2nd ಮಾರ್ಚ್ ೨೦೧೮

ಕನ್ನಡ ಮೊದಲು ನಂತರ ಇಂಗ್ಲಿಷ್

ಡಿ. ಎಸ್. ನಾಗಭೂಷಣ

ಇತಿಹಾಸಕಾರ ರಾಮಚಂದ್ರ ಗುಹಾ ಅವರೆದುರು ಸಮಾಜವಾದಿ ಚಿಂತಕ ಡಿ. ಎಸ್. ನಾಗಭೂಷಣ ಅವರು ಕನ್ನಡದ ಸ್ಥಾನಮಾನಕ್ಕೆ ಸಂಬಂಧಿಸಿದ ಹಲವು ಪ್ರಶ್ನೆಗಳನ್ನು ಇರಿಸಿದ್ದಾರೆ. ಈ ಕುರಿತ ಗಂಭೀರ ಚಿಂತನೆ, ಚರ್ಚೆಯ ಅಗತ್ಯ ಖಂಡಿತವಾಗಿಯೂ ಇದೆ.

ಖ್ಯಾತ ಇತಿಹಾಸಕಾರ ರಾಮಚಂದ್ರ ಗುಹಾ ಕೆಲ ವಾರಗಳ ಹಿಂದೆ ‘ಪ್ರಜಾವಾಣಿ’ಯಲ್ಲಿ ಬರೆಯುವ ‘ಗುಹಾಂಕಣ’ ಎಂಬ ತಮ್ಮ ಅಂಕಣ ಬರಹವೊಂದರಲ್ಲಿ ಭಾರತದಲ್ಲಿ ಸಾಂಸ್ಕೃತಿಕ ಅಸಹಿಷ್ಣುತೆ ಮತ್ತು ಸಂಕುಚಿತತೆಗಳು ಹೆಚ್ಚುತ್ತಿವೆ ಎಂಬ ಆತಂಕ ವ್ಯಕ್ತಪಡಿಸುತ್ತಾ, ಇದಕ್ಕೊಂದು ಉದಾಹರಣೆಯಾಗಿ, ಕರ್ನಾಟಕದಲ್ಲಿ ಕನ್ನಡಕ್ಕೆ ಮೊದಲ ಆದ್ಯತೆ ನೀಡುವ ನೀತಿಯನ್ನು ಉಲ್ಲೇಖಿಸಿ ಭವಿಷ್ಯದಲ್ಲಿ ಇದರ ದುಷ್ಪರಿಣಾಮಗಳ ಬಗ್ಗೆ ಬರೆದಿದ್ದರು. ಇದರ ಬಗ್ಗೆ ಸಹಜವಾಗಿಯೇ ತಕರಾರು ಎತ್ತಿದ ನಾನು, ‘ಈ ನೀತಿಯಿಂದ ನಿಮಗಾಗಿರುವ ತೊಂದರೆಯಾದರೂ ಏನು? ಕನ್ನಡ ಮಾತಾಡದ ಹೆಮ್ಮೆಯ ಕನ್ನಡಿಗರಾದ ತಾವು ಕನ್ನಡಿಗರ ಮತ್ತು ಅವರ ಭಾಷೆಯ ಕ್ಷೇಮಾಭ್ಯುದಯದ ವಿಷಯವನ್ನು ಕನ್ನಡ ಮಾತಾಡುವ ಕನ್ನಡಿಗರಿಗೆ ಬಿಡುವುದು ಒಳ್ಳೆಯದು’ ಎಂದು ಬರೆದೆನಲ್ಲದೆ, ಗಾಂಧಿ ಬಗ್ಗೆ ಅಭಿಮಾನ ಉಳ್ಳ ಅವರಿಗೆ ಮಾತೃಭಾಷೆಯ ಬಗ್ಗೆ ಗಾಂಧಿ ಹೊಂದಿದ್ದ ಅಚಲ ನಿಲುವನ್ನು ನೆನಪಿಸಿದೆ.

ಇದಕ್ಕೆ ಉತ್ತರವಾಗಿ ಗುಹಾ ಅವರು ಭಾಷೆಯ ವಿಷಯದ ಬಗ್ಗೆ ತಾವು ಈ ಹಿಂದೆ ಬರೆದಿದ್ದ ‘ಇighಣಥಿ ಥಿeಚಿಡಿs ಚಿgo’ ಎಂಬ ಅಂಕಣ ಬರಹವೊಂದನ್ನು ನನಗೆ ಕಳಿಸಿದರು. ಅದರಲ್ಲಿ 1920ರ ಅಸಹಕಾರ ಚಳವಳಿಯ ಸಂದರ್ಭದಲ್ಲಿ ಇಂಗ್ಲಿಷ್ ಶಿಕ್ಷಣದ ದುಷ್ಪರಿಣಾಮಗಳ ಬಗ್ಗೆ ಮಹಾತ್ಮ ಗಾಂಧಿ ಆಡಿದ ಮಾತುಗಳಿಗೆ ರಬೀಂದ್ರನಾಥ ಟ್ಯಾಗೋರರು ಹೇಗೆ ಪರಿಣಾಮಕಾರಿಯಾಗಿ ಪ್ರತಿಕ್ರ್ರಿಯಿಸಿ ಗಾಂಧಿಯವರಿಗೆ ಈ ವಿಷಯದಲ್ಲಿ ಸರಿಯಾದ ಜಾಗವನ್ನು ತೋರಿಸಿದರೆಂದೂ (‘put in his place’), ನಂತರ ಗಾಂಧಿ ಹೇಗೆ ತಮ್ಮ ಮನೆಯ ಕಿಟಕಿ ಬಾಗಿಲುಗಳನ್ನು ಎಲ್ಲ ದಿಕ್ಕುಗಳಿಂದ ಬರುವ ಗಾಳಿ ಬೆಳಕುಗಳಿಗೆ ತೆರೆದಿಡುವ ರೂಪಕ ಭಾಷೆಯ ಮಾತಾಡಿ ಟ್ಯಾಗೋರರ ಇಂಗ್ಲಿಷ್ ಶಿಕ್ಷಣದ ಪರವಾದ ಮಾತುಗಳಿಗೆ ಅನುಕೂಲಕರವಾಗಿ ಪ್ರತಿಸ್ಪಂದಿಸಿದರೆಂದೂ ಬರೆದಿದ್ದಾರೆ. ಇದಕ್ಕೆ ಪೂರಕವಾಗಿ, ಗುಹಾ ಇತ್ತೀಚೆಗೆ ಖ್ಯಾತ ಇಂಗ್ಲಿಷ್ ಕಾದಂಬರಿಕಾರ ಆರ್. ಕೆ.ನಾರಾಯಣರ ಮೈಸೂರಿನ ಮನೆಯನ್ನು ಕರ್ನಾಟಕ ಸರ್ಕಾರ ತನ್ನ ವೆಚ್ಚದಲ್ಲಿ ಅವರ ಸ್ಮಾರಕವನ್ನಾಗಿ ಪರಿವರ್ತಿಬೇಕೆಂಬ ಪ್ರಸ್ತಾಪಕ್ಕೆ ಜಿಎಸ್ಸೆಸ್, ಭೈರಪ್ಪ ಅವರೂ ಸೇರಿದಂತೆ ಕನ್ನಡದ ಪ್ರಮುಖ ಲೇಖಕರು ವಿರೋಧ ವ್ಯಕ್ತಪಡಿಸಿದ್ದನ್ನೂ, ಇದಕ್ಕೆ ಕನ್ನಡದ ಇನ್ನಿಬ್ಬರು—ಗುಹಾ ಅವರ ಪ್ರಕಾರ ಕನ್ನಡಿಗರ ಬಹು ಅಚ್ಚುಮೆಚ್ಚಿನಲೇಖಕರಾದ ಗಿರೀಶ್ ಕಾರ್ನಾಡ್ ಮತ್ತು ಯು.ಆರ್.ಅನಂತಮೂರ್ತಿಯವರು ತಕ್ಕ ಉತ್ತರ ನೀಡಿ ಆ ಕನ್ನಡ ಲೇಖಕ ಸಮೂಹಕ್ಕೆ ಅದರ ಜಾಗ ತೋರಿ ನಾರಾಯಣ್ ಅವರ ಸ್ಮಾರಕವನ್ನು ಆಗು ಮಾಡಿಸಿದ ಯಶೋಗಾಥೆಯನ್ನು ನಿರೂಪಿಸಿದ್ದಾರೆ. ಒಟ್ಟಿನಲ್ಲಿ ಅವರಿಗೆ ಕರ್ನಾಟಕದಲ್ಲಿ ಕನ್ನಡದ ಪ್ರಾಧಾನ್ಯಕ್ಕೆ ನಡೆಯುತ್ತಿರುವ ಆಂದೋಲನ ಸಂಕುಚಿತವೂ ಅಸಹಿಷ್ಣುವೂ ಆಗಿ ಕಂಡು ಮಹಾರಾಷ್ಟ್ರದ ಠಾಕ್ರೆಗಳನ್ನು ನೆನಪಿಸುವಂತೆ ಮಾಡಿದೆ.

ಗುಹಾ ಅವರ ಈ ಬರಹಕ್ಕೆ ನಾನೊಂದು ಉತ್ತರ ಬರೆದೆ. ಆದರೆ ಅವರಿಂದ ಇದಕ್ಕೆ ಹದಿನೈದು ದಿನಗಳಾದರೂ ಉತ್ತರ ಬಂದಿಲ್ಲ. ನನ್ನ ಈ ಪ್ರತಿಕ್ರಿಯೆಯೂ ಅವರಿಗೆ ಸಂಕುಚಿತವಾದವೆನಿಸಿ ಉತ್ತರಕ್ಕೆ ಅನರ್ಹವಾಗಿ ಕಂಡಿರಲೂ ಸಾಕು. ಆದರೆ ನನ್ನ ಉತ್ತರ ಕನ್ನಡಕ್ಕೆ ಕರ್ನಾಟಕದಲ್ಲೇ ಯಾವ ಯಾವ ದಿಕ್ಕುಗಳಿಂದ ಮತ್ತು ಯಾವ ಯಾವ ರೂಪಗಳಲ್ಲಿ ಕುತ್ತು ಬರಬಹುದೆಂಬ ಸೂಚನೆ ನೀಡುವ; ಸಾರ್ವಜನಿಕರಿಗೆ ಕುತೂಹಲಕಾರಿ ಎನ್ನಿಸುವ ಹಲವು ಅಂಶಗಳನ್ನು ಒಳಗೊಂಡಿದೆ ಎಂದು ಭಾವಿಸಿ ‘ಸಮಾಜಮುಖಿ’ ಓದುಗರ ಪ್ರತಿಕ್ರಿಯೆಗಾಗಿ ಇಲ್ಲಿ ನೀಡುತ್ತಿರುವೆ. ಇದು ಗುಹಾ ಅವರಿಗೆ ನಾನು ಬರೆದ ಉತ್ತರದ ಕನ್ನಡಾನುವಾದ:

ಪ್ರಿಯ ಶ್ರೀ ಗುಹಾ ಅವರಲ್ಲಿ,

ಕ್ರಿಕೆಟ್ ಕುರಿತ ನಿಮ್ಮ ಪುಸ್ತಕ ‘The State of Cricket’ ತಲುಪಿದೆ. ಈಗ ನಿಮ್ಮ ಬಳಿ ಇರುವ ಅದರ ಕೆಲವೇ ಪ್ರತಿಗಳಲ್ಲಿ ಒಂದನ್ನು ಪಡೆಯುವ ಸೌಭಾಗ್ಯ ನನ್ನದಾಗಿರುವುದಕ್ಕಾಗಿ ನನಗೆ ಸಂತೋಷವಾಗಿದೆ, ವಂದನೆಗಳು. ಪುಸ್ತಕವನ್ನು ಓದಿ ಮರಳಿ ಬರೆಯುವೆ.

ಇಂಗ್ಲಿಷ್ ಕಾದಂಬರಿಕಾರ ಆರ್. ಕೆ. ನಾರಾಯಣರಿಗಾಗಿ ಮೈಸೂರಿನಲ್ಲಿ ಸ್ಮಾರಕವೊಂದನ್ನು ನಿರ್ಮಿಸುವ ಪ್ರಸ್ತಾಪವನ್ನು ಕನ್ನಡದ ಕೆಲವು ಲೇಖಕರು ವಿರೋಧಿಸಿದಾಗ ಅದನ್ನು ನಾನೂ ಬೆಂಬಲಿಸಿದೆ. ಆರ್‍ ಕೆ ಎಂದೂ ಕನ್ನಡದ ಇರಲಿ, ಕರ್ನಾಟಕದ ಸಾಹಿತ್ಯ ಪರಿದೃಶ್ಯದ ಸಾವಯವ ಭಾಗವಾಗಿರಲಿಲ್ಲ. ಆದುದರಿಂದ ಕರ್ನಾಟಕ ಸರ್ಕಾರದ ಖಜಾನೆಯಿಂದ ಅವರ ಸ್ಮಾರಕಕ್ಕಾಗಿ ಹಣ ಖರ್ಚು ಮಾಡುವುದು ಉಚಿತವಲ್ಲವೆಂದು ನಾನು ಆಗ ವಾದಿಸಿದ್ದೆ, ಆರ್‍ ಕೆ ಅವರ ಗೆಳೆಯರು ಮತ್ತು ಅಭಿಮಾನಿಗಳು ಹಣಕ್ಕಾಗಿ ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಬಹುದಿತ್ತು ಎಂದೂ ಸೂಚಿಸಿದ್ದೆ. ಹೇಗೂ ಅವರು ರಾಷ್ಟ್ರೀಯ ಲೇಖಕರಲ್ಲವೆ?

ಆರ್ ‍ಕೆ ಎಂದೂ ಕರ್ನಾಟಕದ, ಕರ್ನಾಟಕದ ಜನತೆಯ ಹೆಮ್ಮೆಯಾಗಿರಲಿಲ್ಲ. ಕರ್ನಾಟಕದಲ್ಲಿನ, ನಿರ್ದಿಷ್ಟವಾಗಿ ಮೈಸೂರಿನಲ್ಲಿನ ಅವರ ವಾಸ ಭೌತಿಕ ಮಾತ್ರವಾಗಿತ್ತು. ಕನ್ನಡ ಸಾಹಿತ್ಯ ಚಟುವಟಿಕೆಗಳ ದೊಡ್ಡ ಕೇಂದ್ರವಾಗಿ, ಅದೂ ಆ ಅಪೂರ್ವ ಚೈತನ್ಯ ಕುವೆಂಪು ಅವರ ಭವ್ಯ ಉಪಸ್ಥಿತಿಯಿದ್ದ ಮೈಸೂರಿನ ಲ್ಲಿದ್ದರೂ ಆರ್‍ಕೆ ಎಂದೂ ಕನ್ನಡ ಲೇಖಕರೊಂದಿಗಾಗಲೀ ಅಥವಾ ಅವರ ಆಲೋಚನಾ ಲಹರಿಗಳೊಂದಿಗಾಗಲೀ ಯಾವ ರೀತಿಯಲ್ಲೂ ಬೆರೆಯಲಿಲ್ಲ. ತನ್ನ ನಿಕಟ ಸಾಹಿತ್ಯಿಕ ವಲಯದಲ್ಲಿ ಏನಾಗುತ್ತಿದೆ ಎಂದು ತಿಳಿಯುವ ಗೋಜಿಗೂ ಅವರು ಹೋಗಲಿಲ್ಲ. ಇದನ್ನೇ ‘ಇಂಗ್ಲಿಷ್ ಬ್ರಾಹ್ಮಣಿಕೆ’ ಎಂದು ಕರೆಯುವುದು ಎಂದು ನಾನು ಭಾವಿಸಿದ್ದೇನೆ. ಕನ್ನಡದ ಬಹುಪಾಲು ಎಲ್ಲ ಲೇಖಕರೂ—ಬಹುಶಃ ನೀವು ಉಲ್ಲೇಖಿಸಿದ ಇಬ್ಬರ ಹೊರತಾಗಿ—ಹೀಗೇ ಭಾವಿಸಿದ್ದರೆಂದು ಕಾಣುತ್ತದೆ,

ಈ ಇಬ್ಬರಲ್ಲಿ ಕಾರ್ನಾಡರು ಎಂದೂ ಕನ್ನಡದ್ದೆಂದು ಹೇಳಬಹುದಾದ ಸಂವೇದನಾ ಸೂಕ್ಷ್ಮಗಳೊಂದಿಗೆ ಬರೆಯಲಿಲ್ಲ. ಅವರ ಕನ್ನಡ ಯಾವಾಗಲೂ ಕಲಿತ—ಕೃತಕ—ಗ್ರಾಂಥಿಕ ಕನ್ನಡವಾಗಿರುತ್ತಿತ್ತು ಮತ್ತು ಅವರು ಎಂದೂ ಕನ್ನಡತ್ವದ ಕೆಲಸ—ಕಾರ್ಯಗಳೊಂದಿಗೆ ತಮ್ಮನ್ನು ತಾವು ಗುರತಿಸಿಕೊಂಡವರಲ್ಲ. ಅವರ ಬರವಣಿಗೆ, ಅವರ ಸಿನಿಮಾ—ಅವುಗಳಲ್ಲಿ ಕೆಲವು ಕನ್ನಡದವೇ ಆಗಿದ್ದರೂ— ಚಟುವಟಿಕೆಗಳು, ಅವರ ಸಂಪರ್ಕಗಳು ಎಲ್ಲವೂ ವ್ಯಾವಹಾರಿಕ ನೆಲೆಯಲ್ಲಿ ಮಾತ್ರವಿದ್ದಂತೆ ತೋರುತ್ತಿದ್ದವು. ಎಷ್ಟಾದರೂ ಅವರು ಭಾರತದಲ್ಲಿನ ಬೇರಿಲ್ಲದ ಅದ್ಭುತಗಳ ಜನವರ್ಗಕ್ಕೆ ಇನ್ನೊಂದು ಹೆಸರಾದ ‘ರಾಷ್ಟ್ರ ಮಟ್ಟದ ವ್ಯಕ್ತಿತ್ವ’ವಾಗಿದ್ದವರು ತಾನೇ? ಈಗ ಅವರು ತಮ್ಮ ವೃದ್ಧಾಪ್ಯದಲ್ಲಿ ಅಗತ್ಯವೆನಿಸುವ ಬೇರುಗಳನ್ನು ಎಲ್ಲ ರೀತಿಯ ಮತ್ತು ಎಲ್ಲ ಹಂತಗಳ ಬೇರುಗಳಿರದ ‘ರಾಷ್ಟ್ರೀಯ ವ್ಯಕ್ತಿತ್ವ’ಗಳ ಆಶ್ರಯದಾಣವಾಗಿ ಪರಿವರ್ತಿತವಾಗುತ್ತಿರುವ ಬೆಂಗಳೂರಿನಲ್ಲಿ ಕಂಡುಕೊಳ್ಳಲೆತ್ನಿಸುತ್ತಿರುವುದು ಆಶ್ಚರ್ಯವೇನಲ್ಲ. (ಅವರು ಸಾಂಸ್ಕೃತಿಕ ನವೀಕರಣಗಳಿಗಾಗಿ ಮಾತ್ರ ಆಗಾಗ್ಗೆ ಭೇಟಿ ಕೊಡುವ ‘ಮನೋಹರ ಗ್ರಂಥಮಾಲೆ’ಯ ಅಟ್ಟವಿರುವ ನಮ್ಮ ಸಾಂಸ್ಕೃತಿಕ ಕೇಂದ್ರಗಳಲ್ಲೊಂದಾದ ಧಾರವಾಡ ಅವರ ತವರೂರಾಗಿದ್ದು ಅಲ್ಲಿ ಅವರಿಗೆ ಮನೆಯೊಂದಿದೆ ಎಂದೂ ಕೇಳಿರುವೆ) ಆದರೆ ನಾನು ಅವರ ಕೆಲವು ನಾಟಕಗಳನ್ನು ಅವರು ಆರಿಸಿಕೊಂಡ ವಸ್ತುಗಳ ತೀವ್ರ ನಾಟಕೀಕರಣಕ್ಕಾಗಿ ತುಂಬ ಇಷ್ಟಪಡುವೆ ಎಂಬುದನ್ನೂ ಇಲ್ಲಿ ತಿಳಿಸಬಯಸುವೆ. ಅವರು ಬರೆದಿರುವ ನಿಜವಾದ ಕನ್ನಡ ನಾಟಕವೆಂದರೆ ‘ತಲೆದಂಡ’ ಎಂದು ನಾನು ಭಾವಿಸಿರುವೆ.

ಇನ್ನು ನಮ್ಮ ಅನಂತಮೂರ್ತಿಯವರ ಬಗ್ಗೆ ಹೇಳುವುದಾದರೆ, ಅವರಿಗೆ ಎಂದಿನಿಂದಲೂ ತಮ್ಮ ಕನ್ನಡದ ಸಹ ಲೇಖಕರಿಂದ ತಾವು ಭಿನ್ನ ಎಂದು ತೋರಿಸಿಕೊಳ್ಳುವ ಮತ್ತು ಸದಾ ವಿವಾದಾಸ್ಪದವಾಗಿರುವ ಚಪಲ! ಹಾಗೆಂದೇ ಅವರನ್ನು ಸುದ್ದಿಜೀವಿ’ ಎಂದೂ ಕರೆಯಲಾಗುತ್ತಿತ್ತು. ಈ ಅಡ್ಡ ಹೆಸರನ್ನು ಅವರ ಪತ್ನಿಯೂ ಅನುಮೋದಿಸಿದ್ದರು! ಆದ್ದರಿಂದ ಆರ್‍ಕೆ ಸ್ಮಾರಕವನ್ನು ರಾಜ್ಯ ಸರ್ಕಾರ ಪ್ರಾಯೋಜಿಸುವ ಪ್ರಸ್ತಾಪವನ್ನು ಇತರೆಲ್ಲರೂ ವಿರೋಧಿಸಿದಾಗ ಅವರು ತಾವು ರೂಢಿಸಿಕೊಂಡ ಪ್ರವೃತ್ತಿಯಿಂದಾಗಿ ಅವರನ್ನೆಲ್ಲ ವಿರೋಧಿಸಿ ಬ್ರಾಹ್ಮಣರೇ ಹೆಚ್ಚಾಗಿದ್ದ ತಮ್ಮ ಅಭಿಮಾನಿ ಶಿಷ್ಯಕೂಟದಿಂದ ಉದಾರವಾದಿತ್ವಕ್ಕಾಗಿ ಉಘೇ ಉಘೇ ಎಂದೆನ್ನಿಸಿಕೊಳ್ಳಲು ಪ್ರೇರೇಪಿಸಿದ್ದು ಸಹಜವೇ ಆಗಿತ್ತು. (ಅವರಿಗೆ ಒಂದು ಮಿಶ್ರಜಾತಿಯ ಹಗೆಕೂಟವಿತ್ತೆಂಬುದನ್ನೂ ಇಲ್ಲಿ ಹೇಳದಿದ್ದರೆ ಅವರಿಗೆ ಅನ್ಯಾಯವಾದಿತು!) ಕನ್ನಡದ ಲೇಖಕರಲ್ಲಿ ರಾಷ್ಟ್ರೀಯ ಪ್ರಸಿದ್ಧಿಗಾಗಿ ಹಂಬಲಿಸಿದವರೂ ಮತ್ತು ಅದನ್ನು ಸಮೃದ್ಧವಾಗಿ ಪಡೆದವರು ಇವರೊಬ್ಬರೇ ಎಂಬುದನ್ನು ಇಲ್ಲಿ ನೆನಪಿಸಿಕೊಳ್ಬೇಕು. (ಇತ್ತೀಚಿನ ವರ್ಷಗಳಲ್ಲಿ ನನ್ನ ಗೆಳೆಯ ಎಚ್. ಎಸ್. ಶಿವಪ್ರಕಾಶ್ ಅವರು ಇದಕ್ಕಾಗಿ ಹಂಬಲಿಸಿದರಾದರೂ, ದುರದೃಷ್ಟವಶಾತ್ ಅದನ್ನು ಪೂರ್ಣವಾಗಿ ಪಡೆಯಲಿಲ್ಲ ಎಂಬುದು ಬೇರೆ ಮಾತು.) ಇದರ ಪರಿಣಾಮವೆಂದರೆ ಇವರ ಈ ಅವಧಿಯ ಬರವಣಿಗೆ, ವಿಶೇಷವಾಗಿ ಸೃಜನಶೀಲ ಕೃತಿಗಳು ಹೆಚ್ಚು ಲೋಕಾಭಿರಾಮವಾಗಿ ಶಬ್ದಮೋಹಕ್ಕೆ ಸಿಕ್ಕಿ ಟೊಳ್ಳಾದವು. (ಅವರು ತಮ್ಮೂರಿಗೆ ಭೇಟಿ ನೀಡಿದ ಸಂದರ್ಭಾನುಭವದಲ್ಲಿ ಬರೆದ ‘ಸೂರ್ಯನ ಕುದುರೆ’ ಎಂಬ ಸಣ್ಣ ಕಥೆ ಮಾತ್ರ ಇದಕ್ಕೆ ಅಪವಾದ) ಈ ಪರಿಣಾಮವನ್ನು ಶಿವಪ್ರಕಾಶರ ಇತ್ತೀಚಿನ ಬರಹಗಳಲ್ಲೂ ಕಾಣಬುದು.

ಆದ್ದರಿಂದ ಈ ಇಬ್ಬರ (ನಮ್ಮ ರಾಜ್ಯದ ಈ ಇಬ್ಬರು ಮಾತ್ರವಿರುವ) ‘ರಾಷ್ಟ್ರೀಯ ಲೇಖಕ’ರ ನಾಟಕೀಯ ನಡೆಗಳ ಆಧಾರದ ಮೇಲೆ ಭಾಷಾ ವಿಷಯದಲ್ಲಿ ಪಾಠ ಕಲಿಯಿರೆಂದು ದಯವಿಟ್ಟು ನನಗೆ ಸೂಚಿಸಬೇಡಿರಿ. ಹಾಗೆ, ಆರ್‍ ಕೆ ಅವರ ಸ್ಮಾರಕದ ರಾಜ್ಯ ಪ್ರಾಯೋಜಕತ್ವವನ್ನು ನನ್ನಂತೆ ವಿರೋಧಿಸಿದ ಬಹುತೇಕರು ಅವರ ಕಾದಂಬರಿಗಳನ್ನು ಮೆಚ್ಚಿ ಓದುತ್ತಿದ್ದರು ಎಂಬುದೂ ನಿಮಗೆ ಗೊತ್ತಿರಲಿ. ಅದು ಪೂರ್ತಿ ಬೇರೆಯೇ ವಿಷಯ. ಏಕೆಂದರೆ, ಸ್ಥಳೀಯ ನಿರ್ದೇಶಕಗಳನ್ನುಳ್ಳ ಮಣ್ಣಿನ ಮಕ್ಕಳು ಮಾತ್ರ ಈ ‘ವಿರೋಧಾಭಾಸ’ವನ್ನು ಅರ್ಥ ಮಾಡಿಕೊಳ್ಳಬಲ್ಲರು. ಹಾಗೆ ನೋಡಿದರೆ ಆರ್‍ಕೆ ಅವರ ಕಾದಂಬರಿಗಳಲ್ಲಿ ಕನ್ನಡದಕರ್ನಾಟಕದ ಪರಿಮಳವೇ ಇಲ್ಲ. ಉದಾಹರಣೆಗೆ, ಮಾಲ್ಗುಡಿ ಎಂಬುದು ನೀವು ಸೂಚಿಸುವ ಹಾಗೆ ಬೆಂಗಳೂರಿನ ಮಲ್ಲೇಶ್ವರಂ ಮತ್ತು ಬಸವನಗುಡಿಗಳ ಮಿಶ್ರಣವಾಗಿರಲಾರದು. (ಹಾಗಿದ್ದಲ್ಲಿ ಅದು ‘ಮಲ್ಲಗುಡಿ’ ಅಥವಾ ‘ಮಲ್ಲೇಗುಡಿ’ ಎಂದಾಗಬೇಕಿತ್ತು.) ಮಾಲ್ಗುಡಿ ಎಂಬ ಹೆಸರಿನಲ್ಲಿ ಹೊಡೆಯವುದು ತಮಿಳು ವಾಸನೆಯೇ. ಅಲ್ಲದೆ, ಮಾಲ್ಗುಡಿ ಆ ಕಾದಂಬರಿಯಲ್ಲಿ ಚಿತ್ರಿತವಾಗಿರುವಂತೆ ಒಂದು ಸಣ್ಣ ಊರೇ ಹೊರತು ನಗರ ಪ್ರದೇಶವಲ್ಲ. ಇನ್ನು ಅವರ ಕಾದಂಬರಿಗಳ ಬಹುತೇಕ ಪಾತ್ರಗಳ ಹೆಸರುಗಳೂ ಕನ್ನಡದ್ದವೆನಿಸುವುದಿಲ್ಲ. ಬದಲಿಗೆ, ತಮ್ಮ ವೃತ್ತಿಜೀವನದ ಆರಂಭದ ದಿನಗಳಲ್ಲಿ ಕನ್ನಡ ಪತ್ರಿಕೆಗಳಿಗೆ ವ್ಯಂಗ್ಯಚಿತ್ರಗಳನ್ನೂ ಲೇಖನಗಳನ್ನೂ ಬರೆದ ಅವರ ಸೋದರ ಆರ್. ಕೆ. ಲಕ್ಷ್ಮಣ್ ಅವರನ್ನು ಅವರ ದೀರ್ಘ ಮುಂಬೈ ವಾಸದ ನಂತರವೂ ಅಪ್ಪಟ ಕನ್ನಡಿಗರೆಂದು ಕರ್ನಾಟಕದಲ್ಲಿ ಗೌರವಪೂರ್ವಕವಾಗಿ ಪ್ರೀತಿಸಲಾಗುವುದು. ಹಾಗೆ ನೋಡಿದರೆ ಎಚ್.ರಾಜಾರಾವ್ ಅವರನ್ನು ಇಂಗ್ಲಿಷ್‍ನಲ್ಲಿ ಬರೆದ ಕನ್ನಡದ ಲೇಖಕ ಎಂದೇ ಕರೆಯಬಹುದು.

ಇನ್ನು ಭಾಷೆಯ ವಿಷಯ ಕುರಿತಂತೆ ಗಾಂಧಿ—ಟ್ಯಾಗೋರ್ ವಾಗ್ವಾದದ ಬಗ್ಗೆ ಹೇಳುವುದಾದರೆ, ರಾಷ್ಟ್ರೀಯತೆ ಕುರಿತ ಅವರ ವಾಗ್ವಾದದಂತೆಯೇ ಅದನ್ನು ಈ ಇಬ್ಬರೂ ತಮ್ಮ ಜೀವನದಲ್ಲಿ ಆತ್ಯಂತಿಕವಾಗಿ ಏನು ಮಾಡಹೊರಟಿದ್ದರು, ಏನು ಅರಸಿಹೊರಟಿದ್ದರು ಎಂಬ ದೃಷ್ಟಿಯಿಂದ ಅರ್ಥಮಾಡಿಕೊಳ್ಳಬೇಕು ಎಂದು ನಂಬಿರುವವನು ನಾನು. ಟ್ಯಾಗೋರ್ ಅವರ ಸೃಜನಶೀಲ ಕೊಡುಗೆಗಗಳ ಬಗ್ಗೆ ನನ್ನೆಲ್ಲ ಗೌರವವನ್ನು ಅರ್ಪಿಸಿಯೂ ಹೇಳುವ ಮಾತೆಂದರೆ, ಅವರ ವ್ಯಕ್ತಿತ್ವದಲ್ಲಿ ಒಂದು ವೃತ್ತಿಶೀಲತೆಯ ಕುರುಹು ಯಾವಾಗಲೂ ಇತ್ತು. ಅವರು ವೃತ್ತಿಶೀಲರಾಗಿ, ಕನಿಷ್ಠ ಓರ್ವ ಲೇಖಕರಾಗಿ ಯಶಸ್ವಿಯಾಗಲು ಪ್ರಯತ್ನಿಸುತ್ತಿದ್ದರು. ಅವರಲ್ಲಿ ಒಂದು ತೆರನ ಪ್ರದರ್ಶನಪ್ರಿಯತೆಯ ಗುಣ ಅಂತರ್ಗತವಾಗಿತ್ತು. ಅವರು ಹೇಗೆ ನೋಬೆಲ್ ಪ್ರಶಸ್ತಿ ಪಡೆದರೆಂಬುದನ್ನು ನೀವು ಬಲ್ಲಿರಿ. ಅವರ ಬದುಕು ಕಲಾವಿದನಾಗಿ ನಿರ್ದಿಷ್ಟೀಕರಿಸಲ್ಪಟ್ಟು ಅದು ವೃತ್ತಿಪರವಾಯಿತು. ಇದರ ಯಶಸ್ಸಿಗಾಗಿ ಇಂಗ್ಲಿಷ್‍ನ್ನು ಅವರು ಒಂದು ಪರಿಣಾಮಕಾರಿ ಸಾಧನವಾಗಿ ಕಂಡುಕೊಂಡಿದ್ದರು.

ಹೀಗೆ ಕನಿಷ್ಠ ಭಾರತದ ಮಟ್ಟಿಗಾದರೂ ಇಂಗ್ಲಿಷ್ ಭಾಷೆಯು ಸ್ಪರ್ಧೆಯ, ಯಶಸ್ಸಿನ ಆತ್ಯಂತಿಕ ಸಾಧನವಾಗಿದೆ. ಆಧುನಿಕವೆಂದು ಕರೆಯಲಾಗುವ ಬದುಕನ್ನು ನಡೆಸಬಯಸುವ ನಾವೆಲ್ಲರೂ ಗೊತ್ತಿದ್ದೋ, ಗೊತ್ತಿಲ್ಲದೆಯೋ ಬದುಕಿನಲ್ಲಿ ಸ್ಪರ್ಧಾಳುಗಳೇ ಆಗಿದ್ದೇವೆ. ಆ ಕಾರಣದಿಂದಲೇ ಇಂಗ್ಲಿಷ್ ಕುರಿತ ಗಾಂಧಿಯ ನಿಲುವಿಗೆ ಸಹಾನುಭೂತಿ ತೋರಿಸಲು ನಾವು ನಿರಾಕರಿಸುತ್ತೇವೆ. ಪಾಶ್ಚಿಮಾತ್ಯ ಅರ್ಥದಲ್ಲಿ ಎಂದೂ ಆಧುನಿಕರಾಗದಿದ್ದ ಗಾಂಧಿ ಸಹಜವಾಗಿಯೇ ಎಂದೂ ಯಾರೊಂದಿಗೂ ಸ್ಪರ್ಧೆಯಲ್ಲಿರಲಿಲ್ಲ. ಅವರೊಬ್ಬ ಭಾರತೀಯ ಆಧುನಿಕವಾದಿಯಾಗಿದ್ದರು. ಭಾರತೀಯ ಆಧುನಿಕವಾದಿಯಾಗಬೇಕಿದ್ದಲ್ಲಿ ನೀವು ಮೊದಲು ಈ ಮಣ್ಣಿನಲ್ಲಿ ಅನುಭವಗ್ರಾಹ್ಯವಾಗಿ ಬೇರೂರಿಬೇಕು. ಇಲ್ಲೇ ಮಾತೃಭಾಷೆಯ ಪಾತ್ರ ಮುಖ್ಯವಾಗುವುದು, ಅದು ಬದುಕಿನ ಸಾವಯವ ಭಾಗವಾಗಿ ಕಾಣತೊಡಗುವುದು.

ಭಾಷೆಯ ವಿಷಯಕ್ಕೆ ಸಂಬಂಧಿಸಿದಂತೆ ಟ್ಯಾಗೋರರ ಆಕ್ಷೇಪಣೆಯ ಬಗೆಗಿನ ಗಾಂಧಿಯವರ ಪ್ರತಿಕ್ರಿಯೆಯನ್ನು ಯಾವುದೇ ರೀತಿಯಲ್ಲಿ ಭಾಗಶಃ ಒಪ್ಪಿಗೆ ಎಂದಾಗಲೀ, ಟ್ಯಾಗೋರ್‍ರೊಡನೆಯ ರಾಜಿಯೆಂದಾಗಲೀ ಕರೆಯಲಾಗದು. ಅವರು ತಮ್ಮ ಮನೆಯ ಕಿಟಕಿಬಾಗಿಲುಗಳನ್ನು ತೆರೆದಿಡುವ ಮಾತುಗಳನ್ನಾಡಿರುವುದು ಲೋಕಜ್ಞಾನ ಅಥವಾ ವಿಶ್ವಮಾನವತ್ವ ಕುರಿತ ತಮ್ಮ ನಿಲುವಿನ ಪುನರುಚ್ಚಾರವಾಗಿದೆಯಷ್ಟೆ. ಅದು ಟ್ಯಾಗೋರರ ಭಾವನೆಗಳಿಗೆ ಘಾಸಿ ಉಂಟು ಮಾಡದೆ ಅವರ ಅಭಿಪ್ರಾಯ ಕುರಿತ ಅಸಮ್ಮತಿಯ, ಪತ್ಯುತ್ತರದ ಗಾಂಧಿ ಮಾದರಿಯಾಗಿದೆ. ‘ನಯೀ ತಾಲೀಂ’ ಎಂಬ ಅವರ ಹೊಸ ಶಿಕ್ಷಣ ಕಾರ್ಯಕ್ರಮ ಗಾಂಧಿಯವರ ಭಾಷಾ ನೀತಿಯಲ್ಲಿ ಯಾವುದೇ ಬದಲಾವಣೆ ಇಲ್ಲ ಎಂಬುದಕ್ಕೆ ಸಾಕ್ಷಿಯಾಗಿದೆ.

ಆದ್ದರಿಂದ ನಾನು ಮತ್ತು ದೇವನೂರ ಮಹಾದೇವ ಅವರ ಗುಂಪು ಪ್ರತಿಪಾದಿಸುವ ಮತ್ತು ಜಾರಿಗೆ ತರಲು ಯತ್ನಿಸುತ್ತಿರುವ ಭಾಷಾ ನೀತಿ ಎಂದರೆ, ಕನ್ನಡ ಮೊದಲು. ನಂತರ ಇಂಗ್ಲಿಷ್. ವಂದನೆಗಳೊಂದಿಗೆ, ಡಿ. ಎಸ್. ನಾಗಭೂಷಣ.

ಎನ್.ಎಸ್.ಶಂಕರ್

ಬಿಜೆಪಿ ವಿರೋಧಿ ಒಕ್ಕೂಟ ಸಾಧ್ಯವೇ?

ಜುಲೈ ೨೦೧೮

ಶಾಂತಲಾ ದಾಮ್ಲೆ

ಹೋರಾಟಗಾರ ಅಭ್ಯರ್ಥಿ ಚುನಾವಣಾ ಬವಣೆ

ಜುಲೈ ೨೦೧೮

ಶ್ರೀಶೈಲ ಆಲದಹಳ್ಳಿ

ಸಂಡೂರು ಕುಮಾರಸ್ವಾಮಿ ಬೆಟ್ಟಕ್ಕೆ ಗಣಿ ಕಂಟಕ!

ಜುಲೈ ೨೦೧೮

ಡಾ.ಡಿ.ಸಿ.ನಂಜುಂಡ

ನಿಮ್ಮ ಆನ್‍ಲೈನ್ ಮಾಹಿತಿ ಎಷ್ಟು ಸುರಕ್ಷಿತ?

ಜೂನ್ ೨೦೧೮

ಪ್ರೊ. ರವೀಂದ್ರ ರೇಷ್ಮೆ

ಅಸೆಂಬ್ಲಿ ಫಲಿತಾಂಶ - ಪಕ್ಷ ರಾಜಕಾರಣದ ಪತನ

ಜೂನ್ ೨೦೧೮

ಡಾ.ಟಿ.ಆರ್.ಚಂದ್ರಶೇಖರ

ಭಾರತದಲ್ಲಿ ಬ್ಯಾಂಕಿಂಗ್ ಬುಡ ಗಡಗಡ!

ಮೇ ೨೦೧೮

ಸುಧೀಂದ್ರ ಹಾಲ್ದೊಡ್ಡೇರಿ

ಬೆಳ್ಳಂದೂರಿನಲ್ಲಿ ನೊರೆ ಹೊತ್ತಿ ಉರಿದೊಡೆ...!

ಮೇ ೨೦೧೮

ರಹಮತ್ ತರೀಕೆರೆ

ಪ್ರತಿಮೆಗಳ ರಾಜಕಾರಣ

ಎಪ್ರಿಲ್ ೨೦೧೮

ಹನುಮಂತರೆಡ್ಡಿ ಶಿರೂರು

ಸಿದ್ದರಾಮಯ್ಯನವರ ಕಲ್ಯಾಣ ರಾಜ್ಯ !

ಎಪ್ರಿಲ್ ೨೦೧೮

ದಾಸನೂರು ಕೂಸಣ್ಣ

ಒಳ ಮೀಸಲಾತಿಏಕೆ ಬೇಕು?

ಮಾರ್ಚ್ ೨೦೧೮

ರೇಣುಕಾ ನಿಡಗುಂದಿ

ಮೊಲೆ ಕತ್ತರಿಸಿಕೊಟ್ಟ ನಂಗೇಲಿ ನೆನಪು!

ಮಾರ್ಚ್ ೨೦೧೮

ಡಿ. ಎಸ್. ನಾಗಭೂಷಣ

ಕನ್ನಡ ಮೊದಲು ನಂತರ ಇಂಗ್ಲಿಷ್

ಮಾರ್ಚ್ ೨೦೧೮

ಡಾ. ವಾಸು ಎಚ್. ವಿ

ಈ ಹೊತ್ತಿನ ಕರ್ನಾಟಕ: ಪರ್ಯಾಯ ರಾಜಕಾರಣ

ಫೆಬ್ರವರಿ ೨೦೧೮

ಡಾ.ಕಿರಣ್ ಎಂ.ಗಾಜನೂರು

‘ನಿಮ್ಮ ದನದ ಬಾಲ ನೀವೇ ಇಟ್ಟುಕೊಳ್ಳಿ’

ಫೆಬ್ರವರಿ ೨೦೧೮