2nd March 2018

ಶಾಸಕಾಂಗ
ಕುಸಿತ ಕಂಡ ಶಾಸಕಾಂಗ

ಎ. ನಾರಾಯಣ

ಐದು ವರ್ಷಗಳ ಅವಧಿಯಲ್ಲಿ ಚರಿತ್ರೆಯಲ್ಲಿ ದಾಖಲಾಗಬಹುದಾದ ಒಂದೇ ಒಂದು ಸಂಸದೀಯ ನಿರ್ಣಯ, ನಡವಳಿಕೆ ಇದೆಯೇ?

ಐದು ವರ್ಷಗಳಲ್ಲಿ ಕರ್ನಾಟಕದ ಶಾಸಕಾಂಗ ಕ್ರಮಿಸಿದ ಹಾದಿಯನ್ನು ಅವಲೋಕಿಸಿ ನೀಡಬಹುದಾದ ಒಂದು ಸರಳ ತೀರ್ಮಾನ ಏನು ಅಂದರೆ ಇಡೀ ಶಾಸಕಾಂಗದ ಪ್ರಾಮುಖ್ಯ ಈ ಅವಧಿಯಲ್ಲಿ ಇನ್ನೂ ಕುಸಿದಿದೆ. ಇದು ಕರ್ನಾಟಕದ ಶಾಸಕಾಂಗದ ಕತೆಯೂ ಹೌದು, ಇಡೀ ದೇಶದ ಶಾಸಕಾಂಗದ, ಅಂದರೆ ಇತರ ವಿವಿಧ ರಾಜ್ಯಗಳ ಶಾಸಕಾಂಗಗಳ ಮತ್ತು ಸಂಸತ್ತಿನ ಕತೆಯೂ ಹೌದು. ಉಳಿದಂತೆ ಕಲಾಪ ಸರಿಯಾಗಿ ಆಗಿಲ್ಲ, ಸಂವಾದ ನಡೆಸಬೇಕಾದವರು ಸಂಘರ್ಷ ನಡೆಸಿದರು, ಚರ್ಚೆ ನಡೆಸಬೇಕಾದವರು ಕುಸ್ತಿಗಿಳಿದರು ಇತ್ಯಾದಿ ಹಳೆಯ ಕಳವಳ ಹೇಗೂ ಇದ್ದೇ ಇದೆ.

ಶಾಸಕಾಂಗದ ಪ್ರಾಮುಖ್ಯವೇ ಕುಸಿತ ಕಂಡಿದೆ ಎನ್ನುವ ತೀರ್ಮಾನ ಯಾಕೆ? ಈ ಪ್ರಶ್ನೆಗೆ ಉತ್ತರ ಕಂಡುಕೊಳ್ಳುವ ಮೊದಲು ಇನ್ನೊಂದು ಪ್ರಶ್ನೆಯನ್ನು ಕೇಳಬೇಕಾಗುತ್ತದೆ. ಅಷ್ಟಕ್ಕೂ ಶಾಸಕಾಂಗ ಅಂದರೆ ಏನು? ಶಾಸಕಾಂಗದ ಸಾಧನೆ ಅಥವಾ ವೈಫಲ್ಯ ಅಂದರೆ ಏನು? ಶಾಸಕಾಂಗ ಎನ್ನುವುದು ಅಷ್ಟೂ ಜನ ಚುನಾಯಿತ ಪ್ರತಿನಿಧಿಗಳ ಸಮಷ್ಟಿ ಸಂಸ್ಥೆ ಎಂದಾದರೆ ಶಾಸಕಾಂಗದ ಸಾಧನೆ ಎಂದರೆ ಪ್ರತೀ ಶಾಸಕ ಅಥವಾ ಶಾಸಕಿ ತನ್ನ ತನ್ನ ನೆಲೆಯಲ್ಲಿ ಮಾಡಿದ ಸಾಧನೆಯ ಅಥವಾ ವೈಫಲ್ಯದ ಮೊತ್ತವಾಗಿರಬೇಕಲ್ಲ. ವಿಪರ್ಯಾಸ ಏನು ಅಂದರೆ ನಾವು ಶಾಸಕರ ಸಾಧನೆಯನ್ನು ಲೆಕ್ಕ ಹಾಕುವಲ್ಲಿ ಒಂದು ಮಾನದಂಡವನ್ನು ಬಳಸುತ್ತೇವೆ, ಇಡೀ ಶಾಸಕಾಂಗದ ಸಾಧನೆಯನ್ನು ಅಳೆಯುವಾಗ ಇನ್ನೊಂದು ಮಾನದಂಡವನ್ನು ಬಳಸುತ್ತೇವೆ. ವೈಯ್ಯಕ್ತಿಕವಾಗಿ ಶಾಸಕರು ತಮ್ಮ ಕ್ಷೇತ್ರದಲ್ಲಿ ಏನು ಕೆಲಸ ಮಾಡಿದರು, ಯಾರಿಗೆಷ್ಟು ಸಹಾಯ ಮಾಡಿದರು ಎನ್ನುವ ನೆಲೆಯಲ್ಲಿ ಅವರ ಕೆಲಸದ ವಿಮರ್ಶೆ ನಡೆದರೆ, ಸಮಷ್ಟಿಯಲ್ಲಿ ಶಾಸಕಾಂಗದ ಕೆಲಸದ ಬಗ್ಗೆ ತೀರ್ಮಾನಕ್ಕೆ ಬರುವಲ್ಲಿ ಸಂಸದೀಯ ಕೆಲಸಗಳು ಅಂದರೆ ಸದನಗಳಲ್ಲಿ ಎಷ್ಟು ಚರ್ಚೆ ನಡೆಯಿತು, ಏನು ಸಂವಾದ ನಡೆಯಿತು ಇತ್ಯಾದಿಗಳನ್ನು ಗಮನದಲ್ಲಿರಿಸಿಕೊಳ್ಳುತ್ತೇವೆ.

ಬರಬರುತ್ತಾ ಶಾಸಕರು ಕ್ಷೇತ್ರದಲ್ಲಿ ಮಾಡುವ ಕೆಲಸವೇ ಶಾಸಕಾಂಗದ ಕೆಲಸ ಎನ್ನುವಂತಹ ತೀರ್ಮಾನಕ್ಕೆ ಎಲ್ಲರೂ ಬಂದಂತಿದೆ. ಶಾಸಕರು ಕ್ಷೇತ್ರದಲ್ಲಿ ಮಾಡುವುದು ಶಾಸಕಾಂಗದ ಕೆಲಸವನ್ನಲ್ಲ. ಅಲ್ಲಿ ಅವರು ಮಾಡುವುದು ಕಾರ್ಯಾಂಗದ ಕೆಲಸವನ್ನು. ಅಥವಾ ಅಲ್ಲಿ ಅವರು ಮಾಡುವ ಕೆಲಸ ಕಾರ್ಯಂಗದ ವ್ಯಾಪ್ತಿಯ ಅತಿಕ್ರಮಣ. ಇದು ಕಳೆದ ಐದು ವರ್ಷಗಳಲ್ಲಿ ಇನ್ನೂ ಹೆಚ್ಚು ನಡೆದಿದೆ. ಯಾಕೆ ನಡೆದಿದೆ ಅಂದರೆ ಕೇವಲ ಶಾಸಕ ಮಾತ್ರನಾಗಿರುವುದು ಯಾರಿಗೂ ಬೇಕಿಲ್ಲ. ಆದರೆ ಸಚಿವರಾಗಬೇಕು, ಇಲ್ಲವೇ ಯಾವುದಾದರೂ ಕಾರ್ಯಾಂಗದ ಹುದ್ದೆ ಹೊಂದಬೇಕು, ಅದು ಸಾಧ್ಯ ಇಲ್ಲ ಎಂದಾದರೆ ತಮ್ಮ ತಮ್ಮ ಕ್ಷೇತ್ರದಲ್ಲಿ ಕಾರ್ಯಂಗ ಎಸಗುವ ಕಾರ್ಯವನ್ನು ನಡೆಸಿ ಶಾಸಕತನದ ಸಾರ್ಥಕ್ಯ ಕಾಣಬೇಕು ಎನ್ನುವ ಜಾಯಮಾನ ಹೆಚ್ಚಾಗಿದೆ. ಇದಕ್ಕೆ ಅತ್ಯುತ್ತಮ ಉದಾಹರಣೆ 2013 ರಲ್ಲಿ ಈಗಿನ ವಿಧಾನ ಸಭೆ ಅಸ್ತಿತ್ವಕ್ಕೆ ಬಂದಾಗ ಮೊದಲಿಗೆ ಸ್ಪೀಕರ್ ಆಗಿದ್ದ ಕಾಗೋಡು ತಿಮ್ಮಪ್ಪ.

ಸುದೀರ್ಘ ಅವಧಿಗೆ ಶಾಸಕರಾಗಿ ಅನುಭವ ಇರುವ ಅವರು ಸ್ಪೀಕರ್ ಸ್ಥಾನವನ್ನು ಇದೊಂದು ವ್ಯರ್ಥ ಹುದ್ದೆ ಎನ್ನುವ ರೀತಿಯಲ್ಲಿ ನಿರ್ವಹಿಸಿ ಸದಾ ಮಂತ್ರಿ ಸ್ಥಾನದ ಮೇಲೆ ಕಣ್ಣಿಟ್ಟು ವ್ಯವಹರಿಸಿದರು. ಅಂತೂ ಅವರು ಸಚಿವಾರಾಗಿ ‘ಬಡ್ತಿ’ ಪಡೆದ ನಂತರ ಆ ಸ್ಥಾನಕ್ಕೆ ಬಂದ ಕೆ.ಬಿ.ಕೋಳಿವಾಡ ವಿಧಾನಸೌಧ ಎಂಬ ಕಟ್ಟಡದ ವರ್ಧಂತ್ಯುತ್ಸವ ಆಚರಿಸಿ ಸುದ್ದಿ ಮಾಡಿದರು. ವಿಧಾನ ಮಂಡಲದ ವರ್ಧಂತ್ಯುತ್ಸವ ಆಗಿದ್ದರೆ ಆ ಮಾತು ಬೇರೆ. ಅದು ಎಂದೋ ಆಗಿ ಹೋಗಿತ್ತು. ವಿಧಾನ ಸೌಧ ಎಂಬ ಕಟ್ಟಡದ ವರ್ಧಂತಿ ಆಚರಿಸಬೇಕಿರುವುದು ಲೋಕೋಪಯೋಗಿ ಇಲಾಖೆ! ಜತೆಗೆ ಈರ್ವರು ಪತ್ರಕರ್ತರನ್ನು ಜೈಲಿಗಟ್ಟಲು ಪಟ್ಟು ಹಿಡಿದದ್ದಕ್ಕೆ ಅವರು ಸುದ್ದಿಯಾದರು.

ಇನ್ನು ಮೇಲ್ಮನೆಯ ಸಭಾಪತಿ ಡಿ.ಹೆಚ್.ಶಂಕರಮೂರ್ತಿ ವಿಧಾನ ಸೌಧ—ವಿಕಾಸ ಸೌಧಗಳ ನಡುವೆ ಗಾಂಧೀಜಿಯ ಪ್ರತಿಮೆ ನಿಲ್ಲಿಸಿ ಸುದ್ದಿಮಾಡಿದರು. ಆಚರಣೆ, ಪ್ರತಿಮೆ ಸ್ಥಾಪನೆ, ಹಕ್ಕುಚ್ಯುತಿ ಪ್ರತಿಪಾದನೆಯಲ್ಲಿ ಕಳೆದು ಹೋದ ಐದು ವರ್ಷಗಳ ಅವಧಿಯಲ್ಲಿ ಚರಿತ್ರೆಯಲ್ಲಿ ದಾಖಲಾಗಬಹುದಾದ ಒಂದೇ ಒಂದು ಸಂಸದೀಯ ನಿರ್ಣಯ, ನಡವಳಿಕೆ ಏನಾದರೂ ಇದೆಯೇ? ಪ್ರಬುದ್ಧ ಸದನವಾದ ಮೇಲ್ಮನೆಗೆ ಒಂದೊಳ್ಳೆಯ ಸಂಸದೀಯ ಪಟುವನ್ನು ನೇಮಿಸಿದ್ದು ಕಾಣಲಿಲ್ಲ. ಅತ್ಯಂತ ಅಪ್ರಬುದ್ಧವಾಗಿ ಸಾರ್ವಜನಿಕ ವೇದಿಕೆಗಳಲ್ಲಿ ಮಾತನಾಡುವ ರಾಜಕಾರಣಿಯೊಬ್ಬರು ಮೇಲ್ಮನೆಯಲ್ಲಿ ವಿರೋಧಪಕ್ಷದ ನಾಯಕರಾಗಿದ್ದರು.. ಪ್ರತೀ ಚುನಾವಣೆಯಲ್ಲಿ ಆಗುವಂತೆ ಕಳೆದ ಬಾರಿಯೂ ಹಲವಾರು ಶಾಸಕರು ಪ್ರಥಮ ಬಾರಿಗೆ ಆರಿಸಿ ಬಂದವರಾಗಿದ್ದರು. ಒಬ್ಬರಾದರೂ ತಮ್ಮ ಸಂಸದೀಯ ಕೌಶಲ್ಯ ಪ್ರದರ್ಶಿಸಿ ಗಮನ ಸೆಳೆದರೆ? ಆರಂಭದಲ್ಲಿ ಗಮನ ಸೆಳೆದ ಒಂದಿಬ್ಬರೂ ಕೊನೆಗೆ ಹತ್ತರ ಜತೆಗೆ ಹನ್ನೊಂದಾದರು. ಇದರ ಮಧ್ಯೆ ಅಲ್ಲೊಮ್ಮೆ ಇಲ್ಲೊಮ್ಮೆ ಕೆಲ ಶಾಸಕರು ಅರ್ಥವತ್ತಾಗಿ ವಾದ ಸಂವಾದ ನಡೆಸಿರಬಹುದು. ಆದರೆ ಅದನ್ನು ಸಾರ್ವಜನಿಕರ ಮುಂದೆ ಇರಿಸುವ ಪತ್ರಿಕೋದ್ಯಮ, ವರದಿಗಾರಿಕೆ ಎಲ್ಲಿದೆ?

ಇದಕ್ಕೆ ಸಂಬಂಧಿಸಿದ ಇನ್ನೊಂದು ಬೆಳವಣಿಗೆಯತ್ತ ಗಮನ ಹರಿಸುವುದರ ಮೂಲಕ ಈ ಲೇಖನವನ್ನು ಮುಗಿಸುವುದು ಸೂಕ್ತ. ಹಿಂದಿನ ವಿಧಾನಸಭೆಯ ಅವಧಿಯವರೆಗೆ ಕನ್ನಡದ ಪ್ರಮುಖ ಪತ್ರಿಕೆಗಳು ವಿಧಾನಮಂಡಲದ ಅಧಿವೇಶನ ನಡೆಯುವಾಗ “ವಿಧಾನಮಂಡಲದಲ್ಲಿ ಇಂದು” ಅಥವಾ “ಸದನ ಸಮೀಕ್ಷೆ” ಇತ್ಯಾದಿಗಳನ್ನು ಪ್ರಕಟಿಸುತ್ತಿದ್ದವು. ಬಹುಶಃ ತಲೆತಲೆಮಾರುಗಳಿಂದ ನಡೆದುಕೊಂಡು ಬಂದಂತಹ ಒಂದು ಮಾಧ್ಯಮ ಸಂಪ್ರದಾಯ ಇದು. ಕಳೆದ ಐದು ವರ್ಷಗಳಲ್ಲಿ ಇದು ಸದ್ದಿಲ್ಲದೇ ಸುದ್ದಿಪತ್ರಿಕೆಗಳ ಪುಟಗಳಿಂದ ಮರೆಯಾಯಿತು. ಇದು ಏನನ್ನು ಸೂಚಿಸುತ್ತದೆ? ಶಾಸಕಾಂಗ ತನ್ನನ್ನು ತಾನು ಕಳೆದುಕೊಳ್ಳುತ್ತಿರುವ ಪ್ರಕ್ರಿಯೆ ಕಳೆದ ಐದು ವರ್ಷಗಳಲ್ಲಿ ಇನ್ನೂ ದಟ್ಟವಾಗಿದೆ ಎಂದಲ್ಲವೇ?

*ಲೇಖಕರು ಮಂಗಳೂರು ವಿವಿಯಲ್ಲಿ ಎಂ.ಎ., ಇಂಗ್ಲೆಂಡಿನ ಸುಸೆಕ್ಸ್ ವಿವಿಯಿಂದ ಅಭಿವೃದ್ಧಿ ಅಧ್ಯಯನ ವಿಷಯದಲ್ಲಿ ಪಿ.ಎಚ್.ಡಿ. ಪಡೆದಿದ್ದಾರೆ. ಪ್ರಸ್ತುತ ಅಜೀಂ ಪ್ರೇಮ್ ಜೀ ವಿಶ್ವವಿದ್ಯಾಲಯದಲ್ಲಿ ಪ್ರಾಧ್ಯಾಪಕರು, ಅಂಕಣಕಾರರು.

ಲಾಭ ನಷ್ಟದ ಲೆಕ್ಕಾಚಾರ!

ಬಸವರಾಜ ಬೊಮ್ಮಾಯಿ

ಈ ಬಾರಿಯ ವಿಧಾನಮಂಡಲ ಕಲಾಪ ಕರ್ನಾಟಕದ ಭವ್ಯ ವಿಧಾನಸಭೆಯ ಪರಂಪರೆಗೆ ಇಟ್ಟ ಕಪ್ಪುಚುಕ್ಕೆಯಾಗಿದೆ.

ವಿಧಾನಸೌಧ ಕರ್ನಾಟಕದ ಭೌತಿಕ ಪರಂಪರೆಗೆ ಸಾಕ್ಷಿಯಾದರೆ,ವಿಇಲ್ಲಿ ನಡೆವ ವಿಧಾನಮಂಡಲಗಳ ಕಲಾಪಗಳು ರಾಜ್ಯದ ಜನರ ಬದುಕಿನ ಆಶೋತ್ತರಗಳನ್ನು ಪ್ರತಿನಿಧಿಸುತ್ತವೆ. ಕರ್ನಾಟಕ ಏಕೀಕರಣದ ಪೂರ್ವದಲ್ಲಿ ಮುಂಬೈ ಕರ್ನಾಟಕದ ಜನತೆ ಮುಂಬಯಿ ಅಸೆಂಬ್ಲಿಯಲ್ಲಿ, ಮೈಸೂರು ಪ್ರಾಂತ್ಯದ ಜನ ಮೈಸೂರು ಪ್ರಜಾಪ್ರತಿನಿಧಿ ಸಭೆಯಲ್ಲಿ, ಇದೇ ರೀತಿಯಾಗಿ ಮದರಾಸು ಮತ್ತು ಹೈದರಾಬಾದ್ ಪ್ರಾಂತ್ಯದ ಜನಪ್ರತಿನಿಧಿಗಳು ತಮ್ಮ ಜನರ ಬದುಕಿನ ಉತ್ತಮಿಕೆಗೆ ಹೋರಾಟ ನಡೆಸಿದ ಅನೇಕ ಉದಾಹರಣೆಗಳಿವೆ.

1956ರ ನಂತರ ಈ ಎಲ್ಲಾ ಪ್ರಾಂತ್ಯಗಳು ಒಗ್ಗೂಡಿ ಕರ್ನಾಟಕವಾದಾಗ, ಹರಿದು ಹಂಚಿ ಹೋಗಿದ್ದ ಎಲ್ಲಾ ಭಾಗಗಳ ಪ್ರತಿಭಾವಂತ ಜನಪ್ರತಿನಿಧಿಗಳು ಬೆಂಗಳೂರಿನ ವಿಧಾನಸಭೆಯಲ್ಲಿ ಒಟ್ಟಿಗೆ ಸೇರಿದ್ದು ಒಂದು ಐತಿಹಾಸಿಕ ಕ್ಷಣ. ಅಂದಿನಿಂದ ವಿಧಾನ ಮಂಡಲಗಳ ಕಲಾಪ ತನ್ನ ಮಹತ್ವವನ್ನು ಹೆಚ್ಚಿಸಿಕೊಂಡು ಬಂದಿದ್ದು ಸದನದ ದಾಖಲೆಗಳಲ್ಲಿ ಮೂಡಿಬಂದಿದೆ. ಶಾಸನ ಸಭೆಗೆ ಆಯ್ಕೆ ಆಗಿದ್ದ ಅನೇಕ ಚಿಂತಕರು ಮಹತ್ವದ ಶಾಸನಗಳ ರಚನಾ ಕಾರ್ಯದಲ್ಲಿ ಇಡೀ ದೇಶಕ್ಕೆ ಮಾದರಿಯಾಗಿದ್ದಾರೆ. ಕರ್ನಾಟಕ ಭೂ ಸುಧಾರಣಾ ಕಾಯ್ದೆ, ಕರ್ನಾಟಕ ಪಂಚಾಯತಿ ಕಾನೂನು, ಕರ್ನಾಟಕ ಲೋಕಾಯುಕ್ತ ಕಾನೂನು ಸೇರಿದಂತೆ ಕರ್ನಾಟಕ ವಿಧಾನ ಮಂಡಲದಲ್ಲಿ ರಚನೆಯಾದ ಅನೇಕ ಕಾನೂನುಗಳನ್ನು ಭಾರತ ಸರ್ಕಾರವೇ ಒಪ್ಪಿ ಸಂವಿಧಾನದ ತಿದ್ದುಪಡಿಯಲ್ಲಿ ಅವನ್ನು ಅಳವಡಿಸಿಕೊಂಡಿರುವುದು ನಮ್ಮ ಶಾಸನ ಸಭೆಗೆ ಹೆಮ್ಮೆ ತರುವ ವಿಷಯ.

ತೊಂಬತ್ತರ ದಶಕದಲ್ಲಿ ದೇಶದಲ್ಲಿ ಆರಂಭವಾದ ಜಾಗತೀಕರಣ ಮತ್ತು ಉದಾರೀಕರಣದಿಂದ ಕಾನೂನು ರಚನೆಯ ಸ್ವರೂಪವೇ ಬದಲಾಯಿತು. ಇದರಿಂದಾಗಿ ವಿಧಾನಸಭೆಯ ಕಲಾಪಗಳು ಜನರ ಆಶೋತ್ತರಗಳಿಗಿಂತ ಮಿಗಿಲಾಗಿ ಮಾರುಕಟ್ಟೆಯ ಲಾಭ ನಷ್ಟದ ಆಧಾರದಲ್ಲಿ ನಡೆಯಲಾರಂಭಿಸಿದವು.

ವಿಧಾನಸಭೆ ಕಲಾಪವು ಪರಿಣಾಮಕಾರಿಯಾಗಿ ನಡೆಯಬೇಕಾದರೆ ಆಡಳಿತ ಪಕ್ಷ ಮತ್ತು ವಿರೋಧ ಪಕ್ಷಗಳು ಜವಾಬ್ದಾರಿಯುತ ಪಾತ್ರ ನಿರ್ವಹಿಸಬೇಕು. ಸರ್ಕಾರ ತನ್ನ ಇಚ್ಚಾಶಕ್ತಿಯನ್ನು ಶಾಸನಗಳ ರಚನೆಯಲ್ಲಿ ಪ್ರದರ್ಶನ ಮಾಡುವ ಮೂಲಕ ಪ್ರಗತಿಪರ ಬದಲಾವಣೆಗೆ ಕಾರಣವಾಗಬೇಕು. ಆದರೆ ಪ್ರಸಕ್ತ ವಿಧಾನಸಭೆ ಕಲಾಪಗಳು ಇದಕ್ಕೆ ವ್ಯತಿರಿಕ್ತವಾಗಿ ನಡೆದಿರುವುದು ಪ್ರಜಾಪ್ರಭುತ್ವ ಧಿಕ್ಕರಿಸುವ ಧೋರಣೆಯೆಂದೇ ಹೇಳಬೇಕಾಗುತ್ತದೆ. ಇದಕ್ಕೆ ನಿದರ್ಶನಗಳು:

1. ರಮೇಶ್‍ಕುಮಾರ್ ಸಮಿತಿಯು ಪಂಚಾಯತ್‍ರಾಜ್ ಕಾಯ್ದೆಯಲ್ಲಿ ಆಮೂಲಾಗ್ರ ಬದಲಾವಣೆ ಬಯಸಿ ಸುದೀರ್ಘ ವರದಿ ನೀಡಿತ್ತು. ಇದರಂತೆ ಪಂಚಾಯತ್ ಚುನಾವಣೆಗಳನ್ನು ಸರ್ಕಾರವೇ ನಡೆಸುವುದು ಹಾಗೂ ಚುನಾವಣೆಗಳನ್ನು ಅತ್ಯಂತ ಸರಳವಾಗಿ ಹಣ—ಹೆಂಡಗಳಿಂದ ಮುಕ್ತವಾಗಿಸಿ ನಡೆಸುವ ಶಿಫಾರಸ್ಸನ್ನು ಮಾಡಲಾಗಿತ್ತು. ಆದರೆ ಈ ವರದಿಯ ಉತ್ತಮ ಅಂಶಗಳನ್ನು ಕೈಬಿಟ್ಟು ಆ ಕಾನೂನನ್ನು ಹಲ್ಲಿಲ್ಲದ ಹಾವಿನಂತೆ ಸರ್ಕಾರ ಪರಿಷ್ಕರಿಸಿತು.

2.ಖಾಸಗಿ ಆಸ್ಪತ್ರೆಯ ನಿಯಂತ್ರಣಕ್ಕೆ ಕಾನೂನು ತರಬೇಕೆನ್ನುವ ಸಂದರ್ಭದಲ್ಲಿ ಸರ್ಕಾರದ ಉದ್ದೇಶಗಳೇ ನಂಬಲರ್ಹವಿರುವಂತೆ ಕಾಣಲಿಲ್ಲ. ಪಾರದರ್ಶಕ ನಿಯಂತ್ರಣಕ್ಕೆ ಬದಲು ಖಾಸಗಿ ಆಸ್ಪತ್ರೆಗಳನ್ನು ಬ್ಲಾಕ್‍ಮೇಲ್ ಮಾಡುವ ರೀತಿಯಲ್ಲಿ ಶಾಸನ ರಚನೆಯಾಗಿತ್ತು. ಈ ಸಂದರ್ಭದಲ್ಲಿ ನಡೆದ ಪ್ರತಿಭಟನೆಗಳನ್ನು ಸಂತೈಸುವಂತೆ, ಸರ್ಕಾರವು ಖಾಸಗಿ ವೈದ್ಯಕೀಯ ಲಾಬಿಯೊಂದಿಗೆ ರಾಜಿ ಮಾಡಿಕೊಂಡು ಬಡ ರೋಗಿಗಳ ಪರ ರೂಪುಗೊಂಡಿದ್ದ ಕಾನೂನಿನ ಅಂಶಗಳನ್ನು ಬದಿಗೆ ಸರಿಸಿತು.

3.ಮೌಢ್ಯ ನಿಷೇಧ ಮಾಡುವ ಸಲುವಾಗಿ ಕೇವಲ ಬೊಗಳೆ ಮಾತನಾಡಿದ ಸರ್ಕಾರ, ಕಾನೂನನ್ನು ವಿಧಾನಸಭೆಯಲ್ಲಿ ಮಂಡಿಸಿ ವಾಪಸ್ ಪಡೆದ ನಿದರ್ಶನವನ್ನು ಯಾರೂ ಮರೆಯುವಂತಿಲ್ಲ. ಆಡಳಿತಪಕ್ಷದ ಇಚ್ಛಾಶಕ್ತಿಯ ಕೊರತೆಯಿಂದ ಈ ಕಾನೂನು ಇದೇ ಸರ್ಕಾರ ರೂಪಿಸಿದ ಮತ್ತೊಂದು ಸತ್ವಹೀನ ಕಾನೂನಾಗಿ ಜಾರಿಗೆ ಬರಬೇಕಾಗಿರುವುದು ಅಚ್ಚರಿಯ ಸಂಗತಿ ಏನಲ್ಲ.

4.ದೇಶಕ್ಕೇ ಮಾದರಿಯಾಗಿ ಭ್ರಷ್ಟಾಚಾರ ನಿರ್ಮೂಲನೆಗೆ ಲೋಕಾಯುಕ್ತ ಕಾನೂನು ರಚಿಸಿದ್ದ ‘ಕರ್ನಾಟಕ ಮಾದರಿ’ಯನ್ನೇ ಹುಸಿಗೊಳಿಸಿದ್ದು ಈ ಸರ್ಕಾರದ ಅದ್ವಿತೀಯ ಸಾಧನೆ. ಎಸಿಬಿಯೆಂಬ ಪರ್ಯಾಯ ಘಟಕ ರಚಿಸಿ ಲೋಕಾಯುಕ್ತ ಕಾನೂನನ್ನು ನಿಷ್ಕ್ರಿಯಗೊಳಿಸಿದ್ದು ಕರ್ನಾಟಕ ವಿಧಾನಸಭೆಯ ಇತಿಹಾಸದಲ್ಲಿ ಒಂದು ಕರಾಳ ಘಟನೆ.

ಸಿದ್ದರಾಮಯ್ಯ ಸರ್ಕಾರದ ಅವಧಿಯ ಐದು ವರ್ಷಗಳಲ್ಲಿ, ನಾಲ್ಕು ವರ್ಷಗಳ ಕಾಲ ರಾಜ್ಯ ತೀವ್ರ ಬರಗಾಲವನ್ನು ಎದುರಿಸಿತು. ನೂರಾರು ರೈತರು ಆತ್ಮಹತ್ಯೆಗೆ ಶರಣಾದರು. ವಿಪಕ್ಷಗಳು ಹಲವುಬಾರಿ ಈ ವಿಷಯ ಪ್ರಸ್ತಾಪಿಸಿದರೂ, ಗಂಭೀರ ಚರ್ಚೆ ಅಥವಾ ಶಾಶ್ವತ ಪರಿಹಾರ ನೀಡಲು ಸರ್ಕಾರ ಮತ್ತು ಸದನ ವಿಫಲವಾಯಿತು. ಅದೇ ರೀತಿ ರಾಜ್ಯದ ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರಗಳಲ್ಲಿ ಇರುವ ದುಸ್ಥಿತಿಯ ಬಗ್ಗೆ ಸಮಗ್ರವಾಗಿ ಚರ್ಚಿಸಿ ಯಾವುದೇ ಸುಧಾರಣೆ ಕ್ರಮವನ್ನು ತೆಗೆದುಕೊಳ್ಳಲಿಲ್ಲ. ಕೃಷಿ, ಇಂಧನ, ಕೈಗಾರಿಕೆ ವಿಷಯಗಳ ಬಗ್ಗೆ ಆಳವಾದ ಚರ್ಚೆಯ ನಿರೀಕ್ಷೆ ಹುಸಿಯಾಯಿತು. ಬಜೆಟ್ ಹಾಗೂ ಇಲಾಖಾವಾರು ಚರ್ಚೆಗಳು ಮಂತ್ರಿವರ್ಯರ ಅಸಡ್ಡೆಯಿಂದ ತನ್ನ ಮಹತ್ವವನ್ನು ಕಳೆದುಕೊಂಡಿವೆ. ಇಡೀ ವಿಧಾನ ಮಂಡಲ ಕಲಾಪದಲ್ಲಿ ಯಾವ ವಿಷಯವನ್ನೂ ಪರಿಣಾಮಕಾರಿಯಾಗಿ ಹಾಗೂ ಗಂಭೀರವಾಗಿ ಚರ್ಚಿಸುವ ಪ್ರಯತ್ನ ಜರುಗಲಿಲ್ಲ. ರಾಜ್ಯದಲ್ಲಿ ಹದಗೆಟ್ಟ ಕಾನೂನು ಸುವ್ಯವಸ್ಥೆ, ಕೋಮು ಗಲಭೆ, ಅಧಿಕಾರಿಗಳ ಹತ್ಯೆ—ಆತ್ಮಹತ್ಯೆ ಇವುಗಳೆ ಕಲಾಪದ ವೇಳೆಯನ್ನು ನುಂಗಿ ಹಾಕಿರುವಾಗ, ಅಭಿವೃದ್ಧಿ ಮತ್ತು ಸುಧಾರಣೆ ವಿಷಯಗಳ ಚರ್ಚೆಗೆ ಮಹತ್ವ ಸಿಗುವುದಾದರೂ ಎಲ್ಲಿ?

ಶಾಸನಗಳ ರಚನೆಯಲ್ಲಿ ಪ್ರಬುದ್ಧತೆ ತೋರುವಲ್ಲಿ ಹಾಗೂ ಆಡಳಿತಕ್ಕೆ ಸಂವೇದನಾಶೀಲ ಬದಲಾವಣೆ ತರುವಲ್ಲಿ ಈ ಬಾರಿಯ ವಿಧಾನಮಂಡಲ ಕಲಾಪ ಕರ್ನಾಟಕದ ಭವ್ಯ ವಿಧಾನಸಭೆಯ ಪರಂಪರೆಗೆ ಇಟ್ಟ ಕಪ್ಪುಚುಕ್ಕೆಯಾಗಿದೆ. ಪ್ರಜಾಪ್ರಭುತ್ವದ ಆಶಯಗಳ ಬಗ್ಗೆ ಹಾಗೂ ಉತ್ತಮ ಶಾಸನಗಳ ರಚನೆಯ ಬಗ್ಗೆ ಜನರ ನಿರೀಕ್ಷೆ ಕ್ಷೀಣವಾಗಲು ಪ್ರಸ್ತುತ ವಿಧಾನಸಭೆಯ ನಡವಳಿಕೆಗಳು ಸಾಕ್ಷಿಯಾಗಿವೆ.

* ಲೇಖಕರು ಮಾಜಿ ಸಚಿವರು ಹಾಗೂ ಪ್ರಸಕ್ತ ವಿದಾನಸಭೆ ಸದಸ್ಯರು.

ಪ್ರಜಾಪ್ರಭುತ್ವಕ್ಕೇ ಕೊಡಲಿ ಪೆಟ್ಟು

ಮೋಟಮ್ಮ

ಅಧ್ಯಯನ ಕೊರತೆಯ ಶಾಸಕರು, ಕಳೆಗುಂದಿದ ಕಲಾಪಗಳು ಹಾಗೂ ಹಣಬಲದ ಚುನಾವಣೆಗಳು ಶಾಸಕಾಂಗದ ದುಃಸ್ಥಿತಿಗೆ ದ್ಯೋತಕ.

ನಾನು ಹೊಸದಾಗಿ ರಾಜಕೀಯಕ್ಕೆ ಬಂದು ವಿಧಾನಸಭೆ ಪ್ರವೇಶ ಮಾಡಿದಾಗ, ಅದೊಂದು ಹೊಸ ಪ್ರಪಂಚವಾಗಿತ್ತು. ಹೆಚ್ಚಿನ ವಿಧಾನಸಭಾ ಸದಸ್ಯರ ಉಡುಗೆ—ತೊಡುಗೆಗಳನ್ನು ನೋಡಿದರೆ ಗೌರವ ಹೆಚ್ಚಾಗುತ್ತಿತ್ತು. ಅವತ್ತು ಅವರ ಮಾತುಗಳು ಅಷ್ಟೇ ಗಂಭೀರವಾಗಿರುತ್ತಿದ್ದವು. ಶಾಸನಸಭೆ ನಡೆಯುವಾಗಲಂತೂ ಬಹಳ ಗಂಭೀರವಾದ ವಾದವಿವಾದಗಳು ನಡೆಯುತ್ತಿದ್ದವು. ನನಗಂತೂ ಬಹಳ ಕಾತರ ಹಾಗೂ ಆಶ್ಚರ್ಯ.

ಕೆಜಿಎಫ್‍ನಿಂದ ಬಂದಿದ್ದ ಆರ್ಮುಗಂ, ಮೈಸೂರಿನ ಬಿ.ಸಿ.ಬಸಪ್ಪ, ಕೆ.ಎಚ್.ಶ್ರೀನಿವಾಸ್, ಜೆ.ಎಚ್.ಪಟೇಲ್ ಅವರ ಮಾತು ಕೇಳಲು ಬಹಳ ಖುಷಿಯಾಗುತ್ತಿತ್ತು. ದೇವರಾಜ ಅರಸು ಹಾಗೂ ಹೆಚ್.ಡಿ.ದೇವೇಗೌಡರ ಮಾತಿನ ಚಕಮಕಿ ಕಣ್ಣಮುಂದೆ ಕಟ್ಟಿದಂತಿದೆ. ವಿರೋಧ ಪಕ್ಷದ ನಾಯಕ ಹೆಚ್.ಡಿ.ದೇವೇಗೌಡರು ವಿಧಾನ ಸಭೆಗೆ ಬರುವಾಗ, ಹಲವು ಮಾಹಿತಿ ತುಂಬಿದ ದೊಡ್ಡದೊಡ್ಡ ಪುಸ್ತಕಗಳನ್ನು ತರುತ್ತಿದ್ದರು. ಯಾವುದೇ ವಿಷಯ ತೆಗೆದುಕೊಂಡು ಮಾತನಾಡಲು ನಿಂತರೆ ಬಹಳ ಕೋಪೋದ್ರೇಕದಿಂದ ಮಾತನಾಡುತ್ತಿದ್ದರು. ಸಭೆ ಗಂಭೀರವಾಗಿರುತ್ತಿತ್ತು. ಸದಸ್ಯರೆಲ್ಲ ಮೌನವಾಗಿ ಕೇಳುತ್ತಿದ್ದರು.

ಇವತ್ತು ವಿಧಾನಸಭೆ ಮತ್ತು ವಿಧಾನ ಪರಿಷತ್ತಿನಲ್ಲಿ ಅಂತಹ ವಾತಾವರಣ ಇಲ್ಲವೇ ಇಲ್ಲ. ಮೇಲ್ಮನೆ ಹಾಗೂ ಕೆಳಮನೆಯಲ್ಲಿ ಶಾಸಕರ ಹಾಜರಾತಿ ಬಹಳ ಕಡಿಮೆ ಇರುತ್ತದೆ. ಸಭೆ ನಡೆಯುತ್ತಿರುವಾಗ ಮಂತ್ರಿಗಳು ಹೆಚ್ಚಾಗಿ ಇರುವುದೇ ಇಲ್ಲ. ಏಕೆ ಹೀಗೆ? ಎಂದು ಗೊತ್ತಾಗುವುದಿಲ್ಲ. ಶಾಸಕರಿಗೆ ಆಸಕ್ತಿ ಕಡಿಮೆಯಾಗಲು ಕಾರಣವೇನು? ಊರಿನಿಂದ ಶಾಸನ ಸಭೆಗೆಂದೇ ಬಂದು ಹಾಜರಾಗುವುದಿಲ್ಲ ಅಂದ್ರೇ ಏನು? ಎಲ್ಲಿಗೆ ಹೋಗುತ್ತಾರೆ ಎಂಬುವುದು ಗೊತ್ತಾಗುವುದಿಲ್ಲ.

ಒಬ್ಬ ಪ್ರಭಾವಿ ಎಂಎಲ್‍ಎ ಅನ್ನಿಸಿಕೊಳ್ಳಬೇಕಾದರೆ, ಚರ್ಚೆಗೆ ಉತ್ತಮವಾದ ವಿಷಯ ತೆಗೆದುಕೊಂಡು ಸರ್ಕಾರದ ಮನ ಮುಟ್ಟುವ ಹಾಗೆ, ಗಂಭೀರವಾಗಿ ಪರಿಗಣಿಸುವಂತೆ ಜೋರಾಗಿ ಮಾತನಾಡಬೇಕಾಗುತ್ತದೆ. ಇತ್ತೀಚಿಗೆ ಆಯ್ಕೆ ಆಗುತ್ತಿರುವ ಶಾಸಕರು ಆ ರೀತಿ ನಡೆದುಕೊಳ್ಳದೇ ಶಾಸನಸಭೆಗಳು ಗಂಭೀರತೆಯನ್ನು ಕಳೆದುಕೊಳ್ಳತ್ತಿವೆ. ಒಂದೇ ಮಾತಿನಲ್ಲಿ ಹೇಳಬೇಕಾದರೆ, ಶಾಸನ ಸಭೆಗಳು ನೀರಸ ಎನಿಸುತ್ತವೆ. ಹೆಚ್ಚಿನ ಸದಸ್ಯರಿಲ್ಲದೆ ಸಭೆಗಳು ಬಿಕೋ ಅನಿಸುತ್ತವೆ.

ಶಾಸನಸಭೆಯ ಕಲಾಪಗಳು ಒಂದು ವರ್ಷದಲ್ಲಿ ಕನಿಷ್ಟ ನೂರು ದಿನಗಳು ನಡೆಯಬೇಕೆಂದಿದ್ದರೂ, 50—60 ದಿನಗಳು ನಡೆದರೆ ಹೆಚ್ಚು! ರಾಜ್ಯಪಾಲರ ಭಾಷಣದ ಮೇಲಾಗಲಿ, ಆಯವ್ಯಯ ಭಾಷಣದ ಮೇಲಾಗಲಿ ಹೆಚ್ಚು ದಿನ ಚರ್ಚೆ ನಡೆಯುವುದಿಲ್ಲ. ಇತ್ತೀಚೆಗೆ ಇವುಗಳ ಮಹತ್ವವೇ ಕಾಣುವುದಿಲ್ಲ. ಹಿಂದೆ ಆಯವ್ಯಯದ ಮೇಲಿನ ಚರ್ಚೆ ವಾರಗಟ್ಟಲೆ ನಡೆಯುತ್ತಿತ್ತು. ಹೆಚ್ಚಿನ ಶಾಸಕರು ಭಾಗವಹಿಸಿ ತಮ್ಮ ತಮ್ಮ ಕ್ಷೇತ್ರದ ಕುಂದು ಕೊರತೆ ಬಗ್ಗೆ ಮಾತನಾಡುತ್ತಿದ್ದರು. ಅವಕಾಶ ಸಿಗದಿದ್ದವರು ಬಹಳ ನೊಂದುಕೊಂಡು ಸ್ಪೀಕರ್ ಅವರನ್ನು ದೂಷಿಸುತ್ತಿದ್ದರು.

ಮೇಲ್ಮನೆ ಹಾಗೂ ಕೆಳಮನೆಯಲ್ಲಿ ಶಾಸಕರ, ಮಂತ್ರಿಗಳ ಹಾಜರಾತಿ ಬಹಳ ಕಡಿಮೆ. ಏಕೆ ಹೀಗೆ?

ಬಜೆಟ್ ಬಗ್ಗೆ ಚರ್ಚೆ ನಡೆಯುವಾಗ ಕೂಡ ಪ್ರತಿಯೊಬ್ಬ ಶಾಸಕರು ಅಷ್ಟೇ ಗಂಭೀರವಾಗಿ ಅವರ ಕ್ಷೇತ್ರದ ಸಮಸ್ಯೆ ಬಗ್ಗೆ ಪ್ರಸ್ತಾಪಿಸಿ ಅದನ್ನು ನಿವಾರಿಸಲು ಅನುದಾನ ನೀಡುವಂತೆ ಆಗ್ರಹಿಸುತ್ತಿದ್ದರು. ಪ್ರತಿಯಾಗಿ ಅದಕ್ಕೆ ಹಣಕಾಸು ಸಚಿವರಿಂದ ಏನು ಉತ್ತರ ಬರುತ್ತದೆ ಎಂದು ಕುತೂಹಲದಿಂದ ಕಾಯುತ್ತಿದ್ದರು. ಈಗಲೂ ಬಜೆಟ್ ಮೇಲೆ ಚರ್ಚೆ ನಡೆಯುತ್ತಿದ್ದರೂ ಯಾವ ಶಾಸಕರ ಬೇಡಿಕೆಗೂ ಉತ್ತರ ದೊರೆಯುತ್ತಿಲ್ಲ. ಒಟ್ಟಾರೆ ಯಾವ ಯಾವ ಇಲಾಖೆಗೆ ಎಷ್ಟು ಹಣ ಬಿಡುಗಡೆ ಮಾಡಿದ್ದಾರೆ ಎಂಬ ಉತ್ತರ ಮಾತ್ರ ದೊರೆಯುತ್ತದೆ.

ಮತ್ತೊಂದು ಮುಖ್ಯ ಸಂಗತಿ ಅಂದರೆ, ಪ್ರತಿ ಇಲಾಖೆಯ ಬೇಡಿಕೆ ಬಗ್ಗೆ ಚರ್ಚೆ ನಡೆಯುತ್ತಿತ್ತು. ಇಲಾಖಾ ಮಂತ್ರಿಗಳು ಸದಸ್ಯರ ಚರ್ಚೆಯ ವಿಷಯಗಳನ್ನು ಟಿಪ್ಪಣಿ ಮಾಡಿಕೊಂಡು, ಚರ್ಚೆ ಮಾಡಿದ ಪ್ರತಿಯೊಬ್ಬ ಸದಸ್ಯರ ಪಸ್ತಾಪಗಳನ್ನು ಗಂಭೀರವಾಗಿ ಪರಿಗಣಿಸಿ ಉತ್ತರ ಕೊಡುತ್ತಿದ್ದರು. ಅದು ಇಂದಿನ ಶಾಸನ ಸಭೆಯಲ್ಲಿ ಕಾಣುತ್ತಿಲ್ಲ. ಸಚಿವರು ಇಲಾಖೆಯ ಬೇಡಿಕೆಗಳ ಬಗ್ಗೆ ಉತ್ತರ ಕೊಡುವಾಗ ಇಲಾಖೆ ಬಗ್ಗೆ ಅವರು ಎಷ್ಟು ತಿಳಿದುಕೊಂಡಿದ್ದಾರೆ ಎಂಬುದು ವೇದ್ಯ ಆಗುತ್ತಿತ್ತು.

ಒಟ್ಟಿನಲ್ಲಿ ಹೇಳುವುದಾದರೆ ಶಾಸನ ಸಭೆಯನ್ನು ಶಾಸಕರು ಗಂಭೀರವಾಗಿ ತೆಗೆದುಕೊಂಡು, ಕಲಾಪ ನಡೆಯುವಾಗ ಶಾಸಕರು ಕಡ್ಡಾಯವಾಗಿ ಭಾಗವಹಿಸುವುದನ್ನು ಕಲಿಯಬೇಕಾಗುತ್ತದೆ. ಹೀಗೆ ಮಾಡದಿದ್ದಲ್ಲಿ ಶಾಸನ ಸಭೆ ನಡೆಸುವುದಕ್ಕೆ ಅರ್ಥ ಬರುವುದಿಲ್ಲ.

ಇವತ್ತಿನ ರಾಜಕಾರಣಕ್ಕೂ, ಹಿಂದಿನ ರಾಜಕಾರಣಕ್ಕೂ ಹೋಲಿಕೆ ಮಾಡಿದಾಗ ರಾಜಕಾರಣಿಗಳ ನಡವಳಿಕೆಗಳಲ್ಲಿ ತುಂಬಾ ವ್ಯತ್ಯಾಸವಿದೆ. ಚುನಾವಣೆಗಳು ಬಹಳ ದುಸ್ತರವಾಗುತ್ತಿವೆ. ಹಣ ಇಲ್ಲದವರು ಚುನಾವಣೆಗೆ ನಿಲ್ಲುವುದು ತುಂಬಾ ಕಷ್ಟವಾಗುತ್ತಿದೆ. ಹೀಗೆ ಮುಂದುವರಿದರೆ ಪ್ರಜಾಪ್ರಭುತ್ವಕ್ಕೇ ಧಕ್ಕೆ ಉಂಟಾಗುತ್ತದೆ. ಇದನ್ನು ತಡೆಯಲು ಶಾಸಕರ ವೇದಿಕೆ ಗಂಭಿರವಾಗಿ ಚಿಂತಿಸಬೇಕಾಗಿದೆ.

*ಲೇಖಕಿ ಶಾಸಕಿಯಾಗಿ, ಸಚಿವೆಯಾಗಿ, ವಿಧಾನಪರಿಷತ್ತಿನ ಪ್ರತಿಪಕ್ಷ ನಾಯಕಿಯಾಗಿ ಸೇವೆ ಸಲ್ಲಿಸಿದ ರಾಜಕಾರಣಿ.

ಡಾ.ಟಿ.ಆರ್.ಚಂದ್ರಶೇಖರ

ಕರ್ನಾಟಕ ಸರ್ಕಾರದ ಹಣಕಾಸಿನ ನಿರ್ವಹಣೆ

July 2018

ರಂಗಸ್ವಾಮಿ ಮೂಕನಹಳ್ಳಿ

ಕೃಷಿ ಸಾಲ ಮನ್ನಾ: ಸಾಧ್ಯವೇನಣ್ಣಾ?

July 2018

ಚಂಸು ಪಾಟೀಲ

ರೈತರೇಕೆ ಸಾಲಗಾರರಾದರು?

July 2018

ಟಿ.ಎಂ.ಥಾಮಸ್ ಐಸಾಕ್ ಕೇರಳದ ಹಣಕಾಸು ಸಚಿವರು

ಎಲ್ಲಾ ರಾಜ್ಯಗಳ ಹಣಕಾಸು ಸಚಿವರಿಗೆ ಕೇರಳ ಹಣಕಾಸು ಸಚಿವರ ಬಹಿರಂಗ ಪತ್ರ

July 2018

ಅರ್ಜುನ್ ರಾಮೇಗೌಡ ನಾರಾಯಣಸ್ವಾಮಿ

ಆ ಬೆಂಕಿಯ ಕಿಡಿ ಹೊತ್ತಿಸುವವರು ಯಾರು?

June 2018

ಡಾ.ಎಸ್.ಬಿ.ಜೋಗುರ

ಪೂರಕ ವಾತಾವರಣದ ಕೊರತೆ

June 2018

ಬಿ.ಎನ್.ವಿಜಯಕುಮಾರ್

ಭ್ರಷ್ಟತೆಗೆ ರಾಜಕೀಯ ಪಕ್ಷಗಳೇ ಕಾರಣ

April 2018

ಬಿ. ಕೆ. ಚಂದ್ರಶೇಖರ್

ಪ್ರಜಾಪ್ರಭುತ್ವಕ್ಕೆ ಕಪ್ಪುಚುಕ್ಕೆ

April 2018

ಅಲೋಕ್ ಪ್ರಸನ್ನ, ಎಸ್. ಆರ್. ಹಿರೇಮಠ, ಬಿ. ಟಿ. ವೆಂಕಟೇಶ

ನ್ಯಾಯಾಂಗ

March 2018

ಎ. ನಾರಾಯಣ, ಬಸವರಾಜ ಬೊಮ್ಮಾಯಿ, ಮೋಟಮ್ಮ

ಶಾಸಕಾಂಗ

March 2018

ಬಿ. ಆರ್. ಜಯರಾಮರಾಜೇ ಅರಸ್, ಎನ್. ಹನುಮೇಗೌಡ,

ಕಾರ್ಯಂಗ

March 2018

ವಾಸುದೇವ ಶರ್ಮಾ ಎನ್. ವಿ.

ನಾಗರಿಕ ಸಮಾಜ

March 2018

ಈಶ್ವರ ದೈತೋಟ, ಡಾ. ಎ. ಎಸ್. ಬಾಲಸುಬ್ರಹ್ಮಣ್ಯ

ಮಾಧ್ಯಮ

March 2018

ಡಾ.ಅರವಿಂದ ಪಟೇಲ್ ಬಳ್ಳಾರಿ

ವೈದ್ಯಕ್ಷೇತ್ರದ ಉದ್ಧಾರಕ್ಕೆ ಮೂರು ಮದ್ದು!

February 2018

ಮಾಲತಿ ಪಟ್ಟಣಶೆಟ್ಟಿ ಧಾರವಾಡ

ಗುಣಮಟ್ಟಕ್ಕೆ ಮನ್ನಣೆ

February 2018

ಡಾ.ಶ್ರೀನಿವಾಸ ಕಕ್ಕಿಲ್ಲಾಯ ಮಂಗಳೂರು

ಸಕ್ಕರೆ ನಿಷೇಧಿಸಿ!

February 2018