2nd ಮಾರ್ಚ್ ೨೦೧೮

ಐದು ವರ್ಷಗಳ ಸಾರ್ವಜನಿಕ ಬದುಕಿನ ಮೌಲ್ಯಮಾಪನ

ಮುಖ್ಯಚರ್ಚೆಗೆ ಪ್ರವೇಶ

ಮೌಲ್ಯಮಾಪನದ ಮೂಸೆಯಲ್ಲಿ ನಮ್ಮ ಹಳೆಯ ಅನುಭವಗಳನ್ನು ಕರಗಿಸಿ ಅನಗತ್ಯ ಕಲ್ಮಶಗಳನ್ನು ಹೊರಗೆ ತರಬೇಕಿದೆ. ಈ ಸತ್ವಪರೀಕ್ಷೆಯ ಕುಲುಮೆಯಲ್ಲಿ ತುಕ್ಕು ಹಿಡಿದಿರುವ ನಮ್ಮ ಕಬ್ಬಿಣದ ಹಂದರವನ್ನು ಕರಗಿಸಬೇಕಿದೆ. ಹೊಸ ಮತ್ತು ಅಗತ್ಯ ಮೌಲ್ಯ ಮಿಶ್ರಣಗಳೊಂದಿಗೆ ಉಕ್ಕಿನ ಶಕ್ತಿಯ ಸಾರ್ವಜನಿಕ ಬದುಕಿನ ಅಂಗಗಳನ್ನು ಬೆಸುಗೆ ಮಾಡಬೇಕಿದೆ.

ನಾವು ಆಯ್ಕೆ ಮಾಡಿಕೊಳ್ಳುವ ಸರ್ಕಾರವು ನಮ್ಮ ಸಾರ್ವಜನಿಕ ಬದುಕಿನ ಬಹುಮುಖ್ಯ ಅಂಗವಾಗಿರುತ್ತದೆ. 2013ರಲ್ಲಿ ನಾವು ಗೆಲ್ಲಿಸಿ ಅಧಿಕಾರಕ್ಕೆ ತಂದ ಸಿದ್ದರಾಮಯ್ಯನವರ ನೇತೃತ್ವದ ಕಾಂಗ್ರೆಸ್ ಸರ್ಕಾರ ಇದೇ 2018ರ ಮೇ ತಿಂಗಳಿಗೆ ಐದು ವರ್ಷ ಪೂರೈಸುತ್ತಿದೆ. ಅದರೊಂದಿಗೆ ಕರ್ನಾಟಕದ ಶಾಸಕಾಂಗ ಐದು ವರ್ಷಗಳ ತನ್ನ ಅವಧಿ ಪೂರೈಸುತ್ತಿದೆ. ಈ ಅವಧಿಯನ್ನು ನಿರ್ಣಾಯಕ ಘಟ್ಟವಾಗಿ ಪರಿಗಣಿಸಿ ಸಾರ್ವಜನಿಕ ಬದುಕಿನ ಉಳಿದ ಅಂಗಗಳಾದ ಆಡಳಿತ, ನ್ಯಾಯಾಂಗ, ಮಾಧ್ಯಮ ಮತ್ತು ನಾಗರಿಕ ಸಮಾಜಗಳನ್ನು ಒಳಗೊಂಡು ಒಟ್ಟಾರೆ ಕರ್ನಾಟಕದಲ್ಲಿನ ಕಳೆದ ಐದು ವರ್ಷಗಳ ಸಾರ್ವಜನಿಕ ಬದುಕಿನ ಮೌಲ್ಯಮಾಪನ ಮಾಡುವ ಪ್ರಯತ್ನ ನಮ್ಮದು.
ಮುಖ್ಯಮಂತ್ರಿ ಗದ್ದುಗೆಯ ಪ್ರಾಮುಖ್ಯ ಅರ್ಥಮಾಡಿಕೊಳ್ಳುವ ಹಂತ ಒಳಗೊಂಡಂತೆ ಕರ್ನಾಟಕದ ಎಲ್ಲಾ ಸಾರ್ವಜನಿಕ ಅಂಗಗಳ ಬಗ್ಗೆ ಹಿರಿಯರು ಮತ್ತು ಪರಿಣತರು ತಮ್ಮ ವಿಶ್ಲೇಷಣೆ ನೀಡಿದ್ದಾರೆ. ಮೌಲ್ಯಮಾಪನದ ಲಯದಲ್ಲಿ ವಿಶದ ಲೇಖನಗಳ ಜೊತೆಗೆ ತಮ್ಮ ಅಭಿಪ್ರಾಯಗಳನ್ನು ಚೊಕ್ಕವಾಗಿ ಒಪ್ಪಿಸುವ ಹಲವು ಸಂಕ್ಷಿಪ್ತ ಬರವಣಿಗೆಗಳಿವೆ. ಮನಮುಟ್ಟುವ ಕೆಲವು ಚಿತ್ರಣಗಳಿವೆ. ಬೆಚ್ಚಿಬೀಳಿಸುವ ಕೆಲವು ಪ್ರಸಂಗಗಳಿವೆ. ರೋಷಾವೇಶದ ಕಿಚ್ಚು ಎಬ್ಬಿಸುವ ವಿವರಗಳೂ ಇವೆ.
ಮುಂದಿನ ಕೆಲವು ಸಂಚಿಕೆಗಳಲ್ಲಿಯೂ ಈ ಮೌಲ್ಯಮಾಪನದ ಲೇಖನಗಳಿರುತ್ತವೆ. ಮೌಲ್ಯಮಾಪನದ ಉದ್ದೇಶ ಈಡೇರುವವರೆಗೂ ಒಂದಲ್ಲಾ ಒಂದು ರೀತಿಯಲ್ಲಿ ಈ ಸಂವಾದ ಮುಂದುವರೆಯಲಿದೆ. ನಿಮ್ಮ ಅಭಿಪ್ರಾಯ, ವಿಶ್ಲೇಷಣೆ, ನಿಲುವು ಹಂಚಿಕೊಳ್ಳಲು ಖಂಡಿತಾ ಅವಕಾಶವಿದೆ.
ಚುನಾವಣಾ ಪೂರ್ವ ಕಾಂಗ್ರೆಸ್ ಪ್ರಣಾಳಿಕೆಯ ಅಂಶಗಳೆಲ್ಲವೂ ಈಡೇರಿಸಿದ್ದೇನೆ ಹಾಗೂ ನಡೆದಿದ್ದೇನೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯನವರು ಗಟ್ಟಿಯಾದ ಹೇಳಿಕೆ ನೀಡುತ್ತಾ ಬಂದಿದ್ದಾರೆ. ಹಲವಾರು ತಮ್ಮ ನೇತೃತ್ವದ ಕಾಂಗ್ರೆಸ್ ಸರ್ಕಾರ 'ಸಾಧನೆ ಮಾಡಿದ ಸರ್ಕಾರ'ವೆಂದೂ ಮಖ್ಯಮಂತ್ರಿಗಳು ದಾವೆ ಹಾಕಿದ್ದಾರೆ. ಇಂತಹ ಸ್ವಯಂ ಬೆನ್ನು ತಟ್ಟಿಕೂಳ್ಳುವ ಹೇಳಿಕೆಯ ಸತ್ವ ಪರೀಕ್ಷೆ ಇಲ್ಲಿದೆ.

ಸಿದ್ದರಾಮಯ್ಯ: ನುಡಿದದ್ದು, ನಡೆದದ್ದು

ರಾಜಕೀಯದಲ್ಲಿ ಯಶಸ್ಸು ಕಂಡ ಯಾವುದೇ ವ್ಯಕ್ತಿಯ ಬುದ್ಧಿವಂತಿಕೆಯನ್ನು ನಾವು ಅಲ್ಲಗಳೆಯುವಂತಿಲ್ಲ. ದೇಶದ ಅತ್ಯಂತ ಸ್ಪರ್ಧಾತ್ಮಕ ಕ್ಷೇತ್ರವಾದ ರಾಜಕಾರಣದಲ್ಲಿ ಎಲ್ಲ ವಿರೋಧ ಅಡೆತಡೆಗಳ ನಡುವೆಯೂ ತನ್ನ ಪದವಿಯನ್ನು ಐದು ವರ್ಷಗಳ ಕಾಲ ಉಳಿಸಿಕೊಂಡು ಬಂದ ವ್ಯಕ್ತಿಯ ಕುಶಲತೆಯನ್ನು ನಾವು ಗೌರವಿಸಲೇಬೇಕಾಗುತ್ತದೆ. ಹೀಗೆ ಸಿದ್ದರಾಮಯ್ಯನವರ ಐದು ವರ್ಷಗಳ ಯಶಸ್ಸು ಸಾಧನೆಗಳನ್ನು ಅವರ ವ್ಯಕ್ತಿತ್ವದ ಅಂಶಗಳೊಂದಿಗೆ ಗುರುತಿಸಿ ನೋಡೋಣ.

ತೀವ್ರ ಬಡತನದ ಹಿನ್ನೆಲೆಯಿಂದ ಬಂದ ಸಿದ್ದರಾಮಯ್ಯನವರ ಹೃದಯ ಬಡವರ ಮತ್ತು ನಿರ್ಗತಿಕರ ಪರವಾಗಿ ಮಿಡಿಯುತ್ತದೆ. ಯಾವುದೇ ಆರ್ಥಿಕ ಹಿನ್ನೆಲೆಯಿಲ್ಲದ ಹಾಗೂ ಯಾರ ಆಶ್ರಯವೂ ದೊರಕದ ಅತಿ ಹಿಂದುಳಿದವರ ಹಾಗೂ ಗ್ರಾಮೀಣ ಅಂತ್ಯಜರ ಪರವಾಗಿ ಏನಾದರೂ ಮಾಡಲೇಬೇಕೆಂಬ ಕಾಳಜಿಯನ್ನೂ ಹಲವಾರು ಬಾರಿ ಸಿದ್ದರಾಮಯ್ಯ ತೋರಿಸಿದ್ದಾರೆ. ಮುಖ್ಯಮಂತ್ರಿಯಾದ ದಿನವೇ ಅವರು ಘೋಷಿಸಿದ ಅನ್ನಭಾಗ್ಯ ಯೋಜನೆಯಿಂದ ಹಿಡಿದು ಇತ್ತೀಚಿನ ಇಂದಿರಾ ಕ್ಯಾಂಟೀನ್‍ವರೆಗೆ ಸಿದ್ದರಾಮಯ್ಯ ತಮ್ಮ ಆದ್ಯತೆ ತೋರಿಸಿದ್ದಾರೆ. ಅನುಷ್ಠಾನದಲ್ಲಿ ಅಡೆತಡೆಗಳನ್ನು ಎದುರಿಸಿದ್ದರೂ ನ್ಯಾಯಬೆಲೆ ಅಂಗಡಿಗಳ ಮುಖಾಂತರ ಬಡತನ ರೇಖೆಯ ಕೆಳಗಿನ ನಾಗರಿಕರಿಗೆ ಸ್ವಲ್ಪಾದರೂ ಸೇವೆ ಸಲ್ಲಿಸುವಲ್ಲಿ ಕಾಂಗ್ರೆಸ್ ಪಕ್ಷ ಪ್ರಯತ್ನಪಟ್ಟಿದೆ.

ಕೋಮು ಸಾಮರಸ್ಯಕ್ಕೆ ಧಕ್ಕೆ ಬರುವಂತಹ ಹಲವಾರು ಘಟನೆಗಳು ನಡೆದಿದ್ದರೂ ಸಿದ್ದರಾಮಯ್ಯನವರು ಕರ್ನಾಟಕದಲ್ಲಿ ಒಟ್ಟಾರೆ ಕಳೆದ ಐದು ವರ್ಷಗಳಲ್ಲಿ ಕೋಮುಗಳ ನಡುವೆ ಸೌಹಾರ್ದದ ವಾತಾವರಣ ಕಾಪಾಡಿಕೊಂಡು ಬಂದಿದ್ದಾರೆ. ಹಲವಾರು ಬಾರಿ ತಮ್ಮ ಮಾತುಗಳಲ್ಲಿ ಧರ್ಮನಿರಪೇಕ್ಷ ಜಾತ್ಯತೀತ ಮೌಲ್ಯಗಳಿಗೆ ತಮ್ಮ ಬದ್ಧತೆಯನ್ನೂ ಪ್ರದರ್ಶಿಸಿದ್ದಾರೆ. ಟಿಪ್ಪು ಸುಲ್ತಾನನ ಜಯಂತಿಯನ್ನು ಆಚರಿಸುವ ಅಗತ್ಯವಿತ್ತೇನು ಎಂದು ಯಾರಾದರೂ ಕೇಳಬಹುದು. ಅದರೆ ರಾಜ್ಯದ ಎಲ್ಲಾ ಸಮುದಾಯಗಳು ತಮ್ಮ ತಮ್ಮ ಜಾತಿ ಪಂಥದ ನಾಯಕ ಸಂತರನ್ನು ಆರಾಧಿಸುತ್ತಿರುವಾಗ ಕರ್ನಾಟಕದ ಮುಸ್ಲಿಮರು ಟಿಪ್ಪು ಸುಲ್ತಾನನ ಜಯಂತಿಯನ್ನು ಆಚರಿಸಬಾರದೆನ್ನುವ ವಾದಕ್ಕೆ ಹೆಚ್ಚಿನ ವೈಚಾರಿಕ ಬೆಂಬಲ ಸಿಗಲಾರದೇನೋ.

ಹಲವಾರು ಬಾರಿ ಭ್ರಷ್ಟಾಚಾರವನ್ನು ಅಪ್ರತ್ಯಕ್ಷವಾಗಿ ರಕ್ಷಣೆ ಮಾಡುತ್ತಾ ಬಂದಿದ್ದರೂ, ಸಿದ್ದರಾಮಯ್ಯನವರು ಯಾರಾದರೂ ಒಬ್ಬ ಅಧಿಕಾರಿ ಒಳ್ಳೆಯ ಕೆಲಸ ಮಾಡುತ್ತಾನೆನ್ನುವ ಸಂದರ್ಭದಲ್ಲಿ ಅವನನ್ನು ಬೆಂಬಲಿಸಿ ಕಾರ್ಯ ನಿರ್ವಹಿಸಿದ್ದಿದೆ. ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳ ಹಾಗೂ ಜಿಲ್ಲಾಧಿಕಾರಿಗಳ ನೇಮಕದಲ್ಲಿ ಮುಖ್ಯಮಂತ್ರಿ ತುಸುವಾದರೂ ಸಕಾರಾತ್ಮಕ ಧೋರಣೆ ತೋರಿದ್ದಾರೆ. ಹಾಗೆಯೇ ಸಚಿವಾಲಯದ ಮಟ್ಟದಲ್ಲಿ ಒಳ್ಳೆಯ ಕೆಲಸ ಮಾಡುತ್ತಿರುವ ಹಲವು ಅಧಿಕಾರಿಗಳನ್ನು ಅವರ ಜಾಗದಲ್ಲಿಯೇ ಮುಂದುವರೆಸುವಷ್ಟಾದರೂ ಸಹನೆ ತೋರಿದ್ದಾರೆ.

ಸಿದ್ದರಾಮಯ್ಯನವರು ತಮ್ಮ ಪಕ್ಷದ ಮಂತ್ರಿ ಶಾಸಕರಿಗಾಗಲೀ ಅಥವಾ ಹಿರಿಯ ಕಾರ್ಯಕರ್ತರಿಗಾಗಲೀ ಸುಲಭವಾಗಿ `ಕೈಗೆ ಸಿಗುವ’ ಮುಖ್ಯಮಂತ್ರಿಯಾಗಿದ್ದಾರೆ. ಹಾಗೆಯೇ ಶಾಸಕರು ತಮ್ಮ ಕ್ಷೇತ್ರಕ್ಕೆ ಅಥವಾ `ತಮ್ಮ ಜನ’ಕ್ಕೆ ಬೇಕಾದ ಯಾವುದಾದರೂ ಕೆಲಸ ತೆಗೆದುಕೊಂಡು ಹೋದರೆ ಅದನ್ನು ತಕ್ಕಮಟ್ಟಿಗೆ ಮಾಡಿಸಿಕೊಡುವ ನಾಯಕರಾಗಿದ್ದಾರೆ. ಇಡೀ ಐದು ವರ್ಷಗಳ ಸಮಯದಲ್ಲಿ ಒಂದಿಬ್ಬರು ಶಾಸಕರನ್ನು ಹೊರತುಪಡಿಸಿ ಉಳಿದೆಲ್ಲಾ ಕಾಂಗ್ರೆಸ್ ಶಾಸಕರು ಮುಖ್ಯಮಂತ್ರಿಗೆ ನಿಷ್ಠೆ ತೋರಲು ಇದುವೇ ಮುಖ್ಯ ಕಾರಣವಾಗಿದ್ದಿರಬಹುದು. ಮೇಲಾಗಿ ಸಿದ್ದರಾಮಯ್ಯನವರು ವಿರೋಧ ಪಕ್ಷಗಳ ಶಾಸಕರ ಕ್ಷೇತ್ರಾಭಿವೃದ್ಧಿ ಕೆಲಸಕ್ಕೂ ತಾರತಮ್ಯ ಮಾಡದೆ ನೆರವು ನೀಡಿದ್ದಾರೆ. ಕಳೆದ ಐದು ವರ್ಷಗಳಲ್ಲಿ ಜನಪರ ಶಾಸಕರ ಕ್ಷೇತ್ರಗಳಲ್ಲಿ ಒಂದಿಷ್ಟಾದರೂ ಸ್ಥಳೀಯ ಮಟ್ಟದಲ್ಲಿ ಆಗಿರುವ ಒಳ್ಳೆಯ ಕೆಲಸಗಳಿಗೆ ಇದೂ ಒಂದು ಮುಖ್ಯ ಕಾರಣ.

ಸಿದ್ದರಾಮಯ್ಯನವರನ್ನು ನಿಜಕ್ಕೂ ಹೊಗಳಬೇಕಾದ ಬಹುಮುಖ್ಯ ಸಾಧನೆಯೆಂದರೆ ಕರ್ನಾಟಕದ ಹಣಕಾಸು ಇಲಾಖೆಯಲ್ಲಿ ಆರ್ಥಿಕ ಶಿಸ್ತನ್ನು ಪಟ್ಟಾಗಿ ಹಿಡಿದು ಸಾಧಿಸಿರುವುದು. ಹಲವಾರು ಒತ್ತಡ ಹಗೂ ಆಮಿಷಗಳ ನಡುವೆಯೂ ಮುಖ್ಯಮಂತ್ರಿಯವರು ಅನಗತ್ಯವಾಗಿ ಸಾಲ ಮಾಡುವ ಇಲ್ಲವೇ ಅನಗತ್ಯ ಖರ್ಚು ಮಾಡಿ ರಾಜ್ಯದ ತಿಜೋರಿಯನ್ನು ಬರಿದು ಮಾಡುವ ದುಂದುಗಾರಿಕೆ ತೋರಿಲ್ಲ. ಸಾಲಮನ್ನಾದಂತಹ ಜನಪ್ರಿಯ ಘೋಷಣೆಗಳನ್ನು ಮಾಡಿ ಖಜಾನೆ ಬರಿದಾಗಿಸಿಲ್ಲ. ರಾಜ್ಯದ ಒಟ್ಟು ಸಾಲದ ಮೊತ್ತ ಎರಡು ಲಕ್ಷ ಕೋಟಿಯವರೆಗೆ ಮುಟ್ಟಿದ್ದರೂ ರಾಜ್ಯದ ಹೆಚ್ಚುತ್ತಿರುವ ಆದಾಯದ ತುಲನೆಯಲ್ಲಿ ಸಾಲದ ಮೊತ್ತ ಸಂಭಾಳಿಸಬಹುದೆನ್ನುವ ಮಟ್ಟದಲ್ಲಿಯೇ ಇರುವುದು ಆರೋಗ್ಯಕರ ವಿಷಯ. ಈ ಒಂದು ಜವಾಬ್ದಾರಿಯುತ ಆಡಳಿತಾತ್ಮಕ ವಿಷಯದಲ್ಲಿ ಸಿದ್ದರಾಮಯ್ಯನವರು ತುಂಬು ಪ್ರಶಂಸೆಗೆ ಪಾತ್ರರಾಗುತ್ತಾರೆ.

ಉಳಿದ ಕೆಲಸಗಳು

ಸಾಧಿಸಿದ್ದೇನೆಂದು ಹೇಳಿಕೊಳ್ಳುವ ಕೆಲವಾರು ಕಾರ್ಯಕ್ರಮಗಳನ್ನು ಹೊರತುಪಡಿಸಿದರೆ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಮಾಡದೇ ಉಳಿಸಿದ ಕೆಲಸಗಳ ಪಟ್ಟಿ ಬಹಳ ದೊಡ್ಡದಿದೆ. ಬಹಳ ಮುಖ್ಯವಾಗಿ, ಬದಲಾದ ಸಂದರ್ಭದಲ್ಲಿ ಮುಖ್ಯಮಂತ್ರಿ ಪದವಿಯ ಪ್ರಾಮುಖ್ಯ ಹಾಗೂ ಚಲನಶೀಲತೆಯ ಅನಿವಾರ್ಯತೆಯನ್ನೇ ಸಿದ್ದರಾಮಯ್ಯನವರು ಅರ್ಥ ಮಾಡಿಕೊಳ್ಳಲಿಲ್ಲ. ನಾಯಕರಾಗಿ ತಾವು ಸಂಪೂರ್ಣ ತೊಡಗಿಸಿಕೊಳ್ಳುವುದರ ಹೊರತಾಗಿ ಯಾವುದೇ ಬೃಹತ್ ಯೋಜನೆ, ಕಾರ್ಯಕ್ರಮ, ಸಾಧನೆ ಸಾಧ್ಯವಾಗುವುದಿಲ್ಲವೆಂಬ ಕನಿಷ್ಠ ಮನವರಿಕೆಯೂ ಮುಖ್ಯಮಂತ್ರಿಗೆ ಆದಂತಿಲ್ಲ. ಪಕ್ಷಕ್ಕೆ ತಮ್ಮ ನಾಯಕತ್ವದ ಮಹತ್ವವನ್ನು ಗುರುತಿಸುವಷ್ಟು ತಿಳಿವಳಿಕೆಯುಳ್ಳ ಸಿದ್ದರಾಮಯ್ಯನವರು ರಾಜ್ಯದ ಅಡಳಿತಕ್ಕೆ ತಮ್ಮ ಮುಂದಾಳತ್ವದ ಅಗತ್ಯವನ್ನು ಮನಗಾಣಲೇ ಇಲ್ಲ. ಬದಲಿಗೆ ಬಹಳಷ್ಟು ಸಮಯವನ್ನು ಉಡಾಫೆ ಮಾತುಗಳಲ್ಲಿಯೇ ಕಳೆಯುತ್ತಾ `ಉತ್ತಮ ಪ್ರಭುತ್ವ’ವೆಂಬುದು ಲೊಳಲೊಟ್ಟೆಯೆಂದೇ ನಂಬಿರುವಂತೆ ಕಾಣಿಸಿಕೊಂಡಿದ್ದಾರೆ. ಕರ್ನಾಟಕದ ಪಾಲಿಗೆ ಇದು ಅತೀ ದುರದೃಷ್ಟಕರ.

ಕಟ್ಟದ ದಕ್ಷತಂಡ

ರಾಜ್ಯದಲ್ಲಿ ಉತ್ತಮ ಆಡಳಿತ ನೀಡಲು ಬೇಕಾಗಿದ್ದ ತಂಡವೊಂದನ್ನು ಸಿದ್ದರಾಮಯ್ಯನವರು ಕಟ್ಟಲೇ ಇಲ್ಲ. ಮೊದಲೆರಡು ವರ್ಷಗಳಲ್ಲಿ ನಕಾರಾತ್ಮಕ ಧೋರಣೆಯ ಪ್ರಧಾನ ಕಾರ್ಯದರ್ಶಿ ಹೊಂದಿದ್ದ ಸಿದ್ದರಾಮಯ್ಯನವರು ನಂತರದ ದಿನಗಳಲ್ಲಿ ಕೂಡಾ ತಮ್ಮ ಆಶಯ ಮತ್ತು ಘೋಷಣೆಗಳನ್ನು ಸಾಕಾರ ಮಾಡಬಲ್ಲ ಅಧಿಕಾರಿಗಳ ತಂಡವನ್ನು ಬೆಳೆಸಲೇ ಇಲ್ಲ. ಮುಖ್ಯಮಂತ್ರಿ ಕಾರ್ಯಾಲಯದ ಅಧಿಕಾರಿಗಳೆಲ್ಲರೂ ಕೇವಲ `ಕಡತ ತಳ್ಳುವ’ ಕಾಯಕಕ್ಕೆ ಸಲ್ಲುವಂತಿದ್ದರೆ, ಸಿದ್ದರಾಮಯ್ಯನವರು ಮುಖ್ಯ ಕಾರ್ಯದರ್ಶಿ ಹುದ್ದೆಗೆ ಕೂಡಾ ದಕ್ಷರನ್ನು ಬೆಂಬಲಿಸಲಿಲ್ಲ. ಈ ಎರಡೂ ಅತಿಮುಖ್ಯ ಕಾರ್ಯಾಲಯಗಳಲ್ಲಿಯೂ ಅಹಿಂದ ಅಧಿಕಾರಿಗಳನ್ನು ಕೂರಿಸಬೇಕೆಂಬ ಇರಾದೆಯಲ್ಲಿ ದಕ್ಷರನ್ನು ಹಾಗೂ ಪ್ರಾಮಾಣಿಕರನ್ನು ಕಡೆಗಣಿಸಿ ಚುರುಕು ವರ್ಚಸ್ಸಿಲ್ಲದ ನಕಾರಾತ್ಮಕ ಅಧಿಕಾರಿಗಳಿಗೆ ಮಣೆ ಹಾಕಿದರು. ಇದರಿಂದ ಅಧಿಕಾರಿಗಳ ಹಂತದಲ್ಲಿ `ಮುಖ್ಯಮಂತ್ರಿ ತಂಡ’ವೆಂಬ ಹೊಣೆಗಾರಿಕೆ ಮತ್ತು ಸ್ವಂತಿಕೆಯೇ ಇಲ್ಲದ ಹಾಗಾಯಿತು. ಆದರೆ ಇದೇ ಸಿದ್ದರಾಮಯ್ಯನವರು ಪಕ್ಷಕ್ಕೆ ಸಂಪನ್ಮೂಲ ಕ್ರೂಢೀಕರಣದ ಅಗತ್ಯ ಪೂರೈಸಲು ಮಹದೇವಪ್ಪ, ಜಾರ್ಜ್, ಎಂ.ಬಿ.ಪಾಟೀಲ ತ್ರಿವಳಿ ಮಂತ್ರಿಗಳ ತಂಡವನ್ನು ಬಳಸಿಕೊಂಡರೆ, ಸಂಪನ್ಮೂಲ ನಿರ್ವಹಣೆಗೆ ಗೋವಿಂದರಾಜು, ಭೈರತಿ ಬಂಧುಗಳು ಮತ್ತಿತರನ್ನು ಬಳಸಿದ್ದಾರೆ. ರಾಜಕೀಯವಾಗಿ ತಂಡವೊಂದನ್ನು ಕಟ್ಟಲು ಸಾಮಥ್ರ್ಯ ತೋರಿದ ಸಿದ್ದರಾಮಯ್ಯನವರು ಆಡಳಿತಕ್ಕೆ ಬೇಕಾದ ತಂಡವೊಂದನ್ನು ಕಟ್ಟಲು ತೋರಿದ ಅಸಾಮಥ್ರ್ಯ ಹಾಗೂ ಅಸಡ್ಡೆ ದುಷ್ಪರಿಣಾಮಕ್ಕೆ ಕಾರಣವಾಗಿದೆ.

ಸಮನ್ವಯತೆಯ ಉಪೇಕ್ಷೆ

ಉತ್ತಮ ಆಡಳಿತಕ್ಕೆ ಬೇಕಾದ ತಂಡ ಕಟ್ಟುವ ವಿಷಯದಲ್ಲಿ ಎಡವಿದ ಸಿದ್ದರಾಮಯ್ಯನವರು ಇದರ ಮುಂದುವರಿದ ಭಾಗವಾಗಿ ಕೇಂದ್ರ ಸರ್ಕಾರದೊಂದಿಗೆ ಅಗತ್ಯ ಕಾರ್ಯಾನ್ವಯ ಸಮನ್ವಯತೆಯ ಬಗ್ಗೆ ಇನ್ನಿಲ್ಲದ ಅಸಡ್ಡೆ ತೋರಿದ್ದಾರೆ. ಕೇಂದ್ರದಲ್ಲಿ ಕಾಂಗ್ರೆಸ್ ಸರ್ಕಾರವಿದ್ದ 2013—14ರಲ್ಲಿ ಕೂಡಾ ಸಿದ್ದರಾಮಯ್ಯ ಸರ್ಕಾರ ಹೆಚ್ಚಿನ ಆಸಕ್ತಿ ತೋರಲಿಲ್ಲ. ರಾಜ್ಯದ ಸಂಸದರಿಬ್ಬರೂ (ಖರ್ಗೆ ಹಾಗೂ ಆಸ್ಕರ್) ಕೇಂದ್ರದಲ್ಲಿ ರೈಲ್ವೆ ಮತ್ತು ರಸ್ತೆ ಸಚಿವರಾಗಿದ್ದಾಗಲೂ ಆಗಬೇಕಾದ ಕೆಲಸಗಳ ಪಟ್ಟಿ ಮಾಡಿ ಮಂಜೂರು ಮಾಡಿಸಿಕೊಳ್ಳಲಿಲ್ಲ. ನಂತರ ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಬಂದ ಮೇಲಂತೂ ರಾಜ್ಯ ಸರ್ಕಾರ ಕೇಂದ್ರದಿಂದ ಬರಬೇಕಾದ ಯಾವುದೇ ಧನಸಹಾಯ, ಅನುದಾನ, ಯೋಜನೆ ಮತ್ತಿತರ ಕೆಲಸಗಳ ಜಾಡು ಹಿಡಿಯಲಿಲ್ಲ. ಮುಖ್ಯಮಂತ್ರಿ ಅಥವಾ ರಾಜ್ಯದ ಮಂತ್ರಿಗಳು ಅಪ್ಪಿತಪ್ಪಿಯಾದರೂ ಕೇಂದ್ರ ಮಂತ್ರಿಗಳನ್ನು ಹಾಗೂ ಕೇಂದ್ರೀಯ ಸಚಿವಾಲಯದ ಕಾರ್ಯದರ್ಶಿಗಳನ್ನು ಕಾಣುವ ಗೋಜಿಗೆ ಹೋಗಲಿಲ್ಲ. ಪಕ್ಷಾತೀತವಾಗಿ ಕೇಂದ್ರದ ಅಧಿಕಾರಿಗಳು ಕರ್ನಾಟಕ ಹಾಗೂ ಬೆಂಗಳೂರಿನ ವಿಷಯದಲ್ಲಿ ಕಾಳಜಿ ಹೊಂದಿದ್ದರೂ, ರಾಜ್ಯ ಸರ್ಕಾರದ ಅಸಡ್ಡೆ—ಅಸಹಕಾರದ ಪರಿಣಾಮವಾಗಿ ಕಳೆದ ನಾಲ್ಕು ವರ್ಷಗಳಲ್ಲಿ ಯಾವುದೇ ಹೊಸ ಯೋಜನೆ ರೂಪುಗೊಳ್ಳಲಿಲ್ಲ. ಬೆಂಗಳೂರು ಮೈಸೂರು ಮಡಿಕೇರಿ ಮಂಗಳೂರು ರಾಷ್ಟ್ರೀಯ ಹೆದ್ದಾರಿ ಮಾರ್ಗ ಮಂಜೂರಾಗಿದ್ದರೂ ಕುಂಠಿತಗೊಂಡ ಭೂಸ್ವಾಧೀನದ ಕಾರಣದಿಂದ ಯಾವುದೇ ಪ್ರಗತಿ ಕಾಣಲಿಲ್ಲ. ಬೆಂಗಳೂರಿನ ಮೆಟ್ರೋ ಯೋಜನೆಯ ಮೂರುನಾಲ್ಕು ಹಂತಗಳ ಒಪ್ಪಿಗೆ ಹಣವಿನಿಯೋಗ ಆಗಿ ಬರಲಿಲ್ಲ. ಬೆಂಗಳೂರು ವಿಮಾನನಿಲ್ದಾಣದ ಎರಡನೇ ಟರ್ಮಿನಲ್‍ಗೆ ಇಲ್ಲಿಯವರೆಗೆ ಮಂಜೂರಾತಿ ಸಿಕ್ಕಿಲ್ಲ. ಚುನಾವಣೆಗೆ ಮುನ್ನ ಕಳೆದ ಕೆಲವು ವಾರಗಳಲ್ಲಿ ಘೋಷಣೆಯಾದ ಬೆಂಗಳೂರು ಸಬರ್ಬನ್ ರೈಲು ಯೋಜನೆಯ ಹೊರತಾಗಿ ಯಾವುದೇ ಹೊಸ ರೈಲು ಮಾರ್ಗದ ವಿಸ್ತೃತ ಯೋಜನೆ ವರದಿಯಾಗಿಲ್ಲ. ಉತ್ತರ ಭಾರತದ ರಾಜ್ಯಗಳಿಗೆ ನೀರಿನಂತೆ ಹರಿದು ಹೋಗುತ್ತಿರುವ ಧನವಿನಿಯೋಗಕ್ಕೆ ಹೋಲಿಸಿದರೆ ಕರ್ನಾಟಕಕ್ಕೆ ಬೇಸಿಗೆಯಲ್ಲಿ ತೊಟ್ಟಿಕ್ಕುವ ನಲ್ಲಿ ನೀರಿನಂತೆ ಸಹಾಯ ಸಿಗುವಂತಾಗಿದೆ.

ಸ್ವಚ್ಛತಾ ಮಿಶನ್

ಪ್ರಧಾನಿ ನರೇಂದ್ರ ಮೋದಿಯವರು ತಮ್ಮ ಜನಪ್ರಿಯ ಸಾಮಾಜಿಕ ಚಳವಳಿಯಾದ `ಸ್ವಚ್ಛ ಭಾರತ್ ಮಿಶನ್’ ಪ್ರಭಾರಿಯನ್ನಾಗಿ ಸಿದ್ದರಾಮಯ್ಯನವರನ್ನು ನಿಯೋಜಿಸಿದ್ದರು. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ನಡುವೆ ಸಮನ್ವಯದೊಂದಿಗೆ ಈ ಮಿಶನ್‍ನಲ್ಲಿ ಆಗಬೇಕಾದ ಯೋಜನೆ—ಕೆಲಸಗಳು ಹಾಗೂ ಇವುಗಳ ಮೇಲ್ವಿಚಾರಣೆಯ ಮುಖಂಡತ್ವವನ್ನು ಕರ್ನಾಟಕದ ಮುಖ್ಯಮಂತ್ರಿಗೆ ವಹಿಸಿದ್ದರು. ನರೇಂದ್ರ ಮೋದಿಗೆ ಅತಿ ಪ್ರಿಯವಾದ ಈ ಮಿಶನ್ ರಾಷ್ಟ್ರಮಟ್ಟದ ಸಭೆ ಆಯೋಜಿಸುವ ಗೊಡವೆಗೇ ಹೋಗಲಿಲ್ಲ. ಆಸಕ್ತಿ ತೋರಿದ್ದರೆ ಈ ಮಿಶನ್‍ನ ಅಡಿಯಲ್ಲಿ ಕರ್ನಾಟಕಕ್ಕೆ ಸ್ವಲ್ಪವಾದರೂ ಹಣ ತರಬಹುದಾಗಿತ್ತು. ರಾಷ್ಟ್ರಮಟ್ಟದಲ್ಲಿ ಯೋಜನೆಯೊಂದರ ಅನುಷ್ಠಾನದ ನಾಯಕತ್ವ ವಹಿಸುವ ಅವಕಾಶವನ್ನೂ ಸಿದ್ದರಾಮಯ್ಯ ಕಳೆದುಕೊಂಡರು.

ವಾದ ಮಂಡಿಸಲು ವಿಫಲ

ಸಿದ್ದರಾಮಯ್ಯನವರು ರಾಷ್ಟ್ರೀಯ ಮಾಧ್ಯಮವನ್ನು ತಲುಪುವುದಿರಲಿ, ರಾಷ್ಟ್ರಮಾಧ್ಯಮಗಳು ಸಿದ್ದರಾಮಯ್ಯನವರನ್ನು ಸಂಪರ್ಕಿಸಲು ಹೆಣಗಾಡಬೇಕಾದ ಪರಿಸ್ಥಿತಿ ಬಂದೊದಗಿದೆ. ದೆಹಲಿಯ ಮಾಧ್ಯಮಗಳ ಮುಂದೆ ಕಾವೇರಿ, ಮಹದಾಯಿ, ಕನ್ನಡ, ಬೆಂಗಳೂರು, ರೈಲ್ವೆ ಹಾಗೂ ಉಳಿದೆಲ್ಲಾ ವಿಷಯಗಳಲ್ಲಿ ಆಗಿರುವ ಮಲತಾಯಿ ಧೋರಣೆಯನ್ನು ಎತ್ತಿಹೇಳಲು ಸಿದ್ದರಾಮಯ್ಯ ವಿಫಲರಾಗಿದ್ದಾರೆ. ಈ ಯಾವುದೇ ವಿಷಯದಲ್ಲಿ ಕೂಲಂಕಷವಾಗಿ ತಮ್ಮ ವಾದ ಮಂಡಿಸುವ ಯಾವುದೇ ಮಾಧ್ಯಮಗೋಷ್ಠಿಯನ್ನು ಸಿದ್ದರಾಮಯ್ಯ ದೆಹಲಿಯಲ್ಲಾಗಲೀ ಬೆಂಗಳೂರಿನಲ್ಲಾಗಲೀ ನಡೆಸಿಲ್ಲ. ಸಂಕೀರ್ಣ ವಿಷಯಗಳ ಬಗ್ಗೆಯೂ ಕೇವಲ ಎರಡು ಮೂರು ವಾಕ್ಯಗಳಲ್ಲಿ ನೀಡುವ ಹೇಳಿಕೆಯ ಹೊರತಾಗಿ ಯಾವುದೇ ಅಧಿಕಾರಯುತ ವಾದ ಮಂಡನೆಯಾಗಲಿಲ್ಲ. ಇದರಿಂದ ಕರ್ನಾಟಕವು ಸುಪ್ರೀಂ ಕೋರ್ಟು ಹಾಗೂ ಕೇಂದ್ರ ಸರ್ಕಾರವನ್ನು ವಿರೋಧಿಸುವ ರಾಜ್ಯವಾಗಿ ಪ್ರತಿಬಿಂಬಿತವಾಗಿದೆ. ಇದರ ಫಲಸ್ವರೂಪವನ್ನು ಎತ್ತಿ ಹೇಳುವ ಅವಶ್ಯಕತೆಯಿಲ್ಲ.

ಬೆಂಗಳೂರಿನ ನಿರ್ಲಕ್ಷ್ಯ

ಕರ್ನಾಟಕವೆಂಬ ಉಗಿಬಂಡಿಗೆ ಬೆಂಗಳೂರೇ ಎಂಜಿನ್. ಈ ಎಂಜಿನ್‍ನ ದುರಸ್ತಿಗೆ ಮತ್ತು ಆಧುನಿಕತೆಗೆ ಕಳೆದ ಐದು ವರ್ಷಗಳಲ್ಲಿ ಕಾಂಗ್ರೆಸ್ ಸರ್ಕಾರ ಯಾವುದೇ ಯೋಜನೆ ರೂಪಿಸಲು ವಿಫಲವಾಗಿದೆ. ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ತನ್ನದೇ ಹಗರಣಗಳಲ್ಲಿ ನೆಲಕಚ್ಚಿ ಪೆರಿಫೆರಲ್ ರಿಂಗ್ ರೋಡ್ ಮತ್ತಿತರ ಯೋಜನೆಗಳು ನಕ್ಷೆಯಲ್ಲಿಯೇ ಉಳಿದಿವೆ. ಅರ್ಕಾವತಿ ಹಾಗೂ ಕೆಂಪೇಗೌಡ ಬಡಾವಣೆಗಳ ಅಭಿವೃದ್ಧಿ ನೆನೆಗುದಿಗೆ ಬಿದ್ದಿದೆ. ಬೆಂಗಳೂರಿಗೆ ಬೇಕಿರುವ ಹೆಚ್ಚಿನ ಪ್ರಮಾಣದ ಕುಡಿಯುವ ನೀರಿನ ಅಗತ್ಯ ಪೂರೈಸಲು ಬೆಂಗಳೂರು ಜಲಮಂಡಳಿ ಇನ್ನೂ ಕಾರ್ಯತತ್ಪರವಾಗಬೇಕಿದೆ. ತ್ಯಾಜ್ಯದ ಸಮಸ್ಯೆಯನ್ನು ಪೂರ್ವದಿಂದ ಪಶ್ಚಿಮಕ್ಕೆ, ದಕ್ಷಿಣದಿಂದ ಉತ್ತರಕ್ಕೆ ವರ್ಗಾಯಿಸುತ್ತಿರುವಂತೆ ಕಾಣುತ್ತಿರುವ ಬೆಂಗಳೂರು ಮಹಾನಗರಪಾಲಿಕೆ ಭ್ರಷ್ಟಾಚಾರದ ಕೂಪವಾಗಿದೆ. ಬೆಳ್ಳಂದೂರು ಕೆರೆಯ ಹಾಗೂ ವಾಹನ ದಟ್ಟಣೆಯ ಅಪಪ್ರಚಾರದ ಕುಖ್ಯಾತಿಯಲ್ಲಿ ಮಹಾನಗರ ಬಸವಳಿದಿದೆ. ಬೆಂಗಳೂರಿಗೆ ಬೇಕಿರುವ ಶಾಶ್ವತ ವಿದ್ಯುಚ್ಛಕ್ತಿ ಮೂಲ ಕಂಡುಕೊಳ್ಳಲು ಬೆಸ್ಕಾಂ ಸೋತಿದೆ. ಬೆಂಗಳೂರಿಗರ ಜೀವನ ಮಟ್ಟ ದಿನೇದಿನೇ ಕುಸಿಯುತ್ತಿದೆ. ಬೆಂಗಳೂರನ್ನು ಕೇವಲ ಹಣಮೂಲವಾಗಿಸಿಕೊಂಡ ಮುಖ್ಯಮಂತ್ರಿ ಬೆಂಗಳೂರಿನ ಅಗತ್ಯಗಳ ಬಗ್ಗೆ ಕೇವಲ ಉಡಾಫೆ ಮಾತನಾಡಿದ್ದಾರೆ.

ಬಾರದ ಬೃಹತ್ ಕೈಗಾರಿಕೆ

ಕಳೆದ ಐದು ವರ್ಷಗಳಲ್ಲಿ ಕರ್ನಾಟಕಕ್ಕೆ ಒಂದಾದರೂ ಬೃಹತ್ ಕೈಗಾರಿಕೆ ಬಂದಿಲ್ಲದಿರುವುದು ಚಿಂತೆಯ ವಿಷಯವಾಗಿದೆ. ಆದರೆ ಮುಖ್ಯಮಂತ್ರಿಯು ಈ ವಿಷಯದಲ್ಲಿ ದಿವ್ಯ ನಿರ್ಲಕ್ಷ್ಯ ವಹಿಸಿದಂತೆ ಕಾಣುತ್ತಾರೆ. ಇತ್ತೀಚೆಗೆ ಕೊರಿಯಾ ದೇಶದ ಕಿಯಾ ಮೋಟರ್ಸ್ ಕೂಡಾ ಚಿಕ್ಕಬಳ್ಳಾಪುರದ ಮುಂದಕ್ಕೆ ಕರ್ನಾಟಕದ ಗಡಿ ದಾಟಿ ಆಂಧ್ರದ ಹಿಂದೂಪುರದಲ್ಲಿ ತನ್ನ ಕೇಂದ್ರ ಕೈಗಾರಿಕೆ ಘಟಕವನ್ನು ಸ್ಥಾಪಿಸಿರುವುದು ಕರ್ನಾಟಕ ಸರ್ಕಾರಕ್ಕೆ ಸಿಕ್ಕ ಕಪಾಳಮೋಕ್ಷವೇ ಸರಿ. ಕಳೆದ ಆರು ಏಳು ವರ್ಷಗಳ ಹಿಂದೆ ತನ್ನ ಭೂಖರೀದಿ ಪ್ರಕ್ರಿಯೆ ಪ್ರಾರಂಭಿಸಿದ್ದ ಹೆಚ್‍ಎಎಲ್ ತುಮಕೂರಿನ ಬಳಿ ಹೆಲಿಕಾಪ್ಟರ್ ಘಟಕವನ್ನು ಕಡೆಗೂ ಪ್ರಾರಂಭಿಸಿದ್ದು ಹಾಗೂ ಚಿತ್ರದುರ್ಗದ ಚಳ್ಳಕೆರೆ ಬಳಿಯಲ್ಲಿ ರಕ್ಷಣಾ ಸಚಿವಾಲಯದ ಸಂಶೋಧನಾ ಸಂಸ್ಥೆಯು ಕೆಲವು ಚಟುವಟಿಕೆಗಳನ್ನು ಪ್ರಾರಂಭಿಸಿರುವುದು ತುಸು ನೆಮ್ಮದಿಯ ವಿಷಯವಾಗಿದೆ. ಚಳ್ಳಕೆರೆಯ ಈ ಘಟಕ ಕೂಡಾ ಹಿಂದಿನ ಸಂಸದ ಜನಾರ್ದನಸ್ವಾಮಿಯವರ ಸಮಯದಲ್ಲಿ ಶುರುವಾಗಿತ್ತು ಎಂಬುದನ್ನು ಗಮನಿಸಬೇಕು.

ಕೈಗಾರಿಕೆ ಮತ್ತು ಬಂಡವಾಳ ಹೂಡಿಕೆಯ ಬತ್ತುವಿಕೆಗೆ ಸಿದ್ದರಾಮಯ್ಯ ಮತ್ತು ಕ್ಯಾಬಿನೆಟ್ ಮಂತ್ರಿಗಳ ನಡುವಿನ ಸಮನ್ವಯದ ಕೊರತೆಯೂ ಒಂದು ಮುಖ್ಯ ಕಾರಣ. ಅತಿಮುಖ್ಯ ಆರ್ಥಿಕ ಖಾತೆಗಳಾದ ರೆವಿನ್ಯೂ, ಕೈಗಾರಿಕೆ, ಇಂಧನ, ಜಲಸಂಪನ್ಮೂಲ ಸಚಿವರ ನಡುವೆ ಯಾವುದೇ ಸಂವಹನ ಅಥವಾ ಹೊಂದಾಣಿಕೆ ಕಂಡುಬಂದಿಲ್ಲ. ಈ ಇಲಾಖೆಗಳ ನಡುವೆ ಸಮನ್ವಯ ಸಾಧಿಸುವ ಗೋಜಿಗೇ ಹೋಗದೆ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಯಾರದ್ದೂ ಕೈ ಮೇಲಾಗದಂತೆ ನೋಡಿಕೊಳ್ಳುವ ಮನಃಸ್ಥಿತಿಯಲ್ಲಿ ಕಾಲಹರಣ ಮಾಡಿದ್ದಾರೆ. ಈ ಇಲಾಖೆಗಳ ಕಾರ್ಯದರ್ಶಿಗಳ ನಡುವೆಯಾದರೂ ಪರಸ್ಪರ ಮಾತುಕತೆ ನಡೆಸುವ ಕೆಲಸಕ್ಕೆ ಮುಖ್ಯಮಂತ್ರಿ ಸಚಿವಾಲಯ ಅಥವಾ ಮುಖ್ಯಕಾರ್ಯದರ್ಶಿ ತಲೆಹಾಕಿಲ್ಲ. ಹೀಗಾಗಿ ಕಳೆದ ಐದು ವರ್ಷಗಳಲ್ಲಿ ಒಂದಾದರೂ ಹೊಸ ಬೃಹತ್ ಬಂಡವಾಳ ಹೂಡಿಕೆಯ ಯೋಜನೆ ಕರ್ನಾಟಕದಲ್ಲಿ ಜಾರಿಯಾಗಲಿಲ್ಲ.

ನಿಂತುಹೋದ ಕಾಮಗಾರಿಗಳು

2013ಕ್ಕೂ ಹಿಂದಿನ 15—20 ವರ್ಷಗಳಲ್ಲಿನ ಎಲ್ಲಾ ಸರ್ಕಾರಗಳು ಕರ್ನಾಟಕದ ನೀರಾವರಿ ಇಲಾಖೆಗೆ ಹೆಚ್ಚಿನ ಅನುದಾನ ಬಿಡುಗಡೆ ಮಾಡಿ ರಾಜ್ಯದ ಪಾಲಿನ ನೀರನ್ನು ಪರಿಣಾಮಕಾರಿಯಾಗಿ ನೀರಾವರಿಗೆ ಬಳಸುವ ನಿಟ್ಟಿನಲ್ಲಿ ಕಾರ್ಯ ಮಾಡಿದ್ದವು. ರಾಜ್ಯದಲ್ಲಿ ನೀರಾವರಿಗೆ ಒಳಪಟ್ಟ ಕೃಷಿ ಜಮೀನು ಗಮನಾರ್ಹ ಪ್ರಮಾಣದಲ್ಲಿ ಹೆಚ್ಚಾಗಿತ್ತು. ಆದರೆ ಸಿದ್ದರಾಮಯ್ಯನವರ ಸರ್ಕಾರದಲ್ಲಿ ಯಾವುದೇ ಹೊಸ ನೀರಾವರಿ ಯೋಜನೆ ಪ್ರಾರಂಭಿಸುವುದಿರಲಿ, ಹಿಂದಿನ ಬೃಹತ್ ಯೋಜನೆಗಳನ್ನು ಮುಂದುವರಿಸಲೂ ಆಗದ ಪರಿಸ್ಥಿತಿ ನಿರ್ಮಾಣವಾಗಿದೆ. ಅಪ್ಪರ್ ಭದ್ರಾ ಕಾಮಗಾರಿ ಇನ್ನೂ ನಡೆಯುತ್ತಲೇ ಇದೆ. ಕೃಷ್ಣಾ—ಭೀಮಾ ನದಿ ಬ್ಯಾರೇಜ್ ಕಾಲುವೆಗಳ ವಿಸ್ತಾರ ಕಾರ್ಯ ಮುಂದಕ್ಕೆ ತೆವಳಲೇ ಇಲ್ಲ. ಬಿಜಾಪುರದ ಕೆಲವು ಕೆರೆ ತುಂಬುವ ಯೋಜನೆಗಳಿಗಷ್ಟೇ ತಮ್ಮನ್ನು ಸೀಮಿತಗೊಳಿಸಿಕೊಂಡ ಎಂ.ಬಿ.ಪಾಟೀಲರು ಪತ್ರಿಕಾ ಜಾಹೀರಾತಿನಲ್ಲಷ್ಟೇ ರಾಜ್ಯದ ನೀರಾವರಿ ಸಚಿವರಾದರು. ಕಾವೇರಿ ಕೊಳ್ಳದ ಕಾಮಗಾರಿಗಳನ್ನು ಕೇವಲ `ಸಂಪನ್ಮೂಲ ಸಂಗ್ರಹ’ಕ್ಕಷ್ಟೇ ಬಳಸಿಕೊಂಡ ಸಿದ್ದರಾಮಯ್ಯಮಹದೇವಪ್ಪನವರು, ಮೇಕೆದಾಟು ಜಲವಿದ್ಯುತ್—ಕುಡಿಯುವ ನೀರಿನ ಯೋಜನೆಗೆ ಶಂಕುಸ್ಥಾಪನೆ ಹಾಕುವ ಮಟ್ಟಕ್ಕೂ ಹೋಗಲಿಲ್ಲ.

ಇಂಧನ ಇಲಾಖೆಯಂತಹ ಮೂಲಭೂತ ಸೌಕರ್ಯದ ಇಲಾಖೆಯನ್ನು ತಮ್ಮ ರಾಜಕೀಯ ಎದುರಾಳಿಗೆ ಬರೆದುಕೊಟ್ಟು ಶಾಂತಿಸಂಧಾನ ಮಾಡಿಕೊಂಡ ಸಿದ್ದರಾಮಯ್ಯನವರು ಇಡೀ ವಿದ್ಯುತ್ ವಲಯಕ್ಕೇ ಗರ ಬಡಿಯುವಂತಹ ಶಾಕ್ ನೀಡಿದರು. ಯಾವುದೇ ಹೊಸ ವಿದ್ಯುತ್ ಯೋಜನೆ ಮಾಡುವುದಿರಲಿ, ಹಳೆಯ ಮತ್ತು ಕಾಮಗಾರಿ ನಡೆಯುತ್ತಿರುವ ಹಲವಾರು ಯೋಜನೆಗಳಿಗೂ ಶಕ್ತಿಯುತ ಸಚಿವರು `ಕಲ್ಲು’ ಹಾಕಿದರು. ಸೌರವಿದ್ಯುತ್ ಹಂಚಿಕೆಯಲ್ಲಿ ನಡೆದ ದಾಂಧಲೆಯ ಪ್ರಕರಣಗಳು ನ್ಯಾಯಾಲಯದಿಂದ ಹೊರಬರಬೇಕಾದರೆ ದಶಕಗಳೇ ಬೇಕಾಗಬಹುದು. ನವೀಕರಿಸಬಲ್ಲ ಶಕ್ತಿಮೂಲಗಳಾದ ಸೌರ ವಿದ್ಯುತ್ ಹಾಗೂ ಪವನ ವಿದ್ಯುತ್ ಕ್ಷೇತ್ರಗಳಲ್ಲಿ ಅಲ್ಲೋಲ ಕಲ್ಲೋಲ ಮಾಡಿರುವ ಇಂಧನ ಸಚಿವರು `ಕೆಇಆರ್‍ಸಿ’ ಸಂಸ್ಥೆಯನ್ನು ಸಂಪೂರ್ಣ ನಿಸ್ತೇಜ—ನಿಷ್ಕ್ರಿಯ ಮಾಡಿಸಿದ್ದಾರೆ. ಇಂದು ಇಂಧನ ಕ್ಷೇತ್ರದಲ್ಲಿ ಕರ್ನಾಟಕದಿಂದ ಬಂಡವಾಳ ಹಿಂದೆಗೆತದ ವಾತಾವರಣ ಮೂಡುವಷ್ಟರ ಮಟ್ಟಿಗೆ ಇಂಧನ ಇಲಾಖೆ ಇನ್ನಿಲ್ಲದ ಅಧ್ವಾನದ ಪರಿಸ್ಥಿತಿಗೆ ರಾಜ್ಯವನ್ನು ತಂದು ನಿಲ್ಲಿಸಿದೆ.

ಮುಖ್ಯಮಂತ್ರಿ ಹುದ್ದೆಯ ಪರಮಾಧಿಕಾರ

ಇದೇ ಫೆಬ್ರವರಿ 8 ರಂದು ಸಿದ್ದರಾಮಯ್ಯನವರು ಮುಖ್ಯಮಂತ್ರಿಯೆಂದರೆ ಮಂತ್ರಿಮಂಡಲದ ಮೊದಲಮಂತ್ರಿ ಎಂಬ ಹೇಳಿಕೆಯನ್ನು ಸದನದಲ್ಲಿಯೇ ನೀಡಿದ್ದಾರೆ. ಆದರೆ ಇದು ಕೇವಲ ಸಂವಿಧಾನದ ಕಲಮುಗಳಲ್ಲಿ ಇದೆಯೇ ಹೊರತು ಆಚರಣೆಯಲ್ಲಿಲ್ಲ. ಕಳೆದ ಕೆಲವಾರು ದಶಕಗಳಲ್ಲಿ ರಾಜ್ಯ ಸರ್ಕಾರದ ಆಡಳಿತಯಂತ್ರ ಸಂಪೂರ್ಣವಾಗಿ ಮುಖ್ಯಮಂತ್ರಿಯ ಹಿಡಿತಕ್ಕೆ ಬಂದಿದೆ. ಇದಕ್ಕೆ ಈ ಕೆಳಕಂಡ ಕಾರಣಗಳಿವೆ:

  1. ಶಾಸನ ಸಭೆಯಲ್ಲಿ ಬಹುಮತ ಸಿದ್ಧ ಮಾಡಿ ತೋರಿಸುವ ಮತ್ತು ಬಹುಮತವನ್ನು ಕಾಪಾಡಿಕೊಂಡು ಬರುವ ಎಲ್ಲಾ ಜವಾಬ್ದಾರಿಯೂ ಮುಖ್ಯಮಂತ್ರಿಯ ಮೇಲಿದೆ. ಮಂತ್ರಿಮಂಡಲ ರಚಿಸುವ ಮತ್ತು ಯಾರನ್ನು ಬೇಕಾದರೂ ಮಂತ್ರಿ ಮಾಡುವ `ಪರಮಾಧಿಕಾರ’ ಮುಖ್ಯಮಂತ್ರಿಯ ಬಳಿಯೇ ಇದೆ. ತನ್ನ ಮುಖ್ಯಮಂತ್ರಿ ಪದವಿ ಕಾಪಾಡಿಕೊಳ್ಳುವ ಮತ್ತು ತನ್ನ ಇಷ್ಟದ ಮಂತ್ರಿಮಂಡಲ ರಚಿಸಿಕೊಳ್ಳುವ ಸಲುವಾಗಿ ಪಕ್ಷದ ಹೈಕಮಾಂಡಿಗೆ ಎಂದಿನಂತೆ ಕಪ್ಪಕಾಣಿಕೆಗಳನ್ನು ಸಲ್ಲಿಸಿ ತನ್ನ ಆಡಳಿತ ಸ್ವಾಯತ್ತತೆಯನ್ನು ಕಾಪಾಡಿಕೊಳ್ಳುವ ಅನಿವಾರ್ಯತೆಯೂ ಮುಖ್ಯಮಂತ್ರಿಗಿದೆ.
  2. ರಾಜ್ಯಸರ್ಕಾರಗಳ ಐಎಎಸ್ ಹಾಗೂ ಐಪಿಎಸ್ ಅಧಿಕಾರಿಗಳ ಜೊತೆಗೆ ಹಿರಿಯ ಅಧಿಕಾರಿಗಳೆಲ್ಲರ ಪದೋನ್ನತಿ ಮತ್ತು ವರ್ಗಾವಣೆಯ ಕೀಲಿ ಕೈ ಸಂಪೂರ್ಣವಾಗಿ ಮುಖ್ಯಮಂತ್ರಿಯ ಕೈಯಲ್ಲಿದೆ. ಹೀಗಾಗಿ ಹಿರಿಯ ಅಧಿಕಾರಿಗಳು ಕೇವಲ ಮುಖ್ಯಮಂತ್ರಿಗೆ ಮಾತ್ರ ತಮ್ಮ ಅನಿರ್ಬಂಧಿತ ನಿಷ್ಠೆಯನ್ನು ತೋರುತ್ತಾರೆ. ಹೆಚ್ಚೆಂದರೆ ತಮ್ಮ ಇಲಾಖೆಯ ಮಂತ್ರಿಗೆ ಕೂಡಾ ತಮ್ಮ ನಿಷ್ಠೆಯನ್ನು ಪ್ರದರ್ಶನ ಮಾಡಬಹುದು. ಮುಖ್ಯಮಂತ್ರಿಯು ತನಗೆ ಆಗದ ಯಾವುದಾದರೂ ಮಂತ್ರಿಯನ್ನು ಮಟ್ಟಹಾಕಬೇಕೆಂದರೆ, ಯಾವುದೇ ಕೆಲಸ ಮಾಡದ ಹಾಗೂ ಎಲ್ಲದ್ದಕ್ಕೂ ನಿಯಮಾವಳಿಗಳ ಕೈಪಿಡಿ ತೋರುವ ಯಾರಾದರೂ ನೆಗಟಿವ್ ಅಧಿಕಾರಿಯನ್ನು ಆ ಇಲಾಖೆಯ ಮುಖ್ಯಸ್ಥನನ್ನಾಗಿ ಮಾಡಿದರೆ ಸಾಕು. ಆಗ ಆ ಮಂತ್ರಿಯು ತಾನಾಗಿಯೇ ಮುಖ್ಯಮಂತ್ರಿಯ ಬಳಿ ಮಂಡಿಯೂರಿ ಬಂದು ತನಗೆ ಬೇಡವಾದ ಅಧಿಕಾರಿಯ ವರ್ಗಾವಣೆ ಕೋರುತ್ತಾನೆ. ಹೀಗೆ ಉನ್ನತ ಅಧಿಕಾರಿಗಳೆಲ್ಲರ ಮತ್ತು ಮಂತ್ರಿವರ್ಯರ ಜುಟ್ಟು ಮತ್ತು ಬಾಲಗಳೆರಡೂ ಮುಖ್ಯಮಂತ್ರಿಯ ಕೈಯಲ್ಲಿಯೇ ಇರುತ್ತವೆ.
  3. ಯಾವುದೇ ದೊಡ್ಡ ಪ್ರಮಾಣದ ಸರ್ಕಾರಿ ಕೆಲಸಕ್ಕೆ ಕಡ್ಡಾಯವಾಗಿ ನಾಲ್ಕೈದು ಇಲಾಖೆಗಳ ಸಹಕಾರ ಅತ್ಯಗತ್ಯವಾಗಿರುತ್ತದೆ. ರೆವಿನ್ಯೂ, ಪೊಲೀಸ್ ಹಾಗೂ ಹಣಕಾಸು ಇಲಾಖೆಗಳ ಸಹಕಾರವಿಲ್ಲದೆಯಂತೂ ಯಾವುದೇ ಬೃಹತ್ ಯೋಜನೆ ಮಾಡಲಾಗುವುದಿಲ್ಲ. ಉದಾಹರಣೆಗೆ, ವಿದ್ಯುತ್ ಇಲಾಖೆ ಸಚಿವನೊಬ್ಬ ಹೊಸ ಟ್ರಾನ್ಸ್‌‍ಮಿಶನ್ ಲೈನ್ ಒಂದನ್ನು ಹಾಕಬೇಕೆಂದರೆ ಅದಕ್ಕೆ ಕಡ್ಡಾಯವಾಗಿ ರೆವಿನ್ಯೂ, ಅರಣ್ಯ ಹಾಗೂ ಪರಿಸರ ಇಲಾಖೆಯ ಅನುಮತಿ ಪಡೆಯಬೇಕಾಗುತ್ತದೆ. ಜಲಸಂಪನ್ಮೂಲ ಸಚಿವನೊಬ್ಬ ಕಾಲುವೆಯೊಂದನ್ನು ವಿಸ್ತರಿಸಬೇಕೆಂದರೆ ರೆವಿನ್ಯೂ ಮಂತ್ರಿ, ಜಿಲ್ಲಾ ಉಸ್ತುವಾರಿ ಮಂತ್ರಿಗಳು, ಪಿಡಬ್ಲ್ಯುಡಿ ಮಂತ್ರಿ ಆದಿಯಾಗಿ ಹಲವಾರು ಮಂತ್ರಿವರ್ಯರ ಸಹಕಾರ ಬೇಕಿರುತ್ತದೆ. ನಗರ ಪ್ರದೇಶಗಳಲ್ಲಿ ಯಾವುದೇ ಬೃಹತ್ ಯೋಜನೆ ಮಾಡಬೇಕೆಂದರೆ ಹಣಕಾಸು ಮಂತ್ರಿಯ ಒಪ್ಪಿಗೆ ಅಗತ್ಯವಿರುತ್ತದೆ. ಹೀಗೆ ಸರ್ಕಾರದ ಯಾವುದೇ ದೊಡ್ಡ—ಮಧ್ಯಮ ಗಾತ್ರದ ಯೋಜನೆಗಳ ಅನುಷ್ಠಾನಕ್ಕೆ ಹಲವಾರು ಇಲಾಖೆಗಳ ಪೂರ್ಣ ಸಹಕಾರ ಬೇಕಿರುತ್ತದೆ. ಒಂದು ಇಲಾಖೆಯು ಬೇರೊಂದು ಇಲಾಖೆಯ ಕೆಲಸದ ಬಗ್ಗೆ ಯಾವುದೇ ಮುತುವರ್ಜಿ ತೋರಿಸದೇ ಇರುವುದು ಸಾಮಾನ್ಯ. ಇಂತಹ ಸಂದರ್ಭದಲ್ಲಿ ಮುಖ್ಯಮಂತ್ರಿಯ ವೈಯಕ್ತಿಕ ಹಸ್ತಕ್ಷೇಪವಿಲ್ಲದೆ ರಾಜ್ಯದಲ್ಲಿ ಯವುದೇ ಯೋಜನೆ ಮಾಡುವುದು ಅಸಾಧ್ಯ. ಮುಖ್ಯಮಂತ್ರಿಯ ತಿಳಿವಳಿಕೆ, ಬದ್ಧತೆ ಹಾಗೂ ದೈನಂದಿನ ಮೇಲ್ವಿಚಾರಣೆಯ ಹೊರತಾಗಿ ಯಾವುದೇ ಗಮನಾರ್ಹ ಅಭಿವೃದ್ಧಿ ಯೋಜನೆಗಳ ಕಾರ್ಯಸಾಧ್ಯತೆ ಅಸಂಭವವೆನ್ನುವ ಮಟ್ಟಿಗೆ ವ್ಯವಸ್ಥೆ ಗೋಜಲಾಗಿದೆ.
  4. ಇತ್ತೀಚಿನ ಕೆಲವು ವರ್ಷಗಳಲ್ಲಿ ಕರ್ನಾಟಕ ಮತ್ತು ಇತರೇ ಹಲವಾರು ರಾಜ್ಯಗಳಲ್ಲಿ ಮುಖ್ಯಮಂತ್ರಿಯೇ ಹಣಕಾಸು ಇಲಾಖೆಯ ಬೀಗದ ಕೈಯನ್ನು ಹಿಡಿಯುವುದು ಸಾಮಾನ್ಯವಾಗಿದೆ. ಅನುದಾನ ಹಾಗೂ ಹಣಕಾಸು ವಿತರಣೆಯ ಮಾಧ್ಯಮದಿಂದ ಮುಖ್ಯಮಂತ್ರಿ ಕಾರ್ಯಾಲಯವು ಎಲ್ಲಾ ಇಲಾಖೆಗಳ ಕಾರ್ಯವೈಖರಿಯನ್ನು ನಿಯಂತ್ರಿಸುವುದು ಕೂಡಾ ಸಾಮಾನ್ಯವಾಗಿದೆ. ಜೊತೆಗೆ ಎಲ್ಲಾ ಇಲಾಖೆಗಳ, ಸಹಕಾರಿ ಸಂಸ್ಥೆಗಳ, ಸ್ಥಳೀಯ ಸಂಸ್ಥೆಗಳ ಮತ್ತಿತರ ಹಲಕೆಲವು ಸಂಸ್ಥೆಗಳ ನಿರ್ದೇಶಕ—ಸದಸ್ಯರ ನಾಮನಿರ್ದೇಶನದ ಅಧಿಕಾರ ಕೂಡಾ ಮುಖ್ಯಮಂತ್ರಿ ಕಾರ್ಯವ್ಯಾಪ್ತಿಯಲ್ಲಿದೆ. ಹೀಗಾಗಿ ಆಡಳಿತಪಕ್ಷದ ಯವುದೇ ಸಚಿವ ಅಥವಾ ಶಾಸಕ ಮುಖ್ಯಮಂತ್ರಿಯ ಆಣತಿಯ ವಿರುದ್ಧ ಯಾವುದೇ ಮಾತನಾಡುವ ಸಾಧ್ಯತೆಯಿಲ್ಲ.
  5. ಹೀಗೆ ಕರ್ನಾಟಕ ಸರ್ಕಾರದ ಪರವಾಗಿ ಯಾವುದೇ ದೊಡ್ಡ ಕಾಮಗಾರಿ ಅಥವಾ ಮಹತ್ತರ ಯೋಜನೆಯನ್ನು ಕೇವಲ ಮುಖ್ಯಮಂತ್ರಿ ಕಾರ್ಯಾಲಯ ರೂಪಿಸಬಲ್ಲ ಪರಿಸ್ಥಿತಿ ಒದಗಿದೆ. ಇಲಾಖೆಗಳ ಕಾರ್ಯವ್ಯಾಪ್ತಿ ಕುಂಠಿತವಾಗಿ ಅವೆಲ್ಲವೂ ಕೇಂದ್ರೀಕೃತವಾಗಿ ಮುಖ್ಯಮಂತ್ರಿ ಕಾರ್ಯಾಲಯದೆಡೆಗೆ ನೋಡುವಂತಾಗಿದೆ. ಗ್ರಾಮೀಣ ಪ್ರದೇಶದಲ್ಲಿನ ಯೋಜನೆಗಳನ್ನು ಹೇಗಾದರೂ ಮಾಡಿ ಅನುಷ್ಠಾನ ಮಾಡಬಹುದು. ಆದರೆ ನಗರಗಳಲ್ಲಿನ ಯೋಜನೆಗಳ ಅನುಷ್ಠಾನ ಸಂಕೀರ್ಣವಾಗಿ, ಮುಖ್ಯಮಂತ್ರಿಯ ಖುದ್ದು ಆಸಕ್ತಿ—ಮೇಲ್ವಿಚಾರಣೆಯ ಹೊರತಾಗಿ ಯಾವುದೇ ಯೋಜನೆಗಳ ಕಾರ್ಯಸಾಧ್ಯತೆ ಕಾಣುತ್ತಿಲ್ಲ. ಈ ಕಾರ್ಯಗಳ ಅಂತಿಮ ಯಶಸ್ಸು ಕೂಡಾ ಮುಖ್ಯಮಂತ್ರಿಯ ಬದ್ಧತೆ ಹಾಗೂ ಕ್ರಿಯಾಶೀಲತೆಯ ಮೇಲೆ ನಿರ್ಧಾರವಾಗುತ್ತದೆ.

ಕೈಗಾರಿಕೆಗಳಿಗೆ ಜಮೀನಿಲ್ಲ

ಇಂದು ಬೆಂಗಳೂರು ಸುತ್ತಮುತ್ತಲ ಪ್ರದೇಶದಲ್ಲಿ ಐಟಿ—ಬಿಟಿ ಕೈಗಾರಿಕೆಗಳಿಗೆ ವಾಣಿಜ್ಯ ಅಥವಾ ಕೈಗಾರಿಕೆ ಬಳಕೆಗೆ ಜಮೀನು ಸಿಗದ ಪರಿಸ್ಥಿತಿಯಾಗಿದೆ. ತಮ್ಮ ಹೊಸ ಕ್ಯಾಂಪಸ್ ಸ್ಥಾಪನೆಗೆ ಈ ಸೇವಾ ಮತ್ತು ರಫ್ತು ಆಧಾರಿತ ಕೈಗಾರಿಕೆಗಳಿಗೆ ನಾಲ್ಕೈದು ಎಕರೆಯಷ್ಟು ಜಮೀನು ಕೂಡಾ ಲಭ್ಯವಿಲ್ಲ. ಈ ಕಂಪನಿಗಳು ತಮ್ಮ ಕ್ಯಾಂಪಸ್ ನಿರ್ಮಾಣಕ್ಕೆ ಹೈದರಾಬಾದ್ ಹಾಗೂ ಪುಣೆಯತ್ತ ಗಮನ ಹರಿಸುತ್ತಿವೆ. ಕಳೆದ ಐದು ವರ್ಷಗಳಲ್ಲಿ ಕರ್ನಾಟಕದ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿ ನೂರು ಎಕರೆಯಷ್ಟು ಹೊಸ ಕೈಗಾರಿಕಾ ಜಮೀನು ನೀಡಲಾಗದ ಹಲ್ಕಿತ್ತ ಹುಲಿಯಾಗಿದೆ.

ಇನ್ನು ಉತ್ಪಾದನಾ ಕೈಗಾರಿಕೆಗಳಿಗೆ ಸಿಕ್ಕಿರುವ ಜಮೀನಿನ ಪ್ರಮಾಣವೂ ಅಷ್ಟರಲ್ಲಿಯೇ ಇದೆ. ಕರ್ನಾಟಕದಲ್ಲಿ ಕೈಗಾರಿಕಾ ಜಮೀನು ಸಿಗದ ಹಾಗೂ ಕೈಗಾರಿಕಾ ಬಂಡವಾಳ ಹೂಡಿಕೆಯೂ ಆಗದ `ಕಮಲ ಶಯನ’ ಸ್ಥಿತಿಯಲ್ಲಿ ಸರ್ಕಾರ ಅಂಟಿಯೂ ಅಂಟದಂತಾಗಿದೆ.

ಅದಕ್ಷ ಆಡಳಿತ

ಮುಖ್ಯಮಂತ್ರಿ ಸಿದ್ದರಾಮಯ್ಯನವರ ಮಾಮೂಲಿ ಶೈಲಿಯಾದ `ಉಡಾಫೆ’ ರಾಜಕಾರಣದಲ್ಲಿ ಕರ್ನಾಟಕದ ಆಡಳಿತ ಸಂಪೂರ್ಣ ನೆಲಕಚ್ಚಿದೆ. ಉಳಿದಿರುವ ಕೆಲವಾರು ಪ್ರಾಮಾಣಿಕ ಅಧಿಕಾರಿಗಳು ಮೂಲೆಗುಂಪಾಗಿ `ಟೆನ್ ಟು ಫೈವ್’ ಎಂಬಂತೆ ಕಛೇರಿಯ ತಮ್ಮ ಕೋಣೆಯಿಂದ ಹೊರಬರದೆ ಮುಗುಮ್ಮಾಗಿ ಕುಳಿತುಬಿಟ್ಟಿದ್ದರೆ. ಎಲ್ಲಾ ಆಯಕಟ್ಟಿನ ಜಾಗಗಳಲ್ಲಿರುವ ಹಿರಿಯ ಕೆಎಎಸ್ ದರ್ಜೆಯ ಅಹಿಂದ ಅಧಿಕಾರಿಗಳು ಆಡಳಿತವನ್ನು ನಿಯಂತ್ರಿಸುತ್ತಿದ್ದಾರೆ. `ಅದಕ್ಷತೆಯೇ ಆಡಳಿತ’ ಎನ್ನುವಷ್ಟರ ಮಟ್ಟಿಗೆ ಎಲ್ಲಾ ಹಂತಗಳಲ್ಲಿ ಮೈಲಿಗೆ ಮೈದುಂಬಿಕೊಂಡಿದೆ.

ಅತ್ತ ಲೋಕಾಯುಕ್ತ ಸಂಸ್ಥೆಗೆ ಸರ್ಜರಿ ಮಾಡಿದ ಮುಖ್ಯಮಂತ್ರಿ `ಎಸಿಬಿ’ ಎಂಬ ರಾಜಕೀಯ ಪ್ರೇರಿತ ತನಿಖಾದಳವನ್ನು ಹುಟ್ಟು ಹಾಕಿದ್ದಾರೆ. ಈ ಎಸಿಬಿಗೆ ಎಳ್ಳಷ್ಟೂ ಗೌರವ ನೀಡದ ಅಧಿಕಾರಿಗಳು ಮತ್ತೆ ನಿರುಮ್ಮಳರಾಗಿದ್ದಾರೆ. ಭಾಸ್ಕರರಾವ್‍ರಂತಹ ಲೋಕಾಯುಕ್ತರನ್ನು ನೇಮಕ ಮಾಡಿದ್ದ ವಿರೋಧಿ ಪಕ್ಷವೂ ಈ ವಿಷಯದಲ್ಲಿ ಯಾವುದೇ ಮಾತನಾಡದೆ ಮುಂದೆ ಇದು ತಮಗೂ ವರದಾನವಾಗಲಿದೆ ಎಂದು ಸುಮ್ಮನಿದ್ದಾರೆ.

ಲಿಂಗಾಯಿತ ರಾಜಕಾರಣ

ಕರ್ನಾಟಕದ ಜಾತಿಗಳ ಇತಿಹಾಸ ಬಲ್ಲವರೆಲ್ಲರೂ ವೀರಶೈವಲಿಂಗಾಯಿತ ವಿವಾದ ಇಂದು ನಿನ್ನೆಯದಲ್ಲವೆಂದು ಅರಿತಿದ್ದಾರೆ. ಲಿಂಗಾಯಿತ ಧರ್ಮಕ್ಕಾಗಲೀ ಅಥವಾ ವೀರಶೈವ—ಲಿಂಗಾಯಿತ ಧರ್ಮಕ್ಕಾಗಲೀ ಪ್ರತ್ಯೇಕ ಅಲ್ಪಸಂಖ್ಯಾತ ಧಾರ್ಮಿಕ ಮನ್ನಣೆ ಕನ್ನಡಿಯ ಗಂಟು ಎಂದೂ ಬಲ್ಲವರಾಗಿದ್ದಾರೆ. ಈಗಾಗಲೇ ಇಂತಹ ಬೇಡಿಕೆಗಳನ್ನು ಸುಪ್ರೀಂ ಕೋರ್ಟ್ ಹಾಗೂ ಕೇಂದ್ರ ಸರ್ಕಾರಗಳು ಸಾರಾಸಗಟಾಗಿ ತಿರಸ್ಕರಿಸಿವೆ. ಇದಾವುದೂ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ತಿಳಿಯದ ಸಂಗತಿಗಳಲ್ಲ. ಆದಾಗ್ಯೂ ಕೇವಲ ತಮ್ಮ ರಾಜಕೀಯದ ಬೇಳೆಬೇಯಿಸಿಕೊಳ್ಳಲು ಲಿಂಗಾಯಿತ ಮಠಮಾನ್ಯರನ್ನು ಮತ್ತು ರಾಜಕಾರಣಿಗಳನ್ನು ಎತ್ತಿಕಟ್ಟುವ ಹಾಗೂ `ಒಡೆದು ಆಳುವ’ ರಾಜಕಾರಣವನ್ನು ಸಿದ್ದರಾಮಯ್ಯ ಮಾಡಿದ್ದಾರೆ. ಚುನಾವಣೆಯವರೆಗೆ ಈ ಕಾವು ಕಾಯ್ದುಕೊಂಡು ರಾಜಕೀಯ ಲಾಭ ಪಡೆಯುವ ಹವಣಿಕೆಯಲ್ಲಿದ್ದಾರೆ. ಇಂತಹ ಕ್ಷುಲ್ಲಕ ರಾಜಕಾರಣವನ್ನು ಕರ್ನಾಟಕದ ಜನತೆ ಎಂದಿಗೂ ಮೆಚ್ಚಿದ್ದಿಲ್ಲ. ಮೇಲಾಗಿ ವೀರಶೈವ ಲಿಂಗಾಯಿತ ಸಮುದಾಯದ ಜನರು ರಾಜಕೀಯವಾಗಿ ಪ್ರಬುದ್ಧರಾಗಿದ್ದು ಸಿದ್ದರಾಮಯ್ಯನವರ ಈ ಕೃತ್ಯವನ್ನು ಕ್ಷಮಿಸಲಾರರು. ಇದನ್ನು ತಿಳಿದೂ ಈ ಕೆಲಸಕ್ಕೆ ಕೈಹಾಕುವ ಹತಾಶ ಮನೋಭಾವಕ್ಕೆ ಸಿದ್ದರಾಮಯ್ಯನವರು ಹೋಗಬಾರದಿತ್ತು.

ಅಲ್ಪತೃಪ್ತಿಯ ನಾಯಕ

2013ರ ಚುನಾವಣೆಯವರೆಗೆ `ಅಹಿಂದ’ ಪರ ರಾಜಕೀಯ ಮಾಡಿದ್ದರೂ, 2014ರ ಚುನಾವಣೆಯ ನಂತರದಲ್ಲಾದರೂ ಸಿದ್ದರಾಮಯ್ಯನವರು ಕರ್ನಾಟಕದ ಎಲ್ಲ ಜನರ ನಾಯಕರಾಗುವರೆಂದು ಅಪೇಕ್ಷಿಸಲಾಗಿತ್ತು. ಇದಕ್ಕೆ ಪೂರಕವಾಗಿ ಕಾಂಗ್ರೆಸ್ ಶಾಸಕರೆಲ್ಲರೂ ಮುಖ್ಯಮಂತ್ರಿಯ ನಾಯಕತ್ವದಲ್ಲಿ ಸಂಪೂರ್ಣ ನಿಷ್ಠೆ ತೋರಿಸಿ ಸಿದ್ದರಾಮಯ್ಯನವರಿಗೆ ಮುಕ್ತ ಅನಿರ್ಬಂಧಿತ ಅವಕಾಶ ನೀಡಿದ್ದರು. ಹಾಗೆ ನೋಡಿದರೆ ದಲಿತ ಮುಖ್ಯಮಂತ್ರಿಯ ಪರವಾದ ಕೂಗಿನ ಸಂದರ್ಭದಲ್ಲಿಯೂ ಅಹಿಂದೇತರ ಕಾಂಗ್ರೆಸ್ ಮುಖಂಡರು ಸಿದ್ದರಾಮಯ್ಯನವರ ಬೆನ್ನಿಗೆ ನಿಂತಿದ್ದರು. ಇಷ್ಟೆಲ್ಲಾ ಆದರೂ ಸಿದ್ದರಾಮಯ್ಯನವರು ತಮ್ಮ ಅಹಿಂದ ಕಂಬಳಿ ಕೊಡವಿ ಎಲ್ಲ ಸಮುದಾಯಗಳ ನಾಯಕನಾಗುವ ಉತ್ಸಾಹ ತೋರಲಿಲ್ಲ. ಅಹಿಂದೇತರ ಅಧಿಕಾರಿಗಳನ್ನು ಸರ್ಕಾರದ ಪ್ರಭಾವಿ ವಲಯದಿಂದ ಆದಷ್ಟು ದೂರವಿಡುವುದರ ಜೊತೆಗೆ ಈ ವರ್ಗಗಳನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವ ಯಾವುದೇ ಕಾರ್ಯಕ್ರಮದ ಬಗ್ಗೆ ಆಸಕ್ತಿ ತೋರಲಿಲ್ಲ. ತೋರಿಕೆಗಾದರೂ ತಾನೊಬ್ಬ ಕರ್ನಾಟಕದ ಎಲ್ಲ ಸಮುದಾಯಗಳ `ಸಾಮಾಜಿಕ ನಾಯಕ’ ಆಗಬೇಕೆಂಬ ಆಸೆಯನ್ನು ವ್ಯಕ್ತಪಡಿಸಲಿಲ್ಲ. 2006ರ ಮೊದಲು ಸಿದ್ದರಾಮಯ್ಯನವರ ಒಡನಾಟವಿದ್ದ ಅನೇಕರಿಗೆ ಈ ವಿಷಯದಲ್ಲಿ ಅತ್ಯಂತ ನಿರಾಶೆ ಮತ್ತು ಜುಗುಪ್ಸೆ ಮೂಡಿಸಿದರು. ಇದಕ್ಕೆ ವ್ಯತಿರಿಕ್ತವಾಗಿ ದೆಹಲಿಯಿಂದ `ಮನ್ ಕಿ ಬಾತ್’, `ಸ್ವಚ್ಛ ಭಾರತ್’, `ಮೇಕ್ ಇನ್ ಇಂಡಿಯಾ’, `ಡಿಮಾನೆಟೈಸೇಶನ್’, `ಸಬ್ ಕಾ ಸಾಥ್ ಸಬ್ ಕಾ ವಿಕಾಸ್’ ಇತ್ಯಾದಿ ಹಲವಾರು ಘೋಷಣೆ, ಕಾರ್ಯಕ್ರಮಗಳಿಂದ ದೇಶದೆಲ್ಲ ಜನರ ನಾಯಕನಾಗಬಯಸುವ ನರೇಂದ್ರ ಮೋದಿಯವರ ವ್ಯಕ್ತಿತ್ವದ ತುಲನೆಯಲ್ಲಿ ಸಿದ್ದರಾಮಯ್ಯನವರು ಅತ್ಯಂತ ಕುಬ್ಜರಾಗಿ ಕಾಣತೊಡಗಿದರು.

ಪಾಸ್ ಯಾ ಫೇಲ್?

ರಾಜ್ಯಗಳಿಗೆ ನಡೆಯುವ ಚುನಾವಣೆ ಇತ್ತೀಚಿನ ವರ್ಷಗಳಲ್ಲಿ ಆಯಾ ರಾಜ್ಯಗಳ ಮುಖ್ಯಮಂತ್ರಿಯ ಮೇಲಿನ ಜನಮತ ಸಂಗ್ರಹದ ರೀತಿಯಲ್ಲಿದೆ. 2018ರ ಚುನಾವಣೆಯಲ್ಲಿ ತಮ್ಮ ಐದು ವರ್ಷಗಳ ಸಾಧನೆ—ರಾಜಕೀಯವನ್ನು ಪಣಕ್ಕಿಟ್ಟಿರುವ ಸಿದ್ದರಾಮಯ್ಯನವರು ಏಪ್ರಿಲ್ ಮೂರನೇ ವಾರದಲ್ಲಿ ಪರೀಕ್ಷೆ ಎದುರಿಸಲಿದ್ದಾರೆ. `ನುಡಿದಂತೆ ನಡೆದಿದ್ದೇನೆ’ ಎಂಬ ಸಿದ್ದರಾಮಯ್ಯನವರ ಸರ್ಕಾರದ ದಾವೆಯೂ ಕೂಡಾ ಈ ಚುನಾವಣೆಯಲ್ಲಿ ಸವಾಲು ಎದುರಿಸಲಿದೆ. ವಿರೋಧಿಗಳಿಗೆ ಪಾಟೀ ಸವಾಲು ಹಾಕುವ ಬದಲು ಸಿದ್ದರಾಮಯ್ಯನವರು ತಮ್ಮ ಆಧಿಕಾರಾವಧಿಯಲ್ಲಿನ ಸಾಧನೆಗಳ ದಾಖಲೆ, ಅಂಕಿಅಂಶ, ಪುರಾವೆ ನೀಡಿ ಜನರ ಮನಸ್ಸು ಗೆಲ್ಲಬೇಕಾಗಿದೆ. ನಂಬಲರ್ಹ ಮಾತುಗಳನ್ನಾಡಿ ಎಲ್ಲರನ್ನೂ ಒಪ್ಪಿಸಬೇಕಿದೆ.

ಸಿದ್ದರಾಮಯ್ಯನವರನ್ನು ಪಾಸು ಮಾಡಬೇಕೋ ಬೇಡವೋ ಎಂಬ ಮೌಲ್ಯಮಾಪನದ ಕೆಂಪು ಇಂಕಿನ ಲೇಖಣಿ ಕರ್ನಾಟಕದ ಪ್ರೌಢ ನಾಗರಿಕರ ಕೈಯಲ್ಲಿದೆ.

ಡಾ.ಟಿ.ಆರ್.ಚಂದ್ರಶೇಖರ

ಕರ್ನಾಟಕ ಸರ್ಕಾರದ ಹಣಕಾಸಿನ ನಿರ್ವಹಣೆ

ಜುಲೈ ೨೦೧೮

ರಂಗಸ್ವಾಮಿ ಮೂಕನಹಳ್ಳಿ

ಕೃಷಿ ಸಾಲ ಮನ್ನಾ: ಸಾಧ್ಯವೇನಣ್ಣಾ?

ಜುಲೈ ೨೦೧೮

ಚಂಸು ಪಾಟೀಲ

ರೈತರೇಕೆ ಸಾಲಗಾರರಾದರು?

ಜುಲೈ ೨೦೧೮

ಟಿ.ಎಂ.ಥಾಮಸ್ ಐಸಾಕ್ ಕೇರಳದ ಹಣಕಾಸು ಸಚಿವರು

ಎಲ್ಲಾ ರಾಜ್ಯಗಳ ಹಣಕಾಸು ಸಚಿವರಿಗೆ ಕೇರಳ ಹಣಕಾಸು ಸಚಿವರ ಬಹಿರಂಗ ಪತ್ರ

ಜುಲೈ ೨೦೧೮

ಅರ್ಜುನ್ ರಾಮೇಗೌಡ ನಾರಾಯಣಸ್ವಾಮಿ

ಆ ಬೆಂಕಿಯ ಕಿಡಿ ಹೊತ್ತಿಸುವವರು ಯಾರು?

ಜೂನ್ ೨೦೧೮

ಡಾ.ಎಸ್.ಬಿ.ಜೋಗುರ

ಪೂರಕ ವಾತಾವರಣದ ಕೊರತೆ

ಜೂನ್ ೨೦೧೮

ಡಾ.ಎಸ್.ಬಿ.ಜೋಗುರ

ಹಾರ್ವರ್ಡ್ ಗುಣಮಟ್ಟ: ಕೈಗೂಡದ ಕನಸೇ?

ಜೂನ್ ೨೦೧೮

ಚುನಾವಣೆ: ಯಾರ ಹೊಣೆ?

ಎಪ್ರಿಲ್ ೨೦೧೮

ಡಾ.ಬಿ.ಎಲ್.ಶಂಕರ್

ಆಡಿದ ಮಾತಿಗೂ ಆತ್ಮದ ಮಾತಿಗೂ ಅಜಗಜಾಂತರ!

ಎಪ್ರಿಲ್ ೨೦೧೮

ಹರೀಶ್ ನರಸಪ್ಪ

ಚುನಾವಣಾ ಆಯೋಗದ ಮಿತಿ ಮತ್ತು ವೈಫಲ್ಯ

ಎಪ್ರಿಲ್ ೨೦೧೮

ಬಿ.ಎನ್.ವಿಜಯಕುಮಾರ್

ಭ್ರಷ್ಟತೆಗೆ ರಾಜಕೀಯ ಪಕ್ಷಗಳೇ ಕಾರಣ

ಎಪ್ರಿಲ್ ೨೦೧೮

ಎ.ಟಿ.ರಾಮಸ್ವಾಮಿ

ಭ್ರಷ್ಟಾಚಾರಿಗಳು ವೇಶ್ಯೆಯರಿಗಿಂತಲೂ ಕೀಳು

ಎಪ್ರಿಲ್ ೨೦೧೮

ಬಿ. ಕೆ. ಚಂದ್ರಶೇಖರ್

ಪ್ರಜಾಪ್ರಭುತ್ವಕ್ಕೆ ಕಪ್ಪುಚುಕ್ಕೆ

ಎಪ್ರಿಲ್ ೨೦೧೮

ಅಲೋಕ್ ಪ್ರಸನ್ನ, ಎಸ್. ಆರ್. ಹಿರೇಮಠ, ಬಿ. ಟಿ. ವೆಂಕಟೇಶ

ನ್ಯಾಯಾಂಗ

ಮಾರ್ಚ್ ೨೦೧೮

ಎ. ನಾರಾಯಣ, ಬಸವರಾಜ ಬೊಮ್ಮಾಯಿ, ಮೋಟಮ್ಮ

ಶಾಸಕಾಂಗ

ಮಾರ್ಚ್ ೨೦೧೮

ಬಿ. ಆರ್. ಜಯರಾಮರಾಜೇ ಅರಸ್, ಎನ್. ಹನುಮೇಗೌಡ,

ಕಾರ್ಯಂಗ

ಮಾರ್ಚ್ ೨೦೧೮

ವಾಸುದೇವ ಶರ್ಮಾ ಎನ್. ವಿ.

ನಾಗರಿಕ ಸಮಾಜ

ಮಾರ್ಚ್ ೨೦೧೮

ಈಶ್ವರ ದೈತೋಟ, ಡಾ. ಎ. ಎಸ್. ಬಾಲಸುಬ್ರಹ್ಮಣ್ಯ

ಮಾಧ್ಯಮ

ಮಾರ್ಚ್ ೨೦೧೮

ಮುಖ್ಯಚರ್ಚೆಗೆ ಪ್ರವೇಶ

ಫೆಬ್ರವರಿ ೨೦೧೮

ಡಾ.ಅರವಿಂದ ಪಟೇಲ್ ಬಳ್ಳಾರಿ

ವೈದ್ಯಕ್ಷೇತ್ರದ ಉದ್ಧಾರಕ್ಕೆ ಮೂರು ಮದ್ದು!

ಫೆಬ್ರವರಿ ೨೦೧೮

ಮಾಲತಿ ಪಟ್ಟಣಶೆಟ್ಟಿ ಧಾರವಾಡ

ಗುಣಮಟ್ಟಕ್ಕೆ ಮನ್ನಣೆ

ಫೆಬ್ರವರಿ ೨೦೧೮

ಡಾ.ಶ್ರೀನಿವಾಸ ಕಕ್ಕಿಲ್ಲಾಯ ಮಂಗಳೂರು

ಸಕ್ಕರೆ ನಿಷೇಧಿಸಿ!

ಫೆಬ್ರವರಿ ೨೦೧೮