2nd ಫೆಬ್ರವರಿ ೨೦೧೮

ಬಿಚ್ಚಿಟ್ಟ ಬಾಲ್ಯದ ನೆನಪುಗಳ ಬುತ್ತಿ

— ಕಲ್ಲೇಶ್ ಕುಂಬಾರ್, ಹಾರೂಗೇರಿ

‘ಬುತ್ತಿ’— ಕಥೆಗಾರ ಡಾ. ಅಮರೇಶ್ ನುಗಡೋಣಿ ಅವರ ಬಾಲ್ಯದ ಅನುಭವವನ್ನು ಹಂಚಿಕೊಳ್ಳುವ ಕೃತಿ. ಕಲಬುರಗಿಯ ಕಾವ್ಯಮನೆ ಪ್ರಕಾಶನ ಹೊರತಂದಿರುವ ಈ ಪುಸ್ತಕದ ಬೆಲೆ ರೂ.120. ನುಗಡೋಣಿ ಅವರು ತಮ್ಮ ವಿಶಿಷ್ಟವಾದ ಕಥೆಗಳಿಂದ ಓದುಗರಿಗೆ ಅನೂಹ್ಯವಾದ ಲೋಕವೊಂದರ ಸಂಗತಿಗಳನ್ನು ನಿಜದಲಿ ಇವೆ ಎಂಬಂತೆ ಅನುಭವಕ್ಕೆ ತಂದುಕೊಡುತ್ತಾರೆ. ಕಥೆ ಬರೆಯುವುದು ಸುಲಭವೂ ಅಲ್ಲದ, ಸರಳವೂ ಅಲ್ಲದ ಸೃಜನಶೀಲವಾದ ಸಂಕೀರ್ಣ ಕ್ರಿಯೆ ಎಂದು ನಂಬಿರುವ ಅವರು, ಈ ಕೃತಿಯಲ್ಲಿ ಬರೀ ನೋವಿನ, ಅಪಮಾನದ ಸಂಗತಿಗಳನ್ನು ಹೇಳಿಕೊಳ್ಳದೇ ತಮಗೆ ಪ್ರಿಯವಾದ ಸಂಗತಿಗಳೊಂದಿಗೆ ಸಂವಾದಕ್ಕಿಳಿದಿದ್ದಾರೆ.

ಇಲ್ಲಿ, ಡಾ.ಅಮರೇಶ್‍ರು ತಮ್ಮ ಬಾಲ್ಯದ ಅನುಭವಗಳನ್ನು ಅದೆಷ್ಟು ಸರಳವಾಗಿ ಮತ್ತು ಸಹಜವಾಗಿ ನಿರೂಪಿಸಿದ್ದಾರೆಂದರೆ ಅವೆಲ್ಲ ಯಾವ ಒತ್ತಡಕ್ಕೂ ಒಳಗಾಗದೆ ತಾವೇ ತಾವಾಗಿ ದಾಖಲಾಗುತ್ತ ಹೋಗಿವೆಯೇನೊ ಎಂದೆನಿಸುತ್ತದೆ. ಇಲ್ಲಿನ ಬರಹಗಳು ಓದುಗನನ್ನು ಅದೆಷ್ಟು ಆರ್ದ್ರವಾಗಿ ಆವರಿಸುತ್ತವೆಯೆಂದರೆ ಕೆಲವು ಸಂದರ್ಭಗಳಲ್ಲಂತೂ ಇಳಿ ಬಿಸಿಲಿನಲ್ಲಿ ಸುರಿಯುವ ಮಳೆಯ ಸಮ್ಮುಖದಲ್ಲಿ ಆಗಸದಲ್ಲಿ ಮೂಡುವ ಬಣ್ಣದ ಕಾಮನಬಿಲ್ಲು ನಮ್ಮದೇ ಎದೆಯಲ್ಲಿ ಮೂಡಿದಂತೆ ಭಾಸವಾಗುತ್ತದೆ. ನಾವು ಬಾಲ್ಯದಲ್ಲಿ ಆಡಿದ ಆಟ, ತುಂಟಾಟ, ಹಳ್ಳದ ಸ್ನಾನ, ಹೊಲ ಗದ್ದೆಗಳಲ್ಲಿ ಹಿರೀಕರೊಂದಿಗೆ ಸೇರಿ ಮಾಡುತ್ತಿದ್ದ ಕೆಲಸ, ಕಣ್ಣಾರೆ ಕಂಡ ಘಟನೆಗಳು, ಊರ ಜನರ ನಡುವಿದ್ದ ಮಾನವೀಯ ಸಂಬಂಧಗಳು, ಗೆಳೆಯರೊಂದಿಗಿನ ರಗಳೆ ರಂಪ ಇವೆಲ್ಲವೂ ಬಣ್ಣ ಬಣ್ಣದ ಚಿತ್ರಗಳಂತೆ ಕಣ್ಮುಂದೆ ಮೂಡುತ್ತವೆ.

ಲೇಖಕರ ಬಾಲ್ಯದ ಅನುಭವ ಕಥನಗಳು ಈ ಕೃತಿಯ ಇಪ್ಪತ್ತು ಅಧ್ಯಾಯಗಳಲ್ಲಿ ಹರಡಿಕೊಂಡಿವೆ; ಅವೆಲ್ಲವೂ ಈ ಹಿಂದೆ ಬಿಡಿಬಿಡಿಯಾಗಿ ಬೇರೆ ಬೇರೆ ಪತ್ರಿಕೆಗಳಲ್ಲಿ ಪ್ರಕಟಗೊಂಡಿವೆ.

‘ನಮ್ಮ ಬೇಸಿಗೆ ಶಿಬಿರ’ ಎಂಬ ಬರಹದಲ್ಲಿ ಡಾ.ಅಮರೇಶ್‍ರು ಇಂದಿನ ಕಾರ್ಪೊರೇಟ್ ಜಗತ್ತು, ನಗರ ಕೇಂದ್ರಿತ ಮಕ್ಕಳು ಸ್ವಚ್ಛಂದವಾಗಿ ಅನುಭವಿಸಬೇಕಾದ ಬಾಲ್ಯವನ್ನು ಹೇಗೆ ವ್ಯಾಪಾರೀಕರಣಗೊಳಿಸಿದೆ ಎಂಬುದನ್ನು ತಾವು ಅನುಭವಿಸಿದ ಸುಂದರವಾದ ಬಾಲ್ಯದ ಅನುಭವಗಳೊಂದಿಗೆ ಸಮೀಕರಿಸಿ ಹೇಳುತ್ತಾರೆ. ಇಂದು, ನಗರ ಪ್ರದೇಶಗಳಲ್ಲಿ ಮಕ್ಕಳಿಗಾಗಿಯೇ ಹಮ್ಮಿಕೊಳ್ಳುವ ಸಮ್ಮರ್ ಕ್ಯಾಂಪುಗಳು ನಾಟ್ಯ, ನೃತ್ಯ, ಚಿತ್ರಕಲೆ, ಸಂಗೀತ, ದೇಶಿ ಆಟಗಳು —ಹೀಗೆ ಇವೆಲ್ಲವುಗಳನ್ನು ಕಲಿಸುವ ನೆಪದಲ್ಲಿ ಆ ಮಕ್ಕಳ ಸೃಜನಶೀಲತೆಗೆ ಅವಕಾಶ ಮಾಡಿಕೊಡುವ ಹುಸಿ ಘೋಷಣೆಗಳನ್ನು ಪೋಷಿಸುವ ವ್ಯಾಪಾರಿ ಕೇಂದ್ರಗಳಾಗಿ ರೂಪುಗೊಂಡಿರುವುದನ್ನು ವಿವರಿಸುತ್ತಾರೆ. ಅಂದು, ಬೇಸಿಗೆ ರಜೆಯಲ್ಲಿ ಊರು ಸೇರಿಕೊಳ್ಳುತ್ತಿದ್ದ ಹತ್ತಾರು ಹುಡುಗರೊಂದಿಗೆ ಸೇರಿಕೊಂಡು ಅವರು ಹೊಲ—ಮನೆ ಕೆಲಸ ಮಾಡುತ್ತಲೇ ಹೊಲದ ಬೆಳೆಗಳಲ್ಲಿ ಸಿಗುತ್ತಿದ್ದ ಹೆಸರು, ಅಲಸಂದೆಕಾಯಿ, ಸವತೆ, ಬುಡಮೆಕಾಯಿಯಂಥ ಹಸಿ ಪದಾರ್ಥಗಳನ್ನು ತಿಂದು ಹೊಟ್ಟೆ ತುಂಬಿಸಿಕೊಳ್ಳುತ್ತಿದ್ದ; ಕಾಲುವೆಯಲ್ಲಿ ಕೂಡಿ ಈಜಾಡುತ್ತಿದ್ದ, ಇಸ್ ಸ್ಟಾಪ್, ಗಿಲ್ಲಿದಾಂಡು, ಬಟ್ಟೆ ಚೆಂಡಿನಾಟದಂಥ ಆಟಗಳನ್ನು ಆಡುತ್ತ ಕಾಲ ಕಳೆಯುತ್ತಿದ್ದ ದಿನಗಳನ್ನು ನೆನಪಿಸಿಕೊಳ್ಳುತ್ತಲೇ ಅಂಥ ಬಾಲ್ಯವನ್ನು ಇಂದು ತಮ್ಮ ಮಕ್ಕಳೇ ಅನುಭವಿಸಲು ಸಾಧ್ಯವಾಗದ್ದಕ್ಕೆ ಕಳವಳ ವ್ಯಕ್ತಪಡಿಸುತ್ತಾರೆ.

ಇನ್ನು ‘ಅಕ್ಕನಿಗೆ ದೆವ್ವದ ಕಾಟ’— ಲೇಖನದಲ್ಲಿ ಎಲ್ಲ ಕಾಲದಲ್ಲೂ ಉಳಿದುಕೊಂಡು ಬಂದ ಮೂಢನಂಬಿಕೆಗಳ ಬಗ್ಗೆ ಡಾ.ಅಮರೇಶ್‍ರು ಪರವಿರೋಧಗಳ ಮಧ್ಯದ ಗೆರೆಯ ಮೇಲೆ ನಿಂತು, ತಮ್ಮ ಅಕ್ಕ ನೀಲಮ್ಮನಿಗೆ ದೆವ್ವ ಹಿಡಿದ ಸಂದರ್ಭದಲ್ಲಿ ಸಂಭವಿಸಿದ ಘಟನೆಗಳನ್ನೆಲ್ಲ ನಿಜವೆಂದರೆ ನಿಜ; ಸುಳ್ಳೆಂದರೆ ಸುಳ್ಳು ಎಂಬರ್ಥದಲ್ಲಿ ವಿವರಿಸುತ್ತಾರೆ. ಅಂತೆಯೇ, ಅಕ್ಕ ನೀಲಮ್ಮನಿಗೆ ಹಿಡಿದ ದೆವ್ವ ಬಿಡಿಸಲು ಬರುವ ಕನಸದೊಡ್ಡಿ ವಿರೂಪಾಕ್ಷಪ್ಪ ತಾತನಿಂದ, ‘ದೆವ್ವ ನಿಮಗೇನೂ ಮಾಡುವುದಿಲ್ಲ, ಅಂಜಬ್ಯಾಡ್ರಿ...’ ಎಂದು ಹೇಳಿಸುವುದರ ಮೂಲಕ ಅವರು ದೆವ್ವಗಳು ಇವೆ ಮತ್ತು ಇಲ್ಲ ಎಂಬ ನಂಬಿಕೆಯ ವಿಚಾರದಲ್ಲಿ ತಮಗೆ ಇರಬಹುದಾದ ಸ್ಪಷ್ಟವಾದ ನಿಲುವು ಏನೆಂಬುದನ್ನು ಸೂಚ್ಯವಾಗಿ ಓದುಗರ ಅರಿವಿಗೆ ತರುತ್ತಾರೆ. ಜೊತೆಗೆ, ತಮ್ಮ ಈ ನಿಲುವು ಮೀರಿ ಮುಂದುವರೆದ ಇಂದಿನ ವೈಜ್ಞಾನಿಕ ಯುಗದಲ್ಲಿಯೂ ಪ್ರಜ್ಞಾವಂತರಲ್ಲಿ ಮತ್ತು ವಿಶ್ವವಿದ್ಯಾಲಯಗಳಲ್ಲಿ ಸೆಮಿನಾರ್‍ಗಳ ರೂಪದಲ್ಲಿ ಚರ್ಚೆ ನಡೆಯುವಷ್ಟರ ಮಟ್ಟಿಗೆ ಜನರಲ್ಲಿ ದೆವ್ವಗಳ ಕುರಿತಾಗಿ ಆಸಕ್ತಿ ಉಳಿದುಕೊಂಡು ಬಂದಿರುವ ವಿಚಾರವನ್ನು ಹೇಳುತ್ತಲೇ, ಇರುವ ಮತ್ತು ಇಲ್ಲದಿರುವ ಬಗೆಗಿನ ನಿರ್ಧಾರವನ್ನು ಓದುಗನಿಗೆ ಬಿಡುತ್ತಾರೆ.

‘ಎತ್ತಿ ಆಡಿಸಿದ ಯಲ್ಲಪ್ಪ’— ಲೇಖನವನ್ನು ಡಾ.ಅಮರೇಶ್‍ರು ಆರ್ದ್ರವಾಗಿ ಕಟ್ಟಿಕೊಟ್ಟಿದ್ದಾರೆ. ಬಾಲ್ಯದಲ್ಲಿ ಎಲ್ಲ ಥರದ ಜಾತಿ— ಅಂತಸ್ತು, ಆಳು—ಅರಸ ಎಂಬ ಲೋಕಕಲ್ಪಿತ ಸಂಬಂಧಗಳನ್ನು ಮೀರಿ ಕೆಳವರ್ಗದ ಕೆಲಸದ ಆಳು ಯಲ್ಲಪ್ಪನೊಂದಿಗಿನ ಅವರ ಒಡನಾಟ ನಿಜಕ್ಕೂ ಅಚ್ಚರಿಯೆನಿಸುತ್ತದೆ. ಹಾಗೆಯೇ ಯಲ್ಲಪ್ಪ ಕೂಡ ಅವರ ಮನೆತನದೊಂದಿಗೆ ಹೊಂದಿಕೊಂಡು, ಆ ಮನೆಯ ಸದಸ್ಯನಂತೆಯೇ ಒಡನಾಡುತ್ತ ಬಹುಕಾಲದವರೆಗೆ ಇರುತ್ತಾನೆ. ಇದು ರಕ್ತಸಂಬಂಧವನ್ನು ಮೀರಿದ, ಸಾಮಾಜಿಕ ಪಾತಳಿಯ ಮೇಲಿನ ಪಾವಿತ್ರ್ಯದ ಪರಿಧಿಯಲ್ಲಿರುವ ಮನುಷ್ಯ ಸಂಬಂಧಗಳು ಅದೆಷ್ಟು ಗಾಢವಾಗಿ ಬೆಸೆದುಕೊಂಡಿರುತ್ತವೆ ಎಂಬುದನ್ನು ಅರಿವಿಗೆ ತರುತ್ತದೆ.

ಹಾಗೆಯೇ, ಈ ಥರದ ಮನುಷ್ಯ ಸಂಬಂಧಗಳ ನೆಲೆಯಲ್ಲಿನ ಒಡನಾಟವನ್ನು ಒರೆಗೆ ಹಚ್ಚುವ ನೆಪದಲ್ಲಿ ಕೂಡು ಕುಟುಂಬವೊಂದರ ಸದಸ್ಯರ ಭಿನ್ನ ಮನೋಸ್ಥಿತಿಗಳಿಂದ ಆಗುವ ಅಪಾಯಗಳು, ಹೊಂದಾಣಿಕೆಯ ಕೊರತೆಯಿಂದಾಗಿ ಶಿಥಿಲಗೊಳ್ಳುವ ಸಂಬಂಧಗಳು, ಎದುರಿಸಬಹುದಾದ ಆರ್ಥಿಕ ಸಂಕಟಗಳನ್ನು ಪರೋಕ್ಷವಾಗಿ ಈ ಲೇಖನ ಅನಾವರಣ ಮಾಡುತ್ತದೆ.

ಇಲ್ಲಿ ಬಾಲ್ಯದ ಅನುಭವಗಳನ್ನೊಳಗೊಂಡ ಅನೇಕ ಲೇಖನಗಳಿವೆ. ಅವುಗಳಲ್ಲಿ ‘ಅಮ್ಮನ ಮಡಿಲ ಉಡಿಯ ಸಂಪತ್ತು’, ‘ನನ್ನೂರಿನಲ್ಲಿ ಕುವೆಂಪು ಕಾದಂಬರಿಗಳ ಲೋಕ’, ‘ಬನ್ನಿ ಕೊಡುವ ಸಂಪ್ರದಾಯ’, ‘ನಾನು ಕಲಿತ ಶಾಲೆಗಳು’, ‘ಅಮ್ಮ’, ‘ಅಪ್ಪ’— ಲೇಖನಗಳು ಪ್ರಮುಖವಾಗಿವೆ. ಹಾಗೆ ನೋಡಿದರೆ ಎಲ್ಲರ ಬಾಲ್ಯದ ಅನುಭವಗಳು ಹೆಚ್ಚೂ ಕಮ್ಮಿ ಒಂದೇ ಎನಿಸಿದರೂ ಡಾ.ಅಮರೇಶ್ ತಮ್ಮ ಬಾಲ್ಯವನ್ನು ಹಿಂದಿರುಗಿ ನೋಡಿದ ರೀತಿ ಅನನ್ಯವಾಗಿದೆ. ಅದಕ್ಕೆ ಕಾರಣ ಅವರ ನಿರೂಪಣಾ ಶೈಲಿಯಲ್ಲಿ ಓದುಗನನ್ನು ಗಾಢವಾಗಿ ಆವರಿಸಿಕೊಳ್ಳುವ ಚುಂಬಕ ಶಕ್ತಿಯಿರುವುದೇ ಆಗಿದೆ. ಹೀಗಾಗಿ, ಡಾ.ಅಮರೇಶ್‍ರ ‘ಬುತ್ತಿ’ ಓದುವುದೆಂದರೆ ನಾವೆಲ್ಲ ಈ ಹಿಂದೆ ದಾಟಿ ಬಂದ ನಮ್ಮದೇ ಬಾಲ್ಯವನ್ನು ಆ ಕ್ಷಣದಲ್ಲಿ ಮರು ಅನುಭವಿಸುತ್ತಿರುವಂತೆ ಭಾಸವಾಗುತ್ತದೆ!

ಫ್ರ್ಯಾಂಕ್ ಓ’ಕಾನರ್ ಕನ್ನಡಕ್ಕೆ: ಡಾ.ಬಸು ಬೇವಿನಗಿಡದ

ಪಾಪ ನಿವೇದನೆ

ಜುಲೈ ೨೦೧೮

ಪರಮೇಶ್ವರ ಗುರುಸ್ವಾಮಿ

ದಾಂಪತ್ಯ ಮೀರಿದ ಬೌದ್ಧಿಕ ಸಾಂಗತ್ಯ

ಜುಲೈ ೨೦೧೮

ಪರಮೇಶ್ವರ ಗುರುಸ್ವಾಮಿ

ಟೆಕ್ ಡ್ರೀಮರ್ಸ್ ಓದಲೇಬೇಕಾದ ‘ಹಿಟ್ ರಿಫ್ರೆಶ್’

ಜುಲೈ ೨೦೧೮

ಡಾ.ರಾಕೇಶ್ ಬಟಬ್ಯಾಲ್

ಜೆ.ಎನ್.ಯು ದ ಮೇಕಿಂಗ್ ಆಫ್ ಎ ಯೂನಿವರ್ಸಿಟಿ

ಜೂನ್ ೨೦೧೮

ಎಸ್.ಆರ್.ವಿಜಯಶಂಕರ

ಮೊಗಳ್ಳಿ ಗಣೇಶ್ ಹೊಸ ಕಥಾ ಸಂಕಲನ ದೇವರ ದಾರಿ

ಜೂನ್ ೨೦೧೮

ಮಂಜುನಾಥ ಡಿ.ಎಸ್.

ಅಹಿಂಸಾತ್ಮಕ ಸಂವಹನ

ಜೂನ್ ೨೦೧೮

ಪೃಥ್ವಿದತ್ತ ಚಂದ್ರಶೋಭಿ

ಕರ್ನಾಟಕದ ರಾಜಕಾರಣ ಹೇಗೆ ಬದಲಾಗಿದೆ?

ಮೇ ೨೦೧೮

ಪುರುಷೋತ್ತಮ ಬಿಳಿಮಲೆ

ಅವಲೋಕನ ಸಮಕಾಲೀನ ಚರ್ಚೆಗೆ ಹೆಚ್ಚು ಪ್ರಸ್ತುತ

ಮೇ ೨೦೧೮

ಪ್ರೊ.ಶಿವರಾಮಯ್ಯ

ದೇಸಿ ಕನ್ನಡ ಪರಂಪರೆ

ಮೇ ೨೦೧೮

ರಾಜದೀಪ್ ಸರ್ದೇಸಾಯಿ

ಗುಜರಾತಿನ ನರೇಂದ್ರಭಾಯಿ

ಎಪ್ರಿಲ್ ೨೦೧೮

ಸ್ನೇಹಲತಾ ಎಸ್. ಗೌನಳ್ಳಿ

ಪಾಕಿಸ್ತಾನಿ ಕವಯಿತ್ರಿ ಸಾರಾ ಶಗುಫ್ತಾ ಜೀವನ ಮತ್ತು ಕಾವ್ಯ

ಎಪ್ರಿಲ್ ೨೦೧೮

ವಿನಯ್ ಸೀತಾಪತಿ

ಪಿ. ವಿ. ನರಸಿಂಹರಾವ್ ಜೀವನಚರಿತ್ರೆ ಹಾಫ್ ಲಯನ್

ಮಾರ್ಚ್ ೨೦೧೮

ಅರುಣ್ ಜೋಳದಕೂಡ್ಲಿಗಿ

ಪೆರಿಯಾರ್ ವಿವಾಹ ಪದ್ಧತಿ

ಮಾರ್ಚ್ ೨೦೧೮

ಮೂಲ: ಇ.ರಾಘವನ್; ಜೇಮ್ಸ್ ಮೇನರ್ ಅನುವಾದ: ಪೃಥ್ವಿ ದತ್ತ ಚಂದ್ರ ಶೋಭಿ

ಭೂಸುಧಾರಣೆ ಜಾತಿ ಮೀಸಲಾತಿ ತುರ್ತುಪರಿಸ್ಥಿತಿ

ಫೆಬ್ರವರಿ ೨೦೧೮

- ಕಲ್ಲೇಶ್ ಕುಂಬಾರ್, ಹಾರೂಗೇರಿ

ಬಿಚ್ಚಿಟ್ಟ ಬಾಲ್ಯದ ನೆನಪುಗಳ ಬುತ್ತಿ

ಫೆಬ್ರವರಿ ೨೦೧೮

ಡಾ.ಪಿ.ಮಣಿ

ಮಂಟೇಸ್ವಾಮಿ ಕಾವ್ಯದಲ್ಲಿ ಸಿದ್ಧಪ್ಪಾಜಿ

ಫೆಬ್ರವರಿ ೨೦೧೮