2nd February 2018

ಗಂಗೆಗನ್ನಡಿಯಲ್ಲಿ ಗಾಲಿಬ್ ಬಿಂಬ

ಬಿದರಹಳ್ಳಿ ನರಸಿಂಹಮೂರ್ತಿ

ಅಮರ ಕವಿ ಗಾಲಿಬ್‍ನ ಕವಿತೆಯೊಂದರ ವಿಶ್ಲೇಷಣೆ ಮುಖೇನ ಇವತ್ತಿನ ಅನೇಕ ಸಾಮಾಜಿಕ ಸಾಂಸ್ಕೃತಿಕ ರಾಜಕೀಯ ಪ್ರಶ್ನೆಗಳಿಗೆ ಉತ್ತರ ಹುಡುಕುವ ಯತ್ನ ಇದರಲ್ಲಿದೆ.

ಗಾಲಿಬ್‍ನ ಪರ್ಷಿಯನ್ ಕವಿತೆ ‘ಚಿರಾಗ್—ಇ—ದಾಯಿರ್’ (ತಿರುಗುವ ದೀಪ, ನರ್ತನ ವರ್ತುಲದ ಸೊಡರು) ಶೀರ್ಷಿಕೆಗೆ ಮಹಾಮಂಗಳಾರತಿ\ ಜ್ಯೋತಿರ್ಮಂಡಲ ಎಂಬರ್ಥಗಳೂ ಹೊಂದುತ್ತವೆ. ಗಂಗಾನದಿ ದಂಡೆಯ ಹಿಂದೂ ಯಾತ್ರಾ ಕ್ಷೇತ್ರ ಕಾಶಿ ಬಗ್ಗೆ ಅಸೀಮ ಪ್ರೇಮದ ಈ ಕವಿತೆ, ತನ್ನ ಧರ್ಮದಷ್ಟೇ ಆಪ್ತವಾಗಿ ಪರಧರ್ಮವನ್ನೂ ಪ್ರೀತಿಸಿ ಅದರಲ್ಲೂ ಪಾರಮಾರ್ಥಿಕತೆ ಕಾಣುವ ದೃಷ್ಟಿ ವೈಶಾಲ್ಯಕ್ಕೆ ಸಾಕ್ಷಿಯಾಗಿದೆ. ಎಲ್ಲ ಸಂಸ್ಕೃತಿಗಳಿಗೂ ಪರಸ್ಪರ ಆಕರ್ಷಿಸುವ ಗುಣವಿದೆ; ಅರಿತುಕೊಳ್ಳುವ ಹಸಿವಿದೆ. ಸಂಸ್ಕೃತಿನದಿಗಳೂ ನಿಸರ್ಗನಿಷ್ಠವಾಗಿ ಉಕ್ಕಿಹರಿದು ಸಮಾಜಮುಖಿಯಾಗಿ ಸಂಗಮಿಸಿ ಐಕ್ಯಾನಂದ ಸಂಭ್ರಮದಲ್ಲಿ ಅರಿವಿನ ಮಹಾಸಾಗರದಲ್ಲಿ ಲೀನವಾಗುತ್ತವೆ. ಈ ಸಾರ್ವಕಾಲಿಕ, ಸಾರ್ವದೇಶಿಕ, ಸಾರ್ವಭಾಷಿಕ ಸಂದೇಶವೇ ನದಿದಂಡೆಯಲ್ಲರಳಿದ ಮಾನವೀಯ ನಾಗರಿಕತೆಗಳ ಮೊಟ್ಟಮೊದಲ ಮೌಲ್ಯ; ಕಟ್ಟಕಡೆ ಕಿವಿಮಾತು.

ಕಾಶಿನಗರಿ—ಗಂಗಾನದಿಯ ಆಧ್ಯಾತ್ಮಿಕ ಸೌಂದರ್ಯ ಬಣ್ಣಿಸುತ್ತಲೇ ಈ ದೇಶದ ಸಾಮಾಜಿಕ ಅವ್ಯವಸ್ಥೆ ಕುರಿತ ಮುದಿಯಾತ್ರಿಕನೊಬ್ಬನ ಮಾರ್ಮಿಕ ಸಂವಾದ ಕೇಳಿಸುತ್ತಾನೆ ಗಾಲಿಬ್:

ದಯಾಮಯಿ ದೇವಲೋಕ ಕಾಪಾಡಲಿ/ ಈ ಕಾಶಿನಗರಿಯ ವೈಭವವನ್ನು/ ಜೀವನ ಯಾತ್ರೆಯ ಕೊನೆಯಲ್ಲಿ/ ಪದೇಪದೆ ಮರಳುವ ಆತ್ಮಗಳ/ ಈ ಆನಂದ ವಲಯವನ್ನು/ ಈ ತಂಪು ನೆಮ್ಮದಿಯ ತಾಣವನ್ನು ಎಂದು ಹಾರೈಸುವ ಕವಿತೆ ಆ ಶ್ರದ್ಧಾಕೇಂದ್ರದ ಭೌತಿಕ ಇತಿಮಿತಿಗಳನ್ನೆಲ್ಲ ಕಡೆಗಣಿಸಿ, ಬದುಕಿನಾಚೆಗೂ ಚಾಚಿಕೊಳ್ಳುವ ಅದರ ಅಲೌಕಿಕ ಚೆಲುವಿಗೆ ಮಾರುಹೋಗುತ್ತದೆ. ಆ ಪುರಾತನ ನಗರಿಗೆ ಐಹಿಕ ಸುಖಕ್ಕಿಂತ ಆಧ್ಯಾತ್ಮಿಕ ಸುಖವೇ ಮಿಗಿಲಾದದ್ದೆಂದು ಸೂಚಿಸುತ್ತದೆ. ವಿರೋಧಾಭಾಸಗಳನ್ನೂ ಮೀರುವ ಆ ಭಕ್ತಿಜನಕ ವಾತಾವರಣದಲ್ಲಿ ಅಂತರ್ಗತವಾಗಿರುವ ಸಾಂಕೇತಿಕತೆಯನ್ನು ಮಿಂಚಿಸಿ ಅಚ್ಚರಿಗೊಳಿಸುತ್ತದೆ:

ಕಾಲನ ಝಂಝಾವಾತಕ್ಕೆ ಸಿಕ್ಕದೆ/ ಸುರಕ್ಷಿತವಿದ್ದರೂ ದಣಿದಂತಿರುವ ಜಗತ್ತಿನ/ ಗುಡಿಗೋಪುರಗಳ ನಾಡಾದ ಈ ವಾರಣಾಸಿ/ ಅನಂತ ವಸಂತವಿದ್ದಂತೆ/ ಇಲ್ಲಿ ಉದುರುವ ಎಲೆಗಳ ಹಳದಿ ಋತುವೆ/ ತಣ್ಣಗೆ ಹಣೆಗೆಹಚ್ಚಿದ ಗಂಧಸ್ಪರ್ಶವಾಗುತ್ತದೆ/ ಹೂ ಹೂವಿನಲೆಗಳ ಜನಿವಾರ ಧರಿಸಿ/ ನಗುತ್ತಲೇ ಇರುತ್ತದೆ ಇಲ್ಲಿನ ಗಂಗಾಪ್ರವಾಹ/ ಸ್ವರ್ಗದ ಹುಬ್ಬಿಗೆ ಉಗ್ಗಿದ ಕಾಶಿಯ ಗೋಧೂಳಿಯಂತಿದೆ/ ಮುಚ್ಚಂಜೆ ಚೆಂಬೆಳಕ ಚಿಮುಕು.

ಇಷ್ಟು ಹೊಗಳಿದ್ದು ಸಾಲದೆ, ಪರಸ್ಪರ ವಿರುದ್ಧವೆನ್ನಲಾದ ಎರಡು ಧರ್ಮಗಳ ಒಳಸತ್ವ ಸಮನ್ವಯಗೊಳಿಸಿ ಕಾವ್ಯಾತ್ಮಕ ಲೀಲಾಭಾವದಲ್ಲಿ ಒಟ್ಟಿಗೆ ಬೆಸೆದು ಇದರೊಡಲು ಅದರದ್ದಾಗಿಸಿ ಅದರೊಡವೆ ಇದಕ್ಕಿಡುತ್ತದೆ. ವಿಗ್ರಹಾರಾಧಕರು— ಮೂರ್ತಿಭಂಜಕರ ಹಳೆಯ ದ್ವೇಷವನ್ನೂ ಸಲೀಸಾಗಿ ಉಡಾಯಿಸುತ್ತದೆ:

ಗಾಲಿಬ್ ಇಲ್ಲದ ದೆಹಲಿ!

ಗಾಲಿಬ್ ಅಂಕಿತನಾಮದಲ್ಲಿ ಜಗದ್ವಿಖ್ಯಾತನಾದ ಉರ್ದು ಕವಿ ಮಿರ್ಜಾ ಅಸಾದುಲ್ಲಾ ಬೇಗ್ ಖಾನ್ ಹುಟ್ಟಿದ್ದು 1797ರ ಡಿಸೆಂಬರ್ 27 ರಂದು, ಆಗ್ರಾದಲ್ಲಿ. ವಿವಾಹದ ನಂತರ ಗಾಲಿಬ್ ದೆಹಲಿಗೆ ತನ್ನ ವಾಸ್ತವ್ಯ ಬದಲಿಸಿದಾಗ ಆತನಿಗೆ ಹದಿನೈದರ ಹರೆಯ. ಗಾಲಿಬ್ ದೆಹಲಿ ತಲುಪುವ ಮುಂಚೆಯೇ ಆತನ ಕಾವ್ಯಖ್ಯಾತಿ ಅಲ್ಲಿ ನೆಲೆಸಿತ್ತು. ತನ್ನ ಒಂಬತ್ತನೇ ವಯಸ್ಸಿನಲ್ಲಿ ಕಾವ್ಯ ರಚನೆಗೆ ತೊಡಗಿದ ಈ ಕವಿಯ ಖಾಸಗಿ ಬದುಕು ಮಾತ್ರ ಕಡುಕಷ್ಟಗಳ ಗೂಡು. ತಂದೆ ತೀರಿಕೊಂಡಾಗ ಗಾಲಿಬ್ ಐದು ವರ್ಷದ ಹಸುಳೆ. ಕುಟುಂಬಕ್ಕೆ ಆಸರೆಯಾಗಿದ್ದ ಚಿಕ್ಕಪ್ಪನೂ ನಾಲ್ಕು ವರ್ಷದ ಅಂತರದಲ್ಲಿ ಅಸುನೀಗಿದ. ಗಾಲಿಬ್‍ನ ಮಕ್ಕಳಾರೂ ಬದುಕುಳಿಯಲಿಲ್ಲ. ಬದುಕಿನುದ್ದಕ್ಕೂ ಆರ್ಥಿಕಸ್ಥಿತಿ ಅಧೋಗತಿ. ‘ಗಾಲಿಬ್: ವ್ಯಕ್ತಿತ್ವ ಮತ್ತು ಯುಗಾಂತ’ ಕೃತಿಯ ಬೆನ್ನುಡಿಯಲ್ಲಿ ಉಲ್ಲೇಖಿಸಿದಂತೆ, ‘...ಮೂರ್ಖರನ್ನು ಸಹಿಸದ ಅದ್ಭುತಕವಿ ಗಾಲಿಬ್‍ಗೆ ಅವನ ಯುಗ ಮತ್ತು ಸಮಾಜ ಎರಡೂ ವಿರುದ್ಧವಾಗಿದ್ದವು. ಮುಘಲ್ ಆಸ್ಥಾನದ ಅವನತಿ, ಬ್ರಿಟಿಷ್ ಸಾಮ್ರಾಜ್ಯದ ಉತ್ಕರ್ಷ, 1857ರ ಸ್ವಾತಂತ್ರ್ಯ ಹೋರಾಟ ಎಲ್ಲಕ್ಕೂ ಕಣ್ಸಾಕ್ಷಿಯಾಗಿದ್ದ ಅವನ ಪ್ರೀತಿಯ ದಿಲ್ಲಿ ಹಂತಹಂತವಾಗಿ, ಗುರುತು ಹಿಡಿಯಲಾರದಂತೆ ಬದಲಾಗಿ ಹೋಗುತ್ತಿದ್ದಾಗಲೇ ಹುಟ್ಟಿತು ಅವನ ಅಮರಕಾವ್ಯ’.

ಒಂದು ಕಾಲದಲ್ಲಿ ಕಾವ್ಯರಸಿಕರ ಮನಸೂರೆಗೊಂಡಿದ್ದ ಗಾಲಿಬ್‍ನ ರಚನೆಗಳು ಇಂದು ದೆಹಲಿ ನಗರದ ಸಾಂಸ್ಕೃತಿಕ ಉಸಿರಾಗಿ ಉಳಿದಿಲ್ಲ. ಉರ್ದು ಆಡುಭಾಷೆಯಾಗಿಯೂ, ಕಾವ್ಯಭಾಷೆಯಾಗಿಯೂ ಕಳೆದುಹೋಗಿದೆ. ಅಷ್ಟೇ ಅಲ್ಲ, ಇಂದು ಉರ್ದುವನ್ನು ದೇಶದ್ರೋಹಿಗಳ ಭಾಷೆಯೆಂದು ಪರಿಗಣಿಸುತ್ತಿರುವ ವೈರುಧ್ಯಕ್ಕೆ, ದುಃಸ್ಥಿತಿಗೆ ಏನೆನ್ನಬೇಕೋ!

ಶಂಖವಾದ್ಯ ಪ್ರವೀಣರ ಕಣಿವೆಯಂತಿರುವ ಈ ಕಾಶಿ/ ಹಿಂದೂಸ್ಥಾನದ ಕಾಬಾದಂತಿದೆ/ ಇಲ್ಲಿನ ದೇವತಾ ಮೂರ್ತಿಗಳು ವಿನೂತನ ವಿಗ್ರಹಗಳು/ ಹಿಂದೊಮೆ ಸಿನಾಯ್ ಪರ್ವತದ ಮೇಲೆ ಮಿಂಚಿದ್ದ ಬೆಳಕಿನಲ್ಲೆ/ ಎರಕ ಹೊಯ್ದುಕೊಂಡು ನಿಂತಿವೆ.

ಇಸ್ಲಾಂಧರ್ಮ ಮತ್ತು ವೈಷ್ಣವಮತ ಎರಡೂ ‘ಸರ್ವಶಕ್ತ ದೇವ—ದಾಸ ದೀನಾತಿದೀನ’ ಎಂಬುದಾಗಿ ದ್ವೈತಾನುಸಂಧಾನ ಮಾಡುತ್ತಿರುವುದು ಅರಿವಾಗುತ್ತದೆ. ಅಮೂರ್ತದೈವದ ಮೂರ್ತರೂಪವಾದ ಪ್ರತಿಮೆ, ನಂಬಿಕೆ, ವಿಶ್ವಾಸ ಭಕ್ತರಮೇಲೆ ಬೀರುವ ಪರಿಣಾಮ ಅವರ ಮುಖಭಾವದಲ್ಲಿ ಮಿನುಗುತ್ತದೆಂದು ಗಾಲಿಬ್ ಬಣ್ಣಿಸುತ್ತಾನೆ:

ಈ ಹೊಳೆಹೊಳೆವ ದೇವದೇವಿಯರ ಪ್ರತಿಮೆಗಳು/ ಪಾವಿತ್ರ್ಯ ಶ್ರದ್ಧೆಯುಳ್ಳ ಬ್ರಾಹ್ಮಣರದೆಗೂಡಲ್ಲಿ/ ಭಕ್ತಿಯದೀಪ ಹಚ್ಚಿರುವುದಕ್ಕೇ/ ಅವರ ಮುಖಗಳೆಲ್ಲ ತೇಲುವ ದೊನ್ನೆದೀಪಗಳಾಗಿ/ ಮಿನುತ್ತಲೇ ಇವೆ.

ಸಂಸ್ಕೃತಿ ರೂಪಕದಂಥ ಕಾವ್ಯಬಿಂಬ ಉದಯಿಸಿ ನದಿದಂಡೆ ನಾಗರಿಕತೆಗಳ ಒಳಿತಿನೊತ್ತಾಸೆಯನ್ನು, ನಿಷ್ಕಲ್ಮಶ ಸೌಂದರ್ಯೋಪಾಸನೆಯನ್ನು ನೆನಪಿಸಿಕೊಡುತ್ತದೆ. ತನ್ನದಲ್ಲದ ಸಂಸ್ಕೃತಿ, ದ್ವೇಷಬಿತ್ತಿ ಶತ್ರುತ್ವ ಬೆಳೆಸುವ ಆತಂಕಕಾರಿ ಸಂಕೇತವೇ ಆಗಬೇಕಿಲ್ಲ. ಅನ್ಯ ಸಂಸ್ಕೃತಿಕೂಡ ದಿವ್ಯಮೈತ್ರಿಭಾವ ಮೀಟುವ, ಸ್ವಾನುಭಾವ ಶಿಖರಕ್ಕೆ ಕರೆದೊಯ್ವ ಅಲೌಕಿಕ ಪವಾಡದ ಕವಿಸಮಯವಾಗಿ ಹೊಮ್ಮಿದೆ:

ಈ ಪವಿತ್ರ ಗಂಗಾತಟದ/ ಸೂರ್ಯೋದಯ ಚಂದ್ರೋದಯ ಸುಮುಹೂರ್ತಗಳಲ್ಲಿ/ ನನ್ನೊಡತಿ ಕಾಶೀದೇವಿ/ ಕೈಯಲ್ಲಿ ಗಂಗೆಗನ್ನಡಿ ಎತ್ತಿಕೊಂಡು/ ತನ್ನ ದಿವಿನಾದ ಚೆಲುವು/ ಮಿಂಚಿ ಮಾರ್ಪೊಳೆವುದ ನೋಡಿ/ ಸಂಭ್ರಮದಲ್ಲಿ ಓಲಾಡುತ್ತಾಳೆ.

ಯಾವ ವೈದಿಕ ಕವಿಯೂ ಗಂಗೆಯ ಅಲೌಕಿಕ ಸೌಂದರ್ಯವನ್ನು ಇಷ್ಟದ್ಭುತವಾಗಿ ಅಭಿವ್ಯಕ್ತಿಸಿಲ್ಲ. ಒಂದು ಕೋಮಿನ ಯುವಕ ಇನ್ನೊಂದು ಕೋಮಿನ ಸುಂದರ ತರುಣಿಯ ಪ್ರೇಮದಲ್ಲಿ ಹುಚ್ಚನಾದಷ್ಟೆ, ಒಂದು ಜಾತಿಯ ಭಕ್ತ ಇನ್ನೊಂದು ಜಾತಿಯ ದೈವದಲ್ಲಿ ಅನುರಕ್ತನಾದಷ್ಟೆ ಗಾಢವಾಗಿದೆ ಗಾಲಿಬನ ಕಾಶಿ—ಗಂಗಾಪ್ರೇಮ. ತನ್ನದು—ತನ್ನದಲ್ಲದ್ದು ಎಂಬ ಲೌಕಿಕ ಇಬ್ಬಂದಿತನವನ್ನು ಆಮೂಲಾಗ್ರ ಕಿತ್ತಿಸುಟ್ಟು, ಬೂದಿಬಳಿದುಕೊಂಡು ಕುಣಿದಾಡುವ ಅನುಭಾವಿಗಳು, ಸೂಫಿಗಳು, ಸಂತರು ನಿಜವಾದರ್ಥದಲ್ಲಿ ನಿಸ್ಸೀಮರು. ನಿರಂಕುಶ ಪ್ರೇಮವೇ ಅವರ ದೈವ. ಒಳಿತುಬಿತ್ತಿ ಒಳಿತ ಬೆಳೆಯುವುದೇ ಅವರೆಲ್ಲರ ಒಳಧರ್ಮ. ಲೋಕವಿಲಕ್ಷಣ ಪ್ರೇಮಾಭಿವ್ಯಕ್ತಿ ಅವರ ಆಜನ್ಮಸಿದ್ಧ ಹಕ್ಕು. ತನ್ನ ಧರ್ಮವನ್ನು ಬಿಟ್ಟು ತನಗೆ ಸರಿಕಂಡ ಇನ್ನೊಂದು ಧರ್ಮವನ್ನು ತಬ್ಬಿಕೊಳ್ಳುವ ವೈಯಕ್ತಿಕ ಸ್ವಾತಂತ್ರ್ಯ ಎಲ್ಲರಿಗೂ ಇರುತ್ತದೆ. ಆಮಿಷಗಳಿಂದ ಮತಾಂತರಿಸುವ ಹಕ್ಕನ್ನು ಯಾವ ದೇವರೂ ಯಾವಭಕ್ತರಿಗೂ ಕೊಟ್ಟಿಲ್ಲವೆಂಬುದೇ ಅವರ ನಂಬಿಕೆ. ಧರ್ಮಪಂಜರಗಳನ್ನು ಹಾರುಹೊಡೆದು ಹೊರಹಾರಿ ಸ್ವಚ್ಛಂದ ನೀಲಾಕಾಶದಲ್ಲಿ ರೆಕ್ಕೆಬೀಸುವ ಮಹಾನ್ ಜೀವಿಗಳನ್ನು ಮತ್ತೆ ಪಂಜರದಲ್ಲಿ ಬಂಧಿಸಲೆತ್ನಿಸುವುದು ತಮಾಷೆಯಾಗಿ ಕಾಣುತ್ತದೆ. ವೈವಿಧ್ಯಮಯ ನಿಸರ್ಗ ಸೌಂದರ್ಯದಿಂದ ಕಂಗೊಳಿಸುವ ಭೂಮಂಡಲಕ್ಕೆ ಒಂದೇ ಬಣ್ಣದ ಧಾರ್ಮಿಕ ಹಚ್ಚಡ ಹೊಚ್ಚುವುದು ಅನಿವಾರ್ಯವಲ್ಲವಷ್ಟೆ? ಪ್ರತಿಭಾನ್ವಿತ ಸಂಭಾಷಣೆಯೊಂದು ಕವಿತೆಯಲ್ಲಿದೆ:

ಒಂದು ರಾತ್ರಿ/ ಕಾಲಚಕ್ರ ರಹಸ್ಯ ಬಲ್ಲ/ ಸಹಜ ಭಾವಶುದ್ಧಿಯ/ ಒಬ್ಬ ವೃದ್ಧ ಯಾತ್ರಿಕರಿಗೆ ಪ್ರಶ್ನೆ ಹಾಕಿದೆ ಎನ್ನುತ್ತಲೇ, ಈ ದೇಶದ ದುರ್ವರ್ತಮಾನದ ಭಯಂಕರ ಚಿತ್ರಗಳನ್ನು ನೀಡುತ್ತಾನೆ. ಧಾರ್ಮಿಕ ದುಸ್ಥಿತಿ, ಸಾಮಾಜಿಕ ಅವನತಿ, ರಾಜಕೀಯ ತಲ್ಲಣದ ಪ್ರತೀಕಗಳಿವು:

ನೀವೇ ನೋಡುತ್ತಿದ್ದೀರಲ್ಲ ಸ್ವಾಮಿ/ ಸದ್ಭಕ್ತಿ ನಿಷ್ಠೆ ಪ್ರೇಮ ಸಜ್ಜನಿಕೆ ಎಲ್ಲವೂ/ ಈ ದುಃಖಿತ ದೇಶದಿಂದ ದೇಶಾಂತರ ಹೋಗಿಬಿಟ್ಟಿವೆ/ ಅಪ್ಪ—ಮಗ ಒಬ್ಬರೊಬ್ಬರ ಕತ್ತು ಹಿಸುಕುತ್ತಿದ್ದಾರೆ/ ಅಣ್ಣ—ತಮ್ಮ ತಮ್ಮತಮ್ಮಲ್ಲೆ ಹೊಡೆದಾಡುತ್ತಿದ್ದಾರೆ/ ಒಕ್ಕೂಟ ಐಕ್ಯತೆ ಎಲ್ಲ ಒಳಸಂಚಿಗೆ ಸಿಕ್ಕು ನಾಶವಾಗಿವೆ.

ಧೃತಿಗೆಡಿಸುವ ವಸ್ತುಸ್ಥಿತಿ ತೆರೆದಿಡುತ್ತಲೇ ಕಿಬ್ಬದಿಯ ಕೀಲು ಮುರಿಯುವಂಥ ಮೂರು ಪ್ರಚಂಡ ಪ್ರಶ್ನೆಬಾಣ ಬಿಡುತ್ತಾನೆ:

ಇಷ್ಟೆಲ್ಲ ಅಪಶಕುನಗಳು ಕಣ್ಣು ಮಿಟುಕಿಸುತ್ತಿದ್ದರೂ/ ಇನ್ನೂ ಯಾಕೆ ಬಂದಿಲ್ಲ ಸ್ವಾಮಿ ಆ ಮಹಾಪ್ರಳಯ?/ ಇನ್ನೂ ಯಾಕೆ ಕೇಳುತ್ತಿಲ್ಲ ಆ ಕೊನೆಯ ಕಹಳೆ?/ ಯಾರು ಜಗ್ಗಿಹಿಡಿದಿದ್ದಾರೆ ಅಂತಿಮ ದುರಂತದ ಲಗಾಮನ್ನು?

ಆದರೆ ಈ ಉರಿಮುಖಿ ಪ್ರಶ್ನೆಗಳಿಗೆ ಉತ್ತರ ಆ ಮುದಿಯಾತ್ರಿಕರ ಬತ್ತಳಿಕೆಯಲ್ಲಿ ಇದ್ದೇಯಿರಬೇಕಲ್ಲವೆ? ಈ ನೆಲದ ಸಾಂಸ್ಕೃತಿಕ ಚೆಲುವು ಈ ನದಿಯ ಆಧ್ಯಾತ್ಮಿಕ ಔನ್ನತ್ಯದ ಬಗ್ಗೆ ಆ ಸೃಷ್ಟಿಕರ್ತನ ಕಕ್ಕುಲತೆಯನ್ನು ಸಾರುತ್ತವೆ ಈ ಸಾಲುಗಳು:

ಆ ತಿಳಿನೋಟದ ನೆರೆಗೂದಲ ವೃದ್ಧರು/ ನಸುನಕ್ಕು ಕಾಶಿಯ ಕಡೆ ನೋಡಿ ಆಕಾಶಕ್ಕೆ ಬೆರಳೆತ್ತಿ/ ಮೆಲ್ಲಗೆ ಹೀಗೆಂದರು:/ ಆ ವಾಸುಶಿಲ್ಪಿಗೆ/ ಈ ಕಲಾಕೃತಿಯೆಂದರೆ ಪ್ರಾಣ/ ಇದರಿಂದಲೆ ಬಣ್ಣ ಬಂದಿರುವುದು ಬದುಕಿಗೆ/ ಇದು ಬಿದ್ದು ಹಾಳಾಗುವುದು/ ಅವನಿಗೆ ಸುತರಾಂ ಇಷ್ಟವಿಲ್ಲ.

ಈ ಒಳಸತ್ಯ ಕೇಳಿಸಿಕೊಂಡವ ಗಾಲಿಬನೊಬ್ಬನೆ ಅಲ್ಲ. ನಾವೂ— ನೀವೂ ಕಿವಿಯಗಲಿಸಿ ಕೇಳಿಸಿಕೊಳ್ಳುತ್ತೇವೆ. ಸಾಕ್ಷಾತ್ ಗಂಗಾ ದೇವಿಯೆ ಕೇಳಿಸಿಕೊಡಿದ್ದಾಳೆ. ಸ್ವತಃ ಕಾಶಿದೇವಿಯೆ ಕೇಳಿಸಿಕೊಂಡು ಉಬ್ಬಿ ಹೋಗುತ್ತಾಳೆ. ಇದು ಕೊನೇ ಪಂಚ್:

ಆ ಮಾತನ್ನು ಕೇಳಿದ್ದೇ ತಡ/ ವಾರಣಾಸಿಯ ಹೆಮ್ಮೆ ಅದೆಷ್ಟೆತ್ತರಕ್ಕೆ ಚಿಮ್ಮಿತೆಂಬುದು/ ಕಲ್ಪನೆಯ ರೆಕ್ಕೆಗಳಿಗೂ ದಕ್ಕಲೇಯಿಲ್ಲ.

ಹೀಗೆ ಕಾಶಿಯ, ಭರತಖಂಡದ ಔನ್ನತ್ಯ ಸಾರುತ್ತಾನೆ ಗಾಲಿಬ್. ಮಹಾನ್ ದುರಂತವೆಂದರೆ ಅತಿಪವಿತ್ರ ನದಿಗೆ ಅರೆಬೆಂದ ಹೆಣರಾಶಿ ದಬ್ಬಿ ಗಬ್ಬೆಬ್ಬಿಸಿದ್ದೇವೆ. ಔಷಧ ಗುಣವುಳ್ಳ ಗಂಗಾಜಲದಲ್ಲಿ ನಮ್ಮ ಘನದ್ರವ ತ್ಯಾಜ್ಯ ಸುರಿದು ಕಲುಷಿತಗೊಳಿಸಿದ್ದೇವೆ. ಜನ್ಮಾಂತರದ ಪಾಪಗಳ ತೊಳೆತೊಳೆದು ಮಹಾನದಿಯನ್ನು ಕುಲಗೆಡಿಸಿದ್ದೇವೆ. ಅದರಂತರಂಗದ ಪುಣ್ಯಸಂಪತ್ತನ್ನೆಲ್ಲ ದೋಚಿದ್ದೇವೆ. ಗಾಲಿಬ್ ಬದುಕಿದ್ದರೆ ಇನ್ನೊಂದು ಆಕ್ರೋಶಕಾರಿ ಕವಿತೆ ಬರೆದು ಶಾಪ ಹಾಕುತ್ತಿದ್ದನೇನೊ? ಜಗತ್ತಿನ ಶಾಂತಿದೂತರೆಲ್ಲರ ಸಾರಹೀರಿದ ಗಾಲಿಬನ ಆತ್ಮ ಸದಾ ಜೀವಪರ. ಸದಾ ಐಹಿಕ ಸುಖ ಸಮೃದ್ಧಿ ಸಂತೋಷ ಸಮತೆ ಸಹಿಷ್ಣುತೆ ಸಾಮರಸ್ಯಕ್ಕೆ ಹಂಬಲಿಸುವಂಥದು. ಜಾತಿ ಜನಾಂಗ ಮತ ಧರ್ಮ ಭಾಷೆ ದೇಶ ವಿಧಿಸುವ ಕಟ್ಟುಪಾಡು ದಾಟಿಹೋಗುವಂಥದು. ಮತಾಂಧರ ಉರವಣಿಗೆಯಿಂದ ಬೇಸತ್ತ ಗಾಲಿಬ್ ಕಾಶಿಗಂಗಾತೀರಕ್ಕೆ ಬಂದು ಬ್ರಾಹ್ಮಣನಾಗಿ ಮತಾಂತರಗೊಳ್ಳಲು ಹಂಬಲಿಸಿದ್ದನೆ?

“ಈ ಧರ್ಮವನ್ನೇ ತ್ಯಜಿಸಿ ಕೈಯಲ್ಲಿ ಜಪಮಣಿ ಹಿಡಿದು ಹಣೆಗೆ ಗಂಧಲಾಂಛನ ಹಚ್ಚಿಕೊಂಡು ಹೆಗಲಿಂದ ಸೊಂಟಕ್ಕೆ ಜನಿವಾರಯಿಳಿಬಿಟ್ಟು ಗಂಗಾತಟದಲ್ಲಿ ಕಣ್ಮುಚ್ಚಿಕೂತು ಇಡಿಜೀವಮಾನದ ಮೈಲಿಗೆ ತೊಳೆದುಕೊಂಡುಬಿಡಬೇಕು, ಹರಿವನದಿಯಲ್ಲಿ ನಾನೂ ಒಂದುಹನಿಯಾಗಿ ಸೇರಿಹೋಗಬೇಕು ಎಂಬುದೇ ನನ್ನಾಸೆ” (ಗಾಲಿಬ್: ವ್ಯಕ್ತಿತ್ವ ಮತ್ತು ಯುಗಾಂತ, ಪವನ್ ಕೆ.ವರ್ಮ, ಕೇಂದ್ರ ಸಾಹಿತ್ಯ ಅಕಾಡೆಮಿ, 2014, ಪು.64).

ಈ ಕಾವ್ಯಾತ್ಮಕ ದೃಷ್ಟಾಂತದ ತಳೋದ್ದೇಶ ಇಸ್ಲಾಂಧರ್ಮದ ನಿಷ್ಠಾವಂತರನ್ನು ಧೃತಿಗೆಡಿಸಬೇಕೆಂಬುದಾಗಲಿ, ಸನಾತನ ವೈದಿಕ ಬ್ರಾಹ್ಮಣ್ಯಕ್ಕೆ ಪೂಸಿ ಹೊಡೆಯಬೇಕೆಂಬುದಾಗಲಿ ಅಲ್ಲ. ಎಲ್ಲ ಸಾಂಸ್ಥಿಕ ಧರ್ಮಗಳೂ ಕಾಲಕ್ರಮೇಣ ಶುಷ್ಕಾಚರಣೆ ಗೊಡ್ಡಾಚಾರಗಳ ಒಣಕಂದಕಕ್ಕೆ ಬಿದ್ದು ತಮ್ಮ ಮೂಲಸತ್ವವನ್ನೇ ನಷ್ಟಮಾಡಿಕೊಳ್ಳುತ್ತವೆ ಎಂಬ ಸಾರ್ವಕಾಲಿಕಸತ್ಯ ಕಾಲಜ್ಞಾನಿ ಕವಿ ಗಾಲಿಬ್‍ಗೆ ತಿಳಿಯದಿದ್ದೀತೇ? ಫನಾ ಆಗಿ ನಿಶ್ಶೂನ್ಯದಲ್ಲಿ ಕರಗಿಹೋಗುವ ಇರಾದೆಯುಳ್ಳ ಸೂಫಿಗಳು ಅನುಭಾವಿಗಳು ತಮ್ಮ ಭಾವಶುದ್ಧಿ ಶಿಖರದಲ್ಲಿ ಎಲ್ಲ ಹಂಗಿನರಮನೆಗಳನ್ನೂ ತೊರೆದು ತಮ್ಮದಲ್ಲದ ಮತ್ತೊಂದಕ್ಕೆ ಹೇಗೆ ತಮ್ಮನ್ನೇ ಅರ್ಪಿಸಿಕೊಳ್ಳುತ್ತಾರೆ ಎಂಬುದಕ್ಕೆ ಇದೊಂದು ನಿದರ್ಶನ ಅಷ್ಟೇ.

ಇದು ಅಕ್ಕ ಅಲ್ಲಮ ರೂಮಿ ಕಬೀರ ಶರೀಫ ಮುಂತಾದ ಮಹಾನುಭಾವಿಗಳ ಹದುಳವಾದ ಹಾದಿಯೂ ಆಗಿದೆ. ಅಲ್ಲಮ ಎಂಬುದು ಕನ್ನಡ ಶಬ್ದವಾಗಿರದೆ ಅಲ್ಲಾಮ ಎಂಬ ಅರಬ್ಬಿಶಬ್ದದ ಸ್ಥಳೀಯ ರೂಪವಾಗಿದ್ದು, ಅದರರ್ಥ ದೇವಗುರು ಎಂಬುದನ್ನು ಇಲ್ಲಿ ಸ್ಮರಿಸಿಕೊಳ್ಳಬಹುದು. ನಿಜಹೇಳಬೇಕೆಂದರೆ ಅಂಥ ಮಹಾಚೇತನರಿಗೆ ಇದು ತನ್ನದು ಅದು ತನ್ನದಲ್ಲದ್ದು ಎಂದು ಗೆರೆಕೊರೆವ ಲೌಕಿಕ ಉಪಾಧಿಗಳೆ ಗೋಚರಿಸುವುದಿಲ್ಲ. ಮಹತ್ತಾದುದನ್ನು ಕಾಣಲಾರದ, ಅಂತರಂಗದ ಪ್ರಶಾಂತತೆಯನ್ನು ಅನುಭವಿಸಲಾರದ ನಮ್ಮಂಥ ಮಂದಬುದ್ಧಿಯ ಮಂದಿಗೆಮಾತ್ರ ಬೇಲಿ ಗೋಡೆ ಕೋಟೆ ಗಡಿ ಬಾಂದು ಸರಹದ್ದುಗಳೆ ಢಾಳಾಗಿ ಕಾಣಿಸುತ್ತವೆ. ಅವು ಬದುಕಿಗಿಂತ ಮುಖ್ಯವಾಗಿ ತಂಟೆ ತಕರಾರು ಜಗಳ ಕದನ ಯುದ್ಧಗಳಿಗಾಗಿ ಕಾಲುಕೆರೆಯುತ್ತಲೇ ಇರುತ್ತೇವೆ. ನಮ್ಮದು ಸರ್ವನಾಶದ ಹುನ್ನಾರವಾದರೆ ಅವರದು ಸದಾ ಸಂಭಾಳಿಸುವ ಸಂತೈಸುವ ತಾಯಿಭಾವ.

ಎಲ್ಲ ಧಾರ್ಮಿಕ, ರಾಜಕೀಯ, ಆರ್ಥಿಕ ಉಗ್ರಗಾಮಿಗಳನ್ನೂ ಅನಾಮತ್ತಾಗಿ ತಿರಸ್ಕರಿಸಿ, ಬುದ್ಧ ಸಾಕ್ರಟಿಸ್ ಕ್ರಿಸ್ತ ಗಾಂಧಿ ಮಂಡೇಲರಂಥ ಮಹಾತ್ಮರ ಅಪ್ಪಟ ಅನುಯಾಯಿಗಳಾಗಿ ಎಲ್ಲ ಬಗೆಯ ಯುದ್ಧಗಳನ್ನೂ ಶಾಶ್ವತವಾಗಿ ರದ್ದುಮಾಡುವಂತೆ ನಿರಂತರ ಶಾಂತಿಮಂತ್ರ ಜಪಿಸುತ್ತಿರಬೇಕೆಂಬುದು ನಮ್ಮ ಆಧುನಿಕವಿಶ್ವದ ಮುಖ್ಯ ಕನಸಾಗಿದೆ. ಅಂಥ ಕನಸಿಗೆ ಒತ್ತಾಸೆಯಾಗಿದೆ ಶಾಂತಿಪ್ರಿಯರೂ ಪ್ರಶಾಂತಮನಸ್ಕರೂ ಆದ ರೂಮಿ ಕಬೀರ ಗಾಲಿಬ್ ಶರೀಫ ಗಿಬ್ರಾನ್ ಫೈಜ್‍ರಂಥ ಸೂಫಿಕವಿಗಳ ಕಾವ್ಯ. ಲೋಕವನ್ನು ತಣ್ಣಗಿರಿಸುವಲ್ಲಿ ಬಾಬಾ ಮೊಯ್ನುದ್ದೀನ್ ಚಿಶ್ದಿ, ನಿಜಾಮುದ್ದೀನ್ ಔಲಿಯಾ, ಬಂದೇ ನವಾಜ್‍ರಂಥ ಸೂಫಿಸಂತರಂತೂ ಮಹತ್ತರವಾದ ಕೊಡುಗೆ ನೀಡಿದ್ದಾರೆ. ಅಲಿ—ವಲಿ ವಾಗ್ವಾದದಲ್ಲಿ ಸೂಫಿನೆಲೆಗಳೂ ಶಾಂತಿಧಾಮಗಳೂ ಆಗಿರುವ ದರ್ಗಾಗಳಮೇಲೂ ದಾಳಿಮಾಡುವ ಮತಾಂಧ ಉಗ್ರಗಾಮಿಗಳು ಇಸ್ಲಾಂಧರ್ಮದ ಘನತೆಗೌರವಕ್ಕೆ ಕುಂದುತರುತ್ತಿದ್ದಾರೆಂದು ನೊಂದು ನುಡಿಯಬೇಕಿದೆ. ಬಡಿದಾಡುವ ಕೋಮುಗಳ ಬಡಿವಾರಗಳನ್ನು ವಿಡಂಬಿಸಿ, ಮತಾಂಧ ಧಾರ್ಮಿಕ ಮುಖಂಡರ ಇಬ್ಬಂದಿತನದ ಮುಖವಾಡವನ್ನು ಕಳಚುವ ಕ್ರಾಂತಿಕಾರಿ ಶಾಯರ್ ಗಾಲಿಬ್. ಅಂಥವರ ಬಣ್ಣ ಬಯಲುಮಾಡಲೆಂದೇ ಅವನ ಕಾವ್ಯ ತೀಕ್ಷ್ಣವಾದ ವ್ಯಂಗ್ಯಾಸ್ತ್ರವನ್ನು ಪ್ರಯೋಗಿಸುತ್ತದೆ:

ಅಯ್ಯೊ ಆ ಧರ್ಮಾಂಧನ ನಮಸ್ಕಾರ/ ಬರಿ ನಟನೆ ಹೊಟ್ಟೆಪಾಡಿನ ಚಮತ್ಕಾರ/ ಹೆದ್ದಾರಿದೆವ್ವ ದರೋಡೆ ಮಾಡದಿದ್ದರೆ ಅದೇ ಪುಣ್ಯ/ ಸುಂದರಿ ದೇವದೂತಿಯರ ಸಾಂಗತ್ಯವೆಲ್ಲ ಅವನಿಗೆ ನಗಣ್ಯ. ಇನ್ನೊಂದು ಶಾಯಿರಿ ಕುಡಿವ ಗಡಂಗಿನ ಬಾಗಿಲೆತ್ತ ಗಾಲಿಬ್?/ ಧರ್ಮನಿಷ್ಠ ಬೋಧಕನೆತ್ತ?/ ಆದರೂ ನಾಕಂಡ ನಿಜವಿಷ್ಟೆ—/ ನಾ ಹೊರ ಹೊರಟಾಗ ಅವ ಒಳಬಂದ ಅಷ್ಟೆ ಎಂದು ಮೊನಚಾಗಿ ಹಂಗಿಸುತ್ತದೆ.

ಈ ಸೋಗಲಾಡಿತನಕ್ಕೆ ವ್ಯತಿರಿಕ್ತವಾಗಿ, ನಿರುಪಾಧಿಕ ಸರ್ವಸಮರ್ಪಣಭಾವದ ನಿಜಭಕ್ತಿ ತುರೀಯಾವಸ್ಥೆ ತಲುಪಿದಾಗ ಅದೆಷ್ಟು ನಿರಂಕುಶವಾಗಿ ಉರಿಯಬಲ್ಲದೆಂದು ಸೂಚಿಸುವ ಈ ಸಾಲುಗಳು ಕವಿಗೆ ಕರ್ಮಠ ಶತ್ರುಗಳನ್ನು ಸಂಪಾದಿಸಿ ಕೊಟ್ಟವು:

ದೇವನೊಬ್ಬನೆ ಎಂಬುದು ನನ್ನ ಪಂಥ/ ಆಚರಣೆಗಳಿಗೆಲ್ಲ ಬಿಟ್ಟುಬಿಟ್ಟಿದ್ದೇನೆ ಎಳ್ಳುನೀರು/ ಲಾಂಛನ ಕುರುಹು ಖೂನ ನಾಶವಾದ ಮೇಲೇಸೈ/ ನಿಷ್ಠನಾಗೋದು ಭಕ್ತ, ನಿಷ್ಕಳಂಕವಾಗೋದು ನಂಬಿಕೆ.

ತನ್ನ ಧರ್ಮವನ್ನು ವಿಮರ್ಶಿಸುವ ಪರಮ ಪ್ರಾಮಾಣಿಕತೆಯಿಂದಾಗಿಯೆ ಇತರ ಧರ್ಮಗಳನ್ನೂ ವಿಮರ್ಶಿಸುವ ಕೆಚ್ಚು ಪಡೆದುಕೊಳ್ಳುವ ಗಾಲಿಬ್ ಅಂತರ್ಧಮೀಯ ಸಮನ್ವಯ, ಮತೀಯ ವಿಮರ್ಶೆ, ಆಧ್ಯಾತ್ಮಿಕ ಸತ್ವಪರೀಕ್ಷೆ ಕುರಿತು ಬರೆದ ಶಾಯರಿಗಳಿವು:

1. ಕಾಬಾದಲ್ಲಿ ಶಂಖವಾದನ ಮಾಡ್ತೀನಿ/ ದೇವಾಲಯದಲ್ಲಿ ಅಹ್ರಮ್ ಧರಿಸಿ ನಿಲ್ತೀನಿ. 2. ಎಲ್ಲ ಮತಗಳ ತಳಹದಿಯೂ/ ಕೈವಲ್ಯಭಕ್ತಿ ಮಾತ್ರ/ ಗುಡಿಯಲ್ಲಿ ಬ್ರಾಹ್ಮಣ ಸತ್ತರೆ/ ಅವನನ್ನು ಕಾಬಾದಲ್ಲಿ ಮಣ್ಣುಮಾಡಿ. 3. ಜಪಮಣಿ ಅಥವ ಜನಿವಾರದ ಬ್ರಹ್ಮಗಂಟು/ ಒಡ್ಡಿಕೊಳ್ಳಬೇಕಿಲ್ಲ ಸತ್ವಪರೀಕ್ಷೆಗೆ/ ಶೇಖ್‍ನ ನಮಕ್ಹಲಾಲಿ, ಬ್ರಾಹ್ಮಣನ ಅನನ್ಯಭಕ್ತಿ/ ಈಡಾಗಬೇಕು ಅಗ್ನಿಪರೀಕ್ಷೆಗೆ.

ಕೂಡಿಬಾಳುವ ಕಲೆಯನ್ನು ಭಾರತದ ಹಿಂದು—ಮುಸ್ಲಿಮರು ಶತಶತಮಾನಗಳಿಂದ ರೂಢಿಸಿಕೊಂಡಿದ್ದಾರೆ. ಇದಕ್ಕೆಲ್ಲ ಕಾರಣಗಳನ್ನು ಗಾಲಿಬನ ಕಾವ್ಯಗನ್ನಡಿಯಲ್ಲಿ ಕಾಣಬಹುದು.

ರೇಣುಕಾ ನಿಡಗುಂದಿ

ಹಾಲುಂಡ ತವರೀಗಿ ಏನೆಂದು ಹಾಡಲೆ

July 2018

ಡಾ.ಧರಣಿದೇವಿ ಮಾಲಗತ್ತಿ

ಡುಂಡುಭ ವಿಲಾಪ

July 2018

ಡಾ.ಧರಣಿದೇವಿ ಮಾಲಗತ್ತಿ

‘ಪಾದುಕಾ ಕಿರೀಟಿ’

July 2018

ಎಚ್.ಗೋಪಾಲಕೃಷ್ಣ

ನಮ್ಮಟ್ಟೀಲಿ ಏನಾಯ್ತಂದ್ರ...

July 2018

ಪ್ರೊ.ಜಿ.ಎಚ್.ಹನ್ನೆರಡುಮಠ

ಓಡಿ ಹೋದ ದ್ವೆವಗಳು

June 2018

ಮೂಡ್ನಾಕೂಡು ಚಿನ್ನಸ್ವಾಮಿ

ಸಂಕಟದ ಪ್ರೇಮಿ

June 2018

ಹೇಮಲತಾ ಮೂರ್ತಿ

ವಿಷ ಕುಡಿದ ಮಕ್ಕಳು

June 2018

ಬಾಲಚಂದ್ರ ಬಿ.ಎನ್.

ಕರುನಾಡ ಕದನ

June 2018

ಡಾ.ಮ್ಯಾಥ್ಯೂ ಕೆ.ಎಮ್.

ನಾಗಚಂದ್ರನ ರಾಮಚಂದ್ರ ಚರಿತ ಪುರಾಣಂ

May 2018

ರಾಜು ಹೆಗಡೆ

ತೇಲುವ ಊರಿನ ಕಣ್ಮರೆ!

May 2018

ಎಸ್.ಬಿ.ಜೋಗುರ

ಗರ್ದಿ ಗಮ್ಮತ್ತು

May 2018

ಪ್ರೀತಿ ನಾಗರಾಜ್

ಮನಿಗ್ಯಷ್ಟು ಕ್ವಟ್ಟರಂತೆ?

May 2018

ಪ್ರೊ. ಜಿ. ಎಚ್. ಹನ್ನೆರಡುಮಠ

ಹೂವುಗಳ ನರಕ ಬೆಂಗಳೂರು !

April 2018

ಕೆ. ಸತ್ಯನಾರಾಯಣ

ನಮ್ಮೂರಲ್ಲೇ ಕಳ್ಳರಿದ್ದರು

April 2018

ವೈಲೆಟ್ ಪಿಂಟೊ

ಸ್ವಗತ (ಕವಿತೆ)

April 2018

ಅಮರಜಾ ಹೆಗಡೆ

ಬುದ್ಧನ ನಾಡಿನಲ್ಲಿ...

April 2018

ಹಜರತಅಲಿ ದೇಗಿನಾಳ

ನಮ್ಮೂರು ಲಂಡನ್‍ಹಳ್ಳ!

March 2018

ಡಾ. ಜಾಜಿ ದೇವೇಂದ್ರಪ್ಪ

ಜನ್ನನ ಯಶೋಧರ ಚರಿತೆ

March 2018

ಚಿದಂಬರ ಪಿ. ನಿಂಬರಗಿ

ಶಿರೋಳದ ರೊಟ್ಟಿ ಜಾತ್ರೆ

March 2018

ರಾಜೇಂದ್ರ ಪ್ರಸಾದ್

ರಾಮಮಂದಿರದ ಕನಸು

March 2018

ಗುರುಪ್ರಸಾದ್ ಡಿ. ಎನ್.

ದಿ ಪೋಸ್ಟ್: ಮಾಧ್ಯಮದ ಹೊಸ ಭರವಸೆ

March 2018

ಬಿದರಹಳ್ಳಿ ನರಸಿಂಹಮೂರ್ತಿ

ಗಂಗೆಗನ್ನಡಿಯಲ್ಲಿ ಗಾಲಿಬ್ ಬಿಂಬ

February 2018

ಸಂತೋಷ್ ನಾಯಕ್ ಆರ್.

ಬೂದಿ ಒಳಗಣ ಕೆಂಡ ಚಿಕ್ಕಲ್ಲೂರು ಜಾತ್ರೆ

February 2018

ಕೆ.ಎಲ್.ಚಂದ್ರಶೇಖರ್ ಐಜೂರ್

ಸ್ವರ್ಗದ ಮಕ್ಕಳು

February 2018