2nd ಮಾರ್ಚ್ ೨೦೧೮

ಒಳ ಮೀಸಲಾತಿ ಏಕೆ ಬೇಕು?

ದಾಸನೂರು ಕೂಸಣ್ಣ

ಸದ್ಯದ ಸಾಮಾಜಿಕ ಸ್ಥಿತಿಯಲ್ಲಿ ಒಳ ಮೀಸಲಾತಿಯನ್ನು ಅನುಷ್ಠಾನಮಾಡದಿದ್ದರೆ ಹೊಲೆಯ—ಮಾದಿಗರಲ್ಲಿರುವ ಕನಿಷ್ಠ ಪ್ರಮಾಣದ ಸಾಮಾಜಿಕ ಸೌಹಾರ್ದ ಮುರಿದುಬೀಳುತ್ತದೆ. ಆಮೇಲೆ ಎಷ್ಟೇ ಪುಂಗಿ ಊದಿದರೂ ಮೈತ್ರಿ ಸಮುದಾಯಗಳಾಗಿ ಉಳಿಯಲಾರವು.

ಭಾರತದಲ್ಲಿ ಸಾಮಾಜಿಕ ಸಮಾನತೆ ಹೊಂದಿರದ ಬಹುತೇಕ ಶೋಷಿತ ಸಮುದಾಯಗಳಿಗೆ ಮೀಸಲಾತಿ ಬದುಕಿನ ಆಂಶಿಕ ಊರುಗೋಲಾಗಿದೆ. ಈ ಪರಿಕಲ್ಪನೆ ಜನ್ಮತಾಳಿದ ಸಂದರ್ಭಸನ್ನಿವೇಶಗಳನ್ನು ಮರೆಯುವಂತಿಲ್ಲ. ಮೀಸಲಾತಿ ಇರದಿದ್ದರೆ ಈ ಸಮುದಾಯಕ್ಕೆ ಸಾಮಾಜಿಕ ಸುರಕ್ಷತೆಗಳು ಸಿಗುತ್ತಿರಲಿಲ್ಲ. ಆದರೆ ಈ ನೀತಿ ಆಗಾಗ ಹಗ್ಗ ಜಗ್ಗಾಟಕ್ಕೆ ಸಿಲುಕುತ್ತಿದೆ. ಮೀಸಲಾತಿ ಫಲಾನುಭವಿಗಳ ಒಳಗೆ ಸಮಾನ ಹಂಚಿಕೆಯ ಬೇಡಿಕೆಗಳು ದಿನದಿಂದ ದಿನಕ್ಕೆ ಕಾದಾಟದ ಅಸ್ತ್ರಗಳಾಗುತ್ತಿರುವುದು ವಿಪರ್ಯಾಸ.

ಮಹಾರಾಷ್ಟ್ರ, ತಮಿಳುನಾಡು, ಕೇರಳ, ತೆಲಂಗಾಣ ರಾಜ್ಯಗಳಲ್ಲಿ 101 ಪರಿಶಿಷ್ಟ ಜಾತಿಗಳಿವೆ. 1950 ಮತ್ತು 1956ರಲ್ಲಿ ಪಟ್ಟಿ ಮಾಡಿರುವ ಜಾತಿಗಳಲ್ಲಿ ಒಂದು ಸಮ ಸ್ವರೂಪದ ಸಾಮಾಜಿಕ ಬಿಂಬಕಗಳಿಲ್ಲ. ಈ ಪೈಕಿ 74 ಜಾತಿಗಳು ಮದ್ರಾಸು ಪ್ರಾಂತ್ಯದಿಂದ ಅನಾಮತ್ತಾಗಿ ಬಂದಿವೆ. ಒಟ್ಟಾರೆ ಅತಿ ಹಿಂದುಳಿದ ವರ್ಗಗಳಾಗುವ ಅರ್ಹತೆ ಹೊಂದಿರುವ ಅನೇಕ ಜಾತಿಗಳಿಗೆ ಈ ಕಕ್ಷೆಗೆ ಸೇರುವ ಅರ್ಹತೆ ಇಂದಿಗೂ ಇಲ್ಲ (ಆರ್.ಜಿ.ಕಾಕಡೆ, 1949). ಅಧಿಕ ಭಾರದ ರಾಷ್ಟ್ರೀಯ ಪಟ್ಟಿ ಇದಾಗಿದೆ. 1950 ಮತ್ತು 1956ರಲ್ಲಿ ಮೈಸೂರು ಸರ್ಕಾರ ತಾಳಿದ ಮೃದು ಧೋರಣೆಗಳಿಂದ ಪರಿಶಿಷ್ಟ ಜಾತಿಗಳಾಗಿದ್ದ ಮೂಲ ಅಸ್ಪೃಶ್ಯರಿಂದು ಒಳ ಮೀಸಲಾತಿಯ ಮುಸುಕಿನ ಗುದ್ದಾಟಕ್ಕೆ ನಿಂತಿವೆ. ಉದಾರಹಣೆಗೆ ಆಂಧ್ರಪ್ರದೇಶ—ತೆಲಂಗಾಣ ರಾಜ್ಯಗಳಲ್ಲಿರುವ ಪರಿಶಿಷ್ಟ ಜಾತಿಗಳು ಅಪ್ಪಟ ಅಸ್ಪೃಶ್ಯರಾದರೂ ಸಹ ಮೀಸಲಾತಿ ಪ್ರತಿಯೊಂದು ಜಾತಿ—ಉಪಜಾತಿ ಸಮುದಾಯದೊಳಗೆ ಸಮವಾಗಿ ಮೀಸಲಾತಿ ಹಂಚಿಕೆ ಆಗದ ಕಾರಣ ಅಲ್ಲಿಯೂ ಒಳ ಮೀಸಲಾತಿಯ ಕೂಗು ರಾಷ್ಟ್ರೀಯ ಮುನ್ನೆಲೆಗೆ ಬಂದದ್ದು ಇತಿಹಾಸ.

ಮೀಸಲಾತಿಯನ್ನು ಉಪಜಾತಿಗಳ ಸಂಖ್ಯಾಬಲಕ್ಕೆ ಅನುಗುಣವಾಗಿ ಸಮಾನ ಮರುಹಂಚಿಕೆ ನ್ಯಾಯಯದಡಿ (Equal Re-distributive Justice) ನಿಗದಿಪಡಿಸಬೇಕೆಂಬುದು ಬೇಡಿಕೆ. 1936ರ ಮೀಸಲಾತಿ ಆಧಾರವಾಗಿರಿಸಿಕೊಂಡು ರಾಜ್ಯದ ಪರಿಶಿಷ್ಟ ಜಾತಿಗಳನ್ನು ಸಾಮಾಜಿಕವಾಗಿ ವಿಶ್ಲೇಷಿಸಿದಾಗ ಅಸ್ಪೃಶ್ಯರಾದ ಹೊಲೆಯ—ಮಾದಿಗರೆ ಪ್ರಧಾನ ಸಮುದಾಯಗಳಾಗುತ್ತವೆ. ಇವರೆಲ್ಲರೂ ಡಾ. ಬಿ. ಆರ್. ಅಂಬೇಡ್ಕರ್ ಅವರ ಸಾಮಾಜಿಕ ಚಿಂತನೆಗಳಿಂದ ಪ್ರಭಾವಿತರಾಗಿ 1922ರಲ್ಲಿ ಸಾಮಾಜಿಕವಾಗಿ ಅಪಮಾನಿಸುವ ಜಾತಿ ಪದನಾಮಗಳನ್ನು ತಿರಸ್ಕರಿಸಲು ಮುಂದಾದರು. ಆಗ ಮದ್ರಾಸು ಶಾಸಕಾಂಗ ಸಭೆಯು ನಿರ್ಣಯ ಅಂಗೀಕರಿಸಿ ಆದಿಕರ್ನಾಟಕ, ಆದಿಆಂಧ್ರ ಮತ್ತು ಆದಿದ್ರಾವಿಡ ಎಂಬ ಪ್ರಾದೇಶಿಕ ಭಾಷಾ ಕುಲ ಸಾಂಸ್ಕೃತಿಕ ಪದಗಳಿಗೆ ಜನ್ಮ ನೀಡಿತ್ತು. ಅದರನ್ವಯ 1931ರ ಜನಗಣತಿಯಲ್ಲಿ ಮೊದಲಿಗೆ ಈ ಪದಗಳು ಪ್ರಯೋಗವಾಗಿದೆ. ಹಿಂದಿನ ಮೈಸೂರು ಪ್ರಾಂತ್ಯದ 9 ಜಿಲ್ಲೆಗಳ ಪೈಕಿ 6 ಜಿಲ್ಲೆಗಳಲ್ಲಿ ಆದಿಕರ್ನಾಟಕ ಮತ್ತು ಆದಿದ್ರಾವಿಡ ಪದಗಳು ಅನೇಕ ಜಿಜ್ಞಾಸೆಗಳಿಗೆ ಅವಕಾಶ ನೀಡಿವೆ. 6 ಜಿಲ್ಲೆಗಳಲ್ಲಿ ಸಂಪೂರ್ಣವಾಗಿ ಮಾದಿಗರೆಲ್ಲರೂ ಆದಿಕರ್ನಾಟಕರಾಗುವುದಿಲ್ಲ, ಛಲವಾದಿಗಳೆಲ್ಲ ಸಾರಸಗಟಾಗಿ ಆದಿದ್ರಾವಿಡರಾಗಿಲ್ಲ. ಛಲವಾದಿಗಳು ಹೆಚ್ಚಾಗಿ ಆದಿಕರ್ನಾಟಕ ಪದ ಪ್ರಯೋಗಿಸುವ ಕಡೆ ಆದಿದ್ರಾವಿಡ ಕಡಿಮೆ ಬಳಸುತ್ತಾರೆ. ಮಾದಿಗರು ಹೆಚ್ಚಾಗಿ ಆದಿಕರ್ನಾಟಕ ಪದ ಪ್ರಯೋಗಿಸುವ ಕಡೆ ಆದಿದ್ರಾವಿಡ ಕಡಿಮೆ ಪ್ರಯೋಗಿಸುತ್ತಾರೆ. ತಮಿಳುನಾಡಿನ ಕೃಷ್ಣಗಿರಿ—ದಿಂಡಿಗಲ್ಲು ಪ್ರಾಂತ್ಯದಿಂದ ಮೈಸೂರು ಬೆಂಗಳೂರು, ಇತರೆ ಪ್ರದೇಶಗಳಿಗೆ ದಿವಾನ್ ರಂಗಚಾರ್ಲು ಕಾಲಘಟ್ಟದಲ್ಲಿ ವಲಸೆ ಬಂದಿರುವ ಅರುಂಧತಿಯಾರ್, ಚಕ್ಕಲಿಯನ್, ತೋಟಿಗಳು ಸಹಜವಾಗಿ ಆದಿದ್ರಾವಿಡ ಮತ್ತು ಮಾದಿಗ ಪದಗಳನ್ನು ಪ್ರಯೋಗಿಸುತ್ತಾರೆ. ಈ ಜಟಿಲತೆ ಬಿಡಿಸಲು ಸಂಖ್ಯಾಶಾಸ್ತ್ರದಲ್ಲಿ ಸ್ಪಷ್ಟವಾದ ದಾರಿಗಳಿವೆ. ಪ್ರಯತ್ನ ಸರಿಯಾದ ದಿಕ್ಕಿನಲ್ಲಿ ನಡೆದಿಲ್ಲದ ಕಾರಣ ಸಾಮಾಜಿಕ ಗೊಂದಲಗಳು ವಿಪರೀತವಾಗಿವೆ. ಬಹುಶಃ 195056ರಲ್ಲಿ ಆದಿಜಾಂಬವ ಪದ ಮೈಸೂರಿನಿಂದ ಸೇರ್ಪಡೆಯಾಗಿದ್ದರೆ, ರಾಜ್ಯದಲ್ಲಿ ಹೊಲೆಯ—ಮಾದಿಗರ ಸಂಖ್ಯಾಬಲ ಗುದ್ದಾಟ ಬೀದಿಗೆ ಬರುತ್ತಿರಲಿಲ್ಲ. ಅಲ್ಲದೆ ಮೈಸೂರು ಸರ್ಕಾರ ರಾಷ್ಟ್ರೀಯ ಬುಡಕಟ್ಟು ಆಯೋಗ ಶಿಫಾರಸ್ಸುಗಳನ್ನು ಪಾಲಿಸದ ಕಾರಣ ಮೂಲ ಅಸ್ಪೃಶ್ಯರು ನರಳುವಂತಾಗಿದೆ.

ಆದಿಕರ್ನಾಟಕ ಪದವನ್ನು ನಿಧಾನವಾಗಿ ಮಾದಿಗ ಸಮುದಾಯ ಕೈಬಿಡುತ್ತಿರುವ ಕಾರಣ ಅದರ ಬೆಳವಣಿಗೆ ದರ ಶೇ 12.5 ರಷ್ಟು ನಕಾರಾತ್ಮಕವಾಗಿ ಇಳಿದಿದೆ. (At Individual SC level, Adi Karnataka, the largest SC have reported negative growth rate of 12.5 percent. The second largest SC, Madiga have registered very high (259.2 percent) growth. Due to the ethnic affinity, it is likely that a large number of Adi Karnataka have reported as Madiga, resulting in fluctuation in the growth rate) ಅತ್ಯಂತ ವೈಜ್ಞಾನಿಕವಾಗಿ 101 ಜಾತಿಗಳ ಸಾಮಾಜಿಕ ಜೋಡಣೆಗಳಾದರೆ ಆದಿಕರ್ನಾಟಕ—ಆದಿದ್ರಾವಿಡ ಪದಗಳು ಒಳ ಮೀಸಲಾತಿ ಹಂಚಿಕೆಗೆ ಅಡ್ಡಿಯಾಗುವುದಿಲ್ಲ.

101 ಜಾತಿಗಳ ಪೈಕಿ 7 ಜಾತಿ—ಉಪಜಾತಿ (ಕೋಷ್ಟಕ ನೋಡಿ) ಸಮೂಹಗಳು ಶೇ. 85ರಷ್ಟು ಜನಸಂಖ್ಯೆಯನ್ನು ಹೊಂದಿವೆ. ಆರ್ಥಿಕ ಚಟುವಟಿಕೆಯಲ್ಲಿ ಭಾಗವಹಿಸುತ್ತಿರುವ ಜಾತಿ—ಉಪಜಾತಿಗಳ ಸಾಪೇಕ್ಷ (Relative) ಮತ್ತು ಸಂಪೂರ್ಣ (Absolute) ಬಡತನ ಪ್ರಮಾಣವನ್ನು ಗುರುತಿಸಬಹುದು. ಉದಾಹರಣೆಗೆ, ಚರ್ಮಕಾರ ಬಾಂಬ್ಹಿ ಸಮೂಹ ಜಾತಿಗಳಲ್ಲಿ, ಶೇ. 63.1ರಷ್ಟು ಕೃಷಿಕಾರ್ಮಿಕರು (2001), ಶೇ 57.9 ರಷ್ಟು ಮಾದಿಗರಲ್ಲಿದ್ದಾರೆ ಹಾಗೂ ಅತಿಕಡಿಮೆ, ಶೇ.20.4 ರಷ್ಟು ಆದಿದ್ರಾವಿಡರಲ್ಲಿದ್ದಾರೆ. ಇನ್ನುಳಿದ 4 ಸಮುದಾಯಗಳಲ್ಲಿ ಕೃಷಿ ಕಾರ್ಮಿಕರು ಮಾದಿಗರಿಗಿಂತ ಕಡಿಮೆ ಇದ್ದಾರೆ. ಮಾದಿಗ ಮತ್ತದರ ಉಪಜಾತಿಗಳ ಆಸ್ತಿ ರಚನೆಯ ವಿನ್ಯಾಸ ಅತಿ ಚಿಕ್ಕದಾಗಿರುವ ಕಾರಣ ಹೆಚ್ಚಾಗಿ ಚರ್ಮಗಾರಿಕೆ, ಕೃಷಿಕಾರ್ಮಿಕ ಮತ್ತು ಪೌರಕಾರ್ಮಿಕರಾಗಿದ್ದಾರೆ. ಬೋವಿ—ಲಂಬಾಣಿ ಸಂಖ್ಯಾಬಲ ಚಿಕ್ಕದಾದರೂ ಶೈಕ್ಷಣಿಕ ಪ್ರಗತಿ ಮಾದಿಗ ಸಮುದಾಯಕ್ಕಿಂತ ಸುಧಾರಿಸಿದೆ. ಆದಿಕರ್ನಾಟಕ—ಆದಿದ್ರಾವಿಡ ಗೊಂದಲ ಕೈಬಿಟ್ಟು ಹೊಲೆಯರ ಶೈಕ್ಷಣಿಕ ಪ್ರಗತಿಯನ್ನು ವಿಶ್ಲೇಷಣೆ ಮಾಡಿದಾಗ ಅವರು ಮಾದಿಗರಿಗಿಂತ ಅತ್ಯುತ್ತಮರಾಗಿದ್ದಾರೆ. ಒಟ್ಟಾರೆ, ಶೇ. 85ರಷ್ಟಿರುವ 7 ಪರಿಶಿಷ್ಟ ಜಾತಿಗಳ ಜಾತಿ—ಉಪಜಾತಿಗಳ ಆಂತರಿಕ ಹಂಚಿಕೆ ಸಮಸ್ಯೆ ಬಗೆಹರಿದರೆ, ಸಾವಿರಕ್ಕಿಂತ ಕಡಿಮೆ ಇರುವ 41 ಜಾತಿಗಳ ವಿಂಗಡಣೆ ಅಸಾಧ್ಯವಾಗದು.

2001ರಲ್ಲಿ ಇದ್ದಂತೆ ಪ್ರಮುಖ ಪರಿಶಿಷ್ಟ ಜಾತಿಗಳು ಹೊಂದಿರುವ ಶಿಕ್ಷಣ ಮಟ್ಟ ಹೀಗಿದೆ:

ಸದ್ಯದ ಸಾಮಾಜಿಕ ಸ್ಥಿತಿಯಲ್ಲಿ ಒಳ ಮೀಸಲಾತಿಯನ್ನು ಅನುಷ್ಠಾನಮಾಡದೆ ಹೋದರೆ ಹೊಲೆಯ—ಮಾದಿಗರಲ್ಲಿರುವ ಕನಿಷ್ಠ ಪ್ರಮಾಣದ ಸಾಮಾಜಿಕ ಸೌಹಾರ್ದ ಮುರಿದುಬೀಳುತ್ತದೆ. ಆಮೇಲೆ ಎಷ್ಟೇ ಪುಂಗಿ ಊದಿದರೂ ಸಹ ಮೈತ್ರಿ ಸಮುದಾಯಗಳಾಗಿ ಉಳಿಯಲಾರವು. ಇವೆರಡೂ ಸಮುದಾಯಗಳು ಅನ್ಯರಿಗೆ ಭಿನ್ನ ಧ್ರುವಗಳಂತೆ ಬಾಹ್ಯವಾಗಿ ಕಂಡರೂ ಸಹ ಅಂತರ್ಗತ ಸಾಮಾಜಿಕ ಸಂದರ್ಭಗಳಲ್ಲಿ ಒಂದು ನವಿರಾದ ಎಳೆಯ ಮೂಲಕ ಬಂಧನ ಹೊಂದಿರುವುದನ್ನು ಕಾಣಬಹುದು. ಸಿ.ಬಸವಲಿಂಗಪ್ಪ ಮತ್ತು ಎನ್. ರಾಚಯ್ಯ ಜೋಡಿ ಕ್ಷುಲ್ಲಕ ರಾಜಕಾರಣಕ್ಕೆ ಬಲಿಪಶುವಾದ ಕಾರಣ, ಇಂದಿಗೂ ಅಂತಹ ಒಂದು ಸಮನ್ವಯತೆ ಇವರಲ್ಲಿ ಕಾಣದಾಗಿದೆ. ಮಾಜಿ ಪ್ರಧಾನಿ ವಿ.ಪಿ.ಸಿಂಗರು ಮಂಡಲ ಆಯೋಗವನ್ನು ಒಪ್ಪಿಕೊಳ್ಳಲು ಸಂಸತ್ತಿನ ಕದತಟ್ಟಲಿಲ್ಲ. ನೇರವಾಗಿ ಸಂಪುಟದ ಮುಂದೆ ತಂದು ಅದನ್ನು ರಾಷ್ಟ್ರದ ಅವಲೋಕನಕ್ಕೆ ನೀಡಿದ್ದರು. ಈ ರೀತಿಯಲ್ಲಿ ಕರ್ನಾಟಕ ಸರ್ಕಾರ ಆಯೋಗದ ಪೂರ್ಣಪಾಠವನ್ನು ಇಷ್ಟೊತ್ತಿಗೆ ಸಾರ್ವಜನಿಕ ವಿಮರ್ಶೆಗೆ ಬಿಟ್ಟಿದ್ದರೆ ಬೇಡ (ಬುಡ್ಗ) ಜಂಗಮ, ಶಿಳ್ಳೇಕ್ಯಾತ ಮತ್ತು ಇತರೆ ಸಣ್ಣಪುಟ್ಟ ಜಾತಿಗಳನ್ನು ಕೈಬಿಡಲಾಗಿದೆಯೇ ಇಲ್ಲವೇ ಎಂಬ ಅಂತೆಕಂತೆ ಮಾತುಗಳಿಗೆ ಸ್ಪಷ್ಟತೆ ಸಿಗುತ್ತಿತ್ತು. ತಿರುಚಿದ ಮಾಹಿತಿಗಳನ್ನು ಅನೇಕರು ಸಾಮಾಜಿಕ ಜಾಲಗಳಲ್ಲಿ ಬಿತ್ತರಿಸಿ ಜನರನ್ನು ಪ್ರಚೋದಿಸುತ್ತಿದ್ದಾರೆ. ಉದಾಹರಣೆಗೆ ಲಿಂಗದೇರ್ ಜಾತಿ ಅಲೆಮಾರಿ ಎಂದು ಉಲ್ಲೇಖಿಸಿದ್ದಾರೆ. ಇವರು ಮೂಲತಃ ಡೋಹಾರ ಕಕ್ಕಯ್ಯ ಕುಲಸ್ಥ ಲಿಂಗಾಯಿತ ಚರ್ಮಕಾರ್ಮಿಕರು. ಅನೇಕರು ಆಯೋಗದ ವರದಿಯ ಪುಟಗಳನ್ನು ತಿರುವದಿದ್ದರೂ ಸಹ ಇಂತಹ ಸುಳ್ಳಿನ ಕಂತೆಗಳನ್ನು ಹಂಚುತ್ತಿದ್ದಾರೆ.

ನ್ಯಾಯಮೂರ್ತಿ ಸಂತೋಷ ಹೆಗಡೆ ತೀರ್ಪನ್ನು ಅನೇಕರು ಒಳ ಮೀಸಲಾತಿಗೆ ವಿರುದ್ಧವಿದೆ ಎಂದು ಅಭಿಮತಿಸುತ್ತಿದ್ದಾರೆ. ಈ ತೀರ್ಪು ಖಂಡಿತವಾಗಿಯೂ ಹಾಗಿಲ್ಲ. ಅದು ಸಂವಿಧಾನದ 341 ಮತ್ತು 342 ಕಲಮುಗಳ ಆಶಯಗಳನ್ನು ಪಾಲಿಸಲು ಪ್ರತಿಪಾದಿಸಿದೆ ಅಷ್ಟೇ. ಈ ಕಲಮುಗಳನ್ವಯ ರಾಷ್ಟ್ರಾಧ್ಯಕ್ಷರು ರಾಜ್ಯ ಅಥವಾ ಒಳಾಡಳಿತ ಪ್ರದೇಶಗಳಿಗೆ ಯಾವುದೇ ಜಾತಿ, ಪಂಗಡ, ಜನಾಂಗಗಳನ್ನು ಪರಿಶಿಷ್ಟ ಜಾತಿ ಮತ್ತು ಪಂಗಡಗಳನ್ನಾಗಿ ಸೇರಿಸುವ ಅಧಿಕಾರ ಹೊಂದಿದ್ದಾರೆ. ಇದಕ್ಕೆ ಪೂರಕವಾಗಿ 341 (2) ಮತ್ತು 342 (2) ಉಪನಿಯಮಾವಳಿಗಳು ಸಂಸತ್ತಿಗೆ ಪರಮಾಧಿಕಾರ ನೀಡಿ ಅದು ಕಾನೂನಿನ ಮೂಲಕ ಸೇರಿಸುವ ಅಥವಾ ಕೈಬಿಡುವ ಅಧಿಕಾರ ಹೊಂದಿದೆ. ಅಂದರೆ, ಸಂಸತ್ತು ಈ ಬಗ್ಗೆ ನಿರ್ಣಯಮಾಡಿ ರಾಷ್ಟ್ರಾಧ್ಯಕ್ಷರ ಅಂಕಿತ ಪಡೆದರೆ ಅದು ಕಾನೂನು ಮಾನ್ಯತೆ ಪಡೆಯುತ್ತದೆ. ಈ ಹಿನ್ನೆಲೆಯಲ್ಲಿ ಅವರ ತೀರ್ಪು ಈ ಸಂಸದೀಯ ಅನುಸಂಧಾನ ಕ್ರಮಗಳನ್ನು ಅನುಸರಿಸಿ ಎಂದು ಸಂವಿಧಾನದ ನಿಲುವುಗಳನ್ನು ಸ್ಪಷ್ಟಪಡಿಸಿದೆ.

ಇಂದು ರಾಜಕೀಯವಾಗಿ ಹೊಲೆಯರು ಪ್ರಬಲರು. ಮುಂದೊಂದು ದಿನ ಮಾದಿಗರ ರಾಜಕಾರಣ ಪಾತಳಕ್ಕೆ ಕುಸಿದರೆ ಆಶ್ಚರ್ಯಪಡಬೇಕಿಲ್ಲ. ಒಳ ಮೀಸಲಾತಿ ವಿಚಾರದಲ್ಲಿ ಇವೆರಡೂ ಸಮುದಾಯಗಳು ನೈಜ ಅಂಬೇಡ್ಕರ್ ಅನುಯಾಯಿಗಳಾಗಬೇಕಿದೆ. ಸಾಮಾಜಿಕ ಸಮಾನತೆ ಸರ್ವಜನರೊಳಗೆ ನೈಜವಾಗಿ ಧಾರಣವಾಗದ ಕಾರಣ ಬಹುಸಂಖ್ಯಾತ ಶೋಷಿತರು ಹಲವು ಅಸಮಾನತೆಯ ಆಗರದಲ್ಲಿ ಜೀವಿಸುತ್ತಿದ್ದಾರೆ. ಇಷ್ಟೊತ್ತಿಗೆ ಸಾಮಾಜಿಕ ಸಮಾನತೆ ಸರ್ವರೊಳಗೂ ಒಂದಾಗಿ ದುಡಿಯುವ ಅವಕಾಶಗಳು ಮುಕ್ತವಾಗಿ ಸಮನಾಂತರ ಸ್ವರೂಪದಲ್ಲಿ ಸಿಗುತ್ತಿದ್ದರೆ ಯಾರೂ ಮೀಸಲಾತಿಯ ಹಿಂದೆ ಬೀಳುತ್ತಿರಲಿಲ್ಲ. ಒಟ್ಟಾರೆ, ಒಳ ಮೀಸಲಾತಿ ಅನುಷ್ಠಾನಗಳಿಂದ ಪರಿಶಿಷ್ಟ ಜಾತಿಗಳ ಒಳಗೆ ಕ್ರೋಢೀಕರಿಸಿರುವ ಸಾಮಾಜಿಕ ವೈಷಮ್ಯಗಳು ನಿಧಾನವಾಗಿ ಕರಗುತ್ತವೆ. ಹೊಲೆಯ—ಮಾದಿಗ ಮತ್ತು ಇತರೆ ಸಮುದಾಯಗಳು ಸೌಹಾರ್ದಯುತವಾಗಿ ನೂತನ ಸಾವಿಂಧಾನಿಕ ಮನ್ವಂತರಗಳಿಗೆ ಕೈ ಜೋಡಿಸಬೇಕಿದೆ.

*ಲೇಖಕರು ಸಂಶೋಧಕರು ಮತ್ತು ಸಾಮಾಜಿಕ ಚಿಂತಕರು, ಸಾಮಾಜಿಕ ಮತ್ತು ಆರ್ಥಿಕ ಅಧ್ಯಯನ ಸಂಸ್ಥೆ, ಬೆಂಗಳೂರು.

ಎನ್.ಎಸ್.ಶಂಕರ್

ಬಿಜೆಪಿ ವಿರೋಧಿ ಒಕ್ಕೂಟ ಸಾಧ್ಯವೇ?

ಜುಲೈ ೨೦೧೮

ಶಾಂತಲಾ ದಾಮ್ಲೆ

ಹೋರಾಟಗಾರ ಅಭ್ಯರ್ಥಿ ಚುನಾವಣಾ ಬವಣೆ

ಜುಲೈ ೨೦೧೮

ಶ್ರೀಶೈಲ ಆಲದಹಳ್ಳಿ

ಸಂಡೂರು ಕುಮಾರಸ್ವಾಮಿ ಬೆಟ್ಟಕ್ಕೆ ಗಣಿ ಕಂಟಕ!

ಜುಲೈ ೨೦೧೮

ಡಾ.ಡಿ.ಸಿ.ನಂಜುಂಡ

ನಿಮ್ಮ ಆನ್‍ಲೈನ್ ಮಾಹಿತಿ ಎಷ್ಟು ಸುರಕ್ಷಿತ?

ಜೂನ್ ೨೦೧೮

ಪ್ರೊ. ರವೀಂದ್ರ ರೇಷ್ಮೆ

ಅಸೆಂಬ್ಲಿ ಫಲಿತಾಂಶ - ಪಕ್ಷ ರಾಜಕಾರಣದ ಪತನ

ಜೂನ್ ೨೦೧೮

ಡಾ.ಟಿ.ಆರ್.ಚಂದ್ರಶೇಖರ

ಭಾರತದಲ್ಲಿ ಬ್ಯಾಂಕಿಂಗ್ ಬುಡ ಗಡಗಡ!

ಮೇ ೨೦೧೮

ಸುಧೀಂದ್ರ ಹಾಲ್ದೊಡ್ಡೇರಿ

ಬೆಳ್ಳಂದೂರಿನಲ್ಲಿ ನೊರೆ ಹೊತ್ತಿ ಉರಿದೊಡೆ...!

ಮೇ ೨೦೧೮

ರಹಮತ್ ತರೀಕೆರೆ

ಪ್ರತಿಮೆಗಳ ರಾಜಕಾರಣ

ಎಪ್ರಿಲ್ ೨೦೧೮

ಹನುಮಂತರೆಡ್ಡಿ ಶಿರೂರು

ಸಿದ್ದರಾಮಯ್ಯನವರ ಕಲ್ಯಾಣ ರಾಜ್ಯ !

ಎಪ್ರಿಲ್ ೨೦೧೮

ದಾಸನೂರು ಕೂಸಣ್ಣ

ಒಳ ಮೀಸಲಾತಿಏಕೆ ಬೇಕು?

ಮಾರ್ಚ್ ೨೦೧೮

ರೇಣುಕಾ ನಿಡಗುಂದಿ

ಮೊಲೆ ಕತ್ತರಿಸಿಕೊಟ್ಟ ನಂಗೇಲಿ ನೆನಪು!

ಮಾರ್ಚ್ ೨೦೧೮

ಡಿ. ಎಸ್. ನಾಗಭೂಷಣ

ಕನ್ನಡ ಮೊದಲು ನಂತರ ಇಂಗ್ಲಿಷ್

ಮಾರ್ಚ್ ೨೦೧೮

ಡಾ. ವಾಸು ಎಚ್. ವಿ

ಈ ಹೊತ್ತಿನ ಕರ್ನಾಟಕ: ಪರ್ಯಾಯ ರಾಜಕಾರಣ

ಫೆಬ್ರವರಿ ೨೦೧೮

ಡಾ.ಕಿರಣ್ ಎಂ.ಗಾಜನೂರು

‘ನಿಮ್ಮ ದನದ ಬಾಲ ನೀವೇ ಇಟ್ಟುಕೊಳ್ಳಿ’

ಫೆಬ್ರವರಿ ೨೦೧೮