2nd February 2018

ತ್ರಿವಳಿ ತಲಾಖ್: ಸರ್ಕಾರದ ಅಧಿಕೃತ ಟಿಪ್ಪಣಿಯಲ್ಲಿ ಏನಿದೆ?

ಮೂರು ಬಾರಿ ತಲಾಖ್ ಹೇಳಿ ಪತ್ನಿಗೆ ವಿಚ್ಛೇದನ ಹೇಳುವ ತಲಾಖ್—ಎ—ಬಿದ್ದತ್ ಪದ್ದತಿಯನ್ನು ಕಾನೂನು ಬಾಹಿರ ಮತ್ತು ಶಿಕ್ಷಾರ್ಹ ಅಪರಾಧವನ್ನಾಗಿಸುವ ಕಾನೂನನ್ನು ಲೋಕಸಭೆ ಅಂಗೀಕರಿಸಿದೆ. ರಾಜ್ಯಸಭೆಯ ಒಪ್ಪಿಗೆಗೆ ಕಾದಿರುವ ಈ ಮಸೂದೆಯಲ್ಲಿ ತ್ರಿವಳಿ ತಲಾಖ್ ಹೇಳುವ ಪತಿಗೆ ಮೂರು ವರ್ಷಗಳ ಕಾರಾಗೃಹವಾಸ ಮತ್ತು ಪತ್ನಿಗೆ ಜೀವನಾಂಶ ಕೊಡಬಯಸುವ ಇರಾದೆ ಇದೆ. ಸದರಿ ಮಸೂದೆಯಲ್ಲಿ ತಿದ್ದುಪಡಿ ಬಯಸಿ ವಿರೋಧ ಪಕ್ಷಗಳು ಮಸೂದೆಯ ಜಾರಿಗೆ ಅಡ್ಡಿಪಡಿಸಿವೆ. ಅಗತ್ಯಕ್ಕಿಂತಲೂ ಸರಳವಾದ ಈ ಮಸೂದೆಯ ಆಶಯಪತ್ರದ ಉಲ್ಲೇಖ ಈ ಕೆಳಕಂಡಂತಿದೆ.

2017ರ 247ನೇ ಮಸೂದೆ. ಮುಸ್ಲಿಂ ಮಹಿಳೆಯರ (ವೈವಾಹಿಕ ಹಕ್ಕುಗಳ ರಕ್ಷಣೆಯ) ಮಸೂದೆ—2017. ಉದ್ದೇಶ ಮತ್ತು ಕಾರಣಗಳ ಹೇಳಿಕೆ:

  1. ಶಾಹಿರಾ ಬಾನು ಮತ್ತು ಯೂನಿಯನ್ ಆಫ್ ಇಂಡಿಯಾ ಹಾಗೂ ಮತ್ತಿತರರ ವಿಷಯದಲ್ಲಿ ಸುಪ್ರೀಂ ಕೋರ್ಟ್ ಆಗಸ್ಟ್ 22, 2017ರ ತನ್ನ 3:2 ಅನುಪಾತದ ಬಹುಮತದ ನಿರ್ಣಯದಲ್ಲಿ ಕೆಲವು ಮುಸ್ಲಿಂ ಗಂಡಂದಿರು ತಲಾಖ್ ಎ ಬಿದ್ದತ್ (ಒಟ್ಟಿಗೇ ಮೂರು ಸಲ ತಲಾಖ್ ಹೇಳುವುದು) ಪದ್ಧತಿಯಂತೆ ತಮ್ಮ ಹೆಂಡತಿಯರನ್ನು ವಿಚ್ಛೇದಿಸುವುದನ್ನು ಪ್ರತಿಬಂಧಿಸಿದೆ. ಈ ನಿರ್ಣಯವು ಮುಸ್ಲಿಂ ಪತಿ—ಪತ್ನಿಯ ಮಧ್ಯೆ ರಾಜಿಗೆ ಅವಕಾಶವಿಲ್ಲದಂತೆ ಹಳೆಯ ಕಾಲದಿಂದ ನಡೆದು ಬಂದಿದ್ದ ವಿಚಿತ್ರವಾದ ಮತ್ತು ಮನಬಂದಂತೆ ವಿಚ್ಛೇದನ ನೀಡುವ ಪದ್ಧತಿಯಿಂದ ಭಾರತೀಯ ಮುಸ್ಲಿಂ ಮಹಿಳೆಯರಿಗೆ ಬಿಡುಗಡೆಯ ಬೆಂಬಲ ನೀಡಿತ್ತು.
  2. ಈ ಮೇಲ್ಕಂಡ ಪ್ರಕರಣದಲ್ಲಿ ತಲಾಖ್ ಎ ಬಿದ್ದತ್ ಪದ್ಧತಿಯು ತಾರತಮ್ಯಪೂರಿತವಾದದ್ದು ಹಾಗೂ ಮಹಿಳೆಯರ ಗೌರವಕ್ಕೆ ಧಕ್ಕೆ ತರಬಲ್ಲುದು ಎಂಬ ಆಧಾರದಲ್ಲಿ ಅರ್ಜಿದಾರರು ಪ್ರಶ್ನೆ ಮಾಡಿದ್ದರು. ಸುಪ್ರೀಂ ಕೋರ್ಟಿನ ನಿರ್ಣಯವು ತಲಾಖ್ ಎ ಬಿದ್ದತ್ ಪದ್ಧತಿಯು ಸಾಂವಿಧಾನಿಕ ನೈತಿಕತೆಯ ವಿರುದ್ಧವೂ ಮತ್ತು ಹೆಂಗಸರ ಗೌರವಕ್ಕೆ ಚ್ಯುತಿ ತರಬಲ್ಲುದು ಎಂದೂ, ಲಿಂಗ ಸಮಾನತೆಯ ನೀತಿಯ ವಿರುದ್ಧವೂ ಹಾಗೂ ಸಂವಿಧಾನದತ್ತ ಲಿಂಗಸಮಾನತೆಯ ನೀತಿಯ ವಿರುದ್ಧವೂ ಆಗಿರುವುದೆಂಬ ಸರ್ಕಾರದ ನಿಲುವಿಗೆ ಪುಷ್ಟಿ ನೀಡಿದೆ. ಈ ಪ್ರಕರಣದಲ್ಲಿ ಏಳನೇ ಪ್ರತಿವಾದಿಯಾಗಿದ್ದ ಆಖಿಲ ಭಾರತ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿಯು ತನ್ನ ಅಫಿಡವಿಟ್‍ನಲ್ಲಿ ತಲಾಖ್ ಎ ಬಿದ್ದತ್‍ನಂತಹಾ ಧಾರ್ಮಿಕ ವಿಷಯವನ್ನು ನ್ಯಾಯಾಲಯ ತೀರ್ಮಾನಿಸಲಾಗದೆಂದೂ ಹಾಗೂ ಈ ವಿಷಯದಲ್ಲಿ ಶಾಸಕಾಂಗವು ಸೂಕ್ತ ಕಾನೂನು ಮಾಡಬೇಕೆಂದು ಅಭಿಪ್ರಾಯ ವ್ಯಕ್ತಪಡಿಸಿತ್ತು. ಇದೇ ಸಂದರ್ಭದಲ್ಲಿ ಈ ಪದ್ಧತಿಯ ವಿರುದ್ಧ ತನ್ನ ಧರ್ಮದ ಸದಸ್ಯರಿಗೆ ಸೂಕ್ತ ಸಲಹೆಯನ್ನು ನೀಡುವುದಾಗಿಯೂ ಮಂಡಳಿಯು ಸುಪ್ರೀಂ ಕೋರ್ಟಿನ ಮುಂದೆ ಹೇಳಿಕೆ ನೀಡಿತ್ತು.
  3. ಸುಪ್ರೀಂ ಕೋರ್ಟು ತಲಾಖ್ ಎ ಬಿದ್ದತ್ ಪದ್ಧತಿಯನ್ನು ಕಾನೂನುಬಾಹಿರ ಎಂದು ಹೇಳಿದ್ದರೂ ಮತ್ತು ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿಯು ನೀಡಿದ ಭರವಸೆಗೆ ವ್ಯತಿರಿಕ್ತವಾಗಿಯೂ ದೇಶದ ಹಲವು ಭಾಗಗಳಿಂದ ತಲಾಖ್ ಎ ಬಿದ್ದತ್ ಪದ್ಧತಿಯಂತೆ ವಿಚ್ಛೇದನ ನೀಡುತ್ತಿರುವ ವರದಿಗಳು ಬಂದಿವೆ. ಇದರಿಂದ ತಲಾಖ್ ಎ ಬಿದ್ದತ್ ಪದ್ದತಿಯನ್ನು ಕಾನೂನುಬಾಹಿರ ಎಂದು ಸುಪ್ರೀಂ ಕೋರ್ಟ್ ನಿರ್ಣಯ ನೀಡಿದ್ದರೂ ಈ ಪದ್ಧತಿಯ ಮೂಲಕ ಮುಸ್ಲಿಂ ವಿಚ್ಛೇದನಗಳನ್ನು ಗಮನಾರ್ಹವಾಗಿ ಕಡಿಮೆ ಮಾಡಲಾಗದೆ ಇರುವುದನ್ನು ನಾವು ಗಮನಿಸಿದ್ದೇವೆ. ಈ ಕಾರಣಕ್ಕಾಗಿ ರಾಜ್ಯಾಂಗದ ಕ್ರಮದ ಮೂಲಕವಾಗಿಯಾದರೂ ಸುಪ್ರೀಂ ಕೋರ್ಟಿನ ನಿರ್ಣಯವನ್ನು ಜಾರಿಗೆ ತಂದು ಈ ಕಾನೂನುಬಾಹಿರ ವಿಚ್ಛೇದನ ಪದ್ಧತಿಯ ಬಲಿಪಶುಗಳಿಗೆ ಸಾಂತ್ವನ ನೀಡಬೇಕಾಗಿರುವುದನ್ನು ಮನಗಾಣಲಾಗಿದೆ.
  4. ಅಮಾಯಕ ಮುಸ್ಲಿಂ ಮಹಿಳೆಯರು ಈ ತಲಾಖ್ ಎ ಬಿದ್ದತ್ ಪದ್ದತಿಯಿಂದ ಕಿರುಕುಳಕ್ಕೆ ಒಳಗಾಗುತ್ತಿರುವುದನ್ನು ತಡೆಯಲು ಮತ್ತು ಇವರಿಗೆ ಪರಿಹಾರ ನೀಡಲು ಸೂಕ್ತ ಕಾನೂನಿನ ತುರ್ತು ಅಗತ್ಯವಿದೆ. ಸುಪ್ರೀಂ ಕೋರ್ಟಿನ ನಿರ್ಣಯದಂತೆ ಈ ತಲಾಖ್ ಎ ಬಿದ್ದತ್ ಹೇಳುವುದು ಮತ್ತು ಈ ಪದ್ಧತಿಯಂತೆ ವಿಚ್ಛೇದನ ನೀಡುವುದು ನಿರರ್ಥಕ ಮತ್ತು ಕಾನೂನುಬಾಹಿರ ಎಂದು ಈ ಮಸೂದೆಯಲ್ಲಿ ಉಲ್ಲೇಖಿಸಿದೆ ಮತ್ತು ಈ ಕಾನೂನುಬಾಹಿರ ತಲಾಖ್ ಎ ಬಿದ್ದತ್ ಹೇಳುವುದು ಶಿಕ್ಷಾರ್ಹ ಅಪರಾಧವಾಗಿದೆ. ಹೆಂಡತಿಯರು ತಮ್ಮ ವಿವಾಹ ವಿಚ್ಛೇದನ ಪ್ರಕ್ರಿಯೆಯಲ್ಲಿ ಯಾವುದೇ ಪಾತ್ರ ಹೊಂದಿಲ್ಲದ ಲೋಪವನ್ನು ಸರಿಪಡಿಸುವುದು ಅತ್ಯಗತ್ಯವಾಗಿದೆ. ಈ ತಲಾಖ್ ಎ ಬಿದ್ದತ್ ಪದ್ಧತಿಯಂತೆ ವಿಚ್ಛೇದನಕ್ಕೊಳಗಾದ ಮುಸ್ಲಿಂ ಮಹಿಳೆಯರಿಗೆ ತಮ್ಮ ಮತ್ತು ತಮ್ಮ ಮಕ್ಕಳ ಜೀವನ ಮತ್ತು ದೈನಂದಿನ ಅಗತ್ಯಗಳಿಗನುಸಾರವಾಗಿ ತಮ್ಮ ಗಂಡಂದಿರಿಂದ ಜೀವನಾಧಾರ ಪರಿಹಾರ ಕೊಡಿಸುವುದನ್ನೂ ಉದ್ದೇಶಿಸಲಾಗಿದೆ. ವಿಚ್ಛೇದನಕ್ಕೊಳಗಾದ ಹೆಂಗಸರು ತಮ್ಮ ಅಪ್ರಾಪ್ತ ಮಕ್ಕಳ ಪಾಲನೆಯ ಹಕ್ಕನ್ನೂ ಹೊಂದಿರುತ್ತಾರೆ.
  5. ಈ ಉದ್ದೇಶಿತ ಕಾನೂನಿನಿಂದ ಸಂವಿಧಾನದಲ್ಲಿ ಉದ್ದೇಶಿತವಾಗಿರುವ ಮುಸ್ಲಿಂ ಮಹಿಳೆಯರ ಲಿಂಗ ಸಮಾನತೆ ಮತ್ತು ನ್ಯಾಯ ದೊರಕಿಸಲು ಸಹಾಯವಾಗುತ್ತದಲ್ಲದೆ ಈ ಮಹಿಳೆಯರ ತಾರತಮ್ಯದ ವಿರುದ್ಧದ ಮೂಲಭೂತ ಹಕ್ಕು ಪ್ರತಿಪಾದನೆಯಾಗುತ್ತದೆ, ಮಹಳಾ ಸಶಕ್ತೀಕರಣವೂ ಆಗುತ್ತದೆ.
  6. ಈ ಮಸೂದೆಯು ಈ ಮೇಲ್ಕಂಡ ಗುರಿಗಳನ್ನು ಸಾಧಿಸಲು ಉದ್ದೇಶಿಸಿದೆ.

ಸಂಜೋತಾ ಪುರೋಹಿತ್

ಮಕ್ಕಳ ಶಿಕ್ಷಣದ ಹೊರೆ

July 2018

ಸುಧೀಂದ್ರ ಹಾಲ್ದೊಡ್ಡೇರಿ

ಯಂತ್ರ ನೋಡಿರಣ್ಣ, ದೇಹದ ತಂತ್ರ ಕಾಣಿರಣ್ಣ!

April 2018

ಸುಧೀಂದ್ರ ಹಾಲ್ದೊಡ್ಡೇರಿ

ಬ್ಯಾಕ್ಟೀರಿಯಗಳ ಬಗ್ಗೆ ನಿಮಗೇನು ಗೊತ್ತು?

March 2018

ಸುಧೀಂದ್ರ ಹಾಲ್ದೊಡ್ಡೇರಿ

ಎಂಗೈತೆ ಮಗಾ, ಸಾಫ್ಟ್‍ವೇರ್ ಬ್ಯಾಂಗ್‍ಲೂರು?

February 2018

ಪ್ರಸಾದ್ ನಾಯ್ಕ್

ಮಾರಕ ಮಾಧ್ಯಮಗಳು!

February 2018