2nd ಮಾರ್ಚ್ ೨೦೧೮

ಮೊಲೆ ಕತ್ತರಿಸಿಕೊಟ್ಟ ನಂಗೇಲಿ ನೆನಪು!

ರೇಣುಕಾ ನಿಡಗುಂದಿ

ಮಾರ್ಚ್ ಎಂಟನೇ ತಾರೀಖು ವಿಶ್ವ ಮಹಿಳಾ ದಿನ. ಈ ಸಂದರ್ಭದಲ್ಲಿ ಇತಿಹಾಸದ ಗರ್ಭದಿಂದ ಹೆಕ್ಕಿತೆಗೆದ ದಾರುಣ ಘಟನೆ ಇಲ್ಲಿದೆ.

ವಯಸ್ಕರು ಪ್ರೇಮ ವಿವಾಹವಾದರೆ ಅದನ್ನು ತಡೆಯುವ ಹಕ್ಕು ಖಾಪ್ ಪಂಚಾಯತ್, ಕುಟುಂಬಸ್ಥರು, ತಂದೆ—ತಾಯಿ ಸೇರಿದಂತೆ ಯಾವುದೇ ಸಮಾಜಕ್ಕಿಲ್ಲ ಎಂದು ಇತ್ತೀಚೆಗೆ ಸುಪ್ರೀಂ ಕೋರ್ಟ್ ತೀರ್ಪು ನೀಡಿದೆ. ಇದನ್ನು ಖಂಡಿಸಿದ ಖಾಪ್ ಮುಖಂಡ ತಲೆತಲಾಂತರದಿಂದ ಪಾಲಿಸಿಕೊಂಡು ಬಂದಿರುವ ನಮ್ಮ ಸಮುದಾಯದ ಸಾಂಪ್ರದಾಯದ ವಿಷಯದಲ್ಲಿ ಮಧ್ಯೆ ಬರಬೇಡಿ ಅಂತ ಸುಪ್ರೀಂ ಕೋರ್ಟಿಗೇ ಧಮಕಿ ಹಾಕಿದ. ಆತ ಹೆಣ್ಣುಮಕ್ಕಳು ಹುಟ್ಟದಂತೆ ಮಾಡುತ್ತೇನೆ, ಹುಟ್ಟಿದರೂ ಅವಕ್ಕೆ ವಿದ್ಯಾಭ್ಯಾಸ ಕೊಡಿಸೋದಿಲ್ಲವೆಂದು ಘಂಟಾಘೋಷವಾಗಿ ಹೇಳಿಕೊಳ್ಳುತ್ತಾನೆಂದರೆ ನಾವು ಯಾವ ಶತಮಾನದಲ್ಲಿದ್ದೇವೆ ಎಂಬ ಅನುಮಾನ, ಭಯ ಹುಟ್ಟುತ್ತದೆ. ಪುರುಷಕೇಂದ್ರಿತ ಸಮಾಜದಲ್ಲಿ ಎಲ್ಲಾ ವರ್ಗದ, ಎಲ್ಲಾ ವರ್ಣಾಶ್ರಮದ ಮೂಲಗುಣ ಹೆಣ್ಣನ್ನು ನಿಯಂತ್ರಣದಲ್ಲಿಟ್ಟುಕೊಳ್ಳುವುದೇ ಆಗಿದೆ.

ಹೆಣ್ಣುಮಕ್ಕಳು ಜೀನ್ಸ್ ತೊಟ್ಟುಕೊಂಡು ದೇವಸ್ಥಾನಗಳಿಗೆ ಹೋಗಬಾರದಂತೆ. ಋತುಸ್ರಾವದಲ್ಲಿ ದೇವಸ್ಥಾನ ಪ್ರವೇಶವೂ ನಿಷಿದ್ಧ. ಹೆಂಡತಿಯನ್ನ ದಾರಿಗೆ ತರುವುದಕ್ಕಾಗಿ ಅವಳನ್ನ ಹೊಡೆಯಲು ಪತಿಗೆ ಹಕ್ಕಿದೆ, ಆದರೆ ಆ ಹೊಡೆತ ಅವಳ ಮೂಳೆ ಮುರಿಯುವಷ್ಟು, ದೇಹವನ್ನು ವಿರೂಪಗೊಳಿಸುವಷ್ಟು ಜೋರಾಗಿರಬಾರದು ಎನ್ನುತ್ತದೆ ದುಬೈ ನ್ಯಾಯಾಲಯ! ಅಬ್ಬಾ ಪುರುಷಾಧಿಪತ್ಯವೇ...

ಇಂಥ ಸನ್ನಿವೇಶದಲ್ಲಿ ಸ್ವಾಭಿಮಾನ, ಸಮಾನತೆ ಹಾಗೂ ಅಸ್ಮಿತೆಗಾಗಿ ತನ್ನ ಮೊಲೆಗಳನ್ನೇ ಕತ್ತರಿಸಿ ಕೊಟ್ಟ ‘ನಂಗೇಲಿ’ ನೆನಪಾಗುತ್ತಾಳೆ.

ಹತ್ತೊಂಬತ್ತನೇ ಶತಮಾನದಲ್ಲಿ ಕೇರಳದಲ್ಲಿ ಕೆಳಜಾತಿಯ ಮಹಿಳೆಯರು ವಸ್ತ್ರದಿಂದ ಎದೆ ಮುಚ್ಚುಕೊಳ್ಳುವಂತಿರಲಿಲ್ಲ. ವಸ್ತ್ರ ಉಚ್ಚ ಕುಲೀನರ ಸೊತ್ತು, ಮೇಲ್ವರ್ಗದ ಗೌರವಸೂಚಕವಾಗಿ ಕೆಳವರ್ಗದ ಸ್ತ್ರೀ ಪುರುಷರು ಸೊಂಟದಿಂದ ಮೇಲೆ ವಸ್ತ್ರ ತೊಡುವಂತಿರಲಿಲ್ಲ. ಈ ತಳಸಮುದಾಯ ಕಡುಬಡವರಾಗಿ, ಜೀವಮಾನಪೂರ್ತಿ ಸಾಲದಲ್ಲಿ ಮುಳುಗಿ, ಉಳ್ಳವರ ಜೀತದಾಳಾಗಿಯೇ ದುಡಿದು ಮಡಿಯಬೇಕಿತ್ತು. ಬಡವರ ಮೇಲೆ ಭರಿಸಲಾಗದಷ್ಟು ತೆರಿಗೆಯ ಹೊರೆ ಹೇರುತ್ತಿದ್ದರು. ಅವುಗಳಲ್ಲಿ ಮೊಲೆಗಳ ಮೇಲೆ ತೆರಿಗೆಯೂ ಒಂದು!

ಇದೆಂಥ ಕ್ರೌರ್ಯ! ಸ್ತನ ತೆರಿಗೆ ಕಾರಣದಿಂದ ಅಂದಿನ ದಲಿತ ಮಹಿಳೆಯರು ತಮ್ಮ ಸ್ತನಗಳನ್ನು ಯಾವುದೇ ವಸ್ತ್ರದಿಂದ ಮುಚ್ಚಿಕೊಳ್ಳುವಂತಿರಲಿಲ್ಲ. ಮುಖ್ಯವಾಗಿ ಸಾರ್ವಜನಿಕ ಪ್ರದೇಶಗಳಿಗೆ ಬಂದಾಗ ಅವರ ಸ್ತನ ಎಲ್ಲರಿಗೂ ಕಾಣಿಸಬೇಕಿತ್ತು. ಆಗಿನ ಸರಕಾರಿ ಅಧಿಕಾರಿಗಳು ಪ್ರತಿ ತಿಂಗಳು ಪ್ರತಿ ದಲಿತ ಮಹಿಳೆಯ ಸ್ತನದ ಗಾತ್ರವನ್ನು ಅಳೆದು ಅದಕ್ಕೆ ತಕ್ಕಂತೆ ತೆರಿಗೆ ವಿಧಿಸುತ್ತಿದ್ದರು. ತಾಯಂದಿರು ತಮ್ಮ ಮಕ್ಕಳಿಗೆ ಹಾಲೂಡಿಸಬೇಕಾದರೆ ಮೊದಲು ತೆರಿಗೆ ಕಟ್ಟಬೇಕಿತ್ತು! ಈ ತೆರಿಗೆ ವ್ಯವಸ್ಥೆಗೆ ‘ಮುಲಕ್ಕರಂ’ ಎನ್ನುತ್ತಿದ್ದರು. ಈ ಅಮಾನುಷ ಕಾನೂನುಗಳಿಂದ ಅಂದಿನ ದಲಿತ ಮಹಿಳೆಯರ ಮಾನ ಪ್ರಾಣಗಳು ಗಾಳಿಯಲ್ಲಿನ ದೀಪದಂತಿದ್ದವು..

ಬಹಳಷ್ಟು ಸಲ ತೆರಿಗೆ ವಸೂಲಿ ನೆಪದಲ್ಲಿ ಸ್ವತಃ ಸರಕಾರಿ ಅಧಿಕಾರಿಗಳು ಆ ದಲಿತ ಮಹಿಳೆಯರ ಮಾನ ದೋಚುತ್ತಿದ್ದರು. ಈ ನಿಯಮದಿಂದ ಅಂದಿನ ದಲಿತ ಪ್ರಜೆಗಳಲ್ಲಿ ಮೇಲ್ಜಾತಿಯವರ ಮೇಲೆ ತುಂಬಾ ಕೋಪ ಇದ್ದರೂ ಅವರ ಧನಬಲ, ತೋಳ್ಬಲದ ಮುಂದೆ ಅವರು ಏನೂ ಮಾಡಲಿಕ್ಕೆ ಆಗುತ್ತಿರಲಿಲ್ಲ. ಒಂದು ವೇಳೆ ಯಾರಾದರೂ ತಿರುಗಿ ಬಿದ್ದರೆ ನಾನಾ ರೀತಿಯ ಹಿಂಸೆಗಳನ್ನು ಕೊಟ್ಟು ಸಾಯಿಸುತ್ತಿದ್ದರಂತೆ. ಆಗಲೇ ಭಾರತದಲ್ಲಿ ಮತಾಂತರದ ಗಾಳಿ ಬೀಸತೊಡಗಿತ್ತು. ಜಾತಿಪದ್ಧತಿಯ ಅನಿಷ್ಟಗಳಿಂದ ರೋಸಿಹೋಗಿದ್ದ ತಳಸಮುದಾಯಗಳು ಕ್ರಿಶ್ಚಿಯನ್ ಮತಕ್ಕೆ ಆಕರ್ಷಿತರಾಗತೊಡಗಿದ್ದರು. ಕ್ರಿಶ್ಚಿಯನ್ ಹೆಂಗಸರು ಜಂಪರಿನಂಥ ‘ಜಾಕೆಟ್’ ಧರಿಸಬಹುದಿತ್ತು ಆದರೆ ಬ್ರಾಹ್ಮಣ ಹೆಂಗಸರಂತೆ ಮೇಲುವಸ್ತ್ರವನ್ನು ಹೊದೆಯುವಂತಿರಲಿಲ್ಲ. ಅದೂ ಒಂದು ಬಗೆಯ ಕ್ರಾಂತಿಯ ಕಾಲ. ಅಸಮಾನತೆ, ಜಾತಿಪದ್ಧತಿ ಅನಿಷ್ಟ ಆಚರಣೆಗಳ ವಿರುದ್ಧ ಸಾಮಾನ್ಯ ತಳಸಮುದಾಯದ ಪೀಡಿತರು ದಂಗೆಯೆದ್ದ ಕಾಲ. ಇದನ್ನು ಸಹಿಸದ ಮೇಲ್ವರ್ಗ ಕ್ರಿಶ್ಚಿಯನ್ನರ, ತಳವರ್ಗದವರ ಗುಡಿಸಲುಗಳನ್ನು ಸುಟ್ಟು, ಎದೆ ಮುಚ್ಚಿಕೊಂಡ ಹೆಂಗಸರ ಜಂಪರುಗಳನ್ನು ಹರಿದು ಹಾಕುವಂಥ ಅಮಾನವೀಯ ಕೃತ್ಯಕ್ಕೂ ಹೇಸಲಿಲ್ಲ.

ತಿರುವನಂತಪುರದ ಚೀರ್ತಾಲದಲ್ಲಿ ಎಳವ (ಈಡಿಗ) ಸಮುದಾಯದ ನಂಗೇಲಿ ಎಂಬ ಮಹಿಳೆ ಈ ಕಂದಾಚಾರದ ವಿರುದ್ಧ ತಿರುಗಿಬಿದ್ದಳು. ಮೇಲ್ವರ್ಗದ ಮಹಿಳೆಯರಂತೆ ಕುಪ್ಪಸ ತೊಟ್ಟುಕೊಂಡೇ ಓಡಾಡಿದಳು. ಮೇಲ್ಜಾತಿಯ ಮಹಿಳೆಯರಂತೆ ನಾವೂ ಮಹಿಳೆಯರಲ್ಲವೇ? ನಮಗೇಕೆ ಇಂಥ ಅಮಾನುಷ ಶಿಕ್ಷೆ ಎಂದು ಪ್ರಶ್ನಿಸಿದ ಮೊದಲ ಮಹಿಳಾ ಹೋರಾಟಗಾರ್ತಿ! ಇತರರಿಗೂ ಈ ಅತ್ಯಾಚಾರದ ವಿರುದ್ಧ ಅರಿವು ಮೂಡಿಸಿ ತೆರಿಗೆ ಕಟ್ಟಕೂಡದೆಂದೂ, ಎದೆಮುಚ್ಚಿಕೊಳ್ಳಲು ತಮಗೂ ಅಷ್ಟೇ ಹಕ್ಕಿದೆಯೆಂದೂ ಪ್ರೋತ್ಸಾಹಿಸುತ್ತ ಬಹಿರಂಗ ಚಳವಳಿಯನ್ನೇ ಸಾರಿದ್ದಳು. ಅವಳ ಗಂಡ ಚಿರುಕಂಡನ್ ಪತ್ನಿಗೆ ಹೆಗಲಾಗಿದ್ದನು. ಇದರಿಂದ ಕೆಂಡಕಾರಿದ ಮೇಲ್ವರ್ಗ ನಂಗೇಲಿಯನ್ನು ಹೇಗಾದರೂ ತಡೆಯಬೇಕೆಂಬ ಉದ್ದೇಶದಿಂದ ಆಕೆಯ ಆತ್ಮೀಯರನ್ನು ಬಂಧಿಸಿ ತೆರಿಗೆ ಕಟ್ಟಬೇಕೆಂದು ತೀವ್ರವಾಗಿ ಒತ್ತಡ ತಂದರಂತೆ.

ಮನೆ ಬಾಗಿಲಿಗೆ ಕರ ವಸೂಲಿಗೆ ಬಂದ ತೆರಿಗೆಯ ಅಧಿಕಾರಿಗಳೆದುರು ನಂಗೇಲಿ ತನ್ನ ಸ್ತನಗಳನ್ನು ಕುಯ್ದು ಬಾಳೆಲೆಯ ಮೇಲಿಟ್ಟು, ‘ಇದರ ಮೇಲೆಯೇ ಅಲ್ಲವೆ ನಿಮ್ಮ ಕಣ್ಣು. ಈ ರಕ್ತದ ಮುದ್ದೆಯನ್ನು ನೀವೇ ತೆಗೆದುಕೊಳ್ಳಿ’ ಎಂದು ಅಧಿಕಾರಿಗಳ ಮುಖಕ್ಕೆ ಹೊಡೆದಳಂತೆ. ಕಂಗಾಲಾದ ಅಧಿಕಾರಿಗಳು ಅಲ್ಲಿಂದ ಓಡಿಹೋದರಂತೆ. ತೀವ್ರ ರಕ್ತಸ್ರಾವದಿಂದ ಮನೆಯ ಹೊಸಿಲಿನಲ್ಲೇ ಬಿದ್ದು ಸಾಯುತ್ತಾಳೆ ನಂಗೇಲಿ. ಆಕೆಯನ್ನು ಬಹುವಾಗಿ ಪ್ರೇಮಿಸುತ್ತಿದ್ದ ಆಕೆಯ ಗಂಡ ಆಕೆಯ ಸಾವನ್ನು ಜೀರ್ಣಿಸಿಕೊಳ್ಳಲಾಗದೆ ಆಕೆಯ ಚಿತೆ ಮೇಲೆ ಬಿದ್ದು ತಾನೂ ಪ್ರಾಣಾರ್ಪಣೆ ಮಾಡಿಕೊಳ್ಳುತ್ತಾನೆ.

ನಾವು 21 ನೇ ಶತಮಾನದಲ್ಲಿ ‘ಪದ್ಮಾವತ್’ ಚಿತ್ರ, ‘ಜೌಹರ್’ ಮತ್ತು ‘ಸತಿ’ ಪದ್ಧತಿಯ ವೈಭವೀಕರಣ, ರಜಪೂತರ ಘನತೆ ಗೌರವ, ಮರ್ಯಾದೆಯ ಬಗ್ಗೆ ಮಾತಾಡುತ್ತೇವೆ. ಆದರೆ ನಂಗೇಲಿಯ ಪತಿಯಂತೆ ಸತಿಯೊಡನೆ ಆತ್ಮಾಹುತಿ ಮಾಡಿಕೊಂಡ ಒಬ್ಬನೇ ಒಬ್ಬ ಪುರುಷನ ಉದಾಹರಣೆ ನಮಗೆ ಚರಿತ್ರೆಯಲ್ಲಿ ಸಿಗುವುದಿಲ್ಲ. ಸಂಜಯ್ ಲೀಲಾ ಭಂನ್ಸಾಲಿಗೆ ಬರೆದ ಬಹಿರಂಗ ಪತ್ರದಲ್ಲಿ ಪ್ರಜ್ಞಾವಂತ ನಟಿ ಸ್ವರಾ ಭಾಸ್ಕರ ಇಂಥವೇ ಸುಡುವ ಕಿಡಿಗಳಂಥ ಪ್ರಶ್ನೆಗಳನ್ನೆತ್ತಿದ್ದಾಳೆ. ಪುರುಷಪ್ರಧಾನ ಸಮಾಜದಲ್ಲಿ ಆಳವಾಗಿ ಬೇರೂರಿದ ಅನಿಷ್ಟಗಳಾದ ಜೌಹರ್, ಸತಿ, ಯೋನಿಚ್ಚೇದನ, ಮರ್ಯಾದಾ ಹತ್ಯೆ, ಲೈಂಗಿಕ ದೌರ್ಜನ್ಯಗಳಂಥ ಸ್ತ್ರೀವಿರೋಧಿ ನಡೆಗಳು ರೋಗಗ್ರಸ್ತ ಸಮಾಜವನ್ನೇ ಬೆಳೆಸುತ್ತಿದೆ. ಹೆಣ್ಣಿನ ಪಾವಿತ್ರ್ಯ ಎಂಬುದು ಅವಳ ಯೋನಿಗೆ ಸೀಮಿತವಾಗಿದೆ. ಅದೇ ಅವಳ ಅಸ್ಮಿತೆ! ಅದನ್ನು ಕಾಯುವ, ನಿಯಂತ್ರಿಸುವ, ಸ್ವಾಮಿತ್ವವನ್ನು ಹೊಂದುವುದೇ ತನ್ನ ಏಕಮಾತ್ರ ಹಕ್ಕು ಎಂಬುದು ಪುರುಷನ ತಲೆಯೊಳಗೆ ಬೇರುಬಿಟ್ಟು ಮೈಯೆಲ್ಲಾ ಹಬ್ಬಿಕೊಂಡಿದೆ. ಇವು ಯಾವವೂ ಖಂಡಿತವಾಗಿಯೂ ಸಮಾನತೆಯನ್ನು ಪ್ರತಿಪಾದಿಸುವುದಿಲ್ಲ. ನಮ್ಮ ಘನತೆಯಿಂದ ಜೀವಿಸುವ ಹಕ್ಕುಗಳನ್ನು ಎತ್ತಿಹಿಡಿಯುವುದಿಲ್ಲ.

ಹಿಡಿಂಬಿಯರ ಕಾಲದಲ್ಲಿ ಸ್ತ್ರೀ ಪುರುಷರಿಗಿದ್ದ ಸಮಾನತೆ, ತಮಗೆ ಮನವೊಪ್ಪಿದ, ಒಲಿದ ಸಂಗಾತಿಯೊಂದಿಗೆ ಕೂಡುವ ಸ್ವಾತಂತ್ರ್ಯ ಇಪ್ಪತ್ತೊಂದನೇ ಶತಮಾನದ ನಮಗೆ ದಕ್ಕಿದೆಯೇ?

“ಮೊಲೆ ತೆರಿಗೆ ಯಾಕೆ ಕೊಡಲಿ? ಇತರರಂತೆ ನಾನೂ ಮಹಿಳೆ ಎಂದು ಚಳವಳಿಯನ್ನೇ ಸಾರಿದ ನಂಗೇಲಿ ನಮಗೆ ಘನತೆಯ ಸ್ವಾಭಿಮಾನ ಸಮಾನತೆಯ ಪ್ರತೀಕವಾಗುವ ಸಂದರ್ಭದಲ್ಲೇ ಯೋನಿವಿಚ್ಛೇಧನ ಎಂಬ ಅನಿಷ್ಟ ಪದ್ಧತಿಯನ್ನು ದಾಖಲಿಸಿ ಜಗತ್ತಿನೆದುರು ತೆರೆದಿಟ್ಟು ಬೆಚ್ಚಿಬೀಳಿಸಿದ ಹೆಸರಾಂತ ಆಫ್ರಿಕನ್ ಮಾಡೆಲ್ ವಾರಿಸ್ ಡೆರಿಸ್ ನೆನಪಾಗುತ್ತಾಳೆ. ಹೆಣ್ಣಿಗೆ ಸಂಪೂರ್ಣ ಲೈಂಗಿಕ ಸುಖದ ಅನುಭೂತಿ ಆಗಬಾರದು; ಸುಖದ ಸಂವೇದನೆಯ ಅರಿವಾಗಿಬಿಟ್ಟರೆ ಆಕೆ ವ್ಯಸನಿಯಾಗಿಬಿಡಬಹುದೆನ್ನುವ ಭೀತಿಯಿಂದ ಅವಳ ಜನನಾಂಗದ ಸೂಕ್ಷ್ಮ ಭಾಗಗಳನ್ನು ಅಮಾನುಷವಾಗಿ ಕತ್ತರಿಸಿ ಹಾಕುತ್ತಿದ್ದರು. ಕಾನೂನು ಇಂಥ ಅನಿಷ್ಟವನ್ನು ನಿಷೇಧಿಸಿದ್ದರೂ ಈಗಲೂ ಕೆಲ ದೇಶದಲ್ಲಿ ಈ ಬಗೆಯ ಅನ್ಯಾಯ ಜಾರಿಯಲ್ಲಿದೆ.

ಎಳೆವೆಯಲ್ಲೇ ತಾಯಿಯ ಪ್ರಿಯತಮನಿಂದಲೇ ಆತ್ಯಾಚಾರಕ್ಕೊಳಗಾಗಿ, ವರ್ಣಭೇದ ಅಸಮಾನತೆ ಅವಮಾನಗಳನ್ನುಂಡು ಮತ್ತೆ ತಲೆಯತ್ತಿ ಬೆಳೆದ ಜಗತ್ಪ್ರಸಿದ್ಧ ಕಪ್ಪು ಕವಿಯತ್ರಿ, ಸಮಾಜ ಸೇವಕಿ, ಚಿಂತಕಿ ಮಾಯಾ ಎಂಜೆಲೋ ನೆನಪಾಗುತ್ತಾಳೆ.

ಪ್ರಜಾಪ್ರಭುತ್ವವನ್ನು ಪಾಲಿಸುವ ದೇಶ ಎಂದು ಗೌರವದಿಂದಹೆಮ್ಮೆಯಿಂದ ಹೇಳಿಕೊಳ್ಳುವ ನಮಗೆ ಇನ್ನೂ ಹೆಂಗಸರು ಜೋರಾಗಿ ನಗಬಾರದು, ಅದನ್ನು ತೊಡಬಾರದು ಇದನ್ನು ಉಡಬಾರದು ಎನ್ನುವ ವಿಷಯಗಳು ಹಾಸ್ಯಾಸ್ಪದವೆನಿಸುತ್ತವೆ. ಬುಡಕಟ್ಟು ಜನಾಂಗದ ಪ್ರತೀಕವಾಗಿದ್ದ ಶೂರ್ಪನಖಿ ಮತ್ತು ಹಿಡಿಂಬಿಯರ ಕಾಲದಲ್ಲಿ ಸ್ರ್ತೀ ಪ್ರುರುಷರಿಗಿದ್ದ ಸಮಾನತೆ, ತಮಗೆ ಮನವೊಪ್ಪಿದ, ಒಲಿದ ಸಂಗಾತಿಯೊಂದಿಗೆ ಕೂಡುವ ಸ್ವಾತಂತ್ರ್ಯ ಇಪ್ಪತ್ತೊಂದನೇ ಶತಮಾನದ ನಮಗೆ ದಕ್ಕಿದೆಯೇ?

ಎನ್.ಎಸ್.ಶಂಕರ್

ಬಿಜೆಪಿ ವಿರೋಧಿ ಒಕ್ಕೂಟ ಸಾಧ್ಯವೇ?

ಜುಲೈ ೨೦೧೮

ಶಾಂತಲಾ ದಾಮ್ಲೆ

ಹೋರಾಟಗಾರ ಅಭ್ಯರ್ಥಿ ಚುನಾವಣಾ ಬವಣೆ

ಜುಲೈ ೨೦೧೮

ಶ್ರೀಶೈಲ ಆಲದಹಳ್ಳಿ

ಸಂಡೂರು ಕುಮಾರಸ್ವಾಮಿ ಬೆಟ್ಟಕ್ಕೆ ಗಣಿ ಕಂಟಕ!

ಜುಲೈ ೨೦೧೮

ಡಾ.ಡಿ.ಸಿ.ನಂಜುಂಡ

ನಿಮ್ಮ ಆನ್‍ಲೈನ್ ಮಾಹಿತಿ ಎಷ್ಟು ಸುರಕ್ಷಿತ?

ಜೂನ್ ೨೦೧೮

ಪ್ರೊ. ರವೀಂದ್ರ ರೇಷ್ಮೆ

ಅಸೆಂಬ್ಲಿ ಫಲಿತಾಂಶ - ಪಕ್ಷ ರಾಜಕಾರಣದ ಪತನ

ಜೂನ್ ೨೦೧೮

ಡಾ.ಟಿ.ಆರ್.ಚಂದ್ರಶೇಖರ

ಭಾರತದಲ್ಲಿ ಬ್ಯಾಂಕಿಂಗ್ ಬುಡ ಗಡಗಡ!

ಮೇ ೨೦೧೮

ಸುಧೀಂದ್ರ ಹಾಲ್ದೊಡ್ಡೇರಿ

ಬೆಳ್ಳಂದೂರಿನಲ್ಲಿ ನೊರೆ ಹೊತ್ತಿ ಉರಿದೊಡೆ...!

ಮೇ ೨೦೧೮

ರಹಮತ್ ತರೀಕೆರೆ

ಪ್ರತಿಮೆಗಳ ರಾಜಕಾರಣ

ಎಪ್ರಿಲ್ ೨೦೧೮

ಹನುಮಂತರೆಡ್ಡಿ ಶಿರೂರು

ಸಿದ್ದರಾಮಯ್ಯನವರ ಕಲ್ಯಾಣ ರಾಜ್ಯ !

ಎಪ್ರಿಲ್ ೨೦೧೮

ದಾಸನೂರು ಕೂಸಣ್ಣ

ಒಳ ಮೀಸಲಾತಿಏಕೆ ಬೇಕು?

ಮಾರ್ಚ್ ೨೦೧೮

ರೇಣುಕಾ ನಿಡಗುಂದಿ

ಮೊಲೆ ಕತ್ತರಿಸಿಕೊಟ್ಟ ನಂಗೇಲಿ ನೆನಪು!

ಮಾರ್ಚ್ ೨೦೧೮

ಡಿ. ಎಸ್. ನಾಗಭೂಷಣ

ಕನ್ನಡ ಮೊದಲು ನಂತರ ಇಂಗ್ಲಿಷ್

ಮಾರ್ಚ್ ೨೦೧೮

ಡಾ. ವಾಸು ಎಚ್. ವಿ

ಈ ಹೊತ್ತಿನ ಕರ್ನಾಟಕ: ಪರ್ಯಾಯ ರಾಜಕಾರಣ

ಫೆಬ್ರವರಿ ೨೦೧೮

ಡಾ.ಕಿರಣ್ ಎಂ.ಗಾಜನೂರು

‘ನಿಮ್ಮ ದನದ ಬಾಲ ನೀವೇ ಇಟ್ಟುಕೊಳ್ಳಿ’

ಫೆಬ್ರವರಿ ೨೦೧೮