2nd ಫೆಬ್ರವರಿ ೨೦೧೮

ಭೂಸುಧಾರಣೆ ಜಾತಿ ಮೀಸಲಾತಿ ತುರ್ತುಪರಿಸ್ಥಿತಿ

ಮೂಲ: ಇ.ರಾಘವನ್; ಜೇಮ್ಸ್ ಮೇನರ್
ಅನುವಾದ: ಪೃಥ್ವಿ ದತ್ತ ಚಂದ್ರ ಶೋಭಿ

ಈ ಲೇಖನವನ್ನು ಇ. ರಾಘವನ್ ಮತ್ತು ಜೇಮ್ಸ್ ಮೇನರ್ ಅವರು ಬರೆದಿರುವ ‘ಬ್ರಾಡನಿಂಗ್ ಅಂಡ್ ಡೀಪನಿಂಗ್ ಡೆಮಾಕ್ರಸಿ — ಪೊಲಿಟಿಕಲ್ ಇನ್ನೋವೇಶನ್ ಇನ್ ಕರ್ನಾಟಕ’ದಿಂದ ಆರಿಸಿಕೊಳ್ಳಲಾಗಿದೆ. ಪ್ರಸ್ತುತ ಅಧ್ಯಾಯವು ಕರ್ನಾಟಕದ ರಾಜಕೀಯ ಸಾಧ್ಯತೆಗಳನ್ನು ರೂಪಿಸಿದ ಎರಡು ಮುಖ್ಯ ಬೆಳವಣಿಗೆಗಳಲ್ಲಿ ಒಂದಾದ ದೇವರಾಜ ಅರಸು ಅವರ ರಾಜಕೀಯ ಮತ್ತು ಸಾರ್ವಜನಿಕ ನೀತಿಗಳ ಪುನಾರಚನೆ ಮತ್ತು ವಿಮರ್ಶೆಗಳನ್ನು ಮಾಡುತ್ತದೆ.

ಪ್ರಗತಿಪರ ತಂತ್ರವೊಂದನ್ನು ರೂಪಿಸುವುದು

ಯಾವುದೆ ಮುಖ್ಯ ಸಾರ್ವಜನಿಕ ನೀತಿ ನಾವೀನ್ಯತೆಗಳನ್ನು ಪರಿಚಯಿಸದೆ ಇದ್ದರೂ ಅರಸು ಅವರು ಸಾಕಷ್ಟು ಕಾಲ ಅಧಿಕಾರದಲ್ಲಿ ಉಳಿಯುವುದು ಸಾಧ್ಯವಿತ್ತು, ಅದು ಸುಲಭವೂ ಆಗಿತ್ತು. ಶ್ರೀಮತಿ ಗಾಂಧಿಯವರು ರೂಪಿಸಿದ್ದ, ಅಷ್ಟೇನು ಮಹತ್ವಾಕಾಂಕ್ಷಿಯಲ್ಲದ ಹೊಸ ಕಾರ್ಯಕ್ರಮಗಳನ್ನು ಅವರು ಅನುಷ್ಠಾನಗೊಳಿಸಿದ್ದರೂ, ಅರಸರನ್ನು ಯಶಸ್ವಿ ಆಡಳಿತಗಾರನೆಂದೆ ಪರಿಗಣಿಸಲಾಗುತ್ತಿತ್ತು. ಇಂತಹ ಕಾರ್ಯಕ್ರಮಗಳನ್ನೂ ಸಹ ಶ್ರೀಮತಿ ಗಾಂಧಿಯವರ ಇತರೆ ಮುಖ್ಯಮಂತ್ರಿಗಳು ಜಾರಿಗೆ ತಂದಿರಲಿಲ್ಲ.

ಆದರೆ ಕಾಂಗ್ರೆಸ್ (ಆರ್) ಪಕ್ಷದ ಅಗಾಧ ಜನಪ್ರಿಯತೆ, ವಿಧಾನಸಭೆಯಲ್ಲಿ ಅವರಿಗಿದ್ದ ಬಹುಮತ ಮತ್ತು ಕಾಂಗ್ರೆಸ್ (ಒ) ಪಕ್ಷವನ್ನು ಆವರಿಸಿದ್ದ ಸ್ಥೈರ್ಯನಾಶಗಳು ಐತಿಹಾಸಿಕ ಬದಲಾವಣೆಗಳನ್ನು ಪ್ರಾರಂಭಿಸುವ ಅವಕಾಶವೊಂದನ್ನು ಒದಗಿಸಿವೆ ಎನ್ನುವುದನ್ನು ಅರಸು ಗುರುತಿಸಿದರು. ಅವರು ತಂದ ಬದಲಾವಣೆಗಳ ಮೂಲಕ ಕರ್ನಾಟಕದ ಮುಖ್ಯ ಸಾಮಾಜಿಕ ಗುಂಪುಗಳು ರಾಜ್ಯಮಟ್ಟದಲ್ಲಿ ಅಧಿಕಾರ ಹಂಚಿಕೊಳ್ಳುವುದು ಎಲ್ಲರೂ ಒಪ್ಪುವ ಆಚರಣೆಯಾಯಿತು. ಈ ಬದಲಾವಣೆಗಳನ್ನು ನಿರ್ಲಕ್ಷಿಸುವ ರಾಜಕಾರಣಿಗಳು ಸ್ವತಃ ತಮಗೇ ಅಪಾಯ ತಂದುಕೊಳ್ಳುವಂತಾಯಿತು. ಜೊತೆಗೆ ಈ ಬದಲಾವಣೆಗಳು ಸ್ವತಃ ಅರಸು ಅವರ ಪಕ್ಷದ ಮತ್ತು ರಾಜ್ಯದ ರಾಜಕಾರಣದ ಸಾಮಾಜಿಕ ತಳಹದಿಯನ್ನು ವಿಸ್ತರಿಸಿದವು. ಅಲ್ಲದೆ ಅರಸು ಅವರನ್ನು ಅಧಿಕಾರದಿಂದ ಕೆಳಗಿಳಿಸುವ ಲಿಂಗಾಯತ ಮತ್ತು ಒಕ್ಕಲಿಗರ (ಅರಸು ಅವರು ಸಹ ನಿರೀಕ್ಷಿಸಿದ್ದ) ಪ್ರಯತ್ನಗಳಿಗೆ ಅಡ್ಡಿಯಾಯಿತು. ಇದರಿಂದ ಲಿಂಗಾಯತ ಮತ್ತು ಒಕ್ಕಲಿಗರ ಪ್ರಾಬಲ್ಯವನ್ನು ಮತ್ತೆ ರಾಜ್ಯ ರಾಜಕಾರಣದಲ್ಲಿ ಸ್ಥಾಪಿಸುವುದು ಸಹ ಅಸಾಧ್ಯವಾಯಿತು.

ಅಧಿಕಾರಕ್ಕೆ ಬಂದ ಕೂಡಲೆ ಅರಸು ಅವರು ಎರಡು ಕ್ಷೇತ್ರಗಳಲ್ಲಿ ಆಗಬೇಕಿದ್ದ ರಚನಾತ್ಮಕ ಬದಲಾವಣೆಗಳ ಬಗ್ಗೆ ಮಾತನಾಡಲಾರಂಭಿಸಿದರು. ಆ ರಚನಾತ್ಮಕ ಬದಲಾವಣೆಗಳು ಮುಂದಿನ ದಿನಗಳಲ್ಲಿ ಅವರು ಕೈಗೆತ್ತಿಕೊಂಡ ಮುಖ್ಯ ಸುಧಾರಣೆಗಳಾದವು. ಈ ಸುಧಾರಣೆಗಳು ಭೂಒಡೆತನವನ್ನು ಹೊಂದಿದ್ದ ಎರಡು ಪ್ರಬಲ ಸಮುದಾಯಗಳ, ಅದರಲ್ಲಿಯೂ ಲಿಂಗಾಯತರ, ರಾಜಕೀಯ ಶಕ್ತಿಯನ್ನು ಕುಗ್ಗಿಸುವ ಮತ್ತು ಶಕ್ತಿಹೀನರ ಸಮುದಾಯಗಳನ್ನು ಆಕರ್ಷಿಸುವ ಉದ್ದೇಶಗಳನ್ನು ಹೊಂದಿದ್ದವು. ಇವುಗಳಲ್ಲಿ ಮೊದಲನೆಯದು ‘ಉಳುವವನಿಗೆ ಭೂಮಿ’ ಎನ್ನುವ ನೀತಿ. ಈ ಬಗೆಯ ಭೂಸುಧಾರಣೆಯು ಇತರರ (ಮುಖ್ಯವಾಗಿ ಲಿಂಗಾಯತ ಮತ್ತು ಒಕ್ಕಲಿಗರ) ಭೂಮಿಯನ್ನು ಗುತ್ತಿಗೆಗೆ ಪಡೆಯುತ್ತಿದ್ದ ಗೇಣಿದಾರರಿಗೆ ಅವುಗಳ ಒಡೆತನವನ್ನು ಕೊಡುತ್ತಿತ್ತು. ಎರಡನೆಯ ಸುಧಾರಣೆಯು ಸರ್ಕಾರಿ ಉದ್ಯೋಗ ಮತ್ತು ಶೈಕ್ಷಣಿಕ ಸಂಸ್ಥೆಗಳಲ್ಲಿ ಹಿಂದುಳಿದ ವರ್ಗಗಳಿಗೆ ಅರ್ಥಪೂರ್ಣವಾದ ಮತ್ತು ಗಣನೀಯ ಪ್ರಮಾಣದಲ್ಲಿ ಮೀಸಲಾತಿಯನ್ನು ಒದಗಿಸಿತು. ಪರಿಶಿಷ್ಟ ಸಮುದಾಯಗಳಿಗೆ ಈ ಮೊದಲೆ ದೊರಕಿದ್ದಂತೆ, ಹಿಂದುಳಿದ ವರ್ಗಗಳಿಗೆ ಇಂತಹ ಅನುಕೂಲಗಳನ್ನು ಅದುವರೆಗೆ ಲಭಿಸಿರಲಿಲ್ಲ. ಕರ್ನಾಟಕದಲ್ಲಿ ಹಿಂದುಳಿದ ವರ್ಗಗಳಿಗೆ ಒಂದು ಬಗೆಯ ಮೀಸಲಾತಿ ನೀತಿಯು ಸ್ವಾತಂತ್ರ್ಯಪೂರ್ವದಲ್ಲಿಯೇ ಅಸ್ತಿತ್ವದಲ್ಲಿ ಇದ್ದರೂ ಸಹ, ಆಚರಣೆಯಲ್ಲಿ ಅದನ್ನು ಎಷ್ಟು ದುರ್ಬಲಗೊಳಿಸಲಾಗಿತ್ತು ಎಂದರೆ ಅದರಿಂದ ಆದ ಪರಿಣಾಮ ಕನಿಷ್ಠ ಪ್ರಮಾಣದ್ದಾಗಿತ್ತು.

ಇಲ್ಲಿ ಹೇಳಲೇಬೇಕಾಗಿರುವ ಒಂದು ಮಾತಿದೆ. ತಮ್ಮ ನೀತಿಗಳು ಯಶಸ್ವಿಯಾಗಬೇಕಾದರೆ ಅವುಗಳಿಗೆ ರಾಜ್ಯಸರ್ಕಾರದ ಉನ್ನತ ಹಂತಗಳನ್ನು ಸ್ಥಳೀಯ ಮಟ್ಟಕ್ಕೆ ಕೂಡಿಸುವ ರಚನೆಗಳಿಂದ ಬೆಂಬಲ ಬೇಕು ಎನ್ನುವುದನ್ನು ಅರಸು ಅವರು ಅರಿತಿದ್ದರು. ಇಂತಹ ರಚನೆಗಳೆಂದರೆ ಅಧಿಕಾರಶಾಹಿ ಮತ್ತು ಅವರ ಪಕ್ಷದ (ಕಾಂಗ್ರೆಸ್) ಸಂಘಟನೆ. ಅವುಗಳ ಬೆಂಬಲವಿಲ್ಲದಿದ್ದರೆ ಕೇವಲ ರಾಜ್ಯ ಶಾಸನಸಭೆಯಲ್ಲಿ ಕಾನೂನುಗಳನ್ನು ಅಂಗೀಕರಿಸುವುದರಿಂದ ಮತ್ತು ಹೊಸ ಸಾರ್ವಜನಿಕ ನೀತಿಗಳನ್ನು ರೂಪಿಸುವುದರಿಂದ ಹೆಚ್ಚಿನ ಸಾಧನೆ ಸಾಧ್ಯವಿರಲಿಲ್ಲ. ಅವರಿಗೆ ಚೆನ್ನಾಗಿ ತಿಳಿದಿತ್ತು: ನಡುವಿನ ರಚನೆಗಳು ನಿಷ್ಕ್ರಿಯವಾದುದರಿಂದ ಇಲ್ಲವೆ ಅವುಗಳೆ ತಡೆಯೊಡ್ಡಿದ ಕಾರಣದಿಂದ, ಸ್ವಾತಂತ್ರ್ಯೋತ್ತರ ಭಾರತದ ಇತಿಹಾಸದಲ್ಲಿ ಹೀಗೆ ಅನುಷ್ಠಾನಗೊಳ್ಳದ ಕಾನೂನುಗಳ ಮತ್ತು ನೀತಿಗಳ ಉದಾಹರಣೆಗಳು ಸಾಕಷ್ಟು ದೊರೆಯುತ್ತವೆ.

ಆದುದರಿಂದ ಅರಸು ಅವರು ತಮ್ಮ ಹೊಸ ನೀತಿಗಳನ್ನು ಅನುಸರಿಸುವಂತೆ ಹೆಚ್ಚಿನ ಮತ್ತು ತಡೆರಹಿತ ಒತ್ತಡವನ್ನು ಹಿರಿಯ ಅಧಿಕಾರಿಗಳ ಮೇಲೆ ಹಾಕಿದರು. ತಮ್ಮ ಪಕ್ಷದ ಸಹೋದ್ಯೋಗಿಗಳಿಗೆ ಕೆಳಹಂತದಲ್ಲಿ ಅಧಿಕಾರಿಗಳ ಮೇಲೆ ನಿಗಾ ಇಡುವಂತೆ ಸೂಚಿಸಿದರು. ಆದರೆ ಅವರ ಈ ಎರಡನೆಯ ಉದ್ದೇಶ ಫಲಪ್ರದವಾಗುತ್ತಿದ್ದುದು ಅವರು ತಮ್ಮ ಪಕ್ಷವನ್ನು ಈ ಕೆಲಸವನ್ನು ಮಾಡಲು ಬದ್ಧವಾಗಿದ್ದ ಮತ್ತು ಸಬಲೀಕೃತವಾಗಿದ್ದ ಒಂದು ಶಕ್ತಿಯಾಗಿ ರೂಪಿಸಿದಾಗ ಮಾತ್ರ.

ಅರಸು ಅವರು ಹೊಸದಾಗಿಯೇ ಪಕ್ಷವನ್ನು ಕಟ್ಟಲು ಪ್ರಾರಂಭಿಸಬೇಕಿತ್ತು ಏಕೆಂದರೆ ಅವರಿಗೆ ಶ್ರೀಮತಿ ಗಾಂಧಿಯವರ ಪಕ್ಷವನ್ನು ಆರಂಭದಿಂದಲೂ ಬೆಂಬಲಿಸುವವರು ದೊರಕಿದ್ದು ಕೆಲವರು ಮಾತ್ರ. ಇದು ಶುರುವಿನಿಂದಲೂ ಇದ್ದ ಅನನುಕೂಲತೆಯಾಗಿತ್ತು. ಅವರು ಪಕ್ಷವನ್ನು ಮರುಸೃಷ್ಟಿ ಮಾಡುವ ದಿಶೆಯಲ್ಲಿ ಸಾಕಷ್ಟು ಕೆಲಸ ಮಾಡಿದ್ದರು. ಆದರೆ ಈಗ ಅವರಿಗೆ ಅಗತ್ಯವಿದ್ದುದು ತಮ್ಮ ಆದ್ಯತೆಗಳಿಗೆ ಸ್ಪಂದಿಸುವ ಸಂಘಟನೆಯೊಂದು. ಅದಕ್ಕಾಗಿಯೆ ಅವರು ಪಕ್ಷವನ್ನು ಹೊಸದಾಗಿ ಕಟ್ಟುವ ಅವಕಾಶದ ಬಗ್ಗೆ ಸಂತಸದಿಂದ್ದರು. ಅರಸು ಅವರು ಹಲವಾರು ಹೊಸಮುಖಗಳನ್ನು ರಾಜಕೀಯಕ್ಕೆ ತಂದರು. ಇವರುಗಳ ಪೈಕಿ ಹಲವರು ಅರಸು ಅವರ ನೀತಿಗಳ ಬಗ್ಗೆ ಸಹಾನುಭೂತಿ ಹೊಂದಿದ್ದರು ಏಕೆಂದರೆ ಆ ನೀತಿಗಳಿಂದ ಅವರೆಲ್ಲರ ಜಾತಿವರ್ಗಗಳಿಗೆ ಹೆಚ್ಚಿನ ಅನುಕೂಲವಾಗಿತ್ತು. 1971ರ ಲೋಕಸಭಾ ಚುನಾವಣೆಗಳಲ್ಲಿ ಅವರ ಪಕ್ಷಕ್ಕೆ ವಿಜಯ ಲಭಿಸಿದ ನಂತರ ಕೆಲವು ಪಕ್ಷಾಂತರಿಗಳು ಕಾಂಗ್ರೆಸ್ (ಆರ್) ಸೇರಿದಾಗ, ತಮ್ಮ ಹೊಸ ನೀತಿಗಳ ಬಗ್ಗೆ ಸಹಾನುಭೂತಿಯಿಲ್ಲದ ಹಲವಾರು ರಾಜಕಾರಣಿಗಳನ್ನು ಅರಸು ಅವರು ಪಡೆದುಕೊಂಡರು. ಇಂತಹ ಹೊಸಬರಲ್ಲಿ ಕೆಲವರು ಲಿಂಗಾಯತರೂ ಇದ್ದರು. ಆದರೆ ಪ್ರಬಲ ಭೂಮಾಲೀಕ ವರ್ಗಗಳ ರಾಜಕಾರಣಿಗಳು ಮುಖ್ಯಮಂತ್ರಿಗಳ ಒತ್ತಡಕ್ಕೆ ಮಣಿಯಬೇಕಾಗುತ್ತಿತ್ತು. ಯಾಕೆಂದರೆ ಅವರಿಗೆ ಮಂತ್ರಿಪದವಿಯಾಗಲಿ, ರಾಜ್ಯ ಮಂಡಳಿಗಳು ಹಾಗೂ ನಿಗಮಗಳಲ್ಲಿ ಅಧಿಕಾರ ದೊರಕಬೇಕೆಂದರೆ ಅರಸು ಅವರ ಸಮ್ಮತಿ ಬೇಕಿತ್ತು. ಅಲ್ಲದೆ ಈ ರಾಜಕಾರಣಿಗಳು ತಮ್ಮ ಕ್ಷೇತ್ರಗಳಲ್ಲಿ ಆಯಕಟ್ಟಿನ ಸ್ಥಳಗಳಿಗೆ ಅಧಿಕಾರಿಗಳನ್ನು ವರ್ಗಾಯಿಸಿಕೊಳ್ಳಲು ಕೂಡ ಅರಸು ಅವರ ಮೇಲೆಯೇ ನಿರ್ಭರರಾಗಿದ್ದರು. ಈ ಮೊದಲೆ ನಾವು ನೋಡಿದಂತೆ ತಮ್ಮ ಆಯ್ಕೆಯ ಅಧಿಕಾರಿಗಳನ್ನು ಹೊಂದಿರುವುದು ರಾಜಕಾರಣಿಗಳಿಗೆ ಸ್ವಹಿತಾಸಕ್ತಿಗಳನ್ನು ಕಾಯ್ದುಕೊಳ್ಳಲು ಬಹಳ ಮುಖ್ಯವಾಗಿತ್ತು.

ಅರಸು ಅವರು ಇಂತಹ ಒತ್ತಡವನ್ನು ವ್ಯವಸ್ಥಿತವಾಗಿ ಹೇರುತ್ತಿದ್ದರು. ಅಲ್ಲದೆ ಹಿಂದಿನ ಮುಖ್ಯಮಂತ್ರಿಗಳು ಹೆಚ್ಚಾಗಿ ಬಳಸದ ಮತ್ತೊಂದು ಸಂಪನ್ಮೂಲವನ್ನು ಅವರು ಬಳಸಿದರು. ಅದೇನೆಂದರೆ ಹಣ. ಒಂದು ಅಕ್ರಮವಾದ ಕೇಂದ್ರೀಕೃತ ಹಣಸಂಗ್ರಹಣಾ ವ್ಯವಸ್ಥೆಯನ್ನು ಅರಸು ಬೇಗನೆ ಕಟ್ಟಿಕೊಂಡರು. ಇದರಿಂದ ಭ್ರಷ್ಟಾಚಾರವು ಹಿಂದಿನ ಮಟ್ಟಗಳಿಗಿಂತ ಬಹಳ ಹೆಚ್ಚಾಯಿತು. ಅರಸು ಅವರು ಇದರಲ್ಲಿ ಸ್ವಲ್ಪ ಹಣವನ್ನು ತಾವೆ ವೆಚ್ಚ ಮಾಡಿದರು ಆದರೆ ಆ ಅಕ್ರಮ ಹಣದ ಬಹುಪಾಲು ಪ್ರಗತಿಪರ ರಾಜಕೀಯ ಉದ್ದೇಶಗಳಿಗೋಸ್ಕರ ಬಳಕೆಯಾಯಿತು.

ಈ ಉದ್ದೇಶಗಳಲ್ಲಿ ಮೂರು ಬಹಳ ಮುಖ್ಯವಾದವು. ಮೊದಲಿಗೆ, ಕಾಂಗ್ರೆಸ್ (ಆರ್) ಪಕ್ಷದ ರಾಷ್ಟ್ರೀಯ ನಾಯಕತ್ವಕ್ಕೆ ಅವರು ನಿಯಮಿತವಾಗಿ ಅತ್ಯಂತ ಉದಾರವಾದ ಹಣಕಾಸಿನ ಕೊಡುಗೆಯನ್ನು ನೀಡಿದರು. ಅವರ ಉದ್ದೇಶವೆಂದರೆ ಶ್ರೀಮತಿ ಗಾಂಧಿ ಮತ್ತು ಅವರ ನಿಕಟವಲಯದವರು ಕರ್ನಾಟಕದಲ್ಲಿ ಅರಸು ಅವರಿಗೆ ಅನುಪಯಕ್ತವಾದ ರೀತಿಯಲ್ಲಿ ಹಸ್ತಕ್ಷೇಪ ಮಾಡಬಾರದು ಎನ್ನುವುದು. 1919ರಲ್ಲಿ ಮಹಾತ್ಮ ಗಾಂಧಿಯವರು ಪರಿಚಯಿಸಿದ ನಂತರದಿಂದಲೂ ಕಾಂಗ್ರೆಸ್ಸಿನಲ್ಲಿ ಅಸ್ತಿತ್ವದಲ್ಲಿದ್ದ ಪಕ್ಷದೊಳಗಿನ ಆಂತರಿಕ ಪ್ರಜಾಸತ್ತಾತ್ಮಕತೆಯನ್ನು ತ್ಯಜಿಸಿದ್ದ ಶ್ರೀಮತಿ ಗಾಂಧಿಯವರು ಹೆಚ್ಚುಕಡಿಮೆ ಇತರೆ ಎಲ್ಲ ರಾಜ್ಯಗಳಲ್ಲಿಯೂ ಕಾಂಗ್ರೆಸ್ ಪಕ್ಷದ ವ್ಯವಹಾರಗಳಲ್ಲಿ ಮಧ್ಯಪ್ರವೇಶ ಮಾಡುವ ಅಭ್ಯಾಸವನ್ನು ಮಾಡಿಕೊಂಡಿದ್ದರು. ಕಾಂಗ್ರೆಸ್ (ಆರ್) ಪಕ್ಷದ ಶಕ್ತಿಶಾಲಿ ರಾಜ್ಯ ನಾಯಕರುಗಳಿಂದ ಸವಾಲುಗಳು ಉದ್ಭವಿಸಬಹುದು ಎನ್ನುವ ಅತಿಶಯದ ಭಯ ಅವರಲ್ಲಿತ್ತು. ಹಾಗಾಗಿ ಶ್ರೀಮತಿ ಗಾಂಧಿಯವರು ಆಗಾಗ್ಗೆ ಭಿನ್ನಮತೀಯ ಬಣಗಳನ್ನು ಉತ್ತೇಜಿಸುವ ಮೂಲಕ ತಮ್ಮ ಮುಖ್ಯಮಂತ್ರಿಗಳು ತುಂಬ ಶಕ್ತಿಶಾಲಿಗಳಾಗದಂತೆ ಎಚ್ಚರ ವಹಿಸುತ್ತಿದ್ದರು. ಇಂತಹ ವಿದ್ಯಮಾನವು ಆ ಮುಖ್ಯಮಂತ್ರಿಗಳು ಶ್ರೀಮತಿ ಗಾಂಧಿಯವರೆ ಮಾಡಿದ್ದ ಬಡತನ ನಿರ್ಮೂಲನದಂತಹ ಭರವಸೆಗಳು ಮತ್ತು ಇತರೆ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸುವ ಶಕ್ತಿಯನ್ನು ಕಳೆದುಕೊಂಡರು. ಆದರೂ ಶ್ರೀಮತಿ ಗಾಂಧಿಯವರು ತಮ್ಮ ತಂತ್ರಗಳನ್ನು ನಿಲ್ಲಿಸಲಿಲ್ಲ. ಹೈಕಮಾಂಡಿಗೆ ಗಣನೀಯ ಪ್ರಮಾಣದಲ್ಲಿ ಹಣವನ್ನು ಕಳಿಸುವ ಮೂಲಕ ಮತ್ತು ತನ್ನ ವ್ಯಕ್ತಿತ್ವದ ಮೋಡಿಯನ್ನು ಮೂಲಕ ಶ್ರೀಮತಿ ಗಾಂಧಿಯವರಿಗೆ ತಮ್ಮ ನಿಷ್ಠೆಯನ್ನು ಮನಗಾಣಿಸಿದ ಅರಸು ಅವರು ಇತರ ಮುಖ್ಯಮಂತ್ರಿಗಳಿಗಿಂತಲೂ ಹೆಚ್ಚಿನ ಸ್ವಾಯತ್ತತೆಯನ್ನು ಗಳಿಸಿದ್ದರು. ಅದನ್ನು ಅವರು ಮುಖ್ಯವಾಗಿ ತಾವೆ ರೂಪಿಸಿದ್ದ ಪ್ರಗತಿಪರ ಕಾರ್ಯಕ್ರಮಗಳನ್ನು ಅನುಷ್ಠಾನ ಮಾಡಲು ಬಳಸಿದರು.

ಎರಡನೆಯದಾಗಿ, ಅರಸು ಅವರು ಎರಡು ಉದ್ದೇಶಗಳನ್ನು ಗಮನದಲ್ಲಿರಿಸಿಕೊಂಡು ಶಾಸಕರಿಗೆ ಹಣವನ್ನು ವಿತರಿಸಿದರು. ಈ ಹಣವಿತರಣೆಯ ಉದ್ದೇಶವೇನೆಂದರೆ ಶಾಸಕರು ತಮ್ಮ ಹಿಂಬಾಲಕರ ಮತ್ತು ಗಿರಾಕಿಗಳ ಜಾಲದಿಂದ ಸಣ್ಣ—ಪುಟ್ಟ ಲಂಚವನ್ನು ಪಡೆಯುತ್ತ ಅಕ್ರಮ ಲಾಭ ಗಳಿಸುವುದರಲ್ಲಿ ಕಾಲಹರಣ ಮಾಡಬಾರದು ಎನ್ನುವುದಾಗಿತ್ತು. ಅದರ ಬದಲಿಗೆ ಅರಸು ಅವರ ಅದ್ಯತೆಯ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸುವಂತೆ ಕೆಳಗಿನ ಹಂತದ ಅಧಿಕಾರಶಾಹಿಯ ಮೇಲೆ ಈ ಶಾಸಕರು ಒತ್ತಡ ಹಾಕಬೇಕಿತ್ತು. ಜೊತೆಗೆ ತಮ್ಮ ಕ್ಷೇತ್ರಗಳಲ್ಲಿರುವ ಹಿಂದುಳಿದ ಅನುಕೂಲರಹಿತ (disadvantaged) ಸಮುದಾಯಗಳಿಗೆ ಅನುಕೂಲವಾಗುವಂತೆ ಈ ಹಣದ ಒಂದು ಭಾಗವನ್ನು ಬಳಸುವಂತೆ ಅರಸು ಶಾಸಕರಿಗೆ ಸೂಚಿಸಿದರು. ಒಕ್ಕಲಿಗ ಹಾಗೂ ಲಿಂಗಾಯತ ಶಾಸಕರಿಗೆ ಲಭ್ಯವಿದ್ದ ರೀತಿಯ ಖಾಸಗಿ ಸಂಪತ್ತು ಇಲ್ಲದಿದ್ದ ಅನುಕೂಲರಹಿತ ಸಮುದಾಯಗಳ ಶಾಸಕರುಗಳು ತಮ್ಮ ಚುನಾವಣಾ ಪ್ರಚಾರಕ್ಕೆ ಮತ್ತು ಚುನಾವಣೆಗಳ ನಡುವಿನ ರಾಜಕೀಯ ಚಟುವಟಿಕೆಗಳಿಗೆ ಸಹ ಅರಸು ಅವರಿಂದ ದೊರೆತ ನಿಧಿಯನ್ನು ಬಳಸಿಕೊಳ್ಳಬಹುದಿತ್ತು. ಕಡೆಯದಾಗಿ, ಅರಸು ಅವರು ತಮ್ಮ ಅಕ್ರಮ ನಿಧಿಯ ಸ್ವಲ್ಪಭಾಗವನ್ನು ಕೆಳವರ್ಗಗಳ ಮೇಲೆಯೇ, ಅದರಲ್ಲಿಯೂ ಅವುಗಳ ಜಾತಿ ಸಂಘಟನೆಗಳ ಮೇಲೆ, ವ್ಯಯಿಸಿದರು. ಇಂತಹ ಕೆಲವು ಜಾತಿಸಂಘಟನೆಗಳು ಅರಸು ಅವರು ಅಧಿಕಾರಕ್ಕೆ ಬರುವ ಮೊದಲೂ ಅಸ್ತಿತ್ವದಲ್ಲಿದ್ದವು. ಆದರೆ ಅವುಗಳು ದುರ್ಬಲ ಸಂಘಟನೆಯನ್ನು, ಕೆಲವೆ ಸದಸ್ಯರನ್ನು ಮತ್ತು ಸ್ವಲ್ಪ ಹಣವನ್ನು ಮಾತ್ರ ಹೊಂದಿದ್ದವು. ಮತ್ತೆ ಹಲವನ್ನು ಅರಸು ಮತ್ತು ಅವರ ಜೊತೆಗಾರರು ಹೊಸದಾಗಿ ಪ್ರಾರಂಭಿಸಬೇಕಿತ್ತು. ಇವುಗಳಿಗೆ ಸಹ ಹಣ ಬೇಕಿತ್ತು. ಇಂತಹ ಸಂಘಟನೆಗಳಿಗೆ ಹಣವನ್ನು ಕೊಡುವ ಮೂಲಕ, ಅವರು ಹಿಂದುಳಿದ ವರ್ಗಗಳ ಗುಂಪುಗಳು ಕೆಳಗಿನ ಮಟ್ಟದಲ್ಲಿ ಪ್ರಭಾವವನ್ನು ಗಳಿಸುವ ಸಾಮಥ್ರ್ಯವನ್ನು ಹೆಚ್ಚಿಸಿದರು. ಜೊತೆಗೆ ಈ ಗುಂಪುಗಳು ತಮಗೆ ನಿಷ್ಠವಾಗಿರುವಂತೆ ಹಾಗೂ ಶಾಸಕರು ಮತ್ತು ಕೆಳಗಿನ ಹಂತದ ಅಧಿಕಾರಿಗಳು ತಮ್ಮ ಪ್ರಗತಿಪರ ನೀತಿಗಳನ್ನು ಜಾರಿಗೆ ತರುವಂತೆ ಒತ್ತಡ ಹಾಕುವಂತೆ ಸಹ ಅರಸು ಅವರು ಹಣವಿತರಣೆಯ ಮೂಲಕ ಮಾಡಿದರು.

ಹಲವು ವೀಕ್ಷಕರಿಗೆ ಅರಸು ಅಧಿಕಾರಾವಧಿಯಲ್ಲಿ ಹೆಚ್ಚಿದ ಭ್ರಷ್ಟಾಚಾರವು ಅಸಹ್ಯಕರವೆನಿಸಿತು. ಆದರೆ ಈ ಭ್ರಷ್ಟಾಚಾರದ ಮೌಲ್ಯಮಾಪನ ಮಾಡುವಾಗ, ಹೀಗೆ ವ್ಯಯವಾದ ಹಣದಲ್ಲಿ ಹೆಚ್ಚು ಭಾಗ ಉನ್ನತ ಉದ್ದೇಶಗಳಿಗೆ ಖರ್ಚಾಯಿತು ಎನ್ನುವುದನ್ನು ನಾವು ಗಮನಿಸಬೇಕು. 1970ರ ದಶಕದ ಆರಂಭದಿಂದ ಹೀಗೆ ದೊಡ್ಡಪ್ರಮಾಣದಲ್ಲಿ ಹಣಮಾಡಿದ ರಾಜಕಾರಣಿಗಳ ಪೈಕಿ ಬಹಳ ಕಡಿಮೆ ನಾಯಕರು ಅರಸು ಅವರಂತೆ ಇಂತಹ ಉದ್ದೇಶಗಳಿಗೆ ಈ ಪ್ರಮಾಣದಲ್ಲಿ ಹಣವನ್ನು ಮೀಸಲಾಗಿಟ್ಟರು.

ಅರಸು ಅವರು ಎರಡು ಉದ್ದೇಶಗಳನ್ನು ಗಮನದಲ್ಲಿರಿಸಿಕೊಂಡು ಶಾಸಕರಿಗೆ ಹಣವನ್ನು ವಿತರಿಸಿದರು. ಈ ಹಣವಿತರಣೆಯ ಉದ್ದೇಶವೇನೆಂದರೆ ಶಾಸಕರು ತಮ್ಮ ಹಿಂಬಾಲಕರ ಮತ್ತು ಗಿರಾಕಿಗಳ ಜಾಲದಿಂದ ಸಣ್ಣ—ಪುಟ್ಟ ಲಂಚವನ್ನು ಪಡೆಯುತ್ತ ಅಕ್ರಮ ಲಾಭ ಗಳಿಸುವುದರಲ್ಲಿ ಕಾಲಹರಣ ಮಾಡಬಾರದು

ಈಗ ನಾವು ಅವರ ಎರಡು ಮುಖ್ಯ ಪ್ರಗತಿಪರ ಕಾರ್ಯಕ್ರಮಗಳಾದ ಭೂಸುಧಾರಣೆ ಮತ್ತು ಶೈಕ್ಷಣಿಕ ಸಂಸ್ಥೆಗಳು ಹಾಗೂ ಸರ್ಕಾರಿ ಉದ್ಯೋಗದಲ್ಲಿ ಹಿಂದುಳಿದ ವರ್ಗಗಳಿಗೆ ಮೀಸಲಾತಿ ಇವುಗಳನ್ನು ಪರಿಗಣಿಸೋಣ.

ಭೂಸುಧಾರಣೆ

ಭೂಸುಧಾರಣೆ ಮಾಡಲು ಪ್ರಯತ್ನಿಸಿದವರಲ್ಲಿ ಅರಸು ಅವರು ಮೊದಲಿಗರೇನಲ್ಲ. 1961ರಲ್ಲಿಯೇ ಆಗಿನ ಕಂದಾಯ ಸಚಿವ ಕಡಿದಾಳ್ ಮಂಜಪ್ಪನವರು ಹೊಸದಾಗಿ ಏಕೀಕರಣಗೊಂಡಿದ್ದ ರಾಜ್ಯದ ವಿವಿಧ ಭಾಗಗಳಲ್ಲಿ ಅಸ್ತಿತ್ವದಲ್ಲಿದ್ದ ಭೂಕಾನೂನುಗಳನ್ನು ಏಕರೂಪಕ್ಕೆ ತರುವಂತಹ ಶಾಸನವೊಂದನ್ನು ರೂಪಿಸಿದ್ದರು. ಒಕ್ಕಲಿಗ ಸಮುದಾಯಕ್ಕೆ ಸೇರಿದ ಮಂಜಪ್ಪನವರು ಭೂಹಿಡುವಳಿಯಲ್ಲಿ ಗಮನೀಯ ಅಸಮಾನತೆಯಿದ್ದ ಹಳೆಯ ಮೈಸೂರಿನ ಏಕೈಕ ಜಿಲ್ಲೆಗೆ (ಶಿವಮೊಗ್ಗ) ಸೇರಿದವರು. ಆದರೆ ಅವರು ಎಡಪಂಥೀಯ ನಿಲುವುಗಳನ್ನು ಬೆಳಸಿಕೊಂಡಿದ್ದರು. ಮಂಜಪ್ಪನವರ ಶಾಸನವು ಏಕರೂಪದ ಕಾನೂನನ್ನು ತರುವ ಉದ್ದೇಶವನ್ನು ಮೀರುತ್ತ, ಈ ಕೆಳಗಿನ ಸುಧಾರಣೆಗಳನ್ನು ಸಹ ಪರಿಚಯಿಸಿತು: ಕೃಷಿಭೂಮಿಯನ್ನು ಗುತ್ತಿಗೆಗೆ ನೀಡುವುದು, ಗೇಣಿದಾರರನ್ನು ಹೊರಹಾಕದಂತೆ ಅವರಿಗೆ ರಕ್ಷಣೆ ನೀಡುವುದು ಮತ್ತು ಯಾವುದೆ ವ್ಯಕ್ತಿ ಒಡೆತನ ಹೊಂದಬಹುದಾದ ಭೂಮಿಯ ಮೊತ್ತದ ಮೇಲೆ ಮಿತಿಯನ್ನು ಹಾಕುವುದು. ಆದರೆ ಈ ಶಾಸನದಲ್ಲಿ ಹಲವಾರು ಲೋಪದೋಷಗಳು ಇದ್ದುದರಿಂದ ಅದರ ಪರಿಣಾಮ ಹೆಚ್ಚಾಗಲಿಲ್ಲ. ಉದಾಹರಣೆಗೆ ಭೂಒಡೆತನ ಮಿತಿಯ ನಿಬಂಧನೆಗಳಿಂದ ಜನರು ತಪ್ಪಿಸಿಕೊಂಡರು. ಇನ್ನೂ ಮುಖ್ಯವಾಗಿ ಭೂಮಾಲೀಕ ವರ್ಗಗಳೆಡೆಗೆ ಒಲವನ್ನು ಹೊಂದಿದ್ದ ಮುಂದಿನ ಸರ್ಕಾರಗಳು ಸಹ ಈ ಶಾಸನವನ್ನು ಅನುಷ್ಠಾನಗೊಳಿಸುವ ಇಚ್ಛಾಶಕ್ತಿಯನ್ನು ಹೊಂದಿರಲಿಲ್ಲ. ತಮ್ಮ ಭೂಮಿಯನ್ನು ತಾವೇ ಸಾಗುವಳಿ ಮಾಡುತ್ತಿರದ (ಚಿbseಟಿಣee) ಭೂಮಾಲೀಕರು ಸಹ ಯಾವುದೆ ತೊಂದರೆಗೆ ಈಡಾಗಲಿಲ್ಲ.

ಅರಸು ಅವರು ಈ ಶಾಸನವನ್ನು ಮತ್ತಷ್ಟು ಬಿಗಿಯಾಗಿಸಲು, ಮತ್ತು, ಹೆಚ್ಚು ಮುಖ್ಯವಾಗಿ, ಅದನ್ನು ಆಕ್ರಮಕವಾಗಿ ಅನುಷ್ಠಾನಗೊಳಿಸಲು ಸಂಕಲ್ಪಮಾಡಿದ್ದರು. ಅದಕ್ಕಾಗಿ ಅವರು ಮಂಜಪ್ಪನವರ ಶಾಸನಕ್ಕೆ ಗಣನೀಯವಾದ ತಿದ್ದುಪಡಿಗಳನ್ನು ಪರಿಚಯಿಸಿದರು ಮತ್ತು ಅವುಗಳು 1974ರ ಮಾರ್ಚಿನಲ್ಲಿ ಜಾರಿಗೊಂಡವು. ಹೊಸ ತಿದ್ದುಪಡಿಗಳ ಪ್ರಕಾರ ಗೇಣಿಗೆ ಕೊಟ್ಟಿದ್ದ ಎಲ್ಲ ಭೂಮಿಯನ್ನು ಸರ್ಕಾರಕ್ಕೆ ಕೊಡಬೇಕಿತು ಮತ್ತು ಈ ಉದ್ದೇಶಕ್ಕಾಗಿಯೇ ವಿಶೇಷವಾಗಿ ರಚಿಸಲಾಗಿದ್ದ ಶಕ್ತಿಶಾಲಿ ಟ್ರಿಬ್ಯುನಲುಗಳಲ್ಲಿ ಗೇಣಿದಾರರ ಹಕ್ಕುಗಳನ್ನು ಪರೀಕ್ಷಿಸಿದ ನಂತರ ಅವರಿಗೆ ವರ್ಗಾಯಿಸಲಾಗುತ್ತಿತ್ತು. ಹೀಗೆ ತಿದ್ದುಪಡಿಗೊಂಡ ಶಾಸನವು ಭೂಮಿಯನ್ನು ಗುತ್ತಿಗೆಗೆ ಕೊಡುವುದನ್ನು (leasing of land) ಮತ್ತು ಬೆಳೆಹಂಚಿಕೆ ಆಧಾರದ ಮೇಲೆ ಗೇಣಿಗೆ ನೀಡುವುದನ್ನು (sharecropping) ನಿಷೇಧಿಸಿತು, ವಿವಿಧ ಬಗೆಯ ಭೂಮಿಯ ಒಡೆತನಕ್ಕೆ ಮಿತಿಯನ್ನು ಹಾಕಿತು ಮತ್ತು ಪ್ರಜ್ಞಾಪೂರ್ವಕವಾಗಿ ಹಳೆಯ ಲೋಪದೋಷಗಳನ್ನು ಮುಚ್ಚಿತು.

1919ರಲ್ಲಿ ಮಹಾತ್ಮ ಗಾಂಧಿಯವರು ಪರಿಚಯಿಸಿದ ನಂತರದಿಂದಲೂ ಕಾಂಗ್ರೆಸ್ಸಿನಲ್ಲಿ ಅಸ್ತಿತ್ವದಲ್ಲಿದ್ದ ಪಕ್ಷದೊಳಗಿನ ಆಂತರಿಕ ಪ್ರಜಾಸತ್ತಾತ್ಮಕತೆಯನ್ನು ತ್ಯಜಿಸಿದ್ದ ಶ್ರೀಮತಿ ಗಾಂಧಿಯವರು ಹೆಚ್ಚುಕಡಿಮೆ ಇತರೆ ಎಲ್ಲ ರಾಜ್ಯಗಳಲ್ಲಿಯೂ ಕಾಂಗ್ರೆಸ್ ಪಕ್ಷದ ವ್ಯವಹಾರಗಳಲ್ಲಿ ಮಧ್ಯಪ್ರವೇಶ ಮಾಡುವ ಅಭ್ಯಾಸವನ್ನು ಮಾಡಿಕೊಂಡಿದ್ದರು.

ಗೇಣಿದಾರರಿಗೆ ಕ್ಷಿಪ್ರವಾಗಿ ಅವರ ಹಕ್ಕೊತ್ತಾಯದ ನಿರ್ಧಾರವಾಗಬೇಕೆಂದು ಸರ್ಕಾರವು 193 ಭೂಟ್ರಿಬ್ಯುನಲುಗಳನ್ನು, ಕನಿಷ್ಟ ಒಂದು ತಾಲೂಕಿಗೆ ಒಂದರಂತೆ, ರಚಿಸಿತು. ಪ್ರತಿ ಟ್ರಿಬ್ಯುನಲ್ ಸಹ ಒಬ್ಬ ನಾಗರಿಕ ಸೇವೆಯ ಅಧಿಕಾರಿಯನ್ನು ಅಧ್ಯಕ್ಷನಾಗಿ ಹೊಂದಿತ್ತು. ಅಲ್ಲದೆ ನಾಲ್ವರು ಅಧಿಕಾರಿಯೇತರ ಸದಸ್ಯರು ಇದ್ದರು. ಇವರುಗಳಲ್ಲಿ ಪರಿಶಿಷ್ಟ ಜಾತಿಗೆ ಸೇರಿದ ಕನಿಷ್ಟ ಒಬ್ಬ ಸದಸ್ಯನೂ ಸೇರಿದಂತೆ ತಳಸಮುದಾಯಗಳ ಪ್ರತಿನಿಧಿಗಳು ಇದ್ದರು. ಭೂಸುಧಾರಣೆಗೆ ಬದ್ಧರಾಗಿದ್ದ ವ್ಯಕ್ತಿಗಳನ್ನೆ ಅರಸು ಅವರು ಟ್ರಿಬ್ಯುನಲುಗಳಿಗೆ ನೇಮಿಸಿದ್ದರು. ಆದರೂ ಸಹ ಭೂಮಿಯನ್ನು ಕಳೆದುಕೊಳ್ಳುತ್ತಿದ್ದ ಭೂಮಾಲೀಕ ವರ್ಗಗಳ ಜೊತೆಗೆ ಟ್ರಿಬ್ಯುನಲ್ ಸದಸ್ಯರು ಕೈಜೋಡಿಸಿದರೆ ಪರಿಶಿಷ್ಟ ಜಾತಿಗಳಿಗೆ ಪೂರ್ಣ ನ್ಯಾಯ ದೊರಕದಿರಬಹುದು ಎನ್ನುವ ಭಯವೂ ಅವರಿಗಿತ್ತು. ಅಂತಹ ಸಂದರ್ಭಗಳಲ್ಲಿ ಪರಿಶಿಷ್ಟ ವರ್ಗದ ಸದಸ್ಯ ಮತ್ತು ತಳಸಮುದಾಯಗಳ ಇತರ ಸದಸ್ಯರು ತಮ್ಮ ಸಮುದಾಯಗಳ ಗೇಣಿದಾರರ ಹಿತಾಸಕ್ತಿಗಳನ್ನು ಕಾಪಾಡಬೇಕಿತ್ತು. ಟ್ರಿಬ್ಯುನಲ್ಲಿನ ನಿರ್ಧಾರಗಳನ್ನು ಭ್ರಷ್ಟಾಚಾರವು ಅತಿಯಾಗಿದ್ದ ಕೆಳಗಿನ ಹಂತದ ನ್ಯಾಯಾಲಯಗಳಲ್ಲಿ ಪ್ರಶ್ನಿಸಬಾರದು ಎನ್ನುವ ಉದ್ದೇಶದಿಂದ ಟ್ರಿಬ್ಯುನಲ್ಲಿನಲ್ಲಿ ನ್ಯಾಯವಾದಿಗಳು ಭಾಗವಹಿಸದಂತೆ ಮತ್ತು ಅದರ ತೀರ್ಮಾನಗಳನ್ನು ನ್ಯಾಯಾಲಯದಲ್ಲಿ ಪ್ರಶ್ನಿಸದಂತೆ ಈ ಶಾಸನವು ನಿಷೇಧವನ್ನು ಹೇರಿತು.

ಒಕ್ಕಲಿಗ ಸಮುದಾಯಕ್ಕೆ ಸೇರಿದ ಮಂಜಪ್ಪನವರು ಭೂಹಿಡುವಳಿಯಲ್ಲಿ ಗಮನೀಯ ಅಸಮಾನತೆಯಿದ್ದ ಹಳೆಯ ಮೈಸೂರಿನ ಏಕೈಕ ಜಿಲ್ಲೆಗೆ (ಶಿವಮೊಗ್ಗ) ಸೇರಿದವರು. ಆದರೆ ಅವರು ಎಡಪಂಥೀಯ ನಿಲುವುಗಳನ್ನು ಬೆಳಸಿಕೊಂಡಿದ್ದರು.

ಹೀಗೆ ತಿದ್ದುಪಡಿಗೊಳಗಾದ ಹೊಸ ಶಾಸನವು ಹಿಂದುಳಿದ ವರ್ಗಗಳಿಗೆ ಹೊಸ ರಾಜಕೀಯ ಸ್ಥಳ (space) ಮತ್ತು ಹತೋಟಿಯನ್ನು ಒದಗಿಸುವಲ್ಲಿ, ಗೇಣಿಪದ್ಧತಿಯನ್ನು ತೆಗೆದುಹಾಕುವಲ್ಲಿ ಮತ್ತು ’ಉಳುವವನಿಗೆ ಭೂಮಿ’ಯನ್ನು ಕೊಡುವುದರಲ್ಲಿ ಯಶಸ್ವಿಯಾಯಿತು. 1979ರ ಹೊತ್ತಿಗೆ ಸುಮಾರು 8 ಲಕ್ಷ ಗೇಣಿದಾರರ ಅರ್ಜಿಗಳು ಟ್ರಿಬ್ಯುನಲ್ಲುಗಳನ್ನು ತಲುಪಿದ್ದವು ಮತ್ತು ಅವುಗಳಲ್ಲಿ 5 ಲಕ್ಷ ಅರ್ಜಿಗಳ ವಿಲೇವಾರಿಯಾಗಿತ್ತು. ಅಂದಾಜು ಶೇ 60ರಷ್ಟು ಅರ್ಜಿಗಳಲ್ಲಿ ಗೇಣಿದಾರರ ಪರವಾಗಿ ತೀರ್ಮಾನ ಹೊರಬಂದಿತ್ತು ಮತ್ತು ಇದರಿಂದ 12.5 ಲಕ್ಷ ಎಕರೆ ಭೂಮಿಯ ಒಡೆತನ ಅವರುಗಳಿಗೆ ದೊರಕಿತ್ತು. ಈ ಅಂಕಿಅಂಶಗಳು ಎಲ್ಲರ ಮೆಚ್ಚುಗೆಗೂ ಅರ್ಹವಾದವು. ಹೀಗೆ ಭೂಮಿಯನ್ನು ಗುತ್ತಿಗೆಗೆ ಮತ್ತು ಗೇಣಿಗೆ ಕೊಡುವುದನ್ನು ಪರಿಣಾಮಕಾರಿಯಾಗಿ ತಡೆಯಲಾಯಿತು. ದೊಡ್ಡಪ್ರಮಾಣದಲ್ಲಿ ಭೂಮಿಯ ಒಡೆತನದ ವರ್ಗಾವಣೆಯಾಗಿತ್ತು.

ಈ ವಿದ್ಯಮಾನವು ಗ್ರಾಮೀಣಭಾಗಗಳಲ್ಲಾದ ಮೂಲಭೂತ ಬದಲಾವಣೆಗಳಲ್ಲಿ ಒಂದು. ರಾಜ್ಯಾದ್ಯಂತ ಹರಡಿದ್ದ ಸಾವಿರಾರು ಹಳ್ಳಿಗಳಲ್ಲಿ ಇಂತಹ ಬದಲಾವಣೆಯನ್ನು ಮುಖ್ಯಮಂತ್ರಿಗಳ ತೀವ್ರ ಮತ್ತು ತಡೆರಹಿತ ಒತ್ತಡವಿಲ್ಲದೆ ಸಾಧಿಸಲಾಗುತ್ತಿರಲಿಲ್ಲ. ಭೂಸುಧಾರಣೆಯನ್ನು ಅರಸು ಅವರು ತಮ್ಮ ಬಡತನವಿರೋಧಿ ಕಾರ್ಯಕ್ರಮಗಳ ಕೇಂದ್ರಬಿಂದುವಾಗಿಸಿದರು ಮತ್ತು ಆ ಮೂಲಕ, ಏನೂ ಇಲ್ಲದ ಬಡವನಿಗೆ ತಾನು ಹೇಗೆ ಸಹಾಯ ಮಾಡುತ್ತೇನೆ ಎನ್ನುವುದನ್ನು ಅವರು ಸ್ಪಷ್ಟವಾಗಿ ಎದ್ದುಕಾಣುವಂತೆ ಗ್ರಾಮೀಣಭಾಗದ ಮತದಾರನಿಗೆ ಪ್ರದರ್ಶಿಸಿದರು. ಈ ವಿಚಾರದ ಬಗ್ಗೆ ಪ್ರತಿದಿನವೂ ಅವರು ಮಾತನಾಡಿದರು. ಬಿಗಿಯಾದ ಆಡಳಿತಾತ್ಮಕ ಕ್ರಮಗಳನ್ನು ತೆಗೆದುಕೊಳ್ಳುವಂತೆ ಒತ್ತಾಯಿಸುವ ಮೂಲಕ ಅಧಿಕಾರಗಳಲ್ಲಿಯೂ ಭಯಮೂಡಿಸಿದರು.

ಎಡಪಂಥೀಯ ಟೀಕಾಕಾರರು ಗುರುತಿಸಿರುವಂತೆ, ಈ ಭೂಸುಧಾರಣೆಯನ್ನು ಲಭ್ಯವಿದ್ದ ಇತರೆ ರ್ಯಾಡಿಕಲ್ ಆಯ್ಕೆಗಳ ಜೊತೆಗೆ ಹೋಲಿಸಿದಾಗ ಕಡಿಮೆಯೆನಿಸುತ್ತದೆ. ಈ ಶಾಸನವು ಭೂಹಿಡುವಳಿಯ ಮಿತಿಯನ್ನು ಮತ್ತಷ್ಟು ಕೆಳಗಿಳಿಸಬಹುದಿತ್ತು. ಹಾಗಾಗಿ ಭೂರಹಿತರಿಗೆ ಹೆಚ್ಚುವರಿ ಭೂಮಿಯನ್ನು ಹಂಚಬಹುದಾದ ಸರ್ಕಾರದ ಸಾಮಥ್ರ್ಯದ ಮೇಲೆ ಮಿತಿಯನ್ನು ಹಾಕಿದಂತಾಯಿತು. ಇದರ ಪರಿಣಾಮವೇನೆಂದರೆ, ಭೂರಹಿತರಿಗಿಂತ ಗೇಣಿದಾರರಿಗೆ ಈ ಸುಧಾರಣೆಯಿಂದ ಹೆಚ್ಚು ಅನುಕೂಲವಾಯಿತು. ಗೇಣಿದಾರರೂ ಬಡವರ್ಗಕ್ಕೆ ಸೇರಿದವರಾಗಿದ್ದರೂ ಸಹ, ಭೂರಹಿತರಿಗೆ ಹೋಲಿಸಿದರೆ ಅವರು ಹೆಚ್ಚು ಅನುಕೂಲಸ್ಥರಾಗಿದ್ದರು. (ಆದರೆ ಇಲ್ಲಿ ಗಮನಿಸಬೇಕಾದುದು ಏನೆಂದರೆ ಕರ್ನಾಟಕದ ಹೆಚ್ಚಿನ ಜಿಲ್ಲೆಗಳಲ್ಲಿ ಭೂರಹಿತರ ಸಂಖ್ಯೆ ಕಡಿಮೆಯಿತ್ತು. ಹಾಗಾಗಿ ಗೇಣಿಯ ಸಮಸ್ಯೆಯೇ ಇಲ್ಲಿ ಮುಖ್ಯವಾದುದಾಗಿತ್ತು). ಆದರೆ ಈ ಸುಧಾರಣೆಯನ್ನು ನಾವು ಒಂದು ಆದರ್ಶದ, ಮೂಲಭೂತ ಬದಲಾವಣೆಯ ಮಾದರಿಗೆ ಹೋಲಿಸದೆ, ಅಂದಿನ ಸಂದರ್ಭದಲ್ಲಿ ವಾಸ್ತವದಲ್ಲಿ ಮೂಲಮಟ್ಟದಲ್ಲಿದ್ದ ಪ್ರತಿದಿನದ ಬದುಕಿನ ಜೊತೆಗೆ ಹೋಲಿಸಿದರೆ ಆಗ ಗ್ರಾಮೀಣ ಕರ್ನಾಟಕದಲ್ಲಿ ಅದುವರೆಗೆ ಕಾಣಬರದಿದ್ದ ರೀತಿಯ ಚಕಿತಗೊಳಿಸುವ ಬದಲಾವಣೆಯನ್ನು ಹುಟ್ಟುಹಾಕಿತು ಎನ್ನಬಹುದು.

ವಿಮರ್ಶಕರು ಸರಿಯಾಗಿಯೇ ಗುರುತಿಸಿರುವಂತೆ ಹಲವು ಗೇಣಿದಾರ ಫಲಾನುಭವಿಗಳು ಒಕ್ಕಲಿಗರಾಗಿದ್ದರು. ಆದರೆ ಅರಸು ಅವರು ಇದನ್ನು ಎರಡು ಕಾರಣಗಳಿಗೆ ಸ್ವಾಗತಿಸಿದರು. ಮೊದಲಿಗೆ, ಪ್ರತಿಯೊಬ್ಬ ಗೇಣಿದಾರನೂ ತನ್ನ ಶ್ರಮಕ್ಕೆ ಪೂರ್ಣಫಲವನ್ನು ಪಡೆಯಲಾಗದ ಅವಲಂಬನೆಯ ಮತ್ತು ಪ್ರತಿಕೂಲತೆಯ ಸ್ಥಿತಿಯಲ್ಲಿರುತ್ತಾನೆ. ಇಂತಹ ಅನ್ಯಾಯಗಳಿಂದ ಕೆಲವು ಒಕ್ಕಲಿಗರೂ ಜರ್ಜರಿತರಾಗಿದ್ದರೆ, ಇತರ ಸಮುದಾಯಗಳ ಗೇಣಿದಾರರೊಡನೆ ಅವರೂ ಸಹ ಸ್ವತಂತ್ರರಾಗುವುದೆ ನ್ಯಾಯಸಮ್ಮತವಾದುದು. ಎರಡನೆಯದಾಗಿ, ಒಕ್ಕಲಿಗ ಗೇಣಿದಾರರಿಗೆ ದೊರತ ಅನುಕೂಲತೆಯಿಂದ ಅರಸುರಿಗೆ ಅವರ ಮತ್ತೊಂದು ಪ್ರಮುಖ ರಾಜಕೀಯ ಉದ್ದೇಶವಾಗಿದ್ದ ಬಡ ಲಿಂಗಾಯತ ಮತ್ತು ಅದರಲ್ಲೂ ಒಕ್ಕಲಿಗ ವರ್ಗಗಳಿಂದ ಚುನಾವಣೆಯಲ್ಲಿ ಬೆಂಬಲ ಪಡೆಯಲು ಸಾಧ್ಯವಾಯಿತು.

ಹಿಂದುಳಿದ ವರ್ಗಗಳಿಗೆ ಮೀಸಲಾತಿ

ಭೂಸುಧಾರಣೆಯ ಜೊತೆಗೆ, ಶೈಕ್ಷಣಿಕ ಸಂಸ್ಥೆಗಳು ಮತ್ತು ಸರ್ಕಾರಿ ಉದ್ಯೋಗಗಳಲ್ಲಿ ಹಿಂದುಳಿದ ವರ್ಗಗಳಿಗೆ ಅವಕಾಶ ಒದಗಿಸುವ ಧನಾತ್ಮಕ ತಾರತಮ್ಯದ ನೀತಿಯನ್ನು ಅರಸು ಅವರು ಅತ್ಯಂತ ಹುರುಪಿನಿಂದ ಬಲವಂತವಾಗಿ ಜಾರಿಗೊಳಿಸಿದರು. ಹಿಂದುಳಿದ ವರ್ಗಗಳು ಎನ್ನುವ ವರ್ಗೀಕರಣವು ಹಲವಾರು ಜಾತಿಗಳನ್ನು ಒಳಗೊಳ್ಳುತ್ತದೆ. ಇವುಗಳಲ್ಲಿ ಹೆಚ್ಚಿನವು ಸಣ್ಣವು ಆದರೆ ಅವುಗಳನ್ನೆಲ್ಲ ಜೊತೆಗೆ ತೆಗೆದುಕೊಂಡಾಗ ರಾಜ್ಯದ ಮೂರನೆಯ ಒಂದು ಭಾಗದಷ್ಟು ಜನಸಂಖ್ಯೆಯನ್ನು ಒಳಗೊಳ್ಳುತ್ತದೆ. ಪರಿಶಿಷ್ಟ ಜಾತಿಗಳು (16.7%) ಮತ್ತು ಮುಸ್ಲಿಮ (11.6%) ರನ್ನು ಹೊರತುಪಡಿಸಿದರೆ (ಅರಸು ಅವರು ಈ ವರ್ಗಗಳ ಬೆಂಬಲವನ್ನೂ ನಿರೀಕ್ಷಿಸಿದರು), ಹಿಂದುಳಿದ ವರ್ಗಗಳ ಜನಸಂಖ್ಯೆಯು ಲಿಂಗಾಯತ ಮತ್ತು ಒಕ್ಕಲಿಗರ ಒಟ್ಟು ಸಂಖ್ಯೆಗಿಂತ ಹೆಚ್ಚಿನದಾಗಿತ್ತು. ಈ ವರ್ಗಗಳು ಅರಸು ಅವರು ನಿರ್ಲಕ್ಷಿಸಲು ಆಗದ ದೊಡ್ಡ ಸಂಭವನೀಯ ಮತದಾರ ವರ್ಗವಾಗಿದ್ದರು.

ಹಿಂದುಳಿದ ವರ್ಗಗಳಿಗೆ ಮೀಸಲಾತಿ ನೀಡುವ ವಿಚಾರವು ರಾಜ್ಯದಲ್ಲಿ ಪ್ರಸ್ತಾಪವಾಗಿದ್ದು ಇದೇ ಮೊದಲೇನಲ್ಲ. ಲಿಂಗಾಯತ— ಒಕ್ಕಲಿಗ ಪ್ರಾಬಲ್ಯವಿದ್ದ 1960ರ ದಶಕದ ಪ್ರಾರಂಭದಲ್ಲಿ, ನಿಜಲಿಂಗಪ್ಪನವರ ಸರ್ಕಾರವು ಹಿಂದುಳಿದ ವರ್ಗಗಳಿಗೆ ಮೀಸಲಾತಿ ನೀಡುವ ಬಗ್ಗೆ ಒಂದು ಅಧಿಕೃತ ಆಯೋಗವನ್ನು ನೇಮಿಸಿತ್ತು. ಆಯೋಗವು ಲಿಂಗಾಯತರನ್ನು ಹಿಂದುಳಿದ ವರ್ಗಗಳ ಪಟ್ಟಿಯಿಂದ ಹೊರಗಿಡಬೇಕೆಂದು ಶಿಫ಼ಾರಸು ಮಾಡಿತು. ಸರ್ಕಾರವು ಈ ಶಿಫ಼ಾರಸನ್ನು ತಿರಸ್ಕರಿಸಿತು. ಮಾತ್ರವಲ್ಲ, ಪ್ರತಿಯೊಂದು ಜಾತಿಗೂ ನಿರ್ದಿಷ್ಟ ಪ್ರಮಾಣದಲ್ಲಿ ಉದ್ಯೋಗವನ್ನು ಮೀಸಲಾಗಿಡುವ ವ್ಯವಸ್ಥೆಯೊಂದರಲ್ಲಿ ಲಿಂಗಾಯತರನ್ನು ಸೇರಿಸಿತು. ಈ ವ್ಯವಸ್ಥೆಯಿಂದ ಕೇವಲ ಬ್ರಾಹ್ಮಣರು ಮಾತ್ರ ಹೊರಗಿದ್ದರು. ಆದರೆ ಸರ್ವೋಚ್ಛ ನ್ಯಾಯಾಲಯವು ಈ ವ್ಯವಸ್ಥೆಯನ್ನು ರದ್ದುಮಾಡಿದಾಗ, ಸರ್ಕಾರವು ಕೇವಲ ಆರ್ಥಿಕ ಮಾನದಂಡಗಳ ಮೇಲೆ ರೂಪುಗೊಂಡಿದ್ದ ಮೀಸಲಾತಿ ನೀತಿಯನ್ನು ತನ್ನದಾಗಿಸಿಕೊಂಡು, ಮತ್ತೊಂದು ಆಯೋಗವನ್ನು ನೇಮಿಸುವುದಾಗಿ ಆಶ್ವಾಸನೆ ನೀಡಿತು. ಆದರೆ ಅದಾಗಲಿಲ್ಲ.

ಮೀಸಲಾತಿಯನ್ನು ತಮ್ಮ ಎರಡನೆಯ ಪ್ರಮುಖ ಕಾರ್ಯಕ್ರಮವಾಗಿ ಮಾಡಿಕೊಳ್ಳಲು ಅರಸು ಅವರು ನಿಶ್ಚಯಿಸಿದ್ದರು. ಅಧಿಕಾರಕ್ಕೆ ಬಂದ ಕೂಡಲೆ ಅವರು ಎಲ್.ಜಿ.ಹಾವನೂರು ನೇತೃತ್ವದಲ್ಲಿ ಆಯೋಗವೊಂದನ್ನು ರಚಿಸಿದರು. ಹಾವನೂರು ಅವರು ಒಬ್ಬ ನ್ಯಾಯವಾದಿ ಮತ್ತು ಹಿಂದುಳಿದ ವರ್ಗಗಳಿಗೆ ಸೇರಿದ ಒಬ್ಬ ಮುಖ್ಯ ಕಾರ್ಯಕರ್ತರಾಗಿದ್ದರು. ಸುದೀರ್ಘವಾದ ಪ್ರಾಥಮಿಕ ಸಮೀಕ್ಷೆಯ ನಂತರ, ಆಯೋಗದ ಸದಸ್ಯರ ಪ್ರಾಥಮಿಕ ಒಲವು ಲಿಂಗಾಯತ ಮತ್ತು ಒಕ್ಕಲಿಗರಿಬ್ಬರನ್ನೂ ಹಿಂದುಳಿದ ವರ್ಗಗಳ ಮೀಸಲಾತಿಯ ಪರಿಮಿತಿಯಿಂದ ಹೊರಗಿಡುವುದರ ಕಡೆಗಿತ್ತು. ಆದರೆ ರಾಜಕೀಯ ಕಾರಣಗಳಿಂದ ಇದನ್ನು ಮಾಡಲು ಸಾಧ್ಯವಿಲ್ಲ ಎಂದು ಅರಸು ಅವರು ಹಾವನೂರರಿಗೆ ಖಾಸಗಿಯಾಗಿ ತಿಳಿಸಿದರು. 1975ರ ಕಡೆಯ ಹೊತ್ತಿಗೆ, ಆಯೋಗವು ಒಕ್ಕಲಿಗರನ್ನು ಮೀಸಲಾತಿಯೊಳಗೆ ಸೇರಿಸುವಂತೆ ಶಿಫ಼ಾರಸು ಮಾಡಿತು. 1977ರಲ್ಲಿ ಅರಸು ಈ ಶಿಫ಼ಾರಸನ್ನು ಅನುಷ್ಠಾನಗೊಳಿಸಿದರು. ಆಯೋಗದ ವರದಿಯು ಮುಸ್ಲಿಮರನ್ನು ಸಹ ಮೀಸಲಾತಿಯಿಂದ ಹೊರಗಿಡುವಂತೆ ತಿಳಿಸಿತು. ಮುಸ್ಲಿಮರು ಹಿಂದುಳಿದವರಾದರೂ ಸಹ ಹಿಂದು ಜಾತಿವ್ಯವಸ್ಥೆಯೊಳಗೆ ಬರುವುದಿಲ್ಲ ಎನ್ನುವುದು ಆಯೋಗದ ವಿವರಣೆಯಾಗಿತ್ತು. ಈ ಶಿಫ಼ಾರಸನ್ನು ತಿರಸ್ಕರಿಸಿ, ಅರಸು ತಮ್ಮ ಮತದಾರರಾಗಿದ್ದ ಮುಸ್ಲಿಮರನ್ನೂ ಸಹ ಮೀಸಲಾತಿಯೊಳಗಿರಿಸಿದರು. ಒಕ್ಕಲಿಗರನ್ನು ಮೀಸಲಾತಿಯೊಳಗೆ ಉಳಿಸಿದ್ದರಿಂದ, ಅರಸು ಎರಡೂ ಪ್ರಬಲ ಸಮುದಾಯಗಳು ತಮ್ಮ ವಿರುದ್ಧ ಜೊತೆಗೂಡುವುದನ್ನು ತಪ್ಪಿಸಿದರು. ತಮ್ಮ ನೀತಿಗಳು ಜಾತಿಕೇಂದ್ರಿತ ಎನ್ನುವ ಆಪಾದನೆಯನ್ನು ತಪ್ಪಿಸಿಕೊಳ್ಳಲು, ಅವರು ಎಲ್ಲ ವರ್ಗಗಳ ಬಡವರಿಗೂ ಸಹಾಯ ಮಾಡುವ ಸಂಸ್ಥೆಯನ್ನು ಸ್ಥಾಪಿಸಿದರು. ಜೊತೆಗೆ ಈ ನೀತಿಗಳನ್ನು ಅನುಷ್ಠಾನಗೊಳಿಸಲು ತುರ್ತುಪರಿಸ್ಥಿತಿಯು ಜಾರಿಗೆ ಬರುವ ತನಕ ಅವರು ಕಾಯ್ದುದರಿಂದ, ಅವರ ಎದುರಾಳಿಗಳು ದೊಡ್ಡಪ್ರಮಾಣದಲ್ಲಿ ಪ್ರತಿಭಟನೆಯನ್ನು ಮಾಡಲು ಸಹ ಹಿಂಜರಿದರು.

ತಮ್ಮ ಎರಡು ಮುಖ್ಯ ಕ್ರಮಗಳ ಮಾನಸಿಕ (psychological) ಮತ್ತು ಭೌತಿಕ (material) ಪರಿಣಾಮಗಳನ್ನು ಬಲಪಡಿಸಲು ಹಿಂದುಳಿದ ವರ್ಗಗಳಿಗೆ ಅನುಕೂಲಕರವಾಗುವ ಹಲವಾರು ಇತರೆ ನೀತಿಗಳನ್ನು ಅರಸು ಅನುಸರಿಸಿದರು. ಇವುಗಳಲ್ಲಿ ಒಂದು ಸಾಂಕೇತಿಕ ನೀತಿಯನ್ನು ಗುರುತಿಸಬೇಕು. ಕರ್ನಾಟಕದಾದ್ಯಂತ ಎಲ್ಲೆಲ್ಲಿ ಆಧುನಿಕ ಒಳಚರಂಡಿ ವ್ಯವಸ್ಥೆಯಿರಲಿಲ್ಲವೊ ಅಂತಹ ಕಡೆ ಸ್ಥಳೀಯ ಸಂಸ್ಥೆಗಳು ಪರಿಶಿಷ್ಟ ಜಾತಿಯವರನ್ನು ಕಕ್ಕಸುಮನೆಗಳಿಂದ ಮಲವನ್ನು ಹೊರ ಸಾಗಿಸುವ ಅವಮಾನಕಾರಿ ಕೆಲಸಕ್ಕಾಗಿ ನೇಮಿಸಿಕೊಂಡಿದ್ದರು. ಸಾಕಷ್ಟು ಆಡಂಬರ ಮತ್ತು ಪ್ರಚಾರದೊಡನೆ ಅರಸು ಈ ಆಚರಣೆಯನ್ನು ನಿಷೇಧಿಸಿದರು. ಇದರಿಂದ ಕೆಳಜಾತಿಯ ಗುಂಪುಗಳತ್ತ ಅರಸು ಅವರ ಬದ್ಧತೆಯು ಎಲ್ಲರಿಗೂ ಸ್ಪಷ್ಟವಾಯಿತು. ಅದರಲ್ಲಿಯೂ ವಿಶೇಷವಾಗಿ ಅವರ ಮೀಸಲಾತಿ ನೀತಿಗಳಿಂದ ಹೆಚ್ಚಿನ ಲಾಭ ಪಡೆಯದಿದ್ದ ಅದರೆ ಅರಸು ಅವರ ಸಾಮಾಜಿಕ ಬೆಂಬಲಿಗವರ್ಗದ ಮುಖ್ಯಭಾಗವಾಗಿದ್ದ ಪರಿಶಿಷ್ಟ ಜಾತಿಗಳಿಗೆ ಒಂದು ಮುಖ್ಯಸಂದೇಶವನ್ನು ಕಳುಹಿಸಿದಂತಾಯಿತು.

ಪಕ್ಷದ ರಾಜ್ಯಘಟಕದ ಅಧ್ಯಕ್ಷ ಸ್ಥಾನವನ್ನು ಸ್ವೀಕರಿಸಲೆಂದು ಈಗಾಗಲೆ ಮಂತ್ರಿಮಂಡಳಕ್ಕೆ ರಾಜೀನಾಮೆ ನೀಡಿದ್ದ ಮತ್ತು ಮುಖ್ಯಮಂತ್ರಿಗಳ ಆಯ್ಕೆಯೂ ಆಗಿದ್ದ ಕೆ. ಹೆಚ್. ಪಾಟೀಲರನ್ನು ಅಧ್ಯಕ್ಷರನ್ನಾಗಿಸಲಾಯಿತು.

ಅಷ್ಟೆ ಅಲ್ಲದೆ, ಪರಿಶಿಷ್ಟ ಜಾತಿಗಳ ನಾಯಕನೆಂಬ ತಮ್ಮ ಹೆಗ್ಗಳಿಕೆಗೆ ಸಬೂತು ಒದಗಿಸುವಂತೆ ಅರಸು ಆ ವರ್ಗಗಳ ನಾಯಕರುಗಳಿಗೆ ಮುಖ್ಯವಾದ ಖಾತೆಗಳನ್ನು ನೀಡಿದರು. ಅವರುಗಳಲ್ಲಿ ಒಬ್ಬರಾದ ಬಿ. ಬಸವಲಿಂಗಪ್ಪನವರು (ನೇರವಾಗಿ ಆಕ್ರಮಕರಾಗಿದ್ದ ಮತ್ತು ಆ ಕಾರಣಕ್ಕಾಗಿಯೇ ವಿವಾದಾತ್ಮಕರಾಗಿದ್ದ ನಾಯಕ) ಮಲಹೊರುವ ಪದ್ಧತಿಯನ್ನು ನಿಷೇಧಿಸುವಂತೆ ಶಿಫ಼ಾರಸು ಮಾಡಿದ್ದರು. ಅಂತಹ ಒಬ್ಬ ಬಲಶಾಲಿ ಪರಿಶಿಷ್ಟವರ್ಗಗಳ ನಾಯಕನಿಗೆ ಪ್ರಭಾವಿ ಸ್ಥಾನವೊಂದನ್ನು ನೀಡುವುದು ಕಾಂಗ್ರೆಸ್ (ಆರ್) ಪಕ್ಷದೊಳಗೆ ಅಪರೂಪವಾಗಿತ್ತು. ಇತರೆ ರಾಜ್ಯಗಳಲ್ಲಿ ಸುಲಭವಾಗಿ ಹತೋಟಿಯಲ್ಲಿಟ್ಟುಕೊಳ್ಳಬಹುದಾದ ಮೃದುಸ್ವಭಾವದ ನಾಯಕರಿಗೆ ಸೀಮಿತ ಅಧಿಕಾರವಿದ್ದ ಖಾತೆಗಳನ್ನು ಕೊಡಲಾಗುತ್ತಿತ್ತು.

ತದನಂತರದಲ್ಲಿ ಪರಿಶಿಷ್ಟ ಜಾತಿಗಳಿಗೆ ಮನೆಗಳನ್ನು ಉಚಿತವಾಗಿ ನೀಡುವ ಮತ್ತು ಎಲ್ಲ ಭೂರಹಿತ ಕಾರ್ಮಿಕರಿಗೂ ಉಚಿತ ನಿವೇಶನಗಳನ್ನು ನೀಡುವ ಕಾರ್ಯಕ್ರಮಗಳನ್ನು ಮುಖ್ಯಮಂತ್ರಿಗಳು ರೂಪಿಸಿದರು. ಇದರಿಂದ ಎಲ್ಲ ಜಾತಿಗಳ ಬಡವರನ್ನು ತಲುಪಲು ಸಾಧ್ಯವಾಯಿತು. ಭೂರಹಿತ ಕಾರ್ಮಿಕರ ಪೈಕಿ ಸಹ ಪರಿಶಿಷ್ಟವರ್ಗದವರೆ ಹೆಚ್ಚಿದ್ದರು. ಈ ಕ್ರಮಗಳನ್ನು ಹುರುಪಿನಿಂದ ಜಾರಿಗೊಳಿಸಲಾಯಿತು. ಆದರೆ ಸಂಪನ್ಮೂಲಗಳ ಸೋರಿಕೆಯ ಕಾರಣದಿಂದ ಇವುಗಳ ಪರಿಣಾಮ ಮಾತ್ರ ದುರ್ಬಲವಾಗಿತ್ತು. ತಮ್ಮ ನೀತಿಗಳನ್ನು ಬೆಂಬಲಿಸುವಂತೆ ಶಾಸಕರು ಮತ್ತು ಕೆಳಹಂತದ ಅಧಿಕಾರಿಗಳನ್ನು ಉತ್ತೇಜಿಸಬೇಕು ಎನ್ನುವ ಅರಸು ಅವರ ಪ್ರಯತ್ನಗಳು ಫಲ ನೀಡಲಿಲ್ಲ ಎನ್ನುವುದು ತಿಳಿಯುತ್ತದೆ. ಉಳ್ಳವರು ಮತ್ತು ಇಲ್ಲದಿರುವವರು ಎಲ್ಲರಲ್ಲಿಯೂ ಜನಪ್ರಿಯತೆಯನ್ನು ಗಳಿಸಲು ಅರಸು ಅವರ ಕೆಲವು ಕ್ರಿಯೆಗಳನ್ನು ಈಗ ನಾವು ಅವಲೋಕಿಸೋಣ.

ರಾಜ್ಯದ ಹೆಸರಿನ ಬದಲಾವಣೆ

ಅಧಿಕಾರಕ್ಕೆ ಬಂದ ನಂತರ ಅರಸು ಅವರು ಮಾಡಿದ ಮೊದಲ ಕೆಲಸಗಳಲ್ಲೊಂದು ಎಂದರೆ ರಾಜ್ಯದ ಹೆಸರನ್ನು ಮೈಸೂರಿನಿಂದ ಕರ್ನಾಟಕಕ್ಕೆ ಬದಲಿಸಿದರು. ಇದು 1956ರಲ್ಲಿ ಕನ್ನಡ ಮಾತನಾಡುವ ಪ್ರದೇಶಗಳನ್ನೆಲ್ಲ ಒಂದುಗೂಡಿಸಿ ರಾಜ್ಯವಾಗಿಸಿದಾಗಲೆ ಆಗಬಹುದಿತ್ತು. ಈ ಹೊಸರಾಜ್ಯದಲ್ಲಿ ದೇಶಿಸಂಸ್ಥಾನವಾದ ಮೈಸೂರು ಮಾತ್ರವಲ್ಲದೆ ಬ್ರಿಟಿಷರಿಂದ ನೇರವಾಗಿ ಇಲ್ಲವೆ ಹೈದರಾಬಾದಿನ ನಿಜ಼ಾಮಿನಿಂದ ಆಳಲ್ಪಡುತ್ತಿದ್ದ ಉತ್ತರದ ಮತ್ತು ಕರಾವಳಿ ಪ್ರದೇಶಗಳು ಸಹ ಸೇರಿದ್ದವು. 1956ರಲ್ಲಿ ಕರ್ನಾಟಕವೆಂದು ಹೆಸರು ಬದಲಾಯಿಸುವುದು ಎರಡು ಕಾರಣಗಳಿಗೆ ಹೆಚ್ಚು ಅರ್ಥಪೂರ್ಣವಾಗಿರುತ್ತಿತ್ತು. ಹೊಸದಾಗಿ ರೂಪಿಸಿದ ದೊಡ್ಡ ರಾಜ್ಯದ ಬಹುಪಾಲು ಜನರು ದೇಶಿಸಂಸ್ಥಾನವಾದ ಮೈಸೂರಿನ ಹೊರಗೆ ವಾಸಿಸುತ್ತಿದ್ದರು ಮತ್ತು ಅಂತಹ ಬದಲಾವಣೆಯನ್ನು ಬಯಸುತ್ತಿದ್ದರು. ಎರಡನೆಯದಾಗಿ, ಸ್ವತಂತ್ರಪೂರ್ವ ಕಾಲದಲ್ಲಿ ಈ ಎಲ್ಲ ಪ್ರದೇಶಗಳಿಗಿದ್ದ ತನ್ನ ಪ್ರಾದೇಶಿಕ ಸಮಿತಿಯನ್ನು ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ’ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ’ ಎಂದು ಕರೆದಿತ್ತು. ಆದರೆ ವಿಶಾಲ ರಾಜ್ಯದ ಮೊದಲ ಮುಖ್ಯಮಂತ್ರಿಯಾದ ನಿಜಲಿಂಗಪ್ಪನವರು ’ಮೈಸೂರ’ನ್ನೆ ರಾಜ್ಯದ ಹೆಸರನ್ನಾಗಿ ಉಳಿಸಿಕೊಳ್ಳಲು ನಿರ್ಧರಿಸಿದರು. ಇದರಿಂದ ದೇಶಿಸಂಸ್ಥಾನದ ಮೈಸೂರಿಗರಿಗೆ (ಇವರಲ್ಲಿ ಹಲವರು ಏಕೀಕರಣದ ಬಗ್ಗೆ ಹಿಂಜರಿಕೆಯಿದ್ದವರು) ಸಮಾಧಾನವಾಗಬಹುದು ಎನ್ನುವ ಕಾರಣವಿತ್ತು.

ಕಾಂಗ್ರೆಸ್ (ಆರ್)ನ ಪ್ರಭಾವಿ ನಾಯಕರ ಗುಂಪೊಂದು ತಮ್ಮ ಆಯ್ಕೆಯ ಪ್ರಭಾವಿ ನಾಯಕನನ್ನು ಮುಂದಿಟ್ಟರು. ಅವರ ಆಯ್ಕೆಯ ಅಭ್ಯರ್ಥಿ ತಮ್ಮ ಪ್ರಾಮಾಣಿಕತೆ ಮತ್ತು ಪರಿಪೂರ್ಣ ವ್ಯಕ್ತಿತ್ವಕ್ಕೆ ಹೆಸರಾಗಿದ್ದ ಕೆ.ಹೆಚ್. ರಂಗನಾಥ್ ಎಂಬ ಎಲ್ಲರ ಗೌರವಕ್ಕೆ ಪಾತ್ರರಾಗಿದ್ದ ಪರಿಶಿಷ್ಟ ಜಾತಿಯ ನಾಯಕ.

ಇದಕ್ಕೆ ಸಂಪೂರ್ಣವಾಗಿ ವಿರುದ್ಧವಾದ ಕಾರಣಕ್ಕಾಗಿ ಅರಸು ’ಕರ್ನಾಟಕ’ವೆಂದು ನಾಮಕರಣ ಮಾಡಲು ನಿರ್ಧರಿಸಿದರು. ಇದರಿಂದ ಉತ್ತರಕರ್ನಾಟಕದವರಿಗೆ ತಮ್ಮ ಹಿತಾಸಕ್ತಿಗಳು ನಿರ್ಲಕ್ಷ್ಯಗೊಳ್ಳುತ್ತಿಲ್ಲ ಎಂದು ನಂಬಿಕೆ ಬರುವಂತಾಯಿತು. ಅರಸು ಅವರು ದೇಶಿಸಂಸ್ಥಾನವಾದ ಮೈಸೂರಿನಿಂದ ಬಂದವರು, ಮೈಸೂರು ಮಹಾರಾಜರ ಸಮುದಾಯಕ್ಕೆ ಸೇರಿದವರು ಎನ್ನುವುದು ಎಲ್ಲರಿಗೂ ಗೊತ್ತಿತ್ತು ಮತ್ತು ರಾಜ್ಯದ ರಾಜಧಾನಿಯು ದಕ್ಷಿಣದಲ್ಲಿದ್ದ ಬೆಂಗಳೂರಿನಲ್ಲಿತ್ತು. ಹಾಗಾಗಿ ಮೈಸೂರಿನಾಚೆಗಿನ ಬಹುಸಂಖ್ಯಾತರು ತಮ್ಮ ಪ್ರದೇಶಗಳಿಗೆ ಗಮನ ದೊರಕುತ್ತಿಲ್ಲ ಎಂದು ಭಾವಿಸಬಹುದು ಎಂಬ ಆತಂಕ ಅರಸು ಅವರಿಗಿತ್ತು. ಆದುದರಿಂದ ಬಹುತೇಕ ವೀಕ್ಷಕರನ್ನು ಆಶ್ಚರ್ಯಗೊಳಿಸಿದ ಅವರ ನಿರ್ಧಾರವು ಮೇಲ್ನೋಟಕ್ಕೆ ಕಾಸ್ಮೆಟಿಕ್ ಸ್ವರೂಪದ್ದು ಎನಿಸಿದರೂ ಉತ್ತರ ಕರ್ನಾಟಕದ ಜನರ ಆತಂಕಗಳನ್ನು ಕಡಿಮೆಗೊಳಿಸುವ ಉದ್ದೇಶವನ್ನು ಹೊಂದಿತ್ತು.

ಒಡಕಿರುವ ಪಕ್ಷದ ನಾಯಕನಾಗಿ ಸುಧಾರಣೆಗಳನ್ನು ಮಾಡುವುದು

ತಮ್ಮ ವಿವಿಧ ಕಾರ್ಯಕ್ರಮಗಳನ್ನು ಅರಸು ಅವರು ಮುಂದುವರಿಸಲು ಭಾಗಶಃ ಸಾಧ್ಯವಾಗಿದ್ದು ಹೇಗೆಂದರೆ ಸಾಕಷ್ಟು ಚೆನ್ನಾಗಿ ಕೆಲಸಮಾಡುತ್ತಿದ್ದ ಶಕ್ತಿಶಾಲಿ ಆಡಳಿತ ವ್ಯವಸ್ಥೆಯ ಕಾರಣದಿಂದ. ಆದರೆ ಅವರ ಪಕ್ಷವನ್ನು ನಿಭಾಯಿಸುವುದು ಮತ್ತು ಅವರ ವಿನೂತನ ನೀತಿಗಳಿಂದ ಪ್ರಕ್ಷುಬ್ದಗೊಂಡಿದ್ದ ರಾಜ್ಯರಾಜಕಾರಣವನ್ನು ನಿರ್ವಹಿಸುವುದು ಹೆಚ್ಚು ಭಯ ಮೂಡಿಸುವ ವಿಚಾರಗಳಾಗಿದ್ದವು. ಅವರು ಅಧಿಕಾರಕ್ಕೆ ಬಂದಾಗ ಅರಸರು ಮಂತ್ರಿಗಳು, ಶಾಸಕರು ಮತ್ತು ಪಕ್ಷದ ಮೇಲೆ ಅಪಾರ ಹತೋಟಿಯನ್ನು ಹೊಂದಿದ್ದರು. ಅವರ ಮಂತ್ರಿಮಂಡಳದಲ್ಲಿ ಸಿದ್ದವೀರಪ್ಪ ಮತ್ತು ಚೆನ್ನಬಸವಪ್ಪನವರಂತಹ ಕೆಲವು ಹಿರಿಯರು ಮತ್ತು ಕೆ.ಹೆಚ್. ಪಾಟೀಲರಂತಹ ಒಂದಿಬ್ಬರು ಉತ್ಸಾಹಿ ಮಂತ್ರಿಗಳಿದ್ದರು.ಆದರೆ ಉಳಿದವರೆಲ್ಲರೂ ಅನನುಭವಿಗಳು. ಜೊತೆಗೆ ಸ್ವತಃ ಅರಸು ಅವರೆ ರಾಜಕಾರಣದಲ್ಲಿ ಬಹುಮಟ್ಟಿಗೆ ಗಂಭೀರ ಪರೀಕ್ಷೆಗಳನ್ನು ಎದುರಿಸಿರಲಿಲ್ಲ. ಏಕೆಂದರೆ ಅವರು 1970ಕ್ಕೆ ಮೊದಲು ಅಂತಹ ಮುಖ್ಯ ಹುದ್ದೆಗಳನ್ನು ಪಡೆದಿರಲಿಲ್ಲ.

ಆದರೆ ಈಗ ಅರಸು ಅವರು ಪದೆಪದೆ ಪಕ್ಷದೊಳಗೆ ಘರ್ಷಣೆಗಳು ಮತ್ತು ಬಿಕ್ಕಟ್ಟುಗಳನ್ನು ಎದುರಿಸಬೇಕಾಯಿತು. ಅವರು ಕೂಡಲೆ ಇವುಗಳನ್ನು ನಿರ್ವಹಿಸಬಲ್ಲ ಶಕ್ತಿಯನ್ನು ತೋರಿಸಿದರು. ಕುಶಲ ತಂತ್ರಗಾರನಾಗಿ ಕಂಡುಬಂದರು. ಮತ್ತೆ ಕೆಲವು ರೀತಿಗಳಲ್ಲಿ ಅದೃಷ್ಟಶಾಲಿಯೂ ಆಗಿದ್ದರು. ಉದಾಹರಣೆಗೆ ಕರ್ನಾಟಕದಲ್ಲಿ ಬಿಕ್ಕಟ್ಟುಗಳು ತಲೆದೋರಿದಾಗ, ಶ್ರೀಮತಿ ಗಾಂಧಿಯವರು ರಾಷ್ಟ್ರಮಟ್ಟದಲ್ಲಿ ಮತ್ತಷ್ಟು ಗಂಭೀರವಾದ ಪರೀಕ್ಷೆಗಳನ್ನು ಎದುರಿಸುತ್ತಿದ್ದರು. ಹಾಗಾಗಿ ಅವರು ಇತರ ರಾಜ್ಯಗಳಲ್ಲಿ ತನ್ನ ರಾಜ್ಯಮಟ್ಟದ ನಾಯಕರನ್ನು ಒಳಗಿನಿಂದಲೇ ದುರ್ಬಲಗೊಳಿಸಿದಂತೆ ಅರಸು ಅವರಿಗೆ ಮಾಡಲಿಲ್ಲ.

ಅಧಿಕಾರಕ್ಕೆ ಬಂದ ಕೆಲವೆ ತಿಂಗಳುಗಳಲ್ಲಿ ಅರಸು ತಮ್ಮ ಮೊದಲ ಗಂಭೀರವಾದ ವಿವಾದವನ್ನು ಎದುರಿಸಿದರು. ತಮ್ಮ ಮುಖ್ಯಮಂತ್ರಿ ಸ್ಥಾನ ಮತ್ತು ಕಾಂಗ್ರೆಸ್ (ಆರ್) ಪಕ್ಷದ ರಾಜ್ಯಘಟಕಗಳೆರಡನ್ನೂ ಅಲಂಕರಿಸದಂತೆ ದೆಹಲಿಯಿಂದ ಅವರಿಗೆ ಸೂಚನೆ ಬಂದಿತು. ಪಕ್ಷದ ಅಧ್ಯಕ್ಷಸ್ಥಾನಕ್ಕೆ ಉತ್ತರಾಧಿಕಾರಿಯನ್ನು ಹುಡುಕುವುದು ಅಷ್ಟು ಸುಲಭವಾಗಿರಲಿಲ್ಲ. ಬೇರೆ ಯಾವುದೆ ಮುಖ್ಯಮಂತ್ರಿಯಂತೆ, ಅರಸು ಅವರು ಸಹ ತಮ್ಮ ಮಾತನ್ನು ಕೇಳುವ ಇಲ್ಲವೆ ಮಿತವಾದಿಯಾದ ವ್ಯಕ್ತಿಯೊಬ್ಬನನ್ನು ಆರಿಸಲು ಬಯಸಿದ್ದರು. ಇದರಿಂದ ಸರ್ಕಾರವನ್ನು ಚಲಾಯಿಸುತ್ತ ಪಕ್ಷದ ಮೇಲೆ ಸಹ ನಿಯಂತ್ರಣವನ್ನು ಸಾಧಿಸಬಹುದು ಎನ್ನುವುದು ಅವರ ತರ್ಕವಾಗಿತ್ತು. ಆದರೆ ಕಾಂಗ್ರೆಸ್ (ಆರ್)ನ ಪ್ರಭಾವಿ ನಾಯಕರ ಗುಂಪೊಂದು ತಮ್ಮ ಆಯ್ಕೆಯ ಪ್ರಭಾವಿ ನಾಯಕನನ್ನು ಮುಂದಿಟ್ಟರು. ಅವರ ಆಯ್ಕೆಯ ಅಭ್ಯರ್ಥಿ ತಮ್ಮ ಪ್ರಾಮಾಣಿಕತೆ ಮತ್ತು ಪರಿಪೂರ್ಣ ವ್ಯಕ್ತಿತ್ವಕ್ಕೆ ಹೆಸರಾಗಿದ್ದ ಕೆ.ಹೆಚ್. ರಂಗನಾಥ್ ಎಂಬ ಎಲ್ಲರ ಗೌರವಕ್ಕೆ ಪಾತ್ರರಾಗಿದ್ದ ಪರಿಶಿಷ್ಟ ಜಾತಿಯ ನಾಯಕ. ಅವರನ್ನು ಬೆಂಬಲಿಸಿದವರು ಹಿಂದೆ ರಂಗನಾಥ ಅವರೂ ಕೂಡ ಭಾಗವಾಗಿದ್ದ ಹಿಂದೆ ಪ್ರಜಾ ಸೋಶಿಯಲಿಸ್ಟ್ ಪಕ್ಷಕ್ಕೆ ಸೇರಿದವರು. ಅರಸು ಅವರಿಗೆ ವೈಯಕ್ತಿಕವಾಗಿ ಅಥವಾ ಜಾತಿಕಾರಣದಿಂದಲೂ ರಂಗನಾಥ ಅವರ ವಿರುದ್ಧ ಏನೂ ಇರಲಿಲ್ಲ. ಆದರೆ ಪಕ್ಷದ ಒಂದು ಬಣದ ಒತ್ತಡಕ್ಕೆ ಮಣಿಯುವುದು ದೌರ್ಬಲ್ಯದ ಸಂಕೇತವಾಗಿ ಕಂಡುಬರುತ್ತಿತ್ತು. ಹಾಗಾಗಿ ಪಕ್ಷದ ಮೇಲೆ ತನ್ನ ನಿಯಂತ್ರಣವನ್ನು ಉಳಿಸಿಕೊಳ್ಳಲು ಅವರು ತಮ್ಮದೆ ಆದ ತಂತ್ರಗಳನ್ನು ರೂಪಿಸಿದರು.

ಚುನಾವಣೆಯಿಂದ ಹಿಂದೆ ಸರಿಯುವಂತೆ ರಂಗನಾಥರ ಮೇಲೆ ಅರಸು ಒತ್ತಡ ಹಾಕಿದರು. ಕಡೆಯ ನಿಮಿಷದ ತನಕ ರಂಗನಾಥ್ ದೃಢವಾಗಿ ನಿಂತರೂ, ಕಡೆಗೆ ಸ್ಥೈರ್ಯ ಕಳೆದುಕೊಂಡು, ತಮ್ಮ ಅಭ್ಯರ್ಥಿತನವನ್ನು ವಾಪಸು ಪಡೆದರು. ಪಕ್ಷದ ರಾಜ್ಯಘಟಕದ ಅಧ್ಯಕ್ಷ ಸ್ಥಾನವನ್ನು ಸ್ವೀಕರಿಸಲೆಂದು ಈಗಾಗಲೆ ಮಂತ್ರಿಮಂಡಳಕ್ಕೆ ರಾಜೀನಾಮೆ ನೀಡಿದ್ದ ಮತ್ತು ಮುಖ್ಯಮಂತ್ರಿಗಳ ಆಯ್ಕೆಯೂ ಆಗಿದ್ದ ಕೆ. ಹೆಚ್. ಪಾಟೀಲರನ್ನು ಅಧ್ಯಕ್ಷರನ್ನಾಗಿಸಲಾಯಿತು. ಅದೊಂದು ಕಳಂಕದ ವಿಜಯವಾಗಿತ್ತು. ಯಾಕೆಂದರೆ ಅರಸರ ಬೆಂಬಲಿಗರು ಹಣ ಮತ್ತು ಭುಜಬಲವನ್ನು ಬಳಸಿದರು ಎಂಬ ಆರೋಪಗಳು ಕೇಳಿಬಂದವು. ವಾಸ್ತವದಲ್ಲಿ ಅವರ ಹತ್ತಿರದ ನಂಬಿಕಸ್ಥರೊಬ್ಬರು ನೋಟುಗಳು ತುಂಬಿದ್ದ ಬ್ರೀಫ಼್‌ಕೇಸ್ ಒಂದನ್ನು ಹೊಸ ಅಧ್ಯಕ್ಷರನ್ನು ಆಯ್ಕೆ ಮಾಡಲು ನಡೆಸಲಾಗುತ್ತಿದ್ದ, ತುಂಬ ಪ್ರಕ್ಷುಬ್ದವಾಗಿಬಿಟ್ಟ ಸಭೆಯೊಂದಕ್ಕೆ ತಂದಿದ್ದರು. ಇದು ತಿಳಿದದ್ದು ಸಭೆಯಲ್ಲಿ ಗಲಭೆಯಾಗಿ, ನಂತರ ಯಾರೋ ಅವರಿಂದ ಬ್ರೀಫ಼್‌ಕೇಸನ್ನು ಕಸಿದುಕೊಂಡಾಗಲೇ. ಇದರ ನಡುವೆಯೂ ಅರಸು ವಿಜಯಿಯಾದರು ಮತ್ತು ಕೆಲವು ಕಾಲ ಪಕ್ಷದ ವ್ಯವಹಾರಗಳು ಸುಧಾರಿಸಿದಂತೆ ಕಂಡುಬಂದಿತು.

ತಮ್ಮ ಅವರು ಪ್ರಭಾವ ಉಳಿಸಿಕೊಳ್ಳಲು ಕರ್ನಾಟಕದಲ್ಲಿ ಇದುವರೆಗೆ ಕಂಡುಬರದ ಮಟ್ಟದ ತಂತ್ರಗಾರಿಕೆಯನ್ನು ನಡೆಸಬೇಕಾಗುತ್ತದೆ ಎಂದು ಅರಸು ಅವರು ನಂಬಿದ್ದರು. ಅವರ ಮಹತ್ವಾಕಾಂಕ್ಷಿ ನೀತಿಗಳ ಮೂಲಕ ಪಕ್ಷದ ಸಾಮಾಜಿಕ ತಳಹದಿಯನ್ನು ವಿಸ್ತರಿಸಬೇಕೆಂದರೆ ಅದು ಅಗತ್ಯವೂ ಆಗಿತ್ತು. ಅರಸು ಅವರು ಒಬ್ಬ ಮಂತ್ರಿಯನ್ನು ಮತ್ತೊಬ್ಬರ ವಿರುದ್ದ ಮತ್ತು ಶಾಸಕರ ಗುಂಪುಗಳನ್ನು ನಿರ್ದಿಷ್ಟ ಮಂತ್ರಿಗಳ ವಿರುದ್ಧ ಎತ್ತಿಕಟ್ಟಿದರು. ಜೊತೆಗೆ ಎಚ್ಚರಿಕೆಯಿಂದ ಆಯ್ಕೆಮಾಡಿದ ಶಾಸಕರಿಗೆ ಹೆಚ್ಚಿನ ಒಲವನ್ನು ತೋರಿಸಿದರು.

ಸ್ವಲ್ಪ ಸಮಯ ಹಿಡಿದರೂ ಸಹ ಸಿದ್ದವೀರಪ್ಪ ಮತ್ತು ಅವರ ಬೆಂಬಲಿಗರನ್ನು ಅರಸು ತಟಸ್ಥಗೊಳಿಸಿದರು. ಅಧಿಕಾರಕ್ಕೆ ಬಂದ ಮೂರನೆಯ ವರ್ಷದ ಹೊತ್ತಿಗೆ ಅವರಿಗೆ ಸಣ್ಣ ಖಾತೆಗೆ ವರ್ಗಾಯಿಸಿದರು. ಇದನ್ನು ಸಾಧಿಸಲು, ಅವರು ಯುವಕಾಂಗ್ರೆಸ್ ಕಾರ್ಯಕರ್ತರನ್ನು ಬಳಸಿ, ಸಿದ್ದವೀರಪ್ಪ ಮತ್ತು ಚೆನ್ನಬಸಪ್ಪ (ಇವರೂ ಲಿಂಗಾಯತರು) ಸೇರಿದಂತೆ ಸಂಪ್ರದಾಯವಾದಿ ನಾಯಕರುಗಳ ಮೇಲೆ ಆಕ್ರಮಣ ಮಾಡಿಸಿದರು. ಚೆನ್ನಬಸಪ್ಪನವರು ಅಧಿಕಾರವನ್ನು ದುರುಪಯೋಗ ಮಾಡಿಕೊಂಡ ಬಗ್ಗೆ ವಿವರಗಳನ್ನು ಪ್ರತಿಪಕ್ಷದ ಸದಸ್ಯರಿಗೆ ನೀಡಿ, ಅವರ ಮೂಲಕ ಚೆನ್ನಬಸಪ್ಪನವರನ್ನು ಮುಜುಗರಕ್ಕೊಳಪಡಿಸುವ ಕೆಲಸವನ್ನೂ ಅರಸು ಮಾಡಿದರು.

ಆದರೆ ಮತ್ತೊಂದು ಸಮಸ್ಯೆ ಪರಿಹರಿಸಲಾಗದ ಸಮಸ್ಯೆ ಉದ್ಭವವಾಯಿತು. ಅರಸು ಅವರು ರಾಜ್ಯ ಕಾಂಗ್ರೆಸ್ (ಆರ್) ಘಟಕಕ್ಕೆ ಅಧ್ಯಕ್ಷರಾಗಿ ಆರಿಸಿದ್ದ ಕೆ.ಹೆಚ್. ಪಾಟೀಲರು ಎಲ್ಲರೂ ನಿರೀಕ್ಷಿಸಿದಂತೆ ಹೌದಪ್ಪನಾಗಲಿಲ್ಲ. ಅವರು ತಮ್ಮ ಜವಾಬ್ದಾರಿಯನ್ನು ಗಂಭೀರವಾಗಿ ಪರಿಗಣಿಸಿದರು. ರಾಜ್ಯ ಸರ್ಕಾರವು ತನ್ನ ಚುನಾವಣಾ ಭರವಸೆಗಳನ್ನು ಪೂರೈಸುವಂತೆ ಎಚ್ಚರ ವಹಿಸುವುದು ಪಕ್ಷದ ಹೊಣೆಗಾರಿಕೆಯೆಂದು ಪಾಟೀಲರು ಭಾವಿಸಿದರು. ಆಗಾಗ ಮಂತ್ರಿಗಳಿಗೆ ಪತ್ರ ಬರೆದು, ತಮಗೆ ಕಂಡ ದೋಷಗಳ ಬಗ್ಗೆ ಗಮನ ಸೆಳೆದರು. ಈ ಕ್ರಮವು ಅರಸರಿಗೆ ಹಿಡಿಸಲಿಲ್ಲ. ಪಾಟೀಲರ ಮಧ್ಯಪ್ರವೇಶಗಳಿಂದ ಪಕ್ಷವು ಸರ್ಕಾರದೊಡನೆ ಸಂಘರ್ಷದಲ್ಲಿದೆ ಮತ್ತು ಪಕ್ಷವು ವಿರೋಧಪಕ್ಷಗಳಂತೆ ನಡೆದುಕೊಳ್ಳುತ್ತಿದೆ ಎನಿಸತೊಡಗಿತು. ಅರಸು ಮತ್ತು ಪಾಟೀಲರು ಮಾಧ್ಯಮಗಳಿಗೆ ಪಕ್ಷದ ಬಣಗಳ ಸಂಘರ್ಷದ ಕಥೆಗಳನ್ನು ಒದಗಿಸುತ್ತ, ಒಬ್ಬರ ಮೇಲೊಬ್ಬರು ಮೇಲಾಟ ಪ್ರಾರಂಭಿಸಿದರು. ಅವರಿಬ್ಬರೂ ಸಾರ್ವಜನಿಕವಾಗಿ ಸರ್ಕಾರದ ನೀತಿಗಳ ಬಗ್ಗೆ ಭಿನ್ನಾಭಿಪ್ರಾಯವನ್ನು ವ್ಯಕ್ತಪಡಿಸದಿದ್ದರೂ (ನಾವು ಇದನ್ನು ಹೇಳುತ್ತಿರುವುದು ಏಕೆ ಎಂದರೆ ಅವರಿಬ್ಬರೂ ಪಕ್ಷದ ಕಾರ್ಯಕ್ರಮಗಳು ಮತ್ತು ನೀತಿಗಳ ಬಗ್ಗೆ ಮಾತನಾಡುತ್ತಿದ್ದರು) ಪಾಟೀಲರು ಪ್ರಭಾವಿ ಜಾತಿಗಳ ಜೊತೆಗೆ ಮತ್ತು ಅರಸು ಅವರು ಹಿಂದುಳಿದ ವರ್ಗಗಳ ಜೊತೆಗೆ ಗುರುತಿಸಲ್ಪಟ್ಟರು. ಇದರ ಪರಿಣಾಮವಾಗಿ, ಕಾಂಗ್ರೆಸ್ (ಆರ್) ಬಣಗಳಾಗಿ ವಿಭಜಿತಗೊಂಡಿತು ಮತ್ತು ಹಾಗೆಯೆ ಸಾರ್ವಜನಿಕವಾಗಿ ಕಾಣಿಸಿಕೊಂಡಿತು.

ಅರಸು ಮತ್ತು ಪಾಟೀಲರ ನಡುವಣ ಸಂಘರ್ಷ ಕೆಲವೊಮ್ಮೆ ಹಾಸ್ಯಮಯವಾಗಿಯೂ ಕಂಡುಬಂದಿತು. ಉದಾಹರಣೆಗೆ, ಹಾವನೂರು ನೇತೃತ್ವದ ಹಿಂದುಳಿದ ವರ್ಗಗಳ ಆಯೋಗವು ತನ್ನ ಅಂತಿಮ ವರದಿಯ ಕರಡನ್ನು ಸದಸ್ಯರುಗಳಿಗೆ ನೀಡಿದಾಗ, ಅವರಲ್ಲೊಬ್ಬರು ಪಾಟೀಲರಿಗೆ ಪ್ರತಿಯೊಂದನ್ನು ನೀಡಿದರು. ಪಾಟೀಲರು ಅವಸರದಲ್ಲಿ ಸಣ್ಣ ಸಮಿತಿಯೊಂದನ್ನು ರಚಿಸಿ, ಅದಕ್ಕೆ ತನ್ನ ಶಿಫ಼ಾರಸುಗಳನ್ನು ನೀಡುವಂತೆ ತಿಳಿಸಿದರು. ಬಹುಶಃ ನಾವು ಇದನ್ನು ಶಿಫ಼ಾರಸುಗಳನ್ನು ಮಾಡುವಂತೆ ನಟಿಸಬೇಕೆಂದು ತಿಳಿಸಿದರು ಎನ್ನಬೇಕು. ಆ ಸಮಿತಿಯು ಕಡೆಗೆ ಮಾಡಿದ್ದೇನೆಂದರೆ ಹಾವನೂರು ಆಯೋಗದ ಕರಡು ಶಿಫ಼ಾರಸುಗಳನ್ನು ನಕಲುಮಾಡಿತು. ಅರಸು ಅವರು ಹಾವನೂರರ ಶಿಫ಼ಾರಸುಗಳನ್ನು ಒಪ್ಪುವರು ಎಂದು ಪಾಟೀಲರು ನಂಬಿದ್ದರು. ಹಾಗಾಗಿ ಅರಸು ನೇತೃತ್ವದ ಸರ್ಕಾರವು ತನ್ನ ನಾಯಕತ್ವದ ಪಕ್ಷದ ಸೂಚನೆಯಂತೆ ನಡೆದುಕೊಳ್ಳುತ್ತಿದೆ ಎನ್ನುವ ಭಾವನೆ ಸೃಷ್ಟಿಸಲು ಪ್ರಯತ್ನಿಸಿದರು. ಆದರೆ ಅವರ ತಂತ್ರಗಳು ಎಷ್ಟು ಪಾರದರ್ಶಕವಾಗಿದ್ದವು ಎಂದರೆ ಸಾರ್ವಜನಿಕರು ಇದನ್ನು ಅರಸು ಅವರಿಂದ ಶ್ರೇಯಸ್ಸನ್ನು ಕಸಿದುಕೊಳ್ಳಲು ಮಾಡಿದ ಕಚ್ಚಾಯತ್ನ ಎಂದು ಭಾವಿಸಿದರು.

ಇದಾವುದೂ ಅರಸು ನಾಯಕತ್ವಕ್ಕೆ ನಿಜವಾದ ಸವಾಲನ್ನು ಒಡ್ಡಲಿಲ್ಲ. ತಮ್ಮ ಪ್ರಾಮುಖ್ಯತೆಯನ್ನು ಉಳಿಸಿಕೊಳ್ಳಲು ಅರಸು ಬುದ್ಧಿವಂತಿಕೆಯಿಂದ ಅಧಿಕಾರವನ್ನು ಹಂಚಿದರು. ತಮ್ಮ ಬೆಂಬಲಿಗರನ್ನು ಖುಷಿಯಾಗಿಡಲು ಅವರು ಸುಮಾರು 80 ಶಾಸನಬದ್ಧ ಸಂಸ್ಥಗಳು ಮತ್ತು ಮಂಡಳಿಗಳನ್ನು ಸೃಷ್ಟಿಸಿದರು ಮತ್ತು ತಮಗೆ ನಿಷ್ಠರಾಗಿದ್ದವರನ್ನು ಇವುಗಳಿಗೆ ನೇಮಿಸಿದರು. ಈ ಸಂಸ್ಥೆಗಳು ಸರಿಯಾಗಿ ಕಾರ್ಯನಿರ್ವಹಿಸಲು ಸಾಧ್ಯವಾಗುವಂತೆ ಅವುಗಳ ನಿಯಂತ್ರಣವನ್ನು ಅಧಿಕಾರಿಗಳ ಬಳಿಯೇ ಉಳಿಸಿದರು. ಈ ಸಂಸ್ಥೆಗಳಿಗೆ ನೇಮಕಗೊಂಡ ನಾಯಕರಿಗೆ ಸಂಬಳ, ಕಾರು, ಮನೆ ಮತ್ತು ಪ್ರಯಾಣಭತ್ಯೆಗಳಂತಹ ಸೌಕರ್ಯಗಳು ದೊರಕುತ್ತಿದ್ದವು. ಇದರ ಜೊತೆಗೆ ಸಣ್ಣಪ್ರಮಾಣದಲ್ಲಿ ತಮ್ಮ ಕಕ್ಷಿದಾರರಿಗೆ ಈ ಸಂಸ್ಥೆಗಳ ಮೂಲಕ ಸಹಾಯಮಾಡಲು ಅವರಿಗೆ ಸಾಧ್ಯವಿತ್ತು. ಇದರ ಮೂಲಕ ಲಾಭ ಪಡೆದ ಪಕ್ಷದ ಕಾರ್ಯಕರ್ತರು (ಅವರಲ್ಲಿ ಕೆಲವರು ಯಾವುದೆ ಚುನಾಯಿತ ಅಧಿಕಾರವನ್ನು ಹೊಂದಿಲ್ಲದಿದ್ದವರು) ಅರಸು ಅವರಿಗೆ ವಿರೋಧಿಗಳ ಜೊತೆಗಿನ ಸಂಘರ್ಷಗಳಲ್ಲಿ ಬೆಂಬಲ ಒದಗಿಸಿದರು.

ಅರಸು ಅವರು ತಮ್ಮ ಶಾಸಕರ ಇತರೆ ಹಿತಾಸಕ್ತಿಗಳನ್ನು ಎಚ್ಚರಿಕೆಯಿಂದ ನೋಡಿಕೊಂಡರು. ಕೆಲವು ಆಯ್ದ ಶಾಸಕರಿಗೆ ನಿಯಮಿತವಾಗಿ ತಿಂಗಳ ಪಾವತಿಯನ್ನು ಮಾಡಲಾರಂಭಿಸಿದರು. ತಮ್ಮ ನಿಯಂತ್ರಣದಲ್ಲಿ ಸಂಪೂರ್ಣವಾಗಿ ಇರದಿದ್ದ ಪಕ್ಷಕ್ಕೂ ಹಣ ಹರಿಯುತ್ತಿರುವಂತೆ ಅವರು ನೋಡಿಕೊಂಡರು. ಜೊತೆಗೆ ಅರಸು ಅವರ ಕೃಪೆಯಲ್ಲಿದ್ದ ಮತ್ತು ಅಬಕಾರಿ ಅಥವಾ ಸಾರ್ವಜನಿಕ ಕಾಮಗಾರಿ (ಎರಡೂ ಇಲಾಖೆಗಳು ದೊಡ್ಡಪ್ರಮಾಣದಲ್ಲಿ ಅಕ್ರಮನಿಧಿಯನ್ನು ಕೊಡುತ್ತಿದ್ದವು) ಇಲಾಖೆಗಳ ಹಿರಿಯ ಅಧಿಕಾರಿಗಳು ತಮ್ಮ ಜಿಲ್ಲೆಯ ಶಾಸಕರಿಗೆ ಹಣವನ್ನು ಕೊಡುತ್ತಿದ್ದರು. ತಮ್ಮ ಅಧಿಕಾರವನ್ನು ದುರುಪಯೋಗ ಮಾಡುವುದನ್ನು ಮತ್ತು ಭ್ರಷ್ಟತೆಯನ್ನು ಈ ಅಧಿಕಾರಿಗಳು ಒಂದು ಮಿತಿಯೊಳಗೆ ಇಟ್ಟುಕೊಂಡರೆ, ಅವರಿಗೆ ಅರಸು ಅವರ ರಕ್ಷಣೆಯೂ ದೊರಕುತ್ತಿತ್ತು. ಈ `ಶ್ರೀಮಂತ’ ಇಲಾಖೆಗಳ ಮೇಲೆ ಬಿಗಿ ನಿಯಂತ್ರಣ ಉಳಿಸಿಕೊಳ್ಳಬೇಕೆಂದು ಅರಸು ಅವರು ಅವುಗಳನ್ನು ತಮ್ಮ ಕೈಯಲ್ಲಿಯೇ ಇಟ್ಟುಕೊಂಡಿದ್ದರು. ಈ ಇಲಾಖೆಗಳಲ್ಲಿ ದೊಡ್ಡನೀರಾವರಿ ಮತ್ತು ಅಬಕಾರಿ ಇಲಾಖೆಗಳು ಇದ್ದವು. ಕೆಲವು ಸಂದರ್ಭಗಳಲ್ಲಿ ಈ ಇಲಾಖೆಗಳು ಮತ್ತೊಬ್ಬ ಮಂತ್ರಿಯ ಹತೋಟಿಯಲ್ಲಿ ಹೆಸರಿನಲ್ಲಿದ್ದರೂ, ಯಾವುದೆ ಪ್ರಸ್ತಾಪಗಳನ್ನು ಆ ಮಂತ್ರಿಯೇ ಅನುಮೋದಿಸುವಂತಿರಲಿಲ್ಲ. ಮುಖ್ಯಮಂತ್ರಿಗಳಿಗೆ ಅನೌಪಚಾರಿಕವಾಗಿ ಅದನ್ನು ಕಳುಹಿಸಬೇಕಿತ್ತು.

ಅರಸು ಒಮ್ಮೆ ಖಾಸಗಿಯಾಗಿ ಭ್ರಷ್ಟಾಚಾರದ ವಿಷಯದ ಬಗ್ಗೆ ರಾಘವನ್ ಅವರಿಗೆ ಹೀಗೆ ಹೇಳಿದರು:

“ನಾನು ಭ್ರಷ್ಟತೆಯನ್ನು ಸಂಸ್ಥೀಕರಿಸಿದೆ ಎಂಬ ಆರೋಪವಿದೆ. ಅದು ಸತ್ಯವಲ್ಲ. ನಾನು ಅಧಿಕಾರಕ್ಕೆ ಬರುವ ಬಹಳ ಮೊದಲೆ ಭ್ರಷ್ಟಾಚಾರವು ಸಂಸ್ಥೀಕರಣಗೊಂಡಿತ್ತು. ಕೆಲವು ಅಧಿಕಾರಿಗಳಿಗೆ ಶಾಸಕರಿಗೆ ನಿಯಮಿತವಾಗಿ ಹಣವನ್ನು ನೀಡುವಂತೆ ನಾನು ಸೂಚಿಸಿದೆ ಎನ್ನುವುದನ್ನು ನಾನು ಒಪ್ಪುತ್ತೇನೆ. ಹೀಗೆ ಈ ಅಧಿಕಾರಿಗಳಿಗೆ ನನ್ನ ಪಕ್ಷದವರಿಗೆ ಹಣನೀಡಲು ಹೇಳದಿದ್ದರೂ ಅವರು ಭ್ರಷ್ಟರಾಗಿಯೆ ಉಳಿಯುತ್ತಿದ್ದರು. ಆಗ ಅವರು ಪಡೆಯುತ್ತಿದ್ದ ಲಂಚಗಳು ಅವರ ಸ್ವಂತದ ಖಜಾನೆಗೆ ಹೋಗುತ್ತಿತ್ತು. ಅದರ ಒಂದು ಭಾಗವನ್ನು ಶಾಸಕರಿಗೆ ಮತ್ತು ಪಕ್ಷದ ಕಾರ್ಯಕರ್ತರಿಗೆ ತಲುಪವಂತೆ ನಾನು ಮಾಡಿದೆ. ನಿಮಗೆ ಈ ವಿವರಣೆಯು ತರ್ಕರಹಿತವಾದುದು ಎನಿಸಬಹುದು. ನನಗೆ ಭ್ರಷ್ಟತೆಯನ್ನು ತೊಡೆಯಲು ಸಾಧ್ಯವಾಗಲಿಲ್ಲ. ಅಧಿಕಾರಿಗಳಿಗೆ ತಮ್ಮ ಸ್ವಂತಕ್ಕೆ ಹಣ ಮಾಡಿಕೊಳ್ಳುವುದನ್ನು ತಪ್ಪಿಸಿ, ನಾನು ನನ್ನ ಬೆಂಬಲಿಗರಿಗೆ ಒಂದು ಭಾಗ ಸಿಗುವಂತೆ ಮಾಡಿದೆ. ಅದು ತಪ್ಪು ಎಂದು ನನಗೆ ಗೊತ್ತು. ಆದರೆ ಬೇರೆ ಹಿತಾಸಕ್ತಿಗಳಿದ್ದ ರಾಜಕಾರಣಿಗಳ ವಿರುದ್ಧದ ನನ್ನ ಹೋರಾಟದಲ್ಲಿ ನನಗೆ ಬೇರೆ ಆಯ್ಕೆಗಳಿರಲಿಲ್ಲ. ನಾನು ಹೆಚ್ಚಿನ ಸಂಖ್ಯೆಯಲ್ಲಿ ಶಾಸಕರನ್ನು ನನ್ನೊಡನೆ ಇಟ್ಟುಕೊಳ್ಳಬೇಕಿತ್ತು. ಆದರೆ ಅವರಾರು ಪರೋಪಕಾರಕ್ಕಾಗಿ ಅಥವಾ ಸೈದ್ಧಾಂತಿಕ ಕಾರಣಗಳಿಂದ ನನ್ನ ಜೊತೆಗಿರುತ್ತಿರಲಿಲ್ಲ.”

ಅರಸು ಅವರ ಅಧಿಕಾರಾವಧಿಯ ಮೊದಲ ಮೂರು ವರ್ಷಗಳಲ್ಲಿ ಪಕ್ಷದೊಡನೆ ಅವರಿಗಿದ್ದ ಸಮಸ್ಯೆಗಳು ಬಸವಲಿಂಗಪ್ಪನವರಿಂದ ಮತ್ತಷ್ಟು ಹೆಚ್ಚಿದವು. ನಿಜಲಿಂಗಪ್ಪನವರ ಮಂತ್ರಿಮಂಡಳದಲ್ಲಿ ಕಿರಿಯ ಮಂತ್ರಿಯಾಗಿ ಸ್ವಲ್ಪಕಾಲ ಮಾತ್ರ ಕೆಲಸ ಮಾಡಿದ್ದ ಬಸವಲಿಂಗಪ್ಪನವರು ಅರಸು ಅವರ ಕಾಲಾವಧಿಯಲ್ಲಿ ಪರಿಶಿಷ್ಟ ಜಾತಿಗಳಿಗೆ ಸರ್ಕಾರದ ಮುಖ್ಯವಕ್ತಾರನಾಗುವಂತೆ ತಮ್ಮನ್ನು ತಾವು ಆಕ್ರಮಕವಾಗಿ ಬದಲಿಸಿಕೊಂಡರು. ಅವರು ಹೆಚ್ಚಾಗಿ ಪರಿಶಿಷ್ಟ ಜಾತಿಗಳ ವಿಷಯಗಳಿಗೆ ಸೀಮಿತ ಮಾಡಿಕೊಂಡರು. ಆದರೆ ಪ್ರಬಲ ಭೂಮಾಲೀಕ ಜಾತಿಗಳ ಮೇಲೆ ಸಾರ್ವಜನಿಕವಾದ ಮೌಖಿಕದಾಳಿಗಳನ್ನು ಮಾಡಿದರು. ಹಲವು ಕಾಲದವರೆಗೆ ಇದು ಅರಸು ಅವರಿಗೂ ಸರಿಹೊಂದುವ ವಿಚಾರವಾಗಿತ್ತು. ಯಾಕೆಂದರೆ ಬಸವಲಿಂಗಪ್ಪನವರು ಅರಸರ ದೃಷ್ಟಿಕೋನವನ್ನೆ ಪ್ರತಿಫಲಿಸುತ್ತಿದ್ದರು. ಹಾಗಾಗಿ ಅರಸು ಅವರೆ ಮಾಡಲಾಗದ ಹಲವು ವಿವಾದಾತ್ಮಕ ಹೇಳಿಕೆಗಳನ್ನು ಅವರು ಮಾಡುತ್ತಿದ್ದರು.

ಅಂತಿಮವಾಗಿ ಬಸವಲಿಂಗಪ್ಪನವರು ಹಿಂದೆ ಬರಲಾಗದಷ್ಟು ಮುಂದೆ ಸರಿದರು. ಉದಾಹರಣೆಗೆ, ಪರಿಶಿಷ್ಟ ಜಾತಿಯರೆಲ್ಲರೂ ದೇವ—ದೇವಿಯರ ಚಿತ್ರಪಟಗಳನ್ನು ಕಸದಬುಟ್ಟಿಗೆ ಎಸೆಯುವಂತೆ ಅವರು ಒಮ್ಮೆ ಸೂಚಿಸಿದರು. ಈ ನಿಲುವು ತಮಿಳುನಾಡಿನ ಅಬ್ರಾಹ್ಮಣ ಚಳುವಳಿಯ ನಾಯಕ ಇ.ವಿ. ರಾಮಸ್ವಾಮಿ ನಾಯ್ಕರ್ ಅವರ ರ್ಯಾಡಿಕಲ್ ವಿಚಾರವಾದ, ಧರ್ಮವಿರೋಧಿ ಚಿಂತನೆಗಳಿಂದ ಪಡೆದದ್ದು. ಅಂತಹ ವಿಚಾರಗಳು ಕರ್ನಾಟಕದಲ್ಲಿ ಹೆಚ್ಚಿನ ಬೆಂಬಲ ಪಡೆದಿರಲಿಲ್ಲ. ದೈವದ ಬಗ್ಗೆ ಯಾವುದೆ ಬಗೆಯ ಆಕ್ರಮಣವನ್ನು ಸಹಿಸದ ಬಹುಸಂಖ್ಯಾತ ಹಿಂದೂಗಳಿಗೆ ಅವರ ಹೇಳಿಕೆಗಳು ಆಘಾತಕಾರಿಯಾಗಿದ್ದವು. ಮಿಗಿಲಾಗಿ ಮಹಾತ್ಮ ಗಾಂಧಿಯವರನ್ನು ಸಹ ಟೀಕಿಸುವ ಮೂಲಕ ಬಸವಲಿಂಗಪ್ಪನವರು ತಮ್ಮ ವಿರುದ್ದದ ಆಕ್ರೋಶವನ್ನು ಹೆಚ್ಚಾಗುವಂತೆ ಮಾಡಿದರು.

ತದನಂತರದಲ್ಲಿ, ಮೈಸೂರಿನ ವಿದ್ಯಾರ್ಥಿಸಭೆಯೊಂದರಲ್ಲಿ ಭಾಷಣಕಾರರೊಬ್ಬರು ಇಂಗ್ಲೀಷಿನಲ್ಲಿ ಮಾತನಾಡಲಾರಂಭಿಸಿದಾಗ, ಕೆಲವು ಸಭಿಕರು ಅವರನ್ನು ಕನ್ನಡದಲ್ಲಿಯೆ ಮಾತನಾಡುವಂತೆ ಒತ್ತಾಯಿಸಿದರು. (ಕನ್ನಡ ಕಾರ್ಯಕರ್ತರು ಪಾಲ್ಗೊಳ್ಳುತ್ತಿದ್ದ ಸಭೆಗಳಲ್ಲಿ ಇದೊಂದು ಸಾಮಾನ್ಯ ಆಚರಣೆಯಾಗಿತ್ತು). ಈ ಬೆಳವಣಿಗೆಯು ಬಸವಲಿಂಗಪ್ಪನವರಿಗೆ ನೇರವಾಗಿ ಮಾತನಾಡುವಂತೆ ಪ್ರೇರೇಪಿಸಿತು. ಗಲಾಟೆ ಮಾಡುತ್ತಿದ್ದ ಸಭಿಕರಿಗೆ ಸಂಕುಚಿತಮತಿಗಳಾಗಬೇಡಿ ಎಂದು ಅವರು ಸಲಹೆ ನೀಡಿದರು. ಇತರೆ ಭಾಷೆ ಮತ್ತು ಸಾಹಿತ್ಯಗಳಿಂದ ವಿಚಾರಗಳನ್ನು ಎರವಲು ಪಡೆದರು ಕನ್ನಡ ಶ್ರೀಮಂತವಾಗುತ್ತದೆ ಎಂದರು. ಅವರ ಮಾತುಗಳು ಈ ಕೆಳಗಿನ ವಾಕ್ಯಗಳನ್ನಾಡುವ ತನಕ ವಿವಾದರಹಿತವಾಗಿಯೆ ಇದ್ದವು: ’ನಾವು ಇತರೆ ಭಾಷೆಗಳಿಂದ ವಿಚಾರಗಳನ್ನು ಎರವಲು ಪಡೆಯದಿದ್ದರೆ ಕನ್ನಡದಲ್ಲಿ ಉಳಿಯುವುದು ಬೂಸಾ.’ ಈ ವಾಕ್ಯವು ಅವರಿಗೆ ಅಪಾರ ಸಮಸ್ಯೆಗಳನ್ನು ತಂದೊದಗಿಸಿತು. ಮರುದಿನ ಕನ್ನಡ ಪತ್ರಿಕೆಯೊಂದು ಅವರ ಹೇಳಿಕೆಯನ್ನು ಮುಖ್ಯವಾಗಿ ವರದಿ ಮಾಡಿ, ಅವರ ಬೂಸಾ ಎಂಬ ಮಾತನ್ನು ಶೀರ್ಷಿಕೆಯಾಗಿಸಿತು. ಇದು ಬೆಂಗಳೂರು ಮತ್ತು ಮೈಸೂರುಗಳಲ್ಲಿ ಚಳುವಳಿಯೊಂದಕ್ಕೆ ದಾರಿ ಮಾಡಿಕೊಟ್ಟಿತು. ಹಲವಾರು ಸಾಹಿತಿಗಳು ಮತ್ತು ಕನ್ನಡಪರ ಸಂಘಟನೆಗಳು ಭಾಗವಹಿಸಿದರು. ಪರಿಶಿಷ್ಟವರ್ಗಗಳ ಸಂಘಟನೆಗಳಿಂದ ಬೆಂಬಲ ದೊರಕಿದರೂ ಸಹ ಈ ಪ್ರಕರಣವು ಮುಜಗರವನ್ನು ಉಂಟುಮಾಡಿತು ಮತ್ತು ಅರಸು ಅವರು ಬಸವಲಿಂಗಪ್ಪನವರಿಗೆ ರಾಜೀನಾಮೆ ನೀಡುವಂತೆ ಕೇಳಿದರು.

ಪಕ್ಷದಲ್ಲಿ ಬಣಗಳು ಹೆಚ್ಚಿದಂತೆ ಮತ್ತು ಇತರೆ ಪ್ರಮುಖ ನಾಯಕರು ಕಾಂಗ್ರೆಸ್ (ಆರ್) ಪಕ್ಷದ ರಾಷ್ಟ್ರೀಯ ನಾಯಕರೊಡನೆ ಹತ್ತಿರದ ಸಂಬಂಧಗಳನ್ನು ಬೆಳಸಿಕೊಂಡಂತೆ, ಪಕ್ಷದೊಳಗಿನ ಆಂತರಿಕ ರಾಜಕಾರಣ ಸಾಕಷ್ಟು ಚಟುವಟಿಕೆಗಳಿಂದ ಕೂಡಿತ್ತು. ಅರಸು ಅವರ ಜಿಲ್ಲೆಯಾದ ಮೈಸೂರಿನಲ್ಲಿ ಅರಸುಪರ ಬಣವು ವಿರೋಧಿಗಳಿಂದ ಗಂಭೀರವಾದ ಸವಾಲನ್ನೆ ಹಲವಾರು ವರ್ಷಗಳಿಂದ ಎದುರಿಸಿತ್ತು. ಕೆಲವು ಬಂಡಾಯಗಾರರು ಅರಸು ಅವರನ್ನು ಖಾಸಗಿಯಾಗಿ ಮೆಚ್ಚಿಕೊಳ್ಳುತ್ತಿದ್ದರು ಮತ್ತು ಅರಸು ಅವರಲ್ಲಿಯೂ ಅಂತಹ ಭಾವನೆಗಳಿದ್ದವು. ಆದರೆ ಜಿಲ್ಲೆಯ ರಾಜಕಾರಣದ ವಿಷಯದಲ್ಲಿ ವಿರೋಧಿಬಣಗಳು ರಾಜಿ ಮಾಡಿಕೊಳ್ಳಲಿಲ್ಲ. ಇದೇ ಪ್ರವೃತ್ತಿ ಇತರೆ ಜಿಲ್ಲೆಗಳಲ್ಲಿಯೂ ಇತ್ತು. ಕಾಂಗ್ರೆಸ್ (ಆರ್) ಪಕ್ಷದ ರಾಜ್ಯಘಟಕದ ಸಭೆಗಳು ವಿವಿಧ ಬಣಗಳಿಗೆ ತಮ್ಮ ವಿರೋಧಿಗಳ ವಿರುದ್ಧ ಮಾತನಾಡಲು ಅವಕಾಶಗಳನ್ನು ಒದಗಿಸಿತು.

ಇಷ್ಟೆಲ್ಲ ಇದ್ದರೂ ಮತ್ತು ಕಾಂಗ್ರೆಸ್ (ಆರ್) ರಾಜ್ಯಾಧ್ಯಕ್ಷರ ವಿರೋಧವಿದ್ದರೂ, ಅರಸು ತಮ್ಮ ಸರ್ಕಾರದ ನಿಯಂತ್ರಣವನ್ನು ಎಂದೂ ಕಳೆದುಕೊಳ್ಳಲಿಲ್ಲ. ಶ್ರೀಮತಿ ಗಾಂಧಿಯವರನ್ನು ಒಲಿಸಿಕೊಳ್ಳುವ ಮೂಲಕ ಮತ್ತು ಬಿಕ್ಕಟ್ಟುಗಳ ಸಮಯದಲ್ಲಿ ಅವರ ಮೇಲೆಯೆ ನಿರ್ಭರರಾಗುವ ಮೂಲಕ ತನ್ನ ಮೇಲಿನ ಸವಾಲುಗಳನ್ನು ಅರಸು ಅವರು ತೊಡೆದುಹಾಕಿದರು. ಇದನ್ನು ಸಾಧಿಸುವಾಗ, ಶ್ರೀಮತಿ ಗಾಂಧಿಯವರ ಪ್ರಗತಿಪರ ರಾಜಕಾರಣದ ಭರವಸೆಗಳನ್ನು ಜಾರಿಗೊಳಿಸುವಲ್ಲಿ ಅವರ ಪ್ರಯತ್ನಗಳೇನು ಎನ್ನುವುದು ಅಷ್ಟು ಮುಖ್ಯವಾಗಲಿಲ್ಲ. ಅರಸು ಅವರಿಗೆ ಶ್ರೀಮತಿ ಗಾಂಧಿಯವರ ಬೆಂಬಲ ದೊರಕಿದ್ದು ಏಕೆಂದರೆ ತಮ್ಮ ನಿಷ್ಠೆಯನ್ನು ಅರಸು ಅವರು ನಿರಂತರವಾಗಿ ಪುನರುಚ್ಚರಿಸಿದ ಕಾರಣದಿಂದ ಮತ್ತು ನಿಯಮಿತವಾಗಿ ದೊಡ್ಡಪ್ರಮಾಣದಲ್ಲಿ ಕಪ್ಪಕಾಣಿಕೆಗಳನ್ನು ನೀಡುತ್ತ ಬಂದಿದ್ದರಿಂದ.

ಒಂದು ಗಂಭೀರ ಸವಾಲು ಎದುರಾಗಿದ್ದು ಒಂದು ಲಿಖಿತದಾಖಲೆಯ ರೂಪದಲ್ಲಿ. ಅರಸು ಅವರ ಪಕ್ಷದ ಸಹೋದ್ಯೋಗಿಗಳು ಶ್ರೀಮತಿ ಗಾಂಧಿಯವರಿಗೆ 1974ರ ಕಡೆಯಲ್ಲಿ ಸಲ್ಲಿಸಲು ಸಿದ್ಧಪಡಿಸಿದ ಈ ದಾಖಲೆಯಲ್ಲಿ ಭ್ರಷ್ಟಾಚಾರ ಮತ್ತು ಸ್ವಜನಪಕ್ಷಪಾತದ 99 ಆಪಾದನೆಗಳಿದ್ದವು. ಅರಸು ಅವರು ಸಾರ್ವಜನಿಕವಾಗಿ ಇದನ್ನು ನಿರ್ಲಕ್ಷಿಸಿದರು. ಆದರೆ ಖಾಸಗಿಯಾಗಿ ಅವರಿಗೆ ಆತಂಕವಿತ್ತು. ಭಿನ್ನಮತೀಯರ ಪೈಕಿ ಪ್ರಭಾವಶಾಲಿಗಳಾಗಿದ್ದವರು ಕೆ.ಹೆಚ್. ಪಾಟೀಲರ ಕಡೆಗೆ ಒಲಿಯುತ್ತಿದ್ದರು. ಅವರುಗಳ ಪೈಕಿ ಹೆಚ್.ಎನ್. ನಂಜೇಗೌಡ, ಸಿದ್ದವೀರಪ್ಪ ಮತ್ತು ಎಸ್.ಎಮ್. ಕೃಷ್ಣ ಇದ್ದರು. 1975ರ ಪ್ರಾರಂಭದ ಹೊತ್ತಿಗೆ ಅವರ ಪ್ರಯತ್ನಗಳು ಒಂದು ಗಂಭೀರ ಅಪಾಯದಂತೆ ಕಾಣತೊಡಗಿತು. ಅರಸು ಅವರು ತಮ್ಮ ಕೆಲವು ಅನುಯಾಯಿಗಳಿಗೆ ತಮ್ಮ ಮುಖ್ಯಮಂತ್ರಿ ಅಧಿಕಾರವಧಿಯ ದಿನಗಳು ಮುಗಿಯುತ್ತಿವೆ ಎಂದು ಖಾಸಗಿಯಾಗಿ ಹೇಳಿದರು. ಆ ವೇಳೆಗೆ ಪಕ್ಷದ ಎಲ್ಲ ನಾಯಕರ ಭವಿಷ್ಯವನ್ನು ನಿರ್ಧರಿಸುವ ಶಕ್ತಿಯಾಗಿ ಬೆಳೆದಿದ್ದ ಶ್ರೀಮತಿ ಗಾಂಧಿಯವರೆ ಇನ್ನೂ ದೊಡ್ಡ ತೊಂದರೆಯಲ್ಲಿ ಸಿಲುಕಿಕೊಂಡುದರಿಂದ ಅರಸು ಅವರು ಉಳಿದುಕೊಂಡರು. ಅಲಹಾಬಾದ್ ಉಚ್ಛನ್ಯಾಯಾಲಯವು ಶ್ರೀಮತಿ ಗಾಂಧಿ ಅವರನ್ನು ಭ್ರಷ್ಟ ಚುನಾವಣಾ ಆಚರಣೆಗಳನ್ನು ನಡೆಸಿದ ಆರೋಪದಲ್ಲಿ ದೋಷಿಯಾಗಿಸಿತು. ತಮ್ಮನ್ನು ಉಳಿಸಿಕೊಳ್ಳಲು 1975ರ ಜೂನ್ 25ರಂದು ಅವರು ತುರ್ತುಪರಿಸ್ಥಿತಿಯನ್ನು ಘೋಷಿಸಿದರು. ಅವರಿಗೆ ಸಂಪೂರ್ಣ ಬೆಂಬಲವನ್ನು ನೀಡುವ ಮೂಲಕ, ಅರಸು ಅವರು ಶ್ರೀಮತಿ ಗಾಂಧಿಯವರ ವಿಶ್ವಾಸವನ್ನು ಉಳಿಸಿಕೊಂಡರು ಮತ್ತು ತಮ್ಮನ್ನು ಸಹ ಕಾಪಾಡಿಕೊಂಡರು.

* ಇ. ರಾಘವನ್ ಅವರು ಹಿರಿಯ ಪತ್ರಕರ್ತರು ಮತ್ತು ಕರ್ನಾಟಕ ಕಂಡ ಅತ್ಯುತ್ತಮ ಸಂಪಾದಕರಲ್ಲೊಬ್ಬರು. ಟೈಮ್ಸ್ ಆಫ಼್ ಇಂಡಿಯಾ ಮತ್ತು ಎಕನಾಮಿಕ್ ಟೈಮ್ಸಗಳ ಸ್ಥಾನಿಕ ಸಂಪಾದಕರಾಗಿ ಮತ್ತು ವಿಜಯಕರ್ನಾಟಕದ ಸಂಪಾದಕರಾಗಿ ಕೆಲಸ ಮಾಡಿದ ಶ್ರೀ ರಾಘವನ್ ಅವರು ಕರ್ನಾಟಕದ ರಾಜಕಾರಣವನ್ನು ಹತ್ತಿರದಿಂದ ನೋಡಿದ್ದರು.

* ಪ್ರೊ. ಜೇಮ್ಸ್ ಮೇನರ್ ಅವರು ಕಳೆದ ಐದು ದಶಕಗಳಿಂದ ಆಧುನಿಕ ಕರ್ನಾಟಕದ ರಾಜಕೀಯ ಮತ್ತು ಸಾಮಾಜಿಕ ಬೆಳವಣಿಗೆಗಳನ್ನು ಗಂಭೀರವಾಗಿ ಅಭ್ಯಸಿಸಿರುವ ರಾಜಕೀಯಶಾಸ್ತ್ರಜ್ಞ. ಪ್ರಸ್ತುತ ಲಂಡನ್ ವಿಶ್ವವಿದ್ಯಾನಿಲಯದ ಸ್ಕೂಲ್ ಆಫ಼್ ಅಡ್ವಾನ್ಸಡ್ ಸ್ಟಡೀಸ್‍ನಲ್ಲಿ ಕಾಮನ್ವೆಲ್ತ್ ಅಧ್ಯಯನದ ಗೌರವ ಪ್ರಾಧ್ಯಾಪಕರು.

ಫ್ರ್ಯಾಂಕ್ ಓ’ಕಾನರ್ ಕನ್ನಡಕ್ಕೆ: ಡಾ.ಬಸು ಬೇವಿನಗಿಡದ

ಪಾಪ ನಿವೇದನೆ

ಜುಲೈ ೨೦೧೮

ಪರಮೇಶ್ವರ ಗುರುಸ್ವಾಮಿ

ದಾಂಪತ್ಯ ಮೀರಿದ ಬೌದ್ಧಿಕ ಸಾಂಗತ್ಯ

ಜುಲೈ ೨೦೧೮

ಪರಮೇಶ್ವರ ಗುರುಸ್ವಾಮಿ

ಟೆಕ್ ಡ್ರೀಮರ್ಸ್ ಓದಲೇಬೇಕಾದ ‘ಹಿಟ್ ರಿಫ್ರೆಶ್’

ಜುಲೈ ೨೦೧೮

ಡಾ.ರಾಕೇಶ್ ಬಟಬ್ಯಾಲ್

ಜೆ.ಎನ್.ಯು ದ ಮೇಕಿಂಗ್ ಆಫ್ ಎ ಯೂನಿವರ್ಸಿಟಿ

ಜೂನ್ ೨೦೧೮

ಎಸ್.ಆರ್.ವಿಜಯಶಂಕರ

ಮೊಗಳ್ಳಿ ಗಣೇಶ್ ಹೊಸ ಕಥಾ ಸಂಕಲನ ದೇವರ ದಾರಿ

ಜೂನ್ ೨೦೧೮

ಮಂಜುನಾಥ ಡಿ.ಎಸ್.

ಅಹಿಂಸಾತ್ಮಕ ಸಂವಹನ

ಜೂನ್ ೨೦೧೮

ಪೃಥ್ವಿದತ್ತ ಚಂದ್ರಶೋಭಿ

ಕರ್ನಾಟಕದ ರಾಜಕಾರಣ ಹೇಗೆ ಬದಲಾಗಿದೆ?

ಮೇ ೨೦೧೮

ಪುರುಷೋತ್ತಮ ಬಿಳಿಮಲೆ

ಅವಲೋಕನ ಸಮಕಾಲೀನ ಚರ್ಚೆಗೆ ಹೆಚ್ಚು ಪ್ರಸ್ತುತ

ಮೇ ೨೦೧೮

ಪ್ರೊ.ಶಿವರಾಮಯ್ಯ

ದೇಸಿ ಕನ್ನಡ ಪರಂಪರೆ

ಮೇ ೨೦೧೮

ರಾಜದೀಪ್ ಸರ್ದೇಸಾಯಿ

ಗುಜರಾತಿನ ನರೇಂದ್ರಭಾಯಿ

ಎಪ್ರಿಲ್ ೨೦೧೮

ಸ್ನೇಹಲತಾ ಎಸ್. ಗೌನಳ್ಳಿ

ಪಾಕಿಸ್ತಾನಿ ಕವಯಿತ್ರಿ ಸಾರಾ ಶಗುಫ್ತಾ ಜೀವನ ಮತ್ತು ಕಾವ್ಯ

ಎಪ್ರಿಲ್ ೨೦೧೮

ವಿನಯ್ ಸೀತಾಪತಿ

ಪಿ. ವಿ. ನರಸಿಂಹರಾವ್ ಜೀವನಚರಿತ್ರೆ ಹಾಫ್ ಲಯನ್

ಮಾರ್ಚ್ ೨೦೧೮

ಅರುಣ್ ಜೋಳದಕೂಡ್ಲಿಗಿ

ಪೆರಿಯಾರ್ ವಿವಾಹ ಪದ್ಧತಿ

ಮಾರ್ಚ್ ೨೦೧೮

ಮೂಲ: ಇ.ರಾಘವನ್; ಜೇಮ್ಸ್ ಮೇನರ್ ಅನುವಾದ: ಪೃಥ್ವಿ ದತ್ತ ಚಂದ್ರ ಶೋಭಿ

ಭೂಸುಧಾರಣೆ ಜಾತಿ ಮೀಸಲಾತಿ ತುರ್ತುಪರಿಸ್ಥಿತಿ

ಫೆಬ್ರವರಿ ೨೦೧೮

- ಕಲ್ಲೇಶ್ ಕುಂಬಾರ್, ಹಾರೂಗೇರಿ

ಬಿಚ್ಚಿಟ್ಟ ಬಾಲ್ಯದ ನೆನಪುಗಳ ಬುತ್ತಿ

ಫೆಬ್ರವರಿ ೨೦೧೮

ಡಾ.ಪಿ.ಮಣಿ

ಮಂಟೇಸ್ವಾಮಿ ಕಾವ್ಯದಲ್ಲಿ ಸಿದ್ಧಪ್ಪಾಜಿ

ಫೆಬ್ರವರಿ ೨೦೧೮