\

2nd ಮಾರ್ಚ್ ೨೦೧೮

ಕಾವೇರಿವಿವಾದದ ತಾತ್ಕಾಲಿಕ ಅಂತ್ಯ

ಚಾಣಕ್ಯ

ಸರ್ವೋಚ್ಚ ನ್ಯಾಯಾಲಯದ ತೀರ್ಪಿನ ನಂತರವೂ ಕಾವೇರಿ ವಿವಾದ ಬಗೆಹರಿದಿದೆ ಹಾಗೂ ಮುಂದೊಂದು ವರ್ಷ ಕಡಿಮೆ ಮಳೆಯಾದಾಗ ಹಿಂದೆ ನಾವು ನೋಡಿರುವ ರೀತಿಯ ಬಿಕ್ಕಟ್ಟು ಸೃಷ್ಟಿಯಾಗದಿರದು ಎಂದು ಖಾತ್ರಿಯಿಂದ ಹೇಳಲು ಸಾಧ್ಯವಿಲ್ಲ.

ಫೆಬ್ರವರಿ16ರಂದು ಸರ್ವೋಚ್ಚ ನ್ಯಾಯಾಲವು ಕಾವೇರಿ ನದಿ ವಿವಾದಕ್ಕೆ ಸಂಬಂಧಿಸಿದ ತನ್ನ ಅಂತಿಮ ತೀರ್ಪನ್ನು ನೀಡಿತು. ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರ, ನ್ಯಾಯಮೂರ್ತಿ ಅಮಿತಾವ ರಾಯ್ ಮತ್ತು ನ್ಯಾಯಮೂರ್ತಿ ಎ.ಎಂ.ಕನ್ವೀಲ್ಕರ್ ಒಳಗೊಂಡ ಮೂರು ನ್ಯಾಯಮೂರ್ತಿಗಳ ಪೀಠವು ಒಂದು ದಶಕಕ್ಕೂ ಹೆಚ್ಚು ಕಾಲ ಸರ್ವೋಚ್ಚ ನ್ಯಾಯಾಲಯದಲ್ಲಿ ನಡೆದ ಮೊಕದ್ದಮೆಯನ್ನು 465 ಪುಟಗಳ ಸುದೀರ್ಘ ತೀರ್ಪಿನಲ್ಲಿ ಬಗೆಹರಿಸುವ ಪ್ರಯತ್ನವನ್ನು ಮಾಡಿದೆ. ಸರ್ವೋಚ್ಚ ನ್ಯಾಯಾಲಯದ ಈ ತೀರ್ಪಿನಿಂದ ವಿವಾದದಲ್ಲಿ ಭಾಗಿಯಾಗಿದ್ದ ಮೂರು ರಾಜ್ಯಗಳು (ತಮಿಳುನಾಡು, ಕರ್ನಾಟಕ ಮತ್ತು ಕೇರಳ) ಹಾಗೂ ಒಂದು ಕೇಂದ್ರಾಡಳಿತ ಪ್ರದೇಶಕ್ಕೆ (ಪುದುಚೇರಿ) ತೃಪ್ತಿಯಾಗದಿರಬಹುದು. ಈಗಾಗಲೆ ಈಗ ನೀಡಿರುವ ತೀರ್ಪನ್ನು ಪ್ರಶ್ನಿಸಿ, ಮತ್ತೆ ಸರ್ವೋಚ್ಚ ನ್ಯಾಯಾಲಯದ ದೊಡ್ಡ ಬೆಂಚಿನಲ್ಲಿ ಪರಿಶೀಲನಾ ಅರ್ಜಿ ಸಲ್ಲಿಸಬೇಕು ಎನ್ನುವ ಮಾತುಗಳು ಸಹ ಅಲ್ಲಲ್ಲಿ ಕೇಳಿಬಂದಿವೆ. ಆದರೂ 130 ವರ್ಷಗಳಿಂದ ಬಗೆಹರಿಯದೆ ಮುಂದುವರೆಯುತ್ತಲೇ ಇರುವ ಭಾರತದ ಅತ್ಯಂತ ಹಳೆಯ ನದಿ ನೀರು ಹಂಚಿಕೆ ವಿವಾದಕ್ಕೆ ಒಂದು ತಾರ್ಕಿಕ ಅಂತ್ಯ ದೊರಕಿದೆ ಎಂದರೆ ತಪ್ಪಾಗಲಾರದು.

ಈ ಮಾತಿನ ವಿವರಣೆಗೆ ಕಾವೇರಿ ವಿವಾದದ ಇದುವರೆಗಿನ ಇತಿಹಾಸದ ಸಂಕ್ಷಿಪ್ತ ಇತಿಹಾಸವನ್ನೇ ಗಮನಿಸಿ. ಸರ್ವೋಚ್ಚ ನ್ಯಾಯಾಲಯದಲ್ಲಿಯೆ 2007ರಿಂದ ಮೊಕದ್ದಮೆ ನಡೆದಿದೆ. ಅದಕ್ಕೆ ಹಿಂದೆ 1990ರಲ್ಲಿ ಭಾರತ ಸರ್ಕಾರವು ಕಾವೇರಿ ಟ್ರಿಬ್ಯುನಲ್ ನೇಮಿಸಿತ್ತು. 16 ವರ್ಷಗಳ ಕಾಲ ಕಾವೇರಿ ಮತ್ತು ಅದರ ಉಪನದಿಗಳ ನೀರಿನ ಪಾಲನ್ನು ಕೇಳುತ್ತಿದ್ದ ಮೂರು ರಾಜ್ಯಗಳು ಮತ್ತು ಒಂದು ಕೇಂದ್ರಾಡಳಿತ ಪ್ರದೇಶದ — ತಮಿಳುನಾಡು, ಕರ್ನಾಟಕ, ಕೇರಳ ಮತ್ತು ಪುದುಚೇರಿ —ವಾದವನ್ನು ಆಲಿಸಿದ ನಂತರ 2007ರಲ್ಲಿ ಟ್ರಿಬ್ಯುನಲ್ ತನ್ನ ಅಂತಿಮ ವರದಿಯನ್ನು ಸಲ್ಲಿಸಿತ್ತು. ಅದನ್ನು ಪ್ರಶ್ನಿಸಿ ಈ ವಿವಾದದಲ್ಲಿ ಭಾಗಿಯಾಗಿದ್ದ ಎಲ್ಲ ರಾಜ್ಯಗಳೂ ಸರ್ವೋಚ್ಚ ನ್ಯಾಯಾಲಯಕ್ಕೆ ಮೊರೆ ಹೋಗಿದ್ದವು. ಸ್ವತಂತ್ರಪೂರ್ವದ ಇತಿಹಾಸವನ್ನು ಅವಲೋಕಿಸುವುದಾದರೆ ಮದ್ರಾಸ್ ಮತ್ತು ಮೈಸೂರು ನಡುವೆ 19ನೆಯ ಶತಮಾನದಲ್ಲಿಯೇ ಪ್ರಾರಂಭವಾದ ಕಾವೇರಿ ನದಿನೀರಿನ ಹಂಚಿಕೆಯ ವಿವಾದವು 1892 ಮತ್ತು 1924ರಲ್ಲಿ ಎರಡು ಒಪ್ಪಂದಗಳಿಗೆ ಸಹ ದಾರಿ ಮಾಡಿಕೊಟ್ಟಿತ್ತು. 1924ರ ಒಪ್ಪಂದ ಅಂದಿನ ಮದ್ರಾಸ್ ಪ್ರೆಸಿಡೆನ್ಸಿ ಮತ್ತು ಮೈಸೂರು ದೇಶಿ ಸಂಸ್ಥಾನದ ನಡುವೆ ಏರ್ಪಟ್ಟಿತ್ತು. ಆಗ ಅಸ್ತಿತ್ವದಲ್ಲಿ ಇಲ್ಲದ ಕೇರಳ (ರಾಜ್ಯವಾಗಿದ್ದು 1956ರಲ್ಲಿ) ಮತ್ತು ಪುದುಚೇರಿ (ಫ್ರೆಂಚರ ಆಡಳಿತದಿಂದ ಭಾರತದಲ್ಲಿ ವಿಲೀನವಾಗಿ ಕೇಂದ್ರಾಡಳಿತ ಪ್ರದೇಶವಾಗಿದ್ದು 1962ರಲ್ಲಿ) ತಮ್ಮ ಪಾಲಿನ ಕಾವೇರಿ ಮತ್ತು ಅದರ ಉಪನದಿಗಳ ನೀರಿಗಾಗಿ 1990ರ ನಂತರದ ಟ್ರಿಬ್ಯುನಲ್ ಹಾಗೂ ಸರ್ವೋಚ್ಚ ನ್ಯಾಯಾಲಯಗಳ ನ್ಯಾಯತೀರ್ಮಾನದ ಪ್ರಕ್ರಿಯೆಗಳಲ್ಲಿ ಭಾಗವಹಿಸಿದವು.

ಈಗ ಸರ್ವೋಚ್ಚ ನ್ಯಾಯಾಲಯದಲ್ಲಿ ನಡೆದ ಮೊಕದ್ದಮೆಯಲ್ಲಿ ಈ ಇತಿಹಾಸದ ಎಲ್ಲ ಆಯಾಮಗಳು ಮತ್ತು ಅವುಗಳನ್ನು ಟ್ರಿಬ್ಯುನಲ್ ಹೇಗೆ ನಿರ್ವಹಿಸಿತು ಎನ್ನುವುದರ ಬಗ್ಗೆ ನಾಲ್ಕೂ ಪಕ್ಷಗಳು ತಮ್ಮ ನಿಲುವುಗಳನ್ನು ಮಂಡಿಸಿದವು. ಆ ನಿಲುವುಗಳ ಕಾನೂನಾತ್ಮಕ ವಿಶ್ಲೇಷಣೆಯನ್ನು ನಡೆಸಿದ ಸರ್ವೋಚ್ಚ ನ್ಯಾಯಾಲಯವು ತನ್ನ ತೀರ್ಪನ್ನು ಪ್ರಕಟಿಸಿದೆ. ಈಗ ವಿವಾದದ ಭಾಗಿದಾರರಿಗೆ ಇರುವ ಆಯ್ಕೆಗಳು ಸೀಮಿತವಾದವು. ಪುನರ್‍ಪರಿಶೀಲನಾ ಅರ್ಜಿಯನ್ನು ಸಲ್ಲಿಸಿದರೆ ಈಗ ತೀರ್ಪು ನೀಡಿರುವ ನ್ಯಾಯಮೂರ್ತಿ ಪೀಠವೇ ವಿಚಾರಣೆಗೆ ಕೈಗೆತ್ತಿಕೊಳ್ಳಲಿದೆ. ಇಂತಹ ಪುನರ್‍ಪರಿಶೀಲನೆ ವ್ಯಾಪ್ತಿ ಸೀಮಿತವಾಗಿರುತ್ತದೆ. ತೀರ್ಪಿನ ಆಚೆಯ ವಿಚಾರಗಳನ್ನು ಮತ್ತು ಹೊಸ ಸಾಕ್ಷ್ಯಾಧಾರಗಳನ್ನು ಮಂಡಿಸಲು ಹೆಚ್ಚಿನ ಅವಕಾಶವಿರುವುದಿಲ್ಲ.

ಹಾಗಾದರೆ ಸರ್ವೋಚ್ಚ ನ್ಯಾಯಾಲಯದ ತೀರ್ಪನ್ನು ಇಡಿಯಾಗಿ ಓದಿದಾಗ ಅದರಲ್ಲಿ ಕಂಡುಬರುವ ಮುಖ್ಯ ಅಂಶಗಳೇನು?

ಮೊದಲಿಗೆ, ಇಡೀ ವಿವಾದವನ್ನು ಬಗೆಹರಿಸುವಲ್ಲಿ ಕಾವೇರಿ ಟ್ರಿಬ್ಯುನಲ್ ಬಳಸಿದ ಕಾರ್ಯವಿಧಾನವನ್ನು ಸರ್ವೋಚ್ಚ ನ್ಯಾಯಾಲಯವು ದೃಢಪಡಿಸಿದೆ. ಅಂದರೆ ನೀರಿನ ಲಭ್ಯತೆ ಮತ್ತು ಆಯಕಟ್ಟಿನ ಪ್ರಮಾಣ ಇತ್ಯಾದಿ ವಿಷಯಗಳ ತೀರ್ಮಾನದ ಸಂದರ್ಭದಲ್ಲಿ ಸಾಕ್ಷ್ಯಾಧಾರಗಳನ್ನು ಪರಿಗಣಿಸುವಾಗ ಮತ್ತು ವಿವಿಧ ಕಾನೂನಿಗೆ ಸಂಬಂಧಿಸಿದ ವಾದಗಳನ್ನು ನಿರ್ಣಯಿಸಲು ನ್ಯಾಯತತ್ವಗಳನ್ನು ಬಳಸುವಾಗ ಟ್ರಿಬ್ಯುನಲ್ ಸರಿಯಾಗಿ ಕೆಲಸ ಮಾಡಿತು ಎನ್ನುವುದನ್ನು ಈ ತೀರ್ಪು ಪುನರುಚ್ಚರಿಸುತ್ತದೆ.

ಆದುದರಿಂದ 1892 ಮತ್ತು 1924ರ ಒಪ್ಪಂದಗಳು ಶೂನ್ಯ ಮತ್ತು ನಿರರ್ಥಕ ಎಂದು ಕರ್ನಾಟಕವು ಮಾಡಿದ ವಾದವನ್ನು ಸರ್ವೋಚ್ಚ ನ್ಯಾಯಾಲಯವು ಒಪ್ಪಿಲ್ಲ. ಇವು 1947ರಲ್ಲಿ ಸ್ವಾತಂತ್ರ್ಯ ಬಂದಾಗ ನಷ್ಟವಾದರೆ, ಆ ವಾದವನ್ನು ಕರ್ನಾಟಕವು ಆಗಲೆ ಮಾಡಬೇಕಿತ್ತು ಎಂದು ಅದು ಹೇಳಿದೆ. ಹಾಗಾಗಿ ಈ ಒಪ್ಪಂದಗಳ ಆಧಾರದ ಮೇಲೆ ಟ್ರಿಬ್ಯುನಲ್ ಮಾಡಿರುವ ನೀರಿನ ಹಂಚಿಕೆ ಸರಿಯಿದೆಯೆಂದು ತೀರ್ಪಿನಲ್ಲಿ ಘೋಷಿಸಲಾಗಿದೆ. ಟ್ರಿಬ್ಯುನಲ್ಲಿನ ತೀರ್ಪನ್ನು ಸರ್ವೋಚ್ಚ ನ್ಯಾಯಾಲಯದ ಡಿಕ್ರೀ ಎಂದೇ ಪರಿಗಣಿಸಬೇಕು. ಇದು ಎರಡನೆಯ ಮುಖ್ಯ ಅಂಶ.

ಆದರೆ ಸರ್ವೋಚ್ಚ ನ್ಯಾಯಾಲಯವು ಮಾಡಿರುವ ಒಂದು ಬದಲಾವಣೆಯೆಂದರೆ ಕರ್ನಾಟಕದ (ಅದರಲ್ಲೂ ಬೆಂಗಳೂರಿನ) ಕುಡಿಯುವ ನೀರಿನ ಮತ್ತು ಕೈಗಾರಿಕೆಗಳ ಅಗತ್ಯವಿರುವ ನೀರಿನ ಪ್ರಮಾಣವನ್ನು ಟ್ರಿಬ್ಯುನಲ್ ಕಡಿಮೆಮಾಡಿತು ಎಂದು ಗುರುತಿಸಿ, ಬೆಂಗಳೂರಿಗೆ 4.75 ಟಿ.ಎಮ್.ಸಿ. ನೀರನ್ನು ಹೆಚ್ಚುವರಿಯಾಗಿ ನೀಡಿದ್ದು. ಅದರ ಜೊತೆಗೆ ಟ್ರಿಬ್ಯುನಲ್ ಲೆಕ್ಕಕ್ಕೆ ತೆಗೆದುಕೊಂಡಿರದ ತಮಿಳುನಾಡಿನ ಅಂತರ್ಜಲದ ಪ್ರಮಾಣವನ್ನು 20 ಟಿ.ಎಮ್.ಸಿ.ಯಷ್ಟು ಎಂದು ನ್ಯಾಯಾಲಯವು ಪರಿಗಣಿಸುತ್ತ, ಅದರ ಅರ್ಧದಷ್ಟನ್ನು ಅಂದರೆ 10 ಟಿ.ಎಮ್.ಸಿ. ಕಾವೇರಿಯ ನೀರನ್ನು ಕರ್ನಾಟಕದ ಪಾಲಿಗೆ ವರ್ಗಾಯಿಸಿದೆ.

ಈ ಹಿನ್ನೆಲೆಯಲ್ಲಿ ಸರ್ವೋಚ್ಚ ನ್ಯಾಯಾಲಯವು ಹೇಳಿರುವ ಒಂದು ಮಾತು ಬಹಳ ಮುಖ್ಯವಾದುದು. ಅದೇನೆಂದರೆ ಕುಡಿಯುವ ನೀರಿನ ಅಗತ್ಯಕ್ಕೆ ಮಿಕ್ಕೆಲ್ಲ ಅವಶ್ಯಕತೆಗಳಿಗಿಂತ ಹೆಚ್ಚಿನ ಆದ್ಯತೆ ಕೊಡಬೇಕು. ಬೆಂಗಳೂರಿನ 2/3 ಭಾಗ ಕಾವೇರಿ ಕೊಳ್ಳದ ಹೊರಗಿದೆ ಎನ್ನುವ ಟ್ರಿಬ್ಯುನಲ್ ನಿರ್ಣಯವನ್ನು ತಿರಸ್ಕರಿಸಿ, ಜಾಗತಿಕ ನಗರವಾಗಿ ಬೆಂಗಳೂರಿನ ಸ್ಥಾನಮಾನವನ್ನು ಗಮನಿಸಿ ಅದರ ಅಗತ್ಯಗಳನ್ನು ಪೂರೈಸಬೇಕು ಎಂದು ಈ ತೀರ್ಪಿನಲ್ಲಿ ಹೇಳಲಾಗಿದೆ. ಇದು ಬೆಂಗಳೂರಿನ ನೀರಿನ ಗಂಭೀರ ಬಿಕ್ಕಟ್ಟು ತಲೆದೋರಲಿದೆ ಎಂದು ಚರ್ಚೆಯಾಗುತ್ತಿದ್ದ ವಾರದಲ್ಲಿಯೇ ಸರ್ವೋಚ್ಚ ನ್ಯಾಯಾಲಯದ ಮುಖ್ಯ ನ್ಯಾಯಾಧೀಶರ ಮೂಲಕ ಕೇಳಿಬಂದಿರುವುದು ಗಮನಾರ್ಹ. ಇದು ತೀರ್ಪಿನಲ್ಲಿ ಗುರುತಿಸಬೇಕಿರುವ ಮೂರನೆಯ ಅಂಶ.

ನಾಲ್ಕನೆಯದಾಗಿ, ತಮಿಳುನಾಡಿಗೆ ಕರ್ನಾಟಕದಿಂದ ಹೋಗಬೇಕಿದ್ದ ನೀರಿನ ಪ್ರಮಾಣವನ್ನು 14.75 ಟಿ.ಎಮ್.ಸಿ.ಗಳಷ್ಟು ಕಡಿಮೆ ಮಾಡಿ, 177.25 ಟಿ.ಎಮ್.ಸಿ.ಗೆ ನಿಗದಿಪಡಿಸಲಾಗಿದೆ. ಟ್ರಿಬ್ಯುನಲ್ ಈ ಪ್ರಮಾಣವನ್ನು 192 ಟಿ.ಎಮ್.ಸಿ.ಯೆಂದು ಹೇಳಿತ್ತು. ಆದರೆ ಕರ್ನಾಟಕವು ರಾಜ್ಯದ ಗಡಿಯಲ್ಲಿರುವ ಬಿಳಿಗುಂಡ್ಲುವಿನಲ್ಲಿ ಕಡ್ಡಾಯವಾಗಿ ನಿಗದಿಯಾಗಿರುವ ಪ್ರತಿ ತಿಂಗಳ ಪ್ರಮಾಣದಷ್ಟು ಬಿಡಲೆಬೇಕು ಎಂದು ಸರ್ವೋಚ್ಚ ನ್ಯಾಯಾಲಯವು ತಿಳಿಸಿದೆ. ನ್ಯಾಯಾಲಯದ ಈ ಆಜ್ಞೆಯು ಮುಂದಿನ 15 ವರ್ಷಗಳಿಗೆ ಅನ್ವಯವಾಗುತ್ತದೆ. ಮಳೆ ಕಡಿಮೆಯಿರುವಾಗ ಪ್ರಮಾಣಾನುಗತವಾಗಿ ನೀರು ಬಿಡಬೇಕು ಎನ್ನುವ ಸೂಚನೆಯೂ ಇಲ್ಲಿದೆ.

ಈ ಉದ್ದೇಶಕ್ಕಾಗಿ ನ್ಯಾಯಾಲಯವೆ ಕಾವೇರಿ ನದಿ ನಿರ್ವಹಣಾ ಪ್ರಾಧಿಕಾರವನ್ನು ರಚಿಸಿಲ್ಲದಿದ್ದರೂ, ಕೇಂದ್ರ ಸರ್ಕಾರಕ್ಕೆ ಆರು ವಾರಗಳೊಳಗೆ ಒಂದು ವ್ಯವಸ್ಥೆಯನ್ನು ಮಾಡಬೇಕೆಂದು ಸೂಚನೆ ನೀಡಿದೆ. ಪ್ರಾಧಿಕಾರವೆಂಬ ಪದವನ್ನು ಈ ತೀರ್ಪಿನಲ್ಲಿ ಬಳಸಲಾಗಿಲ್ಲ. ಆದರೆ ಟ್ರಿಬ್ಯುನಲ್ಲಿನ ತೀರ್ಪಿಗೆ ಅನುಗುಣವಾಗಿ ಸರ್ವೋಚ್ಚ ನ್ಯಾಯಾಲಯದ ಪ್ರಸಕ್ತ ತೀರ್ಪನ್ನು ಅನುಷ್ಠಾನಗೊಳಿಸಲು ಯೋಜನೆಯನ್ನು ರೂಪಿಸಬೇಕು ಎಂದು ಮಾತ್ರ ಹೇಳಲಾಗಿದೆ. ಈ ಯೋಜನೆಯನ್ನು ರೂಪಿಸಲು ಹೆಚ್ಚುವರಿ ಸಮಯವನ್ನು ಸಹ ನೀಡಲಾಗುವುದಿಲ್ಲ ಎಂದು ಸ್ಪಷ್ಟಪಡಿಸಿದೆ. ಇದು ಐದನೆಯ ಅಂಶ.

ಆರನೆಯದಾಗಿ, ಕಾವೇರಿ ಕೊಳ್ಳವನ್ನು ನೀರಿನ ಕೊರತೆಯಿರುವ ಪ್ರದೇಶವೆಂದು ಗುರುತಿಸಿರುವ ನ್ಯಾಯಾಲಯವು ನೀರನ್ನು ನಿಗದಿಯಾಗಿರುವ ಉದ್ದೇಶಕ್ಕೆ ಆಯಾ ನಿಗದಿತ ಪ್ರದೇಶಗಳಲ್ಲಿ ಮಾತ್ರ ಬಳಸಬೇಕು ಎಂದೂ ಆದೇಶಿಸಿದೆ. ನೀರಿನ ಬಳಕೆಯ ಹಕ್ಕನ್ನು ಪೂರ್ವಬಳಕೆಯ ತತ್ವದ ಆಧಾರದ ಮೇಲೆ ನಾಲ್ಕೂ ಪಾಲುದಾರರಿಗೆ ಹಂಚುತ್ತಿರುವುದರಿಂದ, ಅದನ್ನು ಮತ್ತೆಲ್ಲಿಗೊ ವರ್ಗಾಯಿಸಲು ಅವಕಾಶವಿಲ್ಲ. ಉದಾಹರಣೆಗೆ ತೀರ್ಪಿನಲ್ಲಿ ಎರಡನೆಯ ಬೆಳೆಯನ್ನು ಬೆಳೆಯಲು ತಮಿಳುನಾಡಿನಲ್ಲಿ 1924ಕ್ಕೆ ಮೊದಲು ಎಲ್ಲಿ ಬೆಳೆಯಲಾಗುತ್ತಿತ್ತೊ ಅಲ್ಲಿಗೆ ಮತ್ತು ಪುದುಚೇರಿ ವ್ಯಾಪ್ತಿಯ ಭೂಮಿಗೆ ಮಾತ್ರ ನೀರನ್ನು ಕೊಡಲು ಅವಕಾಶವಿದೆ. ಬೇರೆಡೆ ಇಲ್ಲ.

ಇವೆಲ್ಲದರ ನಡುವೆ ಸರ್ವೋಚ್ಚ ನ್ಯಾಯಾಲಯದ ತೀರ್ಪಿನ ನಂತರವೂ ಕಾವೇರಿ ವಿವಾದ ಬಗೆಹರಿದಿದೆ, ಮುಂದೊಂದು ವರ್ಷ ಕಡಿಮೆ ಮಳೆಯಾದಾಗ ಹಿಂದೆ ನಾವು ನೋಡಿರುವ ರೀತಿಯ ಬಿಕ್ಕಟ್ಟು ಸೃಷ್ಟಿಯಾಗದಿರದು ಎಂದು ಖಾತ್ರಿಯಿಂದ ಹೇಳಲು ಸಾಧ್ಯವಿಲ್ಲ. ನದಿಗಳು ಯಾವುದೇ ರಾಜ್ಯದ ಸೊತ್ತಲ್ಲ, ಅವು ಇಡೀ ರಾಷ್ಟ್ರದ ಆಸ್ತಿ ಎಂದು ತೀರ್ಪಿನಲ್ಲಿ ಹೇಳಲಾಗಿದೆ. ಜೊತೆಗೆ ತೀರ್ಪನ್ನು ಅನುಷ್ಠಾನಮಾಡಲೇಬೇಕು, ಕೇಂದ್ರ ಅಥವಾ ರಾಜ್ಯಸರ್ಕಾರಗಳು ನಿರ್ಲಕ್ಷಿಸುವಂತಿಲ್ಲ ಎಂದೇನೊ ತೀರ್ಪಿನಲ್ಲಿ ಹೇಳಲಾಗಿದೆ. ಆದರೆ ರಾಜ್ಯಗಳು ತಮ್ಮ ವಾದಗಳನ್ನು ಮುಂದಿಡುವಾಗ ಗರಿಷ್ಠವಾದಿ (maximalist) ಮನೋಭಾವವನ್ನು ಪ್ರದರ್ಶಿಸಿವೆ. ಉದಾಹರಣೆಗೆ, ತಮಿಳುನಾಡು 1880ಕ್ಕೆ ಮೊದಲು ಕಾವೇರಿಯಲ್ಲಿ ನೀರು ಹರಿದುಹೋಗುತ್ತಿದ್ದಂತೆ ಇರುವ ಪರಿಸ್ಥಿತಿ ಮರುಕಳಿಸಿದರೆ ಮಾತ್ರ ತನಗೆ ನ್ಯಾಯ ಸಿಗುತ್ತದೆ ಎನ್ನುವ ನಿಲುವನ್ನು ತಳೆದಿದೆ. ಅದಕ್ಕೆ ಮೊದಲು ಮೈಸೂರು ಪ್ರಾಂತ್ಯದಲ್ಲಿ ನದಿಪಾತ್ರದಿಂದ ಕೆಲವು ಕಾಲುವೆಗಳ ಮೂಲಕ ನೀರು ಬಳಸುತ್ತಿದ್ದಂತೆ ಈಗಲೂ ಇರಬೇಕು. ಕರ್ನಾಟಕ ಅಣೆಕಟ್ಟುಗಳನ್ನು ಕಟ್ಟಿ, ಕೆರೆಗಳಿಗೆ ನೀರನ್ನು ತುಂಬಿಸಿಕೊಳ್ಳುವ ಮೂಲಕ ಕಾವೇರಿಯನ್ನು ನದಿಯಾಗಿ ಉಳಿಸಿಲ್ಲ, ಚರಂಡಿಯಾಗಿಸಿದೆ ಎನ್ನುತ್ತಾರೆ ಅರ್ಥಶಾಸ್ತ್ರಜ್ಞ ಎಸ್.ಜನಕರಾಜನ್.

ಇದಕ್ಕೆ ಪ್ರತಿಯಾಗಿ ಕನ್ನಡಿಗರು ತಮ್ಮ ಪ್ರದೇಶದಲ್ಲಿ ಸಂಗ್ರಹವಾಗುವ ನೀರಿನ ಮೇಲೆ ತಮಗೆ ಪರಮಾಧಿಕಾರವಿದೆ ಎನ್ನುವ ನೆಲೆಯಿಂದ ವಾದಿಸುತ್ತಾರೆ. ತನ್ನ ಅಚ್ಚುಕಟ್ಟು ಪ್ರದೇಶವನ್ನು 1924ರ ಒಪ್ಪಂದಕ್ಕೆ ಅನುಗುಣವಾಗಿ ವಿಸ್ತರಿಸಲು ಮದ್ರಾಸ್ ಪ್ರಾಂತ್ಯವು ಅಡ್ಡಿಪಡಿಸಿದ್ದರಿಂದ ಕರ್ನಾಟಕವು ತನಗೆ ಐತಿಹಾಸಿಕವಾಗಿ ಅನ್ಯಾಯವಾಗಿದೆ ಎಂದೂ ವಾದಿಸಿದೆ. ಸರ್ವೋಚ್ಚ ನ್ಯಾಯಾಲಯವು ಸಹ ಈ ವಾದದಲ್ಲಿ ಸತ್ವವಿದೆ ಎಂದು ಒಪ್ಪಿದೆ. ಆದರೆ ಎರಡೂ ರಾಜ್ಯಗಳು ಅವಕಾಶವಾದಾಗಲೆಲ್ಲ ನ್ಯಾಯಸಮ್ಮತವಲ್ಲದ ದಾರಿಗಳ ಮೂಲಕ ಸಹ ತಮ್ಮ ಅಚ್ಚುಕಟ್ಟನ್ನು ವಿಸ್ತರಿಸಿಕೊಳ್ಳುತ್ತ ಬಂದಿವೆ ಎನ್ನುವುದೂ ಸತ್ಯವೆ. ಈ ನಡುವೆ ಕಾವೇರಿ ಕೊಳ್ಳದ ಶೇ.20ರಷ್ಟು ನೀರು ತನ್ನ ಪ್ರದೇಶದಿಂದ ಬರುವುದರಿಂದ 90 ಟಿ.ಎಮ್.ಸಿ. ನೀರನ್ನು ಕೇರಳವು ಕೇಳುತ್ತಿದೆ. ಆದರೆ ಅದಕ್ಕೆ ದಕ್ಕಿರುವುದು 30 ಟಿ.ಎಮ್.ಸಿ. ಮಾತ್ರ.

ಆದರೆ ಗರಿಷ್ಠವಾದಿ ವಾದಗಳ ಸಮಸ್ಯೆಯಿದೆ. ನ್ಯಾಯವು ಸಂಪೂರ್ಣವಾಗಿ ತಮ್ಮ ಕಡೆಯೇ ಇದೆ ಎಂದು ನಂಬುತ್ತ, ಯಾವುದೇ ಹೊಂದಾಣಿಕೆಯನ್ನು ಮಾಡಲು ಯಾವ ಪಕ್ಷದವರೂ ಒಪ್ಪುವುದಿಲ್ಲ. ತಮಗೆ ಅನ್ಯಾಯವಾಗಿದೆ ಎಂದೆ ನಂಬುತ್ತಾರೆ. ಹಾಗಾಗಿ ಸರ್ವೋಚ್ಚ ನ್ಯಾಯಾಲಯ ಏನನ್ನೇ ಹೇಳಿದರೂ ಕನ್ನಡಿಗರು, ತಮಿಳುರು ಮತ್ತು ಅವರ ಸರ್ಕಾರಗಳು ಕೇಳುತ್ತಾರೆಯೆ ಎಂದರೆ ಕಾದುನೋಡಬೇಕು.

ಎನ್.ಎಸ್.ಶಂಕರ್

ಬಿಜೆಪಿ ವಿರೋಧಿ ಒಕ್ಕೂಟ ಸಾಧ್ಯವೇ?

ಜುಲೈ ೨೦೧೮

ಶಾಂತಲಾ ದಾಮ್ಲೆ

ಹೋರಾಟಗಾರ ಅಭ್ಯರ್ಥಿ ಚುನಾವಣಾ ಬವಣೆ

ಜುಲೈ ೨೦೧೮

ಶ್ರೀಶೈಲ ಆಲದಹಳ್ಳಿ

ಸಂಡೂರು ಕುಮಾರಸ್ವಾಮಿ ಬೆಟ್ಟಕ್ಕೆ ಗಣಿ ಕಂಟಕ!

ಜುಲೈ ೨೦೧೮

ಡಾ.ಡಿ.ಸಿ.ನಂಜುಂಡ

ನಿಮ್ಮ ಆನ್‍ಲೈನ್ ಮಾಹಿತಿ ಎಷ್ಟು ಸುರಕ್ಷಿತ?

ಜೂನ್ ೨೦೧೮

ಪ್ರೊ. ರವೀಂದ್ರ ರೇಷ್ಮೆ

ಅಸೆಂಬ್ಲಿ ಫಲಿತಾಂಶ - ಪಕ್ಷ ರಾಜಕಾರಣದ ಪತನ

ಜೂನ್ ೨೦೧೮

ಡಾ.ಟಿ.ಆರ್.ಚಂದ್ರಶೇಖರ

ಭಾರತದಲ್ಲಿ ಬ್ಯಾಂಕಿಂಗ್ ಬುಡ ಗಡಗಡ!

ಮೇ ೨೦೧೮

ಸುಧೀಂದ್ರ ಹಾಲ್ದೊಡ್ಡೇರಿ

ಬೆಳ್ಳಂದೂರಿನಲ್ಲಿ ನೊರೆ ಹೊತ್ತಿ ಉರಿದೊಡೆ...!

ಮೇ ೨೦೧೮

ರಹಮತ್ ತರೀಕೆರೆ

ಪ್ರತಿಮೆಗಳ ರಾಜಕಾರಣ

ಎಪ್ರಿಲ್ ೨೦೧೮

ಹನುಮಂತರೆಡ್ಡಿ ಶಿರೂರು

ಸಿದ್ದರಾಮಯ್ಯನವರ ಕಲ್ಯಾಣ ರಾಜ್ಯ !

ಎಪ್ರಿಲ್ ೨೦೧೮

ದಾಸನೂರು ಕೂಸಣ್ಣ

ಒಳ ಮೀಸಲಾತಿಏಕೆ ಬೇಕು?

ಮಾರ್ಚ್ ೨೦೧೮

ರೇಣುಕಾ ನಿಡಗುಂದಿ

ಮೊಲೆ ಕತ್ತರಿಸಿಕೊಟ್ಟ ನಂಗೇಲಿ ನೆನಪು!

ಮಾರ್ಚ್ ೨೦೧೮

ಡಿ. ಎಸ್. ನಾಗಭೂಷಣ

ಕನ್ನಡ ಮೊದಲು ನಂತರ ಇಂಗ್ಲಿಷ್

ಮಾರ್ಚ್ ೨೦೧೮

ಡಾ. ವಾಸು ಎಚ್. ವಿ

ಈ ಹೊತ್ತಿನ ಕರ್ನಾಟಕ: ಪರ್ಯಾಯ ರಾಜಕಾರಣ

ಫೆಬ್ರವರಿ ೨೦೧೮

ಡಾ.ಕಿರಣ್ ಎಂ.ಗಾಜನೂರು

‘ನಿಮ್ಮ ದನದ ಬಾಲ ನೀವೇ ಇಟ್ಟುಕೊಳ್ಳಿ’

ಫೆಬ್ರವರಿ ೨೦೧೮