2nd ಫೆಬ್ರವರಿ ೨೦೧೮

ಮಂಟೇಸ್ವಾಮಿ ಕಾವ್ಯದಲ್ಲಿ ಸಿದ್ಧಪ್ಪಾಜಿ

ಡಾ.ಪಿ.ಮಣಿ

ಮಾರ್ಗ ಸಾಹಿತ್ಯವನ್ನು ಧಿಕ್ಕರಿಸಿ ದೇಸೀ ಸಾಹಿತ್ಯದೆಡೆಗೆ ಮುಖಮಾಡಿದ ಕಾಲದಲ್ಲಿ ವಚನ ಸಾಹಿತ್ಯ ಆವಿರ್ಭವಗೊಂಡಿತು. ಜೇಡರದಾಸಿಮಯ್ಯನಾದಿಯಾಗಿ ವಚನ ಸಾಹಿತ್ಯ ಕ್ರಿ.ಶ. 10ನೆಯ ಶತಮಾನದಿಂದಲೇ ಆರಂಭಗೊಂಡಿತು. ಮುಂದೆ ಬಸವಣ್ಣ, ಅಲ್ಲಮಪ್ರಭುಗಳ ಸಮರ್ಥ ಮಾರ್ಗದರ್ಶನದ ಮೂಲಕ ಕಲ್ಯಾಣದಲ್ಲಿ ಅನುಭವ ಮಂಟಪವು ರೂಪುಗೊಂಡಿತು. ಅಂದು ಅವರು ಉಸುರಿದ ಮಾನವಪರ ಚಿಂತನೆಗಳು, ಆಯಾ ಯುಗದ ಅಸಡ್ಡೆಗಳನ್ನು ಕಿತ್ತೊಗೆದು ಮನುಷ್ಯನನ್ನಾಗಿ ನೋಡುವುದನ್ನು ಕಲಿಸಿದೆ. ಈ ಸಮಸಂಸ್ಕೃತಿಯ ಹರಿಕಾರನಾಗಿ ಹದಿನಾರನೆಯ ಶತಮಾನದಲ್ಲಿ ಮಂಟೇಸ್ವಾಮಿಗಳು ಜನಿಸಿ, ಬಸವಾದಿ ಪ್ರಮಥರ ಬೌದ್ಧಿಕ ಕ್ರಾಂತಿಯನ್ನು ಮುಂದುವರಿಸಿದರು. ಉತ್ತರದಿಂದ ಬಂದ ಮಂಟೇಸ್ವಾಮಿಗಳು ಜನಪದರ ಮನಸ್ಸಿನಲ್ಲಿ ಮಂಟೇದ, ಮಂಟಯ್ಯ, ಮಂಟೇದಲಿಂಗಯ್ಯ, ಮಂಟೇದೇವರು, ಪರಂಜ್ಯೋತಿ, ಧರೆಗೆದೊಡ್ಡವರು, ಅಲ್ಲಮಪ್ರಭು, ಕಂಡಾಯದೊಡೆಯ ಎಂಬಿತ್ಯಾದಿ ಹೆಸರುಗಳಿಂದ ಖ್ಯಾತರಾಗಿದ್ದಾರೆ. ಮಂಟೇಸ್ವಾಮಿ ದೈವತ್ವಕ್ಕೇರಿದ ಒಬ್ಬ ಜನಸಾಮಾನ್ಯ. ತಳಸಂಸ್ಕೃತಿಯ ಅಧಿಕೃತ ವಕ್ತಾರ. ತನ್ನ ಅನುಭವದ ಮೂಸಿಯಲ್ಲಿ ಶಿಷ್ಯ ಸಮೂಹವೊಂದನ್ನು ಸೃಷ್ಟಿಸಿ ಆ ಮುಖೇನ ಲೋಕಕಲ್ಯಾಣ ಮಾಡಿಸಿದ ಶ್ರೇಯಸ್ಸು ಆ ದಿವ್ಯ ಪುರುಷನಿಗೆ ಸಲ್ಲುತ್ತದೆ.

‘ಮಂಟೇಸ್ವಾಮಿ ಕಾವ್ಯ’ ಮೂಲತಃ ಜನಪದ ಮಹಾಕಾವ್ಯ. ಹಲವು ವರ್ಷಗಳಿಂದ ಮೌಖಿಕ ರೂಪದಲ್ಲಿದ್ದ ಈ ಕಾವ್ಯವು ಇತ್ತೀಚೆಗಷ್ಟೇ ಗ್ರಂಥಸ್ಥ ರೂಪವನ್ನು ಪಡೆದಿದೆ. ಈ ಕಾವ್ಯದ ನೆಲೆಯಲ್ಲಿಯೇ ಹೇಳುವುದಾದರೆ ಮಂಟೇಸ್ವಾಮಿ ಉತ್ತರದೇಶದಿಂದ ದಕ್ಷಿಣದೆಡೆಗ ಬಂದವನು. ಈ ಹಾಡಿನ ವಿಶೇಷವೇನೆಂದರೆ ಏಳುರಾತ್ರಿ ಏಳುಹಗಲುಗಳ ಕಾಲ ಈ ಹಾಡಿನ ವಾಚನವಾಗುತ್ತದೆ. ಈ ಕಾವ್ಯವನ್ನು ಹಾಡುವ ನೀಲಗಾರರು ಮೈಸೂರು, ಚಾಮರಾಜನಗರ, ಬೆಂಗಳೂರು, ಮಂಡ್ಯ, ಹಾಸನ, ಬೆಂಗಳೂರು (ಗ್ರಾಮಾಂತರ) ತಮಿಳು ನಾಡಿನ ಸೇಲಂ ಜಿಲ್ಲೆಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಮಂಟೇಸ್ವಾಮಿ ಕಾವ್ಯವನ್ನು ಹಾಡುವ ನೀಲಗಾರರು ಅವರು ಬಗಲಿಗೆ ನಾಗರಹೆಡೆಯ ತಂಬೂರಿ ಇಳಿಬಿಟ್ಟು, ಎಡಗೈ ಹೆಬ್ಬೆರಳು ಮತ್ತು ತೋರುಬೆರಳಿಗೆ ಚಿಕಟತಾಳಗಳನ್ನು ಸಿಕ್ಕಿಸಿಕೊಂಡು ಕೈಯನ್ನು ಕಲಾತ್ಮಕವಾಗಿ ತಿರುಗಿಸುವುದೇ ಒಂದು ಚಂದ. ಇದಕ್ಕೆ ಹಿಮ್ಮೇಳದವರು ದಮ್ಮಡಿ, ತಾಳ, ಕಿಮ್ಚಿ, ಢಕ್ಕೆ ಮುಂತಾದ ವಾದ್ಯಪರಿಕರಗಳ ಸಂಗೀತ ಸೇರಿಸುತ್ತಾರೆ. ಬಿಳಿವಸ್ತ್ರಧಾರಿಗಳಾದ ನೀಲಗಾರರು ತಲೆಗೆ ಕೆಂಪುವಸ್ತ್ರದ ಪೇಟ ಕಟ್ಟಿಕೊಂಡು ಕತ್ತಿಗೆ ರುದ್ರಾಕ್ಷಿಮಣಿ, ಹಣೆಗೆ ವಿಭೂತಿ ಬಳಿದುಕೊಂಡು ಹಾಡಲಾಂಭಿಸಿದರೆ ಇರುಳು ಕಳೆದು ಬೆಳಕಾಗುವುದು ಗೊತ್ತೇ ಆಗುವುದಿಲ್ಲ.

ಮಂಟೇಸ್ವಾಮಿ ಕಾವ್ಯ ಪ್ರಸ್ತುತ ದಿನಮಾನಗಳಲ್ಲಿ ಉದ್ಭವಿಸುವ ಉಲ್ಬಣಗಳ ಸೂಚನೆಯನ್ನು ಕಾಣಬಹುದು. ನಮ್ಮ ಕಣ್ಮುಂದೆ ನಡೆಯುತ್ತಿರುವ ಮನುಷ್ಯನ ಭೋಗದಾಸೆ, ಮನಸ್ತಾಪಗಳ ತಿಕ್ಕಾಟ, ಸಾಮಾಜಿಕ ವ್ಯವಸ್ಥೆಯಲ್ಲಿ ಅಲ್ಲೋಲಕಲ್ಲೋಲ, ಧಾರ್ಮಿಕ ವಿಚಾರಗಳ ಅಧಃಪತನ, ಹೆಣ್ಣು ಗಂಡುಗಳ ನಡುವಣ ಸಂಬಂಧಗಳು ಅರ್ಥ ಕಾಣದೇ ಹೋಗುತ್ತಿರುವುದು, ಗುರು ಕಾಮಿಯಾಗುತ್ತಿರುವುದು, ಶಿಷ್ಯ ದುಶ್ಚಟಗಳಿಗೆ ಅಂಟಿಕೊಳ್ಳುತ್ತಿರುವುದು, ಸೌಂದರ್ಯ ಮನಸ್ಸಿನಲ್ಲಿ ಅರಳದೆ ಕಣ್ಣಿನೆಡೆಗೆ ಹೊರಳಿ ಆ ವಕ್ರದೃಷ್ಟಿಯೇ ಸೊಸೆಯನ್ನು ಕಾಮಿಸುವ ದುಷ್ಟ ಬೆಳವಣಿಗೆ, ಶೀಲವಿಲ್ಲದ ರಾಜಕೀಯ, ವಿಪರೀತ ಸ್ವಾರ್ಥ ಇವುಗಳೆಲ್ಲವುಗಳ ಬಗೆಗೆ ಮಂಟೇಸ್ವಾಮಿಗಳ ನಿಲುವು ಅಂದೇ ಸ್ಪಷ್ಟವಾಗಿತ್ತು. ಆದ್ದರಿಂದಲೇ ಅವರಿಗೆ ಅಭಿನವ ಅಲ್ಲಮಪ್ರಭು ಎಂದು ಕರೆದದ್ದು. ಬುದ್ಧಿಜೀವಿಗಳಿಗೆ ಅತಿಶಯೋಕ್ತಿ ಎನಿಸಿದರೂ ಜನಪದರಿಗೆ ಅದು ಕಣ್ಮುಂದಿನ ಬೆಳಕು.

ಉತ್ತರ ಕರ್ನಾಟಕದ ಕಲಬುರ್ಗಿ ಜಿಲ್ಲೆ ಸುರಪುರ ತಾಲ್ಲೂಕಿನ ಕೊಡೇಕಲ್ ಬಸವಣ್ಣ ಒಬ್ಬರು. ಈತನ ಕಾಲ 1487. ತಂದೆ ಮಲ್ಲಶೆಟ್ಟಿ, ತಾಯಿ ಲಿಂಗಾಜಮ್ಮ. ಕೈಹಿಡಿದ ಪತ್ನಿಯರು ಕಾಶಮ್ಮ ಮತ್ತು ಮಹದೇವಮ್ಮ. ಇವರಿಗೆ ಮೂರುಜನ ಗಂಡುಮಕ್ಕಳು. ಅವರ ಹೆಸರು ಹೀಗಿದೆ : ಹಿರಿಯವನು ರಾಚಪ್ಪಾಜಿ, ಗುಹೇಶ್ವರ, ಸಂಗಯ್ಯ. ಆ ಕಾಲದಲ್ಲಿ ಕೊಡೇಕಲ್ ಬಸವಣ್ಣ ಕವಿಯಾಗಿ, ಸಾಹಿತ್ಯ ಚಕ್ರವರ್ತಿಯಾಗಿ, ಯೋಗಿಯಾಗಿ, ಕಲ್ಯಾಣ ಪರಂಪರೆಯ ನೇತಾರನಾಗಿ, ಹಿಂದೂ ಮುಸ್ಲಿಂ ಸಮನ್ವಯಕಾನಾರಾಗಿ, ಅಮರಕಲ್ಯಾಣದ ನಿರ್ಮಾತೃವಾಗಿದ್ದಾರೆ. ಆದ್ದರಿಂದ 15ನೆಯ ಶತಮಾನದ ಕೊಡೇಕಲ್ ಎಂಬ ಕಡೆಯಕಲ್ಯಾಣದ ಇತಿಹಾಸವನ್ನು ನಮ್ಮ ನೀಲಗಾರ ಕಲಾವಿದರು 12ನೆಯ ಶತಮಾನಕ್ಕೆ ಸೇರಿಸಿದ್ದಾರೆ. ಆದರೆ ಎರಡೂ ಪರಂಪರೆಗಳ ಗುರಿ ಒಂದೇ. ಈತನ ಶಿಷ್ಯನೇ ಸಾಮಾಜಿಕ, ಧಾರ್ಮಿಕ ಮೌಲ್ಯಗಳ ಮೂಲಕ ಪವಾಡಪುರುಷರಾಗಿ, ಭಕ್ತಿ ಪಂಥದ ಅಧ್ವರ್ಯನಾಗಿ ‘ಕಾಯಸಿದ್ಧಿ’ ಪಡೆದವರು ಮಂಟೇಸ್ವಾಮಿ.

ಮಂಟೇಸ್ವಾಮಿಯ ವೈಯಕ್ತಿಕ ವಿವರಗಳನ್ನು ತಿಳಿಸುವ ಯಾವ ಆಧಾರಗಳು ನಮಗೆ ದೊರಕ್ಕಿಲ್ಲ. ಶ್ರೀತತ್ತ್ವನಿಧಿ, ಚಿಕ್ಕದೇವರಾಜವಿಜಯ, ರಾಜಾವಳಿಕಥಾಸಾರ ಕೃತಿಗಳಲ್ಲಿ ಮಂಟೇಸ್ವಾಮಿಯನ್ನು ಕುರಿತು ಪ್ರಾಸಂಗಿಕ ಉಲ್ಲೇಖಗಳಿವೆ ಅಷ್ಟೇ. ಕೊಡೇಕಲ್ ಬಸವಣ್ಣನ ಶಿಷ್ಯೋತ್ತಮ ಈ ಮಂಟೇಸ್ವಾಮಿ ಎಂಬುದನ್ನು ಗಮನಿಸಿ ಹೇಳುವುದಾದರೆ ಮಂಟೇಸ್ವಾಮಿ ಕನಕದಾಸರ ಸಮಕಾಲೀನರಾಗುತ್ತಾರೆ. ವಿಜಯನಗರ ಸಾಮ್ರಾಜ್ಯ ಹಾಗೂ ಮೈಸೂರು ಒಡೆಯರ ಆಡಳಿತವನ್ನು ಮಂಟೇಸ್ವಾಮಿ ಕಂಡಂತಿದೆ. ಒಟ್ಟಾರೆ 15ನೆಯ ಶತಮಾನದ ಶಿಷ್ಟ ಯೋಗಿಗಳಂತೆ ಜಾನಪದ ಯೋಗಿ ಮಂಟೇಸ್ವಾಮಿ.

ಮಂಡಪದ ಸಾಮಾನ್ಯ ರೂಪ ಮಂಟೇ. ಮಂಡಪದಲ್ಲಿ ಉತ್ಸವಮೂರ್ತಿ ಮಾತ್ರ ಕುಳಿತುಕೊಳ್ಳಬೇಕು. ಹೀಗಾಗಿ ಮಂಟೇ ಎಂದರೂ ದೇವರೆ, ಸ್ವಾಮಿ ಎಂದರೂ ದೇವರೆ. ಒಟ್ಟಾರೆ ದೇವರ ದೇವರು ಮಂಟೇಸ್ವಾಮಿ! ಈ ಮಂಟೇಸ್ವಾಮಿಯಿಂದ ದೀಕ್ಷೆಪಡೆದವರಲ್ಲಿ ಚಿಕ್ಕಲ್ಲೂರಿನ ಸಿದ್ದಪ್ಪಾಜಿಯೂ ಒಬ್ಬ. ಇಂದಿಗೂ ಚಿಕ್ಕಲ್ಲೂರಿನಲ್ಲಿ ಚಂದ್ರಮಂಡಲೋತ್ಸವದ ಆಚರಣೆ ಇದೆ. ಅಲ್ಲಿ ಕುಲೇಳು ಹದಿನೆಂಟು ಜಾತಿಗಳು ಒಂದಾಗುವ ಪರಂಪರೆ ರೂಢಿಯಲ್ಲಿದೆ. ಇಲ್ಲಿಯೂ ಮಂಟೇಸ್ವಾಮಿಯನ್ನೇ ನೆನೆದು ಆರಾಧಿಸುವ ಪದ್ಧತಿ ಹಾಗೆಯೇ ಉಳಿದು ಬಂದಿದೆ.

ಮಂಟೇಸ್ವಾಮಿಯನ್ನು ಪ್ರಖಂಡಜ್ಞಾನಿ ಎಂದು ಶ್ರೀಸಾಮಾನ್ಯರು ತಿಳಿದಿದ್ದರಿಂದ ಶೈವ ಸಂಪ್ರದಾಯದವರಿಗೆ ಇವನು ಅಭಿನವ ಅಲ್ಲಮಪ್ರಭುವೇ ಆಗಿದ್ದಾನೆ. ‘ಜ್ಯೋತಿ-ದ್ವೀಪ’ (ಅಂಧಕಾರವನ್ನು ಕಳೆಯುವವನು) ಎಂಬ ನೆಲೆಯಲ್ಲಿ ಮಂಟೇಸ್ವಾಮಿ ಭಕ್ತರಿಗೆ ಸಾಕ್ಷಾತ್ ಜ್ಯೋತಿಯ ಸ್ವರೂಪನಾಗಿದ್ದಾನೆ.

ವೈದಿಕ ಸಂಸ್ಕೃತಿ ಯಾವ ವಸ್ತುಗಳನ್ನು, ಆಚರಣೆಗಳನ್ನು ತುಚ್ಛವೆಂದು ಭಾವಿಸಿತ್ತೋ ಅದರಿಂದಲೇ ಹೊಸ ಸಮಾಜ ಕಟ್ಟಲು ಮಂಟೇಸ್ವಾಮಿ ಯತ್ನಿಸಿದರು. ಮಂಟೇಸ್ವಾಮಿಯವರ ಬಂಡಾಯ ವೈಚಾರಿಕಪ್ರಜ್ಞೆ ಅವರನ್ನು ತಳಸಮುದಾಯಗಳು ಧರೆಗೆದೊಡ್ಡವರನ್ನಾಗಿ ನೋಡುವಂತೆ ಮಾಡಿತು. ಮಂಟೇಸ್ವಾಮಿಯವರು ಆದಿಹೊನ್ನಾಯಕನ ಹಳ್ಳಿ, ಮಳವಳ್ಳಿ, ಮಾರಳ್ಳಿ, ಕುಂದೂರು ಮಾರ್ಗವಾಗಿ ಬೊಪ್ಪೇಗೌಡನಪುರಕ್ಕೆ ಬಂದು ನೆಲೆಸುತ್ತಾರೆ. ಇಲ್ಲೇ ಉಳಿದು ‘ಉರಿಗದ್ದುಗೆ’ ಎಂಬ ಆಧ್ಯಾತ್ಮಿಕ ಪೀಠವನ್ನು ಸ್ಥಾಪಿಸುತ್ತಾರೆ. ಈ ಪೀಠವೇ ಮುಂದೆ ಇವರ ಕಾರ್ಯಕ್ಷೇತ್ರವಾಗುತ್ತದೆ. ಇದರಲ್ಲಿ ಲೌಕಿಕ ಮತ್ತು ಆಧ್ಯಾತ್ಮಿಕ ಚರ್ಚೆಗಳು ನಡೆಯುತ್ತವೆ. ಇದೊಂದು ದಕ್ಷಿಣದ ಅನುಭವ ಮಂಟಪವೇ ಸರಿ ಎನ್ನುವವರು ಇದ್ದಾರೆ.

“ದೇಹ ದಂಡಿಸದೆ ಲಭಿಸುವ ಹೊನ್ನು ಸ್ಥಿರವಲ್ಲ” ಎಂದು ಧರೆಗೆದೊಡ್ಡವರು ತಮ್ಮ ದೃಷ್ಟಿಯನ್ನು ಕನಕವೃಷ್ಟಿಗಳಿಂದ ತುಂಬಿರುವ ಕಾವೇರಿ ಎಡದಂಡೆಯ ಅವಳಿ ನಗರಗಳ ಕಡೆಗೆ ಬೀರುತ್ತಾರೆ. ಅಲ್ಲಿನ ಬಲಾಢ್ಯ ಪಾಂಚಾಳರು ಹಲಗೂರು ಮತ್ತು ಚಿಲ್ಲಾಪುರಗಳಲ್ಲಿ ಐಭೋಗದ ಜೀವನ ನಡೆಸುತ್ತಿದ್ದರು. ಅವರ ರಾಗಿಕಲ್ಲು, ದನಕಟ್ಟುವ ಗೂಟ ಚಿನ್ನದ್ದು, ಮನೆಯಲ್ಲಿ ರತ್ನಗಂಬಳಿಯನ್ನು ಹಾಸಿ ಅತುಳೈಶ್ವರ್ಯದಿಂದ ಬದುಕುತ್ತಿದ್ದರು. ಹೀಗೆ ಕರಿಚಿನ್ನದ ಇಂದ್ರವೈಭವದ ನಾಡನ್ನು ಆಳುತ್ತಿದ್ದ ಒಡೆಯರಾದ ಕಾಳೋಜ, ನೀಲೋಜ, ರತ್ನೋಜ, ಹನ್ನೋಜ ಮತ್ತು ಹವಳೋಜರು. ತಮ್ಮ ಭೋಗವಿಲಾಸಕ್ಕಾಗಿ ಹೊನ್ನನ್ನು ಸಂಗ್ರಹಿಸುತ್ತಿದ್ದರು. ಅವರಿಗೆ ಕಬ್ಬಿಣ ಮುತ್ತು ರತ್ನಗಳಿಗಿಂತಲೂ ಬೆಲೆಯುಳ್ಳದ್ದಾಗಿತ್ತು. ಏಕೆಂದರೆ ಅವಳಿನಾಡಿನ ಕಬ್ಬಣಕ್ಕೆ ಜಾಗತಿಕ ಮಾರುಕಟ್ಟೆಯಲ್ಲಿ ಬೇಡಿಕೆ ಹೆಚ್ಚಿತ್ತೆಂದು ಫ್ರಾನ್ಸಿಸ್ ಬುಕನಾನ್ ಒಂದೆಡೆ ದಾಖಲಿಸುತ್ತಾರೆ. ಇದರಿಂದಾಗಿ ಪಾಂಚಾಳರು ವ್ಯವಸಾಯೋಪಕರಣಗಳನ್ನು ಕಡೆಗಣಿಸಿ ಆಯುಧಗಳನ್ನು ತಯಾರಿಸಿ ಪಾಶ್ಚಾತ್ಯ ರಾಷ್ಟ್ರಗಳಿಗೆ ರವಾನಿಸುತ್ತಿದ್ದರು. ಇದರಿಂದ ವ್ಯವಸಾಯ ಉತ್ಪನ್ನವಿಲ್ಲದೆ ಜನ ಅನ್ನಕ್ಕಾಗಿ ಪರದಾಡುವ ಸ್ಥಿತಿ ನಿರ್ಮಾಣವಾಯಿತು. ಇದಕ್ಕೆ ಕಾರಣರಾದ ಲೋಕಕಂಟಕರನ್ನು ತೊಡೆದು ಹಾಕುವುದೇ ಧರೆಗೆದೊಡ್ಡವರ ಮೂಲ ಉದ್ದೇಶವಾಗಿತ್ತು. ಇದರ ಮುಂದಿನ ಕಾರ್ಯಗಳಿಗೆ ಭೂಮಿಕೆ ಸಿದ್ಧಪಡಿಸುತ್ತಾರೆ. ಇದೇ ಕಬ್ಬಿಣ ಭಿಕ್ಷೆ ಕೇಳುವ ಪರಿ.

ಇತ್ತ ಕೈಲಾಸವಾಣಿಯಂತೆ ನಿಡುಘಟ್ಟದಲ್ಲಿ ಸಿದ್ದಪ್ಪಾಜಿ ಜನಿಸಿದರು ಎಂದು ಕಾವ್ಯ ಹೇಳುತ್ತದೆ. ತೇಜೋವಂತನಾದ ಎಳೆಯ ಬಾಲಕ ತನ್ನ ಉತ್ಕಟೇಚ್ಚೆಯಿಂದ 66 ಕುಲುಮೆ, 77 ಕಾಲಾಳುಗಳಿಂದ ಕಮ್ಮಾರಿಕೆ ಕಾಯಕದಲ್ಲಿ ನಿರತನಾಗಿದ್ದನು. ಆಗ ಮಂಟೇಸ್ವಾಮಿ ಅಲ್ಲಿಗೆ ಬಂದು ಬೆಂಕಿಕೆಂಡದ ಭಿಕ್ಷೆಯನ್ನು ಕೇಳುತ್ತಾರೆ. ಅದಕ್ಕೆ ಕೆಂಪಾಚಾರಿ “ಕಾಯಕ ಮಾಡದೆ ಭಿಕ್ಷೆ ಕೇಳುವುದು ಶುದ್ಧ ಸೋಮಾರಿಗಳ ಲಕ್ಷಣ” ಎಂದನು. ಆಗ ಧರೆಗೆದೊಡ್ಡವರು ಕರ್ಮತತ್ವದ ಜಾಗೃತಿಗಾಗಿ ಕಾರಣಿಕ ಪುರುಷ ಕೆಂಪಣ್ಣನನ್ನು ಶಿಷ್ಯನ್ನಾಗಿ ಪಡೆಯಲು ನಿರ್ಧರಿಸುತ್ತಾರೆ. ಜ್ಞಾನಜ್ಯೋತಿಯ ಆಣತಿಯಂತೆ ಕೆಂಪಣ್ಣ ಮಂಟಸ್ವಾಮಿಯ ಶಿಷ್ಯನಾದನು. ಕರ್ಮತತ್ವದ ನೆಲೆ ಮತ್ತು ಬೆಲೆಯನ್ನು ತಿಳಿಯುವ ಸಲುವಾಗಿ ಕೆಂಪಾಚಾರಿ 12 ವರ್ಷಗಳ ಕಾಲ ದೀರ್ಘ ತಪಸ್ಸನ್ನು ಆಚರಿಸುತ್ತಾನೆ. ಈ ತಪಸ್ಸಿನಿಂದ ಬೆಂಕಿಯಲ್ಲಿ ಕರಗಿದ ಚಿನ್ನ ಪರಿಶುದ್ಧವಾಗುವಂತೆ ಕೆಂಪಣ್ಣ ಸಿದ್ಧರ ಸಿದ್ಧನಾಗಿ ಸಿದ್ದಪ್ಪಾಜಿಯಾಗಿ ಹೊರಬರುತ್ತಾರೆ. ಅನಂತರ ಧರೆಗೆದೊಡ್ಡವರ ಆಣೆಯಂತೆ ಹಲಗೂರು, ಚಿಲ್ಲಾಪುರ ಕಮ್ಮಾರುಗಳಲ್ಲಿ ಕಬ್ಬಿಣ ಭಿಕ್ಷೆಗೆ ಹೋಗುತ್ತಾರೆ. ಅಲ್ಲಿ ಸಿದ್ದಪ್ಪಾಜಿ ಮಾಡಿದ ಸಾಧನೆ ಮತ್ತು ಪವಾಡಗಳು ಅವರ್ಣೀಯ. ಅಂದರೆ ಉಕ್ಕಿನ ಕುದುರೆಯನ್ನು ಗಗನಕ್ಕೆ ಹಾರಿಸಿದ್ದು, ಕೊಪ್ಪರಿಗೆ ಕಳ್ಳಿಹಾಲು ಗಡಗಡನೇ ಕುಡಿದದ್ದು, ಕಬ್ಬಿಣಪುಡಿಗಳನ್ನು ನುಂಗಿದ್ದು, ಮೆಣಸಿನಕಾಯಿ ಗುಳಿಯಲ್ಲಿ ಮುಚ್ಚಿದ್ದು, ಕಾದಗಟ್ಟಿ ಬಳೆ ಧರಿಸಿದ್ದು, ಹೀಗೆ ಒಂದೇ ಎರಡೇ ಪಾಂಚಾಳರು ಒಡ್ಡಿದ್ದ 770 ಪವಾಡಗಳನ್ನು ಗೆದ್ದುಬಂದರು. ಇದು ಪರೋಪಕಾರ ತತ್ವವನ್ನು ಸಾಮಾನ್ಯರಲ್ಲಿದ್ದ ಮೋಹಾಂಧಕಾರವನ್ನು ಅಳಿಸಿದುದು, ಜೊತೆಗೆ ಮಾನವ ಧರ್ಮದ ದ್ಯೋತಕವಾಗಿದೆ. ಕೊನೆಯಲ್ಲಿ ಚಿಕ್ಕಲ್ಲೂರಿನಲ್ಲಿ ನೆಲೆಸಿರುವ ಘನನೀಲಿ ಸಿದ್ದಪ್ಪಾಜಿ ನಂಬಿದ ಭಕ್ತರ ಅಭೀಷ್ಟಗಳನ್ನು ಪೂರೈಸುತ್ತಿದ್ದಾರೆ.

ಈ ಪವಾಡ ಪುರುಷನನ್ನು ಇಂದಿಗೂ ದೈವವೆಂದು ಸಂಭ್ರಮಿಸಲಾಗುತ್ತಿದೆ. ಕೆಲವರಿಗಂತೂ ಸಿದ್ದಪ್ಪಾಜಿಯೇ ಮನೆದೈವ. ಇಂತಹ ದೈವಾಂಶ ಸಂಭೂತನನ್ನು ಕಂಡ ಜನರು ಸಿದ್ದಪ್ಪಾಜಿಯ ಕಾರ್ಯಸ್ಥಾನದಲ್ಲಿ ನಂದಾದ್ವೀಪ ಹಚ್ಚಿ ಆರಾಧಿಸುವ ಪರಂಪರೆ ಹುಟ್ಟುಹಾಕಿದರು. ಮುಖ್ಯವಾಗಿ ತೆಳ್ಳನೂರು, ಕೊತ್ತನೂರು, ಬಾಣೂರು, ಬಾಳಗುಣಸೆ, ಇಕ್ಕಡಳ್ಳಿ, ಸುಂಡ್ರಳ್ಳಿ, ಶ್ಯಾಗ್ಯ ಗ್ರಾಮಗಳ ಗ್ರಾಮಸ್ಥರು ಈ ಆರಾಧನೆಗೆ ಮೂಲಕಾರಣಕರ್ತರಾದರು. ಕೆಲವು ಗ್ರಾಮಸ್ಥರಿಂದ ಆರಂಭವಾದ ಈ ಆರಾಧನೆ ಇಂದು ಉತ್ಸವವಾಗಿ ಆರಾಧಿಸಲ್ಪಡುತ್ತಿದೆ. ಲಕ್ಷೋಪ ಲಕ್ಷ ಭಕ್ತರು ಇಂದು ಸಿದ್ದಪ್ಪಾಜಿಯ ಉತ್ಸವದಲ್ಲಿ ಭಾಗಿಯಾಗುತ್ತಾರೆ. ಜನವರಿ ಮಾಸದ ಮೊದಲ ಹಾಲುಹುಣ್ಣಿಮೆಯಿಂದ ಒಂದು ವಾರ ಚಿಕ್ಕಲ್ಲೂರಿನ ಜಾತ್ರೆ ವಿಜೃಂಭಣೆಯಿಂದ ಜರುಗುತ್ತದೆ.

ಈ ಹಿನ್ನೆಲೆಯಲ್ಲಿ ಸಾಂಸ್ಕೃತಿಕ ದಾರ್ಶನಿಕ ಶ್ರೇಷ್ಠರಾದ ಮಂಟೇಸ್ವಾಮಿ ಮತ್ತು ಸಿದ್ದಪ್ಪಾಜಿಯವರ ಬದುಕು, ಬೋಧನೆ ಮತ್ತು ಸಾಧನೆಯು ಸರ್ವಕಾಲೀಕವಾದುದು. ಹೀಗೆ ಶಿವನ ರೂಪರಾದ ಮಂಟೇಸ್ವಾಮಿ ಮತ್ತು ಸಿದ್ದಪ್ಪಾಜಿ ಕರ್ಮ ಜ್ಞಾನದ ಒಂದೇ ರೂಪವಾದ ಶಕ್ತಿವಿಶಿಷ್ಟಾದ್ವೈತ ತತ್ವವನ್ನು ಬೋಧಿಸಿ ಮಹಾನುಭಾವರಾಗಿದ್ದಾರೆ.

* ಸಹಾಯಕ ಪ್ರಾಧ್ಯಾಪಕರು ಕನ್ನಡ ಅಧ್ಯಯನ ಮತ್ತು ಸಂಶೋಧನಾ ವಿಭಾಗ, ಕರಾಮುವಿ, ಮುಕ್ತಗಂಗೋತ್ರಿ, ಮೈಸೂರು

ಫ್ರ್ಯಾಂಕ್ ಓ’ಕಾನರ್ ಕನ್ನಡಕ್ಕೆ: ಡಾ.ಬಸು ಬೇವಿನಗಿಡದ

ಪಾಪ ನಿವೇದನೆ

ಜುಲೈ ೨೦೧೮

ಪರಮೇಶ್ವರ ಗುರುಸ್ವಾಮಿ

ದಾಂಪತ್ಯ ಮೀರಿದ ಬೌದ್ಧಿಕ ಸಾಂಗತ್ಯ

ಜುಲೈ ೨೦೧೮

ಪರಮೇಶ್ವರ ಗುರುಸ್ವಾಮಿ

ಟೆಕ್ ಡ್ರೀಮರ್ಸ್ ಓದಲೇಬೇಕಾದ ‘ಹಿಟ್ ರಿಫ್ರೆಶ್’

ಜುಲೈ ೨೦೧೮

ಡಾ.ರಾಕೇಶ್ ಬಟಬ್ಯಾಲ್

ಜೆ.ಎನ್.ಯು ದ ಮೇಕಿಂಗ್ ಆಫ್ ಎ ಯೂನಿವರ್ಸಿಟಿ

ಜೂನ್ ೨೦೧೮

ಎಸ್.ಆರ್.ವಿಜಯಶಂಕರ

ಮೊಗಳ್ಳಿ ಗಣೇಶ್ ಹೊಸ ಕಥಾ ಸಂಕಲನ ದೇವರ ದಾರಿ

ಜೂನ್ ೨೦೧೮

ಮಂಜುನಾಥ ಡಿ.ಎಸ್.

ಅಹಿಂಸಾತ್ಮಕ ಸಂವಹನ

ಜೂನ್ ೨೦೧೮

ಪೃಥ್ವಿದತ್ತ ಚಂದ್ರಶೋಭಿ

ಕರ್ನಾಟಕದ ರಾಜಕಾರಣ ಹೇಗೆ ಬದಲಾಗಿದೆ?

ಮೇ ೨೦೧೮

ಪುರುಷೋತ್ತಮ ಬಿಳಿಮಲೆ

ಅವಲೋಕನ ಸಮಕಾಲೀನ ಚರ್ಚೆಗೆ ಹೆಚ್ಚು ಪ್ರಸ್ತುತ

ಮೇ ೨೦೧೮

ಪ್ರೊ.ಶಿವರಾಮಯ್ಯ

ದೇಸಿ ಕನ್ನಡ ಪರಂಪರೆ

ಮೇ ೨೦೧೮

ರಾಜದೀಪ್ ಸರ್ದೇಸಾಯಿ

ಗುಜರಾತಿನ ನರೇಂದ್ರಭಾಯಿ

ಎಪ್ರಿಲ್ ೨೦೧೮

ಸ್ನೇಹಲತಾ ಎಸ್. ಗೌನಳ್ಳಿ

ಪಾಕಿಸ್ತಾನಿ ಕವಯಿತ್ರಿ ಸಾರಾ ಶಗುಫ್ತಾ ಜೀವನ ಮತ್ತು ಕಾವ್ಯ

ಎಪ್ರಿಲ್ ೨೦೧೮

ವಿನಯ್ ಸೀತಾಪತಿ

ಪಿ. ವಿ. ನರಸಿಂಹರಾವ್ ಜೀವನಚರಿತ್ರೆ ಹಾಫ್ ಲಯನ್

ಮಾರ್ಚ್ ೨೦೧೮

ಅರುಣ್ ಜೋಳದಕೂಡ್ಲಿಗಿ

ಪೆರಿಯಾರ್ ವಿವಾಹ ಪದ್ಧತಿ

ಮಾರ್ಚ್ ೨೦೧೮

ಮೂಲ: ಇ.ರಾಘವನ್; ಜೇಮ್ಸ್ ಮೇನರ್ ಅನುವಾದ: ಪೃಥ್ವಿ ದತ್ತ ಚಂದ್ರ ಶೋಭಿ

ಭೂಸುಧಾರಣೆ ಜಾತಿ ಮೀಸಲಾತಿ ತುರ್ತುಪರಿಸ್ಥಿತಿ

ಫೆಬ್ರವರಿ ೨೦೧೮

- ಕಲ್ಲೇಶ್ ಕುಂಬಾರ್, ಹಾರೂಗೇರಿ

ಬಿಚ್ಚಿಟ್ಟ ಬಾಲ್ಯದ ನೆನಪುಗಳ ಬುತ್ತಿ

ಫೆಬ್ರವರಿ ೨೦೧೮

ಡಾ.ಪಿ.ಮಣಿ

ಮಂಟೇಸ್ವಾಮಿ ಕಾವ್ಯದಲ್ಲಿ ಸಿದ್ಧಪ್ಪಾಜಿ

ಫೆಬ್ರವರಿ ೨೦೧೮