2nd ಫೆಬ್ರವರಿ ೨೦೧೮

ಚೀನಾ ದೇಶವು ಭಾರತವನ್ನು ಸುತ್ತುವರಿಯಲು ಹವಣಿಸುತ್ತಿದೆಯೇ?

ಚೀನಾ ದೇಶ ಭಾರತವನ್ನು ಸಂಪೂರ್ಣವಾಗಿ ಸುತ್ತುವರಿದು ದೇಶದ ಒಟ್ಟಾರೆ ರಕ್ಷಣೆಗೇ ಕುತ್ತು ತರುವ ಸ್ಥಿತಿ ನಿರ್ಮಿಸಿದೆ. ಈ ಸಂದರ್ಭದಲ್ಲಿ ಭಾರತದ ಸಾಮಥ್ರ್ಯ ಮತ್ತು ತಯ್ಯಾರಿಯ ಕೊರತೆ ಮತ್ತು ಎದ್ದು ಕಾಣುತ್ತದೆ.

ಇಪ್ಪತ್ತೊಂದನೆಯ ಶತಮಾನವನ್ನು ‘ಏಶಿಯಾದ ಶತಮಾನ’ ಎಂದು ವಿಶ್ವದೆಲ್ಲೆಡೆ ಬಹುತೇಕ ಮಾನ್ಯತೆ ಮಾಡಲಾಗಿದೆ. ಆದರೆ ಈ ಮಾನ್ಯತೆಯನ್ನು ‘ಚೀನಾದ ಶತಮಾನ’ ಎಂದು ಪರಿವರ್ತಿಸಲು ಚೀನಾದ ಕಮ್ಯುನಿಸ್ಟ್—ಮಿಲಿಟರಿ ಸರ್ಕಾರ ಶತಪ್ರಯತ್ನ ಮಾಡುತ್ತಿದೆ. ಈ ಹುನ್ನಾರದ ಮುಂದುವರೆದ ಭಾಗವಾಗಿ ಅಭಿವೃದ್ಧಿಯತ್ತ ದಾಪುಗಾಲಿಡುತ್ತಾ ಆರ್ಥಿಕಬಲ ಸೈನಿಕಬಲದೊಂದಿಗೆ ಬಲಿಷ್ಠವಾಗುತ್ತಿರುವ ಭಾರತವನ್ನು ಭೌಗೋಳಿಕವಾಗಿ ಸುತ್ತುವರಿಯಲು ಚೀನಾ ದೇಶ ಹಠ ತೊಟ್ಟಿರುವಂತೆ ಕಾಣುತ್ತಿದೆ. ದಕ್ಷಿಣ ಏಶಿಯಾ ಮತ್ತು ಹಿಂದೂ ಮಹಾಸಾಗರದ ಪ್ರದೇಶಗಳಲ್ಲಿ ಭಾರತದ ಪ್ರಾಬಲ್ಯಕ್ಕೆ ಕಡಿವಾಣ ಹಾಕಿ ಈ ಭಾಗದ ದೇಶಗಳನ್ನು ಭಾರತದ ತೆಕ್ಕೆಯಿಂದ ಕಸಿಯುವ ಮತ್ತು ಸಾಧ್ಯವಾದರೆ ಭಾರತದ ವಿರುದ್ಧ ಛೂ ಬಿಡುವ ಕೆಲಸವನ್ನು ಚೀನಾ ಮಾಡುತ್ತಿದೆ. ಸಂಪರ್ಕ—ಸಾರಿಗೆಗಳ ಯಾತಾಯಾತ ಮತ್ತು ಬಂದರು ಮೂಲಸೌಲಭ್ಯಗಳನ್ನು ಕೊಡಮಾಡುತ್ತಾ ಈ ಪ್ರದೇಶಗಳ ಸರ್ಕಾರಗಳನ್ನು ತನ್ನೆಡೆಗೆ ಸೆಳೆಯುವ ಇನ್ನಿಲ್ಲದ ಪ್ರಯತ್ನ ಮಾಡುತ್ತಿದೆ.

  • ಒನ್ ಬೆಲ್ಟ್ ಒನ್ ರೋಡ್ ಪ್ರೊಜೆಕ್ಟ್‍ನ ಅಡಿ ಪಾಕಿಸ್ತಾನಕ್ಕೆ ಮಧ್ಯ ಏಶಿಯಾ ಮತ್ತು ಚೀನಾದೊಂದಿಗೆ ರಸ್ತೆಸಂಪರ್ಕ ಒದಗಿಸುವ ಚೀನಾ—ಪಾಕಿಸ್ತಾನ ಇನ್‍ಫ್ರಾಸ್ಟ್ರಕ್ಚರ್ ಕಾರಿಡಾರ್ (ಸಿಪಿಇಸಿ) ಯೋಜನೆಯಡಿ ಪಾಕಿಸ್ತಾನದಲ್ಲಿ ಬಿಲಿಯಾಂತರ ಹಣ ಹೂಡಲು ಚೀನಾ ಒಪ್ಪಂದ ಮಾಡಿಕೊಂಡಿದೆ. ಪಾಕ್ ಆಕ್ರಮಿತ ಕಾಶ್ಮೀರದ ಗಿಲ್ಗಿಟ್ ಮತ್ತು ಬಾಲ್ಟಿಸ್ತಾನದ ಮೂಲಕ ಹಾದುಹೋಗುವ ಈ ರಸ್ತೆಗೆ ಭಾರತ ತೀವ್ರ ಆಕ್ಷೇಪ ಎತ್ತಿದೆ. ಪಾಕಿಸ್ತಾನದ ವಿರೋಧಿ ಪಕ್ಷಗಳೂ ಈ ಪ್ರಾಜೆಕ್ಟ್‍ನ ಅಡಿ ಚೀನಾ ದೇಶ ಪಾಕಿಸ್ತಾನವನ್ನು ತನ್ನ ಸರಕುಗಳ ಮಾರುಕಟ್ಟೆಯಾಗಿಸಲು ಹವಣಿಸಿದೆ ಎಂದು ದೂರಿದ್ದಾರೆ.
  • ದಕ್ಷಿಣ ಪಾಕಿಸ್ತಾನದ ಗ್ವಾಡರ್ ಬಂದರನ್ನು ಚೀನಾ ಅಭಿವೃದ್ಧಿಪಡಿಸಿದೆ. ಸಿಪಿಇಸಿಗೆ ಸಂಪರ್ಕ ಹೊಂದಲಿರುವ ಈ ಬಂದರಿನಿಂದ ಚೀನಾ ದೇಶಕ್ಕೆ ಅರಬ್ಬೀ ಸಮುದ್ರದ ನೇರ ಸಂಪರ್ಕ ದೊರೆಯಲಿದೆ. ಚೀನಾದ ಸರಕುಗಳು ಮತ್ತು ಚೀನಾಕ್ಕೆ ತಲುಪಬೇಕಿರುವ ಕಚ್ಛಾತೈಲದ ಹಡಗುಗಳು ಆಗ ಹಿಂದೂ ಮಹಾಸಾಗರ ಮತ್ತು ದಕ್ಷಿಣ ಚೀನಾ ಸಮುದ್ರದ ಮಾರ್ಗವನ್ನು ತೆಗೆದುಕೊಳ್ಳಬೇಕಿರುವುದಿಲ್ಲ.
  • ಭಾರತ ಸರ್ಕಾರದ ನೆರವಿನಿಂದ ತನ್ನ ಆರ್ಥಿಕತೆಯನ್ನು ಕಟ್ಟಿಕೊಳ್ಳುತ್ತಿರುವ ಆಫ್ಘಾನಿಸ್ತಾನವನ್ನೂ ಚೀನಾ ಬಿಟ್ಟಿಲ್ಲ. ಈ ಸಿಪಿಇಸಿ ಕಾರಿಡಾರ್‍ಗೆ ಆಫ್ಘಾನಿಸ್ತಾನವನ್ನೂ ಸೇರಿಸಿ ಮಧ್ಯಏಶಿಯಾದೊಂದಿಗೆ ಸಂಪರ್ಕ ಒದಗಿಸುವ ಭರವಸೆಯೊಂದಿಗೆ ಚೀನಾ ಆಫ್ಘಾನಿಸ್ತಾನವನ್ನು ಆಮಿಷಕ್ಕೆ ಒಳಪಡಿಸಿದೆ. ಹೇಗಾದರೂ ಮಾಡಿ ಇರಾನಿನ ಚಾಬಹಾರ್ ಬಂದರಿನ ನಿರ್ಮಾಣದಿಂದ ಆಫ್ಘಾನಿಸ್ತಾನಕ್ಕೆ ಅಂತರರಾಷ್ಟ್ರೀಯ ಸಂಪರ್ಕವನ್ನು ಒದಗಿಸುವ ಭಾರತದ ಪ್ರಯತ್ನವನ್ನು ಹುಸಿಗೊಳಿಸಲು ಚೀನಾ ತನ್ನ ಗಾಳ ಬೀರಿದೆ.
  • ವಿಶ್ವಸಂಸ್ಥೆಯ ಸಾಮಾನ್ಯಸಭೆಯಲ್ಲಿ ಯಾವಾಗಲೂ ಭಾರತದ ಪರ ಕೈ ಎತ್ತುತ್ತಿದ್ದ ಮಾರಿಶಿಯಸ್ ಮತ್ತು ಭೂತಾನಗಳನ್ನೂ ಚೀನಾ ಬಿಟ್ಟಿಲ್ಲ. ಮಾರಿಶಿಯಸ್‍ನ ವಿಮಾನನಿಲ್ದಾಣ ನಿರ್ಮಾಣದ ಗುತ್ತಿಗೆಯನ್ನು ಭಾರತದ ಜಿಎಮ್‍ಆರ್ ಕಂಪನಿಯಿಂದ ಕಿತ್ತುಹಾಕಿಸಿದ ಚೀನಾ ಮಾರಿಶಿಯಸ್‍ನ ಆಂತರಿಕ ವ್ಯವಹಾರಗಳಲ್ಲಿ ನೇರವಾಗಿ ಮೂಗು ತೂರಿಸುತ್ತಿದೆ. ಕಳೆದ ಹಲವಾರು ದಶಕಗಳಲ್ಲಿ ಭಾರತದಿಂದ ಸಹಾಯ ಪಡೆದಿದ್ದ ಮಾರಿಶಿಯಸ್‍ನ ಸರ್ಕಾರ ಈಗ ಭಾರತಕ್ಕೇ ತಿರುಗಿ ಬಿದ್ದಿದೆ.
  • ಭಾರತದ ರಕ್ಷಣೆಗೆ ಒಳಪಟ್ಟಿರುವ ಭೂತಾನನ್ನು ಅಲುಗಾಡಿಸಲು ಚೀನಾ ತನ್ನ ಸೈನ್ಯ ಕಳಿಸಿದೆ. ಡೋಕ್ಲಾಮ್‍ನಲ್ಲಿನ ವಿವಾದಿತ ಪ್ರದೇಶದಲ್ಲಿ ಭಾರತ ಸೈನ್ಯದಿಂದ ಮೂಗೇಟು ತಿಂದು ಸದ್ಯಕ್ಕೆ ಹಿಂದೆ ಸರಿದಿರುವ ಚೀನಾ ಮತ್ತೆ ಭೂತಾನನ್ನು ಹೆದರಿಸಲು ತನ್ನ ಸೈನ್ಯ ಕಳಿಸದೇ ಸುಮ್ಮನಿರಲಾರದು.
  • ಭಾರತದ ಭೂಪ್ರದೇಶದಿಂದ ಸುತ್ತುವರೆದಿರುವ ಬಾಂಗ್ಲಾವನ್ನೂ ಚೀನಾ ಬಿಟ್ಟಿಲ್ಲ. ಬಾಂಗ್ಲಾದೇಶದ ಬಂದರುಗಳನ್ನು ಅಭಿವೃದ್ಧಿಪಡಿಸುವ ಮತ್ತು ತನ್ಮೂಲಕ ಬಾಂಗ್ಲಾದ ಉತ್ಪನ್ನಗಳಿಗೆ ಬೇಡಿಕೆ ಒದಗಿಸುವ ಆಮಿಷ ಒಡ್ಡುತ್ತಿದೆ.
  • ಶ್ರೀಲಂಕಾ ದೇಶವಂತೂ ಚೀನಾದ ಮಾತಿಗೆ ಮರುಳಾದಂತಿದೆ. ಹಂಬಂಟೋಟ ಎಂಬಲ್ಲಿ ಚೀನಾ ದೇಶವು ಹೊಸ ಬಂದರು ಒಂದನ್ನು ನಿರ್ಮಾಣ ಮಾಡಿದೆ. ಈ ಬಂದರಿನ ಭೂಪ್ರದೇಶವನ್ನು ಶ್ರೀಲಂಕಾ ಚೀನಾದ ಕಂಪನಿಗೆ ಸಂಪೂರ್ಣವಾಗಿ ಹಸ್ತಾಂತರ ಮಾಡಿದೆ.
  • ‘ಆಫ್ರಿಕಾ ಖಂಡದ ಕೊಂಬು’ ಎಂದೇ ಪ್ರಖ್ಯಾತ ಸೋಮಾಲಿಯಾದ ಡ್ಜಿಬೋಟಿಯಲ್ಲಿ ಚೀನಾ ತನ್ನ ಸೇನಾ ನೆಲೆ ಸ್ಥಾಪಿಸಿದೆ. ಪರ್ಶಿಯನ್ ಕೊಲ್ಲಿಯಲ್ಲಿನ ಮತ್ತು ಸೂಯಜ್ ಕಾಲುವೆಯ ಮುಖಾಂತರ ನಡೆಯುವ ತನ್ನ ವ್ಯಾಪಾರಿ ಹಡಗುಗಳಿಗೆ ರಕ್ಷಣೆ ಒದಗಿಸಲೆಂದೇ ಸೇನಾ ನೆಲೆ ಸ್ಥಾಪಿಸಲಾಗಿದೆ ಎಂದು ಹೇಳಿಕೋಡಿರುವ ಚೀನಾ, ಈ ಡ್ಜಿಬೋಟಿಯ ಸೇನಾ ನೆಲೆಯನ್ನು ತನ್ನ ರಕ್ಷಣಾ ಪಡೆಗಳಿಗೆ ತಂಗುದಾಣವಾಗಿ ಬಳಸುವ ಸೌಕರ್ಯ ಕಲ್ಪಿಸಿದೆ.
  • ಇತ್ತೀಚಿನ ತನಕ ಹಿಂದೂರಾಷ್ಟ್ರವಾಗಿದ್ದ ನೇಪಾಳವಂತೂ ಚೀನಾದ ನೆರಳಿನಲ್ಲಿಯೇ ಇದೆ. ನೇಪಾಳದ ಜಲವಿದ್ಯುತ್ ಯೋಜನೆಗಳ ನಿರ್ಮಾಣದ ಗುತ್ತಿಗೆ ಪಡೆಯಲು ಉಗ್ರವಾಗಿ ಬಿಡ್ ಮಾಡುತ್ತಿರುವ ಚೀನಾ, ನೇಪಾಳದ ಆರ್ಥಿಕತೆಯನ್ನು ಭಾರತದ ನಿರ್ಭರತೆಯಿಂದ ಹೊರತರಲು ಪ್ರಯತ್ನಿಸುತ್ತಿದೆ. ಈಗಾಗಲೇ ಅಂತರ್ಜಾಲ ಸಂಪರ್ಕವನ್ನು ಹಿಮಾಲಯದ ಮೂಲಕವೇ ನೇಪಾಳಕ್ಕೆ ನೀಡಿರುವ ಚೀನಾ, ಪೆಟ್ರೋಲಿಯಂ ಪದಾರ್ಥಗಳನ್ನು ಸರಬರಾಜು ಮಾಡಲು ಬೇಕಾದ ಸಂಪರ್ಕ ನೀಡಿ ನೇಪಾಳವನ್ನು ಭಾರತದ ವಿರುದ್ಧ ನಿಲ್ಲುವಂತೆ ವ್ಯೂಹ ರಚಿಸಿದೆ.
  • ಹಿಂದೂಮಹಾಸಾಗರದಲ್ಲಿ ತನ್ನ ನೌಕೆಗಳ ಮತ್ತು ಜಲಾಂತರ್ಗಾಮಿ ನೌಕೆಗಳ ಸಮರಾಭ್ಯಾಸವನ್ನು ಪಾಕಿಸ್ತಾನ ಮತ್ತಿತರ ದೇಶಗಳೊಂದಿಗೆ ಮಾಡಿರುವ ಚೀನಾ, ಭಾರತದ ದಕ್ಷಿಣ ಭಾಗದಲ್ಲಿ ತನ್ನ ಹಿಡಿತ ಬಲಪಡಿಸಿಕೊಳ್ಳಲು ತವಕಿಸಿದೆ.

ಸೋಮಾಲಿಯಾ, ಪಾಕಿಸ್ತಾನ, ಮಾರಿಶಿಯಸ್, ಶ್ರೀಲಂಕಾ ಹಾಗೂ ಮಲಕ್ಕಾ ಕೊಲ್ಲಿಯಲ್ಲಿ ತನ್ನ ಬಂದರು—ನೌಕಾ ನೆಲೆಗಳನ್ನು ಸ್ಥಾಪಿಸಿರುವ ಚೀನಾ ಭಾರತದ ನೌಕಾ ಸ್ವಾತಂತ್ರಕ್ಕೆ ಗಂಭೀರ ಸವಾಲೊಡ್ಡಿದೆ. ಉತ್ತರ ಹಿಮಾಲಯದಲ್ಲಿ ಹತ್ತುಹಲವು ರಸ್ತೆ—ಅಂತರ್ಜಾಲ—ಮೂಲಸೌಕರ್ಯ ಕಾರಿಡಾರ್‍ಗಳ ನಿರ್ಮಾಣದೊಂದಿಗೆ ಭಾರತವನ್ನು ಸಂಪೂರ್ಣವಾಗಿ ಸುತ್ತುವರಿದು ದೇಶದ ಒಟ್ಟಾರೆ ರಕ್ಷಣೆಗೇ ಕುತ್ತು ತರುವ ಸ್ಥಿತಿ ನಿರ್ಮಿಸಿದೆ.

ಚೀನಾದ ಈ ಆಕ್ರಮಣಕಾರಿ ವ್ಯೂಹಕ್ಕೆ ಪ್ರತಿವ್ಯೂಹವನ್ನು ಹೂಡಲೇ ಬೇಕಾದ ಸನ್ನಿವೇಶದಲ್ಲಿ ಭಾರತ ತನ್ನ ‘ಪೂರ್ವದೆಡೆಗೆ ನೋಡು’ ನೀತಿಯನ್ನು ಬಲಪಡಿಸಿಕೊಳ್ಳಲು ಹೊರಟಿದೆ. ವಿಯೆಟ್ನಾಮ್ ಒಳಗೊಂಡ ಆಸಿಯಾನ್ ಒಕ್ಕೂಟದ ಏಳೂ ದೇಶಗಳೊಂದಿಗೆ ಸಂಬಂಧವನ್ನು ಸುಧಾರಿಸಿಕೊಡಿರುವುದರ ಜೊತೆಗೆ ಮಂಗೋಲಿಯಾ, ದಕ್ಷಿಣ ಕೊರಿಯಾ, ಮತ್ತು ಜಪಾನ್‍ನೊಂದಿಗೆ ಭಾರತವು ತನ್ನ ಬಾಂಧವ್ಯ ವೃದ್ಧಿಮಾಡಿಕೊಂಡಿದೆ. ಅಮೆರಿಕಾ—ಆಸ್ಟ್ರೇಲಿಯಾ—ಜಪಾನ್—ಭಾರತಗಳ ಚತುಷ್ಕೋಣ ವ್ಯೂಹ ನೀತಿಗೆ ಒಪ್ಪಿರುವುದರ ಜೊತೆಗೆ ಈ ಮೂರು ದೇಶಗಳೊಂದಿಗೆ ಜಂಟಿ ಸಮರಾಭ್ಯಾಸ ಹಾಗೂ ಅಣುಕು ಸಮರಸಿದ್ಧತೆಗಳನ್ನು ಪ್ರಾರಂಭಿಸಿದೆ.

21ನೆಯ ಶತಮಾನದಲ್ಲಿ ತನ್ನ ಉತ್ಪನ್ನಗಳ ಮಾರುಕಟ್ಟೆಗಾಗಿ ಹೊಸ ವಸಾಹತುಶಾಹಿ ನೀತಿಯನ್ನು ಪಾಲಿಸುತ್ತಿರುವ ಚೀನಾ ಟಿಬೆಟ್, ಕ್ಸಿನ್‍ಜಿಯಾಂಗ್ ಹಾಗೂ ಹಾಂಗ್‍ಕಾಂಗ್ ಪ್ರದೇಶಗಳನ್ನು ತನ್ನದಾಗಿಸಿಕೊಂಡು ತೈವಾನ್ ಮೇಲೆ ಆಧಿಪತ್ಯ ಸಾಧಿಸಲು ಕಾಯ್ದು ನಿಂತಿದೆ. ದಕ್ಷಿಣ ಚೀನಾ ಸಮುದ್ರದ ದೇಶಗಳ ಸಾಗರೋತ್ಪನ್ನ ಹಕ್ಕುಗಳನ್ನೂ ಕಸಿದುಕೊಳ್ಳಲು ಕಾಲ್ಕೆರೆದು ಜಗಳಕ್ಕೆ ನಿಂತಿದೆ. ಇಂತಹ ದೇಶದ ಸೇನಾಸಾಮಥ್ರ್ಯವನ್ನು ಎದುರಿಸುವ ಶಕ್ತಿ ಕೇವಲ ಭಾರತಕ್ಕಿದೆ. ಇದನ್ನರಿತ ಅಮೆರಿಕಾ ಮತ್ತು ಜಪಾನ್ ದೇಶಗಳು ಸೇನಾ ಒಡಂಬಡಿಕೆ ಮಾಡಿಕೊಂಡು ಭಾರತದ ಸಾಮಥ್ರ್ಯ ವೃದ್ಧಿಗೆ ಸಹಾಯ ಮಾಡುತ್ತಿವೆ. ಇದನ್ನು ಕಂಡು ಮತ್ತಷ್ಟು ಕಣ್ಣು ಕೆಂಪಗಾಗಿಸಿಕೊಂಡಿರುವ ಚೀನಾ ಭಾರತದ ಪ್ರಜಾಪ್ರಭುತ್ವ ಹಾಗೂ ಆರ್ಥಿಕ ಪ್ರಗತಿಯನ್ನು ಅಂತರರಾಷ್ಟ್ರೀಯ ಮಾಧ್ಯಮಗಳಲ್ಲಿ ಹೀಗಳೆಯುವ ಕ್ಷುಲ್ಲಕ ಕಾಯಕಕ್ಕೂ ಇಳಿದಿದೆ.

ಚೀನಾದ ಆಕ್ರಮಣಕಾರಿ ನೀತಿಗೆ ಪ್ರತಿಯಾಗಿ ಭಾರತ ಮೈಕೊಡವಿ ಎದ್ದು ನಿಂತಿದೆ. ಆದರೆ ನಿಜಕ್ಕೂ ಚೀನಾವನ್ನು ಎದುರಿಸಬೇಕಾದ ಸಂದರ್ಭದಲ್ಲಿ ಭಾರತದ ಸಾಮಥ್ರ್ಯದ ಕೊರತೆ ಮತ್ತು ತಯ್ಯಾರಿ ಎದ್ದು ಕಾಣುಬಹುದು. ಈ ನಿಟ್ಟಿನಲ್ಲಿ ಮುಂದಿನ ದಶಕಗಳಲ್ಲಿ ಭಾರತದ ಪ್ರತಿಕ್ರಿಯೆ 21ನೆಯ ಶತಮಾನವು ಕೇವಲ ಚೀನಾದ ಶತಮಾನವಾಗುವುದೇ ಎಂಬುದನ್ನು ನಿರ್ಧರಿಸಲಿದೆ.

—ಸಂಚಾರಿ

ಸಂಜೋತಾ ಪುರೋಹಿತ್

ಮಕ್ಕಳ ಶಿಕ್ಷಣದ ಹೊರೆ

ಜುಲೈ ೨೦೧೮

ಇಮಾಮ್ ಗೋಡೆಕಾರ

ಒಂದು ಆನ್‍ಲೈನ್ ಕ್ರಾಂತಿ ಫ್ಲಿಪ್‍ಕಾರ್ಟ್

ಜೂನ್ ೨೦೧೮

ಭಾರತೀ ಮೈಸೂರು

ಜಪಾನ್ ಗಾತ್ರದಲ್ಲಿ ಮಾತ್ರ ಕರ್ನಾಟಕ!

ಜೂನ್ ೨೦೧೮

ಪ್ರೊ. ಕ್ರಿಸ್ಟೋಫರ್ ಚೆಕೂರಿ

ಡೊನಾಲ್ಡ್ ಟ್ರಂಪ್ ಮತ್ತು ಅಮೆರಿಕಾದ ವರ್ಣೀಯ ರಾಜಕಾರಣ

ಎಪ್ರಿಲ್ ೨೦೧೮

ತಾಳಗುಂದ ಶಾಸನ

ಎಪ್ರಿಲ್ ೨೦೧೮

ಸುಧೀಂದ್ರ ಹಾಲ್ದೊಡ್ಡೇರಿ

ಯಂತ್ರ ನೋಡಿರಣ್ಣ, ದೇಹದ ತಂತ್ರ ಕಾಣಿರಣ್ಣ!

ಎಪ್ರಿಲ್ ೨೦೧೮

ಡಿ. ರೂಪ

‘ಧೈರ್ಯ, ತಾಳ್ಮೆ ಜತೆಗಿರಲಿ’

ಮಾರ್ಚ್ ೨೦೧೮

ಸುಧೀಂದ್ರ ಹಾಲ್ದೊಡ್ಡೇರಿ

ಬ್ಯಾಕ್ಟೀರಿಯಗಳ ಬಗ್ಗೆ ನಿಮಗೇನು ಗೊತ್ತು?

ಮಾರ್ಚ್ ೨೦೧೮

ಸುಧೀಂದ್ರ ಹಾಲ್ದೊಡ್ಡೇರಿ

ಎಂಗೈತೆ ಮಗಾ, ಸಾಫ್ಟ್‍ವೇರ್ ಬ್ಯಾಂಗ್‍ಲೂರು?

ಫೆಬ್ರವರಿ ೨೦೧೮

ಪ್ರಸಾದ್ ನಾಯ್ಕ್

ಮಾರಕ ಮಾಧ್ಯಮಗಳು!

ಫೆಬ್ರವರಿ ೨೦೧೮