2nd ಫೆಬ್ರವರಿ ೨೦೧೮

ಬೂದಿ ಒಳಗಣ ಕೆಂಡ ಚಿಕ್ಕಲ್ಲೂರು ಜಾತ್ರೆ

ಸಂತೋಷ್ ನಾಯಕ್ ಆರ್.ಚಿತ್ರಗಳು: ದಿನೇಶ್ ಹೆಗಡೆ

ಭಾರತೀಯ ಸಮಾಜದ ಬಹುತ್ವವನ್ನು, ಸಾಮಾಜಿಕ ಆಚರಣೆಗಳ ಹಿಂದಿನ ಜನಸಮುದಾಯಗಳ ಸಾಂಸ್ಕೃತಿಕ ಲೋಕವನ್ನು, ಅದರ ಆಧ್ಯಾತ್ಮವನ್ನು ಅರ್ಥಮಾಡಿಕೊಳ್ಳದಿದ್ದರೆ... ಆಹಾರ ಅಸಹ್ಯವಾಗಿ, ಹಾಡು ಅರಚುವಿಕೆಯಾಗಿ ಕೇಳುತ್ತದೆ.

ಕೊಳ್ಳೇಗಾಲ ತಾಲೂಕಿನ ಚಿಕ್ಕಲ್ಲೂರು, ಧರೆಗೆ ದೊಡ್ಡವರಾದ ಪರಂಜ್ಯೋತಿ ಮಂಟೇಸ್ವಾಮಿಯವರ ಪ್ರೀತಿಯ ಸಿಸುಮಗನಾದ ಸಿದ್ಧಪ್ಪಾಜಿಯ ಗದ್ದುಗೆಯಿರುವ ಪುಣ್ಯಕ್ಷೇತ್ರ. ಬಹುತೇಕ ತಳಸಮುದಾಯಗಳ, ಶ್ರಮಿಕ ವರ್ಗದವರ ಆರಾಧ್ಯ ದೈವನಾಗಿರುವ ಸಿದ್ಧಪ್ಪಾಜಿಯ ಜಾತ್ರೆಯು ಪ್ರತೀ ವರ್ಷ ಜನವರಿ ತಿಂಗಳ (ಪುಷ್ಯ ಮಾಸದ) ಹುಣ್ಣಿಮೆಯ ದಿನದಿಂದ ಶುರುವಾಗಿ 5 ದಿನಗಳ ಕಾಲ ನಡೆಯುತ್ತದೆ. ಚಿಕ್ಕಲ್ಲೂರು ಮತ್ತು ಸುತ್ತೇಳು ಗ್ರಾಮದ ಜನರೆಲ್ಲಾ ಸೇರಿ ಕಾಡಿನಿಂದ ಬಿದಿರು ತಂದು ಅಚ್ಚೆಯನ್ನು ಸಿದ್ಧಪಡಿಸಿ ಸಿದ್ಧಪ್ಪಾಜಿಯ ಗದ್ದುಗೆಯ ದೇವಸ್ಥಾನದ ಮುಂದೆ ತೇರಿನ ರೂಪದಲ್ಲಿ ಚಂದ್ರಮಂಡಲವನ್ನು ರಚಿಸುತ್ತಾರೆ, ಅದಕ್ಕೆ ಭಕ್ತರು ಗಿಣ್ಣು ಗಿಣ್ಣಿಗೂ ತುಪ್ಪದಲ್ಲದ್ದಿದ ಪಂಜನ್ನು ಸುತ್ತಿರುತ್ತಾರೆ. ಬೊಪ್ಪನಗೌಡನಪುರದ ಬುದ್ಧಿಯವರು ರಾತ್ರಿ ಚಂದ್ರೋದಯವಾದ ನಂತರ ಮೊದಲಿಗೆ ಸಿದ್ಧಪ್ಪಾಜಿಗೆ ಪೂಜೆ ಸಲ್ಲಿಸಿ ನಂತರ ಚಂದ್ರಮಂಡಲವನ್ನು ಕರ್ಪೂರದ ಮೂಲಕ ಹೊತ್ತಿಸುತ್ತಾರೆ, ಹೊತ್ತಿ ಉರಿವ ಚಂದ್ರಮಂಡಲದ ಜ್ಯೋತಿಗೆ ನೆರೆದ ಸಾವಿರಾರು ಭಕ್ತರು ತಾವು ತಂದಿರುವ ಕಾಳುಕಡಿಗಳನ್ನು ಎಸೆಯುತ್ತಾರೆ. ರಭಸದಿಂದ ಉರಿವ ಜ್ಯೋತಿಯು ಎತ್ತ ಕಡೆ ವಾಲುತ್ತದೋ ಆ ದಿಕ್ಕಿನಲ್ಲಿ ಆ ವರ್ಷ ಮಳೆಬೆಳೆ ಚೆನ್ನಾಗಿ ಆಗುತ್ತದೆಂದು ನಂಬಿಕೆ. ಉರಿದ ಮೇಲೆ ಉಳಿದ ಮಸಿಯು ಭಕ್ತರ ಪಾಲಿಗೆ ಹಣೆಗೆ ಧರಿಸುವ ಕಪ್ಪು ಮತ್ತು ಸಿದ್ಧಪ್ಪಾಜಿಯ ಪ್ರಸಾದವಾಗಿರುವುದರಿಂದ, ನೀವು ಮರುದಿನ ಹುಡುಕಿದರೂ ಸಿಗದಂತೆ, ಉರಿದ ಕುರುಹೇ ಇಲ್ಲದ ಹಾಗೆ ಭಕ್ತರು ಅದನ್ನು ಗೋರಿಕೊಳ್ಳುತ್ತಾರೆ. ಮೇಲಿನಿಂದ ಪೂಜಾರಿಗಳು ಎಸೆಯುವ ತೇರಿನ ಹೂಮಾಲೆಗಳು, ಅಲಂಕಾರದ ವಸ್ತುಗಳು ನೆಲ ಮುಟ್ಟದೆ ಸುತ್ತ ನಿಂತ ಅಸಂಖ್ಯಾತ ಭಕ್ತರ ಕೈ ಪಾಲಾಗುತ್ತವೆ.

ಈ ಜಾತ್ರೆಗೆ ಚಾಮರಾಜನಗರ, ಮೈಸೂರು, ಮಂಡ್ಯ, ಬೆಂಗಳೂರು, ರಾಮನಗರ, ಹಾಸನ ಮೊದಲಾದ ಜಿಲ್ಲೆಗಳಿಂದ ಹಾಗೂ ತಮಿಳುನಾಡಿನ ಕೆಲ ಭಾಗಗಳಿಂದಲೂ ಬರುವ ಸಾವಿರಾರು ಭಕ್ತರು ಐದೂ ದಿನ ಚಿಕ್ಕಲ್ಲೂರಿನಲ್ಲಿ, ದೇವಸ್ಥಾನದ ಸುತ್ತಮುತ್ತ ಇರುವ ತೋಪು, ಊರವರ ಹೊಲ, ತೋಟಗಳ ಖಾಲಿ ಜಾಗಗಳಲ್ಲಿ ಸಣ್ಣಸಣ್ಣ ಬಿಡಾರಗಳನ್ನು ಹೂಡಿಕೊಂಡು ತಮ್ಮ ಸಂಸಾರ ಸಮೇತ ವಾಸ್ತವ್ಯ ಮಾಡುತ್ತಾರೆ. ಅಲ್ಲಿಗೆ ತಾವು ತಂದಿರುವ ಮತ್ತು ತಮ್ಮ ದೇವರ ಪ್ರತೀಕವಾಗಿ ಇರುವ ಕಂಡಾಯ(ಮಂಟೇಸ್ವಾಮಿಯನ್ನು ಪ್ರತಿನಿಧಿಸುವ ಆಯುಧ), ನಾಗಬೆತ್ತ ಹಾಗೂ ಬಿರುದುಗಳಿಗೆ ಎಡೆಯನ್ನು ಇಕ್ಕಿ ಪೂಜಿಸುತ್ತಾರೆ. ಹೀಗೆ ನಾನು ಸಣ್ಣವನಿದ್ದಾಗಿಂದಲೂ ನೋಡುತ್ತಿರುವ ಚಿಕ್ಕಲ್ಲೂರು ಜಾತ್ರೆಯು ಸುಮಾರು 500—600 ವರ್ಷಗಳಿಂದ, ಸಿದ್ಧಪ್ಪಾಜಿಯು ಹಲಗೂರು ಪವಾಡವನ್ನು ಜಯಿಸಿದ ನೆನಪಿಗೆ ಪ್ರತೀ ವರ್ಷ ನಡೆಯುತ್ತಾ ಬಂದಿದೆ.

ಕಬ್ಬಿಣದ ಕುಲುಮೆಗಳ ಒಡೆಯರಾಗಿದ್ದು, ರಾಜರಿಗೆ, ಸೈನ್ಯಕ್ಕೆ ಕತ್ತಿ, ಗುರಾಣಿ ಮೊದಲಾದುವನ್ನು ಒದಗಿಸುತ್ತಾ ಅತ್ಯಂತ ಸಿರಿವಂತರಾಗಿದ್ದ ಹಲಗೂರಿನ ಪಾಂಚಾಳರಿಂದ ತನ್ನ ಗುರುವಿನ ಆಣತಿಯಂತೆ ಕಬ್ಬಿಣದ ಭಿಕ್ಷೆಗಾಗಿ ಬರುವ ಸಿದ್ಧಪ್ಪಾಜಿಯು ಆರು ಘೋರ ಪರೀಕ್ಷೆಗಳನ್ನು ಎದುರಿಸಬೇಕಾಗುತ್ತದೆ. ಕೆಂಪಗೆ ಕಾದ ಆನೆ ಗಾತ್ರದ ಕಬ್ಬಿಣದ ಗಟ್ಟಿಯ ಮೇಲೆ ಹನ್ನೆರಡು ದಿನ ಮಲಗಿ ಎದ್ದು ಬರುವ ಸಿದ್ಧಪ್ಪಾಜಿಯು ತಮ್ಮ ಪವಾಡದ ಮೂಲಕ ಆಗಿನ ಕಾಲದಲ್ಲಿ ಕಪ್ಪು ಚಿನ್ನ ಎಂದೇ ಹೆಸರಾದ, ಆಗ ಎಲ್ಲರಿಗೂ ಸುಲಭವಾಗಿ ದಕ್ಕದ ಕಬ್ಬಿಣದ ಸಲಕರಣೆ ಸಾಮಾಗ್ರಿಗಳನ್ನು ಸಾಮಾನ್ಯರ ಬಳಕೆಗಾಗಿ ಗೆದ್ದು ತರುತ್ತಾರೆ. ಹೀಗೆ ದುಷ್ಟರಿಗೆ ದುಃಸ್ವಪ್ನವಾದ, ಭಕ್ತರ ಕಷ್ಟಗಳಿಗೆ ಒದಗಿಬರುವ, ಮಾಡಿದವರ ಮನವ ಬಲ್ಲ, ನೀಡಿದವರ ನಿಜವ ಬಲ್ಲ ಘನನೀಲಿಸಿದ್ಧಪ್ಪಾಜಿಯ ಜಾತ್ರೆಯು ಅವನ ಒಕ್ಕಲಾದ ಸಾವಿರಾರು ಜನರಿಗೆ ವರ್ಷಕ್ಕೊಮ್ಮೆ ಬರುವ ಅಪೂರ್ವ ಆಧ್ಯಾತ್ಮಿಕ ಯಾತ್ರೆ.

ಸಿದ್ಧಪ್ಪಾಜಿಯ ನೀಲಗಾರರು, ಗುಡ್ಡರು ಸಹಸ್ರಾರು ಸಂಖ್ಯೆಯಲ್ಲಿ ಸೇರುವ ಈ ಜಾತ್ರೆಗೆ ಬಹುತೇಕ ಶ್ರಮಿಕ ಹಾಗೂ ತಳಸಮುದಾಯಗಳ ಜಾತಿಗಳ ಲಕ್ಷಾಂತರ ಭಕ್ತರು ಬಂದು ಸೇರುವುದು, ತಮ್ಮ ಕಷ್ಟಸುಖಗಳೇನೇ ಇದ್ದರೂ ಸ್ವಾಮಿಯ ಸೇವೆ ಮಾಡಿ, ಮುಡಿ ಕೊಟ್ಟು, ನಾಲ್ಕನೇ ದಿನ ಮಾಂಸಾಹಾರ ಅಥವಾ ಸಸ್ಯಾಹಾರದ ಪಂಕ್ತಿ ಸೇವೆ ಮಾಡುವ ಮೂಲಕ ತಮ್ಮ ಬಂಧು ಮಿತ್ರರಿಗೆಲ್ಲಾ ಕರೆದು ಊಟ ಬಡಿಸುವುದು, ಜಾತಿ ಭೇದವಿಲ್ಲದೆ ವಾಸ್ತವ್ಯ ಮಾಡುವುದು, ಒಟ್ಟಿಗೆ ಕೂತು ಊಟ ಮಾಡುವುದು ಈ ಜಾತ್ರೆಯ ವಿಶೇಷ. ಹಾಗೆಯೇ ಯಾರದೇ ಮೇಲ್ವಿಚಾರಣೆಯ ಅಗತ್ಯವಿಲ್ಲದೆ ಜಾತ್ರೆಗೆ ಬಂದ ಲಕ್ಷಾಂತರ ಜನರೆಲ್ಲರೂ ಸ್ವಯಂ ವ್ಯವಸ್ಥೆಗೆ ಒಳಪಟ್ಟು, ಪರಸ್ಪರ ಸಹಕಾರಿ ತತ್ವದನುಸಾರ, ಸುಗಮವಾಗಿ ಐದೂ ದಿನ ಜಾತ್ರೆ ನಡೆಸುವುದು ಅತ್ಯಂತ ವಿಶೇಷವೇ ಸರಿ. ಸಿದ್ಧ ಪಂಥದ ಸಿದ್ಧಪ್ಪಾಜಿಯ ಜಾತ್ರೆಯ ಕೊನೆಯದಿನ ವೈಷ್ಣವ ಸಂಪ್ರದಾಯದ ಮುತ್ತತ್ತಿರಾಯನಿಗೂ ಸೇವೆ ಇರುವುದರಿಂದ ಇದು ಶೈವ ಮತ್ತು ವೈಷ್ಣವ ಸಂಪ್ರದಾಯಗಳ ಸಾಮರಸ್ಯಕ್ಕೂ ದ್ಯೋತಕವಾಗಿದೆ.

ಸಾಮಾನ್ಯವಾಗಿ ಜಾತ್ರೆಗಾಗಿ ಬರುವ ಕಾಲು ಭಾಗದಷ್ಟೂ ಜನ ಈ ಬಾರಿ ಬರಲಿಲ್ಲ. ಇದಕ್ಕೆ ಸಿದ್ಧಪ್ಪಾಜಿಯ ಮೇಲೆ ಜನರ ಭಕ್ತಿ ಕಡಿಮೆಯಾಗಿದ್ದು ಕಾರಣವಲ್ಲ. ಪ್ರಾಣಿಪ್ರಿಯರಾದ ದಯಾಳು ಸ್ವಾಮೀಜಿಯೊಬ್ಬರು ಜಾತ್ರೆಯಲ್ಲಿ ಮಾಂಸಾಹಾರ ಸೇವನೆಗಾಗಿ ಪ್ರಾಣಿಬಲಿ ನಡೆಯುತ್ತಿರುವುದನ್ನು ವಿರೋಧಿಸಿ ಹೈಕೋರ್ಟಿನಿಂದ ತಡೆ ತಂದಿದ್ದರು.

ಕೇಳುವವರು ಇಲ್ಲದಿದ್ದರೆ ಹಾಡುವವರಿಗೇನು ಕೆಲಸ?

ಮಂಟೇಸ್ವಾಮಿ ಕಾವ್ಯವೂ ಸೇರಿದಂತೆ ದೇಶದ ಅನೇಕ ಮಹಾಕಾವ್ಯಗಳು, ಆಧ್ಯಾತ್ಮಸಾಧನೆಯ ಕ್ರಮಗಳು ಹಾಗೂ ದೇಶದ ತಾತ್ವಿಕ ಜ್ಞಾನ ಸಂಪತ್ತು ಮೌಖಿಕ ರೂಪದಲ್ಲಿಯೇ ಜನಪದರಲ್ಲಿ ಉಳಿದು ಬಂದಿವೆ. ಹಾಗೆ ನೋಡಿದರೆ ಭಾರತದ ಆಧ್ಯಾತ್ಮಿಕ ಪರಂಪರೆಗೆ ಸೇರಿದ ಸಿದ್ಧ, ನಾಥ, ಶಾಕ್ತ, ತಂತ್ರ ಮೊದಲಾದ ಹಿನ್ನೆಲೆಯುಳ್ಳ ತಾತ್ತ್ವಿಕ ಚಿಂತನೆಗಳೇ ಭಾರತದ ಬಹುಪಾಲು ಜನರ ಜೀವನ ಕ್ರಮವಾಗಿದೆ.

ಮಂಟೇಸ್ವಾಮಿ ಪರಂಪರೆಯ ಕಾವ್ಯದ ಹಾಡುವಿಕೆಯನ್ನು ಮೊದಲ ನೀಲಗಾರನಾದ ಘನನೀಲಿ ಸಿದ್ಧಪ್ಪಾಜಿಯ ಕಾಲದಿಂದ ಇಂದಿನವರೆಗೂ ಉಳಿಸಿಕೊಂಡು, ಬೆಳೆಸಿಕೊಂಡು ಬಂದಿರುವುದು, ಅವನಿಗೆ ಗುಡ್ಡ ಬಿಡಿಸಿಕೊಂಡು ಒಕ್ಕಲಾಗಿರುವ ನೀಲಗಾರರು. ಇಲ್ಲಿ, ಗುಡ್ಡರಲ್ಲಿ ನಿಮಗೆ ಜಾತಿ ಭೇದ ಕಾಣಲಾಗದು. ಯಾವುದೇ ಜಾತಿಯ ವ್ಯಕ್ತಿ ಗುಡ್ಡನಾಗಬಹುದು, ನೀಲಗಾರನಾಗಬಹುದು. ಹಾಡುವ ಪರಂಪರೆಯ ಕೊಂಡಿಯಾಗಬಹುದು. ಹಾಡುಗಾರರ ಅನುಸಾರ, ನೀಲಿ ಎಂದರೆ ಅದೊಂದು ಅಮಲು, ಒಂದು ಬಗೆಯ ಉನ್ಮತ್ತ ಸ್ಥಿತಿ, ತಾತ್ತ್ವಿಕ ತರ್ಕಗಳನ್ನು ಮೀರಿದ ಆಧ್ಯಾತ್ಮಿಕ ಅವಸ್ಥೆ. ಇದು ಅನುಭವ ಕೇಂದ್ರಿತ ಪರಂಪರೆಯಾಗಿದ್ದು, ಗುರುವಿಗಾಗಿ ಶಿಶುಮಕ್ಕಳು ತಮ್ಮ ಇಡೀ ಜೀವನವನ್ನು ಮುಡಿಪಾಗಿಡುತ್ತಾರೆ.

ತಂಬೂರಿ, ತಾಳ, ಡಕ್ಕಿ ಮೊದಲಾದವುಗಳನ್ನು ಹಿಡಿದ ಹಿಮ್ಮೇಳದೊಂದಿಗೆ, ತಲೆಗೆ ಕೆಂಪು ರುಮಾಲು, ಬಿಳಿ ಅಂಗಿ ಧರಿಸಿ ಅಂದವಾಗಿ ಕಾಣುವ ನೀಲಗಾರರು, ಕರೆದವರ ಮನೆ, ಜಾತ್ರೆ, ಪೂಜೆ ಮತ್ತಿತರ ಸಂದರ್ಭಗಳಷ್ಟೇ ಅಲ್ಲದೆ ಯಾರಾದರು ಸತ್ತಾಗಲೂ ಹಾಡುತ್ತಾರೆ. ಸತ್ತವರ ಮನೆಯ ಕಾರ್ಯಕ್ಕೂ ಕಾವ್ಯವನ್ನು ಹಾಡಿಸುವ ಗ್ರಾಮೀಣ ಜನರ ಆಧ್ಯಾತ್ಮಿಕ ಜೀವನ ದೃಷ್ಟಿಯ ಪ್ರೌಢಿಮೆ ಬೆರಗು ಮೂಡಿಸುತ್ತದೆ.

ಚಿಕ್ಕಲ್ಲೂರು ಜಾತ್ರೆಯಲ್ಲಿ ಪ್ರತೀವರ್ಷ ಕನಿಷ್ಠ ಹತ್ತರಿಂದ ಹದಿನೈದು ಹಾಡುವ ನೀಲಗಾರರ ತಂಡಗಳು ಜಾತ್ರೆನಡೆಯುವ ಐದೂ ದಿನಗಳು ಬಿಡಾರ ಹಾಕುತ್ತಾರೆ. ರಾತ್ರಿ ಶುರುವಾಗುವ ವಿವಿಧ ಕಥಾಕಾವ್ಯಗಳ ಹಾಡುಗಾರಿಕೆ ಮುಂಜಾನೆಯಾದರೂ ಮುಗಿಯುವುದಿಲ್ಲ. ಬೆಳದಿಂಗಳು ಬೆರೆತ ದೀಪದ ಬೆಳಕಲ್ಲಿ ತಮಗೆ ಬೇಕಾದ ತಂಡದ ಸುತ್ತಲೂ ನೆರೆದು ಕೂರುವ ಜನರನ್ನು ಕಾವ್ಯದ ಸುಕೋಮಲ ಸಂಗೀತ ಮತ್ತು ಅಲೌಕಿಕ ಸಾಹಿತ್ಯವು ಮತ್ತೊಂದು ಪ್ರಪಂಚಕ್ಕೆ ಕರೆದೊಯ್ಯತ್ತದೆ. ವರ್ಷವಿಡೀ ಎಲ್ಲೆಲ್ಲೋ ಇರುವ ನೀಲಗಾರರ ತಂಡಗಳು ಜಾತ್ರೆಗಳಲ್ಲಿ ನೆರೆದು ಹಾಡುವ ಮೂಲಕ, ಪರಸ್ಪರರ ಗಾಯನವನ್ನು ಕೇಳುವ ಮೂಲಕ, ಮರೆತ ಅಥವಾ ಕಲಿತ ಭಾಗಗಳನ್ನು ತಿದ್ದುವ ಮೂಲಕ ಕಾವ್ಯದ ಮೂಲ ಸ್ವರೂಪ, ಅಂದ ಮತ್ತು ಮಾಧುರ್ಯವನ್ನು ಉಳಿಸಿಕೊಂಡು ಬಂದಿದ್ದಾರೆ. ಈ ವರ್ಷ ಮೂರ್ನಾಲ್ಕು ತಂಡಗಳು ಕೇವಲ ಒಂದು ದಿನದ ಮಟ್ಟಿಗೆ ಬಂದು ಹೋದದ್ದನ್ನು ಕಾಣಬಹುದಿತ್ತು. ಕಾರಣ ಇಷ್ಟೆ, ಮಾಂಸಾಹಾರ ನಿಷೇಧದಿಂದಾಗಿ ಮೊದಲಿನಂತೆ ಜನ ಬರಲಿಲ್ಲ, ಕೇಳುವ ಜನ ಇಲ್ಲದ ಮೇಲೆ ಹಾಡುವವರಿಗೇನು ಕೆಲಸ?

ಪ್ರಾಣಿಬಲಿಯಲ್ಲ, ಮಾಂಸಾಹಾರ ಸೇವನೆ

‘ಎತ್ತು, ದನ ಸಾಕಿದರೆ ಹೊಲ ಉತ್ಕೋತೀವಿ, ಹಾಲು ಕರ್ಕೋತೀವಿ, ತಿಪ್ಪೆ ಗೊಬ್ಬರ ಮಾಡ್ಕೋತಿವಿ, ಕೋಳಿ, ಕುರಿ ಸಾಕಿ ಹೊಲಾ ಉಳಕ್ಕಾದ್ದಾ? ಕೋಳಿ ಚರ್ಮ ಯಾರಾದ್ರೂ ತಗೋತಾರಾ? ಕೋಳಿ, ಕುರ್ಗೋಳು ಹಾಲು ಕರದ್ದಾ ಸಾರ್?’ ನನಗೆ ಸಿಕ್ಕ ಅಂಗಳ ಗ್ರಾಮದ ರೈತರೊಬ್ಬರು ಜಾತ್ರೆಯಲ್ಲಿ ತಮ್ಮ ಅಸಮಾಧಾನವನ್ನು ವ್ಯಕ್ತಪಡಿಸಿದ್ದು ಹೀಗೆ. ಜಾತ್ರೆಯಲ್ಲಿ ಮದ್ಯಪಾನ ನಿಷೇಧಿಸಿರುವುನ್ನು ಸ್ವಾಗತಿಸುವ ಭಕ್ತರಿಗೆ ಮಾಂಸಾಹಾರದ ಮೇಲೆ ನಿರ್ಬಂಧ ವಿಧಿಸಿರುವುದು ಅತ್ಯಂತ ಬೇಸರದ ವಿಚಾರವಾಗಿತ್ತು. ಮೊದಲಿಗೆ ಗಮನಿಸಬೇಕಾದ್ದು ಏನೆಂದರೆ, ಚಿಕ್ಕಲ್ಲೂರು ಕ್ಷೇತ್ರದಲ್ಲಿ ನಡೆಯುವುದು ಪ್ರಾಣಿಬಲಿ ಅಲ್ಲ, ಮಾಂಸಾಹಾರ ಸೇವನೆ ಅಷ್ಟೆ. ಪ್ರಾಣಿಬಲಿ ನೀಡಲು ದೇವಸ್ಥಾನದ ಮುಂದೆ ಬಲಿಪೀಠವಿಲ್ಲ. ರಕ್ತವನ್ನು ದೇವರಿಗೆ ಅರ್ಪಿಸುವುದೂ ಇಲ್ಲ. ದೇವರ ತೀರ್ಥ ಮಾತ್ರ ತೆಗೆದುಕೊಂಡು ಹೋಗಿ, ತಾವಿರುವಲ್ಲಿಯೇ, ತಮ್ಮ ಮನೆಯಿಂದ ತಂದ ಪದಾರ್ಥವನ್ನು ಬೇಯಿಸಿ ತಿನ್ನುತ್ತಾರಷ್ಟೆ.

ತಮ್ಮೂರಿಗೆ ಒಳ್ಳೇ ಮಳೆಬೆಳೆ ಆಗುತ್ತದೆಂಬ ನಂಬಿಕೆಯಿಂದ, ನಾಲ್ಕು ಜನರಿಗೆ ಕರೆದು ಊಟ ಹಾಕಬೇಕೆಂಬ ಇರಾದೆಯಿಂದ, ವರ್ಷಗಳ ಕಾಲ ಆಡು ಮೇಕೆ ಕೋಳಿಗಳನ್ನು ಸಾಕುವ ರೈತಾಪಿ ಗ್ರಾಮೀಣರು ಮತ್ತು ಅವರಿಂದ ಜಾತ್ರೆಗೆಂದು ಖರೀದಿ ಮಾಡುವ ಜನರೆಲ್ಲಾ ಈಗ ಮುಗ್ಧ ಪ್ರಾಣಿಗಳನ್ನು ಕೊಲ್ಲುವ ಕೊಲೆಗಡುಕರಂತೆ ಕಾಣತೊಡಗಿದ್ದರು. ಪೊಲೀಸರಿಂದ ತಪಾಸಣೆಗೊಳಪಡುತ್ತಿದ್ದರು. ತಮ್ಮದೇ ಕೋಳಿ/ಆಡುಗಳನ್ನು ಕಂಕುಳಲ್ಲಿ ಹಿಡಿದು ಹೊಲ, ಬೇಲಿಗಳ ದಾಟಿ ಕದ್ದೋಡುತಿದ್ದರು.

‘ಇಡೀ ಜಗತ್ತೇ ಮಾಂಸ ತಿಂತದೆ ಅಲ್ವಾ. ಸರಿ ಬುಡಿ, ಈಗ ಎಲ್ಲಾ ಊರುಗಳಲ್ಲು, ಹೊಲ ಮನೆಗಳಲ್ಲೂ ಕೋಳಿ ಕುರಿಗಳನ್ನ ಸಾಕಲೂಬಾರದು ತಿನ್ನಲೂಬಾರದು ಅಂತ ಬ್ಯಾನ್ ಮಾಡಿಸಲಿ ಈ ಸರ್ಕಾರದೋರು, ಸ್ವಾಮೀಜಿಗೊಳು, ವರ್ಷಕ್ಕೊಂದ್ಸಲ ದೇವರ ಹೆಸರಲ್ಲಿ ನಾಕು ಜನ ಊಟ ಮಾಡೋರು, ಅದ್ನೂ ತಪ್ಸುಬುಟ್ರು, ಇವನು ಅಂತಿಂಥಾ ದೇವ್ರಲ್ಲ, ಬೂದಿ ಮುಚ್ಚಿದ್ ಕೆಂಡ, ಅವನ್ನ ಎದ್ರು ಹಾಕ್ಕಂಡ್ರೆ ಒಳ್ಳೇದಾಗಲ್ಲ’ ಎಂದು ಆಕ್ರೋಶ ವ್ಯಕ್ತಪಡಿಸಿದ್ದು ಬಸವಯ್ಯನವರು. ಗ್ರಾಮ ಜೀವನದ ಬದುಕಿಗೂ, ಅಲ್ಲಿನ ವೃತ್ತಿಗಳಿಗೂ, ತಾವು ಸಾಕುವ ಪಶುಪಕ್ಷಿಗಳಿಗೂ, ನಂಬಿರುವ ದೈವಗಳ ಪೂಜೆ— ಜಾತ್ರೆಗಳಿಗೂ ಅವಿನಾಭಾವ ಸಂಬಂಧವಿರುತ್ತದೆ. ಹಾಗಾಗಿಯೇ, ತಮಗೆ ಜಾತ್ರೆ ಮಾಡಿದ, ದೇವರು ಮಾಡಿದ ನೆಮ್ಮದಿ ಸಿಗುವುದಿಲ್ಲವೆಂದೇ ಬಹುತೇಕರು ಈ ವರ್ಷದ ಜಾತ್ರೆಗೆ ಬರಲಿಲ್ಲ.

ಭಾರತೀಯ ಸಮಾಜದ ಬಹುತ್ವವನ್ನು, ಸಾಮಾಜಿಕ ಆಚರಣೆಗಳ ಹಿಂದಿನ ಜನಸಮುದಾಯಗಳ ಸಾಂಸ್ಕೃತಿಕ ಲೋಕವನ್ನು, ಅದರ ಆಧ್ಯಾತ್ಮವನ್ನು ಅರ್ಥಮಾಡಿಕೊಳ್ಳದೆ ಹೋದರೆ, ಆಹಾರ ಅಸಹ್ಯವಾಗಿ, ಹಾಡು ಅರಚುವಿಕೆಯಾಗಿ ಕೇಳುತ್ತದೆ. ನಾವು ಶಾಸ್ತ್ರೀಯ, ಉತ್ತಮ, ಎಂದೆಲ್ಲಾ ಪರಿಭಾವಿಸಿರುವ ಪರಿಕಲ್ಪನೆಗಳು ಜನಿಸಿದ್ದು ಮೂಲತಃ ಜನಪದದ ಮೂಲಕವೇ ಆಗಿದ್ದರೂ ಕಾಲಾನಂತರ ಕೆಲ ಗುಂಪು ಹಾಗು ಸಾಂಸ್ಥೀಕರಣ ಹೊಂದಿದ ಹಿತಾಸಕ್ತಿಗಳ ಹಿಡಿತಕ್ಕೆ ಸಿಲುಕಿ ಕೆಳದರ್ಜೆಯನ್ನು ಅನುಭವಿಸುತ್ತವೆ. ಸ್ವಯಂಘೋಷಿತ ‘ಉನ್ನತ ಸಂಸ್ಕೃತಿ’ಯ ನಂಬಿಕೆಗಳೆಲ್ಲವೂ ಶ್ರೇಷ್ಠವಾಗಿ, ಮತ್ತೆ ಉಳಿದವರದೆಲ್ಲಾ ನಿಕೃಷ್ಟವಾಗುತ್ತದೆ.

ಕೊನೆಗೆ: ಚಿಕ್ಕಲ್ಲೂರಿನ ಮಿತ್ರರೊಬ್ಬರು ಫೋನ್ ಮಾಡಿ, ‘ಸಾರ್, ನಮಗೆ ಈ ವರ್ಷ ಜಾತ್ರೆ ಥರಾನೆ ಅನ್ಸಿರಲಿಲ್ಲ. ನೀವು ಜಾತ್ರೆ ಮುಗಿದ ಮಾರ್ನೆಗೆ ಭಾನುವಾರ ಬರಬೇಕಿತ್ತು. ಪೊಲೀಸು ಕಾವಲು ಎಲ್ಲಾ ಶನಿವಾರಕ್ಕೆ ಕೊನೆ ಆಯ್ತು. ನಿಜವಾದ ಜಾತ್ರೆ ಭಾನುವಾರ ನಡೆಯಿತು. ಹರಕೆ ಇದ್ದೋರೆಲ್ಲಾ ಆವತ್ತು ಬಂದು ಪಂಕ್ತಿಸೇವೆ ಮಾಡಿಸಿದರು’ ಎಂದರು.

* ಸಹಾಯಕ ಪ್ರಾಧ್ಯಾಪಕ, ಸಮಾಜಶಾಸ್ತ್ರ ವಿಭಾಗ, ಕ.ರಾ.ಮು.ವಿ, ಮೈಸೂರು

ಡಾ.ಜಗದೀಶ ಕೆರೆನಳ್ಳಿ

ಜನ್ನನ ಯಶೋಧರ ಚರಿತೆಯಲ್ಲಿ ಪರಿಸರ ವರ್ಣನೆ

ಜುಲೈ ೨೦೧೮

ರೇಣುಕಾ ನಿಡಗುಂದಿ

ಹಾಲುಂಡ ತವರೀಗಿ ಏನೆಂದು ಹಾಡಲೆ

ಜುಲೈ ೨೦೧೮

ನನ್ನ ಕ್ಲಿಕ್

ಜುಲೈ ೨೦೧೮

ಡಾ.ಧರಣಿದೇವಿ ಮಾಲಗತ್ತಿ

ಡುಂಡುಭ ವಿಲಾಪ

ಜುಲೈ ೨೦೧೮

ಡಾ.ಧರಣಿದೇವಿ ಮಾಲಗತ್ತಿ

‘ಪಾದುಕಾ ಕಿರೀಟಿ’

ಜುಲೈ ೨೦೧೮

ಮಂಜುನಾಥ್ ಲತಾ

ಕನ್ನಡ ಸಿನಿಮಾ: ಹೊಸ ಹರಿವು, ಅರಿವು

ಜುಲೈ ೨೦೧೮

ಎಚ್.ಗೋಪಾಲಕೃಷ್ಣ

ನಮ್ಮಟ್ಟೀಲಿ ಏನಾಯ್ತಂದ್ರ...

ಜುಲೈ ೨೦೧೮

ಡಾ.ವಿನಯಾ ಒಕ್ಕುಂದ

ಲಕ್ಷ್ಮೀಶನ ಜೈಮಿನಿ ಭಾರತ ಸೀತಾ ಪರಿತ್ಯಾಗ

ಜೂನ್ ೨೦೧೮

ಪ್ರೊ.ಜಿ.ಎಚ್.ಹನ್ನೆರಡುಮಠ

ಓಡಿ ಹೋದ ದ್ವೆವಗಳು

ಜೂನ್ ೨೦೧೮

ನನ್ನ ಕ್ಲಿಕ್

ಜೂನ್ ೨೦೧೮

ಮೂಡ್ನಾಕೂಡು ಚಿನ್ನಸ್ವಾಮಿ

ಸಂಕಟದ ಪ್ರೇಮಿ

ಜೂನ್ ೨೦೧೮

ಹೇಮಲತಾ ಮೂರ್ತಿ

ವಿಷ ಕುಡಿದ ಮಕ್ಕಳು

ಜೂನ್ ೨೦೧೮

ಮ.ಶ್ರೀ.ಮುರಳಿ ಕೃಷ್ಣ

ಸಂಬಂಧಗಳ ನವಿರು ನಿರೂಪಣೆ ದಿ ಕೇಕ್‍ಮೇಕರ್

ಜೂನ್ ೨೦೧೮

ಬಾಲಚಂದ್ರ ಬಿ.ಎನ್.

ಕರುನಾಡ ಕದನ

ಜೂನ್ ೨೦೧೮

ಡಾ.ಮ್ಯಾಥ್ಯೂ ಕೆ.ಎಮ್.

ನಾಗಚಂದ್ರನ ರಾಮಚಂದ್ರ ಚರಿತ ಪುರಾಣಂ

ಮೇ ೨೦೧೮

ಆರಿಫ್ ರಾಜಾ

...ಇದೀಗ ಎರಡು ನಿಮಿಷವಾಯಿತು!

ಮೇ ೨೦೧೮

ರಾಜು ಹೆಗಡೆ

ತೇಲುವ ಊರಿನ ಕಣ್ಮರೆ!

ಮೇ ೨೦೧೮

ನನ್ನ ಕ್ಲಿಕ್

ಮೇ ೨೦೧೮

ಎಸ್.ಬಿ.ಜೋಗುರ

ಗರ್ದಿ ಗಮ್ಮತ್ತು

ಮೇ ೨೦೧೮

ಪ್ರಸಾದ್ ನಾಯ್ಕ್

ಕ್ವೀನ್ ಆಫ್ ಕಟ್ವೆ ಕೊಂಪೆಯಲ್ಲರಳಿದ ಕಮಲ

ಮೇ ೨೦೧೮

ಪ್ರೀತಿ ನಾಗರಾಜ್

ಮನಿಗ್ಯಷ್ಟು ಕ್ವಟ್ಟರಂತೆ?

ಮೇ ೨೦೧೮

ಪ್ರೊ. ಜಿ. ಎಚ್. ಹನ್ನೆರಡುಮಠ

ಹೂವುಗಳ ನರಕ ಬೆಂಗಳೂರು !

ಎಪ್ರಿಲ್ ೨೦೧೮

ಉಮಾ ಎಚ್. ಎಂ.

ರಾಘವಾಂಕನ ‘ಹರಿಶ್ಚಂದ್ರ ಕಾವ್ಯ’

ಎಪ್ರಿಲ್ ೨೦೧೮

ಕೆ. ಸತ್ಯನಾರಾಯಣ

ನಮ್ಮೂರಲ್ಲೇ ಕಳ್ಳರಿದ್ದರು

ಎಪ್ರಿಲ್ ೨೦೧೮

ವೈಲೆಟ್ ಪಿಂಟೊ

ಸ್ವಗತ (ಕವಿತೆ)

ಎಪ್ರಿಲ್ ೨೦೧೮

ಅಮರಜಾ ಹೆಗಡೆ

ಬುದ್ಧನ ನಾಡಿನಲ್ಲಿ...

ಎಪ್ರಿಲ್ ೨೦೧೮

ಹಜರತಅಲಿ ದೇಗಿನಾಳ

ನಮ್ಮೂರು ಲಂಡನ್‍ಹಳ್ಳ!

ಮಾರ್ಚ್ ೨೦೧೮

ನನ್ನ ಕ್ಲಿಕ್

ಮಾರ್ಚ್ ೨೦೧೮

ಡಾ. ಜಾಜಿ ದೇವೇಂದ್ರಪ್ಪ

ಜನ್ನನ ಯಶೋಧರ ಚರಿತೆ

ಮಾರ್ಚ್ ೨೦೧೮

ಚಿದಂಬರ ಪಿ. ನಿಂಬರಗಿ

ಶಿರೋಳದ ರೊಟ್ಟಿ ಜಾತ್ರೆ

ಮಾರ್ಚ್ ೨೦೧೮

ರಾಜೇಂದ್ರ ಪ್ರಸಾದ್

ರಾಮಮಂದಿರದ ಕನಸು

ಮಾರ್ಚ್ ೨೦೧೮

ಗುರುಪ್ರಸಾದ್ ಡಿ. ಎನ್.

ದಿ ಪೋಸ್ಟ್: ಮಾಧ್ಯಮದ ಹೊಸ ಭರವಸೆ

ಮಾರ್ಚ್ ೨೦೧೮

ಸಾಬೂನು ಚಾಲಿತ ಬೋಟ್

ಮಾರ್ಚ್ ೨೦೧೮

ಬಿದರಹಳ್ಳಿ ನರಸಿಂಹಮೂರ್ತಿ

ಗಂಗೆಗನ್ನಡಿಯಲ್ಲಿ ಗಾಲಿಬ್ ಬಿಂಬ

ಫೆಬ್ರವರಿ ೨೦೧೮

ನನ್ನ ಕ್ಲಿಕ್

ಫೆಬ್ರವರಿ ೨೦೧೮

ಕಟ್ಟ ಕಡೆಯ ಗೆರೆಯ ಮೇಲೆ

ಫೆಬ್ರವರಿ ೨೦೧೮

ಸಂತೋಷ್ ನಾಯಕ್ ಆರ್.

ಬೂದಿ ಒಳಗಣ ಕೆಂಡ ಚಿಕ್ಕಲ್ಲೂರು ಜಾತ್ರೆ

ಫೆಬ್ರವರಿ ೨೦೧೮

ಕೆ.ಎಲ್.ಚಂದ್ರಶೇಖರ್ ಐಜೂರ್

ಸ್ವರ್ಗದ ಮಕ್ಕಳು

ಫೆಬ್ರವರಿ ೨೦೧೮

ಬಣ್ಣ ಬದಲಿಸುವ ಹೂವು

ಫೆಬ್ರವರಿ ೨೦೧೮