2nd February 2018

ಸ್ವರ್ಗದ ಮಕ್ಕಳು

ಕೆ.ಎಲ್.ಚಂದ್ರಶೇಖರ್ ಐಜೂರ್

ಅಲಿ ತನ್ನ ತಂಗಿ ಝಾರಾಳ ಹರಿದ ಶೂ ಹೊಲಿಸಿಕೊಂಡು ಮನೆಗೆ ತರಕಾರಿ ತೆಗೆದುಕೊಳ್ಳಲೆಂದು ಸಣ್ಣ ತರಕಾರಿ ಅಂಗಡಿಯೊಂದಕ್ಕೆ ಹೋಗಿರುತ್ತಾನೆ. ಪೇಪರಿನಲ್ಲಿ ಸುತ್ತಿಟ್ಟ ಶೂ ಅನ್ನು ಅಲ್ಲೇ ತರಕಾರಿ ಪೆಟ್ಟಿಗೆಗಳ ಸಂದಿಯಲ್ಲಿಟ್ಟು ಮನೆಗೆ ಬೇಕಾದ ತರಕಾರಿ ತೆಗೆದುಕೊಳ್ಳುತ್ತಿರುತ್ತಾನೆ. ಅದೇ ಹೊತ್ತಿಗೆ ಬೀದಿ ಕಸ ಎತ್ತುವ ಜಾಡಮಾಲಿಯೊಬ್ಬ ತರಕಾರಿ ಪೆಟ್ಟಿಗೆಗಳ ಸಂದಿಯಲ್ಲಿ ಪೇಪರಿನಲ್ಲಿ ಸುತ್ತಿಟ್ಟಿದ್ದ ಶೂ ಅನ್ನು ಅಂಗಡಿಯವನು ತೆಗೆದಿರಿಸಿರುವ ಕಸದ ಪೊಟ್ಟಣವೆಂದು ತಿಳಿದು ತನ್ನ ತಳ್ಳುಗಾಡಿಯೊಳಗೆ ಕಸದ ಜೊತೆ ತುಂಬಿಕೊಂಡು ಹೊರಟುಬಿಡುತ್ತಾನೆ. ತರಕಾರಿ ಕೊಂಡ ಅಲಿ ಪೆಟ್ಟಿಗೆಗಳ ಸಂದಿಯಲ್ಲಿ ಇಟ್ಟಿದ್ದ ತನ್ನ ತಂಗಿಯ ಶೂ ಕಾಣದೆ ದಿಕ್ಕೆಡುತ್ತಾನೆ; ಒತ್ತರಿಸಿಕೊಂಡು ಬರುವ ಅಳುವನ್ನು ತಡೆದು ಶೂ ಹುಡುಕುತ್ತ ಅಲ್ಲಿದ್ದ ತರಕಾರಿ ಪೆಟ್ಟಿಗೆ, ಚೀಲಗಳನ್ನೆಲ್ಲ ಬೀಳಿಸಿ ಅಂಗಡಿ ಮಾಲಿಕನಿಂದ ಬೈಸಿಕೊಂಡು ಹತಾಶನಾಗಿ ಮನೆ ಸೇರುತ್ತಾನೆ.

ಮನೆಗೆ ತಲುಪಿದ ಮೇಲೆ ತನ್ನ ಶೂ ಎಲ್ಲಿ ಎನ್ನುವ ತಂಗಿಗೆ ಮುಖಕೊಟ್ಟು ಮಾತನಾಡಲಾಗದೆ ಬಿಕ್ಕತೊಡಗುತ್ತಾನೆ. ತರಕಾರಿ ಅಂಗಡಿಯಲ್ಲಿಟ್ಟ ಶೂ ಅದು ಹೇಗೋ ಏನೋ ಕಳೆದುಹೋಗಿದೆ ಎನ್ನುವ ಅಲಿ ಮತ್ತೆ ಆ ಅಂಗಡಿಯತ್ತ ಹೋಗಿ ಹುಡುಕಿಕೊಂಡು ಬರುವುದಾಗಿ ಹೇಳುತ್ತಾನೆ. ಶೂ ಇಲ್ಲದೆ ನಾಳೆ ಶಾಲೆಗೆ ಹೇಗೆ ಹೋಗಲಿ? ಎನ್ನುವ ಝಾರಾಳ ಪ್ರಶ್ನೆ ಅಲಿಯನ್ನು ಇನ್ನಿಲ್ಲದಂತೆ ಇರಿಯತೊಡಗುತ್ತದೆ. ಮತ್ತದೇ ತರಕಾರಿ ಅಂಗಡಿ ಬಳಿ ಬರುವ ಅಲಿ ತನ್ನ ಯಾತನೆಯೊಂದಿಗೆ ಮತ್ತೆ ಅಲ್ಲಿ ಶೂ ಹುಡುಕಲು ಯತ್ನಿಸಿ ಅಂಗಡಿ ಮಾಲಿಕನ ಕಣ್ಣಿಗೆಬಿದ್ದು ಬೈಸಿಕೊಂಡು ಬೇರೆ ದಾರಿ ಕಾಣದೆ ಮಸೀದಿಯತ್ತ ನಡೆಯುತ್ತಾನೆ.

ಅಸಹಾಯಕತೆ ಮತ್ತು ಹತಾಶೆಗೆ ಸಿಕ್ಕಿ ತತ್ತರಿಸಿ ಹೋಗುವ ಅಲಿ ತನ್ನ ನಿಜವಾದ ಬದುಕಿನ ಸಹಜ ಜಗತ್ತಿನಿಂದ ದೂರವಾಗತೊಡಗುತ್ತಾನೆ. ಈಚೆಗೆ ಆಟದ ಮೈದಾನದಲ್ಲಿ ಹೆಚ್ಚು ಕಾಣಿಸಿಕೊಳ್ಳದ ಅಲಿಯನ್ನು ಬೀದಿಯಲ್ಲಿ ಫುಟ್‍ಬಾಲ್ ಆಡುವ ಇವನ ಗೆಳೆಯರು ಬಾ ನಮ್ಮೊಂದಿಗೆ ಆಟವಾಡು ಎಂದು ಕೂಗಿ ಕರೆಯುತ್ತಾರೆ; ಇನ್ನೊಂದು ಬೀದಿಯ ಹುಡುಗರೊಂದಿಗೆ ಫುಟ್‍ಬಾಲ್ ಮ್ಯಾಚಿರುವುದನ್ನು ನೆನಪಿಸುತ್ತಾರೆ. ಅಲಿ ಇದ್ಯಾವುದನ್ನು ಕೇಳಿಸಿಕೊಳ್ಳುವ ಸ್ಥಿತಿಯಲ್ಲಿ ಇರುವುದಿಲ್ಲ. ಮಸೀದಿಗೆ ನಮಾಜಿಗೆ ಬಂದವರ ಶೂ, ಚಪ್ಪಲಿಗಳನ್ನು ಒಪ್ಪವಾಗಿ ಜೋಡಿಸಿಡುತ್ತಾ ಕಳೆದುಹೋದ ತನ್ನ ತಂಗಿಯ ಶೂಗಳಿಗಾಗಿ ದುಃಖಿಸುತ್ತಾನೆ.

ಮನೆ ತಲುಪುವ ಅಲಿ ಶೂ ಕಳೆದು ಹೋಯಿತೆಂದು ಅಪ್ಪನಿಗೆ ಹೇಳಬೇಡ, ಅವರು ಕಷ್ಟದಲ್ಲಿದ್ದಾರೆ ಶೂ ಕೊಡಿಸುವಷ್ಟು ದುಡ್ಡು ಅವರ ಬಳಿ ಇಲ್ಲ, ಹೀಗಾಗಿ ಬೆಳಗಿನ ಶಾಲೆಗೆ ತನ್ನ ಶೂ ಹಾಕಿಕೊಂಡು ಹೋಗುವಂತೆ ನಂತರ ಮಧ್ಯಾಹ್ನ ಹಾದಿಮಧ್ಯೆ ಅದೇ ಶೂ ಅನ್ನು ತಾನು ತೊಟ್ಟು ಶಾಲೆಗೆ ಹೋಗುವುದಾಗಿ ಹೇಳಿ ತನ್ನ ತಂಗಿ ಝಾರಾಳನ್ನು ಒಪ್ಪಿಸುತ್ತಾನೆ. ಮುಂಜಾನೆ ಶಾಲೆಗೆ ಅಲಿಯ ದೊಡ್ಡ ಸೈಜಿನ ಶೂ ತೊಟ್ಟು ಹೋಗುವ ಝಾರಾ, ಶಾಲೆಬಿಟ್ಟ ಕೂಡಲೇ ಓಣಿಯೊಂದರಲ್ಲಿ ತನಗಾಗಿ ಕಾದಿರುವ ತನ್ನ ಅಣ್ಣ ಅಲಿಗೆ ಶೂ ಕೊಡಲೆಂದು ಓಡೋಡಿ ಬರುತ್ತಾಳೆ. ಹೀಗೆ ಶೂ ವಿನಿಮಯ ಮಾಡಿಕೊಂಡು ಶಾಲೆಗೆ ಹೋಗಿಬರುವುದು ಇಬ್ಬರಿಗೂ ರೂಢಿಯಾಗುತ್ತದೆ. ಹಾಗೆ ಒಮ್ಮೆ ಓಡುವ ಆತುರದಲ್ಲಿದ್ದ ಝಾರಾಳ ಬಲಗಾಲಿನ ಶೂ ಅಕಸ್ಮಾತ್ ಚರಂಡಿಯೊಳಕ್ಕೆ ಬಿದ್ದು ಕೊಚ್ಚಿಕೊಂಡು ಹೊಗುತ್ತದೆ. ಅದು ಕೊಚ್ಚಿಕೊಂಡು ಹೋಗುವ ವೇಗದ ಜೊತೆಗೆ ಝಾರಾ ಕೂಡ ಓಡುತ್ತಾಳೆ. ಶೂ ಝಾರಾಳ ಕೈಗೆ ಸಿಗದೆ ಚರಂಡಿಯ ಕಸಕಡ್ಡಿಯ ಜೊತೆ ಸಿಕ್ಕಿಕೊಳ್ಳುತ್ತದೆ. ಅಳುತ್ತ ಕೂರುವ ಝಾರಾಳ ಸ್ಥಿತಿಕಂಡು ಅಂಗಡಿಯೊಂದರಲ್ಲಿದ್ದ ಮುದುಕನೊಬ್ಬ ಅಲ್ಲೇ ಚರಂಡಿ ಶುಚಿಗೊಳಿಸುತ್ತಿದ್ದ ಜಾಡಮಾಲಿಯೊಬ್ಬನ ನೆರವಿನಿಂದ ಶೂ ತೆಗೆದು ಝಾರಾಳಿಗೆ ಕೊಟ್ಟು ಅಳು ನಿಲ್ಲಿಸುವಂತೆ ಸಮಾಧಾನಪಡಿಸುತ್ತಾನೆ.

(ಟೆಹ್ರಾನ್ ನಗರದ ಬೀದಿಯಲ್ಲಿ ಅಲಿ, ಝಾರಾ ಓಡುವುದನ್ನು ಮಜೀದಿ ಕಿರಾಣಿ ಅಂಗಡಿಗಳಲ್ಲಿ, ಸಣ್ಣ ಗೂಡಂಗಡಿಗಳಲ್ಲಿ, ಕಾರಿನೊಳಗೆ ಹಿಡೆನ್ ಕ್ಯಾಮೆರಾ ಇಟ್ಟು ಚಿತ್ರೀಕರಿಸಿರುವ ದೃಶ್ಯಗಳೊಂದಿಗೆ ನಾವು ಕೂಡ ಅವರೊಂದಿಗೆ ಓಡುತ್ತಿರುವ ಹಸಿಹಸಿ ಅನುಭವವಾಗುತ್ತದೆ. ಟೆಹ್ರಾನಿನ ಮಾರುಕಟ್ಟೆ ಬೀದಿಯ ಅನೇಕರಿಗೆ ಅಲ್ಲಿ ಶೂಟಿಂಗ್ ನಡೆದಿರುವುದು ಗೊತ್ತಾದದ್ದೇ ಥೇಟರ್‍ಗಳಲ್ಲಿ, ಫಿಲ್ಮ್ ಫೆಸ್ಟಿವಲ್‍ನಲ್ಲಿ ಚಿಲ್ಡ್ರನ್ ಆಫ್ ಹೆವನ್ ನೋಡಿದ ಮೇಲೆಯೇ. ಅಷ್ಟರಮಟ್ಟಿಗೆ ಮಜೀದಿ ಈ ಚಿತ್ರವನ್ನು ಸಾರ್ವಜನಿಕ ಪ್ರದೇಶದಲ್ಲಿ ಶೂಟ್ ಮಾಡುವಾಗಲೂ ಅಲ್ಲಿನ ಜನಕ್ಕೆ ಚಿತ್ರೀಕರಣದ ಚಿಕ್ಕ ವಿವರವನ್ನು ಬಿಟ್ಟುಕೊಡದೆ ಸೂಕ್ಷ್ಮತೆ ಸಾಧಿಸಿದ್ದಾರೆ).ಕೆ.ಎಲ್.ಚಂದ್ರಶೇಖರ್ ಐಜೂರ್

ಶಾಲೆಗೆ ರಜೆ ಬಂದಾಗ ಅಲಿ ಗೆಳೆಯರೊಂದಿಗೆ ಆಟವಾಡುವುದನ್ನು ಬಿಟ್ಟು ತನ್ನ ತಂದೆಯೊಂದಿಗೆ ಟೆಹ್ರಾನಿನ ಶ್ರೀಮಂತರ ಬಡಾವಣೆಗಳಲ್ಲಿ ಅವರ ಮನೆಯ ಅಂಗಳದ ಹೂ ತೋಟಕ್ಕೆ ಔಷಧಿ ಸಿಂಪಡಿಸಿ ಸ್ವಚ್ಛಮಾಡುವ ಕೆಲಸಕ್ಕೆ ಹೋಗುತ್ತಾನೆ. ಹೆಚ್ಚು ದುಡ್ಡು ಸಂಪಾದಿಸಿದ ದಿನ ಖುಷಿಯಲ್ಲಿ ನಿನಗೇನು ಬೇಕು ಎಂದು ಅಲಿಯನ್ನು ಅವನ ತಂದೆ ಕೇಳುತ್ತಾನೆ. ನನಗೇನು ಬೇಡ, ಝಾರಾಳ ಶೂ ಬಹಳ ಹಳತಾಗಿ ಹರಿದುಹೋಗಿದೆ, ಅವಳಿಗೆ ಹೊಸ ಶೂ ಕೊಡಿಸಿ ಎಂದು ಕೇಳಿಕೊಳ್ಳುತ್ತಾನೆ. ಆಗಲಿ, ಎಂದು ಹೇಳುವ ಅವನ ತಂದೆ ಅಲಿಯನ್ನು ಕೂರಿಸಿಕೊಂಡು ಸೈಕಲ್‍ನಲ್ಲಿ ಹೋಗುವಾಗ ಸಣ್ಣ ಅಪಘಾತವಾಗಿ ಝಾರಾಳಿಗೆ ಶೂ ಖರೀದಿಸುವ ಆಸೆ ಅಲ್ಲೆ ಕಮರಿಹೋಗಿ ಗಾಯಗೊಂಡು ಅವರಿಬ್ಬರು ಮನೆ ಸೇರುತ್ತಾರೆ.

ಮರುದಿನ ಅಲಿ ಶಾಲೆಗೆ ಹೋದಾಗ ನಾಲ್ಕು ಕಿಲೋ ಮೀಟರ್ ಓಟದ ಸ್ಪರ್ಧೆಯ ವಿವರಗಳ ಜೊತೆಗೆ ಮೊದಲ ಎರಡು ಸ್ಥಾನಗಳನ್ನು ಪಡೆದವರಿಗೆ ಎರಡು ವಾರಗಳ ಸಮ್ಮರ್ ಕ್ಯಾಂಪಿಗೆ ಪ್ರವಾಸ ಮತ್ತು ಮೂರನೇ ಸ್ಥಾನ ಪಡೆದವರಿಗೆ ಒಂದು ಜೊತೆ ಶೂ ಬಹುಮಾನವಾಗಿ ನೀಡಲಾಗುವ ವಿವರಗಳನ್ನು ನೋಟಿಸ್ ಬೋರ್ಡಿನಲ್ಲಿ ಬರೆಯಲಾಗಿರುತ್ತದೆ. ಮೂರನೇ ಬಹುಮಾನ ಶೂ ಎಂದು ನೋಡುವ ಅಲಿ ಆ ಓಟದ ಸ್ಪರ್ಧೆಗೆ ತನ್ನನ್ನು ಪರಿಗಣಿಸುವಂತೆ ಶಾಲೆಯ ಆವರಣದಲ್ಲಿಯೇ ಓಡಿ ತೋರಿಸಿ ತಾನು ಗೆದ್ದೇಗೆಲ್ಲುವೆನೆಂದು ಹೇಳಿ ಕಾಡಿಬೇಡಿ ಆ ಸ್ಪರ್ಧೆಗೆ ತನ್ನ ಹೆಸರು ಬರೆಸುತ್ತಾನೆ.

ಓಟದ ಸ್ಪರ್ಧೆ ಪ್ರಾರಂಭವಾದಾಗ ಅಲಿ ಆದಷ್ಟು ಮೂರನೆಯವನಾಗಿ ಓಡುತ್ತಾ ಆ ಸ್ಥಾನವನ್ನು ಬಹುದೂರ ಕಾಯ್ದುಕೊಂಡು ಒಂದೇ ವೇಗದಲ್ಲಿ ಓಡುತ್ತಿರುತ್ತಾನೆ. ಹಾಗೆ ಅವನು ಬೇರೇನೂ ಕಾಣದವನಂತೆ ಓಡುತ್ತಿರುವಾಗಲೇ ‘ನನಗೆ ನನ್ನ ಶೂ ಬೇಕು’ ಎಂದು ಹೇಳುವ ಝಾರಾಳ ದನಿ ಕಿವಿಗೆ ನಾಟುತ್ತಿರುತ್ತದೆ. ಓಡುವ ಧಾವಂತದಲ್ಲಿರುವ ಅಲಿಗೆ ತನ್ನ ಕಣ್ಣೆದುರೇ ಮೂರನೇ ಸ್ಥಾನಕ್ಕಾಗಿ ಪೈಪೋಟಿ ನೀಡಲು ಒಂದಿಬ್ಬರು ಬರುವುದು ದಿಗಿಲು ಹುಟ್ಟಿಸುತ್ತದೆ. ಮೂರನೇ ಸ್ಥಾನ ತಪ್ಪಿಹೋದರೆ...

ಅಲಿ ಕಣ್ಣುಮುಚ್ಚಿಕೊಂಡು ಓಡಲು ಶುರುಮಾಡುತ್ತಾನೆ. ಹಾಗೆ ಓಡುತ್ತಲೇ ಮೂರನೇ ಸ್ಥಾನಕ್ಕೆ ಪೈಪೋಟಿ ಹೆಚ್ಚಾಗಿ ಆ ಸ್ಪರ್ಧೆಯ ಮೊದಲಿಗನಾಗಿ ಗುರಿಮುಟ್ಟುತ್ತಾನೆ. ಸಂಭ್ರಮದಿಂದ ಬೆನ್ನುತಟ್ಟಲು ಬರುವ ತನ್ನ ಮೇಷ್ಟರಿಗೆ, ‘ನಾನು ಮೂರನೆಯವನ, ನಂದು ಥರ್ಡ್ ಫ್ರೈಜಾ’ ಎಂದು ಕೇಳುತ್ತಾನೆ, ಅದಕ್ಕವರು ಥರ್ಡಾ? ನೀನೇ ಫಸ್ಟು ಅನ್ನುತ್ತಾರೆ. ಅಲಿ ಸೋತವನಂತೆ ಮುಖಮಾಡಿಕೊಳ್ಳುತ್ತಾನೆ. ಆ ಸೋತ ಮುಖದಲ್ಲೇ ಮನೆಗೆ ಬರುತ್ತಾನೆ, ಇವನು ಬರಿಗೈಲಿ ಬಂದದ್ದನ್ನು ಕಂಡು ಝಾರಾ ಎಲ್ಲ ಅರ್ಥವಾದವಳಂತೆ ಅವನ ಹರಿದು ಕಿತ್ತುಹೋಗಿರುವ ಶೂ ನೋಡುತ್ತ ಮನೆಯೊಳಕ್ಕೆ ಹೊರಟುಬಿಡುತ್ತಾಳೆ.

ಅಲಿ ತನ್ನ ಶೂ ಬಿಸಾಡಿ ಮನೆಯ ಮುಂದಿನ ಸಣ್ಣ ಕಾರಂಜಿಯಂತಹ ತೊಟ್ಟಿಯೊಳಗೆ ಗಾಯಗೊಂಡ ಕಾಲುಗಳನ್ನು ಇಳಿಬಿಟ್ಟು ದಣಿವಾರಿಸಿಕೊಳ್ಳುವವನಂತೆ ಕೂರುತ್ತಾನೆ. ಆ ತೊಟ್ಟಿಯೊಳಗಿದ್ದ ಕೆಂಪುಬಣ್ಣದ ಮೀನುಗಳು ಇವನ ಗಾಯಗೊಂಡ ಕಾಲುಗಳನ್ನು ಅಪ್ಪಿಕೊಂಡು ಸಂತೈಸುವಂತೆ ಕಾಲಿನ ಸುತ್ತಲೂ ಮುತ್ತಿಕೊಳ್ಳುತ್ತವೆ.

ಯಾವುದು ಶ್ರೇಷ್ಠ?

2007ರಲ್ಲಿ ಅಂದರೆ ಚಿಲ್ಡ್ರನ್ ಆಫ್ ಹೆವನ್ ಚಿತ್ರ ಬಂದು ಒಂದು ದಶಕದ ನಂತರ ಆಗಷ್ಟೇ ತೆರೆಕಂಡು ಯಶಸ್ಸು ಕಂಡಿದ್ದ ‘ದುನಿಯಾ’ ಚಿತ್ರದ ನಿರ್ದೇಶಕ ಸೂರಿಯನ್ನು ಸಂದರ್ಶಿಸಲು ಹೋಗಿದ್ದೆ, ಸಂದರ್ಶನ ಮುಗಿಸಿ ಇನ್ನೇನು ಹೊರಡಬೇಕು ಅನ್ನುವಾಗ ಸೂರಿ, ‘ನೀವು ಮಜೀದ್ ಮಜೀದಿಯ ಚಿಲ್ಡ್ರನ್ ಆಫ್ ಹೆವನ್ ಮತ್ತು ಕಲರ್ ಆಫ್ ಪ್ಯಾರಾಡೈಸ್ ಚಿತ್ರಗಳನ್ನು ನೋಡಿದ್ದರೆ ಯಾವ ಕಾರಣಕ್ಕೂ ನನ್ನ ‘ದುನಿಯಾ’ ಚಿತ್ರವನ್ನು ಶ್ರೇಷ್ಠವೆಂದು ಒಪ್ಪಿಕೊಳ್ಳಲಾರಿರಿ’ ಅಂದಿದ್ದರು. ಅದು ನಿಜ.

ಕಡು ದ್ವೇಷಿಯಿಂದ ಮೆಚ್ಚುಗೆ!

ಈಚೆಗೆ ಸಿನಿಮಾದ ಕಡು ದ್ವೇಷಿಯಾದ ನನ್ನ ಆಪ್ತರೊಬ್ಬರು ಯಾವ್ಯಾವುದೋ ದೇಶದ ಸಿನಿಮಾಗಳನ್ನು ನೋಡಿ ಕೆಟ್ಟು ಇಂಡಿಯನ್ ಸಿನಿಮಾದ ಮೇಲೆ ಎಂತೆಂಥವೋ ಪ್ರಶ್ನೆಗಳನ್ನು, ತಕರಾರುಗಳನ್ನು ತೆಗೆಯುತ್ತಿದ್ದೇನೆಂದು ನನ್ನ ಮೇಲೆ ಗಂಭೀರ ಆರೋಪ ಹೊರಿಸಿದ್ದರು. ಇದೇ ಚಿಲ್ಡ್ರನ್ ಆಫ್ ಹೆವನ್ ಚಿತ್ರದ ಡಿವಿಡಿಯೊಂದನ್ನು ಅವರು ನೋಡಲಿ ಎಂಬ ಸಣ್ಣ ಆಸೆಯಿಂದ ಕಳಿಸಿಕೊಟ್ಟಿದ್ದೆ. ಅವರ ಮನೆಮಂದಿಯೆಲ್ಲ ಈ ಚಿತ್ರವನ್ನು ನೋಡುತ್ತಾ ಚಿತ್ರ ಮುಗಿಯುವ ಹೊತ್ತಿಗೆ ಅವರೆಲ್ಲರ ದಃಖದ ಕಟ್ಟೆ ಒಡೆದು ನನ್ನ ಮಿತ್ರರ ತಂದೆ ‘ಓಡಿಹೋಗಿ ಆ ಹುಡುಗನಿಗೆ ಒಂದು ಜೊತೆ ಶೂ ಕೊಡಿಸಿ ಬರಬೇಕು ಅನ್ನಿಸುತ್ತಿದೆ’ ಅಂದರಂತೆ. ಬಹುಶಃ ಮಜೀದ್ ಮಜೀದಿಗೆ ಇದಕ್ಕಿಂತ ದೊಡ್ಡ ಮೆಚ್ಚುಗೆ ದೊರೆತಿರಲಾರದು.

ರೇಣುಕಾ ನಿಡಗುಂದಿ

ಹಾಲುಂಡ ತವರೀಗಿ ಏನೆಂದು ಹಾಡಲೆ

July 2018

ಡಾ.ಧರಣಿದೇವಿ ಮಾಲಗತ್ತಿ

ಡುಂಡುಭ ವಿಲಾಪ

July 2018

ಡಾ.ಧರಣಿದೇವಿ ಮಾಲಗತ್ತಿ

‘ಪಾದುಕಾ ಕಿರೀಟಿ’

July 2018

ಎಚ್.ಗೋಪಾಲಕೃಷ್ಣ

ನಮ್ಮಟ್ಟೀಲಿ ಏನಾಯ್ತಂದ್ರ...

July 2018

ಪ್ರೊ.ಜಿ.ಎಚ್.ಹನ್ನೆರಡುಮಠ

ಓಡಿ ಹೋದ ದ್ವೆವಗಳು

June 2018

ಮೂಡ್ನಾಕೂಡು ಚಿನ್ನಸ್ವಾಮಿ

ಸಂಕಟದ ಪ್ರೇಮಿ

June 2018

ಹೇಮಲತಾ ಮೂರ್ತಿ

ವಿಷ ಕುಡಿದ ಮಕ್ಕಳು

June 2018

ಬಾಲಚಂದ್ರ ಬಿ.ಎನ್.

ಕರುನಾಡ ಕದನ

June 2018

ಡಾ.ಮ್ಯಾಥ್ಯೂ ಕೆ.ಎಮ್.

ನಾಗಚಂದ್ರನ ರಾಮಚಂದ್ರ ಚರಿತ ಪುರಾಣಂ

May 2018

ರಾಜು ಹೆಗಡೆ

ತೇಲುವ ಊರಿನ ಕಣ್ಮರೆ!

May 2018

ಎಸ್.ಬಿ.ಜೋಗುರ

ಗರ್ದಿ ಗಮ್ಮತ್ತು

May 2018

ಪ್ರೀತಿ ನಾಗರಾಜ್

ಮನಿಗ್ಯಷ್ಟು ಕ್ವಟ್ಟರಂತೆ?

May 2018

ಪ್ರೊ. ಜಿ. ಎಚ್. ಹನ್ನೆರಡುಮಠ

ಹೂವುಗಳ ನರಕ ಬೆಂಗಳೂರು !

April 2018

ಕೆ. ಸತ್ಯನಾರಾಯಣ

ನಮ್ಮೂರಲ್ಲೇ ಕಳ್ಳರಿದ್ದರು

April 2018

ವೈಲೆಟ್ ಪಿಂಟೊ

ಸ್ವಗತ (ಕವಿತೆ)

April 2018

ಅಮರಜಾ ಹೆಗಡೆ

ಬುದ್ಧನ ನಾಡಿನಲ್ಲಿ...

April 2018

ಹಜರತಅಲಿ ದೇಗಿನಾಳ

ನಮ್ಮೂರು ಲಂಡನ್‍ಹಳ್ಳ!

March 2018

ಡಾ. ಜಾಜಿ ದೇವೇಂದ್ರಪ್ಪ

ಜನ್ನನ ಯಶೋಧರ ಚರಿತೆ

March 2018

ಚಿದಂಬರ ಪಿ. ನಿಂಬರಗಿ

ಶಿರೋಳದ ರೊಟ್ಟಿ ಜಾತ್ರೆ

March 2018

ರಾಜೇಂದ್ರ ಪ್ರಸಾದ್

ರಾಮಮಂದಿರದ ಕನಸು

March 2018

ಗುರುಪ್ರಸಾದ್ ಡಿ. ಎನ್.

ದಿ ಪೋಸ್ಟ್: ಮಾಧ್ಯಮದ ಹೊಸ ಭರವಸೆ

March 2018

ಬಿದರಹಳ್ಳಿ ನರಸಿಂಹಮೂರ್ತಿ

ಗಂಗೆಗನ್ನಡಿಯಲ್ಲಿ ಗಾಲಿಬ್ ಬಿಂಬ

February 2018

ಸಂತೋಷ್ ನಾಯಕ್ ಆರ್.

ಬೂದಿ ಒಳಗಣ ಕೆಂಡ ಚಿಕ್ಕಲ್ಲೂರು ಜಾತ್ರೆ

February 2018

ಕೆ.ಎಲ್.ಚಂದ್ರಶೇಖರ್ ಐಜೂರ್

ಸ್ವರ್ಗದ ಮಕ್ಕಳು

February 2018