2nd February 2018

ಸರ್ವೋಚ್ಚ ನ್ಯಾಯಾಲಯದಲ್ಲಿ ಬಂಡಾಯವೆದ್ದ ನಾಲ್ವರು ಹಿರಿಯ ನ್ಯಾಯಾಧೀಶರು

2017ರ ಡಿಸೆಂಬರ್ 12ನೇ ದಿನಾಂಕವನ್ನು ದೇಶದ ಸರ್ವೋಚ್ಚ ನ್ಯಾಯಾಲಯದ ಇತಿಹಾಸದಲ್ಲಿಯೇ ಅತ್ಯಂತ ಗಂಭೀರ, ಕರಾಳ ಮತ್ತು ದುರದೃಷ್ಟಕರ ದಿನವೆಂದು ಗುರುತಿಸಬೇಕಾಗಿದೆ. ಆ ದಿನದಂದು ಸರ್ವೋಚ್ಚ ನ್ಯಾಯಾಲಯದ ನಾಲ್ಕು ಅತ್ಯಂತ ಹಿರಿಯ ನ್ಯಾಯಾಧೀಶರಾದ ಜಾಸ್ತಿ ಚಲಮೇಶ್ವರ್, ರಂಜನ್ ಗೋಗೋಯ್, ಮದನ್ ಲೋಕೂರ್ ಮತ್ತು ಕುರಿಯನ್ ಜೋಸೆಫ್‍ರವರು ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾರವರ ಆಡಳಿತಶೈಲಿಯ ವಿರುದ್ಧ ಬಂಡಾಯ ಸಾರಿದರು. ನ್ಯಾಯಾಂಗದ ಇತಿಹಾಸದಲ್ಲಿಯೇ ಮೊದಲ ಬಾರಿಗೆ ನಡೆದ ಈ ಘಟನೆಯಲ್ಲಿ ನಾಲ್ವರು ನ್ಯಾಯಮೂರ್ತಿಗಳು ಮಾಧ್ಯಮಗಳ ಮುಂದೆ ಬಂದು ತಾವು ಮುಖ್ಯ ನ್ಯಾಯಮೂರ್ತಿಗೆ ಬರೆದ ಪತ್ರವನ್ನು ಬಿಡುಗಡೆಗೊಳಿಸಿದರು. ಪ್ರಜಾಪ್ರಭುತ್ವ ಮತ್ತು ದೇಶದ ನ್ಯಾಯಾಂಗ ವ್ಯವಸ್ಥೆಯ ಸಮತೋಲಿತ ಸ್ವಾತಂತ್ರ್ಯ ಅಪಾಯದಲ್ಲಿದೆ ಎಂದು ಸಾರಿದ ಈ ನಾಲ್ವರು, ಮುಖ್ಯನ್ಯಾಯಮೂರ್ತಿಯವರು ಪ್ರಕರಣಗಳನ್ನು ವಿವಿಧ ಪೀಠಗಳಿಗೆ ನೀಡುವಲ್ಲಿ ದುರುದ್ದೇಶಪೀಡಿತರಾಗಿದ್ದಾರೆ ಎಂದು ಆಪಾದಿಸಿದರು.

ಈ ಮಾಧ್ಯಮಗೋಷ್ಠಿಯ ನಂತರ ದೇಶಾದ್ಯಂತ ಮಿಶ್ರ ಪ್ರತಿಕ್ರಿಯೆಗಳು ಬಂದಿವೆ. ಈ ನಾಲ್ವರು ನ್ಯಾಯಮೂರ್ತಿಗಳು ಎತ್ತಿರುವ ವಿಷಯಗಳು ಅತ್ಯಂತ ಗಂಭೀರ ಸ್ವರೂಪದ್ದಾಗಿವೆ ಮತ್ತು ದೇಶದ ನ್ಯಾಯಾಂಗ ವ್ಯವಸ್ಥೆಯ ಸ್ವಾತಂತ್ರ್ಯಹರಣ ಮಾಡುವ ರೀತಿಯಲ್ಲಿದೆ ಎಂದು ಹಿರಿಯ ವಕೀಲ ಪ್ರಶಾಂತ್‍ಭೂಷಣ್ ಮತ್ತಿತರರು ಹೇಳಿದ್ದಾರೆ. ಪ್ರಕರಣದ ಗಂಭೀರತೆಯನ್ನು ಎತ್ತಿಹೇಳಿದ ಕಾಂಗ್ರೆಸ್ ಪಕ್ಷವು ನ್ಯಾಯಾಧೀಶರು ಹೇಳಿದ ವಿಚಾರಗಳ ಬಗ್ಗೆ ಹೆಚ್ಚಿನ ವಿಚಾರಣೆ ಬಯಸಿದೆ. ವಿಷಯದ ಗಂಭೀರತೆ ಎಷ್ಟೇ ಇದ್ದರೂ, ಮಾಧ್ಯಮಗಳ ಮುಂದೆ ಸುಪ್ರೀಂ ಕೋರ್ಟಿನ ರಂಪರಗಳೆಗಳನ್ನು ಜಾಲಾಡಿದ ಬಗ್ಗೆ ಹಲವರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಸಂತೋಷ್ ಹೆಗ್ಡೆ ಮತ್ತಿತರರು ಈ ಘಟನೆಯನ್ನು ಖಂಡಿಸಿ, ಜನಸಾಮಾನ್ಯರ ಪ್ರತಿಕ್ರಿಯೆ ಬಯಸುವ ನ್ಯಾಯಾಧೀಶರ ಕಾರ್ಯವನ್ನು ‘ಪೂರ್ಣತಃ ತಪ್ಪು’ ಎಂದೇ ಹೇಳಿದ್ದಾರೆ. ಇನ್ನೂ ಕೆಲವರು ಇದು ಸರ್ವೋಚ್ಚ ನ್ಯಾಯಾಲಯದ ಇತಿಹಾಸದಲ್ಲಿಯೇ ಅತ್ಯಂತ ಕರಾಳ ದಿನ ಎಂದು ಹೇಳಿದ್ದಾರೆ.

ಸೊಹ್ರಾಬುದ್ದೀನ್ ಎನ್‍ಕೌಂಟರ್ ಹತ್ಯೆಯ ಬಗ್ಗೆ ತನಿಖೆ ನಡೆಸುತ್ತಿದ್ದ ಸಿಬಿಐ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಬಿ.ಹೆಚ್.ಲೋಯಾರವರ ಸಾವಿನ ತನಿಖೆ ಬಯಸಿ ಸುಪ್ರೀಂ ಕೋರ್ಟಿನ ಮುಂದೆ ಪಿಐಎಲ್ ಒಂದನ್ನು ದಾಖಲಿಸಲಾಗಿತ್ತು. ನ್ಯಾಯಾಧೀಶ ಲೋಯಾರವರ ಸಾವು ಅಸಹಜ ಹಾಗೂ ಹತ್ಯೆಯ ಸ್ವರೂಪದ್ದು ಎಂದು ಈ ಅರ್ಜಿಯಲ್ಲಿ ವಾದಿಸಲಾಗಿತ್ತು. ಸುಪ್ರೀಂನಲ್ಲಿ ಈ ಪ್ರಕರಣ ಯಾವ ಪೀಠದ ಮುಂದೆ ಬರಬೇಕೆನ್ನುವ ವಿಷಯದಲ್ಲಿ ಮುಖ್ಯನ್ಯಾಯಮೂರ್ತಿ ದೀಪಕ್ ಮಿಶ್ರಾರವರು ಪಕ್ಷಪಾತ ತೋರಿದ್ದಾರೆ ಎಂದು ಆಪಾದಿಸಲಾಗಿತ್ತು. ಹಿರಿಯರಾದ ತಮ್ಮ ಮುಂದೆ ಬರಬೇಕಿದ್ದ ಇಂತಹ ಹಲವಾರು ಪ್ರಕರಣಗಳನ್ನು ಮುಖ್ಯನ್ಯಾಯಮೂರ್ತಿಗಳು ಕಿರಿಯ ‘ಸೂಕ್ತ’ ನ್ಯಾಯಾಧೀಶರ ಮುಂದೆ ಬರುವಂತೆ ಮಾಡಿ ಕೆಲವು ಹಿತಾಸಕ್ತಿಗಳಿಗೆ ಮಣೆ ಹಾಕಿದ್ದಾರೆ ಎಂದೂ ಆಪಾದಿಸಲಾಗಿತ್ತು.

ನ್ಯಾಯಾಧೀಶ ಲೋಯಾ ಸಾವಿನ ಪ್ರಕರಣದಲ್ಲಿ ಲೋಯಾ ಪುತ್ರ ಈಗಾಗಲೇ ಇದು ಹೃದಯಾಘಾತದಿಂದ ಸಂಭವಿಸಿದ ಸ್ವಾಭಾವಿಕ ಸಾವೆಂದು ಹೇಳಿದ್ದಾರೆ. ತಮ್ಮ ತಂದೆಯ ಸಾವಿನ ವಿಷಯದಲ್ಲಿ ಯಾವುದೇ ವಿಚಾರಣೆಯ ಅಗತ್ಯವಿಲ್ಲವೆಂದು ಹೇಳಿದ ಲೋಯಾ ಪುತ್ರ ತಮ್ಮ ಕುಟುಂಬದ ಖಾಸಗಿತನದ ಹಕ್ಕನ್ನು ಕೋರಿದ್ದಾರೆ.

ಕಳೆದ ಕೆಲವಾರು ವರ್ಷಗಳಲ್ಲಿ ಸರ್ವೋಚ್ಚ ನ್ಯಾಯಾಲಯದಲ್ಲಿ ಅತ್ಯಂತ ಪ್ರಮುಖ ಪ್ರಕರಣಗಳನ್ನೂ ಕಿರಿಯ ನ್ಯಾಯಾಧೀಶರ ಪೀಠಗಳ ಮುಂದೆ ಬರುವಂತೆ ನೋಡಿಕೊಳ್ಳುವುದು ಪರಿಪಾಠವಾಗಿದೆ. ಸುಪ್ರೀಂ ಕೋರ್ಟಿನ ಮುಂದೆ ಈ ವಿಷಯದಲ್ಲಿ ಹಲವರು ಗಂಭೀರ ಆಕ್ಷೇಪಗಳನ್ನೂ ಎತ್ತಿದ್ದಾರೆ. ನ್ಯಾಯಾಂಗ ವ್ಯವಸ್ಥೆಯ ನಂಬಲರ್ಹತೆಯನ್ನು ಕೆಣಕುವ ಇಂತಹ ‘ಪೀಠ ಮಾರಾಟ’ದ ಪ್ರಕರಣಗಳು ನ್ಯಾಯಾಲಯಗಳಿಗೆ ಗೌರವವನ್ನೇನೂ ತರುತ್ತಿಲ್ಲ. ನ್ಯಾಯಾಲಯಗಳಲ್ಲಿ ಪ್ರಕರಣಗಳನ್ನು ವಿತರಿಸುವ ಈ ‘ರೋಸ್ಟರ್’ ಪದ್ಧತಿಯ ಬಗ್ಗೆ ನ್ಯಾಯಾಲಯಗಳೇ ತಿದ್ದುಪಡಿ ತಂದು ವ್ಯವಸ್ಥೆಗೆ ನಂಬಲರ್ಹತೆ ಮತ್ತು ಪಾರದರ್ಶಕತೆ ತರದಿದ್ದರೆ, ದೇಶದ ಸಂಸತ್ತು ಈ ವಿಷಯದಲ್ಲಿ ಕಾನೂನು ತರಬೇಕಾದ ಅನಿವಾರ್ಯತೆ ಬರಬಹುದು.

ಸಂಜೋತಾ ಪುರೋಹಿತ್

ಮಕ್ಕಳ ಶಿಕ್ಷಣದ ಹೊರೆ

July 2018

ಸುಧೀಂದ್ರ ಹಾಲ್ದೊಡ್ಡೇರಿ

ಯಂತ್ರ ನೋಡಿರಣ್ಣ, ದೇಹದ ತಂತ್ರ ಕಾಣಿರಣ್ಣ!

April 2018

ಸುಧೀಂದ್ರ ಹಾಲ್ದೊಡ್ಡೇರಿ

ಬ್ಯಾಕ್ಟೀರಿಯಗಳ ಬಗ್ಗೆ ನಿಮಗೇನು ಗೊತ್ತು?

March 2018

ಸುಧೀಂದ್ರ ಹಾಲ್ದೊಡ್ಡೇರಿ

ಎಂಗೈತೆ ಮಗಾ, ಸಾಫ್ಟ್‍ವೇರ್ ಬ್ಯಾಂಗ್‍ಲೂರು?

February 2018

ಪ್ರಸಾದ್ ನಾಯ್ಕ್

ಮಾರಕ ಮಾಧ್ಯಮಗಳು!

February 2018