2nd ಫೆಬ್ರವರಿ ೨೦೧೮

ಎಂಗೈತೆ ಮಗಾ, ಸಾಫ್ಟ್ ‌ವೇರ್ ಬ್ಯಾಂಗ್‍ಲೂರು?

ಸುಧೀಂದ್ರ ಹಾಲ್ದೊಡ್ಡೇರಿ

ನಮ್ಮ ಐ.ಟಿ. ನಗರಿಗರ ಇಂಗ್ಲಿಷ್ ಭಾಷೆಗೆ ಥೇಮ್ಸ್ ನದಿ ನೀರು ಕುಡಿದವನೂ ತಲೆದೂಗಬೇಕು. ಸದ್ಯಕ್ಕೆ ನಮ್ಮ ಕಾಲ್‍ಸೆಂಟರ್ ಹುಡುಗ ಹುಡುಗಿಯರ ಬಾಯಲ್ಲಿ ‘ನಾವ್ ಕುಡಿಯುವ ನೀರ್’ ಕ್ಯಾವೇರಿಯಾಗಿದೆ!

ಜಯ‘ನಗರ’ದಿಂದ ಕಾಡುಬಿಸನ‘ಹಳ್ಳಿ’ಗೆ ನಾನು ನಿತ್ಯ ಓಡಾಡುವ ದಾರಿ, ನಿಜದ ಅರ್ಥದಲ್ಲಿ ಒಂದು ‘ಇನ್ಫರ್ಮೇಶನ್ ಸೂಪರ್ ಹೈವೇ’. ಬನ್ನೇರುಘಟ್ಟ ರಸ್ತೆಯ ಎಡ ಬಲಕ್ಕೆ ನೂರೆಂಟು ಐ.ಟಿ. ಕಂಪನಿಗಳು, ಅವುಗಳಲ್ಲಿ ಕೆಲಸ ಮಾಡುವವರ ಫ್ಲಾಟ್‍ಗಳು. ಮುಂದೆ ಬಿ.ಟಿ.ಎಂ. ಬಡಾವಣೆ ದಾಟಿ ಸಿಲ್ಕ್ ಬೋರ್ಡ್ ಜಂಕ್ಷನ್ ಬರುವ ಹೊತ್ತಿಗೆ ಎಡ—ಬಲದ ಮಳಿಗೆಗಳೆಲ್ಲಾವೂ ಐ.ಟಿ. ದೂಕಾನುಗಳು. ಸಿಗ್ನಲ್‍ನಲ್ಲಿ ಎಡಗಡೆ ತಿರುಗಿದರೆ ಕೋರಮಂಗಲ, ಬಲಗಡೆ ಹೊರಳಿದರೆ ಎಲೆಕ್ಟ್ರಾನಿಕ್ಸ್ ಸಿಟಿ. ಮಡಿವಾಳ—ಇಬ್ಬಲೂರು ದಾಟಿ ನೇರ ಹೊರಟರೆ ಸರ್ಜಾಪುರ ರಸ್ತೆ ಸಿಗುವ ತನಕ ಫ್ಲಾಟ್...ಫ್ಲಾಟ್, ಎಲ್ನೋಡಿದ್ರೂ ಫ್ಲಾಟ್ !

ಹಾದಿಯಲ್ಲಿ ಸಿಗುವ ದೇವರಬಿಸನ ಹಳ್ಳಿಯ ಐಸ್ಕೂಲ್ ಉಡುಗ ರಮೇಸ ‘ಇಂಟೆಲ್ ಪ್ಯಾಟ್ರಿ ತಾವ ಇಳ್ಸಿ ಬುಡಿ ಸಾರ್’ ಎಂದು ‘ಲಿಪ್ಟ್’ ಕೇಳ್ತಾನೆ. ಬಿ.ಎಂ.ಟಿ.ಸಿ. ಬಸ್ ಕಂಡಕ್ಟರ್ ಸಿದ್ಲಿಂಗಪ್ಪನನ್ನು ಕಾಡುಬಿಸನಹಳ್ಳಿಗೆ ಟಿಕೆಟ್ ಕೊಡು ಎಂದರೆ ‘ಜೇಪಿ ಮುರುಗನ್‍ಗಾ’ ಎಂದು ಖಚಿತಪಡಿಸಿಕೊಳ್ಳುತ್ತಾನೆ. ಇಂದು ಐ.ಟಿ. ಕಂಪನಿಗಳ ಹೆಸರಿಲ್ಲದೇ ಬೆಂಗಳೂರಿನ ಗೈಡ್ ಮ್ಯಾಪು ಬರೆಯುವ ಹಾಗಿಲ್ಲ. ಮಾಗಡಿ ಕೆಂಪೇಗೌಡರ ಬೆಂದಕಾಳೂರು ಬಾಯಿ ಮಾತಿನ ಬೆಂಗಾಳೂರಾಗಿ, ಬೆಂಗಳೂರಾಗಿ ಇದೀಗ ನಮ್ಮ ಅಚ್ಚ ಕನ್ನಡಿಗರ ಬಾಯಲ್ಲೂ ‘ಬ್ಯಾಂಗ್‍ಲೋರ್’. ಅದಕ್ಕೇ ಸಿಕ್ಕ ಸಿಕ್ಕವರೆಲ್ಲಾ ನಮ್ಮೂರನ್ನು ‘ಬ್ಯಾಂಗ್’ ಮಾಡ್ತಾರೆ. ನಮ್ಮ ‘ಐ.ಟಿ. ನಗರಿಗರ’ ಇಂಗ್ಲಿಷ್ ಭಾಷೆಗೆ ಥೇಮ್ಸ್ ನದಿ ನೀರು ಕುಡಿದವನೂ ತಲೆದೂಗಬೇಕು. ಸದ್ಯಕ್ಕೆ ನಮ್ಮ ‘ಕಾಲ್ ಸೆಂಟರ್’ ಹುಡುಗ ಹುಡುಗಿಯರ ಬಾಯಲ್ಲಿ ‘ನಾವ್ ಕುಡಿಯುವ ನೀರ್’ ಕ್ಯಾವೇರಿಯಾಗಿದೆ!

ಐ.ಟಿ. ಸುದ್ದಿಯಿಲ್ಲದೇ ಬೆಂಗಳೂರಿನಲ್ಲಿ ದಿನ ಮುಂದೆ ಸಾಗುವುದಿಲ್ಲ. ಕರ್ನಾಟಕ ಸರ್ಕಾರ ಅಂದಾಜಿಸಿರುವಂತೆ ಮುಂಬರುವ ದಿನಗಳಲ್ಲಿ ಬೆಂಗಳೂರು ನಗರ ಇಪ್ಪತ್ತು ಲಕ್ಷ ಪ್ರತ್ಯಕ್ಷ ಹಾಗೂ ಅರವತ್ತು ಲಕ್ಷ ಪರೋಕ್ಷ ‘ಟೆಕ್ಕಿ’ಗಳಿಗೆ ತವರಾಗಲಿದೆ. ‘ಸನ್ ಮೈಕ್ರೋಸಿಸ್ಟಂ’ ಬಾಗಿಲು ತೆರೆದ ಮೇಲಷ್ಟೇ ಸೂರ್ಯನ ಆಗಮನವಾಯಿತು, ‘ಆಪಲ್’ ಎಂಬ ಕಂಪ್ಯೂಟರ್ ಹೆಸರನ್ನು ಹಣ್ಣೊಂದಕ್ಕೂ ನೀಡಲಾಗಿದೆ ಎಂದರೂ ನಂಬಬೇಕಾದ ಕಾಲವಿದು! ನಮ್ಮೆಲ್ಲರ ಬಂಧು—ಮಿತ್ರರಿಗಿರೋ ಐ.ಟಿ. ಕನೆಕ್ಷನ್ ಬೆರಗು ಹುಟ್ಟಿಸುತ್ತದೆ. ‘ಹೆಂಡತಿ ಚಿಕ್ಕಪ್ಪನ ಮಗನಿಗೆ ‘ಪ್ರೊಜಿಯಾನ್’ನಲ್ಲಿ ಕೆಲಸ ಸಿಕ್ಕಿದ್ದು, ಬಿ.ಎಸ್‍ಸಿ ಓದಿದ ಪಕ್ಕದ ರಸ್ತೆಯ ಹುಡುಗಿ ‘ಕನ್ವರ್ಜಿಸ್’ನಲ್ಲಿ ಇಪ್ಪತ್ತೆರಡು ಸಾವಿರ ರೂಪಾಯಿ ಸಂಬಳ ಪಡೆಯೋದು, ಶಿಫ್ಟಿನ ಕಾಟಕ್ಕೆ ಬೇಸತ್ತು ಎದುರು ಮನೆ ಹುಡುಗಿ ಐ.ಬಿ.ಎಂ. ಕೆಲಸ ಬಿಟ್ಟಿದ್ದು, ಮನೆಗೆ ಮೊಣಕಾಲ್ಮೂರು ಸೀರೆ ತರುವಾತನ ಅಣ್ಣ ‘ವಿಪ್ರೋ’ನಲ್ಲಿರೋದು, ಕಾಲೇಜಿನ ಮಿತ್ರನಿಗಿರೋ ನಿಲೇಕಣಿಯ ಪುರೋಹಿತರ ನೆಂಟಸ್ತನ, ‘ಎಚ್.ಎ.ಎಲ್.’ಗೆ ಬಸ್ಸಿನಲ್ಲಿ ಜತೆಗೇ ಬರುತ್ತಿದ್ದ ಹುಡುಗ ‘ಎಚ್.ಸಿ.ಎಲ್.’ ಸೇರಿದ್ದು, ಒಗೆಯೋ ಕಲ್ಲಿನ ನೀರು ಸಿಡಿಸೋ ಪಕ್ಕದ ಮನೆಯಾಕೆಯ ಅಳಿಯನಿರೋದು ‘ಆರೇಕಲ್’, ಟೈಲರಿಂಗ್ ಕ್ಲಾಸ್ ಮೇಡಮ್ ಮಗಳಿಗೆ ವೆಬ್‍ಸೈಟ್ ಮೂಲಕ ಲಂಡನ್ ವರ ಸಿಕ್ಕಿದ್ದು..... ನೆರೆ ಮನೆಯ ಸಂಗವ್ವಕ್ಕ ಇಂಗ್ಲಿಷ್ ಕಲಿಯಲು ಹೊರಟಿದ್ದರೆ ಖಂಡಿತವಾಗಿಯೂ ಅಮೆರಿಕದಲ್ಲಿರುವ ಅವಳ ಮುದ್ದಿನ ಸೊಸಿ ಬಸಿರಾಗಿದ್ದಾಳೆಂದೇ ಅರ್ಥ.

ನೆರೆ ಮನೆಯ ಸಂಗವ್ವಕ್ಕ ಇಂಗ್ಲಿಷ್ ಕಲಿಯಲು ಹೊರಟಿದ್ದರೆ ಖಂಡಿತವಾಗಿಯೂ ಅಮೆರಿಕದಲ್ಲಿರುವ ಅವಳ ಮುದ್ದಿನ ಸೊಸಿ ಬಸಿರಾಗಿದ್ದಾಳೆಂದೇ ಅರ್ಥ.

ನಾವೆಲ್ಲ ಎಂಜಿನಿಯರಿಂಗ್ ಪದವಿ ಪಡೆದ ವರ್ಷವದು (1984). ಆಗಷ್ಟೇ ಚಿಗುರೊಡೆಯುತ್ತಿದ್ದ (ಇದೀಗ ವರ್ಷವೊಂದಕ್ಕೆ ಎಂಗೈತೆ ಮಗಾ, ಸಾಫ್ಟ್ ವೇರ್ ಬ್ಯಾಂಗ್‍ಲೂರು? ಬಹು ಬಿಲಿಯನ್ ಅಮೆರಿಕನ್ ಡಾಲರ್ ಲಾಭಗಳಿಸುತ್ತಿರುವ) ಐ.ಟಿ. ಕಂಪನಿಯೊಂದಕ್ಕೆ ಕಾಲೇಜಿನ ಹಿರಿಯ ಸಹಪಾಠಿ ಸೇರಿದ್ದು, ಕೆಲ ದಿನಗಳಲ್ಲೇ ಕಚೇರಿ ಕೆಲಸಕ್ಕೆಂದು ಅಮೆರಿಕಕ್ಕೆ ಹಾರಿದ್ದು ಕಾಲೇಜಿನಲ್ಲಿ ಆಗ ಬಹುದೊಡ್ಡ ಸುದ್ದಿಯಾಗಿತ್ತು. ಎಂಜಿನಿಯರ್‍ಗಳಿಗೆ ತಿಂಗಳಿಗೆ ಎರಡು ಸಾವಿರದ ಪಗಾರ ದೊಡ್ಡ ಮೊತ್ತವೆನಿಸಿದ್ದ ದಿನಗಳು. ಇಲ್ಲಿನ ರೂಪಾಯಿ ಸಂಬಳ ಪೂರ್ತಿ ಬ್ಯಾಂಕಿಗೆ, ಅಲ್ಲಿನ ಖರ್ಚಿಗೆ ಒಂದಷ್ಟು ಡಾಲರ್‍ಗಳು. ಇಷ್ಟೆಲ್ಲಾ ಸೌಕರ್ಯವಿದ್ದರೂ ಕವಿ ಮನಸ್ಸಿನ ಪ್ರತಿಭಾವಂತ ಮಿತ್ರ ನನಗೊಂದು ಸುದೀರ್ಘ ಪತ್ರ ಬರೆದಿದ್ದ: ‘ಕೆಲಸ ಬಿಡಬೇಕೆಂದಿದ್ದೇನೆ. ಇಷ್ಟೆಲ್ಲಾ ಎಲೆಕ್ಟ್ರಾನಿಕ್ಸ್ ಕಲಿತು ಟೈಲರಿಂಗ್ ಕಂಪನಿಯೊಂದಕ್ಕೆ ಕೊಬಾಲ್ ಪ್ರೋಗ್ರಾಮ್ ಸಾಲುಗಳನ್ನು ತಿದ್ದುವ ಕೆಲಸ ಹಿಡಿಸುತ್ತಿಲ್ಲ’. ನುಡಿದಂತೆ ನಡೆದ. ಕೆಲಸ ಬಿಟ್ಟು ಬಂದವ ಭಾರತೀಯ ವಿಜ್ಞಾನ ಮಂದಿರದಲ್ಲಿ ಸ್ನಾತಕೋತ್ತರ ಪದವಿಯೊಂದಿಗೆ ಚಿನ್ನದ ಪದಕ ಪಡೆದ. ಅಮೆರಿಕದ ಪಿಎಚ್.ಡಿ.ಯ ನಂತರ ಭಾರತೀಯ ತಂತ್ರಜ್ಞಾನ ಮಂದಿರ ಐ.ಐ.ಟಿ.ಯ ಪ್ರೊಫೆಸರ್ ಆದ. ‘ವೆರಿ ಲಾರ್ಜ್ ಸ್ಕೇಲ್ ಇಂಟಿಗ್ರೇಟೆಡ್ ಸಕ್ರ್ಯೂಟ್ಸ್’ ಎಂಬ ಮುಂಚೂಣಿ ಚಿಪ್ ತಂತ್ರಜ್ಞಾನದ ಬೋಧನೆಯಲ್ಲಿ ತೊಡಗಿಕೊಂಡ. ಮುಂದೆ ‘ಚಿಪ್’ ತಯಾರಿಸುವ ಕಂಪನಿಯೊಂದರ ಮುಖ್ಯಸ್ಥನೂ ಆದ.

ಇದಾಗಿ ಮೂರು ದಶಕಗಳಿಗೂ ಹೆಚ್ಚು ಕಾಲ ಉರುಳಿದೆ. ಮೊನ್ನೆ ಪರಿಚಿತರ ಮಗನ ಇ—ಮೇಲ್ ಒಂದು ಬಂದಿದೆ. ಬೆಂಗಳೂರಿನ ಮತ್ತೊಂದು ಮಲ್ಟಿ—ಬಿಲಿಯನ್ ಡಾಲರ್ ವಾರ್ಷಿಕ ಆದಾಯದ ಕಂಪನಿಯ ಪ್ರತಿನಿಧಿಯಾಗಿ ಅಮೆರಿಕದಲ್ಲಿರುವ ಹುಡುಗ. ಪತ್ರದ ಒಕ್ಕಣೆ: ‘ಇಲ್ಲಿರಲಾರೆ, ಹೋಗಲಾರೆ’. ಆರೇ ತಿಂಗಳಿಗೆಂದು ಹೊರಟವನ ವಾಸ್ತವ್ಯವನ್ನು ಕಂಪನಿ ಹಿಗ್ಗಿಸುತ್ತಲೇ ಇದೆ. ವಾಲ್‍ಮಾರ್ಟ್‍ನಂಥ ದೊಡ್ಡ ಮಳಿಗೆಯಲ್ಲೊಂದು ಪುಟ್ಟ ಕೆಲಸ. ಅಲ್ಲಿನ ‘ಬಿಲ್’ ಮಾಡುವ ‘ಮುದಿ’ ಸಾಫ್ಟ್ವೇರಿನ ಉಸ್ತುವಾರಿ. ದಿನಕ್ಕೊಂದು ಬಾರಿ ಕೆಲಸವಿದ್ದರೂ ಹೆಚ್ಚು. ವಾರಂಗಲ್ಲಿನ ರೀಜನಲ್ ಎಂಜಿನೀರಿಂಗ್ ಕಾಲೇಜಿನಲ್ಲಿ ಜಿದ್ದಿಗೆ ಬಿದ್ದು ಓದಿದ್ದು ಈ ರೀತಿಯ ಸುಖಕ್ಕಾಗಿಯೆ? ಎಂಬ ಪ್ರಶ್ನೆ ಮುಂದಿಟ್ಟಿದ್ದಾನೆ. ಅಪ್ಪ—ಅಮ್ಮಂದಿರಿಗೆ ಮಗ ಅಮೆರಿಕದಲ್ಲಿದ್ದಾನೆ. ತಿಂಗಳ ರೂಪಾಯಿ ಸಂಬಳ ಬ್ಯಾಂಕಿನಲ್ಲಿ ಜಮೆಯಾಗುತ್ತಿದೆ. ಒಂದಷ್ಟು ನೂರು ಡಾಲರ್‍ಗಳು ನಿಯಮಿತವಾಗಿ ಉಳಿತಾಯವಾದರೂ ಸಾಕು, ಬಿ.ಟಿ.ಎಂ. ಬಡಾವಣೆಯ ಮನೆಗೆ ಮಹಡಿಯೇರಿಸಿ, ಸಾಫ್ಟ್ ವೇರ್ ಎಂಜಿನೀರ್‍ಗಳಿಗೆ ಬಾಡಿಗೆಗೆ ಬಿಡಬಹುದು. ‘ಈಗಿನ ಕಾಲದ ಹುಡುಗರಿಗೆ ಎಪ್ಪತ್ತು—ಎಂಬತ್ತು ಲಕ್ಷ ರೂಪಾಯಿ ಸಾಲ ತೆಗೆದುಕೊಳ್ಳಲು ಭಯವೇ ಇಲ್ರಿ’ ಎಂದು ಅಚ್ಚರಿ ಪಡುತ್ತಾರೆ. ತಾವಿದ್ದ ಸರ್ಕಾರಿ ನೌಕರಿಯಲ್ಲಿ ಎಪ್ಪತ್ತು ಸಾವಿರ ರೂಪಾಯಿ ಸಾಲ ಪಡೆದು ತೀರಿಸಲು ಇಪ್ಪತ್ತು ವರ್ಷ ಹೆಣಗಾಡಿದ್ದು ನೆನಪಾಗುತ್ತದೆ. ‘ಏರುತಿಹುದು ಮನೆಯ ಮಾಳಿಗೆ, ಸಾಲದಿಂದ’ ಎಂದು ಬೆರಗಾಗುತ್ತಾರೆ. ಸಾಧ್ಯವಾದಷ್ಟು ಬೇಗ ಅದೇ ಕಂಪನಿಯ ಹುಡುಗಿಯೊಬ್ಬಳನ್ನು ಗಂಟು ಹಾಕಿಬಿಟ್ಟರೆ ಅಮೆರಿಕೆಯೆಂಬ ಸ್ವರ್ಗಕ್ಕೆ ಮೂರೇ ಗೇಣು! ಈ ಎರಡೂ ಪತ್ರಗಳು ನನ್ನ ಕೈಸೇರುವ ಅವಧಿಯ ನಡುವೆ ಅಟ್ಲಾಂಟಿಕ್ ಸಾಗರದ ಮೇಲೆ ಮಿಲಿಯಗಟ್ಟಲೆ ಭಾರತೀಯರು ಹಾರಾಡಿದ್ದಾರೆ.

ಬೆಂಗಳೂರಿನ ಸಾಫ್ಟ್ ವೇರ್ ಕಂಪನಿಗಳಲ್ಲಿ ಕೆಲಸ ಗಿಟ್ಟಿಸಲು ಕಂಪ್ಯೂಟರ್ ಭಾಷೆಗಳಷ್ಟೇ ಗೊತ್ತಿದ್ದರೆ ಸಾಲದು. ಕ್ಲಾಸಿಕಲ್ ತಮಿಳ್ ಗೊತ್ತಿರಲೇಬೇಕು. ಅಥವಾ ಮರಾಠಿ ಮನೆಮಾತಾಗಿರಬೇಕು. ಮಲಯಾಳಂ, ತೆಲುಗು, ಹಿಂದಿ ಗೊತ್ತಿದ್ದರೆ ಅಡ್ಡಿಯಿಲ್ಲ. ಹೊಸ ತಮಿಳು ಚಿತ್ರಗಳ ಹಾಡು, ತೆಲುಗು ಸಿನಿಮಾಗಳ ಡೈಲಾಗು ನಮ್ಮ ಕನ್ನಡದ ಬಸ್ ಡ್ರೈವರ್‍ನಿಗೂ ಬಾಯಿಪಾಠ. ಕನ್ನಡದ ಸೊಲ್ಲೆತ್ತಿದರೆ ‘ನೋ ಕನ್ನಡ ಪ್ಲೀಸ್, ವಿ ಆರ್ ಇಂಡಿಯನ್ಸ್’ ಎಂಬ ರಾಷ್ಟ್ರೀಯ ಮನೋಭಾವನೆಯ ಭಾಷಣ ಕುಟ್ಟುವವನು ಪರಭಾಷೆಯವನೇ ಆಗಬೇಕೆಂದಿಲ್ಲ, ಆತ ಮನೆಯಲ್ಲಿ ಮಾತ್ರ ಕನ್ನಡ ಮಾತನಾಡುತ್ತಾನೆ. ಬಿ.ಪಿ.ಒ. ಮ್ಯಾನೇಜರೊಬ್ಬ ಗುಟ್ಟಾಗಿ ಹೇಳುತ್ತಾನೆ ‘ತಮಿಳರಷ್ಟು ಚೆನ್ನಾಗಿ ಇಂಗ್ಲಿಷ್ ಮಾತನಾಡಲು ನಮ್ಮ ಕನ್ನಡದವರಿಗೆ ಬರೋಲ್ಲ’. ಈ ಹಿಂದೆ ಜನರಲ್ ಮುಷರ್ರಫ್ ಭಾರತೀಯರಿಗಿಂತ ಪಾಕಿಸ್ತಾನಿಗಳು ಚಂದದ ಇಂಗ್ಲಿಷ್ ಮಾತಾಡ್ತಾರೆ ಅಂದ ಮಾತು ನೆನಪಾಗುತ್ತದೆ. ‘ಅಯ್ಯೊ, ನಮ್ಮ ಹುಡುಗರಿಗೆ ವರ್ಷವಿಡೀ ಒಂದಲ್ಲಾ ಒಂದು ಹಬ್ಬ ರೀ. ಮದುವೆ—ಮುಂಜಿ ಎಲ್ಲದಕ್ಕೂ ರಜಾ ಕೇಳ್ತಾರಪ್ಪ. ಈ ಬಿಹಾರಿಗಳು ವರ್ಷಕ್ಕೊಂದು ಸಲ ಊರಿಗೆಂದು ಹೋಗ್ತಾರೆ. ಕೆಲಸ ಇದೆ ಅಂದ್ರೆ ಬೆಳಗ್ಗಿನಿಂದ ರಾತ್ರಿಯ ತನಕ ಇಲ್ಲೇ ಠಿಕಾಣಿ ಹಾಕ್ತಾರೆ’ ಎನ್ನುವ ಪ್ರಾಜೆಕ್ಟ್ ಮ್ಯಾನೇಜರ್‍ಗೆ ತನ್ನ ಬೇಳೆ ಬೆಂದರಷ್ಟೇ ಸಾಕು.

ಕನ್ನಡದ ಬಗ್ಗೆ ಓರಾಡುತ್ತಾ ತಮ್ಮ ಚಿತ್ರಗಳಿಗೆ ಪರಭಾಷಾ ನಟಿಯರನ್ನೇ ತುಂಬಿಸಿಕೊಳ್ಳುವ ನಿರ್ಮಾಪಕರು ನಿಮಗೆ ಗೊತ್ತು. ಇಂಥವರ ಬಂಧುಗಳೆನ್ನಬಹುದಾದ ಕನ್ನಡದ ಹೆಡ್‍ಗಳಿಗೆ ಪರಭಾಷಾ ಹುಡುಗಿಯರೆಂದರೆ ಮುಜುಗರವಿಲ್ಲ. ಕಿಲಕಿಲ ನಗುತ್ತಾ ಬೇಕಿದ್ದರೆ ಮೈಮೇಲೆ ಬೀಳುವಂತೆ ಮಾತನಾಡುವ ಪಟಕಾಮಣಿಯರ ಮುಂದೆ ಕನ್ನಡದ ಹುಡುಗಿಯರನ್ನು ನಿವಾಳಿಸಿ ಹಾಕುತ್ತಾರೆ. ‘ಅಲ್ರೀ. ಗೌರಿ ಹಬ್ಬಕ್ಕೆ ಮನೇಲಿ ಏನು ಮಹಾ ಕೆಲಸ? ರಿಲೇಟಿವ್ಸ್ ಬರ್ತಾರೆ, ರೇಶ್ಮೆಸೀರೆ ಉಟ್ಕೊಂಡು ಮೆರೆದಾಡ್ತೀರಿ. ರಜೆ ಕೊಡೋಕ್ಕಾಗಲ್ಲ ಅಂದ್ರೆ ಅತ್ತೇ ಬಿಡೋದಾ?’ ದೊಡ್ಡ ದೊಡ್ಡ ಕೆಲಸಗಳು ಹೋಗಲಿ, ಕಡೆಗೆ ಕಂಪನಿಗಳ ಬಾಡಿಗೆ ಕಾರುಗಳಲ್ಲೂ ತಮಿಳು, ಮಲಯಾಳಂ ಮಂದಿಯದೇ ಕಾರುಬಾರು. ‘ಸುಮ್ಮನಿರಿ ಸಾರ್. ಕನ್ನಡದವ ಅಂತ ಟ್ರಾನ್ಸ್‍ಪೋರ್ಟ್ ಕಂಟ್ರಾಕ್ಟ್ ಕೊಟ್ರೆ ರಾತ್ರಿ ಎಂಟು ಗಂಟೆ ಮೇಲೆ ಕೆಲಸ ಮಾಡೋಕ್ಕಾಗಲ್ಲ ಅಂತಾನೆ. ಅಬ್ಬ ಅಲ್ವ ಸಾರ್. ನೀವಿವತ್ತು ಆಟೋದಲ್ಲಿ ಓಗ್ಬಿಡಿ ಅನ್ನೋವಷ್ಟು ಧೈರ್ಯ ನಮ್ಮ ಹುಡುಗರಿಗೆ’ ಎಂಬ ಕಂಪ್ಲೇಂಟ್.

ಕಗ್ಗದಾಸಪುರಗಳಂಥ ಕಗ್ಗದಲ್ಲೂ ಕೇಳಿರದಿದ್ದ ಗ್ರಾಮದಲ್ಲೇ ಸೈಟುಗಳು ಸಿಗುತ್ತಿಲ್ಲ. ಕುಂದಲಹಳ್ಳಿಯಲ್ಲಿ ಚದುರಡಿಗೆ 130 ರೂ. ಗಳಿಗೆ ಸಿಗುತ್ತಿದ್ದ ಸೈಟಿಗೆ ಇಂದು ಕೋಟಿಗಟ್ಟಲೆ ಬೆಲೆ. ಅತ್ತ ಎ.ನಾರಾಯಣಪುರ, ಇತ್ತ ಬಿ.ನಾರಯಣಪುರ, ಚೈತನ್ಯ ನಾರಾಯಣ ಟೆಕ್ನೋಸ್ಕೂಲಿಗೆ ಯಾವುದು ಹತ್ತಿರವೋ ಅಲ್ಲಿ ಸೈಟಿಗಿಂತ ಚಿನ್ನದ ಬೆಲೆಯೇ ಕಮ್ಮಿ. ಔಟರ್ ರಿಂಗ್ ರೋಡಿನಲ್ಲಿ ‘ಡೆಲ್’ ಕಾಲಿಟ್ಟ ನಂತರ ‘ಡಲ್’ ಹೊಡೆಯುತ್ತಿದ್ದ ವರ್ತೂರು ಅದರ ಮುಂದಿನ ಗುಂಜೂರು ಜತೆಗೆ ಪಣತ್ತೂರಿನಲ್ಲಿ ಹಣ ಝಣಗುಡುತ್ತಿದೆ. ಕನ್ನಡದವರನ್ನು ಬಿಟ್ಟು ಯಾರೇ ಬಂದರೂ ಬಾಡಿಗೆಗೆ ಬಿಡುತ್ತೇನೆನ್ನುವ ಕನ್ನಡ ಕಟ್ಟಾಳುಗಳು ಬಿ.ಟಿ.ಎಂ.ನಲ್ಲೇ ಇದ್ದಾರೆ. ‘ಐದು ಜನರಿದ್ದರೂ ಯಾವ ತಂಟೆ ತಕರಾರಿಲ್ಲ. ಮೂವತ್ತನೇ ತಾರೀಕಿನ ಮುನ್ನವೇ ಮೂವತ್ತು ಸಾವಿರ ಕ್ಯಾಶ್ ಎಣಿಸಿಬಿಡ್ತಾರೆ. ಹೋಳಿ ಹಬ್ಬಕ್ಕೆ ನಮ್ಮ ಮನೆಯಿಂದಲೇ ಹೋಳಿಗೆ ಮಾಡಿ ಕೊಟ್ಟಿದ್ವಿ. ಬಡ್ಡೀ ಮಕ್ಕಳು, ‘ಮೀಠಾ ಚಪಾತಿ ಅಚ್ಚಾ ಹೈ’ ಎಂದು ಬಾಯಿ ಚಪ್ಪರಿಸಿ ತಿಂದ್ರು. ನನ್ನ ಮನೆ ಮಂದಿಯೆಲ್ಲರ ಹಣೆಗೂ ಬಣ್ಣ ತಿಕ್ಕಿದ್ರು. ಅವರ ದಿವಾಳಿ ಏನು ಸರ್, ಅಮಾವಾಸ್ಯೆ ರಾತ್ರಿಯಿಡೀ ಪಟಾಕಿ ಸಿಡಿಸಿದ್ದು ನಿಮ್ಮ ಮನೆ ತನಕ ಕೇಳಿಸಿರಬೇಕು’ ಎಂದು ಬಾಯ್ತುಂಬಾ ಹೊಗಳುತ್ತಾರೆ.

ಕೈಯ್ಯಲ್ಲೊಂದು ಸುದ್ದಿಗಳೇ ಇಲ್ಲದ ಇಂಗ್ಲಿಷ್ ಪತ್ರಿಕೆ ಹಿಡಿದ ಟೆಕಿಗಳು ಇಡೀ ದೇಶದ ಬಗ್ಗೆ ಕಟಕಿಯಾಡುತ್ತಾರೆ.

ಯಾವುದೇ ದೇಶದ ಗಣ್ಯರು ಮೊದಲು ಬೆಂಗಳೂರಿಗೆಲ್ರಿ ಬರ್ತಿದ್ದರು? ದಿಲ್ಲಿ, ಮುಂಬೈ ವಿಸಿಟ್ ಮಾಡಿ ಹೋಗ್ತಿದ್ರು. ನಮ್ಮೂರ ಕೀರ್ತಿ ಎಲ್ಲಿಯ ತನಕ ಹಬ್ಬಿದೆ ಗೊತ್ತಾ ಸಾರ್. ಮೊನ್ನೆ ಬ್ರೆಝಿಲ್‍ನಲ್ಲಿ ಇಂಡಿಯಾದವನೆಂದ ಕೂಡಲೇ ಆರ್ ಯು ಫ್ರಮ್ ಬ್ಯಾಂಗ್‍ಲೋರ್ ಅಂಥ ಪೋರ್ಚುಗಲ್ಲಿನ ಆಕ್ಸೆಂಟ್‍ನಲ್ಲಿ ಕೇಳ್ದ. ಹೀಗೆಂದು ಹೆಮ್ಮೆ ಪಡುವಾತ ಬೆಂಗಳೂರಿನಲ್ಲೂ ಸ್ಪೈಸಿ ಮೆಕ್ಸಿಕನ್ ಫುಡ್ ಟ್ರೈ ಮಾಡುವ, ಕಂಪನಿಯೊಂದರ ಯುರೋಪ್ ಬಿಸಿನೆಸ್ ಹೆಡ್. ಬಿಲಿಯಗಟ್ಟಲೆ ಡಾಲರ್ ಗಳಿಸುವ ಇಂಥ ಕಂಪನಿಗಳು ನಡೆಸುವ ವಹಿವಾಟೆಂಥದು? ವಿದೇಶಗಳಿಗೆಂದೇ ರೂಪಿಸುವ ಇವರ ಯಾವ ಪ್ರಾಡಕ್ಟಿಗೂ ಇಂಡಿಯಾದಲ್ಲಿ ಗಿರಾಕಿಗಳಿಲ್ಲ. ಅವರಿಗದು ಬೇಕೂ ಇಲ್ಲ. ಈ ವ್ಯಾಪಾರದ ಗುಟ್ಟೆಂದರೆ ನಮ್ಮವರಿಗೆ ಉಪಯೋಗವಾಗುವ ಸಾಫ್ಟ್ ವೇರ್ ಏನಾದರೂ ಅಪ್ಪಿತಪ್ಪಿ ತಯಾರಿಸಿ ಮಾರಾಟಕ್ಕೆ ಬಿಟ್ಟರೆ ತೆರಿಗೆಗಳನ್ನು ಕಟ್ಟಬೇಕು. ಸಣ್ಣಪುಟ್ಟ ಕೆಲಸ ಮಾಡಲು ಬ್ರಿಲಿಯಂಟ್ ಹುಡುಗ— ಹುಡುಗಿಯರ ಬ್ರೇನ್ ಕಾದಿದೆ, ಬಿಸಿಯಾಗದೆಯೇ. ದೇಶದ ಯಾವುದೇ ಹೆಮ್ಮೆಯ ಯೋಜನೆಗಳಿಗೆ, ಉನ್ನತ ತಂತ್ರಜ್ಞಾನದ ಸವಾಲುಗಳಿಗೆ ಒಡ್ಡಿಕೊಳ್ಳದೆಯೇ ಕೈತುಂಬಾ ಸಂಪಾದಿಸುತ್ತಾರೆ. ಬೆಂಗಳೂರಿಗೆ ‘ಬಾಯಿ’ ತುಂಬಾ ಬೈಯ್ಯುತ್ತಾರೆ. ಎಲ್ಲ ಸವಲತ್ತುಗಳನ್ನು ಪಡೆದೂ ಅವರ ಮಾಲೀಕರು ಬೆಂಗಳೂರಿಗೆ ‘ಬೈ’ ಹೇಳುತ್ತೇವೆಂದು ಮುಖ್ಯಮಂತ್ರಿಗಳಿಗೇ ಬೆದರಿಕೆ ಹಾಕುತ್ತಾರೆ. ಸರ್ಕಾರದ ಕಾರ್ಯದರ್ಶಿಗಳು ಕೈಕಾಲು ಹಿಡಿದು ಅವರನ್ನು ಇಲ್ಲೇ ಉಳಿಸಿಕೊಳ್ತಾರೆ.

ಇತ್ತ ಇವರ್ಯಾರ ನೆರವಿಲ್ಲದೆಯೇ ನಮ್ಮ ಉಡ್ಡಯಣಾ ವಾಹನಗಳು ಉಪಗ್ರಹಗಳನ್ನು ಕಕ್ಷೆಗೆ ದೂಡುತ್ತವೆ. ಬೆಂಗಳೂರಿನಲ್ಲಿ ಕುಳಿತು ಅಮೆರಿಕನ್ನರ ಪ್ರಾಬ್ಲಮ್‍ಗಳನ್ನು ಸಾಲ್ವ್ ಮಾಡುವವರಿಗೆ ಉತ್ತಮ ಸಂಪರ್ಕ ವ್ಯವಸ್ಥೆ ಕೊಡುತ್ತವೆ. ಇವರೆಲ್ಲರಿಗಿಂತ ಕಷ್ಟ ಪಡುತ್ತಾ, ಮಿದುಳನ್ನು ಸಾರ್ಥಕವಾಗಿ ಬಳಸುತ್ತಾ ‘ಇಸ್ರೋ’ ವಿಜ್ಞಾನಿಗಳು ಕ್ಲಿಷ್ಟ ಸಾಫ್ಟ್ ವೇರ್‍ಗಳನ್ನು ರೂಪಿಸುತ್ತಾರೆ. ನಮ್ಮೂರ ಹೆಮ್ಮೆಯ ‘ಟೆಕ್ಕಿ’ಗಳು ಕಂಡೂ ಕೇಳಿರದ ತಂತ್ರಜ್ಞಾನಗಳನ್ನು ಬಳಸಿ ಹಾರ್ಡ್‍ವೇರ್‍ಗಳನ್ನು ನಿರ್ಮಿಸುತ್ತಾರೆ. ಇತ್ತ ಡಿ.ಆರ್.ಡಿ.ಒ. ಮತ್ತು ಎಚ್.ಎ.ಎಲ್. ತಂತ್ರಜ್ಞರ ಹಾರ್ಡ್‍ವೇರ್—ಸಾಫ್ಟ್ ವೇರ್‍ಗಳಿಂದ ‘ತೇಜಸ್’, ‘ಧ್ರುವ’, ‘ಎಲ್.ಎ.ಟಿ.’ ‘ಸುಕಾಯ್—30’ ವಿಮಾನಗಳು ಮೇಲೆ ಹಾರಿಳಿದು ದೇಶದ ಮಾನ ಉಳಿಸುತ್ತವೆ, ಅಹರ್ನಿಶಿ ಗಡಿ ಕಾಯುತ್ತವೆ. ವಿವಾದಗಳ ನಡುವೆಯೂ ಗಣಕ ಪರಿಷತ್ತು ಸರ್ಕಾರಿ ಕಚೇರಿಗಳನ್ನು ಕಂಪ್ಯೂಟರೀಕರಿಸಿ, ಕನ್ನಡದ ‘ನುಡಿ’ಯನ್ನು ಪಸರಿಸುತ್ತದೆ. ‘ಭೂಮಿ’ಯ ಪಹಣಿ, ರೈಲ್ವೆ ಟಿಕೀಟು, ಆನ್‍ಲೈನ್ ಬ್ಯಾಂಕಿಂಗ್, ಶೇರು ವಹಿವಾಟು... ಎಲ್ಲವೂ ಸರ್ಕಾರಿ— ಅರೆ ಸರ್ಕಾರಿ ಕಚೇರಿಗಳ ‘ಅರೆ ಹೊಟ್ಟೆ’ (ಟೆಕ್ಕಿಗಳಿಗೆ ಹೋಲಿಸಿದರೆ) ಎಂಜಿನಿಯರ್‍ಗಳು ಮುನ್ನಡೆಸುತ್ತಾರೆ. ಕೈಯ್ಯಲ್ಲೊಂದು ಸುದ್ದಿಗಳೇ ಇಲ್ಲದ ಇಂಗ್ಲಿಷ್ ಪತ್ರಿಕೆ ಹಿಡಿದ ಟೆಕಿಗಳು ಇಡೀ ದೇಶದ ಬಗ್ಗೆ ಕಟಕಿಯಾಡುತ್ತಾರೆ.

ಇಡೀ ಕಾವೇರಿ ನದಿಯ ನೀರು ಚೆನ್ನೈಗೆ ಹರಿದರೂ ಸರಿ, ನಮ್ಮೂರ ಐ.ಟಿ. ಕಂಪನಿಗಳು ಆ ಊರಿಗೆ ಹೋಗದಿದ್ದರೆ ಸಾಕೆಂದು ದೇವರಲ್ಲಿ ಪ್ರಾರ್ಥಿಸಿಕೊಳ್ಳುತ್ತೇವೆ.

ದೇಶದ ‘ಹೆಮ್ಮೆಯ’ ಐ.ಟಿ. ಕಂಪನಿಗಳಿರುವೆಡೆ ನಮ್ಮ—ನಿಮ್ಮಂಥ ಬಡಪಾಯಿಗಳು ಪಯಣಿಸಬೇಕೆಂದರೆ ಬೆಳಗ್ಗಿನ ಬಿ.ಎಂ.ಟಿ.ಸಿ. ಬಸ್ಸುಗಳು ಸಿಗೋಲ್ಲ. ಅವೆಲ್ಲ ಕಂಪನಿ ಗುತ್ತಿಗೆಯ ಮೆರವಣಿಗೆಯಲ್ಲಿರುತ್ತವೆ. ಅಚ್ಚ ಕನ್ನಡಿಗರ ಕಂಪನಿಗಳೂ ಒಂದಷ್ಟು ಸ್ವಂತ ಬಸ್ಸುಗಳನ್ನಿಟ್ಟಿವೆ. ಈ ಕೆಲ ಬಸ್‍ಗಳಿಗೆ ತಮಿಳು ನಾಡಿನ ರಿಜಿಸ್ಟ್ರೇಶನ್ ಬೋರ್ಡ್‍ಗಳು ಕಂಡರೆ ಅಚ್ಚರಿಯಿಲ್ಲ. ಈ ಬಸ್ಸುಗಳು ಕರ್ನಾಟಕದ ತೆರಿಗೆಯನ್ನಷ್ಟೇ ಉಳಿಸುವುದಿಲ್ಲ, ಕನ್ನಡಿಗರ ಕೆಲಸಗಳನ್ನೂ ಕದಿಯುತ್ತವೆ. ನಮ್ಮಂಥವರ ಲೊಡಕಾಸಿ ಬೈಕು—ಸ್ಕೂಟರ್‍ಗಳು ಮುಂದಿದ್ದರೆ ಟೆಕಿಗಳನ್ನು ಹೊತ್ತ ವೋಲ್ವೋ ಬಸ್, ಏಸಿ ಕಾರುಗಳ ಚಾಲಕರು ಬಾಯ್ತುಂಬಾ ಕನ್ನಡದಲ್ಲೇ ಬೈತಾರೆ —‘ಈ ನನ್ ಮಕ್ಳಿಗೆ ಬರೋಕೆ ಬೇರೆ ರಸ್ತೆ ಸಿಗ್ಲಿಲ್ವಾ’. ಕನ್ನಡಿಗರಿಗೆ ಕರಿಹೊಗೆ ಕುಡಿದದ್ದೇ ಲಾಭ, ಬೀಪಿ ಏರಿಸಿಕೊಂಡಿದ್ದೇ ಬೆನಿಫಿಟ್ಟು.

ಐ.ಟಿ. ಕಂಪನಿಗಳು ಬಂದ ಮೇಲೆ ಏನೆಲ್ಲಾ ಬದಲಾವಣೆಗಳಾಗಿವೆ. ವರ್ತೂರಿನ ಕೆರೆ ಹನಿಹನಿ ನೀರಿಗಾಗಿ ಕಾತರಿಸುತ್ತಿದೆ. ಕೋರಮಂಗಲ, ಮಡಿವಾಳ, ಬೇಲೂರು—ಯಮಲೂರು ಕೆರೆಗಳು ತಮ್ಮದೂ ಒಂದಷ್ಟು ಕಾಣಿಕೆ ನೀಡಿ ಬೆಳ್ಳಂದೂರು ಕೆರೆಯಲ್ಲಿ ಬುರುಗಿನೊಂದಿಗೆ ನಾತ ಮತ್ತಷ್ಟು ಹೆಚ್ಚಾಗಿದೆ. ವರ್ತುಲ ರಸ್ತೆಯ ಮೇಲೆಲ್ಲಾ ಮತ್ತೊಂದು ಫ್ಲೈಓವರ್ ವರ್ತುಲ ಬಂದಿದೆ. ಇಡೀ ದೇಶದ ಎಲ್ಲ ರಾಜ್ಯಗಳ ರಿಜಿಸ್ಟ್ರೇಶನ್ ಹೊತ್ತ ಕಾರುಗಳು—ದ್ವಿಚಕ್ರ ವಾಹನಗಳ ಮೇಲೆ ಸಾಫ್ಟ್ ವೇರ್ ಎಂಜಿನಿಯರ್‍ಗಳು ವೇಗದ ಬೆನ್ನೇರಿ ಭುರ್ರೆಂದು ಸಾಗುತ್ತಾರೆ. ರಸ್ತೆಗಡ್ಡ ಬಂದ ಹಳ್ಳಿಗರನ್ನು, ದನ—ಕರು—ನಾಯಿಗಳನ್ನು ಒಂದೇ ದೃಷ್ಟಿಯಿಂದ ಕೆಕ್ಕರಿಸಿ ನೋಡುತ್ತಾರೆ. ಬಿಲ್ಡಿಂಗುಗಳು, ಟೆಕ್‍ಪಾರ್ಕ್‍ಗಳು, ವಿಲೇಜುಗಳು ಎಲ್ಲೆಲ್ಲಿ ನೋಡಿದರೂ ಕೈತುಂಬಾ ಕೆಲಸ ಹೊತ್ತ ಜನರು. ಹೀಗೆ ದಾರಿಗುಂಟ ಉಕ್ಕಿ ಹರಿಯುವ ಜನಪ್ರವಾಹದಲ್ಲಿ ಕಾಣುವವರಾದರೂ ಯಾರು? ತಮಿಳು ಕೂಲಿಗಳೊಂದಿಗೆ ಬಿಹಾರಿಗಳ ಪೈಪೋಟಿ. ಬಡಗಿ ಕೆಲಸಕ್ಕೆ ರಾಜಾಸ್ತಾನಿ. ಬ್ರಿಜ್ ಕಟ್ಟಲು ಉತ್ತರ ಪ್ರದೇಶದವ. ಜಿಹ್ವಾಚಾಪಲ್ಯಿಗರನ್ನು ಸೆರೆಹಿಡಿಯಲು ಆಂಧ್ರದವರನ್ನು ಬಿಟ್ಟರೆ ಪಂಜಾಬಿಗಳಿದ್ದಾರೆ. ಕೆಂಧೂಳು ತುಂಬಿದ ರಸ್ತೆಯನ್ನು ಮತ್ತಷ್ಟು ಕೆಂಪು ಮಾಡಲು ಪಾನ್ ದೂಕಾನುಗಳ ಬನಾರಸಿ—ಕೋಲ್ಕೋತ್ತಾ ಹುಡುಗರು ಬಂದಿದ್ದಾರೆ.

ಆದರೂ ಹೆಮ್ಮೆ ಪಡುತ್ತೇವೆ. ವರ್ಷಕ್ಕೆ ಮಲ್ಟಿ—ಬಿಲಿಯನ್ ಡಾಲರ್ ಆದಾಯ ತರುವ ಹತ್ತಾರು ಕಂಪನಿಗಳು ನಮ್ಮ ಬೆಂಗಳೂರಿನಲ್ಲಿಯೇ ಇವೆ. ಶೇರುಪೇಟೆಯ ವಹಿವಾಟು ಗೊತ್ತಿಲ್ಲದಿದ್ದರೂ ಸೈ, ಆ ಕಂಪನಿಗಳ ಶೇರು ಬೆಲೆ ಮೇಲೇರುವುದನ್ನು ಕಂಡು ದಂಗಾಗುತ್ತೇವೆ. ಮೊನ್ನೆ ಕೊಂಡು, ನಿನ್ನೆ ಮಾರಿ, ಇಂದು ಮತ್ತೆ ಕೊಂಡಿದ್ದರೆ..... ತಿಂಗಳ ಸಂಬಳ ಒಂದೇ ದಿನದಲ್ಲಿ ಎಣಿಸಬಹುದಿತ್ತೆಂದು ಮನಸ್ಸಿನಲ್ಲೇ ಮಂಡಿಗೆ ತಿನ್ನುತ್ತೇವೆ. ವರ್ಷಕ್ಕೆ ಬೆಂಗಳೂರಿನ ವಹಿವಾಟೇ ಲಕ್ಷ ಕೋಟಿ ರೂಪಾಯಿ ದಾಟಿದೆಯಂತೆ. ಮೆಟ್ರೋ ರೈಲು ಬಂದ ಮೇಲಂತೂ ನಿತ್ಯ ಪಯಣಿಗರ ಸಂಖ್ಯೆ ದಾಖಲೆ ಸ್ಥಾಪಿಸಿದೆಯಂತೆ. ವಾರಕ್ಕೆ ಹತ್ತು ಹೊಸ ಕಂಪನಿಗಳು ಬೆಂಗಳೂರಿನಲ್ಲೇ ನೋಂದಣಿಯಾಗುತ್ತಿವೆಯಂತೆ. ದಿನಕ್ಕೆ ಎರಡೂವರೆ ಸಾವಿರ ವಾಹನಗಳು ಸೇರ್ಪಡೆಯಾಗುತ್ತಿವೆಯಂತೆ. ಹೆಸರು ಮಾಡಿರುವ ಕಂಪನಿಗಳ ಸಂಖ್ಯೆಯೇ ಬೆಂಗಳೂರಿನಲ್ಲಿ ಹತ್ತು ಸಹಸ್ರ ದಾಟಿವೆಯಂತೆ. ನಗರದ ಆರು ಸಾವಿರ ಕಿ.ಮೀ. ರಸ್ತೆಗಳಲ್ಲಿ ಕೇವಲ ಹದಿನೈದು ಸಹಸ್ರ ಹೊಂಡಗಳು ಮಾತ್ರ ಇವೆಯಂತೆ. ವಾಹನಗಳ ಸಂಖ್ಯೆ ಅರವತ್ತು ಲಕ್ಷ ದಾಟಿದೆಯಂತೆ. ಇಷ್ಟೆಲ್ಲಾ ಕಷ್ಟಗಳ ನಡುವೆ ಕಂಪನಿಗಳು ಕಂಬನಿಗರೆದರೆ ನಮ್ಮ ಕಣ್ಣಲ್ಲೂ ನೀರು ಸುರಿಯುತ್ತದೆ. ಇಡೀ ಕಾವೇರಿ ನದಿಯ ನೀರು ಚೆನ್ನೈಗೆ ಹರಿದರೂ ಸರಿ, ನಮ್ಮೂರ ಐ.ಟಿ. ಕಂಪನಿಗಳು ಆ ಊರಿಗೆ ಹೋಗದಿದ್ದರೆ ಸಾಕೆಂದು ದೇವರಲ್ಲಿ ಪ್ರಾರ್ಥಿಸಿಕೊಳ್ಳುತ್ತೇವೆ. ಬಾರದ ಬಸ್ಸಿಗಾಗಿ ಕಾಯುತ್ತಿದ್ದಾಗ ಟೆಕಿಗಳನ್ನು ಹೊತ್ತ ಬಸ್ಸುಗಳನ್ನು ಕಂಡರೆ ವಜ್ರದ ಕಿರೀಟ ತೊಟ್ಟ ಉಡುಪಿ ಶ್ರೀಕೃಷ್ಣನ ರಥಗಳನ್ನು ಕಂಡಷ್ಟೇ ಖುಷಿಯಾಗುತ್ತದೆ. ಮುಂದೆಂದಾದರೊಂದು ದಿನ ಮಗಳನ್ನೊ, ಮಗನನ್ನೊ ಆ ಬಸ್ಸಿಗೆ ಸೇರಿಸಿಬಿಟ್ಟರೆ ಜನ್ಮ ಸಾರ್ಥಕವಾದೀತೆಂದು ಮನಸ್ಸಿನಲ್ಲೇ ಪ್ರಾರ್ಥಿಸಿಕೊಳ್ಳುತ್ತೇವೆ.

ಸಂಜೋತಾ ಪುರೋಹಿತ್

ಮಕ್ಕಳ ಶಿಕ್ಷಣದ ಹೊರೆ

ಜುಲೈ ೨೦೧೮

ಇಮಾಮ್ ಗೋಡೆಕಾರ

ಒಂದು ಆನ್‍ಲೈನ್ ಕ್ರಾಂತಿ ಫ್ಲಿಪ್‍ಕಾರ್ಟ್

ಜೂನ್ ೨೦೧೮

ಭಾರತೀ ಮೈಸೂರು

ಜಪಾನ್ ಗಾತ್ರದಲ್ಲಿ ಮಾತ್ರ ಕರ್ನಾಟಕ!

ಜೂನ್ ೨೦೧೮

ಪ್ರೊ. ಕ್ರಿಸ್ಟೋಫರ್ ಚೆಕೂರಿ

ಡೊನಾಲ್ಡ್ ಟ್ರಂಪ್ ಮತ್ತು ಅಮೆರಿಕಾದ ವರ್ಣೀಯ ರಾಜಕಾರಣ

ಎಪ್ರಿಲ್ ೨೦೧೮

ತಾಳಗುಂದ ಶಾಸನ

ಎಪ್ರಿಲ್ ೨೦೧೮

ಸುಧೀಂದ್ರ ಹಾಲ್ದೊಡ್ಡೇರಿ

ಯಂತ್ರ ನೋಡಿರಣ್ಣ, ದೇಹದ ತಂತ್ರ ಕಾಣಿರಣ್ಣ!

ಎಪ್ರಿಲ್ ೨೦೧೮

ಡಿ. ರೂಪ

‘ಧೈರ್ಯ, ತಾಳ್ಮೆ ಜತೆಗಿರಲಿ’

ಮಾರ್ಚ್ ೨೦೧೮

ಸುಧೀಂದ್ರ ಹಾಲ್ದೊಡ್ಡೇರಿ

ಬ್ಯಾಕ್ಟೀರಿಯಗಳ ಬಗ್ಗೆ ನಿಮಗೇನು ಗೊತ್ತು?

ಮಾರ್ಚ್ ೨೦೧೮

ಸುಧೀಂದ್ರ ಹಾಲ್ದೊಡ್ಡೇರಿ

ಎಂಗೈತೆ ಮಗಾ, ಸಾಫ್ಟ್‍ವೇರ್ ಬ್ಯಾಂಗ್‍ಲೂರು?

ಫೆಬ್ರವರಿ ೨೦೧೮

ಪ್ರಸಾದ್ ನಾಯ್ಕ್

ಮಾರಕ ಮಾಧ್ಯಮಗಳು!

ಫೆಬ್ರವರಿ ೨೦೧೮