2nd ಫೆಬ್ರವರಿ ೨೦೧೮

ಮಾರಕ ಮಾಧ್ಯಮಗಳು!

ಪ್ರಸಾದ್ ನಾಯ್ಕ್

ನಮಗಿಂದು ಬೇಕಿರುವುದು ಎದೆಎದೆಗಳನ್ನು ಬೆಸೆಯುವ ಸೇತುವೆಯೇ ಹೊರತು ಗೆರೆ ಎಳೆದು ಬೇರ್ಪಡಿಸುವ ಗೋಡೆಗಳಲ್ಲ.

ಕೆಲ ವರ್ಷಗಳ ಹಿಂದಿನ ಮಾತು: ನಾನು ಸದ್ಯಕ್ಕಿರುವ ಅಂಗೋಲಾದಲ್ಲಿ ಇಸ್ಲಾಂ ಧರ್ಮವನ್ನು ನಿಷೇಧಕ್ಕೊಳಪಡಿಸಲಾಗಿದೆ ಎಂಬ ಮಾತುಗಳು ಕೇಳಿಬಂದಿದ್ದವು. ಇದ್ದ ಒಂದಿಷ್ಟು ಮಸೀದಿಗಳನ್ನು ಸರಕಾರವು ಧ್ವಂಸಗೊಳಿಸಿ ಇಸ್ಲಾಂ ಧರ್ಮಕ್ಕೆ ಸೇರಿದವರನ್ನೆಲ್ಲಾ ದೇಶದಿಂದ ಎತ್ತಂಗಡಿ ಮಾಡಲಿದೆ ಎಂಬ ಮಾತುಗಳು ಮಾಧ್ಯಮಗಳಲ್ಲಿ ಪ್ರಕಟವಾಗಿದ್ದವು. ಸಹಜವಾಗಿಯೇ ಇದರಿಂದಾಗಿ ಅಂಗೋಲಾ ಮತ್ತು ಸುತ್ತಮುತ್ತಲ ದೇಶಗಳಲ್ಲಿ ಭಯದ ತಲ್ಲಣವೊಂದು ಮೈಕೊಡವಿಕೊಂಡಿತ್ತು.

ಅಸಲಿಗೆ ಈ ಸುದ್ದಿಯು ನಮ್ಮಂತಹ ಭಾರತೀಯರಿಗೆ ತಟ್ಟಲೇ ಇಲ್ಲ. ಆಫ್ರಿಕಾದ ಬಹುತೇಕ ಸುದ್ದಿಗಳಂತೆ ಇದೂ ಕೂಡ ಹತ್ತರಲ್ಲಿ ಹನ್ನೊಂದಾಗಿ ಎಲ್ಲೋ ತೆರೆಮರೆಗೆ ಸರಿದುಹೋಯಿತು. ಅವರಿವರ್ಯಾಕೆ, ಇದು ಸುದ್ದಿಯಾಗುವವರೆಗೂ `ಅಂಗೋಲಾ’ ಅನ್ನುವ ದೇಶವೂ ಒಂದಿದೆ ಎಂಬ ಬಗ್ಗೆ ನನಗೆ ತಿಳಿದೇ ಇರಲಿಲ್ಲ. ಇನ್ನು ಆಫ್ರಿಕಾದಲ್ಲಿ ಐವತ್ತು ಚಿಲ್ಲರೆ ದೇಶಗಳಿವೆ ಎಂಬುದು ಬಹಳಷ್ಟು ಜನರಿಗೆ ಇಂದಿಗೂ ತಿಳಿದಿಲ್ಲ. ನಾನು ಬರವಣಿಗೆಯನ್ನು ಶುರು ಮಾಡಿದ ನಂತರವೂ ಬಹಳಷ್ಟು ಜನರು ನನ್ನ ಹೆಸರಿನೊಂದಿಗಿರುವ `ಅಂಗೋಲಾ’ವನ್ನು ಕರ್ನಾಟಕದ `ಅಂಕೋಲಾ’ ಎಂದು ಲೆಕ್ಕಹಾಕಿ ಇಲ್ಲದ ಮುದ್ರಣದೋಷವನ್ನು ತಾವೇ ಸರಿಪಡಿಸಿಕೊಂಡಿದ್ದಾರೆ. ಇರಲಿ. ಆಫ್ರಿಕನ್ ಜಗತ್ತು ನಮಗೆ ಅದೆಷ್ಟು ಅಜ್ಞಾತವಾಗಿ ಉಳಿದುಕೊಂಡಿದೆ ಎಂದು ಹೇಳಲು ಇಷ್ಟೆಲ್ಲಾ ಬರೆಯಬೇಕಾಯಿತು. ``ಆಫ್ರಿಕಾದ ನೋವು, ಸವಾಲು, ಸಮಸ್ಯೆಗಳು ಬೆಚ್ಚಗಿನ ಹೊರಕಕ್ಷೆಯಲ್ಲಿರುವ ವಿಶ್ವದ ಇತರ ಭಾಗಗಳಿಗೆ ದಕ್ಕುವುದೇ ಇಲ್ಲ’’, ಎಂದು ಬರೆದಿದ್ದರು ಖ್ಯಾತ ಸೊಮಾಲಿಯನ್ ರೂಪದರ್ಶಿ, ಲೇಖಕಿ ಮತ್ತು ಸಾಮಾಜಿಕ ಕಾರ್ಯಕರ್ತೆಯಾದ ವಾರಿಸ್ ಡಿರೀ. ಈ ಮಾತು ಅದೆಷ್ಟು ಸತ್ಯ ಎಂದು ಇವತ್ತಿಗೂ ಅನ್ನಿಸುವುದುಂಟು ನನಗೆ.

ಮತ್ತೆ ಮರಳಿ ಇಸ್ಲಾಂ ನಿಷೇಧಕ್ಕೆ ಬರುವುದಾದರೆ ಅಂಥದ್ದೇನೂ ಇಲ್ಲ ಎಂದು ಮುಂದೆ ಅಂಗೋಲನ್ ಸರ್ಕಾರವು ಹೇಳಿಕೊಂಡಿತು. ಇಂಥದ್ದೊಂದು ಊಹಾಪೋಹ ಅದೆಲ್ಲಿಂದ ಹುಟ್ಟಿಕೊಂಡಿತೋ ದೇವರೇ ಬಲ್ಲ. ರಾಜಕೀಯ ಲಾಭವನ್ನು ಪಡೆದುಕೊಳ್ಳಲು ಇಂಥದ್ದೊಂದು ಸುದ್ದಿಯನ್ನು ಸೃಷ್ಟಿಸಲಾಯಿತು ಎಂದು ಅಂದುಕೊಂಡರೂ ಅದರ ಸಾಧ್ಯತೆಗಳು ಕಡಿಮೆ. ಭಯೋತ್ಪಾದನೆಯೆಂಬುದು ಅಂಗೋಲಾದಲ್ಲಿ ಇನ್ನೂ ಕಾಲಿರಿಸಿಲ್ಲ. ಒಟ್ಟು ಜನಸಂಖ್ಯೆಯಲ್ಲಿ ಇಲ್ಲವೇ ಇಲ್ಲವೆನ್ನಿಸುವಷ್ಟು ಕಮ್ಮಿಯಿರುವ ಈ ಸಮುದಾಯದ ಜನರನ್ನು ಎದುರು ಹಾಕಿಕೊಂಡು ಅಂಗೋಲನ್ ಸರಕಾರವು ಸಾಧಿಸುವಂಥದ್ದೇನೂ ಇರಲಿಲ್ಲ. ಇನ್ನು ಬೇರ್ಯಾವುದೋ ಗಲಭೆಗಳಂತಹ ಪ್ರಕರಣಗಳಲ್ಲಿ ಒಂದೆರಡು ಇಸ್ಲಾಂ ಧಾರ್ಮಿಕ ಸ್ಥಳಗಳ ಸುರಕ್ಷತೆಗೆ ಧಕ್ಕೆಯಾಗಿದ್ದಿರಲೂಬಹುದು. ಹಾಗೆಂದು ಇದು ಇಸ್ಲಾಂ ವಿರುದ್ಧ ಅಂಗೋಲಾ ಸಾರಿದ ಯುದ್ಧ ಎಂದು ತೀರ್ಪು ಕೊಡುವುದು ಮೂರ್ಖತನವಾಗುತ್ತದೆ. ಅದೇನೇ ಇರಲಿ, ಈ ನಿರಾಧಾರ ಮಾಹಿತಿಯು ಅಂಗೋಲಾ ಸೇರಿದಂತೆ ಆಸುಪಾಸಿನ ದೇಶಗಳಲ್ಲಿ ಆ ದಿನಗಳಲ್ಲಿ ಅಭದ್ರತೆಯ ತಲ್ಲಣಗಳನ್ನು ಹುಟ್ಟುಹಾಕಿದ್ದಂತೂ ಹೌದು.

ಇವೆಲ್ಲಾ ಒಂದು ರೀತಿಯಲ್ಲಿ ಜನಮಾನಸದಿಂದ ಮರೆತುಹೋದ ಸಂಗತಿಗಳು. ಆದರೆ ಕೆಲ ದಿನಗಳ ಹಿಂದಷ್ಟೇ ಮಂಗಳೂರಿಗೆ ಆಗಮಿಸಿದ ನನಗೆ ಹೊಸದೊಂದು ಆಘಾತ ಕಾದಿತ್ತು. ಹಿಂದೂ ಮತ್ತು ಮುಸ್ಲಿಂ ಸಮುದಾಯಕ್ಕೆ ಸೇರಿದ, ಬೆನ್ನುಬೆನ್ನಿಗೇ ನಡೆದ ಎರಡು ಬರ್ಬರ ಕೊಲೆಗಳಿಗೆ ಮಂಗಳೂರು ಸಾಕ್ಷಿಯಾಗಿತ್ತು. ಪೊಲೀಸರು ಶಾಂತಿ ಕದಡದಂತೆ ತೀವ್ರ ಮುನ್ನೆಚ್ಚರಿಕೆಯನ್ನು ವಹಿಸಿದರೂ ಸುರತ್ಕಲ್ ಮತ್ತು ಸುತ್ತಮುತ್ತಲ ಪ್ರದೇಶಗಳು ಬೂದಿ ಮುಚ್ಚಿದ ಕೆಂಡದಂತಿದ್ದಿದ್ದು ಗುಟ್ಟಾಗಿಯೇನೂ ಇರಲಿಲ್ಲ. ಯಾವ ಕ್ಷಣದಲ್ಲಿ ಏನು ಬೇಕಾದರೂ ಆಗಬಹುದು ಎಂಬ ಭಯದಲ್ಲೇ ಜನಸಾಮಾನ್ಯರು ಸುರತ್ಕಲ್ ಕಡೆಯಿಂದ ಪ್ರಯಾಣಿಸದೆ ಎಲ್ಲೆಲ್ಲೋ ಸುತ್ತು ಹೊಡೆದು ಪ್ರಯಾಣಿಸುವ ದೃಷ್ಟಾಂತಗಳನ್ನು ನಾನು ಗಮನಿಸಿದ್ದೆ. ಕರ್ನಾಟಕವು ಚುನಾವಣೆಗೂ ಸಜ್ಜಾಗುತ್ತಿರುವುದರಿಂದ ಇವುಗಳ ಮುಂದಿನ ಸಾಮಾಜಿಕ ಮತ್ತು ರಾಜಕೀಯ ಪರಿಣಾಮಗಳೇನಾಗಬಹುದು ಎಂದು ಈಗಲೇ ಹೇಳುವುದು ಕಷ್ಟ. ಆದರೆ ಶಾಂತಕೊಳಕ್ಕೆ ಕಲ್ಲು ಹಾಕಿ ನೀರನ್ನು ಕದಡುವುದರಲ್ಲಿ ಕೆಲ ಶಕ್ತಿಗಳು ಯಶಸ್ವಿಯಾಗಿದ್ದಂತೂ ಸತ್ಯ.

ದಕ್ಷಿಣಕನ್ನಡ ಮೊದಲಿನಿಂದಲೂ `ಬುದ್ಧಿವಂತರ ಜಿಲ್ಲೆ’ ಎಂದು ಹೆಸರು ಗಳಿಸಿಕೊಂಡ ಪ್ರದೇಶ. ಈ ಬಗ್ಗೆ ಇಲ್ಲಿಯ ಪ್ರತಿಯೊಬ್ಬ ನಾಗರಿಕನಿಗೂ ಹೆಮ್ಮೆಯಿರುವುದು ಸ್ಪಷ್ಟ. ಆದರೆ ಈ ಘಟನೆಗಳು ಕರಾವಳಿಯ ಜನರನ್ನು ಮತ್ತೆ ತಲೆತಗ್ಗಿಸಿ ನಿಲ್ಲುವಂತೆ ಮಾಡಿಬಿಟ್ಟವು. ಇಂದು ರಾಜಕೀಯ ಪಕ್ಷಗಳು, ಮಾಧ್ಯಮಗಳು ಅದೇನೇ ಹೇಳಲಿ, ಉಡುಪಿ—ಮಂಗಳೂರು ಪ್ರದೇಶಗಳು ಸಹಬಾಳ್ವೆಯನ್ನೇ ಉಸಿರನ್ನಾಗಿಸಿಕೊಂಡು ಮತ್ತು ಈ ಗುಣವನ್ನು ಮಣ್ಣಿನ ಸಂಸ್ಕೃತಿಯಾಗುವಷ್ಟರ ಮಟ್ಟಿಗೆ ತಂದು ನಿಲ್ಲಿಸಿದವರು. ಹೀಗಾಗಿಯೇ ಇಂದು ಮಾಧ್ಯಮಗಳು `ಹೊತ್ತಿ ಉರಿಯುತ್ತಿರುವ ಕರಾವಳಿ’ ಎಂದೆಲ್ಲಾ ಅಡಿಬರಹಗಳನ್ನು ಕೊಟ್ಟು ಬುಲೆಟಿನ್ ಗಳನ್ನು ನಡೆಸುವುದನ್ನು ನೋಡಿದರೆ ಅಯ್ಯೋ ಕರ್ಮವೇ ಎಂದು ನಿಟ್ಟುಸಿರು ಬಿಡುವಂತಾಗುತ್ತದೆ.

ಮೊನ್ನೆಯೂ ಕೂಡ ಹಾಗೆಯೇ ಆಯಿತು. ಈ ಎರಡೂ ಕೊಲೆಗಳಲ್ಲೂ ಎರಡೂ ಧರ್ಮದ ಜನರು ಜೊತೆಯಾಗಿ ಕಣ್ಣೀರಾದರು. ``ನಾವು ಪುಢಾರಿಗಳ ಮರ್ಜಿಗೆ ಬೀಳುವುದು ಬೇಡ, ಸಮಾಜದಲ್ಲಿ ಸಾಮರಸ್ಯವನ್ನು ಕಾಪಾಡೋಣ’’ ಎಂದು ಎರಡೂ ಕಡೆಯ ಮೃತರ ಕುಟುಂಬದವರು ಜನತೆಗೆ ಕರೆ ನೀಡಿ ಆಗಬಹುದಾದ ಅನಾಹುತಗಳನ್ನು ಪ್ರಜ್ಞಾಪೂರ್ವಕವಾಗಿ ದೂರವಿಟ್ಟರು. ಕಾರಣವೇನೆಂಬುದು ಸ್ಪಷ್ಟ. ಭಾರತದ ಎಲ್ಲಾ ಕಡೆಗಳಂತೆ ಇಲ್ಲೂ ಕೂಡ ಒಂದೇ ವಠಾರದಲ್ಲಿ ಎಲ್ಲಾ ಧರ್ಮೀಯರು ಅಣ್ಣತಮ್ಮಂದಿರಂತೆಯೇ ಜೊತೆಯಾಗಿ ಬಾಳಿದವರು. ಪರಸ್ಪರರ ಕಷ್ಟಸುಖಗಳಲ್ಲಿ ಒಡಹುಟ್ಟಿದವರಂತೆ ಜೊತೆಯಾದವರು. ಅದ್ಯಾವುದೇ ಹಬ್ಬಹರಿದಿನಗಳು ಬರಲಿ ತಮ್ಮದೇ ಮನೆಯ ಸಮಾರಂಭವೆಂಬಂತೆ ಖುದ್ದಾಗಿ ನಿಂತು ನಡೆಸಿಕೊಟ್ಟವರು. ಇಂದಿಗೂ ನಮ್ಮೂರಿನಲ್ಲಿ ಕ್ರಿಸ್ಮಸ್ ಹಬ್ಬದ ದಿನದಂದು ಹಿಂದೂ—ಮುಸ್ಲಿಂ—ಕ್ರೈಸ್ತ ಬಾಂಧವರು ಜೊತೆಯಾಗಿ ಆಚರಿಸುತ್ತಾರೆ. ಮೂರೂ ಧರ್ಮದ ಗುರುಗಳು ಒಂದೇ ವೇದಿಕೆಯಲ್ಲಿ ಜೊತೆಯಾಗಿ ಕುಳಿತುಕೊಂಡು ಸಾಮರಸ್ಯದ ಸಂದೇಶವನ್ನು ನೀಡುತ್ತಾರೆ. ಕರಾವಳಿಯಲ್ಲಿ ಧರ್ಮವೆಂಬುದು ಒಂದು ರೀತಿಯಲ್ಲಿ ಜನರ ದಾಖಲಾತಿಗಳಲ್ಲಿರುವ ಒಂದು ದಾಖಲೆಯಷ್ಟೇ. ಅದಕ್ಕಿಂತ ಹೆಚ್ಚಾಗಿ ಧರ್ಮದ ನಶೆಯನ್ನು ಇಲ್ಲಿ ಯಾರೂ ನೆತ್ತಿಗೇರಿಸಿಕೊಂಡವರಲ್ಲ. ಅಷ್ಟರಮಟ್ಟಿನ ಪ್ರಜ್ಞೆಯು ಹಿಂದೆಯೂ ಉಳಿದಿದ್ದು, ಈಗಲೂ ಒಂದಿಷ್ಟು ಉಳಿದುಕೊಂಡಿರುವುದು ಕರಾವಳಿಯ ಪುಣ್ಯ.

ಆದರೆ ಕಳೆದ ಐದು ವರ್ಷಗಳಿಂದ ದೆಹಲಿ ಮತ್ತು ಮುಂದಿನೆರಡು ವರ್ಷಗಳಿಂದ ಆಫ್ರಿಕಾದಲ್ಲಿ ಕುಳಿತುಕೊಂಡೇ ಕರಾವಳಿಯೆಡೆ `ಹೊರನೋಟ’ ಬೀರುತ್ತಿರುವ ನಾನು ಈ ಪ್ರದೇಶ ಯಾವ ಕಡೆಗೆ ಮಗ್ಗುಲು ಬದಲಾಯಿಸುತ್ತಿದೆ ಎಂಬುದನ್ನು ಕಂಡು ಕೊಂಚ ತಳಮಳಗೊಂಡಿದ್ದೇನೆ. ಕಳೆದ ಕೆಲವು ವರ್ಷಗಳಿಂದ ಧರ್ಮದ ಹೆಸರಿನಲ್ಲಿ ಶಾಂತಿಯನ್ನು ಕದಡುವ ವ್ಯವಸ್ಥಿತ ಪ್ರಯತ್ನಗಳು ಕರಾವಳಿಯಲ್ಲಿ ನಡೆಯುತ್ತಾ ಬಂದಿವೆ ಎಂಬುದು ಎಲ್ಲರಿಗೂ ಗೊತ್ತಿರುವ ವಿಷಯವೇ. ದುರಾದೃಷ್ಟವೆಂದರೆ ಯುವಜನರೇ ಹೆಚ್ಚಾಗಿ ಬಳಸುವ ಸೋಷಿಯಲ್ ಮೀಡಿಯಾ ಕೂಡ ಇದರಲ್ಲಿ ಕೈಜೋಡಿಸಿದ್ದು. ಮುದ್ರಣ ಮತ್ತು ಎಲೆಕ್ಟ್ರಾನಿಕ್ ಮಾಧ್ಯಮಗಳು ಕಾರಿದ ಹತ್ತು ಪಟ್ಟು ಹೆಚ್ಚಿನ ವಿಷವನ್ನು ಪ್ರಸ್ತುತ ಸೋಷಿಯಲ್ ಮೀಡಿಯಾ ಒಂದೇ ಈಗ ಕಾರುತ್ತಿದೆ.

``ಐ ಆಮ್ ಟ್ರಾಲ್’’ ಕೃತಿಯಲ್ಲಿ ಪತ್ರಕರ್ತೆ ಸ್ವಾತಿ ಚತುರ್ವೇದಿಯವರು ಬೆಳಕಿಗೆ ತಂದಿದ್ದೂ ಕೂಡ ಇದನ್ನೇ. ಆನ್ಲೈನ್ ಚುನಾವಣಾ ಪ್ರಚಾರಗಳ ಹೆಸರಿನಲ್ಲಿ ಸೋಷಿಯಲ್ ಮೀಡಿಯಾ ವೇದಿಕೆಯನ್ನು ಬಳಸಿಕೊಂಡು ಪ್ರಮುಖ ರಾಜಕೀಯ ಪಕ್ಷಗಳಿಂದ ಸಾಮಾಜಿಕ ಶಾಂತಿಯನ್ನು ಕದಡುವ ಎಂತೆಂಥಾ ವ್ಯವಸ್ಥಿತ ಪ್ರಯತ್ನಗಳಾಗುತ್ತಿವೆ ಎಂಬುದು ಈಗ ರಹಸ್ಯವಾಗಿಯೇನೂ ಉಳಿದಿಲ್ಲ. ಸೋಷಿಯಲ್ ಮೀಡಿಯಾಗಳಲ್ಲಿ ತಲೆ ಮರೆಸಿಕೊಂಡು, ಮುಖವಾಡಗಳನ್ನು ಹಾಕಿಕೊಂಡು ಸದ್ದು ಮಾಡುವುದು ಸುಲಭವಾಗಿರುವುದರಿಂದ ಇದು ವಿಘ್ನಸಂತೋಷಿಗಳಿಗೆ ಮತ್ತಷ್ಟು ಪ್ರಶಸ್ತ ತಾಣವಾಗಿ ಹೊರಹೊಮ್ಮಿದೆ. `ಬುದ್ಧಿವಂತರ ಜಿಲ್ಲೆ’ ಎಂದು ಬೀಗುವ ಕರಾವಳಿಯ ಯುವಶಕ್ತಿಗಳು ಆನ್ಲೈನ್ ವೇದಿಕೆಗಳಲ್ಲಿ ಸಿಕ್ಕಾಪಟ್ಟೆ ಸಕ್ರಿಯರಾಗಿ ಸಾಗಬಾರದ ಕಡೆಗೆ ಸಾಗುತ್ತಿರುವುದು ನಿಜಕ್ಕೂ ವಿಪರ್ಯಾಸದ ಸಂಗತಿ. ಸಾಮಾಜಿಕ ಜಾಲತಾಣ, ವಾಟ್ಸಾಪ್‍ಗಳಂತಹ ಸಂವಹನ ಮಾಧ್ಯಮಗಳಲ್ಲಿ ಹರಿಬಿಟ್ಟ ಕಿಡಿಯಂತಹ ಒಂದು ಸುಳ್ಳು ಸುದ್ದಿ ಯಾವ ರೀತಿಯ ಕಾಡ್ಗಿಚ್ಚನ್ನು ಸೃಷ್ಟಿಸಬಲ್ಲದು ಎಂಬ ಅರಿವು ಇವರಿಗೆ ಇದ್ದಂತಿಲ್ಲ. ಇದ್ದರೂ ಅದನ್ನು ಗಂಭೀರವಾಗಿ ಪರಿಗಣಿಸಿದಂತಿಲ್ಲ. ಇವೆಲ್ಲವುಗಳ ಹಿಂದಿರುವ ಶಕ್ತಿಗಳು ತಮ್ಮನ್ನು ಜುಜುಬಿ ದಾಳವಾಗಿಯಷ್ಟೇ ಬಳಸಿಕೊಳ್ಳುತ್ತಿವೆ ಎಂಬ ಅರಿವು ಬಂದ ದಿನವಾದರೂ ಯುವಸಮೂಹವು ಮೈಕೊಡವಿಕೊಂಡು ಬೆಳಕಿನತ್ತ ಸಾಗಲಿದೆ ಎಂಬ ನಿರೀಕ್ಷೆ ನನ್ನದು.

``ಜಗತ್ತಿನಲ್ಲಿ ಹಿಂಸಾಚಾರವು ಹಿಂದೆಂದಿಗಿಂತಲೂ ಹೆಚ್ಚಿದೆ ಎಂಬುದನ್ನು ನಾನು ಒಪ್ಪಿಕೊಳ್ಳಲಾರೆ. ಈಗ ಏನಾಗುತ್ತಿದೆಯೆಂದರೆ ಮಾಧ್ಯಮಗಳ ಭರಾಟೆಯಿಂದಾಗಿ ಎಲ್ಲೋ ಆದ ದೌರ್ಜನ್ಯವೊಂದು ನಮ್ಮನ್ನು ಆತಂಕಕ್ಕೀಡುಮಾಡುತ್ತದೆ. ಜಗತ್ತಿನ ಯಾವುದೋ ಒಂದು ಮೂಲೆಯಲ್ಲಿ ಹತ್ಯೆಯಾದರೆ ರಕ್ತವು ನಮ್ಮ ಡ್ರಾಯಿಂಗ್ ರೂಮಿನಲ್ಲಿ ಚೆಲ್ಲಿಹೋಗುತ್ತದೆ’’ ಎಂದು ಭಾಷಣವೊಂದರಲ್ಲಿ ಹೇಳುತ್ತಿದ್ದರು ಸದ್ಗುರು ಎಂಬ ಹೆಸರಿನಲ್ಲಿ ಖ್ಯಾತರಾಗಿರುವ ಯೋಗಿ, ಮಿಸ್ಟಿಕ್ ಜಗ್ಗಿ ವಾಸುದೇವ್. ಇದು ಒಂದು ರೀತಿಯಲ್ಲಿ ಸತ್ಯವೂ ಹೌದು. ಒಂದು ವಾರದ ಮಟ್ಟಿಗೆ ಪತ್ರಿಕೆ, ನ್ಯೂಸ್ ಚಾನೆಲ್ ಮತ್ತು ಸೋಷಿಯಲ್ ಮೀಡಿಯಾಗಳಿಂದ ದೂರವಿದ್ದುಬಿಟ್ಟರೆ ಜಗತ್ತು ಎಷ್ಟು ಪ್ರಶಾಂತವಾಗಿದೆ ಅನ್ನಿಸಿಬಿಡುತ್ತದೆ. ಅದು ಪ್ರಾಕ್ಟಿಕಲ್ ಅಲ್ಲ ಅನ್ನುವುದು ಬೇರೆ ವಿಷಯ. ಜಗತ್ತು ರಾಮರಾಜ್ಯವಾಗಿಬಿಟ್ಟರೆ ನಾವು ಗಂಟುಮೂಟೆ ಕಟ್ಟಿ ಮನೆಗೆ ಹೋಗಬೇಕಾದೀತು ಎಂಬ ಸತ್ಯವು ಮಾಧ್ಯಮರಂಗದಲ್ಲಿರುವ ಎಲ್ಲರಿಗೂ ಗೊತ್ತು. ನ್ಯೂಸ್ ಚಾನೆಲ್‍ಗಳು ಟಿ.ಆರ್.ಪಿ, ಜಾಹೀರಾತುಗಳಿಂದಷ್ಟೇ ನಡೆಯಬಲ್ಲವು ಎಂಬುದೂ ಕೂಡ ಸತ್ಯವೇ. ಹಾಗೆಂದು ಮಾತೆತ್ತಿದರೆ `ಹೊತ್ತಿ ಉರಿಯುತ್ತಿರುವ ಕರಾವಳಿ’ ಎಂದೆಲ್ಲಾ ಡಂಗುರ ಸಾರಿಬಿಟ್ಟರೆ ಸುದ್ದಿವಾಹಿನಿಗಳು ಶೀಘ್ರದಲ್ಲೇ ವೀಕ್ಷಕರಿಂದ ಅಳಿದುಳಿದ ವಿಶ್ವಾಸಾರ್ಹತೆಯನ್ನೂ ಕಳೆದುಕೊಳ್ಳುವುದನ್ನು ಯಾರೂ ತಪ್ಪಿಸಲಾರರು.

ಇತ್ತ `ವೈವಿಧ್ಯದಲ್ಲಿ ಏಕತೆ’ ಎನ್ನುವುದು ಕೇವಲ ಪುಸ್ತಕದ ಬದನೆಕಾಯಿಯಾಗಿಯೇ ಉಳಿದು ಬಿಡಲಿದೆಯೇ ಎಂಬ ಆತಂಕ ಕೂಡ ನನ್ನದು. ಏಕೆಂದರೆ ಈಚಿನ ದಿನಗಳಲ್ಲಿ ವೈವಿಧ್ಯದ ಸೌಂದರ್ಯವನ್ನೇ ತುಳಿದುಹಾಕುವ ಹೊಸ ಟ್ರೆಂಡ್ ಒಂದು ಸೃಷ್ಟಿಯಾಗುತ್ತಿರುವಂತೆ ಕಾಣುತ್ತಿದೆ. ``ಹಿಂದೂಸ್ತಾನವು ಹಿಂದೂಗಳಿಗಷ್ಟೇ ಸೇರಿದ್ದು’’ ಎಂದು ನಮ್ಮ ಕೆಲ ರಾಜಕೀಯ ನಾಯಕರು ಅರೆಬೆಂದ ಅರ್ಥವಿಲ್ಲದ ಹೇಳಿಕೆಗಳನ್ನು ನೀಡಿದ್ದುಂಟು. ನಂತರ ಹೇಳಿದ ತಪ್ಪಿಗೆ ಕಾಟಾಚಾರದ ಕ್ಷಮೆ ಕೋರಿ ತಿಪ್ಪೆ ಸಾರಿಸಿದ್ದೂ ಇದೆ. ಇತ್ತೀಚೆಗಷ್ಟೇ ಅಮೆರಿಕನ್ ಅಧ್ಯಕ್ಷರಾದ ಡೊನಾಲ್ಡ್ ಟ್ರಂಪ್ ಕೆಲ ದೇಶಗಳನ್ನು `ಶಿಟ್—ಹೋಲ್ ಕಂಟ್ರೀಸ್’ ಎಂದು ಕರೆದರು. ಅಮೆರಿಕಾವು ವಲಸಿಗರಿಂದಲೇ ರೂಪುಗೊಂಡ ದೇಶ ಎಂಬುದನ್ನು ಟ್ರಂಪ್ ಸಾಹೇಬ್ರು ಯಾಕೋ ಮರೆತಂತಿದೆ. ಅಮೆರಿಕಾದ ವೈಟ್ ಹೌಸ್ ಅಧ್ಯಕ್ಷರ ಇಂಥಾ ಹೇಳಿಕೆಗಳನ್ನು ಹೇಗೆ ಸಮರ್ಥಿಸಿಕೊಳ್ಳಬಹುದೋ ಅವರಿಗೇ ಗೊತ್ತು. ಅವರ ಪಾಡು ಅವರಿಗೆ. ಇಂದು ಭಾರತವೂ ಸೇರಿದಂತೆ ವಿಶ್ವದಾದ್ಯಂತ ಅಮೆರಿಕನ್ ಮಾಧ್ಯಮಗಳು ಬೀರಿರುವ ಮತ್ತು ಬೀರುತ್ತಿರುವ ದೊಡ್ಡ ಮಟ್ಟಿನ ಪರಿಣಾಮವನ್ನು ತಳ್ಳಿಹಾಕಲು ಸಾಧ್ಯವಿಲ್ಲ. ಹೀಗಾಗಿಯೇ ಈ ವಿಷಯವನ್ನಿಲ್ಲಿ ಪ್ರಸ್ತಾಪಿಸಬೇಕಾಯಿತು. ಆದರೆ ವೈವಿಧ್ಯದಲ್ಲಿರುವ ಸೌಂದರ್ಯವನ್ನು, ವಿವಿಧ ಸೊಗಡಿನ ಸಂಸ್ಕೃತಿಗಳು ಜೊತೆಯಾಗಿ ಸಾಮರಸ್ಯದಿಂದ ಬಾಳುವ ಜೀವನೋತ್ಸಾಹವನ್ನು ಬದಿಗೊತ್ತಿ `ಈ ಮೂಲೆ ನಮಗೆ, ಈ ಮೂಲೆ ನಿಮಗೆ’ ಎಂದು ಸರಹದ್ದುಗಳನ್ನೆಳೆದು ಗೋಡೆಗಳನ್ನು ಕಟ್ಟುವ ಕೆಲಸದಲ್ಲಿ ಜನನಾಯಕರು ನಿರತರಾಗಿರುವುದು ದುರದೃಷ್ಟಕರ. ಹೀಗಾಗಿ ನಮಗಿಂದು ಬೇಕಿರುವುದು ಮುತ್ಸದ್ದಿಗಳೇ ಹೊರತು ಪೊಳ್ಳು ರಾಜಕಾರಣಿಗಳಲ್ಲ.

ಚರ್ಚೆ ಎಂದರೆ ತಾನೊಬ್ಬನೇ ವೃಥಾ ಗಂಟಲು ಹರಿದುಕೊಳ್ಳುವುದಲ್ಲ. ಭಿನ್ನತೆಯೆಂದರೆ ಭಿನ್ನಾಭಿಪ್ರಾಯವೇ ಆಗಬೇಕಿಲ್ಲ. ಪ್ರತಿಭಟನೆಯೆಂದರೆ ಸಿಕ್ಕಸಿಕ್ಕಲ್ಲಿ ಕೊಳ್ಳಿಯಿಡುವುದಲ್ಲ. ನಮಗಿಂದು ಬೇಕಿರುವುದು ಎದೆಎದೆಗಳನ್ನು ಬೆಸೆಯುವ ಸೇತುವೆಯೇ ಹೊರತು ಗೆರೆ ಎಳೆದು ಬೇರ್ಪಡಿಸುವ ಗೋಡೆಗಳಲ್ಲ. ಕರಾವಳಿಯು ತನ್ನೊಳಗಿರುವ `ವಸುಧೈವ ಕುಟುಂಬಕಂ’ ಒಳದನಿಯನ್ನು ಜೀವಂತವಾಗಿಟ್ಟಿರಲಿ. ಈ ಮೂಲಕವಾಗಿ ದೇಶದ ಇತರ ಭಾಗಗಳಿಗೂ ಮಾದರಿಯಾಗಲಿ ಎಂಬ ಆಶಯ ನನ್ನದು.

ಲೇಖಕರು ಮೂಲತಃ ದಕ್ಷಿಣ ಕನ್ನಡದ ಕಿನ್ನಿಗೋಳಿಯವರು. ಸುರತ್ಕಲ್‍ನ ಪ್ರತಿಷ್ಠಿತ ನ್ಯಾಷನಲ್ ಇನ್‍ಸ್ಟಿಟ್ಯೂಟ್ ಆಫ್ ಟೆಕ್ನಾಲಜಿನಲ್ಲಿ ಸಿವಿಲ್ ಇಂಜಿನಿಯರಿಂಗ್ ಪದವಿ ಪಡೆದು ಪ್ರಸ್ತುತ ಆಫ್ರಿಕಾದ ‘ಅಂಗೋಲಾ' ದೇಶದಲ್ಲಿ ನೆಲೆಸಿದ್ದಾರೆ.

ಸಂಜೋತಾ ಪುರೋಹಿತ್

ಮಕ್ಕಳ ಶಿಕ್ಷಣದ ಹೊರೆ

ಜುಲೈ ೨೦೧೮

ಇಮಾಮ್ ಗೋಡೆಕಾರ

ಒಂದು ಆನ್‍ಲೈನ್ ಕ್ರಾಂತಿ ಫ್ಲಿಪ್‍ಕಾರ್ಟ್

ಜೂನ್ ೨೦೧೮

ಭಾರತೀ ಮೈಸೂರು

ಜಪಾನ್ ಗಾತ್ರದಲ್ಲಿ ಮಾತ್ರ ಕರ್ನಾಟಕ!

ಜೂನ್ ೨೦೧೮

ಪ್ರೊ. ಕ್ರಿಸ್ಟೋಫರ್ ಚೆಕೂರಿ

ಡೊನಾಲ್ಡ್ ಟ್ರಂಪ್ ಮತ್ತು ಅಮೆರಿಕಾದ ವರ್ಣೀಯ ರಾಜಕಾರಣ

ಎಪ್ರಿಲ್ ೨೦೧೮

ತಾಳಗುಂದ ಶಾಸನ

ಎಪ್ರಿಲ್ ೨೦೧೮

ಸುಧೀಂದ್ರ ಹಾಲ್ದೊಡ್ಡೇರಿ

ಯಂತ್ರ ನೋಡಿರಣ್ಣ, ದೇಹದ ತಂತ್ರ ಕಾಣಿರಣ್ಣ!

ಎಪ್ರಿಲ್ ೨೦೧೮

ಡಿ. ರೂಪ

‘ಧೈರ್ಯ, ತಾಳ್ಮೆ ಜತೆಗಿರಲಿ’

ಮಾರ್ಚ್ ೨೦೧೮

ಸುಧೀಂದ್ರ ಹಾಲ್ದೊಡ್ಡೇರಿ

ಬ್ಯಾಕ್ಟೀರಿಯಗಳ ಬಗ್ಗೆ ನಿಮಗೇನು ಗೊತ್ತು?

ಮಾರ್ಚ್ ೨೦೧೮

ಸುಧೀಂದ್ರ ಹಾಲ್ದೊಡ್ಡೇರಿ

ಎಂಗೈತೆ ಮಗಾ, ಸಾಫ್ಟ್‍ವೇರ್ ಬ್ಯಾಂಗ್‍ಲೂರು?

ಫೆಬ್ರವರಿ ೨೦೧೮

ಪ್ರಸಾದ್ ನಾಯ್ಕ್

ಮಾರಕ ಮಾಧ್ಯಮಗಳು!

ಫೆಬ್ರವರಿ ೨೦೧೮