2nd ಫೆಬ್ರವರಿ ೨೦೧೮

ಸಮಾಜಮುಖಿ ಲೋಕಾರ್ಪಣೆ

2017 ಡಿಸೆಂಬರ್ 25ರಂದು ಬೆಂಗಳೂರಿನ ಗಾಂಧೀ ಭವನದಲ್ಲಿ ಆನೇಕಲ್ ರಾಜೇಶ್ ಹಾಡಿದ ಕುವೆಂಪು ಅವರ ವಿಶ್ವಮಾನವಗೀತೆಯೊಂದಿಗೆ ‘ಸಮಾಜಮುಖಿ’ ಲೋಕಾರ್ಪಣೆ ಕಾರ್ಯಕ್ರಮ ಆರಂಭ. ಸಂಪಾದಕ ಚಂದ್ರಕಾಂತ ವಡ್ಡು ಅವರಿಂದ ಸ್ವಾಗತ, ಸಮೂಹ ಸಂಪಾದಕ ಪೃಥ್ವಿದತ್ತ ಚಂದ್ರಶೋಭಿ ಅವರ ಪ್ರಾಸ್ತಾವಿಕ ನುಡಿ. ಪ್ರಕಾಶಕರಾದ ಬಿ.ಶರತ್‍ಕುಮಾರ್ ಅವರಿಂದ ಅತಿಥಿಗಳಿಗೆ ಗೌರವಕಾಣಿಕೆ ಸಮರ್ಪಣೆ. ಇನ್‍ಫೋಸಿಸ್ ಸಂಸ್ಥೆಯ ಸಹಸಂಸ್ಥಾಪಕ ಎನ್.ಆರ್.ನಾರಾಯಣಮೂರ್ತಿ ಅವರು ‘ಸಮಾಜಮುಖಿ’ ಮಾಸಿಕದ ಮೊದಲ ಸಂಚಿಕೆ ಲೋಕಾರ್ಪಣೆ ನಂತರ ಪ್ರಧಾನ ಭಾಷಣ ಮಾಡಿದರು. ಮುಖ್ಯ ಅತಿಥಿಗಳಾದ ಹಿರಿಯ ರಾಜಕೀಯ ಮುತ್ಸದ್ದಿ ಎಸ್.ಎಂ.ಕೃಷ್ಣ ಹಾಗೂ ಕರ್ನಾಟಕ ಸಾಹಿತ್ಯ ಅಕಾಡೆಮಿ ಅಧ್ಯಕ್ಷರಾದ ಅರವಿಂದ ಮಾಲಗತ್ತಿ ಅವರು ಕಿಕ್ಕಿರಿದು ತುಂಬಿದ ಸಭೆಯನ್ನುದ್ದೇಶಿಸಿ ಮಾತನಾಡಿದರು. ವಂದನಾರ್ಪಣೆ ರಂಗಕರ್ಮಿ ಶಶಿಧರ ಭಾರಿಘಾಟ್ ಅವರಿಂದ. ಸಂಪಾದಕೀಯ ತಂಡದ ಎಸ್.ಆರ್.ವಿಜಯಶಂಕರ್, ಚಂದ್ರಶೇಖರ ಬೆಳಗೆರೆ, ಆನಂದರಾಜೇ ಅರಸ್ ಉಪಸ್ಥಿತರಿದ್ದರು.

ಸಾಮಾಜಿಕ ಸಮಾನತೆ ಕಾಯಲು ಹಲವಾರು ಉಪಕರಣಗಳು ಬೇಕಾಗುತ್ತವೆ. ಜಗತ್ತಿನ ಆಗುಹೋಗುಗಳಿಗೆ ಮುಕ್ತವಾಗಿ ತೆರೆದುಕೊಳ್ಳುವುದು ಬಹುಮುಖ್ಯ. ನಾವು ನಮ್ಮ ಮನಸ್ಸಿನ ಎಲ್ಲಾ ಕಿಟಕಿಬಾಗಿಲುಗಳನ್ನು ತೆರೆದಿಟ್ಟು ಹೊಸ ಗಾಳಿಬೆಳಕು ಒಳಬರಲು ಅನುವುಮಾಡಿಕೊಡಬೇಕು. ಗಂಭೀರ ಚಿಂತನಶೀಲ ಬರವಣಿಗೆಗಳನ್ನು ಅಧಾರವಾಗಿಟ್ಟುಕೊಂಡ ಮಾಸಪತ್ರಿಕೆಯ ಅವಶ್ಯಕತೆ ಕನ್ನಡ ಜನತೆಗೆ ಇತ್ತು. ಸಮಾಜಮುಖಿ ಅಂಥ ದಾಹವನ್ನು ಇಂಗಿಸುವುದಕ್ಕೆ ನಿಂತಿದೆ ಎಂಬ ನಂಬಿಕೆ ನನಗಿದೆ.

-ಎಸ್.ಎಂ.ಕೃಷ್ಣ

ಯಾವುದೇ ಮುಕ್ತ, ಪ್ರಜಾಸತ್ತಾತ್ಮಕವಾದ ಸಮಾಜಕ್ಕೆ ಅತ್ಯಂತ ಅಗತ್ಯವಾಗಿ ಬೇಕಾಗಿರುವುದು, ಅಂಥ ಸಮಾಜದ ಬೆನ್ನೆಲುಬು ಆಗಿರುವುದು ಸ್ವತಂತ್ರ, ನ್ಯಾಯೋಚಿತ ಮತ್ತು ನಿಷ್ಪಕ್ಷಪಾತವಾದ ಸುದ್ದಿಮಾಧ್ಯಮ. ಇದು ತತ್ವದಲ್ಲಿ ಮಾತ್ರವಲ್ಲ, ಆಚರಣೆಯಲ್ಲೂ ಕಂಡುಬಂದರೆ ನಮ್ಮ ಸಮಾಜ ಆರೋಗ್ಯಕರವಾಗಿರಲು ಸಾಧ್ಯ. ‘ಸಮಾಜಮುಖಿ’ ಎಂಬ ಹೆಸರಿನಲ್ಲೇ ಈ ಪತ್ರಿಕೆಗೆ ಇರಬೇಕಾದ ಆದ್ಯತೆಗಳು ಬಹಳ ಸ್ಪಷ್ಟವಾಗಿ ಇವೆ. ಇಂದು ನಮ್ಮ ಮುಂದೆ ಇರುವ ಸವಾಲು ಏನೆಂದರೆ, ಒಂದು ಪ್ರಗತಿಪರ ಸಮಾಜವನ್ನು ಕಟ್ಟುವ ಸಂದರ್ಭದಲ್ಲಿ ವ್ಯಕ್ತಿಯ ಮತ್ತು ಸಮಾಜದ ಹಿತಾಸಕ್ತಿಗಳ ನಡುವೆ ಸಮತೋಲನವನ್ನು ಸಾಧಿಸಬೇಕಾಗಿರುವುದು. ಈ ಸವಾಲನ್ನು ಎದುರಿಸಲು ನಮಗೆ ಬೇರೆಯದೇ ಆದ ವ್ಯವಸ್ಥೆಯ ಅಗತ್ಯವಿದೆ. ಇದು ಯಾವ ರೀತಿಯದು ಎಂದರೆ ಎಲ್ಲರ ಒಳಿತನ್ನೂ, ಸಮಾಜದ ಒಳಿತನ್ನೂ ಸಾಧಿಸಲು ಬದ್ಧರಾಗಿರುವುದು. ಇದಕ್ಕಾಗಿ ನಾವೆಲ್ಲರೂ ಸಣ್ಣ ತ್ಯಾಗಗಳನ್ನು ಮಾಡಲು ಸಿದ್ಧರಿರಬೇಕು. ಇಲ್ಲಿ ನನ್ನ ಮಾತಿನ ಅರ್ಥ ಇಷ್ಟೇ. ನಮ್ಮ ಬದುಕಿನ ಉದ್ದೇಶ ನಮ್ಮ ಮತ್ತು ನಮ್ಮ ಕುಟುಂಬಗಳ ಒಳಿತು ಮಾತ್ರ ಆಗಬಾರದು. ನಾವು ನಮ್ಮ ಸಮುದಾಯಕ್ಕೂ ಸಹ, ನಮ್ಮ ಸಮಾಜಕ್ಕೂ ಸಹ ನಿಷ್ಠರಾಗಿರಬೇಕು.

ನಮ್ಮ ದೇಶದಲ್ಲಿ ಅತಿ ಹೆಚ್ಚು ಅನಕ್ಷರಸ್ಥರಿದ್ದಾರೆ. ಅಪೌಷ್ಠಿಕತೆಯಿಂದ ಮಕ್ಕಳು ನರಳುತ್ತಿದ್ದಾರೆ. ನಮ್ಮ ದೇಶದ ನದಿಗಳು ಅತ್ಯಂತ ಕೊಳಕಾದ ನದಿಗಳ ಪಟ್ಟಿಯಲ್ಲಿ ಮೇಲಿವೆ. ನಮ್ಮ ದೇಶದ ವಾಹನಗಳು ಅತಿ ಹೆಚ್ಚು ಇಂಗಾಲವನ್ನು ಹೊರಗೆಡಹುತ್ತಿವೆ. ನಾವು ಕನಿಷ್ಠ ಗುಣಮಟ್ಟದ ಸಾರ್ವಜನಿಕ ಆರೋಗ್ಯ ಮತ್ತು ಪ್ರಾಥಮಿಕ ಶಿಕ್ಷಣ ವ್ಯವಸ್ಥೆಗಳನ್ನು ಕಟ್ಟಿಕೊಳ್ಳಲು ಸಾಧ್ಯವಾಗಿಲ್ಲ. ನಮ್ಮ ದೇಶದ ಸ್ಥಿತಿ ಇಂದು ಬಹಳ ಚಿಂತೆ ಪಡೋ ಥರ ಇದೆ. ಈ ಸವಾಲುಗಳಿಗೆಲ್ಲ ಪರಿಹಾರವನ್ನು ಹುಡುಕಬೇಕಾದದ್ದು ನಮ್ಮೆಲ್ಲರ ಕರ್ತವ್ಯ. ಇದಕ್ಕೆಲ್ಲ ನಮಗೆ ಬೇಕಿರುವುದು ಸ್ವತಂತ್ರ, ಅನ್ವೇಷಣಶೀಲ ಮತ್ತು ಸಮಸ್ಯೆಗಳನ್ನು ಬಗೆಹರಿಸಬಲ್ಲ ಮನೋಭಾವ. ಅಂಥ ಮನೋಭಾವವುಳ್ಳವರು ಹೊಸ ವಿಚಾರವನ್ನು ಹೊಸ ತಂತ್ರಜ್ಞಾನವನ್ನು, ನವೀನ ಪರಿಹಾರಗಳನ್ನು ಹುಡುಕಬೇಕು. ಇಂಥ ಕೆಲಸಗಳನ್ನು ಮಾಡಬೇಕೆಂದರೆ ನಾವು ಪಕ್ಷ ರಾಜಕಾರಣ ಮತ್ತು ಸೈದ್ಧಾಂತಿಕ ಕಣ್ಕಟ್ಟುಗಳಿಂದ ಮುಕ್ತರಾಗಬೇಕು. ಎಲ್ಲಿ ಒಳ್ಳೆಯ, ಅನುಷ್ಠಾನಗೊಳ್ಳಬಲ್ಲ ವಿಚಾರಗಳು, ಸಮಸ್ಯೆಗಳಿಗೆ ಪರಿಹಾರಗಳು ದೊರಕುತ್ತವೋ ಆ ದಿಕ್ಕಿನಲ್ಲಿ ನಾವು ಮುನ್ನಡೆಯಬೇಕು. ನಮಗಿಂದು ಬೇಕಿರುವುದು ವಿಚಾರಗಳ ಮುಕ್ತ ವಿನಿಮಯವೇ ಹೊರತು ನಮ್ಮನ್ನು ಎಲ್ಲಿಗೂ ಕರೆದೊಯ್ಯದ ಒಣ ಸೈದ್ಧಾಂತಿಕ ಚರ್ಚೆಗಳಲ್ಲ.

-ಎನ್.ಆರ್.ನಾರಾಯಣಮೂರ್ತಿ

ಸಮಾಜಮುಖಿ ಆಗಿರುವವರನ್ನು ಬೇಟೆಯಾಡುವ ಕಾಲವಿದು. ಇಂಥ ಸಂದರ್ಭದಲ್ಲಿ ಸಮಾಜಮುಖಿ ಎಂಬ ಹೆಸರನ್ನೇ ಇಟ್ಟುಕೊಂಡು ಪತ್ರಿಕೆ ತರುವುದಕ್ಕೆ ಹೊರಟಿರೋ ನಮ್ಮ ಸ್ನೇಹಿತರ ಧಾಷ್ಟ್ರ್ಯಕ್ಕೆ ತಲೆ ಬಾಗುತ್ತೇನೆ. ನಮ್ಮೊಳಗಿನ ಜಡತ್ವದ ಮನಸ್ಸನ್ನು ಕಿತ್ತೊಗೆಯುವ ತತ್ವಗಳನ್ನ ಒಳಗಡೆ ಇಟ್ಟುಕೊಂಡು ಹೊರಬರುವುದಕ್ಕೆ ಪ್ರಯತ್ನ ಮಾಡ್ತಿರೋ ಸಮಾಜಮುಖಿ ಪತ್ರಿಕೆ ಈ ನೆಲದಲ್ಲಿ ಅಧಿಕೃತವಾಗಿ ಬೇರೂರಿ ನಿಲ್ಲುತ್ತದೆ ಅನ್ನುವ ಆತ್ಮವಿಶ್ವಾಸ ನನಗಿದೆ. ...ಗೌರವಯುತವಾದ ಭಿನ್ನಾಭಿಪ್ರಾಯಗಳನ್ನು ಇಟ್ಟುಕೊಂಡೇ ಒಟ್ಟಾಗಿ ಬಾಳುವುದನ್ನು ಈ ದೇಶ ನಮಗೆ ಕಲಿಸಿದೆ.

ನಮ್ಮ ಮಾಧ್ಯಮಗಳು ಪರೋಕ್ಷವಾಗಿ ಸಾಹಿತ್ಯವನ್ನು ಬಹಿಷ್ಕರಿಸಿವೆ. ಒಂದು ಖಾಲಿತನವಿದೆ. ಈ ಪತ್ರಿಕೆ ಆ ಖಾಲಿತನವನ್ನು ತುಂಬಿದ್ದೇ ಆದರೆ ಒಂದು ದೊಡ್ಡ ಸಮುದಾಯವನ್ನು ತನ್ನ ತೆಕ್ಕೆಗೆ ತೆಗೆದುಕೊಳ್ಳುತ್ತೆ, ನೆಲೆನಿಲ್ಲುತ್ತೆ. ಮುದ್ರಣ ಮಾಧ್ಯಮಗಳಿಗೆ ಜೀವವಿದೆ, ನೈತಿಕ ಪ್ರಜ್ಞೆಯಿದೆ. ಆದರ್ಶದ ಮೌಲ್ಯಗಳು ಇನ್ನೂ ಜೀವಂತವಾಗಿ ಉಳಿದಿವೆ. ಆದರೆ ವಿದ್ಯುನ್ಮಾನ ಮಾಧ್ಯಮಗಳಿಗೆ ಈ ಬದ್ಧತೆ ಇಲ್ಲ. ಯಾಕೆ ಅಂದ್ರೆ ಅವುಗಳಿಗೆ ಇತಿಹಾಸ ಇಲ್ಲ. ಒಂದು ವೇಳೆ ಇತಿಹಾಸ ಓದುವ ಮನಸ್ಸನ್ನಾದರೂ ಮಾಡಿದ್ದರೆ ದೇಶವನ್ನು ಕಟ್ಟುವುದು ಹೇಗೆ ಅನ್ನುವುದು ಅವರಿಗೆ ಗೊತ್ತಾಗುತ್ತಿತ್ತು. ಸಣ್ಣ ಮಗುವಿನ ಕೈಗೆ ಬ್ಲೇಡ್ ಕೊಟ್ಟರೆ ಅದನ್ನು ಹೇಗೆ ಹಿಡಿಯಬೇಕೆಂದು ಗೊತ್ತಾಗದೆ ಕೈತುಂಬ ರಕ್ತ ಮಾಡಿಕೊಳ್ಳತ್ತದೆ. ನಮ್ಮ ವಿದ್ಯುನ್ಮಾನ ಮಾಧ್ಯಗಳ ಸ್ಥಿತಿ ಇಂಥದ್ದು. ಇಂಥ ಮಾಧ್ಯಮಗಳು ಸಮಾಜವನ್ನು ದೇಶವನ್ನು ಹೇಗೆ ಕಟ್ಟಬಲ್ಲವು?

ಸಮಾಜಮುಖಿ ಪತ್ರಿಕೆ ಇವತ್ತಿನ ಕಾಲದ ಪ್ರತೀಕವಾಗಿ ರೂಪುಗೊಳ್ಳುವುದಕ್ಕೆ ಸನ್ನದ್ಧವಾಗಿ ಎದ್ದುನಿಂತಿದೆ. ಶೋಧ ಅಮೂರ್ತದಿಂದಲೇ ಆರಂಭಗೊಳ್ಳುತ್ತದೆ. ಮೂರ್ತರೂಪದಿಂದ ಆರಂಭಗೊಂಡರೆ ಅದು ಶೋಧ ಅನ್ನಿಸಿಕೊಳ್ಳೋದಿಲ್ಲ. ಅಮೂರ್ತತೆಯಿಂದ ಮೂರ್ತತೆಯೆಡೆಗೆ ಸಾಗುವುದೇ ಶೋಧ. ಸಮಾಜಮುಖಿ ಆಗುವುದು ಅಂದರೆ ಮನುಜಮುಖಿ ಆಗುವುದು ಅಂತಲೇ ಅರ್ಥ.”

-ಅರವಿಂದ ಮಾಲಗತ್ತಿ

ಹೊರಗಿನವರ ಕೊರಗು!

“ಹೇಳುವವರು ಕೇಳುವವರು ಇಲ್ಲದ ದೇಶ’’ ಎಂಬ ಶೀರ್ಷಿಕೆಯಡಿ ಭಾರತದ ಸಮಸ್ಯೆಗಳ ಕುರಿತ ರವಿ ಹಂಜ್ ಅವರ ‘ಹೊರನೋಟ’ ಲೇಖನ ಓದಿ ಬೇಸರದ ಜೊತೆಗೆ ಆಶ್ಚರ್ಯವೂ ಆಯಿತು! ಯಾಕೆಂದರೆ ಅಮೇರಿಕಾದ ಜನಜೀವನವನ್ನು ಅಷ್ಟಿಷ್ಟು ನಾನೂ ಕಂಡಿದ್ದೇನೆ.

ಅಮೆರಿಕೆಗೆ ಹೋದ ಹೊಸತರಲ್ಲಿ ಟ್ಯಾಕ್ಸಿಗಳ ಮೇಲೆ ಅವಲಂಬಿತನಾಗಿದ್ದೆ. ಅಲ್ಲಿ ಸಾರ್ವಜನಿಕ ಸಾರಿಗೆ ಅಷ್ಟು ಅನುಕೂಲವಾಗಿಲ್ಲ. ಕೊಳಕು ಪೋಷಾಕು ಧರಿಸಿ, ಗಡ್ಡಧಾರಿಯಾಗಿ, ವಿಚಿತ್ರವಾಗಿ ಕಾಣುತ್ತಿದ್ದ ಡ್ರೈವರ್ ಒಬ್ಬ ಆಗಾಗ ನನ್ನನ್ನು ಪಿಕಪ್ ಮಾಡಲು ಬರುತ್ತಿದ್ದ. ಆ ಡ್ರೈವರ್ ಖಾಲಿ ಇದ್ದ ಸಮಯದಲ್ಲಿ ಕಾರಿನಲ್ಲಿ ಕುಳಿತೇ ಸಿಗರೇಟು ಸೇದುತ್ತಿದ್ದ ಅನಿಸುತ್ತೆ. ಗಬ್ಬು ವಾಸನೆ ಸಹಿಸದೆ ಪರಿತಪಿಸುತ್ತಿದ್ದೆ. ಎಲ್ಲಾ ಡ್ರೈವರುಗಳೂ ಹಾಗೆ ಇರಲಿಲ್ಲ ಬಿಡಿ. ಅದೇ ತರಹ ರವಿ ಅವರಿಗೆ ಅನುಭವವಾದಂತೆ ಭಾರತದ ಎಲ್ಲಾ ಕಾರಿನ ಡ್ಯಾಶ್‍ಬೋರ್ಡ್‍ನಿಂದ ಇಲಿಗಳು ಜಿಗಿಯೋಲ್ಲ! ಇಲ್ಲಿ ಆಧಾರ್ ಇದ್ದಂತೆ ಅಮೆರಿಕೆಯಲ್ಲಿ ಎಲ್ಲದಕ್ಕೂ (Social Security Number) ಕೇಳುತ್ತಾರೆ. ಹೋದ ಹೊಸದರಲ್ಲಿ ನನ್ನ ಬಳಿ ಆ ನಂಬರ್ ಇಲ್ಲ ಅಂದಾಗ ಅಲ್ಲಿನ ಒಬ್ಬ ಸರಕಾರಿ ಅಧಿಕಾರಿ ಅದು ಬೇಕೇಬೇಕು ನಮ್ಮ ಸಾಫ್ಟ್ವೇರ್ ಕೇಳುತ್ತೆ ಅಂತಲೇ ಹೇಳಿದ್ದ.

ಜನಸಂಖ್ಯೆ ಜಾಸ್ತಿ ಇದ್ದಾಗ ದೂರದೃಷ್ಟಿ ಎಷ್ಟಿದ್ದರೂ ಸಾಲದು. ಅಧಾರ್ ಅವಳವಡಿಕೆ ವಿಷಯದಲ್ಲಿ ನಮ್ಮ ದೇಶದಲ್ಲಿ ಆಗುತ್ತಿರುವುದು ಅದೇ. ಒಂದು ಸಲ ಸ್ಯಾನ್ ಫ್ರಾನ್ಸಿಸ್ಕೋದ ಜನದಟ್ಟಣೆಯ ರಸ್ತೆಯಲ್ಲಿ ಕಾರು ಓಡಿಸುವಾಗ ಮಲ್ಲೇಶ್ವರದಲ್ಲಿ ಓಡಿಸಿದ ಅನುಭವ ಆಗಿ ಪುಳಕಿತನಾದೆ! ಅಲ್ಲಿ ರೆಡ್ ಸಿಗ್ನಲ್ ಬಿದ್ದಾಗಲೂ ಗಾಡಿ ಓಡಿಸಿಕೊಂಡು ಹೋಗುತ್ತಿದ್ದರು. ಹಾಗೆ ಮಾಡಿದವರು ಭಾರತೀಯರಲ್ಲ! ಆಮೇಲೆ ಪಾರ್ಕಿಂಗಿಗೆ ಜಾಗ ಸಿಗದೇ ಒದ್ದಾಡಿದೆವು. ಒಮ್ಮೆ ನಯಾಗರ ನೋಡಲು ಹೋಗುವಾಗ ಮಧ್ಯದಲ್ಲಿ ಒಂದು ಹೋಟೆಲಿಗೆ ಹೋದೆವು. ಅಲ್ಲಿನ ಟಾಯ್ಲೆಟ್ ಒಳಗೆ ದುರ್ಗಂಧ ಎಷ್ಟಿತ್ತು ಅಂದ್ರೆ ನಮ್ಮ ಬಸ್‍ಸ್ಟಾಂಡ್‍ನ ಪಬ್ಲಿಕ ಟಾಯ್ಲೆಟ್ ನೆನಪಾಯ್ತು. ಅಲ್ಲಿ ತುಂಬಾ ವರ್ಷಗಳಿಂದ ನೆಲೆಸಿರುವ ಕೆಲವು ಭಾರತೀಯರು ನಮ್ಮ ದೇಶವನ್ನು ಹೊಸ ತಂತ್ರಜ್ಞಾನದ ಅರಿವಿಲ್ಲದ ದೇಶ ಅಂತ ತಿಳಿದಿದ್ದಾರೆ. ಒಂಬತ್ತು ವರ್ಷದಿಂದ ತನ್ನ ದೇಶಕ್ಕೆ ಭೇಟಿ ನೀಡದ ಒಬ್ಬ ಭಾರತೀಯ ಗೆಳೆಯ ಇಂಡಿಯಾದಲ್ಲಿ 4ಜಿ ಇಂಟರ್‍ನೆಟ್ ಇದೆಯೇ ಎಂಬ ಮೂರ್ಖತನದ ಪ್ರಶ್ನೆ ಕೇಳಿದ್ದ! ಅವರು ಹೇಳುವ ಸಿನಿಮಾ ಹೆಸರುಗಳು ಕೂಡ ಮಾಲಾಶ್ರಿ ಕಾಲದವು. ಅಮೆರಿಕನ್ನರಲ್ಲಿ ಬಹುತೇಕರು ಕೂಪ ಮಂಡೂಕಗಳು. ಅವರಿಗೆ ತಮ್ಮ ದೇಶ ಬಿಟ್ಟರೆ ಬೇರೆ ಜಗತ್ತೇ ಇಲ್ಲ. ನಮ್ಮ ಕೆಲವು ‘ದೇಸಿ’ಗಳು ಕೂಡ ಅವರಂತೆಯೇ ಆಗಿದ್ದಾರೆ.

ಕಠಿಣ ಕಾನೂನು ಇದ್ದಾಗ್ಯೂ ಅಲ್ಲಿ ವರ್ಣಭೇದ ತುಂಬಾ ಇದೆ. ಅವರು ಭಾರತೀಯರನ್ನು ಕಾಣುವ ರೀತಿ ನೋಡಿ ನನಗೆ ತುಂಬಾ ಕಿರಿಕಿರಿ ಆಗುತ್ತಿತ್ತು. ಶಾಲೆಯಲ್ಲಿ ನನ್ನ ಮಗಳಿಗೆ ಅವಳ ಪ್ರಿನ್ಸಿಪಾಲರೇ ವರ್ಣಭೇದ ಮಾಡುತ್ತಿದ್ದರು. ಅಲ್ಲಿ ಡಾಕ್ಟರ್ ಹಾಗೂ ಇನ್ಸೂರೆನ್ಸ್ ಕಂಪನಿಗಳ ಮಾಫಿಯಾ ಕಂಡು ಬೆಚ್ಚಿಬಿದ್ದಿದ್ದೇನೆ; ವಯಸ್ಸಾದವರ ಏಕಾಂಗಿತನ ನೋಡಿ ಮರುಗಿದ್ದೇನೆ. ಅಲ್ಲಿಯೂ ನದಿಗಳು ತಮ್ಮೊಳಗೆ ಬೆರೆತ ರಾಸಾಯನಿಕಗಳ ದೆಸೆಯಿಂದ ಬೆಂಕಿ ಹತ್ತಿಸಿಕೊಂಡಿವೆ, ಅಲ್ಲಿನ ಕುಡಿಯುವ ನೀರಿನ ಪೈಪುಗಳಲ್ಲಿ ಪಾದರಸದ ಮಟ್ಟ ಏರಿದೆ. ದೊಡ್ಡ ಕಂಪನಿಗಳು ಅಲ್ಲಿಯೂ ಲಾಬಿ ಮಾಡುತ್ತವೆ. ಇದನ್ನೆಲ್ಲಾ ನೋಡಿಕೊಂಡು ಅಲ್ಲಿಯ ಜನರೂ ಸುಮ್ಮನಿದ್ದಾರೆ!

ಇಲ್ಲಿ ನಾವು ಸಮಸ್ಯೆಗಳೊಂದಿಗೇ ಬದುಕಬೇಕು ಅಂತಲ್ಲ. ಅವು ಇವೆ ಅಂತ ಎಲ್ಲರಿಗೂ ಗೊತ್ತು. ಎಲ್ಲರೂ ಹೇಳೋವ್ರೆ ಆದ್ರೆ ಪರಿಹಾರ ಮಾಡೋವ್ರು ಯಾರು? ಅದಕ್ಕೆ ಮೂರು ದಾರಿಗಳಿವೆ. ಒಂದು: ಅದನ್ನು ನಾವು ಖುದ್ದಾಗಿಯೋ ಇಲ್ಲ ಸಂಬಂಧಪಟ್ಟವರ ಗಮನಕ್ಕೆ ತಂದೋ ಬಗೆಹರಿಸುವುದು. ಎರಡು: ಅದರಲ್ಲೊಂದಾಗಿ ಸುಮ್ಮನಿರೋದು. ಮೂರು: ಆ ಸಮಸ್ಯೆಗಳಿಂದ ಓಡಿ ಹೋಗೋದು. ವಿದೇಶಕ್ಕೆ ಹೋಗಿ ನೆಲೆಸಿರುವ ಭಾರತೀಯರಲ್ಲಿ ಬಹುತೇಕರು ಮೂರನೇ ಗುಂಪಿಗೆ ಸೇರಿದವರು. ನಾವು ಆ ವ್ಯವಸ್ಥೆಯಲ್ಲಿ ಇಲ್ಲ ಅಂದ ಮೇಲೆ ಅದರ ಬಗ್ಗೆ ಮಾತನಾಡುವ ಹಕ್ಕೂ ನಮಗಿರುವುದಿಲ್ಲ. ಇದು ದೇಶ ಬಿಟ್ಟು ಅಲ್ಲಿದ್ದಾಗ ನನಗೂ ಅನ್ವಯಿಸಿತ್ತು, ಹೇಳುವವರು ಕೇಳುವವರು ಎಲ್ಲಾ ಅಲ್ಲಿ ಹೋಗಿ ಕೂತರೆ ನಮ್ಮ ದೇಶ ಉದ್ಧಾರ ಮಾಡೋರು ಯಾರು?!

- ಗುರುಪ್ರಸಾದ ಕುರ್ತಕೋಟಿ, ಬೆಂಗಳೂರು

ಸಮಾಜಮುಖಿ ಲೋಕಾರ್ಪಣೆ

ಫೆಬ್ರವರಿ ೨೦೧೮