚಾರಿಗಳು ವೇಶ್ಯೆಯರಿಗಿಂತಲೂ ಕೀಳು

ಎಪ್ರಿಲ್ ೨೦೧೮

ಬಿ. ಕೆ. ಚಂದ್ರಶೇಖರ್

ಪ್ರಜಾಪ್ರಭುತ್ವಕ್ಕೆ ಕಪ್ಪುಚುಕ್ಕೆ

ಎಪ್ರಿಲ್ ೨೦೧೮

ಅಲೋಕ್ ಪ್ರಸನ್ನ, ಎಸ್. ಆರ್. ಹಿರೇಮಠ, ಬಿ. ಟಿ. ವೆಂಕಟೇಶ

ನ್ಯಾಯಾಂಗ

ಮಾರ್ಚ್ ೨೦೧೮

ಎ. ನಾರಾಯಣ, ಬಸವರಾಜ ಬೊಮ್ಮಾಯಿ, ಮೋಟಮ್ಮ

ಶಾಸಕಾಂಗ

ಮಾರ್ಚ್ ೨೦೧೮

ಬಿ. ಆರ್. ಜಯರಾಮರಾಜೇ ಅರಸ್, ಎನ್. ಹನುಮೇಗೌಡ,

ಕಾರ್ಯಂಗ

ಮಾರ್ಚ್ ೨೦೧೮

ವಾಸುದೇವ ಶರ್ಮಾ ಎನ್. ವಿ.

ನಾಗರಿಕ ಸಮಾಜ

ಮಾರ್ಚ್ ೨೦೧೮

ಈಶ್ವರ ದೈತೋಟ, ಡಾ. ಎ. ಎಸ್. ಬಾಲಸುಬ್ರಹ್ಮಣ್ಯ

ಮಾಧ್ಯಮ

ಮಾರ್ಚ್ ೨೦೧೮

ಮುಖ್ಯಚರ್ಚೆಗೆ ಪ್ರವೇಶ

ಫೆಬ್ರವರಿ ೨೦೧೮

ಡಾ.ಅರವಿಂದ ಪಟೇಲ್ ಬಳ್ಳಾರಿ

ವೈದ್ಯಕ್ಷೇತ್ರದ ಉದ್ಧಾರಕ್ಕೆ ಮೂರು ಮದ್ದು!

ಫೆಬ್ರವರಿ ೨೦೧೮

ಮಾಲತಿ ಪಟ್ಟಣಶೆಟ್ಟಿ ಧಾರವಾಡ

ಗುಣಮಟ್ಟಕ್ಕೆ ಮನ್ನಣೆ

ಫೆಬ್ರವರಿ ೨೦೧೮

ಡಾ.ಶ್ರೀನಿವಾಸ ಕಕ್ಕಿಲ್ಲಾಯ ಮಂಗಳೂರು

ಸಕ್ಕರೆ ನಿಷೇಧಿಸಿ!

ಫೆಬ್ರವರಿ ೨೦೧೮