2nd March 2018

ನ್ಯಾಯಾಂಗ
ನ್ಯಾಯಾಧೀಶರ ಕೊರತೆ: ನ್ಯಾಯದಾನಕ್ಕೆ ಪೆಟ್ಟು

ಅಲೋಕ್ ಪ್ರಸನ್ನ

ಕಳೆದ ಐದು ವರ್ಷಗಳಿಂದ ಕರ್ನಾಟಕ ನ್ಯಾಯಾಂಗ ಎದುರಿಸಿದ ಸಮಸ್ಯೆಗಳು ಇನ್ನಷ್ಟು ಕಾಲ ಹಾಗೆಯೇ ಮುಂದುವರಿಯಲಿವೆ.

ಕಳೆದ ಐದು ವರ್ಷಗಳು ಕರ್ನಾಟಕದ ನ್ಯಾಯಾಂಗ ವ್ಯವಸ್ಥೆಗೆ ಕಠಿಣವಾಗಿದ್ದವು. ಇದು ಕರ್ನಾಟಕಕ್ಕೆ ಸೀಮಿತವಾದ ಸಮಸ್ಯೆಯಲ್ಲ, ಒಟ್ಟಾರೆ ದೇಶದ ನ್ಯಾಯದಾನ ವ್ಯವಸ್ಥೆಯೇ ಸಂಕಷ್ಟಕ್ಕೆ ಸಿಲುಕಿದೆ. ಕಳೆದ ಹತ್ತು ವರ್ಷದಲ್ಲಿ ನ್ಯಾಯಾಂಗವು ಉತ್ತರದಾಯಿತ್ವ, ಸ್ಪರ್ಧಾತ್ಮಕತೆ ಮತ್ತು ಸ್ವಾತಂತ್ರ್ಯ ಸೇರಿದಂತೆ ಹಲವು ಹತ್ತು ಸಮಸ್ಯೆಗಳನ್ನು ಎದುರಿಸಿದೆ. ಯಾವ ಸಮಸ್ಯೆಗಳು ರಾಷ್ಟ್ರದ ನ್ಯಾಯವ್ಯವಸ್ಥೆಯನ್ನು ಕಾಡಿದವೋ ಅದೇ ಸಮಸ್ಯೆಗಳು ಕರ್ನಾಟಕವನ್ನೂ ಕಾಡಿವೆ. ಆದರೆ, ರಾಜ್ಯದಲ್ಲಿ ಸಮಸ್ಯೆಗಳ ಬಗೆ ಭಿನ್ನವಾದುದಾಗಿದೆ.

ನ್ಯಾಯಮೂರ್ತಿಗಳ ನೇಮಕ:

ಕರ್ನಾಟಕ ಹೈಕೋರ್ಟ್‍ನಲ್ಲಿ ನ್ಯಾಯಮೂರ್ತಿಗಳ ಕೊರತೆಯ ಸಮಸ್ಯೆ ತೀರ ಗಂಭೀರವಾಗಿದೆ. 2013ರಲ್ಲಿ ಹೈಕೋರ್ಟ್‍ನಲ್ಲಿ 36 ನ್ಯಾಯಮೂರ್ತಿಗಳಿದ್ದರು. 62 ನ್ಯಾಯಮೂರ್ತಿಗಳಿರಬೇಕಾದೆಡೆ ಪ್ರಸ್ತುತ ಇರುವುದು 24 ಮಂದಿ ಮಾತ್ರ. ಅಂದರೆ, ಅರ್ಧಕ್ಕಿಂತ ಹೆಚ್ಚು ಸ್ಥಾನಗಳು ಖಾಲಿ ಇವೆ. ಇತ್ತೀಚೆಗೆ ಐವರು ನ್ಯಾಯಮೂರ್ತಿಗಳು ನೇಮಕಗೊಂಡಿದ್ದರೂ, ಅರ್ಧಕ್ಕಿಂತ ಹೆಚ್ಚು ಸ್ಥಾನಗಳು ಭರ್ತಿಯಾಗಬೇಕಿದೆ. ಇದು ರಾಜ್ಯ ಸರ್ಕಾರ, ಕೇಂದ್ರ ಸರ್ಕಾರ ಮತ್ತು ಸುಪ್ರೀಂ ಕೋರ್ಟ್‍ನ ವೈಫಲ್ಯ ಮಾತ್ರವಲ್ಲ. ಇದಕ್ಕೆ ಹಲವು ಕಾರಣಗಳಿವೆ. ನ್ಯಾಯಾಲಯಗಳ ನೇಮಕ ವ್ಯವಸ್ಥೆಯ ತೀವ್ರ ವೈಫಲ್ಯವನ್ನು ಇದು ತೋರಿಸುತ್ತದೆ. ಕರ್ನಾಟಕ ಇದರ ಬಿಸಿಯನ್ನು ಅನುಭವಿಸಿದೆ. ಆದರೆ, ಪ್ರಾತಿನಿಧಿತ್ವದ ವಿಷಯದಿಂದಾಗಿ ರಾಜ್ಯದಲ್ಲಿ ಸಮಸ್ಯೆ ಇನ್ನಷ್ಟು ಬಿಗಡಾಯಿಸಿದೆ.

ಕರ್ನಾಟಕದ ನ್ಯಾಯಾಂಗ ವ್ಯವಸ್ಥೆ ಎದುರಿಸಿದ ಅತ್ಯಂತ ಗಂಭೀರ ಸಮಸ್ಯೆಯೆಂದರೆ, ನ್ಯಾ. ಜಯಂತ್ ಎಂ ಪಠೇಲ್ ಅವರ ರಾಜೀನಾಮೆ. ಗುಜರಾತ್ ಹೈಕೋರ್ಟ್‍ನಿಂದ ಅವರನ್ನು ಇಲ್ಲಿಗೆ ವರ್ಗ ಮಾಡಲಾಗಿತ್ತು. ಅವರನ್ನು ಅಲಹಾಬಾದ್ ಹೈಕೋರ್ಟ್‍ಗೆ ವರ್ಗಾಯಿಸಿದ್ದರಿಂದ, ಅವರಿಗೆ ಕರ್ನಾಟಕದ ಮುಖ್ಯ ನ್ಯಾಯಮೂರ್ತಿ ಆಗುವ ಅವಕಾಶ ತಪ್ಪಿಹೋಯಿತು. ಈ ವರ್ಗಾವಣೆಯು ಒಬ್ಬ ಪ್ರಾಮಾಣಿಕ ಮತ್ತು ನಿಷ್ಠಾವಂತ ನ್ಯಾಯಮೂರ್ತಿಗೆ ಮಾಡಿದ ಅಪಮಾನ ಎಂದು ಪರಿಗಣಿಸಲಾಗಿದೆ. ಗುಜರಾತ್ ಹೈಕೋರ್ಟ್‍ನಲ್ಲಿ ಅವರು ನೀಡಿದ ತೀರ್ಪುಗಳು ಅಧಿಕಾರದಲ್ಲಿ ಇದ್ದವರಿಗೆ ಪಥ್ಯವಾಗಿರಲಿಲ್ಲ ಎನ್ನುವುದು ಗೊತ್ತಿರುವ ವಿಚಾರ. ಸಂತಸದ ವಿಷಯವೆಂದರೆ, ಕರ್ನಾಟಕ ಹಾಗೂ ಗುಜರಾತ್‍ನ ವಕೀಲರು ಒಟ್ಟಾಗಿ ಈ ವರ್ಗಾವಣೆಯನ್ನು ಪ್ರತಿಭಟಿಸಿದರು. ಕರ್ನಾಟಕದ ವಕೀಲರು ಪ್ರಾಂತೀಯತೆ ಇಲ್ಲವೇ ರಾಜಕೀಯವನ್ನು ಪರಿಗಣಿಸದೆ, ನ್ಯಾ.ಪಠೇಲ್ ಅವರನ್ನು ಬೆಂಬಲಿಸಿದ್ದು ಶ್ಲಾಘನೀಯ. ಸುಪ್ರೀಂ ಕೋರ್ಟ್‍ನ ಹಿರಿಯ ನ್ಯಾಯಮೂರ್ತಿಗಳು ಕೇಂದ್ರ ಸರ್ಕಾರದ ಆದೇಶವನ್ನು ಪಾಲಿಸುತ್ತಿದ್ದಾರೆ ಎಂಬ ಆರೋಪದ ಹಿನ್ನೆಲೆಯಲ್ಲಿ ಕೊಲೀಜಿಯಂನಲ್ಲಿ ಪಾರದರ್ಶಕತೆ ತರುವ ಪ್ರಯತ್ನ ನಡೆಯಿತು. ಸುಪ್ರೀಂ ಕೋರ್ಟ್ ಮುಖ್ಯ ನ್ಯಾ.ದೀಪಕ್ ಮಿಶ್ರಾ ಅವರ ನಡವಳಿಕೆ ಬಗೆಗೆ ಅಸಮಾಧಾನ ಹೆಚ್ಚಳಕ್ಕೂ ಕಾರಣವಾಯಿತು.

ಈ ಪ್ರಕರಣ ನಮಗೆ ತಿಳಿಸುವುದೇನೆಂದರೆ, ನ್ಯಾಯಾಂಗದಲ್ಲಿ ನೇಮಕಗಳು ಆಗಲು ಹೈಕೋರ್ಟ್ ಇಲ್ಲವೇ ವಕೀಲರು ಸಕ್ರಿಯರಾಗಿದ್ದರೆ ಸಾಲದು. ಬದಲಿಗೆ ಇಡೀ ವ್ಯವಸ್ಥೆಯಲ್ಲೇ ಆಮೂಲಾಗ್ರ ಬದಲಾವಣೆ ಆಗಬೇಕು.

ಕೆಲ ಮುಖ್ಯ ತೀರ್ಪುಗಳು::

ತಮಿಳುನಾಡು ಮುಖ್ಯಮಂತ್ರಿ ಜೆ.ಜಯಲಲಿತಾ ವಿರುದ್ಧದ ಆದಾಯ ಮೀರಿದ ಆಸ್ತಿ ಕುರಿತ ಪ್ರಕರಣದಲ್ಲಿ ನ್ಯಾಯಾಧೀಶರಾದ ಜಾನ್ ಮೈಖಲ್ ಕುನ್ಹಾ ನೀಡಿದ ತೀರ್ಪಿಗೆ ರಾಷ್ಟ್ರದೆಲ್ಲೆಡೆ ಶ್ಲಾಘನೆ ವ್ಯಕ್ತವಾಯಿತು. ಕರ್ನಾಟಕ ಹೈಕೋರ್ಟ್ ಈ ಪ್ರಕರಣದಲ್ಲಿ ನೀಡಿದ್ದ ತೀರ್ಪು ನ್ಯಾಯಬದ್ಧವಾಗಿರಲಿಲ್ಲ, ತಾರ್ಕಿಕವಾಗಿರಲಿಲ್ಲ ಎಂದು ಕುನ್ಹಾ ಹೇಳಿದರು.

ಇನ್ನೊಬ್ಬ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೂ ಹೈಕೋರ್ಟ್, ತಾತ್ಕಾಲಿಕವಾಗಿ ವಿರಾಮ ನೀಡಿತು. ಭೂಮಿ ಡಿನೋಟಿಫಿಕೇಷನ್‍ನಲ್ಲಿ ಭ್ರಷ್ಟಾಚಾರ ನಡೆದಿದೆ ಎನ್ನುವ ಆರೋಪಕ್ಕೆ ಸಂಬಂಧಿಸಿದಂತೆ ಹೈಕೋರ್ಟ್, ಡಿಸೆಂಬರ್ 2015ರಲ್ಲಿ ಪ್ರಕರಣವನ್ನು ವಜಾಗೊಳಿಸಿತು. ಹಗರಣದಲ್ಲಿ ಯಡಿಯೂರಪ್ಪ ಪಾಲ್ಗೊಂಡಿದ್ದಾರೆ ಎನ್ನುವುದಕ್ಕೆ ಯಾವುದೇ ಸಾಕ್ಷಿ ಇಲ್ಲ ಎಂದು ಕೋರ್ಟ್ ಹೇಳಿತು. ಆದರೆ, ಪ್ರಕರಣ ಸುಪ್ರೀಂ ಕೋರ್ಟ್‍ನಲ್ಲಿ ಬಾಕಿ ಇದ್ದು, ವಿಚಾರಣೆ ಮುಂದುವರಿಯುವುದೇ ಎಂದು ಕಾಯ್ದು ನೋಡಬೇಕಿದೆ.

ಬಳ್ಳಾರಿಯಲ್ಲಿ ನಡೆದ ಅಕ್ರಮ ಗಣಿಗಾರಿಕೆ ಪ್ರಕರಣದಲ್ಲಿಯೂ ಯಡಿಯೂರಪ್ಪ ಅವರ ಪಾತ್ರವಿಲ್ಲ ಎಂದು ಸಿಬಿಐ ವಿಶೇಷ ನ್ಯಾಯಾಧೀಶರು ತೀರ್ಪಿತ್ತರು. ಕುಖ್ಯಾತ 2ಜಿ ಹಗರಣದಂತೆ ಈ ಪ್ರಕರಣವನ್ನೂ ಸಿಬಿಐ ತನಿಖೆ ನಡೆಸಿತ್ತು ಮತ್ತು ಎಲ್ಲ ಆರೋಪಿಗಳನ್ನು ದೋಷಮುಕ್ತಗೊಳಿಸಲಾಯಿತು. ಉನ್ನತ ಅಧಿಕಾರ ಸ್ಥಾನದಲ್ಲಿರುವವರನ್ನು ಒಳಗೊಂಡ ಇಂಥ ಪ್ರಕರಣಗಳಲ್ಲಿ ಆರೋಪ ಸಾಬೀತುಪಡಿಸುವಲ್ಲಿ ಸಿಬಿಐ ವಿಫಲವಾಗುತ್ತಿರುವುದರಿಂದ, ಭ್ರಷ್ಟಾಚಾರಕ್ಕೆ ತಡೆ ಸಾಧ್ಯವೇ ಎನ್ನುವ ಪ್ರಶ್ನೆ ಮೂಡುವುದು ಸಹಜ. ಕರ್ನಾಟಕದಲ್ಲಿ ಅಧಿಕಾರಕ್ಕೆ ಬಂದ ಎಲ್ಲ ಸರ್ಕಾರಗಳು ಲೋಕಾಯುಕ್ತವನ್ನು ಹಂತಹಂತವಾಗಿ ದುರ್ಬಲಗೊಳಿಸಿದ್ದು, ಸರ್ಕಾರ ನಡೆಸುವ ಅಕ್ರಮಗಳ ಸ್ವತಂತ್ರ ತನಿಖೆ ನಡೆಯುವುದು ಸಾಧ್ಯವಿಲ್ಲವೇನೋ ಎನ್ನುವ ಪರಿಸ್ಥಿತಿ ಸೃಷ್ಟಿಯಾಗಿದೆ.

ಕಳೆದ ಐದು ವರ್ಷಗಳಿಂದ ಕರ್ನಾಟಕ ನ್ಯಾಯಾಂಗ ಎದುರಿಸಿದ ಸಮಸ್ಯೆಗಳು ಇನ್ನಷ್ಟು ಕಾಲ ಹಾಗೆಯೇ ಮುಂದುವರಿಯಲಿವೆ. ವಿಶ್ವಾಸಾರ್ಹತೆ, ಉತ್ತರದಾಯಿತ್ವ ಮತ್ತು ಕ್ಷಮತೆಯ ಸವಾಲನ್ನು ನ್ಯಾಯಾಂಗ ವ್ಯವಸ್ಥೆ ಹೇಗೆ ಎದುರಿಸುತ್ತದೆ ಎನ್ನುವುದನ್ನು ಕಾದು ನೋಡಬೇಕಿದೆ.

ಕನ್ನಡಕ್ಕೆ: ಮಾಧವ ಐತಾಳ

*ಲೇಖಕರು ನಲ್ಸಾರ್ ಕಾನೂನು ವಿಶ್ವವಿದ್ಯಾಲಯ ಹಾಗೂ ಆಕ್ಸಫರ್ಡ್ ವಿವಿಯಿಂದ ಉನ್ನತ ಶಿಕ್ಷಣ ಪಡೆದಿದ್ದಾರೆ. ಪ್ರಸ್ತುತ ಕಾನೂನು ನೀತಿ ನಿರೂಪಣಾ ಕೇಂದ್ರ ‘ವಿಧಿ’ಯ ಮುಖ್ಯಸ್ಥರು.

ಗಾಂಧಿ ಮಂಗಳದಿಂದ ಇಳಿದು ಬಂದರೇ?

ಎಸ್. ಆರ್. ಹಿರೇಮಠ

ಕರ್ನಾಟಕದಲ್ಲಿ ನ್ಯಾಯಾಂಗದ ಪರಿಸ್ಥಿತಿ ತೀರ ಶೋಚನೀಯವಾಗಿದೆ. ಪ್ರಜಾಪ್ರಭುತ್ವದ ಹಿತದೃಷ್ಟಿಯಿಂದ ಈ ಬೆಳವಣಿಗೆ ತುಂಬಾ ಅಪಾಯಕಾರಿ.

ನ್ಯಾಯಾಂಗ ಹೇಗೆ ತನ್ನ ಗೌರವವನ್ನು ಕಳೆದುಕೊಳ್ಳುತ್ತಿದೆ ಎಂಬುದನ್ನು ಹಲವು ವರ್ಷಗಳ ನನ್ನ ಅನುಭವದ ಆಧಾರದಲ್ಲಿ ಕೆಲವು ಘಟನೆಗಳ ಮೂಲಕ ವಿವರಿಸುತ್ತೇನೆ. ಮಾಧ್ಯಮಗಳು ಮತ್ತು ನಮ್ಮ ಸಂಬಂಧ ಹೆಚ್ಚು ಬಂದಿದ್ದು ಕಾರ್ಯಾಂಗದ ಕೇಂದ್ರೀಯ ಪಾತ್ರದೊಂದಿಗೆ. ಅಂದರೆ, ಗಾಲಿ ಜನಾರ್ದನರೆಡ್ಡಿ ಮತ್ತು ಇತರರಿಂದ ಬಳ್ಳಾರಿಯಲ್ಲಿ ಖನಿಜದ ದರೋಡೆ ನಡೆದ ವಿಷಯದಲ್ಲಿ ಕಾರ್ಯಾಂಗ ಮತ್ತು ಶಾಸಕಾಂಗ ನಿಷ್ಕ್ರೀಯಗೊಂಡಿದ್ದರಿಂದ ಅನಿವಾರ್ಯವಾಗಿ ನಾವು ಸುಪ್ರೀಂಕೋರ್ಟಿಗೆ ಹೋಗಬೇಕಾಯಿತು. ಅದರ ನಂತರ ರಾಜ್ಯದಲ್ಲಿ ಕಬಳಿಕೆಯಾಗಿರುವ 11 ಲಕ್ಷ ಎಕರೆ ಭೂಮಿ ಬಿಕ್ಕಟ್ಟಿಗೆ ಪರಿಹಾರ ಹುಡುಕಲು 2013ರಲ್ಲಿ ಮತ್ತೆ ಸುಪ್ರೀಂಕೋರ್ಟಿಗೆ ಹೋದೆವು.

ಅವರು ಈ ಪ್ರಕರಣ ಕರ್ನಾಟಕಕ್ಕೆ ಸಂಬಂಧಿಸಿದ್ದು, ಹಾಗಾಗಿ ಕರ್ನಾಟಕ ಹೈಕೋರ್ಟಿಗೆ ಹೋಗಿ ಎಂದರು. ಅದಕ್ಕೆ ನಾವು ಅಲ್ಲಿನ ಬಹಳಷ್ಟು ನ್ಯಾಯಾಧೀಶರು ನ್ಯಾಯಾಂಗ ಬಡಾವಣೆ ಹಗರಣದಲ್ಲಿ ಶಾಮಿಲಾಗಿದ್ದಾರೆ. ಆದ್ದರಿಂದ ಅಲ್ಲಿ ನಮಗೆ ನ್ಯಾಯ ಸಿಗಲಾರದು. ಅಲ್ಲದೆ ನ್ಯಾಯ ಸಿಗುವುದು ವಿಳಂಬವಾಗಲಿದೆ ಎಂದು ಹೇಳಿದೆವು. ಅದಕ್ಕವರು ಒಬ್ಬರಾದರೂ ಒಳ್ಳೆಯವರು ಸಿಗುತ್ತಾರೆ, ವಿಳಂಬ ಮಾಡದಂತೆ ಆದೇಶದಲ್ಲಿ ನಿರ್ದೇಶನ ನೀಡುತ್ತೇವೆ ನೀವು ಅಲ್ಲಿಗೇ ಹೋಗಿ ಅಂದರು.

ಆಗ ಇಲ್ಲಿ ಮುಖ್ಯನ್ಯಾಯಮೂರ್ತಿಯಾಗಿ ವಘೇಲಾ ಇದ್ದರು. ನಮಗೆ ಇಲ್ಲಿ ಪ್ರಶಾಂತ ಭೂಷಣ್ ಅವರಂತಹ ಪ್ರಾಮಾಣಿಕ ಹಾಗೂ ಪರಿಣಾಮಕಾರಿ ವಾದ ಮಂಡಿಸುವ ಸಮರ್ಥ ವಕೀಲರು ಸಿಗುವುದು ತುಂಬಾ ಕಷ್ಟವಾಯಿತು. ಹಿಂದೆ ಸುಪ್ರೀಂಕೋರ್ಟ್ ನ್ಯಾಯಾಧೀಶರಾದ ಭಗವತಿ ಮತ್ತು ಕೃಷ್ಣ ಅಯ್ಯರ್ ಅವರು ಪಿಐಎಲ್ ಶುರು ಮಾಡಿದ್ದರಿಂದ ಅವರ ಬೆಂಬಲವಿತ್ತು. ಈಗ ಹಾಗಿಲ್ಲ. ಹಿರಿಯ ವಕೀಲರು ಇದ್ದಾರೆ. ಆದರೆ ಬಹುತೇಕರು ವಾಣಿಜ್ಯೀಕರಣಗೊಂಡಿದ್ದಾರೆ. ಸುದೈವದಿಂದ ವೀರೇಶ ಎಂಬ ತರುಣ ವಕೀಲರು ಬಸವರಾಜ ಎಂಬ ಸಮರ್ಥರೊಬ್ಬರ ಪರಿಚಯ ಮಾಡಿಸಿದರು. ಅವರು ಪರಿಣಾಮಕಾರಿ ಕೆಲಸ ಮಾಡ್ತಿದ್ದಾರೆ. ಹಾಗಾಗಿ ಭೂಕಬಳಿಕೆ ಪ್ರಕರಣದ ವಾದ ನಡೀತಿದೆ.

ಪ್ರೆಸ್ಟೀಜ್ ಕಂಪನಿ ಒಂದು ಭೂಕಬಳಿಕೆ ಮಾಫಿಯಾ. ಈ ಕಂಪನಿ ಸರಕಾರದ 3.23 ಎಕರೆ ಗೋಮಾಳ ಭೂಮಿಯನ್ನು ಕಬಳಿಸಿದೆ. ಈ ಬಗ್ಗೆ ನಾವು ಸರಕಾರಕ್ಕೆ ಮನವರಿಕೆ ಮಾಡಿಕೊಟ್ಟಾಗ ಸರಕಾರ ಸಹ ಅದನ್ನು ಒಪ್ಪಿ ಭೂಮಿಯನ್ನು ವಾಪಸು ಪಡೆಯಲು ಆದೇಶ ಹೊರಡಿಸಿತು. ನಂತರ ಆ ಕಂಪನಿ ಹೈಕೋರ್ಟಿಗೆ ಮೇಲ್ಮನವಿ ಸಲ್ಲಿಸಿತು. ಈ ಪ್ರಕರಣ ನ್ಯಾಯಮೂರ್ತಿ ರಾಮಮೋಹನ್ ರೆಡ್ಡಿ ಅವರ ಪೀಠದ ಮುಂದೆ ಬಂದಿತು. ವಿಚಾರಣೆ ವೇಳೆ ನ್ಯಾ ರಾಮಮೋಹನ್ ರೆಡ್ಡಿ, ‘ಎರಡುಪಟ್ಟು ಅಥವಾ ಹೆಚ್ಚುವರಿ ದಂಡ ಹಾಕಿ ಭೂಮಿಯನ್ನು ಅವರಿಗೇ ವಾಪಸು ಕೊಡಲು ಸಾಧ್ಯವೇ’ ಎಂಬ ಬಗ್ಗೆ ಸರಕಾರಕ್ಕೆ ಪತ್ರ ಬರೆದು ಕೇಳಿ ಎಂದು ಹೆಚ್ಚುವರಿ ಅಡ್ವೊಕೇಟ್ ಜನರಲ್‍ಗೆ ಸೂಚಿಸಿದರು. ಇದಕ್ಕೆ ಸರಕಾರ ಹಾಗೆ ಮಾಡಲು ಬರುವುದಿಲ್ಲ ಎಂದು ಹೇಳಿತು. ಎರಡನೇ ಬಾರಿಗೆ ಈ ಪ್ರಕರಣ ವಿಚಾರಣೆಗೆ ಬಂದಾಗಲೂ ರಾಮಮೋಹನ್ ರೆಡ್ಡಿ ಆ ಕಂಪನಿ ಪರವಾಗಿಯೇ ಇದ್ದರು. ನ್ಯಾಯಾಧೀಶರೇ ಕೂತು ಹೀಗೆ ಕೇಳಿದರೆ ಹೇಗೆ ಎಂದು ನಾನು ಯೋಚಿಸಿ, ಅನಿವಾರ್ಯವಾಗಿ ಜನತಾ ನ್ಯಾಯಾಲಯದ ಮುಂದೆ ಬಂದೆ.

ಇದಕ್ಕೆ ಪ್ರತಿಯಾಗಿ ಅವರು ನನ್ನ ಮೇಲೆ ನ್ಯಾಯಾಂಗ ನಿಂದನೆ ಪ್ರಕರಣ ಹಾಕುತ್ತೇನೆ ಎಂದರು. ನಾನು ಆಯಿತು ಹಾಕಿ ಎಂದೆ. ‘ತಿಹಾರ ಜೈಲಿಗೆ ಅಥವಾ ಎಲ್ಲಿಗೆ ಬೇಕಾದರೂ ಕಳಿಸಿ, ಜೀವ ತೆಗೆದರೂ ಹೆದರುವುದಿಲ್ಲ ಅಂದೆ’. ಈ ಸಂದರ್ಭದಲ್ಲಿ ನ್ಯಾಯಾಲಯದ ಸಭಾಂಗಣದಲ್ಲಿ ನ್ಯಾಯಾಧೀಶರು ಮತ್ತು ನನ್ನ ನಡುವೆ ನಡೆದ ಮಾತಿನ ಚಕಮಕಿಯನ್ನು ಮಾಧ್ಯಮಗಳು ಈಗಾಗಲೇ ಎಲ್ಲರಿಗೂ ತಿಳಿಸಿವೆ. ಈ ಪ್ರಕರಣದಲ್ಲಿ ಆರೋಪ ಮಾಡುವವರು ಮತ್ತು ನ್ಯಾಯಾಧೀಶರು ಒಬ್ಬರೇ ಆಗಿದ್ದರು. ಆರೋಪಿ ಮತ್ತು ನ್ಯಾಯಧೀಶ ಒಬ್ಬರೇ ಆಗಬಾರದೆಂದು ಸಂವಿಧಾನದ ತತ್ವವಿದೆ. ನ್ಯಾಯಾಧೀಶರೇ ಕೂತು ಹೀಗೆ ವರ್ತಿಸಿದರೆ ಹೇಗೆ. ಈ ಒಂದು ಪ್ರಕರಣ ನಮ್ಮ ರಾಜ್ಯ ಹೈಕೋರ್ಟಿನ ವಸ್ತುಸ್ಥಿತಿಯನ್ನು ಹಾಗೂ ಕಾರ್ಯವೈಖರಿಯನ್ನು ನಾಡಿನ ಜನರಿಗೆ ಬಿಂಬಿಸುತ್ತದೆ. ನ್ಯಾಯಾಧೀಶರೊಬ್ಬ ಸಾರ್ವಜನಿಕ ಸೇವಕ. ಇವರ ಸಂಬಳ, ಭತ್ಯೆ ಹಾಗೂ ಪಿಂಚಣಿ ಇತ್ಯಾದಿ ಸೌಲಭ್ಯಗಳನ್ನು ಈ ದೇಶದ ಬಡಜನರ ಹಣದಿಂದ ಕೊಡಲಾಗುತ್ತದೆ. ಆ ಬಗ್ಗೆ ಎಲ್ಲರೂ ಯೋಚಿಸಬೇಕಿದೆ.

ಸುಪ್ರೀಂಕೋರ್ಟಿನಲ್ಲಿ ನ್ಯಾಯಮೂರ್ತಿಗಳಾದ ಚಲಮೇಶ್ವರ್, ಮದನ್ ಬಿ. ಲೋಕೂರ್ ಹಾಗೂ ರಂಜನ್ ಗೋಗೊಯ್ ಸೇರಿದಂತೆ ನಾಲ್ವರು ಜನತಾ ನ್ಯಾಯಾಲಯದ ಮುಂದೆ ಬಂದು ಪ್ರಜಾಪ್ರಭುತ್ವ ಇಂದು ಅಪಾಯದಲ್ಲಿದೆ ಎಂದು ಹೇಳಿದ್ದಾರೆ. ನ್ಯಾಯಾಂಗದ ಸ್ವಾತಂತ್ರ್ಯ ಮತ್ತು ಘನತೆಯನ್ನು ಕಾಪಾಡುವ ನಿಟ್ಟಿನಲ್ಲಿ ಈ ನಾಲ್ವರು ನ್ಯಾಯಾಧೀಶರ ಕ್ರಮ ಅತ್ಯಂತ ಅಭಿನಂದನಾರ್ಹ. ಇಂಥವರು ನಮ್ಮ ರಾಜ್ಯದ ಕಾನೂನು ವಲಯದಲ್ಲಿ ಬಹಳ ಕಡಿಮೆ. ಎಲ್ಲೋ ಒಬ್ಬಿಬ್ಬರು ವಕೀಲರು ನಿರ್ದಿಷ್ಟ ಪ್ರಕರಣದಲ್ಲಿ ವಾದ ಮಾಡಿರಬಹುದು. ಆದರೆ ಇಂತಹ ಸಾಮೂಹಿಕ ಪ್ರಯತ್ನ ಇದುವರೆಗೆ ನಮ್ಮಲ್ಲಿ ಅಗೇ ಇಲ್ಲ. ನ್ಯಾಯಾಂಗದ ಸ್ವಾತಂತ್ರ್ಯ ಮತ್ತು ಗೌರವವನ್ನು ಕಾಪಾಡಬೇಕು. ಪ್ರಜಾಪ್ರಭುತ್ವದಲ್ಲಿ ಬಹುಮುಖ್ಯ ಅಂಗವಿದು.

ವಘೇಲಾ ಅವರ ನಂತರ ಎಸ್.ಕೆ.ಮುಖರ್ಜಿ ರಾಜ್ಯ ಹೈಕೋರ್ಟಿನ ಮುಖ್ಯನ್ಯಾಯಮೂರ್ತಿ ಆಗಿ ಬಂದರು. ಅವರು ಮಹಾ ಭ್ರಷ್ಟರು. ಅವರಿಗೆ ಎಲ್ಲಿಂದ ಹಣ ಹೋಗ್ತದೆ, ಯಾರಿಂದ ಸಂಗ್ರಹ ಮಾಡ್ತಾರೆ ಎಂಬುದು ಎಲ್ಲಾ ವಕೀಲರಿಗೆ ಗೊತ್ತಿದೆ. ಸುಪ್ರೀಂಕೋರ್ಟಿನಲ್ಲಿ ಮುಖ್ಯನ್ಯಾಯಮೂರ್ತಿಗಳು ತಮಗೆ ಬೇಕಾದ ಪ್ರಕರಣಗಳನ್ನು ಬೇಕಾದ ಪೀಠಕ್ಕೆ ಹಂಚಿಕೆ ಮಾಡುವುದು, ತಮಗೆ ಚಿಂತನಶೀಲ ಸಮಾಜಮುಖಿ ಬೇಕಾದ ತೀರ್ಪು ಬರುವಂತೆ ನೋಡಿಕೊಳ್ಳುವುದು ಬಹಳ ಗಂಭೀರ ವಿಚಾರ. ಇದೇ ಕೆಲಸ ಕರ್ನಾಟಕದಲ್ಲೂ ನಡೆಯುತ್ತಿದೆ. ಎಸ್. ಕೆ.ಮುಖರ್ಜಿ ಆ ಪಟ್ಟಿಗೆ ಸೇರಿದವರು.

ಉದಾಹರಣೆಗಾಗಿ ಹೇಳುವುದಾದರೆ ಆನಂದ ಭೈರಾರೆಡ್ಡಿ ಎಂಬ ನ್ಯಾಯಾಧೀಶರಿದ್ದರು. ಈಗವರು ನಿವೃತ್ತಿ ಹೊಂದಿದ್ದಾರೆ. ಅವರ ಮತ್ತು ಮುಖ್ಯನ್ಯಾಯಮೂರ್ತಿ ಎಸ್.ಕೆ.ಮುಖರ್ಜಿ ನಡುವೆ ಬಹಳ ನೆಂಟಸ್ಥನ. ಮುಖರ್ಜಿ ಅವರು ತವiಗೆ ಬೇಕಾದ ಪ್ರಕರಣಗಳನ್ನು ನ್ಯಾ.ಭೈರಾರೆಡ್ಡಿ ಅವರಿಗೆ ಹಂಚಿಕೆ ಮಾಡುತ್ತಿದ್ದರು. ಭೈರಾರೆಡ್ಡಿ ಮೊದಲು ಅರೋಪ ಮುಕ್ತಗೊಳಿಸಿದ್ದು ಸಚಿವ ಡಿ.ಕೆ.ಶಿವಕುಮಾರ್ ಅವರನ್ನು. ಬಳಿಕ ಮಾಜಿ ಸಚಿವ ಕಟ್ಟಾಸುಬ್ರಮಣ್ಯ ನಾಯ್ಡು ಅವರ ಮಗ ಕಟ್ಟಾ ಜಗದೀಶರನ್ನು. ಲೋಕಾಯುಕ್ತ ಸಂತೋಷ ಹೆಗಡೆ ಮತ್ತು ತಂಡ ಬಹಳ ಶ್ರಮ ಹಾಕಿ ಕಟ್ಟಾ ಜಗದೀಶರನ್ನು ಹಿಡಿದಿದ್ದರು. ಅಂತಹವರನ್ನು ಈ ನ್ಯಾ.ಭೈರಾರೆಡ್ಡಿ ಬಿಡುಗಡೆ ಮಾಡಿದರು. ನಾವು ಈ ಪ್ರಕರಣವನ್ನು ನ್ಯಾ.ಭೈರಾರೆಡ್ಡಿಗೆ ಕೊಡದಂತೆ ಎಸ್. ಕೆ.ಮುಖಿರ್ಜಿಯವರಿಗೆ ಪತ್ರ ಬರೆದಿದ್ದೆವು. ಕೇಳಲಿಲ್ಲ, ಮತ್ತೆ ಅವರಿಗೇ ಕೊಟ್ಟರು.

ಆಮೇಲೆ ಇನ್ನು ಹಲವು ಪ್ರಕರಣಗಳನ್ನು ಭೈರಾರೆಡ್ಡಿ ನಿಭಾಯಿಸಿದ್ದಾರೆ. ಅದರಲ್ಲಿ ಇನ್ನೊಂದು ಪ್ರಕರಣ ನನಗೆ ಬಹಳ ಆಘಾತ ಉಂಟು ಮಾಡಿತು. ಅದೆಂದರೆ ಅಕ್ರಮವಾಗಿ ಅದಿರು ರಫ್ತು ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಗಾಲಿ ಜನಾರ್ದನರೆಡ್ಡಿ ಮತ್ತು ಇತರರ ವಿರುದ್ಧ ನಾನು ಮತ್ತು ಪ್ರಶಾಂತ ಭೂಷಣ್ ಕಷ್ಟಪಟ್ಟು ಸುಪ್ರೀಂಕೋರ್ಟ್ ಮೊರೆಹೋಗಿ 5 ಪ್ರಕರಣಗಳನ್ನು ದಾಖಲಿಸಿದ್ದೆವು. ನ್ಯಾ.ಭೈರಾರೆಡ್ಡಿ ಎಲ್ಲವನ್ನೂ ಖುಲಾಸೆಗೊಳಿಸಿದರು. ಈ ಪ್ರಕರಣಗಳಲ್ಲಿ ಶಾಸಕರಾದ ಸತೀಶ ಶೈಲ್, ಆನಂದಸಿಂಗ್ ಹಾಗೂ ನಾಗೇಂದ್ರ ಕೂಡ ಶಾಮೀಲಾಗಿದ್ದಾರೆ. ಈ ಸುದ್ದಿ ತಿಳಿಯುತ್ತಿದ್ದಂತೆ ನಾನು ದೆಹಲಿಯಿಂದಲೇ ಸುದ್ದಿಗೋಷ್ಠಿ ನಡೆಸಿ ನಾಡಿನ ಜನತೆಗೆ ವಿಷಯ ತಿಳಿಸಿದ್ದೆ.

ಇನ್ನು ದಿನಕರಣ್ ಎಂಬ ಅತೀ ಭ್ರಷ್ಟ ಮುಖ್ಯನ್ಯಾಯಾಧೀಶ ತನ್ನ ವಿರುದ್ಧ ಮಹಾಭೀಯೋಗ ನಿರ್ಣಯ ಅಂಗೀಕಾರಗೊಳ್ಳುವ ಕೊನೆಯ ಹಂತದಲ್ಲಿ ರಾಜಿನಾಮೆ ಕೊಟ್ಟು ಓಡಿಹೋಗಿದ್ದು ರಾಜ್ಯದ ನ್ಯಾಯಾಂಗ ವ್ಯವಸ್ಥೆಗೆ ಕನ್ನಡಿ ಹಿಡಿಯುತ್ತದೆ.

ಭ್ರಷ್ಟಾತಿಭ್ರಷ್ಟ ನ್ಯಾಯಾಧೀಶ ಭಾಸ್ಕರ್ ರಾವ್ ಲೋಕಾಯುಕ್ತರಾಗಿದ್ದು ಇನ್ನೊಂದು ಕಳಂಕ. ಆದಿಕೇಶವಲು ಎಂಬ ರಿಯಲ್ ಎಸ್ಟೇಟ್ ಕುಳ ಆಗ ಮುಖ್ಯಮಂತ್ರಿಯಾಗಿದ್ದ ಜಗದೀಶ ಶೆಟ್ಟರ್ ಹಾಗೂ ರಾಜ್ಯಪಾಲರಾಗಿದ್ದ ಹಂಸರಾಜ್ ಭಾರಧ್ವಾಜ ಅವರನ್ನು ಮ್ಯಾನೇಜ್ ಮಾಡಿ ಭಾಸ್ಕರ್‍ರಾವ್‍ರನ್ನು ಲೋಕಾಯುಕ್ತರನ್ನಾಗಿ ಮಾಡಿದರು. ನ್ಯಾಯಮೂರ್ತಿ ಸಂತೋಷ ಹೆಗಡೆ ಲೋಕಾಯುಕ್ತವನ್ನು ಭ್ರಷ್ಟರ ವಿರುದ್ಧ ಹೋರಾಡುವ ಆಶಾಕಿರಣವನ್ನಾಗಿ ಮಾಡಿದ್ದರು. ಅದನ್ನು ಈ ಭಾಸ್ಕರ್‍ರಾವ್ ನಂದಿಸಿದರು.

ಪ್ರತಿಪಕ್ಷದಲ್ಲಿದ್ದಾಗ ನಿಮಗೆ ಮಾನ ಮರ್ಯಾದೆ ಇದ್ದರೆ ಲೋಕಾಯುಕ್ತ ಸಂತೋಷ ಹೆಗಡೆ ವರದಿಯನ್ನು ಜಾರಿಗೊಳಿಸಿ ಇಲ್ಲವಾದರೆ ರಾಜಿನಾಮೆ ಕೊಡಿ ಎಂದು ಯಡಿಯೂರಪ್ಪಗೆ ಹೀಯಾಳಿಸುತ್ತಿದ್ದ ಸಿದ್ದರಾಮಯ್ಯನವರು ಮುಖ್ಯಮಂತ್ರ್ರಿಯಾದ ಮೇಲೆ ಲೋಕಾಯಕ್ತವನ್ನು ಮೂಲೆಗುಂಪು ಮಾಡಿದ್ದಾರೆ.

ಈ ವಿಚಾರದಲ್ಲಿ ಬಾರ್ ಕೌನ್ಸಿಲ್ ಸಾಕಷ್ಟು ಹೋರಾಟ ಮಾಡಿತು, ಇದು ಒಳ್ಳೆಯ ಬೆಳವಣಿಗೆ. ಇಂಥ ಆಶಾದಾಯಕ ಬೆಳವಣಿಗೆಗಳು ಅಲ್ಲೊಂದು ಇಲ್ಲೊಂದು ನಡೆದಿವೆ. ಲೋಕಾಯುಕ್ತ ಸಂಸ್ಥೆಯ ಗೌರವ, ಘನತೆಯನ್ನು ಮರುಸ್ಥಾಪಿಸಲು ನಾವೆಲ್ಲಾ ಮತ್ತೊಮ್ಮೆ ಆಂದೋಲನ ಹಮ್ಮಿಕೊಳ್ಳಬೇಕಿದೆ.

ಆ ಬಳಿಕ ಈಗಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಲೋಕಾಯುಕ್ತವನ್ನು ಸಂಪೂರ್ಣ ಮುಗಿಸಿದ್ದಾರೆ. ಪ್ರತಿಪಕ್ಷದಲ್ಲಿದ್ದಾಗ ನಿಮಗೆ ಮಾನ ಮರ್ಯಾದೆ ಇದ್ದರೆ ಲೋಕಾಯುಕ್ತ ಸಂತೋಷ ಹೆಗಡೆ ವರದಿಯನ್ನು ಜಾರಿಗೊಳಿಸಿ ಇಲ್ಲವಾದರೆ ರಾಜಿನಾಮೆ ಕೊಡಿ ಎಂದು ಯಡಿಯೂರಪ್ಪನವರಿಗೆ ಹೀಯಾಳಿಸುತ್ತಿದ್ದರು. ಈಗ ಅದೇ ಸಿದ್ದರಾಮಯ್ಯ ಮುಖ್ಯಮಂತ್ರ್ರಿಯಾದ ಮೇಲೆ ಲೋಕಾಯಕ್ತವನ್ನು ಮೂಲೆಗುಂಪು ಮಾಡಿದ್ದಾರೆ. ತಮ್ಮ ಮೂಗಿನ ಕೆಳಗೆ ಕೆಲಸ ಮಾಡುವ ಎಸಿಬಿ ರಚನೆ ಮಾಡಿದ್ದಾರೆ. ಈಗಿನ ಲೋಕಾಯುಕ್ತರೂ ಭ್ರಷ್ಟಾಷಾರದ ಕಳಂಕ ಮೆತ್ತಿಕೊಂಡವರೇ ಆಗಿದ್ದಾರೆ. ಲೋಕಾಯುಕ್ತರ ಪತ್ನಿ ಸರಕಾರದ ಗೋಮಾಳ್ ಭೂಮಿಯನ್ನು ಕಬಳಿಸಿದ್ದಾರೆ.

ಈ ವಿಚಾರದಲ್ಲಿ ಬಾರ್ ಕೌನ್ಸಿಲ್ ಸಾಕಷ್ಟು ಹೋರಾಟ ಮಾಡಿತು, ಇದು ಒಳ್ಳೆಯ ಬೆಳವಣಿಗೆ. ಇಂಥ ಆಶಾದಾಯಕ ಬೆಳವಣಿಗೆಗಳು ಅಲ್ಲೊಂದು ಇಲ್ಲೊಂದು ನಡೆದಿವೆ. ಲೋಕಾಯುಕ್ತ ಸಂಸ್ಥೆಯ ಗೌರವ, ಘನತೆಯನ್ನು ಮರುಸ್ಥಾಪಿಸಲು ನಾವೆಲ್ಲಾ ಮತ್ತೊಮ್ಮೆ ಆಂದೋಲನ ಹಮ್ಮಿಕೊಳ್ಳಬೇಕಿದೆ.

ಬಾರ್ ಕೌನ್ಸಿಲ್ ಮತ್ತು ವಕೀಲರ ಸಂಘಗಳಿಗೆ ನ್ಯಾಯಾಂಗದ ಘನತೆ ಕಾಪಾಡಲು ನಾವು ಹಿಂದೆ ಪತ್ರ ಬರೆದಿದ್ದೆವು. ಆದರೆ ಅವರು ತಮ್ಮ ಸಂಸ್ಥೆಯ ರಕ್ಷಣೆಗೆ ಯತ್ನ ಮಾಡಿದ್ದು ಬಹಳ ಕಡಿಮೆ. ಈಗಲಾದರೂ ಅವರೆಲ್ಲ ಅವಲೋಕನ ಮಾಡಿ ವ್ಯವಸ್ಥೆ ಸುಧಾರಣೆಗೆ ಮುಂದೆ ಬರಬೇಕು. ಯಾಕೆಂದರೆ ಚಂದ್ರಲೋಕ ಅಥವಾ ಮಂಗಳಲೋಕದಿಂದ ಗಾಂಧಿ ಬರಲಿಲ್ಲ. ಹಾಗಾಗಿ ನಮ್ಮಿಂದಲೇ ಸುಧಾರಣೆ ಅಗತ್ಯ. ನ್ಯಾಯಾಂಗದ ಗೌರವ ಹಾಗೂ ಘನತೆಯ ಪುನರ್‍ಸ್ಥಾಪನೆ ಬಹು ಕಷ್ಟವಾಗಿದೆ. ಇದರಿಂದ ಅನ್ನ ತಿಂದ ವಕೀಲರ ಬಳಗ ಅದರ ಘನತೆ ಮರುಸ್ಥಾಪಿಸಲು ಹೋರಾಡಲೇಬೇಕಿದೆ. ಅವರಿಗೆ ಬೇಕಾದರೆ ನಾವು ಸಹಾಯ ಮಾಡುತ್ತೇವೆ.

*ಲೇಖಕರು ಸಾಮಾಜಿಕ ಹೋರಾಟಗರರು, ಸಮಾಜ ಪರಿವರ್ತನಾ ಸಮುದಾಯ ಸಂಘಟನೆಯ ಸ್ಥಾಪಕ ಅಧ್ಯಕ್ಷರು, ಅಕ್ರಮ ಗಣಿಗಾರಿಕೆ ವಿರುದ್ಧ ಕಾನೂನು ಹೋರಾಟ ಕಟ್ಟಿ ಜಯಿಸಿದವರು.

ನ್ಯಾಯಾಧೀಶರ ನಿಯುಕ್ತಿಯಲ್ಲಿ ಲೋಪ

ಬಿ. ಟಿ. ವೆಂಕಟೇಶ

ಒಂದರ ಮೇಲೊಂದರಂತೆ ಗಣ್ಯರ ಮೇಲಿದ್ದ ಪ್ರಕರಣಗಳಿಗೆ ತಡೆ ಕೊಟ್ಟು, ನಂತರ ರದ್ದುಪಡಿಸಿದ್ದು ಏನನ್ನು ಸೂಚಿಸುತ್ತದೆ?.

ಸ್ವತಂತ್ರ ನ್ಯಾಯಾಂಗ ಯಾವುದೇ ಪ್ರಜಾಪ್ರಭುತ್ವದ ಮೂಲ ಸ್ಥಂಭಗಳಲ್ಲೊಂದು. ನಮ್ಮ ದೇಶದ ನ್ಯಾಯಾಂಗ ವಿಶೇಷವಾದದ್ದು. ಪ್ರಪಂಚದಲ್ಲಿ ಯಾವುದೇ ದೇಶದಲ್ಲಿರದಂತಹ ಅಧಿಕಾರ ಇಲ್ಲಿಯ ನ್ಯಾಯಾಂಗಕ್ಕಿದೆ. ತನ್ನನ್ನು ತಾನೇ ನಿಯುಕ್ತಿಗೊಳಿಸಿಕೊಳ್ಳುವ ಅಧಿಕಾರ, ಜನಾದೇಶವಿಲ್ಲದ, ಯಾರೂ ಪ್ರಶ್ನಿಸಲಾರದಂತಹ ನಿಯುಕ್ತಿಯ ಅಧಿಕಾರವಿದು. ಪ್ರಪಂಚದಲ್ಲಿಯೇ ವಿಶಿಷ್ಟವಾದ ಸಂವಿಧಾನ ನಮ್ಮದು. ಆಶ್ಚರ್ಯವೆಂದರೆ ನ್ಯಾಯಾಧೀಶರ ನಿಯುಕ್ತಿ ಕುರಿತ ಸಾಕಷ್ಟು ಪ್ರಶ್ನೆಗಳಿಗೆ ಅದು ಮೌನವಾಗಿದೆ.

ಇಂತಹ ಅಧಿಕಾರ ಪ್ರಜಾಪ್ರಭುತ್ವ ವಿರೋಧಿಯಲ್ಲವೇ? ಎಂದು ಅಂತಾರಾಷ್ಟ್ರೀಯ ಚರ್ಚೆಗಳಲ್ಲಿ ಕೇಳಿಬರುತ್ತದೆ. ನಮ್ಮ ದೇಶದಲ್ಲಿಯೇ ಇಂತಹ ಸ್ಥಿತಿಯನ್ನು ಬದಲಾಯಿಸಲು ನಡೆದ ಪ್ರಯತ್ನ ನ್ಯಾಯಾಧೀಶರ ನೇಮಕಾತಿಯ ಕಾನೂನು. ಆ ಪ್ರಯತ್ನವನ್ನು ಸರ್ವೋಚ್ಚ ನ್ಯಾಯಾಲಯ ಸಂವಿಧಾನ ವಿರೋಧಿಯೆಂದು ತೀರ್ಪಿತ್ತು ಒಡೆದು ಹಾಕಿತು. ನ್ಯಾಯಾಲಯಗಳಲ್ಲಿ ನಿಷ್ಪಕ್ಷಪಾತದ ಕೊರತೆಯಿದೆಯೆಂದು ದೂರಲಾಗುತ್ತದೆ. ಸ್ವಜನಪ್ರೇಮ, ಒಳರಾಜಕೀಯ, ಭ್ರಷ್ಟಾಚಾರದ ಅಪಾದನೆಗಳು ಕೂಡ ಕಳೆದೊಂದು ದಶಕದಲ್ಲಿ ಹೆಚ್ಚಾಗಿ ಕೇಳಿಬರುತ್ತಿವೆ.

ಕರ್ನಾಟಕ ಉಚ್ಚನ್ಯಾಯಾಲಯ ತನ್ನದೇ ಆದ ಸಮಸ್ಯೆಗಳನ್ನೆದುರಿಸುತ್ತಿದೆ. 62 ಜನ ನ್ಯಾಯಾಧೀಶರು ಇರಬೇಕಾದ ನ್ಯಾಯಾಲಯದಲ್ಲಿ, ಈಗಿರುವ ನ್ಯಾಯಾಧೀಶರ ಸಂಖ್ಯೆ 25. ಅದೂ ಮೂರು ಪೀಠಗಳಲ್ಲಿ ಹಂಚಿಹೋಗಿದೆ. ಬಾಕಿ ಪ್ರಕರಣಗಳು ಲಕ್ಷಗಳಲ್ಲಿವೆ. ಹಳೆಯ ಪ್ರಕರಣಗಳು ಕೊಳೆಯುತ್ತಿವೆ.

ನ್ಯಾಯಾಧೀಶರ ಅಭಾವ ಅಧೀನ ನ್ಯಾಯಾಲಯಗಳಲ್ಲಿಯೂ ಕಂಡುಬರುತ್ತಿದೆ. ಅಲ್ಲಿ ಹೆಚ್ಚಿನ ತೀರ್ಪುಗಳನ್ನು ಕೊಡಬೇಕೆಂಬ ಒತ್ತಡಕ್ಕೆ ಕೊಟ್ಟ ತೀರ್ಪುಗಳ ಗುಣಮಟ್ಟ ಕಳಪೆಯಾಗುತ್ತಿದೆ ಎಂಬುದು ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ. ಬೇರೆ ಹೈಕೋರ್ಟಗಳಿಗೆ ಹೋಲಿಸಿದಂತೆ ಇಲ್ಲಿ ದೂರುಗಳು ಕಮ್ಮಿಯಿದ್ದರೂ ಅವಸರದ ತೀರ್ಪುಗಳಿಂದ ಕೆಲವು ತಪ್ಪುಗಳಾಗುತ್ತಿವೆ ಎಂಬ ಮಾತು ಕೋರ್ಟಿನ ಕಾರಿಡಾರ್‍ಗಳಲ್ಲಿ ಕೇಳಿಬರುತ್ತಿದೆ.

ಕೇಂದ್ರ ಸರಕಾರ ಹಾಗೂ ಸರ್ವೋಚ್ಚ ನ್ಯಾಯಾಲಯದ ನಡುವಿನ ಶೀತಲ ಸಮರದಲ್ಲಿ ನ್ಯಾಯದಾನದ ಕೂಸು ಬಡವಾದಂತಾಗಿದೆ. ಸಾರ್ವಜನಿಕ ಸಭೆಯೊಂದರಲ್ಲಿ ಕೇಂದ್ರ ಸರಕಾರದ ಧೋರಣೆ ವಿಮರ್ಶಿಸುತ್ತ, ಕರ್ನಾಟಕ ಉಚ್ಚನ್ಯಾಯಾಲಯದ ಸ್ಥಿತಿಯ ಬಗ್ಗೆ ಹೇಳುತ್ತಾ ಸರ್ವೋಚ್ಚ ನ್ಯಾಯಾಲಯದ ಮುಖ್ಯನ್ಯಾಯಾಧೀಶರು ಕಣ್ಣೀರಿಟ್ಟು ಎರಡು ವರ್ಷಗಳೇ ಸಂದವು. ಕೆಲದಿನಗಳಲ್ಲಿ ಕರ್ನಾಟಕ ಉಚ್ಚನ್ಯಾಯಾಲಯವನ್ನು ಮುಚ್ಚಬೇಕಾಗಿ ಬರಬಹುದು ಎಂಬಷ್ಟರಮಟ್ಟಿಗೆ ಪರಿಸ್ಥಿತಿ ಬಿಗಡಾಯಿಸಿದೆ.

ನಮಗೆ ನ್ಯಾಯಾಧೀಶರನ್ನು ಕೊಡಿ ಎಂಬ ಬೇಡಿಕೆಯನ್ನಿಟ್ಟು ವಕೀಲರು ಧರಣಿ ಕೂಡುವ ಸ್ಥಿತಿ ಬಂದಿರುವುದು ದುರಂತ. ಬೆಂಗಳೂರಿನ ವಕೀಲರ ಸಂಘದ ಅಧ್ಯಕ್ಷರಾದ ಎ.ಪಿ.ರಂಗನಾಥ್ ಧರಣಿ ಪ್ರಾರಂಭಿಸಿದ್ದು ಅದಕ್ಕೆ ವ್ಯಾಪಕ ಬೆಂಬಲ ದೊರೆತಿದೆ. ಹೋರಾಟದ ಫಲವಾಗಿ ಐವರ ನೇಮಕಾತಿಯನ್ನು ಮಾಡಿದ್ದು ಸಂತಸ ತಂದರೂ ಈ ವರ್ಷದ ಕೊನೆಯೊಳಗೆ ಐವರು ನ್ಯಾಯಾಧೀಶರು ನಿವೃತ್ತಿ ಹೊಂದುತ್ತಿರುವುದರಿಂದ ಪರಿಸ್ಥಿತಿ ಮತ್ತೆ ಮೊದಲಿದ್ದಲ್ಲಿಗೆ ಬಂದು ನಿಲ್ಲುತ್ತದೆ. ಪ್ರಾಮಾಣಿಕ ಪ್ರಯತ್ನದ ಕೊರತೆ ಎದ್ದು ಕಾಣುತ್ತದೆ. ಇದೆಲ್ಲದರ ಮಧ್ಯೆ ನೋವನ್ನು ಅನುಭವಿಸುತ್ತಿರುವವರೆಂದರೆ ನ್ಯಾಯ ಪ್ರಕ್ರಿಯೆಯಲ್ಲಿ ನಂಬಿಕೆ ಇಟ್ಟ ಜನ ಮಾತ್ರ. ಕಕ್ಷಿದಾರರ ಪ್ರಶ್ನೆಗಳಿಗೆ ಉತ್ತರ ಕೊಡಲಾಗದ ಸ್ಥಿತಿ ವಕೀಲರದು. ಈ ಸಮಸ್ಯೆಗಳಲ್ಲಿ ಕಳೆಗುಂದಿದ ನ್ಯಾಯಾಂಗದ ಸ್ಥಿತಿಯಲ್ಲಿ ಕೊಂಚ ಖುಷಿ ತಂದಿದ್ದು ಕರ್ನಾಟಕದಿಂದ ಸರ್ವೋಚ್ಚ ನ್ಯಾಯಾಲಯಕ್ಕೆ ನ್ಯಾಯಮೂರ್ತಿ ಮೋಹನ್ ಶ್ಯಾಂತನಗೌಡರ್ ಹಾಗೂ ನ್ಯಾಯಮೂರ್ತಿ ಅಬ್ದುಲ್ ನಜೀರ್ ಆಯ್ಕೆಯಾಗಿದ್ದು. ಅತ್ಯಂತ ಪ್ರಾಮಾಣಿಕರಾದ, ಸರಳ ಸಜ್ಜನರಾದ ಎಲ್ಲರಿಂದಲೂ ಗೌರವ ಪಡೆದಿದ್ದ ಕರ್ನಾಟಕದ ವಕೀಲ ಸಮುದಾಯದ ಮೆಚ್ಚಿನ ನ್ಯಾಯಮೂರ್ತಿಗಳಿಬ್ಬರ ಆಯ್ಕೆ ನಮ್ಮ ನ್ಯಾಯಾಲಯಕ್ಕೆ ಸಂದ ಗೌರವ.

ನೋವಿನ ಸಂಗತಿಯೆಂದರೆ ಗುಜರಾತಿನಿಂದ ಕರ್ನಾಟಕಕ್ಕೆ ವರ್ಗಾವಣೆಯಾಗಿ ಬಂದು ಇಲ್ಲಿಯ ಜನರ ಪ್ರೀತಿ ಸಂಪಾದಿಸಿದ್ದ ಮುಖ್ಯನ್ಯಾಯಮೂರ್ತಿ ಡಿ.ಎಚ್.ವಘೇಲಾ ಹಾಗೂ ನ್ಯಾಯಮೂರ್ತಿ ಜಯಂತ್ ಪಟೇಲರನ್ನು ಸರ್ವೋಚ್ಚ ನ್ಯಾಯಾಲಯ ನಡೆಸಿಕೊಂಡ ರೀತಿ ಎಲ್ಲರ ಅಸಮಾಧಾನಕ್ಕೆ ಕಾರಣವಾಯಿತು. ಜಯಂತ್ ಪಟೇಲರ ಹಾಗೂ ವಘೇಲಾರ ದಿಟ್ಟ ತೀರ್ಪುಗಳು ಬಿಜೆಪಿಯ ಅಮಿತ್ ಶಾ ಅವರಿಗೆ ತೊಂದರೆಯಾಗಿದ್ದರಿಂದ ಅವರಿಬ್ಬರಿಗೆ ನ್ಯಾಯಾಂಗದ ಆಂತರಿಕ ರಾಜಕಾರಣದಿಂದ ಮೋಸವಾಗಿದೆ ಎಂದು ಗುಜರಾತ್ ಹೈಕೋರ್ಟಿನ ಹಿರಿಯ ವಕೀಲರಾದ ಯತಿನ್ ಓಝಾ, ವಕೀಲರ ಸಮುದಾಯ ಹಮ್ಮಿಕೊಂಡಿದ್ದ ಸಭೆಯೊಂದರಲ್ಲಿ ತಿಳಿಸಿದ್ದರು. ಜಯಂತ್ ಪಟೇಲ್ ರಾಜಿನಾಮೆಯನ್ನೂ ಕೊಟ್ಟರು.

ಈ ವರ್ಷಗಳಲ್ಲಿ ಲೋಕಾಯುಕ್ತರು ಹೊರತೆಗೆದ ಭ್ರಷ್ಟಾಚಾರದ ಪ್ರಕರಣಗಳು ಮುಖ್ಯಮಂತ್ರಿಯಿಂದ ಮೊದಲ್ಗೊಂಡು ಸಚಿವರ, ಪ್ರಭಾವಿ ವ್ಯಕ್ತಿಗಳನ್ನು ಜೈಲಿಗಟ್ಟುವ, ಚಾರ್ಜ್‍ಷೀಟ್ ಹಾಕಿದ ರೀತಿ ವ್ಯವಸ್ಥೆ ಬಗ್ಗೆ ಸ್ವಲ್ಪ ಭರವಸೆ ಮೂಡಿಸಿತ್ತು. ಮಾಡಿದ ತಪ್ಪಿಗೆ ಶಿಕ್ಷೆಯನ್ನು ಅನುಭವಿಸುತ್ತಾರೆ ಎಂಬಂತಾಗಿತ್ತು. ಆದರೆ ಒಂದರ ಮೇಲೊಂದರಂತೆ ಎಲ್ಲರ ಮೇಲಿದ್ದ ಪ್ರಕರಣಗಳಿಗೆ ತಡೆ ಕೊಟ್ಟಿದ್ದು, ನಂತರ ಕೆಲ ಸಮಯದಲ್ಲಿಯೇ ಪ್ರಕರಣಗಳನ್ನು ರದ್ದುಪಡಿಸಿದ್ದು ನ್ಯಾಯಾಂಗದ ಘನತೆ ಬಗ್ಗೆ ಪ್ರಶ್ನೆಗಳು ಉದ್ಭವಿಸುವಂತೆ ಮಾಡಿದವು. ಸಾಮಾನ್ಯನಿಗೊಂದು ನ್ಯಾಯ ಪ್ರಭಾವಿಗಳಿಗೊಂದು ನ್ಯಾಯ ಎಂಬ ಮಾತು ಹುಟ್ಟಿದ್ದು ನಿಜ. ಭ್ರಷ್ಟಾಚಾರದಿಂದಲೇ ಇಂತಹ ತೀರ್ಪುಗಳು ಬರಲು ಕಾರಣ ಎಂದು ಜನರಾಡಿದ್ದು, ಮಾಧ್ಯಮಗಳು ಪ್ರಶ್ನಿಸಿದ್ದು ಎಲ್ಲರಿಗೂ ತಿಳಿದ ವಿಷಯ.

ನ್ಯಾಯಾಂಗದಲ್ಲಿ ಬದಲಾವಣೆಯ ಅವಶ್ಯಕತೆಯಿದೆ. ಪ್ರಜಾಸತ್ತಾತ್ಮಕವಾದಂತಹ ನೇಮಕಾತಿ ಪ್ರಕ್ರಿಯೆಯ ಪಾರದರ್ಶಕತೆ, ಸಂವೇದನಾಶೀಲತೆ ಹಿಂದೆಂದಿಗಿಂತಲೂ ಇಂದು ಬೇಕಾಗಿದೆ.

*ಲೇಖಕರು ಹೈಕೋರ್ಟ್ ವಕೀಲರು. ಮಾನವ ಹಕ್ಕುಗಳ ರಕ್ಷಣೆ, ಕಾರ್ಮಿಕರು ಅಸಹಾಯಕರಿಗೆ ಕಾನೂನು ನೆರವು ನೀಡುವಲ್ಲಿ ವಿಶೇಷ ಆಸಕ್ತಿ.

ಡಾ.ಟಿ.ಆರ್.ಚಂದ್ರಶೇಖರ

ಕರ್ನಾಟಕ ಸರ್ಕಾರದ ಹಣಕಾಸಿನ ನಿರ್ವಹಣೆ

July 2018

ರಂಗಸ್ವಾಮಿ ಮೂಕನಹಳ್ಳಿ

ಕೃಷಿ ಸಾಲ ಮನ್ನಾ: ಸಾಧ್ಯವೇನಣ್ಣಾ?

July 2018

ಚಂಸು ಪಾಟೀಲ

ರೈತರೇಕೆ ಸಾಲಗಾರರಾದರು?

July 2018

ಟಿ.ಎಂ.ಥಾಮಸ್ ಐಸಾಕ್ ಕೇರಳದ ಹಣಕಾಸು ಸಚಿವರು

ಎಲ್ಲಾ ರಾಜ್ಯಗಳ ಹಣಕಾಸು ಸಚಿವರಿಗೆ ಕೇರಳ ಹಣಕಾಸು ಸಚಿವರ ಬಹಿರಂಗ ಪತ್ರ

July 2018

ಅರ್ಜುನ್ ರಾಮೇಗೌಡ ನಾರಾಯಣಸ್ವಾಮಿ

ಆ ಬೆಂಕಿಯ ಕಿಡಿ ಹೊತ್ತಿಸುವವರು ಯಾರು?

June 2018

ಡಾ.ಎಸ್.ಬಿ.ಜೋಗುರ

ಪೂರಕ ವಾತಾವರಣದ ಕೊರತೆ

June 2018

ಬಿ.ಎನ್.ವಿಜಯಕುಮಾರ್

ಭ್ರಷ್ಟತೆಗೆ ರಾಜಕೀಯ ಪಕ್ಷಗಳೇ ಕಾರಣ

April 2018

ಬಿ. ಕೆ. ಚಂದ್ರಶೇಖರ್

ಪ್ರಜಾಪ್ರಭುತ್ವಕ್ಕೆ ಕಪ್ಪುಚುಕ್ಕೆ

April 2018

ಅಲೋಕ್ ಪ್ರಸನ್ನ, ಎಸ್. ಆರ್. ಹಿರೇಮಠ, ಬಿ. ಟಿ. ವೆಂಕಟೇಶ

ನ್ಯಾಯಾಂಗ

March 2018

ಎ. ನಾರಾಯಣ, ಬಸವರಾಜ ಬೊಮ್ಮಾಯಿ, ಮೋಟಮ್ಮ

ಶಾಸಕಾಂಗ

March 2018

ಬಿ. ಆರ್. ಜಯರಾಮರಾಜೇ ಅರಸ್, ಎನ್. ಹನುಮೇಗೌಡ,

ಕಾರ್ಯಂಗ

March 2018

ವಾಸುದೇವ ಶರ್ಮಾ ಎನ್. ವಿ.

ನಾಗರಿಕ ಸಮಾಜ

March 2018

ಈಶ್ವರ ದೈತೋಟ, ಡಾ. ಎ. ಎಸ್. ಬಾಲಸುಬ್ರಹ್ಮಣ್ಯ

ಮಾಧ್ಯಮ

March 2018

ಡಾ.ಅರವಿಂದ ಪಟೇಲ್ ಬಳ್ಳಾರಿ

ವೈದ್ಯಕ್ಷೇತ್ರದ ಉದ್ಧಾರಕ್ಕೆ ಮೂರು ಮದ್ದು!

February 2018

ಮಾಲತಿ ಪಟ್ಟಣಶೆಟ್ಟಿ ಧಾರವಾಡ

ಗುಣಮಟ್ಟಕ್ಕೆ ಮನ್ನಣೆ

February 2018

ಡಾ.ಶ್ರೀನಿವಾಸ ಕಕ್ಕಿಲ್ಲಾಯ ಮಂಗಳೂರು

ಸಕ್ಕರೆ ನಿಷೇಧಿಸಿ!

February 2018