2nd ಫೆಬ್ರವರಿ ೨೦೧೮

ಹಿಜಾಬ್: ಹಲವು ಅರ್ಥಛಾಯೆಗಳನ್ನು ಶೋಧಿಸುವ ಕೃತಿ

—ಶಶಿಕುಮಾರ್

ಹಿಜಾಬ್’ನಲ್ಲಿ ನಾವು ಒಂದು ಟಿಪಿಕಲ್ ಕನ್ನಡ ಕಾದಂಬರಿಯಿಂದ ನಿರೀಕ್ಷಿಸಬಹುದಾದಂಥದ್ದೇನೂ ಇಲ್ಲ!

ಕಾರಣ, ಇಲ್ಲಿ ನೀವು ಕಾಣುವುದು “ಸೊಮಾಲಿಯಾ, ಅಲ್ಲಿನ ಆಂತರಿಕ ಕಲಹ, ಹೆಣ್ಣು ಜನನಾಂಗ ಊನ, ಅವರ ಬಸಿರು, ಅವರ ಹೆರಿಗೆಗಳು, ಅವರ ನಾಟಿ ವೈದ್ಯಪದ್ಧತಿಗಳು, ಸಿಸೇರಿಯನ್ ಸೆಕ್ಷನ್ ಬಗ್ಗೆ ಅವರ ನಂಬಿಕೆಗಳು, ಅವರ ಜನಪದ, ಅಲ್ಲಿ ಹೊಸದಾಗಿ ಹುಟ್ಟಿಕೊಂಡಿರುವ ಆತಂಕವಾದಿಗಳು ತಂಡಗಳು, ಐಸಿಸ್ ಜತೆಗಿನ ಅವರ ಸಂಬಂಧ”. ಈ ಸೊಮಾಲಿಯನ್ನರು ತಮ್ಮ ದೇಶದಲ್ಲಿ ನಡೆದ ಆಂತರಿಕ ದಂಗೆಯಿಂದಾಗಿ ನಿರಾಶ್ರಿತರಾಗಿ ಬಂದು ನೆಲೆಸಿರುವುದು ಅಮೆರಿಕಾದಲ್ಲಿ. ಆದರೆ, ಅಮೆರಿಕಾ ಕಾಲದಿಂದಲೂ ಕರಿಯರ ಮೇಲೆ ಜನಾಂಗೀಯ ತಾರತಮ್ಯ, ದೌರ್ಜನ್ಯ, ಕ್ರೌರ್ಯ, ಹಿಂಸೆಗೆ ಹೆಸರುವಾಸಿ. ಇದು ಸಾಲದೆಂಬಂತೆ, 9/11 ದುರಂತದ ನಂತರ ಇಲ್ಲಿ ಹೆಚ್ಚಾಗಿರುವ ಇಸ್ಲಾಮೊಫೋಬಿಯ, ನಿರಾಶ್ರಿತ ಸೊಮಾಲಿಯನ್ ಕರಿಯ ಮುಸಲ್ಮಾನರ ಸಮಸ್ಯೆಯನ್ನು ಮತ್ತಷ್ಟು ಬಿಗಡಾಯಿಸಿದೆ. ಇವಿಷ್ಟೂ ಒಂದೆಡೆ.

ಮತ್ತೊಂದೆಡೆ, ಮೆಡಿಸಿನ್ ಓದಲು ಭಾರತದಿಂದ—ಅದರಲ್ಲೂ ಕರ್ನಾಟಕದಿಂದ—ಅಮೆರಿಕಾಕಕ್ಕೆ ತೆರಳಿ, ಮೆಡಿಕಲ್ ಪ್ರಾಕ್ಟೀಸ್ ಮಾಡಬೇಕಾದರೆ ಪಡೆಯಲೇಬೇಕಾದ ಜೆ—1 ವೀಸಾ ಪಡೆದು, ಬೇಗ ಗ್ರೀನ್ ಕಾರ್ಡ್ ಪಡೆಯಲು ಮೆಡಿಕಲಿ ಅಂಡರ್ಸವ್ರ್ಡ್ (ಜನರ ಸಂಖ್ಯೆ ಮತ್ತು ವೈದ್ಯರ ಅನುಪಾತ ಅಸಮತೋಲನ) ಜಾಗವೊಂದರಲ್ಲಿ ಕೆಲಸ ಮಾಡುವ ವಲಸಿಗ ಕನ್ನಡಿಗರು.

ಇವೆರಡೂ ಕಥಾಸಾಲುಗಳ ನಡುವೆ ಹರಿಯುತ್ತದೆ 21ನೇ ಶತಮಾನದ ಭಾಷೆ ಮಿಂದಾಣ (ಇಂಟರ್ ನೆಟ್) —ಮತ್ತದರ ಬಳಕೆ ಹಾಗೂ ಸಾಧ್ಯತೆಯನ್ನು ಹಿಗ್ಗಿಸಿದ ಸಾಮಾಜಿಕ ಮಾಧ್ಯಮವಾದ ಫೇಸ್ ಬುಕ್—ರಾಷ್ಟ್ರೀಯ ವಾಹಿನಿಯೊಂದರಲ್ಲಿ ಸಿಸೇರಿಯನ್ ಲೈವ್ ಪ್ರಸಾರ, ಇಂಗ್ಲಿಶ್ ಸಂಭಾಷಣೆ, ಅದರಲ್ಲೂ ಹಾಸುಹೊಕ್ಕಾಗಿರುವ ವೈದ್ಯಕೀಯ ಪರಿಭಾಷೆ.

ಈ ಕಾದಂಬರಿಯನ್ನು ಓದುವಾಗ ಯಾವುದೋ ಅಂತಾರಾಷ್ಟ್ರೀಯ ಇಂಗ್ಲಿಶ್ ಕಾದಂಬರಿಯ, ಅಥವಾ ಹಾಲಿವುಡ್ ಚಿತ್ರವೊಂದರ ಅನುಭವವಾದರೆ ಅದರಲ್ಲಿ ಅತಿಶಯೋಕ್ತಿಯೇನಿಲ್ಲ. ಕನ್ನಡ —ಅಷ್ಟೇ ಯಾಕೆ, ಭಾರತದ ಯಾವ ಭಾಷೆಯಲ್ಲೂ —ಅಪರೂವೆನಿಸುವ ಕಥಾಹಂದರವನ್ನು ಹೊಂದಿದೆ ಗುರುಪ್ರಸಾದ್ ಕಾಗಿನೆಲೆಯವರ 310 ಪುಟಗಳ ಮಹತ್ವಾಕಾಂಕ್ಷಿ ಕಾದಂಬರಿ, ‘ಹಿಜಾಬ್.’

ಏನಿದು ‘ಹಿಜಾಬ್’?

ಅರೇಬಿಕ್ ನಿಘಂಟುಗಳ ಪ್ರಕಾರ, ಹಿಜಾಬ್ ಎಂದರೆ, “ಅಡ್ಡಿ” ಅಥವಾ “ಅಡಚಣೆ”—ಅದು ಕೇವಲ ಗಂಡುಹೆಣ್ಣಿನ ನಡುವೆ ಮಾತ್ರವಲ್ಲ, ಇಬ್ಬರು ಗಂಡುಗಳ ನಡುವೆಯೂ ಹೌದು. ಹಿಜಾಬ್, ಅಥವಾ ಅದರ ನಿಷ್ಪನ್ನ ಕೊರಾನ್‍ನಲ್ಲಿ ಕೇವಲ ಎಂಟು ಸಲ — “ಅಡ್ಡಿ” ಅಥವಾ “ಪ್ರತ್ಯೇಕಿಸುವ ಗೋಡೆ”, “ಪರದೆ”, “ಬಚ್ಚಿಟ್ಟ”, ಅಥವಾ ಕೇವಲ “ಪ್ರತ್ಯೇಕಿಸುವ ಗೋಡೆ”, “ಬಚ್ಚಿಟ್ಟುಕೊಂಡ” ಹಾಗೂ “ದೇವರ ಪ್ರವೇಶ ನಿರಾಕರಿಸಲಾದ” ಅಥವಾ “ತಡೆಯಲಾದ” —ಎಂದು ಮಾತ್ರ ಕಾಣಿಸಿಕೊಳ್ಳುತ್ತದೆ.

ಕೊರಾನ್ ನಲ್ಲಿ ಹಿಜಾಬ್ ಯಾವುದೇ ಧಾರ್ಮಿಕ ಕ್ರಿಯೆಯನ್ನು ಸೂಚಿಸುವುದಿಲ್ಲ. ಹಾಗೆ ಹೇಳಬೇಕೆಂದರೆ, ನಕಾರಾತ್ಮಕ ಅರ್ಥವನ್ನೇ ಹೊಂದಿದೆ. “ನಂಬದವರ”ನ್ನು ಕತ್ತಲೆ ಜಾಗದಲ್ಲಿ ಪ್ರತ್ಯೇಕವಾಗಿಡು, “ನಮ್ಮ ಹೃದಯಗಳು ಹಿಜಾಬ್ ನಲ್ಲಿವೆ” ಎಂಬ ಅರ್ಥಗಳನ್ನು ಹಿಜಾಬ್ ಹೊಂದಿದ್ದು, ನಿಜವಾಗಿಯೂ, ರೂಪಕಾತ್ಮಕವಾಗಿಯೂ ಒಂದು ಅಡಚಣೆಯಾಗಿಯೇ ಇದೆ. ‘ಹಿಜಾಬ್’ ಕಾದಂಬರಿ ಇವೆಲ್ಲ ಅರ್ಥಛಾಯೆಗಳನ್ನು ಒಂದೊಂದು ಪಾತ್ರದ ಮೂಲಕವೂ, ತನ್ನೆಲ್ಲ ಸೂಕ್ಷ್ಮತೆಗಳೊಂದಿಗೆ ಶೋಧಿಸುತ್ತ, ಬೆರಗು ಮೂಡಿಸುತ್ತದೆ.

ಅಮೋಕಾ ಎಂಬ ರೂಪಕ

‘ಹಿಜಾಬ್’ ಕತೆ ನಡೆಯುವುದು ಅಮೋಕಾ ಎಂಬ ಕಲ್ಪಿತ ಊರಿನಲ್ಲಿ. ಹಾಗಾಗಿಯೇ, ಇದು ಗೂಗಲ್ ಅರ್ತ್, ಗೂಗಲ್ ಮ್ಯಾಪ್ ಗಳಲ್ಲಿ ಹುಡುಕಿದರೆ ಸಿಗವಂತಹ ಊರಲ್ಲ. ಮಿನೆಸೊಟಾ ರಾಜ್ಯದ ಮಿನಿಯಾಪೊಲಿಸ್ ಪಟ್ಟಣದಿಂದ 75 ಮೈಲಿ ದೂರದಲ್ಲಿರುವ ಅಮೋಕಾ, ‘ಅಮೆರಿಕಾ’ ಹಾಗೂ ‘ಸೊಮಾಲಿಯಾ’ದಿಂದ ಒಂದೊಂದು ಅಕ್ಷರ ತೆಗೆದು ಮಾಡಿರುವ ಪದವೂ ಇರಬಹುದು, ಅಥವಾ ‘ನಿಯಂತ್ರಣವನ್ನು ಮೀರಿದ’ ಎಂಬ ಅರ್ಥವನ್ನು ನೀಡುವ ಇಂಗ್ಲಿಶ್ ಪದ ‘ಅಮೋಕ್’ನಿಂದ ಹುಟ್ಟಿದ್ದರೂ ಹುಟ್ಟಿರಬಹುದು.

ಅಮೆರಿಕಾಕ್ಕೆ ಹೋದ ಕನ್ನಡಿಗರಾದ ಗುರು, ರಾಧಿಕಾ ಮತ್ತು ಶ್ರೀಕಾಂತ, ನ್ಯೂಯಾರ್ಕ್‍ನ ಒಂದೇ ಆಸ್ಪತ್ರೆಯಲ್ಲಿ ತರಬೇತಿ ಪಡೆಯುತ್ತಾರೆ. ಡಾಕ್ಟರುಗಳಾಗಿ ಸಾವಿರ ಸರೋವರಗಳ ನಾಡಾದ ಮಿನೆಸೊಟಾದ ಫೇರ್ ಬ್ಲೂ ಕೌಂಟಿಯ ಅಮೋಕಾ ಎಂಬ ಕೇವಲ ಹತ್ತು ಸಾವಿರ ಜನಸಂಖ್ಯೆಯಿರುವ ಊರಿಗೆ ಕಾಲಿಡುತ್ತಾರೆ. ಕಳೆದ ಐದು ವರ್ಷಗಳಲ್ಲಿ ಅಮೆರಿಕಾದ ಯಾವ ಡಾಕ್ಟರುಗಳೂ ಕಾಲಿಡದ ಈ ಊರಿಗೆ ಅನಿವಾರ್ಯ ಎಂಬಂತೆ ಕಾಲಿಡುವುದು ಈ “ಗ್ರೀನ್ ಕಾರ್ಡಿಗೆ ಹಪಹಪಿಸುತ್ತಿರುವ ಜೆ—1 ವೀಸಾದಲ್ಲಿರುವ ಬಕಪಕ್ಷಿಗಳು”.

ಸೊಮಾಲಿಯನ್ ಮುಸಲ್ಮಾನ ಬಸುರಿ ‘ಫಾದುಮಾ’ ಹಸನ್ ಗೆ ನಾರ್ಮಲ್ ಹೆರಿಗೆ ಕಷ್ಟವೆಂದು ಹೇಳಿ, ರಾಧಿಕಾ ಸಿಸೇರಿಯನ್ ಸೆಕ್ಷನ್ ಮಾಡುವುದರೊಂದಿಗೆ ಆರಂಭವಾಗುವ ಕಾದಂಬರಿ, ಮತ್ತೊಬ್ಬ ಸೊಮಾಲಿಯನ್ ಮುಸಲ್ಮಾನ ಬಸುರಿ ನುಸ್ರತ್ ಳ ನಾರ್ಮಲ್ ಹೆರಿಗೆಯನ್ನು ಗುರು ಮಾಡುವುದರೊಂದಿಗೆ ಕೊನೆಯಾಗುತ್ತದೆ. ಈ ಆರಂಭ—ಕೊನೆಗಳ ನಡುವೆ ಎದ್ದುಕಾಣುವುದು ವೈದ್ಯಕೀಯ ನೈತಿಕತೆ.

ಬ್ರೇಕಿಂಗ್ ನ್ಯೂಸ್

ಹೊಟ್ಟೆ ಕುಯ್ದು ಮಗುವನ್ನು ಹೊರತೆಗೆಯುವುದಕ್ಕೆ(ಸಿಸೇರಿಯನ್ ಸೆಕ್ಷನ್ ಅಥವಾ ಸಿ—ಸೆಕ್ಶನ್)ಗೆ ಇಸ್ಲಾಂನಲ್ಲಿರುವ ನಿಷೇಧ; ಅದರಿಂದಾಗಿ ಫಾದುಮಾ ಹಸನ್, ರುಖಿಯಾ ಅಬೂಬಕರ್ ರಂತಹ ಸೊಮಾಲಿ ಬಸುರಿಯರ ಪ್ರಾಣ ಉಳಿಸಲು ರಾಧಿಕಾಗೆ ಸಿಸೇರಿಯನ್ ಸೆಕ್ಷನ್ ಮಾಡಬೇಕಾದ ಅನಿವಾರ್ಯತೆ; ಅದಕ್ಕೆ ಈ ಸೊಮಾಲಿ ಮಹಿಳೆಯರು ಹಾಗೂ ಅವರ ಗಂಡಂದಿರು ತೋರುವ ಪ್ರತಿರೋಧ, ಆನಂತರ ಮಗುವನ್ನು ಹೆತ್ತ ತಾಯಂದಿರ ನಿಗೂಢ ಆತ್ಮಹತ್ಯೆ, ಸೊಮಾಲಿಯನ್ನರ ಗಾಡ್ ಫಾದರ್ ಡಾ.ಮಹಮದ್ ಮಹಮದ್ ಪ್ರವೇಶ, ಆತನ ತಕರಾರು; ಆಸ್ಪತ್ರೆಯ ಮ್ಯಾನೇಜ್ಮೆಂಟ್ ನ “ವೃತ್ತಿಪರ” ಹೊಣೆಗಾರಿಕೆಯ ಪರಿಣಾಮ, ರಾಷ್ಟ್ರೀಯ ವಾಹಿನಿಯೊಂದರಲ್ಲಿ ಸಿ—ಸೆಕ್ಶನ್ ಲೈವ್ ಪ್ರಸಾರ; ಬ್ರೇಕಿಂಗ್ ನ್ಯೂಸ್ ಗಳಿಗಾಗಿ ಹಪಹಪಿಸುವ ಮಾಧ್ಯಮ —ಇಡೀ ಕಾದಂಬರಿಯನ್ನು ಕುತೂಹಲಕರವಾಗಿ ಬೆಳೆಸುತ್ತಾ ಹೋಗುತ್ತದೆ. ನಡುನಡುವೆ ಔಚಿತ್ಯಪೂರ್ಣವಾಗಿ ನುಸುಳುವ ಬಾಲಿವುಡ್ ರೆಫರೆನ್ಸ್ ಗಳು —ಕಹಾನಿ, ಬಸುರಿ ಹೆಂಗಸೊಬ್ಬಳ ಕತೆಯಾಗಿ ಹಾಗೂ ತ್ರೀ ಈಡಿಯಟ್ಸ್ ನಲ್ಲಿ ಅಮೀರ್ ಖಾನ್ ಮಾಡಿಸುವ ಹೆರಿಗೆ —ಬಾಲಿವುಡ್ ಜಾಗತಿಕ ಸಂಸ್ಕೃತಿಯ ಮೇಲೆ ಉಂಟುಮಾಡಿರುವ ಪರಿಣಾಮಕ್ಕೆ ಸಾಕ್ಷಿ.

ಸೊಮಾಲಿ ಬಸುರಿ ಹೆಂಗಸರ ಸಿ—ಸೆಕ್ಷನ್ ಔಚಿತ್ಯ ಪ್ರಶ್ನಿಸಿ, ಅವರ ವಕಾಲತ್ತು ವಹಿಸುವ ಡಾ. ಮಹಮದ್ ಮಹಮದ್ ಮೂಲಕ ಸೊಮಾಲಿಯಾ ಇತಿಹಾಸ, ಸಂಸ್ಕೃತಿ, ರಾಜಕೀಯದ ಜೊತೆಜೊತೆಗೆ ವಸಾಹತೋತ್ತರ ಸಂದರ್ಭದ ಜನಾಂಗೀಯತೆ ಪರಿಚಯವಾಗುತ್ತದೆ. ಮಿಲಿಟರಿಯಲ್ಲಿದ್ದು ಆನಂತರ ಉಚ್ಛಾಟಿತನಾಗಿ ಅಮೆರಿಕಾದ ಮೊಟ್ಟಮೊದಲ ಗ್ಯಾಂಗ್ ಕಟ್ಟುವ ಡ್ರಗ್ ಡೀಲರ್ ‘ಅಸದ್ ದಲ್ಮರ್ ಅಬ್ದಿಕರೀಮ್’ ಅಲಿಯಾಸ್ ‘ಕುಕಿ’ಹಾಗೂ ಗುರು ನಡುವೆ ನಡೆಯುವ ಸಂಭಾಷಣೆ ಸೊಮಾಲಿಯಾದಂತಹ ದೇಶಗಳಲ್ಲಿ ಆಂತರಿಕ ಕಲಹ ಸೃಷ್ಟಿಸಿ, ಬದುಕಿ ಉಳಕೊಂಡವರನ್ನು ಅಮೇರಿಕಾಕಕ್ಕೆ ವೀಸಾ ಕೊಟ್ಟು ಕರೆಸಿ ಇಲ್ಲಿ ಅವರಿಂದ ಗುಲಾಮಗಿರಿ ಮಾಡಿಸುವುದರೆಡೆಗೆ ಬೆಳಕು ಚೆಲ್ಲುವ ಮೂಲಕ, ಅಮೆರಿಕಾದ “ವಾರ್ ಆನ್ ಟೆರರ್” ಎಂಬ ಮಾರಕ ಯುದ್ಧನೀತಿಯನ್ನು ವಿಮರ್ಶೆಗೊಳಪಡಿಸುತ್ತದೆ.

ಕಾದಂಬರಿಯ ಎರಡನೇ ಭಾಗ “ಎರಡು ವರ್ಷಗಳ ನಂತರ”. ಕಪ್ಪುಜೀವಿಗಳ ವಿಷಯ. ಅಮೆರಿಕಾದಲ್ಲಿ ಆಫ್ರಿಕನ್ ಅಮೆರಿಕನ್ನರ ಮೇಲಿನ ದೌರ್ಜನ್ಯ ವಿರುದ್ಧ ನಡೆಯುತ್ತಿರುವ ಪ್ರತಿಭಟನಾ ಚಳವಳಿಯಾದ ‘ಬ್ಲ್ಯಾಕ್ ಲೈವ್ಸ್ ಮ್ಯಾಟರ್’ ಈ ಭಾಗಕ್ಕೆ ಹಿನ್ನೆಲೆ. ಎಫ್.ಬಿ.ಐ. ‘ಬ್ಲಾಕ್ ಈಗಲ್’ ಎಂದು ಕರೆಯುವ, ಮಹಮದ್ ಇಗಾಲ್, ಸಿರಿಯಾದಲ್ಲಿ ಇಸ್ಲಾಮಿಕ್ ಸ್ಟೇಟ್ ಗೆ ನೊಂದಾಯಿತನಾಗಿರುವ, ‘ಬೇಕಾಗಿದ್ದಾರೆ’ ಪಟ್ಟಿಯಲ್ಲೂ ಇರುವ ಭಯೋತ್ಪಾದಕ. ಅವನು ಮಾಲ್ ಆಫ್ ಅಮೆರಿಕಾದ ಮೇಲೆ ದಾಳಿ ಮಾಡಬಹುದೆಂಬ ಎಫ್ ಬಿ ಐ ಅಲರ್ಟ್ ಬರುತ್ತದೆ. ಅವನನ್ನೇ ಹೋಲುವ ಬ್ಲ್ಯಾಕ್ ಲೈವ್ಸ್ ಮ್ಯಾಟರ್ ನ ಸಂಘಟಕ ಮಾರ್ಟಿನ್ ಲೂಥರ್ ಕಿಂಗ್ ನನ್ನು ಬೆನ್ನತ್ತಿ ಗುಂಡಿಕ್ಕುತ್ತಾರೆ ಬಿಳಿ ಪೊಲೀಸ್. ಇದು ಕರಿಯರ ಮೇಲಿನ ಬಿಳಿಯರ ಜನಾಂಗೀಯ ಧೋರಣೆಯ ಮಾರ್ಮಿಕ ಅನಾವರಣ.

ಮುಸಲ್ಮಾನರೆಲ್ಲ, ಕರಿಯರೆಲ್ಲ ಆತಂಕವಾದಿಗಳೆಂಬ ತಪ್ಪುಕಲ್ಪನೆಯನ್ನು ಹೋಗಲಾಡಿಸಲು ‘ಮಾಮ್ಸ್ ಅಗೆನ್ಸ್ಟ್ ಟೆರರ್ ಕಿಕ್ರೂಟಿಂಗ್’ (ಆಂತಕವಾದಿ ಸಂಸ್ಥೆಗಳಿಗೆ ನೋಂದಣೆಯ ವಿರುದ್ಧ ಹೋರಾಡುವ ತಾಯಂದಿರು) ಎಂಬ ಸ್ವಯಂಸೇವಕ ಸಂಸ್ಥೆ ನಡೆಸುತ್ತಾಳೆ ಇಗಾಲ್ ನ ತಾಯಿ ನುಸ್ರತ್.

ಇವೆಲ್ಲವನ್ನೂ ನಿರೂಪಿಸುವಾಗ, ಯಾರ, ಯಾವುದರ, ಪರ—ವಿರೋಧವೂ ನಿಲ್ಲದೆ, ಹೊರಗೆ ನಡೆಯುತ್ತಿರುವ ಹಾಗೂ ತನ್ನೊಳಗೆ ನಡೆಯುವ —ಎಲ್ಲವನ್ನೂ ಭಾವೋದ್ವೇಗಕ್ಕೊಳಗಾಗದೆ, ಪೂರ್ವಾಗ್ರಹಕ್ಕೊಳಗಾಗದೆ, ತರ್ಕಬದ್ಧವಾಗಿ, ವಸ್ತುನಿಷ್ಠವಾಗಿ ನಿರೂಪಿಸುತ್ತಾ ಹೋಗುವುದು ಈ ಕಾದಂಬರಿಯ ಹೆಗ್ಗಳಿಕೆ.

ಕನ್ನಡತನವನ್ನು ವಿಸ್ತರಿಸುವ ದೊಡ್ಡ ಪ್ರಯತ್ನ

ವಸಾಹತೋತ್ತರ ಸಂದರ್ಭದ ಬಹಳ ಮುಖ್ಯವಾದ ಪರಿಕಲ್ಪನೆ “ಸ್ಥಳಾಂತರ”. ಇದು ಎಲ್ಲ ವಲಸೆ ಸನ್ನಿವೇಶಗಳನ್ನೂ ಒಳಗೊಳ್ಳುತ್ತದೆ. 1980ರಿಂದಲೇ ಸಾಹಿತ್ಯಾಧ್ಯಯನದ ಭಾಗವಾಗಿರುವ ವಲಸೆ ಸಾಹಿತ್ಯವನ್ನು ಕನ್ನಡ ಇನ್ನೂ ತನ್ನದಾಗಿಸಿಕೊಳ್ಳಲು ಸಾಧ್ಯವಾಗಿಲ್ಲ. ಇಂದು ಜಾಗತಿಕ ಮಟ್ಟದಲ್ಲಿ “ವಲಸೆ” ವಿದ್ಯಮಾನವನ್ನು ಸಾಹಿತ್ಯವನ್ನೊಳಗೊಂಡಂತೆ, ಎಲ್ಲ ಜ್ಞಾನಶಿಸ್ತುಗಳಲ್ಲೂ ಅಧ್ಯಯನ ಮಾಡಲಾಗುತ್ತಿದೆ. ಹಾಗೆ ಹೇಳುವುದಾದರೆ, “ವಲಸೆ”ಗಿಂತ ಅನುವಾದಕ್ಕೆ ಮತ್ತೊಂದು ದೊಡ್ಡ ರೂಪಕ ಸಿಗುವುದಿಲ್ಲವೇನೋ.

ಇಡೀ ಕಾದಂಬರಿ ನಡೆಯುವುದು ಅಮೆರಿಕಾದಲ್ಲಾದರೂ, ನಾಲ್ಕೈದು ಜನರನ್ನು ಹೊರತುಪಡಿಸಿದರೆ, ಉಳಿದವರೆಲ್ಲ ಅಮೆರಿಕನ್ನರು ಹಾಗೂ ಸೊಮಾಲಿಯನ್ನರು. ಇವರೊಂದಿಗೆ ನಡೆಸುವ ಸಂಭಾಷಣೆಯೆಲ್ಲವೂ ಇಲ್ಲಿ ಕನ್ನಡಕ್ಕೆ ಅನುವಾದಗೊಳ್ಳುವುದು ಮಾತ್ರವಲ್ಲ, ಇಂಗ್ಲಿಶ್ ಸಂಭಾಷಣೆಗಳು ಕೂಡ ಕನ್ನಡ ಲಿಪಿಯಲ್ಲಿ ಕಾಣಿಸಿಕೊಳ್ಳುತ್ತವೆ. ಈ ಕಾದಂಬರಿಯಲ್ಲಿ ಸೊಮಾಲಿಯನ್ನರ ದುಭಾಷಿಯಾಗಿರುವ ದುನಿಯಾಳಂತೆ, ಗುರು ಕೂಡ ನಮಗೆ ದುಭಾಷಿ. ನಮ್ಮ ಬಹುತೇಕ ಇಂಗ್ಲಿಶ್—ಕನ್ನಡ ನಿಘಂಟುಗಳಲ್ಲಿ ಕಾಣದೇ ಹೋಗುವ ಎಷ್ಟೇ ಇಂಗ್ಲಿಷ್ ಪದಗಳು, ವೈದ್ಯಕೀಯ ಪಾರಿಭಾಷಿಕ ಪದಗಳು, ಪರಿಕಲ್ಪನೆಗಳು, ಇಲ್ಲಿ ಸರಾಗವಾಗಿ ಬಂದು ಹೋಗುತ್ತವಾದರೂ, ಯಾವುದೂ ಕೃತಕವೆನಿಸುವುದಿಲ್ಲ. ಅಂತಹ ಪದಗಳ ಅರ್ಥವನ್ನು ಯಾವುದಾದರೂ ಪಾತ್ರದ ಮೂಲಕೇ ಹೇಳಿಸಿಬಿಡುವ ಗುರುಪ್ರಸಾದ್ ಜಾಣತನ ಮೆಚ್ಚುವಂತದ್ದು. ಹಾಗೆಯೇ, ಗುರುಪ್ರಸಾದ್ ಸ್ವತಃ ವೈದ್ಯರಾಗಿರುವುದರಿಂದ, ಕಾದಂಬರಿಯ ಅತ್ಯಂತ ಸಂಕೀರ್ಣವಾದ ವಿಷಯಕ್ಕೆ ಒಂದು ಅಥೆಂಟಿಸಿಟಿ ಬಂದುಬಿಟ್ಟಿದೆ. ಇಷ್ಟು ಸೀರಿಯಸ್ಸಾದ ವಿಷಯದಲ್ಲೂ, ತೆಳುಹಾಸ್ಯವನ್ನು ಬೆರೆಸಿರುವುದು ಅವರ ಕುಶಲತೆಗೆ ಸಾಕ್ಷಿ.

ಕನ್ನಡದ ಕಾದಂಬರಿಯೆಂದರೆ, ಅದು ಕನ್ನಡತನವನ್ನು ಹೊಂದಿರಬೇಕು, ಕನ್ನಡ ಪರಿಸರದಲ್ಲಿ ಮೂಡಿರಬೇಕು, ಕನ್ನಡ ಅಸ್ಮಿತೆಯನ್ನು ಬಿಂಬಿಸುವಂತಿರಬೇಕು—ಹೀಗೆ ಕನ್ನಡ ಸಾಹಿತ್ಯವೆಂದರೆ, ಕನ್ನಡ ಪ್ರಪಂಚದಿಂದಾಚೆಗೇನೂ ಇಲ್ಲ ಎಂಬ ಎಸ್ತೆಟಿಕ್‍ನ್ನು, ಸಿದ್ಧಮಾದರಿಯ ಚೌಕಟ್ಟನ್ನು ಮೊದಲನೇ ಪುಟದಿಂದ ಕೊನೆಯ ಪುಟದವರೆಗೂ ಒಡೆಯುತ್ತಾ ಹೋಗುವ ಹಿಜಾಬ್, 21ನೇ ಶತಮಾನದ ಕನ್ನಡ ಕಾದಂಬರಿ ಏರಿರುವ ಎತ್ತರಕ್ಕೆ ನಿದರ್ಶನ. ಕನ್ನಡತನವೆಂದರೆ, ಇಡೀ ಜಗತ್ತನ್ನು ಕನ್ನಡದ ಮೂಲಕ ಪರಿಭಾವಿಸುವುದು ಹಾಗೂ ಇಡೀ ವಿಶ್ವದ ಆಗುಹೋಗುಗಳನ್ನು ಕನ್ನಡದಲ್ಲಿ ಕಟ್ಟಿಕೊಡುವುದು ಎಂಬುದನ್ನು ಈಗಲಾದರೂ ನಾವು ಮನಗಾಣಬೇಕಾಗಿದೆ. ತನ್ನ ವಸ್ತುವಿಷಯದಿಂದಾಗಿ ‘ಹಿಜಾಬ್’ ಸ್ವಲ್ಪ ಕೈಜಾರಿದ್ದರೂ, ಸಾಕ್ಷ್ಯಚಿತ್ರದಂತೆ, ನಾನ್ ಫಿಕ್ಶನ್ ನಂತೆ, ಜನಪ್ರಿಯ ಕಾದಂಬರಿಯಂತೆ ಆಗಿಬಿಡುತ್ತಿತ್ತೇನೋ. ಆದರೆ, ಗುರುಪ್ರಸಾದರ ಎಚ್ಚರಿಕೆ, ಸಂಯಮ, ಪರಿಶ್ರಮ, ಸೃಜನಶೀಲತೆ ಹಾಗೂ ಮಾನವೀಯತೆಯಿಂದಾಗಿ 21ನೇ ಶತಮಾನದ ಮೊದಲ ಅಂತಾರಾಷ್ಟ್ರೀಯ ಕನ್ನಡ ಕಾದಂಬರಿಯಾಗಿ ಕನ್ನಡ ಸಾಹಿತ್ಯ ಲೋಕದಲ್ಲಿ ಹೊಸ ಅಧ್ಯಾಯವನ್ನು ತೆರೆದುಬಿಡುತ್ತದೆ.

ಫ್ರ್ಯಾಂಕ್ ಓ’ಕಾನರ್ ಕನ್ನಡಕ್ಕೆ: ಡಾ.ಬಸು ಬೇವಿನಗಿಡದ

ಪಾಪ ನಿವೇದನೆ

ಜುಲೈ ೨೦೧೮

ಪರಮೇಶ್ವರ ಗುರುಸ್ವಾಮಿ

ದಾಂಪತ್ಯ ಮೀರಿದ ಬೌದ್ಧಿಕ ಸಾಂಗತ್ಯ

ಜುಲೈ ೨೦೧೮

ಪರಮೇಶ್ವರ ಗುರುಸ್ವಾಮಿ

ಟೆಕ್ ಡ್ರೀಮರ್ಸ್ ಓದಲೇಬೇಕಾದ ‘ಹಿಟ್ ರಿಫ್ರೆಶ್’

ಜುಲೈ ೨೦೧೮

ಡಾ.ರಾಕೇಶ್ ಬಟಬ್ಯಾಲ್

ಜೆ.ಎನ್.ಯು ದ ಮೇಕಿಂಗ್ ಆಫ್ ಎ ಯೂನಿವರ್ಸಿಟಿ

ಜೂನ್ ೨೦೧೮

ಎಸ್.ಆರ್.ವಿಜಯಶಂಕರ

ಮೊಗಳ್ಳಿ ಗಣೇಶ್ ಹೊಸ ಕಥಾ ಸಂಕಲನ ದೇವರ ದಾರಿ

ಜೂನ್ ೨೦೧೮

ಮಂಜುನಾಥ ಡಿ.ಎಸ್.

ಅಹಿಂಸಾತ್ಮಕ ಸಂವಹನ

ಜೂನ್ ೨೦೧೮

ಪೃಥ್ವಿದತ್ತ ಚಂದ್ರಶೋಭಿ

ಕರ್ನಾಟಕದ ರಾಜಕಾರಣ ಹೇಗೆ ಬದಲಾಗಿದೆ?

ಮೇ ೨೦೧೮

ಪುರುಷೋತ್ತಮ ಬಿಳಿಮಲೆ

ಅವಲೋಕನ ಸಮಕಾಲೀನ ಚರ್ಚೆಗೆ ಹೆಚ್ಚು ಪ್ರಸ್ತುತ

ಮೇ ೨೦೧೮

ಪ್ರೊ.ಶಿವರಾಮಯ್ಯ

ದೇಸಿ ಕನ್ನಡ ಪರಂಪರೆ

ಮೇ ೨೦೧೮

ರಾಜದೀಪ್ ಸರ್ದೇಸಾಯಿ

ಗುಜರಾತಿನ ನರೇಂದ್ರಭಾಯಿ

ಎಪ್ರಿಲ್ ೨೦೧೮

ಸ್ನೇಹಲತಾ ಎಸ್. ಗೌನಳ್ಳಿ

ಪಾಕಿಸ್ತಾನಿ ಕವಯಿತ್ರಿ ಸಾರಾ ಶಗುಫ್ತಾ ಜೀವನ ಮತ್ತು ಕಾವ್ಯ

ಎಪ್ರಿಲ್ ೨೦೧೮

ವಿನಯ್ ಸೀತಾಪತಿ

ಪಿ. ವಿ. ನರಸಿಂಹರಾವ್ ಜೀವನಚರಿತ್ರೆ ಹಾಫ್ ಲಯನ್

ಮಾರ್ಚ್ ೨೦೧೮

ಅರುಣ್ ಜೋಳದಕೂಡ್ಲಿಗಿ

ಪೆರಿಯಾರ್ ವಿವಾಹ ಪದ್ಧತಿ

ಮಾರ್ಚ್ ೨೦೧೮

ಮೂಲ: ಇ.ರಾಘವನ್; ಜೇಮ್ಸ್ ಮೇನರ್ ಅನುವಾದ: ಪೃಥ್ವಿ ದತ್ತ ಚಂದ್ರ ಶೋಭಿ

ಭೂಸುಧಾರಣೆ ಜಾತಿ ಮೀಸಲಾತಿ ತುರ್ತುಪರಿಸ್ಥಿತಿ

ಫೆಬ್ರವರಿ ೨೦೧೮

- ಕಲ್ಲೇಶ್ ಕುಂಬಾರ್, ಹಾರೂಗೇರಿ

ಬಿಚ್ಚಿಟ್ಟ ಬಾಲ್ಯದ ನೆನಪುಗಳ ಬುತ್ತಿ

ಫೆಬ್ರವರಿ ೨೦೧೮

ಡಾ.ಪಿ.ಮಣಿ

ಮಂಟೇಸ್ವಾಮಿ ಕಾವ್ಯದಲ್ಲಿ ಸಿದ್ಧಪ್ಪಾಜಿ

ಫೆಬ್ರವರಿ ೨೦೧೮